ಬುಧವಾರ, ಡಿಸೆಂಬರ್ 31, 2008

ಅಂತೂ ಸಾಧಿಸಿದೆ ’ಮೌನವ್ರತ’ !

ಮೊನ್ನೆ ಡಿಸೆಂಬರ್ ೨೫ ಕ್ಕೆ ಬಹುದಿನಗಳ ಒಂದು ಕನಸು ಈಡೇರಿತು. ಇದಕ್ಕಾಗಿ ಸುಮಾರು ವರ್ಷಗಳಿಂದ ಪ್ರಯತ್ನ ಪಟ್ಟಿದ್ದೆ. ಅಷ್ಟಕ್ಕೂ ಇದು ಚಂದ್ರಯಾನದಂತಹ ದೊಡ್ಡ ಕನಸಲ್ಲ. ಒಂದೇ ಒಂದು ಚಿಕ್ಕ ಪ್ರಯೋಗವಷ್ಟೆ. ಅದೇನೆಂದರೆ ಒಂದಿಡೀ ದಿನ ಒಂದು ಶಬ್ದವನ್ನೂ ಮಾತಾಡದೇ ಉಳಿದುಬಿಡುವುದು. ಅದರರ್ಥ ಒಂದು ದಿನದ ಮೌನವ್ರತ!

ಹೌದು. ಈ ಒಂದು ದಿನದ ಮೌನವ್ರತ ಮಾಡಬೇಕೆಂದು ಯಾವಾಗಲೋ ಅಂದುಕೊಂಡಿದ್ದೆ. ಇಷ್ಟು ದಿನಗಳಾದರೂ ಸಾಧ್ಯವಾಗಿರಲಿಲ್ಲ. ಈ ಮೌನವ್ರತವೆಂದರೆ ಯಾರಜೊತೆಯೂ ಮಾತಾಡದೇ ಇದ್ದು ಬಿಡುವುದು ಮಾತ್ರವಲ್ಲ, ಬದಲಾಗಿ ನಮ್ಮೊಳಗಿನ ’ಅವನ’ ಜೊತೆ ಮಾತಾಡಿಕೊಳ್ಳುವುದಂತೆ! ಇದ್ಯಾಕೋ ಅರ್ಥವಾದಂತೆ ಕಂಡರೂ ಅದು ಅರ್ಥವಾಯಿತೆನಿಸಿರಲಿಲ್ಲ. ಸ್ವಾಮೀಜಿಗಳು, ಆಧ್ಯಾತ್ಮ ಜೀವಿಗಳು ಮತ್ತು ಕೆಲವು ಲೌಕಿಕರೂ ಕೂಡ ಈ ಮೌನವ್ರತ ಮಾಡುತ್ತಾರೆ. ಕೆಲವರದ್ದು ಕೆಲವು ಗಂಟೆಗಳಾಗಿದ್ದರೆ ಇನ್ನು ಕೆಲವರದ್ದು ಕೆಲವು ದಿನಗಳವರೆಗೆ. ಮತ್ತೂ ಕೆಲವರದ್ದು ವಾರದಲ್ಲಿ ಅಥವಾ ತಿಂಗಳಲ್ಲಿ ಇಂತಹ ನಿರ್ದಿಷ್ಟ ದಿನ ಎನ್ನುವಂತದ್ದು. ರಾಮಕೃಷ್ಣ ಹೆಗಡೆಯವರು ಜನತಾದಳದಿಂದ ಉಚ್ಛಾಟಿತರಾದಾಗ ತೀವ್ರ ಬೇಸರಗೊಂಡು ೪೦ ವರ್ಷಗಳಿಂದ ಪಾಲಿಸಿಕೊಂಡು ಬಂದಿದ್ದ ವಾರಕ್ಕೊಂದು ದಿನದ ಮೌನವ್ರತವನ್ನು ಮುರಿದು ತಮ್ಮ ನೋವನ್ನು , ಅದಕ್ಕೆ ಕಾರಣಾದವರ ವಿರುದ್ಧ ಆಕ್ರೋಶವನ್ನು ವ್ಯಕ್ತಪಡಿಸಿದ್ದರಂತೆ !

ನನ್ನ ಮೌನವ್ರತಕ್ಕೆ ಯಾವುದೇ ಆಧ್ಯಾತ್ಮಿಕ ಉದ್ದೇಶವಂತೂ ಇರಲಿಲ್ಲ. ಅದೇನಿದ್ದರೂ ಒಂದು ವೈಯಕ್ತಿಕ ಅಪ್ಪಟ ಕುತೂಹಲದ ಪ್ರಯೋಗ ಮಾತ್ರವಾಗಿತ್ತು. ಮನೆಯಲ್ಲಿದ್ದಾಗ ಅಪ್ಪ ಅಮ್ಮ ಮಕ್ಕಳು ಮರಿ ಅವರು ಇವರು ಎಂದು ಸುತ್ತಮುತ್ತ ಎಲ್ಲರೂ ಇರುತ್ತಿದ್ದುದರಿಂದ ಇಡೀ ದಿನ ಮೌನವಾಗಿರಲು ಸಾಧ್ಯವಿಲ್ಲವೆಂದು ಗೊತ್ತಿದ್ದರಿಂದ ಪ್ರಯತ್ನಿಸಲು ಹೋಗಿರಲಿಲ್ಲ. ಹಾಸ್ಟೆಲಿನಲ್ಲಿದ್ದಾಗಂತೂ ಅದು ಕನಸೇ ಹೌದು. ಬೆಂಗಳೂರು ಸೇರಿಕೊಂಡ ಮೇಲೆ ಒಂದು ದಿನ ಸಾಧಿಸಿಬಿಟ್ಟೆ ಎನ್ನುವಷ್ಟರಲ್ಲಿ ಮುರಿದಿದ್ದೆ. ಮೊಬೈಲ್ ಫೋನು ಆಫ್ ಮಾಡಿಟ್ಟು ಸಂಜೆಯವರೆಗೆ ತೆಪ್ಪಗಿದ್ದವನು ಒಂದು ರೌಂಡು ಲೈಬ್ರರಿಗೆ ಹೋಗಿ ಬರೋಣವೆಂದು ಹೊರಟು ರಸ್ತೆಯಲ್ಲಿ ಬೈಕಿಗೆ ಯಾವನೋ ಅಡ್ಡಬಂದು ಆಯಾಚಿತವಾಗಿ ಮಾತು ಹೊರಬಂದು ಮೌನವ್ರತವು ಮರೆತು ಹೋಗಿ ಬೇರೇನೋ ಆಗಿಹೋಗಿತ್ತು. ಈಗ್ಯಾಕೆ ಸುಮ್ನೆ ಇದೆಲ್ಲಾ, ಮುಂದೆ ಮದುವೆಯಾದಮೇಲೆ ಮಾಡಿದರಾಯಿತು ಅನ್ನಿಸಿದ್ದೂ ಇದೆ. ಆದರೂ ತೀರ ಒಂದಿಡೀ ದಿನ ಮೂಕನಂತೆ ಇರುತ್ತೇನೆಂದರೆ ಹೆಂಡತಿಯಾದವಳು ತಲೆ ಮೇಲೆ ಮೊಟಕಿದರೆ ಕಷ್ಟ ಎನಿಸಿತ್ತು. ದಿನವೂ ಪ್ರೀತಿ ಮಾಡಲು ಅಥವಾ ಜಗಳಾಡಲಾದರೂ ಸ್ವಲ್ಪವಾದರೂ ಮಾತಾಡಲೇ ಬೇಕಾಗುತ್ತದೆ ಎಂದು ಸುಮ್ಸುಮ್ನೇ ಗೊತ್ತಿಲ್ಲದ ಕಲ್ಪನೆ!  ಅದು ಬಿಡಿ. ಈ ಮೌನವ್ರತಕ್ಕೆ ಒಂದು ಏಕಾಂತ ಬೇಕು. ಇನ್ನೊಬ್ಬರ ಜೊತೆ ಇರುವಾಗ ಅಥವಾ ಎಲ್ಲರೂ ಇರುವಾಗ ಮೌನವ್ರತ ಮಾಡಿದರೆ ಅದು ಅವರಿಗೆ ಒಂದು ರೀತಿ ಕಿರಿಕಿರಿಯೆನಿಸುವುದು ಸಹಜ. ಆದ್ದರಿಂದ ಸಂದರ್ಭಕ್ಕಾಗಿ ಕಾಯುತ್ತಿದ್ದೆ. ಮೊದಲೂ ಕೆಲವೊಮ್ಮೆ ಸರಿಯಾದ ಸಂದರ್ಭ ಸಿಕ್ಕಿತ್ತೇನೋ, ಆದರೆ ಆವಾಗ ನನಗೆ ಮೌನವ್ರತದ ನೆನಪೇ ಬಂದಿರಲಿಲ್ಲ.

ಈ ಸಾರ್ತಿ ದೂರದೇಶವೊಂದರಲ್ಲಿ ಅಪರಿಚಿತ ಜನಗಳ ಮಧ್ಯೆ ಅವರ ಭಾಷೆ ತಿಳಿಯದ ನಾನು ಇದ್ದೆ. ಆಫೀಸಿನಲ್ಲಿ ಬೇಕಾದಷ್ಟೆ ಮಾತು, ಹೋಟೇಲಿನಲ್ಲಿ ನಾಲ್ಕು ಮಾತು, ಹೊರಗೆಲ್ಲಾದರೂ ಹೋದರೆ ಅಗತ್ಯವಿದ್ದರಷ್ಟೇ ಬಂದಷ್ಟು ಮಾತು. ಮೌನವ್ರತಕ್ಕೆ ಒಳ್ಳೆಯ ವಾತಾವರಣ ಕಲ್ಪಿಸಿಕೊಟ್ಟಿತ್ತು. ಆದ್ದರಿಂದ ಡಿಸೆಂಬರ್ ೨೫ನ್ನು ಇದಕ್ಕೆ ಆರಿಸಿಕೊಂಡೆ. ಆಫೀಸು ರಜ. ಬೇರೆಲ್ಲಾ ರಜ. ಹೋಟೇಲಿನ ರೂಮು ನನ್ನ ಕಾರಸ್ಥಾನವಾಗಿತ್ತು. ಸರಿ, ಫೋನು ಆಫ್ ಮಾಡಿಟ್ಟೆ. ಬೆಳಗ್ಗೆ ಎದ್ದವನು ಹೋಟೆಲ್ ರಿಸೆಪ್ಷನ್ ನಲ್ಲಿ ಕೇವಲ ಒಂದು ಸ್ಮೈಲು ಖರ್ಚು ಮಾಡಿ ಸೈಲೆಂಟಾಗಿ ಒಂದು ರೌಂಡ್ ವಾಕಿಂಗ್ ಹೋಗಿ ಬಂದು ತಿಂಡಿತಿಂದು ರೂಮಿನಲ್ಲಿ ಸೆಟ್ಲಾದೆ. ನಂತರ ಪುಸ್ತಕದಲ್ಲಿ ಮುಳುಗಿಹೋದೆ. ಅರ್ರೇ ಇವತ್ತು ಕ್ರಿಸ್ಮಸ್ ಎಂದು ನೆನಪಾಗಿ ನೋಡಿಕೊಂದು ಬರೋಣ ಆಚರಣೆ ಹೇಗಿರುತ್ತದೆ ಎಂದು ಹೊರಟೆ. ಎಲ್ಲಾ ರಸ್ತೆಗಳೂ ನಿರ್ಜನವಾಗಿದ್ದವು. ಅಂಗಡಿಗಳೆಲ್ಲವೂ ಬಾಗಿಲು ಹಾಕಿತ್ತು. ಎಲ್ಲರೂ ಚರ್ಚಿನಲ್ಲಿ ಸೆಟ್ಲಾಗಿದ್ದರೋ ಅಥವಾ ಮನೆಯಲ್ಲಿದ್ದರೋ ಗೊತ್ತಿಲ್ಲ. ಇಡೀ ನಗರ ಬಂದ್ ಆದಂತಿತ್ತು. ತಿರುಗಿ ಬಂದಾಗ ಹಸಿವಾಗುತ್ತಿತ್ತು. ಊಟದ ಸಮಯವಾಗಿತ್ತು. ಘಮ ಘಮ ಎಂದು ಎಂ.ಟಿ.ಆರ್ ಅನ್ನ ತಯಾರಾಯಿತು. ಉಂಡು ಮಲಗಿದೆ. ಕುಡಿದು ಮಲಗಿದಂತಹ ನಿದ್ದೆ! ಸಂಜೆ ಎದ್ದೆ. ಚಾಟಿಂಗ್ ಮಾಡುವುದರಿಂದ ಮೌನವ್ರತಕ್ಕೇನು ತೊಂದರೆಯಾಗುವುದಿಲ್ಲ ಎಂದುಕೊಂಡು ಅಳುಕಿನಿಂದಲೇ ಆನ್ ಲೈನ್ ಬಂದು ಹರಟಿದೆ. ರಾತ್ರಿ ಊಟ, ಮತ್ತೆ ಪುಸ್ತಕದೊಂದಿಗೆ ಕೊನೆಗೊಂಡಿತ್ತು ಆ ದಿನ! ಎಷ್ಟು ಸರಳವಾಗಿ ಕಳೆದುಹೋಗಿತ್ತೆಂದರೆ ಈ ದಿನಕ್ಕೆ ನಿಜವಾಗಲೂ ೨೪ ಗಂಟೆಯಿತ್ತಾ ಎಂದು ಆಶ್ಚರ್ಯವಾಗಿತ್ತು.! ಪುಣ್ಯಕ್ಕೆ ಯಾರೂ ನನ್ನನ್ನು ಮಾತಾಡಿಸಿರಲಿಲ್ಲ ಕೂಡ. ಮೌನವ್ರತ ಯಶಸ್ಸು ಕಂಡಿತ್ತು.

ಆದರೂ ಕೂಡ ನನಗೆ ಸ್ಥೂಲಶರೀರದ ಬಾಯಿಮಾತನ್ನಷ್ಟೇ ನಿಲ್ಲಿಸಲು ಸಾಧ್ಯವಾಗಿದ್ದು. ಮನಸು ಮಾತ್ರ ಮಾತಾಡುತ್ತಲೇ ಇತ್ತು. ನೂರಾರು ಯೋಚನೆಗಳು ತಲೆಯಲ್ಲಿ ಗಿರಕಿ ಹೊಡೆಯುತ್ತಲೇ ಇದ್ದವು. ಈ ಮನಸಿನ ಮಾತುಗಳನ್ನು ನಿಲ್ಲಿಸಲು ಸಾಧ್ಯವಾದಾಗ ಸೂಕ್ಷ್ಮಶರೀರದ ಜಾಗೃತಿ ಸಾಧ್ಯವಂತೆ. ಇದರ ಬಗ್ಗೆ ಇನ್ನೂ ತಿಳಿದುಕೊಳ್ಳಬೇಕಿದೆ. ಈ ವಿಷಯವಾಗಿ ಮತ್ತು ಮೌನವ್ರತದ ವಿಧಿವಿಧಾನಗಳ ಬಗ್ಗೆ, ನಿಯಮಗಳ ಬಗ್ಗೆ, ಪ್ರಯೋಜನಗಳ ಬಗ್ಗೆಯೂ ತಿಳಿದುಕೊಳ್ಳಬೇಕಿದೆ. ಬಲ್ಲವರಿಂದ ಮಾಹಿತಿ, ಮಾರ್ಗದರ್ಶನ ಅಪೇಕ್ಷಿಸುತ್ತಿದ್ದೇನೆ. ಈ ಬ್ಲಾಗ್ ಓದಿದವರಲ್ಲಿ ಯಾರಿಗಾದರೂ ಮೌನವ್ರತದ ಅಭ್ಯಾಸ, ಆಸಕ್ತಿ, ಮಾಹಿತಿ ಇದ್ದರೆ ದಯವಿಟ್ಟು ಇಲ್ಲಿ ಕಮೆಂಟಿನಲ್ಲಾದರೂ ಅಥವಾ ವೈಯಕ್ತಿಕವಾಗಿ ಇ ಮೇಲ್ ಮಾಡಿ ತಿಳಿಸಿ ಎಂದು ಕೋರುತ್ತಿದ್ದೇನೆ.

****************************************************************

ಎಲ್ಲರಿಗೂ ೨೦೦೯ ಹೊಸ ವರುಷದ ಶುಭ ಹಾರೈಕೆಗಳೊಂದಿಗೆ ೨೦೦೮ ರ ಬ್ಲಾಗ್ ಕ್ಯಾಲೆಂಡರ್ ಮಗುಚಿ ಹಾಕುತ್ತಿದ್ದೇನೆ.

****************************************************************

ಗುರುವಾರ, ಡಿಸೆಂಬರ್ 25, 2008

ರುಚಿ ರುಚಿ ಅಡುಗೆಗೆ..



ಏನ್ ಬೇಕೋ ಆರಿಸಿಕೊಳ್ಳಿ..



ಇದ್ನ ತಿಂದ್ರೆ ಏನೂ ತೊಂದ್ರೆ ಇಲ್ಲ ಅನ್ಸಿದ್ರೆ ತಗೊಳ್ಳಿ...



ಇವು ನೋಡಕ್ಕೇ ಇಷ್ಟು ಚೆನ್ನಾಗಿರ್ಬೇಕಾದ್ರೆ ಇನ್ನು ರುಚಿ ಹೆಂಗಿರ್ಬೋದು.. ಮ್ಮ್ಮ್.....
(’ಪರಿಸರಪ್ರೇಮಿ’ಗಳು ಕ್ಷಮಿಸ್ಬೇಕು) :)




ಜೀವಂತ ಸಮುದ್ರ ಹಾವುಗಳು... ಬೇಕಾದ್ರೆ ಹೇಳಿ, ಅಲ್ಲೇ ಕಚ್ ಕಚ್......




ಬಲಗಡೆ ಇರೋದು , ಎಡಗಡೆ ಇರೋದು ಒಳ್ಳೇ ಕಾಂಬಿನೇಶನ್!




ತರತರತರ ಒಂಥರ ಅಲ್ಲ, ನಾನಾತರ ......... ಕಪ್ಪೆಚಿಪ್ಪುಗಳು




ಆಯ್ಕೆಗೆ ಇನ್ನೊಂದಿಷ್ಟು...

********

ನಮ್ ಮಂಗ್ಳೂರು, ಭಟ್ಕಳ, ಕಾರ್ವಾರ್ ಕಡೆಗೂ ಸಿಗುತ್ತಾ ಹಿಂಗೇ ಥರಥರಗಳು? ಹೇಳ್ಬೇಕು ಆ ಕಡೆಯವ್ರು. ನನ್ನಂತಾ ಅರೆಮಲೆನಾಡಿಗರಿಗಂತೂ ಇದು ಅಪರೂಪವೇ. ಅದ್ಕೇ ಖುಷಿಯಾಗಿ ಫೋಟೋ ತೆಗ್ದು ಬ್ಲಾಗ್ನಲ್ಲಿ ಜಮಾಯಿಸಿಬಿಟ್ಟೆ !

ಭಾನುವಾರ, ಡಿಸೆಂಬರ್ 21, 2008

ನಮ್ಮ ತಪ್ಪಿಗೆ ನಾವೇ ನಗುವುದು

ಈ "ನಮ್ಮ ತಪ್ಪಿಗೆ ನಾವೇ ನಗುವುದು" ಮೂರು ರೀತಿ ಕೆಲಸ ಮಾಡುತ್ತದೆ. ಮೊದಲನೆಯದಾಗಿ ಇದು ನಮ್ಮನ್ನು ನಾವೇ ಕ್ಷಮಿಸಿಕೊಳ್ಳಲು ಸಹಾಯಮಾಡುತ್ತದೆ. ಬಹಳಷ್ಟು ಸಲ ನಮ್ಮದೇ ತಪ್ಪಿನಿಂದ ನಮ್ಮ ಮೇಲೆ ನಮಗೇ ಬಹಳ ಬೇಸರವಾಗಿರುತ್ತದೆ. ಆದ್ದರಿಂದ ನಮ್ಮ ತಪ್ಪಿಗೆ ನಾವೇ ನಕ್ಕರೆ ಇಂತಹ ಬೇಸರವನ್ನೂ ತಮಾಷೆಯಾಗಿ ಪರಿವರ್ತಿಸಿ ಇದರಿಂದ ಮುಂದೆ ಆ ತಪ್ಪನ್ನು ಮಾಡದಂತೆ ಕಲಿತಂತಾಗುತ್ತದೆ.

ಎರಡನೆಯದಾಗಿ, ಬೇರೆಯವರ ಮುಂದೆ ನಮ್ಮ ತಪ್ಪನ್ನು ಒಪ್ಪಿಕೊಂಡು ನಾವೇ ನಗುವುದು. ಇದರಿಂದ ಇವನೂ ಕೂಡ ಥೇಟು ನಮ್ಮಂತೆಯೇ ಎಂದು ಎಲ್ಲರಿಗೂ ಅನ್ನಿಸುತ್ತದೆ. ಕೆಲವು ಒಳ್ಳೆಯ ನಾಯಕರು ತಮ್ಮ ತಂಡದೊಂದಿಗೆ ಹೀಗೆ ಮಾಡುತ್ತಾರೆ. ಇದು ತಮ್ಮೊಂದಿಗೆ ಇರುವವರ ಜೊತೆ, ತಮ್ಮೊಂದಿಗೆ ಕೆಲಸ ಮಾಡುವವರ ಜೊತೆಯಲ್ಲಿ ಒಳ್ಳೆಯ ಬಾಂಧವ್ಯ ಬೆಳೆಸಿಕೊಳ್ಳಲು ಸಹಾಯವಾಗುತ್ತದೆ. ಎಷ್ಟೋ ಜನ ತಮ್ಮ ಬಾಸ್ ಗಳು, ನಾಯಕರು ತಮ್ಮ ಕೆಳಗಿನವರಿಗಿಂತ ತಾವೇ ಶ್ರೇಷ್ಠ ಎಂದುಕೊಂಡಿದ್ದಾರೆ ಅಥವಾ ಅವನು ಸಾಮಾನ್ಯ ಜನರಂತೆ ಇರುವುದಿಲ್ಲ ಎಂದು ಅಂದುಕೊಂಡಿರುತ್ತಾರೆ. ಆದರೆ ಅವರ ಮುಂದೆ ನಮ್ಮ ತಪ್ಪಿಗೆ ನಾವೇ ನಗುವುದರಿಂದ ಅವರಿಗೂ ಕೂಡ ತಮ್ಮ ನಾಯಕನೂ ತಮ್ಮಂತೆಯೇ ಅನಿಸುವುದಲ್ಲದೇ ಒಂದು ರೀತಿಯ ಗೌರವ ಭಾವನೆ ಬೆಳೆಯಲೂ ಸಹಾಯವಾಗುತ್ತದೆ. ಇದು ಕೇವಲ ನಾಯಕರಿಷ್ಟೇ ಅಲ್ಲದೇ, ಎಲ್ಲರಿಗೂ ಅನ್ವಯವಾಗುತ್ತದೆ.


ಮೂರನೆಯದಾಗಿ,ಈ ನಮ್ಮ ತಪ್ಪಿಗೆ ನಾವೇ ನಗುವುದರಿಂದ ಇನ್ನೊಂದು ಮುಖ್ಯ ಉಪಯೋಗವಿದೆ. ಅದೇನೆಂದರೆ ಇದು ಬೇರೆಯವರು ನಮ್ಮ ತಪ್ಪನ್ನು ಎತ್ತಿ ತೋರಿಸದಂತೆ ಮಾಡುತ್ತದೆ. ನಮ್ಮ ತಪ್ಪಿಗೆ ನಾವೇ ಮೊದಲು ನಕ್ಕುಬಿಟ್ಟರೆ ಇನ್ನೊಬ್ಬರಿಗೆ ನಮ್ಮ ತಪ್ಪನ್ನು ಆಡಿಕೊಂಡು ನಗಲು ಅವಕಾಶ ಸಿಗುವುದಿಲ್ಲ. ಎಲ್ಲದಕ್ಕಿಂತ ಹೆಚ್ಚಾಗಿ ಬೇರೆಯವರು ನಮ್ಮ ತಪ್ಪನ್ನು ತೋರಿಸಿದಾಗ ಆಗುವ ನೋವಿಗಿಂತ ನಮ್ಮ ತಪ್ಪನ್ನು ನಾವೇ ಕಂಡುಕೊಳ್ಳುವುದು ಸುಲಭ ಹಾಗೂ ಒಳ್ಳೆಯದು. ನಾವು ಒಂದು ತಂಡದಲ್ಲಿ ಕೆಲಸ ಮಾಡುತ್ತಿದ್ದಾಗ ಅಥವಾ ಯಾವುದಾದರೂ ಕೆಲಸದ ಮುಂದಾಳ್ತನ ವಹಿಸಿದ್ದಾಗ ನಮ್ಮಲ್ಲಿ ಪ್ರತಿಯೊಂದರಲ್ಲೂ ತಪ್ಪನ್ನು ಕಂಡು ಹಿಡಿಯುವ, ಅಥವಾ ಅದಕ್ಕಾಗೇ ಸದಾ ಪ್ರಯತ್ನಿಸುವ ಜನ ಇದ್ದೇ ಇರುತ್ತಾರೆ. ಅಂತಹ ಸಂದರ್ಭಗಳಲ್ಲಿ ನಾವು ನಮ್ಮ ತಪ್ಪನ್ನು ಸಮರ್ಥಿಸಿಕೊಳ್ಳಲು ಅಥವಾ ಮುಚ್ಚಿಹಾಕಲು ನೋಡಿದರೆ ಇದು ಇನ್ನೂ ಟೀಕೆಗೆ ಗುರಿಯಾಗಬಹುದು ಮತ್ತು ನಮ್ಮ ವ್ಯಕ್ತಿತ್ವದ ಬಗ್ಗೆ ಬೇರೆಯವರ ಅಭಿಪ್ರಾಯಕ್ಕೆ ಧಕ್ಕೆಯಾಗಬಹುದು. ಆದ್ದರಿಂದ ನಮ್ಮಿಂದ ತಪ್ಪಾದಾಗ ಒಪ್ಪಿಕೊಂಡು ನಕ್ಕುಬಿಡುವುದೊಳ್ಳೆಯದು.

ಅಂದಹಾಗೇ ಈ ರೀತಿ ನಮ್ಮನ್ನು ನಾವೇ ಹಾಸ್ಯ ಮಾಡಿಕೊಳ್ಳುವುದರಿಂದ ನಮಗೆ ತೊಂದರೆ ಏನೂ ಇಲ್ಲ. ಆದರೆ ಇದನ್ನು ಅತಿಯಾದ ರೀತಿಯಲ್ಲಿ ಮಾಡಿ ಜೋಕರ್ ಆಗದಂತೆ ಎಚ್ಚರ ವಹಿಸಬೇಕು. ನಮ್ಮದು ನಿಜವಾಗಿಯೂ ತಪ್ಪಿದೆ ಅಥವಾ ಕೇವಲ ನಮ್ಮಿಂದಲೇ ತಪ್ಪಾಗಿದೆ ಎಂಬ ಸಂದರ್ಭಗಳಲ್ಲಿ ಮಾತ್ರ ಇದನ್ನು ಬಳಸಬೇಕು. ಬೇರೆಯವನ್ನು ಮೆಚ್ಚಿಸಲು ಹೋಗಬಾರದು. ಈ ನಮ್ಮ ತಪ್ಪಿಗೆ ನಾವೇ ನಗುವುದೆನ್ನುವುದು ನಮ್ಮನ್ನು ನಾವೇ ಕೆಳಮಟ್ಟಕ್ಕಿಳಿಸಿಕೊಳ್ಳುವಂತಹುದಾಗಿರಬಾರದು. ಪದೇಪದೇ ತಪ್ಪು ಮಾಡುವುದು ಹೇಗೆ ಸರಿಯಲ್ಲವೋ ಅದೇ ರೀತಿ ನಮ್ಮ ತಪ್ಪನ್ನು ನಾವೇ ಅತೀ ವೈಭವೀಕರಿಸಿ ಪದೇ ಪದೇ ನಕ್ಕು ನಗೆಪಾಟಲಿಗೀಡಾಗುವುದೂ ಸರಿಯಲ್ಲ.


ಕೊನೆಯದಾಗಿ, ಬೇರೆಯವರ ತಪ್ಪನ್ನು ತೋರಿಸಿ ನಗುವಂತದ್ದು. ಇದನ್ನು ಯಾವತ್ತೂ ಮಾಡಬಾರದು. ಬೇರೆಯವರ ತಪ್ಪಿನಿಂದ ನಾವು ಕಲಿಯಲು ಹಾಗು ಎಚ್ಚರ ವಹಿಸಲು ಪ್ರಯತ್ನಿಸಬೇಕು. ಬರೀ ನಮ್ಮ ತಪ್ಪಿನಿಂದ ನಾವು ಕಲಿಯುತ್ತೇವೆ ಎಂದು ಹೊರಟರೆ ಅದು ಖಂಡಿತ ಸಾಧ್ಯವಿಲ್ಲ, ಏಕೆಂದರೆ ಅದಕ್ಕೆ ನಮ್ಮ ಜೀವನವಿಡೀ ಸಾಕಾಗುವುದಿಲ್ಲ. ನಮ್ಮ ತಪ್ಪಿಗೆ ನಾವೇ ನಕ್ಕು ಬೇರೆಯವರೂ ಕೂಡ ತಮ್ಮ ತಪ್ಪಿಗೆ ತಾವೇ ನಗುವಂತೆ ಪ್ರೋತ್ಸಾಹಿಸಬೇಕು. ನಾವು ತಪ್ಪು ಮಾಡಿದಾಗ ಆಡಿಕೊಂಡ ಮನುಷ್ಯನ ತಪ್ಪನ್ನು ನಾವು ಆಡಿಕೊಂಡು ನಗದೇ ಸುಮ್ಮನಿದ್ದರೆ ಅದು ಯಾವ ರೀತಿ ಮನಃಸ್ಥಾಪಗಳಿಗೂ ಕಾರಣವಾಗದೇ ಇರುವುದಲ್ಲದೇ ಮುಂದಿನ ಬಾರಿ ಅದೇ ಮನುಷ್ಯ ನಮ್ಮ ತಪ್ಪನ್ನು ನೋಡುವ ದೃಷ್ಟಿಯೇ ಬೇರೆ ರೀತಿಯದ್ದಾಗಿರುತ್ತದೆ. ಹಾಗೂ ಇದು ಒಬ್ಬರ ತಪ್ಪಿನಿಂದ ಇನ್ನೊಬ್ಬರು ಕಲಿತು, ತಿದ್ದಿಕೊಳ್ಳಲು, ಎಚ್ಚರ ವಹಿಸಲು ಸಹಾಯವಾಗುತ್ತದೆ. ಇದರಿಂದ ಎಲ್ಲರಿಗೂ ಲಾಭ.

ಇಂಗ್ಲೀಷ್ ಮೂಲ: laughing-at-mistakes

****

ತಪ್ಪು ಮಾಡದೇ ಇದ್ದುಬಿಟ್ಟರೆ ಇದ್ಯಾವ ರಗಳೆಯೂ ಇರುವುದಿಲ್ಲ. ಆದರೆ ಅದು ಸಾಧ್ಯವಿಲ್ಲ ಅಂತೀರಾ?. ನಿಜ ನಿಜ.

ಸರ್ವೇ ಜನಾಃ ಸುಖಿನೋ ಭವಂತು
ಸರ್ವೇ ಸಂತು ನಿರಾಮಯ: ........ :) :)

ಶುಕ್ರವಾರ, ಡಿಸೆಂಬರ್ 19, 2008

ಕವಿತೆಗಳು ಮತ್ತು ನಾನು

"Most people ignore most poetry because most poetry ignores most people." - Adrian Mitchell

ಅಪರಾತ್ರಿಯಲ್ಲಿ ಏನೋ ಓದುತ್ತಾ ಕುಳಿತಿರುವಾಗ ಈ ಸಾಲಿಗೆ ಎಡವಿದೆ. ತಮಾಷೆ ಎನಿಸಿತು. ನಿಜವೂ ಅನ್ನಿಸಿತು!

ಈ ಸಾಲು ನನಗೆ ವೈಯಕ್ತಿಕವಾಗಿ ಕವನಗಳ ಮೇಲೆ ಆಸಕ್ತಿ ಕಡಿಮೆ ಇರುವುದಕ್ಕೆ ವಿವರಣೆ ಒದಗಿಸಿತಾ? ಗೊತ್ತಿಲ್ಲ. ಮೊದಲಿಂದಲೂ ನನ್ನನ್ನು ಯಾವುದೇ ರೀತಿಯ ಕವನಗಳೂ ಕೂಡ ಅಷ್ಟಾಗಿ ಸೆಳೆದದ್ದೇ ಇಲ್ಲ. ನನ್ನಂತೆಯೇ ಬಹಳ ಜನಕ್ಕೂ ಕೂಡ ಹಾಗೆಯೇ. ಅದು ಏಕೆ ಹಾಗಿರಬಹುದು ಅಂತ ಮತ್ತೊಮ್ಮೆ ಯೋಚಿಸುವಂತೆ ಮಾಡಿತು ಈ ಸಾಲು.

ಮೂಲತಃ ಈ ಕವನಗಳು ಯಾವುದಾದರೊಂದು ವಿಷಯದ ಬಗ್ಗೆ ಸಂಕೀರ್ಣವಾದ ರೀತಿಯಲ್ಲಿ ಹೇಳಲು ಅತಿಯಾದ ಪ್ರಯತ್ನವನ್ನು ಮಾಡುತ್ತವೆ. ನಿಜವಾಗಿಯೂ ಅದನ್ನು ರಚಿಸಿದವರು ಏನು ಹೇಳಲು ಹೊರಟಿದ್ದಾರೆ ಅಥವಾ ಏನು ಹೇಳುತ್ತಿದ್ದಾರೆ ಎಂದು ತಿಳಿದುಕೊಳ್ಳಲು ಒಂದು ಬೇರೆಯದೇ ತರನಾದ ಮನಃಸ್ಥಿತಿ, ಭಾವ ಬೇಕಾಗುತ್ತದೆ ಅನಿಸುತ್ತದೆ. ಅದು ಗದ್ಯದಂತೆ ಸರಳ, ನೇರ ಹಾಗೂ ಸುಮ್ಮನೇ ಓದಿಬಿಡುವಂತದ್ದಲ್ಲ.

ನನ್ನನ್ನು ಹಿಡಿದಿಟ್ಟ ತೀರ ಕೆಲವು ಕವನಗಳೆಂದರೆ ಹಾಸ್ಯ, ಪ್ರಾಸದಿಂದ ಕೂಡಿದಂತವು. ಜೊತೆಗೆ ಕೆಲವೇ ಕೆಲವು ನೇರ ಅರ್ಥ ಕೊಡುವಂತಹ ಕವನಗಳು.

ಇದರರ್ಥ ಬೇರೆ ರೀತಿಯ ಕವನಗಳು ಅಥವಾ ಒಟ್ಟಾರೆ ಕಾವ್ಯ ಎನ್ನುವುದನ್ನು ಹೀನೈಸುವುದಲ್ಲ ಅಥವಾ ಕವಿತೆಗಳೆಂದರೆ ಅರ್ಥವಿಲ್ಲದವು ಎಂದಲ್ಲ. ಎಷ್ಟೋ ಪುಟಗಳಲ್ಲಿ ಬರೆಯಬೇಕಾದ ಅಥವಾ ಎಷ್ಟೇ ಪುಟಗಳಲ್ಲೂ ಸಹ ಬರೆಯಲಾಗದ ಭಾವನೆಗಳನ್ನು, ವಿಷಯಗಳನ್ನು ಅದಕ್ಕಿಂತ ಪರಿಣಾಮಕಾರಿಯಾಗಿ ಪುಟ್ಟ ಪುಟ್ಟ ಕೆಲವು ಸಾಲುಗಳಲ್ಲೇ ಮೂಡಿಸಿಬಿಡುವಂತಹದೇ ಈ ಕವನಗಳು. ಇಂತಹ ಕಲೆಯುಳ್ಳ, ಪ್ರತಿಭೆಯುಳ್ಳ ಹಲವಾರು ಜನರು ನಮ್ಮ ನಡುವೆ ಇದ್ದರು, ಇದ್ದಾರೆ ಎಂಬುದು ನಿಜ. ಆದರೆ in general ಆಗಿ ಇದೆಲ್ಲುದರ ಸಾರಾಂಶವನ್ನು ಮೊದಲು ಹೇಳಿದ ವಾಕ್ಯವು ಬಿಂಬಿಸುವಂತೆ ನನಗೆ ಅನಿಸಿದ್ದು ಮತ್ತದೇ ಆಸಕ್ತಿಯ ಕೊರತೆಯ ನೆಪವಿರಬಹುದು. :)

Cheers!

ಅಣ್ಣನ ಅನಿಸಿಕೆ ನನ್ನ ಅನಿಸಿಕೆ ಕೂಡ: Subject  from Mahesh Hegade's Blog - 'Poetry'

ಶುಕ್ರವಾರ, ಡಿಸೆಂಬರ್ 12, 2008

ಇಂಡಿಯಾ, ಇಟಲಿ, ಇತ್ಯಾದಿ....

ಮುಂಬೈ ಘಟನೆ ಅನಂತರ ಬ್ಲಾಗ್ ಲೋಕವೂ ಯಾಕೋ ಥಂಡಾ ಹೊಡೆದಂತಿದೆ. ಬಹುಶ: ಯಾರಿಗೂ ತಮಾಷೆ ಮಾಡಲು ಮನಸ್ಸಿಲ್ಲ, ಸೀರಿಯಸ್ಸ್ ಬರೆದರೆ ಪ್ರಯೋಜನವಿಲ್ಲ ಎಂಬಂತಾಗಿರಬಹುದು. ಅಥವಾ ನನಗೆ ಹಾಗನಿಸುತ್ತಿದೆಯೆನೋ! ಇರಲಿ.

************
ಬೇಡವೆಂದರೂ ಮತ್ತದೇ ಭಯೋತ್ಪಾದನೆ ವಿಷಯಕ್ಕೆ ಬರಬೇಕಾದ ಅನಿವಾರ್ಯತೆ ಇದೆ. ೩ ದಿನಗಳ ಹಿಂದೆ ಇಟಲಿಯ ಆಫೀಸಿಗೆ ಬಂದಾಗ ನಾನು ನಿರೀಕ್ಷಿಸಿದಂತೆಯೇ ಆಯಿತು. ನಮ್ಮ ಭಾರತದ ಮಾಧ್ಯಮಗಳು ಅಂತಾರಾಷ್ಟ್ರೀಯ ಸುದ್ದಿ ಎಂಬ ಹೆಸರಿನಲ್ಲಿ "ಅಮೆರಿಕಾದ ನಟಿ ಜಾರಿ ಬಿದ್ದಳು","ಫ್ರೆಂಚ್ ನಟಿಗೆ ಹಲ್ಲು ನೋವು", "ಇಂಗ್ಲೀಷ್ ನಟಿ ಅವನ ಜೊತೆ ಮಲಗಿದ್ದಳು" ಎಂಬ ಚಿಲ್ಲರೆ ಸುದ್ದಿಗಳನ್ನು ಕಾಲು, ಅರ್ಧ ಪುಟ ಪ್ರಕಟಿಸಿ ಕೃತಾರ್ಥರಾಗುತ್ತವೆ. ಇಲ್ಲಿನ ಮಾಧ್ಯಮಗಳು ಹಾಗಲ್ಲ. ಸಾಮಾನ್ಯವಾಗಿ ಏಷಿಯಾದ ಸುದ್ದಿಯನ್ನು, ಭಾರತದ ಸುದ್ದಿಯನ್ನು ಸುಮ್ಮಸುಮ್ಮನೇ ಪ್ರಕಟಿಸುವುದಿಲ್ಲ. ಏನಾದರೂ ಅತಿಮುಖ್ಯ ಘಟನೆಗಳನ್ನು ಮಾತ್ರ ವರದಿ ಮಾಡುತ್ತವೆ. ನಮ್ಮ ಮಾಧ್ಯಮಗಳಂತೆ ವಿದೇಶ ಎಂದರೆ ಅದ್ಭುತ, ಶ್ರೇಷ್ಠ ಎಂದು ಮೊದಲಿನಿಂದಲೂ ಸೂರ್ಯಚಂದ್ರನಕ್ಷತ್ರ ತೋರಿಸಿ ನಮ್ಮ ಜನರನ್ನ, ಮುಂದಿನ ಪೀಳಿಗೆಗಳನ್ನು ಎಲ್ಲದಕ್ಕೂ ವಿದೇಶಗಳೆಡೆಗೆ ಮುಖ ಮಾಡುವಂತೆ ಮಾಡುವುದಿಲ್ಲ. ಆದರೆ ಬಹುಶಃ ಈ ಬಾರಿ ಮುಂಬೈ ಘಟನೆ ಮಾತ್ರ ವಿಶ್ವದ ಎಲ್ಲಾ ದೇಶಗಳ ಮಾಧ್ಯಮಗಳಲ್ಲೂ ಕೊನೇಪಕ್ಷ ಒಂದುದಿನ ಹೆಡ್ ಲೈನ್ಸ್ ಆಗಿದೆ. ಇಟಲಿಯ ಸಮುದ್ರ ತುದಿಯಲ್ಲಿರುವ ಇಲ್ಲಿನ ಜನರಿಗೆ ಭಾರತದ ಬಗ್ಗೆ ಅಷ್ಟೇನೂ ಪರಿಚಯ ಇಲ್ಲ. ದೊಡ್ಡ ದೇಶವಾದ್ದರಿಂದ ಅಂತದ್ದೊಂದು ದೇಶವಿದೆಯೆಂದು ಗೊತ್ತು ಹಾಗೂ ಇತ್ತೀಚೆಗೆ ಭಾರತಕ್ಕೆ ಔಟ್ ಸೋರ್ಸಿಂಗ್ ಒಡನಾಟದಿಂದ ಸ್ವಲ್ಪ ಆಸಕ್ತಿಯೂ ಇದೆ.

ನನಗೆ ಇಲ್ಲಿನವರು ಮೊದಲು ಕೇಳಿದ್ದೇ ಮುಂಬೈ ವಿಷಯ. ಇದೇ ಕಾರಣಕ್ಕಾಗಿ ಕೂಡ ನನ್ನ ವೀಸಾ ತಡವಾಗಿದ್ದರಿಂದ ಎಲ್ಲರಿಗೂ ಮುಂಬೈ ಘಟನೆಯ ಅರಿವಿತ್ತು. ನಿಮ್ಮಲ್ಲಿ ಹೊರಗಿನವರು ಬಂದು ಧಾಳಿ ಮಾಡುವಷ್ಟು ನಿಮ್ಮ ಭದ್ರತೆ ವೀಕಾಗಿದೆಯಾ? ಪಕ್ಕದ ಪಾಕಿಸ್ತಾನದಲ್ಲೇ ಇದಕ್ಕೆ ತರಬೇತಿ ನಡೆಯುತ್ತಿದೆ ಎಂದು ನಿಮಗೆ ಖಾತ್ರಿಯಾಗಿ ಗೊತ್ತಿದ್ದರೂ ಅಷ್ಟು ದೊಡ್ಡ ದೇಶವಾಗಿ ಆ ಸಣ್ಣ ದೇಶವನ್ನು ಗದರಿ ಸುಮ್ಮನಿರಿಸಲು ಯಾಕೆ ಸಾಧ್ಯವಾಗಿಲ್ಲ? ನಿಮ್ಮಲ್ಲಿ ಪದೇ ಪದೇ ಇಂತದ್ದು ನೆಡೆಯುತ್ತಿದ್ದರೂ ನಿಮ್ಮ ಸರ್ಕಾರಗಳೇಕೆ ಹೀಗೆ ಸುಮ್ಮನಿವೆ ? ಎಂಬ ಮುಂತಾದ ಪ್ರಶ್ನೆಗಳಿಗೆ ನಾನು ಉತ್ತರಿಸಲು ತಡಬಡಾಯಿಸಿ ಹೋದೆ. ನಮ್ಮಲ್ಲಿ ಸರ್ಕಾರಗಳಿಗೆ ದೇಶದ ಭದ್ರತೆಗಿಂತ ಅಧಿಕಾರ ಮುಖ್ಯವಾದದ್ದು, ಓಟ್ ಬ್ಯಾಂಕ್ ರಾಜಕಾರಣವಿದೆ, ಅತಿರೇಕದ ಪ್ರಜಾಪ್ರಭುತ್ವವಿದೆ, ಜಾತಿ/ಅಲ್ಪಸಂಖ್ಯಾತ/ಮೀಸಲಾತಿ/ಉದ್ಧಾರದ ಹೆಸರಿನಲ್ಲಿ ಸಮಾಜ ಒಡೆಯುವ ನಮ್ಮ ರಾಜಕಾರಣಿಗಳು ಹೀಗೆ, ನಮ್ಮ ಜನರು ಹೀಗೆ, ನಮ್ಮ ಮಾಧ್ಯಮಗಳು/ಪತ್ರಿಕೆಗಳು ಹೀಗೆ, ನಮಗೆ ಹೊರಗಿನ ಶತ್ರುಗಳಿಗಿಂತ ಒಳಗಿನ ಶತ್ರುಗಳೇ ಹೆಚ್ಚು ಎಂದು ಇವರಿಗೆ ಹೇಗೆ ಹೇಳಲಿ, ಹೇಳಿ ನಮ್ಮ ಮರ್ಯಾದೆ ನಾನೇ ಹೇಗೆ ಕಳೆದುಕೊಳ್ಳಲಿ! ಗೊತ್ತಾಗುತ್ತಿಲ್ಲ. :(

*****************************************************




ಈ ಮೇಲಿನ ಚಿತ್ರ ರೋಮಾ ನಗರದ ’ಫಾಂಟನಾ ಡಿ ಟ್ರೇವಿ’(Trevi Fountain) ಎಂಬ ಜಾಗದಲ್ಲಿರುವ ಚರ್ಚೊಂದರ ಗೇಟಿನದ್ದು. ಇಲ್ಲಿ ಹಾಕಿರುವ ಬೀಗಗಳು ಮಾರಾಟದ್ದಲ್ಲ. ಬದಲಾಗಿ ’ನಂಬಿಕೆ’ಯದ್ದು. ಪ್ರೇಮಿಗಳು ಅದರ ಮೇಲೆ ತಮ್ಮ ಹೆಸರು ಬರೆದು ಆ ಚರ್ಚಿನ ಗೇಟಿಗೆ ಹಾಕಿಹೋದರೆ ತಮ್ಮ ಬಂಧ ಶಾಶ್ವತವಾಗಿರುತ್ತದೆ ಎಂದು ನಂಬಿಕೆಯಂತೆ ಇಲ್ಲಿ. ಈ ಪ್ರೇಮಿಗಳ ಸಹವಾಸ ಅಲ್ಲ ಬಿಡಿ :). ನಮ್ಮಕಡೆ ಕೆಲವು ಊರುಗಳ ದೇವಸ್ಥಾನಗಳಲ್ಲಿ ಹೀಗೆ ನಿಂಬೆಹಣ್ಣಿನಿಂದ ಹಿಡಿದು ಚಪ್ಪಲಿಯವರೆಗೆ ಏನೇನನ್ನೋ ಕಟ್ಟುವ ರೂಢಿ/ನಂಬಿಕೆಯಂತೆಯೇ ಇದು ಕೂಡ. ಹಾಗೆಯೇ ಇಲ್ಲಿರುವ ಕಾರಂಜಿಗೆ ಬೆನ್ನು ಮಾಡಿ ನಿಂತು ಬಲಗೈಯಲ್ಲಿ ಎಡಭುಜದ ಮೇಲಿಂದ ನಾಣ್ಯವೊಂದನ್ನು ನೀರಿಗೆ ಎಸೆದರೆ ಮತ್ತೆ ಹೆಂಡ್ತಿ ಮಕ್ಕಳ ಜೊತೆ ರೋಮ್ ನಗರಕ್ಕೆ ಬರುವ ಅವಕಾಶ ಸಿಗುತ್ತದಂತೆ! ಮೂಢನಂಬಿಕೆಯೆಂಬುದು ಬರೀ ಭಾರತಕ್ಕೆ ಸೀಮಿತವಾಗಿಲ್ಲ ಅಲ್ವಾ? :)

****************************************************


ಹಾಗೇ ಈ ನಾಪೋಲಿ ಊರಿನ ನಾನು ಬರೆದ ಹಿಂದಿನ ಬರಹವನ್ನು ಓದಿದ ನನ್ನ ಗೆಳೆಯನೊಬ್ಬ ನನ್ನ ಮೇಲೆ ಮುರಕೊಂಡು ಬಿದ್ದ. ಎಲ್ಲಿಗಾದರೂ ಹೋದಾಗ ಏನೇನು ಒಳ್ಳೆಯದಿದೆಯೋ ಅದರ ಬಗ್ಗೆ ಜಾಸ್ತಿ ತಿಳಿಸಿಕೊಡಬೇಕು. ಬೇರೆ ದೇಶಕ್ಕೆ ಹೋಗಿದ್ದನ್ನು ಬೇರೆ ಗ್ರಹಕ್ಕೆ ಹೋದಂತೆ ಬರೆದದ್ದು ಮಾತ್ರವಲ್ಲದೇ ಹೆಚ್ಚು ನೆಗೆಟಿವ್ ವಿಷಯಗಳನ್ನೇ ಬರೆದು ನೀನೂ ಒಂದು ರೀತಿ ಮರಿ ’ವೈಟ್ ಟೈಗರ್’ ಆಗಿದ್ದೀಯ ನೋಡು ಎಂದು ಬೈದಿದ್ದ. ಎಲ್ಲಾ ಕಡೆಯಲ್ಲೂ ಕಲಾಸಿಪಾಳ್ಯವೂ ಇರುತ್ತದೆ ರಾಜ್ ಮಹಲ್ ವಿಲಾಸ್ ಕೂಡ ಇರುತ್ತದೆ. ಮೆಜೆಸ್ಟಿಕ್ ತೋರಿಸಿ ಇದೇ ಬೆಂಗಳೂರು ಅನ್ನುವುದು ತಪ್ಪು ಎಂದಿದ್ದ. ಅದಕ್ಕೋಸ್ಕರವಾಗಿಯೇ ತಪ್ಪುಕಾಣಿಕೆಯಾಗಿ ಸದ್ಯದ ನಮ್ಮೂರು ’ನಾಪೋಲಿ’ಯ ಕೆಲವು ಚಿತ್ರಗಳನ್ನು ಇಲ್ಲಿ ಹಾಕಿದ್ದೇನೆ. ನೆಟ್ಟಗೆ ಫೋಟೋ ತೆಗೆಯೋಕೂ ಬರಲ್ಲ ಇವನಿಗೆ ಅಂತ ಛಾಯಾಕನ್ನಡಿ ಶಿವು ಅವರು ನಗಬಹುದು. ಇರಲಿ.

*********

ಇತ್ತೀಚೆಗ್ಯಾಕೋ ಬ್ಲಾಗಿನಲ್ಲಿ ಅಕ್ಷರಗಳಿಗಿಂತ ಬರೀ ಚಿತ್ರಗಳೇ ಜಾಸ್ತಿಯಾಗುತ್ತಿವೆ ಅಂತ ಶ್ರೀನಿಧಿ ಗದರೋಕೆ ಮುಂಚೆ ಈ ಅಭ್ಯಾಸ ಕಡಿಮೆ ಮಾಡಿಕೊಳ್ಳಬೇಕು ! :) ಮತ್ತೆ ಸಿಗೋಣ. bye

ಗುರುವಾರ, ಡಿಸೆಂಬರ್ 4, 2008

ರಹಸ್ಯ ಲಿಪಿ !

ಅದು ನಮ್ಮ ತರಗತಿಯಲ್ಲಿ ಸಿಂಧೂ ಬಯಲಿನ ನಾಗರಿಕತೆ ಉಚ್ಛ್ರಾಯ ಸ್ಥಿತಿಯಲ್ಲಿದ್ದ ಕಾಲ ಎಂದೇ ಹೇಳಬಹುದು. ಭೂಗೋಳವನ್ನೂ, ಇತಿಹಾಸವನ್ನೂ ಪಾಠ ಮಾಡುತ್ತಿದ್ದ ನಾರಾಯಣ ಗೌಡ ಮೇಷ್ಟ್ರು ನಮ್ಮನ್ನೂ ಅದೇ ಕಾಲಕ್ಕೆ ಕೊಂಡೊಯ್ದುಬಿಡುತ್ತಿದ್ದರು. ಅದರ ರೋಚಕತೆ ನನ್ನಲ್ಲಿ ಇತಿಹಾಸದ ಬಗ್ಗೆ ವಿಶೇಷ ಆಸಕ್ತಿಯನ್ನು ಹುಟ್ಟುಹಾಕಿತ್ತು. ಹರಪ್ಪಾ, ಮೊಹೆಂಜಾದಾರೋ ಕಾಲದ ಲಿಪಿಗಳನ್ನು ಪುಸ್ತಕದಲ್ಲಿ ಕೊಟ್ಟಿದ್ದರು. ಆ ಲಿಪಿಗಳನ್ನು ಇನ್ನೂ ಯಾರಿಗೂ ಓದಲು ಆಗಿಲ್ಲ ಎಂದು ತಿಳಿದು ಆಶ್ಚರ್ಯವಾಗಿತ್ತು. ಒಮ್ಮೆ ’ಸುಧಾ’ ವಾರಪತ್ರಿಕೆಯಲ್ಲಿ ಇದರ ವಿಷಯವಾಗಿ ಬಂದ ಬರಹವೊಂದನ್ನು ನಾನು ಕತ್ತರಿಸಿ ಇಟ್ಟುಕೊಂಡುದುದನ್ನು ನೋಡಿದ ಅಪ್ಪ ಸಿಂಧೂ ಬಯಲಿನ ನಾಗರಿಕತೆ ವಿಷಯವಾಗಿ ಪುಸ್ತಕವೊಂದನ್ನು ಕೂಡ ತಂದುಕೊಟ್ಟಿದ್ದರು. ಆವಾಗಿನಿಂದ ಹಳೆಯ ಕಾಲದ ನಾಗರಿಕತೆಗಳ ಬಗ್ಗೆ, ಹಳೆಯ ಭಾಷೆ, ಲಿಪಿಗಳ ಬಗ್ಗೆ ವಿಶೇಷ ಕುತೂಹಲ ಬೆಳೆದು ಬಂತು. ಬೇಲೂರು, ಹಳೇಬೀಡು, ಬೆಳಗೊಳ ಮುಂತಾದ ಕಡೆಗಳಲ್ಲಿ ಕಾಣಿಸುವ ಹಳೆಗನ್ನಡ ಶಾಸನ ಬರಹಗಳನ್ನು ಓದುವಂತಾಗಬೇಕು ಎಂಬ ಆಸೆ ಬೆಳೆದಿತ್ತು. ನಮ್ಮ ಊರಿನಲ್ಲಿ ಇರುವ ೧೨ ನೇ ಶತಮಾನದ ಹಳೆಯ ದೇವಸ್ಥಾನಕ್ಕೆ ಹೋದಾಗಲೆಲ್ಲಾ ಅಲ್ಲಿನ ಶಾಸನದಲ್ಲಿರುವ ಹಳೆಗನ್ನಡ ಲಿಪಿಯನ್ನು ನೋಡುತ್ತಾ ನಿಲ್ಲುವುದು, ಅದನ್ನು ಓದುವುದಕ್ಕೆ ಪ್ರಯತ್ನಿಸುವುದು ನೆಡೆದಿತ್ತು. ಅದೇ ಸಮಯಕ್ಕೆ ಸರಿಯಾಗಿ ಮನೆಯ ಹತ್ತಿರ ಏನೋ ಅಗೆಯುವಾಗ ನಾಣ್ಯವೊಂದು ಸಿಕ್ಕಿತ್ತು. ಮಣ್ಣು ಮೆತ್ತಿಕೊಂಡು, ತುಕ್ಕು ಹಿಡಿದ ಕಬ್ಬಿಣದ ಬಿಲ್ಲೆಯಂತಿದ್ದ ಆ ನಾಣ್ಯವು ಪೂರ್ತಿ ಅಸ್ಪಷ್ಟವಾಗಿದ್ದು ಎಷ್ಟೇ ತಿಕ್ಕಿ ತೊಳೆದರೂ ಕೂಡ ಸರಿಯಾಗಿ ಕಾಣಿಸದಂತಿತ್ತು. ಅಪ್ಪನಿಗೆ ಅದನ್ನು ತೋರಿಸಿದಾಗ ಅವರು ನನ್ನ ಉತ್ಸಾಹವನ್ನು ಕಂಡು ಅವರಿಗೆ ಪರಿಚಯವಿದ್ದ ಇತಿಹಾಸದ ಪ್ರಾಧ್ಯಾಪಕರ ಮನೆಗೆ ಒಂದು ದಿನ ಕರೆದುಕೊಂಡು ಹೋಗಿದ್ದರು. ಅವರು ಅದನ್ನು ಪರೀಕ್ಷಿಸಿ ಅವರಲ್ಲಿದ್ದ ದ್ರಾವಣವೊಂದರಿಂದ ಅದನ್ನು ಸ್ವಚ್ಛಮಾಡಿ ನೋಡಿ ಆಶ್ಚರ್ಯದಿಂದ ಇದು ಟಿಪ್ಪೂಸುಲ್ತಾನನ ಕಾಲದ ತಾಮ್ರದ ನಾಣ್ಯ ವೆಂದು ಊಹಿಸಿ, ಅದಕ್ಕೆ ಪೂರಕವಾಗಿ ಅದರಲ್ಲಿ ಪರ್ಷಿಯನ್ ಭಾಷೆಯ ಲಿಪಿಯಿದ್ದದ್ದನ್ನೂ, ಇನ್ನೊಂದು ಬದಿಯಲ್ಲಿ ಆನೆಯ ಚಿತ್ರ ಇದ್ದದ್ದನ್ನೂ ತೋರಿಸಿ ಹುಷಾರಾಗಿ ಇಟ್ಟುಕೊಳ್ಳುವಂತೆ ಹೇಳಿದ್ದರು. ಅಪ್ಪನಿಗೆ ನಾನು ಪದೇ ಪದೇ ಇತಿಹಾಸದ ಬಗ್ಗೆ ಪ್ರಶ್ನೆಗಳನ್ನು ಹಾಕಿ ಕುತೂಹಲ ತೋರಿಸುತ್ತಿದ್ದುದರಿಂದ ನೀನು ದೊಡ್ಡವನಾದಮೇಲೆ ಪ್ರಾಗಿತಿಹಾಸಜ್ಞ ಆಗುವಿಯಂತೆ ಎಂದು ಹುರಿದುಂಬಿಸಿದ್ದರು. ಕರ್ನಾಟಕದ ಕೆಲವೇ ಇತಿಹಾಸಜ್ಞರಲ್ಲಿ ಒಬ್ಬರಾದ ನನ್ನ ಸೋದರಜ್ಜನ ಬಳಿ ಹಳೆಗನ್ನಡ ಓದುವುದನ್ನು ಕಲಿಸಿಕೊಡುವಂತೆ ಕೇಳುವುದಾಗಿ ಕೂಡ ಭರವಸೆ ಕೊಟ್ಟಿದ್ದರು.

ಇದೇ ಸಂದರ್ಭದಲ್ಲಿ ಚಾಲ್ತಿಗೆ ಬಂದಿದ್ದು ’ರಹಸ್ಯ ಲಿಪಿ’! ಕೆಲವೇ ಜನರಿಗೆ ಓದಲು, ಬರೆಯಲು ಬರುವಂತಹ ರಹಸ್ಯ ಲಿಪಿಯೊಂದು ಇವತ್ತಿಗೂ ಕೂಡ ಇದೆಯೆಂದೂ, ಸ್ವಲ್ಪ ಪ್ರಯತ್ನಪಟ್ಟರೆ ದೊರಕಿಸಿಕೊಳ್ಳಬಹುದೆಂದೂ ನಮ್ಮ ಕ್ಲಾಸಿನಲ್ಲಿ ಸುದ್ದಿ ಹಬ್ಬಿತ್ತು. ನನ್ನಂತೆಯೇ ಸ್ವಲ್ಪ ಆಸಕ್ತಿಯುಳ್ಳ ಹುಡುಗರು ಅದರ ಹುಡುಕಾಟದಲ್ಲಿ ತೊಡಗಿ ದಿನಕ್ಕೊಂದು ಸುದ್ದಿ ತೇಲಿಬಿಡುತ್ತಿದ್ದರು. ಸಂದೀಪ ತನಗೆ ತನ್ನ ಅಜ್ಜನ ಮೂಲಕ ಆ ಲಿಪಿ ಗೊತ್ತಿದೆ ಎಂದು ಹೇಳಿಕೊಂಡಿದ್ದ. ವಿಚಿತ್ರವಾದುದನ್ನೇನೋ ಬರೆಯುತ್ತಿದ್ದ. ಆದರೆ ಅದನ್ನು ಯಾರಿಗೂ ಹೇಳಿಕೊಡುವುದು ಸಾಧ್ಯವಿಲ್ಲವೆಂದು ಅವನು ಖಂಡತುಂಡವಾಗಿ ಹೇಳಿದ ಮೇಲೆ ಅವನ ಮನ ಒಲಿಸುವ ಕೆಲಸ ಕೈಬಿಟ್ಟೆವು. ಅದ್ಯಾವುದೋ ಹಳೇ ಅಂಗಡಿಯಲ್ಲಿ ರಹಸ್ಯ ಲಿಪಿಯ ಪುಸ್ತಕವೊಂದು ಸಿಗುವುದೆಂಬ ಖಚಿತ(!) ಮಾಹಿತಿಯ ಬೆನ್ನು ಹಿಡಿದು ಒಂದು ದಿನ ಹೋಗಿಬರುವುದೆಂದೂ ತೀರ್ಮಾನಿಸಿಕೊಂಡು ಆ ಅಂಗಡಿ ಹುಡುಕಿಕೊಂಡು ಅಲೆದು ಸುಸ್ತಾಗಿ ವಾಪಾಸ್ ಬಂದಿದ್ದೆವು. ಬರುಬರುತ್ತಾ ಈ ರಹಸ್ಯ ಲಿಪಿಯ ಸುದ್ದಿ ತಣ್ಣಗಾಗಿ ಎಲ್ಲರೂ ಮರೆತರಾದರೂ ನಾನು ಮತ್ತು ನನ್ನ ಗೆಳೆಯರಾದ ರವಿ, ಶಶಿ ಮೂವರೂ ಸೇರಿ ರಹಸ್ಯ ಲಿಪಿ ಸಿಗದಿದ್ದರೇನಂತೆ, ನಾವೇ ಒಂದು ರಹಸ್ಯ ಲಿಪಿ ರೂಪಿಸಿಕೊಳ್ಳೋಣವೆಂದೂ ಅದರಲ್ಲೇ ಬರೆದು ಎಲ್ಲರಿಗೂ ಆಶ್ಚರ್ಯಗೊಳಿಸೋಣವೆಂದೂ ಯೋಜನೆಹಾಕಿದೆವು. ಅದರಂತೆಯೇ ಕೆಲವು ಪ್ರಯೋಗಗಳನ್ನು ಮಾಡಿ ಸುಮಾರು ದಿನಗಳ ವರೆಗೆ ಯಾವುದೂ ಸರಿಯಾಗದೇ ಅವರಿಬ್ಬರೂ ಮರೆತರು, ನಾನೂ ಹೆಚ್ಚು ಕಡಿಮೆ ಕೈಬಿಟ್ಟಿದ್ದೆ. ಆದರೂ ನನ್ನ ಮನಸ್ಸಿನಿಂದ ಪೂರ್ತಿ ದೂರವಾಗಿರಲಿಲ್ಲ.


ಹೀಗಿದ್ದಾಗ ಒಂದು ದಿನ ಈ ಲಿಪಿಯ ಬಗ್ಗೆ ಯೋಚಿಸುತ್ತಲೇ ಕನ್ನಡ ವರ್ಣಮಾಲೆಯ ಆಧಾರದ ಮೇಲೆ ಚಿನ್ಹೆಗಳ ಮೂಲಕ ಈ ಲಿಪಿಯನ್ನು ರೂಪಿಸಿದರೆ ಹೇಗೆ ಎಂಬ ಉಪಾಯ ಹೊಳೆಯಿತು. ಚಿನ್ಹೆಗಳು ಅಂದರೆ ಏನು ಬಳಸಿಕೊಳ್ಳುವುದು? ಒಂದೊಂದು ಅಕ್ಷರಕ್ಕೂ ಬೇರೆ ಬೇರೆಯ ಚಿನ್ಹೆಗಳನ್ನು ಬಳಸಿದರೆ ನೆನಪಿಟ್ಟುಕೊಳ್ಳುವುದು ಬಹಳ ಕಷ್ಟ. ಚಿನ್ಹೆಗಳನ್ನು ಬರೆಯುವುದೂ, ಓದುವುದೂ ಸುಲಭವಲ್ಲ. ಹಾಗಾಗಿ ಅತಿಸುಲಭವಾಗಿ ಬರೆಯುವಂತಹ ಕಡ್ಡಿ ಮನುಷ್ಯನ ಚಿತ್ರವನ್ನು ಬಳಸಿಕೊಳ್ಳುವುದೆಂದು ತೀರ್ಮಾನಿಸಿದೆ. ಅದೇ ರೀತಿ ಒಂದೊಂದು ಅಕ್ಷರಕ್ಕೂ ಕಡ್ಡಿ ಮನುಷ್ಯನ ಚಿತ್ರದ ಚಿನ್ಹೆ ಬಳಸಿ ನೆನಪಿಟ್ಟುಕೊಳ್ಳಬಹುದಾದಂತಹ ಸಣ್ಣ ಸಣ್ಣ ಬದಲಾವಣೆಗಳ ಮೂಲಕ ರೂಪಿಸಬಹುದು ಎಂಬ ಯೋಚನೆಯ ಮೇರೆಗೆ ರಹಸ್ಯ ಲಿಪಿಯನ್ನು ರಚಿಸಲು ಕುಳಿತೆ. ಮೊದಲು ಅ, ಆ , ಇ, ಈ ಇಂದ ಅಂ, ಅಃ ವರೆಗೂ ಒಂದೊಂದಕ್ಕೂ ಒಂದೊಂದು ಚಿನ್ಹೆಗಳನ್ನು ರೂಪಿಸಿದೆ. ನಂತರ ಕ, ಖ, ಗ, ಘ.. ದಿಂದ ಪ, ಪ, ಬ, ಭ, ಮ ವರೆಗೆ ಇನ್ನೊಂದಿಷ್ಟು, ಯ, ರ,ಲ, ವ ದಿಂದ ಕ್ಷ, ಜ್ಞ ವರೆಗೆ ಮತ್ತೊಂದಿಷ್ಟು ಚಿನ್ಹೆ ರೂಪಿಸಿದೆ. ಎಲ್ಲವೂ ಕೂಡ ಕಡ್ಡಿ ಮನುಷ್ಯನ ಚಿತ್ರದಲ್ಲಿಯೇ ಇತ್ತು. ನಂತರ ಕ,ಕಾ,ಕಿ,ಕೀ ಯಿಂದ ಕಂ, ಕಃ ವರೆಗೆ ಎಲ್ಲಾ ವ್ಯಂಜನಗಳಿಗೆ ಅನ್ವಯವಾಗುವಂತೆ ಪೂರ್ತಿ ವರ್ಣಮಾಲೆಯನ್ನು ನನ್ನ ಕಡ್ಡಿ ಲಿಪಿಗೆ ತರುವುದರಲ್ಲಿ ಯಶಸ್ವಿಯಾದೆ. ಅನಂತರ ಇದನ್ನೇ ಸ್ವಲ್ಪ ಸ್ವಲ್ಪ ಸುಧಾರಿಸುತ್ತ ಹೋಗಿ ಮೂರ್ನಾಲ್ಕು ಪ್ರಯತ್ನಗಳ ನಂತರ ಆರಾಮಾಗಿ ನೆನಪಿಟ್ಟುಕೊಳ್ಳುವಂತಹ, ಸುಲಭವಾಗಿ ಬರೆಯಬಹುದಾದಂತಹ ಲಿಪಿಯೊಂದನ್ನು ನಾನೇ ಹುಟ್ಟು ಹಾಕಿದ್ದು ನೋಡಿ ನನಗೇ ಆಶ್ಚರ್ಯವಾಗಿತ್ತು ! ಅದನ್ನು ನನ್ನ ಪುಟ್ಟ ಡೈರಿಯೊಂದರಲ್ಲಿ ಬರೆದಿಟ್ಟುಕೊಂಡು ಗೌಪ್ಯವಾಗಿರಿಸಿಕೊಂಡಿದ್ದೆ. ಎಷ್ಟೊ ದಿನಗಳವರೆಗೆ ಸುಮ್ಮನೇ ಅದರಲ್ಲಿಯೇ ಏನೇನನ್ನೋ ಬರೆಯುವುದನ್ನು, ಓದುವುದನ್ನೂ ಮಾಡುತ್ತಾ ಖುಷಿಪಡುತ್ತಿದ್ದೆ. ಕ್ರಮೇಣ ಅದರಲ್ಲಿ ಆಸಕ್ತಿ ಕಡಿಮೆಯಾಗುತ್ತಾ ಹೋಗಿ ಕೊನೆಗೆ ಅದರ ಬಳಕೆಯೂ ನಿಂತು ಹೋಯಿತು. ಇಂಗ್ಲೀಷ್ ಎ,ಬಿ,ಸಿ,ಡಿ..ಆಧಾರದ ಮೇಲೆ ರಹಸ್ಯ ಲಿಪಿ ರೂಪಿಸಲು ಸ್ಕೆಚ್ ಹಾಕಿದ್ದು ಅರ್ಧಕ್ಕೇ ನಿಂತುಹೋಗಿತ್ತು.


ಮೊನ್ನೆ ಮನೆಯಲ್ಲಿ ನನ್ನ ಹಳೇ ಸಂಗ್ರಹವನ್ನೆಲ್ಲಾ ತೆಗೆದು ಗುಡ್ಡೆ ಹಾಕಿಕೊಂಡು ಕುಳಿತಿದ್ದಾಗ ಆ ಡೈರಿಯೂ ಕೂಡ ಸಿಕ್ಕಿತು. ಇದನ್ನು ಬ್ಲಾಗ್ ಗೆ ಹಾಕೋಣವೆನಿಸಿತು.

ಈ ಕೆಳಗಿನವು ನಾನೇ ರೂಪಿಸಿದ್ದ ’ರಹಸ್ಯ ಲಿಪಿ’. ಹಾಗೇ ಫೋಟೋ ತೆಗೆದು ಹಾಕಿದ್ದೇನೆ. ದಕ್ಕಿಸಿಕೊಳ್ಳಿ :)



**

**

**

ಮಂಗಳವಾರ, ಡಿಸೆಂಬರ್ 2, 2008

ಶೋಕ-ನಗುಮುಖ

ಎಲ್ಲೆಲ್ಲೂ ಭಯೋತ್ಪಾದನೆಯ ಕರಿ ಮೋಡ ಮುಸುಕಿಕೊಂಡಿರೋ ಈ ಸಂದರ್ಭದಲ್ಲಿ ನಿನ್ನೆ ಆಕಾಶದಲ್ಲಿ ನಗುಮುಖವೊಂದು ಕಂಡಿತ್ತು. ಅದ್ಯಾಕೋ ಅದನ್ನ ಹುಡುಗಿಯ ಹೊಳೆಯುವ ಕಣ್ಣುಗಳಿಗೆ, ಸುಂದರ ನಗುವಿಗೆ ಸುಮ್ಸುಮ್ನೇ ಹೋಲಿಸುವ ಮನಸ್ಸಾಗುತ್ತಿಲ್ಲ. ಶೋಕಸೂಚಕದಂತಿದ್ದ ಕಪ್ಪು ಆಕಾಶದಲ್ಲಿ ಚಂದ್ರ,ಶುಕ್ರ, ಗುರುಗಳ ನೋಟ ನಮ್ಮ ದೇಶಕ್ಕೂ, ಮನಸ್ಸಿಗೂ ಆವರಿಸಿರುವ ಕಪ್ಪುಛಾಯೆಯ ಮಧ್ಯದಲ್ಲೂ ಆಶಾಭಾವನೆಯ ಭಾರತೀಯನ ನಗುಮುಖವನ್ನು ಪ್ರತಿನಿಧಿಸುವಂತೆ ಕಂಡಿತು. ಆದರೆ ಸಂತೃಪ್ತಿಯಿಂದ ಸ್ವಲ್ಪ ಹೊತ್ತು ನೋಡಲು ಮತ್ತದೇ ಕರಿಮೋಡಗಳು ಅಡ್ಡಿಯಾದವು.



ಫೋಟೋಕೃಪೆ: ನನ್ ತಂಗಿ

ಮಂಗಳವಾರ, ನವೆಂಬರ್ 25, 2008

ಇಷ್ಟವಾದದ್ದು-ಕಷ್ಟವಾದದ್ದು

ಪುಸ್ತಕಗಳನ್ನು ಓದುವಾಗ ಅದರಲ್ಲಿ ಕೆಲವು ಬಹಳ ಇಷ್ಟವಾಗುತ್ತವೆ. ಇತ್ತೀಚೆಗೆ ಓದಿದ್ದರಲ್ಲಿ ಒಂದೆರಡು ಪ್ಯಾರಾಗಳನ್ನು ಬಹಳ ಪ್ರಸಕ್ತವೆನಿಸಿದ್ದರಿಂದ ಇಲ್ಲಿ ಹಾಕುತ್ತಿದ್ದೇನೆ.

ಪುಸ್ತಕ: ಶಿವರಾಮ ಕಾರಂತರ ’ಅಪೂರ್ವ ಪಶ್ಚಿಮ’

ಹೊಸ ಶೈಲಿಯೊಂದೇ ಕಲೆಯಾಗಲಾರದು. ಪರದೇಶೀಯರ ಅನುಕರಣೆಯಿಂದ ಮಾತ್ರ ಕಲೆ ಬೆಳೆಯಲಾರದು. ಒಂದೊಂದು ದೇಶಕ್ಕೆ ಒಂದೊಂದು ಪರಂಪರೆಯಿದೆ. ಅದನ್ನು ಕಡಿದುಕೊಂಡವ, ತನ್ನದೇ ಪರಂಪರೆಯನ್ನು ಬಳಸಿ ಯಶಸ್ವಿಯಾಗುವುದು ಕಷ್ಟ. ಅನುಕರಣೆಯೆಂಬುದು ತೀರ ದುರ್ಬಲ ದಾರಿ. ಹೊರಗಿನ ಶೈಲಿಯನ್ನು ತಂದುದರಿಂದ ನಾವು ಹೊಸಬರಾಗಲಾರೆವು. ನಮ್ಮ ದೃಷ್ಟಿ, ಹಂಬಲ, ಚಿತ್ರಿಸುವ ವಿಷಯ, ವಸ್ತು ನಮ್ಮದಾಗಿರಬೇಕು, ನವೀನವಾಗಿರಬೇಕು. ನಮ್ಮದೇ ಆದ ಆವರಣದಲ್ಲಿ ಹುಟ್ಟಿ ಬೆಳೆದಂತೆ ಕಾಣಿಸಬೇಕು.


---------------------------------------

ಪುಸ್ತಕ: ಡಾ. ಕೆ.ಗಣೇಶಯ್ಯನವರ ’ಶಾಲಭಂಜಿಕೆ’

ವಿಜ್ಞಾನದಲ್ಲಿ ಭ್ರಮೆಗಳಿಲ್ಲ ಎನ್ನುವುದೂ ಒಂದು ಭ್ರಮೆ. ಇಡೀ ವಿಜ್ಞಾನವೇ ನಾವು ನಿಜ ಎಂದು ಭ್ರಮಿಸುವುದನ್ನು ಸಾಧಿಸಲು ಹೋಗುವ ಒಂದು ಪ್ರಯತ್ನ. ಅದರಲ್ಲಿ ಸಫಲರಾದರೆ ಅದು ಸತ್ಯವಾಗುತ್ತದೆ ಇಲ್ಲವಾದಲ್ಲಿ ಅದು ಭ್ರಮೆ ಮಾತ್ರ ಎಂದು ಕೈಬಿಡುತ್ತೇವೆ. ಎಷ್ಟೋ ಸಲ ನಾವು ವಿಜ್ಞಾನಿಗಳು ಸತ್ಯವನ್ನು ಕಂಡು ಹಿಡಿದಿದ್ದೇವೆ ಎಂಬ ಭಾವನೆಯಲ್ಲಿ ಬಹಳ ಕಾಲ ಬದುಕುತ್ತೇವೆ. ಬೇರೆಯವರು ಅದು ತಪ್ಪು ಎಂದು ತೋರಿಸಿದಾಗಲೇ ನಾವು ಎಂತಹ ಭ್ರಮೆಯಲ್ಲಿ ಮುಳುಗಿದ್ದೆವು ಎಂದು ತಿಳಿಯುವುದು. ಐನ್ ಸ್ಟೈನ್ ಬರುವವರೆಗೆ, ನ್ಯೂಟನ್ನಿನ ತತ್ವಗಳೆಲ್ಲ ಸತ್ಯ ಎಂದು ನಂಬಿದ್ದ ವಿಜ್ಞಾನಿಗಳು ಕಾಲವನ್ನು ನಿಖರ ಎಂದು ತಿಳಿದಿದ್ದರು. ಆತನ ನಂತರವೇ, ಕಾಲವು ನಿಖರವಲ್ಲ ಅದು ಸುತ್ತಮುತ್ತಲಿನ ಜಗತ್ತಿನ ಸ್ಥಿತಿಯನ್ನವಲಂಬಿಸುತ್ತದೆ ಎಂದು ತಿಳಿದಿದ್ದು, ಹಾಗಾಗಿ ವಿಜ್ಞಾನವೂ ಸಹ ಸತ್ಯ ಮತ್ತು ಭ್ರಮೆಗಳ ಮಧ್ಯದ ತೂಗುಯ್ಯಾಲೆ.


’ಚಾರಿತ್ರಿಕ ಥ್ರಿಲ್ಲರ್’ಗಳು ಎಂಬ ಉಪಶೀರ್ಷಿಕೆಯೊಂದಿಗೆ ಇರುವ ಈ ಪುಸ್ತಕ ಇತ್ತೀಚೆಗೆ ಓದಿದ ಒಳ್ಳೆಯ ಪುಸ್ತಕಗಳಲ್ಲಿ ಒಂದು. ವೈಜ್ಞಾನಿಕ ಹಾಗೂ ಚಾರಿತ್ರಿಕ ಸತ್ಯ ಘಟನೆಗಳು ಕತೆಗಳಾಗಿ ಹೆಣೆಯಲ್ಪಟ್ಟು ರೋಚಕವಾಗಿಯೂ, ಮಾಹಿತಿಪೂರ್ಣವಾಗಿಯೂ ಇದ್ದು ಕತೆಯಲ್ಲಿ ಕುತೂಹಲದ ಜೊತೆಗೆ ಆ ವಿಷಯಗಳ ಬಗ್ಗೆ ಆಸಕ್ತಿಯನ್ನು ಹುಟ್ಟಿಸುವುದರಲ್ಲಿ ಸಫಲವಾಗುತ್ತದೆ. ಖಂಡಿತ ಕೊಂಡು ಓದಿ.


*****************

ನಿನ್ನೆ ಬೆಳಗ್ಗೆ ಎದ್ದಾಗ ರೇಡಿಯೋ ಚಾನಲ್ ಒಂದರಲ್ಲಿ ಜಾಕಿ ಬಹಳ ಸಂಭ್ರಮದಿಂದ ಹೇಳುತ್ತಿದ್ದ. ಇವತ್ತು ರಾಖಿ ಸಾವಂತ್ ರವರ ಹುಟ್ಟುಹಬ್ಬ, ಅವರಿಗೆ ಶುಭಾಶಯಗಳು!! ಒಂದು ತಾಸು ಬಿಟ್ಟು ಕೇಳಿದಾಗಲೂ ಪದೇ ಪದೇ ರಾಖಿ ಸಾವಂತಿಗೆ ಶುಭಾಶಯ ಹೇಳುತ್ತಲೇ ಇದ್ದ. ಅದರ ಅಂಗವಾಗಿ ನಿನ್ನೆಯಿಡೀ ಆ ರೇಡಿಯೋ ಚಾನಲ್ ಸ್ಪರ್ಧೆಯೊಂದನ್ನು ಏರ್ಪಡಿಸಿತ್ತು. ಇವತ್ತು ರಾಖಿ ಸಾವಂತ್, ಮಲ್ಲಿಕಾ ಶೇರಾವತ್ , ಮುಮೈತ್ ಖಾನ್ ಮುಂತಾದ ಬೆತ್ತಲೆ ಐಟಂಗಳ ಹುಟ್ಟುಹಬ್ಬಗಳನ್ನು ಸಂಭ್ರಮದಿಂದ ಆಚರಿಸುವ ಇವು ನಾಳೆ ಶಕೀಲಾಳಿಗೆ ಸನ್ಮಾನ ಮಾಡಿ ನಮ್ಮ ಜನರಿಗೆ ಹಿತೋಪದೇಶ ಕೊಡಿ, career ರೂಪಿಸಿಕೊಳ್ಳಲು ಟಿಪ್ಸ್ ಕೊಡಿ ಎಂದು ತಮ್ಮ ಸ್ಟುಡಿಯೋಗೆ ಕರೆಸಿ ಕೇಳಿಸಿದರೂ ಆಶ್ಚರ್ಯವಿಲ್ಲ. ಎಷ್ಟಂದರೂ ’ಫಟಾಫಟ್ ಜನರೇಷನ್’ ಇನ್ಮುಂದೆ! ಮುಂದೆ ಇವರೇ ಆದರ್ಶ.

stay tuned.....

ಸೋಮವಾರ, ನವೆಂಬರ್ 10, 2008

ರೋಮ್ ರೋಮಾಂಚನ !

ವಾರದ ಕೊನೆಯಲ್ಲಿ ಎರಡು ದಿನ ಬಿಡುವಿದ್ದುದರಿಂದ ಹೋಟೇಲ್ ನಲ್ಲಿ ಕೂತು ಕಾವು ಕೊಡುವುದು ತರವೆಲ್ಲವೆಂದು ಶನಿವಾರ ರೋಮ್ ನಗರಕ್ಕೆ ಹೋಗುವುದೆಂದು ತೀರ್ಮಾನಿಸಿದೆ. ನಾಪೋಲಿಯಿಂದ ರೋಮ್ ೧೯೦ ಕಿ.ಮಿ. ದೂರ. ರೈಲಿನಲ್ಲಿ ಆರಾಮಾಗಿ ಹೋಗಬಹುದೆಂದು ಗೆಳೆಯರು ಹೇಳಿದ್ದರು. ಅಂತೆಯೇ ಹಿಂದಿನ ದಿನ ಶುಕ್ರವಾರ ಇಂಟರ್ನೆಟ್ಟಿನಲ್ಲಿ ರೈಲುಗಳ ವೇಳೆಗಳನ್ನು ನೋಡಿಕೊಂಡೆ. ಒಂದೇ ದಿನದಲ್ಲಿ ರೋಮ್ ನಗರ ಪೂರ್ತಿ ನೋಡುವುದು ಅಸಾಧ್ಯವೆಂದು ತಿಳಿದಿದ್ದರೂ ವೆಬ್ ಸೈಟುಗಳಲ್ಲಿ ಒಂದಷ್ಟು ಮಾಹಿತಿ ತಿಳಿದುಕೊಂಡು ನೋಡಲೇಬೇಕಾದ ಕೆಲವು ಹಾಗೂ ನನ್ನ ಆಸಕ್ತಿಯ ಕೆಲವು ಸ್ಥಳಗಳನ್ನು ಗುರುತಿಸಿಕೊಂಡೆ. ಶನಿವಾರ ಬೆಳಗ್ಗೆ ಇಲ್ಲಿಂದ ಹೊರಟಾಗ ನನ್ನ ಕೈಲಿದ್ದುದ್ದು ವಿಕಿಮ್ಯಾಪಿಯಾದಿಂದ ತೆಗೆದುಕೊಂಡಿದ್ದ ರೋಮ್ ನಗರದದ ನಕಾಶೆ ಮತ್ತು ಅಲ್ಲಿನ ಮೆಟ್ರೋ ರೈಲಿನ ಹಾದಿ ನಕಾಶೆಯ ಪ್ರಿಂಟ್ ಗಳು ಮಾತ್ರ. ಹಿಂದೆ ಗೊತ್ತಿಲ್ಲ ಮುಂದೆ ಗೊತ್ತಿಲ್ಲ ರೋಮ್ ನಂತಹ ನಗರದಲ್ಲಿ ಹೇಗೆ ತಿರುಗುವುದು ಎಂಬ ದುಗುಡವಿತ್ತು.

ಅಂತೆಯೇ ಇಲ್ಲಿಂದ ಹೊರಟು ಎರಡೂ ಕಾಲು ತಾಸಿನಲ್ಲಿ ರೋಮ್ ಸೇರಿಕೊಂಡೆ. ರೈಲ್ವೆ ಸ್ಟೇಷನ್ನಿನಲ್ಲಿ ಇಳಿದವನೇ ಒಂದು ದಿನದ ಪಾಸನ್ನು ಕೊಂಡುಕೊಂಡೆ. ಇಲ್ಲಿ ’ಟಬಾಕಿ’ ಎನ್ನುವ ಸಿಗರೇಟು ಅಂಗಡಿಗಳಲ್ಲಿ ಬಸ್ಸು, ರೈಲು ಮುಂತಾದ ಟಿಕೇಟುಗಳು ಸಿಗುತ್ತವೆ. ಆ ಒಂದು ದಿನದ ಪಾಸಿನಲ್ಲಿ ಮೆಟ್ರೋ ರೈಲು, ಸಿಟಿ ಬಸ್ಸುಗಳಲ್ಲಿ ರಾತ್ರಿ ಹನ್ನೆರಡೂ ವರೆ ವರೆಗೆ ಎಲ್ಲಿಂದ ಎಲ್ಲಿಗೆ ಎಷ್ಟು ಬೇಕಾದರೂ ತಿರುಗಾಡಬಹುದು. ಹೆಜ್ಜೆ ಹೆಜ್ಜೆಗೂ ಹಾಕಿರುವ ಸೂಚನೆಗಳು, ಅಲ್ಲಿನ ವ್ಯವಸ್ಥೆಗಳು, ಅಚ್ಚುಕಟ್ಟುತನದಿಂದಾಗಿ ತಿರುಗಾಡುವುದು ಒಂದಿಷ್ಟೂ ಕಷ್ಟವಾಗಲಿಲ್ಲ. ಯಾರನ್ನೂ ಅದು ಇದು ಕೇಳುವ ಪ್ರಮೇಯವೇ ಬರಲಿಲ್ಲ. ಇಟಾಲಿಯನ್ ಬರದವನೂ, ಇಂಗ್ಲೀಷು ಬರದವನೂ, ಕೊನೆಗೇ ಮಾತೇ ಬರದವನೂ ಕೂಡ ಒಬ್ಬನೇ ಆರಾಮಾಗಿ ತಿರುಗಾಡುವಂತಿದೆ. ಮೆಟ್ರೋ ಟ್ರೈನಿನ ಸ್ಟೇಶನ್ನುಗಳನ್ನು, ನಿಲುಗಡೆಗಳನ್ನು ಪ್ರೇಕ್ಷಣೀಯ ಸ್ಥಳಗಳ ಹತ್ತಿರ ಹತ್ತಿರದಲ್ಲೇ ಮಾಡಿದ್ದಾರೆ. ಅಂತೆಯೇ ನಾನು ಗುರುತುಹಾಕಿಕೊಂಡಿದ್ದ ಸ್ಥಳಗಳನ್ನೆಲ್ಲಾ ಮೆಟ್ರೋ ಟ್ರೈನಿನಲ್ಲಿ ಪ್ರಯಾಣಿಸಿಯೇ ನೋಡಿದೆ.




ರೋಮ್ ನ ಸರಿಯಾದ ಹೆಸರು ’ರೋಮಾ’ ಎಂದು. ಯೋರೋಪಿನ ಇತಿಹಾಸದ ಮತ್ತು ಕ್ರಿಶ್ಚಿಯಾನಿಟಿಯ ಅತಿ ಪ್ರಮುಖ ಸ್ಥಳವಾದ ಈ ರೋಮಾ ನಗರ ಬಹಳ ವಿಸ್ತಾರವಾಗಿರುವ ನಗರ. ಪ್ರಾಚೀನತೆಗೆ ಒಂದಿಷ್ಟೂ ಧಕ್ಕೆಯಾಗದಂತೆ ಆಧುನಿಕವಾಗಿ ಈ ನಗರ ಬೆಳೆದು ನಿಂತಿರುವುದನ್ನು ಕಂಡು ಖುಷಿಯಾಯಿತು. ರೋಮಾ ನಗರದಲ್ಲಿ ಎಲ್ಲಿ ನೋಡಿದರಲ್ಲಿ ಪ್ರಾಚೀನ ಕಟ್ಟಡಗಳೂ, ಅದರ ಅವಶೇಷಗಳೂ, ಕಲಾ ಶಿಲ್ಪಗಳೂ ಕಂಡುಬರುತ್ತವೆ. ಇದುವರೆಗೂ ಎಲ್ಲೆಲ್ಲೋ ಕೇಳಿದ್ದ, ಓದಿದ್ದ ಮೈಕಲ್ಯಾಂಜೆಲೋ, ರಾಫೆಲ್ ಮುಂತಾದ ಅಪ್ರತಿಮ ಕಲಾವಿದರನ್ನು ಭೇಟಿಯಾಗುವ ಅವಕಾಶ ಅವರ ಶಿಲ್ಪಕಲೆ, ಚಿತ್ರಕಲೆಗಳ ಮೂಲಕ ಒದಗಿ ಬಂತು. ಪುಸ್ತಕಗಳಲ್ಲಿ ಓದಿ, ಗ್ಲಾಡಿಯೇಟರ್ ಸಿನೆಮಾ ನೋಡಿ 'ಕೋಲೋಸಿಯಮ್' ಹೇಗಿರಬಹುದು ಎಂದು ಇಷ್ಟುದಿನ ಕಲ್ಪಿಸಿಕೊಂಡದ್ದು ನಿನ್ನೆ ಕಣ್ಣ ಮುಂದೆಯೇ ನಿಂತಿತ್ತು. ಕ್ರಿಶ್ಚಿಯನ್ನರ ಕಾಶಿ ವೆಟಿಕನ್, ಸೇಂಟ್ ಪೀಟರ್ ಚರ್ಚು ನನ್ನ ಜೊತೆಯೇ ಮಳೆಯಲ್ಲಿ ತೋಯುತ್ತಿತ್ತು. ರೋಮನ್ನರ ಕಲೆಯ ಪ್ರತೀಕವಾಗಿರುವ ದೊಡ್ಡ ದೊಡ್ಡ ಕಾರಂಜಿಗಳು ಅಧ್ಭುತ ಶಿಲ್ಪಗಳೊಡನೆ ತಣ್ಣನೆಯ ನೀರನ್ನು ಚಿಮ್ಮಿಸುತ್ತಿದ್ದವು. ರೋಮನ್ನರ ಕಲೆಗಳು ನಮ್ಮಲ್ಲಿರುವಂತೆ ಸೂಕ್ಷ್ಮ ಕಲಾಕುಸುರಿ ಕೆಲಸಗಳಲ್ಲ. ಬದಲಾಗಿ ದೊಡ್ಡ ದೊಡ್ಡ ಆಕಾರದ ಶಿಲ್ಪಗಳು, ಚಿತ್ರಕಲೆಗಳು. ಕ್ರಿಸ್ತಪೂರ್ವದಲ್ಲಿಯೇ ಕಟ್ಟಿದ ವರ್ತುಲಾಕಾರದ ನಾಲ್ಕು ಅಂತಸ್ತುಗಳುಳ್ಳ ಕೊಲೋಸಿಯಮ್ ಎಂಬ ಆಗಿನವರ ವಿನೋದದ ಅಂಗಣದ ಕಲ್ಪನೆ, ವಿನ್ಯಾಸ, ಅದನ್ನು ಕಟ್ಟಿರುವುದೂ ಒಂದು ಪರಮ ಅದ್ಭುತ. ಮ್ಯೂಸಿಯಮ್ಮನ್ನು ನೋಡಲು ಇಡೀ ದಿನ ಸಾಲದು. ನೋಡುತ್ತಾ ನಿಂತರೆ ಒಂದೊಂದು ಶಿಲ್ಪಗಳೂ, ಒಂದೊಂದು ಚಿತ್ರಗಳೂ ಒಂದೊಂದು ಕಥೆ ಹೇಳುತ್ತವೆ. ರೋಮ್ ನೋಡುವವರು ರೋಮನ್ನರ ಇತಿಹಾಸ ಹಾಗೂ ಇತಿಹಾಸ ಪುರುಷರ ಬಗ್ಗೆ ಸ್ವಲ್ಪವಾದರೂ ತಿಳಿದುಕೊಂಡು ಹೋಗುವುದು ಅವಶ್ಯಕ. ಇಲ್ಲದಿದ್ದರೆ ರಾಮಾಯಣ, ಮಹಾಭಾರತ, ಭಾಗವತ ಸ್ವಲ್ಪವೂ ಗೊತ್ತಿಲ್ಲದವನು ನಮ್ಮ ಬೇಲೂರು, ಹಳೇಬೀಡು ನೋಡಿದಂತೆ ಆಗುತ್ತದೆ. ಶನಿವಾರವಾದುದರಿಂದ ಬಹಳ ಜನ ಪ್ರವಾಸಿಗರಿದ್ದರು. ಮಾತಿಗೆ ಸಿಕ್ಕ ಅರ್ಜೆಂಟೈನಾದವಳೊಬ್ಬಳು "ಓಹ್, ಇಂಡಿಯನ್, ನಮಸ್ತೆ" ಎಂದಳು. "ಅಕ್ಕಾ ನಿಂಗ್ ಹೆಂಗೆ ಗೊತ್ತು ಇದು?" ಅಂತ ಕೇಳಿದಾಗ ಸುಮ್ಮನೆ ನಕ್ಕಳು.



ಹೀಗೆ ನೋಡುತ್ತಾ ಸಂಜೆಯಾಗಿತ್ತು. ಒಂದು ಕಾಫಿ ಕುಡಿದು ಸ್ವಲ್ಪ ಕತ್ತಲಾದ ಮೇಲೆ ರೋಮಿನ ರಸ್ತೆಗಳಲ್ಲಿ ಅಲೆದೆ. ಬೆಳಗ್ಗಿಂದ ಅಲೆದು ಕಾಲುಗಳು ಒಂದೇ ಸಮನೆ ಪದ ಹೇಳುತ್ತಿದ್ದವು. ಮತ್ತೊಮ್ಮೆ ರೋಮಾ ನಗರಕ್ಕೆ ಬರಬೇಕು, ಉಳಿದುದ್ದನ್ನೆಲ್ಲ ನೋಡಬೇಕು ಎಂದುಕೊಳ್ಳುತ್ತ ಅನಂತರ ಮತ್ತೆ ರೈಲಿನಲ್ಲಿ ಹೊರಟು ರಾತ್ರಿ ನಮ್ಮ ’ನಾಪೋಲಿ’ಗೆ ಬಂದು ಸೇರಿಕೊಂಡೆ.

********

'ರೋಮಾ'ದ ಕೆಲ ಫೋಟೋಗಳು ಇಲ್ಲಿವೆ.
ಮಾಹಿತಿಗಾಗಿ ಜಾಲತಾಣ.
ವಿಕಿಮ್ಯಾಪಿಯಾ ಕೊಂಡಿ.

ಸೋಮವಾರ, ನವೆಂಬರ್ 3, 2008

'ನಾಪೋಲಿ'ಯಲ್ಲಿ ಆರಾಮಿದ್ದೇನೆ

ನೀರಿ,

ನಾನು ಇಲ್ಲಿ ಆರಾಮಿದ್ದೇನೆ. ನೀನು ಕೂಡ ಆರೋಗ್ಯವೆಂದು ನಂಬಿದ್ದೇನೆ. ಇವತ್ತಿಗೆ ಇಲ್ಲಿಗೆ ಬಂದು ೧೦ ದಿನವಾಯಿತು. ಹಿಂದಿನ ಪತ್ರದಲ್ಲಿ ಬಂದು ತಲುಪಿದ ಸುದ್ದಿಯ ಜೊತೆಗೆ ಹೆಚ್ಚೇನನ್ನೂ ಬರೆಯಲಾಗಿರಲಿಲ್ಲ. ಈಗ ಸಮಯ ಸಿಕ್ಕಿರುವುದರಿಂದ ಬರೆಯುತ್ತಿದ್ದೇನೆ.

ನಾನು ಬಂದಿರುವುದು 'ನೇಪಲ್ಸ್' ಎಂಬ ಊರಿಗೆ ಎಂದು ನಿನಗೆ ತಿಳಿಸಿದ್ದೆ. ಈ ನಗರದ ನಿಜವಾದ ಹೆಸರು 'ನಾಪೋಲಿ' ಎಂದು. ಎಲ್ಲೆಡೆಯಂತೆ ಇಂಗ್ಲೀಷಿನವರು ಈ ಊರಿನ ಹೆಸರನ್ನೂ ಕೂಡ ಕುಲಗೆಡಿಸಿದ್ದಾರೆ. ದಕ್ಷಿಣ ಇಟಲಿಯಲ್ಲಿರುವ ಈ ನಗರ ಹೆಚ್ಚೂ ಕಮ್ಮಿ ನಮ್ಮ ಬೆಂಗಳೂರು ಇದ್ದಂತೆಯೇ ಇದೆ. ಕ್ರಿಸ್ತಪೂರ್ವದ ಇತಿಹಾಸವಿದೆ ಇದಕ್ಕೆ. ಅದಕ್ಕೋಸ್ಕರವೇ ಈಗ ಈ ಊರು ಒಂದು ಆಧುನಿಕ ನಗರದವಾಗಿದ್ದರೂ ಕೂಡ ಬಹಳ ಹಳೇ ಹಳೇ ಕಟ್ಟಡಗಳೂ, ಕೋಟೆ ಕೊತ್ತಲುಗಳೂ, ಅದರ ಪಳಿಯುಳಿಕೆಗಳೂ ಸಾಕಷ್ಟು ಕಾಣುತ್ತವೆ. ಯೂರೋಪಿನ ಇತಿಹಾಸದಲ್ಲಿ ಇದಕ್ಕೆ ರಾಜಕೀಯವಾಗಿ ವಿಶಿಷ್ಠ ಸ್ಥಾನವಿದೆ. ಇದು ಸಮುದ್ರ ತೀರದ ಊರಾದುದರಿಂದ ಇಲ್ಲಿನ ಬಂದರು ಮೊದಲಿನಿಂದಲೂ ಅಂದರೆ ರಾಜರ ಕಾಲದಿಂದಲೂ ಬಹುಮುಖ್ಯ ನೆಲೆಯಾಗಿತ್ತಂತೆ. ಇಲ್ಲಿನ ನಗರದ ಒಳಗಿನ ರಸ್ತೆಗಳು ನಮ್ಮ ಊರುಗಳಂತೆಯೇ ಒತ್ತೊತ್ತಾಗಿವೆ. ಸಣ್ಣ ಸಣ್ಣ ರಸ್ತೆಗಳಿಂದ ಕೂಡಿದೆ. ಉತ್ತರ ಇಟಲಿಯ ನಗರಗಳಷ್ಟು ಅಥವಾ ಯೂರೋಪಿನ ಇತರೆಡೆಗಳಲ್ಲಿರುವಂತೆ ಈ ನಗರ ಶಿಸ್ತಾಗಿಲ್ಲ ಎಂದು ಇಲ್ಲಿನವರೇ ಒಪ್ಪಿಕೊಳ್ಳುತ್ತಾರೆ. ಅದಕ್ಕೆ ಸಾಕ್ಷಿ ಎಂಬಂತೆ ಎಲ್ಲೆಂದರಲ್ಲಿ ಕಸ ಬಿಸಾಕುವುದನ್ನೂ, ಟ್ರಾಫಿಕ್ ನಿಯಮಗಳನ್ನು ಪಾಲಿಸದೇ ಇರುವುದನ್ನೂ, ಕಂಡ ಕಂಡಲ್ಲಿ ಕೂತು ಕುಡಿಯುವುದನ್ನೂ, ಬಾಟಲಿ, ಸಿಗರೇಟು ಬಿಸಾಕುವುದನ್ನೂ, ಸಿಟಿ ಬಸ್ಸುಗಳಲ್ಲಿ, ಗೋಡೆ, ಬೆಂಚುಗಳ ಮೇಲೆಲ್ಲಾ ಗೀಚಿರುವುದನ್ನೂ ಕಾಣಬಹುದು. ಸಿಟಿ ಒಳಗೆ ಪಕ್ಕಾ ಭಾರತದ ವಾತಾವರಣವೇ ಇದೆ. ಜನರಲ್ಲೂ ಕೂಡ ನಾಗರೀಕ ಪ್ರಜ್ಞೆ, ನೈತಿಕ ಪ್ರಜ್ಞೆ ಕಡಿಮೆ ಎಂದೇ ಹೇಳಬಹುದು. ಕೆಲಸದಲ್ಲೂ ಕೂಡ ನಮ್ಮ ತರಹವೇ ಸ್ವಲ್ಪ ಓತ್ಲಾ ಪಾರ್ಟಿಗಳು. ಆದರೂ ನಮ್ಮ ಊರುಗಳಿಗಿಂತ ಸ್ವಲ್ಪ ವ್ಯವಸ್ಥಿತವಾಗಿದೆ. ಸಿಟಿ ಪ್ರದೇಶಗಳನ್ನು ಬಿಟ್ಟು ಸ್ವಲ್ಪ ಹೊರಗೆ ಹೋಗುತ್ತಿದ್ದಂತೇ ವಾತಾವರಣ, ಪರಿಸ್ಥಿತಿ ಚೆನ್ನಾಗಿದೆ. ಟ್ರಾಫಿಕ್ ತೊಂದರೆಯಿಲ್ಲ.:)

ಈಗ ಇಲ್ಲಿ ಚಳಿಗಾಲ ಶುರುವಾಗುತ್ತಿದೆ. ಸದ್ಯಕ್ಕೆ ಅಂತಹ ಚಳಿಯೇನೂ ಇಲ್ಲ. ಇಲ್ಲಿ ಸಸ್ಯಾಹಾರೀ ಆಹಾರವೆಂದರೆ ಬನ್ನು , ಬ್ರೆಡ್ಡು, ಹಣ್ಣು ಹಂಪಲು, ಹಸಿ ಅಥವಾ ಬೇಯಿಸಿ ಮಸಾಲೆ ಹಾಕಿದ ತರಕಾರಿಗಳು, ಹಾಲು, ಮೊಸರು ಇಂಥವಷ್ಟೆ. ಮಾಂಸಾಹಾರವಂತೂ ಚಿತ್ರವಿಚಿತ್ರವಾದುದೆಲ್ಲ ಸಿಗುತ್ತದೆ. ಸಮುದ್ರ ತಟದ ಊರಾದುದರಿಂದ ಏನೇನೋ ಸಮುದ್ರಜೀವಿಗಳನ್ನೂ ಕೂಡ ಆಹಾರವಾಗಿ ಬಳಸುತ್ತಾರೆ. ಶನಿವಾರ ಭಾನುವಾರಗಳಂತೂ ಇಲ್ಲಿ ಕೆಲವು ಕಡೆ ವಿವಿಧ ಮೀನುಗಳು, ಸಮುದ್ರ ಹಾವು, ಆಕ್ಟೋಪಸ್ ತರಹ ಇನ್ನೂ ತರತರಹದ ಸಮುದ್ರ ಜೀವಿಗಳ ಮಾರಾಟ ನೆಡೆಯುತ್ತದೆ. ನಪೋಲಿ ನಗರಕ್ಕೆ ತಾಗಿಕೊಂಡು ಬೀಚ್ ಇಲ್ಲ. ಆದರೆ ಬಂದರು ಇರುವ ಕಡೆ ಕಡಲ ಪಕ್ಕದಲ್ಲೇ ವಿಹರಿಸಲು ಬಹಳ ಸುಂದರವಾದ ರಸ್ತೆಗಳೂ, ತಾಣಗಳೂ ಇವೆ. ಮೈಲುಗಟ್ಟಲೇ ಸಮುದ್ರವನ್ನು ಆನಂದಿಸುತ್ತಾ ಸಾಗಬಹುದು.

ಇಲ್ಲಿ ಇಂಡಿಯನ್ ಹೋಟೆಲ್ಗಳು ಯಾವುವೂ ಇಲ್ಲ. ಬೆಂಗಳೂರಿನ ನನ್ನ ಗೆಳೆಯನೊಬ್ಬ ಹೇಳಿದ ದಾರಿ ಹಿಡಿದು ನಾನು ಪಾಕಿಸ್ತಾನಿ ಹೋಟೆಲ್ ಒಂದಕ್ಕೆ ಹೋಗಿದ್ದೆ. ಅಲ್ಲಿ ರೊಟ್ಟಿ, ಅನ್ನ ಎಲ್ಲ ಸಿಗುವುದೆಂದು ಹೇಳಿದ್ದ. ಅಲ್ಲಿ ಹೋದಾಗ ರೊಟ್ಟಿ, ಅನ್ನವೇನೋ ಸಿಕ್ಕಿತು ಆದರೆ ಜೊತೆಗೆ ವೆಜ್ ಐಟಂಗಳು ಏನೂ ಸಿಗದೇ ನಾನು ಹಾಗೇ ತಡಬಡಾಯಿಸುತ್ತಿರುವಾಗ ಅಲ್ಲಿ ಬಾಂಗ್ಲಾದೇಶದವನೊಬ್ಬ ಪರಿಚಯವಾಯಿತು. ಅವನು ನನ್ನನ್ನು ಇನ್ನೊಂದು ಬಾಂಗ್ಲಾದೇಶಿ ಹೋಟೆಲ್ಲಿಗೆ ಕರೆದುಕೊಂಡು ಹೋದ. ಇಂಡಿಯಾ ಬಾಂಗ್ಲಾ ಫಾಸ್ಟ್ ಪುಡ್ ಎಂದು ಅದರ ಹೆಸರು. ಅವನು ಹೇಳಿದಂತೆಯೇ ಅಲ್ಲಿ ನನಗೆ ಅನ್ನ, ದಾಲ್, ಚಪಾತಿ, ವೆಜೆಟೇಬಲ್ ಸಬ್ಜಿ ಮುಂತಾದವು ದೊರೆತವು. ಸದ್ಯ ಈಗ ರಾತ್ರಿ ಊಟಕ್ಕೆ ಮಾತ್ರ ತೊಂದರೆಯಿಲ್ಲ. ಮಧ್ಯಾಹ್ನ ಮಾತ್ರ ಆಫೀಸಿನಲ್ಲಿ ಅದೇ ಪಾಸ್ತಾ, ಸೊಪ್ಪು ತರಕಾರಿ, ಕಾಳು ಬೀಜ, ಹಣ್ಣು ಹಂಪಲೇ ಗತಿಯಾಗಿದೆ. ಬಗೆ ಬಗೆಯ ಪಿಜ್ಜಾಗಳು, ಕಾಫಿಗಳು ಇಲ್ಲಿ ಸಿಗುತ್ತವೆ. ಪಿಜ್ಜಾ ತಿನ್ನಲು ಹೋಗಿಲ್ಲ ಇನ್ನೂ, ಆದರೆ ದಿನಕ್ಕೊಂದು ತರಹದ ಕಾಫಿಯ ರುಚಿ ನೋಡುತ್ತಿದ್ದೇನೆ.:)


ಅಂದಹಾಗೆ ಹೇಳುವುದು ಮರೆತಿದ್ದೆ. ಈ ನಪೋಲಿ ನಗರದಲ್ಲಿ ಪಾಕಿಸ್ತಾನಿಗಳು ಮತ್ತು ಬಾಂಗ್ಲಾದೇಶೀಯರು ಸುಮಾರು ಜನ ಕಾಣಸಿಗುತ್ತಾರೆ. ಅವರಲ್ಲಿ ಹೆಚ್ಚು ಜನ ರಸ್ತೆ ಬದಿಯಲ್ಲಿ ವಸ್ತುಗಳನ್ನು ಮಾರುವವರು ಮತ್ತು ಬೇರೆ ಬೇರೆ ಕಡೆ ಅಂದರೆ ಬಂದರಿನಲ್ಲಿ, ಬಟ್ಟೆ ಇನ್ನಿತರ ಕಾರ್ಖಾನೆಗಳಲ್ಲಿ ಕೆಲಸ ಮಾಡುತ್ತಿದ್ದಾರೆ. ಹೆಚ್ಚು ಕಮ್ಮಿ ಎಲ್ಲರೂ ಅಕ್ರಮ ವಲಸೆಗಾರರು. ಇಲ್ಲಿಯೇ ತಳವೂರಿರುವ ಕೆಲವರು ಈಗೀಗ ಕಿರಾಣಿ ಅಂಗಡಿಗಳನ್ನೂ, ಹೋಟೆಲ್ ಗಳನ್ನು ತೆಗೆದಿದ್ದಾರೆ. ಭಾರತದವರು ಅಂದರೆ ಬೆಂಗಳೂರು, ಮದ್ರಾಸು, ಗೋವಾ ಕಡೆಯವರೂ ಕೆಲವರು ಇಲ್ಲಿ ಹಡಗಿನಲ್ಲಿ ಕೆಲಸ ಮಾಡುತ್ತಾರಂತೆ. ಆದರೆ ಇಲ್ಲಿಯೇ ಉಳಿದುಕೊಳ್ಳುವವರು ಬಹಳ ಕಡಿಮೆಯಂತೆ. ಏಕೆಂದರೆ ಭಾರತದವರಿಗೆ ಇಲ್ಲಿಗಿಂತ ಭಾರತದ ಊರುಗಳೇ ಚಂದ ಅನಿಸುತ್ತದೆ. ಕೆಲವು ಪಂಜಾಬಿಗಳೂ ಅಲ್ಲಲ್ಲಿ ಅಪರೂಪಕ್ಕೆ ಕಾಣುತ್ತಾರೆ. ಪಾಕಿಸ್ತಾನಿ, ಬಾಂಗ್ಲಾದೇಶಿ ಮುಂತಾದ ಏಷ್ಯಾ ಜನರ ಮೇಲೆ ಇಲ್ಲಿನ ಸ್ಥಳೀಯರು ಸ್ವಲ್ಪ ಅಸಹನೆ ತೋರಿಸುತ್ತಾರೆ. ಏನಾದರೂ ಇಟಲಿಯಲ್ಲಿ ಮುಸ್ಲಿಂ ಉಗ್ರಗಾಮಿಗಳ ಕೈವಾಡದಿಂದ ಬಾಂಬ್ ಸ್ಪೋಟವಾದರೆ ಇಲ್ಲಿರುವ ಏಷ್ಯನ್ನರನ್ನು ಒದ್ದೋಡಿಸುವುದು ಗ್ಯಾರಂಟಿ. ಈ ನಪೋಲಿ ನಗರ ಮೊದಲಿನಿಂದಲೂ ಎಲ್ಲ ರೀತಿಯ ಕಪ್ಪು ದಂಧೆಗಳಿಗೆ ಪ್ರಸಿದ್ಧಿಯಂತೆ. ಕೆಲವೊಂದು ಪ್ರದೇಶಗಳಲ್ಲಿ ಸಂಜೆಯಾದ ಮೇಲೆ ಓಡಾಡುವುದೇ ಅಪಾಯವಂತೆ. ನಾನು ಉಳಿದುಕೊಂಡಿರುವ ಹೋಟೆಲ್ಲು ನಗರದ ಕೇಂದ್ರಭಾಗದಲ್ಲಿರುವ 'ಪಿಯಾಜಾ ಗೆರಿಬಾಲ್ಡಿ'(ಗೆರಿಬಾಲ್ಡಿ ಚೌಕ) ಎಂಬಲ್ಲಿ ಇರುವುದರಿಂದ ಏನೂ ತೊಂದರೆಯಿಲ್ಲ.


ನನ್ನ ಆಫೀಸಿನ ಕೆಲಸಗಳು ಚೆನ್ನಾಗಿ ನೆಡೆಯುತ್ತಿವೆ. ಏನೂ ತೊಂದರೆಯಿಲ್ಲ. ನಮ್ಮ ಆಫೀಸಿನಲ್ಲಿ ಇಬ್ಬರಿಗೆ ಮಾತ್ರ ಇಂಗ್ಲೀಷು ಬರುತ್ತದೆ. ಉಳಿದವರ ಹತ್ತಿರ ಏನಿದ್ದರೂ ಸನ್ನೆಗಳಿಂದಲೇ ಮಾತು :). ಇಲ್ಲಿ ಸಾರ್ವಜನಿಕ ಸೇವೆಯಲ್ಲಿರುವವರು, ಕೆಲವು ಬಿಸಿನೆಸ್ ಮಾಡುವವರು, ತಾಂತ್ರಿಕ ಹುದ್ದೆಯಲ್ಲಿರುವವರಿಗೆ ಕೆಲವರಿಗೆ ಮಾತ್ರ ಇಂಗ್ಲೀಷು ನಿಧಾನಕ್ಕೆ ಮಾತಾಡಿದರೆ ಅರ್ಥವಾಗುತ್ತದೆ ಮತ್ತು ಕೆಲವರು ಇಂಗ್ಲೀಷು ಮಾತನಾಡುತ್ತಾರೆ. ಆದರೆ ಇಟಾಲಿಯನ್ ಭಾಷೆಗೆ ಲ್ಯಾಟಿನ್ ಲಿಪಿಯೇ ಆಗಿರುವುದರಿಂದ ಹೆಸರು ಇತ್ಯಾದಿ ಓದಲು ತೊಂದರೆಯಾಗುವುದಿಲ್ಲ.

ಅಲ್ಲಿಂದ ತಂದಿದ್ದ ಪುಸ್ತಗಳೆಲ್ಲಾ ಸುಮಾರು ಓದಿ ಮುಗಿದವು. ಕಾಕತಾಳೀಯವೊ ಎಂಬಂತೆ ಕಾರಂತರ ’ಅಪೂರ್ವ ಪಶ್ಚಿಮ’ ಎಂಬ ಪುಸ್ತಕವನ್ನೂ ತಂದಿದ್ದೆ. ಅದರಲ್ಲಿ ಕಾರಂತರು ನಪೋಲಿ ಊರಿನಲ್ಲಿ ತಿರುಗಾಡಿ ಬರೆದ ಸ್ವಲ್ಪ ವಿವರಣೆಯಿದೆ. ಆಶ್ಚರ್ಯವೆಂದರೆ ಅವರು ಅದನ್ನು ೧೯೫೪ ರಲ್ಲಿ ಬರೆದಿದ್ದಾದರೂ ಆ ವಿವರಣೆಗೂ ಈಗಿನ ವಾಸ್ತವಕ್ಕೂ ಹೆಚ್ಚು ವ್ಯತ್ಯಾಸವೇನೂ ಇಲ್ಲ! ಇಲ್ಲಿ ಹತ್ತಿರದಲ್ಲೇ ಕೆಲವು ನೋಡುವ ಸ್ಥಳಗಳಿಗೆ ಹೋಗಿದ್ದೆ. ಅದರ ಬಗ್ಗೆ ಮುಂದಿನ ಪತ್ರದಲ್ಲಿ ಬರೆಯುತ್ತೇನೆ.


ಮತ್ತೆಲ್ಲಾ ಕ್ಷೇಮ.

ಇಂತಿ,
ವಿಕಾಸ್

ಶುಕ್ರವಾರ, ಅಕ್ಟೋಬರ್ 10, 2008

ಹೀಗೊಂದು ಕಾರ್ಯಕ್ರಮವೂ ಮತ್ತು ಜನರ ಪ್ರೀತಿಯೂ..

ಬರೆದದ್ದು ತಡವಾಯಿತೆನೋ, ಆದರೂ ಇರಲಿ.

ಅಕ್ಟೋಬರ್ ೫, ಅಂದರೆ ಹಿಂದಿನ ಭಾನುವಾರ ಸಂಜೆ ರವೀಂದ್ರ ಕಲಾಕ್ಷೇತ್ರದಲ್ಲಿ ಸೇರಿದ್ದು ಭರ್ತಿ ಕೆಲಸಾವಿರ ಜನ! ಅದು ತುಂಬಿ ನಂತರ ಹಿಂದಿನ ಸಂಸ ಬಯಲು ರಂಗಮಂದಿರವೂ ತುಳುಕುವ ಹೊತ್ತಿಗೆ ಇನ್ನು ಕಾಲಿಡಲು ಜಾಗವಿಲ್ಲ ಎಂಬಂತಾಗಿತ್ತು. ಈ ಬೆಂಗಳೂರಲ್ಲಿ ಸಾವಿರ ಜನ ಸೇರುವುದು ದೊಡ್ಡ ವಿಷಯವಾ, ಅದರಲ್ಲೇನು ವಿಶೇಷ ಎನ್ನುತ್ತೀರಾ? ನಿಜ,ಇಲ್ಲಿ ಬಿಗ್ ಬಜಾರಲ್ಲಿ ಡಿಸ್ಕೌಂಟ್ ಹಾಕಿದರೂ ಸಾವಿರ ಜನ ಸೇರುತ್ತಾರೆ, ಅಣ್ಣಮ್ಮನ ಜಾತ್ರೆಗೂ ಕನಿಷ್ಠ ಸಾವಿರ ಜನ ಸೇರುತ್ತಾರೆ, ದೇವೇಗೌಡರ ಭಾಷಣಕ್ಕೂ ಸೇರುತ್ತಾರೆ, ಕೊನೆಗೆ ಒದೆ ತಿಂದ ನಾಯಿಮರಿಯಂತೆ ಅರಚುವ ವಿದೇಶಿ ಹಾಡುಗಾರನೊಬ್ಬ ಬಂದರೂ ತೋರು ಬೆರಳು, ಕಿರುಬೆರಳು ಮೇಲೆತ್ತಿಕೊಂಡು ಎಷ್ಟೋ ಸಾವಿರ ಜನ ಸೇರಿಬಿಡುತ್ತಾರೆ. ಆದರೆ ಅವತ್ತು ಕಲಾಕ್ಷೇತ್ರಕ್ಕೆ ಬಂದವರ್ಯಾರನ್ನೂ ಯಾರೂ ಕಾರ್ಯಕ್ರಮಕ್ಕೆ ವೈಯಕ್ತಿಕವಾಗಿ ಕರೆದಿರಲಿಲ್ಲ, ಕರೆತಂದಿರಲಿಲ್ಲ, ಬಂದವರ್ಯಾರೂ ಟಿಕೇಟು ಖರೀದಿಸಿ ಬಂದಿರಲಿಲ್ಲ. ಹೇಗೂ ಮಳೆ ಬಂದಿದೆ, ಜನ ಕಡಿಮೆಯಿರುತ್ತಾರೆ ಎಂದುಕೊಂಡು ಹೋದವರಿಗೆ ಬಾಗಿಲ ಹತ್ತಿರವೂ ಹೋಗಲಿಕ್ಕಾಗಲಿಲ್ಲ!

ಲಾಲ್ ಬಹದ್ದೂರ ಶಾಸ್ತ್ರಿಯವರ ಮಗ ಸುನಿಲ್ ಶಾಸ್ತ್ರಿ ಅವತ್ತಿನ ಮುಖ್ಯ ಅತಿಥಿಗಳಾಗಿದ್ದರು. ರಾಹುಲ್ ಗಾಂಧಿ ಬಂದರೆ ಅವನು ಕೆಮ್ಮಿದ್ದನ್ನೂ, ಸೀನಿದ್ದನ್ನೂ ನೇರಪ್ರಸಾರ ಮಾಡಿ ಬ್ರೇಕಿಂಗ್ ನ್ಯೂಸ್ ಮಾಡುವ ಮಾಧ್ಯಮಗಳ ಕ್ಯಾಮೆರಾಗಳೂವುವೂ ಶಾಸ್ತ್ರಿಯವರ ಬೆನ್ನಿಗೆ ಕಾಣಲಿಲ್ಲ! ಲಾಲ್ ಬಹದ್ದೂರ್ ಶಾಸ್ತ್ರಿಗಳಿಗೆ ಜೈ ಎಂದು ಭಾವೋದ್ರೇಕದಿಂದ ಜನ ಜೈಕಾರ ಹಾಕಿದಾಗ ಸುನಿಲ್ ಶಾಸ್ತ್ರಿಗಳು ಭಾವಪರವಶರಾಗಿ ಕೈ ಮುಗಿದರು.

ವಿಷಯ ಅದಲ್ಲ. ಎಲ್ಲದಕ್ಕಿಂತ ಹೆಚ್ಚಾಗಿ ಇವತ್ತಿನ ದಿನಗಳಲ್ಲಿ ರಾಜಕೀಯ, ಸಿನೆಮಾ, ಕ್ರಿಕೆಟ್ ಮತ್ತು ಧರ್ಮದ ಹಿಂದೆ ಮಾತ್ರ ಜನರಿದ್ದಾರೆ ಎಂಬ ಕಲ್ಪನೆಯನ್ನು ಆ ಕಾರ್ಯಕ್ರಮ ಸುಳ್ಳು ಮಾಡಿತು. ಒಂದು ಪತ್ರಿಕೆಗೂ, ಪತ್ರಿಕೆಯ ಸಂಪಾದಕನಿಗೂ ಆ ಪರಿ ಓದುಗವರ್ಗ, ಅಭಿಮಾನಿ ವರ್ಗವಿರಲು ಸಾಧ್ಯ ಎಂಬುದನ್ನು ಅದು ಸಾಬೀತುಪಡಿಸುವುದರ ಜೊತೆಗೆ ಕನ್ನಡ ಬರವಣಿಗೆಯ ಲೋಕಕ್ಕೆ ಇಷ್ಟು ಅಭಿಮಾನಿಗಳಿದ್ದಾರೆ ಎಂಬುದಕ್ಕೆ ನಿದರ್ಶನವೆಂಬತ್ತಿತ್ತು. ಬಹುಶ: ಇತ್ತೀಚಿನ ದಿನಗಳಲ್ಲಿ ಕರ್ನಾಟಕದಲ್ಲಿ, ಅಷ್ಟೆ ಏಕೆ ಇಡೀ ಭಾರತದಲ್ಲೂ ಕೂಡ ಯಾವ ಬರಹಗಾರನ ಕಾರ್ಯಕ್ರಮವೊಂದಕ್ಕೆ ಹೀಗೆ ಜನ (ಹೆಣ್ಣುಮಕ್ಕಳು ಸೇರಿ) ತಾವಾಗಿಯೇ ಬಂದದ್ದು ಇಲ್ಲವೇನೋ!

ಆತನ ಆತ್ಮಸ್ತುತಿ, ಕ್ರೈಂ ವೈಭವೀಕರಣ, ಇಂಗ್ಲೀಷ್ ವ್ಯಾಮೋಹ , ಪೀತ ಪತ್ರಿಕೋದ್ಯಮದ ವಿವಿಧ ಆರೋಪಗಳು, ಇನ್ನಿತರ ಅಸಡ್ಡಾಳತನಗಳ ನಡುವೆಯೂ ಕನ್ನಡ ಒಂದು ಪೀಳಿಗೆಯನ್ನೇ ಓದಿಗೆ ಹಚ್ಚಿದ, ಓದದೇ ಇದ್ದ ವರ್ಗವನ್ನೂ ಓದಲು ತೊಡಗಿಸಿದ, ಕನ್ನಡಕ್ಕೆ ಕೆಲ ಉತ್ತಮ ಪುಸ್ತಕಗಳನ್ನು ತಂದುಕೊಟ್ಟ, ಸಮತೋಲನ ಕಾಯ್ದುಕೊಂಡ, ಕನ್ನಡ ಓದನ್ನು ಒಂದು fashion ಹಾಗೂ passion ಆಗಿಸಿದ ಆ ’ದೈತ್ಯ’ ಬರಹಗಾರನಿಗೆ, ಆತನ ಬರವಣಿಗೆಗೆ ಪ್ರೀತಿಯಿಂದ ಒಂದು ಧನ್ಯವಾದ ಹೇಳೋಣವೆನಿಸಿತು.

ಅಂದಹಾಗೆ ಇಷ್ಟು ಹೊತ್ತಿಗಾಗಲೇ ಗೊತ್ತಾಗಿರಬಹುದು..

ಆತನ ಹೆಸರು "ರವಿ ಬೆಳಗೆರೆ"

ಅವತ್ತಿದ್ದ ಕಾರ್ಯಕ್ರಮ ’ಹಾಯ್ ಬೆಂಗಳೂರ್’ ಪತ್ರಿಕೆಯ ೧೩ನೇ ಹುಟ್ಟುಹಬ್ಬ!

****

ವೇದಿಕೆಯ ಮೇಲೆ ಸುನಿಲ್ ಶಾಸ್ತ್ರಿ, ಮೀರಾ ಶಾಸ್ತ್ರಿ, ಬೆಳಗೆರೆ ಕೃಷ್ಣಶಾಸ್ತ್ರಿ, ವಿಶ್ವೇಶ್ವರ ಭಟ್ಟರು, ಬಳ್ಳಾರಿ ಧಣಿಗಳ ಜೊತೆಗೆ ಮುತ್ತಪ್ಪ ರೈ ಕೂಡ ಇದ್ದಿದ್ದರೆ ಕಾರ್ಯಕ್ರಮದ ಖದರ್ರೇ ಬೇರೆ ಇರುತ್ತಿತ್ತು ಎಂದು ಕಲ್ಬುರ್ಗಿ ಕಡೆಯಿಂದ ಬಂದವರೊಬ್ಬರು ಸುಮ್ಮನೇ ತಮಾಷೆ ಮಾಡುತ್ತಿದ್ದರು :)

ಬುಧವಾರ, ಅಕ್ಟೋಬರ್ 1, 2008

ಜೈ ಗಣೇಶ



ಡಂಕನಕ್ಕ ಡಕ್ಕ ನಕ್ಕ ಡಕ್ಕ ಡಂಗ್.. ಡಂಕನಕ್ಕ ಡಕ್ಕ ನಕ್ಕ ಡಕ್ಕ ಡಂಗ್..

ಶಬ್ದ ದೂರದಲ್ಲೆಲ್ಲೋ ಕೇಳಿಬರುತ್ತದೆ. ಕಿವಿ ಅರಳುತ್ತದೆ. ಶಬ್ದ ಹತ್ತಿರವಾಗುತ್ತಿದೆ. ಹೊರಗೆ ಬಂದು ನೋಡುತ್ತೇನೆ , ಅರ್ರೆ! ನಮ್ಮನೆ ಹತ್ತಿರಕ್ಕೇ ಬರುತ್ತಿದೆ ಆ ಶಬ್ದ. ಮನಸ್ಸು ಆಯಾಚಿತವಾಗಿ ಕುಣಿಲಾರಂಭಿಸುತ್ತದೆ. ಅದೇನು ತಾಳ, ಅದೇನು ಮೇಳ! ಶಬ್ದ ಹಾಗೇ ತಾರಕಕ್ಕೇರುತ್ತದೆ, ಮತ್ತೆ ಲಯದಲ್ಲಿ ಕೆಳಗಿಳಿಯುತ್ತಾ ಬರುತ್ತದೆ. ಟ್ರಾಕ್ಟರಿನ ಮೇಲೊಂದು ದೊಡ್ಡ ಗಣೇಶ. ಭಾರೀ ಅಲಂಕಾರ, ಜಗಮಗಿಸುವ ದೀಪಗಳು ಹರಿದಾಡುತ್ತಿವೆ. ಅದರ ಮುಂದೆ ಒಂದಿಷ್ಟು ಜನ ತಮಟೆ ಬಾರಿಸುತ್ತಿದ್ದಾರೆ. ಯಾವ ಸಂಗೀತ ಶಾಲೆಯಲ್ಲಿ ಕಲಿತವರಲ್ಲ, ಯಾವ ತರಬೇತಿ ಪಡೆದವರಲ್ಲ. ಮುಂದೆ ಒಂದಿಪ್ಪತ್ತು ಜನ ಕುಣಿಯುತ್ತಿದ್ದಾರೆ, ಮೈ ಮರೆತು.. ಪ್ರಪಂಚ ಮರೆತು. ಆಹ್, ಹೋಗಿ ಜೊತೆಗೊಂದು ಸ್ಟೆಪ್ ಹಾಕಲೇ? ಒಟ್ಟಾರೆ ಹಬ್ಬದ ವಾತಾವರಣವೆಂದರೆ ಇದು.

ಈ ಬೆಂಗಳೂರಲ್ಲಿ ವಿಚಿತ್ರ. ನವಂಬರ್ ನಲ್ಲಿ ಟೆಂಟು ಕಟ್ಟುತ್ತಾ ಇರುತ್ತಾರೆ. "ಅಣ್ಣಾ, ರಾಜ್ಯೋತ್ಸವನಾ?" ಅಂತ ಕೇಳಿದ್ರೆ , "ರಾಜ್ಯೋಸ್ತವ ಅಲ್ಲ ಸಾರ್, ಗಣೇಶ" ಅಂತಾರೆ. ಆ ಟೆಂಟು, ಆ ವಿಚಿತ್ರ ಗಣೇಶ ಮೂರ್ತಿಗಳು, ಆ ಪೂಜೆ, ಆ ಪ್ರಸಾದ, ಆ ಮೈಕು, ಆ ಲೌಡ್ ಸ್ಪೀಕರು, ಆ ಹಾಡು, ಆ ಆರ್ಕೆಸ್ಟ್ರಾ ಯಾವುದೂ ನನ್ನ ಆಸಕ್ತಿ ಕೆರಳಿಸುವುದಿಲ್ಲ. ಸುಮ್ಮನೇ ಕಿರಿಕಿರಿ ಅಂದುಕೊಂಡು ಮುಂದೆ ಹೋಗುತ್ತೇನೆ. ಆದರೆ ಈ ತಮಟೆ ವಿಷಯಕ್ಕೆ ಬಂದಾಗ ಮಾತ್ರ ಎಲ್ಲಾ ಕಿರಿಕಿರಿಗಳೂ ಮರೆತುಹೋಗುತ್ತವೆ. ಪ್ರತಿವರ್ಷ ತಮಟೆ ಶಬ್ದ ಕೇಳಲಾದರೂ ಇವೆಲ್ಲಾ ಕಿರಿಕಿರಿಗಳನ್ನು ಸಹಿಸಿಕೊಳ್ಳಬಹುದು ಎನಿಸಿಬಿಡುತ್ತದೆ. ಗಲ್ಲಿ ಗಲ್ಲಿಯಲ್ಲೂ ಕೂರಿಸಿದ್ದ ಗಣೇಶನನ್ನು ನೋಡುವುದಕ್ಕಿಂದ ಗಣೇಶನನ್ನು ಬಿಡುವುದನ್ನು ನೋಡುವುದು, ಆ ತಮಟೆ ಶಬ್ದ , ಆ ಹೆಜ್ಜೆ ತಪ್ಪಿದ ಕುಣಿತಗಳನ್ನು ಆನಂದಿಸುವುದೇ ಮಜಾ. ಗೆಳೆಯರು ನೀನು ಹರಿಶ್ಚಂದ್ರ ಘಾಟಿನ ಹತ್ತಿರವೆ ಮನೆ ಮಾಡು ಎನ್ನುತ್ತಾರೆ. ರಸ್ತೆಯಲ್ಲಿ ಗಣೇಶ ಹೊರಟನೆಂದರೆ ನೆಡೆಯುತ್ತಿದ್ದ ಕಾಲುಗಳು ಅಲ್ಲೇ ನಿಲ್ಲುತ್ತವೆ, ಓಡುತ್ತಿದ್ದ ಬೈಕಿಗೆ ಸೈಡ್ ಸ್ಟ್ಯಾಂಡು ಬೀಳುತ್ತದೆ. ಸ್ವಲ್ಪ ಹೆಚ್ಚು ಕಮ್ಮಿಯಾಗಿದ್ದರೆ ನಾನು ತಬಲಾ ನುಡಿಸುವುದನ್ನು ಕಲಿಯುವ ಬದಲು ತಮಟೆ ಹೊಡೆಯುವುದನ್ನೇ ಕಲಿತುಬಿಡುತ್ತಿದ್ದನಾ! ಗೊತ್ತಿಲ್ಲ.


ದೇವರಿಂದ ಮನುಷ್ಯನೋ, ಮನುಷ್ಯನಿಂದ ದೇವರೋ ಎಂಬ ಮಾತು ಪಕ್ಕಕ್ಕಿರಲಿ.
ಇದೊಂದು ಕಾರಣಕ್ಕಾಗಿಯೇ ಯಾವ ಕಾರಣವೂ ಇಲ್ಲದೇ ಗಣೇಶನನ್ನು ಪ್ರೀತಿಸದೇ ಇರಲು ನನ್ನಿಂದ ಸಾಧ್ಯವಿಲ್ಲ. ನಾನೇನಿದ್ದರೂ ’ಫುಲ್ ಲೋಕಲ್ಲು’.

ಜೈ ಗಣೇಶ.



ಮೇಲಿನ ಚಿತ್ರದಲ್ಲಿರೋದು ಈ ಸಾರ್ತಿಯ ನಮ್ಮ ಗಲ್ಲಿಯ ಗಣಪ.

ಬುಧವಾರ, ಸೆಪ್ಟೆಂಬರ್ 24, 2008

ಇಂಗ್ಲೀಷ್ ನಲ್ಲಿ ತೇಜಸ್ವಿ ಸಣ್ಣಕಥೆಗಳ ಪುಸ್ತಕ

ಅಮೆರಿಕೆಯಿಂದ ಅವಲೋಕಿಸುವ ಶ್ರೀ ರವಿ ರಂಜ್ ಅವರು ಪೂರ್ಣಚಂದ್ರ ತೇಜಸ್ವಿಯವರ ಸಣ್ಣ ಕಥೆಗಳನ್ನು ಇಂಗ್ಲೀಷಿಗೆ ತಂದಿದ್ದಾರೆ. ಸುಮಾರು ದಿನಗಳ ಹಿಂದೆ ಒಂದೆರಡು ಸ್ಯಾಂಪಲ್ಲುಗಳನ್ನು ತಮ್ಮ ಬ್ಲಾಗ್ ಮೂಲಕ ಓದಿಸಿ ರುಚಿ ತೋರಿಸಿದ್ದ ಅವರು ಈಗ ಆ ಕೆಲಸವನ್ನು ಅಮೆರಿಕದಲ್ಲೇ ಕೂತು ಸದ್ದಿಲ್ಲದೇ ಮಾಡಿಮುಗಿಸಿದ್ದಾರೆ. ಕನ್ನಡ ಸಾಹಿತ್ಯವನ್ನು, ಅದರಲ್ಲೂ ತೇಜಸ್ವಿಯವರ ಅದ್ಭುತ ಸಾಹಿತ್ಯವನ್ನು ಇಂಗ್ಲೀಷ್ ಓದುಗರೆಡೆಗೆ ಮತ್ತು ಜಗತ್ತಿನೆಲ್ಲೆಡೆ ಹರಡಲು ಮಾಡಿರುವ ಅಭಿನಂದನಾರ್ಹ ಕೆಲಸದ ಜೊತೆಗೆ ಮುಂದೆ ಇನ್ನೂ ಇಂತಹ ಹಲವು ಪ್ರಯತ್ನಗಳನ್ನು ಮಾಡುವ ಆಸಕ್ತಿ, ಉತ್ಸಾಹ, ಶಕ್ತಿ ಅವರಲ್ಲಿದೆ.

ಪುಸ್ತಕದ ಹೆಸರು : By the Corner of Indian Western Ghats.

ಸದ್ಯಕ್ಕೆ ಪುಸ್ತಕ http://www.amazon.com/ಈ ಜಾಗದಲ್ಲಿ ಲಭ್ಯವಿದೆ.

ಥ್ಯಾಂಕ್ಯೂ ರವಿ ಸರ್.

ಗುರುವಾರ, ಸೆಪ್ಟೆಂಬರ್ 18, 2008

ಕುಂಕುಮವಿಟ್ಟರೆ ಗೆಟ್ ಔಟ್!

ಕಣ್ಣಿಲ್ಲದವರಿಗೆ ಕಣ್ಣು ಬರತ್ತಂತೆ, ಕಾಲಿಲ್ಲದವರಿಗೆ ಕಾಲು, ದುಡ್ಡಿಲ್ಲದವರಿಗೆ ದುಡ್ಡು, ಅವರು ನೇರ ದೇವರೊಡನೆ ಮಾತಾಡ್ತಾರಂತೆ ಎಂದು ೬ನೇ ತರಗತಿ ಕೋಣೆಯ ತುಂಬಾ ಗುಸುಗುಸು. ’ಅಲ್ಲಿ’ ೪ ದಿನಗಳಿಂದ ನೆಡೆಯುತ್ತಿದೆ. ನಾನು ನಿನ್ನೆ ನೋಡಿಬಂದೆ. ಆಶ್ಚರ್ಯ ಆಯ್ತು ಎಂದರು ಒಂದಿಬ್ಬರು.ನನಗೂ ಹೋಗಿ ನೋಡಬೇಕೆಂಬ ಆಸೆ. ಆದರೆ ಇನ್ನೂ ಸಣ್ಣವನು, ಹೇಗೆ ಹೋಗಲಿ, ಯಾರ ಜೊತೆ ಹೋಗಲಿ ಎಂದು ಪೇಚಿಗಿಟ್ಟಾಗ ಅದೇ ಸ್ಥಿತಿಯಲ್ಲಿದ್ದ ಇನ್ನೆರಡು ಗೆಳೆಯರೂ ಕೂಡಿ ಹೇಗಾದರೂ ಮಾಡಿ ಇವತ್ತು ಹೋಗೋಣ ಎಂದು ತೀರ್ಮಾನಿಸಿಕೊಂಡೆವು. ಸಂಜೆಯ ಹಿಂದಿಕ್ಲಾಸು ಅವತ್ತಿನ ಆ ’ಅದ್ಭುತ’ವನ್ನು ನೋಡಲು ಬಲಿಯಾಗಿತ್ತು.

ದೊಡ್ಡದೊಂದು ಸಭಾಂಗಣ. ಬಹಳ ಜನ ಸೇರಿದ್ದಾರೆ. ಹೇಗೋ ಒಳಗೆ ತೂರಿಕೊಂಡೆವು. ಕಾರ್ಯಕ್ರಮ ಶುರುವಾಯಿತು. ವೇದಿಕೆಯ ಮೇಲೆ ನಾಲ್ಕು ಜನ ವಿದೇಶೀಯರು ಬಂದರು. ಅವರೊಡನೆ ಒಬ್ಬ ಭಾರತೀಯ. ಮಾತು ಶುರುವಾಯಿತು. ಭಾರತೀಯ ಕನ್ನಡದಲ್ಲಿ ವಿದೇಶೀಯರ ಪರಿಚಯ ಮಾಡಿಕೊಡುತ್ತಾ ಇವರು ಅದ್ಯಾವುದೋ ದೇಶದಿಂದ ಬಂದಿದ್ದಾರೆ, ಅವರನ್ನು ದೇವರೇ ಕಳಿಸಿದ್ದಾನೆ ನಮಗೋಸ್ಕರ, ನಮ್ಮ ಉದ್ಧಾರಕ್ಕೋಸ್ಕರ ಎಂದು ಅವರ ಗುಣಗಾನ ಮಾಡಿದ. ಸೇರಿದ್ದ ಜನರೆಲ್ಲರೂ ಅದೇನೋ ಕೂಗಿದರು. ನಮಗೇನೂ ಅರ್ಥವಾಗಲಿಲ್ಲ. ಅನಂತರ ವಿದೇಶೀಯರ ಕೈಗೆ ಮೈಕು ಕೊಡಲಾಯಿತು. ಅವ ಇಂಗ್ಲೀಷಿನಲ್ಲಿ ಏನೋ ಹೇಳಲು ಶುರು ಮಾಡಿದ. ಅದರ ಅನುವಾದವನ್ನು ಕನ್ನಡದಲ್ಲಿ ಮೊದಲು ಮಾತಾಡಿದ ವ್ಯಕ್ತಿ ಮಾಡುತ್ತಿದ್ದ. ಪೂರ್ತಿ ಸಭೆಯಲ್ಲಿ ದಿವ್ಯ ಮೌನ. ನಾವೂ ಉಸಿರು ಬಿಗಿ ಹಿಡಿದು ಕುಳಿತಿದ್ದೆವು.

ಈಗ ಇವರು ದೇವರ ಜೊತೆ ಸಂಪರ್ಕ ಹೊಂದುತ್ತಾರೆ. ನೀವು ಎಲ್ಲರೂ ದೇವರನ್ನು ಪ್ರಾರ್ಥಿಸಿಕೊಳ್ಳಿ. ನಂತರ ಯಾರಿಗೆ ಏನು ತೊಂದರೆ ಇದ್ದರೂ ವೇದಿಕೆಗೆ ಬಂದು ಹೇಳಿಕೊಳ್ಳಬಹುದು ಎಂದರು. ವೇದಿಕೆಯಲ್ಲಿ ಬೆಳಕು ಮಂಕಾಯಿತು. ಆ ನಾಲ್ವರೂ ವಿದೇಶೀಯರಿಂದ ಅದೇನೇನೋ ಹಾವಭಾವ, ಏನೇನೋ ಮಾತುಗಳು.. ಕ್ಷಣ ಕ್ಷಣಕ್ಕೂ ಜನ ಭಾವ ಪರವಶರಾಗುತ್ತಾ ಹೋದರು. ನಮಗೇನೂ ಅರ್ಥವಾಗದಿದ್ದರೂ ಆತಂಕವಾಗುತ್ತಿತ್ತು.

ಅದಾದ ನಂತರ ಜನರ ಕಷ್ಟ ಪರಿಹರಿಸುವ ಕೆಲಸ. ವೇದಿಕೆ ಹಿಂದಿನಿಂದ ಒಬ್ಬನನ್ನು ಕರೆತರಲಾಯಿತು. ಅವನಿಗೆ ಕಣ್ಣು ಕಾಣುತ್ತಿರಲಿಲ್ಲವಂತೆ. ನಿನ್ನೆ ಇದೇ ಕಾರ್ಯಕ್ರಮದಲ್ಲಿ ಅವನಿಗೆ ದೇವರ ಕೃಪೆ ಕೊಡಿಸಿದ್ದರಂತೆ. ಅವನನ್ನು ವಿದೇಶೀಯರು ಏನೋ ಮಾತಾಡಿಸಿದರು. ಮತ್ತೊಬ್ಬ ಕನ್ನಡದಲ್ಲಿ ಅದನ್ನೇ ಕೇಳಿದ. ಈಗ ಕಣ್ಣು ಕಾಣ್ತಾ ಇದೆಯಾ ನಿನಗೆ? ಅವನು ಮಸುಕು ಮಸುಕಾಗಿ ಕಾಣ್ತಾ ಇದೆ ಸ್ವಾಮಿ ಅಂದ.ಆ ವಿದೇಶೀಯರು ಮತ್ತೆ ದೇವರಿನ ಸಂಪರ್ಕಕ್ಕೆ ಹೋದರು. ೨ ನಿಮಿಷಕ್ಕೆ ಮರಳಿ ಬಂದರು. ನಿನಗೆ ಇನ್ನು ಸ್ವಲ್ಪ ದಿನದಲ್ಲಿ ಪೂರ್ತಿ ಕಣ್ಣು ಕಾಣುತ್ತೆ, ದೇವರು ಕೃಪೆ ತೋರಿಸಿದ್ದಾರೆ. ಅವನಿಗೆ ಶರಣು ಹೋಗು ಅಂತ ತಿಳಿಹೇಳಲಾಯಿತು. ವೇದಿಕೆಯಲ್ಲಿದ್ದವರು ಅದೇನೋ ಕೂಗಿದರು. ಜನರೆಲ್ಲರೂ ಜೋರಾಗೀ ಅದನ್ನೇ ಕೂಗಿದರು. ನಂತರ ಕಾಲಿಲ್ಲದವಳು ಬಂದಳು, ಅವಳಿಗೆ ಸ್ವಾಮಿ ಕೃಪೆಯಿಂದ ಕಾಲು ಬಂದಿತ್ತು, ಸೊಂಟ ಬಿದ್ದೋದ ಮುದುಕಪ್ಪನೊಬ್ಬನಿಗೆ ಸೊಂಟ ಬಂದಿತ್ತು, ಬಡವನೊಬ್ಬನಿಗೆ ಹಣ ಸಿಕ್ಕಿತ್ತು, ಇನ್ನೂ ಏನೇನೋ ಪರಮಾಶ್ಚರ್ಯದ ಘಟನೆಗಳು ನಡೆದವು. ಸುಮಾರು ಜನರಿಗೆ ಕುತ್ತಿಗೆಗೆ ಅದೇನೋ ಇದ್ದ ಸರ ತೊಡಿಸಲಾಯಿತು. ದೇವರೊಡನೆ ಸಂಪರ್ಕದಲ್ಲಿದ್ದ ಬಿಳಿಯರು ಅದೆನೇನೋ ಮಾತಾಡುತ್ತಲೇ ಇದ್ದರು, ಇನ್ನೊಬ್ಬ ಕನ್ನಡದಲ್ಲಿ ಹೇಳುತ್ತಲೇ ಇದ್ದ, ಜನ ಭಕ್ತಿಯಿಂದ ಥರಗುಡುತ್ತಲೆ ಇದ್ದರು. ನೀವೆಲ್ಲರೂ ಕೂಡ ದೇವರ ಶರಣು ಬನ್ನಿ, ಸ್ವಾಮಿ ಎಲ್ಲರನ್ನೂ ಕಾಪಾಡುತ್ತಾನೆ, ನಿಮ್ಮ ಸುತ್ತ ಮುತ್ತಲಿನ ಎಲ್ಲಾ ಸೋದರ ಸೋದರಿಯರನ್ನೂ ಸ್ವಾಮಿಯ ಕೃಪೆಗೆ ಪಾತ್ರರನ್ನಾಗಿ ಮಾಡಿ ಎಂದು ಹೇಳಿದರು. ಎಲ್ಲಾ ಆದ ಮೇಲೆ ಏನೋ ಒಂದು ಹಾಡು ಹಾಡಿದರು.. ನಾವು ನಿಧಾನಕ್ಕೆ ಕಳಚಿಕೊಂಡೆವು.

ಮನೆಗೆ ಬಂದು ಯೋಚಿಸುತ್ತಲೇ ಇದ್ದೆ, ಅದು ಹೇಗೆ ಅವರು ದೇವರೊಡನೆ ಸಂಪರ್ಕ ಸಾಧಿಸುತ್ತಾರೆ, ಅದು ಹೇಗೆ ಕೈ, ಕಾಲು ಸರಿಯಾಗಿಬಿಡುತ್ತದೆ, ಕುರುಡು ಕಣ್ಣಿಗೆ ಬೆಳಕು ಬರುತ್ತದೆ, ಅದ್ಯಾಕೆ ವೇದಿಕೆ ಮೇಲೆ ಕೆಲ ಜನರಿಗೆ ಅದೇನೇನೋ ವಿದೇಶಿ ಹೆಸರುಗಳನ್ನಿಡಲಾಯಿತು. ಅಲ್ಲಿರುವ ಜನರ್ಯಾಕೆ ಅದ್ಯಾವುದೋ ಅರ್ಥವಾಗದ ಭಾಷೆಯಲ್ಲಿ ಅದೆನೋ ಜೋರಾಗಿ ಕೂಗುತ್ತಿದ್ದರು? ಏನೊಂದೂ ತಿಳಿಯಲಿಲ್ಲ. ಕದ್ದು ಹೋಗಿದ್ದರಿಂದ ಮನೆಯಲ್ಲಿ ಕೇಳಲೂ ಧೈರ್ಯವಾಗಲಿಲ್ಲ.

*******************

ಮತ್ಯಾವಾಗಲೋ ಕ್ಲಾಸಿನಲ್ಲಿ ಹುಡುಗನೊಬ್ಬ ’ಅವರ’ ದೇವರನ್ನು ಎದ್ವಾ ತದ್ವಾ ಹೊಗಳಿ ಬೈಬಲ್ ಪುಸ್ತಕವೊಂದನ್ನು ಓದಲು ಕೊಟ್ಟಾಗ ಕತೆ ಪುಸ್ತಕದಂತೆ ಅರ್ಥವಾದಷ್ಟು ಓದಿ ವಾಪಸ್ಸು ಕೊಟ್ಟಿದ್ದೆ. ಡ್ರಾಯಿಂಗಿಗೋ, ಕ್ರಾಫ್ಟಿಗೋ ಯಾವುದಕ್ಕೋ ಬರುತ್ತಿದ್ದ ಟೀಚರೊಬ್ಬರು ಕ್ಲಾಸಿನಲ್ಲಿ ಯಾವಾಗಲೂ ಆ ಸ್ವಾಮಿ ನಿಮ್ಮನ್ನು ಕಾಪಾಡ್ತಾನೆ, ನೀವೆಲ್ಲಾ ಅವನನ್ನು ಪ್ರಾರ್ಥಿಸಬೇಕು ಎಂದು "ಶುಭಸಂದೇಶ" ಎಂಬ ಪುಸ್ತಕ ಹಂಚಿದಾಗ ಅದರಲ್ಲಿರುವುದೇನೂ ಗೊತ್ತಾಗದೇ ಬ್ಯಾಗೊಳಗಿಟ್ಟುಕೊಂಡಿದ್ದೆವು.

**********************

ಕೆಲ ವರ್ಷಗಳ ನಂತರ ತಿಳಿಯಿತು. ನಾನು ಆವಾಗ ಹೋಗಿದ್ದ ಆ ಸಭೆಯಲ್ಲಿ ಆ ವಿದೇಶೀಯರು ಸಂಪರ್ಕಿಸಿದ್ದು ಏಸುವನ್ನ, ವೇದಿಕೆ ಮೇಲೆ ಕರೆತರುತ್ತಿದ್ದುದು ಬಡ ಹಿಂದೂಗಳನ್ನ, ಅವರಿಗೆ ತೊಡಿಸುತ್ತಿದ್ದುದು ’ಕ್ರಾಸ್’ ಮತ್ತು ಅಲ್ಲಿ ನೆಡೆಯುತ್ತಿದ್ದ ಕೆಲಸ ಮತಾಂತರ. ಎಲ್ಲರೂ ಎದ್ದು ನಿಂತು ಕೂಗುತ್ತಿದ್ದುದು ’ಅಲ್ಲೆಲೂಯ’....... ’ಆಮೀನ್’ ಎಂದು!


************

ಕೆಲದಿನಗಳಿಂದ ದಕ್ಷಿಣ ಕನ್ನಡ ಜಿಲ್ಲೆ, ಇನ್ನಿತರ ಕಡೆಗಳಲ್ಲಿ ನೆಡೆಯುತ್ತಿರುವ ಘಟನೆಗಳನ್ನೆಲ್ಲಾ ಕೇಳಿ ಇವೆಲ್ಲವನ್ನೂ ಹೇಳಿಕೊಳ್ಳಬೇಕೆನಿಸಿತು. ನಮ್ಮೂರಿನಲ್ಲೂ ಮೊದಮೊದಲು ಒಳಾಂಗಣದಲ್ಲಿ ನೆಡೆಯುತ್ತಿದ್ದ ಇಂತಹ ಮತಾಂತರಗಳು ನಂತರ ಮೈದಾನದಲ್ಲಿ ರಾಜಾರೋಷವಾಗಿ ನೆಡೆಯಲಾರಂಭಿಸಿ ವಿರೋಧವನ್ನೆದುರಿಸಿ ಮತ್ತೆ ಒಳಗೆ ಹೋಯಿತು. ಈಗ ಊರಿನ ಹೊರವಲಯದಲ್ಲೆಲ್ಲಾ ಭವ್ಯವಾದ ಚರ್ಚುಗಳು!. ಊರಲ್ಲೆಲ್ಲಾ ಏಸುದಾಸ, ಆರೋಗ್ಯಸ್ವಾಮಿ, ಸ್ಯಾಮುಯೆಲ್, ಥಾಮಸ್, ವಿಕ್ಟರ್, ಮೇರಿಗಳು. ಮೊದಲಿಂದಲೂ ಅವರ ಶಾಲೆಗಳಲ್ಲಿ ಕನ್ನಡ ಮಾತಾಡಿದರೆ ದಂಡ, ಕುಂಕುಮ ಇಟ್ಟಿದ್ದರೆ, ಹೂವು ಮುಡಿದಿದ್ದರೆ ಗೆಟ್ಟೌಟು!.


ಶುಕ್ರವಾರ, ಸೆಪ್ಟೆಂಬರ್ 5, 2008

ಮುದ್ರಿಸುವ ಮುನ್ನ ಯೋಚಿಸಿ

ಈ ಪ್ರಕೃತಿಯನ್ನು, ಪರಿಸರವನ್ನು ನಮಗಾಗಿ ಮತ್ತು ಮುಂದಿನ ಪೀಳಿಗೆಗೆ ಚೆನ್ನಾಗಿಟ್ಟುಕೊಳ್ಳಬೇಕೆಂದರೆ ಮರಗಿಡಗಳನ್ನು ಉಳಿಸಿಕೊಳ್ಳಬೇಕು, ನಾಶವಾಗುತ್ತಿರುವ ಕಾಡುಗಳನ್ನು ಕಾಪಾಡಿಕೊಳ್ಳಬೇಕು ಎಂಬುದು ನಮಗೆ ತಿಳಿದಿದೆ. ಪ್ರಾಣವಾಯುವಿನಿಂದ ಹಿಡಿದು ಮಳೆಯವರೆಗೆ ಮನುಷ್ಯನನ್ನೂ ಸೇರಿಸಿ ಇಡೀ ಪ್ರಾಣಿಕುಲ ಬದುಕಿರುವುದು ಅದೇ ಮರಗಿಡಗಳ ಸಹಾಯದಿಂದ. ಮರಗಿಡಗಳನ್ನು ಕಡಿಯುವುದು ಎಂದರೆ ನಮಗೆ ಬರಿಯ ಕಳ್ಳಸಾಗಣೆ, ರಸ್ತೆ ಅಗಲೀಕರಣ, ಜಲಾಶಯ, ವಿದ್ಯುತ್ ಸ್ಥಾವರ, ಗಣಿಗಾರಿಕೆ ಇತ್ಯಾದಿಗಳ ಕಡೆಗೇ ಗಮನ ಹರಿಯುತ್ತದೆ. ಆದರೆ ಅವುಗಳ end users ನಾವೇ ಆಗಿದ್ದು ನಮ್ಮ ಪೂರೈಕೆಗಾಗಿಯೇ ಮೇಲೆ ಹೇಳಿರುವ ಎಲ್ಲವೂ ನೆಡೆಯುತ್ತಿವೆ, ಪ್ರತಿನಿತ್ಯ ನಾವು ಬಳಸುವ ಎಷ್ಟೋ ವಸ್ತುಗಳು, ಸೇವೆಗಳು ಕೂಡ ಈ ಮರಗಿಡಗಳಿಂದ ದೊರೆತದ್ದು ಎಂಬುದನ್ನು ಮರೆತುಬಿಡುತ್ತೇವೆ. ಮನೆಯ ಕಿಟಕಿ ಬಾಗಿಲುಗಳಿಂದ ಹಿಡಿದು ಕಛೇರಿಯ ಮೇಜು, ಕಾಗದ ಕೂಡ ಮರದ ಉತ್ಪನ್ನಗಳೇ ಆಗಿವೆ.

ಇದಿಷ್ಟು ಪೀಠಿಕೆಯಾಯಿತು. ಈಗ ವಿಷಯಕ್ಕೆ ಬಂದರೆ, ನಮ್ಮ ಆಫೀಸಿನಲ್ಲಿ ಉದ್ಯೋಗಿಗಳ ಬಳಕೆಗೆಂದು ಮೊದಲ ಮಹಡಿಗೆಲ್ಲಾ ಸೇರಿ ಒಂದು ಪ್ರಿಂಟರ್ ಇದೆ. ಆಫೀಸಿನ ಕೆಲಸಗಳಿಗೆ ಪ್ರಿಂಟಿಂಗ್ ಅವಶ್ಯಕತೆ ಇರುವುದರಿಂದ ಎಲ್ಲಾ ಕಂಪನಿಗಳಲ್ಲೂ ಇರುತ್ತದೆ. ನಾನು ಪ್ರತಿ ದಿನದ ಕೊನೆಯಲ್ಲಿ ಗಮನಿಸುತ್ತೇನೆ. ಏನಿಲ್ಲವೆಂದರೂ ದಿನವೂ ೫೦-೬೦ ಹಾಳೆಗಳು ಪ್ರಿಂಟರ್ ನಲ್ಲಿ ವ್ಯರ್ಥವಾಗಿ ಬಿದ್ದಿರುತ್ತವೆ. ಕೆಲವೊಮ್ಮೆ ಇನ್ನೂ ಜಾಸ್ತಿ! ಇದನ್ನು ಕಂಡಾಗ ವ್ಯಥೆಯಾಗುತ್ತದೆ. ಕೆಲವೊಂದು ಪ್ರಿಂಟ್ ಸರಿಯಾಗಿ ಬಂದಿರುವುದಿಲ್ಲ, ಇನ್ನೂ ಕೆಲವನ್ನು ಯಾರೂ ತೆಗೆದುಕೊಂಡು ಹೋಗುವುದೇ ಇಲ್ಲ. ಇನ್ನೂ ಕೆಲವರು ಅನವಶ್ಯಕವಾಗಿ ಪ್ರಿಂಟ್ ಗಳನ್ನು ಕೊಟ್ಟೂ ಕೊಟ್ಟೂ ವ್ಯರ್ಥ ಮಾಡುತ್ತಿರುತ್ತಾರೆ. ಸಿಕ್ಕಿದ್ದನ್ನೆಲ್ಲಾ ಮುದ್ರಿಸಿಕೊಂಡು ಇಟ್ಟುಕೊಳ್ಳುತ್ತಿರುತ್ತಾರೆ. ಇದು ಕೇವಲ ನನ್ನ ಕಛೇರಿಯ ಕತೆಯೊಂದೇ ಅಲ್ಲ. ಬಹುತೇಕ ಎಲ್ಲಾ ಕಛೇರಿಗಳಲ್ಲೂ ಕೂಡ ಇದೇ ರೀತಿಯ ಪರಿಸ್ಥಿತಿ ಇದೆ. ಹೇಳಲು ಹೋದರೆ ಇದು ಆಫೀಸಿನ ಪ್ರಿಂಟರ್, ಆಫೀಸಿನ ದುಡ್ಡು, ನಮ್ಮದೇನು ಹೋಗುವುದಿದೆ ಎಂದೋ ಅಥವಾ ನೀನೂ ಬೇಕಾದಷ್ಟು ಪ್ರಿಂಟ್ ತೆಗೆದುಕೋ ಎಂಬಂತೆ ಕೇವಲ ದುಡ್ಡಿನ ದೃಷ್ಟಿಯಿಂದ ಪರಿಗಣಿಸುತ್ತಾರೆಯೇ ವಿನಃ ಈ ರೀತಿ ಮಾಡುವುದರಿಂದ ನಮ್ಮ ಪ್ರಕೃತಿಯ ವಿನಾಶಕ್ಕೆ ನಾವೇ ಪರೋಕ್ಷವಾಗಿ ಕಾರಣರಾಗುತ್ತಿದ್ದೇವೆ ಎಂದು ತಿಳಿದುಕೊಳ್ಳುವುದಿಲ್ಲ. ಕೇವಲ ನನ್ನ ಆಫೀಸಿನ ಒಂದು ಪ್ರಿಂಟರಿನಲ್ಲಿಯೇ ದಿನಕ್ಕೆ ಇಷ್ಟು ಕಾಗದ ವ್ಯರ್ಥವಾಗುತ್ತಿದ್ದರೆ ಇನ್ನು ಎಲ್ಲಾ ಆಫೀಸುಗಳಲ್ಲಿ ಸೇರಿ ವ್ಯರ್ಥವಾಗುವ ಪ್ರಮಾಣ ಎಷ್ಟಿರಬಹುದು!

ಕಂಪ್ಯೂಟರ್ ಬಂದಮೇಲೆ ಕಾಗದ ರಹಿತ ಕಛೇರಿಗಳು ಇರುತ್ತವೆ ಎಂಬ ಕಲ್ಪನೆ ತಪ್ಪಾಗಿ ಕಾಗದದ ಬಳಕೆ, ದುರ್ಬಳಕೆ, ವ್ಯರ್ಥ ಮಾಡುವುದು ಜಾಸ್ತಿಯಾಗಿದೆ. ಆದ್ದರಿಂದ ಈ ಕೆಳಗಿನ ಅಂಶಗಳನ್ನು ಅಳವಡಿಸಿಕೊಂಡು ಸ್ವಲ್ಪ ಜವಾಬ್ದಾರಿಯಿಂದ ನೆಡೆದುಕೊಳ್ಳಬೇಕೆಂದು ಎಲ್ಲಾ ಆಫೀಸು ಜೀವಗಳಲ್ಲಿ ವಿನಂತಿ.

*ಕಛೇರಿಯ ಕೆಲಸಗಳಿಗೆ ಅಥವಾ ವೈಯಕ್ತಿಕ ಕೆಲಸಗಳಿಗೆ ನಿಜವಾದ ಅಗತ್ಯವಿದ್ದಾಗ, ಅಗತ್ಯವಿರುವಷ್ಟೆ ಪ್ರಿಂಟ್ ಮಾಡಿ.
ಹೇಗೆ ಕಾಣುತ್ತದೆ ಎಂದು ನೋಡಲು ಒಂದು ಪ್ರಿಂಟ್, ತಪ್ಪು ತಿದ್ದಿದ ಮೇಲೆ ಒಂದು ಪ್ರಿಂಟ್, ಫೈನಲ್ ಕಾಪಿ ಎಂದು ಮತ್ತೊಂದು ಪ್ರಿಂಟ್ ಕೊಡುವ ಬದಲು ಸಾಫ್ಟ್ ಕಾಪಿಯಲ್ಲಿಯೇ ಎಲ್ಲವನ್ನೂ ಫೈನಲೈಸ್ ಮಾಡಿಕೊಂಡು ನಂತರ ಮುದ್ರಿಸಿ.

*ಯಾವ ಯಾವ ಪುಟಗಳು ಬೇಕಾಗಿವೆ ಎಂದು ಮೊದಲೇ ನೋಡಿಕೊಂಡು ಅಷ್ಟನ್ನು ಮಾತ್ರ ಮುದ್ರಿಸಿಕೊಳ್ಳಿ. ಇಡೀ ಡಾಕ್ಯುಮೆಂಟನ್ನು ಮುದ್ರಿಸಿ ನಂತರ ಬೇಕಾದ ಪುಟಗಳನ್ನು ಮಾತ್ರ ಆರಿಸಿ ಇಟ್ಟುಕೊಳ್ಳುವ ಅಭ್ಯಾಸ ಬೇಡ.

*ಪ್ರಿಂಟ್ ಆಪ್ಷನ್ ಗಳನ್ನ ಸರಿಯಾಗಿ ತಿಳಿದುಕೊಳ್ಳಿ. ಮುದ್ರಿಸುವ ಮೊದಲು ಪ್ರಿಂಟರ್ ಸೆಟ್ಟಿಂಗ್ ಗಳನ್ನು ಸರಿಯಾಗಿ ಕೊಟ್ಟು, ಪ್ರಿಂಟ್ ಮುನ್ನೋಟವನ್ನು ನೋಡಿ ಖಾತ್ರಿಯಾದ ನಂತರವೇ ಪ್ರಿಂಟ್ ಕೊಡಿ. ಇದರಿಂದ ತಪ್ಪು ಪ್ರಿಂಟ್ ಗಳು ಬಂದು ವ್ಯರ್ಥವಾಗುವುದಿಲ್ಲ.

*ಸುಮ್ಮನೇ ರೆಫರೆನ್ಸ್ ಡಾಕ್ಯುಮೆಂಟ್ ಗಳನ್ನು ಹಾಗೂ ಡ್ರಾಫ್ಟ್ ಕಾಪಿಗಳನ್ನು ಪ್ರಿಂಟ್ ತೆಗೆದುಕೊಳ್ಳುವಾಗ ಹಾಳೆಯ ಎರಡೂ ಬದಿಯಲ್ಲಿ ಮುದ್ರಿಸಿ. ಒಂದೇ ಬದಿಯಲ್ಲಿದ್ದರೆ ನೋಡುವುದಕ್ಕೆ ಚೆನ್ನಾಗಿರುತ್ತದೆ, ಓದುವುದು ಅನುಕೂಲ ಇತ್ಯಾದಿ ಶೋಕಿಗಳು ಬೇಡ. ಒಂದು ಬದಿ ಬಳಸಿದ ಹಾಳೆಯಲ್ಲಿ ಪ್ರಿಂಟ್ ತೆಗೆದುಕೊಂಡರೆ ಇನ್ನೂ ಒಳ್ಳೆಯದು.

*ಎಷ್ಟು ಕಾಪಿಗಳು ಬೇಕೋ ಅಷ್ಟನ್ನು ಮಾತ್ರ ಮುದ್ರಿಸಿ. ಸುಮ್ಮನೇ ಯಾವುದಕ್ಕೂ ಇನ್ನೊಂದೆರಡು ಜಾಸ್ತಿ ಕಾಪಿಗಳು ಇರಲಿ ಎಂಬ ಧೋರಣೆ ಬೇಡ.

*ಹೇಗೂ ಉಚಿತ ಎಂದು ಸಿಕ್ಕಿದ್ದೆಲ್ಲಾ ಜೋಕುಗಳು, ಚಿತ್ರಗಳು, ಮೇಲ್ ಗಳು, ಡಾಕ್ಯುಮೆಂಟ್ ಗಳು, ಇ-ಬುಕ್ಸ್ ಎಲ್ಲವನ್ನೂ ಪ್ರಿಂಟ್ ತೆಗೆದಿಟ್ಟುಕೊಳ್ಳುವ ಮನಸ್ಥಿತಿ ಬಿಡಿ.

*ಕೇವಲ ಕಛೇರಿ ಒಳಗಿನ ಬಳಕೆಗೆ ಬೇಕಿದ್ದಾಗ, ನೆಡೆಯುತ್ತದೆ ಎಂದಿದ್ದಾಗ ಒಂದು ಬದಿ ಪ್ರಿಂಟ್ ಆಗಿರುವ ಹಾಳೆಗಳನ್ನು ಬಳಸಿ ಇನ್ನೊಂದು ಖಾಲಿ ಬದಿಯಲ್ಲಿ ಮುದ್ರಿಸಿಕೊಳ್ಳಿ. ಉದಾಹರಣೆಗೆ, ಡ್ರಾಯಿಂಗ್ ಗಳ ಕ್ವಾಲಿಟ್ ಚೆಕಿಂಗ್, ಡಾಕ್ಯುಮೆಂಟ್ ಗಳ/ಪತ್ರಗಳ ತಿದ್ದುವಿಕೆ ಮುಂತಾದವುಗಳಿಗೆ.

*ಅಗತ್ಯಕ್ಕಿಂತ ದೊಡ್ಡ ಫಾಂಟ್ ಗಳಿದ್ದಾಗ ಅದರ ಗಾತ್ರವನ್ನು ಕಡಿಮೆ ಮಾಡಿ ಮುದ್ರಿಸಿದರೆ ಕಡಿಮೆ ಹಾಳೆಗಳು ಸಾಕಾಗುತ್ತವೆ.

*ಪ್ರಿಂಟ್ ಡಾಕ್ಯುಮೆಂಟೇಶನ್ ಬದಲು ಎಲೆಕ್ಟ್ರಾನಿಕ್ ಡಾಕ್ಯುಮೆಂಟೇಷನ್ ಮಾಡಿ. ಅಂದರೆ ಆಫೀಸಿನ ಕೆಲಸದ ಕಮ್ಯುನಿಕೇಶನ್ ಮೇಲ್ ಗಳು, ಡಾಕ್ಯುಮೆಂಟ್ಸ್ ಮುಂತಾದವುಗಳ ಸಾಫ್ಟ್ ಕಾಪಿಯನ್ನು ಉಳಿಸಿಟ್ಟುಕೊಂಡು ಬಳಸಿಕೊಳ್ಳಿ.

*ಫೋಟೋಕಾಪಿ ಮತ್ತು ಸ್ಕಾನರ್ ಗಳನ್ನು ಬಳಸುವಾಗಲೂ ಅದರ ಆಪ್ಷನ್ ಮತ್ತು ಸೆಟ್ಟಿಂಗ್ ಗಳನ್ನು ಸರಿಯಾಗಿ ತಿಳಿದುಕೊಂಡು, ಅಗತ್ಯವಿರುವಷ್ಟೇ ಕಾಪಿಗಳನ್ನು ತೆಗೆದುಕೊಳ್ಳಿ.

ಇದಿಷ್ಟೂ ಕೇವಲ ಆಫೀಸುಗಳ ಪ್ರಿಂಟ್ ಕಾಗದದ ಬಗ್ಗೆ ಮಾತ್ರ. ಇದರ ಜೊತೆಗೆ ಆಫೀಸಿನಲ್ಲೇ ಬೇರೆ ಬೇರೆ ರೀತಿಯಲ್ಲಾಗುವ ಮತ್ತು ಶಾಲೆ ಇನ್ನಿತರ ಕಡೆಗಳಲ್ಲಾಗುವ ಕಾಗದದ ದುಂದುಬಳಕೆ ಬಗ್ಗೆ ಹೇಳಲು ಹೋದರೆ ಅದೇ ದೊಡ್ಡ ಕತೆಯಾಗುತ್ತದೆ.

ನೆನಪಿರಲಿ, ಕಾಗದವನ್ನು ತಯಾರಿಸಲು ಬೇಕಾಗುವ ಮೂಲವಸ್ತು ಮರ. ಕಾಗದ ತಯಾರಿಕೆಗಾಗಿಯೇ ಎಷ್ಟೆಲ್ಲಾ ಮರಗಳು ಕಡಿಯಲ್ಪಡುತ್ತವೆ ಮತ್ತು ಎಷ್ಟು ಶಕ್ತಿ, ಸಂಪನ್ಮೂಲಗಳು ವಿನಿಯೋಗಿಸಲ್ಪಡುತ್ತದೆ. ಒಳ್ಳೆ ಗುಣಮಟ್ಟದ ಒಂದು ಟನ್ ಪ್ರಿಂಟ್ ಕಾಗದ ಉತ್ಪಾದನೆಗೆ ಸುಮಾರು ೧೭ ರಿಂದ ೨೪ ಮರಗಳು ಬೇಕು. ಇಂತಿದ್ದ ಮೇಲೆ ಕಾಗದದ ಬಳಕೆಯನ್ನು ಸರಿಯಾಗಿ ಮಾಡಿ ವ್ಯರ್ಥವಾಗುವುದನ್ನು ತಪ್ಪಿಸಿ ಮರಗಿಡಗಳನ್ನು, ಪರಿಸರವನ್ನು ಉಳಿಸುವುದು ನೇರವಾಗಿ ನಮ್ಮ ಮೇಲೆ ಇದೆ.

*********

ನಾನು ಹೇಳಿದಾಕ್ಷಣ ಎಲ್ಲಾ ಬದಲಾಗುತ್ತದೆ ಎಂಬ ನಂಬಿಕೆಯಂತೂ ಇಲ್ಲದಿದ್ದರೂ ಇದನ್ನು ಓದಿ ಒಂದಿಷ್ಟು ಜನರಾದರೂ ಎಚ್ಚೆತ್ತುಕೊಂಡರೆ ಸಾರ್ಥಕವಾಗುತ್ತದೆ ಎಂಬ ಹಳೇ ಡೈಲಾಗಂತೂ ಮನಸ್ಸಿನಲ್ಲಿದೆ. :)



8th Sep thatskannada.comನಲ್ಲಿ: ಕಛೇರಿಗಳಲ್ಲಿ ಮರಕಡಿಯುವುದನ್ನು ನಿಲ್ಲಿಸಿ

ಸೋಮವಾರ, ಸೆಪ್ಟೆಂಬರ್ 1, 2008

ಫೋಟೋ ಟೆರರಿಸಂ !


ಮೊನ್ನೆ ಮೊನ್ನೆ ಗೆಳೆಯನೊಬ್ಬನ ಮದುವೆಯಿತ್ತು. ಮಹರಾಯ ಹತ್ತಿರದವನಾದ್ದರಿಂದ ತಾಳಿ ಕಟ್ಟಬೇಕಾದರೆ ನಾವೆಲ್ಲಾ ಹಾಜರಿರಬೇಕಿತ್ತು. ಮೊದಲೇ ತಡವಾಗಿದ್ದರಿಂದ ಎದ್ದೆನೋ ಬಿದ್ದೆನೋ ಅಂತ ೧೫ ಕಿ.ಮಿ. ಬೈಕೋಡಿಸಿಕೊಂಡು ಹೋಗಿದ್ದಾಯಿತು. ಎಲ್ಲರಿಗೂ ಹಲ್ಲು ಕಿರಿದು ಸುಧಾರಿಸಿಕೊಂಡು ಆದಮೇಲೆ ಗಟ್ಟಿ ಮೇಳ ಶುರುವಾಗುತ್ತಿದ್ದಂತೇ ಅದೆಲ್ಲಿದ್ದರೋ ಈ ಫೋಟೋ ಗ್ರಾಫರುಗಳು ೩-೪ ಜನ ಬಂದು ಮಂಟಪದ ಮುಂದೆ ನಿಂತು ಫೋಟೋ ತೆಗೆಯಲು ಶುರುಮಾಡಿಬಿಟ್ಟರು. ಜೊತೆಗೆ ಈಗ ತಮ್ಮ ಡಿಜಿಟಲ್ ಕ್ಯಾಮರಾಗಳು, ಸೆಲ್ ಫೋನುಗಳಲ್ಲಿ ಫೋಟೋ ತೆಗೆದುಕೊಳ್ಳುವ ಪುಕ್ಸಟ್ಟೆ ಫೋಟೋಗ್ರಾಫರುಗಳು, ಚಿಳ್ಳಿಪಿಳ್ಳೆಗಳು ಎಲ್ಲಾ ಸೇರಿಕೊಂಡು ಸುತ್ತಲೂ ಕೋಟೆಕಟ್ಟಿ ತಾಳಿಕಟ್ಟುವುದನ್ನೇ ನೋಡದಂತೆ ಮಾಡಿಬಿಟ್ಟರು. ಇದ್ದುದರಲ್ಲೇ ಅಂದಾಜು ಮಾಡಿ ಅಕ್ಷತೆ ಕಾಳುಗಳನ್ನು ಗುರಿ ಇಟ್ಟು ಎಸೆದು ಸಮಾಧಾನ ಪಟ್ಟಿದ್ದಾಯಿತು.



ಹಿಂದಿನ ವಾರದಲ್ಲಿ ಚೇತನಾ ತೀರ್ಥಹಳ್ಳಿಯವರ ಭಾಮಿನಿ ಷಟ್ಪದಿ ಪುಸ್ತಕದ ಬಿಡುಗಡೆಯಿತ್ತು. ಮೊದ ಮೊದಲು ಎಲ್ಲಾ ಚೆನ್ನಾಗಿ ನೆಡೆಯಿತು. ಆದರೆ ಈಗ ಪುಸ್ತಕ ಬಿಡುಗಡೆ ಎಂದು ಘೋಷಿಸಿದ್ದೇ ತಡ ೮-೧೦ ಫೋಟೊಗ್ರಾಫರು ಗಳು ವೇದಿಕೆಯನ್ನು ಯಾವ ಪರಿ ಸುತ್ತುವರೆದು ಬಿಟ್ಟರೆಂದರೆ ಅದ್ಯಾರು ಪುಸ್ತಕ ಬಿಡುಗಡೆ ಮಾಡಿದರೋ, ಅಲ್ಲಿ ಅದೇನು ಆಯಿತೋ ಒಂದೂ ತಿಳಿಯಲಿಲ್ಲ. ಸುಮಾರು ಒಂದೆರಡು ನಿಮಿಷ ನೆಡೆದ ಸತತ ಫೋಟೋ ಫ್ಲಾಷುಗಳಿಗೆ ವೇದಿಕೆಯಲ್ಲಿದ್ದವರೂ ಹಿಂಸೆ ಪಡುತ್ತಿದ್ದುದು ಕಂಡುಬಂತು. ಪುಸ್ತಕ ಬಿಡುಗಡೆ ನೋಡಲು ಖುದ್ಧಾಗಿ ಹೋದವರು ಪುಸ್ತಕ ಬಿಡುಗಡೆ ಆಯಿತು ಎಂದು ಕೆಳಗೆ ಕುಳಿತುಕೊಂಡು ತಿಳಿದುಕೊಳ್ಳಬೇಕಾಯಿತು. ಎಂತದೂ ಕಾಣ್ತನೇ ಇಲ್ಯಲೇ, ಸಾಯ್ಲಿ ಅಂತ ಶ್ರೀನಿಧಿ ಗೊಣಗಿದ. ನಾಳೆ ಫೋಟೋ ಸಿಗ್ತು ಅದ್ರಲ್ಲೇ ನೋಡ್ಕೋ ಅಂತ ನಾನಂದೆ. ಸುಶ್ರುತ ಹೌದು ಅಂತ ತಲೆ ಅಲ್ಲಾಡಿಸಿದ. ನನ್ನ ಪಕ್ಕದಲ್ಲಿ ಕೂತಿದ್ದ ಬಿಳಿಗಡ್ಡದ ವಯಸ್ಸಾದವರೊಬ್ಬರು ಹ್ಹ ಹ್ಹ ಹ್ಹ ಎಂದು ನಕ್ಕರು. ಬಹುಶಃ ಇಂತದ್ದು ಬಹಳ ಅನುಭವ ಆಗಿದೆಯೆನೋ ಅವರಿಗೆ ಅವರ ಸರ್ವೀಸಿನಲ್ಲಿ :)



ಮೇ ಫವರ್ ಮೀಡಿಯಾ ಹೌಸ್ ಸಂಸ್ಥೆಯಿಂದ ಫಿಶ್ ಮಾರ್ಕೆಟ್ ಎಂಬ ಒಳ್ಳೆಯ ಕಾರ್ಯಕ್ರಮವೊಂದು ನೆಡೆಯುತ್ತದೆ. ಖ್ಯಾತ ಕವಿ, ಬರಹಗಾರ, ಕಲಾವಿದ ಯಾರಾದರೊಬ್ಬರ ಜೊತೆ ನಮ್ಮ ಒಂದು ಸಂಜೆಯನ್ನು ಸುಂದರವಾಗಿಸುವ ಕಾರ್ಯಕ್ರಮವದು. ಮೊನ್ನೆ ಶನಿವಾರ ಅದಕ್ಕೂ ಹೋಗಿದ್ದೆ. ದುಂಡಿರಾಜ್ ಬಂದಿದ್ದರು. ಅಬ್ಬಾ, ಕಾರ್ಯಕ್ರಮ ಶುರುವಾದಾಗಿಂದ ಮೂರು ಜನ ಹುಡುಗಿಯರು ಅದೆಷ್ಟು ಫೋಟೋಗಳನ್ನು ತೆಗೆದರು ಎಂಬುದಕ್ಕೆ ಲೆಕ್ಕವಿಲ್ಲ. ಹುಡುಗಿಯರೇನೋ ಚೆನ್ನಾಗಿಯೇ ಇದ್ದರು. ಹಾಗಂತ ಎಷ್ಟು ಅಂತ ಫೋಸು ಕೊಡೋದು ನಾವು. ದುಂಡಿರಾಜರ ಹನಿಗವನಗಳನ್ನು ಕೇಳಿ ಕೆಟ್ಟ ಕೆಟ್ಟದಾಗಿ ಬಿದ್ದೂ ಬಿದ್ದೂ ನಗುತ್ತಿದ್ವಿ. ಮೊದ ಮೊದಲು ಫೋಟೋ ತೆಗೆಯುವಾಗ ಕೂತ ಭಂಗಿ ಸರಿಮಾಡಿಕೊಂಡು, ಕೂದಲು ಸರಿಮಾಡಿಕೊಂಡು ಫೋಸು ಕೊಟ್ಟರೂ ನಂತರ ಫೋಟೋ ಹುಡುಗಿಯರ ಓಡಾಟದ ಪರಿ ನೋಡಿ ಭಯಪಟ್ಟು ಹೆಂಗಾದ್ರೂ ತೆಕ್ಕೊಳ್ಲಿ ಅಂತ ಸುಮ್ಮನಿರಬೇಕಾಯಿತು. ದುಂಡೀರಾಜರ ಚುಟುಕಗಳಿಗಿಂತ ಫೋಟೋ ಪ್ಲ್ಯಾಷ್ ಗಳೇ ಇನ್ನೂ ತಲೆಯಲ್ಲಿ, ಕಣ್ಣಲ್ಲಿ....


*******************

ಅಲ್ಲ,ಇದೆಲ್ಲಾ ಮಾಡುವುದು ತಪ್ಪೂ ಅಂತ ಅಲ್ಲ. ನೆನಪು, ಪ್ರಚಾರ, ಮಾರ್ಕೆಟಿಂಗ್ ಕಾರಣಕ್ಕಾಗಿ ಇದೆಲ್ಲಾ ಮಾಡಬೇಕಾಗುತ್ತದೆ ನಿಜ. ಹಾಗಂತ ನಮ್ಮ ತೊಂದರೆ ನಾವು ಹೇಳಿಕೊಳ್ಳದೇ ಇರೋಕಾಗುತ್ತದಾ? :-)

ಫೋಟೋ ಕೃಪೆ: www.illustratedphotography.com

ಸೋಮವಾರ, ಆಗಸ್ಟ್ 18, 2008

ರೇವ್ ಪಾರ್ಟಿ, ಸ್ತ್ರೀಸಂವೇದನೆ, ಕನ್ನಡ etc

’ಮೊಗ್ಗಿನ ಮನಸು’ ಚಿತ್ರದ್ದೊಂದು ದೃಶ್ಯ..

ಅದೊಂದು ಮಂಗಳೂರಿನ ಕಾಲೇಜು. ಮೊದಲನೇ ದಿನ ಪಿ.ಯು.ಸಿ ಕ್ಲಾಸಿನಲ್ಲಿ ಅದ್ಯಾಪಕರು ಇಂಗ್ಲೀಷಿನಲ್ಲಿ ಒಂದು ಜೋಕು ಹೇಳುತ್ತಾರೆ. ಅವರು ಹೇಳಿ ಮುಗಿಸಿದಾಕ್ಷಣವೇ ಎಲ್ಲರೂ ನಕ್ಕರೆ ಒಂದು ಹುಡುಗಿ ಮಾತ್ರ ಎದ್ದು ನಿಂತು ಅಳತೊಡಗುತ್ತಾಳೆ. ಯಾಕಮ್ಮಾ ಅಳುತ್ತಿದ್ದೀಯ ಅಂತ ಕೇಳಿದರೆ ನಾನು ಕನ್ನಡ ಮೀಡಿಯಂ ನಲ್ಲಿ ಓದಿದ್ದು ಸಾರ್, ನೀವು ಹೇಳಿದ್ದು ನಂಗೇನೂ ತಿಳೀಲಿಲ್ಲ ಅನ್ನುತ್ತಾಳೆ. ಇಡೀ ಕ್ಲಾಸಿಗೇ ಕ್ಲಾಸೇ ನಗುತ್ತದೆ. ಮೇಸ್ಟ್ರು ಎಲ್ಲರನ್ನೂ ಬೈದು ಸುಮ್ಮನಾಗಿಸುತ್ತಾರೆ.

ಆ ಚಿತ್ರದ ನಿರ್ದೇಶಕ ಪುಣ್ಯಾತ್ಮನಿಗೆ ಅದ್ಯಾರು ಹೇಳಿದರು ಕನ್ನಡ ಮೀಡಿಯಂ ನಲ್ಲಿ ಓದಿದವರಿಗೆ ಇಂಗ್ಲೀಷು ತಿಳಿಯುವುದಿಲ್ಲವೆಂದು? ಅದೂ ಕೂಡ ಅಲ್ಲಿ ಹೇಳಿದ ಒಂದು ಕಾಂಜೀ ಪೀಂಜಿ ಜೋಕು ! ಕನ್ನಡ ಮೀಡಿಯಂನಲ್ಲಿ ಓದಿದ್ದರೂ ಇಂಗ್ಲೀಷನ್ನು ಒಂದು ಭಾಷೆಯಾಗಿ ಕಲಿತಿಯೇ ಇರುತ್ತೇವೆ. ಅದೂ ೧೦ ಕ್ಲಾಸಿನ ವರೆಗೆ ಓದಿದ ಒಬ್ಬರಿಗೆ ೨ ವಾಕ್ಯ ಇಂಗ್ಲೀಷು ಅರ್ಥವಾಗಲಿಲ್ಲವೆಂದರೆ ಅದು ಅವರ ತೊಂದರೆಯೇ ಹೊರತು ಮಾಧ್ಯಮದ್ದಲ್ಲ.

ನಂತರ ಆ ಮೇಸ್ಟ್ರು, ಕನ್ನಡ ಮೀಡಿಯಂ ನಲ್ಲಿ ಓದಿದೋರೆಲ್ಲ ದಡ್ಡರು ಇಂಗ್ಲೀಷ್ ಮೀಡಿಯಂ ನಲ್ಲಿ ಓದಿದೋರೆಲ್ಲ ಬುದ್ಧಿವಂತರು ಅನ್ಕೋಬೇಡಿ. ಭಾಷೆಗಿಂತ ಪ್ರತಿಭೆ ಮುಖ್ಯ. ಫ್ರಾನ್ಸ್, ಜಪಾನು, ರಷ್ಯ ಎಲ್ಲರೂ ಅವರವರ ಭಾಷೆಯಲ್ಲೇ ಎಲ್ಲವನ್ನು ಮಾಡ್ಕೊಂಡಿದಾರೆ, ಮುಂದುವರೆದಿದಾರೆ, ನಾನೂ ಕೂಡ ಕನ್ನಡ ಮೀಡಿಯಂ ನಲ್ಲೇ ಓದಿದ್ದು. anybody dare to challenge me here? ಅಂತ ಅರಚುತ್ತಾರೇನೋ ನಿಜ. ಆದರೆ ಅಷ್ಟರಲ್ಲೇ ಕನ್ನಡ ಮೀಡಿಯಂನಲ್ಲಿ ಓದಿದೋರು ಹೆಡ್ಡರು ಎಂಬ ಭಾವನೆ ನೋಡುಗರಲ್ಲಿ ಬಂದಿರುತ್ತದೆ.

ಇದ್ಯಾಕೆ ಕನ್ನಡ ಮಾಧ್ಯಮ ಕಲಿಕೆಯನ್ನು ತೊಡೆದು ಹಾಕಲು ಚಿತ್ರರಂಗದಿಂದ ಹಿಡಿದು ಹೈಕೋರ್ಟ್ ವರೆಗೆ ಎಲ್ಲರೂ ಟೊಂಕ ಕಟ್ಟಿ ನಿಂತಿದ್ದಾರೋ ನಾಕಾಣೆ!

***************************

ಸ್ವಾತಂತ್ರ್ಯ ದಿನಾಚರಣೆಗೆ ಎಲ್ಲ ಕಂಪನಿಗಳೂ ಕಡ್ಡಾಯ ರಜೆ ಕೊಡಲೇಬೇಕೆಂದು ಸರ್ಕಾರ ಸುತ್ತೋಲೆ ಹೊರಡಿಸುವ ಸ್ಥಿತಿ ಇದೆ ಇವತ್ತು ಭಾರತದಲ್ಲಿ ಅಂತ ಕೊರಗುತ್ತಿರುವಾಗಲೇ ಹೀಗೆಲ್ಲಾ ಸುತ್ತೋಲೆ ಹೊರಡಿಸಿ ಸರ್ಕಾರ ನಮ್ಮ ಸ್ವಾತಂತ್ರ್ಯ ಹರಣ ಮಾಡಿದರೆ ನಾವು ಬೇರೆ ಜಾಗ ನೋಡ್ಕೋತೀವಿ, ಆಮೇಲೆ ನಿಮ್ಮ ಜನರಿಗೇ ಕೆಲಸ ಕೊಡೋರು ಯಾರೂ ಇರೋಲ್ಲ ಎಂದು ಐ.ಟಿ.ಕಂಪನಿಗಳು ಬುಸುಗುಟ್ಟಿದವಂತೆ.

ಆಗಸ್ಟ ೧೫ಕ್ಕೆ ರಜ ಕೊಡಬೇಕೆಂದು ಕೆಲವು ಸಾಫ್ಟ್ ವೇರ್ ಕಂಪನಿಗಳಲ್ಲಿ ೧೪ ರಂದೇ ಸ್ವಾತಂತ್ರ್ಯೋತ್ಸವವನ್ನು ಜೋರಾಗಿ ಆಚರಿಸುತ್ತಿದ್ದುದನ್ನು ಕಂಡು ಇವತ್ತು ಪಾಕಿಸ್ತಾನದ ಸ್ವಾತ್ರಂತ್ರ್ಯೋತ್ಸವವಲ್ವಾ ಎಂದು ತಲೆಕೆರೆದುಕೊಂಡವರು ಹಾಗೆಯೇ ತಲೆಕೆರೆದುಕೊಳ್ಳುತ್ತಾ ಉಳಿದಿರುವಾಗಲೇ ಮೆಜೆಸ್ಟಿಕ್ಕು ರಶ್ಶಾಗಿತ್ತು.

*******************************

ಮೊನ್ನೆ ಮೊನ್ನೆ ಬೆಂಗಳೂರು ಹತ್ತಿರ ರೇವ್ ಪಾರ್ಟಿ ನೆಡೆದು ಅವರು ಸಿಕ್ಕಿಬಿದ್ದು ಟಿ.ವಿ.ಯಲ್ಲೆಲ್ಲಾ ಬಂತು. ಅದರಲ್ಲಿ ಹುಡುಗಿಯರೂ ಇದ್ದರು. ಅವರು ಟಿ.ವಿ.ಕ್ಯಾಮೆರಾದ ಮುಂದೆ ಅಳುತ್ತಿದ್ದರು ಅರಚುತ್ತಿದ್ದರು. ಇದನ್ನು ನೋಡಿ ಕರುಳು ಮಿಡಿದ ಒಬ್ಬ ಪತ್ರಿಕೆಗೆ ಪತ್ರ ಬರೆದಿದ್ದ. ಹೆಣ್ಣು ಮಕ್ಕಳು ಕೈಮುಗಿದು ತಮ್ಮದೇನೂ ತಪ್ಪಿಲ್ಲ(!) ಎಂದು ಅಳುತ್ತಿದ್ದರೂ ಅವರನ್ನು ಹಿಡಿದು ಹಿಡಿದು ತೋರಿಸಿದ ರಕ್ಷಣಾ ವೇದಿಕೆಯ ಜನರದ್ದೇ ತಪ್ಪು. ಇದು ಹೆಣ್ಣಿಗೆ ಮಾಡಿದ ಅವಮಾನ ಎಂಬಂತೆ !. ಜ್ಞಾನಪೀಠದ ಸಪೋರ್ಟು ಸಿಕ್ಕಿ ಅಲ್ಲಿ ಪೇಜ್ 3 ಜನರೆಲ್ಲಾ ಹೊಸ ಹುರುಪಿನಿಂದ ಮೇಲೆದ್ದುದನ್ನು ಕಂಡೇ ದಂಗಾಗಿದ್ದ ಮನೆಮಂದಿ ಈ ಪತ್ರವನ್ನೂ ಓದಿ ಹಾಗಿದ್ದರೆ ರೇವ್ ಪಾರ್ಟಿಯಲ್ಲಿ ಗಾಂಜಾ ಸೇದಿ, ಹೆಂಡ ಕುಡಿದು, ಬೆತ್ತಲೆ ಕುಣಿದರೆ ತಪ್ಪಲ್ವಾ, ಹೆಣ್ಣಿಗೆ ಅವಮಾನವಾದಂತಾಗಲಿಲ್ವಾ ಎಂದು ಪಿಳಿಪಿಳಿ ಕಣ್ಣು ಬಿಟ್ಟರು.

******************************

ಕೆಲವರು ಪದ್ಮಪ್ರಿಯಾ ಬಗ್ಗೆ ಬರೆದರು, ಕೆಲವರು ನೈಪಾಲರ ಹೆಂಡತಿಯ ಬಗ್ಗೆ ಬರೆದರು. ಚಿಯರ್ ಗರ್ಲ್ಸ್ ಬಗ್ಗೆಯೂ ಬರೆಯುತ್ತಾರೆನೋ ಅಂತ ಕಾದೆ. ಬರೆಯಲಿಲ್ಲ. ಅದೇ ಬೇರೆ ಇದೇ ಬೇರೆ ನೀನಿನ್ನೂ ಚಿಕ್ಕವನು ಸುಮ್ಮನಿರು ಅಂದರು. ಹೌದು ಅನ್ನಿಸಿತು. ಹೆಣ್ಣಿಗೆ ಆರ್ಥಿಕ ಸ್ವಾತಂತ್ರ್ಯ ಬೇಕು ಎಂದರು. ಹೌದು ಅನ್ನಿಸಿತು. ಆವಾಗ ಸ್ತ್ರೀ ಶೋಷಣೆ ನಿಂತಂತೆ ಅಂದರು, ಹೌದು ಅನ್ನಿಸಿತು. ಮೈ ತೋರಿಸಿ, ಬಳಸಿ ಹಣಗಳಿಸುವುದೂ ಆರ್ಥಿಕ ಸ್ವಾತಂತ್ರ್ಯಕ್ಕೆ ಒಂದು ದಾರಿ ಎಂದರು ಕೆಲವರು. ಹೌದಾ! ಅನ್ನಿಸಿತು. ಆಮೇಲೆ ಇದ್ಯಾಕೋ ಈ ಸಂವೇದನೆಗಳೆಲ್ಲಾ ಗಡ್ಡ ಬಿಟ್ಟವರಿಗೇ ಸರಿ ಎನಿಸಿ ಬೆಳಗ್ಗೆಯಷ್ಟೆ ಶೇವ್ ಮಾಡಿದ ನುಣುಪಾದ ಕೆನ್ನೆಯನ್ನು ಸವರಿಕೊಂಡೆ.

*******************************

ಮನೆ ಹತ್ತಿರ ಪಾರ್ಟಿಯೊಂದು ಜೋರಾಗಿ ನೆಡೆಯುತ್ತಿತ್ತು. ಅಭಿನಂದನಾ ಪಾರ್ಟಿಯಂತೆ. ಏರಿಯಾದ ಜನರನ್ನೆಲ್ಲಾ ಕರೆದಿದ್ದಾರಂತೆ. ಯಾಕಂತೆ ಪಾರ್ಟಿ ಅಂತ ಕೇಳಿದರೆ ಅವರ ಮಗನಿಗೆ ಅದೇನೋ ಸಿಕ್ಕಿದೆಯಂತೆ ಅಂದಿತು ಪಕ್ಕದ ಮನೆ ಅಜ್ಜಿ. ಪರಮವೀರಚಕ್ರವೋ, ರಾಷ್ಟಪತಿ ಪದಕವೋ, ಇನ್ನೇನೋ ಪ್ರಶಸ್ತಿಯೋ ಇರಬಹುದಾ, ವಿಶ್ ಮಾಡೋಣ ಅಂತ ಕುತೂಹಲದಿಂದ ನೋಡಿದರೆ ಪಾರ್ಟಿ ಇದ್ದದ್ದು ಕ್ಯಾಂಪಸ್ ಸೆಲೆಕ್ಷನ್ ನಲ್ಲಿ ಸಾಫ್ಟ್ ವೇರ್ ಕೆಲಸ ಸಿಕ್ಕಿದ್ದಕ್ಕೆ!! ಸ್ಯಾಲರಿ ಪ್ಯಾಕೇಜ್ ಬಗ್ಗೆ ಆಮೇಲೆ ಕೇಳೋಣ ಅಂತ ಸುಮ್ಮನಾದೆ.

*********************************

ಶಶಾಂಕ್ ಅಂಥ riskನ್ನು comfortable ಅಗಿ avoid ಮಾಡಿಕೊಂಡು ಮುನ್ನಡೆಯುತ್ತಾರೆ. ಅಂಥ possessiveness ಹುಡುಗಿಯರನ್ನು ಹೇಗೆ ಹಿಂಸೆ ಮಾಡುತ್ತದೆ ಎಂಬುದನ್ನು ತುಂಬ crisp ಆಗಿ ಶಶಾಂಕ್ ಹೇಳಿ ಮುಗಿಸುತ್ತಾರೆ. ಸಿನೆಮಾದ ಪ್ರತಿ ಪಾತ್ರವೂ ತನ್ನದೇ ಆದ ರೀತಿಯಲ್ಲಿ unfold ಆಗಿ, ಅತ್ಯಂತ Logical ಆಗಿ conclude ಆಗುತ್ತದೆ.

ಈ ಮೇಲಿನ ವಾಕ್ಯಗಳು ಬೆಂಗಳೂರಿನ ಯಾವುದೋ ಕಾನ್ವೆಂಟ್ ಮಕ್ಕಳು ಬರೆದದ್ದೋ ಅಥವಾ ಎಪ್ಫೆಮ್ ರೇಡಿಯೋದಲ್ಲಿ ಬಂದಿದ್ದೋ ಅಲ್ಲ.ಅದು ಕನ್ನಡದ ’ದೈತ್ಯ’ ಬರಹಗಾರರೊಬ್ಬರ ಬರಹದ ಉದಾಹರಣೆಗಳು. ಏನು ಮಾಡೋದು, ಅವರು ಏನು ಬರೆದರೂ ಕನ್ನಡಿಗರು ಒಪ್ಪಿಕೊಳ್ಳಲೇಬೇಕು. ಮತ್ತು ಹೀಗೆ ಬರೆಯುವವರೂ ಕೂಡ ಕನ್ನಡ ಲೇಖಕರು ಎಂದು ಒಪ್ಪಿಕೊಂಡು ಸುಮ್ಮನಿರಬೇಕು.

***********************************

ಮಳೆ..... ಮನೆ...

ಕೆಲತಿಂಗಳುಗಳ ಹಿಂದೆ ಬಿಸಿಲೆ ಘಾಟಿಯ ಕಾಡಿನಲ್ಲಿ ಅಮೋಘ ೨೫ ಕಿ.ಮಿ. ಚಾರಣ ಮಾಡಿದ ನಂತರ ಮತ್ತೆಲ್ಲೂ ಹೋಗದೇ ಬರೀ ಕಂಪ್ಯೂಟರ್ ಕುಟ್ಟೀ ಕುಟ್ಟೀ ಮೈ ಜೊತೆಗೆ ತಲೆಯೂ ಕೂಡ ಜಡ್ಡುಗಟ್ಟಿ ಹೋಗಿತ್ತು. ಸ್ವಾತಂತ್ರ್ಯೋತ್ಸವ , ಶನಿವಾರ, ಭಾನುವಾರ ಮೂರು ದಿನ ಒಟ್ಟಿಗೇ ರಜ ಸಿಕ್ಕಿದ್ದು ನೋಡಿ ಮತ್ತೆಲ್ಲಾದರು ಹೊರಟುಬಿಡೋಣ ಅನ್ನಿಸಿದರೂ ಕೊನೆಗೆ ಈ ಮಳೆಯಲ್ಲಿ ಆ ವಿಷಯ ಕೈ ಬಿಟ್ಟು ಮನೆಗೆ ಹೋಗೋಣ ಎಂದು ತೀರ್ಮಾನಿಸಿಕೊಂಡದ್ದಾಯಿತು. ಮನೆಗೆ ಹೋಗದೇ ಬಹಳ ದಿನಗಳೂ ಆಗಿದ್ದರಿಂದ ಈಗಲೂ ಹೋಗದಿದ್ದರೆ ಮನೆಯಲ್ಲೇ ಅಪರಿಚಿತನಾಗಿಬಿಡುತ್ತೇನೆ ಎಂಬ ಕಾರಣವೂ ಇತ್ತು. ಅದೂ ಅಲ್ಲದೇ ಮಳೆಗಾಲದಲ್ಲಿ ಮನೆಯ ಸುಖವೇ ಬೇರೆ. ಅದು ಹೇಗೆ ಅಂತ ಎಲ್ಲರಿಗೂ ಗೊತ್ತು. ಮತ್ತೆ ಕೊರೆಯೋಲ್ಲ.


ಗುರುವಾರ ಸಂಜೆ ಹೊರಟಿದ್ದಾಯಿತು. ರಾತ್ರಿ ೧೧ ಗಂಟೆಗೆ ಅಪ್ಪನಿಂದ ಫೋನು ಬಂತು. ನದೀ ನೀರು ಸೇತುವೆ ಮೇಲೆ ಹರೀತಾ ಇದೆ. ನೀನು ಮೇನ್ ಬಸ್ ಸ್ಟಾಂಡಿನಲ್ಲಿ ಇಳಿಯಬೇಡ. ಹಿಂದಿನ ಸ್ಟಾಪಿನಲ್ಲೇ ಇಳಿದುಕೋ ಅಂತ. ನಮ್ಮೂರಿನ ಸೇತುವೆಯದು ಪ್ರತಿವರ್ಷ ಮಳೆಗಾಲದಲ್ಲೂ ಇದ್ದದ್ದೇ. ಲಕ್ಕವಳ್ಳಿ ಅಣೆಕಟ್ಟಿನಲ್ಲಿ ಸ್ವಲ್ಪ ಜಾಸ್ತಿ ನೀರು ಹೊರಬಿಟ್ಟರೆ ಸಾಕು. ಸೇತುವೆ ಮೇಲೆ ನೀರು ಬಂದುಬಿಡುತ್ತದೆ. ಹಾಗಂತ ಅದೇನು ಭಾರೀ ಹಳೆಯದೇನಲ್ಲ. ೯೦ರ ದಶಕದಲ್ಲಿ ಕಟ್ಟಿಸಿದ್ದು. ಒಂದು ಸ್ವಲ್ಪವೂ ಕಾಮನ್ ಸೆನ್ಸ್ ಇಲ್ಲದೇ, ಭ್ರಷ್ಟಾಚಾರ ಮಾಡಿ ಕುಲಗೆಡಿಸಿರುವ ಸರ್ಕಾರಿ ಕೆಲಸವದು. ೧೦೦ ವರ್ಷಕ್ಕಿಂತಲೂ ಹಳೆಯದಾದ ಇನ್ನೊಂದು ಸೇತುವೆ ಇದೆ. ಇದುವರೆಗೂ ಅದರದ್ದು ಒಂದು ಕಲ್ಲೂ ಕೂಡ ಅಲುಗಾಡಿಲ್ಲ ಮತ್ತು ನದಿಯಲ್ಲಿ ಎಷ್ಟೆ ನೀರು ಬಂದರೂ ಸೇತುವೆ ಮೇಲೆ ಆರಾಮಾಗಿ ಓಡಾಡಬಹುದು. ಆದರೆ ಹೊಸಸೇತುವೆ ಮಾತ್ರ ಸಾಕಷ್ಟು ಎತ್ತರ ಇಲ್ಲದಿರುವುದರಿಂದ ಪ್ರತಿ ಮಳೆಗಾಲದಲ್ಲೂ ಅದರ ಮೇಲೆ ನೀರು ಹರಿದು, ಹಾಳಾಗಿ, ನಂತರ ತಿಪ್ಪೆ ಸಾರಿಸಲಾಗುತ್ತದೆ. ಇನ್ಯಾವಾಗ ಅದು ಮುರಿದುಬೀಳುತ್ತದೋ. ಅದು ಮುರಿದು ಬಿದ್ದು ೨೦ ಜನ ಸತ್ತು, ಪ್ರತಿಭಟನೆಗಳಾಗಿ, ರಾಜಕೀಯವಾಗಿ, ಹೊಡೆದಾಟವಾಗಿ ನಂತರವೇ ಸರ್ಕಾರಗಳು ಕಣ್ಣು ಬಿಡುವುದು ಅನಿಸುತ್ತದೆ. ಇರಲಿ. ಹೀಗೆಯೇ ಯೋಚಿಸುತ್ತಾ ರಾತ್ರಿ ೧೨ ಗಂಟೆಗೇ ಯಾವುದೋ ಊರೊಂದರಲ್ಲಿ ಆಟೋ ಚಾಲಕರ ಸಂಘದವರು ರಾಷ್ಟ್ರಗೀತೆ ಹಾಡುತ್ತಾ ಇದ್ದುದನ್ನು ಮಬ್ಬುಗಣ್ಣಿನಿಂದಲೆ ನೋಡಿ ೧ ಗಂಟೆಗೆ ಮನೆ ತಲುಪಿಕೊಂಡಾಯಿತು. ಮಾರನೇ ದಿನ ಕೆಂಪುಕೋಟೆಯಲ್ಲಿ ಬಾವುಟ ಹಾರಿಸುವಾಗ ಎದ್ದು ಸಲ್ಯೂಟ್ ಹೊಡೆದದ್ದೂ ಆಯಿತು. ತಿಂಡಿ ತಿಂದು ನದಿಯ ಹತ್ತಿರ ಹೋಗಿ ನೋಡಿದರೆ ನೀರು ಸೇತುವೆಯ ಕೆಳಭಾಗವನ್ನು ತಾಗಿಕೊಂಡೇ ಹರಿಯುತ್ತಿತ್ತು.

**********

ಟಿ.ವಿ.ಚಾನಲ್ ಗಳಲ್ಲಿ ಅವೇ ಕಿತ್ತೋದ ಪ್ರೋಗ್ರಾಮುಗಳನ್ನು ನೋಡಿ, ಇವು ಖಂಡಿತ ’ಉತ್ತಮ ಸಮಾಜಕ್ಕಾಗಿ’ ಅಲ್ಲ ಎಂದು ಬೇಜಾರು ಬಂದು ಮಾರನೇ ದಿನವೇ ಹತ್ತಿರದಲ್ಲೇ ಎಲ್ಲಾದರೂ ಪಿಕ್ನಿಕ್ ಹೋಗಿಬಂದರೆ ಹೇಗೆ ಎಂಬ ಯೋಚನೆ ಬಂದು ಅಪ್ಪನಲ್ಲಿ ಕೇಳಿದಾಗ ಅವರೂ ಹೂಂಗುಟ್ಟಿದರು. ಅಮ್ಮನಿಗೆ ಕೇಳಲಾಗಿ "ಈ ಮಳೆಲ್ಲಿ ನಾ ಬತ್ನಿಲ್ಲೆ, ನೀವಿಬ್ರು ಬೇಕಾರೆ ಹೋಗ್ ಬನ್ನಿ"ಎಂಬ ಹಸಿರು ನಿಶಾನೆಯೂ ದೊರೆಯಿತು. ನಾನೂ ಅಪ್ಪ ಜೋಗ, ಕೂಡ್ಲಿ, ತ್ಯಾವರೆಕೊಪ್ಪ, ಕೆಮ್ಮಣ್ಣುಗುಂಡಿ, ಕುಪ್ಪಳ್ಳಿ ಹೀಗೇ ಎಲ್ಲಿಗೆ ಹೋಗೋದು ಎಂದು ಲೆಕ್ಕಾಚಾರ ಹಾಕುತ್ತಿರುವಾಗಲೇ ಮಳೆ ಜೋರಾಗಿ ಶುರುವಾಗಿದ್ದು ನೋಡಿ ’ಗಾಜನೂರು’ ಸರಿಯಾದ ಜಾಗ, ಬೇಗ ಹೋಗಿಬರಬಹುದು ಎಂದು ತೀರ್ಮಾನ ಮಾಡಿಕೊಂಡು ಹೊರಟಿದ್ದಾಯಿತು. ಸಣ್ಣವರಿದ್ದಾಗ ಗಾಜನೂರು ಇಷ್ಟದ ಪಿಕ್ನಿಕ್ ಜಾಗಗಳಲ್ಲೊಂದಾಗಿತ್ತು. ಈಗ ಅಲ್ಲಿಗೆ ಹೋಗದೇ ಸುಮಾರು ೧೦ ವರ್ಷದ ಮೇಲಾಗಿತ್ತು. "ಮಳೆಲ್ಲಿ ನೆನಿಯಡಿ, ನಿಧಾನಕ್ ಹೋಗಿ, ಪ್ಯಾಂಟ್ ತುದಿ ಮಡಚ್ಕ್ಯಳಿ ರಾಡಿಯಾಗೋಗ್ತು " ಇತ್ಯಾದಿ ಸೂಚನೆಗಳನ್ನು ಅಮ್ಮನಿಂದ ಪಡೆದು ರಸ್ತೆಗಿಳಿದು ಮುಕ್ಕಾಲು ತಾಸಿನಲ್ಲಿ ಗಾಜನೂರು ತಲುಪಿಕೊಂಡದ್ದಾಯಿತು.

ಶಿವಮೊಗ್ಗದಿಂದ ತೀರ್ಥಹಳ್ಳಿ ರಸ್ತೆಯಲ್ಲಿ ೧೨ ಕಿ.ಮಿ. ದೂರದಲ್ಲಿದೆ ಗಾಜನೂರು. ತುಂಗಾ ನದಿಗೆ ಅಣೆಕಣ್ಣು ಕಟ್ಟಿರುವ ಜಾಗವದು. ಸುಮ್ಮನೇ ಸುಳ್ಳು ಹೇಳುವುದಿಲ್ಲ, ಹಳೇ ವೈಭವದ ಗಾಜನೂರನ್ನೇ ಮನಸಿನಲ್ಲಿಟ್ಟುಕೊಂಡು ಹೋಗಿದ್ದ ನಮಗೆ ಅಲ್ಲಿ ನೋಡಿದಾಗ ಭ್ರಮ ನಿರಸನವಾಯಿತು. ಮೊದಲು ಗಾಜನೂರಲ್ಲಿ ಅಣೆಕಟ್ಟು ಇರಲಿಲ್ಲ. ಅದು ಒಂದು ಜಲಾಶಯ(reservoir) ಆಗಿತ್ತು. ತುಂಗಾನದಿಗೆ ದೊಡ್ಡ ತಡೆಗೋಡೆಯೊಂದನ್ನು ಕಟ್ಟಿ ನೀರನ್ನು ನೀರಾವರಿಗಾಗಿ ಸಂಗ್ರಹಿಸಿರುತ್ತಿದ್ದರು. ಮಳೆಗಾಲದಲ್ಲಿ ಅದು ತುಂಬಿ ಹರಿದು ಆ ಗೋಡೆಯಿಂದ ಕೆಳಗೆ ಬೀಳುವ ದೃಶ್ಯವೇ ಅದ್ಭುತವಾಗಿತ್ತು. ಹತ್ತಿರದಿಂದ ಏನೂ ಅಪಾಯವಾಗದಂತೆ ನಿಂತು ನೋಡುವ ಅವಕಾಶವಿತ್ತು. ಆ ಕೆಂಪುನೀರು ಧುಮ್ಮಿಕ್ಕಿ ಬಿಳಿನೊರೆಯೊಂದಿಗೆ ಮತ್ತೆ ಹಾಗೆಯೇ ಸ್ವಲ್ಪ ಮೇಲೇರಿ ಹರಿದುಹೋಗುವುದನ್ನು ನೋಡುತ್ತಾ ನಿಲ್ಲಬಹುದಿತ್ತು. ಈಗ ಕೆಲ ವರ್ಷದಿಂದ ಅದ್ಯಾವುದೂ ಇಲ್ಲವಂತೆ. ಅಣೆಕಟ್ಟು ಕಟ್ಟಿ ಗೇಟುಗಳನ್ನು ಹಾಕಿಬಿಟ್ಟಿದ್ದಾರೆ. ಮೊದಲು ಇದ್ದ ತಡೆಗೋಡೆ ಈಗ ಮುಳುಗಿಹೋಗಿದೆ. ನೋಡಲು ಅಂತಹ ವಿಶೇಷವಾಗಿ ಕಾಣುವಂತದ್ದು ಏನೂ ಇಲ್ಲ. ಸರ್ಕಾರದವರು ಅಲ್ಲೇನೋ ಉದ್ಯಾನವನ ಮಾಡಬೇಕೆಂದು ಸ್ಕೆಚ್ ಹಾಕಿದ್ದಾರಂತೆ. ಅದು ಮಾಡಿ ಆದಮೇಲೆ(ಎಷ್ಟು ವರ್ಷವಾಗುತ್ತದೋ ಗೊತ್ತಿಲ್ಲ!) ಹೋಗಬಹುದೇನೋ. ಅಲ್ಲಿವರೆಗೆ ಪಿಕ್ನಿಕ್ಕಿಗಾಗಿ ಗಾಜನೂರಿನ ಹೋಗುವ ಇರಾದೆ ಇದ್ದರೆ ಮನಸಿಂದ ತೆಗೆಯಬಹುದು. ನಾವು ಹಾಗೆಯೇ ಒಂದು ತಾಸು ಅಲ್ಲೇ ಸುತ್ತುಹಾಕಿ ವಾಪಸ್ ಬಂದದ್ದಾಯಿತು.

****

ನಂತರ ಮತ್ತದೇ ಮಳೆ..... ಮನೆ...

***

ಸೋಮವಾರ... back to office :)

ಬುಧವಾರ, ಆಗಸ್ಟ್ 6, 2008

ಎಲೆಶೆಟ್ಟಿ

ನಿನ್ನೆ ಮನೆಯ ಬಾಲ್ಕನಿಯಲ್ಲಿ ನಿಂತಿದ್ದಾಗ ಭುಜದ ಹಿಂಭಾಗದಲ್ಲಿ ಏನೋ ಬಂದು ಕುಳಿತಂತಾಗಿ ತಿರುಗಿ ನೋಡಿದೆ. ಹಸಿರು ಬಣ್ಣದ ಕೀಟವೊಂದು ಕಾಣಿಸಿತು, ಮಿಡತೆಯಿರಬೇಕು ಇನ್ನೇನು ಹಾರಿಹೋಗುತ್ತದೆ ಎಂದು ಕೈಯನ್ನು ಭುಜದ ಮೇಲಿಟ್ಟೆ. ಉಹುಂ, ಅದು ಹಾರಲಿಲ್ಲ. ಹಾಗೆಯೇ ನಿಧಾನಕ್ಕೆ ಕೈಮೇಲೆ ಹತ್ತಿಸಿಕೊಂಡು ನೋಡಿದರೆ ಎಲೆಶೆಟ್ಟಿ! ಬೆಂಗಳೂರಿನಲ್ಲಿ ನಾನಿದನ್ನು ಕಂಡಿರಲಿಲ್ಲ. ಇದಕ್ಕೆ ಬೇರೆ ಬೇರೆ ಪ್ರದೇಶಗಳಲ್ಲಿ ಬೇರೆ ಬೇರೆ ಹೆಸರನ್ನು ಹೇಳುತ್ತಾರೆ. ನನ್ನ ಅಮ್ಮ ಹೇಳಿಕೊಟ್ಟ ಹೆಸರು ಎಲೆಶೆಟ್ಟಿ. ಇದು ಯಾವಾಗಲೂ ಗಿಡದ ಎಲೆಗಳ ಮಧ್ಯೆಯೇ ಇರುವುದರಿಂದ ಆ ಹೆಸರಿರಬಹುದು. ’ಶೆಟ್ಟಿ’ ಎಂಬ ಪದ ಯಾಕೆ ಸೇರಿತೆಂದು ಗೊತ್ತಿಲ್ಲ. ನಿಸರ್ಗವು ಅದೇ ಎಲೆಗಳ ಬಣ್ಣವನ್ನು ಕೊಟ್ಟಿರುವುದರಿಂದ ಇದು ಗಿಡದ ಮಧ್ಯೆ ಇದ್ದಾಗ ಕಂಡುಹಿಡಿಯುವುದು ಭಾರೀ ಕಷ್ಟ.

ಈ ಎಲೆಶೆಟ್ಟಿ ನನಗೆ ಮೊದಲಿಂದಲೂ ಒಂದು ರೀತಿ ಇಷ್ಟದ ಕೀಟ. ಪ್ರಾಥಮಿಕ ಶಾಲೆಯಲ್ಲಿದ್ದಾಗ ಮೊದಲ ಬಾರಿ ಇದನ್ನು ನೋಡಿದ್ದು. ಬೇಲಿ ಸಂದಿಯಲ್ಲಿ ಇದನ್ನು ನೋಡಿದ್ದ ನಾನೂ ನನ್ನ ಗೆಳೆಯರು ಇದ್ಯಾವುದೋ ಏನೋ ಹೆಚ್ಚು ಕಡಿಮೆಯಾಗಿ ಹುಟ್ಟಿದ ಅಥವಾ ಬೆಳೆದ (genetic mutation ಅನ್ನುತ್ತಾರೆ ಅಂತ pucನಲ್ಲಿ ಗೊತ್ತಾಯಿತು) ಹುಳ ಇರಬೇಕು ಅಂದುಕೊಂಡು ಅದಕ್ಕೆ ’ವಿಚಿತ್ರ ಜೀವಿ’ ಎಂದು ನಾಮಕರಣ ಮಾಡಿ ಒಂದು ಕೊಟ್ಟೆಯಲ್ಲಿ ಹಾಕಿಕೊಂಡು ಹೋಗಿ ಹುಡುಗರಿಗೆಲ್ಲಾ ತೋರಿಸಿದ್ದೆವು. ನಂತರ ಅದೇ ರೀತಿಯ ಸುಮಾರು ಶೆಟ್ಟಿಗಳನ್ನು ನೋಡಿದ ಮೇಲೆ ಇಂತದ್ದೊಂದು ಕೀಟವಿದೆ ಎಂದು ತಿಳಿದಿತ್ತು.

ಹಾಗೆಯೇ ಕೈಮೇಲೆ ಕೂರಿಸಿಕೊಂಡೇ ಅದರ ಮುಖವನ್ನು ನೋಡಿದೆ. ಅದೂ ನನ್ನನ್ನೇ ನೋಡಿತು. ಇಷ್ಟಿಷ್ಟು ದೊಡ್ಡ ಕಣ್ಣುಗಳನ್ನು ಬಿಟ್ಟುಕೊಂಡು ಮರುಕ ಹುಟ್ಟಿಸುವಂತೆ ಮಾಡಿತು. ಈ ಎಲೆಶೆಟ್ಟಿಯಲ್ಲಿ ನನಗೆ ಅದರ ವಿಚಿತ್ರ ದೇಹಕ್ಕಿಂತ ಅದರ ಮುಖ, ಭಂಗಿಗಳೇ ಆಶ್ಚರ್ಯವೆನಿಸುವುದು. ಮುಂದಿನ ಎರಡು ಕೈಗಳನ್ನು ಆಡಿಸುತ್ತಾ ಒಂದು ಸಾರಿ ಆಡಲು ಕರೆಯುವ ಮಗುವಿನಂತೆ, ಮತ್ತೊಂದು ಸಾರಿ ಗಂಡನ ಮೇಲೆ ಮುನಿಸಿಕೊಂಡ ಹೆಂಡತಿಯಂತೆ, ಇನ್ನೊಮ್ಮೆ ಏನೋ ನಿಂದು ಎಂದು ಕೇಳುವ ಗೆಳೆಯನಂತೆ, ಇವನ್ಯಾರಪ್ಪಾ ಎಂದು ನೋಡುವ ಅಪರಿಚಿತನಂತೆ, ನಿನ್ ಮಾತಾಡ್ಸಲ್ಲ ಹೋಗು ಎನ್ನುವ ಗೆಳತಿಯಂತೆ, ಚಪ್ಪಲಿಕದ್ದು ಸಿಕ್ಕಿಬಿದ್ದು ಬಿಟ್ಟುಬಿಡಿ ಎಂದು ಗೋಗರೆಯುವ ಪುಟ್ಟ ಹುಡುಗನಂತೆ ಹೀಗೆ ಹಲವು ರೀತಿ ಅನಿಸುತ್ತದೆ. ಅದು ಎಲೆ ಮೇಲೆ ಕುಳಿತಿದ್ದಾಗ ಅದನ್ನು ನೋಡಿದರೆ ಅದೂ ಕೂಡ ಅದರ ಕುತ್ತಿಗೆಯನ್ನು ತಿರುಗಿಸಿ ನಮ್ಮನ್ನೇ ನೋಡಿ ಯಾರೋ ಬಂದರಲ್ಲಾ ಅಂದುಕೊಂಡು ’ಹಾಯ್ ’ ಎಂದು ಮಾತಾಡಿಸುವಂತೆ ಮುಖ ಮಾಡುತ್ತದೆ. ಇದು ನನಗೊಬ್ಬನಿಗೇನಾ ಅಥವಾ ಎಲ್ಲರಿಗೂ ಅನಿಸುತ್ತದಾ ಕೇಳಲು ಹೋಗಿಲ್ಲ ಇದುವರೆಗೂ. ಎಲೆಶೆಟ್ಟಿ ಮರಿಗಳಂತೂ ಭಾರೀ ಮುದ್ದುಮುದ್ದಾಗಿರುತ್ತವೆ.

ಈ ಕೀಟ ಅದೇನು ತಿನ್ನುತ್ತದೆಯೋ, ಇದು ಆಹಾರ ಸರಪಳಿ/ಆಹಾರ ಜಾಲದಲ್ಲಿ ಎಲ್ಲಿದೆಯೋ, ಮೊಟ್ಟೆ-ಮರಿ, ಆಯಸ್ಸು, ವಯಸ್ಸು, ವಾಸ, ನಾಶ ಇನ್ನಿತರ ವಿವರಗಳೇನೂ ತಿಳಿದುಕೊಳ್ಳಲು ಹೋಗಿಲ್ಲ. ಹಕ್ಕಿಗಳ ಬಾಯಲ್ಲಿ(ಕೊಕ್ಕಲ್ಲಿ) ಇದು ಒದ್ದಾಡುವುದನ್ನು ನೋಡಿದ್ದೇನೆ. ಈ ನಿಸರ್ಗ ಎಷ್ಟು ಅದ್ಭುತ ಸೃಷ್ಟಿಗಳ ಆಗರ, ಈ ಭೂಮಿಗೆ ಎಷ್ಟೆಲ್ಲಾ ತರಹದ ಹಕ್ಕುದಾರರಿದ್ದಾರೆ ಅನಿಸುತ್ತದೆ. ಏನೇ ಆಗಲಿ ಎಲೆಶೆಟ್ಟಿ.. ಚೋ ಕ್ಯೂಟ್ ಎಂದುಕೊಂಡು ಪಕ್ಕದ ಮರದ ಎಲೆಯ ಮೇಲೆ ದಾಟಿಸಿದೆ. ಅದು ಒಮ್ಮೆ ತಿರುಗಿ ನೋಡಿ ಥ್ಯಾಂಕ್ಸ್ ಎಂದಂತೆನಿಸಿತು. :)


ಚಿತ್ರ ಕೃಪೆ: internet

ಗುರುವಾರ, ಜುಲೈ 17, 2008

ಸಬ್ಬಕ್ಕಿ / ಶಾಬಕ್ಕಿ / ಸೀಮೆಅಕ್ಕಿ

ಮೊದಲಿಂದಲೂ ಈ ವಿಷಯ ತಿಳಿದುಕೊಳ್ಳಬೇಕೆನಿಸುತ್ತಿತ್ತು. ಆದರೆ ಅನಿಸಿದ ಮರುಕ್ಷಣವೇ ಮರೆತುಬಿಡುತ್ತಿದ್ದೆ. ಮತ್ಯಾವಾಗಾದರೂ ಅದನ್ನು ನೋಡಿದಾಗಲಷ್ಟೆ ನೆನಪಾಗುತ್ತಿತ್ತು. ಈ ಬಾರಿ ಹಾಗಾಗುವುದಕ್ಕೆ ಬಿಡಲಿಲ್ಲ.

ಅಂದಹಾಗೆ.. ನನಗೆ ತಿಳಿದುಕೊಳ್ಳಬೇಕೆನಿಸಿದ ವಿಷಯ ಸಬ್ಬಕ್ಕಿ/ಶಾಬಕ್ಕಿ/ಸೀಮೆಅಕ್ಕಿ ಹೇಗೆ ಸಿಗುತ್ತದೆ ಎಂಬುದು. ಇದೊಂದು ಧಾನ್ಯವೇ, ಅಲ್ಲವೇ ಎಂಬ ಸಂಶಯವಿತ್ತು. ಅದು ಧಾನ್ಯದಂತೆ ಅನಿಸುತ್ತಿರಲಿಲ್ಲ. ಅದನ್ನು ಎಲ್ಲಾದರೂ ಬೆಳೆಯುವ ಬಗ್ಗೆಯಾಗಲೀ ಕೇಳಿರಲಿಲ್ಲ. ಇತ್ತೀಚೆಗೆ ಅಜ್ಜನ ಮನೆಗೆ ಹೋದಾಗ ಶಾಬಕ್ಕಿ ಪಾಯಸ ತಿಂದ ಮೇಲೆ ಇದರ ಬಗ್ಗೆ ತಿಳಿದುಕೊಳ್ಳಲೇಬೇಕೆಂದು ನಿಶ್ಚಯಿಸಿದೆ. ಮೊದಲನೆಯದಾಗಿ, ಕೇಳಬಹುದು ಅನ್ನಿಸಿದವರನ್ನು ಕೇಳಿದಾಗ ’ಗೊತ್ತಿಲ್ಲ’ ಎಂಬ ಉತ್ತರ ಸಿಕ್ಕಿದ್ದೇ ಹೆಚ್ಚು. ಇನ್ನೂ ಕೆಲವರು ಆ ವಿಷಯವನ್ನು ಇದೂವರೆಗೂ ಯೋಚಿಸಿಯೇ ಇರಲಿಲ್ಲ. ನಾನು ಕೇಳಿದ ಮೇಲೆ ’ಹೌದಲ್ವಾ, ಇದು ಹೇಗೆ ಬರುತ್ತದೆ’ ಎಂದು ತಲೆಕೆಡಿಸಿಕೊಂಡು ಸುಮ್ಮನಾದರು. ಕೆಲವರು ಇದು ಒಂದು ಧಾನ್ಯವಲ್ಲ ಅಥವಾ ಅಕ್ಕಿ,ರಾಗಿ,ಕಾಳುಗಳಂತೆ ಗದ್ದೆತೋಟದಲ್ಲಿ ಬೆಳೆಯುವುದಲ್ಲ ಎಂದು ಖಾತ್ರಿಯಾಗಿ ಹೇಳಿದರೂ ಕೂಡ ’ಮತ್ತೇನು, ಹೇಗೆ?’ ಎಂಬ ಪ್ರಶ್ನೆಗೆ ಉತ್ತರಕೊಡಲಾಗಲಿಲ್ಲ. ಹೀಗೆಯೇ ತನಿಖೆ ಜಾರಿಯಲ್ಲಿದ್ದಾಗ ಒಬ್ಬರಿಂದ ಇದನ್ನು ಗೆಣಸಿನಿಂದ ಮಾಡುತ್ತಾರೆ ಎಂದು ತಿಳಿದುಬಂತು. ಗೆಣಸು ಎಂದು ಕೇಳಿದ ಕೂಡಲೇ ನನ್ನ ಕುತೂಹಲ ಇಮ್ಮಡಿಯಾಯಿತು. ಎಲ್ಲಿಯ ಗೆಣಸು ಎಲ್ಲಿಯ ’ಅಕ್ಕಿ’! ಕೊನೆಗೂ ಯಾರಿಂದಲೂ ’ಹೇಗೆ ಮಾಡುತ್ತಾರೆ’ ಎಂಬ ಉತ್ತರ ಸಿಗದೇ ಕಿಸ್ಸಾನ್ ಕಾಲ್ ಸೆಂಟರ್ (1551) ಅಥವಾ ಕೃಷಿ ಕಾಲೇಜಿಗೆ ಫೋನ್ ಮಾಡಿ/ಭೇಟಿ ಕೊಟ್ಟು ತಿಳಿದುಕೊಳ್ಳುವ ಪ್ರಯತ್ನ ಮಾಡುವುದರೊಳಗಾಗಿ ಬೇಕಾದ ಮಾಹಿತಿಯನ್ನು ಪಡೆಯಲು ಯಶಸ್ವಿಯಾದೆ.

ಸಬ್ಬಕ್ಕಿ ಮತ್ತು ಸಬ್ಬಕ್ಕಿ ತಯಾರಿಕೆಯ ಮಾಹಿತಿಗಳು ಇಂತಿವೆ. ಗೊತ್ತಿಲ್ಲದವರು ತಿಳಿದುಕೊಳ್ಳಿ. ಗೊತ್ತಿದ್ದವರು ತಪ್ಪಿದ್ದರೆ ತಿದ್ದಿ.

ಸಬ್ಬಕ್ಕಿ ತಯಾರಿಸುವುದು ಮರಗೆಣಸಿನಿಂದ.
ಭಾರತದಲ್ಲಿ ೯೫% ಸಬ್ಬಕ್ಕಿಯನ್ನು ತಮಿಳುನಾಡಿನಲ್ಲಿ (ಸೇಲಂನಲ್ಲಿ ಹೆಚ್ಚು) ತಯಾರಿಸಲಾಗುತ್ತದೆ.
ತಯಾರಿಕೆಯ ವಿಧಾನ:
*ಮೊದಲು ರಾಶಿರಾಶಿ ಗೆಣಸುಗಳನ್ನು ತೊಳೆದು ಸಿಪ್ಪೆ ಸುಲಿಯಲಾಗುತ್ತದೆ.
*ನಂತರ ಅವುಗಳನ್ನು crusherಗಳಲ್ಲಿ ಹಿಸುಕಲಾಗುತ್ತದೆ. ಈ crushing ಪ್ರಕ್ರಿಯೆಯಲ್ಲಿ ನಾರಿನ ಭಾಗವು ಬೇರೆಯಾಗುತ್ತದೆ.
*ಹಿಸುಕಿದಾಗ ಬಂದ ಹಾಲಿನಂತ ದ್ರವವನ್ನು ಟ್ಯಾಂಕ್ ಗಳಲ್ಲಿ ಶೇಖರಿಸಿ ೨-೮ ತಾಸಿನವರೆಗೆ settle ಆಗಲು ಬಿಡಲಾಗುತ್ತದೆ. Settle ಆಗಲು ಬಿಟ್ಟ ಹಾಲಿನಲ್ಲಿ ಕಲ್ಮಶಗಳು ಮೇಲೆ ತೇಲುತ್ತವೆ ಮತ್ತು ಕೆಳಗೆ ಪೇಸ್ಟಿನಂತಹ starch(ಪಿಷ್ಟ,ಹಿಟ್ಟು) ವಸ್ತುವು ಉಳಿಯುತ್ತದೆ.
*ತೇಲುವ ಕೊಳೆ ಇತ್ಯಾದಿಗಳನ್ನು ತೆಗೆದ ನಂತರ ಉಳಿದ ಪೇಸ್ಟನ್ನು ಭಾಗಶಃ ಒಣಗಿಸಿ cakes ಪಡೆಯಲಾಗುತ್ತದೆ.
*ನಂತರ ತೂತುಗಳುಳ್ಳ ಉಕ್ಕಿನ ಹಾಳೆಗಳನ್ನು ಅಥವಾ ಯಂತ್ರಗಳನ್ನು ಬಳಸಿ ಬೇಕಾದ ಗಾತ್ರದಲ್ಲಿ ಸಣ್ಣ ಸಣ್ಣ ಗುಂಡುಗಳ ಆಕಾರಕ್ಕೆ ತರಲಾಗುತ್ತದೆ.
*ಅವುಗಳನ್ನು ೧೦೦ ಡಿಗ್ರಿ ಸೆಲಿಷಿಯಸ್ ಬಿಸಿಯಲ್ಲಿ ೬-೮ ನಿಮಿಷಗಳು ಹುರಿಯಲಾಗುತ್ತದೆ (roasting).
*ಸೂರ್ಯನ ಬೆಳಕಿನಲ್ಲಿ ೮-೧೨ ಗಂಟೆಗಳ ಕಾಲ ಒಣಗಿಸಲಾಗುತ್ತದೆ.
*ಕೊನೆಯದಾಗಿ polishing ಮಾಡಿದ ಮೇಲೆ ಸಬ್ಬಕ್ಕಿ ತಯಾರಾಗುತ್ತದೆ.

*******

ಶುಕ್ರವಾರ, ಜುಲೈ 4, 2008

ಕನ್ನಡದ್ದು ಟೈಂಪಾಸ್ ಸಾಹಿತ್ಯವಾಗಬೇಕಾ?

ಹಿಂಗೆ ಹೇಳ್ತೀನಿ ಅಂತ ಬೇಜಾರಾಗ್ಬೇಡ. ನೀನು "ರಾಶಿ ಚೊಲೋ ಇದ್ದು ಓದು" ಅಂತ ಒಂದು ಪುಸ್ತಕ ಕೊಟ್ಟಿದ್ದೆಯಲ್ಲ ಅದು ೨೦ ಪುಟ ಓದೋತನಕ ಬೇಜಾರಾಗಿ ಹೋಯಿತು. ಅದೇನು ಕಾಣಿಸಿತೆ ನಿಂಗದರಲ್ಲಿ ’ಚೊಲೋ ಇದ್ದು’ ಅನ್ನುವಂತದ್ದು? ಮತ್ತದೇ ಹಳೇ ಕಾಲದ ಹಳ್ಳಿ ಕಥೆ! ಅದೇ ಅತ್ತೆ, ಮಾವ, ಅನಾಥ, ಕೆಲಸ, ಮದುವೆ, ಸಂಸಾರ. ಅವರ್ಯಾರೋ ಯುವ ಬರಹಗಾರರಂತೆ. ಯುವ ಬರಹಗಾರರೆಂದ ಮೇಲೆ ಈಗಿನ ಕಾಲಕ್ಕೆ ತಕ್ಕಂತೆ ಸಮಕಾಲೀನ ಕಥೆಯೊಂದನ್ನು ತೆಗೆದುಕೊಂಡು ಏನಾದರೂ ಬರೆದಿರುತ್ತಾರೆನೋ ಎಂದು ಆಸಕ್ತಿಯಿಂದ ಓದಿದರೆ ಏನೂ ಇಲ್ಲ. ಮೂವತ್ತು ವರುಷದ ಹಿಂದಿನ ಸಾಹಿತ್ಯದಂತಿದೆ. ಆ ಕಾಲದ ಮನಸ್ಥಿತಿ, ಸಮಾಜಸ್ಥಿತಿಗೆ ತಕ್ಕಂತೆ ಇದ್ದುದರಿಂದಲೇ ಆವಾಗಿನ ಸಾಮಾಜಿಕ, ಸಾಂಸಾರಿಕ ಕತೆ, ಪುಸ್ತಕಗಳು ಅಷ್ಟು ಇಷ್ಟವಾದದ್ದು ಜನರಿಗೆ ಎಂಬುದು ಗೊತ್ತು. ಆದರೆ ಈಗೂ ಅದೇ ಬರೆಯುತ್ತಾ ಕೂತರೆ ಜನರಿಗೆ ಆಸಕ್ತಿ ಎಲ್ಲಿ ಉಳಿಯುತ್ತದರಲ್ಲಿ ಹೇಳು?

ಏನಾಗಿದೆ ನಮ್ಮ ಕನ್ನಡ ಬರಹಗಾರರಿಗೆ ಎಂಬುದೇ ತಿಳಿಯುವುದಿಲ್ಲ. ಹೆಚ್ಚಿನವರ ಕಥೆ, ಬರಹಗಳೇನೇ ಇದ್ದರೂ ಅದೇ ಅದೇ ಹಳೇ ವರಾತಗಳ ಸುತ್ತಲೇ ಗಿರಕಿ ಹೊಡೆಯುತ್ತಿರುತ್ತವೆ. ಹೋಗಲಿ ಹಳೇ ತಲೆಮಾರಿನ ಲೇಖಕರ ಬಗ್ಗೆ ತಕರಾರಿಲ್ಲ. ಆದರೆ ಈಗಿನ ಲೇಖಕರದ್ದೂ ಅದೇ ಸ್ಥಿತಿ. ಅವನ್ಯಾರೋ ಸಾಫ್ಟ್ ವೇರಿನವನಂತೆ, ಮತ್ಯಾರೋ ಬ್ಯಾಂಕ್ ಉದ್ಯೋಗಿಯಂತೆ, ಮತ್ತೊಬ್ಬ ಪತ್ರಕರ್ತ ಕಂ ಬರಹಗಾರನಂತೆ.. ಎಲ್ಲರೂ ಕೊರೆಯುವುದು ಅಥವಾ ಕೊರೆಯಲು ಪ್ರಯತ್ನಿಸುವುದು ಮತ್ತದೇ ಸಂಸಾರ, ಸಮಾಜ, ಪ್ರೀತಿ ಪ್ರೇಮದ ಕಥೆಗಳನ್ನ. ಕನ್ನಡ ಸಾಹಿತ್ಯ ಎಂದರೆ ಒಂದು ರೀತಿ ಟೈಂ ಪಾಸ್ ಸಾಹಿತ್ಯ ಆಗಿದೆಯೇ ಹೊರತು ವಿಷಯಾಧಾರಿತವಾಗಲೀ, ಜ್ಞಾನಾಧಾರಿತವಾಗಲೀ, ಸುದ್ದಿ ಕೇಂದ್ರಿತವಾಗಾಗಲೀ, ಸಮಕಾಲೀನ ವಿಷಯ, ವಿಚಾರಗಳನ್ನು ಹೊತ್ತಾಗಲೀ ಬರುವುದೇ ಕಡಿಮೆ. ಎಲ್ಲರೂ ಜೋತು ಬೀಳುವುದು ಅದೇ ಗುಲ್ ಮೊಹರ್ ಗಿಡಕ್ಕೆ ಮತ್ತು ಅದ್ಯಾವುದೋ ದೂರದೂರಿಂದ ಬಂದವರಿಗೂ ಅದೇನೇನೋ ಅನುಭೂತಿ ಆಗುವುದು ಗಾಂಧಿ ಬಜಾರಿನಲ್ಲಿ ಮಾತ್ರ !!

ಶಿವರಾಮ ಕಾರಂತರ ಸಾಹಿತ್ಯವನ್ನು ಓದಿರಬೇಕು ನೀನು. ಅವರು ಕೈಯಾಡಿಸದ ಸಾಹಿತ್ಯ ಪ್ರಾಕಾರಗಳಿಲ್ಲ. ಅತ್ತ ಶುದ್ಧ ಸಾಮಾಜಿಕ ಕಥೆಗಳ ಜೊತೆಗೆ ವಿಜ್ಞಾನ ಪುಸ್ತಕಗಳನ್ನೂ ಸಮರ್ಥವಾಗಿ ಕನ್ನಡದಲ್ಲಿ ಬರೆದರು. ಅವರ ಕಾಲಕ್ಕೆ ಸಮಕಾಲೀನ ವಿಷಯಗಳನ್ನೊಂಳಗೊಂಡ ರಾಜಕೀಯ, ಚಿಗುರಿಕೊಳ್ಳುತ್ತಿದ್ದ ಕೈಗಾರೀಕರಣ, ಅದರ ನೆರಳಲ್ಲೇ ಬದಲಾದ ನಮ್ಮ ಸಾಮಾಜಿಕ ಪರಿಸ್ಥಿತಿ ಎಲ್ಲವನ್ನೂ ಅಳವಡಿಸಿ ಬರೆಯುತ್ತಿದ್ದರು. ನಿನ್ನ ಫೇವರೇಟ್ ಲೇಖಕ ಪೂ.ಚಂ.ತೇ ಸಾಹಿತ್ಯವಂತೂ ಚಾರಿತ್ರಿಕ, ವೈಜ್ಞಾನಿಕ, ಮಾಹಿತಿಗಳ ಆಗರವಲ್ವಾ? ಕರ್ವಾಲೋ, ಜುಗಾರಿಕ್ರಾಸ್ ಗಳಲ್ಲಿ ಕಥೆಗಳ ಜೊತೆಗೆ ಒಂಥರಾ ಅದ್ಬುತವೆನಿಸುವ ವಿಷಯಗಳೆಷ್ಟಿದ್ದವು ಹೇಳು. ಅವರ ಮಿಲೇನಿಯಮ್ ಸೀರಿಸ್ ಓದಿಯೇ ಎಷ್ಟು ವಿಷಯಗಳನ್ನು ತಿಳಿದುಕೊಂಡಿಲ್ಲ ನಾವು. ಇಡೀ ಪ್ರಪಂಚವನ್ನೇ ಸುತ್ತಿಸಿಬಿಟ್ಟಿದ್ದಾರೆ. ಭೈರಪ್ಪನವರ ಸಾಹಿತ್ಯ ಓದಿದರೆ ಅದರಲ್ಲಿ ಅದೆಷ್ಟು ಅಧ್ಯಯನ ಶೀಲತೆ ತುಂಬಿರುತ್ತದಲ್ವಾ? ಎಷ್ಟು ಗೊತ್ತಿಲ್ಲದ ವಿಷಯಗಳನ್ನು ತಿಳಿದುಕೊಳ್ಳಬಹುದು. ಎಷ್ಟು ಸತ್ಯಗಳನ್ನು ಅರಿಯಬಹುದು.


ಅದೇ ಈಗಿನ ಲೇಖಕರನ್ನು ನೋಡು. ಕನ್ನಡ ಸಾಹಿತ್ಯವೆಂದರೆ ಅದೇ ’ಜುಟ್ಟಿನ ಮಲ್ಲಿಗೆ’ ಸಾಹಿತ್ಯವೆಂದು ತೀರ್ಮಾನಿಸಿಬಿಟ್ಟಂತಿದೆ. ಒಬ್ಬ ಅಂಕಣ ಕಾರ ಬರೆಯಲು ಶುರು ಮಾಡಿದ ಎಂದರೆ ಅಡಿಗರು ಹಿಂಗೆಂದರು, ಬೇಂದ್ರೆ ಹಾಗೆಂದರು, ಯೇಟ್ಸ್ ಅದು ಬರೆದ, ಶೇಕ್ಸ್ ಪಿಯರ್ ಇದು ಬರೆದ ಎಂದು ಬರೆದೇ ತುಂಬಿಬಿಡುತ್ತಾನೆಯೇ ಹೊರತು ತಾನು ಏನನ್ನುತ್ತೇನೆ ಎಂಬುದನ್ನೇ ಹೇಳುವುದಿಲ್ಲ. ಇನ್ನು ಕೆಲವರದ್ದು ನೋಡಬೇಕು. ಯಾವುದೋ ಇಂಗ್ಲೀಷ್ ಪುಸ್ತಕ ಓದಿಕೊಂಡು ಬರುವುದು, ಅಥವಾ ಇಂಗ್ಲೀಷ್ ಸಿನಿಮಾ ನೋಡಿಕೊಂಡು ಬರುವುದು , ನಂತರ ಅದರಲ್ಲಿನ ಕೆಲವು ಸಾಲುಗಳನ್ನು ಉಲ್ಲೇಖಿಸಿ ಆಹ್ ಅದ್ಭುತವಾಗಿದೆ ಎಂದು ಬರೆದುಬಿಡುವುದು. ತಮ್ಮ ಇಂಗ್ಲೀಷ್ ಪಾಂಡಿತ್ಯ ಪ್ರದರ್ಶನದ ಜೊತೆ ಕನ್ನಡದಲ್ಲಿ ಏನೂ ಬರುತ್ತಿಲ್ಲ ಎಂದು ಕೊರಗುವುದು. ಕೆಲವೊಮ್ಮೆ ನೋಡಿದ್ರೆ ಅವರಿಗೆ ಕನ್ನಡ ಓದುವಾಗ ಏನೂ ಭಾವನೆಗಳೇ ಬರೋಲ್ವೇನೋ ಅನ್ನಿಸಿಬಿಡತ್ತೆ. ಸರಿ ನೀನೆ ಬರೆಯಯ್ಯ ಎಂದು ಕೂರಿಸಿದರೆ ಆತ ಬರೆಯುವುದು ಮತ್ತದೇ ಗೊಡ್ಡು ಕಥೆ - ಪಟ್ಟಣದಿಂದ ೪೦ ಕಿ.ಮೀ ದೂರದಲ್ಲಿ ಮುಖ್ಯರಸ್ತೆಯಿಂದ ೩ ಮೈಲಿ ನೆಡೆದುಕೊಂಡು ಹೋಗಿ ಸೇರುವ ಕಾಡಿನ ನಡುವೆಯ ಹಳ್ಳಿಯೊಂದರಲ್ಲಿ ತೋಟದ ಮನೆಯ ದೇವರ ಕೋಣೆಯಲ್ಲಿ ವಿಶ್ವನಾಥ ಶಾಸ್ತ್ರಿಗಳು ಮೂಗು ಹಿಡಿದುಕೊಂಡು ಸಂಧ್ಯಾವಂದನೆ ಮಾಡುತ್ತಿದ್ದರು, ಹಿತ್ತಲಲ್ಲಿ ಅವರ ಹೆಂಡತಿ ಅತ್ತೆಯನ್ನು ಶಪಿಸುತ್ತ ಮುಸುರೆ ತಿಕ್ಕುತ್ತಿದ್ದಳು" ಎಂಬುದು.! ಮತ್ತೂ ಕೆಲವರಿಗೆ ತಾವು ’ಢಿಫರೆಂಟ್’ ಆಗಿ ಬರೆಯಬೇಕೆಂಬ ಚಪಲ. ಹಾಗೆ ಢಿಪರೆಂಟ್ ಆಗಿ ಬರೆಯುವುದೆಂದರೆ ಯಾರಿಗೂ ಅರ್ಥವಾಗದ ಹಾಗೆ ಬರೆಯುವುದೋ ಅಥವ ಕಥೆಗಳನ್ನು ಅರ್ಧ ಬರೆದು ಮುಕ್ತಾಯ ಕೊಟ್ಟುಬಿಡುವುದೋ ಅಂದುಕೊಂಡಿದ್ದಾರೆ. ಅದರಲ್ಲೂ ಮತ್ತದೇ ವಿಷಯ.. ಪ್ರೀತಿ, ಪ್ರೇಮ, ಗಂಡ, ಹೆಂಡತಿ, ಹಾದರ, ಡೈವೋರ್ಸು, ಮದುವೆ, ಮಾರಲ್ಸು, ಎಥಿಕ್ಸು.... ಕರ್ಮಕಾಂಡ! ಅವತ್ತಿನ ಒಂದು ಕಾರ್ಯಕ್ರಮದಲ್ಲಿ ಹಿರಿಯರೊಬ್ಬರು ವ್ಯಂಗ್ಯವಾಡಿದ್ದನ್ನು ನೀನೂ ಕೇಳಿಸಿಕೊಂಡೆಯಲ್ಲ .. ಕನ್ನಡದಲ್ಲಿ ೧೦ ವರುಷ ಕವನಗಳನ್ನು ಬರೆಯುವುದನ್ನು ನಿಷೇಧಿಸಿಬಿಡಬೇಕು ಅಂತ.. ಸ್ವಲ್ಪ ಜಾಸ್ತಿ ಆಯ್ತು ಅನ್ನಿಸಿದರೂ ಅದೆಷ್ಟು ಸರಿ ಅನ್ನಿಸಿಬಿಡುತ್ತದೊಮ್ಮೊಮ್ಮೆ. ಬರೆಯಲೆ ಬೇಕಂತಿದ್ದರೆ ಮನೆಯಲ್ಲಿ ದನ ಕರು ಹಾಕಿತು ಎಂದು ಬರೆದರೆ ಸಾಕು, ಅದು ಬೆದೆಗೆ ಬಂದಾಗಿನಿಂದ ಹಿಡಿದು ಕರ ಹೇಗೆ ಹಾಕಿತು ಅಂತೆಲ್ಲಾ ವಿವರಿಸಿ ಕೊರೆಯುವುದು ಬೇಡ ಎಂದು ಮತ್ತೊಬ್ಬರು ಹೇಳಿದಾಗ ನೀನು ಜೋರಾಗಿ ನಕ್ಕಿದ್ದೆ.

ಅಲ್ಲ, ಇದೆಲ್ಲಾ ಭಾವನೆಯ ವಿಷಯಗಳು ಬರಹಗಳಲ್ಲಿ ಇರುವುದು ಬೇಡವೆಂದು ನಾನು ಹೇಳುತ್ತಿಲ್ಲ . ಆದ್ರೆ ಬರೇ ಅದೇ ಆಗಿಬಿಟ್ಟರೆ ಏನು ಚಂದ ಹೇಳು. ಈಗೇನೋ ಪರ್ವಾಗಿಲ್ಲ, ಹಳೇ ತಲೆಮಾರಿನ ಓದುಗರೂ ಬೇಕಾದಷ್ಟಿರುವುದರಿಂದ ನಡೆಯುತ್ತದೆ. ಆದರೆ ಈಗಿನ ಕಾಲಕ್ಕೆ ತಕ್ಕಂತೆ, ಈಗಿನ ಯುವ ಜನಾಂಗಕ್ಕೆ ತಕ್ಕಂತೆ ಕಥೆಗಳನ್ನೋ, ಬರಹಗಳನ್ನೋ ಬರೆಯುವುದು ಬಿಟ್ಟು ಅಜ್ಜಿ ಕತೆಗಳನ್ನೇ ಬರೆಯುತ್ತಿದ್ದರೆ ಮುಂದಿನ ಪೀಳಿಗೆ ಕನ್ನಡ ಸಾಹಿತ್ಯದಲ್ಲಿ ಆಸಕ್ತಿ ಕಳೆದುಕೊಂಡು ಬಿಡುತ್ತಾರಲ್ವೇನೆ ?. ಚಾರ್ಲಿ ಸೆಂಟಿನ ಈ ಯುಗದಲ್ಲಿ ಇನ್ನೂ "ನೀ ಮುಡಿದ ಮಲ್ಲಿಗೆ ಹೂವು ...." ಅಂತ ಬರೆಯುತ್ತಾ ಕೂತರೆ ಜಡೆಯೇ ಇಲ್ಲದ ಹುಡುಗಿರನ್ನು ನೋಡುತ್ತ ಬೆಳೆಯುವ ಈಗಿನ ಮಕ್ಕಳಿಗೆ ಅದು ಇಷ್ಟವಾಗುವುದು ಹೇಗೆ ಹೇಳು? ಹಾಗಂತ ಅವರಿಗೆ ಮಲ್ಲಿಗೆ ಘಮದ ಪರಿಚಯವೇ ಬೇಡವಾ ಅಂತ ಕೇಳುತ್ತೀಯಾ? ಅದಕ್ಕೆ ಅರ್ಧ ಶತಮಾನದ ಸಾಹಿತ್ಯ ಇದೆ. ಅದನ್ನು ಓದಿಸಿದರಾಯಿತು. ಮತ್ತೆ ಮತ್ತೆ ಅದನ್ನೇ ಬರೆಯಬೇಕಿಲ್ಲ ಅಲ್ಲವಾ? ಆ ಕೆಲವು ಇಂಗ್ಲೀಷು ಪುಸ್ತಕಗಳು ಹೇಗಿರುತ್ತವೆ ನೋಡಿದ್ದೀಯಾ. ಅದೇ ಹಿಂದಿನ ವರುಷ ಕೊಟ್ಟಿದ್ದೆಯಲ್ಲ ’ಫೈವ್ ಪಾಯಿಂಟ್ ಸಮ್ ಒನ್’, ’ಒನ್ ನೈಟ್ ಅಟ್ ಕಾಲ್ ಸೆಂಟರ್’ ಅವುಗಳಲ್ಲಿ ಏನಿವೆ ಹೇಳು. ಆದರೂ ಅವು ಲಕ್ಷಾಂತರ ಮಾರಾಟವಾದವು. ಇಂಗ್ಲೀಷಿನ ಮಾರ್ಕೆಟ್ಟು ದೊಡ್ಡದು ಎಂಬುದೊಂದೇ ಕಾರಣವಲ್ಲ ಅದಕ್ಕೆ. ಅದಕ್ಕೆ ಮುಖ್ಯ ಕಾರಣ ಅವರು ಆರಿಸಿಕೊಂಡಿದ್ದು ಸಮಕಾಲೀನ ವಿಷಯ. ಯುವಜನಾಂಗಕ್ಕೆ ಸಂಬಂಧ ಪಟ್ಟಿದ್ದು. ಆ ಕತೆಯ ಜೊತೆಜೊತೆಯಲ್ಲೆ ಅದೆಷ್ಟು ಭಾವನೆಗಳಿಂದ ಹಿಡಿದು ಜಾಗತೀಕರಣ, ಶಿಕ್ಷಣ, ಸಮಾಜ, ಸಂಬಂಧ ಇನ್ನಿತರ ಅದೆಷ್ಟು ಸಮಕಾಲೀನ ವಿಷಯಗಳಿವೆ. ಅದನ್ನೂ ಕೂಡ ಗೇಲಿ ಮಾಡಿ ಮೈ ಪರಚಿಕೊಂಡು ಬರೆದಿದ್ದರು ನಮ್ಮ ಕನ್ನಡದ ಲೇಖಕರೊಬ್ಬರು. ಲಿಂಕ್ ಕಳಿಸುತ್ತೇನೆ ಓದುವಿಯಂತೆ. ರಾಮಾಯಣದಲ್ಲಿ ರಾಮ ಕೊನೆಗೆ ಸೀತೆ ಬೆಂಕಿಗೆ ಹಾರುವಂತೆ ಮಾಡಿದ್ದು ದೊಡ್ಡ ತಪ್ಪು ಎಂದು ಇನ್ನೂ ಸ್ತ್ರೀವಾದದ ಚರ್ಚೆ ಮಾಡುತ್ತಾ ಕೂರುವುದರಲ್ಲೇನು ಅರ್ಥವಿದೆ?! ರಾಮಾಯಣವೇನು ಬದಲಾಗುವುದಿಲ್ಲ ಅಲ್ಲವಾ?


ಮತ್ತೇನಿಲ್ಲ. ಕನ್ನಡದಲ್ಲೂ ಫ್ಯಾಂಟಸಿ, ಫಿಕ್ಷನ್, ರೊಮ್ಯಾನ್ಸ್, ಸಾಹಸ ಇತ್ಯಾದಿ ... ಒಟ್ಟಾಗಿ ಹೊಸ ಪೀಳಿಗೆಯನ್ನು ಆಕರ್ಷಿಸುವ, ಹಿಡಿದಿಡುವ ಪುಸ್ತಕಗಳು ಮುಖ್ಯವಾಹಿನಿಯಲ್ಲೇ ಬಂದರೆಷ್ಟು ಚಂದ ಅಲ್ವಾ?. ಆದರೇನು ಮಾಡುವುದು, ನಮ್ಮ ಕೆಲವರು ಅಂತಹ ಸಾಹಿತ್ಯವನ್ನು ಜಂಕ್ ಸಾಹಿತ್ಯವೆಂದು ಕರೆದು ಯಾರೂ ಓದದಂತೆ ಮಾಡಿಬಿಡುತ್ತಾರೆ.! ಬದಲಾಗಬೇಕು ಇದು. ಎಲ್ಲ ವಿಷಯಗಳ ಬಗ್ಗೆ ಕನ್ನಡದಲ್ಲೇ ಸಿಗುವಂತಾಗಬೇಕು. ಅದೇ ಹೊಸ ಬಾಟಲಿಯಲ್ಲಿ ಹಳೇ ಹೆಂಡ ತುಂಬಿ ತುಂಬಿ ಕೊಡುವುದರ ಬದಲು ಈಗಿನ ಕಾಲದ ಕಥಾವಸ್ತು, ಸನ್ನಿವೇಶಗಳನ್ನು ಒಳಗೊಂಡಿರುವ ಕತೆ ಕಾದಂಬರಿಗಳು ಬರಬೇಕು. ಮಾಹಿತಿಪೂರ್ಣ ಬರಹಗಳು, ಪುಸ್ತಕಗಳು ಬೇಕು. ವಿಜ್ಞಾನ ಬರಹಗಳು ಬರಬೇಕು. ಅಡುಗೆ, ಕೃಷಿಯಿಂದ ಹಿಡಿದು ದೇಶವಿದೇಶ, ಪರಮಾಣು, ನಕ್ಷತ್ರಗಳವರೆಗೂ ಪ್ರಸ್ತುತ ವಿಷಯಗಳ ಬಗ್ಗೆ, ಪ್ರಸ್ತುತ ಕ್ಷೇತ್ರಗಳ ಬಗ್ಗೆ ಹೆಚ್ಚು ಹೆಚ್ಚು ಬರಹಗಳು ಬರಬೇಕು. ಸುಮ್ಮನೆ ಒಂದೊಂದಕ್ಕೆ ಒಂದೊಂದು ಭಾಷೆಯ ಮೊರೆ ಹೋಗುವುದು ತಪ್ಪಬೇಕು. ಏನಿಲ್ಲ, ಬರೆಯುವವರೆಲ್ಲರು ಅವರವರು ಓದುತ್ತಿರುವ, ಕೆಲಸ ಮಾಡುತ್ತಿರುವ ಕ್ಷೇತ್ರಗಳ ಬಗ್ಗೆ, ಇನ್ನಿತರ ಆಸಕ್ತಿಯ ವಿಷಯಗಳ ಬಗ್ಗೆಯೇ ಬರೆದರೆ ಸಾಕು ಎಷ್ಟೋ ಸಹಾಯವಾಗುತ್ತದೆ.. ನಮ್ಮವರಿಗೆ ಎಲ್ಲವೂ ನಮ್ಮ ಭಾಷೆಯಲ್ಲೆ ಸಿಗುತ್ತಿದೆ ಎಂದು ಮನವರಿಕೆಯಾಗಬೇಕು. ಈ ರೀತಿ ಬರಹಗಳು ಇಲ್ಲವೇ ಇಲ್ಲ ಅಂತ ಏನೂ ಇಲ್ಲ. ಬೇಕಾದಷ್ಟಿವೆ , ಆದರೆ ಮುಖ್ಯವಾಹಿನಿಗೆ ಬರುತ್ತಿಲ್ಲ. ಪರಿಚಯವಾಗುತ್ತಿಲ್ಲ, ಪ್ರಚಾರ ದೊರೆಯುತ್ತಿಲ್ಲ, ಉಪಯೋಗವಾಗುತ್ತಿಲ್ಲ. ಊಟದಲ್ಲಿ ಕೋಸಂಬರಿ ಇರಲಿ, ಕೋಸಂಬರಿಯೇ ಊಟವಾಗುವುದು ಬೇಡ. ಮೇಲಾಗಿ ಈಗಿನ ಪೀಳಿಗೆಗೆ ಕೋಸಂಬರಿಗಿಂತ ಚಿಪ್ಸ್ ಇಷ್ಟ. ಮನೆಯಲ್ಲಿ ಒಳ್ಳೆಯ ಚಿಪ್ಸ್ ಸಿಗಲಿಲ್ಲವೆಂದರೆ ಅವರು Lays ಮೊರೆಹೋಗುವುದಂತೂ ಖಾತ್ರಿ. ಹೀಗಾಗದಿರಲಿ ಮತ್ತು ನಮ್ಮ ಯುವ ಬರಹಗಾರರು ಈ ನಿಟ್ಟಿನಲ್ಲಿ ಮುಂದುವರೆಯಲಿ ಎಂಬುದಷ್ಟೆ ನನ್ನ ಆಶಯ.

"ಇಷ್ಟೆಲ್ಲಾ ಮಾತಾಡ್ತೀಯಲ, ನೀನೆ ಬರೆಯೋ ನೋಡೋಣ" ಅಂತೀಯಾ ಅಲ್ವಾ ನೀನು :)

ಶುಕ್ರವಾರ, ಜೂನ್ 20, 2008

ಊರಿಗೇ ಒಂದು ದಾರಿಯಾದ್ರೆ ಪೋರನಿಗೇ ಒಂದು ದಾರಿ !


ಚಿತ್ರ ನೋಡಿ. ಆಟೋ ಸಿಸ್ಯ ಏನೋ ಸಂದೇಶ ಕೊಡ್ತಿದ್ದಾನೆ. ನಿನ್ನೆ ಟ್ರಾಫಿಕ್ ಸಿಗ್ನಲ್ಲಲ್ಲಿ ನಿಂತಾಗ ಎದುರುಗಡೆ ಕಾಣಿಸಿತು. ತಕ್ಷಣ ಕಟ್ಟೆ ಶಂಕ್ರ ಅವರು ಮೈಮೇಲೆ ಬಂದಂತಾಗಿ ಫೋನ್ ಕ್ಯಾಮೆರಾದಿಂದ ಫೋಟೋ ತೆಗೆದುಕೊಂಡೆ. :) "ಊರಿಗೇ ಒಂದು ದಾರಿಯಾದರೆ ಈ ಪೋರನಿಗೇ ಒಂದು ದಾರಿಯಂತೆ " ಅನ್ನುವ ಹಾಗಿದೆ ಇದು. ಹಿಂಗಾದ್ರೆ ಆ ತಿರುಪತಿ ಎಂಕಟ್ರಮಣನೇ ಕಾಪಾಡ್ಬೇಕು.

ಆದ್ರೂ...ಟ್ರಾಫಿಕ್ ಸಿಗ್ನಲ್ಲಲ್ಲಿ ಇಂತವೆಲ್ಲ ಇದ್ರೆ ಕಾಯೋದಕ್ಕೂ ಬೇಜಾರಾಗೋಲ್ಲ ಅಲ್ವಾ? :)

(ಫೋಟೋ ಮೇಲೆ ಕ್ಲಿಕ್ಕಿಸಿದರೆ ದೊಡ್ಡದಾಗಿ ಕಾಣುತ್ತದೆ)

ಮಂಗಳವಾರ, ಜೂನ್ 3, 2008

ನಕ್ಸಲೀಯರೇ ಬೆಂಗಳೂರಿಗೆ ಬನ್ನಿ !

ನಕ್ಸಲೀಯರೇ ಬೆಂಗಳೂರಿಗೆ ಬನ್ನಿ.

ಹೀಗೊಂದು ಕರೆ ಕೊಡುವುದು ಎಷ್ಟು ಸರಿಯೋ ಗೊತ್ತಿಲ್ಲ. ಏಕೆಂದರೆ ಕಾನೂನಿಂದ ನೀವು ನಿಷೇಧಿತರು. ಜನರನ್ನು ಸಾಯಿಸುವ ಕೊಲೆಗಡುಕರು. ಕೆಲವರು ನೀವು ಚೀನಾ ದೇಶದ ಬೆಂಬಲಿತರೆಂದೂ ಹೇಳುತ್ತಾರೆ. ಇರಲಿ.

ನಕ್ಸಲ್ಬಾರಿಯ ಮೂಲ ಅಲ್ಲೆಲ್ಲೋ ಬಿಹಾರದಲ್ಲಂತೆ. ಆದರೆ ನೀವು ಪ್ರಸಿದ್ಧಿಯಾಗಿದ್ದು ಮಾತ್ರ ಆಂಧ್ರದಲ್ಲಿ. ಬಡವರ ಉದ್ಧಾರಕ್ಕಾಗಿ ಜಮೀನ್ದಾರರ ದೌರ್ಜನ್ಯ, ಶೋಷಣೆಯ ವಿರುದ್ಧ ಶಸ್ತ್ರ ಸಹಿತರಾಗಿ ಹೋರಾಡುತ್ತೀವೆಂದು ಹೇಳಿಕೊಳ್ಳುತ್ತಾ ಆಂಧ್ರದಲ್ಲಿ ನೆಲೆಯೂರಿದಿರಿ. ಮೊದ ಮೊದಲು ಭ್ರಷ್ಟ ಅಧಿಕಾರಿಗಳನ್ನ, ರಾಜಕಾರಣಿಗಳನ್ನು ಮುಲಾಜಿಲ್ಲದೇ ಹೊಸಕಿ ಹಾಕಿದ ನೀವು ಒಂದಿಷ್ಟು ಪ್ರದೇಶದಲ್ಲಿ ಭಾರೀ ಜನಮನ್ನಣೆಯನ್ನೂ ಗಳಿಸಿಕೊಂಡಿರಿ. ನಿಜಕ್ಕೂ ಜಮೀನ್ದಾರರ ನೂರಾರು ವರ್ಷಗಳ ದಬ್ಬಾಳಿಕೆಯಿಂದ ಸೋತುಹೋಗಿದ್ದ ಜನಕ್ಕೆ ಆಶಾಕಿರಣವಾದಿರಿ. ನಿಮ್ಮ ಗುಂಪನ್ನು ವಿದ್ಯಾವಂತರೂ, ಮೇಧಾವಿಗಳೂ ಮುನ್ನಡೆಸುತ್ತಿದ್ದಾರೆಂಬ ಕಾರಣಕ್ಕಾಗಿ ಮಾಮೂಲಿ ಬಂಡುಕೋರರಾಗದೇ ಒಂದು ವಿಶಿಷ್ಟ ಛಾಪು ಮೂಡಿಸಿದಿರಿ. ಚುನಾವಣೆಯ ದಿಕ್ಕನ್ನೇ ಬದಲಾಯಿಸುವಷ್ಟು ಬಲಿಷ್ಠರಾದಿರಿ. ಆದರೆ ಬರುಬರುತ್ತಾ ಯಾವಾಗ ತೀರ ಅಮಾಯಕ ಜನರನ್ನು, ನಿಮಗಾಗದವರನ್ನು, ನಿಮ್ಮ ಪರ ಕೆಲಸ ಮಾಡದವರನ್ನು, ಕಾನೂನು ರಕ್ಷಕರಾದ ಪೋಲೀಸರನ್ನು ಕೊಲ್ಲುವುದು, ಪೋಲೀಸ್ ಠಾಣೆಯನ್ನು ಸ್ಪೋಟಿಸುವುದು, ರೈಲನ್ನು ಅಪಹರಿಸುವುದು, ಜನಪ್ರತಿನಿಧಿಗಳನ್ನು ಕೊಲ್ಲುವುದು, ಸಾಮೂಹಿಕ ಕಗ್ಗೊಲೆ ಮಾಡುವುದು ನಿಮ್ಮ ಕೆಲಸವಾಗಿ ಹೋಯಿತೋ ಆಗ ಈ ದೇಶದ ಭದ್ರತೆಗೇ ಧಕ್ಕೆ ಬರುವಂತಾಗಿ ಹೋಯಿತು. ಆದರೂ ನಿಧಾನಕ್ಕೆ ಆಂಧ್ರ ಗಡಿಯಿಂದ ನಮ್ಮ ಕರ್ನಾಟಕದೊಳಕ್ಕೂ ಕಾಲಿಟ್ಟಿರಿ.

ನೀವು ಕರ್ನಾಟಕದೊಳಕ್ಕೆ ಬರುವ ಮೊದಲೇ ಇಲ್ಲಿ ನಿಮಗೆ ಒಳಗೊಳಗೇ ಗುಪ್ತ ವೇದಿಕೆ ಸಿದ್ಧವಾಗಿತ್ತು ಎಂಬುದು ನಿಜ. ಇಲ್ಲಿನ ನಿಮ್ಮ ಸಿದ್ಧಾಂತದ ಅನುಯಾಯಿಯಳು, ನಿಮ್ಮ ಹೋರಾಟದ ಅಭಿಮಾನಿಗಳೂ ಆದ ಕೆಲವು ಪತ್ರಿಕೆಗಳ ಸಂಪಾದಕರುಗಳು, ಕೆಲ ವಿಶ್ವವಿದ್ಯಾಲಯದ ಪ್ರೊಫೆಸರುಗಳು, ಕೆಲ ಸಂಘಗಳೂ ನಿಮ್ಮನ್ನು ಸಂಭ್ರಮದಿಂದ ಪರೋಕ್ಷವಾಗಿ ಬರಮಾಡಿಕೊಂಡದ್ದು, ಈಗಲೂ ನಿಮ್ಮನ್ನೆ ಬೆಂಬಲಿಸುತ್ತಿರುವುದು ಸುಳ್ಳಲ್ಲ. ಹೀಗೆ ಬಡವರ, ಬುಡಕಟ್ಟುಜನರ, ಶೋಷಣೆಗೊಳಗಾದವರ ಸಹಾಯಕ್ಕೆಂದು ಹೇಳಿಕೊಳ್ಳುತ್ತಾ ಬಂದ ನೀವು ಸೀದ ನಮ್ಮ ಮಲೆನಾಡಿಗೇ ಹೊಕ್ಕು ಕುಳಿತು ಮಲೆನಾಡಿಗರಲ್ಲಿ ಆತಂಕ ಮೂಡಿಸಿದಿರಿ. ಎಷ್ಟೋ ಶತಮಾನಗಳಿಂದ ಭೂತಾಯಿಯ ಸೇವೆ ಮಾಡಿಕೊಂಡು ಕೃಷಿ, ಸಂಬಂಧಿತ ಕೆಲಸಗಳಿಂದ ಬದುಕು ಕಂಡುಕೊಂಡಿದ್ದವರು ನಮ್ಮ ಮಲೆನಾಡಿಗರು. ನೀವು ಇಲ್ಲಿಗೆ ಬಂದು ಹಲವು ವರ್ಷಗಳೇ ಕಳೆದು ಹೋದವು. ಆದರೆ ಮಾಡಿದ್ದಾದರೂ ಏನು? ಕಾಡಿನಲ್ಲಿ ಅಡಗಿ ಕುಳಿತು ಹಳ್ಳಿಗರನ್ನು, ನಿಮಗಾಗದವರನ್ನು, ಪೋಲೀಸರನ್ನು ಕೊಂದಿದ್ದೇ ಬಂತು ವಿನಃ ಯಾವ ಉದ್ಧಾರದ ಕಾರ್ಯಗಳೂ ಆಗಲಿಲ್ಲ. ಇದ್ದಷ್ಟರಲ್ಲೇ,ಸಿಕ್ಕಷ್ಟರಲ್ಲೇ ತೃಪ್ತಿ ಪಡುತ್ತಾ ಯಾರಿಗೂ ತೊಂದರೆ ಮಾಡದೇ ಬದುಕುತ್ತಿದ್ದ ಮಲೆನಾಡಿನ ಹಸಿರಿನ ಮಧ್ಯೆ ಕೆಂಪು ಕಲೆಗಳಾದವು. ಬಡವರ ಉದ್ಧಾರಕರೆಂದು ಹೇಳಿಕೊಂಡೇ ಬಂದ ನಿಮ್ಮಿಂದ ಬಡವರಿಗೆ ನೇರವಾಗಿ ನಯಾಪೈಸೆ ಲಾಭ ಆಗಲಿಲ್ಲ. ಒಂದೆಡೆ ಸರ್ಕಾರ, ಇನ್ನೊಂದೆಡೆ ನೀವು ಎಲ್ಲ ಸೇರಿ ಆತಂಕ, ಅಭದ್ರತೆ ಹೆಚ್ಚಾಯಿತೇ ಹೊರತು ಇನ್ನೇನಾಗಲಿಲ್ಲ. ಅಸಲಿಗೆ ನಮ್ಮ ಮಲೆನಾಡಿನಲ್ಲಿ ನೀವೆಣಿಸಿದ ಮಟ್ಟಿಗೆ ಜಮೀನ್ದಾರಿತನವಾಗಲೀ, ಬಡಜನರ ಶೋಷಣೆಯಾಗಲೀ ಇರಲೇ ಇಲ್ಲ. ಜಗತ್ತಿನೆಲ್ಲೆಡೆ ಇರುವಂತೆ ಕೆಲಸ ಮಾಡಿಸುವ ಮಾಲೀಕವರ್ಗ, ದುಡಿಯುವ ಕೆಲಸದ ವರ್ಗವಷ್ಟೆ ಇರುವುದು. ಆದರೂ ನೀವು ಹೆದರಿಸುವುದು, ಬೆಂಕಿ ಹಚ್ಚುವುದು, ಕೊಲ್ಲುವುದು ಇವೆಲ್ಲವುಗಳಿಂದ ಮಲೆನಾಡಿನ ನೆಮ್ಮದಿಯ ವಾತಾವರಣ ಹಾಳಾಗಲು ಕಾರಣರಾದಿರಿ. ನಿಮ್ಮವರನ್ನು ಪೋಲೀಸರು ಕೊಂದರು, ನೀವು ಅವರನ್ನು ಕೊಂದಿರಿ. ಕೊಲೆಗಳೇ ಕಾಯಕವಾಯಿತು.

ಉಳ್ಳವರದ್ದು ಕಿತ್ತುಕೊಂಡು ಇಲ್ಲದಿರುವವರಿಗೆ ಹಂಚಬೇಕು ಎನ್ನುವ ನಿಮ್ಮ ಸಿದ್ಧಾಂತವೇ ವಿಚಿತ್ರ. ಹಾಗೇನಾದರೂ ಎಲ್ಲರಲ್ಲೂ ಒಂದೇ ರೀತಿಯ ಸಂಪತ್ತು ಇರಬೇಕು ಅಂತಾಗಿದ್ದರೆ ಈ ಜಗತ್ತು ಹೀಗಿರುತ್ತಿತ್ತೆ? ಹಾಗೇ ಆಗಬೇಕಂತಿದ್ದರೆ ಈಗ ವಿಷಯಕ್ಕೆ ಬರೋಣ, ನೀವು ನಿಜವಾಗಿಯೂ ಜನರ ಉದ್ಧಾರಕ್ಕಾಗೇ ಹೋರಾಟ ಮಾಡುತ್ತಿದ್ದರೆ, ಭೂಮಾಲೀಕರ , ಜಮೀನುದಾರರ ವಿರುದ್ಧ ಹೋರಾಡುವವರಾಗಿದ್ದರೆ ಬೆಂಗಳೂರಿಗೆ ಬನ್ನಿ. ಇವತ್ತು ಬೆಂಗಳೂರೆಂಬುದು ಯಾವ ರೀತಿ ಬೆಳೆದು ನಿಂತಿದೆ ಎಂಬುದು ಕಾಡಿನಲ್ಲಿ ಕೂತಿದ್ದರೂ ನಿಮ್ಮ ಗಮನಕ್ಕೆ ಬರದೇ ಏನೂ ಹೋಗಿಲ್ಲ. ಅಸಲಿಗೆ ಕರ್ನಾಟಕದಲ್ಲಿ ’ಜಮೀನುದಾರ’, 'ಜಮೀನುದಾರಿತನ’ ಎನ್ನುವುದು ಇರುವುದಾದರೆ ಇವತ್ತು ಬೆಂಗಳೂರಲ್ಲಿ ಮಾತ್ರ! ಇಲ್ಲಿ ಭೂಮಿಯ ಬೆಲೆಗಳು, ಮನೆಗಳ ಬೆಲೆಗಳು ಯಾವ ರೀತಿ ಆಕಾಶಕ್ಕೇರಿವೆಯೆಂದರೆ ಸಾಮಾನ್ಯ ಜನ ಮುಟ್ಟಲೂ ಸಾಧ್ಯವಾಗುತ್ತಿಲ್ಲ. ಒಂದಿಷ್ಟು ರಿಯಲ್ ಎಸ್ಟೇಟ್ ಧಣಿಗಳು, ರಾಜಕಾರಣಿಗಳ ವ್ಯವಸ್ಥಿತ ಕೆಲಸಗಳಿಂದಾಗಿ ಜನರಿಗೆ ಸ್ವಂತ ನೆಲೆಯೊಂದನ್ನು ಮಾಡಿಕೊಳ್ಳಲು ಸಾಧ್ಯವೇ ಇಲ್ಲದಂತೆ ಆಗಿ ಹೋಗಿದೆ. ಬೇರೆ ಊರಿನಲ್ಲಿ ಬರೀ ಬಡವರು ಮಾತ್ರ ಬಡವರಾಗಿದ್ದರೆ, ಇಲ್ಲಿನ ಭೂಮಿ, ಮನೆ ಬೆಲೆಯ ಮುಂದೆ ಬಡವರಿಂದ ಮೇಲ್ಮಧ್ಯಮ ವರ್ಗದವರ ತನಕವೂ ಎಲ್ಲರೂ ಬಡವರೇ! ಸರ್ಕಾರದಿಂದ ವಿದೇಶಿ ಕಂಪನಿಗಳಿಗೆ ಮಣೆ ಹಾಕುವುದಕ್ಕಾಗಿ ರೈತರ ಜಮೀನು ಗಳನ್ನು ಕಸಿದುಕೊಳ್ಳಲಾಗುತ್ತಿದೆ. ತೀರ ಕೆರೆಗಳನ್ನೂ ಮುಚ್ಚಿಹಾಕಿ, ರೈತರಿಗೆ ಆಮಿಷ ತೋರಿಸಿ ಭೂಮಿಯನ್ನು ಸೈಟುಗಳನ್ನಾಗಿ ಮಾರಾಟ ಮಾಡಲಾಗುತ್ತಿದೆ, ದೊಡ್ಡ ದೊಡ್ಡ ಕಟ್ಟಡಗಳನ್ನೆಬ್ಬಿಸಲಾಗುತ್ತಿದೆ. ರೈತರು ವ್ಯವಸ್ಥಿತವಾಗಿ ಭೂಹೀನರಾಗಿ ಸ್ವಾವಲಂಬನೆ ಕಳೆದುಕೊಳ್ಳುತ್ತಿದ್ದಾರೆ. ಕೆಲವರು ಮಾತ್ರ ದಿನೇ ದಿನೇ ಕೊಬ್ಬುತ್ತಲೇ ಇದ್ದಾರೆ. ಭ್ರಷ್ಟಾಚಾರ, ಮೋಸಗಳಿಗೆ ಕಡಿವಾಣವೆ ಹಾಕುವವರಿಲ್ಲ. ಎಲ್ಲರಿಗೂ ಈ ಕೆಟ್ಟ ಬೆಳವಣಿಗೆಯ ಕಾರಣ, ಪರಿಣಾಮದ ಅರಿವಿದ್ದರೂ ಎಲ್ಲರೂ ಅಸಹಾಯಕರು. ಯಾವ ಕಾನೂನಿಗೂ ನಿಲುಕದಂತೆ ನಡೆಯುತ್ತಿರುವ ಈ ದರೋಡೆಯನ್ನ ನಿಮ್ಮ ಗಮನಕ್ಕೆ ತೆಗೆದುಕೊಳ್ಳಿ. ಬರೀ ಕಾಡಿನಲ್ಲಿರುವವರಷ್ಟೆ ಶೋಷಿತರಲ್ಲ, ನಗರಗಳಲ್ಲೂ ಇದ್ದಾರೆ. ನಿಜಹೇಳಬೇಕೆಂದೆರೆ ಇಲ್ಲಿಯೇ ಶೋಷಣೆಯ ಎಲ್ಲಾ ಮುಖಗಳೂ ಇವೆ. ನೀವು ಜನರ ಉದ್ಧಾರಕ್ಕಾಗಿ ಹೋರಾಡುವವರೇ ಆಗಿದ್ದರೆ ನಿಮ್ಮ ಅಗತ್ಯ ಕಾಡಿಗಿಂತ ಈ ನಾಡಿಗೆ ಬಹಳ ಇದೆ. ನೀವಷ್ಟೂ ಜನರೂ ಬರಬೇಕೆಂದೇನೂ ಇಲ್ಲ, ನಿಮ್ಮದೊಂದು ತುಕಡಿಯನ್ನು ಇಲ್ಲಿಗೆ ಕಳಿಸಿಕೊಡಿ. ಭೂಗಳ್ಳರ ಕೊಬ್ಬನ್ನು ಬಸಿದು ಅದರಿಂದ ಜನಸಾಮಾನ್ಯರ ಮನೆ ದೀಪ ಹಚ್ಚುವಂತ ಕೆಲಸ ಮಾಡುವುದಕ್ಕಾದರೆ ಮಾಡಿ. ಅಭಿವೃದ್ಧಿ, ಪ್ರಗತಿಯ ತೆರೆಯ ಹಿಂದೆ ನೆಡೆಯುತ್ತಿರುವ ಅನಾಚಾರಗಳನ್ನು ನಿಲ್ಲಿಸಿ. ಈ ಬೆಂಗಳೂರಿನಲ್ಲಿ ನಿಮಗೆ ಅಡಗಿಕೊಳ್ಳಲು ಮಲೆನಾಡಿನ ಕಾಡಿನಂತಹ ಜಾಗ ಸಿಗಲಾರದೆಂಬ ಭಯ ಬೇಡ. ಇಲ್ಲಿ ಪಾಕಿಸ್ತಾನದ ಏಜೆಂಟರು, ಭಯೋತ್ಪಾದಕರು, ಇನ್ನು ಎಂತೆಂತವರೋ ಯಾರಿಗೂ ಗೊತ್ತಾಗದಂತೆ ಇದ್ದಾರಂತೆ. ಅಂದ ಮೇಲೆ ನಿಮಗೇನೂ ಕಷ್ಟವಾಗಲಿಕ್ಕಿಲ್ಲ. ಹಾಗೂ ಆಗದಿದ್ದರೆ ನಿಮ್ಮ ಬುದ್ಧಿ ಜೀವಿ ಬೆಂಬಲಿಗರಿದ್ದಾರಲ್ಲ ಅವರೇನಾದರೂ ವ್ಯವಸ್ಥೆ ಮಾಡಿಯಾರು. ತಾನು ದೇವರನ್ನು ನಂಬುವುದಿಲ್ಲ ಎಂದು ಹೇಳಿಕೊಳ್ಳುತ್ತ, ಆ ದೇವರಿಗೂ ಸಿಗಲಾರದಂತೆ ನಿಮ್ಮನ್ನು ಇರಿಸಿಕೊಳ್ಳಬಲ್ಲೆ ಮನೆ ಬಿಟ್ಟು ಓಡಿ ಬನ್ನಿ ಎಂದು ಪ್ರೇಮಿಗಳಿಗೆ ಕರೆಕೊಡುವ ಬಡಾಯಿ ಸಂಪಾದಕರು, ಪತ್ರಿಕೋದ್ಯಮವನ್ನು ಹಾದರವಾಗಿಸಿದ ಕೆಲ ವಂಶವಾಹಿ ಪತ್ರಕರ್ತ ಪತ್ರಕರ್ತೆಯರು, ಅನೇಕಾನೇಕ ಪ್ರಶಸ್ತಿ ವಿಜೇತರೂ, ಕಾರ್ಯಕರ್ತರೂ ಇದ್ದಾರೆ. ಅವರ ಮಕ್ಕಳೆಲ್ಲ ವಿದೇಶದಲ್ಲಿದ್ದಾರೆ. ಬೇರೆಯವರ ಮಕ್ಕಳು ನಕ್ಸಲರಾಗಿ ಕಾಡುಸೇರುವುದನ್ನು ಕೊಲೆಮಾಡುವುದನ್ನು ಮಾತ್ರ ಬೆಂಬಲಿಸುತ್ತಾರೆ ಅವರು. ಇರಲಿ. ಆ ನಂತರ ನೋಡಿ, ಜನಬೆಂಬಲ ತಾನಾಗಿಯೇ ದಕ್ಕುತ್ತದೆ. ಯಾವ ಜನರು ನಕ್ಸಲೀಯರೆಂದರೆ ಕೊಲೆಗಡುಕರೆನ್ನುತ್ತಿದ್ದರೋ ಅವರೇ ಪೂಜಿಸತೊಡಗುತ್ತಾರೆ. ನಂತರ ಜನಮನ್ನಣೆ ಸಿಕ್ಕ ಮೇಲೆ ಪ್ರಜಾಪ್ರಭುತ್ವದೊಳಗೆ ಕಾಲಿಡಿ. ನಿಮ್ಮ ಬೆಂಬಲಿತ ಅಭ್ಯರ್ಥಿಗಳನ್ನು ಚುನಾವಣೆಗೆ ನಿಲ್ಲಿಸಿ ಗೆಲ್ಲಿಸಿ. ಈ ಮೂಲಕ ಸರ್ಕಾರದಲ್ಲಿ ಪಾಲ್ಗೊಂಡು ರಾಜ್ಯ, ದೇಶ ಉದ್ಧಾರ ಮಾಡಿ.

ಇದೆಲ್ಲಾ ಏನು ನಮಗೆ ಗೊತ್ತಿರದ ವಿಷಯವೇನಲ್ಲ, ನಮ್ಮ ಗುರಿಯೇ ಬೇರೆಯಿದೆ, ನಮಗೆ ಪ್ರಜಾಪ್ರಭುತ್ವದಲ್ಲಿ ನಂಬಿಕೆಯಿಲ್ಲ, ನಾವು ನಂಬಿಕೊಂಡಿರುವ ಮಾವೋ ಸಿದ್ಧಾಂತವೇ ಸರಿ, ಎಲ್ಲದಕ್ಕೂ ಶಸ್ತ್ರಗಳಿಂದಲೇ ಉತ್ತರ ಕೊಡುತ್ತೇವೆ, ಕೊಲೆಗಳನ್ನು ಮಾಡಿಯೇ ಕೆಂಪು ಬಾವುಟ ಹಾರಿಸುತ್ತೇವೆ ಎನ್ನುವುದಾದರೆ ... ಊಹೂಂ..ಶಸ್ತ್ರಗಳಿಂದ ಈ ದೇಶವನ್ನು, ಹೋಗಲಿ ದೇಶದ ಯಾವುದಾದರೊಂದು ಭಾಗವನ್ನು ಕೂಡ ಭೌಗೋಳಿಕವಾಗಲೀ, ಹಿಂಸೆಯ ಸೈದ್ಧಾಂತಿಕತೆಯಿಂದಾಗಲೀ ಆಕ್ರಮಿಸಿಕೊಳ್ಳಲು ನಿಮಗೇ ಯಾಕೆ ಬೇರೆ ಯಾರಿಂದಲೂ ಸಾಧ್ಯವಿಲ್ಲ. ಆ ಕನಸು ಇದ್ದರೆ ಬಿಟ್ಟು ಬಿಡುವುದು ಲೇಸು. ಬಂದೂಕಿನಿಂದ ಶಾಶ್ವತ ಪರಿಹಾರ ಅಸಾಧ್ಯ. ಅದು ಇನ್ನಷ್ಟು ತೊಂದರೆಗಳನ್ನುಂಟು ಮಾಡುವುದೇ ಹೊರತು ಇನ್ನೇನು ಆಗದು. ನಿಮ್ಮ ಹಿಂದೆ ಚೀನಾ ದೇಶದ ವ್ಯವಸ್ಥಿತ ಕುತಂತ್ರ , ಬೆಂಬಲ ಕೆಲಸ ಮಾಡುತ್ತಿದೆ ಎಂಬುದು ಖಾತ್ರಿಯಾದರಂತೂ ಮುಗಿದೇ ಹೋಯಿತು. ಏಕೆಂದರೆ ಈ ದೇಶದಲ್ಲಿ ಪ್ರಾಣಕ್ಕಿಂತಲೂ ಹೆಚ್ಚಿನ ದೇಶಭಕ್ತಿ ಇಟ್ಟುಕೊಂಡಿರುವ ಜನರು ಬಹಳಷ್ಟಿದ್ದಾರೆ, ದೇಶಭಕ್ತ ರಾಜಕೀಯ ಪಕ್ಷಗಳಿವೆ, ಎಲ್ಲದಕ್ಕಿಂತ ಹೆಚ್ಚಾಗಿ ಈ ದೇಶಕ್ಕೊಂದು ಪ್ರಚಂಡ ಸೇನೆ ಇದೆ ಮತ್ತು ಅದರಲ್ಲಿ ವೀರ ಸೈನಿಕರಿದ್ದಾರೆ. ಎಚ್ಚರ.

*******************************************************
ಜೂನ್ ೦೬ - ೨೦೦೮ thatskannada.comನಲ್ಲಿ - ನಕ್ಸಲೀಯರೇ ಬೆಂಗಳೂರಿಗೆ ಬನ್ನಿ.

ಸೋಮವಾರ, ಮೇ 19, 2008

"ಮುಸ್ಸಂಜೆಮಾತು" ಬಗ್ಗೆ ಒಂದಿಷ್ಟು ಮಾತು

"ಜೀವನದಲ್ಲಿ ಬೇರೆಯವ್ರಿಗೆ ಸಜೆಷನ್ಸ್ ಕೊಡೋದು ಸುಲಭ, ಆದ್ರೆ ನಮ್ ಜೀವನದಲ್ಲಿ ಅದನ್ನು ಫಾಲೋ ಮಾಡದು ಬಹಳ ಕಷ್ಟ."

’ಮುಸ್ಸಂಜೆ ಮಾತು’ ಚೆನ್ನಾಗಿದೆ ಅನ್ಸುತ್ತೆ, ಟೈಮ್ಸಾಫಿಂಡಿಯಾದಲ್ಲಿ ನಾಲ್ಕು ಸ್ಟಾರ್ ಕೊಟ್ಟಿದ್ದಾರೆ ಬಾ ಹೋಗೋಣ ಎಂದು ಗೆಳೆಯರು ಕರೆದರು. ಕೆಲದಿನಗಳಿಂದ ಆ ಚಿತ್ರದ ಪೋಸ್ಟರ್ ಗಳನ್ನು ನೋಡಿದ್ದೆ. ಚಿತ್ರ ಚೆನ್ನಾಗಿಯೇ ಇರಬಹುದು ಎನ್ನಿಸಿತ್ತು. ಮಾಮೂಲಿ ಪ್ರೇಮ ಕಥೆಗಳುಳ್ಳ ಚಿತ್ರಗಳನ್ನು ನೋಡದ ನನಗೆ ಇದ್ಯಾಕೋ ಸ್ವಲ್ಪ ಬೇರೆಯೇ ತರನಾದ ಮೆಚ್ಯೂರ್ಡ್ ಲವ್ ಸ್ಟೋರಿ ಇರಬಹುದು ಅನಿಸಿತ್ತು. ಸುದೀಪ ಇದಾನೆ ಅಂದ್ಮೇಲೆ ಸ್ವಲ್ಪ ಲೆವೆಲ್ಲಾಗೇ ಇರ್ಬೋದು ಅಂತ ನಂಬಿಕೆಯೂ ಇತ್ತು. ಎಲ್ಲಾ ಹಾಳಾಗಿ ಹೋಯಿತು. ಎಲ್ಲಿಂದ ಶುರುಮಾಡಿ ಎಲ್ಲಿಗೆ ಮುಗಿಸುವುದೋ ತಿಳಿಯುತ್ತಿಲ್ಲ. ಈಗಿನ ಸಿನೆಮಾ ಟ್ರೆಂಡಿನಂತೆ ನಾಯಕ ರೇಡಿಯೋ ಜಾಕಿ ಎಂಬುದೊಂದನ್ನು ಬಿಟ್ಟರೆ ಮತ್ತದೇ ೮೦ರ ದಶಕದ ಕಥೆ. ಕನ್ನಡದ ನಾಲ್ಕು ಸಿನೆಮಾ ನೋಡಿ ಅಭ್ಯಾಸವಿದ್ದವರು ಪ್ರತಿ ಸನ್ನಿವೇಶವನ್ನು, ಕಥೆಯನ್ನೂ ಸಂಭಾಷಣೆಗಳ ಸಮೇತ ಊಹಿಸಿಕೊಂಡುಬಿಡಬಹುದು !! ಚಿತ್ರ ಶುರುವಾಗಿ ೨೦ನಿಮಿಷದಲ್ಲೇ ನಾಯಕ ಟ್ರಾಫಿಕ್ ಜಾಮ್ ನಲ್ಲಿ ಸಿಕ್ಕು ಹಾಕಿಕೊಂಡಿದ್ದ ಗರ್ಭಿಣಿ ಹೆಂಗಸೊಬ್ಬಳನ್ನು ಎತ್ತಿಕೊಂಡು ಹೋಗಿ ಆಸ್ಪತ್ರೆಗೆ ಸೇರಿಸುತ್ತಾನೆ. ಅಲ್ಲಿ ಮಗು ಆದ ಮೇಲೆ ಆಕೆ "ಅಣ್ಣಾ, ನಿಮ್ಮುಪಕಾರನ್ನ ಯಾವತ್ತೂ ಮರೆಯೋಲ್ಲ, ಈ ಮಗುಗೇ ನಿಮ್ಮದೇ ಹೆಸರಿಡ್ತೀನಿ" ಅಂತಾಳೆ. ಆವಾಗಲೇ ಇಡೀ ಟಾಕೀಸಿಗೆ ಒಳಗೆ ಬಂದು ತಪ್ಪು ಮಾಡಿಬಿಟ್ಟೆವೇನೋ ಎಂಬ ಸುಳಿವು ಸಿಕ್ಕಿಹೋಗುತ್ತದೆ. ಇರಲಿ ನೋಡೋಣ ಎಂದುಕೊಂಡರೆ ಇಡೀ ಚಿತ್ರದಲ್ಲಿ ಎಲ್ಲಾ ಪಾತ್ರಗಳೂ ಕೊರೆಯುವವರೇ! ಒಂದಿಷ್ಟು ಒಳ್ಳೆಯ ಸಂದೇಶಗಳು ಇವೆಯಾದರೂ ಕೂಡ ನಿರೂಪಣೆ ನೀರಸ ನೀರಸ. ಭಾವನೆಗಳನ್ನೆಲ್ಲಾ ತಮಾಷೆಮಾಡಿಕೊಳ್ಳಲು ಅವಕಾಶ ಮಾಡಿಕೊಡುವಂತಾಗಿ ಹೋಗಿದೆ ಎರಡನೇ ಅರ್ಧದಲ್ಲಿ. ಕೊನೆಕೊನೆಗಂತೂ ಗಂಭೀರ ದೃಶ್ಯಗಳು ಬಂದಾಗಲೂ ಕೂಡ ಇಡೀ ಟಾಕೀಸಿಗೆ ಟಾಕೀಸೆ ಯಾವುದೋ ಹಾಸ್ಯ ಚಿತ್ರವೊಂದನ್ನು ನೋಡುತ್ತಿದ್ದಂತೆ ಪೂರ್ತಿ ಕಾಮಿಡಿಯಿಂದ ತುಂಬಿಹೋಗುತ್ತದೆ. ಇಡೀ ಊರತುಂಬಾ ಪೋಸ್ಟರುಗಳಲ್ಲಿ ಕಾಣುತ್ತಿದ್ದ ದೃಶ್ಯಗಳು ಕೇವಲ ಒಂದು ಹಾಡಿನದು. ಅದು ನಾಯಕ ನಾಯಕಿಗೆ ಪ್ರೇಮವಾಗುವ ಹಾಡು ಮತ್ತು ಅದಷ್ಟರಲ್ಲಿ ಮಾತ್ರ ಪ್ರೇಮ ಇರುವುದು.

"ಹುಡ್ಗೀರನ್ನ ರೇಗಿಸಿ ಪರ್ವಾಗಿಲ್ಲ, ಆದ್ರೆ ಅದಕ್ಕೊಂದು ಲಿಮಿಟ್ಟಿರ್ಲಿ", ಆಮೇಲೆ "ಯಾವನಾರೂ ಗಂಡಸು ಸುಮ್ನೆ ಅವನ ಪಾಡಿಗೆ ಅವನು ಇದಾನೆ ಅಂದ ಮಾತ್ರಕ್ಕೆ ಅವನು ಗಂಡಸೇ ಅಲ್ಲ ಅಂತ ಮಾತ್ರ ತಿಳ್ಕಬೇಡಿ" ಅಂತ ಸುದೀಪ ಸುಮ್ಸುಮ್ನೇ ಇರುವ ಫೈಟಿಂಗ್ ಒಂದು ಮುಗಿದ ಮೇಲೆ ಹೊಡೆಸಿಕೊಂಡ ರೌಡಿಗಳಿಗೆ ಉಪದೇಶ ಕೊಡುತ್ತಾನೆ. "ಈ ರೇಡಿಯೋ ಜಾಕಿ ಕೆಲ್ಸ ಬಿಟ್ಟು ಯಾವುದಾದ್ರೂ ಐ.ಟಿ ಕಂಪನಿ ಸೇರ್ಕೋ, ಒಳ್ಳೇ ಸಂಬಳ, ನೆಮ್ಮದಿಯಾಗಿ ಇರ್ಬೋದು" ಅಂತ ನಾಯಕನ ಅಮ್ಮ ಟಿಪಿಕಲ್ ಅಮ್ಮನಂತೆ ಹೇಳುತ್ತಾಳೆ !! ಟಾಕೀಸಿನಲ್ಲಿದ್ದ ಐ.ಟಿ. ಹುಡುಗರು ಹೋ...... ಎಂದು ಕೂಗುತ್ತಾರೆ

ಈ ಚಿತ್ರ ಮಾಡಿದ ನಿರ್ಮಾಪಕ, ನಿರ್ದೇಶಕನಿಗೆ ಬೈಯಬೇಕೋ, ನೋಡಿದ ನಮಗೆ ನಾವೇ ಬೈಕೊಬೇಕೋ ತಿಳೀತಿಲ್ಲ. ಸುದೀಪನ ನಟನೆ, ಮಾತು ಬಗ್ಗೆ ಎರಡು ಮಾತಿಲ್ಲವಾದರೂ ಇಂತದೇ ಚಿತ್ರಗಳನ್ನ ಮಾಡ್ತಾ ಇದ್ರೆ ಆಮೇಲೆ "ಯಾರೋ ಯಾರೋ ಗೀಚಿ ಹೋದ .. ಹಾಳೂ ಹಣೆಯಾ ಬರಹ...." ಅನ್ಬೇಕಾಗತ್ತೆ. ಹಾಸ್ಯ,ಹರಟೆ ಖ್ಯಾತಿಯ ಗಂಗಾವತಿ ಬೀಚಿ ಪ್ರಾಣೇಶ್ ಮತ್ತು ಪ್ರೊ.ಕೃಷ್ಣೆಗೌಡರು ಬಹುಶ: ಮೊದಲ ಬಾರಿಗೆ ಚಿತ್ರವೊಂದರಲ್ಲಿ ನಟಿಸಿದ್ದಾರೆ ಮತ್ತು ನಾಯಕನಿಗಿಂತ ಅವರ ಎಂಟ್ರಿಗೇ ಜಾಸ್ತಿ ಸಿಳ್ಳೆಗಳು ಬೀಳುತ್ತವೆ. ಹಾಗಂತ ಚಿತ್ರದಲ್ಲಿ ತೀರ ನಗು ಬರುವಂತಹ ಹಾಸ್ಯ ಏನೂ ಇಲ್ಲ! ಒಂದು ಕಾಲದಲ್ಲಿ ಇಂತಹುದ್ದನ್ನೆಲ್ಲಾ ನೋಡುಗರು ಗಂಭೀರವಾಗಿ ನೋಡುತ್ತಿದ್ದರು. ಆದರೆ ಈಗಿನ ನೋಡುಗರ ಮನಸ್ಥಿತಿ, ಅಭಿರುಚಿ ಹಾಗಿಲ್ಲ ಎಂಬುದು ನಿರ್ದೇಶಕನಿಗೆ ಅರ್ಥವಾಗಿಲ್ಲ. ಪದೇ ಪದೇ ಪ್ರೇಕ್ಷಕನನ್ನು ಅಳಿಸಲು ಪ್ರಯತ್ನವನ್ನು ಮಾಡಿದಂತಿದೆ. "ಹೇಳಲೊಂಥರಾ ಥರಾ.." ಎಂಬ ಹಾಡನ್ನು ಬಿಟ್ಟರೆ ಬೇರ್ಯಾವುದೂ ಬೇಕೆಂದರೂ ನೆನಪಾಗುವುದಿಲ್ಲ.!! ಇಷ್ಟೆಲ್ಲಾ ಹೇಳಿದ ಮೇಲೂ ಚಿತ್ರದ ಕಥೆ ಏನು ಅಂತ ಹೇಳೋ ಅಗತ್ಯ ಕಾಣ್ತಾ ಇಲ್ಲ, ಹೇಳಲು ತಾಳ್ಮೆನೂ ಇಲ್ಲ.

ಸೆಂಟಿಮೆಂಟ್ ಗಳನ್ನು ಇಷ್ಟ ಪಡೋವ್ರಾದ್ರೆ, ಗಂಭೀರವಾಗಿ ನೋಡೋವ್ರಾದ್ರೆ, ಡೀಸೆಂಟಾದ ಚಿತ್ರವೊಂದನ್ನು ನೋಡಬೇಕಾಗಿದ್ರೆ, ಮಾಡಲು ಬೇರೆ ಏನೂ ಕೆಲಸ ಇಲ್ಲಾಂದ್ರೆ ಇನ್ನು ನಾಲ್ಕು ದಿನದೊಳಗೆ ಚಿತ್ರ ನೋಡಿಕೊಂಡು ಬನ್ನಿ. ಆಮೇಲೆ ಯಾವ ಟಾಕೀಸಿನಲ್ಲೂ ಇರೋಲ್ಲ ಅಂತ ಖಾತ್ರಿ ಇದೆ. ಇಲ್ಲಾಂದ್ರೆ ಸುಮ್ನೆ ನಮ್ಮ ಹಾಗೆ ಒಂದು ಮುಸ್ಸಂಜೆ ಹಾಳು ಮಾಡ್ಕೋಬೇಡಿ. ನನ್ನನ್ನು ಕರೆದುಕೊಂಡು ಹೋಗಿದ್ದ ಗೆಳೆಯರು ಅರ್ಧಗಂಟೆ ಮೊದಲೇ ಎದ್ದುಹೋಗಿ ಬಚಾವಾಗಿ ಬಿಟ್ಟರು !

ಅಂದ ಹಾಗೆ ಮರೆತುಬಿಟ್ಟಿದ್ದೆ , ಈ ಬರಹದ ಮೊದಲಲ್ಲಿ ಹೇಳಿದ ಮಾತಿದೆಯಲ್ಲ ಅದು ನಂದಲ್ಲ, ಅದೂ ಕೂಡ ಸಿನೆಮಾದಲ್ಲಿ ಸುದೀಪ ಹೇಳಿದ್ದು. ಚೆನ್ನಾಗಿದೆ ಅಲ್ವಾ?

ಬೆಂಕಿಬೀಳಲಿ ಆ ಟೈಮ್ಸಾಫಿಂಡಿಯಾಗೆ ಮತ್ತು ಅದರ ರೇಟಿಂಗಿಗೆ.


(ವಿ.ಸೂ: ಮೇಲಿನ ಅಭಿಪ್ರಾಯಗಳು,ವಿಮರ್ಶೆಗಳು ವೈಯಕ್ತಿಕ ಮಾತ್ರ)

ಪೂರಕ ಓದಿಗೆ : ಮುಸ್ಸಂಜೆ ಮಾತು, ಮಧ್ಯರಾತ್ರಿ ಗೋಳು :)

ಸೋಮವಾರ, ಮೇ 12, 2008

ವರುಷ ಕಳೆಯಿತು

ಒಂದೂವರೆ ವರ್ಷಕ್ಕೂ ಹಿಂದಿನ ಮಾತು. ಆರ್ಕುಟ್ಟಿನ ಯಾವುದ್ಯಾವುದೋ ಕಮ್ಯುನಿಟಿಗಳಲ್ಲಿ ಮಾಡುತ್ತಿದ್ದ ಚರ್ಚೆ, ಪ್ರೀತಿ, ಜಗಳಗಳು ಹೊಸ ಹೊಸ ವಿಚಾರಗಳನ್ನು ತಿಳಿದುಕೊಳ್ಳಲು, ಹೊಸ ಹೊಸ ಲೋಕಗಳಿಗೆ ತೆರೆದುಕೊಳ್ಳಲು ಕಾರಣವಾಯ್ತು. ಹೊಸ ಹೊಸ ಜನರ ಪರಿಚಯವಾಯ್ತು. ಆಗ ಒಬ್ಬ ಓದುಗನಾಗಿ ಕೆಲವೇ ಕೆಲವು ಪರಿಚಿತರ, ಗೆಳೆಯರ, ಸಂಬಂಧಿಕರ ಇಂಗ್ಲೀಷ್ ಬ್ಲಾಗುಗಳಲ್ಲಿ ಓಡಾಡುತ್ತಿದ್ದೆ. ಕನ್ನಡದ ಒಂದೆರಡು ಬ್ಲಾಗುಗಳನ್ನು ನೋಡಿದ್ದರೂ ಅವು ಅಪ್ಡೇಟ್ ಆಗುತ್ತಿದ್ದುದು ಅಪರೂಪವಾಗಿರುತ್ತಿತ್ತು. ಬಹುಶ: ನಾನು ಮೊದಲು ನೋಡಿದ ಸಕ್ರಿಯ ಕನ್ನಡ ಬ್ಲಾಗು ಶ್ರೀನಿಧಿಯದಿರಬೇಕು. ನಂತರ ಅವನಿಂದ ಹಲವು ಕೊಂಡಿಗಳು ಸಿಕ್ಕವು. ಚೆಂದ ಚೆಂದನೆಯ ಪೋಸ್ಟಿಂಗ್ ಗಳನ್ನು ಹೊತ್ತು ಬರುತ್ತಿದ್ದ ಶ್ರೀನಿಧಿ,ಸುಶ್ರುತ,ಸಂದೀಪ ಮೊದಲಾದ ಹಲವರ ಬ್ಲಾಗುಗಳನ್ನು ಓದುತ್ತಾ, ಕಮೆಂಟಿಸುತ್ತಾ ಖುಷಿ ಪಡುತ್ತಿದ್ದೆ. ಹೀಗೆ ಸುಮಾರು ತಿಂಗಳುಗಳು ಕಳೆದ ಮೇಲೆ ನನ್ನ ಅಭಿಪ್ರಾಯಗಳನ್ನು, ಅನಿಸಿಕೆಗಳನ್ನು, ಅನುಭವಗಳನ್ನು ಅಭಿವ್ಯಕ್ತಿಗೊಳಿಸಲು, ಮತ್ತಿತರ ಮಾಹಿತಿ, ವಿಷಯಗಳನ್ನು ದಾಖಲಿಸಲು, ಹಂಚಿಕೊಳ್ಳಲು ನನ್ನದೇ ಒಂದು ಬ್ಲಾಗ್ ಮಾಡಿಕೊಳ್ಳಬೇಕೆಂಬ ಆಸೆ ಚಿಗುರತೊಡಗಿತು. ಶ್ರೀನಿಧಿಯನ್ನು ನಾನು ಒಂದು ಬ್ಲಾಗ್ ಮಾಡಿದರೆ ಹೇಗೆ ಎಂದು ಕೇಳಿದೆ. ಅವನು ತನ್ನ ಮಾಮೂಲಿ ಶೈಲಿಯಲ್ಲಿ "ನಿನಗೆ ಅವತ್ತಿಂದ ಬಡ್ಕತಾ ಇದ್ನಲಲೇ ,ಮೊದ್ಲು ಮಾಡಿ ಸಾಯಿ" ಎಂದ. ಅಗತ್ಯವಿದ್ದುದನೆಲ್ಲ ಹೇಳಿಕೊಟ್ಟ. ಹೇಗಿದ್ದರೂ ಕನ್ನಡ ಬರೆಯಲು ’ಬರಹ’ ಸಾಫ್ಟ್ ವೇರಿತ್ತು. ಬರೆಯುವ ಜಾಗ ಕೊಡಲು ಗೂಗಲ್ ನ ಬ್ಲಾಗ್ ಸ್ಪಾಟಿತ್ತು. ಬರೆಯಲು ನಾನಿದ್ದೆ, ಏನೋ ಬರೆಯಬಲ್ಲೆ ಎಂಬ ನಂಬಿಕೆ ಮೊದಲಿಂದ ಹೇಗೂ ಇತ್ತು. ಓದಲು ಯಾರಿದ್ದರೋ ಗೊತ್ತಿರಲಿಲ್ಲ ! ಅಂತೂ ಸರಿಯಾಗಿ ೨೦೦೭ ನೇ ಇಸ್ವಿ ಮೇ ೧೦ ರಂದು ಬ್ಲಾಗ್ ಶುರು ಮಾಡಿದೆ. ಮೊದಲು ಪೋಸ್ಟಿಂಗ್ ಮಾಡಿದಾಗ ಹೆಂಡತಿಯ ಚೊಚ್ಚಲ ಹೆರಿಗೆಯ ಸಮಯದಲ್ಲಿ ಗಂಡನಿಗಿರುವ ದುಗುಡವಿತ್ತು.! :)

ಅಂದಿನಿಂದ ಇಂದಿನವರೆಗೆ ಬರೆದದ್ದು ಜಾಸ್ತಿಯೇನೂ ಇಲ್ಲ. ಮನಸು ಬಂದಾಗ , ಬಿಡುವಿದ್ದಾಗ, ವಿಷಯವಿದೆ ಎನಿಸಿದಾಗಲಷ್ಟೆ ಬರೆದಿದ್ದೇನೆ. ಬ್ಲಾಗ್ ಎಂಬುದು ಇರುವುದೇ ಅದಕ್ಕೆ. ಬ್ಲಾಗಿನಿಂದಲೇ ಹಲವು ಸಮಾನ ಮನಸ್ಕರು, ಮಿತ್ರರು, ಪ್ರೀತಿಪಾತ್ರರು ಸಿಕ್ಕಿದ್ದಾರೆ, ವಿಷಯಗಳನ್ನು ತಿಳಿದುಕೊಂಡಿದ್ದೇನೆ. ಬರೆದ ಕೆಲವು ಲೇಖನಗಳಿಗೆ ಹೊಗಳಿಕೆ ಸಿಕ್ಕಿದೆ ಜೊತೆಗೆ ಬೈಗುಳಗಳೂ ಚೆನ್ನಾಗಿಯೇ ಸಿಕ್ಕಿವೆ. ಎಲ್ಲದಕ್ಕಿಂತ ಹೆಚ್ಚಾಗಿ ಅವುಗಳನ್ನೆಲ್ಲ ದಾಖಲಿಸಿದ ಸಂತೋಷ ಸಿಕ್ಕಿದೆ! ಅದೇ ಬೇಜಬ್ದಾರಿತನ, ಉದಾಸೀನದ ಜೊತೆಯೇ ಒಂದು ವರುಷ ಕಳೆದಿದೆ. ಈಗಲೂ ಬರೆಯಲು ಅದೇ ಬರಹ ಸಾಫ್ಟ್ ವೇರಿದೆ, ಜಾಗಕ್ಕೆ ಬ್ಲಾಗ್ ಸ್ಪಾಟಿದೆ. ಪೋಸ್ಟಿಂಗ್ ಗಳನ್ನು ಶಾರ್ಟ್ ಅಂಡ್ ಸ್ವೀಟ್ ಮಾಡೋಣವೆನಿಸಿದೆ. ಶಾರ್ಟ್ ಅಂತೂ ಆಗಿದೆ, ಸ್ವೀಟ್ ಆಗಿದೆಯೋ ಇಲ್ಲವೋ ಗೊತ್ತಿಲ್ಲ ! ’ವಿಕಾಸವಾದ’ಕ್ಕೆ ಪ್ರತ್ಯಕ್ಷವಾಗಿ, ಪರೋಕ್ಷವಾಗಿ ಸಹಕರಿಸಿದವರಿಗೆ, ಪ್ರೋತ್ಸಾಹಿಸಿದವರಿಗೆಲ್ಲ ಧನ್ಯವಾದಗಳು.

ಬುಧವಾರ, ಮೇ 7, 2008

ಕರ್ನಾಟಕವೆಂದರೆ ಬೆಂಗಳೂರು ಮಾತ್ರವೇನಾ?!

ಬೆಂಗಳೂರಿನಲ್ಲಿ ಚೆನ್ನಾಗಿಯೇ ಇರುವ ಟಾರಿನ ರಸ್ತೆಯ ಮೇಲೆ ಮತ್ತೊಂದು ಪದರ ಟಾರು, ಫ್ಲೈ ಓವರು, ಅಂಡರ್ ಪಾಸು, ಆದರೆ ಬೇರೆ ಊರುಗಳಲ್ಲಿ ರಸ್ತೆಯೇ ಇಲ್ಲ ಅಥವಾ ರಸ್ತೆಯೇ ಕಾಣದಂತೆ ಗುಂಡಿಗಳು. ಬೆಂಗಳೂರಿನಲ್ಲಿ ಸಣ್ಣ ಸಣ್ಣ ಸರ್ಕಲ್ಲುಗಳಲ್ಲೂ ರಾತ್ರೀ ಇಡೀ ಕೋರೈಸುವ ಹೈ ಮಾಸ್ ದೀಪಗಳು, ಬೇರೆ ಊರುಗಳಲ್ಲಿ ಹಳ್ಳಿಗಳಲ್ಲಿ ನೀರೆತ್ತುವ ಪಂಪಸೆಟ್ಟಿಗೂ ಗತಿಯಿಲ್ಲದಂತೆ ದಿನವೂ ಲೋಡ್ ಶೆಡ್ಡಿಂಗ್. ಬೆಂಗಳೂರಿನಲ್ಲಿ ಮಳೆ ಬಂದು ರಸ್ತೆಯಲ್ಲಿ ನೀರು ಹರಿದರೆ ದೊಡ್ಡ ಸುದ್ದಿ, ಅಲ್ಲಿ ಬೇರೆ ಊರುಗಳು ನೀರಲ್ಲಿ ಮುಳುಗಿ ಸಂಪರ್ಕವೇ ಕಡಿದೂ ಹೋದರೂ ಸುದ್ದಿಯೇ ಇಲ್ಲ. ಇಲ್ಲಿ ಎರಡು ತಾಸು ಕರೆಂಟು ಕೈಕೊಟ್ಟರೆ ಭೂಮಿ ತಿರುಗುವುದೇ ನಿಂತು ಹೋದಂತೆ ಬೊಬ್ಬೆ, ಹಳ್ಳಿಗಳಲ್ಲಿ ಕಂಬ ಮುರಿದು ಬಿದ್ದು ಮೂರು ದಿನವಾಗಿ ಪದೇ ಪದೇ ದೂರು ಕೊಟ್ಟರೂ ಹೋಗದ ಕತ್ತಲೆ, ದಿನಕ್ಕೊಮ್ಮೆ ಡೆಡ್ಡಾಗುವ ಫೋನು. ಇಲ್ಲಿ ಸಿಟಿ ಒಳಗಿನ ತಿರುಗಾಟಕ್ಕೇ ವೋಲ್ವೋ,ಎ.ಸಿ ಬಸ್ಸುಗಳು, ಬೇರೆ ಊರುಗಳಲ್ಲಿ ಸಮಯದ ಪರಿವೆಯೇ ಇಲ್ಲದಂತೆ ಓಡಾಡುವ ಅಕ್ಷರಶಃ ತಗಡಿನ ಡಬ್ಬಿಗಳಂತಿರುವ ಬಸ್ಸುಗಳು. ಇಲ್ಲಿ ಐ.ಟಿಯಲ್ಲಿ ಸ್ವಲ್ಪ ಏರು ಪೇರಾದರೆ ಅರಚಾಟ, ಅಲ್ಲಿ ಬೆಲೆಯೇ ಇಲ್ಲದೆ ಮುಗಿದುಹೋಗುತ್ತಿರುವ ಕೃಷಿ/ಕೃಷಿಕನ ಧ್ವನಿ. ಬೆಂಗಳೂರಿಗರಿಗೆ ಅದೆಷ್ಟೆಷ್ಟೋ ಹಂತದವರೆಗೆ ಕಾವೇರಿ ಯೋಜನೆ ಮಾಡಿ ದಿನವೂ ಕುಡಿಯುವ ನೀರು, ಬೇರೆ ಕೆಲವು ಊರುಗಳಲ್ಲಿ ವಾರಗಟ್ಟಲೆ ನಲ್ಲಿಯಲ್ಲಿ ನೀರು ಬರದ ಸ್ಥಿತಿ. ಸೌಲಭ್ಯ, ಅವಕಾಶಗಳಿಲ್ಲದೇ ಜನ ಕಡಿಮೆಯಾಗಿ ಖಾಲಿಯಾಗುತ್ತಿರುವ ಬೇರೆ ಊರುಗಳು, ದಿನದಿನವೂ ಹಿಗ್ಗುತ್ತಲೇ ಇರುವ ಬೆಂಗಳೂರು.

ಹೀಗೆ ಅಲವತ್ತುಕೊಳ್ಳಲು ಕಾರಣವಿದೆ. ನಮ್ಮ ರಾಜಕಾರಣಿಗಳಿಗೆ, ಆಡಳಿತಕ್ಕೆ, ಸರ್ಕಾರಕ್ಕೆ ಕಾಣುವುದು ಈ ಬೆಂಗಳೂರೊಂದೇ ಎಂದುಕೊಂಡರೆ ಎಲ್ಲರಿಗೂ ಕಿವಿ ಹಿಂಡಿ ಬುದ್ಧಿ ಹೇಳುವ, ಹೇಳಬೇಕಾದ ಮಾಧ್ಯಮಗಳೂ ಹೀಗೆಯೇ ವರ್ತಿಸಿದರೆ ಏನು ಗತಿ!!

ಮೊನ್ನೆ ನನ್ನ ಅಮ್ಮನಿಗೆ ಖಾಸಗಿ ಟೀವಿ ವಾಹಿನಿಯೊಂದು ನಡೆಸಿದ ಯಾವುದೋ ಕಾರ್ಯಕ್ರಮವೊಂದರಲ್ಲಿ ಬಹುಮಾನ ಬಂದಿತ್ತು. ಅವರು ಬಹುಮಾನವನ್ನು ಬೆಂಗಳೂರಿನಲ್ಲಿರುವ ವಾಹಿನಿಯ ಕಛೇರಿಗೆ ಬಂದು ತೆಗೆದುಕೊಳ್ಳುವಂತೆ ಸೂಚಿಸಿದ್ದರು. ಈ ಬಗ್ಗೆ ವಾಹಿನಿಯವರನ್ನು ಸಂಪರ್ಕಿಸಿ ಬೇರೆ ಊರುಗಳಲ್ಲಿರುವವರು ಇದಕ್ಕೋಸ್ಕರವೇ ಬೆಂಗಳೂರಿಗೆ ಬಂದು ಬಹುಮಾನ ತೆಗೆದುಕೊಳ್ಳಲು ಬಹಳ ಕಷ್ಟವಾಗುವುದರ ಬಗ್ಗೆ ಕೇಳಿಕೊಂಡರೂ ಸಹ ಬೆಂಗಳೂರಿಗೆ ಬಂದರೆ ಮಾತ್ರ, ಅದೂ ಅವರು ಹೇಳಿದ ಕಾಲಾವಧಿಯಲ್ಲಿ ಬಂದರೆ ಮಾತ್ರ ಕೊಡಲು ಸಾಧ್ಯ ಎಂಬ ಉತ್ತರ ಬಂದಿದೆ. ಇದು ಮೊದಲನೆ ಬಾರಿ ಏನಲ್ಲ. ಹಲವು ಮಾಧ್ಯಮಗಳು, ಸಂಸ್ಥೆಗಳು ನಡೆಸುವ ಕಾರ್ಯಕ್ರಮಗಳಲ್ಲಿ, ಸ್ಪರ್ಧೆಗಳಲ್ಲಿ ಈ ಮೊದಲೂ ಅಮ್ಮನಿಗೆ ಸುಮಾರು ಬಹುಮಾನಗಳು ಬಂದಿವೆ. ಆದರೆ ಎಲ್ಲರದ್ದೂ ಇದೇ ಧಾಟಿ! ಬುದ್ದಿ ಇದೆಯೇ ಇವರಿಗೆ? ಸಾಮಾನ್ಯವಾಗಿ ಎಲ್ಲ ಮುಖ್ಯ ಕಛೇರಿಗಳು ಬೆಂಗಳೂರಿನಲ್ಲೇ ಇರುತ್ತವೆ. ಹಾಗೆಂದ ಮಾತ್ರಕ್ಕೆ ಇವು ಬರೇ ಬೆಂಗಳೂರಿನ ಜನರಿಗೆ ಮಾತ್ರವೆ ಅಥವಾ ಇವರ ವಾಹಿನಿಗಳು ಬರೀ ಬೆಂಗಳೂರಿಗೆ ಮಾತ್ರ ಪ್ರಸಾರವಾಗುತ್ತವೆಯೇ? ಬೇರೆ ಊರುಗಳಲ್ಲಿರುವ ಜನರೂ ಕೂಡ ಭಾಗವಹಿಸುತ್ತಾರೆ, ಗೆಲ್ಲುತ್ತಾರೆ. ಆದರೆ ಅವರಿಗೆ ಬಹುಮಾನ ಬಂದಾಗ ಬೆಂಗಳೂರಿಗೇ ಬಂದು ತೆಗೆದುಕೊಳ್ಳಬೇಕೆಂಬ ಇವರ ಧೋರಣೆ ಎಷ್ಟು ಸರಿ? ತೀರಾ ವಿದೇಶದಲ್ಲಿ ಅಥವಾ ಬೇರೆ ರಾಜ್ಯದಲ್ಲಿರುವವರಿಗೆ ತಲುಪಿಸಲು ಸಾಧ್ಯವಾಗದಿರಬಹುದು, ಆದರೆ ಕರ್ನಾಟಕದಲ್ಲಿರುವ ಜನರಿಗೆ ಅವರವರ ಊರಿಗೇ ತಲುಪಿಸುವ ಅಥವಾ ಕೊನೇ ಪಕ್ಷ ಬಹುಮಾನ ದೊಡ್ಡದಿದ್ದಾಗ ಹತ್ತಿರದ ಜಿಲ್ಲಾ ಕೇಂದ್ರದಿಂದ ಪಡೆದುಕೊಳ್ಳುವ ವ್ಯವಸ್ಥೆ ಮಾಡಬೇಕಲ್ಲವೇ? ಉದಾಹರಣೆಗೆ ಬಹುಮಾನ ಗೆದ್ದವರು ರಾಯಚೂರಿನಿಂದಲೋ, ಕಾರವಾರದ ತುದಿಯಿಂದಲೋ ತಾಸುಗಟ್ಟಲೇ ಪ್ರಯಾಣ ಮಾಡಿ ಬೆಂಗಳೂರಿಗೆ ಬಂದು ಅದನ್ನು ತೆಗೆದುಕೊಂಡು ಹೋಗುವುದು ಸಾಧ್ಯವೇ, ಸಮಂಜಸವೇ? ಎಷ್ಟು ಹಣ, ಸಮಯ ವ್ಯರ್ಥ! ಅಷ್ಟಕ್ಕೂ ಇವರೇನು ಬಹುಮಾನವಾಗಿ ಬೆಂಗಳೂರಲ್ಲಿ ಸೈಟು, ಮನೆಯನ್ನೇನು ಕೊಡುವುದಿಲ್ಲ. ಕೆಲವರು ಪ್ರಯಾಣದ ಖರ್ಚನ್ನು(TA) ಕೊಡುತ್ತಾರಾದರೂ ಇದಕ್ಕೋಸ್ಕರವೇ ಇದ್ದ ಕೆಲಸ ಬಿಟ್ಟು ಅಲ್ಲಿಂದ ಪ್ರಯಾಣಿಸಿ ಬರುವುದು ಎಲ್ಲರಿಗೂ ಅದರಲ್ಲೂ ವಯಸ್ಸಾದವರಿಗೆ ಸಾಧ್ಯವಿಲ್ಲವೆಂಬ ಕಿಂಚಿತ್ ತಿಳುವಳಿಕೆಯಾದರೂ ನಮ್ಮ ಮಾಧ್ಯಮದ ವ್ಯಕ್ತಿಗಳಿಗೆ ಇದ್ದರೆ ಒಳ್ಳೆಯದು. ಪ್ರಜಾಪ್ರಭುತ್ವದ ಕಾವಲು ನಾಯಿ, ಸಂವಿಧಾನದ ನಾಲ್ಕನೇ ಅಂಗ ಎಂದೆಲ್ಲಾ ಕರೆಸಿಕೊಳ್ಳುವ ಮಾಧ್ಯಮಗಳೇ ಹೀಗೆ ಮಾಡಿದರೆ ಏನು ಕತೆ? ಇದೆಲ್ಲಾ ನೋಡಿದರೆ ಒಂದು ಗಾದೆ ನೆನಪಾಗುತ್ತದೆ, "ಊರಿಗೇ ನೀತಿ ಹೇಳೋ ತಿಮ್ಮಕ್ಕ ಒಲೆ ಮುಂದೆ ಕೂತು ಉಚ್ಛೆ ಹೊಯ್ದಿದ್ಲಂತೆ"



ಕೊನೆಗೆ ಉಳಿಯುವುದು ಮತ್ತದೇ ಪ್ರಶ್ನೆ, ಕರ್ನಾಟಕವೆಂದರೆ ಬೆಂಗಳೂರು ಮಾತ್ರವೇನಾ?! ಇದಕ್ಕೆ ನಮ್ಮ ಮಾಧ್ಯಮ ಮಿತ್ರರು ಏನನ್ನುತ್ತಾರೋ!