ಗುರುವಾರ, ಜುಲೈ 17, 2008

ಸಬ್ಬಕ್ಕಿ / ಶಾಬಕ್ಕಿ / ಸೀಮೆಅಕ್ಕಿ

ಮೊದಲಿಂದಲೂ ಈ ವಿಷಯ ತಿಳಿದುಕೊಳ್ಳಬೇಕೆನಿಸುತ್ತಿತ್ತು. ಆದರೆ ಅನಿಸಿದ ಮರುಕ್ಷಣವೇ ಮರೆತುಬಿಡುತ್ತಿದ್ದೆ. ಮತ್ಯಾವಾಗಾದರೂ ಅದನ್ನು ನೋಡಿದಾಗಲಷ್ಟೆ ನೆನಪಾಗುತ್ತಿತ್ತು. ಈ ಬಾರಿ ಹಾಗಾಗುವುದಕ್ಕೆ ಬಿಡಲಿಲ್ಲ.

ಅಂದಹಾಗೆ.. ನನಗೆ ತಿಳಿದುಕೊಳ್ಳಬೇಕೆನಿಸಿದ ವಿಷಯ ಸಬ್ಬಕ್ಕಿ/ಶಾಬಕ್ಕಿ/ಸೀಮೆಅಕ್ಕಿ ಹೇಗೆ ಸಿಗುತ್ತದೆ ಎಂಬುದು. ಇದೊಂದು ಧಾನ್ಯವೇ, ಅಲ್ಲವೇ ಎಂಬ ಸಂಶಯವಿತ್ತು. ಅದು ಧಾನ್ಯದಂತೆ ಅನಿಸುತ್ತಿರಲಿಲ್ಲ. ಅದನ್ನು ಎಲ್ಲಾದರೂ ಬೆಳೆಯುವ ಬಗ್ಗೆಯಾಗಲೀ ಕೇಳಿರಲಿಲ್ಲ. ಇತ್ತೀಚೆಗೆ ಅಜ್ಜನ ಮನೆಗೆ ಹೋದಾಗ ಶಾಬಕ್ಕಿ ಪಾಯಸ ತಿಂದ ಮೇಲೆ ಇದರ ಬಗ್ಗೆ ತಿಳಿದುಕೊಳ್ಳಲೇಬೇಕೆಂದು ನಿಶ್ಚಯಿಸಿದೆ. ಮೊದಲನೆಯದಾಗಿ, ಕೇಳಬಹುದು ಅನ್ನಿಸಿದವರನ್ನು ಕೇಳಿದಾಗ ’ಗೊತ್ತಿಲ್ಲ’ ಎಂಬ ಉತ್ತರ ಸಿಕ್ಕಿದ್ದೇ ಹೆಚ್ಚು. ಇನ್ನೂ ಕೆಲವರು ಆ ವಿಷಯವನ್ನು ಇದೂವರೆಗೂ ಯೋಚಿಸಿಯೇ ಇರಲಿಲ್ಲ. ನಾನು ಕೇಳಿದ ಮೇಲೆ ’ಹೌದಲ್ವಾ, ಇದು ಹೇಗೆ ಬರುತ್ತದೆ’ ಎಂದು ತಲೆಕೆಡಿಸಿಕೊಂಡು ಸುಮ್ಮನಾದರು. ಕೆಲವರು ಇದು ಒಂದು ಧಾನ್ಯವಲ್ಲ ಅಥವಾ ಅಕ್ಕಿ,ರಾಗಿ,ಕಾಳುಗಳಂತೆ ಗದ್ದೆತೋಟದಲ್ಲಿ ಬೆಳೆಯುವುದಲ್ಲ ಎಂದು ಖಾತ್ರಿಯಾಗಿ ಹೇಳಿದರೂ ಕೂಡ ’ಮತ್ತೇನು, ಹೇಗೆ?’ ಎಂಬ ಪ್ರಶ್ನೆಗೆ ಉತ್ತರಕೊಡಲಾಗಲಿಲ್ಲ. ಹೀಗೆಯೇ ತನಿಖೆ ಜಾರಿಯಲ್ಲಿದ್ದಾಗ ಒಬ್ಬರಿಂದ ಇದನ್ನು ಗೆಣಸಿನಿಂದ ಮಾಡುತ್ತಾರೆ ಎಂದು ತಿಳಿದುಬಂತು. ಗೆಣಸು ಎಂದು ಕೇಳಿದ ಕೂಡಲೇ ನನ್ನ ಕುತೂಹಲ ಇಮ್ಮಡಿಯಾಯಿತು. ಎಲ್ಲಿಯ ಗೆಣಸು ಎಲ್ಲಿಯ ’ಅಕ್ಕಿ’! ಕೊನೆಗೂ ಯಾರಿಂದಲೂ ’ಹೇಗೆ ಮಾಡುತ್ತಾರೆ’ ಎಂಬ ಉತ್ತರ ಸಿಗದೇ ಕಿಸ್ಸಾನ್ ಕಾಲ್ ಸೆಂಟರ್ (1551) ಅಥವಾ ಕೃಷಿ ಕಾಲೇಜಿಗೆ ಫೋನ್ ಮಾಡಿ/ಭೇಟಿ ಕೊಟ್ಟು ತಿಳಿದುಕೊಳ್ಳುವ ಪ್ರಯತ್ನ ಮಾಡುವುದರೊಳಗಾಗಿ ಬೇಕಾದ ಮಾಹಿತಿಯನ್ನು ಪಡೆಯಲು ಯಶಸ್ವಿಯಾದೆ.

ಸಬ್ಬಕ್ಕಿ ಮತ್ತು ಸಬ್ಬಕ್ಕಿ ತಯಾರಿಕೆಯ ಮಾಹಿತಿಗಳು ಇಂತಿವೆ. ಗೊತ್ತಿಲ್ಲದವರು ತಿಳಿದುಕೊಳ್ಳಿ. ಗೊತ್ತಿದ್ದವರು ತಪ್ಪಿದ್ದರೆ ತಿದ್ದಿ.

ಸಬ್ಬಕ್ಕಿ ತಯಾರಿಸುವುದು ಮರಗೆಣಸಿನಿಂದ.
ಭಾರತದಲ್ಲಿ ೯೫% ಸಬ್ಬಕ್ಕಿಯನ್ನು ತಮಿಳುನಾಡಿನಲ್ಲಿ (ಸೇಲಂನಲ್ಲಿ ಹೆಚ್ಚು) ತಯಾರಿಸಲಾಗುತ್ತದೆ.
ತಯಾರಿಕೆಯ ವಿಧಾನ:
*ಮೊದಲು ರಾಶಿರಾಶಿ ಗೆಣಸುಗಳನ್ನು ತೊಳೆದು ಸಿಪ್ಪೆ ಸುಲಿಯಲಾಗುತ್ತದೆ.
*ನಂತರ ಅವುಗಳನ್ನು crusherಗಳಲ್ಲಿ ಹಿಸುಕಲಾಗುತ್ತದೆ. ಈ crushing ಪ್ರಕ್ರಿಯೆಯಲ್ಲಿ ನಾರಿನ ಭಾಗವು ಬೇರೆಯಾಗುತ್ತದೆ.
*ಹಿಸುಕಿದಾಗ ಬಂದ ಹಾಲಿನಂತ ದ್ರವವನ್ನು ಟ್ಯಾಂಕ್ ಗಳಲ್ಲಿ ಶೇಖರಿಸಿ ೨-೮ ತಾಸಿನವರೆಗೆ settle ಆಗಲು ಬಿಡಲಾಗುತ್ತದೆ. Settle ಆಗಲು ಬಿಟ್ಟ ಹಾಲಿನಲ್ಲಿ ಕಲ್ಮಶಗಳು ಮೇಲೆ ತೇಲುತ್ತವೆ ಮತ್ತು ಕೆಳಗೆ ಪೇಸ್ಟಿನಂತಹ starch(ಪಿಷ್ಟ,ಹಿಟ್ಟು) ವಸ್ತುವು ಉಳಿಯುತ್ತದೆ.
*ತೇಲುವ ಕೊಳೆ ಇತ್ಯಾದಿಗಳನ್ನು ತೆಗೆದ ನಂತರ ಉಳಿದ ಪೇಸ್ಟನ್ನು ಭಾಗಶಃ ಒಣಗಿಸಿ cakes ಪಡೆಯಲಾಗುತ್ತದೆ.
*ನಂತರ ತೂತುಗಳುಳ್ಳ ಉಕ್ಕಿನ ಹಾಳೆಗಳನ್ನು ಅಥವಾ ಯಂತ್ರಗಳನ್ನು ಬಳಸಿ ಬೇಕಾದ ಗಾತ್ರದಲ್ಲಿ ಸಣ್ಣ ಸಣ್ಣ ಗುಂಡುಗಳ ಆಕಾರಕ್ಕೆ ತರಲಾಗುತ್ತದೆ.
*ಅವುಗಳನ್ನು ೧೦೦ ಡಿಗ್ರಿ ಸೆಲಿಷಿಯಸ್ ಬಿಸಿಯಲ್ಲಿ ೬-೮ ನಿಮಿಷಗಳು ಹುರಿಯಲಾಗುತ್ತದೆ (roasting).
*ಸೂರ್ಯನ ಬೆಳಕಿನಲ್ಲಿ ೮-೧೨ ಗಂಟೆಗಳ ಕಾಲ ಒಣಗಿಸಲಾಗುತ್ತದೆ.
*ಕೊನೆಯದಾಗಿ polishing ಮಾಡಿದ ಮೇಲೆ ಸಬ್ಬಕ್ಕಿ ತಯಾರಾಗುತ್ತದೆ.

*******

ಶುಕ್ರವಾರ, ಜುಲೈ 4, 2008

ಕನ್ನಡದ್ದು ಟೈಂಪಾಸ್ ಸಾಹಿತ್ಯವಾಗಬೇಕಾ?

ಹಿಂಗೆ ಹೇಳ್ತೀನಿ ಅಂತ ಬೇಜಾರಾಗ್ಬೇಡ. ನೀನು "ರಾಶಿ ಚೊಲೋ ಇದ್ದು ಓದು" ಅಂತ ಒಂದು ಪುಸ್ತಕ ಕೊಟ್ಟಿದ್ದೆಯಲ್ಲ ಅದು ೨೦ ಪುಟ ಓದೋತನಕ ಬೇಜಾರಾಗಿ ಹೋಯಿತು. ಅದೇನು ಕಾಣಿಸಿತೆ ನಿಂಗದರಲ್ಲಿ ’ಚೊಲೋ ಇದ್ದು’ ಅನ್ನುವಂತದ್ದು? ಮತ್ತದೇ ಹಳೇ ಕಾಲದ ಹಳ್ಳಿ ಕಥೆ! ಅದೇ ಅತ್ತೆ, ಮಾವ, ಅನಾಥ, ಕೆಲಸ, ಮದುವೆ, ಸಂಸಾರ. ಅವರ್ಯಾರೋ ಯುವ ಬರಹಗಾರರಂತೆ. ಯುವ ಬರಹಗಾರರೆಂದ ಮೇಲೆ ಈಗಿನ ಕಾಲಕ್ಕೆ ತಕ್ಕಂತೆ ಸಮಕಾಲೀನ ಕಥೆಯೊಂದನ್ನು ತೆಗೆದುಕೊಂಡು ಏನಾದರೂ ಬರೆದಿರುತ್ತಾರೆನೋ ಎಂದು ಆಸಕ್ತಿಯಿಂದ ಓದಿದರೆ ಏನೂ ಇಲ್ಲ. ಮೂವತ್ತು ವರುಷದ ಹಿಂದಿನ ಸಾಹಿತ್ಯದಂತಿದೆ. ಆ ಕಾಲದ ಮನಸ್ಥಿತಿ, ಸಮಾಜಸ್ಥಿತಿಗೆ ತಕ್ಕಂತೆ ಇದ್ದುದರಿಂದಲೇ ಆವಾಗಿನ ಸಾಮಾಜಿಕ, ಸಾಂಸಾರಿಕ ಕತೆ, ಪುಸ್ತಕಗಳು ಅಷ್ಟು ಇಷ್ಟವಾದದ್ದು ಜನರಿಗೆ ಎಂಬುದು ಗೊತ್ತು. ಆದರೆ ಈಗೂ ಅದೇ ಬರೆಯುತ್ತಾ ಕೂತರೆ ಜನರಿಗೆ ಆಸಕ್ತಿ ಎಲ್ಲಿ ಉಳಿಯುತ್ತದರಲ್ಲಿ ಹೇಳು?

ಏನಾಗಿದೆ ನಮ್ಮ ಕನ್ನಡ ಬರಹಗಾರರಿಗೆ ಎಂಬುದೇ ತಿಳಿಯುವುದಿಲ್ಲ. ಹೆಚ್ಚಿನವರ ಕಥೆ, ಬರಹಗಳೇನೇ ಇದ್ದರೂ ಅದೇ ಅದೇ ಹಳೇ ವರಾತಗಳ ಸುತ್ತಲೇ ಗಿರಕಿ ಹೊಡೆಯುತ್ತಿರುತ್ತವೆ. ಹೋಗಲಿ ಹಳೇ ತಲೆಮಾರಿನ ಲೇಖಕರ ಬಗ್ಗೆ ತಕರಾರಿಲ್ಲ. ಆದರೆ ಈಗಿನ ಲೇಖಕರದ್ದೂ ಅದೇ ಸ್ಥಿತಿ. ಅವನ್ಯಾರೋ ಸಾಫ್ಟ್ ವೇರಿನವನಂತೆ, ಮತ್ಯಾರೋ ಬ್ಯಾಂಕ್ ಉದ್ಯೋಗಿಯಂತೆ, ಮತ್ತೊಬ್ಬ ಪತ್ರಕರ್ತ ಕಂ ಬರಹಗಾರನಂತೆ.. ಎಲ್ಲರೂ ಕೊರೆಯುವುದು ಅಥವಾ ಕೊರೆಯಲು ಪ್ರಯತ್ನಿಸುವುದು ಮತ್ತದೇ ಸಂಸಾರ, ಸಮಾಜ, ಪ್ರೀತಿ ಪ್ರೇಮದ ಕಥೆಗಳನ್ನ. ಕನ್ನಡ ಸಾಹಿತ್ಯ ಎಂದರೆ ಒಂದು ರೀತಿ ಟೈಂ ಪಾಸ್ ಸಾಹಿತ್ಯ ಆಗಿದೆಯೇ ಹೊರತು ವಿಷಯಾಧಾರಿತವಾಗಲೀ, ಜ್ಞಾನಾಧಾರಿತವಾಗಲೀ, ಸುದ್ದಿ ಕೇಂದ್ರಿತವಾಗಾಗಲೀ, ಸಮಕಾಲೀನ ವಿಷಯ, ವಿಚಾರಗಳನ್ನು ಹೊತ್ತಾಗಲೀ ಬರುವುದೇ ಕಡಿಮೆ. ಎಲ್ಲರೂ ಜೋತು ಬೀಳುವುದು ಅದೇ ಗುಲ್ ಮೊಹರ್ ಗಿಡಕ್ಕೆ ಮತ್ತು ಅದ್ಯಾವುದೋ ದೂರದೂರಿಂದ ಬಂದವರಿಗೂ ಅದೇನೇನೋ ಅನುಭೂತಿ ಆಗುವುದು ಗಾಂಧಿ ಬಜಾರಿನಲ್ಲಿ ಮಾತ್ರ !!

ಶಿವರಾಮ ಕಾರಂತರ ಸಾಹಿತ್ಯವನ್ನು ಓದಿರಬೇಕು ನೀನು. ಅವರು ಕೈಯಾಡಿಸದ ಸಾಹಿತ್ಯ ಪ್ರಾಕಾರಗಳಿಲ್ಲ. ಅತ್ತ ಶುದ್ಧ ಸಾಮಾಜಿಕ ಕಥೆಗಳ ಜೊತೆಗೆ ವಿಜ್ಞಾನ ಪುಸ್ತಕಗಳನ್ನೂ ಸಮರ್ಥವಾಗಿ ಕನ್ನಡದಲ್ಲಿ ಬರೆದರು. ಅವರ ಕಾಲಕ್ಕೆ ಸಮಕಾಲೀನ ವಿಷಯಗಳನ್ನೊಂಳಗೊಂಡ ರಾಜಕೀಯ, ಚಿಗುರಿಕೊಳ್ಳುತ್ತಿದ್ದ ಕೈಗಾರೀಕರಣ, ಅದರ ನೆರಳಲ್ಲೇ ಬದಲಾದ ನಮ್ಮ ಸಾಮಾಜಿಕ ಪರಿಸ್ಥಿತಿ ಎಲ್ಲವನ್ನೂ ಅಳವಡಿಸಿ ಬರೆಯುತ್ತಿದ್ದರು. ನಿನ್ನ ಫೇವರೇಟ್ ಲೇಖಕ ಪೂ.ಚಂ.ತೇ ಸಾಹಿತ್ಯವಂತೂ ಚಾರಿತ್ರಿಕ, ವೈಜ್ಞಾನಿಕ, ಮಾಹಿತಿಗಳ ಆಗರವಲ್ವಾ? ಕರ್ವಾಲೋ, ಜುಗಾರಿಕ್ರಾಸ್ ಗಳಲ್ಲಿ ಕಥೆಗಳ ಜೊತೆಗೆ ಒಂಥರಾ ಅದ್ಬುತವೆನಿಸುವ ವಿಷಯಗಳೆಷ್ಟಿದ್ದವು ಹೇಳು. ಅವರ ಮಿಲೇನಿಯಮ್ ಸೀರಿಸ್ ಓದಿಯೇ ಎಷ್ಟು ವಿಷಯಗಳನ್ನು ತಿಳಿದುಕೊಂಡಿಲ್ಲ ನಾವು. ಇಡೀ ಪ್ರಪಂಚವನ್ನೇ ಸುತ್ತಿಸಿಬಿಟ್ಟಿದ್ದಾರೆ. ಭೈರಪ್ಪನವರ ಸಾಹಿತ್ಯ ಓದಿದರೆ ಅದರಲ್ಲಿ ಅದೆಷ್ಟು ಅಧ್ಯಯನ ಶೀಲತೆ ತುಂಬಿರುತ್ತದಲ್ವಾ? ಎಷ್ಟು ಗೊತ್ತಿಲ್ಲದ ವಿಷಯಗಳನ್ನು ತಿಳಿದುಕೊಳ್ಳಬಹುದು. ಎಷ್ಟು ಸತ್ಯಗಳನ್ನು ಅರಿಯಬಹುದು.


ಅದೇ ಈಗಿನ ಲೇಖಕರನ್ನು ನೋಡು. ಕನ್ನಡ ಸಾಹಿತ್ಯವೆಂದರೆ ಅದೇ ’ಜುಟ್ಟಿನ ಮಲ್ಲಿಗೆ’ ಸಾಹಿತ್ಯವೆಂದು ತೀರ್ಮಾನಿಸಿಬಿಟ್ಟಂತಿದೆ. ಒಬ್ಬ ಅಂಕಣ ಕಾರ ಬರೆಯಲು ಶುರು ಮಾಡಿದ ಎಂದರೆ ಅಡಿಗರು ಹಿಂಗೆಂದರು, ಬೇಂದ್ರೆ ಹಾಗೆಂದರು, ಯೇಟ್ಸ್ ಅದು ಬರೆದ, ಶೇಕ್ಸ್ ಪಿಯರ್ ಇದು ಬರೆದ ಎಂದು ಬರೆದೇ ತುಂಬಿಬಿಡುತ್ತಾನೆಯೇ ಹೊರತು ತಾನು ಏನನ್ನುತ್ತೇನೆ ಎಂಬುದನ್ನೇ ಹೇಳುವುದಿಲ್ಲ. ಇನ್ನು ಕೆಲವರದ್ದು ನೋಡಬೇಕು. ಯಾವುದೋ ಇಂಗ್ಲೀಷ್ ಪುಸ್ತಕ ಓದಿಕೊಂಡು ಬರುವುದು, ಅಥವಾ ಇಂಗ್ಲೀಷ್ ಸಿನಿಮಾ ನೋಡಿಕೊಂಡು ಬರುವುದು , ನಂತರ ಅದರಲ್ಲಿನ ಕೆಲವು ಸಾಲುಗಳನ್ನು ಉಲ್ಲೇಖಿಸಿ ಆಹ್ ಅದ್ಭುತವಾಗಿದೆ ಎಂದು ಬರೆದುಬಿಡುವುದು. ತಮ್ಮ ಇಂಗ್ಲೀಷ್ ಪಾಂಡಿತ್ಯ ಪ್ರದರ್ಶನದ ಜೊತೆ ಕನ್ನಡದಲ್ಲಿ ಏನೂ ಬರುತ್ತಿಲ್ಲ ಎಂದು ಕೊರಗುವುದು. ಕೆಲವೊಮ್ಮೆ ನೋಡಿದ್ರೆ ಅವರಿಗೆ ಕನ್ನಡ ಓದುವಾಗ ಏನೂ ಭಾವನೆಗಳೇ ಬರೋಲ್ವೇನೋ ಅನ್ನಿಸಿಬಿಡತ್ತೆ. ಸರಿ ನೀನೆ ಬರೆಯಯ್ಯ ಎಂದು ಕೂರಿಸಿದರೆ ಆತ ಬರೆಯುವುದು ಮತ್ತದೇ ಗೊಡ್ಡು ಕಥೆ - ಪಟ್ಟಣದಿಂದ ೪೦ ಕಿ.ಮೀ ದೂರದಲ್ಲಿ ಮುಖ್ಯರಸ್ತೆಯಿಂದ ೩ ಮೈಲಿ ನೆಡೆದುಕೊಂಡು ಹೋಗಿ ಸೇರುವ ಕಾಡಿನ ನಡುವೆಯ ಹಳ್ಳಿಯೊಂದರಲ್ಲಿ ತೋಟದ ಮನೆಯ ದೇವರ ಕೋಣೆಯಲ್ಲಿ ವಿಶ್ವನಾಥ ಶಾಸ್ತ್ರಿಗಳು ಮೂಗು ಹಿಡಿದುಕೊಂಡು ಸಂಧ್ಯಾವಂದನೆ ಮಾಡುತ್ತಿದ್ದರು, ಹಿತ್ತಲಲ್ಲಿ ಅವರ ಹೆಂಡತಿ ಅತ್ತೆಯನ್ನು ಶಪಿಸುತ್ತ ಮುಸುರೆ ತಿಕ್ಕುತ್ತಿದ್ದಳು" ಎಂಬುದು.! ಮತ್ತೂ ಕೆಲವರಿಗೆ ತಾವು ’ಢಿಫರೆಂಟ್’ ಆಗಿ ಬರೆಯಬೇಕೆಂಬ ಚಪಲ. ಹಾಗೆ ಢಿಪರೆಂಟ್ ಆಗಿ ಬರೆಯುವುದೆಂದರೆ ಯಾರಿಗೂ ಅರ್ಥವಾಗದ ಹಾಗೆ ಬರೆಯುವುದೋ ಅಥವ ಕಥೆಗಳನ್ನು ಅರ್ಧ ಬರೆದು ಮುಕ್ತಾಯ ಕೊಟ್ಟುಬಿಡುವುದೋ ಅಂದುಕೊಂಡಿದ್ದಾರೆ. ಅದರಲ್ಲೂ ಮತ್ತದೇ ವಿಷಯ.. ಪ್ರೀತಿ, ಪ್ರೇಮ, ಗಂಡ, ಹೆಂಡತಿ, ಹಾದರ, ಡೈವೋರ್ಸು, ಮದುವೆ, ಮಾರಲ್ಸು, ಎಥಿಕ್ಸು.... ಕರ್ಮಕಾಂಡ! ಅವತ್ತಿನ ಒಂದು ಕಾರ್ಯಕ್ರಮದಲ್ಲಿ ಹಿರಿಯರೊಬ್ಬರು ವ್ಯಂಗ್ಯವಾಡಿದ್ದನ್ನು ನೀನೂ ಕೇಳಿಸಿಕೊಂಡೆಯಲ್ಲ .. ಕನ್ನಡದಲ್ಲಿ ೧೦ ವರುಷ ಕವನಗಳನ್ನು ಬರೆಯುವುದನ್ನು ನಿಷೇಧಿಸಿಬಿಡಬೇಕು ಅಂತ.. ಸ್ವಲ್ಪ ಜಾಸ್ತಿ ಆಯ್ತು ಅನ್ನಿಸಿದರೂ ಅದೆಷ್ಟು ಸರಿ ಅನ್ನಿಸಿಬಿಡುತ್ತದೊಮ್ಮೊಮ್ಮೆ. ಬರೆಯಲೆ ಬೇಕಂತಿದ್ದರೆ ಮನೆಯಲ್ಲಿ ದನ ಕರು ಹಾಕಿತು ಎಂದು ಬರೆದರೆ ಸಾಕು, ಅದು ಬೆದೆಗೆ ಬಂದಾಗಿನಿಂದ ಹಿಡಿದು ಕರ ಹೇಗೆ ಹಾಕಿತು ಅಂತೆಲ್ಲಾ ವಿವರಿಸಿ ಕೊರೆಯುವುದು ಬೇಡ ಎಂದು ಮತ್ತೊಬ್ಬರು ಹೇಳಿದಾಗ ನೀನು ಜೋರಾಗಿ ನಕ್ಕಿದ್ದೆ.

ಅಲ್ಲ, ಇದೆಲ್ಲಾ ಭಾವನೆಯ ವಿಷಯಗಳು ಬರಹಗಳಲ್ಲಿ ಇರುವುದು ಬೇಡವೆಂದು ನಾನು ಹೇಳುತ್ತಿಲ್ಲ . ಆದ್ರೆ ಬರೇ ಅದೇ ಆಗಿಬಿಟ್ಟರೆ ಏನು ಚಂದ ಹೇಳು. ಈಗೇನೋ ಪರ್ವಾಗಿಲ್ಲ, ಹಳೇ ತಲೆಮಾರಿನ ಓದುಗರೂ ಬೇಕಾದಷ್ಟಿರುವುದರಿಂದ ನಡೆಯುತ್ತದೆ. ಆದರೆ ಈಗಿನ ಕಾಲಕ್ಕೆ ತಕ್ಕಂತೆ, ಈಗಿನ ಯುವ ಜನಾಂಗಕ್ಕೆ ತಕ್ಕಂತೆ ಕಥೆಗಳನ್ನೋ, ಬರಹಗಳನ್ನೋ ಬರೆಯುವುದು ಬಿಟ್ಟು ಅಜ್ಜಿ ಕತೆಗಳನ್ನೇ ಬರೆಯುತ್ತಿದ್ದರೆ ಮುಂದಿನ ಪೀಳಿಗೆ ಕನ್ನಡ ಸಾಹಿತ್ಯದಲ್ಲಿ ಆಸಕ್ತಿ ಕಳೆದುಕೊಂಡು ಬಿಡುತ್ತಾರಲ್ವೇನೆ ?. ಚಾರ್ಲಿ ಸೆಂಟಿನ ಈ ಯುಗದಲ್ಲಿ ಇನ್ನೂ "ನೀ ಮುಡಿದ ಮಲ್ಲಿಗೆ ಹೂವು ...." ಅಂತ ಬರೆಯುತ್ತಾ ಕೂತರೆ ಜಡೆಯೇ ಇಲ್ಲದ ಹುಡುಗಿರನ್ನು ನೋಡುತ್ತ ಬೆಳೆಯುವ ಈಗಿನ ಮಕ್ಕಳಿಗೆ ಅದು ಇಷ್ಟವಾಗುವುದು ಹೇಗೆ ಹೇಳು? ಹಾಗಂತ ಅವರಿಗೆ ಮಲ್ಲಿಗೆ ಘಮದ ಪರಿಚಯವೇ ಬೇಡವಾ ಅಂತ ಕೇಳುತ್ತೀಯಾ? ಅದಕ್ಕೆ ಅರ್ಧ ಶತಮಾನದ ಸಾಹಿತ್ಯ ಇದೆ. ಅದನ್ನು ಓದಿಸಿದರಾಯಿತು. ಮತ್ತೆ ಮತ್ತೆ ಅದನ್ನೇ ಬರೆಯಬೇಕಿಲ್ಲ ಅಲ್ಲವಾ? ಆ ಕೆಲವು ಇಂಗ್ಲೀಷು ಪುಸ್ತಕಗಳು ಹೇಗಿರುತ್ತವೆ ನೋಡಿದ್ದೀಯಾ. ಅದೇ ಹಿಂದಿನ ವರುಷ ಕೊಟ್ಟಿದ್ದೆಯಲ್ಲ ’ಫೈವ್ ಪಾಯಿಂಟ್ ಸಮ್ ಒನ್’, ’ಒನ್ ನೈಟ್ ಅಟ್ ಕಾಲ್ ಸೆಂಟರ್’ ಅವುಗಳಲ್ಲಿ ಏನಿವೆ ಹೇಳು. ಆದರೂ ಅವು ಲಕ್ಷಾಂತರ ಮಾರಾಟವಾದವು. ಇಂಗ್ಲೀಷಿನ ಮಾರ್ಕೆಟ್ಟು ದೊಡ್ಡದು ಎಂಬುದೊಂದೇ ಕಾರಣವಲ್ಲ ಅದಕ್ಕೆ. ಅದಕ್ಕೆ ಮುಖ್ಯ ಕಾರಣ ಅವರು ಆರಿಸಿಕೊಂಡಿದ್ದು ಸಮಕಾಲೀನ ವಿಷಯ. ಯುವಜನಾಂಗಕ್ಕೆ ಸಂಬಂಧ ಪಟ್ಟಿದ್ದು. ಆ ಕತೆಯ ಜೊತೆಜೊತೆಯಲ್ಲೆ ಅದೆಷ್ಟು ಭಾವನೆಗಳಿಂದ ಹಿಡಿದು ಜಾಗತೀಕರಣ, ಶಿಕ್ಷಣ, ಸಮಾಜ, ಸಂಬಂಧ ಇನ್ನಿತರ ಅದೆಷ್ಟು ಸಮಕಾಲೀನ ವಿಷಯಗಳಿವೆ. ಅದನ್ನೂ ಕೂಡ ಗೇಲಿ ಮಾಡಿ ಮೈ ಪರಚಿಕೊಂಡು ಬರೆದಿದ್ದರು ನಮ್ಮ ಕನ್ನಡದ ಲೇಖಕರೊಬ್ಬರು. ಲಿಂಕ್ ಕಳಿಸುತ್ತೇನೆ ಓದುವಿಯಂತೆ. ರಾಮಾಯಣದಲ್ಲಿ ರಾಮ ಕೊನೆಗೆ ಸೀತೆ ಬೆಂಕಿಗೆ ಹಾರುವಂತೆ ಮಾಡಿದ್ದು ದೊಡ್ಡ ತಪ್ಪು ಎಂದು ಇನ್ನೂ ಸ್ತ್ರೀವಾದದ ಚರ್ಚೆ ಮಾಡುತ್ತಾ ಕೂರುವುದರಲ್ಲೇನು ಅರ್ಥವಿದೆ?! ರಾಮಾಯಣವೇನು ಬದಲಾಗುವುದಿಲ್ಲ ಅಲ್ಲವಾ?


ಮತ್ತೇನಿಲ್ಲ. ಕನ್ನಡದಲ್ಲೂ ಫ್ಯಾಂಟಸಿ, ಫಿಕ್ಷನ್, ರೊಮ್ಯಾನ್ಸ್, ಸಾಹಸ ಇತ್ಯಾದಿ ... ಒಟ್ಟಾಗಿ ಹೊಸ ಪೀಳಿಗೆಯನ್ನು ಆಕರ್ಷಿಸುವ, ಹಿಡಿದಿಡುವ ಪುಸ್ತಕಗಳು ಮುಖ್ಯವಾಹಿನಿಯಲ್ಲೇ ಬಂದರೆಷ್ಟು ಚಂದ ಅಲ್ವಾ?. ಆದರೇನು ಮಾಡುವುದು, ನಮ್ಮ ಕೆಲವರು ಅಂತಹ ಸಾಹಿತ್ಯವನ್ನು ಜಂಕ್ ಸಾಹಿತ್ಯವೆಂದು ಕರೆದು ಯಾರೂ ಓದದಂತೆ ಮಾಡಿಬಿಡುತ್ತಾರೆ.! ಬದಲಾಗಬೇಕು ಇದು. ಎಲ್ಲ ವಿಷಯಗಳ ಬಗ್ಗೆ ಕನ್ನಡದಲ್ಲೇ ಸಿಗುವಂತಾಗಬೇಕು. ಅದೇ ಹೊಸ ಬಾಟಲಿಯಲ್ಲಿ ಹಳೇ ಹೆಂಡ ತುಂಬಿ ತುಂಬಿ ಕೊಡುವುದರ ಬದಲು ಈಗಿನ ಕಾಲದ ಕಥಾವಸ್ತು, ಸನ್ನಿವೇಶಗಳನ್ನು ಒಳಗೊಂಡಿರುವ ಕತೆ ಕಾದಂಬರಿಗಳು ಬರಬೇಕು. ಮಾಹಿತಿಪೂರ್ಣ ಬರಹಗಳು, ಪುಸ್ತಕಗಳು ಬೇಕು. ವಿಜ್ಞಾನ ಬರಹಗಳು ಬರಬೇಕು. ಅಡುಗೆ, ಕೃಷಿಯಿಂದ ಹಿಡಿದು ದೇಶವಿದೇಶ, ಪರಮಾಣು, ನಕ್ಷತ್ರಗಳವರೆಗೂ ಪ್ರಸ್ತುತ ವಿಷಯಗಳ ಬಗ್ಗೆ, ಪ್ರಸ್ತುತ ಕ್ಷೇತ್ರಗಳ ಬಗ್ಗೆ ಹೆಚ್ಚು ಹೆಚ್ಚು ಬರಹಗಳು ಬರಬೇಕು. ಸುಮ್ಮನೆ ಒಂದೊಂದಕ್ಕೆ ಒಂದೊಂದು ಭಾಷೆಯ ಮೊರೆ ಹೋಗುವುದು ತಪ್ಪಬೇಕು. ಏನಿಲ್ಲ, ಬರೆಯುವವರೆಲ್ಲರು ಅವರವರು ಓದುತ್ತಿರುವ, ಕೆಲಸ ಮಾಡುತ್ತಿರುವ ಕ್ಷೇತ್ರಗಳ ಬಗ್ಗೆ, ಇನ್ನಿತರ ಆಸಕ್ತಿಯ ವಿಷಯಗಳ ಬಗ್ಗೆಯೇ ಬರೆದರೆ ಸಾಕು ಎಷ್ಟೋ ಸಹಾಯವಾಗುತ್ತದೆ.. ನಮ್ಮವರಿಗೆ ಎಲ್ಲವೂ ನಮ್ಮ ಭಾಷೆಯಲ್ಲೆ ಸಿಗುತ್ತಿದೆ ಎಂದು ಮನವರಿಕೆಯಾಗಬೇಕು. ಈ ರೀತಿ ಬರಹಗಳು ಇಲ್ಲವೇ ಇಲ್ಲ ಅಂತ ಏನೂ ಇಲ್ಲ. ಬೇಕಾದಷ್ಟಿವೆ , ಆದರೆ ಮುಖ್ಯವಾಹಿನಿಗೆ ಬರುತ್ತಿಲ್ಲ. ಪರಿಚಯವಾಗುತ್ತಿಲ್ಲ, ಪ್ರಚಾರ ದೊರೆಯುತ್ತಿಲ್ಲ, ಉಪಯೋಗವಾಗುತ್ತಿಲ್ಲ. ಊಟದಲ್ಲಿ ಕೋಸಂಬರಿ ಇರಲಿ, ಕೋಸಂಬರಿಯೇ ಊಟವಾಗುವುದು ಬೇಡ. ಮೇಲಾಗಿ ಈಗಿನ ಪೀಳಿಗೆಗೆ ಕೋಸಂಬರಿಗಿಂತ ಚಿಪ್ಸ್ ಇಷ್ಟ. ಮನೆಯಲ್ಲಿ ಒಳ್ಳೆಯ ಚಿಪ್ಸ್ ಸಿಗಲಿಲ್ಲವೆಂದರೆ ಅವರು Lays ಮೊರೆಹೋಗುವುದಂತೂ ಖಾತ್ರಿ. ಹೀಗಾಗದಿರಲಿ ಮತ್ತು ನಮ್ಮ ಯುವ ಬರಹಗಾರರು ಈ ನಿಟ್ಟಿನಲ್ಲಿ ಮುಂದುವರೆಯಲಿ ಎಂಬುದಷ್ಟೆ ನನ್ನ ಆಶಯ.

"ಇಷ್ಟೆಲ್ಲಾ ಮಾತಾಡ್ತೀಯಲ, ನೀನೆ ಬರೆಯೋ ನೋಡೋಣ" ಅಂತೀಯಾ ಅಲ್ವಾ ನೀನು :)