ಬುಧವಾರ, ಅಕ್ಟೋಬರ್ 10, 2007

ನಮ್ಮೂರಿಗೂ ಬಂದಿದ್ದರು ಕಾರಂತಜ್ಜ !

ಆವಾಗಿನ್ನೂ ಜ್ಞಾನಪೀಠವೆಂದರೇನು ಎನ್ನುವ ಜ್ಞಾನ ಕೂಡ ಇರಲಿಲ್ಲ. ಪರೀಕ್ಷೆಯಲ್ಲಿ "ಕನ್ನಡದಲ್ಲಿ ಜ್ಞಾನಪೀಠ ಪಡೆದವರವರನ್ನು ಹೆಸರಿಸಿ" ಎಂದರೆ ಸಾಲಾಗಿ ೫ ಜನರ ಹೆಸರು ಬರೆಯಲು ಬರುತ್ತಿತ್ತು. ಅದರಲ್ಲಿ ಶಿವರಾಮ ಕಾರಂತರ ಹೆಸರು ನೆನಪು ಬಂದ ಹಾಗೆ ಮೊದಲಿಗೋ ಕೊನೆಗೋ ಬರೆಯುತ್ತಿದ್ದೆ. ಅವರು ಪುಸ್ತಕ ಬರೆಯುತ್ತಾರೆ ಎಂದು ಗೊತ್ತಿತ್ತು. ಆಗಿನ ವಯಸ್ಸಿನಲ್ಲಿ ಅಷ್ಟೇ ತಿಳುವಳಿಕೆ ಶಿವರಾಮ ಕಾರಂತರ ಬಗ್ಗೆ.

ನಮ್ಮ ಮನೆಯ ಹತ್ತಿರವೇ ಲಯನ್ಸ್ ಸಂಸ್ಥೆಯವರು ಒಂದು ಕಣ್ಣಿನ ಆಸ್ಪತ್ರೆ ಕಟ್ಟಿಸಿದ್ದರು. ಅದರ ಉದ್ಘಾಟನೆಗೆ ಅವರು ಕರೆಸಿದ್ದು ಶಿವರಾಮ ಕಾರಂತರನ್ನ! ಆವಾಗಾಗಲೇ ಕಾರಂತರಿಗೆ ಸುಮಾರು ವಯಸ್ಸಾಗಿತ್ತು. ಅದಕ್ಕಿಂತ ಮೊದಲು ಅವರು ನಮ್ಮ ಊರಿಗೆ ಬಂದಿದ್ದರೋ ಇಲ್ಲವೋ ಗೊತ್ತಿಲ್ಲ. ಲಯನ್ಸ್ ಸಂಸ್ಥೆಯಲ್ಲಿ ಪ್ರಭಾವಿಗಳು ಇದ್ದುದ್ದರಿಂದ ಕಾರಂತರನ್ನು ಕರೆಸಲು ಸಫಲರಾಗಿದ್ದರು ಅನಿಸುತ್ತದೆ. ಮನೆಯಲ್ಲಿ ಅಪ್ಪ ಶಿವರಾಮ ಕಾರಂತರು ಬರುತ್ತಾರಂತೆ ಎಂದು ಸಂಭ್ರಮದಿಂದ ಓಡಾಡುತ್ತಿದ್ದರೆ ನಾನು ನಮ್ಮ ಮಾಮೂಲಿ ಶಾಲೆಯ ಕಾರ್ಯಕ್ರಮದಂತೆ ಒಂದಿಷ್ಟು ಭಾಷಣ ಚಪ್ಪಾಳೆಗಳಿರುತ್ತವೆ ಎಂದು ಹೊತ್ತು ಕಳೆಯಲು ಸಮಾರಂಭಕ್ಕೆ ಹೋಗಿದ್ದೆ. ನಮ್ಮ ಊರಿನ, ಪಕ್ಕದೂರುಗಳ ಅಭಿಮಾನಿಗಳು, ಬುದ್ಧಿಜೀವಿಗಳು ಸುಮಾರು ಜನರು ಬಂದಿದ್ದರೆಂದು ಕಾಣುತ್ತದೆ ಅಂತೂ ಸಾಕಷ್ಟು ಜನರಂತೂ ಇದ್ದರು. ಮಾಮೂಲಿನಂತೆ ಉದ್ಘಾಟನೆ , ಪ್ರಾರ್ಥನೆ, ಸ್ವಾಗತ, ಪರಿಚಯ ಇತ್ಯಾದಿ ಎಲ್ಲಾ ಆದಮೇಲೆ ಕಾರಂತರು ಮಾತನಾಡಲು ಶುರು ಮಾಡಿದರು. ಆವಾಗಾಗಲೇ ಶೆಖೆಯಿಂದ ಷಾಮಿಯಾನಾದ ಕೆಳಗೆ ಕೂತಿದ್ದ ಎಲ್ಲರಲ್ಲೂ ಧಾರಾಕಾರವಾಗಿ ಬೆವರು ಹರಿಯುತ್ತಿತ್ತು. ಸರಳವಾಗಿ ಮಿತವಾಗಿ ಮಾತನಾಡಿದ ಅವರು ಉರಿಬಿಸಿಲನ್ನೇ ಉದಾಹರಣೆಗೆ ತೆಗೆದುಕೊಂಡು "ಕಣ್ಣಿನ ಆಸ್ಪತ್ರೆಯನ್ನೇನೋ ಕಟ್ಟಿದ್ದೀರಾ, ಅದರಲ್ಲಿ ಒಳ್ಳೆಯ ಡಾಕ್ಟರುಗಳು, ಒಳ್ಳೆಯ ಉಪಕರಣಗಳು, ಒಳ್ಳೆಯ ಸೇವೆಗಳು ಇತ್ಯಾದಿ ಎಲ್ಲವನ್ನೂ ಮಾಡುತ್ತೀರಾ ಎಂಬ ಭರವಸೆಯಿದೆ, ಅದರ ಬಗ್ಗೆ ನಾನು ಏನೂ ಹೇಳುವುದಿಲ್ಲ. ಆದರೆ ಇಷ್ಟೆ ಆದರೆ ಆಯಿತು ಅಂದುಕೊಳ್ಳಬೇಡಿ. ಆಸ್ಪತ್ರೆಯ ಸುತ್ತಲೂ ಮರಗಿಡಗಳನ್ನು ಬೆಳೆಸಿ, ವಾತಾವರಣವನ್ನು ಹಸಿರಿನಿಂದ ತುಂಬಿಸಿ. ಆಗ ಇಲ್ಲಿ ಬರುವ ರೋಗಿಗಳ ತೊಂದರೆ ಆಸ್ಪತ್ರೆಯ ಬಾಗಿಲಿನ ಒಳಗೆ ಕಾಲಿಡುವುದಕ್ಕೇ ಮೊದಲೇ ಅರ್ಧ ವಾಸಿಯಾಗಿರುತ್ತದೆ. ವಾತಾವರಣ ತಂಪಾಗಿರುತ್ತದೆ. ಹಸಿರಿನಿಂದ ತುಂಬಿದ ಪರಿಸರ ಎಲ್ಲರಿಗೂ ಸಂತೋಷ ಕೊಡುತ್ತದೆ, ಮನಸ್ಸು ದೇಹ ಆರೋಗ್ಯವಾಗಿರುತ್ತದೆ" ಎಂದು ಹೇಳಿದ್ದರು.

ಕಾರಂತರ ಮಾತು ನಿಜಕ್ಕೂ ಅಲ್ಲಿ ನೆರೆದಿದ್ದವರ ಮೇಲೆ ಪ್ರಭಾವ ಬೀರಿತ್ತು. ಸಂಸ್ಥೆಯವರು ಕಾರಂತರ ಮಾತನ್ನು ಅರ್ಥ ಮಾಡಿಕೊಂಡಿದ್ದರು. ಅದರ ಪರಿಣಾಮವಾಗಿ ಮಾರನೆಯ ದಿನವೇ ಆಸ್ಪತ್ರೆಯ ಸುತ್ತ ಮುತ್ತಲೂ ಗಿಡಗಳನ್ನು ನೆಡಲಾಯಿತು.ಮೊದಲು ಯಾವುದಕ್ಕೂ ಉಪಯೋಗವಿಲ್ಲದ ಕೊಳಚೆ ತುಂಬಿದ್ದ ಬರಡು ಭೂಮಿಯಿದ್ದ ಜಾಗದಲ್ಲಿ ನಂತರ ಎಂತಹ ಸುಂದರ ಹಸಿರು ಪರಿಸರ ನಿರ್ಮಾಣವಾಯಿತೆಂದರೆ ಈಗಲೂ ನಾನು ಪ್ರತೀ ಸಲ ಊರಿಗೆ ಹೋದಾಗ ಅಲ್ಲಿ ಹೋಗಿ ಖುಷಿ ಪಡುತ್ತೇನೆ. ಆಗಿನಿಂದ ಕಾರಂತರ ಮೇಲೆ ಮೂಡಿ ಬಂದ ಗೌರವ ಅವರ ಸಾಹಿತ್ಯವನ್ನೋದುತ್ತಾ ಈಗಲೂ ಹೆಚ್ಚಾಗುತ್ತಿದೆ. ಹಿರಿಯರ, ಜ್ಞಾನಿಗಳ, ಅನುಭವಿಗಳ ವಿಚಾರಗಳನ್ನು ಅಳವಡಿಸಿಕೊಂಡಾಗ ಅವು ಹೇಗೆ ಬದಲಾವಣೆಗಳನ್ನು ತರಬಲ್ಲುದು ಎಂಬುದಕ್ಕೆ ಇದೊಂದು ಉತ್ತಮ ಉದಾಹರಣೆ. ಒಂದು ಒಳ್ಳೆ ಉದ್ದೇಶ ಸಾರ್ಥಕವಾಗಲು, ಸಮಾಜಕ್ಕೆ ಸರಿ ದಾರಿ ತೋರಿಸಲು ಇಂತಹ ಹಿರಿಯರು ಹೇಗೆ ಮುಖ್ಯ ಎಂಬುದಕ್ಕೆ ಇದೊಂದು ನಿದರ್ಶನ. ನಯಾಪೈಸೆ ಉಪಯೋಗವಿಲ್ಲದ ಕೆಲವು ಚಿತ್ರನಟಿಯರನ್ನು ರಾಜ್ಯೋತ್ಸವಕ್ಕೆ ಮುಖ್ಯ ಅತಿಥಿಯನ್ನಾಗಿ ಕರೆಸಿ ಅವರ ಇಂಗ್ಲೀಷು-ಕನ್ನಡದ ಭಾಷಣ ಕೇಳಿ ಚಪ್ಪಾಳೆ ಕುಟ್ಟಿ ಮಾಡುವ ಆಡಂಬರಕ್ಕೆ ಏನರ್ಥವಿದೆ!
******

ಇವೆಲ್ಲಾ ನೆನಪಾಗುವುದಕ್ಕೆ ಕಾರಣವೇನೆಂದರೆ ಕನ್ನಡ ಮತ್ತು ಸಂಸ್ಕೃತಿ ನಿರ್ದೇಶನಾಲಯ ಹೊರತಂದಿರುವ "ಶಿವರಾಮ ಕಾರಂತರ ಸಾಹಿತ್ಯ ಶ್ರೇಣಿ" ಪುಸ್ತಕಗಳನ್ನು ಮೊನ್ನೆ ಮೊನ್ನೆ ಕೊಂಡು ತಂದೆ. ನಮ್ಮ ಸರ್ಕಾರಗಳೂ ಅಪರೂಪಕ್ಕೆ ಮಾಡುವ ಒಳ್ಳೆ ಕೆಲಸ ನೋಡಿ ಖುಷಿಯಾಯಿತು. ಹತ್ತಿರ ಹತ್ತಿರ ಐದು ನೂರು ಪುಟಗಳ ಕಾರಂತರ ೨-೩ ಕಾದಂಬರಿಗಳು, ನಾಟಕಗಳಿರುವ ಪ್ರತಿ ಪುಸ್ತಕಕ್ಕೆ ಕೇವಲ ೫೦ ರೂಪಾಯಿ ಬೆಲೆ.!! ಓದುವ ಆಸಕ್ತಿಯುಳ್ಳವರು ಬೆಲೆ ಬಗ್ಗೆ ಚಿಂತಿಸುವುದು ಕಡಿಮೆಯಾದರೂ ಕೂಡ ಅದೇ ಕಾರಣದಿಂದ ಹಿಂದೇಟು ಹಾಕುವವರೂ ಬಹಳ ಮಂದಿ ಇರುವುದೂ ಸುಳ್ಳಲ್ಲ. ಸುಮ್ಮನೇ ಒಂದು ರೌಂಡ್ ಹೊರಗೆ ಹೋಗಿಬಂದರೆ ೫೦ ರೂಪಾಯಿ ಖರ್ಚಾಗುವ ಈ ಕಾಲದಲ್ಲಿ ಶಿವರಾಮಕಾರಂತರ ಅಸೀಮ ಸಾಹಿತ್ಯ ಇಷ್ಟು ಸುಲಭ ಬೆಲೆಯಲ್ಲಿ ಸಿಗುತ್ತಿರುವುದು ಅದೃಷ್ಟವೇ ಸೈ. ಇದೇ ರೀತಿ ಕಾರಂತರ ’ವಿಜ್ಞಾನ, ಪರಿಸರ ಸಾಹಿತ್ಯ’ ವೂ ದೊರಕುವಂತಾದರೆ ಚೆನ್ನಾಗಿರುತ್ತದೆ. ಪ್ರತಿ ವರುಷ ಆ ಸಮ್ಮೇಳನ, ಈ ಸಮ್ಮೇಳನ ಎಂದು ಕೋಟ್ಯಾಂತರ ರೂಪಾಯಿ ಸುರಿದು ಮಾಡುವ ಅದ್ಧೂರಿಗಳಿಗಿಂತ ನಿಜವಾಗಿಯೂ ಕನ್ನಡಕ್ಕೆ ಬೇಕಾಗಿರುವುದು ಇಂತಹುದೇ. ಕೋಟಿ ಖರ್ಚು ಮಾಡಿ ಸಮ್ಮೇಳನ ನೆಡೆಸಿ ಪ್ರತಿ ವರುಷ ಕನ್ನಡದ ಒಳಿತಿಗಾಗಿ ಕೈಗೊಂಡ ತೀರ್ಮಾನಗಳನ್ನು ಕಡತಗಳಲ್ಲಿ ಧೂಳು ಹಿಡಿಸುವ ಬದಲು ಅದೇ ಖರ್ಚಿನ ಒಂದು ಭಾಗವನ್ನು ಕನ್ನಡ ಪುಸ್ತಕಗಳಿಗೆ ಬಳಸಿದರೆ ಕನ್ನಡ ಪುಸ್ತಕಗಳ ಮಾರಾಟ ಸಂಖ್ಯೆ ಮೂರು ಪಟ್ಟು ಆಗುವುದರಲ್ಲಿ ಸಂದೇಹವಿಲ್ಲ. ಕನ್ನಡ ಸಾಹಿತ್ಯದ ಪ್ರಚಾರದ ಜೊತೆಗೆ ಇಂಗ್ಲೀಷಿನ ಅಬ್ಬರದಲ್ಲಿ ಕಳೆದು ಹೋಗುತ್ತಿರುವ ಕನ್ನಡದ ಮುಂದಿನ ಪೀಳಿಗೆಯಲ್ಲಿ ಕನ್ನಡವನ್ನು, ಕನ್ನಡತನವನ್ನು ಉಳಿಸಲು ಇಂತಹ ಯೋಜನೆಗಳು ನಿಜಕ್ಕೂ ಸಹಾಯಕಾರಿ.
********
ಕನ್ನಡದ ಆಸ್ತಿ, ಪರಿಸರವಾದಿ , ಕಲಾಸೇವಕ, ಕಡಲ ತೀರದ ಭಾರ್ಗವ, ಬಾಲವನದ ಪ್ರೀತಿಯ ಕಾರಂತಜ್ಜನಿಗೆ ಈ ಬ್ಲಾಗ್ ಮೂಲಕ ಸುಮ್ಮನೇ ಒಂದು ಗೌರವ ನಮನ.