ಪುಟಗಳು

ಬುಧವಾರ, ಜುಲೈ 4, 2018

ವಿಕಿಪೀಡಿಯ ತರಬೇತಿ ೨೦೧೮ @ ರಾಂಚಿ

ಈ ಬಾರಿ ಜಾರ್ಖಂಡ್ ರಾಜ್ಯದ ’ರಾಂಚಿ’ ನಗರದಲ್ಲಿ ವಿಕಿಪೀಡಿಯಾದ ’ಮುಂದುವರೆದ ತರಬೇತಿ ಕಾರ್ಯಾಗಾರ’ವನ್ನು (Wikipedia Advanced Training, 2018) ಆಯೋಜಿಸಲಾಗಿತ್ತು. ವಿಕಿಪೀಡಿಯಾ ಒಂದು ಸ್ವತಂತ್ರ ವಿಶ್ವಕೋಶವಾಗಿದ್ದು ನಾನು ಕನ್ನಡ ವಿಕಿಪೀಡಿಯಾಗೆ ಮಾಹಿತಿ ತುಂಬುವ ಕೆಲಸವನ್ನು ಹಲವು ವರ್ಷಗಳಿಂದ ಮಾಡುತ್ತಾ ಬಂದಿದ್ದೇನೆ. ವಿಕಿಗೆ ಸಾಮಾನ್ಯವಾಗಿ ಮಾಹಿತಿ ತುಂಬಿಸಲು ಬೇಸಿಕ್ ಮಟ್ಟದ ಎಡಿಟಿಂಗ್ ತಿಳುವಳಿಕೆ ಸಾಕಾಗುತ್ತದೆ. ಆದರೆ ಹಾಗೇ ಮುಂದುವರೆಯುತ್ತಾ ಹೋದಂತೆ ಅದರಲ್ಲಿ ಕಲಿಯಲು ಮತ್ತು ತಿಳಿದುಕೊಳ್ಳಲು ಬಹಳಷ್ಟಿರುತ್ತದೆ. ಉತ್ತಮ ಗುಣಮಟ್ಟದ ಲೇಖನಗಳನ್ನು, ಪುಟಗಳನ್ನು ತಯಾರಿಸಲು ಹಲವು ವಿಷಯಗಳನ್ನು ತಿಳಿದುಕೊಂಡು ಅದಕ್ಕೆ ತಕ್ಕುದಾಗಿ ವಿಕಿಪೀಡಿಯಾದಲ್ಲಿ ಮಾಹಿತಿಗಳನ್ನು ತುಂಬಿಸಬೇಕಾಗುತ್ತದೆ. ಅನೇಕ ವಿಷಯಗಳಿಗೆ ಒಂದು ಮಟ್ಟದ ತಾಂತ್ರಿಕ ಜ್ಞಾನ ಅಥವಾ ಅದನ್ನು ಅರ್ಥಮಾಡಿಕೊಳ್ಳುವ ಆಸಕ್ತಿ ಅಗತ್ಯ.

ವಿಕಿಪೀಡಿಯಾಗೆ ಸಂಬಂಧಿಸಿದಂತೆ ತರಬೇತಿ, ಸಮುದಾಯ ಕಟ್ಟುವಿಕೆ ಮುಂತಾದ ಚಟುವಟಿಕೆಗಳನ್ನು ಬೆಂಬಲಿಸುತ್ತಿರುವ ಸೆಂಟರ್ ಫಾರ್ ಇಂಟರ್ನೆಟ್ ಅಂಡ್ ಸೊಸೈಟಿ-A2K ವಿಭಾಗವು ಈ ಮುಂದುವರೆದ ವಿಕಿಪೀಡಿಯ ತರಬೇತಿ ಬಗ್ಗೆ ಹಿಂದಿನ ತಿಂಗಳು ಘೋಷಣೆ ಮಾಡಿತ್ತು. ಇದು ಮೂರು ದಿನಗಳ ಕಾಲ ನಡೆಯುವ ತರಬೇತಿಯಾಗಿದ್ದು ಎಲ್ಲಾ ಭಾರತೀಯ ಭಾಷೆಗಳ ವಿಕಿಪೀಡಿಯರನ್ನ ಆಹ್ವಾನಿಸಲಾಗಿತ್ತು. ಹಿಂದೆ ಕೆಲಬಾರಿ ಬೇರೆಬೇರೆ ಸ್ಥಳಗಳಲ್ಲಿ ಈ ಮುಂದುವರೆದ ತರಬೇತಿಗಳು ನಡೆದಿದ್ದರೂ ಸಹ ನನಗೆ ಹೋಗಲು ಆಗಿರಲಿಲ್ಲ. ಈ ಬಾರಿ ತಾರೀಖುಗಳು ಹೊಂದಾಣಿಕೆಯಾಗುತ್ತಿದ್ದುದರಿಂದ ನಾನು ಕೂಡ ಅರ್ಜಿ ಸಲ್ಲಿಸಿದ್ದೆ. ಅರ್ಜಿ ಸಲ್ಲಿಕೆ ಮತ್ತು ಆಯ್ಕೆಗೆ ವಿಕಿಪೀಡಿಯಾಗೆ ನಾವು ಮಾಡಿದ ಕೆಲಸಗಳಿಗೆ ಸಂಬಂಧಿಸಿದಂತೆ ಕೆಲವು ಮಾನದಂಡಗಳಿದ್ದವು. ಕನ್ನಡ ಸಮುದಾಯದಿಂದ ನಾನು ಮತ್ತು ಮಲ್ಲಿಕಾರ್ಜುನ್ ಆಯ್ಕೆಯಾಗಿರುವುದಾಗಿ ಕೆಲದಿನಗಳ ನಂತರ ತಿಳಿಸಿದರು.

ರಾಂಚಿಯ ’ಬಿರ್ಸಾ ಮುಂಡಾ’ ವಿಮಾನ ನಿಲ್ದಾಣ
ಈ ಬಾರಿ ಈ ತರಬೇತಿಯನ್ನು ’ರಾಂಚಿ’ಯಲ್ಲಿ ನಡೆಸಲು ಕಾರಣವಿತ್ತು. ಮೊದಲನೆಯದಾಗಿ, ವಿಕಿಪೀಡಿಯಾಗೆ ಬಹಳ ಕೆಲಸ ಮಾಡಿ, ಭಾರತದ ಉತ್ತಮ ವಿಕಿಮೀಡಿಯನ್ ಎಂದು ಗುರುತಿಸಲ್ಪಟ್ಟಿದ್ದ ’ಗಂಗಾಧರ ಭದಾನಿ’ಯವರು ರಾಂಚಿಯವರಾಗಿದ್ದು ಈ ವರ್ಷ ಜನವರಿಯಲ್ಲಿ ನಿಧನರಾಗಿದ್ದರು. ಅವರ ಗೌರವಾರ್ಥವಾಗಿ ರಾಂಚಿಯಲ್ಲಿ ಆಯೋಜನೆಯಾಗಿತ್ತು. ಎರಡನೆಯದಾಗಿ ಭಾರತದ ಪೂರ್ವಭಾಗದಲ್ಲಿ ವಿಕಿಚಟುವಟಿಕೆಗಳನ್ನು ನಡೆಸುವ ಉದ್ದೇಶವೂ ಇತ್ತು. ಜೂನ್ ೨೮ನೇ ತಾರೀಖು ಬೆಂಗಳೂರಿಂದ ಹೊರಟು ರಾಂಚಿಯನ್ನು ತಲುಪಿದೆವು. ವಿಮಾನ ನಿಲ್ದಾಣದಿಂದ ಎಂಟು ಕಿಮೀ ದೂರದಲ್ಲಿರುವ ’ಲೇ ಲ್ಯಾಕ್ ಸರೋವರ್ ಪೋರ್ಟಿಕೊ’ ಹೋಟೆಲ್ ತಲುಪಿದೆವು. ತಮಿಳು, ತೆಲುಗು, ಮಲಯಾಳಂ, ಬೆಂಗಾಳಿ, ಹಿಂದಿ, ಮರಾಠಿ, ಪಂಜಾಬಿ, ಗುಜರಾತಿ, ಸಂಸ್ಕೃತ, ಒಡಿಯಾ, ಇಂಗ್ಲೀಷ್ ವಿಕಿಪೀಡಿಯನ್ನರೂ ಸೇರಿ ಒಟ್ಟು ಮೂವತ್ತು ಜನ ಬಂದಿದ್ದರು.  ಅಂದು ಸಂಜೆ ಪೂರ್ವಭಾವಿ ಸೆಶನ್ ಇತ್ತು. ಪರಸ್ಪರ ಪರಿಚಯ, ತರಬೇತಿ ಕಾರ್ಯಕ್ರಮದ ಬಗ್ಗೆ ಮಾಹಿತಿ, ಕಾರ್ಯಸೂಚಿ ಇತ್ಯಾದಿಗಳನ್ನು ಕೊಡಲಾಯಿತು.

ತರಬೇತಿ ಸೆಶನ್ - ಒಂದು ನೋಟ
ಮಾರನೆಯ ದಿನ ಬೆಳಗ್ಗೆ ಹತ್ತು ಗಂಟೆಗೆ ಶುರುವಾದ ತರಬೇತಿಯು ನಡುವಿನ ಚಹಾ ವಿರಾಮ ಮತ್ತು ಊಟದ ವಿರಾಮದೊಂದಿಗೆ ಸಂಜೆಯವರೆಗೂ ನಡೆಯಿತು. ವಿಕಿಗೆ ಸಂಬಂಧಿಸಿದಂತೆ ಹಲವು ವಿಷಯಗಳ ಬಗ್ಗೆ, ಟೂಲ್ ಗಳ ಬಗ್ಗೆ ತಿಳಿಸಿಕೊಡಲಾಯಿತು. ಬೇರೆ ಬೇರೆ ಭಾಷೆಯ ವಿಕಿಪೀಡಿಯನ್ನರು ಅವರ ಭಾಷೆಯ ವಿಕಿಪೀಡಿಯಾಗಳ ಬಗ್ಗೆ, ನಡೆಯುತ್ತಿರುವ ಚಟುವಟಿಕೆಗಳ ಬಗ್ಗೆ ಮಾಹಿತಿ, ಅನುಭವಗಳನ್ನು ಹಂಚಿಕೊಂಡರು. ಹಿರಿಯ ವಿಕಿಪೀಡಿಯನ್ನರಾಗಿದ್ದ ಗಂಗಾಧರ ಬದಾನಿಯವರ ಕುಟುಂಬವನ್ನು ಸಂಜೆ ಆಹ್ವಾನಿಸಲಾಗಿತ್ತು. ಭದಾನಿಯವರ ಸ್ಮರಣಾರ್ಥವಾಗಿ ಒಂದು ಚಿಕ್ಕ ಸಭೆ ನಡೆಸಿ ಗೌರವ ಸಲ್ಲಿಸಲಾಯಿತು. ಇಂಗ್ಲೀಷ್ ವಿಕಿಪೀಡಿಯಾದಲ್ಲಿ ಅವರು ಮಾಡಿದ ಎಡಿಟ್ ಎಣಿಕೆ ಎರಡೂವರೆ ಲಕ್ಷಕ್ಕೂ ಮೀರಿದ್ದು ಆ ವಯಸ್ಸಿನಲ್ಲಿ ಅವರು ಸಲ್ಲಿಸಿದ ಕಾಣಿಕೆ ಮತ್ತು ಅನೇಕ ಕಿರಿಯ ವಿಕಿಪೀಡಿಯನ್ನರಿಗೆ ಕೊಟ್ಟ ಪ್ರೋತ್ಸಾಹಗಳನ್ನು ನೆನಪಿಸಿಕೊಳ್ಳಲಾಯಿತು. 

ಮೊದಲ ದಿನದ ತರಬೇತಿಯಲ್ಲಿ ಸಮಯದ ಅಭಾವದಿಂದ ಎರಡ್ಮೂರು ವಿಷಯಗಳು ಬಿಟ್ಟುಹೋದದ್ದರಿಂದ ಅನಂತರದ ದಿನ ಬೆಳಗ್ಗೆ ಒಂಬತ್ತು ಗಂಟೆಗೇ ಸೇರಿದೆವು. ಅಂದು ಕೂಡ ಹಲವು ತರಬೇತಿ ಮತ್ತು ಮಾಹಿತಿ ಸೆಶನ್ ಗಳು ನಡೆದವು. ಆಯಾ ವಿಕಿಪೀಡಿಯನ್ನರು ತಮ್ಮ ಭಾಷೆಯ ವಿಕಿಗಾಗಿ ಮುಂದೆ ಯಾವ ರೀತಿ ಯೋಜನೆಗಳನ್ನು ಹಮ್ಮಿಕೊಳ್ಳಲು ಬಯಸುತ್ತಾರೆ ಎಂಬುದನ್ನು ಪ್ರೆಸೆಂಟ್ ಮಾಡಲು ಹೇಳಲಾಯಿತು. ಕನ್ನಡ ವಿಕಿಪೀಡಿಯಕ್ಕಾಗಿ ಹಾಕಿಕೊಳ್ಳಬಹುದಾದ ಯೋಜನೆಯ ಬಗ್ಗೆ ನಾವು ಪ್ರೆಸೆಂಟ್ ಮಾಡಿದೆವು.  ಕೆಲವು hands on activityಗಳು ನಡೆದವು.
ಕನ್ನಡ ಸಮುದಾಯದ ಪರವಾಗಿ ನಾನು ಮತ್ತು ಮಲ್ಲಿಕಾರ್ಜುನ್
ಒಡಿಯಾ, ಗುಜರಾತಿ, ಸಂಸ್ಕೃತ ವಿಕಿಪೀಡಿಯನ್ನರು
ಕನ್ನಡ ವಿಕಿಗಾಗಿ ನಾವು ತೋರಿಸಿದ ನಮ್ಮ ಯೋಚನೆ
ಕೊನೆಯ ದಿನದ ತರಬೇತಿ ಅರ್ಧ ದಿನಕ್ಕೆ ಮಾತ್ರ ಸೀಮಿತವಾಗಿದ್ದು ಒಂದೆರಡು ವಿಷಯಗಳ ಮಾಹಿತಿ ಹಂಚಿಕೆ ನಡೆಯಿತು. ಎರಡು ದಿನಗಳಲ್ಲಿ ನಡೆದ ತರಬೇತಿಯ ವಿಷಯಗಳ ಬಗ್ಗೆ ಮೆಲುಕು, ಬೇಕಾದಲ್ಲಿ ಹೆಚ್ಚಿನ ಮಾಹಿತಿ, ಮುಂದಿನ ಯೋಜನೆಗಳ ಬಗ್ಗೆ ಮಾತುಕತೆ, ಅಭಿಪ್ರಾಯ, ಹಿನ್ನುಣಿಕೆಗಳನ್ನು ಹಂಚಿಕೊಳ್ಳಲಾಯಿತು.
ಉತ್ತಮ ಲೇಖನಕ್ಕೆ ಬೇಕಾದ ಅಂಶಗಳ
ಬಗ್ಗೆ ನಡೆದ ಒಂದು brain storming ಸಂಗ್ರಹ ರೂಪ
ಬೇರೆ ಬೇರೆ ರಾಜ್ಯಗಳಿಂದ ಬಂದಿದ್ದ ವಿಕಿಪೀಡಿಯನ್ನರು ಮಧ್ಯಾಹ್ನ ವಾಪಸ್ ಹೊರಟರು. ನಾವು ಕೂಡ ಎರಡು ಗಂಟೆಗೆ ಅಲ್ಲಿಂದ ಹೊರಟು ನಾಲ್ಕೂ ಇಪ್ಪತ್ತರ ವಿಮಾನದಲ್ಲಿ ಸಂಜೆ ಆರೂವರೆ ವೇಳೆಗೆ ಬೆಂಗಳೂರು ವಿಮಾನ ನಿಲ್ದಾಣ ತಲುಪಿದೆವು. ಭಾರತದ ವಿವಿಧ ಭಾಗಗಳ, ಬೇರೆ ಬೇರೆ ಭಾಷೆಗಳ ವಿಕಿಪೀಡಿಯರೊಡನೆ ಸಂವಾದ, ಹಲವು ಹೊಸ ವಿಷಯಗಳ ಬಗ್ಗೆ ತಿಳಿದುಕೊಂಡಿದ್ದು, ಕಲಿತುಕೊಂಡಿದ್ದು, ತೆಲುಗು, ತಮಿಳಿನ ಹಿರಿಯ ವಿಕಿಪೀಡಿಯನ್ನರ ಭೇಟಿಗಳು ಒಟ್ಟಾರೆ ಒಳ್ಳೆಯ ಅನುಭವ, ಖುಷಿ ಕೊಟ್ಟಿತು. ಕನ್ನಡ ವಿಕಿಮೀಡಿಯ ಯೋಜನೆಗಳಿಗೆ ಹೆಚ್ಚಿನ ಕೆಲಸ ಮಾಡಲು ಈ ತರಬೇತಿ ಶಿಬಿರವು ಉತ್ಸಾಹ ತುಂಬಿತು.


ಮಂಗಳವಾರ, ಮೇ 1, 2018

ಬೆಂಗಳೂರಿನ ಶಿಲಾಶಾಸನಗಳಲ್ಲಡಗಿದೆ ಇತಿಹಾಸ!

ನಾಲ್ಕೈದು ವರ್ಷದ ಹಿಂದೆ ಪತ್ರಿಕೆಯೊಂದರಲ್ಲಿ ಬೆಂಗಳೂರಿನ ಬೇಗೂರಿನ ದೇವಸ್ಥಾನದಲ್ಲಿರುವ ಶಾಸನವೊಂದರ ಬಗ್ಗೆ ಲೇಖನ ಓದಿದ್ದೆ. ’ಬೆಂಗಳೂರು’ ಎಂಬ ಹೆಸರು ಅದರಲ್ಲಿ ಉಲ್ಲೇಖವಾಗಿದೆಯೆಂದೂ, ಅದು ಸುಮಾರು ೯ನೇ ಶತಮಾನದ ಶಾಸನವಾಗಿದ್ದು ಬೆಂಗಳೂರು ಎಂಬ ಹೆಸರಿನ ಬಗ್ಗೆ ಒಂದು ಪ್ರಮುಖ ಪುರಾವೆಯೆಂದೂ ಹೇಳಲಾಗಿತ್ತು. ಅದರಲ್ಲಿ ’ಗಂಗರು’ ಮತ್ತು ’ನೊಳಂಬ’ರ ನಡುವೆ ನಡೆದ ’ಬೆಂಗಳೂರು ಕದನ’ದ ಬಗ್ಗೆ ಹೇಳಲಾಗಿದೆ. ’ಬೆಂಗಳೂರು’ ಎಂಬ ಹೆಸರಿನ ಹುಟ್ಟಿನ ಬಗ್ಗೆ ಅನೇಕ ದಂತಕತೆಗಳೂ, ವಾದಗಳೂ ಇವೆಯಾದರೂ ಇನ್ನೂ ಯಾವುದೂ ಖಚಿತವಾಗಿ ಹೇಳಲು ಸಾಧ್ಯವಾಗಿಲ್ಲ. ಆದರೆ ಒಂಬತ್ತನೇ ಶತಮಾನದಲ್ಲೇ ’ಬೆಂಗಳೂರು’ ಎಂಬ ಪದ ಉಲ್ಲೇಖವಾಗಿರುವುದು ಕುತೂಹಲಕಾರಿಯಾಗಿತ್ತು.
ಬೇಗೂರು ಶಿಲಾಶಾಸನದ ಚಿತ್ರ.
ಇದರಲ್ಲಿ ಬಣ್ಣದ ಅಕ್ಷರದಲ್ಲಿರುವುದು ’ಬೆಂಗಳೂರು’ ಎಂಬ ಪದ
ನಾನಿರುವ ಪ್ರದೇಶದ, ಊರಿನ ಇತಿಹಾಸದ ಬಗ್ಗೆ ನನಗೆ ಯಾವತ್ತಿಗೂ ಆಸಕ್ತಿ, ಕುತೂಹಲ ಇದೆ.  ಈ ಬೆಂಗಳೂರು ಇಂದು ನಗರೀಕರಣಗೊಂಡು ಅಡ್ಡಾದಿಡ್ಡಿ ಕಟ್ಟಡಗಳಿಂದ ತುಂಬಿಹೋಗಿದೆ. ಆದರೆ ಹಿಂದೆ ಇದು ಕೂಡ ಹಳ್ಳಿಗಳ, ಕೋಟೆಗಳ ತಾಣವಾಗಿತ್ತು ಎಂಬುದು ಸತ್ಯ. ಅನೇಕ ಪಾಳೇಗಾರರು, ರಾಜರು ಆಳಿದ್ದಾರೆ, ಯುದ್ಧಗಳೂ ನಡೆದಿವೆ.

ಏಪ್ರಿಲ್ ತಿಂಗಳಲ್ಲಿ ಬೆಂಗಳೂರಿನ ’ಸೆಂಟರ್ ಫಾರ್ ಇಂಟರ್ನೆಟ್ ಅಂಡ್ ಸೊಸೈಟಿ’ಯಲ್ಲಿ ಒಂದು ವಿಕಿಪೀಡಿಯ ಕಾರ್ಯಾಗಾರವಿತ್ತು. ನಾನು ಕೂಡ ಕನ್ನಡ ವಿಕಿಪೀಡಿಯದಲ್ಲಿ ಮಾಹಿತಿಗಳನ್ನು ಸೇರಿಸುವ ಕೆಲಸವನ್ನು ಹವ್ಯಾಸವನ್ನಾಗಿ ಮಾಡುತ್ತಿರುವುದರಿಂದ ಆ ಕಾರ್ಯಾಗಾರದಲ್ಲಿ ಭಾಗವಹಿಸಿದ್ದೆ. ಅವತ್ತಿನ ದಿನ ಮಧ್ಯಾಹ್ನ ಶಿಲಾಶಾಸನಗಳ ಬಗ್ಗೆ ಒಂದು ಸೆಶನ್ ಏರ್ಪಡಿಸಿದ್ದರು. ಉದಯ್ ಕುಮಾರ್ ಮತ್ತು ವಿನಯ್ ಎನ್ನುವ ಸಂಪನ್ಮೂಲ ವ್ಯಕ್ತಿಗಳಿಬ್ಬರು ಬಂದಿದ್ದರು.  ಸುಮಾರು ಒಂದು ಒಂದೂವರೆ ಗಂಟೆಗಳ ಅವತ್ತಿನ ಆ ಸೆಶನ್ ನಿಜಕ್ಕೂ ಒಂದು ಹೊಸಲೋಕವನ್ನೇ ತೆರೆದಿಟ್ಟಿತ್ತು. ಅವರು ಪ್ರದರ್ಶಿಸಿದ  ಒಂದು ವೀಡಿಯೋ ದೃಶ್ಯವು ಒಂದು ಅರ್ಧ ಕಟ್ಟಿದ ಕಟ್ಟಡದಿಂದ ಶುರುವಾಗುತ್ತದೆ. ಹಾಗೆಯೇ ಕ್ಯಾಮರಾ ಚಲಿಸುತ್ತಾ ಆ ಕಟ್ಟಡದ ಪಕ್ಕದಿಂದ ಹೋಗಿ ಹಿಂಭಾಗದಲ್ಲಿ ಒಂದು ಓಣಿಯನ್ನು ಪ್ರವೇಶಿಸುತ್ತದೆ. ಅಲ್ಲಿ ನೋಡಿದರೆ ಕಟ್ಟಡ ತ್ಯಾಜ್ಯ ಇತ್ಯಾದಿ ಕಸದಿಂದ ತುಂಬಿದೆ. ಹಾಗೆಯೇ ಮುಂದುವರೆದರೆ ಅಲ್ಲೇ ನಡುವಿನಲ್ಲಿ ನೇರವಾಗಿ ನಿಲ್ಲಿಸಿರುವ ಎರಡು ಕಲ್ಲುಗಳು. ಹತ್ತಿರಕ್ಕೆ ಜೂಮ್ ಮಾಡಿದರೆ ಅದರಲ್ಲಿ ಅಸ್ಪಷ್ಟವಾಗಿ ಕಾಣುವ ಅಕ್ಷರಗಳು. ಸೂಕ್ಷವಾಗಿ ನೋಡಿದರೆ, ಹಳೆಗನ್ನಡ ಬರೆವಣಿಗೆ!  ಇತಿಹಾಸದ ಪ್ರಮುಖ ದಾಖಲೆಯಾಗಬೇಕಿದ್ದ ಶಿಲಾಶಾಸನವೊಂದು ನಗರೀಕರಣದ ಹೊಡೆತಕ್ಕೆ ಸಿಕ್ಕು ದುಃಸ್ಥಿತಿಗಿಳಿದಿರುವ ಚಿತ್ರಣದ ಒಂದು ತುಣುಕು ಅದು.  ಇಲ್ಲಿಂದ ಶುರುಮಾಡಿ ಉದಯ ಕುಮಾರ್ ಅವರು ಬೆಂಗಳೂರಿನ ಶಿಲಾಶಾಸನಗಳ ಬಗ್ಗೆ ವಿವರಿಸುತ್ತಾ ಹೋದರು. ಅವುಗಳಲ್ಲಿ ಸಿಗುವ ಕೆಲವೇ ಕೆಲವು ವಾಕ್ಯಗಳು ಹೇಗೆ ಇತಿಹಾಸ, ಆಗಿನ ಕಾಲದ ನಂಬುಗೆಗಳು, ಸಾಮಾಜಿಕ ಪರಿಸ್ಥಿತಿ, ಆಡಳಿತ, ತಿಳಿವಳಿಕೆ, ಪ್ರಚಲಿತವಾಗಿದ್ದ ಭಾಷೆಗಳು ಇತ್ಯಾದಿಗಳ ಬಗ್ಗೆ ಬೆಳಕು ಚೆಲ್ಲಬಹುದು ಎಂಬುದನ್ನು ವಿವರಿಸಿದರು.  ಉದಯ್ ಮತ್ತು ವಿನಯ್ ಇಬ್ಬರೂ ಸೇರಿ ಬೆಂಗಳೂರಿನ ಇಂತಹ ಶಿಲಾಶಾಸನಗಳನ್ನು ರಕ್ಷಿಸುವ ಕೆಲಸದಲ್ಲಿ ತೊಡಗಿದ್ದಾರೆ. ಇದರ ಬಗ್ಗೆ ಜನರಲ್ಲಿ ಜಾಗೃತಿ ಮೂಡಿಸುತ್ತಿದ್ದಾರೆ.  ಅವರ ಪ್ರಯತ್ನ ಮತ್ತು ಕೆಲಸ ನೋಡಿ ಧನ್ಯವೆನಿಸಿತು.

ಎಫಿಗ್ರಾಫಿಯಾ ಕಾರ್ನಾಟಿಕಾ ಎಂಬುದು ಕರ್ನಾಟಕದ ಶಿಲಾಶಾಸನಗಳನ್ನು ದಾಖಲಿಸಿಟ್ಟಿರುವ ಗ್ರಂಥ. ಬಿ. ಎಲ್. ರೈಸ್ ಎನ್ನುವ ಪುಣ್ಯಾತ್ಮರೊಬ್ಬರು ದಶಕಗಟ್ಟಲೇ ತಿರುಗಾಡಿ ಸುಮಾರು ಎಂಟು ಸಾವಿರ ಶಾಸನಗಳ ಪ್ರತಿಯನ್ನು, ಅದರಲ್ಲಿನ ಪಠ್ಯವನ್ನು ಸಂಗ್ರಹಿಸಿಟ್ಟಿದ್ದಾರೆ. ಬ್ರಿಟಿಷ್ ಅಧಿಕಾರಿಯಾಗಿ ಅವರು ಮಾಡಿರುವ ಕೆಲಸ ಚಿರಸ್ಮರಣೀಯ.  ಈ ಎಪಿಗ್ರಾಫಿಯಾ ಗ್ರಂಥದಲ್ಲಿ ಉಲ್ಲೇಖಿಸಿರುವ ಶಾಸನಗಳ ಇರುವೆಡೆಗಳನ್ನಾಧರಿಸಿ ಉದಯ ಮತ್ತು ವಿನಯ್ ಅವುಗಳನ್ನು ಹುಡುಕಿ ಒಳ್ಳೆಯ ಸ್ಥಿತಿಗೆ ತಂದು ಸಂರಕ್ಷಿಸುತ್ತಿದ್ದಾರೆ.  ಜೊತೆಗೆ ಆ ಹಳ್ಳಿಯ, ಪ್ರದೇಶದ ಜನರಿಗೆ ಅವುಗಳ ಬಗ್ಗೆ ಅರಿವು ಮೂಡಿಸಿ ಇದು ಅಮೂಲ್ಯವೆಂದು ಮನವರಿಕೆ ಮಾಡಿಕೊಡುವ ಪ್ರಯತ್ನದಲ್ಲಿದ್ದಾರೆ. ಈ ಸಂರಕ್ಷಣಾ ಕೆಲಸವನ್ನು ಯುನೆಸ್ಕೋ ಕೂಡ ಗುರುತಿಸಿ ಮೆಚ್ಚುಗೆ ವ್ಯಕ್ತಪಡಿಸಿರುವುದು ಇಲ್ಲಿ ಗಮನಾರ್ಹ. ೧೯೦೫ರಲ್ಲಿ ಪ್ರಕಟವಾದ ಆ ಗ್ರಂಥದಲ್ಲಿ ಬೆಂಗಳೂರು ಜಿಲ್ಲೆಯಲ್ಲಿ ಇಂತಹ ಸುಮಾರು ೧೫೦ ಶಾಸನಗಳು ದಾಖಲಾಗಿವೆ.  ಆದರೆ ದುಃಖದ ವಿಷಯ ಎಂದರೆ ಅವುಗಳಲ್ಲಿ ಈಗ ಉಳಿದಿರುವುದು ಕೇವಲ ೩೫ ಮಾತ್ರ! ಅವು ಕೂಡ ನಿರ್ಲಕ್ಷ ಕ್ಕೊಳಗಾಗಿ ಕಣ್ಮರೆಯಾಗುವ ಆತಂಕದಲ್ಲಿವೆ. 

ಇಂತಹ ಶಾಸನಗಳ ಬಗ್ಗೆ ವಿಕಿಪೀಡಿಯ ಪುಟಗಳನ್ನು ರಚಿಸಿ ಆ ಮಾಹಿತಿ ಎಲ್ಲರಿಗೂ ದೊರಕುವಂತೆ ಮಾಡುವ ಯೋಜನೆ ಮಾಡಲಾಯಿತು. ಈಗ ಉಳಿದಿರುವ ಶಾಸನಗಳು ಎಲ್ಲೆಲ್ಲಿವೆ ಎಂಬುದನ್ನು ಜಿಯೋ ಟ್ಯಾಗಿಂಗ್ ಮಾಡಿ kml file ಮಾಡಿದ್ದಾರೆ. ಗೂಗಲ್ ಮ್ಯಾಪಿನಲ್ಲಿ ಅದನ್ನು ಲೋಡ್ ಮಾಡಿದಾಗ ಶಾಸನಗಳ ಇರುವೆಡೆಗಳನ್ನು ನೋಡಬಹುದು. ಆಧುನಿಕ ತಂತ್ರಜ್ಞಾನಗಳನ್ನು ಬಳಸಿ ಅವುಗಳ ಮೂರು ಆಯಾಮದ ಪ್ರತಿಗಳನ್ನೂ ರೂಪಿಸುತ್ತಿದ್ದಾರೆ.  ಕೆಲವು ಶಾಸನಗಳ ಮೂರು ಆಯಾಮದ ಚಿತ್ರಗಳನ್ನು ಇಲ್ಲಿ ನೋಡಬಹುದು.

ಶನಿವಾರ, ಏಪ್ರಿಲ್ 7, 2018

ಕನ್ನಡದಲ್ಲಿ ಡಬ್ಬಿಂಗ್ ಸಿನೆಮಾಗಳ ’ಆರಂಭಂ’

19 ನವೆಂಬರ್ 2017 ರಂದು ಫೇಸ್ಬುಕ್ಕಲ್ಲಿ ಬರೆದದ್ದು.

'ಧೀರ' ಎಂಬ ಸಿನೆಮಾವನ್ನು ಬೆಂಗಳೂರಿನ ಹೊಸಕೆರೆಹಳ್ಳಿಯ ಕೋಕಿಲಾ ಟಾಕೀಸಲ್ಲಿ ನೋಡಿದೆ. ಅದರಲ್ಲೇನು ವಿಶೇಷ ಅಂತ‌ ನೀವು ಕೇಳಬಹುದು. ಮೂಲತಃ ಇದೊಂದು ತಮಿಳು ಸಿನೆಮಾ, 'ಆರಂಭಂ' ಅಂತ ಹೆಸರು. ಕನ್ನಡಕ್ಕೆ ಡಬ್ ಆಗಿ 'ಧೀರ'ನಾಗಿದೆ. ಅದೇನು ದೊಡ್ಡ ವಿಶೇಷ ಅಂತ ಕೇಳ್ತೀರಾ? ಅಲ್ಲೇ ಇರುವುದು ವಿಷಯ. ಸುಮಾರು ೫೦ ವರ್ಷಗಳಿಂದ‌ ಕನ್ನಡದ ಯಾವುದೇ‌ ಡಬ್ಬಿಂಗ್ ಸಿನೆಮಾ ಬೆಂಗಳೂರಲ್ಲಿ‌ ಬಿಡುಗಡೆಯಾಗಿರಲಿಲ್ಲ. ಇಡೀ ಕರ್ನಾಟಕದಲ್ಲೂ ಅಷ್ಟೆ! ಕನ್ನಡ ಚಿತ್ರರಂಗದ ಈ ಸ್ವಯಂ ಮತ್ತು‌ ಬಲವಂತದ ಡಬ್ಬಿಂಗ್ ನಿಷೇಧದ ವಿರುದ್ಧ 'ಕನ್ನಡ ಗ್ರಾಹಕ ಕೂಟ'ದ ಗೆಳೆಯರು ಅನೇಕ ವರ್ಷಗಳ‌ ಕಾಲ ಸುಪ್ರೀಂಕೋರ್ಟ್'ವರೆಗೂ ಕಾನೂನು ಹೋರಾಟ ಮಾಡಿ ಜಯಗಳಿಸಿ ಕನ್ನಡಕ್ಕೆ ಡಬ್ಬಿಂಗ್ ಆದ ಚಿತ್ರಗಳು ತೆರೆಗೆ ಬರುವಂತೆ ಮಾಡಿದ್ದಾರೆ. ಕೆಲತಿಂಗಳ‌ ಹಿಂದೆ ಬಂದಿದ್ದ 'ಸತ್ಯದೇವ ಐಪಿಎಸ್' ಎಂಬ ಸಿನೆಮಾ‌ ಕರ್ನಾಟಕದ ಬೇರೆ ಕಡೆಗಳಲ್ಲಿ ಬಿಡುಗಡೆಯಾಗಿದ್ರೂ ಬೆಂಗಳೂರಲ್ಲಿ ಕೆಲವರ ಗೂಂಡಾಗಿರಿಯಿಂದಾಗಿ ಸಾಧ್ಯವಾಗಿರಲಿಲ್ಲ! ವರ್ಷದ ಹಿಂದೆ 'ನಾನು ನನ್ನ ಪ್ರೀತಿ' ಎಂಬ ಸಿನೆಮಾಗೂ ಕೂಡ ಇದೇ ಗತಿಯಾಗಿತ್ತು. ಈ ಡಬ್ಬಿಂಗ್ ನಿಷೇಧದಿಂದ ಕನ್ನಡಿಗರಿಗಾದ ನಷ್ಟ ದೊಡ್ಡದಿದೆ. ಟೈಟಾನಿಕ್, ಜುರಾಸಿಕ್ ಪಾರ್ಕ್, ಅವತಾರ್, ಜಂಗಲ್ ಬುಕ್, ಸ್ಪೈಡರ್ ಮನ್, ಬಾಹುಬಲಿ ಇಂತಹ ಹಲವಾರು ಸಿನೆಮಾಗಳನ್ನು ಪರಭಾಷಿಕರು ಅವರವರ ಭಾಷೆಗಳಲ್ಲಿ ನೋಡಿ ಆನಂದಿಸಿದರೆ ಕನ್ನಡಿಗರು ಕನ್ನಡದಲ್ಲಿ ನೋಡಲು ಅವಕಾಶವಿಲ್ಲದಂತಾಗಿತ್ತು. ಜ್ಞಾನವಿಜ್ಞಾನ, ಕಾರ್ಟೂನ್ ಮೊದಲಾದ ಟೀವಿ ಚಾನಲ್ ಗಳೂ ಇದಕ್ಕೆ ಹೊರತಾಗಿರಲಿಲ್ಲ.
ಟೀವಿ ಜಾಹೀರಾತುಗಳನ್ನು ನೋಡಿ ನಮ್ಮ‌ ಜನಕ್ಕೆ ಡಬ್ಬಿಂಗ್ ಬಗ್ಗೆ ಆತಂಕ ಇದೆ. ಹಾಗಾಗಿ 'ಧೀರ' ಚಿತ್ರದ ಡಬ್ಬಿಂಗ್ ಕ್ವಾಲಿಟಿ ಬಗ್ಗೆ ಹೇಳಲೇಬೇಕು. ಇದು ಅತ್ಯುತ್ತಮ ಡಬ್ಬಿಂಗ್ ಗೆ ಉದಾಹರಣೆ ಅನ್ನಬಹುದು. ಇದರಲ್ಲಿನ‌ ಸಂಭಾಷಣೆಗಳು, ಹಾಡುಗಳ ಸಾಹಿತ್ಯ,‌ ಲಿಪ್ ಸಿಂಕ್ ಹೇಗಿವೆಯೆಂದರೆ ಒರಿಜಿನಲ್‌ ಕನ್ನಡ ಸಿನೆಮಾವನ್ನೇ ನೋಡುತ್ತಿರುವಂತೆ ಅನಿಸುತ್ತದೆ. ಮುಂಬಯಿ, ಚೆನ್ನೈ, ದುಬೈಗಳಲ್ಲಿ ನಡೆಯುವ ಕತೆಯನ್ನು, ದೃಶ್ಯಗಳನ್ನು ಎಲ್ಲೂ ಕೃತಕವೆನಿಸದಂತೆ ಕನ್ನಡಕ್ಕೆ ತರಲು ಸಂಪೂರ್ಣ ಯಶಸ್ವಿಯಾಗಿದ್ದಾರೆ.
ಕರ್ನಾಟಕದ ಮಾರುಕಟ್ಟೆ ಈಗಾಗಲೇ ಪರಭಾಷಾ ಸಿನೆಮಾಗಳ ಹಾವಳಿಗೆ ತುತ್ತಾಗಿದೆ.‌ ಡಬ್ಬಿಂಗ್ ನಿಷೇಧದ ತೆರವಿನಿಂದಾಗಿ ಪರಭಾಷೆಯ ಸಿನೆಮಾಗಳು, ಹಾಲಿವುಡ್ ನ ಸಿನೆಮಾಗಳು ಕರ್ನಾಟಕದಲ್ಲಿ ಕನ್ನಡದಲ್ಲೇ ಬಿಡುಗಡೆಯಾಗಿ ಪರಭಾಷೆ ಹಾವಳಿ ಕಡಿಮೆಯಾಗಲು ಮತ್ತು ನಮಗೆ ಎಲ್ಲವನ್ನೂ ಕನ್ನಡದಲ್ಲೇ ಪಡೆಯುವ ಹಾದಿಯೂ ತೆರೆದುಕೊಳ್ಳುವಂತಾಗಲು ಮತ್ತು ಆ ಮೂಲಕ‌ ಹಲವಾರು ‌ರೀತಿಯ ಉದ್ಯೋಗ ಸೃಷ್ಟಿಗೆ ಕಾರಣವಾಗಲು ಇದೊಂದು‌ ಪ್ರಾರಂಭದ ಹೆಜ್ಜೆ ಅನ್ನಬಹುದು.
ಈ ಅಸಾಂವಿಧಾನಿಕ ಡಬ್ಬಿಂಗ್ ನಿಷೇಧದ ವಿರುದ್ಧ ಸತತ ಹಲವು ವರ್ಷಗಳ ಕಾಲ ಕಾನೂನು ಹೋರಾಟ ಮಾಡಿ ಯಶಸ್ವಿಯಾದ ಗ್ರಾಹಕ ಕೂಟದ Ganesh ChetanArun Javgal ಮುಂತಾದ ಎಲ್ಲಾ ಸ್ನೇಹಿತರಿಗೂ ಮತ್ತು‌ ನಿರ್ಮಾಪಕ Krishna Murthy ಯವರಿಗೂ ಧನ್ಯವಾದಗಳು.
ಅಂದಹಾಗೆ, ಸುಮಾರು ೨೦ ವರ್ಷಗಳ ಹಿಂದೆ ನಾನು ಟಾಕೀಸಿನಲ್ಲಿ ನೋಡಿದ್ದ‌ ಮೊದಲ ತಮಿಳು ಚಿತ್ರ ಕಮಲಹಾಸನ್‌ನ 'ದೇವರ ಮಗನ್'. ಎರಡನೇದು ಅಂದರೆ ಇದೇ 'ಆರಂಭಂ'...*ಧೀರ*ನಾಗಿ !

****
ರಾಜ್ ಬೆಳಗೆರೆಯವರು ಕೊಟ್ಟ ಮಾಹಿತಿ:
Raj Belagere: ಕನ್ನಡದಲ್ಲಿ ಸುಮಾರು 15-16 ವರ್ಷಗಳ ಹಿಂದೆಯೇ ಡಬ್ಬಿಂಗ್ ಚಿತ್ರ ಬಿಡುಗಡೆಯಾಗಿತ್ತು. ತೆಲುಗಿನ ಮೆಕ್ಯಾನಿಕ್ ಮಾವಯ್ಯ ಕನ್ನಡದಲ್ಲಿ ಭಾರತ್ 2000 ಹೆಸರಿನಲ್ಲಿ ಬಿಡುಗಡೆಯಾಗಿತ್ತು. ಅದನ್ನು ಉಪಾಯವಾಗಿ ಕನ್ನಡಕ್ಕೆ ಡಬ್ ಮಾಡಿ ಬಿಡುಗಡೆಮಾಡಲಾಗಿತ್ತು. ಕನ್ನಡದಲ್ಲಿ ನಿರ್ದೇಶಕ ಎಸ್.ವಿ. ರಾಜೇಂದ್ರಸಿಂಗ್ ಇದನ್ನು ಕನ್ನಡಕ್ಕೆ ತಂದಿದ್ದರು. ಈ ಬಗ್ಗೆ ಸ್ವಲ್ಪ ಗಲಾಟೆ ಕೂಡಾ ಆಗಿತ್ತು. ನಿರ್ದೇಶಕ ಸಂಘದಿಂದ ಅವರನ್ನು ಕೆಲವು ಕಾಲ ಬಹಿಷ್ಕಾರ ಹಾಕಲಾಗಿತ್ತು. ಆ ಸಿನೆಮಾ ಒಮ್ಮೆ ನೋಡಿ. ಡಬ್ ಮಾಡಿರುವುದು ಸರಳವಾಗಿ ಗೊತ್ತಾಗುತ್ತೆ. ನಾಯಕ ರಾಜಶೇಖರ, ನಾಯಕಿ ರಂಭಾ.... ರಾಜ್ಯಾದ್ಯಂತ ಟಾಕೀಸ್ ನಲ್ಲಿ ಬಿಡುಗಡೆಯಾಗಿ ಪ್ರದರ್ಶನ ಕೂಡಾ ಕಂಡಿತ್ತು.

ಶನಿವಾರ, ಜನವರಿ 27, 2018

ಏನಿದು ’ಪೋತಿ.ಕಾಂ’? ಮತ್ತು ಅದರೊಂದಿಗೆ ಒಂದು ಅನುಭವ


ನಿಮ್ಮಲ್ಲಿ ಒಳ್ಳೆಯ ಬರವಣಿಗೆ ಕಲೆ ಇದೆ. ಹಲವಾರು ಬಿಡಿಬಿಡಿ ಬರಹಗಳನ್ನು, ಕತೆಗಳನ್ನು ಪತ್ರಿಕೆಗಳಲ್ಲಿ, ಮ್ಯಾಗಜೀನುಗಳಲ್ಲಿ ಪ್ರಕಟಿಸಿಯೂ ಇರಬಹುದು. ಅದೆಲ್ಲಾ ಸೇರಿಸಿ ಒಂದು ಪುಸ್ತಕ ಮಾಡಬೇಕು ಅಂತ ಮನಸ್ಸಾಗುತ್ತದೆ. ಒಂದು ಕಾದಂಬರಿಯನ್ನು ಬರೆದಿಟ್ಟಿದ್ದೀರಿ. ಅದನ್ನು ಪುಸ್ತಕ ಮಾಡಿ ಪ್ರಕಟಣೆ ಮಾಡಬೇಕು ಅಂತ ನಿಮ್ಮ ಆಸೆ.  ಆದರೆ ಅದನ್ನು ಸಾಂಪ್ರದಾಯಿಕವಾಗಿ ಸಾವಿರಾರು ಕಾಪಿ ಪ್ರಿಂಟ್ ಹಾಕಿಸಿ ಪಬ್ಲಿಷ್ ಮಾಡಿ ಮಾರಾಟ ಮಾಡಲು ಕಾರಣಾಂತರಗಳಿಂದ ಸಾಧ್ಯವಿಲ್ಲ. ಆಗ ಏನು ಮಾಡಬಹುದು? ಒಂದು ದಾರಿಯೆಂದರೆ ಇ-ಬುಕ್ ಮಾಡಬಹುದು. ಇ-ಬುಕ್ ಓದುವ ಅನುಕೂಲ, ಅಭ್ಯಾಸ, ಇಷ್ಟ ಇರುವವರು ಓದಿಕೊಳ್ಳುತ್ತಾರೆ. ಆದರೆ ಪ್ರಿಂಟ್ ರೂಪದಲ್ಲೇ ಬೇಕು ಅನ್ನುವ ಓದುಗರಿಗೆ ಏನು ಮಾಡಬಹುದು? ಪ್ರಿಂಟಿಂಗ್ ಪ್ರೆಸ್ಸುಗಳು ಪುಸ್ತಕ ಮಾಡಲು ಒಂದು ಕನಿಷ್ಠ ಸಂಖ್ಯೆಯಷ್ಟು ಕಾಪಿಗಳು ಬೇಕೇಬೇಕು ಎನ್ನುತ್ತವೆ. ಸಾಮಾನ್ಯವಾಗಿ ಕನಿಷ್ಠ ಸಾವಿರ ಕಾಪಿ  ಹಾಕಿಸಬೇಕಾಗುತ್ತದೆ. ಇದಾದಮೇಲೆ ಅದನ್ನು ಶೇಖರಣೆ, ಮಾರಾಟ ಇದೆಲ್ಲಾ ತಲೆಬಿಸಿಗಳು ಎಲ್ಲರಿಗೂ ಸಾಧ್ಯವಾಗಲಿಕ್ಕಿಲ್ಲ..

ಹಾಗಿದ್ದಲ್ಲಿ ಪುಸ್ತಕ ಆನ್ ಲೈನಲ್ಲಿ ಪಬ್ಲಿಷ್ ಮಾಡಿ ಮಾರಾಟಕ್ಕಿಟ್ಟು ಮುದ್ರಣ ರೂಪದಲ್ಲೇ ಬೇಕು ಅಂದವರಿಗೆ ಮಾತ್ರ ಪ್ರಿಂಟ್ ಹಾಕಿಸಿ ಕೊಡುವ ವ್ಯವಸ್ಥೆ ಇದ್ದರೆ ಹೇಗೆ? ಅಂತಹ ಒಂದು ಸೌಲಭ್ಯವೇ ಈ ಪೋತಿ.ಕಾಂ. ಇದು ಸ್ವತಃಪ್ರಕಟಣೆ (self publishing) ಕೆಲಸ. ಪೋತಿ.ಕಾಂ ಇದಕ್ಕೆ ವೇದಿಕೆ ಒದಗಿಸುವುದರ ಜೊತೆಗೆ ಪುಸ್ತಕ ಮುದ್ರಿಸಿಕೊಡುತ್ತದೆ. ಇಲ್ಲಿ ಕನಿಷ್ಠ ಎಂದರೆ ಕೇವಲ ಒಂದು ಕಾಪಿ ಬೇಕಾದರೂ ಮುದ್ರಿಸಿ ತರಿಸಿಕೊಳ್ಳಲು ಸಾಧ್ಯ.  ಲೇಖಕರು ಅಥವಾ ಪ್ರಕಾಶಕರು ಇಲ್ಲಿ ತಮ್ಮ ಪುಸ್ತಕವನ್ನು ತಮಗೆ ಬೇಕಾದ ವಿನ್ಯಾಸ, ರಕ್ಷಾಪುಟಗಳೊಂದಿಗೆ ಅಪ್ಲೋಡ್ ಮಾಡಿರಬೇಕಾಗುತ್ತದೆ. ಓದುಗರು ಇಂತಹ ಪುಸ್ತಕಗಳನ್ನು ಇ-ಬುಕ್ ಗಳಾಗಿ ಅಥವಾ ಪ್ರಿಂಟ್ ರೂಪದಲ್ಲಿ ಕೊಳ್ಳಬಹುದಾಗಿರುತ್ತದೆ.  ಹಾಗಂತ ಇದನ್ನು ಹೊಸಲೇಖಕರು ಅಥವಾ ಸಾಂಪ್ರದಾಯಿಕವಾಗಿ ಪಬ್ಲಿಶ್ ಮಾಡದ ಲೇಖಕರು ಮಾತ್ರವೇ ಬಳಸಿಕೊಳ್ಳಬೇಕಂತಿಲ್ಲ. ಮುದ್ರಿತ ಪುಸ್ತಕಗಳನ್ನು ತಾವೇ ಅಥವಾ ಬೇರೆ ಪ್ರಕಾಶನದಲ್ಲಿ ಪ್ರಕಟಿಸಿದವರು ಕೂಡ ಪೋತಿಯಲ್ಲಿ ತಮ್ಮ ಪುಸ್ತಕವನ್ನು ಪಬ್ಲಿಶ್ ಮಾಡಬಹುದು. 

ಪೋತಿ.ಕಾಂ. ಬೆಂಗಳೂರಿನದೇ ಒಂದು ಕಂಪನಿ. ನಾನು 2012ರಲ್ಲೇ ಅದರಲ್ಲೊಂದು ಖಾತೆ ಮಾಡಿಕೊಂಡಿದ್ದೆ. ಅನಂತರ ಅದರಲ್ಲಿ ಒಂದೆರಡು ಇಬುಕ್ ಗಳನ್ನು ಕೊಂಡಿದ್ದೆ. ಇತ್ತೀಚಿನ ದಿನಗಳಲ್ಲಿ ಅದನ್ನು ಬಳಸಿರಲಿಲ್ಲ. ಇತ್ತೀಚೆಗೆ ಹಿರಿಯ ಲೇಖಕ ನಾಗೇಶ್ ಕುಮಾರರು ತಮ್ಮ ಒಂದು ಸಸ್ಪೆನ್ಸ್ ಕಾದಂಬರಿಯನ್ನು ಪೋತಿ.ಕಾಂ.ನಲ್ಲಿ ಮಾರಾಟಕ್ಕಿಟ್ಟಿರುವ ಬಗ್ಗೆ ಫೇಸ್ಬುಕ್ ಪುಟದಲ್ಲಿ ಬರೆದುಕೊಂಡಿದ್ದರು. ಪ್ರಿಂಟ್ ರೂಪದಲ್ಲಿ ಬೇಕಾದರೂ ಅದನ್ನು ತರಿಸಿಕೊಳ್ಳಬಹುದಿತ್ತು. ಒಂದು ಪ್ರಯತ್ನ ಮಾಡೋಣ ಅಂತ ಅನಿಸಿತು. ಪೋತಿಯಲ್ಲಿರುವ ಆ ಪುಸ್ತಕದ ಮುನ್ನೋಟ, ಸ್ಯಾಂಪಲ್ ಪರಿಶೀಲಿಸಿ ಒಂದು ಪುಸ್ತಕಕ್ಕಾಗಿ ಆರ್ಡರ್ ಮಾಡಿದೆ. ನಾಲ್ಕೈದು ದಿನಗಳೊಳಗೆ ಕೊರಿಯರ್ ಮೂಲಕ ಮುದ್ರಿತ ಪುಸ್ತಕ ನನ್ನ ಕೈಸೇರಿತು. ಚೆನ್ನಾಗಿ ಅಂದವಾಗಿ ಮುದ್ರಿಸಿ ಕಳಿಸಿಕೊಟ್ಟಿದ್ದರು.  ಕಾಗದದ ಗುಣಮಟ್ಟ ಕೂಡ ಒಳ್ಳೆಯದಿತ್ತು. ಮುದ್ರಿತ ಪುಸ್ತಕದ ರೂಪದಲ್ಲಿ ಆ ಥ್ರಿಲ್ಲರ್ ಓದಿದ ತೃಪ್ತಿ ಸಿಕ್ಕಿತು.

’ನಾಳೆಯನ್ನು ಗೆದ್ದವನು’ ಎಂಬುದು ಆ ಕಿರುಕಾದಂಬರಿಯ ಹೆಸರು. ಭೂಮಿಯಿಂದ ಒಂದೂಮುಕ್ಕಾಲು ಲಕ್ಷ ಜ್ಯೋತಿರ್ವರ್ಷಗಳಷ್ಟು ದೂರದಿಂದ ಬಂದ ನಮಗಿಂತ ಬಹಳ ಮುಂದುವರೆದಿರುವ ಅನ್ಯಗ್ರಹಜೀವಿಗಳು ’ಅಭಿಮನ್ಯು’ ಎಂಬ ವ್ಯಕ್ತಿಯನ್ನು ಅಪಹರಿಸುತ್ತಾರೆ. ತಾವು ಕಾಲರೇಖೆಯಲ್ಲಿ ಕಂಡ ಅವತ್ತು ಆಗುವುದರಲ್ಲಿದ್ದ ಒಂದು ಭಯೋತ್ಪಾದಕ ದಾಳಿಯ ದುಷ್ಕೃತ್ಯವನ್ನು ಆತನ ಮೂಲಕ ವಿಫಲಗೊಳಿಸಿ ತಡೆಯುವುದು ಅವರ ಉದ್ದೇಶ. ಅದಕ್ಕಾಗಿಯೇ ಯೋಜನೆ ರೂಪಿಸಿ ಭೂತಕಾಲಕ್ಕೆ ಆತನನ್ನು ಕಳಿಸಿ ದುರಂತವನ್ನು ತಪ್ಪಿಸುವಂತೆ ಮಾಡುವ ಕತೆ ಅದು. ಸ್ವಲ್ಪ ಸಿನಿಮೀಯ ಅಂಶಗಳು ಹಾಗೂ ಚಿತ್ರಣಗಳು ಆ ಕಾದಂಬರಿಯಲ್ಲಿದ್ದರೂ ಸಹ ಮುಖ್ಯಕಥಾವಸ್ತುವನ್ನು ಲೇಖಕರು ತಾರ್ಕಿಕವಾಗಿ ಹೆಣೆದುಕೊಟ್ಟಿದ್ದಾರೆ. ಅದಕ್ಕಾಗಿ fictitious’ಹುಳುಹಾದಿ’ (ವರ್ಮ್ ಹೋಲ್), ಟೈಮ್ ಟ್ರಾವೆಲ್, ದೇಶಕಾಲ (ಸ್ಪೇಸ್ ಟೈಮ್) ನಂತಹ ಸಂಗತಿಗಳನ್ನು ಈ ಕಾದಂಬರಿಯಲ್ಲಿ ಬಳಸಿಕೊಂಡಿದ್ದಾರೆ. ಕತೆಯಲ್ಲೇ ಅವುಗಳ ವಿವರಣೆಯನ್ನೂ ತಂದು ಅದನ್ನು ಸರಳವಾಗಿ ಅರ್ಥವಾಗುವಂತೆ ಹೇಳಿರುವುದು ಇದರ ವಿಶೇಷ. ನಂದಿಬೆಟ್ಟದಲ್ಲಿ ಶುರುವಾಗಿ ಅಲ್ಲೇ ಕೊನೆಯಾಗುವ ಈ ೮೧ ಪುಟಗಳ ಕಿರುಕಾದಂಬರಿಯು ಎರಡುತಾಸುಗಳ ಥ್ರಿಲ್ ಅನುಭವ ನೀಡುವುದರ ಜೊತೆ ಹಲವಾರು ಕುತೂಹಲಕಾರಿ ವಿಷಯಗಳ ಬಗ್ಗೆ ಹೆಚ್ಚಿನ ಆಸಕ್ತಿ ತಳೆಯುವಂತೆ ಮಾಡುತ್ತದೆ..

ಪೋತಿಯಲ್ಲಿ ’ನಾಳೆಯನ್ನು ಗೆದ್ದವನು’ ಪುಸ್ತಕ ಇಲ್ಲಿದೆ.
ಮುದ್ರಿಸಿ ತರಿಸಿಕೊಳ್ಳಬಹುದಾದಂತಹ ಇತರ ಕನ್ನಡ ಪುಸ್ತಕಗಳು ಕೂಡ ಲಭ್ಯ. ಇಲ್ಲಿ ಕ್ಲಿಕ್ಕಿಸಿ

ಸೋಮವಾರ, ಅಕ್ಟೋಬರ್ 30, 2017

Kannada T Shirts / ಕನ್ನಡ ಟಿ ಶರ್ಟುಗಳು / ಕನ್ನಡ ಅಂಗಿಗಳು


ಇತ್ತೀಚಿನ ವರ್ಷಗಳಲ್ಲಿ ಕನ್ನಡ ಟಿ ಶರ್ಟುಗಳು ಟ್ರೆಂಡಿಂಗ್ ಆಗಿವೆ. ಮೊದಲು ಕನ್ನಡ ಸಂಬಂಧಿತ ಸಭೆ ಸಮಾರಂಭಗಳಿಗೆ ಸೀಮಿತವಾಗಿದ್ದ ಕನ್ನಡ ಟೀ ಶರ್ಟುಗಳು ಈಗ ದಿನ ನಿತ್ಯದ ಕ್ಯಾಶುವಲ್ ಬಳಕೆಗೂ ಬಂದಿವೆ. ರಾಜ್ಯೋತ್ಸವದ ಆಚರಣೆಗೆ, ಕಂಪನಿಗಳ ಕನ್ನಡ ಸಂಘಗಳಿಗೆ, ಸಮಾರಂಭಗಳಿಗೆ ಕನ್ನಡ ಅಭಿಮಾನದ, ಕನ್ನಡಿಗರ ಅಸ್ಮಿತೆಯ ಟೀ ಶರ್ಟುಗಳ ಜೊತೆ ಕನ್ನಡ ಸಿನೆಮಾಗಳ ಡೈಲಾಗುಗಳು, ಪ್ರಸಿದ್ದ ಸಾಹಿತ್ಯದ ಸಾಲುಗಳು, ಪಂಚ್ ಲೈನುಗಳು, ಸ್ಲೋಗನ್ ಗಳು, ಕೂಲ್ ಐಟಂಗಳು, ಚಿತ್ರಗಳು ಮುಂತಾದವುಗಳನ್ನು ಹೊಂದಿರುವ ಟಿ ಶರ್ಟುಗಳು ದೊರೆಯುತ್ತಿವೆ.

ಈ ಕೆಳಗಿನ ತಾಣಗಳಲ್ಲಿ ಇಂತಹ ಹಲವಾರು ವಿನ್ಯಾಸಗಳ ಟೀ ಶರ್ಟುಗಳು ಆನ್ ಲೈನ್ ಖರೀದಿಗಿವೆ. ನೋಡಿ , ಇಷ್ಟವಾದವುಗಳನ್ನು ಕೊಳ್ಳಿ.ಈ ರಾಜ್ಯೋತ್ಸವಕ್ಕೆ ಒಂದು ಟೀಶರ್ಟ್ ನಿಮ್ಮ ಕೈಸೇರಲಿ. ಕನ್ನಡ ಟೀಶರ್ಟ್ ಮಾರುಕಟ್ಟೆ ಬೆಳೆಯಲಿ. ಕರ್ನಾಟಕದ ಯುವಕಯುವತಿಯರ ಟ್ರೆಂಡ್ ಆಗಲಿ.

(ಇನ್ಯಾವುದಾದರೂ ತಾಣಗಳು ಗೊತ್ತಿದ್ದಲ್ಲಿ ತಿಳಿಸಿ)

ಬುಧವಾರ, ಅಕ್ಟೋಬರ್ 18, 2017

ಕನ್ನಡದಲ್ಲಿ 'ನ್ಯಾವಿಗೇಶನ್' ಹಾಗೂ 'ದನಿಯಿಂದ ಪಠ್ಯ' ತಂತ್ರಾಂಶಗಳು

ಮಾಹಿತಿ ತಂತ್ರಜ್ಞಾನ ದಿನದಿನಕ್ಕೂ ಹೊಸಹೊಸದನ್ನು ಹೊತ್ತು ತರುತ್ತಿರುವ ಕಾಲ ಇದು. ಕಂಪ್ಯೂಟರ್, ಅಂತರ್ಜಾಲ, ಸ್ಮಾರ್ಟ್ ಫೋನುಗಳು, Appಗಳು ಹೀಗೆ ಕಾಲಕಾಲಕ್ಕೆ ಗ್ಯಾಜೆಟ್ ಹಾಗೂ ಮಾಹಿತಿ ತಂತ್ರಜ್ಞಾನ ಬೆಳೆಯುತ್ತಲೇ ಹೋಗುತ್ತಿದೆ. ಭಾಷೆಯ ಬಳಕೆ, ಬೆಳವಣಿಗೆಗೆ ಅದನ್ನು ಮಾಹಿತಿತಂತ್ರಜ್ಞಾನದಲ್ಲಿ ಅಳವಡಿಸುವುದೂ ಬಹಳ ಮುಖ್ಯವಾಗಿದೆ. ಹಾಗಾಗಿ ಈ ಹಿನ್ನೆಲೆಯಲ್ಲಿ ಇದರಲ್ಲಿ ಕನ್ನಡ ಭಾಷೆ ಅಳವಡಿಕೆಯಲ್ಲಾದ ಇತ್ತೀಚಿನ ಎರಡು ಬಹುಮುಖ್ಯ ಮೈಲಿಗಲ್ಲು ಎನ್ನಬಹುದಾದಂತಹ ಪ್ರಗತಿಯ ವಿಷಯಗಳನ್ನು ದಾಖಲಿಸಬೇಕಿದೆ.

೧. ಲಿಪಿಕಾರ್: ಇದೊಂದು ಧ್ವನಿಯಿಂದ ಪಠ್ಯ ಪರಿವರ್ತನಾ (speech to text) ತಂತ್ರಾಂಶ. ಅಂದರೆ ನಾವು ಮಾತಾಡಿದ್ದನ್ನು ಗ್ರಹಿಸಿ ಅದನ್ನು ಪಠ್ಯ ರೂಪಕ್ಕೆ ಪರಿವರ್ತಿಸಿ ಕೊಡುವುದು ಇದರ ಕೆಲಸ. ಆಂಡ್ರಾಯ್ಡ್ ಸ್ಮಾರ್ಟ್ ಫೋನುಗಳಿಗಾಗಿ 2017ಜುಲೈಯಲ್ಲಿ ಬಿಡುಗಡೆಯಾಯ್ತು. ಆಂಡ್ರಾಯ್ಡ್ ಫೋನುಗಳಲ್ಲಿ ಈ ಕೀಬೋರ್ಡನ್ನು ಸಕ್ರಿಯಗೊಳಿಸಿಕೊಂಡು ಇದರಲ್ಲಿರುವ ಮೈಕ್ ಬಟನ್ ಆನ್ ಮಾಡಿಕೊಂಡು ನಮಗೆ ಏನು ಬರೆಯಬೇಕಿರುತ್ತದೋ ಅದನ್ನು ಮಾತಾಡಿದರೆ ಅಕ್ಷರ ರೂಪದಲ್ಲಿ ಟೈಪ್ ಮಾಡಿ ತೆರೆಯಮೇಲೆ ತೋರಿಸುತ್ತದೆ. ಇಂಗ್ಲೀಷ್ ಮುಂತಾದ ಭಾಷೆಗಳಿಗೆ ಈ ಸ್ಪೀಚ್ ಟು ಟೆಕ್ಸ್ಟ್ ತಂತ್ರಾಂಶಗಳು ಮೊದಲೇ ತಯಾರಾಗಿವೆ. ಆದರೆ ಕನ್ನಡಕ್ಕೆ ಇಷ್ಟು ನಿಖರತೆಯಿಂದ ಕೆಲಸ ಮಾಡುವ ತಂತ್ರಾಂಶ ಇದೇ ಮೊದಲು ಅಂತ ಹೇಳಬಹುದು. ಸ್ಪಷ್ಟವಾಗಿ ಮಾತಾಡಿದರೆ ಮತ್ತು ಪುಸ್ತಕರೂಪದ ಭಾಷೆಯಲ್ಲಿ ಮಾತಾಡಿದರಂತೂ ಇದರ ನಿಖರತೆ ಶೇ. ೯೫ ಕ್ಕೂ ಹೆಚ್ಚಿರುವುದು ಇದರ ವಿಶೇಷ. ಆ ಆಪ್ ಇಲ್ಲಿದೆLipikaar Kannada Keyboard.

೨. ವೇಜ್: ಜಿಪಿಎಸ್ ಆಧರಿಸಿ ಒಂದು ಸ್ಥಳದಿಂದ ಮತ್ತೊಂದು ಸ್ಥಳಕ್ಕೆ ನಕಾಶೆಯಲ್ಲಿ ದಾರಿ ತೋರುವ ತಂತ್ರಾಂಶ ಇದು. ಇದು ಕೂಡ ಆಂಡ್ರಾಯ್ಡ್ ಫೋನುಗಳಿಗಾಗಿ ಇರುವ ಕಿರುತಂತ್ರಾಂಶವಾಗಿದ್ದು ನ್ಯಾವಿಗೇಶನ್ App ಎನ್ನುತ್ತಾರೆ. ಗೂಗಲ್ ಮ್ಯಾಪ್ ಹೆಚ್ಚಾಗಿ ಜನರಿಗೆ ಪರಿಚಿತ. ಈ ವೇಜ್ ಕೂಡ ಅದರಂತೆಯೇ ಕಾರ್ಯನಿರ್ವಹಿಸುವ ತಂತ್ರಾಂಶ.  2017ಜುಲೈಯಲ್ಲಿ ಇದರ ಕನ್ನಡ ಆವೃತ್ತಿ ಬಿಡುಗಡೆಯಾಯಿತು. ಇದರೊಂದಿಗೆ ಕನ್ನಡವು ನ್ಯಾವಿಗೇಶನ್ ತಂತ್ರಜ್ಞಾನಕ್ಕೂ ಕೂಡ ಯಶಸ್ವಿಯಾಗಿ ಅಳವಡಿಕೆಯಾಗಬಹುದೆಂಬುದು ಕೂಡ ಸಿದ್ಧಪಡಿಸಲ್ಪಟ್ಟಿತು. ದಾರಿ ಮತ್ತು ದೂರ ಮಾಹಿತಿ, ರಸ್ತೆಯಲ್ಲಿ ಚಲಿಸುವಾಗ ಎಲ್ಲಿ ತಿರುಗಬೇಕು, ಎಷ್ಟು ದೂರ ಹೋಗಬೇಕು ಮುಂತಾದ ಸೂಚನೆಗಳನ್ನು ಕನ್ನಡದ ಪಠ್ಯ ಮತ್ತು ದನಿಯಲ್ಲೇ ಪಡೆಯುತ್ತಾ ನ್ಯಾವಿಗೇಶನ್ ಮಾಡಲು ಇದರಲ್ಲಿ ಸಾಧ್ಯ. ಈ ತಂತ್ರಾಂಶವು ಜಗತ್ತಿನ ಹಲವಾರು ಭಾಷೆಗಳಲ್ಲಿದೆ. ಹೀಗೆ ವಿವಿಧ ಭಾಷೆಗಳಲ್ಲಿ ತಯಾರಾಗಲು ಅವರು Translifex ವೇದಿಕೆ ಮೂಲಕ ಕ್ರೌಡ್ ಸೋರ್ಸಿಂಗ್ ಮಾಡಿದ್ದಾರೆ. ಅಂದರೆ ಆಯಾ ಭಾಷೆಯ ಬಳಕೆದಾರರು ತಮ್ಮ ಭಾಷೆಯ ಆವೃತ್ತಿಗಳನ್ನು ತರಲು ಅನುವಾದಗಳ ಕೊಡುಗೆ ಮಾಡಬಹುದು, ಉತ್ತಮಗೊಳಿಸಬಹುದು. ಕನ್ನಡದ ಉತ್ಸಾಹಿ ಗೆಳೆಯರ ಸತತ ಪರಿಶ್ರಮದಿಂದ ಇದರ ಕನ್ನಡ ಆವೃತ್ತಿ ತಯಾರಾಗಿದೆ. ಅದು ಇಲ್ಲಿದೆ: Waze - Maps & Navigation


ಇದಾದ ಒಂದು ತಿಂಗಳ ನಂತರ, ಸೆಪ್ಟೆಂಬರಲ್ಲಿ ಗೂಗಲ್ ಮ್ಯಾಪ್ ನ್ಯಾವಿಗೇಶನ್ ಕೂಡ ಕನ್ನಡದಲ್ಲಿ ಸಾಧ್ಯವಾಗಿದೆ. ತಮ್ಮ ಫೋನ್ ಭಾಷೆಯನ್ನು ಕನ್ನಡವನ್ನಾಗಿ ಮಾಡಿಕೊಂಡವರಿಗೆ ನ್ಯಾವಿಗೇಶನ್ ಕೂಡ ಕನ್ನಡದಲ್ಲಿಯೇ ದೊರೆಯುತ್ತಿದೆ. ಗೂಗಲ್ ಕೂಡ ತನ್ನ ಅನೇಕ ಸೇವೆಗಳನ್ನು ಕ್ರೌಡ್ ಸೋರ್ಸ್ ಮಾಡಿರುವುದು ಮತ್ತು ಅದರಿಂದಲೇ ವಿವಿಧ ಭಾಷೆಗಳ ಆವೃತ್ತಿಗಳು ತಯಾರಾಗಿಬರುತ್ತಿರುವುದು ಇಲ್ಲಿ ಗಮನಾರ್ಹ.

ಮತ್ತೊಂದೆರಡು ಬೆಳವಣಿಗೆಗಳೆಂದರೆ,
  • ೨೦೧೭ಆಗಸ್ಟ್ ತಿಂಗಳಲ್ಲಿ ಗೂಗಲ್ 'ದನಿ ಹುಡುಕಾಟ'ವು (Google Voice Search) ಕನ್ನಡದಲ್ಲೂ ಸಾಧ್ಯವಾಗಿದೆ
  • ೨೦೧೭ಸೆಪ್ಟೆಂಬರಲ್ಲಿ ಬಿಡುಗಡೆಯಾದ ಐ ಓಸ್ ೧೧ ಆವೃತ್ತಿಯಲ್ಲಿ ಇನ್ ಬಿಲ್ಟ್ ಕನ್ನಡ ಕೀಬೋರ್ಡ್ ಒದಗಿಸಲಾಗಿದೆ. ಇದರಿಂದ ಐ ಫೋನ್ ಮತ್ತು ಐಪ್ಯಾಡ್ ಗಳಲ್ಲಿ ಯಾವ ಹೊರತಂತ್ರಾಂಶದ ಅಗತ್ಯವಿಲ್ಲದೇ ಕನ್ನಡ ಟೈಪಿಂಗ್ ಸಾಧ್ಯ.

ಇದರಿಂದ  ತಿಳಿಯುವುದೇನೆಂದರೆ, ಭಾಷೆಯ ಬಳಕೆ ಹೆಚ್ಚಿದಷ್ಟೂ ಬೆಳವಣಿಗೆಯೂ ಸಾಧ್ಯ. ಹಾಗಾಗಿ ಆಸಕ್ತಿಯಿರುವವರು  ಕನ್ನಡಕ್ಕಾಗಿ ಈ ಕೆಲಸಗಳಲ್ಲಿ ತೊಡಗಿಕೊಳ್ಳಬಹುದು. (ಇಲ್ಲಿ ನೋಡಿ: ಕನ್ನಡ ಅನುವಾದಗಳ ಕ್ರೌಡ್ ಸೋರ್ಸಿಂಗ್)ಆಗದಿದ್ದವರು ಕೊನೇಪಕ್ಷ ತಾವು ಬಳಸುವ ಜಾಲತಾಣ, ಆಪ್ ಮುಂತಾದ ತಂತ್ರಜ್ಞಾನಗಳಲ್ಲಿ ಭಾಷೆಯನ್ನು ಕನ್ನಡಕ್ಕೆ ಮಾಡಿಕೊಂಡು ಬಳಸುವುದರ ಮೂಲಕ ಬಳಕೆದಾರರ ಸಂಖ್ಯೆ ಹೆಚ್ಚಿಸಿ ಬೆಳವಣಿಗೆಗೆ ಕಾರಣರಾಗಬಹುದು. 

ಶನಿವಾರ, ಏಪ್ರಿಲ್ 29, 2017

ಮರೀನಾ ಬೇ ಸ್ಯಾಂಡ್ಸ್ ಸ್ಕೈಪಾರ್ಕ್ - ಬಾನೆತ್ತರದಿಂದ ಸಿಂಗಾಪುರ ನೋಟಅದು ಭ್ರಾಮಕತೆಯನ್ನು ಮೀರಿಸುವ ವಾಸ್ತವ ಜಗತ್ತು. ನಕಾಶೆಯ ಗೆರೆಗಳಂತೆ ಕಾಣುವ ರಸ್ತೆಗಳು, ಆಟಿಕೆಗಳಂತೆ ಕಾಣುವ ವಾಹನಗಳು, ಒಂದು ಬದಿಯಲ್ಲಿ ದಿಗಂತದವರೆಗೆ ವ್ಯಾಪಿಸಿದ ವಿಶಾಲ ಕಡಲು, ತೇಲುತ್ತಿರುವ ಹಾಯಿದೋಣಿಗಳು, ದೂರದಲ್ಲಿ ಲಂಗರು ಹಾಕಿರುವ ಹಡಗುಗಳು, ಮತ್ತೊಂದು ಕಡೆ ಒಂದಕ್ಕೊಂದು ಹೆಗಲು ಕೊಟ್ಟು ನಿಂತಿರುವ ರಟ್ಟಿಗೆ ಪೆಟ್ಟಿಗೆಗಳಂತೆ ತೋರುವ ಮುಗಿಲೆತ್ತರದ ಕಟ್ಟಡಗಳು, ಹಸಿರೇ ಮೈದಳೆದಂತ ಉದ್ಯಾನವನ, ಸರೋವರ, ಕಾರಂಜಿಗಳು, ಮುಗಿಯುವುದೇ ಇಲ್ಲವೇನೋ ಎಂಬಂತೆ ಕಾಣುವ ದೂರಕ್ಕೆ ಹಬ್ಬಿದ ವಿಸ್ಮಯ ನಗರಿಯ ಬಣ್ಣದ ಬೆಳಕುಗಳು ನಮ್ಮನ್ನು ಮೋಹಕಗೊಳಿಸಿ ಮನಸನ್ನು ಸೆಳೆದು ಹಿಡಿದಿಟ್ಟುಬಿಡುತ್ತವೆ.

ಸಿಂಗಾಪುರದಲ್ಲಿನ ವೈಭವೋಪೇತ ೫೫ ಮಹಡಿಗಳ ಈ ಕಟ್ಟಡವೇ ಮರೀನಾ ಬೇ ಸ್ಯಾಂಡ್ಸ್ ಎನ್ನುವ ಹೊಟೆಲ್. ದೂರದಿಂದ ನೋಡಿದರೆ ಕ್ರಿಕೆಟ್ಟಿನ ಮೂರು ವಿಕೆಟ್ ಗಳನ್ನು ಒಂದರ ಪಕ್ಕದಲ್ಲೊಂದು ಹುಗಿದಿಟ್ಟಂತೆ ಕಾಣುವ ಇದು ಹತ್ತಿರ ಹೋಗುತ್ತಿದ್ದಂತೆಯೇ ಜಗಮಗಿಸುವ ಗಾಜಿನ ಸುಂದರ ಕಟ್ಟಡವಾಗಿ ಗೋಚರಿಸುತ್ತದೆ. ಇದರ ಟೆರೇಸಿನಲ್ಲಿರುವುದು ಮರೀನಾ ಬೇ ಸ್ಯಾಂಡ್ಸ್ ಸ್ಕೈ ಪಾರ್ಕ್. ನೂರಾರು ಜನರು ನಿಂತು ವೀಕ್ಷಿಸಲು ಸಾಕಾಗುವಷ್ಟು ವಿಶಾಲವಾಗಿದೆ. ನೆಲಮಹಡಿಯಿಂದ ಕೆಲವೇ ಸೆಕೆಂಡುಗಳಲ್ಲಿ ಲಿಫ್ಟ್ ಮೂಲಕ ಈ ಸ್ಕೈಪಾರ್ಕ್ ತಲುಪಿದರೆ ತೇಲಿಸಿ ಕರೆದೊಯ್ಯುವಂತಹ ಗಾಳಿಯೊಂದಿಗೆ ಆಗಸದಲ್ಲಿ ಇದ್ದ ಅನುಭವ. ನಾವು ಅಲ್ಲಿ ತಲುಪಿದಾಗ ಸಂಜೆಯಾಗಿತ್ತು. ಇನ್ನೂ ಸೂರ್ಯ ಪೂರ್ತಿ ಮುಳುಗಿರಲಿಲ್ಲ. ಈ ತೆರೆದ ಟೆರೇಸ್ ಅಷ್ಟು ಎತ್ತರದಲ್ಲಿದ್ದರೂ ಭಯವಾಗದಂತೆ ಸುರಕ್ಷಿತವಾಗಿತ್ತು.

ಬಾನೆತ್ತರದ ಟೆರೇಸ್ ಪಾರ್ಕಿನಲ್ಲಿ ನಾವು ತಿರುಗಾಡುತ್ತಾ ಸ್ವಲ್ಪ ಸಮಯ ಕಳೆಯುತ್ತಿದ್ದಂತೇ ದೂರದಲ್ಲಿ ವಿಮಾನಗಳ ಸದ್ದು ಕೇಳಿಸಿತು. ಯುದ್ಧವಿಮಾನಗಳಂತಹ ವಿಮಾನಗಳು ಶರವೇಗದಲ್ಲಿ ನಾವಿದ್ದ ಟೇರೇಸಿನ ಮೇಲೆ ಹತ್ತಿರದಲ್ಲೇ ಹಾದುಹೋದವು. ಅದರ ಹಿಂದೆ ಮತ್ತೊಂದಿಷ್ಟು ವಿಮಾನಗಳು ಸಾಲಾಗಿ, ವಿವಿಧ ಆಕಾರಗಳಲ್ಲಿ ಒಂದು ಮಿನಿ ಏರ್ ಶೋ ನಡೆಸಿದವು. ಆನಂತರ ಹೆಲಿಕಾಪ್ಟರುಗಳು ಸಿಂಗಾಪುರದ ಬಾವುಟವನ್ನು ಪ್ರದರ್ಶಿಸುತ್ತಾ ನಿಧಾನಕ್ಕೆ ಹಾರಿದವು. ಪ್ರವಾಸೋದ್ಯಮವೇ ಮುಖ್ಯವಾಗಿರುವ ಸಿಂಗಾಪುರದಲ್ಲಿ ಪ್ರವಾಸಿಗರಿಗೋಸ್ಕರ ಇಂತಹ ಪ್ರದರ್ಶನಗಳಿರುತ್ತವೆಯಂತೆ. ನಿಧಾನಕ್ಕೆ ಕತ್ತಲಾಗುತ್ತಿದ್ದಂತೆ ಸುತ್ತಲಿನ ಕಟ್ಟಡಗಳ ದೀಪಗಳೆಲ್ಲಾ ಹತ್ತಿಕೊಳ್ಳುತ್ತಿದ್ದವು. ನೋಡನೋಡುತ್ತಲೇ ಅರ್ಧಗಂಟೆಯಲ್ಲಿ ಸುತ್ತಲಿನ ಜಗತ್ತು ಬಿಳಿ, ಕೆಂಪು, ನೀಲಿ, ಹಸಿರು ಬಣ್ಣದ ಕೋರೈಸುವ ದೀಪಗಳಿಂದ ತುಂಬಿತು. ದೂರದ ಯಾವುದೋ ಕಟ್ಟಡದಿಂದ ಸುತ್ತಲೂ ತಿರುಗುತ್ತಿರುವ ಲೇಸರ್ ಕಿರಣಗಳು, ಅಲ್ಲೇ ಅನತಿ ದೂರದಲ್ಲಿ ಸುತ್ತುತ್ತಿರುವ ದೈತ್ಯಾಕಾರದ ಜೈಂಟ್ ವ್ಹೀಲ್, ಸರೋವರಲ್ಲೆಲ್ಲಾ ಚಿಮ್ಮುತ್ತಿರುವ ಬಣ್ಣದ ಕಾರಂಜಿಗಳು, ಜಾಹೀರಾತು ಫಲಕಗಳು ಮುಂತಾದ ಬೆಳಕುಗಳಿಂದ ಇಡೀ ನಗರಿ ದೀಪಗಳ ಜಗತ್ತಾಗಿ ಪರಿವರ್ತನೆಗೊಂಡಿತ್ತು.

ಈ ಹೋಟೆಲ್ ಕಟ್ಟಡ ಇರುವ ಗಾರ್ಡನ್ಸ್ ಬೈ ದ ಬೇ ಎನ್ನುವ ಪ್ರದೇಶವೇ ಒಂದು ಸುಂದರ ಉದ್ಯಾನವನ. ನೂರಾರು ಎಕರೆ ಪ್ರದೇಶದ ಈ ಉದ್ಯಾನವನ ಸಮುದ್ರವನ್ನು ಹಿಂದಕ್ಕೆ ತಳ್ಳಿ ನಿರ್ಮಿಸಿದ್ದಂತೆ. ಸಮುದ್ರವನ್ನು ಸ್ವಲ್ಪ ಭಾಗ ಒಳತಂದಿರುವ ಕೊಲ್ಲಿಯ ಪಕ್ಕದಲ್ಲೇ ಹರಡಿಕೊಂಡಿದೆ. ಪೂರ್ತಿ ಕತ್ತಲಾವರಿಸುತ್ತಿದ್ದಂತೆ ಇತ್ತಕಡೆ ಉದ್ಯಾನವನವೂ ಕೂಡ ಹೊಳೆಯುತ್ತಿತ್ತು. ಅದು ಕಣ್ಣಿಗೆ ಹಬ್ಬ. ಈ ಮಾನವ ನಿರ್ಮಿತ ಸೌಂದರ್ಯ ಲೋಕ ಪ್ರಕೃತಿ ಮತ್ತು ಆಧುನಿಕ ತಂತ್ರಜ್ನಾನಗಳ ಸಮ್ಮಿಳನ. ಪ್ರಕೃತಿ ಸೌಂದರ್ಯ ಒಂದು ಬಗೆಯದ್ದಾದರೆ ಈ ಮಾನವ ನಿರ್ಮಿತ ಸೌಂದರ್ಯ ಮತ್ತೊಂದು ಬಗೆ. ಕ್ಲೌಡ್ ಫಾರೆಸ್ಟ್ ಮತ್ತು ಫ್ಲವರ್ ಡೂಮ್ ಎಂದು ಕರೆಯಲ್ಪಡುವ ಎರಡು ದೊಡ್ಡ ಗಾಜಿನ ಗುಮ್ಮಟದಂತಹ ರಚನೆಗಳಲ್ಲಿ ಜಗತ್ತಿನ ವಿವಿಧ ಪ್ರದೇಶಗಳ ಸಸ್ಯರಾಶಿಗಳನ್ನು ಬೆಳೆಸಿಡಲಾಗಿದೆ. ಕೃತಕ ಜಲಪಾತದ ಜೊತೆ ಮಳೆಕಾಡುಗಳ ವಾತಾವರಣ ಸೃಷ್ಟಿಸಿಡಲಾಗಿದೆ. ಉದ್ಯಾನವನದಲ್ಲಿ ಸೂಪರ್ ಟ್ರೀಗಳೆಂದು ಕರೆಯಲ್ಪಡುವ ದೈತ್ಯಾಕಾರದ ಮರಗಳಂತಹ ಎತ್ತರ ರಚನೆಗಳು ವಿವಿಧ ಬಣ್ಣಗಳಿಂದ ಹೊಳೆಯುವುದನ್ನು ಮೇಲಿನಿಂದ ಆಸ್ವಾದಿಸಿದೆವು. ವಾತಾವರಣವೂ ಹಿತಕರವಾಗಿತ್ತು. ರಾತ್ರಿಯಾಗುವವರೆಗೂ ಅಲ್ಲೇ ಇದ್ದು ಒಲ್ಲದಮನಸ್ಸಿಂದ ಕೆಳಗೆ ಇಳಿದುಬಂದೆವು. ನಂತರ ಮುಂಭಾಗದ ಸರೋವರದ ನೀರಿನ ಮೇಲೆ ನಡೆಯುವ ಸೌಂಡ್ ಎಂಡ್ ಲೈಟ್ ಶೋ ನೋಡಿ ಊಟ ಮುಗಿಸಿ ತಿರುಗಾಡಿ ಮನೆಗೆ ಹೊರಟಾಗ ತಡರಾತ್ರಿಯಾಗಿದ್ದರೂ ಸಹ ಸಿಂಗಾಪುರದ ರಸ್ತೆಗಳಲ್ಲಿ ಜನರೇನೂ ಕಡಿಮೆಯಾಗಿರಲಿಲ್ಲ.

ಇಡೀ ಸಿಂಗಾಪುರವೇ ಪ್ರವಾಸೋದ್ಯಮದ ದೇಶ. ಭೇಟಿನೀಡುವಂತಹ ಹಲವಾರು ಆಕರ್ಷಣೆಗಳು, ಸ್ಥಳಗಳು ಇವೆ. ಝೂ, ರಿವರ್ ಸಫಾರಿ, ನೈಟ್ ಸಫಾರಿ, ಬರ್ಡ್ ಪಾರ್ಕ್, ಮ್ಯೂಸಿಯಂಗಳು, ಚೀನೀ ಟೆಂಪಲ್ ಗಳು, ಸೆಂಟೋಸಾ ದ್ವೀಪದ ಯುನಿವರ್ಸಲ್ ಸ್ಟೂಡಿಯೋ, ಅಂಡರ್ ವಾಟರ್ ವರ್ಲ್ಡ್, ಕೆಸಿನೋ ಹೀಗೆ ನೂರಾರು ಜಾಗಗಳಿವೆ. ಸಿಂಗಾಪುರದ ವಾಣಿಜ್ಯ ಪ್ರದೇಶಗಳು ದಿನದ ೨೪ಗಂಟೆ ತೆರೆದಿರುತ್ತದೆ. ಶಾಪಿಂಗ್ ಸೆಂಟರುಗಳು, ಮಾಲ್ ಗಳು ಸುತ್ತಾಡಿದಷ್ಟೂ ಮುಗಿಯುವುದಿಲ್ಲ. ಓಡಾಟಕ್ಕೆ ಮೆಟ್ರೋ ರೈಲು, ಸಿಟಿ ಬಸ್ಸುಗಳು, ಟ್ಯಾಕ್ಸಿಗಳು ಇವೆ. ಲಿಟಲ್ ಇಂಡಿಯಾ ಎಂಬ ಪ್ರದೇಶದಲ್ಲಿ ಭಾರತೀಯ ಆಹಾರದ ಹೋಟೆಲುಗಳು, ಅಂಗಡಿಗಳು ತುಂಬಿವೆ. ಲಕ್ಷಾಂತರ ಪ್ರವಾಸಿಗರು ಭೇಟಿಕೊಡುವ ಈ ದೇಶದಲ್ಲಿ ಪ್ರತಿಯೊಂದು ತಾಣಗಳನ್ನು ಸುವ್ಯವಸ್ಥಿತವಾಗಿ ನಿರ್ವಹಿಸಿಟ್ಟಿರುವುದು ಸಂತೋಷವುಂಟುಮಾಡುತ್ತದೆ.

ಹೋಗುವುದು ಹೇಗೆ?
ಬೆಂಗಳೂರಿನಿಂದ ಸಿಂಗಾಪುರಕ್ಕೆ ನೇರ ವಿಮಾನಗಳಿವೆ. ಮೂರ್ನಾಲ್ಕು ತಾಸಿನ ಪ್ರಯಾಣವಷ್ಟೆ.