ಮಂಗಳವಾರ, ನವೆಂಬರ್ 25, 2008

ಇಷ್ಟವಾದದ್ದು-ಕಷ್ಟವಾದದ್ದು

ಪುಸ್ತಕಗಳನ್ನು ಓದುವಾಗ ಅದರಲ್ಲಿ ಕೆಲವು ಬಹಳ ಇಷ್ಟವಾಗುತ್ತವೆ. ಇತ್ತೀಚೆಗೆ ಓದಿದ್ದರಲ್ಲಿ ಒಂದೆರಡು ಪ್ಯಾರಾಗಳನ್ನು ಬಹಳ ಪ್ರಸಕ್ತವೆನಿಸಿದ್ದರಿಂದ ಇಲ್ಲಿ ಹಾಕುತ್ತಿದ್ದೇನೆ.

ಪುಸ್ತಕ: ಶಿವರಾಮ ಕಾರಂತರ ’ಅಪೂರ್ವ ಪಶ್ಚಿಮ’

ಹೊಸ ಶೈಲಿಯೊಂದೇ ಕಲೆಯಾಗಲಾರದು. ಪರದೇಶೀಯರ ಅನುಕರಣೆಯಿಂದ ಮಾತ್ರ ಕಲೆ ಬೆಳೆಯಲಾರದು. ಒಂದೊಂದು ದೇಶಕ್ಕೆ ಒಂದೊಂದು ಪರಂಪರೆಯಿದೆ. ಅದನ್ನು ಕಡಿದುಕೊಂಡವ, ತನ್ನದೇ ಪರಂಪರೆಯನ್ನು ಬಳಸಿ ಯಶಸ್ವಿಯಾಗುವುದು ಕಷ್ಟ. ಅನುಕರಣೆಯೆಂಬುದು ತೀರ ದುರ್ಬಲ ದಾರಿ. ಹೊರಗಿನ ಶೈಲಿಯನ್ನು ತಂದುದರಿಂದ ನಾವು ಹೊಸಬರಾಗಲಾರೆವು. ನಮ್ಮ ದೃಷ್ಟಿ, ಹಂಬಲ, ಚಿತ್ರಿಸುವ ವಿಷಯ, ವಸ್ತು ನಮ್ಮದಾಗಿರಬೇಕು, ನವೀನವಾಗಿರಬೇಕು. ನಮ್ಮದೇ ಆದ ಆವರಣದಲ್ಲಿ ಹುಟ್ಟಿ ಬೆಳೆದಂತೆ ಕಾಣಿಸಬೇಕು.


---------------------------------------

ಪುಸ್ತಕ: ಡಾ. ಕೆ.ಗಣೇಶಯ್ಯನವರ ’ಶಾಲಭಂಜಿಕೆ’

ವಿಜ್ಞಾನದಲ್ಲಿ ಭ್ರಮೆಗಳಿಲ್ಲ ಎನ್ನುವುದೂ ಒಂದು ಭ್ರಮೆ. ಇಡೀ ವಿಜ್ಞಾನವೇ ನಾವು ನಿಜ ಎಂದು ಭ್ರಮಿಸುವುದನ್ನು ಸಾಧಿಸಲು ಹೋಗುವ ಒಂದು ಪ್ರಯತ್ನ. ಅದರಲ್ಲಿ ಸಫಲರಾದರೆ ಅದು ಸತ್ಯವಾಗುತ್ತದೆ ಇಲ್ಲವಾದಲ್ಲಿ ಅದು ಭ್ರಮೆ ಮಾತ್ರ ಎಂದು ಕೈಬಿಡುತ್ತೇವೆ. ಎಷ್ಟೋ ಸಲ ನಾವು ವಿಜ್ಞಾನಿಗಳು ಸತ್ಯವನ್ನು ಕಂಡು ಹಿಡಿದಿದ್ದೇವೆ ಎಂಬ ಭಾವನೆಯಲ್ಲಿ ಬಹಳ ಕಾಲ ಬದುಕುತ್ತೇವೆ. ಬೇರೆಯವರು ಅದು ತಪ್ಪು ಎಂದು ತೋರಿಸಿದಾಗಲೇ ನಾವು ಎಂತಹ ಭ್ರಮೆಯಲ್ಲಿ ಮುಳುಗಿದ್ದೆವು ಎಂದು ತಿಳಿಯುವುದು. ಐನ್ ಸ್ಟೈನ್ ಬರುವವರೆಗೆ, ನ್ಯೂಟನ್ನಿನ ತತ್ವಗಳೆಲ್ಲ ಸತ್ಯ ಎಂದು ನಂಬಿದ್ದ ವಿಜ್ಞಾನಿಗಳು ಕಾಲವನ್ನು ನಿಖರ ಎಂದು ತಿಳಿದಿದ್ದರು. ಆತನ ನಂತರವೇ, ಕಾಲವು ನಿಖರವಲ್ಲ ಅದು ಸುತ್ತಮುತ್ತಲಿನ ಜಗತ್ತಿನ ಸ್ಥಿತಿಯನ್ನವಲಂಬಿಸುತ್ತದೆ ಎಂದು ತಿಳಿದಿದ್ದು, ಹಾಗಾಗಿ ವಿಜ್ಞಾನವೂ ಸಹ ಸತ್ಯ ಮತ್ತು ಭ್ರಮೆಗಳ ಮಧ್ಯದ ತೂಗುಯ್ಯಾಲೆ.


’ಚಾರಿತ್ರಿಕ ಥ್ರಿಲ್ಲರ್’ಗಳು ಎಂಬ ಉಪಶೀರ್ಷಿಕೆಯೊಂದಿಗೆ ಇರುವ ಈ ಪುಸ್ತಕ ಇತ್ತೀಚೆಗೆ ಓದಿದ ಒಳ್ಳೆಯ ಪುಸ್ತಕಗಳಲ್ಲಿ ಒಂದು. ವೈಜ್ಞಾನಿಕ ಹಾಗೂ ಚಾರಿತ್ರಿಕ ಸತ್ಯ ಘಟನೆಗಳು ಕತೆಗಳಾಗಿ ಹೆಣೆಯಲ್ಪಟ್ಟು ರೋಚಕವಾಗಿಯೂ, ಮಾಹಿತಿಪೂರ್ಣವಾಗಿಯೂ ಇದ್ದು ಕತೆಯಲ್ಲಿ ಕುತೂಹಲದ ಜೊತೆಗೆ ಆ ವಿಷಯಗಳ ಬಗ್ಗೆ ಆಸಕ್ತಿಯನ್ನು ಹುಟ್ಟಿಸುವುದರಲ್ಲಿ ಸಫಲವಾಗುತ್ತದೆ. ಖಂಡಿತ ಕೊಂಡು ಓದಿ.


*****************

ನಿನ್ನೆ ಬೆಳಗ್ಗೆ ಎದ್ದಾಗ ರೇಡಿಯೋ ಚಾನಲ್ ಒಂದರಲ್ಲಿ ಜಾಕಿ ಬಹಳ ಸಂಭ್ರಮದಿಂದ ಹೇಳುತ್ತಿದ್ದ. ಇವತ್ತು ರಾಖಿ ಸಾವಂತ್ ರವರ ಹುಟ್ಟುಹಬ್ಬ, ಅವರಿಗೆ ಶುಭಾಶಯಗಳು!! ಒಂದು ತಾಸು ಬಿಟ್ಟು ಕೇಳಿದಾಗಲೂ ಪದೇ ಪದೇ ರಾಖಿ ಸಾವಂತಿಗೆ ಶುಭಾಶಯ ಹೇಳುತ್ತಲೇ ಇದ್ದ. ಅದರ ಅಂಗವಾಗಿ ನಿನ್ನೆಯಿಡೀ ಆ ರೇಡಿಯೋ ಚಾನಲ್ ಸ್ಪರ್ಧೆಯೊಂದನ್ನು ಏರ್ಪಡಿಸಿತ್ತು. ಇವತ್ತು ರಾಖಿ ಸಾವಂತ್, ಮಲ್ಲಿಕಾ ಶೇರಾವತ್ , ಮುಮೈತ್ ಖಾನ್ ಮುಂತಾದ ಬೆತ್ತಲೆ ಐಟಂಗಳ ಹುಟ್ಟುಹಬ್ಬಗಳನ್ನು ಸಂಭ್ರಮದಿಂದ ಆಚರಿಸುವ ಇವು ನಾಳೆ ಶಕೀಲಾಳಿಗೆ ಸನ್ಮಾನ ಮಾಡಿ ನಮ್ಮ ಜನರಿಗೆ ಹಿತೋಪದೇಶ ಕೊಡಿ, career ರೂಪಿಸಿಕೊಳ್ಳಲು ಟಿಪ್ಸ್ ಕೊಡಿ ಎಂದು ತಮ್ಮ ಸ್ಟುಡಿಯೋಗೆ ಕರೆಸಿ ಕೇಳಿಸಿದರೂ ಆಶ್ಚರ್ಯವಿಲ್ಲ. ಎಷ್ಟಂದರೂ ’ಫಟಾಫಟ್ ಜನರೇಷನ್’ ಇನ್ಮುಂದೆ! ಮುಂದೆ ಇವರೇ ಆದರ್ಶ.

stay tuned.....

ಸೋಮವಾರ, ನವೆಂಬರ್ 10, 2008

ರೋಮ್ ರೋಮಾಂಚನ !

ವಾರದ ಕೊನೆಯಲ್ಲಿ ಎರಡು ದಿನ ಬಿಡುವಿದ್ದುದರಿಂದ ಹೋಟೇಲ್ ನಲ್ಲಿ ಕೂತು ಕಾವು ಕೊಡುವುದು ತರವೆಲ್ಲವೆಂದು ಶನಿವಾರ ರೋಮ್ ನಗರಕ್ಕೆ ಹೋಗುವುದೆಂದು ತೀರ್ಮಾನಿಸಿದೆ. ನಾಪೋಲಿಯಿಂದ ರೋಮ್ ೧೯೦ ಕಿ.ಮಿ. ದೂರ. ರೈಲಿನಲ್ಲಿ ಆರಾಮಾಗಿ ಹೋಗಬಹುದೆಂದು ಗೆಳೆಯರು ಹೇಳಿದ್ದರು. ಅಂತೆಯೇ ಹಿಂದಿನ ದಿನ ಶುಕ್ರವಾರ ಇಂಟರ್ನೆಟ್ಟಿನಲ್ಲಿ ರೈಲುಗಳ ವೇಳೆಗಳನ್ನು ನೋಡಿಕೊಂಡೆ. ಒಂದೇ ದಿನದಲ್ಲಿ ರೋಮ್ ನಗರ ಪೂರ್ತಿ ನೋಡುವುದು ಅಸಾಧ್ಯವೆಂದು ತಿಳಿದಿದ್ದರೂ ವೆಬ್ ಸೈಟುಗಳಲ್ಲಿ ಒಂದಷ್ಟು ಮಾಹಿತಿ ತಿಳಿದುಕೊಂಡು ನೋಡಲೇಬೇಕಾದ ಕೆಲವು ಹಾಗೂ ನನ್ನ ಆಸಕ್ತಿಯ ಕೆಲವು ಸ್ಥಳಗಳನ್ನು ಗುರುತಿಸಿಕೊಂಡೆ. ಶನಿವಾರ ಬೆಳಗ್ಗೆ ಇಲ್ಲಿಂದ ಹೊರಟಾಗ ನನ್ನ ಕೈಲಿದ್ದುದ್ದು ವಿಕಿಮ್ಯಾಪಿಯಾದಿಂದ ತೆಗೆದುಕೊಂಡಿದ್ದ ರೋಮ್ ನಗರದದ ನಕಾಶೆ ಮತ್ತು ಅಲ್ಲಿನ ಮೆಟ್ರೋ ರೈಲಿನ ಹಾದಿ ನಕಾಶೆಯ ಪ್ರಿಂಟ್ ಗಳು ಮಾತ್ರ. ಹಿಂದೆ ಗೊತ್ತಿಲ್ಲ ಮುಂದೆ ಗೊತ್ತಿಲ್ಲ ರೋಮ್ ನಂತಹ ನಗರದಲ್ಲಿ ಹೇಗೆ ತಿರುಗುವುದು ಎಂಬ ದುಗುಡವಿತ್ತು.

ಅಂತೆಯೇ ಇಲ್ಲಿಂದ ಹೊರಟು ಎರಡೂ ಕಾಲು ತಾಸಿನಲ್ಲಿ ರೋಮ್ ಸೇರಿಕೊಂಡೆ. ರೈಲ್ವೆ ಸ್ಟೇಷನ್ನಿನಲ್ಲಿ ಇಳಿದವನೇ ಒಂದು ದಿನದ ಪಾಸನ್ನು ಕೊಂಡುಕೊಂಡೆ. ಇಲ್ಲಿ ’ಟಬಾಕಿ’ ಎನ್ನುವ ಸಿಗರೇಟು ಅಂಗಡಿಗಳಲ್ಲಿ ಬಸ್ಸು, ರೈಲು ಮುಂತಾದ ಟಿಕೇಟುಗಳು ಸಿಗುತ್ತವೆ. ಆ ಒಂದು ದಿನದ ಪಾಸಿನಲ್ಲಿ ಮೆಟ್ರೋ ರೈಲು, ಸಿಟಿ ಬಸ್ಸುಗಳಲ್ಲಿ ರಾತ್ರಿ ಹನ್ನೆರಡೂ ವರೆ ವರೆಗೆ ಎಲ್ಲಿಂದ ಎಲ್ಲಿಗೆ ಎಷ್ಟು ಬೇಕಾದರೂ ತಿರುಗಾಡಬಹುದು. ಹೆಜ್ಜೆ ಹೆಜ್ಜೆಗೂ ಹಾಕಿರುವ ಸೂಚನೆಗಳು, ಅಲ್ಲಿನ ವ್ಯವಸ್ಥೆಗಳು, ಅಚ್ಚುಕಟ್ಟುತನದಿಂದಾಗಿ ತಿರುಗಾಡುವುದು ಒಂದಿಷ್ಟೂ ಕಷ್ಟವಾಗಲಿಲ್ಲ. ಯಾರನ್ನೂ ಅದು ಇದು ಕೇಳುವ ಪ್ರಮೇಯವೇ ಬರಲಿಲ್ಲ. ಇಟಾಲಿಯನ್ ಬರದವನೂ, ಇಂಗ್ಲೀಷು ಬರದವನೂ, ಕೊನೆಗೇ ಮಾತೇ ಬರದವನೂ ಕೂಡ ಒಬ್ಬನೇ ಆರಾಮಾಗಿ ತಿರುಗಾಡುವಂತಿದೆ. ಮೆಟ್ರೋ ಟ್ರೈನಿನ ಸ್ಟೇಶನ್ನುಗಳನ್ನು, ನಿಲುಗಡೆಗಳನ್ನು ಪ್ರೇಕ್ಷಣೀಯ ಸ್ಥಳಗಳ ಹತ್ತಿರ ಹತ್ತಿರದಲ್ಲೇ ಮಾಡಿದ್ದಾರೆ. ಅಂತೆಯೇ ನಾನು ಗುರುತುಹಾಕಿಕೊಂಡಿದ್ದ ಸ್ಥಳಗಳನ್ನೆಲ್ಲಾ ಮೆಟ್ರೋ ಟ್ರೈನಿನಲ್ಲಿ ಪ್ರಯಾಣಿಸಿಯೇ ನೋಡಿದೆ.




ರೋಮ್ ನ ಸರಿಯಾದ ಹೆಸರು ’ರೋಮಾ’ ಎಂದು. ಯೋರೋಪಿನ ಇತಿಹಾಸದ ಮತ್ತು ಕ್ರಿಶ್ಚಿಯಾನಿಟಿಯ ಅತಿ ಪ್ರಮುಖ ಸ್ಥಳವಾದ ಈ ರೋಮಾ ನಗರ ಬಹಳ ವಿಸ್ತಾರವಾಗಿರುವ ನಗರ. ಪ್ರಾಚೀನತೆಗೆ ಒಂದಿಷ್ಟೂ ಧಕ್ಕೆಯಾಗದಂತೆ ಆಧುನಿಕವಾಗಿ ಈ ನಗರ ಬೆಳೆದು ನಿಂತಿರುವುದನ್ನು ಕಂಡು ಖುಷಿಯಾಯಿತು. ರೋಮಾ ನಗರದಲ್ಲಿ ಎಲ್ಲಿ ನೋಡಿದರಲ್ಲಿ ಪ್ರಾಚೀನ ಕಟ್ಟಡಗಳೂ, ಅದರ ಅವಶೇಷಗಳೂ, ಕಲಾ ಶಿಲ್ಪಗಳೂ ಕಂಡುಬರುತ್ತವೆ. ಇದುವರೆಗೂ ಎಲ್ಲೆಲ್ಲೋ ಕೇಳಿದ್ದ, ಓದಿದ್ದ ಮೈಕಲ್ಯಾಂಜೆಲೋ, ರಾಫೆಲ್ ಮುಂತಾದ ಅಪ್ರತಿಮ ಕಲಾವಿದರನ್ನು ಭೇಟಿಯಾಗುವ ಅವಕಾಶ ಅವರ ಶಿಲ್ಪಕಲೆ, ಚಿತ್ರಕಲೆಗಳ ಮೂಲಕ ಒದಗಿ ಬಂತು. ಪುಸ್ತಕಗಳಲ್ಲಿ ಓದಿ, ಗ್ಲಾಡಿಯೇಟರ್ ಸಿನೆಮಾ ನೋಡಿ 'ಕೋಲೋಸಿಯಮ್' ಹೇಗಿರಬಹುದು ಎಂದು ಇಷ್ಟುದಿನ ಕಲ್ಪಿಸಿಕೊಂಡದ್ದು ನಿನ್ನೆ ಕಣ್ಣ ಮುಂದೆಯೇ ನಿಂತಿತ್ತು. ಕ್ರಿಶ್ಚಿಯನ್ನರ ಕಾಶಿ ವೆಟಿಕನ್, ಸೇಂಟ್ ಪೀಟರ್ ಚರ್ಚು ನನ್ನ ಜೊತೆಯೇ ಮಳೆಯಲ್ಲಿ ತೋಯುತ್ತಿತ್ತು. ರೋಮನ್ನರ ಕಲೆಯ ಪ್ರತೀಕವಾಗಿರುವ ದೊಡ್ಡ ದೊಡ್ಡ ಕಾರಂಜಿಗಳು ಅಧ್ಭುತ ಶಿಲ್ಪಗಳೊಡನೆ ತಣ್ಣನೆಯ ನೀರನ್ನು ಚಿಮ್ಮಿಸುತ್ತಿದ್ದವು. ರೋಮನ್ನರ ಕಲೆಗಳು ನಮ್ಮಲ್ಲಿರುವಂತೆ ಸೂಕ್ಷ್ಮ ಕಲಾಕುಸುರಿ ಕೆಲಸಗಳಲ್ಲ. ಬದಲಾಗಿ ದೊಡ್ಡ ದೊಡ್ಡ ಆಕಾರದ ಶಿಲ್ಪಗಳು, ಚಿತ್ರಕಲೆಗಳು. ಕ್ರಿಸ್ತಪೂರ್ವದಲ್ಲಿಯೇ ಕಟ್ಟಿದ ವರ್ತುಲಾಕಾರದ ನಾಲ್ಕು ಅಂತಸ್ತುಗಳುಳ್ಳ ಕೊಲೋಸಿಯಮ್ ಎಂಬ ಆಗಿನವರ ವಿನೋದದ ಅಂಗಣದ ಕಲ್ಪನೆ, ವಿನ್ಯಾಸ, ಅದನ್ನು ಕಟ್ಟಿರುವುದೂ ಒಂದು ಪರಮ ಅದ್ಭುತ. ಮ್ಯೂಸಿಯಮ್ಮನ್ನು ನೋಡಲು ಇಡೀ ದಿನ ಸಾಲದು. ನೋಡುತ್ತಾ ನಿಂತರೆ ಒಂದೊಂದು ಶಿಲ್ಪಗಳೂ, ಒಂದೊಂದು ಚಿತ್ರಗಳೂ ಒಂದೊಂದು ಕಥೆ ಹೇಳುತ್ತವೆ. ರೋಮ್ ನೋಡುವವರು ರೋಮನ್ನರ ಇತಿಹಾಸ ಹಾಗೂ ಇತಿಹಾಸ ಪುರುಷರ ಬಗ್ಗೆ ಸ್ವಲ್ಪವಾದರೂ ತಿಳಿದುಕೊಂಡು ಹೋಗುವುದು ಅವಶ್ಯಕ. ಇಲ್ಲದಿದ್ದರೆ ರಾಮಾಯಣ, ಮಹಾಭಾರತ, ಭಾಗವತ ಸ್ವಲ್ಪವೂ ಗೊತ್ತಿಲ್ಲದವನು ನಮ್ಮ ಬೇಲೂರು, ಹಳೇಬೀಡು ನೋಡಿದಂತೆ ಆಗುತ್ತದೆ. ಶನಿವಾರವಾದುದರಿಂದ ಬಹಳ ಜನ ಪ್ರವಾಸಿಗರಿದ್ದರು. ಮಾತಿಗೆ ಸಿಕ್ಕ ಅರ್ಜೆಂಟೈನಾದವಳೊಬ್ಬಳು "ಓಹ್, ಇಂಡಿಯನ್, ನಮಸ್ತೆ" ಎಂದಳು. "ಅಕ್ಕಾ ನಿಂಗ್ ಹೆಂಗೆ ಗೊತ್ತು ಇದು?" ಅಂತ ಕೇಳಿದಾಗ ಸುಮ್ಮನೆ ನಕ್ಕಳು.



ಹೀಗೆ ನೋಡುತ್ತಾ ಸಂಜೆಯಾಗಿತ್ತು. ಒಂದು ಕಾಫಿ ಕುಡಿದು ಸ್ವಲ್ಪ ಕತ್ತಲಾದ ಮೇಲೆ ರೋಮಿನ ರಸ್ತೆಗಳಲ್ಲಿ ಅಲೆದೆ. ಬೆಳಗ್ಗಿಂದ ಅಲೆದು ಕಾಲುಗಳು ಒಂದೇ ಸಮನೆ ಪದ ಹೇಳುತ್ತಿದ್ದವು. ಮತ್ತೊಮ್ಮೆ ರೋಮಾ ನಗರಕ್ಕೆ ಬರಬೇಕು, ಉಳಿದುದ್ದನ್ನೆಲ್ಲ ನೋಡಬೇಕು ಎಂದುಕೊಳ್ಳುತ್ತ ಅನಂತರ ಮತ್ತೆ ರೈಲಿನಲ್ಲಿ ಹೊರಟು ರಾತ್ರಿ ನಮ್ಮ ’ನಾಪೋಲಿ’ಗೆ ಬಂದು ಸೇರಿಕೊಂಡೆ.

********

'ರೋಮಾ'ದ ಕೆಲ ಫೋಟೋಗಳು ಇಲ್ಲಿವೆ.
ಮಾಹಿತಿಗಾಗಿ ಜಾಲತಾಣ.
ವಿಕಿಮ್ಯಾಪಿಯಾ ಕೊಂಡಿ.

ಸೋಮವಾರ, ನವೆಂಬರ್ 3, 2008

'ನಾಪೋಲಿ'ಯಲ್ಲಿ ಆರಾಮಿದ್ದೇನೆ

ನೀರಿ,

ನಾನು ಇಲ್ಲಿ ಆರಾಮಿದ್ದೇನೆ. ನೀನು ಕೂಡ ಆರೋಗ್ಯವೆಂದು ನಂಬಿದ್ದೇನೆ. ಇವತ್ತಿಗೆ ಇಲ್ಲಿಗೆ ಬಂದು ೧೦ ದಿನವಾಯಿತು. ಹಿಂದಿನ ಪತ್ರದಲ್ಲಿ ಬಂದು ತಲುಪಿದ ಸುದ್ದಿಯ ಜೊತೆಗೆ ಹೆಚ್ಚೇನನ್ನೂ ಬರೆಯಲಾಗಿರಲಿಲ್ಲ. ಈಗ ಸಮಯ ಸಿಕ್ಕಿರುವುದರಿಂದ ಬರೆಯುತ್ತಿದ್ದೇನೆ.

ನಾನು ಬಂದಿರುವುದು 'ನೇಪಲ್ಸ್' ಎಂಬ ಊರಿಗೆ ಎಂದು ನಿನಗೆ ತಿಳಿಸಿದ್ದೆ. ಈ ನಗರದ ನಿಜವಾದ ಹೆಸರು 'ನಾಪೋಲಿ' ಎಂದು. ಎಲ್ಲೆಡೆಯಂತೆ ಇಂಗ್ಲೀಷಿನವರು ಈ ಊರಿನ ಹೆಸರನ್ನೂ ಕೂಡ ಕುಲಗೆಡಿಸಿದ್ದಾರೆ. ದಕ್ಷಿಣ ಇಟಲಿಯಲ್ಲಿರುವ ಈ ನಗರ ಹೆಚ್ಚೂ ಕಮ್ಮಿ ನಮ್ಮ ಬೆಂಗಳೂರು ಇದ್ದಂತೆಯೇ ಇದೆ. ಕ್ರಿಸ್ತಪೂರ್ವದ ಇತಿಹಾಸವಿದೆ ಇದಕ್ಕೆ. ಅದಕ್ಕೋಸ್ಕರವೇ ಈಗ ಈ ಊರು ಒಂದು ಆಧುನಿಕ ನಗರದವಾಗಿದ್ದರೂ ಕೂಡ ಬಹಳ ಹಳೇ ಹಳೇ ಕಟ್ಟಡಗಳೂ, ಕೋಟೆ ಕೊತ್ತಲುಗಳೂ, ಅದರ ಪಳಿಯುಳಿಕೆಗಳೂ ಸಾಕಷ್ಟು ಕಾಣುತ್ತವೆ. ಯೂರೋಪಿನ ಇತಿಹಾಸದಲ್ಲಿ ಇದಕ್ಕೆ ರಾಜಕೀಯವಾಗಿ ವಿಶಿಷ್ಠ ಸ್ಥಾನವಿದೆ. ಇದು ಸಮುದ್ರ ತೀರದ ಊರಾದುದರಿಂದ ಇಲ್ಲಿನ ಬಂದರು ಮೊದಲಿನಿಂದಲೂ ಅಂದರೆ ರಾಜರ ಕಾಲದಿಂದಲೂ ಬಹುಮುಖ್ಯ ನೆಲೆಯಾಗಿತ್ತಂತೆ. ಇಲ್ಲಿನ ನಗರದ ಒಳಗಿನ ರಸ್ತೆಗಳು ನಮ್ಮ ಊರುಗಳಂತೆಯೇ ಒತ್ತೊತ್ತಾಗಿವೆ. ಸಣ್ಣ ಸಣ್ಣ ರಸ್ತೆಗಳಿಂದ ಕೂಡಿದೆ. ಉತ್ತರ ಇಟಲಿಯ ನಗರಗಳಷ್ಟು ಅಥವಾ ಯೂರೋಪಿನ ಇತರೆಡೆಗಳಲ್ಲಿರುವಂತೆ ಈ ನಗರ ಶಿಸ್ತಾಗಿಲ್ಲ ಎಂದು ಇಲ್ಲಿನವರೇ ಒಪ್ಪಿಕೊಳ್ಳುತ್ತಾರೆ. ಅದಕ್ಕೆ ಸಾಕ್ಷಿ ಎಂಬಂತೆ ಎಲ್ಲೆಂದರಲ್ಲಿ ಕಸ ಬಿಸಾಕುವುದನ್ನೂ, ಟ್ರಾಫಿಕ್ ನಿಯಮಗಳನ್ನು ಪಾಲಿಸದೇ ಇರುವುದನ್ನೂ, ಕಂಡ ಕಂಡಲ್ಲಿ ಕೂತು ಕುಡಿಯುವುದನ್ನೂ, ಬಾಟಲಿ, ಸಿಗರೇಟು ಬಿಸಾಕುವುದನ್ನೂ, ಸಿಟಿ ಬಸ್ಸುಗಳಲ್ಲಿ, ಗೋಡೆ, ಬೆಂಚುಗಳ ಮೇಲೆಲ್ಲಾ ಗೀಚಿರುವುದನ್ನೂ ಕಾಣಬಹುದು. ಸಿಟಿ ಒಳಗೆ ಪಕ್ಕಾ ಭಾರತದ ವಾತಾವರಣವೇ ಇದೆ. ಜನರಲ್ಲೂ ಕೂಡ ನಾಗರೀಕ ಪ್ರಜ್ಞೆ, ನೈತಿಕ ಪ್ರಜ್ಞೆ ಕಡಿಮೆ ಎಂದೇ ಹೇಳಬಹುದು. ಕೆಲಸದಲ್ಲೂ ಕೂಡ ನಮ್ಮ ತರಹವೇ ಸ್ವಲ್ಪ ಓತ್ಲಾ ಪಾರ್ಟಿಗಳು. ಆದರೂ ನಮ್ಮ ಊರುಗಳಿಗಿಂತ ಸ್ವಲ್ಪ ವ್ಯವಸ್ಥಿತವಾಗಿದೆ. ಸಿಟಿ ಪ್ರದೇಶಗಳನ್ನು ಬಿಟ್ಟು ಸ್ವಲ್ಪ ಹೊರಗೆ ಹೋಗುತ್ತಿದ್ದಂತೇ ವಾತಾವರಣ, ಪರಿಸ್ಥಿತಿ ಚೆನ್ನಾಗಿದೆ. ಟ್ರಾಫಿಕ್ ತೊಂದರೆಯಿಲ್ಲ.:)

ಈಗ ಇಲ್ಲಿ ಚಳಿಗಾಲ ಶುರುವಾಗುತ್ತಿದೆ. ಸದ್ಯಕ್ಕೆ ಅಂತಹ ಚಳಿಯೇನೂ ಇಲ್ಲ. ಇಲ್ಲಿ ಸಸ್ಯಾಹಾರೀ ಆಹಾರವೆಂದರೆ ಬನ್ನು , ಬ್ರೆಡ್ಡು, ಹಣ್ಣು ಹಂಪಲು, ಹಸಿ ಅಥವಾ ಬೇಯಿಸಿ ಮಸಾಲೆ ಹಾಕಿದ ತರಕಾರಿಗಳು, ಹಾಲು, ಮೊಸರು ಇಂಥವಷ್ಟೆ. ಮಾಂಸಾಹಾರವಂತೂ ಚಿತ್ರವಿಚಿತ್ರವಾದುದೆಲ್ಲ ಸಿಗುತ್ತದೆ. ಸಮುದ್ರ ತಟದ ಊರಾದುದರಿಂದ ಏನೇನೋ ಸಮುದ್ರಜೀವಿಗಳನ್ನೂ ಕೂಡ ಆಹಾರವಾಗಿ ಬಳಸುತ್ತಾರೆ. ಶನಿವಾರ ಭಾನುವಾರಗಳಂತೂ ಇಲ್ಲಿ ಕೆಲವು ಕಡೆ ವಿವಿಧ ಮೀನುಗಳು, ಸಮುದ್ರ ಹಾವು, ಆಕ್ಟೋಪಸ್ ತರಹ ಇನ್ನೂ ತರತರಹದ ಸಮುದ್ರ ಜೀವಿಗಳ ಮಾರಾಟ ನೆಡೆಯುತ್ತದೆ. ನಪೋಲಿ ನಗರಕ್ಕೆ ತಾಗಿಕೊಂಡು ಬೀಚ್ ಇಲ್ಲ. ಆದರೆ ಬಂದರು ಇರುವ ಕಡೆ ಕಡಲ ಪಕ್ಕದಲ್ಲೇ ವಿಹರಿಸಲು ಬಹಳ ಸುಂದರವಾದ ರಸ್ತೆಗಳೂ, ತಾಣಗಳೂ ಇವೆ. ಮೈಲುಗಟ್ಟಲೇ ಸಮುದ್ರವನ್ನು ಆನಂದಿಸುತ್ತಾ ಸಾಗಬಹುದು.

ಇಲ್ಲಿ ಇಂಡಿಯನ್ ಹೋಟೆಲ್ಗಳು ಯಾವುವೂ ಇಲ್ಲ. ಬೆಂಗಳೂರಿನ ನನ್ನ ಗೆಳೆಯನೊಬ್ಬ ಹೇಳಿದ ದಾರಿ ಹಿಡಿದು ನಾನು ಪಾಕಿಸ್ತಾನಿ ಹೋಟೆಲ್ ಒಂದಕ್ಕೆ ಹೋಗಿದ್ದೆ. ಅಲ್ಲಿ ರೊಟ್ಟಿ, ಅನ್ನ ಎಲ್ಲ ಸಿಗುವುದೆಂದು ಹೇಳಿದ್ದ. ಅಲ್ಲಿ ಹೋದಾಗ ರೊಟ್ಟಿ, ಅನ್ನವೇನೋ ಸಿಕ್ಕಿತು ಆದರೆ ಜೊತೆಗೆ ವೆಜ್ ಐಟಂಗಳು ಏನೂ ಸಿಗದೇ ನಾನು ಹಾಗೇ ತಡಬಡಾಯಿಸುತ್ತಿರುವಾಗ ಅಲ್ಲಿ ಬಾಂಗ್ಲಾದೇಶದವನೊಬ್ಬ ಪರಿಚಯವಾಯಿತು. ಅವನು ನನ್ನನ್ನು ಇನ್ನೊಂದು ಬಾಂಗ್ಲಾದೇಶಿ ಹೋಟೆಲ್ಲಿಗೆ ಕರೆದುಕೊಂಡು ಹೋದ. ಇಂಡಿಯಾ ಬಾಂಗ್ಲಾ ಫಾಸ್ಟ್ ಪುಡ್ ಎಂದು ಅದರ ಹೆಸರು. ಅವನು ಹೇಳಿದಂತೆಯೇ ಅಲ್ಲಿ ನನಗೆ ಅನ್ನ, ದಾಲ್, ಚಪಾತಿ, ವೆಜೆಟೇಬಲ್ ಸಬ್ಜಿ ಮುಂತಾದವು ದೊರೆತವು. ಸದ್ಯ ಈಗ ರಾತ್ರಿ ಊಟಕ್ಕೆ ಮಾತ್ರ ತೊಂದರೆಯಿಲ್ಲ. ಮಧ್ಯಾಹ್ನ ಮಾತ್ರ ಆಫೀಸಿನಲ್ಲಿ ಅದೇ ಪಾಸ್ತಾ, ಸೊಪ್ಪು ತರಕಾರಿ, ಕಾಳು ಬೀಜ, ಹಣ್ಣು ಹಂಪಲೇ ಗತಿಯಾಗಿದೆ. ಬಗೆ ಬಗೆಯ ಪಿಜ್ಜಾಗಳು, ಕಾಫಿಗಳು ಇಲ್ಲಿ ಸಿಗುತ್ತವೆ. ಪಿಜ್ಜಾ ತಿನ್ನಲು ಹೋಗಿಲ್ಲ ಇನ್ನೂ, ಆದರೆ ದಿನಕ್ಕೊಂದು ತರಹದ ಕಾಫಿಯ ರುಚಿ ನೋಡುತ್ತಿದ್ದೇನೆ.:)


ಅಂದಹಾಗೆ ಹೇಳುವುದು ಮರೆತಿದ್ದೆ. ಈ ನಪೋಲಿ ನಗರದಲ್ಲಿ ಪಾಕಿಸ್ತಾನಿಗಳು ಮತ್ತು ಬಾಂಗ್ಲಾದೇಶೀಯರು ಸುಮಾರು ಜನ ಕಾಣಸಿಗುತ್ತಾರೆ. ಅವರಲ್ಲಿ ಹೆಚ್ಚು ಜನ ರಸ್ತೆ ಬದಿಯಲ್ಲಿ ವಸ್ತುಗಳನ್ನು ಮಾರುವವರು ಮತ್ತು ಬೇರೆ ಬೇರೆ ಕಡೆ ಅಂದರೆ ಬಂದರಿನಲ್ಲಿ, ಬಟ್ಟೆ ಇನ್ನಿತರ ಕಾರ್ಖಾನೆಗಳಲ್ಲಿ ಕೆಲಸ ಮಾಡುತ್ತಿದ್ದಾರೆ. ಹೆಚ್ಚು ಕಮ್ಮಿ ಎಲ್ಲರೂ ಅಕ್ರಮ ವಲಸೆಗಾರರು. ಇಲ್ಲಿಯೇ ತಳವೂರಿರುವ ಕೆಲವರು ಈಗೀಗ ಕಿರಾಣಿ ಅಂಗಡಿಗಳನ್ನೂ, ಹೋಟೆಲ್ ಗಳನ್ನು ತೆಗೆದಿದ್ದಾರೆ. ಭಾರತದವರು ಅಂದರೆ ಬೆಂಗಳೂರು, ಮದ್ರಾಸು, ಗೋವಾ ಕಡೆಯವರೂ ಕೆಲವರು ಇಲ್ಲಿ ಹಡಗಿನಲ್ಲಿ ಕೆಲಸ ಮಾಡುತ್ತಾರಂತೆ. ಆದರೆ ಇಲ್ಲಿಯೇ ಉಳಿದುಕೊಳ್ಳುವವರು ಬಹಳ ಕಡಿಮೆಯಂತೆ. ಏಕೆಂದರೆ ಭಾರತದವರಿಗೆ ಇಲ್ಲಿಗಿಂತ ಭಾರತದ ಊರುಗಳೇ ಚಂದ ಅನಿಸುತ್ತದೆ. ಕೆಲವು ಪಂಜಾಬಿಗಳೂ ಅಲ್ಲಲ್ಲಿ ಅಪರೂಪಕ್ಕೆ ಕಾಣುತ್ತಾರೆ. ಪಾಕಿಸ್ತಾನಿ, ಬಾಂಗ್ಲಾದೇಶಿ ಮುಂತಾದ ಏಷ್ಯಾ ಜನರ ಮೇಲೆ ಇಲ್ಲಿನ ಸ್ಥಳೀಯರು ಸ್ವಲ್ಪ ಅಸಹನೆ ತೋರಿಸುತ್ತಾರೆ. ಏನಾದರೂ ಇಟಲಿಯಲ್ಲಿ ಮುಸ್ಲಿಂ ಉಗ್ರಗಾಮಿಗಳ ಕೈವಾಡದಿಂದ ಬಾಂಬ್ ಸ್ಪೋಟವಾದರೆ ಇಲ್ಲಿರುವ ಏಷ್ಯನ್ನರನ್ನು ಒದ್ದೋಡಿಸುವುದು ಗ್ಯಾರಂಟಿ. ಈ ನಪೋಲಿ ನಗರ ಮೊದಲಿನಿಂದಲೂ ಎಲ್ಲ ರೀತಿಯ ಕಪ್ಪು ದಂಧೆಗಳಿಗೆ ಪ್ರಸಿದ್ಧಿಯಂತೆ. ಕೆಲವೊಂದು ಪ್ರದೇಶಗಳಲ್ಲಿ ಸಂಜೆಯಾದ ಮೇಲೆ ಓಡಾಡುವುದೇ ಅಪಾಯವಂತೆ. ನಾನು ಉಳಿದುಕೊಂಡಿರುವ ಹೋಟೆಲ್ಲು ನಗರದ ಕೇಂದ್ರಭಾಗದಲ್ಲಿರುವ 'ಪಿಯಾಜಾ ಗೆರಿಬಾಲ್ಡಿ'(ಗೆರಿಬಾಲ್ಡಿ ಚೌಕ) ಎಂಬಲ್ಲಿ ಇರುವುದರಿಂದ ಏನೂ ತೊಂದರೆಯಿಲ್ಲ.


ನನ್ನ ಆಫೀಸಿನ ಕೆಲಸಗಳು ಚೆನ್ನಾಗಿ ನೆಡೆಯುತ್ತಿವೆ. ಏನೂ ತೊಂದರೆಯಿಲ್ಲ. ನಮ್ಮ ಆಫೀಸಿನಲ್ಲಿ ಇಬ್ಬರಿಗೆ ಮಾತ್ರ ಇಂಗ್ಲೀಷು ಬರುತ್ತದೆ. ಉಳಿದವರ ಹತ್ತಿರ ಏನಿದ್ದರೂ ಸನ್ನೆಗಳಿಂದಲೇ ಮಾತು :). ಇಲ್ಲಿ ಸಾರ್ವಜನಿಕ ಸೇವೆಯಲ್ಲಿರುವವರು, ಕೆಲವು ಬಿಸಿನೆಸ್ ಮಾಡುವವರು, ತಾಂತ್ರಿಕ ಹುದ್ದೆಯಲ್ಲಿರುವವರಿಗೆ ಕೆಲವರಿಗೆ ಮಾತ್ರ ಇಂಗ್ಲೀಷು ನಿಧಾನಕ್ಕೆ ಮಾತಾಡಿದರೆ ಅರ್ಥವಾಗುತ್ತದೆ ಮತ್ತು ಕೆಲವರು ಇಂಗ್ಲೀಷು ಮಾತನಾಡುತ್ತಾರೆ. ಆದರೆ ಇಟಾಲಿಯನ್ ಭಾಷೆಗೆ ಲ್ಯಾಟಿನ್ ಲಿಪಿಯೇ ಆಗಿರುವುದರಿಂದ ಹೆಸರು ಇತ್ಯಾದಿ ಓದಲು ತೊಂದರೆಯಾಗುವುದಿಲ್ಲ.

ಅಲ್ಲಿಂದ ತಂದಿದ್ದ ಪುಸ್ತಗಳೆಲ್ಲಾ ಸುಮಾರು ಓದಿ ಮುಗಿದವು. ಕಾಕತಾಳೀಯವೊ ಎಂಬಂತೆ ಕಾರಂತರ ’ಅಪೂರ್ವ ಪಶ್ಚಿಮ’ ಎಂಬ ಪುಸ್ತಕವನ್ನೂ ತಂದಿದ್ದೆ. ಅದರಲ್ಲಿ ಕಾರಂತರು ನಪೋಲಿ ಊರಿನಲ್ಲಿ ತಿರುಗಾಡಿ ಬರೆದ ಸ್ವಲ್ಪ ವಿವರಣೆಯಿದೆ. ಆಶ್ಚರ್ಯವೆಂದರೆ ಅವರು ಅದನ್ನು ೧೯೫೪ ರಲ್ಲಿ ಬರೆದಿದ್ದಾದರೂ ಆ ವಿವರಣೆಗೂ ಈಗಿನ ವಾಸ್ತವಕ್ಕೂ ಹೆಚ್ಚು ವ್ಯತ್ಯಾಸವೇನೂ ಇಲ್ಲ! ಇಲ್ಲಿ ಹತ್ತಿರದಲ್ಲೇ ಕೆಲವು ನೋಡುವ ಸ್ಥಳಗಳಿಗೆ ಹೋಗಿದ್ದೆ. ಅದರ ಬಗ್ಗೆ ಮುಂದಿನ ಪತ್ರದಲ್ಲಿ ಬರೆಯುತ್ತೇನೆ.


ಮತ್ತೆಲ್ಲಾ ಕ್ಷೇಮ.

ಇಂತಿ,
ವಿಕಾಸ್