ಗುರುವಾರ, ಜನವರಿ 31, 2008

ಕೇರಳ, ಡಾಲ್ಫಿನ್, ಆನೆ ಮತ್ತು ’ನಾವು’


ಸುತ್ತಲೂ ನೀರು, ಬರೀ ನೀರು , ಎಲ್ಲಿಂದ ಎಲ್ಲಿಗೆ ನೋಡಿದರೂ ಬರೀ ನೀರು. ತಲೆ ಎತ್ತಿ ನೋಡಿದರೆ ನೀಲಿ ಆಕಾಶ ತಲೆ ತಗ್ಗಿಸಿದರೆ ಮತ್ತದೇ ನೀಲಿ ನೀರು. ಕೂಗಾಟ, ಕೇಕೆ ಗಳೆಲ್ಲಾ ನಿಧಾನವಾಗಿ ಮಾಯವಾಗುತ್ತಾ ಬಂದು ಮಾತು ಹೊರಡದೇ ಕುಳಿತ ಮುಖಗಳಲ್ಲಿ ದಿಗಿಲು ಎದ್ದು ಕಾಣುತ್ತಿತ್ತು. ಅಲೆಗಳು ದೋಣಿಯನ್ನು ಕುಲುಕಿ ಕುಲುಕಿ ಹಾಕುತ್ತಿದ್ದರೆ ಮತ್ತೆ ದಡ ಸೇರುತ್ತೇವೆಯೋ ಇಲ್ಲವೋ ಎಂಬ ಆತಂಕ ಕಾಡುತ್ತಿತ್ತು. ಇಲ್ಲಿ ಶಾರ್ಕ್ ಮೀನುಗಳೂ ಇವೆ ಎಂದು ಯಾರೋ ದಡದಲ್ಲೇ ಹೇಳಿದ್ದು ನೆನಪಿಗೆ ಬೇರೆ ಬಂದು ಯಾಕಾದರೂ ಬಂದೆವೋ ಎಂಬ ಸ್ಥಿತಿ. ಇದ್ದಕ್ಕಿಂದ್ದಂತೇ ದೋಣಿಯ ಎಂಜಿನ್ ಆಫ್ ಮಾಡಿ ಒಂದು ಕಡೆ ಕೈತೋರಿಸುತ್ತಾ ಅಲ್ಲಿ ನೋಡಲು ಹೇಳಿದ ದೋಣಿಯವ. ಕುತೂಹಲದಿಂದ ನೋಡಿದರೆ ನಮ್ಮ ದೋಣಿಯ ೧೫-೨೦ ಮೀಟರ್ ದೂರದಲ್ಲಿ ಡಾಲ್ಫಿನ್ನುಗಳು ಆಡುತ್ತಿದ್ದವು. ಡಾಲ್ಫಿನ್ನುಗಳು ಮನುಷ್ಯರಿಗೆ ಸ್ನೇಹ ಜೀವಿಗಳಂತೆ, ಏನೂ ಮಾಡುವುದಿಲ್ಲವಂತೆ, ನಗುತ್ತವಂತೆ, ಮನುಷ್ಯನನ್ನು ಬಿಟ್ಟರೆ ಸುಮ್ಮನೇ ಖುಷಿಗಾಗಿ ಸೆಕ್ಸ್ ಮಾಡುವ ಭೂಮಿಯ ಮೇಲಿನ ಏಕೈಕ ಜೀವಿಯಂತೆ.. ಇದೇ ಮಾತುಗಳೊಂದಿಗೆ ಮೊದಲ ಬಾರಿಗೆ ಡಾಲ್ಫಿನ್ ಗಳನ್ನು ನೋಡಿದೆವು. ಅಂತೂ ಸಮುದ್ರದಲ್ಲಿ ಒಂದು ದೊಡ್ಡ ಸುತ್ತು ಹಾಕಿಕೊಂಡು ದೋಣಿ ತಿರುಗಿ ದಡ ಮುಟ್ಟಿದ ಮೇಲೆ ಉಸಿರು ನಿರಾಳವಾಗಿದ್ದು !

ಈ ಅನುಭವವಾಗಿದ್ದು ಕಳೆದವಾರದ ಕೇರಳ ಭೇಟಿಯಲ್ಲಿ. ಸಣ್ಣವರಿದ್ದಾಗ ಜೊತೆಯಲ್ಲೇ ಗೋಲಿಯಾಡುತ್ತಾ ಬೆಳೆದ ಗೆಳೆಯನೊಬ್ಬನ ಅಣ್ಣನ ಮದುವೆ ಕೇರಳದ ಕಲ್ಲಿಕೋಟೆ(Calicut or kozhikode)ಯಲ್ಲಿತ್ತು. ಎಷ್ಟೋ ದಿನದಿಂದ ಕೇರಳಕ್ಕೆ ಹೋಗಬೇಕೆಂದು ಅಂದುಕೊಂಡಿದ್ದರೂ ಯಾಕೋ ಸಾಧ್ಯವಾಗಿರಲಿಲ್ಲ. ಈಗ ಹೋಗಲು ಕಾರಣವೊಂದು ಸಿಕ್ಕಿದ್ದೇ ತಡ ಚಕಚಕನೇ ಇ ಮೇಲುಗಳು ಹರಿದಾಡಿ ಮದುವೆಗೆ ಇನ್ನೊಂದು ದಿನವಿರುವಾಗ ತೀರ್ಮಾನ ಮಾಡಿ ಟ್ಯಾಕ್ಸಿ ಬುಕ್ ಮಾಡಿದ್ದೂ ಆಯಿತು. ಚಡ್ಡಿದೋಸ್ತಿಗಳಾದ ನಾನು, ಚಂದ್ರು, ರಘು, ಪ್ರವೀಣ, ಪಚ್ಚಿ, ನವೀನ ಹೊರಡುವುದೆಂದು ಪಕ್ಕಾ ಆಯಿತು. ಕಲ್ಲಿಕೋಟೆಯ ಬಗ್ಗೆ, ಅಲ್ಲಿ ನೋಡಬೇಕಾದ ಸ್ಥಳಗಳ ಬಗ್ಗೆ ಇಂಟರ್ನೆಟ್ಟಿನಲ್ಲಿ ಹುಡುಕಿ ಮತ್ತು ಕೆಲವರಲ್ಲಿ ಕೇಳಿಕೊಂಡು ಮಾಹಿತಿ ಸಂಗ್ರಹಿಸಿದ್ದೂ ಆಯಿತು. ನೀ ನನ್ ಹೊಟ್ಟೆಲ್ಲಿ ೨ ತಿಂಗಳ ಶಿಶು ಆಗಿದ್ದಾಗ ಆನೂ ನಿಮ್ಮಪ್ಪ ಕೇರಳ ಪ್ರವಾಸ ಹೋಗಿದಿದ್ಯ ಎಂದು ಅಪ್ಪನ ಮುಖ ನೋಡಿಕೊಂಡು ಅಮ್ಮ ಹೇಳುತ್ತಿದ್ದುದ್ದು ಬಿಟ್ಟರೆ ನಾನಂತೂ ಹುಟ್ಟಿದ ಮೇಲೆ ಕೇರಳ ರಾಜ್ಯಕ್ಕೆ ಕಾಲಿಟ್ಟಿರಲಿಲ್ಲ. ಈಗ ಸಿಕ್ಕಿದ ಅವಕಾಶ ಬಿಡುವ ಮಾತಿರಲಿಲ್ಲ. ಪಚ್ಚಿ ಒಬ್ಬನನ್ನು ಬಿಟ್ಟರೆ ನಾವೆಲ್ಲರೂ ಕೇರಳಕ್ಕೆ ಹೋಗುತ್ತಿದ್ದುದು ಇದೇ ಮೊದಲಾಗಿದ್ದರಿಂದ ಎಲ್ಲರೂ ಉತ್ಸಾಹದಿಂದಲೇ ತಯಾರಾಗಿದ್ದೆವು !


ಸರಿ , ಇಲ್ಲಿಂದ ರಾತ್ರಿ ಹೊರಟು ಮೈಸೂರು, ನಂಜನಗೂಡು, ಗುಂಡ್ಲುಪೇಟೆ ಮಾರ್ಗವಾಗಿ ಬಂಡೀಪುರ ಅರಣ್ಯವನ್ನು ಹಾಯ್ದು ಸುಲ್ತಾನ್ ಬತೇರಿ ಊರಿನ ಮೇಲೆ ವಯನಾಡಿನ ಘಾಟ್ ರಸ್ತೆಯ ಮೂಲಕ ಬೆಳಗಿನ ಜಾವ ಕೇರಳಕ್ಕೆ ಪ್ರವೇಶ ಮಾಡಿದೆವು. ಅಲ್ಲಿಂದ ಶುರುವಾಗಿದ್ದು ನಮ್ಮ ಸಣ್ಣ ಪರದಾಟ. ನಮ್ಮಲ್ಲಿ ಯಾವನಿಗೂ ಒಂದು ಪದವೂ ಮಲಯಾಳಂ ಬರುತ್ತಿರಲಿಲ್ಲ. ನಾವು ಹೋಗಬೇಕಿದ್ದು ಕಲ್ಲಿಕೋಟೆಯ ಫರೋಕೆ ಎಂಬ ಸ್ಥಳಕ್ಕೆ. ಅಂತೂ ಇಂತೂ ನಮ್ಮ ಡ್ರೈವರನಿಗೆ ಬರುತ್ತಿದ್ದ ೮-೧೦ ಮಲಯಾಳಂ ಪದಗಳ ಮೂಲಕ , ನಮ್ಮ ಹಿಂದಿ ಇಂಗ್ಲೀಷು ಇತ್ಯಾದಿ ಪ್ರಯೋಗಗಳಿಂದ ದಾರಿ ಕೇಳಿಕೊಂಡು ಸರಿಯಾದ ಜಾಗ ತಲುಪಿ ಮೊದಲೇ ಬುಕ್ಕಾಗಿದ್ದ ಲಾಡ್ಜ್ ಸೇರಿದೆವು.

ಬೆಂಗಳೂರು - ಕಲ್ಲಿಕೋಟೆ: ಸುಮಾರು ೩೬೦ ಕಿ.ಮಿ
ಪ್ರಯಾಣ ಸಮಯ: ಸುಮಾರು ೯ ತಾಸು (ಟ್ಯಾಕ್ಸಿಯಲ್ಲಿ)


ಬೀಚು, ಬಂದರು, ದೇವಸ್ಥಾನ, ಮ್ಯೂಸಿಯಂ ಇತ್ಯಾದಿ ಅವತ್ತಿನ ದಿನ ನೋಡಬೇಕಾಗಿದ್ದ ಸುಮಾರು ಸ್ಥಳಗಳನ್ನೆಲ್ಲಾ ನೋಡಿದೆವು. ವಾಸ್ಕೋ-ಡ-ಗಾಮ ಇಲ್ಲಿಗೆ ಬಂದದ್ದು ಸರಿಯೋ ತಪ್ಪೋ ಎಂದು ವಾದ ಮಾಡಿ ತೀರ್ಮಾನವಾಗದೆ ಅವನನ್ನು ಅಲ್ಲಿಯೇ ಬಿಟ್ಟೆವು ! ಕಲ್ಲಿಕೋಟೆಯ ಸಮುದ್ರದ ಗಬ್ಬು ಕರಿ ನೀರಿನಲ್ಲೇ ಮೈ ಮನದಣಿಯೆ ಆಟವಾಡಿದೆವು. ಸಸ್ಯಾಹಾರಿ ಹೋಟೆಲ್ಲುಗಳಿಲ್ಲದೇ ಸರಿಯಾದ ತಿಂಡಿ ಸಿಗದೇ ಪರದಾಡಿದೆವು. ಇದ್ದಿದುರಲ್ಲೆ ಒಂದು ಹೋಟೆಲ್ಲಿನಲ್ಲಿ ಸರ್ವರ್ ತಿಂಡಿಗಳ ಪಟ್ಟಿ ಹೇಳಿದಾಗ ಚಪಾತಿ, ಪರೋಟ ಬಿಟ್ಟು ಬೇರ್ಯಾವುದೂ ಗೊತ್ತಾಗದೇ ಅದೇ ತಿಂದು ಸಮಾಧಾನ ಪಟ್ಟುಕೊಳ್ಳಬೇಕಾಯಿತು. ಸಂಜೆ ಮದುವೆ ರಿಸೆಪ್ಷನ್ ಮುಗಿಸಿಕೊಂಡು ಲಾಡ್ಜಿಗೆ ಬಂದೆವು. ಬಾಟಲಿಗಳು ಖಾಲಿಯಾದರೂ ಯಾಕೋ ತೃಪ್ತಿಯಾಗದೇ ೨ ಗಂಟೆ ರಾತ್ರಿಯವರೆಗೆ ನಿದ್ರೆ ಮಾಡಲಾಗಲಿಲ್ಲ (ಖಾಲಿಯಾಗಿದ್ದು ನೀರಿನ ಬಾಟಲಿಗಳು. ಸಿಕ್ಕಾಪಟ್ಟೆ ಸೆಕೆ, ಬಾಯಾರಿಕೆ ಇತ್ತು ;-) )

ಮಾರನೆ ದಿನ ನಮ್ಮ ಮಲಯಾಳಿ ಗೆಳೆಯ 'ರತೀಶ' ನಮ್ಮನ್ನು ಕೂಡಿಕೊಂಡ. ಪ್ರಕೃತಿ ಮಡಿಲಿನ ಅವನ ಮನೆಯಲ್ಲಿ ’ಅಪ್ಪಂ’ ನೀರುದೋಸೆ, ಕೊಟ್ಟೆ ಇಡ್ಲಿಗಳ ಜೊತೆ ಉಪ್ಪಿಟ್ಟೂ ಕೂಡ ನಮ್ಮ ಆಯ್ಕೆಗೆ ಸಿಕ್ಕಿತಾದರೂ ಕೇರಳದ ದೊಡ್ಡ ಬಾಳೆಹಣ್ಣು ಹೊಟ್ಟೆತುಂಬಿಸಿ ಕೈಕೊಟ್ಟಿತು. ನಂತರ ಅವನು ಊರು ಕೇರಿಗಳನ್ನು ಸುತ್ತಿಸುತ್ತಾ ಕೇರಳದ ಬಗ್ಗೆ ವಿವರಿಸುತ್ತಾ ಗುಡ್ಡದ ಮೇಲಿನ ದೇವಸ್ಥಾನ ತೋರಿಸಿದ, ದೇವಸ್ಥಾನದ ಆನೆ ತೋರಿಸಿದ. ಗುಡ್ಡದ ತುದಿಯೊಂದರ ಮೇಲೆ ನಿಂತು ದೊಡ್ಡ ತೆಂಗಿನ ತೋಟದಂತೆ ಕಾಣುವ ಕಲ್ಲಿಕೋಟೆಯನ್ನು ನೋಡಿದೆವು. ಸಮುದ್ರದ ಹಿನ್ನೀರು, ಅದರ ಆಚೆ ಈಚೆ ದಂಡೆಯಲ್ಲಿರುವ ಮನೆಗಳು , ಅವರ ಸಾರಿಗೆಯ ಸಣ್ಣ ಸಣ್ಣ ದೋಣಿಗಳು ಎಲ್ಲವನ್ನೂ ಆಶ್ಚರ್ಯದಿಂದ ನೋಡಿದೆವು. ಕ್ಯಾಮೆರಾ ಬ್ಯಾಟರಿ ಖಾಲಿಯಾಗುವ ತನಕ ಫೋಟೋಗಳನ್ನು ತೆಗೆದೆವು.


ನಂತರ ಅಲ್ಲಿಂದ ಸ್ವಲ್ಪ ದೂರದ ಸಮುದ್ರ ತೀರವೊಂದಕ್ಕೆ ಕರೆದೊಯ್ದು ಮಲಯಾಳಂ ನಲ್ಲಿ ಮಾತಾಡಿ ಮೀನುಗಾರನೊಬ್ಬನ ಸಣ್ಣ ಮೋಟಾರ್ ದೋಣಿಯನ್ನು ಡೀಲ್ ಮಾಡಿಸಿ ಅದರಲ್ಲಿ ನಾವು ಭೂಮಿ ಕಾಣದಷ್ಟು ದೂರ ಹೋಗಿ ಕೆಕರು ಮಕರಾಗಿ ಆಕಾಶ - ಸಮುದ್ರ ನೋಡುತ್ತಾ ಕುಳಿತಾಗಲೇ ನಮ್ಮ ಕೇರಳ ಭೇಟಿಯು ಸಾರ್ಥಕವಾದದ್ದು. !! ಸಣ್ಣವನಿದ್ದಾಗ ಓತಿಕ್ಯಾತ ಹಿಡಿಯುವ ಎಕ್ಸ್ ಪರ್ಟ್ ಅನಿಸಿಕೊಂಡಿದ್ದ ಪ್ರಶಾಂತ ನಮ್ಮೆದುರಿಗೇ ಒಂದು ಸಣ್ಣ ಕೋಲು ಮತ್ತು ದಾರದ ಸಹಾಯದಿಂದ ಕಲ್ಲುಗಳ ಸಂದಿಯಲ್ಲಿದ್ದ ಏಡಿಯೊಂದನ್ನು ಹಿಡಿದು ತನ್ನ ತಾರೆ ಜಮೀನ್ ಪರ್ ಟ್ಯಾಲೆಂಟ್ ತೋರಿಸಿದ್ದೂ ಆಯಿತು , ದಾರ ಬಿಚ್ಚಲಾಗದೇ ಆ ಏಡಿಗೆ ಹಿಂಸೆ ಕೊಟ್ಟು ಹಾಗೇ ಎಸೆದು ಉಗಿಸಿಕೊಂಡದ್ದೂ ಆಯಿತು. ;)


ನಮ್ಮ ನಂತರದ ಗುರಿಯಿದ್ದದ್ದು ವೈನಾಡು. ರತೀಶನಿಗೂ , ಕಲ್ಲಿಕೋಟೆಗೂ ಟಾಟಾ ಮಾಡಿ ವೈನಾಡಿನ ದಾರಿ ಹಿಡಿದೆವು. ಸುಂದರ ಪ್ರಕೃತಿಯಿಂದ ಕೂಡಿರುವ ವೈನಾಡು ಘಾಟನ್ನು ಸಂಪೂರ್ಣ ಅನುಭವಿಸಿದೆವು. ಮುಗಿಲೆತ್ತರದ ಹಸಿರು ತುಂಬಿದ ಬೆಟ್ಟಗಳನ್ನು, ಆಳದ ಕಣಿವೆಗಳನ್ನು ಹಾಯುತ್ತಾ ಘಾಟನ್ನು ದಾಟಿ ವೈನಾಡಿನ ಸರೋವರ, ಚಹಾದ ತೋಟ, ಜಲಪಾತಗಳನ್ನು ನೋಡಿ ಅಲ್ಲೇ ಸ್ನಾನ ಮಾಡಿ ಮೈಸೂರಿನ ಹಾದಿ ಹಿಡಿದಾಗ ರಾತ್ರಿ ಬಂಡೀಪುರ ಕಾಡಿನಲ್ಲಿ ರಸ್ತೆ ಪಕ್ಕದಲ್ಲೇ ನಿಂತು ಬೀಳ್ಕೊಟ್ಟಿದ್ದು ಆನೆಗಳ ಹಿಂಡು ಮತ್ತು ಸಾರಂಗದ ಜೋಡಿ !


ಎರಡು ದಿನದಿಂದ ಕರ್ನಾಟಕದ ಊಟ ಸಿಗದೇ ಬರಗೆಟ್ಟಿದ್ದ ನಾವು ಗುಂಡ್ಲುಪೇಟೆ ತಲುಪಿದೊಡನೇ ಉಡುಪಿ ಹೋಟೆಲೊಂದರಲ್ಲಿ ಸರಿಯಾಗಿ ತಿಂದೆವು. ಕೇರಳದಲ್ಲಿ ’ಎಲ್ಲದಕ್ಕೂ’ ದನದ ಮಾಂಸ ಹಾಕುತ್ತಾರೆ ಎಂಬ ಭಯದಿಂದ ೨ ದಿನದಿಂದ ಬರೀ ಫಲಾಹಾರ, ಜ್ಯೂಸ್ ಗಳಿಂದಲೇ ಬದುಕಿ ನಮಗಿಂತಲೂ ದೊಡ್ಡಬ್ರಾಹ್ಮಣನಂತಿದ್ದ ನಮ್ಮ ಡ್ರೈವರ್ ನೆಮ್ಮದಿಯಾಗಿ ತಿಂದದ್ದು ನೋಡಿ ನಮಗೂ ನೆಮ್ಮದಿಯಾಯಿತು ;).

ಗಮನಿಸಿದ ಕೆಲವು..... (ಕಲ್ಲಿಕೋಟೆಯ ಪ್ರದೇಶದಲ್ಲಿ)

೧. ಕೇರಳದ ಊರುಗಳು ನಮ್ಮಲ್ಲಿದ್ದಂತೆ ಒಂದೇ ಕಡೆ ಕೇಂದ್ರೀಕೃತಗೊಂಡಿಲ್ಲ. ಉದಾಹರಣೆಗೆ ನಮ್ಮಲ್ಲಿ ಬೆಂಗಳೂರು ಮುಗಿದ ಮೇಲೆ ನಂತರ ತುಮಕೂರು ಸಿಗುವವರೆಗೆ ಖಾಲಿ ಜಾಗವಿರುತ್ತದೆ. ಆದರೆ ಕೇರಳದಲ್ಲಿ ಆ ರೀತಿ ಧೀರ್ಘವಾದ ಖಾಲಿ ಜಾಗಗಳಿಲ್ಲ. ಮನೆಗಳು, ಅಂಗಡಿಗಳು, ಊರು ಎಲ್ಲವೂ ಎಲ್ಲ ಕಡೆಯೂ ಹರಡಿದಂತಿವೆ. ಇಡೀ ಕೇರಳವೇ ಒಂದು ವಿಸ್ತಾರವಾದ ಊರಿನಂತಿದೆ.
೨. ಭಾಷೆಯೊಂದು ಬೇರೆ ಎಂಬುದನ್ನು ಬಿಟ್ಟರೆ ಕೇರಳವೆಂಬುದು ನಮ್ಮ ಕರಾವಳಿ ಜಿಲ್ಲೆಯಲ್ಲಿನ ಹೊನ್ನಾವರ, ಕುಮಟಾ, ಉಡುಪಿ ಮುಂತಾದ ಊರುಗಳಂತೇ ಇದೆ. ಅಲ್ಲಿನ ಮಣ್ಣು, ಮರಗಿಡ, ವಾತಾವರಣ, ಮನೆಗಳು, ಕಟ್ಟಡ ಕಟ್ಟಲು ಬಳಸುವ ವಸ್ತುಗಳು ಎಲ್ಲವೂ ಹಾಗೆಯೆ. ಜನರೂ ಸಹ ನಮ್ಮ ಮಲೆನಾಡಿನ ಜನರಂತೆಯೆ ಸಹೃದಯರು. ಒಬ್ಬರಿಗೆ ಸಹಾಯ ಕೇಳಿದರೆ ೫ ಜನ ತಯಾರಾಗಿರುತ್ತಾರೆ !
೩. ಅಲ್ಲಿನ ಆಹಾರಗಳು, ಆಹಾರ ಪದ್ಧತಿಗೂ ನಮ್ಮ ಕರ್ನಾಟಕದ ಆಹಾರ ಪದ್ಧತಿಗೂ ಗಮನಾರ್ಹ ವ್ಯತ್ಯಾಸವಿದೆ. ಮಾಂಸದ ಬಳಕೆ ಹೆಚ್ಚು.

******************


ಊಹೂಂ .. ಆದರೂ ಯಾಕೋ ಸಮಾಧಾನವಾಗಿಲ್ಲ. ಸರಿಯಾಗಿ ನೋಡಲಾಗಲಿಲ್ಲ. ಈ ಸಲ ಅಲ್ಲಿನ ಜನರ ಜೊತೆ ಸರಿಯಾಗಿ ಬೆರೆಯಲಾಗಲಿಲ್ಲ. ಅಲ್ಲಿನ ಬಿಸಿಲು, ಸೆಕೆ ಆಸಕ್ತಿ ಕುಂದಿಸಿತು. ಸಮಯವೂ ಕಡಿಮೆಯಿತ್ತು. ಮತ್ತೆ ಹೋಗಬೇಕು. ಕೇರಳವನ್ನು ವಿವರವಾಗಿ ನೋಡಬೇಕು ಎನ್ನುವ ಆಸೆಯೊಂದಿಗೆ ಬೆಂಗಳೂರಿಗೆ ಮರಳಿದೆವು. ಕೇರಳದ ಹುಡುಗೀರು ಬಹಳ ’ಚೆನ್ನಾಗಿರುತ್ತಾರೆ’ ಎಂದು ಆಸೆ ಇಟ್ಟುಕೊಂಡು ಕಾಯುತ್ತಿದ್ದ ನಮ್ಮ ಹುಡುಗರ ದುರಾದೃಷ್ಟವೋ ಎಂಬಂತೆ ಒಂದೂ ಒಳ್ಳೆಯ ಮಲ್ಲು ಹುಡುಗಿ ಕಣ್ಣಿಗೆ ಬೀಳದೇ ಇದ್ದದ್ದೂ ಒಂದು ಕಾರಣವಿರಬಹುದು !!! ;-) ;-)

ಸೋಮವಾರ, ಜನವರಿ 7, 2008

ತಾರೆ ಜಮೀನ್ ಪರ್ ಎಂಬ 'must watch' ಸಿನೆಮಾ

तारे जमीन पर
ಭುವಿಯಲ್ಲಿನ ನಕ್ಷತ್ರಗಳು


ಸತ್ತು ಹೋದ ಪ್ರೇಮ ಕಥೆಗಳು, ಕಿತ್ತು ಹೋದ ಸಂಸಾರದ ಕಥೆಗಳು, ಬಾಲಿಶ ಹಾಸ್ಯ ಕಥೆಗಳು, ಅಪರಾಧ/ಹಿಂಸೆ ವಿಜೃಂಭಿತ ಕಥೆಗಳು, ಅನೈತಿಕ ಸಂಬಂಧಗಳ ಕಥೆಗಳು, NRI ಕಥೆಗಳು, ವಿವಾಹೇತರ ಸಂಬಂಧದ ಕಥೆಗಳು , ಅರೆಬೆತ್ತಲೆ ನೃತ್ಯ, ಅತಿಅತಿ ಗ್ಲಾಮರ್, ಸೆಕ್ಸು, ಅರ್ಧ ಇಂಗ್ಲೀಷ್ ತುಂಬಿದ ಸಂಭಾಷಣೆ, ಅಶ್ಲೀಲತೆ, ಬೊಗಳೆ ... ಇತ್ಯಾದಿಗಳಿಂದ ತುಂಬಿಹೋಗಿರುವ ಹಿಂದಿ ಚಿತ್ರರಂಗದಲ್ಲಿ ಒಂದು ಒಳ್ಳೆಯ ಚಿತ್ರ ಬಂದಿದೆ.

ಕೆಲ ವರುಷಗಳಿಂದ ಹಿಂದಿ ಚಿತ್ರರಂಗದ ಬಗ್ಗೆ ಬೇಸರ ಬಂದಿದ್ದ ನಾನು ಯಾರಿಗೂ ಯಾವ ಚಿತ್ರವನ್ನೂ ಸಲಹೆ ಮಾಡುತ್ತಿರಲಿಲ್ಲ. ಆದರೆ ಇತ್ತೀಚೆಗೆ ಬಿಡುಗಡೆಯಾದ "ತಾರೆ ಜಮೀನ್ ಪರ್" ಎಂಬ ಚಿತ್ರ ಮಾತ್ರ ಇದಕ್ಕೆಲ್ಲಾ ಅಪವಾದವಾಗಿದ್ದು ಅತ್ಯುತ್ತಮ ಚಿತ್ರಗಳಲ್ಲಿ ಒಂದಾಗಿದೆ. ಚಿತ್ರ ಬಿಡುಗಡೆಯಾದ ದಿನದಿಂದಲೇ ಆ ಚಿತ್ರದ ಬಗ್ಗೆ ಒಳ್ಳೆಯ ಅಭಿಪ್ರಾಯಗಳು ಬರುತ್ತಿದ್ದವು. ಹಿಂದಿ ಚಿತ್ರ ರಂಗದಲ್ಲಿ ಅಮೀರ್ ಖಾನ್ ಎಂಬ ಹೆಸರಿನ ಮೇಲೆ ಒಳ್ಳೆಯ ಅಭಿಪ್ರಾಯ, ಭರವಸೆಗಳಿವೆ. ಅದಕ್ಕೆ ಕಾರಣ ಅವನ ಸರ್ಫರೋಷ್, ದಿಲ್ ಚಾಹ್ತಾ ಹೈ, ಲಗಾನ್, ಮಂಗಲ್ ಪಾಂಡೆ ಇನ್ನಿತರ ಉತ್ತಮ ಚಿತ್ರಗಳು. ಅದೇ ಧೈರ್ಯದಿಂದ ತಾರೆ...... ಚಿತ್ರಕ್ಕೆ ಹೋಗಿ ನೋಡಿದಾಗ ಅವನ ಹಿಂದಿನ ಎಲ್ಲ ಚಿತ್ರಗಳಿಗಿಂತಲೂ ಇದು ಇನ್ನೂ ಚೆನ್ನಾಗಿದ್ದುದು ಸಂತೋಷ ತಂದಿತು.



ತನ್ನ ಮೊದಲ ನಿರ್ದೇಶನದ ಈ ಚಿತ್ರದಲ್ಲಿ ಅಮಿರ್ ಖಾನ್ ಜಗತ್ತಿನ ಕಣ್ಣಿಗೆ ಅಸಹಜ ಎನ್ನಿಸುವ ಹುಡುಗನೊಬ್ಬನ ಕಥೆಯೊಂದನ್ನು ತೆಗೆದುಕೊಂಡು ಪ್ರತಿ ಮಗುವೂ ಕೂಡ ವಿಶೇಷವಾಗಿಯೇ ಇರುತ್ತದೆ ಎಂಬುದನ್ನು ತೋರಿಸಿದ್ದಾನೆ.
ಎಲ್ಲರಲ್ಲೂ ಅವರದ್ದೇ ಆದ ಪ್ರತಿಭೆಗಳಿದ್ದು ಅದಕ್ಕೆ ತಕ್ಕ ಪ್ರೋತ್ಸಾಹ ಸಿಗಬೇಕೆಂಬುದು ಇದರ ಉದ್ದೇಶ. ಇದರಲ್ಲಿ ಮಕ್ಕಳಿಗೆ ಖುಷಿ ಇದೆ, ಅಪ್ಪ ಅಮ್ಮರಿಗೆ ಬುದ್ದಿವಾದವಿದೆ, ಶಿಕ್ಷಕರಿಕೆ ತಿಳುವಳಿಕೆ ಇದೆ, ಮನಃಶಾಸ್ತ್ರದ ವಿದ್ಯಾರ್ಥಿಗಳಿಗೆ ಪಾಠವಿದೆ. ಬರಿ ಗುಮಾಸ್ತರನ್ನು ತಯಾರು ಮಾಡುತ್ತಿರುವ, ಉದ್ಯೋಗಕ್ಕೆ ಮಾತ್ರವಾಗಿರುವ ನಮ್ಮ ಶಿಕ್ಷಣ ವ್ಯವಸ್ಥೆಯ ಬಗ್ಗೆ ಪ್ರಶ್ನೆಗಳಿವೆ. ಮಕ್ಕಳ ಕುತೂಹಲಗಳಿಗೆಲ್ಲಾ ಉತ್ತರ ಸಿಗದಂತೆ ಮಾಡಿರುವ, ಪ್ರಕೃತಿಯಿಂದ ಅವರನ್ನು ದೂರ ಮಾಡಿ ಕೃತಕ ಜೀವನ ಶೈಲಿಯನ್ನು ಹೇರಿರುವ ಈ ಸಮಾಜ ವ್ಯವಸ್ಥೆಯ ಬಗ್ಗೆ ವಿಷಾದವಿದೆ. ಮಕ್ಕಳಲ್ಲಿನ ಪ್ರತಿಭೆಗೆ ತಕ್ಕನಾಗಿ ಆಸಕ್ತಿಗೆ ತಕ್ಕನಾಗಿ ಬದುಕು ರೂಪಿಸಿಕೊಳ್ಳಲು ಅವಕಾಶ ಸಿಗದಿರುವ, ಹಣಗಳಿಕೆಯ ಅನಿವಾರ್ಯತೆಯ ವಿಷಯವಿದೆ. ಆದರೆ ಎಲ್ಲಿಯೂ ಬೋಧನೆ ಮಾಡಲಾಗಿಲ್ಲ. ಒಂದು ಕ್ಷಣವೂ ಬೇಸರವೆನಿಸದಂತೆ ನಿರೂಪಣೆ ಮಾಡಲಾಗಿದೆ. ಅರ್ಥಗರ್ಭಿತ ಹಾಡುಗಳಿವೆ. ಆ ಚಿತ್ರದಲ್ಲಿನ ಹುಡುಗ ಪ್ರತಿಯೊಬ್ಬರಿಗೂ ತಮ್ಮ ಬಾಲ್ಯದಂತೆಯೇ ಅನ್ನಿಸುತ್ತಾನೆ. ಶಾಲೆಯಲ್ಲಿದ್ದಾಗ ನಮ್ಮ ತರಗತಿಯಲ್ಲೂ ಅದೇ ತರಹದ ಮಕ್ಕಳಿದ್ದಿದ್ದು ನೆನಪಾಗುತ್ತದೆ. ಅವರ ಪ್ರತಿಭೆಗೆ ತಕ್ಕನಾದ ಪ್ರೋತ್ಸಾಹ, ಅವಕಾಶ ಸಿಗದೆ ದುಸ್ಥಿತಿಯಲ್ಲಿರುವುದನ್ನು ಕಂಡು ಮನ ಮರುಗುತ್ತದೆ. ಬಾಲಕನ ಅದ್ಭುತಾಭಿನಯ ಬಲು ಮೆಚ್ಚುಗೆಯಾಗುತ್ತದೆ. ಜೊತೆಗೆ ಮನಸ್ಸಿನ ತುಂಬ ವಿಷಾದ ವಿಷಾದ :(

ಕನ್ನಡದಲ್ಲಿಯೂ ಹಿಂದೆ ಸುರೇಶ್ ಹೆಬ್ಳೀಕರ್ ಅಂತವರಿಂದ ’ಚುಕ್ಕಿ ಚಂದ್ರಮ’ ಇತ್ಯಾದಿ ಚಿತ್ರಗಳು ಇದೇ ನಿಟ್ಟಿನಲ್ಲಿ ಬಂದಿದ್ದರೂ ಕೂಡ ಅವು ಸ್ಟಾರ್ ಗಳ, ಪ್ರಚಾರದ ಕೊರತೆಯಿಂದ ಬರೀ ಡಾಕ್ಯುಮೆಂಟರಿಗಳಾಗಿ,’ಕ್ಲಾಸ್ ಫಿಲಂ’ ಗಳಾಗೇ ಉಳಿದುಬಿಟ್ಟಿದ್ದವು. ’ಲಗಾನ್’ ನಂತರ ಬಹಳ ದಿನಗಳ ಮೇಲೆ ನಾನು ನನ್ನ ಅಪ್ಪ ಅಮ್ಮರಿಗೂ Taare zameen par ಚಿತ್ರವನ್ನು ಸಲಹೆ ಮಾಡಿದ್ದೇನೆ. ನಿನ್ನೆ ಭಾನುವಾರ ಯಾವುದೋ ಪತ್ರಿಕೆಯೊಂದು ಚಿತ್ರ ವಿಮರ್ಶೆಯಲ್ಲಿ ಇದೊಂದು ಉತ್ತಮ ಮಕ್ಕಳ ಚಿತ್ರವೆಂದು ಬರೆದಿತ್ತು. ಆದರೆ ಇದು ಖಂಡಿತ ಮಕ್ಕಳ ಚಿತ್ರವಲ್ಲ, ಇದು ’ಎಲ್ಲರ ’ ಚಿತ್ರ. ಟಾಕೀಸೋ, ಸೀಡಿನೋ , ಡೀವೀಡಿನೋ, ಇಂಟರ್ನೆಟ್ಟೋ ಯಾವುದ್ರಲ್ಲೋ ಒಂದರಲ್ಲಿ ತಪ್ಪದೇ ನೋಡಿ. ಮಧ್ಯದಲ್ಲಿ ಸುಮಾರು ಬಾರಿ ಮನಸ್ಸನ್ನು ತಟ್ಟಿದ ಕುರುಹಾಗಿ ಕಣ್ಣಂಚಿನಿಂದ ಸಣ್ಣದೊಂದು ನೀರಹನಿ ಜಾರದಿದ್ದರೆ ಕೇಳಿ.

*********
ನಾನು ಭಾರತ ಚಿತ್ರರಂಗದಲ್ಲಿ ಬಹುವಾಗಿ ಮೆಚ್ಚುವುದು 'ಜೀವಂತ ದಂತಕಥೆ' ಎನಿಸಿಕೊಂಡಿರುವ "ಕಮಲ್ ಹಾಸನ್”. ಅವನ ನಂತರ ಯಾಕೋ ಅಮೀರ್ ಖಾನ್ ಇಷ್ಟವಾಗತೊಡಗಿದ್ದಾನೆ ;)