ಬುಧವಾರ, ಸೆಪ್ಟೆಂಬರ್ 5, 2007

ಯಾರನ್ನೂ ಜೀವನಪೂರ್ತಿ ಪ್ರೀತಿ ಮಾಡೋಕ್ಕಾಗಲ್ವಾ?

ಯಾವುದೋ ಒಂದು ಗಳಿಗೆಯಲ್ಲಿ ಅವನು ಹೇಳುತ್ತಾನೆ... "ನಾನು ನಿನ್ನನ್ನ ಜೀವನ ಪೂರ್ತಿ ಪ್ರೀತಿ ಮಾಡ್ತೀನಿ".

ತಕ್ಷಣವೇ ಅವಳಿಂದ ಉತ್ತರ ಬರುತ್ತದೆ.. "ಈ ಜೀವನ ಪೂರ್ತಿ ಪ್ರೀತಿ ಅನ್ನೋದೆಲ್ಲಾ crap".

ಅವನಿಗೆ ಗಾಬರಿ..

ಅವಳೇ ಮುಂದುವರೆಸುತ್ತಾಳೆ.. "ಹೌದು ಕಣೋ, ಈ ಜೀವನ ಪೂರ್ತಿ ಪ್ರೀತಿ ಅನ್ನೋದು ನಾವು ಯಾವುದೋ ಒಂದು ಒಳ್ಳೆ ಮೂಡಲ್ಲಿದ್ದಾಗ ಮಾಡಿಕೊಳ್ಳೋ ಒಂದು assumption ಅಷ್ಟೆ. ಅದು reality ಅಲ್ಲ".
ಕಡ್ಡಿ ಮುರಿದಂತೆ ಅವಳ ಮಾತುಗಳು. ಅವಳು ಹಾಗೇ, ಎಲ್ಲರ ಹಾಗೆ ಭ್ರಮಾಲೋಕದಲ್ಲಿ ತೇಲುತ್ತಾ, ಕನಸು ಕಂಡು, ಕಲ್ಪನಾ ಲೋಕದಲ್ಲಿ ವಿಹರಿಸುತ್ತಾ ಕೊನೆಗೆ ಕೊರಗುವಳಲ್ಲ. ಅವಳದ್ದೇನಿದ್ದರೂ ವಾಸ್ತವತೆಗೆ ಹೆಚ್ಚು ಮಹತ್ವ. ಅದರಲ್ಲೇ ಹೆಚ್ಚು ನಂಬಿಕೆ.

ಅವಳು ಹೇಳುತ್ತಾಳೆ ..."ಮೊದಲನೆಯದಾಗಿ ಈ ಪ್ರೀತಿ ಅನ್ನೋದೆ ಅಗತ್ಯ, ಅನಿವಾರ್ಯತೆ, ಕಮಿಟ್ ಮೆಂಟ್ ಗಳ ಮೇಲೆ ನಿಂತಿರುವಂತದ್ದು".

"ನೀನು ಸುಮ್ನೆ ಎಲ್ಲಾದಕ್ಕೂ ನೆಗೆಟಿವ್ ಯೋಚನೆ ಮಾಡ್ತೀಯಾ ಕಣೆ. ಎಷ್ಟೋ ವರುಷಗಳಿಂದ ಪ್ರೀತಿ ಇಟ್ಕೊಂಡು ಬದುಕ್ತಾ ಇರೋರನ್ನ ನೋಡಿಲ್ವಾ. ಗೆಳೆಯ ಗೆಳತಿಯರ ಸ್ನೇಹದಲ್ಲೇ ಎಂಥಾ ಪ್ರೀತಿ ಇರತ್ತೆ ಗೊತ್ತಾ.?"

"ಹೌದು, ಈ ಪ್ರೀತಿ ಅನ್ನೋದು ಹಾಗೆ. ಒಂದು ಹಂತದವರೆಗೆ ಇರತ್ತೆ. ನಾವು ಅವರು ಚೆನ್ನಾಗಿರೋವಷ್ಟು ದಿನ, ಸಂಪರ್ಕದಲ್ಲಿರೋವಷ್ಟು ದಿನ. ಕ್ರಮೇಣ ಅದು ಅವರವರ ಕೆಲಸ, ಜೀವನದ ಗಿಜಿಗಿಜಿಯಲ್ಲಿ ಮಾಯವಾಗತ್ತೆ. ನಂತರ ಅದು ಬರೀ ನೆನಪಿನಂಗಳದಲ್ಲಿ ಮಾತ್ರ ಉಳಿಯತ್ತೆ. ಸ್ನೇಹ ಅನ್ನೋದು ಹಾಗೇ ಇರಬಹುದೆ ಹೊರತು ಅದು ಜೀವನ ಪೂರ್ತಿ ಪ್ರೀತಿ ಅಂತ ಕರೆಸ್ಕಳೊಕ್ಕಾಗಲ್ಲ."

"ಹಾಗಿದ್ರೆ ಈ ಅಮ್ಮ, ಮಗ, ಮಗಳು, ಅಣ್ಣ, ತಂಗಿ, ಅಪ್ಪ ಇತ್ಯಾದಿ ರಕ್ತ ಸಂಬಂಧಗಳ ಕಥೆ?"

"ಅದೂ ಹಾಗೆ, ಎಲ್ಲಾ ಚೆನ್ನಾಗಿರೋ ತನಕ ಅಷ್ಟೆ. ಒಮ್ಮೆ ಏನಾದರೂ ಅಸಮಾಧಾನ, ವಿರಸ, ಜಗಳ ಏನೋ ಆಯ್ತು ಅಂದ್ರೆ ಆ ಪ್ರೀತಿ ಒಳಗೊಳಗೇ ಕರಗುತ್ತಾ ಹೋಗತ್ತೆ. ಮೇಲಿಂದ ಅವರು ನಮ್ಮ ಅಕ್ಕ ತಂಗಿ ಅಮ್ಮ ಅಪ್ಪ ಅಂತ ಒಂದು ವಾತ್ಸಲ್ಯ, ಜವಾಬ್ದಾರಿ ಇದ್ರೂ ಕೂಡ ಅದನ್ನೂ ಕೂಡ ಜೀವನ ಪೂರ್ತಿ ಪ್ರೀತಿ ಅನ್ನೋಕಾಗಲ್ಲ."

"೩೦-೪೦ ವರ್ಷಗಳಿಂದ ಪ್ರೀತಿ,ಅಭಿಮಾನದಿಂದ ಚೆನ್ನಾಗಿ ಸಂಸಾರ ಮಾಡ್ಕೊಂಡು ಇರೋ ಗಂಡ ಹೆಂಡತಿಯರು ಎಷ್ಟು ಜನ ಇಲ್ಲ , ಅವ್ರೇನು ಸುಮ್ ಸುಮ್ನೆ ಜೊತೆಗಿದಾರೆ ಅನ್ಕೊಂಡಿದಿಯಾ?"

"ಅದು ಪ್ರೀತಿ, ಅಭಿಮಾನ ಅಲ್ವೋ, ಅದು ಅಗತ್ಯ, ಅನಿವಾರ್ಯತೆ, ಅವಲಂಬನೆ, ರೂಢಿ ಅಷ್ಟೆ. ಉದಾಹರಣೆಗೆ ಮಕ್ಕಳು, ಸಮಾಜ ಇತ್ಯಾದಿ. ಅವರಿಬ್ಬರಲ್ಲಿ ಎಂದೂ ಬತ್ತದ ಪ್ರೀತಿ ಇರತ್ತೆ ಅದರಿಂದಲೇ ಅವರು ಜೀವನ ಪೂರ್ತಿ ಒಟ್ಟಿಗೇ ಇರ್ತಾರೆ ಅಂತ ಹೇಳಕ್ಕಾಗಲ್ಲ."

"ಏನೋ ಹೇಳ್ತೀಯಮ್ಮಾ ನೀನು. ಒಟ್ನಲ್ಲಿ ಜೀವನ ಪೂರ್ತಿ ಪ್ರೀತಿ ಮಾಡೋಕ್ಕಾಗಲ್ಲ, ಅದು ಸುಳ್ಳು ಅಂತನಾ ನಿನ್ನಭಿಪ್ರಾಯ?"

"ಸುಳ್ಳು ಅಂತ ಹೇಳ್ತಾ ಇಲ್ಲ, ಆದ್ರೆ ಈ ಜೀವನ ಪೂರ್ತಿ ಪ್ರೀತಿ ಅನ್ನೋದು ಒಂದು ರೀತಿ ಕಮಿಟ್ ಮೆಂಟ್ ಆಗತ್ತೇ ಹೊರತು ನಿಜವಾದ ಪ್ರೀತಿ ಅಲ್ಲ ಅಂತಿದಿನಿ. ಪ್ರೀತಿ ಸತ್ತೋದಮೇಲೆ ಆ ಕಮಿಟ್ ಮೆಂಟ್ ಗೆ ಅಥವಾ ಜೊತೆಗಿರೋದ್ರಲ್ಲಿ ಅರ್ಥ ಏನಿದೆ ಹೇಳು?"

"ಹೌದು ಕಣೇ, ಪ್ರೀತಿ ಸತ್ತೋದ್ಮೇಲೆ ಅದಕ್ಕೆ ಅರ್ಥ ಇಲ್ಲ, ಅದು ಕಮಿಟ್ ಮೆಂಟ್ ಆಗತ್ತೇ ಅಂತ ಒಪ್ಕೋತೀನಿ, ಅದು ವ್ಯರ್ಥ, ಆದ್ರೇ ಆ ಪ್ರೀತಿ ಸಾಯದೇ ಇರೋ ತರ ಸಂಬಂಧ ಇಟ್ಕೋಬೇಕು ಅಂತ ನಾನು ಹೇಳ್ತಿರೋದು."

"ಹಾಗೆ ನಾವು ಅನ್ಕೋತೀವಿ, ಆದ್ರೆ ನಮಗೆ ಗೊತ್ತಿಲ್ಲದ ಹಾಗೆ ಅದಕ್ಕೆ ವಿರುದ್ಧವಾಗಿ ಆಗ್ಬಿಡತ್ತೆ. ಈಗ ಒಂದು ಕೆಳಮಟ್ಟದ ಉದಾಹರಣೆ ತಗಳೋಣ. ನಿನ್ನ ಹೆಂಡತಿಗೋ, ಪ್ರೇಮಿಗೋ ಅಥವಾ ಇನ್ಯಾರಿಗೋ ಏನೋ ಆಗತ್ತೆ, ಅವರ ಕಣ್ಣು ಕುರುಡಾಗ್ಬೋದು, ಅವರ ಕಾಲು ಮುರ್ದೋಗ್ಬೋದು, ಬುದ್ಧಿ ಭ್ರಮಣೆ ಆಗ್ಬೋದು. ಆವಾಗ್ಲೂ ಅವರಲ್ಲಿ ಅದೇ ಪ್ರೀತಿ ಇರತ್ತಾ? ಅನುಕಂಪ ಹುಟ್ಬೋದು, ಅದು ಬೇರೆ ವಿಷ್ಯ. ಅದು ಪ್ರೀತಿ ಆಗಲ್ಲ."


"ಅಲ್ಲೇ ನೀನು ತಪ್ಪು ತಿಳ್ಕೊಂಡಿರೋದು, ಪ್ರೀತಿ ಅನ್ನೋದು ಈ ಮೋಹ, ಅನುಕಂಪ, ವಾತ್ಸಲ್ಯ, ಕಾಮ, ರೂಢಿ, ಬದ್ಧತೆ, ಸೇವೆ, ಸ್ನೇಹ, ರಕ್ತ ಸಂಬಂಧ, ಸೆಳೆತ, ಅಗತ್ಯ, ಕೆಲವೊಮ್ಮೆ ಆಕಸ್ಮಿಕ ಹೀಗೆ ಇನ್ನೂ ಹಲವಾರು ರೂಪಗಳಲ್ಲಿ ಅಥವಾ ಅವುಗಳಲ್ಲಿ ಕೆಲವುದರ ಮಿಶ್ರಣದ ರೂಪದಲ್ಲಿ ಇರತ್ಯೇ ಹೊರತು ಪ್ರೀತಿ ಅನ್ನೋದಕ್ಕೆ ಬೇರೆಯಾದ ರೂಪ ಇಲ್ಲ ಕಣೇ."


"ಏನೇ ಇರ್ಲಿ, ಜೀವನ ಪೂರ್ತಿ ಪ್ರೀತಿ ಅನ್ನೋದು ತಾನಾಗೇ ಇರುವಂತದ್ದು, ಬರುವಂತದ್ದೇ ಹೊರತು ನಾವು ಮಾಡ್ತೀವಿ, ಕಾಪಾಡ್ಕೋತೀವಿ ಅನ್ಕೊಳೋವಂತದ್ದಲ್ಲ. ಅದು ಸಾಧ್ಯನೂ ಇಲ್ಲ."

"ಒಟ್ನಲ್ಲಿ ನಾನು ಹೇಳೋದು ನಿಂಗರ್ಥ ಆಗ್ತಾ ಇಲ್ಲ, ನೀ ಹೇಳೋದು ನಂಗರ್ಥ ಆಗಲ್ಲ."

"ಹಾಗಿದ್ರೆ ಏನಂತ ತೀರ್ಮಾನ ಮಾಡೋಣ?"

"ಅಯ್ಯೋ, ನಾವು ತೀರ್ಮಾನ ಮಾಡೋವಷ್ಟು ದೊಡ್ಡೋರೂ ಅಲ್ಲ, ನಮಗಿನ್ನೂ ಆ ಮಟ್ಟಿಗೆ ಮನಸ್ಸು ಪಕ್ವವಾಗೂ ಇಲ್ಲ. ಏನೋ ನಮಗನ್ನಿಸಿದ್ದು, ನಮ್ಮ ವಯಸ್ಸಿಗೆ ಅನುಭವಕ್ಕೆ ಬಂದಷ್ಟು, ನಮ್ಮ ಜಗತ್ತಿನಲ್ಲಿ ಕಂಡದ್ದನ್ನ ಹೇಳ್ಕೋತೀವಷ್ಟೆ. ಈ ತೀರ್ಮಾನ ಎಲ್ಲಾ ಅವರವರಿಗೇ ಬಿಟ್ಟಿದ್ದು."

"ಹ್ಮ್.. ಹೌದು. ಅದೂ ಸರಿನೇ ಬಿಡು. "

ನಂತರ ನೆಲೆಸಿದ್ದು ಅಲ್ಲೊಂದು ದೀರ್ಘ ಮೌನ.