ಬುಧವಾರ, ಏಪ್ರಿಲ್ 23, 2008

ಕನ್ನಡ ಚಿತ್ರರಂಗದ ಕೆಟ್ಟ ಟ್ರೆಂಡ್

ಬಹುಶ: ಈ ಕೆಟ್ಟ ಟ್ರೆಂಡನ್ನು ಶುರು ಮಾಡಿದವರು ಚಿತ್ರ ನಿರ್ದೇಶಕ ಯೋಗರಾಜ ಭಟ್ಟರೇ ಇರಬೇಕು. ಕನ್ನಡ ಚಿತ್ರದ ಹೆಸರಿನ ಜೊತೆ ಹಿಂದಿ ಪದವನ್ನೊಳಗೊಂಡ ಒಂದು ಉಪಶೀರ್ಷಿಕೆ ಕೊಡುವುದು. ಮುಂಗಾರು ಮಳೆ ಜೊತೆಗೆ "ಹನಿ ಹನಿ ಪ್ರೇಮ್ ಕಹಾನಿ" ಎಂದು ಇಟ್ಟಿದ್ದರು. ಚಿತ್ರ hit ಆಯಿತು. ನಮ್ಮ ಕನ್ನಡ ಚಿತ್ರ ರಂಗದವರು ಹೇಗಿದ್ದರೂ ಗೆದ್ದೆತ್ತಿನ ಬಾಲ ಹಿಡಿಯುವವರು. ಎಲ್ಲರೂ ಶುರು ಹಚ್ಚಿಕೊಂಡರು ಇಂತಹ ಸಬ್ ಟೈಟಲ್ ಗಳಿಡುವುದನ್ನು. ನಂತರ ಬಂದ ಗಾಳಿಪಟ ಚಿತ್ರದಲ್ಲೂ "ಮನದ ಮುಗಿಲಲ್ಲಿ ಮೊಹಬ್ಬತ್ " ಎಂದಿಟ್ಟರು ಭಟ್ಟರು. ’ನಂದ ಲವ್ಸ್ ನಂದಿತ’ ಎಂಬ ಚಿತ್ರದಲ್ಲೂ " ಪಾತಕ ಲೋಕದಲ್ಲೊಂದು ಮೊಹಬ್ಬತ್ " ಎನ್ನುವ ಸ್ಲೋಗನ್ನು. ಇದೀಗ ’ತಾಜ್ ಮಹಲ್ ’ ಎಂಬ ಚಿತ್ರದ ಪೋಸ್ಟರುಗಳಲ್ಲಿ ಹೆಸರಿನ ಜೊತೆ "ಕಣ್ ನೀರಿನ ಕಹಾನಿ" ಎನ್ನುವ ಸ್ಲೋಗನ್ನು ಕಾಣಿಸಿಕೊಳ್ಳುತ್ತಿದೆ. ಜೊತೆಗೆ ಕರ್ನಾಟಕದ ಯಾವ ಭಾಗದಲ್ಲೂ ಬಳಸದ ’ದುನಿಯಾ’, ’ಜಿಂದಗಿ’ ಎಂಬ ಹಿಂದಿ ಪದಗಳ ಹೆಸರಿನಿಂದ ಕನ್ನಡ ಚಿತ್ರಗಳು ತಯಾರಾಗಿವೆ/ತಯಾರಾಗುತ್ತಿವೆ. ಮೊದಲು "ಮಂಡ್ಯ - the land of masses" ಎನ್ನುವಂತಹ ವಿಲಕ್ಷಣ ಸ್ಲೋಗನ್ನುಗಳ ಜೊತೆಗೆ ತೆರೆಗೆ ಬರುತ್ತಿದ್ದ ಕನ್ನಡ ಚಿತ್ರಗಳಿಗೆ ಈಗ ಮೊಹಬ್ಬತ್, ಕಹಾನಿ ಎನ್ನುವ ಹಿಂದಿ(ಉರ್ದು?) ಪದಗಳನ್ನುಳ್ಳ ಸ್ಲೋಗನ್ನುಗಳಿಡುವ ಹೊಸ ಟ್ರೆಂಡು ಶುರುವಾಗಿದೆ. ಎಲ್ಲದಕ್ಕಿಂತಲೂ ಮುಂದೆ ಹೋಗಿ ಯಾವನೋ ಒಬ್ಬ ನಿರ್ದೇಶಕ ಶಿವರಾಜ್ ಕುಮಾರನ್ನು ಹಾಕಿಕೊಂಡು " ಪರಮೇಶ ಪಾನ್ ವಾಲಾ" ಎನ್ನುವ ದರಿದ್ರ ಹೆಸರಿನ ಸಿನೆಮಾ ತೆಗೆಯಲು ಮುಂದಾಗಿದ್ದಾನೆ. ಶಿವಣ್ಣ ಅದು ಹೇಗೆ ಒಪ್ಪಿಕೊಂಡರೋ ಏನೋ, ಶಾರುಖ್ ಖಾನನ ದೇಹಕ್ಕೆ ಶಿವಣ್ಣನ ಮುಖ ಅಂಟಿಸಿರುವ ಚಿತ್ರದ ಪೋಸ್ಟರುಗಳು ಊರ ತುಂಬ ರಾರಾಜಿಸುತ್ತಿವೆ.


ಇದನ್ನು ಕನ್ನಡಿಗರ ಕೀಳರಿಮೆ ಎನ್ನಬೇಕೋ ಅಥವಾ ಚಿತ್ರರಂಗಕ್ಕೆ ಹಿಡಿದಿರುವ ದರಿದ್ರ ಎನ್ನಬೇಕೋ ತಿಳಿಯುತ್ತಿಲ್ಲ. ಈ ವಿಷಯದಲ್ಲಿ ಕನ್ನಡಿಗರು ತಮಿಳರಿಂದ ಕಲಿಯುವುದು ಸಾಕಷ್ಟಿದೆ. "ಮುಂಗಾರು ಮಳೆ"ಯಂತಹ ಪ್ರಸಿದ್ಧ ಚಿತ್ರಗಳನ್ನು ಸುಮ್ಮನೇ ಕುತೂಹಲಕ್ಕೂ ಕೂಡ ನೋಡದೇ ’ಯು,ಮಿ ಔರ್ ಹಮ್’ ತರಹದ ವೇಸ್ಟ್ ಹಿಂದಿ ಚಿತ್ರಗಳನ್ನು ಮಾರ್ನಿಂಗ್ ಶೋನಲ್ಲೇ ನೋಡಿ ಧನ್ಯರಾಗುವ ಮತ್ತು ತಮಿಳು,ತೆಲುಗು ಚಿತ್ರಗಳ ಸೀಡಿಗಳನ್ನು ತಂದು ಶ್ರದ್ಧೆಯಿಂದ ನೋಡಿ ಕೃತಾರ್ಥರಾಗುವ ಕನ್ನಡಿಗರೂ ಇರುವಾಗ ಇದೇನು ದೊಡ್ಡದಲ್ಲ ಅನ್ನುತ್ತೀರ?