ಸೋಮವಾರ, ಆಗಸ್ಟ್ 18, 2008

ರೇವ್ ಪಾರ್ಟಿ, ಸ್ತ್ರೀಸಂವೇದನೆ, ಕನ್ನಡ etc

’ಮೊಗ್ಗಿನ ಮನಸು’ ಚಿತ್ರದ್ದೊಂದು ದೃಶ್ಯ..

ಅದೊಂದು ಮಂಗಳೂರಿನ ಕಾಲೇಜು. ಮೊದಲನೇ ದಿನ ಪಿ.ಯು.ಸಿ ಕ್ಲಾಸಿನಲ್ಲಿ ಅದ್ಯಾಪಕರು ಇಂಗ್ಲೀಷಿನಲ್ಲಿ ಒಂದು ಜೋಕು ಹೇಳುತ್ತಾರೆ. ಅವರು ಹೇಳಿ ಮುಗಿಸಿದಾಕ್ಷಣವೇ ಎಲ್ಲರೂ ನಕ್ಕರೆ ಒಂದು ಹುಡುಗಿ ಮಾತ್ರ ಎದ್ದು ನಿಂತು ಅಳತೊಡಗುತ್ತಾಳೆ. ಯಾಕಮ್ಮಾ ಅಳುತ್ತಿದ್ದೀಯ ಅಂತ ಕೇಳಿದರೆ ನಾನು ಕನ್ನಡ ಮೀಡಿಯಂ ನಲ್ಲಿ ಓದಿದ್ದು ಸಾರ್, ನೀವು ಹೇಳಿದ್ದು ನಂಗೇನೂ ತಿಳೀಲಿಲ್ಲ ಅನ್ನುತ್ತಾಳೆ. ಇಡೀ ಕ್ಲಾಸಿಗೇ ಕ್ಲಾಸೇ ನಗುತ್ತದೆ. ಮೇಸ್ಟ್ರು ಎಲ್ಲರನ್ನೂ ಬೈದು ಸುಮ್ಮನಾಗಿಸುತ್ತಾರೆ.

ಆ ಚಿತ್ರದ ನಿರ್ದೇಶಕ ಪುಣ್ಯಾತ್ಮನಿಗೆ ಅದ್ಯಾರು ಹೇಳಿದರು ಕನ್ನಡ ಮೀಡಿಯಂ ನಲ್ಲಿ ಓದಿದವರಿಗೆ ಇಂಗ್ಲೀಷು ತಿಳಿಯುವುದಿಲ್ಲವೆಂದು? ಅದೂ ಕೂಡ ಅಲ್ಲಿ ಹೇಳಿದ ಒಂದು ಕಾಂಜೀ ಪೀಂಜಿ ಜೋಕು ! ಕನ್ನಡ ಮೀಡಿಯಂನಲ್ಲಿ ಓದಿದ್ದರೂ ಇಂಗ್ಲೀಷನ್ನು ಒಂದು ಭಾಷೆಯಾಗಿ ಕಲಿತಿಯೇ ಇರುತ್ತೇವೆ. ಅದೂ ೧೦ ಕ್ಲಾಸಿನ ವರೆಗೆ ಓದಿದ ಒಬ್ಬರಿಗೆ ೨ ವಾಕ್ಯ ಇಂಗ್ಲೀಷು ಅರ್ಥವಾಗಲಿಲ್ಲವೆಂದರೆ ಅದು ಅವರ ತೊಂದರೆಯೇ ಹೊರತು ಮಾಧ್ಯಮದ್ದಲ್ಲ.

ನಂತರ ಆ ಮೇಸ್ಟ್ರು, ಕನ್ನಡ ಮೀಡಿಯಂ ನಲ್ಲಿ ಓದಿದೋರೆಲ್ಲ ದಡ್ಡರು ಇಂಗ್ಲೀಷ್ ಮೀಡಿಯಂ ನಲ್ಲಿ ಓದಿದೋರೆಲ್ಲ ಬುದ್ಧಿವಂತರು ಅನ್ಕೋಬೇಡಿ. ಭಾಷೆಗಿಂತ ಪ್ರತಿಭೆ ಮುಖ್ಯ. ಫ್ರಾನ್ಸ್, ಜಪಾನು, ರಷ್ಯ ಎಲ್ಲರೂ ಅವರವರ ಭಾಷೆಯಲ್ಲೇ ಎಲ್ಲವನ್ನು ಮಾಡ್ಕೊಂಡಿದಾರೆ, ಮುಂದುವರೆದಿದಾರೆ, ನಾನೂ ಕೂಡ ಕನ್ನಡ ಮೀಡಿಯಂ ನಲ್ಲೇ ಓದಿದ್ದು. anybody dare to challenge me here? ಅಂತ ಅರಚುತ್ತಾರೇನೋ ನಿಜ. ಆದರೆ ಅಷ್ಟರಲ್ಲೇ ಕನ್ನಡ ಮೀಡಿಯಂನಲ್ಲಿ ಓದಿದೋರು ಹೆಡ್ಡರು ಎಂಬ ಭಾವನೆ ನೋಡುಗರಲ್ಲಿ ಬಂದಿರುತ್ತದೆ.

ಇದ್ಯಾಕೆ ಕನ್ನಡ ಮಾಧ್ಯಮ ಕಲಿಕೆಯನ್ನು ತೊಡೆದು ಹಾಕಲು ಚಿತ್ರರಂಗದಿಂದ ಹಿಡಿದು ಹೈಕೋರ್ಟ್ ವರೆಗೆ ಎಲ್ಲರೂ ಟೊಂಕ ಕಟ್ಟಿ ನಿಂತಿದ್ದಾರೋ ನಾಕಾಣೆ!

***************************

ಸ್ವಾತಂತ್ರ್ಯ ದಿನಾಚರಣೆಗೆ ಎಲ್ಲ ಕಂಪನಿಗಳೂ ಕಡ್ಡಾಯ ರಜೆ ಕೊಡಲೇಬೇಕೆಂದು ಸರ್ಕಾರ ಸುತ್ತೋಲೆ ಹೊರಡಿಸುವ ಸ್ಥಿತಿ ಇದೆ ಇವತ್ತು ಭಾರತದಲ್ಲಿ ಅಂತ ಕೊರಗುತ್ತಿರುವಾಗಲೇ ಹೀಗೆಲ್ಲಾ ಸುತ್ತೋಲೆ ಹೊರಡಿಸಿ ಸರ್ಕಾರ ನಮ್ಮ ಸ್ವಾತಂತ್ರ್ಯ ಹರಣ ಮಾಡಿದರೆ ನಾವು ಬೇರೆ ಜಾಗ ನೋಡ್ಕೋತೀವಿ, ಆಮೇಲೆ ನಿಮ್ಮ ಜನರಿಗೇ ಕೆಲಸ ಕೊಡೋರು ಯಾರೂ ಇರೋಲ್ಲ ಎಂದು ಐ.ಟಿ.ಕಂಪನಿಗಳು ಬುಸುಗುಟ್ಟಿದವಂತೆ.

ಆಗಸ್ಟ ೧೫ಕ್ಕೆ ರಜ ಕೊಡಬೇಕೆಂದು ಕೆಲವು ಸಾಫ್ಟ್ ವೇರ್ ಕಂಪನಿಗಳಲ್ಲಿ ೧೪ ರಂದೇ ಸ್ವಾತಂತ್ರ್ಯೋತ್ಸವವನ್ನು ಜೋರಾಗಿ ಆಚರಿಸುತ್ತಿದ್ದುದನ್ನು ಕಂಡು ಇವತ್ತು ಪಾಕಿಸ್ತಾನದ ಸ್ವಾತ್ರಂತ್ರ್ಯೋತ್ಸವವಲ್ವಾ ಎಂದು ತಲೆಕೆರೆದುಕೊಂಡವರು ಹಾಗೆಯೇ ತಲೆಕೆರೆದುಕೊಳ್ಳುತ್ತಾ ಉಳಿದಿರುವಾಗಲೇ ಮೆಜೆಸ್ಟಿಕ್ಕು ರಶ್ಶಾಗಿತ್ತು.

*******************************

ಮೊನ್ನೆ ಮೊನ್ನೆ ಬೆಂಗಳೂರು ಹತ್ತಿರ ರೇವ್ ಪಾರ್ಟಿ ನೆಡೆದು ಅವರು ಸಿಕ್ಕಿಬಿದ್ದು ಟಿ.ವಿ.ಯಲ್ಲೆಲ್ಲಾ ಬಂತು. ಅದರಲ್ಲಿ ಹುಡುಗಿಯರೂ ಇದ್ದರು. ಅವರು ಟಿ.ವಿ.ಕ್ಯಾಮೆರಾದ ಮುಂದೆ ಅಳುತ್ತಿದ್ದರು ಅರಚುತ್ತಿದ್ದರು. ಇದನ್ನು ನೋಡಿ ಕರುಳು ಮಿಡಿದ ಒಬ್ಬ ಪತ್ರಿಕೆಗೆ ಪತ್ರ ಬರೆದಿದ್ದ. ಹೆಣ್ಣು ಮಕ್ಕಳು ಕೈಮುಗಿದು ತಮ್ಮದೇನೂ ತಪ್ಪಿಲ್ಲ(!) ಎಂದು ಅಳುತ್ತಿದ್ದರೂ ಅವರನ್ನು ಹಿಡಿದು ಹಿಡಿದು ತೋರಿಸಿದ ರಕ್ಷಣಾ ವೇದಿಕೆಯ ಜನರದ್ದೇ ತಪ್ಪು. ಇದು ಹೆಣ್ಣಿಗೆ ಮಾಡಿದ ಅವಮಾನ ಎಂಬಂತೆ !. ಜ್ಞಾನಪೀಠದ ಸಪೋರ್ಟು ಸಿಕ್ಕಿ ಅಲ್ಲಿ ಪೇಜ್ 3 ಜನರೆಲ್ಲಾ ಹೊಸ ಹುರುಪಿನಿಂದ ಮೇಲೆದ್ದುದನ್ನು ಕಂಡೇ ದಂಗಾಗಿದ್ದ ಮನೆಮಂದಿ ಈ ಪತ್ರವನ್ನೂ ಓದಿ ಹಾಗಿದ್ದರೆ ರೇವ್ ಪಾರ್ಟಿಯಲ್ಲಿ ಗಾಂಜಾ ಸೇದಿ, ಹೆಂಡ ಕುಡಿದು, ಬೆತ್ತಲೆ ಕುಣಿದರೆ ತಪ್ಪಲ್ವಾ, ಹೆಣ್ಣಿಗೆ ಅವಮಾನವಾದಂತಾಗಲಿಲ್ವಾ ಎಂದು ಪಿಳಿಪಿಳಿ ಕಣ್ಣು ಬಿಟ್ಟರು.

******************************

ಕೆಲವರು ಪದ್ಮಪ್ರಿಯಾ ಬಗ್ಗೆ ಬರೆದರು, ಕೆಲವರು ನೈಪಾಲರ ಹೆಂಡತಿಯ ಬಗ್ಗೆ ಬರೆದರು. ಚಿಯರ್ ಗರ್ಲ್ಸ್ ಬಗ್ಗೆಯೂ ಬರೆಯುತ್ತಾರೆನೋ ಅಂತ ಕಾದೆ. ಬರೆಯಲಿಲ್ಲ. ಅದೇ ಬೇರೆ ಇದೇ ಬೇರೆ ನೀನಿನ್ನೂ ಚಿಕ್ಕವನು ಸುಮ್ಮನಿರು ಅಂದರು. ಹೌದು ಅನ್ನಿಸಿತು. ಹೆಣ್ಣಿಗೆ ಆರ್ಥಿಕ ಸ್ವಾತಂತ್ರ್ಯ ಬೇಕು ಎಂದರು. ಹೌದು ಅನ್ನಿಸಿತು. ಆವಾಗ ಸ್ತ್ರೀ ಶೋಷಣೆ ನಿಂತಂತೆ ಅಂದರು, ಹೌದು ಅನ್ನಿಸಿತು. ಮೈ ತೋರಿಸಿ, ಬಳಸಿ ಹಣಗಳಿಸುವುದೂ ಆರ್ಥಿಕ ಸ್ವಾತಂತ್ರ್ಯಕ್ಕೆ ಒಂದು ದಾರಿ ಎಂದರು ಕೆಲವರು. ಹೌದಾ! ಅನ್ನಿಸಿತು. ಆಮೇಲೆ ಇದ್ಯಾಕೋ ಈ ಸಂವೇದನೆಗಳೆಲ್ಲಾ ಗಡ್ಡ ಬಿಟ್ಟವರಿಗೇ ಸರಿ ಎನಿಸಿ ಬೆಳಗ್ಗೆಯಷ್ಟೆ ಶೇವ್ ಮಾಡಿದ ನುಣುಪಾದ ಕೆನ್ನೆಯನ್ನು ಸವರಿಕೊಂಡೆ.

*******************************

ಮನೆ ಹತ್ತಿರ ಪಾರ್ಟಿಯೊಂದು ಜೋರಾಗಿ ನೆಡೆಯುತ್ತಿತ್ತು. ಅಭಿನಂದನಾ ಪಾರ್ಟಿಯಂತೆ. ಏರಿಯಾದ ಜನರನ್ನೆಲ್ಲಾ ಕರೆದಿದ್ದಾರಂತೆ. ಯಾಕಂತೆ ಪಾರ್ಟಿ ಅಂತ ಕೇಳಿದರೆ ಅವರ ಮಗನಿಗೆ ಅದೇನೋ ಸಿಕ್ಕಿದೆಯಂತೆ ಅಂದಿತು ಪಕ್ಕದ ಮನೆ ಅಜ್ಜಿ. ಪರಮವೀರಚಕ್ರವೋ, ರಾಷ್ಟಪತಿ ಪದಕವೋ, ಇನ್ನೇನೋ ಪ್ರಶಸ್ತಿಯೋ ಇರಬಹುದಾ, ವಿಶ್ ಮಾಡೋಣ ಅಂತ ಕುತೂಹಲದಿಂದ ನೋಡಿದರೆ ಪಾರ್ಟಿ ಇದ್ದದ್ದು ಕ್ಯಾಂಪಸ್ ಸೆಲೆಕ್ಷನ್ ನಲ್ಲಿ ಸಾಫ್ಟ್ ವೇರ್ ಕೆಲಸ ಸಿಕ್ಕಿದ್ದಕ್ಕೆ!! ಸ್ಯಾಲರಿ ಪ್ಯಾಕೇಜ್ ಬಗ್ಗೆ ಆಮೇಲೆ ಕೇಳೋಣ ಅಂತ ಸುಮ್ಮನಾದೆ.

*********************************

ಶಶಾಂಕ್ ಅಂಥ riskನ್ನು comfortable ಅಗಿ avoid ಮಾಡಿಕೊಂಡು ಮುನ್ನಡೆಯುತ್ತಾರೆ. ಅಂಥ possessiveness ಹುಡುಗಿಯರನ್ನು ಹೇಗೆ ಹಿಂಸೆ ಮಾಡುತ್ತದೆ ಎಂಬುದನ್ನು ತುಂಬ crisp ಆಗಿ ಶಶಾಂಕ್ ಹೇಳಿ ಮುಗಿಸುತ್ತಾರೆ. ಸಿನೆಮಾದ ಪ್ರತಿ ಪಾತ್ರವೂ ತನ್ನದೇ ಆದ ರೀತಿಯಲ್ಲಿ unfold ಆಗಿ, ಅತ್ಯಂತ Logical ಆಗಿ conclude ಆಗುತ್ತದೆ.

ಈ ಮೇಲಿನ ವಾಕ್ಯಗಳು ಬೆಂಗಳೂರಿನ ಯಾವುದೋ ಕಾನ್ವೆಂಟ್ ಮಕ್ಕಳು ಬರೆದದ್ದೋ ಅಥವಾ ಎಪ್ಫೆಮ್ ರೇಡಿಯೋದಲ್ಲಿ ಬಂದಿದ್ದೋ ಅಲ್ಲ.ಅದು ಕನ್ನಡದ ’ದೈತ್ಯ’ ಬರಹಗಾರರೊಬ್ಬರ ಬರಹದ ಉದಾಹರಣೆಗಳು. ಏನು ಮಾಡೋದು, ಅವರು ಏನು ಬರೆದರೂ ಕನ್ನಡಿಗರು ಒಪ್ಪಿಕೊಳ್ಳಲೇಬೇಕು. ಮತ್ತು ಹೀಗೆ ಬರೆಯುವವರೂ ಕೂಡ ಕನ್ನಡ ಲೇಖಕರು ಎಂದು ಒಪ್ಪಿಕೊಂಡು ಸುಮ್ಮನಿರಬೇಕು.

***********************************

ಮಳೆ..... ಮನೆ...

ಕೆಲತಿಂಗಳುಗಳ ಹಿಂದೆ ಬಿಸಿಲೆ ಘಾಟಿಯ ಕಾಡಿನಲ್ಲಿ ಅಮೋಘ ೨೫ ಕಿ.ಮಿ. ಚಾರಣ ಮಾಡಿದ ನಂತರ ಮತ್ತೆಲ್ಲೂ ಹೋಗದೇ ಬರೀ ಕಂಪ್ಯೂಟರ್ ಕುಟ್ಟೀ ಕುಟ್ಟೀ ಮೈ ಜೊತೆಗೆ ತಲೆಯೂ ಕೂಡ ಜಡ್ಡುಗಟ್ಟಿ ಹೋಗಿತ್ತು. ಸ್ವಾತಂತ್ರ್ಯೋತ್ಸವ , ಶನಿವಾರ, ಭಾನುವಾರ ಮೂರು ದಿನ ಒಟ್ಟಿಗೇ ರಜ ಸಿಕ್ಕಿದ್ದು ನೋಡಿ ಮತ್ತೆಲ್ಲಾದರು ಹೊರಟುಬಿಡೋಣ ಅನ್ನಿಸಿದರೂ ಕೊನೆಗೆ ಈ ಮಳೆಯಲ್ಲಿ ಆ ವಿಷಯ ಕೈ ಬಿಟ್ಟು ಮನೆಗೆ ಹೋಗೋಣ ಎಂದು ತೀರ್ಮಾನಿಸಿಕೊಂಡದ್ದಾಯಿತು. ಮನೆಗೆ ಹೋಗದೇ ಬಹಳ ದಿನಗಳೂ ಆಗಿದ್ದರಿಂದ ಈಗಲೂ ಹೋಗದಿದ್ದರೆ ಮನೆಯಲ್ಲೇ ಅಪರಿಚಿತನಾಗಿಬಿಡುತ್ತೇನೆ ಎಂಬ ಕಾರಣವೂ ಇತ್ತು. ಅದೂ ಅಲ್ಲದೇ ಮಳೆಗಾಲದಲ್ಲಿ ಮನೆಯ ಸುಖವೇ ಬೇರೆ. ಅದು ಹೇಗೆ ಅಂತ ಎಲ್ಲರಿಗೂ ಗೊತ್ತು. ಮತ್ತೆ ಕೊರೆಯೋಲ್ಲ.


ಗುರುವಾರ ಸಂಜೆ ಹೊರಟಿದ್ದಾಯಿತು. ರಾತ್ರಿ ೧೧ ಗಂಟೆಗೆ ಅಪ್ಪನಿಂದ ಫೋನು ಬಂತು. ನದೀ ನೀರು ಸೇತುವೆ ಮೇಲೆ ಹರೀತಾ ಇದೆ. ನೀನು ಮೇನ್ ಬಸ್ ಸ್ಟಾಂಡಿನಲ್ಲಿ ಇಳಿಯಬೇಡ. ಹಿಂದಿನ ಸ್ಟಾಪಿನಲ್ಲೇ ಇಳಿದುಕೋ ಅಂತ. ನಮ್ಮೂರಿನ ಸೇತುವೆಯದು ಪ್ರತಿವರ್ಷ ಮಳೆಗಾಲದಲ್ಲೂ ಇದ್ದದ್ದೇ. ಲಕ್ಕವಳ್ಳಿ ಅಣೆಕಟ್ಟಿನಲ್ಲಿ ಸ್ವಲ್ಪ ಜಾಸ್ತಿ ನೀರು ಹೊರಬಿಟ್ಟರೆ ಸಾಕು. ಸೇತುವೆ ಮೇಲೆ ನೀರು ಬಂದುಬಿಡುತ್ತದೆ. ಹಾಗಂತ ಅದೇನು ಭಾರೀ ಹಳೆಯದೇನಲ್ಲ. ೯೦ರ ದಶಕದಲ್ಲಿ ಕಟ್ಟಿಸಿದ್ದು. ಒಂದು ಸ್ವಲ್ಪವೂ ಕಾಮನ್ ಸೆನ್ಸ್ ಇಲ್ಲದೇ, ಭ್ರಷ್ಟಾಚಾರ ಮಾಡಿ ಕುಲಗೆಡಿಸಿರುವ ಸರ್ಕಾರಿ ಕೆಲಸವದು. ೧೦೦ ವರ್ಷಕ್ಕಿಂತಲೂ ಹಳೆಯದಾದ ಇನ್ನೊಂದು ಸೇತುವೆ ಇದೆ. ಇದುವರೆಗೂ ಅದರದ್ದು ಒಂದು ಕಲ್ಲೂ ಕೂಡ ಅಲುಗಾಡಿಲ್ಲ ಮತ್ತು ನದಿಯಲ್ಲಿ ಎಷ್ಟೆ ನೀರು ಬಂದರೂ ಸೇತುವೆ ಮೇಲೆ ಆರಾಮಾಗಿ ಓಡಾಡಬಹುದು. ಆದರೆ ಹೊಸಸೇತುವೆ ಮಾತ್ರ ಸಾಕಷ್ಟು ಎತ್ತರ ಇಲ್ಲದಿರುವುದರಿಂದ ಪ್ರತಿ ಮಳೆಗಾಲದಲ್ಲೂ ಅದರ ಮೇಲೆ ನೀರು ಹರಿದು, ಹಾಳಾಗಿ, ನಂತರ ತಿಪ್ಪೆ ಸಾರಿಸಲಾಗುತ್ತದೆ. ಇನ್ಯಾವಾಗ ಅದು ಮುರಿದುಬೀಳುತ್ತದೋ. ಅದು ಮುರಿದು ಬಿದ್ದು ೨೦ ಜನ ಸತ್ತು, ಪ್ರತಿಭಟನೆಗಳಾಗಿ, ರಾಜಕೀಯವಾಗಿ, ಹೊಡೆದಾಟವಾಗಿ ನಂತರವೇ ಸರ್ಕಾರಗಳು ಕಣ್ಣು ಬಿಡುವುದು ಅನಿಸುತ್ತದೆ. ಇರಲಿ. ಹೀಗೆಯೇ ಯೋಚಿಸುತ್ತಾ ರಾತ್ರಿ ೧೨ ಗಂಟೆಗೇ ಯಾವುದೋ ಊರೊಂದರಲ್ಲಿ ಆಟೋ ಚಾಲಕರ ಸಂಘದವರು ರಾಷ್ಟ್ರಗೀತೆ ಹಾಡುತ್ತಾ ಇದ್ದುದನ್ನು ಮಬ್ಬುಗಣ್ಣಿನಿಂದಲೆ ನೋಡಿ ೧ ಗಂಟೆಗೆ ಮನೆ ತಲುಪಿಕೊಂಡಾಯಿತು. ಮಾರನೇ ದಿನ ಕೆಂಪುಕೋಟೆಯಲ್ಲಿ ಬಾವುಟ ಹಾರಿಸುವಾಗ ಎದ್ದು ಸಲ್ಯೂಟ್ ಹೊಡೆದದ್ದೂ ಆಯಿತು. ತಿಂಡಿ ತಿಂದು ನದಿಯ ಹತ್ತಿರ ಹೋಗಿ ನೋಡಿದರೆ ನೀರು ಸೇತುವೆಯ ಕೆಳಭಾಗವನ್ನು ತಾಗಿಕೊಂಡೇ ಹರಿಯುತ್ತಿತ್ತು.

**********

ಟಿ.ವಿ.ಚಾನಲ್ ಗಳಲ್ಲಿ ಅವೇ ಕಿತ್ತೋದ ಪ್ರೋಗ್ರಾಮುಗಳನ್ನು ನೋಡಿ, ಇವು ಖಂಡಿತ ’ಉತ್ತಮ ಸಮಾಜಕ್ಕಾಗಿ’ ಅಲ್ಲ ಎಂದು ಬೇಜಾರು ಬಂದು ಮಾರನೇ ದಿನವೇ ಹತ್ತಿರದಲ್ಲೇ ಎಲ್ಲಾದರೂ ಪಿಕ್ನಿಕ್ ಹೋಗಿಬಂದರೆ ಹೇಗೆ ಎಂಬ ಯೋಚನೆ ಬಂದು ಅಪ್ಪನಲ್ಲಿ ಕೇಳಿದಾಗ ಅವರೂ ಹೂಂಗುಟ್ಟಿದರು. ಅಮ್ಮನಿಗೆ ಕೇಳಲಾಗಿ "ಈ ಮಳೆಲ್ಲಿ ನಾ ಬತ್ನಿಲ್ಲೆ, ನೀವಿಬ್ರು ಬೇಕಾರೆ ಹೋಗ್ ಬನ್ನಿ"ಎಂಬ ಹಸಿರು ನಿಶಾನೆಯೂ ದೊರೆಯಿತು. ನಾನೂ ಅಪ್ಪ ಜೋಗ, ಕೂಡ್ಲಿ, ತ್ಯಾವರೆಕೊಪ್ಪ, ಕೆಮ್ಮಣ್ಣುಗುಂಡಿ, ಕುಪ್ಪಳ್ಳಿ ಹೀಗೇ ಎಲ್ಲಿಗೆ ಹೋಗೋದು ಎಂದು ಲೆಕ್ಕಾಚಾರ ಹಾಕುತ್ತಿರುವಾಗಲೇ ಮಳೆ ಜೋರಾಗಿ ಶುರುವಾಗಿದ್ದು ನೋಡಿ ’ಗಾಜನೂರು’ ಸರಿಯಾದ ಜಾಗ, ಬೇಗ ಹೋಗಿಬರಬಹುದು ಎಂದು ತೀರ್ಮಾನ ಮಾಡಿಕೊಂಡು ಹೊರಟಿದ್ದಾಯಿತು. ಸಣ್ಣವರಿದ್ದಾಗ ಗಾಜನೂರು ಇಷ್ಟದ ಪಿಕ್ನಿಕ್ ಜಾಗಗಳಲ್ಲೊಂದಾಗಿತ್ತು. ಈಗ ಅಲ್ಲಿಗೆ ಹೋಗದೇ ಸುಮಾರು ೧೦ ವರ್ಷದ ಮೇಲಾಗಿತ್ತು. "ಮಳೆಲ್ಲಿ ನೆನಿಯಡಿ, ನಿಧಾನಕ್ ಹೋಗಿ, ಪ್ಯಾಂಟ್ ತುದಿ ಮಡಚ್ಕ್ಯಳಿ ರಾಡಿಯಾಗೋಗ್ತು " ಇತ್ಯಾದಿ ಸೂಚನೆಗಳನ್ನು ಅಮ್ಮನಿಂದ ಪಡೆದು ರಸ್ತೆಗಿಳಿದು ಮುಕ್ಕಾಲು ತಾಸಿನಲ್ಲಿ ಗಾಜನೂರು ತಲುಪಿಕೊಂಡದ್ದಾಯಿತು.

ಶಿವಮೊಗ್ಗದಿಂದ ತೀರ್ಥಹಳ್ಳಿ ರಸ್ತೆಯಲ್ಲಿ ೧೨ ಕಿ.ಮಿ. ದೂರದಲ್ಲಿದೆ ಗಾಜನೂರು. ತುಂಗಾ ನದಿಗೆ ಅಣೆಕಣ್ಣು ಕಟ್ಟಿರುವ ಜಾಗವದು. ಸುಮ್ಮನೇ ಸುಳ್ಳು ಹೇಳುವುದಿಲ್ಲ, ಹಳೇ ವೈಭವದ ಗಾಜನೂರನ್ನೇ ಮನಸಿನಲ್ಲಿಟ್ಟುಕೊಂಡು ಹೋಗಿದ್ದ ನಮಗೆ ಅಲ್ಲಿ ನೋಡಿದಾಗ ಭ್ರಮ ನಿರಸನವಾಯಿತು. ಮೊದಲು ಗಾಜನೂರಲ್ಲಿ ಅಣೆಕಟ್ಟು ಇರಲಿಲ್ಲ. ಅದು ಒಂದು ಜಲಾಶಯ(reservoir) ಆಗಿತ್ತು. ತುಂಗಾನದಿಗೆ ದೊಡ್ಡ ತಡೆಗೋಡೆಯೊಂದನ್ನು ಕಟ್ಟಿ ನೀರನ್ನು ನೀರಾವರಿಗಾಗಿ ಸಂಗ್ರಹಿಸಿರುತ್ತಿದ್ದರು. ಮಳೆಗಾಲದಲ್ಲಿ ಅದು ತುಂಬಿ ಹರಿದು ಆ ಗೋಡೆಯಿಂದ ಕೆಳಗೆ ಬೀಳುವ ದೃಶ್ಯವೇ ಅದ್ಭುತವಾಗಿತ್ತು. ಹತ್ತಿರದಿಂದ ಏನೂ ಅಪಾಯವಾಗದಂತೆ ನಿಂತು ನೋಡುವ ಅವಕಾಶವಿತ್ತು. ಆ ಕೆಂಪುನೀರು ಧುಮ್ಮಿಕ್ಕಿ ಬಿಳಿನೊರೆಯೊಂದಿಗೆ ಮತ್ತೆ ಹಾಗೆಯೇ ಸ್ವಲ್ಪ ಮೇಲೇರಿ ಹರಿದುಹೋಗುವುದನ್ನು ನೋಡುತ್ತಾ ನಿಲ್ಲಬಹುದಿತ್ತು. ಈಗ ಕೆಲ ವರ್ಷದಿಂದ ಅದ್ಯಾವುದೂ ಇಲ್ಲವಂತೆ. ಅಣೆಕಟ್ಟು ಕಟ್ಟಿ ಗೇಟುಗಳನ್ನು ಹಾಕಿಬಿಟ್ಟಿದ್ದಾರೆ. ಮೊದಲು ಇದ್ದ ತಡೆಗೋಡೆ ಈಗ ಮುಳುಗಿಹೋಗಿದೆ. ನೋಡಲು ಅಂತಹ ವಿಶೇಷವಾಗಿ ಕಾಣುವಂತದ್ದು ಏನೂ ಇಲ್ಲ. ಸರ್ಕಾರದವರು ಅಲ್ಲೇನೋ ಉದ್ಯಾನವನ ಮಾಡಬೇಕೆಂದು ಸ್ಕೆಚ್ ಹಾಕಿದ್ದಾರಂತೆ. ಅದು ಮಾಡಿ ಆದಮೇಲೆ(ಎಷ್ಟು ವರ್ಷವಾಗುತ್ತದೋ ಗೊತ್ತಿಲ್ಲ!) ಹೋಗಬಹುದೇನೋ. ಅಲ್ಲಿವರೆಗೆ ಪಿಕ್ನಿಕ್ಕಿಗಾಗಿ ಗಾಜನೂರಿನ ಹೋಗುವ ಇರಾದೆ ಇದ್ದರೆ ಮನಸಿಂದ ತೆಗೆಯಬಹುದು. ನಾವು ಹಾಗೆಯೇ ಒಂದು ತಾಸು ಅಲ್ಲೇ ಸುತ್ತುಹಾಕಿ ವಾಪಸ್ ಬಂದದ್ದಾಯಿತು.

****

ನಂತರ ಮತ್ತದೇ ಮಳೆ..... ಮನೆ...

***

ಸೋಮವಾರ... back to office :)

ಬುಧವಾರ, ಆಗಸ್ಟ್ 6, 2008

ಎಲೆಶೆಟ್ಟಿ

ನಿನ್ನೆ ಮನೆಯ ಬಾಲ್ಕನಿಯಲ್ಲಿ ನಿಂತಿದ್ದಾಗ ಭುಜದ ಹಿಂಭಾಗದಲ್ಲಿ ಏನೋ ಬಂದು ಕುಳಿತಂತಾಗಿ ತಿರುಗಿ ನೋಡಿದೆ. ಹಸಿರು ಬಣ್ಣದ ಕೀಟವೊಂದು ಕಾಣಿಸಿತು, ಮಿಡತೆಯಿರಬೇಕು ಇನ್ನೇನು ಹಾರಿಹೋಗುತ್ತದೆ ಎಂದು ಕೈಯನ್ನು ಭುಜದ ಮೇಲಿಟ್ಟೆ. ಉಹುಂ, ಅದು ಹಾರಲಿಲ್ಲ. ಹಾಗೆಯೇ ನಿಧಾನಕ್ಕೆ ಕೈಮೇಲೆ ಹತ್ತಿಸಿಕೊಂಡು ನೋಡಿದರೆ ಎಲೆಶೆಟ್ಟಿ! ಬೆಂಗಳೂರಿನಲ್ಲಿ ನಾನಿದನ್ನು ಕಂಡಿರಲಿಲ್ಲ. ಇದಕ್ಕೆ ಬೇರೆ ಬೇರೆ ಪ್ರದೇಶಗಳಲ್ಲಿ ಬೇರೆ ಬೇರೆ ಹೆಸರನ್ನು ಹೇಳುತ್ತಾರೆ. ನನ್ನ ಅಮ್ಮ ಹೇಳಿಕೊಟ್ಟ ಹೆಸರು ಎಲೆಶೆಟ್ಟಿ. ಇದು ಯಾವಾಗಲೂ ಗಿಡದ ಎಲೆಗಳ ಮಧ್ಯೆಯೇ ಇರುವುದರಿಂದ ಆ ಹೆಸರಿರಬಹುದು. ’ಶೆಟ್ಟಿ’ ಎಂಬ ಪದ ಯಾಕೆ ಸೇರಿತೆಂದು ಗೊತ್ತಿಲ್ಲ. ನಿಸರ್ಗವು ಅದೇ ಎಲೆಗಳ ಬಣ್ಣವನ್ನು ಕೊಟ್ಟಿರುವುದರಿಂದ ಇದು ಗಿಡದ ಮಧ್ಯೆ ಇದ್ದಾಗ ಕಂಡುಹಿಡಿಯುವುದು ಭಾರೀ ಕಷ್ಟ.

ಈ ಎಲೆಶೆಟ್ಟಿ ನನಗೆ ಮೊದಲಿಂದಲೂ ಒಂದು ರೀತಿ ಇಷ್ಟದ ಕೀಟ. ಪ್ರಾಥಮಿಕ ಶಾಲೆಯಲ್ಲಿದ್ದಾಗ ಮೊದಲ ಬಾರಿ ಇದನ್ನು ನೋಡಿದ್ದು. ಬೇಲಿ ಸಂದಿಯಲ್ಲಿ ಇದನ್ನು ನೋಡಿದ್ದ ನಾನೂ ನನ್ನ ಗೆಳೆಯರು ಇದ್ಯಾವುದೋ ಏನೋ ಹೆಚ್ಚು ಕಡಿಮೆಯಾಗಿ ಹುಟ್ಟಿದ ಅಥವಾ ಬೆಳೆದ (genetic mutation ಅನ್ನುತ್ತಾರೆ ಅಂತ pucನಲ್ಲಿ ಗೊತ್ತಾಯಿತು) ಹುಳ ಇರಬೇಕು ಅಂದುಕೊಂಡು ಅದಕ್ಕೆ ’ವಿಚಿತ್ರ ಜೀವಿ’ ಎಂದು ನಾಮಕರಣ ಮಾಡಿ ಒಂದು ಕೊಟ್ಟೆಯಲ್ಲಿ ಹಾಕಿಕೊಂಡು ಹೋಗಿ ಹುಡುಗರಿಗೆಲ್ಲಾ ತೋರಿಸಿದ್ದೆವು. ನಂತರ ಅದೇ ರೀತಿಯ ಸುಮಾರು ಶೆಟ್ಟಿಗಳನ್ನು ನೋಡಿದ ಮೇಲೆ ಇಂತದ್ದೊಂದು ಕೀಟವಿದೆ ಎಂದು ತಿಳಿದಿತ್ತು.

ಹಾಗೆಯೇ ಕೈಮೇಲೆ ಕೂರಿಸಿಕೊಂಡೇ ಅದರ ಮುಖವನ್ನು ನೋಡಿದೆ. ಅದೂ ನನ್ನನ್ನೇ ನೋಡಿತು. ಇಷ್ಟಿಷ್ಟು ದೊಡ್ಡ ಕಣ್ಣುಗಳನ್ನು ಬಿಟ್ಟುಕೊಂಡು ಮರುಕ ಹುಟ್ಟಿಸುವಂತೆ ಮಾಡಿತು. ಈ ಎಲೆಶೆಟ್ಟಿಯಲ್ಲಿ ನನಗೆ ಅದರ ವಿಚಿತ್ರ ದೇಹಕ್ಕಿಂತ ಅದರ ಮುಖ, ಭಂಗಿಗಳೇ ಆಶ್ಚರ್ಯವೆನಿಸುವುದು. ಮುಂದಿನ ಎರಡು ಕೈಗಳನ್ನು ಆಡಿಸುತ್ತಾ ಒಂದು ಸಾರಿ ಆಡಲು ಕರೆಯುವ ಮಗುವಿನಂತೆ, ಮತ್ತೊಂದು ಸಾರಿ ಗಂಡನ ಮೇಲೆ ಮುನಿಸಿಕೊಂಡ ಹೆಂಡತಿಯಂತೆ, ಇನ್ನೊಮ್ಮೆ ಏನೋ ನಿಂದು ಎಂದು ಕೇಳುವ ಗೆಳೆಯನಂತೆ, ಇವನ್ಯಾರಪ್ಪಾ ಎಂದು ನೋಡುವ ಅಪರಿಚಿತನಂತೆ, ನಿನ್ ಮಾತಾಡ್ಸಲ್ಲ ಹೋಗು ಎನ್ನುವ ಗೆಳತಿಯಂತೆ, ಚಪ್ಪಲಿಕದ್ದು ಸಿಕ್ಕಿಬಿದ್ದು ಬಿಟ್ಟುಬಿಡಿ ಎಂದು ಗೋಗರೆಯುವ ಪುಟ್ಟ ಹುಡುಗನಂತೆ ಹೀಗೆ ಹಲವು ರೀತಿ ಅನಿಸುತ್ತದೆ. ಅದು ಎಲೆ ಮೇಲೆ ಕುಳಿತಿದ್ದಾಗ ಅದನ್ನು ನೋಡಿದರೆ ಅದೂ ಕೂಡ ಅದರ ಕುತ್ತಿಗೆಯನ್ನು ತಿರುಗಿಸಿ ನಮ್ಮನ್ನೇ ನೋಡಿ ಯಾರೋ ಬಂದರಲ್ಲಾ ಅಂದುಕೊಂಡು ’ಹಾಯ್ ’ ಎಂದು ಮಾತಾಡಿಸುವಂತೆ ಮುಖ ಮಾಡುತ್ತದೆ. ಇದು ನನಗೊಬ್ಬನಿಗೇನಾ ಅಥವಾ ಎಲ್ಲರಿಗೂ ಅನಿಸುತ್ತದಾ ಕೇಳಲು ಹೋಗಿಲ್ಲ ಇದುವರೆಗೂ. ಎಲೆಶೆಟ್ಟಿ ಮರಿಗಳಂತೂ ಭಾರೀ ಮುದ್ದುಮುದ್ದಾಗಿರುತ್ತವೆ.

ಈ ಕೀಟ ಅದೇನು ತಿನ್ನುತ್ತದೆಯೋ, ಇದು ಆಹಾರ ಸರಪಳಿ/ಆಹಾರ ಜಾಲದಲ್ಲಿ ಎಲ್ಲಿದೆಯೋ, ಮೊಟ್ಟೆ-ಮರಿ, ಆಯಸ್ಸು, ವಯಸ್ಸು, ವಾಸ, ನಾಶ ಇನ್ನಿತರ ವಿವರಗಳೇನೂ ತಿಳಿದುಕೊಳ್ಳಲು ಹೋಗಿಲ್ಲ. ಹಕ್ಕಿಗಳ ಬಾಯಲ್ಲಿ(ಕೊಕ್ಕಲ್ಲಿ) ಇದು ಒದ್ದಾಡುವುದನ್ನು ನೋಡಿದ್ದೇನೆ. ಈ ನಿಸರ್ಗ ಎಷ್ಟು ಅದ್ಭುತ ಸೃಷ್ಟಿಗಳ ಆಗರ, ಈ ಭೂಮಿಗೆ ಎಷ್ಟೆಲ್ಲಾ ತರಹದ ಹಕ್ಕುದಾರರಿದ್ದಾರೆ ಅನಿಸುತ್ತದೆ. ಏನೇ ಆಗಲಿ ಎಲೆಶೆಟ್ಟಿ.. ಚೋ ಕ್ಯೂಟ್ ಎಂದುಕೊಂಡು ಪಕ್ಕದ ಮರದ ಎಲೆಯ ಮೇಲೆ ದಾಟಿಸಿದೆ. ಅದು ಒಮ್ಮೆ ತಿರುಗಿ ನೋಡಿ ಥ್ಯಾಂಕ್ಸ್ ಎಂದಂತೆನಿಸಿತು. :)


ಚಿತ್ರ ಕೃಪೆ: internet