ಸೋಮವಾರ, ಮೇ 19, 2008

"ಮುಸ್ಸಂಜೆಮಾತು" ಬಗ್ಗೆ ಒಂದಿಷ್ಟು ಮಾತು

"ಜೀವನದಲ್ಲಿ ಬೇರೆಯವ್ರಿಗೆ ಸಜೆಷನ್ಸ್ ಕೊಡೋದು ಸುಲಭ, ಆದ್ರೆ ನಮ್ ಜೀವನದಲ್ಲಿ ಅದನ್ನು ಫಾಲೋ ಮಾಡದು ಬಹಳ ಕಷ್ಟ."

’ಮುಸ್ಸಂಜೆ ಮಾತು’ ಚೆನ್ನಾಗಿದೆ ಅನ್ಸುತ್ತೆ, ಟೈಮ್ಸಾಫಿಂಡಿಯಾದಲ್ಲಿ ನಾಲ್ಕು ಸ್ಟಾರ್ ಕೊಟ್ಟಿದ್ದಾರೆ ಬಾ ಹೋಗೋಣ ಎಂದು ಗೆಳೆಯರು ಕರೆದರು. ಕೆಲದಿನಗಳಿಂದ ಆ ಚಿತ್ರದ ಪೋಸ್ಟರ್ ಗಳನ್ನು ನೋಡಿದ್ದೆ. ಚಿತ್ರ ಚೆನ್ನಾಗಿಯೇ ಇರಬಹುದು ಎನ್ನಿಸಿತ್ತು. ಮಾಮೂಲಿ ಪ್ರೇಮ ಕಥೆಗಳುಳ್ಳ ಚಿತ್ರಗಳನ್ನು ನೋಡದ ನನಗೆ ಇದ್ಯಾಕೋ ಸ್ವಲ್ಪ ಬೇರೆಯೇ ತರನಾದ ಮೆಚ್ಯೂರ್ಡ್ ಲವ್ ಸ್ಟೋರಿ ಇರಬಹುದು ಅನಿಸಿತ್ತು. ಸುದೀಪ ಇದಾನೆ ಅಂದ್ಮೇಲೆ ಸ್ವಲ್ಪ ಲೆವೆಲ್ಲಾಗೇ ಇರ್ಬೋದು ಅಂತ ನಂಬಿಕೆಯೂ ಇತ್ತು. ಎಲ್ಲಾ ಹಾಳಾಗಿ ಹೋಯಿತು. ಎಲ್ಲಿಂದ ಶುರುಮಾಡಿ ಎಲ್ಲಿಗೆ ಮುಗಿಸುವುದೋ ತಿಳಿಯುತ್ತಿಲ್ಲ. ಈಗಿನ ಸಿನೆಮಾ ಟ್ರೆಂಡಿನಂತೆ ನಾಯಕ ರೇಡಿಯೋ ಜಾಕಿ ಎಂಬುದೊಂದನ್ನು ಬಿಟ್ಟರೆ ಮತ್ತದೇ ೮೦ರ ದಶಕದ ಕಥೆ. ಕನ್ನಡದ ನಾಲ್ಕು ಸಿನೆಮಾ ನೋಡಿ ಅಭ್ಯಾಸವಿದ್ದವರು ಪ್ರತಿ ಸನ್ನಿವೇಶವನ್ನು, ಕಥೆಯನ್ನೂ ಸಂಭಾಷಣೆಗಳ ಸಮೇತ ಊಹಿಸಿಕೊಂಡುಬಿಡಬಹುದು !! ಚಿತ್ರ ಶುರುವಾಗಿ ೨೦ನಿಮಿಷದಲ್ಲೇ ನಾಯಕ ಟ್ರಾಫಿಕ್ ಜಾಮ್ ನಲ್ಲಿ ಸಿಕ್ಕು ಹಾಕಿಕೊಂಡಿದ್ದ ಗರ್ಭಿಣಿ ಹೆಂಗಸೊಬ್ಬಳನ್ನು ಎತ್ತಿಕೊಂಡು ಹೋಗಿ ಆಸ್ಪತ್ರೆಗೆ ಸೇರಿಸುತ್ತಾನೆ. ಅಲ್ಲಿ ಮಗು ಆದ ಮೇಲೆ ಆಕೆ "ಅಣ್ಣಾ, ನಿಮ್ಮುಪಕಾರನ್ನ ಯಾವತ್ತೂ ಮರೆಯೋಲ್ಲ, ಈ ಮಗುಗೇ ನಿಮ್ಮದೇ ಹೆಸರಿಡ್ತೀನಿ" ಅಂತಾಳೆ. ಆವಾಗಲೇ ಇಡೀ ಟಾಕೀಸಿಗೆ ಒಳಗೆ ಬಂದು ತಪ್ಪು ಮಾಡಿಬಿಟ್ಟೆವೇನೋ ಎಂಬ ಸುಳಿವು ಸಿಕ್ಕಿಹೋಗುತ್ತದೆ. ಇರಲಿ ನೋಡೋಣ ಎಂದುಕೊಂಡರೆ ಇಡೀ ಚಿತ್ರದಲ್ಲಿ ಎಲ್ಲಾ ಪಾತ್ರಗಳೂ ಕೊರೆಯುವವರೇ! ಒಂದಿಷ್ಟು ಒಳ್ಳೆಯ ಸಂದೇಶಗಳು ಇವೆಯಾದರೂ ಕೂಡ ನಿರೂಪಣೆ ನೀರಸ ನೀರಸ. ಭಾವನೆಗಳನ್ನೆಲ್ಲಾ ತಮಾಷೆಮಾಡಿಕೊಳ್ಳಲು ಅವಕಾಶ ಮಾಡಿಕೊಡುವಂತಾಗಿ ಹೋಗಿದೆ ಎರಡನೇ ಅರ್ಧದಲ್ಲಿ. ಕೊನೆಕೊನೆಗಂತೂ ಗಂಭೀರ ದೃಶ್ಯಗಳು ಬಂದಾಗಲೂ ಕೂಡ ಇಡೀ ಟಾಕೀಸಿಗೆ ಟಾಕೀಸೆ ಯಾವುದೋ ಹಾಸ್ಯ ಚಿತ್ರವೊಂದನ್ನು ನೋಡುತ್ತಿದ್ದಂತೆ ಪೂರ್ತಿ ಕಾಮಿಡಿಯಿಂದ ತುಂಬಿಹೋಗುತ್ತದೆ. ಇಡೀ ಊರತುಂಬಾ ಪೋಸ್ಟರುಗಳಲ್ಲಿ ಕಾಣುತ್ತಿದ್ದ ದೃಶ್ಯಗಳು ಕೇವಲ ಒಂದು ಹಾಡಿನದು. ಅದು ನಾಯಕ ನಾಯಕಿಗೆ ಪ್ರೇಮವಾಗುವ ಹಾಡು ಮತ್ತು ಅದಷ್ಟರಲ್ಲಿ ಮಾತ್ರ ಪ್ರೇಮ ಇರುವುದು.

"ಹುಡ್ಗೀರನ್ನ ರೇಗಿಸಿ ಪರ್ವಾಗಿಲ್ಲ, ಆದ್ರೆ ಅದಕ್ಕೊಂದು ಲಿಮಿಟ್ಟಿರ್ಲಿ", ಆಮೇಲೆ "ಯಾವನಾರೂ ಗಂಡಸು ಸುಮ್ನೆ ಅವನ ಪಾಡಿಗೆ ಅವನು ಇದಾನೆ ಅಂದ ಮಾತ್ರಕ್ಕೆ ಅವನು ಗಂಡಸೇ ಅಲ್ಲ ಅಂತ ಮಾತ್ರ ತಿಳ್ಕಬೇಡಿ" ಅಂತ ಸುದೀಪ ಸುಮ್ಸುಮ್ನೇ ಇರುವ ಫೈಟಿಂಗ್ ಒಂದು ಮುಗಿದ ಮೇಲೆ ಹೊಡೆಸಿಕೊಂಡ ರೌಡಿಗಳಿಗೆ ಉಪದೇಶ ಕೊಡುತ್ತಾನೆ. "ಈ ರೇಡಿಯೋ ಜಾಕಿ ಕೆಲ್ಸ ಬಿಟ್ಟು ಯಾವುದಾದ್ರೂ ಐ.ಟಿ ಕಂಪನಿ ಸೇರ್ಕೋ, ಒಳ್ಳೇ ಸಂಬಳ, ನೆಮ್ಮದಿಯಾಗಿ ಇರ್ಬೋದು" ಅಂತ ನಾಯಕನ ಅಮ್ಮ ಟಿಪಿಕಲ್ ಅಮ್ಮನಂತೆ ಹೇಳುತ್ತಾಳೆ !! ಟಾಕೀಸಿನಲ್ಲಿದ್ದ ಐ.ಟಿ. ಹುಡುಗರು ಹೋ...... ಎಂದು ಕೂಗುತ್ತಾರೆ

ಈ ಚಿತ್ರ ಮಾಡಿದ ನಿರ್ಮಾಪಕ, ನಿರ್ದೇಶಕನಿಗೆ ಬೈಯಬೇಕೋ, ನೋಡಿದ ನಮಗೆ ನಾವೇ ಬೈಕೊಬೇಕೋ ತಿಳೀತಿಲ್ಲ. ಸುದೀಪನ ನಟನೆ, ಮಾತು ಬಗ್ಗೆ ಎರಡು ಮಾತಿಲ್ಲವಾದರೂ ಇಂತದೇ ಚಿತ್ರಗಳನ್ನ ಮಾಡ್ತಾ ಇದ್ರೆ ಆಮೇಲೆ "ಯಾರೋ ಯಾರೋ ಗೀಚಿ ಹೋದ .. ಹಾಳೂ ಹಣೆಯಾ ಬರಹ...." ಅನ್ಬೇಕಾಗತ್ತೆ. ಹಾಸ್ಯ,ಹರಟೆ ಖ್ಯಾತಿಯ ಗಂಗಾವತಿ ಬೀಚಿ ಪ್ರಾಣೇಶ್ ಮತ್ತು ಪ್ರೊ.ಕೃಷ್ಣೆಗೌಡರು ಬಹುಶ: ಮೊದಲ ಬಾರಿಗೆ ಚಿತ್ರವೊಂದರಲ್ಲಿ ನಟಿಸಿದ್ದಾರೆ ಮತ್ತು ನಾಯಕನಿಗಿಂತ ಅವರ ಎಂಟ್ರಿಗೇ ಜಾಸ್ತಿ ಸಿಳ್ಳೆಗಳು ಬೀಳುತ್ತವೆ. ಹಾಗಂತ ಚಿತ್ರದಲ್ಲಿ ತೀರ ನಗು ಬರುವಂತಹ ಹಾಸ್ಯ ಏನೂ ಇಲ್ಲ! ಒಂದು ಕಾಲದಲ್ಲಿ ಇಂತಹುದ್ದನ್ನೆಲ್ಲಾ ನೋಡುಗರು ಗಂಭೀರವಾಗಿ ನೋಡುತ್ತಿದ್ದರು. ಆದರೆ ಈಗಿನ ನೋಡುಗರ ಮನಸ್ಥಿತಿ, ಅಭಿರುಚಿ ಹಾಗಿಲ್ಲ ಎಂಬುದು ನಿರ್ದೇಶಕನಿಗೆ ಅರ್ಥವಾಗಿಲ್ಲ. ಪದೇ ಪದೇ ಪ್ರೇಕ್ಷಕನನ್ನು ಅಳಿಸಲು ಪ್ರಯತ್ನವನ್ನು ಮಾಡಿದಂತಿದೆ. "ಹೇಳಲೊಂಥರಾ ಥರಾ.." ಎಂಬ ಹಾಡನ್ನು ಬಿಟ್ಟರೆ ಬೇರ್ಯಾವುದೂ ಬೇಕೆಂದರೂ ನೆನಪಾಗುವುದಿಲ್ಲ.!! ಇಷ್ಟೆಲ್ಲಾ ಹೇಳಿದ ಮೇಲೂ ಚಿತ್ರದ ಕಥೆ ಏನು ಅಂತ ಹೇಳೋ ಅಗತ್ಯ ಕಾಣ್ತಾ ಇಲ್ಲ, ಹೇಳಲು ತಾಳ್ಮೆನೂ ಇಲ್ಲ.

ಸೆಂಟಿಮೆಂಟ್ ಗಳನ್ನು ಇಷ್ಟ ಪಡೋವ್ರಾದ್ರೆ, ಗಂಭೀರವಾಗಿ ನೋಡೋವ್ರಾದ್ರೆ, ಡೀಸೆಂಟಾದ ಚಿತ್ರವೊಂದನ್ನು ನೋಡಬೇಕಾಗಿದ್ರೆ, ಮಾಡಲು ಬೇರೆ ಏನೂ ಕೆಲಸ ಇಲ್ಲಾಂದ್ರೆ ಇನ್ನು ನಾಲ್ಕು ದಿನದೊಳಗೆ ಚಿತ್ರ ನೋಡಿಕೊಂಡು ಬನ್ನಿ. ಆಮೇಲೆ ಯಾವ ಟಾಕೀಸಿನಲ್ಲೂ ಇರೋಲ್ಲ ಅಂತ ಖಾತ್ರಿ ಇದೆ. ಇಲ್ಲಾಂದ್ರೆ ಸುಮ್ನೆ ನಮ್ಮ ಹಾಗೆ ಒಂದು ಮುಸ್ಸಂಜೆ ಹಾಳು ಮಾಡ್ಕೋಬೇಡಿ. ನನ್ನನ್ನು ಕರೆದುಕೊಂಡು ಹೋಗಿದ್ದ ಗೆಳೆಯರು ಅರ್ಧಗಂಟೆ ಮೊದಲೇ ಎದ್ದುಹೋಗಿ ಬಚಾವಾಗಿ ಬಿಟ್ಟರು !

ಅಂದ ಹಾಗೆ ಮರೆತುಬಿಟ್ಟಿದ್ದೆ , ಈ ಬರಹದ ಮೊದಲಲ್ಲಿ ಹೇಳಿದ ಮಾತಿದೆಯಲ್ಲ ಅದು ನಂದಲ್ಲ, ಅದೂ ಕೂಡ ಸಿನೆಮಾದಲ್ಲಿ ಸುದೀಪ ಹೇಳಿದ್ದು. ಚೆನ್ನಾಗಿದೆ ಅಲ್ವಾ?

ಬೆಂಕಿಬೀಳಲಿ ಆ ಟೈಮ್ಸಾಫಿಂಡಿಯಾಗೆ ಮತ್ತು ಅದರ ರೇಟಿಂಗಿಗೆ.


(ವಿ.ಸೂ: ಮೇಲಿನ ಅಭಿಪ್ರಾಯಗಳು,ವಿಮರ್ಶೆಗಳು ವೈಯಕ್ತಿಕ ಮಾತ್ರ)

ಪೂರಕ ಓದಿಗೆ : ಮುಸ್ಸಂಜೆ ಮಾತು, ಮಧ್ಯರಾತ್ರಿ ಗೋಳು :)

ಸೋಮವಾರ, ಮೇ 12, 2008

ವರುಷ ಕಳೆಯಿತು

ಒಂದೂವರೆ ವರ್ಷಕ್ಕೂ ಹಿಂದಿನ ಮಾತು. ಆರ್ಕುಟ್ಟಿನ ಯಾವುದ್ಯಾವುದೋ ಕಮ್ಯುನಿಟಿಗಳಲ್ಲಿ ಮಾಡುತ್ತಿದ್ದ ಚರ್ಚೆ, ಪ್ರೀತಿ, ಜಗಳಗಳು ಹೊಸ ಹೊಸ ವಿಚಾರಗಳನ್ನು ತಿಳಿದುಕೊಳ್ಳಲು, ಹೊಸ ಹೊಸ ಲೋಕಗಳಿಗೆ ತೆರೆದುಕೊಳ್ಳಲು ಕಾರಣವಾಯ್ತು. ಹೊಸ ಹೊಸ ಜನರ ಪರಿಚಯವಾಯ್ತು. ಆಗ ಒಬ್ಬ ಓದುಗನಾಗಿ ಕೆಲವೇ ಕೆಲವು ಪರಿಚಿತರ, ಗೆಳೆಯರ, ಸಂಬಂಧಿಕರ ಇಂಗ್ಲೀಷ್ ಬ್ಲಾಗುಗಳಲ್ಲಿ ಓಡಾಡುತ್ತಿದ್ದೆ. ಕನ್ನಡದ ಒಂದೆರಡು ಬ್ಲಾಗುಗಳನ್ನು ನೋಡಿದ್ದರೂ ಅವು ಅಪ್ಡೇಟ್ ಆಗುತ್ತಿದ್ದುದು ಅಪರೂಪವಾಗಿರುತ್ತಿತ್ತು. ಬಹುಶ: ನಾನು ಮೊದಲು ನೋಡಿದ ಸಕ್ರಿಯ ಕನ್ನಡ ಬ್ಲಾಗು ಶ್ರೀನಿಧಿಯದಿರಬೇಕು. ನಂತರ ಅವನಿಂದ ಹಲವು ಕೊಂಡಿಗಳು ಸಿಕ್ಕವು. ಚೆಂದ ಚೆಂದನೆಯ ಪೋಸ್ಟಿಂಗ್ ಗಳನ್ನು ಹೊತ್ತು ಬರುತ್ತಿದ್ದ ಶ್ರೀನಿಧಿ,ಸುಶ್ರುತ,ಸಂದೀಪ ಮೊದಲಾದ ಹಲವರ ಬ್ಲಾಗುಗಳನ್ನು ಓದುತ್ತಾ, ಕಮೆಂಟಿಸುತ್ತಾ ಖುಷಿ ಪಡುತ್ತಿದ್ದೆ. ಹೀಗೆ ಸುಮಾರು ತಿಂಗಳುಗಳು ಕಳೆದ ಮೇಲೆ ನನ್ನ ಅಭಿಪ್ರಾಯಗಳನ್ನು, ಅನಿಸಿಕೆಗಳನ್ನು, ಅನುಭವಗಳನ್ನು ಅಭಿವ್ಯಕ್ತಿಗೊಳಿಸಲು, ಮತ್ತಿತರ ಮಾಹಿತಿ, ವಿಷಯಗಳನ್ನು ದಾಖಲಿಸಲು, ಹಂಚಿಕೊಳ್ಳಲು ನನ್ನದೇ ಒಂದು ಬ್ಲಾಗ್ ಮಾಡಿಕೊಳ್ಳಬೇಕೆಂಬ ಆಸೆ ಚಿಗುರತೊಡಗಿತು. ಶ್ರೀನಿಧಿಯನ್ನು ನಾನು ಒಂದು ಬ್ಲಾಗ್ ಮಾಡಿದರೆ ಹೇಗೆ ಎಂದು ಕೇಳಿದೆ. ಅವನು ತನ್ನ ಮಾಮೂಲಿ ಶೈಲಿಯಲ್ಲಿ "ನಿನಗೆ ಅವತ್ತಿಂದ ಬಡ್ಕತಾ ಇದ್ನಲಲೇ ,ಮೊದ್ಲು ಮಾಡಿ ಸಾಯಿ" ಎಂದ. ಅಗತ್ಯವಿದ್ದುದನೆಲ್ಲ ಹೇಳಿಕೊಟ್ಟ. ಹೇಗಿದ್ದರೂ ಕನ್ನಡ ಬರೆಯಲು ’ಬರಹ’ ಸಾಫ್ಟ್ ವೇರಿತ್ತು. ಬರೆಯುವ ಜಾಗ ಕೊಡಲು ಗೂಗಲ್ ನ ಬ್ಲಾಗ್ ಸ್ಪಾಟಿತ್ತು. ಬರೆಯಲು ನಾನಿದ್ದೆ, ಏನೋ ಬರೆಯಬಲ್ಲೆ ಎಂಬ ನಂಬಿಕೆ ಮೊದಲಿಂದ ಹೇಗೂ ಇತ್ತು. ಓದಲು ಯಾರಿದ್ದರೋ ಗೊತ್ತಿರಲಿಲ್ಲ ! ಅಂತೂ ಸರಿಯಾಗಿ ೨೦೦೭ ನೇ ಇಸ್ವಿ ಮೇ ೧೦ ರಂದು ಬ್ಲಾಗ್ ಶುರು ಮಾಡಿದೆ. ಮೊದಲು ಪೋಸ್ಟಿಂಗ್ ಮಾಡಿದಾಗ ಹೆಂಡತಿಯ ಚೊಚ್ಚಲ ಹೆರಿಗೆಯ ಸಮಯದಲ್ಲಿ ಗಂಡನಿಗಿರುವ ದುಗುಡವಿತ್ತು.! :)

ಅಂದಿನಿಂದ ಇಂದಿನವರೆಗೆ ಬರೆದದ್ದು ಜಾಸ್ತಿಯೇನೂ ಇಲ್ಲ. ಮನಸು ಬಂದಾಗ , ಬಿಡುವಿದ್ದಾಗ, ವಿಷಯವಿದೆ ಎನಿಸಿದಾಗಲಷ್ಟೆ ಬರೆದಿದ್ದೇನೆ. ಬ್ಲಾಗ್ ಎಂಬುದು ಇರುವುದೇ ಅದಕ್ಕೆ. ಬ್ಲಾಗಿನಿಂದಲೇ ಹಲವು ಸಮಾನ ಮನಸ್ಕರು, ಮಿತ್ರರು, ಪ್ರೀತಿಪಾತ್ರರು ಸಿಕ್ಕಿದ್ದಾರೆ, ವಿಷಯಗಳನ್ನು ತಿಳಿದುಕೊಂಡಿದ್ದೇನೆ. ಬರೆದ ಕೆಲವು ಲೇಖನಗಳಿಗೆ ಹೊಗಳಿಕೆ ಸಿಕ್ಕಿದೆ ಜೊತೆಗೆ ಬೈಗುಳಗಳೂ ಚೆನ್ನಾಗಿಯೇ ಸಿಕ್ಕಿವೆ. ಎಲ್ಲದಕ್ಕಿಂತ ಹೆಚ್ಚಾಗಿ ಅವುಗಳನ್ನೆಲ್ಲ ದಾಖಲಿಸಿದ ಸಂತೋಷ ಸಿಕ್ಕಿದೆ! ಅದೇ ಬೇಜಬ್ದಾರಿತನ, ಉದಾಸೀನದ ಜೊತೆಯೇ ಒಂದು ವರುಷ ಕಳೆದಿದೆ. ಈಗಲೂ ಬರೆಯಲು ಅದೇ ಬರಹ ಸಾಫ್ಟ್ ವೇರಿದೆ, ಜಾಗಕ್ಕೆ ಬ್ಲಾಗ್ ಸ್ಪಾಟಿದೆ. ಪೋಸ್ಟಿಂಗ್ ಗಳನ್ನು ಶಾರ್ಟ್ ಅಂಡ್ ಸ್ವೀಟ್ ಮಾಡೋಣವೆನಿಸಿದೆ. ಶಾರ್ಟ್ ಅಂತೂ ಆಗಿದೆ, ಸ್ವೀಟ್ ಆಗಿದೆಯೋ ಇಲ್ಲವೋ ಗೊತ್ತಿಲ್ಲ ! ’ವಿಕಾಸವಾದ’ಕ್ಕೆ ಪ್ರತ್ಯಕ್ಷವಾಗಿ, ಪರೋಕ್ಷವಾಗಿ ಸಹಕರಿಸಿದವರಿಗೆ, ಪ್ರೋತ್ಸಾಹಿಸಿದವರಿಗೆಲ್ಲ ಧನ್ಯವಾದಗಳು.

ಬುಧವಾರ, ಮೇ 7, 2008

ಕರ್ನಾಟಕವೆಂದರೆ ಬೆಂಗಳೂರು ಮಾತ್ರವೇನಾ?!

ಬೆಂಗಳೂರಿನಲ್ಲಿ ಚೆನ್ನಾಗಿಯೇ ಇರುವ ಟಾರಿನ ರಸ್ತೆಯ ಮೇಲೆ ಮತ್ತೊಂದು ಪದರ ಟಾರು, ಫ್ಲೈ ಓವರು, ಅಂಡರ್ ಪಾಸು, ಆದರೆ ಬೇರೆ ಊರುಗಳಲ್ಲಿ ರಸ್ತೆಯೇ ಇಲ್ಲ ಅಥವಾ ರಸ್ತೆಯೇ ಕಾಣದಂತೆ ಗುಂಡಿಗಳು. ಬೆಂಗಳೂರಿನಲ್ಲಿ ಸಣ್ಣ ಸಣ್ಣ ಸರ್ಕಲ್ಲುಗಳಲ್ಲೂ ರಾತ್ರೀ ಇಡೀ ಕೋರೈಸುವ ಹೈ ಮಾಸ್ ದೀಪಗಳು, ಬೇರೆ ಊರುಗಳಲ್ಲಿ ಹಳ್ಳಿಗಳಲ್ಲಿ ನೀರೆತ್ತುವ ಪಂಪಸೆಟ್ಟಿಗೂ ಗತಿಯಿಲ್ಲದಂತೆ ದಿನವೂ ಲೋಡ್ ಶೆಡ್ಡಿಂಗ್. ಬೆಂಗಳೂರಿನಲ್ಲಿ ಮಳೆ ಬಂದು ರಸ್ತೆಯಲ್ಲಿ ನೀರು ಹರಿದರೆ ದೊಡ್ಡ ಸುದ್ದಿ, ಅಲ್ಲಿ ಬೇರೆ ಊರುಗಳು ನೀರಲ್ಲಿ ಮುಳುಗಿ ಸಂಪರ್ಕವೇ ಕಡಿದೂ ಹೋದರೂ ಸುದ್ದಿಯೇ ಇಲ್ಲ. ಇಲ್ಲಿ ಎರಡು ತಾಸು ಕರೆಂಟು ಕೈಕೊಟ್ಟರೆ ಭೂಮಿ ತಿರುಗುವುದೇ ನಿಂತು ಹೋದಂತೆ ಬೊಬ್ಬೆ, ಹಳ್ಳಿಗಳಲ್ಲಿ ಕಂಬ ಮುರಿದು ಬಿದ್ದು ಮೂರು ದಿನವಾಗಿ ಪದೇ ಪದೇ ದೂರು ಕೊಟ್ಟರೂ ಹೋಗದ ಕತ್ತಲೆ, ದಿನಕ್ಕೊಮ್ಮೆ ಡೆಡ್ಡಾಗುವ ಫೋನು. ಇಲ್ಲಿ ಸಿಟಿ ಒಳಗಿನ ತಿರುಗಾಟಕ್ಕೇ ವೋಲ್ವೋ,ಎ.ಸಿ ಬಸ್ಸುಗಳು, ಬೇರೆ ಊರುಗಳಲ್ಲಿ ಸಮಯದ ಪರಿವೆಯೇ ಇಲ್ಲದಂತೆ ಓಡಾಡುವ ಅಕ್ಷರಶಃ ತಗಡಿನ ಡಬ್ಬಿಗಳಂತಿರುವ ಬಸ್ಸುಗಳು. ಇಲ್ಲಿ ಐ.ಟಿಯಲ್ಲಿ ಸ್ವಲ್ಪ ಏರು ಪೇರಾದರೆ ಅರಚಾಟ, ಅಲ್ಲಿ ಬೆಲೆಯೇ ಇಲ್ಲದೆ ಮುಗಿದುಹೋಗುತ್ತಿರುವ ಕೃಷಿ/ಕೃಷಿಕನ ಧ್ವನಿ. ಬೆಂಗಳೂರಿಗರಿಗೆ ಅದೆಷ್ಟೆಷ್ಟೋ ಹಂತದವರೆಗೆ ಕಾವೇರಿ ಯೋಜನೆ ಮಾಡಿ ದಿನವೂ ಕುಡಿಯುವ ನೀರು, ಬೇರೆ ಕೆಲವು ಊರುಗಳಲ್ಲಿ ವಾರಗಟ್ಟಲೆ ನಲ್ಲಿಯಲ್ಲಿ ನೀರು ಬರದ ಸ್ಥಿತಿ. ಸೌಲಭ್ಯ, ಅವಕಾಶಗಳಿಲ್ಲದೇ ಜನ ಕಡಿಮೆಯಾಗಿ ಖಾಲಿಯಾಗುತ್ತಿರುವ ಬೇರೆ ಊರುಗಳು, ದಿನದಿನವೂ ಹಿಗ್ಗುತ್ತಲೇ ಇರುವ ಬೆಂಗಳೂರು.

ಹೀಗೆ ಅಲವತ್ತುಕೊಳ್ಳಲು ಕಾರಣವಿದೆ. ನಮ್ಮ ರಾಜಕಾರಣಿಗಳಿಗೆ, ಆಡಳಿತಕ್ಕೆ, ಸರ್ಕಾರಕ್ಕೆ ಕಾಣುವುದು ಈ ಬೆಂಗಳೂರೊಂದೇ ಎಂದುಕೊಂಡರೆ ಎಲ್ಲರಿಗೂ ಕಿವಿ ಹಿಂಡಿ ಬುದ್ಧಿ ಹೇಳುವ, ಹೇಳಬೇಕಾದ ಮಾಧ್ಯಮಗಳೂ ಹೀಗೆಯೇ ವರ್ತಿಸಿದರೆ ಏನು ಗತಿ!!

ಮೊನ್ನೆ ನನ್ನ ಅಮ್ಮನಿಗೆ ಖಾಸಗಿ ಟೀವಿ ವಾಹಿನಿಯೊಂದು ನಡೆಸಿದ ಯಾವುದೋ ಕಾರ್ಯಕ್ರಮವೊಂದರಲ್ಲಿ ಬಹುಮಾನ ಬಂದಿತ್ತು. ಅವರು ಬಹುಮಾನವನ್ನು ಬೆಂಗಳೂರಿನಲ್ಲಿರುವ ವಾಹಿನಿಯ ಕಛೇರಿಗೆ ಬಂದು ತೆಗೆದುಕೊಳ್ಳುವಂತೆ ಸೂಚಿಸಿದ್ದರು. ಈ ಬಗ್ಗೆ ವಾಹಿನಿಯವರನ್ನು ಸಂಪರ್ಕಿಸಿ ಬೇರೆ ಊರುಗಳಲ್ಲಿರುವವರು ಇದಕ್ಕೋಸ್ಕರವೇ ಬೆಂಗಳೂರಿಗೆ ಬಂದು ಬಹುಮಾನ ತೆಗೆದುಕೊಳ್ಳಲು ಬಹಳ ಕಷ್ಟವಾಗುವುದರ ಬಗ್ಗೆ ಕೇಳಿಕೊಂಡರೂ ಸಹ ಬೆಂಗಳೂರಿಗೆ ಬಂದರೆ ಮಾತ್ರ, ಅದೂ ಅವರು ಹೇಳಿದ ಕಾಲಾವಧಿಯಲ್ಲಿ ಬಂದರೆ ಮಾತ್ರ ಕೊಡಲು ಸಾಧ್ಯ ಎಂಬ ಉತ್ತರ ಬಂದಿದೆ. ಇದು ಮೊದಲನೆ ಬಾರಿ ಏನಲ್ಲ. ಹಲವು ಮಾಧ್ಯಮಗಳು, ಸಂಸ್ಥೆಗಳು ನಡೆಸುವ ಕಾರ್ಯಕ್ರಮಗಳಲ್ಲಿ, ಸ್ಪರ್ಧೆಗಳಲ್ಲಿ ಈ ಮೊದಲೂ ಅಮ್ಮನಿಗೆ ಸುಮಾರು ಬಹುಮಾನಗಳು ಬಂದಿವೆ. ಆದರೆ ಎಲ್ಲರದ್ದೂ ಇದೇ ಧಾಟಿ! ಬುದ್ದಿ ಇದೆಯೇ ಇವರಿಗೆ? ಸಾಮಾನ್ಯವಾಗಿ ಎಲ್ಲ ಮುಖ್ಯ ಕಛೇರಿಗಳು ಬೆಂಗಳೂರಿನಲ್ಲೇ ಇರುತ್ತವೆ. ಹಾಗೆಂದ ಮಾತ್ರಕ್ಕೆ ಇವು ಬರೇ ಬೆಂಗಳೂರಿನ ಜನರಿಗೆ ಮಾತ್ರವೆ ಅಥವಾ ಇವರ ವಾಹಿನಿಗಳು ಬರೀ ಬೆಂಗಳೂರಿಗೆ ಮಾತ್ರ ಪ್ರಸಾರವಾಗುತ್ತವೆಯೇ? ಬೇರೆ ಊರುಗಳಲ್ಲಿರುವ ಜನರೂ ಕೂಡ ಭಾಗವಹಿಸುತ್ತಾರೆ, ಗೆಲ್ಲುತ್ತಾರೆ. ಆದರೆ ಅವರಿಗೆ ಬಹುಮಾನ ಬಂದಾಗ ಬೆಂಗಳೂರಿಗೇ ಬಂದು ತೆಗೆದುಕೊಳ್ಳಬೇಕೆಂಬ ಇವರ ಧೋರಣೆ ಎಷ್ಟು ಸರಿ? ತೀರಾ ವಿದೇಶದಲ್ಲಿ ಅಥವಾ ಬೇರೆ ರಾಜ್ಯದಲ್ಲಿರುವವರಿಗೆ ತಲುಪಿಸಲು ಸಾಧ್ಯವಾಗದಿರಬಹುದು, ಆದರೆ ಕರ್ನಾಟಕದಲ್ಲಿರುವ ಜನರಿಗೆ ಅವರವರ ಊರಿಗೇ ತಲುಪಿಸುವ ಅಥವಾ ಕೊನೇ ಪಕ್ಷ ಬಹುಮಾನ ದೊಡ್ಡದಿದ್ದಾಗ ಹತ್ತಿರದ ಜಿಲ್ಲಾ ಕೇಂದ್ರದಿಂದ ಪಡೆದುಕೊಳ್ಳುವ ವ್ಯವಸ್ಥೆ ಮಾಡಬೇಕಲ್ಲವೇ? ಉದಾಹರಣೆಗೆ ಬಹುಮಾನ ಗೆದ್ದವರು ರಾಯಚೂರಿನಿಂದಲೋ, ಕಾರವಾರದ ತುದಿಯಿಂದಲೋ ತಾಸುಗಟ್ಟಲೇ ಪ್ರಯಾಣ ಮಾಡಿ ಬೆಂಗಳೂರಿಗೆ ಬಂದು ಅದನ್ನು ತೆಗೆದುಕೊಂಡು ಹೋಗುವುದು ಸಾಧ್ಯವೇ, ಸಮಂಜಸವೇ? ಎಷ್ಟು ಹಣ, ಸಮಯ ವ್ಯರ್ಥ! ಅಷ್ಟಕ್ಕೂ ಇವರೇನು ಬಹುಮಾನವಾಗಿ ಬೆಂಗಳೂರಲ್ಲಿ ಸೈಟು, ಮನೆಯನ್ನೇನು ಕೊಡುವುದಿಲ್ಲ. ಕೆಲವರು ಪ್ರಯಾಣದ ಖರ್ಚನ್ನು(TA) ಕೊಡುತ್ತಾರಾದರೂ ಇದಕ್ಕೋಸ್ಕರವೇ ಇದ್ದ ಕೆಲಸ ಬಿಟ್ಟು ಅಲ್ಲಿಂದ ಪ್ರಯಾಣಿಸಿ ಬರುವುದು ಎಲ್ಲರಿಗೂ ಅದರಲ್ಲೂ ವಯಸ್ಸಾದವರಿಗೆ ಸಾಧ್ಯವಿಲ್ಲವೆಂಬ ಕಿಂಚಿತ್ ತಿಳುವಳಿಕೆಯಾದರೂ ನಮ್ಮ ಮಾಧ್ಯಮದ ವ್ಯಕ್ತಿಗಳಿಗೆ ಇದ್ದರೆ ಒಳ್ಳೆಯದು. ಪ್ರಜಾಪ್ರಭುತ್ವದ ಕಾವಲು ನಾಯಿ, ಸಂವಿಧಾನದ ನಾಲ್ಕನೇ ಅಂಗ ಎಂದೆಲ್ಲಾ ಕರೆಸಿಕೊಳ್ಳುವ ಮಾಧ್ಯಮಗಳೇ ಹೀಗೆ ಮಾಡಿದರೆ ಏನು ಕತೆ? ಇದೆಲ್ಲಾ ನೋಡಿದರೆ ಒಂದು ಗಾದೆ ನೆನಪಾಗುತ್ತದೆ, "ಊರಿಗೇ ನೀತಿ ಹೇಳೋ ತಿಮ್ಮಕ್ಕ ಒಲೆ ಮುಂದೆ ಕೂತು ಉಚ್ಛೆ ಹೊಯ್ದಿದ್ಲಂತೆ"



ಕೊನೆಗೆ ಉಳಿಯುವುದು ಮತ್ತದೇ ಪ್ರಶ್ನೆ, ಕರ್ನಾಟಕವೆಂದರೆ ಬೆಂಗಳೂರು ಮಾತ್ರವೇನಾ?! ಇದಕ್ಕೆ ನಮ್ಮ ಮಾಧ್ಯಮ ಮಿತ್ರರು ಏನನ್ನುತ್ತಾರೋ!

ಶುಕ್ರವಾರ, ಮೇ 2, 2008

Online Voting??

ಹೇಗಿದ್ದರೂ ಚುನಾವಣೆ ಹತ್ತಿರದಲ್ಲಿದೆ. ಭಾರತದ ಪ್ರಜ್ಞಾವಂತ, ವಿದ್ಯಾವಂತ ಮತದಾರರಾದ ನಾವು(!) ತಪ್ಪದೇ ಮತ ಚಲಾಯಿಸುವುದು ನಮ್ಮ ಕರ್ತವ್ಯ, ಅದು ನಮ್ಮ ಹಕ್ಕು, ಒಳ್ಳೆಯ ಅಭ್ಯರ್ಥಿಗಳನ್ನು ಆರಿಸಬೇಕು, ದೇಶ ಉದ್ಧಾರ ಮಾಡಬೇಕು.... ಹೀಗೆ ಏನೇನೋ ಅನಿಸುತ್ತದೆ. ಅದು ಇರಲಿ. ನನಸಾಗದ ಕನಸುಗಳು ಇದ್ದದ್ದೆ. ರಾಜಕೀಯದ ಕತೆ ಎಲ್ಲಾರಿಗೂ ಗೊತ್ತು. ಆದರೆ ವಿಷಯ ಏನೆಂದರೆ, ನಾನು ಇರುವ ಊರಿನಲ್ಲಿ ಮತ ಹಾಕುವ ಹಕ್ಕಿಲ್ಲ. ಹಕ್ಕು ಇರುವ ಊರಿನಲ್ಲಿ ನಾನಿಲ್ಲ. ಏನು ಮಾಡೋದು? ಮಾಡುವುದಾದರೆ ಆಫೀಸಿಗೆ ರಜೆ ಹಾಕಿ ಹೋಗುವುದು ಬರುವುದು ಸೇರಿ ೫೦೦+ ಕಿ.ಮಿ ಪ್ರಯಾಣ ಮಾಡಿ ೧೬ ನೇ ತಾರೀಖು ಮತ ಹಾಕಿ ಬರಬೇಕು. ಇಲ್ಲೇ ಕೂತು ಮತಹಾಕುವಂತೆ ಆನ್ ಲೈನ್ ವೋಟಿಂಗ್ ಸೌಲಭ್ಯ ಒದಗಿಸಿಬಿಟ್ಟರೆ ಚೆನ್ನಾಗಿರ್ತಿತ್ತು ಅಲ್ವೆ?! ಆನ್ ಲೈನ್ ನಲ್ಲಿ ಏನೇನೋ ಮಾಡಬಹುದು. ಇದೂ ಏಕೆ ಸಾಧ್ಯವಿಲ್ಲ. ಹೇಗಿದ್ದರೂ ಊರ ತುಂಬಾ ಸಾಫ್ಟ್ ವೇರ್ ತಂತ್ರಜ್ಞರು ತುಂಬಿ ತುಳುಕುತ್ತಿದ್ದಾರೆ. ಅಮೆರಿಕದ, ಯೂರೋಪಿನ ಮಾಲ್ ಗಳಿಗೆ, ಬ್ಯಾಂಕ್ ಗಳಿಗೆ, ಕಂಪನಿಗಳಿಗೆ ಒಳ್ಳೊಳ್ಳೆಯ ಸಾಫ್ಟ್ ವೇರ್ ಗಳನ್ನು ತಯಾರಿಸಿ ಕೊಡುವ ಕಂಪನಿಗಳಿವೆ. ಅಂತಹ ಒಂದು ಕಂಪನಿಗೆ ವಹಿಸಿಕೊಡಬಹುದು. ಎಲ್ಲಾ ಮತಗಟ್ಟೆಗಳಿಗೂ ಕಂಪ್ಯೂಟರ್ ಅಥವಾ ಮತಯಂತ್ರದಂತೆ ಅದಕ್ಕೆಂದೇ ತಯಾರಿಸಿದ ಯಾವುದಾದರೂ ಉಪಕರಣ, ನೆಟ್ ಸಂಪರ್ಕ ಒದಗಿಸಬೇಕಾಗಬಹುದು. ಇನ್ನೂ ಏನೇನೋ ಸಂಪನ್ಮೂಲಗಳು ಬೇಕಾಗುತ್ತವೆ ನಿಜ. ಭಾರತದಂತಹ ದೇಶದ ಮಟ್ಟಿಗೆ ಇದು ಬಹಳ ಕಷ್ಟವಾದ ಕೆಲಸವಾಗಿ ಕಂಡರೂ ಕ್ರಮೇಣ ಅಸಾಧ್ಯವೇನಲ್ಲ!

ಅಂದ ಹಾಗೆ, ಜಗತ್ತಿನ ಯಾವುದಾದರೂ ದೇಶದಲ್ಲಿ ಇಂಟರ್ನೆಟ್ ಮೂಲಕ ಆನ್ ಲೈನ್ ಮತದಾನ ಮಾಡುವ ಸೌಲಭ್ಯವಿದೆಯೆ? ಅಥವಾ ಇದು practically ಸಮಂಜಸವೇ? ....ತಿಳಿಯುತ್ತಿಲ್ಲ.