ಶುಕ್ರವಾರ, ಜನವರಿ 30, 2009

ಎಲ್ಡೆಕ್ರೆ ಹೊಲ, ಮಧ್ಯ ಬಾವಿ ಸಾಕು

ಒಂದು ವೈಯಕ್ತಿಕ ಟಿಪ್ಪಣಿ :


ಪುಟ್ಟಿ ಕೇಳಿದಳು. ಇದೆಲ್ಲಾ ಬರ್ಕಂಡು ಏನಾದ್ರೂ ಉಪ್ಯೋಗ ಆಗುತ್ತೆ ಅನ್ಕಂಡಿದಿಯಾ? ಅದ್ರಿಂದ ಏನೂ ಸಾಧನೆಯಾಗಲ್ಲ, ಯಾರೂ ಉದ್ಧಾರಾಗಲ್ಲ. ಸುಮ್ನೆ ಬ್ರ್ಯಾಂಡ್ ಆಗ್ತೀಯಾ ಅಷ್ಟೆ. ಅಷ್ಟು ಹೊತ್ತಿಗೆ ನಂಗೂ ಹಾಗೇ ಅನಿಸಿತ್ತು. ಸುಮ್ನೆ ಯಾಕೆ ಇವೆಲ್ಲಾ. ಈ ಧರ್ಮ, ಜಾತಿ, ಸಂಸ್ಕೃತಿ, ಸಮಾಜ, ರಾಜಕೀಯ, ಫೆಮಿನಿಸಂ, ಕಮ್ಯುನಿಸಂ , ಕ್ರಿಟಿಸಿಸಂ ಮುಂತಾದವುಗಳು ಬಗೆಹರಿಯದಂತವು. ಅವುಗಳ ಚರ್ಚೆ ವ್ಯರ್ಥ. ಚರ್ಚೆಗಳಿಂದ ಅಭಿಪ್ರಾಯ ಬದಲಿಸಿಕೊಳ್ಳೋ ಮನಃಸ್ಥಿತಿ ಅಥವಾ ಹೌದು ಅಂತ ಮನಃಪೂರ್ವಕವಾಗಿ ಒಪ್ಪಿಕೊಳ್ಳೋದು ಎಲ್ಲಾ ಶಂಕರಾಚಾರ್ಯರ ಕಾಲಕ್ಕೇ ಮುಗಿದು ಹೋಯಿತೇನೋ. ಸುಮ್ಮನೇ ಇದೆಲ್ಲಾ ವಾದ, ವಿವಾದ, ಟೀಕೆ, ವಿಮರ್ಶೆ, ಸಮಯ ಹಾಳು, ಮನಸ್ತಾಪ, ಮನಸು ಕೆಡಿಸಿಕೊಳ್ಳುವುದು, ವೈಯಕ್ತಿಕ ಸಂಬಂಧಗಳಲ್ಲಿ ಬೇಸರ, ಅನುಮಾನದ ನೆರಳು, ಸಿಟ್ಟು, ಸೆಡವು ..ಹ್ಮ್... ಯಾವುದೂ ಬೇಡ. ಸದ್ಯಕ್ಕೆ ಮಾಡಬೇಕಾದ ಕೆಲಸಗಳು ಬಹಳಷ್ಟಿವೆ, ವೃತ್ತಿಜೀವನದಲ್ಲಿ, ಕೌಟುಂಬಿಕ ಜೀವನದಲ್ಲಿ ಬೆಳೆಯಬೇಕಾದ್ದು ಅಗತ್ಯವಿದೆ, ಸಾಮಾಜಿಕ ಜವಾಬ್ದಾರಿಯಿದೆ, ಓದಬೇಕಾದ ಪುಸ್ತಕಗಳು , ನೋಡಬೇಕಾದ ಸಿನೆಮಾಗಳು ಸಾವಿರವಿದೆ, ಸುತ್ತಬೇಕಾದ ಸ್ಥಳಗಳು ನೂರಿವೆ, ಒಣಗಿನಿಂತಿರುವ ಹವ್ಯಾಸಗಳಿಗೆ ನೀರೆರೆಯಬೇಕಿದೆ, ಕಲಿಯಬೇಕಾದ್ದು ಮುಗಿಯದಷ್ಟಿದೆ. ನಮ್ ಪಾಡಿಗೆ ನಾವ್ ’ತಣ್ಣಗೆ ’ ಬರೆದುಕೊಂಡಿದ್ದರೆ ಆಯಿತು. ವಿಷಯ, ಮಾಹಿತಿ, ವಿಚಾರ ವಿನಿಮಯವಷ್ಟೆ ಸಾಕು. ಜನಗಣಮನ ಹಾಡೋಣ, ಎಲ್ಲರೂ ಒಂದಾಗೋಣ, ಊರ್ ಮೇಲೆ ಊರ್ ಬಿದ್ರೂ ..... ತಾನನಾನನಾ...

ಒಟ್ಟಾರೆ ಹೇಳಬೇಕಂದ್ರೆ , "ಮೊದ್ಲೇ ರಿಸೆಷನ್ ಟೈಮು, ನಮಗ್ಯಾಕ್ ಸ್ವಾಮಿ ಊರ್ ಉಸಾಬರಿ ಎಲ್ಲಾ? ನಮಿಗ್ ಬೇಕಾಗಿರದು ನಮ್ ಎಲ್ಡೆಕ್ರೆ ಹೊಲ, ಮಧ್ಯದಲ್ಲೊಂದು ಬಾವಿ. ಸರ್ಕಾರದವ್ರು ಕರೆಂಟ್ ಕೊಟ್ರೆ ಪಂಪ್ ಹಾಕಿಸ್ತೀನಿ, ಇಲ್ಲಾಂದ್ರೆ ಕೈಯಲ್ಲೇ ಹೊಡೀತೀನಿ. ರಾತ್ರಿ ಮುದ್ದೆ ಉಂಡು ನೆಮ್ಮದಿಯಾಗಿ ಮನಿಕ್ಕಂಡು ಬೆಳಗ್ಗೆದ್ದು ಗೇಯಕ್ಕೋಯ್ತಿನಿ . ನಮ್ ಹೊಲದಲ್ಲಿ ಸರಿಯಾಗಿ ಬೆಳೆ ಬಂದ್ಮೇಲೆ ಬೇರೆ ಮಾತು. ಅಷ್ಟೆ." :)


**********

ಬುಧವಾರ, ಜನವರಿ 28, 2009

ಜನವರಿ ಕಂತು

ಅವಧಿ ಬ್ಲಾಗ್ ನಿಂದ ಪರಿಚಿತವಾದ ಮೇ ಫ್ಲವರ್ ಮೀಡಿಯಾ ಹೌಸ್ ಗೆ ಹೋಗುವುದೆಂದರೆ ಒಂಥರಾ ಖುಷಿ. ಪಕ್ಕಾ ಪ್ರೊಫೆಷನಲ್ ವಾತಾವರಣದ ಜೊತೆ ಒಂದು ಆಪ್ತ ಸೊಗಡಿನ ವಾತಾವರಣ ಅಲ್ಲಿರುವುದೇ ಕಾರಣವಿರಬಹುದು. ಅದು ಒಂದು ಕಛೇರಿ ಎಂದು ತಿಳಿದಿದ್ದರೂ ಕೂಡ ಅಲ್ಲಿ ಹೋದೊಡನೆ ದೊಡ್ಡಮ್ಮನ ಮನೆಗೋ, ಚಿಕ್ಕಪ್ಪನ ಮನೆಗೋ ಹೋದ ಅನುಭವವಾಗಿಬಿಡುತ್ತದೆ. ಹೇಗೆಂದರೆ ದೊಡ್ಡಮ್ಮನ ಮನೆಗೆ ಹೋದಾಗ ಸೀದಾ ಅಡುಗೇ ಮನೆಗೇ ಹೋಗಿ ಹರಟುತ್ತೇವಲ್ಲ ಹಾಗೆ ಅಲ್ಲಿ ಸಿ.ಇ.ಒ.ಮೋಹನ್ ಸಾರ್ ಜೊತೆ ಹರಟಬಹುದು, ಅಡಿಗೆ ಮನೆಯಲ್ಲಿ ಫ್ರಿಡ್ಜು ತೆಗೆದು, ಡಬ್ಬಿ ಹುಡುಕಿ ತಿಂಡಿ ಕುರುಕಿಸುವಂತೆ ಅಲ್ಲಿ ವಿಧ ವಿಧದ ಕನ್ನಡ-ಇಂಗ್ಲೀಷ್ ಪುಸ್ತಕಗಳನ್ನು, ಪತ್ರಿಕೆಗಳನ್ನು ಹಿಡಿದು ಓದಬಹುದು, ಗೆಳೆಯರ ಜೊತೆ ಸೇರಿ "ಎಲ್ಲಿ ಮಗಾ, ಆ ಹುಡುಗಿ ಕಾಣ್ತನೇ ಇಲ್ವಲ್ಲಾ" ಎಂದು ಮಾತನಾಡುತ್ತಲೇ ಪುಸ್ತಕ ಕೈಯಲ್ಲಿ ಹಿಡಿದುಕೊಂಡೇ ಫೊಟೋಗೆ ಫೋಸು ಕೊಡಬಹುದು ! ಪ್ರಸ್ತುತ ಮಾರುಕಟ್ಟೆಯ, ಪ್ರಸ್ತುತ ಅಭಿರುಚಿಗಳ ಬಗ್ಗೆ ತಿಳಿದುಕೊಂಡು ಕೆಲಸ ಮಾಡುತ್ತಿರುವ ಕೆಲವೇ ಕೆಲವು ಮೀಡಿಯಾ ಸಂಸ್ಥೆಗಳಲ್ಲಿ ಮೇ ಫ್ಲವರ್ ಕೂಡ ಒಂದು.

****

ಮೊನ್ನೆ ಶನಿವಾರ ಸಂಜೆ ಸ್ಲಂ ಡಾಗ್ ಫಿಲಂ ಬಗ್ಗೆ Mayflowerನಲ್ಲಿ ಸಂವಾದವಿತ್ತು. ಈ ಕೆಲದಿನಗಳಿಂದ ಈ ಸ್ಲಂಡಾಗ್ ಬಗ್ಗೆ ಕೇಳಿ ಓದೀ ಬೇಜಾರು ಬಂದು ಹೋಗಿದೆ ನಿಜ. ಆದರೆ ಅಲ್ಲಿ ಸಂಪನ್ಮೂಲ ವ್ಯಕ್ತಿಯಾಗಿ ಬರುತ್ತಿರುವವರು ’ಪರಮೇಶ್ವರ್’ಎಂದು ತಿಳಿದಾಕ್ಷಣ ಆಸಕ್ತಿ ತಾನಾಗಿಯೇ ಮೂಡಿತ್ತು! ಈ ತಿಂಗಳ ಮೊದಲವಾರದಲ್ಲಿ ಕುಪ್ಪಳಿಯಲ್ಲಿ ’ಸಾಂಗತ್ಯ’ ತಂಡದವರು ನಡೆಸಿದ ಚಿತ್ರೋತ್ಸವದಲ್ಲಿ ಪರಮೇಶ್ವರರ ಮಾತುಗಳನ್ನು ಕೇಳಿದ್ದೆ. ಅವರ ಸಿನೆಮಾ ಜ್ಞಾನ, ಸಿನೆಮಾಗಳನ್ನು ಅವರು ಸಮತೋಲನವಾಗಿ , ಬರೀ ತೆರೆ ಮೇಲಿನದ್ದನ್ನಲ್ಲದೇ ಅದರ ಹಿನ್ನೆಲೆ ಸಮೇತ ವಿಶ್ಲೇಷಿಸುವ ರೀತಿ, ಪ್ರಶಸ್ತಿ, ಸನ್ಮಾನಗಳ ಹಿಂದಿನ ಉದ್ದೇಶ, ತಂತ್ರ, ಕುತಂತ್ರಗಳ ಬಗ್ಗೆ ಅವರ ಧೋರಣೆ ಬಹಳ ಇಷ್ಟವಾಗಿತ್ತು. ಅವರು ಈ ಸ್ಲಂ ಡಾಗ್ ಬಗ್ಗೆ ಏನು ಹೇಳುತ್ತಾರೆ ಎಂಬ ಕುತೂಹಲವಿತ್ತು.

ಮೂರು ವಾರಗಳ ಹಿಂದೆ ಇದೇ ಸ್ಲಂಡಾಗ್ ಅನ್ನು ನೋಡಿದ್ದೆ. ಬಹಳಷ್ಟು ಅಸ್ವಾಭಾವಿಕ, ಅವಾಸ್ತವಿಕ , ಕಾಕತಾಳೀಯ ಸನ್ನಿವೇಶಗಳನ್ನು ಹೆಣೆದು ಮಾಡಿದ ಈ ಸಿನೆಮಾ ಒಂದು ವಿಭಿನ್ನ ಕಥೆಯುಳ್ಳ ಸಿನೆಮಾ ಆಗಿತ್ತು. ಅದು ಸುಮ್ಮನೆ ಒಂದು ಒಳ್ಳೆಯ ಸಿನೆಮಾದಂತೆ ಅನ್ನಿಸಿತ್ತು. ಅದ್ಭುತವೆನಿಸುವಂತಹ ವಿಶೇಷಗಳೇನೂ ಕಾಣಿಸಿರಲಿಲ್ಲ. ಆದರೆ ಅದಕ್ಕೆ ಗೋಲ್ಡನ್ ಗ್ಲೋಬ್ ಘೋಷಣೆ, ಆಸ್ಕರ್ ಗೆ ನಾಮನಿರ್ದೇಶನ ಆಯಿತು . ಅದಾದ ಮೇಲೆ ಮಾಧ್ಯಮಗಳು ಅದನ್ನು ಹೊತ್ತುಕೊಂಡು ಕುಣಿದ ರೀತಿ, ಕೆಲವರು ಅದನ್ನು ಹೊಗಳಿದ/ಹೊಗಳುತ್ತಿರುವ ರೀತಿ, ವಿಪರೀತ ಚರ್ಚೆ, ಅಲ್ಲಿ ತೋರಿಸಿದ ಸ್ಲಂ ಮುಂತಾದ ದೃಶ್ಯಗಳಿಗೆ ವಿರೋಧ ವ್ಯಕ್ತವಾಗಿದ್ದನ್ನು ನೋಡಿ ನಾನು ಪೂರ್ತಿ ಸಿನೆಮಾ ಸರಿಯಾಗಿ ನೋಡಿದ್ದೆನಾ ಇಲ್ಲವಾ ಅಂತ ಅನುಮಾನವಾಗಿಬಿಟ್ಟಿತ್ತು.

ಯಾವುದೇ ಸಿನೆಮಾವನ್ನು ಎರಡನೇ ಬಾರಿ ನೋಡಲೇಬೇಕೆಂದು ನೋಡದ ನಾನು ಯಾವುದಕ್ಕೂ ಇರಲಿ ಎಂದು ಅವತ್ತು ಸ್ಲಂಡಾಗನ್ನು ಕೂಲಂಕುಷವಾಗಿ ಮತ್ತೊಂದು ಬಾರಿ ನೋಡಿಕೊಂಡು ಮೇಫ್ಲವರ್ ಗೆ ಹೋದೆ. ಪರಮೇಶ್ವರ್ ಅವರು ಎಂದಿನಂತೆ ತಮ್ಮ ಸಮತೋಲನ ಶೈಲಿಯಲ್ಲಿ ಸಿನೆಮಾವನ್ನು ಸಿನೆಮಾದ ರೀತಿಯಲ್ಲೇ ವಿಶ್ಲೇಷಿಸಿದರು, ಅವರ ವಿಶ್ಲೇಷಣೆಯಲ್ಲಿ ಪ್ರಶಸ್ತಿಯ ತೂಕವಾಗಲೀ, ಭಾರತದ ಕತ್ತಲ ಲೋಕದ ದರ್ಶನದ ವಿರೋಧವಾಗಲೀ ಕಾಣಲಿಲ್ಲ.

ನನಗನಿಸುವುದೇನೆಂದರೆ, ಮೊದಲಿಂದಲೂ ಕೂಡ ಭಾರತದ ಬಡತನ, ಸ್ಲಂ ಜೀವನ ಮುಂತಾದ ಎಲ್ಲವನ್ನೂ ಈ ಚಿತ್ರಕ್ಕಿಂತಲೂ ಪರಿಣಾಮಕಾರಿಯಾಗಿ ತೋರಿಸುವ ಹಲವು ಚಿತ್ರಗಳು ಬಂದು ಹೋಗಿವೆ. ಆದರೆ ಅದಕ್ಯಾವ ವಿರೋಧವಾಗಲೀ ವ್ಯಕ್ತವಾಗಿರಲಿಲ್ಲ. ಕಾರಣ ಅವು ಇದ್ದದ್ದು ಭಾರತೀಯ ಭಾಷೆಗಳಲ್ಲಿ ಮತ್ತು ಅವಕ್ಕೆ ಬೇರೆ ದೇಶಗಳು ಕೊಡುವ ಪ್ರಶಸ್ತಿಗಳ್ಯಾವುವೂ ಬಂದಿರಲಿಲ್ಲ. ಆಸ್ಕರ್ ಅಥವಾ ಗೋಲ್ಡನ್ ಗ್ಲೋಬ್ ನಂತಹ ಪ್ರಶಸ್ತಿಗಳಂತಹ ಪ್ರಶಸ್ತಿಗಳು ಬಂದಿವೆ ಎಂದಾಕ್ಷಣ ನಮಗೆ ಆ ಸಿನೆಮಾದಲ್ಲಿ ಇಲ್ಲದ ಅದ್ಭುತಗಳು ಕೂಡ ಕಾಣಲು ಶುರುವಾಗಿಬಿಡುತ್ತವೆ. ಅದರಲ್ಲಿರುವ ಪಾತ್ರಗಳಿಗೆ ಅದ್ಭುತ ಗುಣಗಳನ್ನು ನಾವು ನಾವಾಗೇ ಆರೋಪಿಸುತ್ತಾ ಹೋಗಿಬಿಡುತ್ತೇವೆ. ನಮಗೆ ಒಂದೊಂದು ಪಾತ್ರಗಳೂ, ಸನ್ನಿವೇಶಗಳೂ ಅಪ್ಯಾಯಮಾನವಾಗಿ ಕಾಣಲು ಶುರುವಾಗಿಬಿಡುತ್ತವೆ. ಅದಕ್ಕೆ ಪ್ರಶಸ್ತಿ ಎಂಬ ಪೂರ್ವಗ್ರಹವು ಕಾರಣವಾಗಿರುತ್ತದೆ, ಜೊತೆಗೆ ಆ ಪ್ರಶಸ್ತಿಗಳು ಸರ್ವಶ್ರೇಷ್ಠ ಎಂಬ ತಪ್ಪು ತಿಳುವಳಿಕೆಯೂ ಕಾರಣವಾಗಿರುತ್ತದೆ. ಈ ಸ್ಲಂಡಾಗ್ ವಿಷಯದಲ್ಲೂ ಹಾಗೇ ಆಗಿದೆ. ಅನಿಲ್ ಕಪೂರನ ಪಾತ್ರ ನಮ್ಮಲ್ಲಿರುವ ತಿಕ್ಕಲುತನದ ಪ್ರತಿನಿಧಿ ಅಂತ ಒಬ್ಬರಿಗನಿಸಿದರೆ, ಭಾರತದ ಬದುಕಿನ ನಿಜವಾದ ಚಿತ್ರಣವಿದು ಅಂತ ಇನ್ನೊಬ್ಬರಿಗನಿಸಿದೆ. ಪಾಪ , ಆ ನಿರ್ದೇಶಕ ಕೂಡ ಹಾಗೆಲ್ಲ ಅಂದುಕೊಂಡು ಸಿನೆಮಾ ಮಾಡಿರುತ್ತಾನೋ ಇಲ್ಲವೋ ಗೊತ್ತಿಲ್ಲ, ಆದರೆ ನಾವು ಮಾತ್ರ ಒಂದೊಂದಕ್ಕೂ ಒಂದೊಂದು ಅರ್ಥ ಕೊಡುತ್ತಾ ಹೋಗುತ್ತಿದ್ದೇವೆ. ಒಬ್ಬರು ಇದರಲ್ಲಿ ಹಳದಿ ಬಣ್ಣದ ಪರಿಣಾಮಕಾರಿ ಅದ್ಭುತ ಬಳಕೆಯಿದೆ, ಇದು ಹಳದಿ ಚಿತ್ರ ಎಂದು ವಿಶ್ಲೇಷಿಸಿದ್ದನ್ನು ನೋಡಿ ನಾನೂ, ಪುಟ್ಟಿ ಇಬ್ಬರೂ ಹಳದಿ ಬಣ್ಣದಷ್ಟೆ ನೀಲಿ ಬಣ್ಣವೂ ಇದೆಯಲ್ಲಾ, ಇದು ’ನೀಲಿ ಚಿತ್ರ’ವೂ ಹೌದು ಎಂದು ನಗಾಡಿಕೊಂಡಿದ್ದೆವು.(just kiddingu, ಅವರು ಮನ್ನಿಸಬೇಕು). ಆಸ್ಕರ್ ಬಂದರೆ ಹೆಮ್ಮೆ , ಬರದಿದ್ದರೆ ಟೊಮ್ಮೆ ಎಂದೆಲ್ಲಾ ಕೂಗಾಡುವ ಮೊದಲು ಅದೊಂದು Warner Bros. ನಿರ್ಮಾಣದ, ನಿರ್ದೇಶನದ ಚಿತ್ರ ಎಂದು ಅರಿತುಕೊಂಡರೆ ಒಳ್ಳೆಯದು. ಪ್ರಶಸ್ತಿ ಬಂದರೂ ಅದರಲ್ಲಿ ಭಾರತ ಹೆಮ್ಮ ಪಡುವುದಕ್ಕೆ ಅರ್ಥವೇ ಇಲ್ಲ! ವಿಧಾನ ಸೌಧ ಕಟ್ಟಿದ್ದು ನಾವೇ ಎಂದು ಕೇಂದ್ರ ಕಾರಾಗೃಹದ ಖೈದಿಗಳ ಸಂಭ್ರಮ ಪಟ್ಟಂತೆ ಅಷ್ಟೆ!


***************


ಇದರ ಜೊತೆಗೆ ಇನ್ನೊಂದು ವಿಷಯ ಬರೆಯಲೇ ಬೇಕು. ದ ಗಾಡ್ ಆಫ್ ಸ್ಮಾಲ್ ಥಿಂಗ್ಸ್ ಎಂಬ ಪುಸ್ತಕ ಬರೆದು ಬೂಕರ್ ಎಂಬ ಪ್ರಶಸ್ತಿ ಪಡೆದು ಮಾಧ್ಯಮಗಳಿಂದ ಅರುಧಂತಿ ರಾಯ್ ಒಂದು ನ್ಯಾಷನಲ್ ಫಿಗರ್ ಆಗಿಹೋದಂತೆ ಮೊನ್ನೆ ಮೊನ್ನೆ ವೈಟ್ ಟೈಗರ್ ಎಂಬ ಪುಸ್ತಕಕ್ಕೆ ಬೂಕರ್ ಬಂದು ಮತ್ತೆ ಮಾಧ್ಯಮಗಳು, ಕೆಲವು ಜನರು ಅದನ್ನು ಹೊತ್ತು ಕುಣಿದರು. ಅದರಲ್ಲೂ ಭಾರತದ ನೆಗೆಟಿವ್ ಬದಿಯ ಅನಾವರಣವಿದೆ ಎಂಬ ಕಾರಣದಿಂದ ವಿರೋಧವೂ ವ್ಯಕ್ತವಾಯಿತು. ೧೮ ವರ್ಷದ ಮಕ್ಕಳಿಂದ ಹಿಡಿದು ೮೦ ವರ್ಷದ ಮುದುಕರವರೆಗಿನವರೂ ಅದನ್ನು ವಿಮರ್ಶೆ ಮಾಡಿದ ಪರಿ ನೋಡಿ ಏನೋ ಅದ್ಭುತವೇ ಇರಬೇಕು ಎಂದು ಭಯ ಭಕ್ತಿಯಿಂದ ಆ ಪುಸ್ತಕವನ್ನೂ ಓದಿ ನೋಡಿದೆ.

ಕಥೆ ಹೂರಣ ಹೀಗಿದೆ. ಉತ್ತರಪ್ರದೇಶದ್ದೋ, ಬಿಹಾರದ್ದೋ ಹಳ್ಳಿಯಲ್ಲಿ ಬಡ ಕುಟುಂಬದಲ್ಲಿ ಹುಟ್ಟಿ ಭೂಮಾಲಿಕರ ದೌರ್ಜನ್ಯ ನೋಡುತ್ತಾ ಬೆಳೆದು ಆ ಹಳ್ಳಿಯಲ್ಲೇ ಅವನ ಜಾತಿಯಲ್ಲಿ ಇದ್ದುದರಲ್ಲಿ ಸ್ವಲ್ಪ ಓದು ಬರಹ ಕಲಿತವನೊಬ್ಬ ಶ್ರೀಮಂತರ ಮನೆಯಲ್ಲಿ ಕೆಲಸಕ್ಕೆ ಸೇರಿಕೊಂಡು ಅವರ ಜೊತೆ ದೆಹಲಿ ನಗರಕ್ಕೆ ಹೋಗಿ ನಗರದ ಬದುಕನ್ನೆಲ್ಲಾ ಪರಿಚಯ ಮಾಡಿಕೊಳ್ಳುತ್ತಾ ಹೋಗಿ ಕೊನೆಗೊಂದು ದಿನ ತನ್ನ ಮಾಲೀಕನನ್ನೇ ಕೊಂದು ಹಣ ಲಪಟಾಯಿಸಿ ಊರು ಬಿಟ್ಟು ಬೇರೆ ಎಲ್ಲೋ ಹೋಗಿ ವ್ಯವಹಾರ ಶುರು ಮಾಡಿ ತಾನೂ ಶ್ರೀಮಂತನಾಗಿಬಿಡುತ್ತಾನೆ. ಇದರ ಮಧ್ಯದಲ್ಲಿ ಸಣ್ಣದಾಗಿ ಹಳ್ಳಿಯ, ಬಡವರ ಕಷ್ಟದ ಬದುಕು, ಜಾತಿವ್ಯವಸ್ಥೆ, ಒಂದಿಷ್ಟು ರಾಜಕೀಯ, ಶ್ರೀಮಂತರ ಶೋಕಿ ಜೀವನಶೈಲಿ, ಮಾನವ ಸಂಬಂಧಗಳ ಬೆಸೆಯುವಿಕೆ ಬೇರ್ಪಡುವಿಕೆ ಮಸಾಲೆಗಳನ್ನು ಅರೆಯಲಾಗಿದೆ. ಈ ಪುಸ್ತಕದಲ್ಲಿ ಪ್ರತಿಯೊಂದು ಪಾತ್ರವೂ, ಸನ್ನಿವೇಶವೂ, ಘಟನೆಗಳೂ ಭಾರತೀಯರಾದ ನಮಗೆ ’ಹೊಸದು’ ಅಥವಾ ’ಬೇರೆ’ ತರದ್ದು ಅನ್ನಿಸುವುದೇ ಇಲ್ಲ. ಹುಟ್ಟಿದಾಗಿನಿಂದ ಇದನ್ನು ಹತ್ತಿರದಿಂದಲೇ, ಸುತ್ತಮುತ್ತಲೂ ಬೆಳೆಯುವ ನಮಗೆ ಇಂತಹ ಸಾಹಿತ್ಯಗಳನ್ನು ಓದಿ ಹಳಸಲು ಎನ್ನಿಸಿರುತ್ತದೆ. ಈ ಪುಸ್ತಕದ ಕತೆಯಂತೂ ಪಕ್ಕಾ ಅಮಿತಾಭನದ್ದೋ, ಮಿಥುನ್ ಚಕ್ರವರ್ತಿಯದ್ದೋ ಹಳೇ ಹಿಂದಿ ಸಿನೆಮಾವನ್ನೇ ನೋಡಿ ವಿವರವಾಗಿ ಬರೆದಂತಿದೆ.

ಇದೂ ಕೂಡ ತೀರಾ ಚೆನ್ನಾಗಿಲ್ಲ ಎಂದು ಪಕ್ಕಕ್ಕೆ ತಳ್ಳಬಿಡಬಹುದಾಂದಂತಹ ಪುಸ್ತಕ ಅಲ್ಲದಿದ್ದರೂ ಅದ್ಭುತವಾಗಿದೆ ಅನ್ನುವಂತದ್ದಂತೂ ಅಲ್ಲವೇ ಅಲ್ಲ ಎಂದು ಖಂಡಿತವಾಗಿ ಹೇಳಿಬಿಡಬಹುದು. ಅದರಲ್ಲಿರುವ ಕಥಾ ನಾಯಕ ಚೈನಾದ ಪ್ರಧಾನಿಯನ್ನುದ್ದೇಶಿಸಿ ಭಾರತದ ಕತ್ತಲೆ ಜಗತ್ತಿನ ಬಗ್ಗೆ ನೆಗೆಟಿವ್ ಧಾಟಿಯಲ್ಲಿ ಹೇಳುತ್ತಾ ಹೋಗುವಂತೆ ಇದನ್ನು ಬರೆದಿರುವುದನ್ನು ಬಿಟ್ಟರೆ ವೈಟ್ ಟೈಗರ್ = ಹಳೇ ಹಿಂದಿ ಸಿನೆಮಾದ ಕಥೆ + ತಮಿಳು ಸಿನೆಮಾದ ಕ್ಲೈಮಾಕ್ಸ್ ! ಕನ್ನಡದಲ್ಲಿ ಇಂಥದ್ದು ನೂರಾರು ಬಂದು ಹೋಗಿವೆ. ಆದರೂ ಕೂಡ ನಮ್ಮವರಿಗೆ ಇದು ಅದ್ಭುತ ಕಥೆಯುಳ್ಳ, ಅದ್ಭುತ ಪಾತ್ರಗಳುಳ್ಳ ಕಾದಂಬರಿ. ಕಾರಣ ’ಬೂಕರ್ ’. ಕೆಲದಿನಗಳ ಹಿಂದೆ ಉತ್ತರ ಭಾರತದ ಸಾಹಿತಿಯೊಬ್ಬರಿಗೆ ಜ್ಞಾನಪೀಠ ಬಂದಿತ್ತು. ಸ್ವಲ್ಪ ಅವರ ವಿಷಯ ತಿಳಿದುಕೊಳ್ಳೋಣ, ಅವರ ಕೃತಿಗಳ ಪರಿಚಯ ಮಾಡಿಕೊಳ್ಳೋಣ ಅಂತ ಹುಡುಕಿದರೆ.. ಉಹುಂ.. ಒಬ್ಬರದ್ದೂ ಅದರ ಬಗ್ಗೆ ಮಾತೇ ಇಲ್ಲ. ಅದೇ ಅರವಿಂದ ಅಡಿಗನ ಬಗ್ಗೆ ಹುಡುಕಿದರೆ ಅವ ಯಾವ ಪರ್ಫ್ಯೂಮ್ ಹಾಕುತ್ತಾನೆ ಎಂಬ ವಿಷಯ ಕೂಡ ಸಿಗಬಹುದೇನೋ! ಹೀಗೆಯೇ ಅರುಂಧತಿ ರಾಯ್ ಪುಸ್ತಕ ಕೂಡ ಒಂದು ಸಾಧಾರಣ ಮಟ್ಟಿಗೆ ಇದ್ದರೂ ಕೂಡ ಪ್ರಶಸ್ತಿ ಕಾರಣದಿಂದಲೇ ಅವರನ್ನು ’ಬುದ್ಧಿಜೀವಿ’ ವರ್ಗಕ್ಕೆ ಸೇರಿಸುವುದರಲ್ಲಿ ನಮ್ಮ ದೇಶದ ಮಾಧ್ಯಮಗಳ ಪಾತ್ರ ಹಿರಿದು. ಬೂಕರ್ ಎಂದರೆ ಜಗತ್ತಿನ ಸಾಹಿತ್ಯ ಲೋಕದ ಪರಮೋಚ್ಛ ಪ್ರಶಸ್ತಿ ಎಂಬಂತೆ ಮಾಧ್ಯಮಗಳು ಪ್ರಚಾರ ಕೊಡುತ್ತವೆ. ಆದರೆ ವಾಸ್ತವ ಅದಲ್ಲ.

************

ಅದ್ಯಾಕೋ ಗೊತ್ತಿಲ್ಲ, ಭಾರತೀಯರಿಗೆ ಮೊದಲಿಂದಲೂ ’ಫಾರಿನ್ ’ಗೆ ಹೋಗುವುದು ಅಂದರೆ ಅದು ಸಾಧನೆ, ಫಾರಿನ್ ಎಂದರೆ ದೇವಲೋಕ, ಅಲ್ಲಿಂದ ಗುರುತಿಸಲ್ಪಡುವುದು ಮೋಕ್ಷ ಪಡೆದಂತೆ ಎಂಬ ಭಾವನೆ. ಅದರಂತೆಯೇ ಆಸ್ಕರ್ ಪ್ರಶಸ್ತಿಗಾಗಲೀ, ಗೋಲ್ಡನ್ ಗ್ಲೋಬ್ ಗಾಗಲೀ, ಬೂಕರ್ ಗಾಗಲೀ ಮಾನದಂಡವೇನು, ಅದು ನಿಜವಾಗಿಯೂ ಜಾಗತಿಕ ಮಟ್ಟದ ಶ್ರೇಷ್ಠ ಪ್ರಶಸ್ತಿಗಳಾ ಎಂದು ತಲೆಕೆಡಿಸಿಕೊಳ್ಳದ ನಾವು ಅದನ್ನು ಜೀವಮಾನದ ಸಾಧನೆ ಎಂಬಂತೆ ಬಿಂಬಿಸಿ, ಆ ಕೃತಿಗಳನ್ನು ಅನಗತ್ಯವಾಗಿ ಮೆರೆಸಿ, ಅದನ್ನು ಪಡೆದವರನ್ನು ಭಾರತದಲ್ಲಿ ವಿಜೃಂಭಿಸಿ ಮಹತ್ವ ಕೊಟ್ಟುಬಿಡುತ್ತೇವೆ. ಒಟ್ಟಿನಲ್ಲಿ ಎಲ್ಲರೂ ಪಶ್ಚಿಮವೆಂಬ ಶಂಖದಿಂದ ಬಂದದ್ದೇ ತೀರ್ಥವೆಂದು ಕುಡಿದು ಕೈ ತಲೆಗೊರಸಿಕೊಂಡು ಧನ್ಯರಾಗಿಬಿಡುತ್ತೇವೆ.!

***************

ಸುಮ್ನೆ ಕ್ರಿಟಿಸಿಸಂ ಬರಿಯಕ್ಕೆ ಹೋಗ್ಬೇಡ ಅಂತ ಹತ್ತಿರದವರು ಹೇಳಿದ್ರು, ಆದರೂ ಬರೆದುಬಿಟ್ಟೆ.. ಇದು ಜನವರಿ ಕೋಟಾ!