ಶುಕ್ರವಾರ, ಜುಲೈ 27, 2007

ಇವಳೇನು ಸೆಕ್ಸಿ ಟೀಚರ್ರಾ ?!!

ಜಾಹೀರಾತಿನ ಈ ಪರಿ !
ಚಿತ್ರವನ್ನು ನೋಡಿ. ಇದು ಬೆಂಗಳೂರಿನ ರಿಚ್ಮಂಡ್ ವೃತ್ತದ ಹತ್ತಿರ ಹಾಕಿರುವ ಜಾಹೀರಾತು ಫಲಕ. ಪಿ.ಯು.ಸಿ, ಸಿ.ಇ.ಟಿ ತರಬೇತಿ ಕೊಡುವ ಖಾಸಗಿ ಸಂಸ್ಥೆಯೊಂದು ಈ ರೀತಿಯ ಜಾಹಿರಾತನ್ನು ಹಾಕಿದೆ. ವಿದ್ಯೆ, ಶಿಕ್ಷಣವನ್ನು ಸಹ ಮಾದಕ ಹೆಣ್ಣಿನ ಫೋಟೋ ಹಾಕಿ ಮಾರುಕಟ್ಟೆಯಲ್ಲಿ ತೆರೆದಿಡಲಾಗಿದೆ. ಇದೇ ರೀತಿ ಕೋರಮಂಗಲದ ಹತ್ತಿರ ಇನ್ನೊಂದು ಕಡೆಯಲ್ಲಿ ಯಾವುದೋ ಶಿಕ್ಷಣ ಸಂಸ್ಥೆಯೊಂದು ಹುಡುಗಿಯೊಬ್ಬಳು ತನ್ನ ಎರಡೂ ಕೈಗಳನ್ನು ಅಗಲಿಸಿ ಕುಳಿತುಕೊಂಡಿರುವ ಚಿತ್ರವನ್ನು ಹಾಕಿ "ಅಡ್ಮಿಷನ್ಸ್ ಓಪನ್" ಎಂದು ಬರೆಯಲಾಗಿದೆ. ಪಿಯುಸಿ, ಸಿಇಟಿ ಅಥವಾ ಇನ್ಯಾವುದೇ ಶಿಕ್ಷಣಕ್ಕೂ ಈ ಹುಡುಗಿಯರ ಚಿತ್ರಕ್ಕೂ ಯಾವ ರೀತಿ ಸಂಬಂಧವೆನ್ನುವುದು ತಿಳಿಯುವುದಿಲ್ಲ. ಉತ್ತಮ ತರಬೇತಿ, ಗುಣಮಟ್ಟದಿಂದ ವಿದ್ಯಾರ್ಥಿಗಳನ್ನು ಆಕರ್ಷಿಸಬೇಕಾದ ಕಡೆಯಲ್ಲಿ ಮದ್ಯದ ಜಾಹೀರಾತಿನಂತಹ ಚಿತ್ರವನ್ನು ಹಾಕಿ ತಮ್ಮ ಇರುವಿಕೆಯನ್ನು ತೋರ್ಪಡಿಸಲಾಗಿದೆ.


ಇವತ್ತು ಶಿಕ್ಷಣವೆನ್ನುವುದು ಯಾವ ರೀತಿ ವ್ಯಾಪಾರೀಕರಣಕ್ಕೊಳಪಟ್ಟಿದೆ ಎಂಬುದಕ್ಕೆ ಇದೊಂದು ನಿದರ್ಶನ. ಶಿಕ್ಷಣದಂತಹ ಪವಿತ್ರ ಕ್ಷೇತ್ರಗಳೂ ದುಡ್ಡು ಮಾಡುವ ದಂಧೆಗಳಾದಾಗ ಇಂತಹ ವಿಕೃತಿ, ವಿಚಿತ್ರಗಳು ತಲೆ ಎತ್ತುತ್ತವೆ. ಇವು ನಮ್ಮ ಸಮಾಜದ ನೈತಿಕ ಅಧಃಪತನದ ಧ್ಯೋತಕವೆ ಅಥವಾ ಇಂದಿನ ಸ್ಪರ್ಧಾತ್ಮಕ ಜಗತ್ತಿನ ಅನಿವಾರ್ಯತೆಯೆ ? ಇದು ಹೀಗೆ ಮುಂದುವರೆದರೆ ಸ್ಪರ್ಧೆಯ, ಆಕರ್ಷಣೆಯ , ಅಂತಸ್ತಿನ ಜಿದ್ದಿಗೆ ಬಿದ್ದು ಶಿಕ್ಷಣ ಸಂಸ್ಥೆಗಳು, ಕಾಲೇಜುಗಳು ಅರೆಬೆತ್ತಲೆ ಜಾಹೀರಾತುಗಳನ್ನು ಹಾಕಿ ತಮ್ಮ ಇರುವಿಕೆಯನ್ನು ಪ್ರಚುರಪಡಿಸಿ, ವಿದ್ಯಾರ್ಥಿಗಳನ್ನು ಸೆಳೆಯಲು ಮಾಡೆಲ್ ಗಳನ್ನು ನೇಮಿಸಿಕೊಳ್ಳುವ ಹಂತಕ್ಕೆ ಇಳಿದರೂ ಅಚ್ಚರಿಯೇನಿಲ್ಲ.
******************************************************
(೩೧-೦೭-೨೦೦೭ ರಂದು thatskannada.com ನಲ್ಲಿ ಪ್ರಕಟಗೊಂಡಿದೆ ,

ಇದರ ಬಗ್ಗೆ ವಿಜಯ ಕರ್ನಾಟಕದಲ್ಲಿ ಸಚಿತ್ರ ವರದಿ ಪ್ರಕಟವಾಗಿ ಸಂಬಂಧಪಟ್ಟ ಸಂಸ್ಥೆಗೆ ಹಾಗೂ ಬೆಂಗಳೂರು ಮಹಾನಗರ ಪಾಲಿಕೆಗೆ ಛೀಮಾರಿ ಹಾಕಿದ ಮಾರನೆಯ ದಿನವೇ ಈ ಜಾಹಿರಾತನ್ನು ತೆಗೆದು ಹಾಕಲಾಯಿತು.



ಸೋಮವಾರ, ಜುಲೈ 9, 2007

ಹಾಡು ಹಳೆಯದಾದರೇನು... ಭಾವ ನವನವೀನ....

೧೪ ಇನ್ ಲ್ಯಾಂಡ್ ಲೆಟರ್ಸ್ ಕೊಡಿ”. ಗ್ಲಾಸಿನ ಕಿಂಡಿಯಲ್ಲಿ ನೋಡುತ್ತಾ ಕೇಳಿದೆ.
ಕೌಂಟರಿನ ಒಳಗಿಂದ ಆತ ನನ್ನ ಮುಖವನ್ನೇ ಒಂದು ಥರಾ ನೋಡಿದ. ಅಥವಾ ನನಗೇ ಹಾಗನ್ನಿಸಿತೋ ಏನೋ ! ಅಮೋಘ ೨ ವರುಷಗಳ ನಂತರ ಅಂಚೆ ಕಛೇರಿಯೊಳಕ್ಕೆ ಕಾಲಿಟ್ಟಿದ್ದೆ. ಬೆಂಗಳೂರಿಗೆ ಬಂದ ಹೊಸತರಲ್ಲಿ ಅಲ್ಲಿ ಇಲ್ಲಿ ರೆಸ್ಯೂಮ್ ಕಳಿಸಲು ಆಗಾಗ ಹೋಗುತ್ತಿದ್ದೆ. ಎರಡು ವರುಷಗಳ ಹಿಂದೆ ಪಾಸ್ ಪೋರ್ಟ್ ಅರ್ಜಿ ತರಲೆಂದು ಹೋದವನು ಮತ್ತೆ ಹೋಗಿರಲೇ ಇಲ್ಲ. ನಂತರ ಅಲ್ಲಿಗೆ ಹೋಗುವ ಅಗತ್ಯವೇ ಬಿದ್ದಿರಲಿಲ್ಲ. ಮೊನ್ನೆ ಯಾವತ್ತೋ ನಾವು ಕೆಲವು ಗೆಳೆಯರು ಹೀಗೇ ಕಟ್ಟೆಯಲ್ಲಿ ಕೂತು ಮಾತಾಡುವಾಗ ಪತ್ರಗಳ ಬಗ್ಗೆ ಮಾತು ಬಂದಿತ್ತು. ಈಗಿನ ಮೊಬೈಲು, ಈ-ಮೇಲು ಗಳ ಅಬ್ಬರದಲ್ಲಿ ಕಳೆದು ಹೋದ ಆಗಿನ ಪತ್ರ ವೈಭವಗಳ ಬಗ್ಗೆ ನೆನಪಿಸಿಕೊಂಡು ವ್ಯಥೆಪಟ್ಟಿದ್ದೆವು. ಅದನ್ನೆ ಮೆಲುಕು ಹಾಕುತ್ತಾ ಅವತ್ತಿನ ರಾತ್ರಿ ಮನೆಯಲ್ಲಿ ಕುಳಿತಿದ್ದಾಗ ಬಂದದ್ದೇ ಈ ಯೋಚನೆ. ನಾನ್ಯಾಕೆ ಒಮ್ಮೆ ಎಲ್ಲರಿಗೂ ಸಣ್ಣವನಿದ್ದಾಗ ಬರೆಯುತ್ತಿದ್ದಂತೆ ಪತ್ರ ಬರೆಯಬಾರದು ಎಂದು. ಈ ಯೋಚನೆ ಬರುತ್ತಿದ್ದಂತೆ ಏನೋ ಒಂದು ರೀತಿ ಖುಷಿಯಾಯಿತು. ಎಷ್ಟೋ ವರುಷಗಳಿಂದ ಪತ್ರ ಬರೆಯುವ ಅಭ್ಯಾಸವೇ ಬಿಟ್ಟು ಹೋಗಿತ್ತು. ಈಗ ಮತ್ತೊಮ್ಮೆ ಪತ್ರ ಬರೆಯುವ ಪ್ರಯತ್ನ ಮಾಡಿದರೆ ಹೇಗೆ ಅಂದುಕೊಂಡೆ. ಇಷ್ಟು ವರುಷಗಳ ನಂತರದ ಪ್ರಯತ್ನ ಹೇಗಿರುತ್ತದೋ ಎಂಬ ಯೋಚನೆ ಒಂದೆಡೆಯಾದರೆ, ಯಾರ್ಯಾರ ಪ್ರತಿಕ್ರಿಯೆ ಹೇಗಿರುತ್ತದೋ ನೋಡೋಣ ಎಂಬ ಕುತೂಹಲ ಇನ್ನೊಂದೆಡೆ ಇತ್ತು. ಅವತ್ತು ರಾತ್ರಿಯೇ ಯಾರ್ಯಾರಿಗೆ ಪತ್ರ ಬರೆಯಬೇಕು ಎಂದು ಪಟ್ಟಿ ಮಾಡಿಟ್ಟುಕೊಂಡು ಮಾರನೇ ದಿನವೇ ಪತ್ರಗಳನ್ನು ತೆಗೆದುಕೊಳ್ಳಲು ಅಂಚೆ ಕಛೇರಿಗೆ ಬಂದಿದ್ದೆ. ಈಗ ಇನ್ಲ್ಯಾಂಡ್ ಪತ್ರಕ್ಕೆ ಎಷ್ಟು ದುಡ್ಡು ಎಂಬುದು ಕೂಡ ಗೊತ್ತಿರಲಿಲ್ಲ. ಸುಮ್ಮನೇ ನೂರರ ನೋಟನ್ನು ಕೊಟ್ಟು ಚಿಲ್ಲರೆ ಎಣಿಸಿಕೊಂಡೆ. ಮನೆಗೆ ಬಂದು ಪೆನ್ನು ರೆಡಿ ಮಾಡಿಕೊಂಡು ಕುಳಿತೆ. ಹೊಸ ಹೊಸ ಇನ್ಲ್ಯಾಂಡುಗಳನ್ನು ಬಿಡಿಸುತ್ತಿದ್ದಂತೆ ಆ ಗರಿ ಗರಿ ಕಾಗದದ ವಾಸನೆಯು ಸಂಭ್ರಮದಿಂದಿದ್ದ ಮನಸ್ಸನ್ನು ಹಾಗೆಯೆ ಹಿಂದಿನ ದಿನಗಳಿಗೆ ಕೊಂಡೊಯ್ಯಿತು.


****************************************
ಟ್ರಿನ್ ಟ್ರಿನ್... ಪೋಸ್ಟ್.... ಎಂಬ ಅಂಚೆಮಾಮನ ಕರೆ ಕೇಳಿದೊಡನೆ ಮನೆಯಿಂದ ಹೊರಗೆ ಓಡಿಬರುತ್ತಿದ್ದೆ. ಆಗ ಪೋಸ್ಟ್ ಮ್ಯಾನ್ ಬಂದಿದ್ದಾನೆಂದರೆ ಖುಷಿ. ಯಾರದ್ದಾದರೂ ಪತ್ರ ಬಂದೇ ಬಂದಿರುತ್ತದೆ ಎಂಬುದು ಖಾತ್ರಿ ಇರುತ್ತಿತ್ತು. ಆಗ ಇನ್ನೂ ಮೊಬೈಲ್ ಫೋನ್ ಇರಲಿ ಮಾಮೂಲಿ ಫೋನ್ ಕೂಡ ಇನ್ನು ಸರಿಯಾಗಿ ಸಣ್ಣ ಊರುಗಳಲ್ಲಿ ಕಣ್ಣು ಬಿಟ್ಟಿರಲಿಲ್ಲ. ಎಲ್ಲಾ ಪತ್ರಗಳ ಮೂಲಕವೇ ಮಾತು ಕತೆ ನಡೆಯುತ್ತಿತ್ತು. ನಮ್ಮ ಮನೆಗಂತೂ ವಾರಕ್ಕೆ ಎರಡು ಮೂರಾದರೂ ಪತ್ರ ಇದ್ದೇ ಇರುತ್ತಿತ್ತು. ಅಪ್ಪನ ಅಮ್ಮನ ಕಡೆಯ ಬಳಗ ದೊಡ್ಡದಿದ್ದುದರಿಂದ ಒಬ್ಬರಲ್ಲದಿದ್ದರಿನ್ನೊರೊಬ್ಬರ ಪತ್ರ ಖಾಯಂ ಇರುತ್ತಿತ್ತು. ನಮ್ಮ ಮನೆಗೆ ಹೆಚ್ಚಾಗಿ ಬರುತ್ತಿದ್ದುದು ಸಂಬಂಧಿಕರ ಪೈಕಿ ಅಜ್ಜನದು, ದೊಡ್ಡಮ್ಮನದು, ಚಿಕ್ಕಪ್ಪಂದಿರು, ಅತ್ತೆಯರು ಮತ್ತವರ ಮಕ್ಕಳು ಅಂದರೆ ನನ್ನ ಕಸಿನ್ ಗಳದ್ದು. ಇವು ಬಿಟ್ಟರೆ ಅಪ್ಪನ ವ್ಯಾವಹಾರಿಕ ಪತ್ರಗಳು. ಪೋಸ್ಟ್ ಬಂದಕೂಡಲೇ ಅಪ್ಪನ ಪತ್ರಗಳು ಎಂದು ಗೊತ್ತಾಗುತ್ತಿದ್ದಂತೆ ಅದನ್ನು ಒಡೆಯದೇ ಒಂದು ಕಡೆ ಇಡುವುದು ಆಗಿನ ಅಭ್ಯಾಸವಾಗಿತ್ತು. ಅಪ್ಪ ಆಮೇಲೆ ಬಂದು ನೋಡಿಕೊಳ್ಳುತ್ತಿದ್ದರು.

ಅತ್ತೆ-ಮಾವಂದಿರ, ಚಿಕ್ಕಪ್ಪಂದಿರ, ಕಸಿನ್ ಗಳ ಪತ್ರಗಳನ್ನು ಓದಿದಾಗ ಊರಿನ, ಅಲ್ಲಿನ ಆಗು ಹೋಗುಗಳ ಸಂಪೂರ್ಣ ಚಿತ್ರಣವೇ ಕಣ್ಣ ಮುಂದೆ ಬರುತ್ತಿತ್ತು. ಪತ್ರಗಳ ವಿಶೇಷತೆ ಅಂತಹುದು. ಅತ್ತೆ ಬರೆಯುತ್ತಿದ್ದುದು ಅಪ್ಪಟ ಹವ್ಯಕ ಭಾಷೆಯಲ್ಲಿ. ಚಿಕ್ಕಪ್ಪಂದಿರದ್ದು ಅರ್ಧ ಪೇಟೆ ಭಾಷೆ , ಅರ್ಧ ಹವ್ಯಕ ಭಾಷೆ. ಖುದ್ದಾಗಿ ಅವರೇ ಕೂತು ಮಾತಾಡುತ್ತಿದ್ದಾರೇನೋ ಅನ್ನುವಷ್ಟು ಖುಷಿಯಾಗುತ್ತಿತ್ತು. ಯಾರ ಪತ್ರ ಬಂದರೂ ಕೊನೆಯಲ್ಲಿ “ವಿಕಾಸ ಏನು ಮಾಡುತ್ತಿದ್ದಾನೆ, ಅವನಿಗೆ ನನ್ನ ನೆನಪುಗಳು” ಎಂದು ಇರುವುದನ್ನು ನೋಡಿದರೆ ಬಹಳ ಸಂತೋಷವಾಗುತ್ತಿತ್ತು.


ನನ್ನ ಅಜ್ಜನ, ಅಂದರೆ ನನ್ನ ಅಪ್ಪನ ಅಪ್ಪನ ಪತ್ರದ ಮಜಾನೇ ಬೇರೆ. ಅಜ್ಜ ಸಣ್ಣಗೆ ಇರುವೆ ಕೊರೆದಂತೆ ಕೊರೆದು ಬರೆಯುತ್ತಿದ್ದ. ಪತ್ರ ಬಿಡಿಸಿದರೆ ಬರೀ ಸುರುಳಿ ಸುರುಳಿ ಸುತ್ತಿರುವಂತೆ ಕಾಣುತ್ತಿತ್ತು. ಅವರು ಬರೆಯುತ್ತಿದ್ದುದು ಅರ್ಥವಾಗುತ್ತಿದ್ದುದು ಅಪ್ಪನಿಗೆ ಮಾತ್ರ. ಅದು ಯಾವ ಭಾಷೆಯೋ ಏನು ಲಿಪಿಯೋ ಏನು ವಿಷಯವೋ ಒಂದು ಸ್ವಲ್ಪವೂ ತಿಳಿಯುತ್ತಿರಲಿಲ್ಲ. ಅಪ್ಪ ಮಾತ್ರ ಸಲೀಸಾಗಿ ಮೂಗಿನ ಮೇಲೆ ಒಂದು ಕನ್ನಡಕ ಏರಿಸಿ ಹತ್ತು ನಿಮಿಷದಲ್ಲಿ ಓದಿ ಮುಗಿಸಿ ಪಕ್ಕಕ್ಕೆ ಇಡುತ್ತಿದ್ದರು. ಅಪ್ಪ ಇಲ್ಲದಿದ್ದಾಗ ನಾನು ಓದಲು ಪ್ರಯತ್ನಪಡುತ್ತಿದ್ದೆ. ಅದು ಕನ್ನಡದಂತೇ ಇದ್ದರೂ ಕನ್ನಡದಂತೆ ಇರಲಿಲ್ಲ !! ಆ ವಿಚಿತ್ರ ಲಿಪಿಯ ಬಗ್ಗೆ ಕುತೂಹಲ ತಡೆಯಲಾರದೆ ಅಮ್ಮನಿಗೆ ಕೇಳಿದ್ದೆ ಅದು ಯಾವ ಭಾಷೆ ಎಂದು. “ಅದೆಂತದೋ ಮೋಡಿ ಲಿಪಿಯಡ ಅದು. ನಂಗೂ ಸಮಾ ಗೊತ್ತಾಗ್ತಿಲ್ಲೆ ಅದು . ನಿಮ್ಮಜ್ಜ ನಿಮ್ಮಪ್ಪ ಎಂತಾ ಬರ್ಕತ್ವೋ ಏನೋ ಅವ್ಕೇ ಗೊತ್ತಾಗವು ” (ಅದೇನೋ ‘ಮೋಡಿ ಲಿಪಿ’ಯಂತೆ ಅದು. ನಂಗೂ ಸರಿಯಾಗಿ ಗೊತ್ತಾಗಲ್ಲ ಅದು . ನಿಮ್ಮಜ್ಜ ನಿಮ್ಮಪ್ಪ ಏನು ಬರ್ಕತಾರೋ ಏನೋ ಅವರಿಗೇ ಗೊತ್ತಾಗ್ಬೇಕು) ಎಂದಿದ್ದಳು ಅಮ್ಮ.

ಈ ಕಥೆ ಹೀಗಾದರೆ ನನ್ನ ಅಮ್ಮನ ಅಕ್ಕ ಅಂದರೆ ದೊಡ್ಡಮ್ಮನದು ಪತ್ರ ಬರೆಯುವ ಶೈಲಿ ಬೆಂಗಳೂರಿನಲ್ಲಿ ಮನೆ ಕಟ್ಟಿದಂತೆ. ಅಂದರೆ ಇನ್ ಲ್ಯಾಂಡ್ ಪತ್ರದಲ್ಲಿ ಒಂದು ಚೂರೂ ಜಾಗ ಬಿಡದಂತೆ ತುಂಬಿಸಿರುತ್ತಿದ್ದರು. ಅಂಚಿನಲ್ಲಿ ಮಡಿಚಲು ಇರುವ ಜಾಗದಲ್ಲೂ ಬರೆಯುತ್ತಿದ್ದಳು. ಅದೇನಿರುತ್ತಿತ್ತೋ ಅಕ್ಕ ತಂಗಿಯರ ಕಷ್ಟ ಸುಖ ವಿನಿಮಯಗಳು ಹೇಳಿಕೊಂಡಷ್ಟೂ ಸಾಕಾಗುತ್ತಿರಲಿಲ್ಲವೇನೋ !. ಪೂರ್ತಿ ಕಾಗೆಕಾಲು ಗುಬ್ಬಿಕಾಲು ಅಕ್ಷರಗಳು. ನಾಲ್ಕು ಸಾಲು ಕಷ್ಟ ಪಟ್ಟು ಓದುವುದರಲ್ಲಿ ತಲೆ ಕೆಟ್ಟು ಕೈಬಿಡುತ್ತಿದ್ದೆ. ಯಥಾ ಪ್ರಕಾರ ಅಮ್ಮನಿಗೆ ಮಾತ್ರ ಸಲೀಸು.

ಇನ್ನೊಂದು ವಿಶೇಷ ನೆನಪಿನಲ್ಲಿರುವ ಪತ್ರವೆಂದರೆ ಅದು ಅಪ್ಪನ ಹಿರಿಯ ಸಹೋದ್ಯೋಗಿಯೊಬ್ಬರದು. ಅವರು ನಿವೃತ್ತಿಯಾದ ಮೇಲೆ ಬೆಂಗಳೂರಿಗೆ ಹೋಗಿ ನೆಲೆಸಿದ್ದರು. ಅವರು ಕೊನೆ ಕ್ಷಣ ದಲ್ಲಿ ಮಾಡಿಕೊಂಡ ಏನೋ ಆವಾಂತರದಿಂದ ಅವರ ಕಾಗದ ಪತ್ರಗಳಲ್ಲಿ ಏನೋ ಹೆಚ್ಚು ಕಮ್ಮಿ ಯಾಗಿ ಅವರ ಪೆನ್ಶನ್ ಹಣ ಬಿಡುಗಡೆಯಾಗಿರಲಿಲ್ಲ. ಪಾಪ ಅವರು ವಾರಕ್ಕೊಂಮ್ಮೆ, ಹದಿನೈದು ದಿನಕ್ಕೊಮ್ಮೆ ಅಪ್ಪನಿಗೆ ಪತ್ರ ಬರೆದು ಈ ಬಗ್ಗೆ ವಿಚಾರಿಸುವಂತೆ ಕೇಳಿಕೊಳ್ಳುತ್ತಿದ್ದರು. ಅದು ಸರ್ಕಾರಿ ಕೆಲಸವಾದ್ದರಿಂದ ಮಾಮೂಲಿನಂತೆ ‘ಮಾಮೂಲಿ’ ಕೊಡದೇ ಏನೂ ಆಗುತ್ತಿರಲಿಲ್ಲವಾದ್ದರಿಂದ ವರ್ಷಗಳಿಂದ ಎಳೆಯಲ್ಪಟ್ಟು ಹಾಗೇ ಉಳಿದಿತ್ತು. ಅವರು ಪಾಪ ವಯಸ್ಸಾದವರು ಬೆಂಗಳೂರಿನಿಂದ ಓಡಾಡಲು ಆಗದ ಪರಿಸ್ಥಿತಿ ಇದ್ದುದರಿಂದ ಪತ್ರಗಳ ಮೂಲಕ ಸ್ಥಿತಿಗತಿ ತಿಳಿದುಕೊಳ್ಳುತ್ತಿದ್ದರು. ಅವರ ಪತ್ರ ಬಂದಾಗಲೆಲ್ಲ ಅಪ್ಪ ಅಮ್ಮ ಅವರ ಬಗ್ಗೆ ಮಾತಾಡಿಕೊಂಡು ಮರುಕ ಪಡುತ್ತಿದ್ದರು.


ಹೀಗೆ ಬರುತಿದ್ದ ಪತ್ರಗಳಿಗೆಲ್ಲಾ ಕಡ್ಡಾಯವಾಗಿ ಉತ್ತರ ಬರೆಯುವ ಪರಿಪಾಠ ಇತ್ತು. ಸಂಬಂಧಿಕರಿಗೆ ಬರೆಯುವ ಪತ್ರಗಳಲ್ಲಿ ಅಪ್ಪ , ಅಮ್ಮ ಬರೆದಾದ ಮೇಲೆ ಕೊನೆಯಲ್ಲಿ ಸ್ವಲ್ಪ ಜಾಗ ನನಗಾಗಿಯೇ ಮೀಸಲಿಡುತ್ತಿದ್ದರು. ಅದರಲ್ಲಿ ನಾನು ನನ್ನ ಸುಂದರವಾದ(!) ಕನ್ನಡ ಕೈಬರಹದಿಂದ ೮-೧೦ ಸಾಲುಗಳನ್ನು ಬರೆದು ಷರಾ ಹಾಕುತ್ತಿದ್ದೆ. ನನ್ನ ವಾರಗೆಯವರಿಗೆಲ್ಲಾ ಪೂರ್ತಿ ನಾನೇ ಪತ್ರ ಬರೆದು ಅಮ್ಮನಿಗೆ ತೋರಿಸಿ ಪೋಸ್ಟ್ ಮಾಡುತ್ತಿದ್ದೆ.

ನಂತರ ನನ್ನ ಹೈಸ್ಕೂಲಿನ ಪ್ರಾರಂಭದ ವರುಷಗಳಲ್ಲಿ ಅಣ್ಣ ಮೈಸೂರಿಗೆ ಓದಲು ಹೋದ. ಇನ್ನೊಬ್ಬ ಅಣ್ಣ ಅಂದರೆ ನನ್ನ ದೊಡ್ಡಮ್ಮನ ಮಗ ಅಮೆರಿಕಾಕ್ಕೆ ಓದಲು ಹೋದ ನಂತರ ನನಗೆ ಇಂಗ್ಲೀಷಿನಲ್ಲಿ ಪತ್ರ ಬರೆಯುವ ತಿಕ್ಕಲು ಹತ್ತಿಕೊಂಡಿತು. ಏನೇನು ಬರೆಯಲು ಬರುತ್ತದೋ ಎಲ್ಲಾ ಬರೆದು ಮೊದಲು ಅಪ್ಪನಿಗೆ ಎಡಿಟಿಂಗ್ ಮಾಡಲು ಕೊಡುತ್ತಿದ್ದೆ. ಅಪ್ಪ ನೋಡಿ ಸೈ ಅಂದ ಮೇಲೆ ಸಂಭ್ರಮದಿಂದ ಪೋಸ್ಟ್ ಮಾಡುತ್ತಿದ್ದೆ. ಆಮೇಲೆ ಅಣ್ಣಂದಿರು ಇಂಗ್ಲೀಷಿನಲ್ಲೇ ಉತ್ತರ ಬರೆಯುತ್ತಿದ್ದರು. ಏನೋ ಸಾಧನೆ ಮಾಡಿದ ತೃಪ್ತಿ ದೊರಕುತ್ತಿತ್ತು. ಎಷ್ಟಂದರೂ ನಾನೂ ಭಾರತೀಯನಲ್ಲವೇ .. ಇಂಗ್ಲೀಷನಲ್ಲಿ ಬರೆದರೆ, ಮಾತಾಡಿದರೆ ದೊಡ್ಡಸ್ತಿಕೆ, ಬುದ್ಧಿವಂತಿಕೆ ಎಂಬ ಭಾವನೆ ಸಾಮಾನ್ಯವಾಗಿ ಎಲ್ಲರಲ್ಲೂ ಇರುವಂತೆ ಆಗ ನನ್ನಲ್ಲೂ ಇತ್ತು.
(ಆದರೆ ಈಗ ಈ-ಮೇಲು, ಚಾಟಿಂಗ್ ಗಳನ್ನೂ ಕೂಡ ಕನ್ನಡದಲ್ಲೇ ಬರೆಯುವಂತಾಗಿರುವುದು ಸಂತೋಷದ ವಿಚಾರ).

ತದನಂತರ ಕ್ರಮೇಣ ಎಲ್ಲರ ಮನೆಗೆ ಫೋನ್ ಬರುತ್ತಿದ್ದಂತೆ ಈ ಪತ್ರ ಬರೆಯುವ ಅಭ್ಯಾಸವೂ ಕೂಡ ನಿಧಾನವಾಗಿ ಕಡಿಮೆಯಾಗುತ್ತಾ ಹೋಯಿತು. ನಾನು ಎಂಜಿನಿರಿಂಗ್ ಓದುವಾಗ ಮೊದ ವರ್ಷದಲ್ಲಿ ಮನೆಗೆ ಬರೆದ ಪತ್ರವೇ ಕೊನೆ ಇರಬೇಕು ನಂತರ ಬರೇ ಫೋನಿನಲ್ಲೇ ಎಲ್ಲಾ ಸುದ್ದಿ ಸುಖ ದುಃಖ ವಿಚಾರಣೆ ಮುಗಿದುಹೋಗುತ್ತಿತ್ತು. ನಂತರ ಕೆಲವು ವರ್ಷಗಳು ಹಬ್ಬದ ದಿನಗಳ ಹಾರೈಕೆಗೆ ಎಲ್ಲರಿಗೂ ಗ್ರೀಟಿಂಗ್ಸ್ ಕಳುಹಿಸುವ ಅಭ್ಯಾಸ ಮಾತ್ರ ಹಾಗೆ ಉಳಿದಿತ್ತು. ಆಮೇಲೆ ಈ ಮೊಬೈಲ್ ಫೋನ್ ಬಂದ ಮೇಲೆ ಆ ಅಭ್ಯಾಸವೂ ನಿಂತು ಹೋಯಿತು.

ಈಗಲೂ ಮನೆಗೆ ಹೋದಾಗ ಅಂಚೆ ಮಾಮನ ಸೈಕಲ್ ಗಂಟೆಯ ಟ್ರಿಣ್ ಟ್ರಿಣ್ ಶಬ್ದ ಕೇಳುತ್ತದೆ. ಆದರೆ ಮೊದಲಿನಂತೆ ಓಡಿ ಹೋಗಿ ನೋಡುವ ಸಂಭ್ರಮ ಮನಸ್ಸಲ್ಲಿ ಉಳಿದಿಲ್ಲ. ಮದುವೆ ಇತ್ಯಾದಿ ಶುಭಕಾರ್ಯಗಳ ಆಮಂತ್ರಣ ಪತ್ರಗಳು, ಎಂದೋ ಆದ ಅಜೀವ ಸದಸ್ಯತ್ವಕ್ಕೆ ಪ್ರತಿಯಾಗಿ ಬರುವ ಪತ್ರಿಕೆಗಳು, ಬ್ಯಾಂಕಿನ, ಇನ್ನಿತರ ವ್ಯವಹಾರದ ಪತ್ರಗಳು ಇಷ್ಟೆ ಆಗಿರುತ್ತವೆ.
***********************


ಹ್ಮ್.. ಎಲ್ಲಾ ಹೀಗೆ ನೆನಪಿಸಿಕೊಂಡು ಒಮ್ಮೆ ನಿಟ್ಟುಸಿರಿಟ್ಟು ಬರೆಯಲು ಕುಳಿತೆ. ಮೊದಲ ಎರಡು ಸಾಲು ಉಭಯಕುಶಲೋಪರಿ ಸಾಂಪ್ರತ ಬರೆದೆ. ಮುಂದೆ ಏನು ಬರೆಯುವುದು ಗೊತ್ತಾಗುತ್ತಿಲ್ಲ! ಬರೆಯುವುದಕ್ಕೆ ಏನೂ ವಿಷಯವೇ ಸಿಗುತ್ತಿಲ್ಲ. ಮೊದಲಾದರೆ ಎಷ್ಟೆಲ್ಲಾ ವಿಷಯಗಳಿರುತ್ತಿತ್ತು. ಶಾಲೆ, ಪರೀಕ್ಷೆ, ಆಟ, ಪ್ರವಾಸ, ಮಳೆ, ಅಪರೂಪಕ್ಕೆ ನೋಡುತ್ತಿದ್ದ ಸಿನೆಮಾ ಹೀಗೇ ಇನ್ನೂ ಏನೇನೋ. ಪತ್ರದಲ್ಲಿ ಇದ್ದ ಜಾಗವು ಸಾಲುತ್ತಿರಲಿಲ್ಲ. ಈಗ ಹಾಗಲ್ಲ, ಎಲ್ಲಾ ಫೋನಿನಲ್ಲೆ ಮುಗಿದುಹೋಗಿರುತ್ತದಲ್ಲ. ! ಈ-ಮೇಲುಗಳಲ್ಲಂತೂ ನಾಲ್ಕು ಸಾಲು ಬರೆದರೆ ಹೆಚ್ಚು. ಕಷ್ಟಪಟ್ಟು ಯೋಚಿಸಿ ಯೋಚಿಸಿ ನನ್ನ ಕೆಲಸದ ಬಗ್ಗೆ, ಬೆಂಗಳೂರಿನ ಟ್ರಾಫಿಕ್ಕಿನ ಬಗ್ಗೆ, ಮಳೆಯ ಬಗ್ಗೆ, ‘ಮುಂಗಾರು ಮಳೆ' ಚಿತ್ರದ ಬಗ್ಗೆ ಹೀಗೇ ಏನೇನೋ ಬರೆದೆ. ಅವರಿರುವ ಊರಿನ ಹವಾಮಾನ, ಮಕ್ಕಳ ವಿದ್ಯಾಭ್ಯಾಸ, ಆರೋಗ್ಯ ಇನ್ನೇನೆನೊ ಕೇಳಿದೆ. ಎಷ್ಟು ಬರೆದರೂ ಖಾಲಿಯಿದ್ದ ಜಾಗವನ್ನು ತುಂಬಿಸಲು ಆಗಲೇ ಇಲ್ಲ. ಆದಷ್ಟು ಬರೆದು ಖಾಲಿ ಉಳಿದ ಜಾಗದಲ್ಲಿ ಸುಮ್ಮನೇ ಒಂದು ಹೂವಿನ ಚಿತ್ರ ಬರೆದು ಎಲ್ಲವನ್ನೂ ಪೋಸ್ಟ್ ಮಾಡಿದೆ. ಇದನ್ನು ಓದಿದ ಕೂಡಲೇ ಎಲ್ಲರೂ ಪತ್ರ ಬರೆಯುತ್ತಾರೆ, ಹಾಗೆಯೆ ಮತ್ತೆ ನಾನು ಬರೆಯುತ್ತೇನೆ, ಅವರು ಮತ್ತೆ ಉತ್ತರಿಸುತ್ತಾರೆ, ಹಾಗೆ ಪತ್ರ ವೈಭವ ಮರುಕಳಿಸುತ್ತದೆ ಎಂಬ ನಂಬಿಕೆಯಂತೂ ಖಂಡಿತಾ ಇರಲಿಲ್ಲ. ನೋಡೋಣ ಎಂದುಕೊಂಡು ಸುಮ್ಮನಾದೆ. ಹಾಗೆಯೇ ೨-೩ ದಿನಗಳ ನಂತರ ಒಬ್ಬೊಬ್ಬರದೇ ಉತ್ತರ ಬರತೊಡಗಿತು. ಪತ್ರ ತಲುಪಿದ ಎಲ್ಲರೂ ಪ್ರತಿಕ್ರಯಿಸಿದ್ದರು. ನಿನ್ನ ಪತ್ರ ತಲುಪಿತು, ಏನೋ ಈಗ ನಿಂಗೆ ಪತ್ರ ಬರಿಬೇಕು ಅನ್ನಿಸಿದೆ? ಖುಷಿಯಾಯಿತು ತುಂಬಾ ಎಂದಿದ್ದರು. ಆದರೆ ಉತ್ತರಿಸಿದ್ದು ಪತ್ರಗಳ ಮೂಲಕವಂತೂ ಖಂಡಿತಾ ಅಲ್ಲ. ದೊಡ್ಡವರೆಲ್ಲಾ ಫೋನ್ ಮಾಡಿ ಹೇಳಿದರೆ, ಚಿಕ್ಕವರದ್ದು ಇದೆಯಲ್ಲಾ, ಎಸ್ಸೆಮ್ಮೆಸ್ಸು. !

ಆದರೆ ನನ್ನ ದೊಡ್ಡಮ್ಮನದು ಮಾತ್ರ ಸುದ್ದಿಯೇ ಇಲ್ಲ ! ಏನಾಯ್ತಪ್ಪಾ ಇವರಿಗೆ ನನ್ನ ಪತ್ರ ತಲುಪಿತೋ ಇಲ್ಲವೊ ಎಂದುಕೊಂಡೆ. ಫೋನಾದ್ರೂ ಮಾಡಬೇಕಿತ್ತಲ್ಲಾ ಇವರು ಎಂದುಕೊಂಡು ಇರಲಿ ನೋಡೋಣ ಅಂತ ಸುಮ್ಮನಾದೆ. ಕೆಲದಿನಗಳ ನಂತರ ರಾತ್ರಿ ಮನೆಗೆ ಹೋದಾಗ ಬಾಗಿಲಲ್ಲಿ ಇನ್ಲ್ಯಾಂಡು ಪತ್ರವೊಂದು ಇತ್ತು. ಮದ್ಯಾಹ್ನ ಬಂದ ಅಂಚೆಯವನು ಸಿಗಿಸಿ ಹೋಗಿದ್ದ ಎನಿಸುತ್ತದೆ. ವಿಳಾಸದ ಕೈಬರಹ ನೋಡುತ್ತಿದ್ದಂತೆ ಖುಷಿಯಿಂದ ಹಿಗ್ಗಿದೆ. ದೊಡ್ಡಮ್ಮ ಪತ್ರ ಬರೆದಿದ್ದರು. ಸದ್ಯ ಇವರೊಬ್ಬರಾದರೂ ಬರೆದರಲ್ಲ ಎಂದುಕೊಂಡು ಸಂತೋಷದಿಂದ ಓದಿ ಮುಗಿಸುತ್ತಿದ್ದಂತೆ ಕೈ ಆಯಾಚಿತವಾಗಿ ಮೊಬೈಲಿನಲ್ಲಿ ದೊಡ್ಡಮ್ಮನ ಮನೆ ಫೋನ್ ನಂಬರನ್ನು ಒತ್ತುತ್ತಿತ್ತು. ನಿಮ್ಮ ಪತ್ರ ಬಂದು ತಲುಪಿದೆ ಎಂದು ತಿಳಿಸಲು ಫೋನು ಮಾಡುತ್ತಿದ್ದೆ.

========================================

ಅಷ್ಟಕ್ಕೂ ಪತ್ರಗಳೆಂದರೆ ಭಾರೀ ಹಿಂದಿನ ಇತಿಹಾಸವೇನಲ್ಲ. ಮೊನ್ನೆ ಮೊನ್ನೆಯಷ್ಟೆ ಕೆಲವೇ ವರುಷಗಳ ಹಿಂದೆ ಬಳಕೆಯಿಂದ ಕಡಿಮೆಯಾಗಿರುವಂತವು. ಈಗ ಕಾಲ ಬದಲಾಗಿದೆ, ಯಾರೊಟ್ಟಿಗಾದರೂ ಇದ್ದ ಸ್ಥಳದಿಂದಲೇ, ಆ ಕ್ಷಣದಲ್ಲೇ ಸಂಪರ್ಕ ಸಾಧಿಸಬಹುದು. ಫೋನು, ಮೊಬೈಲು, ಈ-ಮೇಲು, ಚಾಟಿಂಗ್, ವಾಯ್ಸ್ ಚಾಟ್ ಏನೇನೋ ಇದೆ. ಈಗ ವಿದೇಶದಲ್ಲಿರುವವರಿಗೂ ಪಕ್ಕದ ಊರಿನಲ್ಲಿರುವವರಿಗೂ ವ್ಯತ್ಯಾಸವೇ ಗೊತ್ತಾಗದಷ್ಟು ಟಚ್ ಇರುತ್ತದೆ. ಇವೆಲ್ಲಾ ಇರುವಾಗ ಮತ್ಯಾಕೆ ಆ ಹಳೆಯ ಪತ್ರಗಳಿಗೆ ಜೋತು ಬೀಳುವುದು ಸುಮ್ಮನೆ ವ್ಯರ್ಥ ಅನಿಸುವುದು ಸಹಜ. ಪತ್ರಗಳ ಬಗ್ಗೆ ಈ ರೀತಿ ಬ್ಲಾಗ್ ಬರೆದು ಕುಯ್ತಾ ಇರೋದು ಹಾಸ್ಯಾಸ್ಪದವೆನಿಸಬಹುದು. ಆದರೇ ಏನೇ ಹೇಳಿ, ಪತ್ರಗಳೆಂದರೆ ಬರೀ ಅಕ್ಷರಗಳಲ್ಲ, ಭಾವನೆಗಳೇ ಅಕ್ಷರ ರೂಪಕ್ಕೆ ಇಳಿದಿರುವಂತಹುದು ಅದು. ಪತ್ರಗಳಲ್ಲಿ ಆಗುತ್ತಿದ್ದ ಭಾವನೆಗಳ ವಿನಿಮಯ ಈಗಿನ ಸಂಪರ್ಕ ಮಾಧ್ಯಮಗಳಲ್ಲಿ ಸಾಧ್ಯವಿಲ್ಲ ಬಿಡಿ. ‘ಬೆರಳಂಚಿನ ಭಾವಗೀತೆ’ಗಳೆಂದು ಹೆಸರಾಗಿರುವ ಈ ಎಸ್ಸೆಮ್ಮೆಸ್ಸು ಗಳು ಸ್ವಲ್ಪ ಆ ನಿಟ್ಟಿನಲ್ಲಿದ್ದರೂ ಅವುಗಳದ್ದೇ ಆದ ಮಿತಿಗಳಿಂದ ಪತ್ರಗಳ ಸಮಕ್ಕೆ ಬರಲು ಸಾಧ್ಯವಿಲ್ಲ. ಏನೇ ಆದರೂ ಮನಸ್ಸಿಗೆ ಹಿತವೆನಿಸುವುದೇ ಆ ಹಿಂದಿನ ದಿನಗಳು, ಆ ಪತ್ರಗಳು. ಅನುಭವಿಸಿದವರಿಷ್ಟೆ ಗೊತ್ತು ಅದರ ಸುಖ.

ಅದಕ್ಕೇ ಹೇಳುವುದು ಯಾವತ್ತೂ,
ಹಾಡು ಹಳೆಯದಾದರೇನು..... ಭಾವ ನವನವೀನ.......
ನೀವೂ ಒಮ್ಮೆ ಪ್ರಯತ್ನಿಸಿ ನೋಡಿ.