ಮಂಗಳವಾರ, ಮಾರ್ಚ್ 31, 2009

ಉದ್ಯಮಿಯ ಕಣ್ಣಲ್ಲಿ ಹೊಳೆಯುವ ಇಂಡಿಯಾ


ಇದುವರೆಗೂ ರಾಜಕಾರಣಿಗಳು, ವಿಚಾರವಾದಿಗಳು, ಧಾರ್ಮಿಕರು ಭಾರತವನ್ನು, ಭಾರತದ ಭವಿಷ್ಯವನ್ನು ಹಲವಾರು ರೀತಿ ಊಹಿಸಿಕೊಂಡಿರಬಹುದು. ಆದರೆ ಉದ್ಯಮಿಯೊಬ್ಬರ ಊಹೆಯ ಭಾರತ ಹೇಗಿರುತ್ತದೆ ಎಂಬ ಕಲ್ಪನೆ ಹೊಸದು. ಇದೇ ಕುತೂಹಲದಿಂದ ಕೈಗೆತ್ತಿಕೊಂಡಿದ್ದು ದೇಶದ ಪ್ರತಿಷ್ಠಿತ ಕಂಪನಿ ಇನ್ಫೊಸಿಸ್ ನ ಮುಖ್ಯಸ್ಥರಲ್ಲೊಬ್ಬರಾದ ನಂದನ್ ನೀಲೇಕಣಿಯವರಿಂದ ಇತ್ತೀಚೆಗೆ ಬರೆಯಲ್ಪಟ್ಟ ಪುಸ್ತಕ ’ಇಮ್ಯಾಜಿನಿಂಗ್ ಇಂಡಿಯಾ’.


’ಐಡಿಯಾಸ್ ಫಾರ್ ದಿ ನ್ಯೂ ಸೆಂಚುರಿ(ಹೊಸ ಶತಮಾನಕ್ಕೆ ವಿಚಾರಗಳು)’ ಎಂಬ ಅಡಿಬರಹದ ಈ ಪುಸ್ತಕದಲ್ಲಿ ನಂದನ್ ನೀಲೇಕಣಿಯವರು ವಿವಿಧ ಮಾಹಿತಿಗಳೊಂದಿಗೆ ಭಾರತವನ್ನು ಒಂದು ಭರವಸೆಯ ದೇಶವಾಗಿ ವಿಶ್ಲೇಷಿಸುತ್ತಾ ಹೋಗುತ್ತಾರೆ. ಭಾರತವು ಸ್ವಾತಂತ್ರ್ಯಾ ನಂತರ ಬೆಳೆದು ಬಂದ ರೀತಿ, ಭಾರತದ ಸಾಮಾಜಿಕ, ರಾಜಕೀಯ ಬದಲಾವಣೆಗಳು, ಜಗತ್ತು ಗುರುತಿಸುವ ದೇಶವಾಗಿ ಹೊರಹೊಮ್ಮಿದ ರೀತಿಯ ಜೊತೆಗೆ ಒಂದು ಅತ್ಯುತ್ತಮ ಮಾನವ ಸಂಪನ್ಮೂಲವುಳ್ಳ ದೇಶವಾಗಿ ಈ ಶತಮಾನದ ಮುಂದಿನ ವರ್ಷಗಳು ಭಾರತದ್ದೇ ಆಗಿರುತ್ತವೆ ಎಂಬ ವಿಶಿಷ್ಟ ಆಶಾಭಾವನೆಯನ್ನು ಮೂಡಿಸುತ್ತದೆ ಪುಸ್ತಕ. ಬರೀ ಭಾರತದಲ್ಲಿರುವ ಸಮಸ್ಯೆಗಳನ್ನು ಮಾತ್ರ ಗುರುತಿಸಿ ಟೀಕಿಸುವ ಕೆಲಸ ಮಾಡದೇ ಪ್ರತಿಯೊಂದಕ್ಕೂ ಸಕಾರಾತ್ಮಕವಾದ ಉಪಾಯಗಳನ್ನು ಯೋಚಿಸಿರುವುದು, ಆ ನಿಟ್ಟಿನಲ್ಲಿ ವಿಚಾರಗಳನ್ನು ಮಂಡಿಸಿರುವುದು ಈ ಪುಸ್ತಕದ ವಿಶೇಷ. ನೀಲೇಕಣಿಯವರು ಭಾರತದ ಜನಸಂಖ್ಯೆಯನ್ನು ಹೇಗೆ ಲಾಭಕರವಾಗಿ ಬಳಸಿಕೊಂಡು ಅಭಿವೃದ್ಧಿ ಹೊಂದಬಹುದೆಂದು ತಿಳಿಸುತ್ತಾರೆ. ಜನಸಂಖ್ಯಾ ಶಾಸ್ತ್ರದ ಪ್ರಕಾರ ಇನ್ನು ಕೆಲವು ದಶಕಗಳಲ್ಲಿ ವರ್ಷಗಳಲ್ಲಿ ಭಾರತವು ಜಗತ್ತಿನಲ್ಲಿ ಅತಿಹೆಚ್ಚು ಯುವಜನಾಂಗವನ್ನು ಹೊಂದಿದ ದೇಶವಾಗಲಿದ್ದು ಇಡೀ ಜಗತ್ತಿಗೆ ಭಾರತವೆಂಬುದು ಒಂದು ಅನಿವಾರ್ಯ ಎಂಬ ಪರಿಸ್ಥಿತಿಯ ಸೃಷ್ಟಿಯ ಬಗ್ಗೆ ಹೇಳುತ್ತಾರೆ. ಈ ದೇಶದ ಮಕ್ಕಳಿಗೆ, ಯುವಕರಿಗೆ ಮೂಲಭೂತ ಸೌಕರ್ಯಗಳಿಂದ ಹಿಡಿದು, ಉನ್ನತ ವಿದ್ಯಾಭ್ಯಾಸ ಮುಂತಾದ ಸಂಪನ್ಮೂಲಗಳು ಎಟುಕುವಂತೆ ಮಾಡುವುದು ಅಗತ್ಯ ಎಂಬುದನ್ನು ಪುಸ್ತಕದಲ್ಲಿ ಪ್ರತಿಪಾದಿಸುತ್ತಾ ಹೋಗುತ್ತಾರೆ. ಖಂಡಿತ ಇದು ಇನ್ಪೋಸಿಸ್ ಹುಟ್ಟು, ಬೆಳವಣಿಗೆ, ಯಶೋಗಾಥೆಯ ಪುಸ್ತಕವಲ್ಲ.

’ಆಕಸ್ಮಿಕ ಉದ್ಯಮಿಯಿಂದ ಟಿಪ್ಪಣಿಗಳು’ ಎಂಬ ಮುನ್ನುಡಿಯಲ್ಲಿ "ನಿಮಗೆ ಇನ್ಪೋಸಿಸ್ ಒಳಗೆ ಇಷ್ಟು ಚಂದದ ರಸ್ತೆಗಳನ್ನು ಮಾಡಲು ಸಾಧ್ಯವಾದರೆ ಅದು ಹೊರಗೆ ಏಕೆ ಸಾಧ್ಯವಾಗಿಲ್ಲ" ಎಂಬ ವಿದೇಶೀಯನೊಬ್ಬನ ಪ್ರಶ್ನೆಯಿಂದಲೇ ಶುರುಮಾಡುತ್ತಾರೆ. ಇಲ್ಲಿನ ರಾಜಕೀಯ ವ್ಯವಸ್ಥೆಯ ಸಂಕೀರ್ಣತೆಗಳನ್ನು ತಿಳಿಸುತ್ತಾರೆ. ಚುನಾವಣೆಯ ವಿಷಯಕ್ಕೆ ಬಂದಾಗ ಇಲ್ಲಿ ಗೆಲ್ಲುವುದಷ್ಟೆ ಮುಖ್ಯವಾಗುವುದರಿಂದ ಒಬ್ಬ ಉದ್ಯಮಿಯಾಗಿ ರಾಜಕೀಯ ಕ್ಷೇತ್ರದ ಬಗ್ಗೆ ಬಹಳಷ್ಟು ಅರಿವಿದ್ದರೂ ಕೂಡ ತನ್ನಂತವರು ಈ ವ್ಯವಸ್ಥೆಯಲ್ಲಿ ’ಚುನಾಯಿತ’ರಾಗಲು ಅರ್ಹತೆಗಳಿಲ್ಲದಿರುವುದೇ ಕಾರಣ ಎಂಬ ಮಾತುಗಳು ಯೋಚನೆಗೆ ಹಚ್ಚುತ್ತವೆ. ನೆಹರು, ಇಂದಿರಾ ಯುಗ , ಭಾರತದಲ್ಲಿ ಜನಸಂಖ್ಯೆ ನಿಯಂತ್ರಣದ ವಿಫಲತೆ, ಕೈಗಾರಿಕೀಕರಣ, ಮತಬ್ಯಾಂಕ್ ರಾಜಕೀಯ , ಜಾತಿ, ಮೀಸಲಾತಿ ಮುಂತಾದ ರಾಜಕೀಯ, ಇತಿಹಾಸ, ಸಾಮಾಜಿಕ, ಆರ್ಥಿಕ ಸ್ಥಿತಿಗತಿಗಳ ಸಂಕ್ಷಿಪ್ತ ವಿವರಣೆಯಿದ್ದು ಇತಿಹಾಸ ಕಾಲದಿಂದ ಈಗಿನವರೆಗೆ ಇಡೀ ಭಾರತದ ಬಗ್ಗೆ ಒಂದು ಸಮಗ್ರ ಚಿತ್ರಣವನ್ನು ಕಟ್ಟಿಕೊಡುತ್ತದೆ.

ಪುಸ್ತಕವು ನಾಲ್ಕು ಭಾಗಗಳನ್ನೊಳಗೊಂಡಿದೆ.

ಮೊದಲನೆಯ ಭಾಗವು ಬದಲಾದ ಭಾರತದ ಪ್ರಸ್ತುತ ಚಿತ್ರಣವನ್ನು ಒಳಗೊಂಡಿದೆ. ಇವತ್ತಿನ ಬದಲಾದ ಪರಿಸ್ಥಿತಿಯಲ್ಲಿ ಉದ್ಯಮಿಯಾಗಲು ಇರುವ ಮುಕ್ತ ಅವಕಾಶಗಳು, ಇಂಗ್ಲಿಷ್ ಭಾಷೆಯ, ಶಿಕ್ಷಣದ ಅಗತ್ಯತೆ, ಭಾರತದ ಮಾರುಕಟ್ಟೆಯನ್ನು ಜಗತ್ತಿಗೆ ತೆರೆದಿಡುವಿಕೆ ಮುಂತಾದ ವಿಷಯಗಳಿವೆ. ಭಾರತದಲ್ಲಿ ಜನ ಈಗ ಏನನ್ನು ಬಯಸುತ್ತಿದ್ದಾರೆ, ಎಷ್ಟೆಲ್ಲಾ ಸಾಂಸ್ಕೃತಿಕ, ಸಾಮಾಜಿಕ ವ್ಯತ್ಯಾಸಗಳ ನಡುವೆಯೂ ಇವತ್ತು ದೇಶದ ಜನರಲ್ಲಿ, ಕೊನೇಪಕ್ಷ ನಗರದ ಮತ್ತು ಮಧ್ಯಮ ವರ್ಗದ ಜನರಲ್ಲಿ ಒಂದು ಅನಿವಾರ್ಯ ಬಹುಮತವಿರುವಂತಹ ವಿಚಾರಗಳಿವೆ.

ಎರಡನೇಯ ಮತ್ತು ಮೂರನೆಯ ಭಾಗಗಳಲ್ಲಿ ಭಾರತದಲ್ಲಿ ಯಾವ ಯಾವ ಕ್ಷೇತ್ರಗಳಲ್ಲಿ ಬದಲಾವಣೆಗಳು ಆಗುತ್ತಿವೆ, ಬೆಳವಣಿಗೆಗಳು ಆಗಬೇಕಿದೆ ಎಂಬ ವಿಷಯವಿದೆ. ಸಾಕ್ಷರತೆ, ನಗರೀಕರಣ, ಇನ್ಫ್ರಾಸ್ಟ್ರಕ್ಚರ್, ಸಾರಿಗೆ, ದೂರಸಂಪರ್ಕ ಮುಂತಾದ ವಿಚಾರಗಳ ಬಗ್ಗೆ ಹೇಳಲಾಗಿದೆ. ಭಾರತವು ಮಾಹಿತಿ ತಂತ್ರಜ್ಞಾನಕ್ಕೆ ತೆರೆದುಕೊಂಡ ಬಗೆ , ಮಾಹಿತಿ ತಂತ್ರಜ್ಞಾನದ ಉಪಯೋಗ ಪಡೆದುಕೊಂಡ ಕ್ಷೇತ್ರಗಳು, ನಗರಗಳ ಬೆಳವಣಿಗೆಯ ಪ್ರಾಮುಖ್ಯತೆಯೊಂದಿಗೆ ಭಾರತವು ಇನ್ನು ಬರೀ ಹಳ್ಳಿಗಳ ದೇಶವಾಗಿ ಉಳಿದಿಲ್ಲ ಎಂಬ ಅನಿವಾರ್ಯ ಸತ್ಯದ ವಿಷಯಗಳಿವೆ. ಜೊತೆಗೆ ಮೀಸಲಾತಿ, ಎಡಬಲ ಸಿದ್ಧಾಂತಗಳು, ಬಣಗಳು, ವಿಶೇಷ ಆರ್ಥಿಕ ವಲಯದ ಪರ ವಿರೋಧಗಳು, ಕಾರ್ಮಿಕ ಸಂಘಟನೆ, ವಿಶ್ವವಿದ್ಯಾಲಯಗಳಲ್ಲಿನ ರಾಜಕೀಯ ಚಟುವಟಿಕೆಗಳು ಮುಂತಾದ ಭಾವನಾತ್ಮಕ ಸಂಘರ್ಷಗಳನ್ನೊಳಗೊಂಡ ಮತ್ತು ಒಮ್ಮತವಿಲ್ಲದ ವಿಚಾರಗಳು ಚರ್ಚಿಸಲ್ಪಟ್ಟಿವೆ.

ನಾಲ್ಕನೆಯ ಭಾಗವು ಭಾರತದ ಬಹಳಷ್ಟು ಸಮಸ್ಯೆಗಳ ಪರಿಹಾರ, ಸಮರ್ಥ ನಿಭಾಯಿಸುವಿಕೆಯ ಉಪಾಯಗಳೊಂದಿಗೆ ಅಭಿವೃದ್ಧಿಯ ಗುರಿಯು ದೂರದಲ್ಲಿ ಇಲ್ಲ ಎಂಬ ಭಾವನೆಯನ್ನು ತುಂಬುತ್ತದೆ. ಇದು ಬಹುಮುಖ್ಯವಾಗಿ ಮಾಹಿತಿ ತಂತ್ರಜ್ಞಾನವನ್ನು ಸರಿಯಾಗಿ ಬಳಸಿಕೊಂಡು ಪ್ರಗತಿ ಹೊಂದಬಹುದು ಎಂದು ತಿಳಿಸಿಕೊಡುತ್ತದೆ. ಮಾಹಿತಿ ತಂತ್ರಜ್ಞಾನ ಎಂಬುದು ಬರೀ ವೈಭೋಗಕ್ಕಲ್ಲದೇ ಪ್ರತಿಯೊಂದಕ್ಕೂ ಪರಿಹಾರವಾಗಬಲ್ಲುದು ಎಂಬುದಕ್ಕೆ ಯಶಸ್ವಿ ’ಭೂಮಿ’ ಯೋಜನೆಯ ಉದಾಹರಣೆ ಕೊಡಲಾಗಿದೆ. ಪ್ರತಿಯೊಬ್ಬನಿಗೂ ನಿರ್ದಿಷ್ಟ ಗುರುತಿನ ಸಂಖ್ಯೆಯ (ನ್ಯಾಷನಲ್ ಐ.ಡಿ. ಸಿಸ್ಟಮ್) ಅನುಷ್ಠಾನ ಅತಿ ಅಗತ್ಯವಾಗಿ ಆಗಬೇಕಿದೆ ಎಂದು ತಿಳಿಸಿಕೊಡುತ್ತದೆ. ಇದು ಎಲ್ಲಾ ಯೋಜನೆಗಳೂ ಯಶಸ್ವಿಯಾಗಲು, ಯಾವ ಸಂಪನ್ಮೂಲವೂ ದುರುಪಯೋಗವಾಗದೇ ತಲುಪಬೇಕಾದವರನ್ನು ತಲುಪಲು, ಆರೋಗ್ಯ, ಕಾರ್ಮಿಕನಿಧಿ, ಪಿಂಚಣಿ ಮೊದಲಾದ ಸಾಮಾಜಿಕ ಭದ್ರತೆ ಒದಗಿಸಲು ಸಹಾಯಕಾರಿಯಾಗಬಲ್ಲುದು ಎಂಬುದನ್ನು ವಿವರಿಸಿದ್ದಾರೆ. ಪರಿಸರವನ್ನು ಕಾಯ್ದುಕೊಂದು, ವಿದ್ಯುತ್ ಮುಂತಾದ ಶಕ್ತಿ ಕ್ಷೇತ್ರಗಳಲ್ಲಿ ಸ್ವಾವಲಂಬನೆ ಪಡೆದುಕೊಂಡಾಗ ದೇಶದ ಅಭಿವೃದ್ಧಿ ಸಾಧ್ಯ ಎಂಬುದಕ್ಕೆ ಸೂತ್ರಗಳನ್ನು ಒದಗಿಸಲಾಗಿದೆ. ಎಲ್ಲಾ ಯೋಜನೆಗಳೂ ಪ್ರತಿ ಮೂಲೆಯ ಹಳ್ಳಿಯಲ್ಲಿನ ಪ್ರತಿಯೊಬ್ಬರಿಗೂ ತಲುಪಲು ಒಂದು ಸಮರ್ಥ ಜಾಲದ ಅವಶ್ಯಕತೆ, ದೇಶದ ಮೂಲೆಯಲ್ಲಿನ ಪ್ರತಿಭೆಗಳನ್ನೂ ಕೂಡ ಮುಖ್ಯವಾಹಿನಿಯಲ್ಲಿ ಗುರುತಿಸಿ ಬೆಳೆಸುವ ವಾತಾವರಣ, ಸರಿಯಾದ ಕಾರ್ಯನೀತಿಗಳ ಜಾರಿ ಇನ್ನಿತರ ಕೆಲಸಗಳಿಂದ ಭಾರತದ ಆರ್ಥಿಕತೆಯನ್ನು ಮೇಲ್ಮಟ್ಟಕ್ಕೆ ತೆಗೆದುಕೊಂಡು ಹೋಗಬಹುದು ಎಂಬ ಚಿಂತನೆಗಳಿವೆ.

ಇಡೀ ಪುಸ್ತಕವು ನೀಲೇಕಣೀಯವರ ಅಗಾಧ ಅಧ್ಯಯನ ಮತ್ತು ಅನನ್ಯ ಅನುಭವಗಳ ಫಲವಾಗಿ ಕಾಣುತ್ತದೆ. ಭಾರತದ ಕೊಳಕು, ಹುಳುಕುಗಳನ್ನು ಕೂಡ ದೂಷಣೆಯಲ್ಲದ ಧಾಟಿಯಲ್ಲಿ ಹೇಳಿರುವುದರಿಂದ ಓದಲು ಕಿರಿಕಿರಿಯಾಗುವುದಿಲ್ಲ. ಎಲ್ಲಾ ವಿಷಯಗಳನ್ನೂ ಸಾಮಾಜಿಕ, ಆರ್ಥಿಕ ಮತ್ತು ರಾಜಕೀಯ ಹಿನ್ನೆಲೆಯಿಂದ ವಿಶ್ಲೇಷಿಸಲಾಗಿದ್ದು ಅದಕ್ಕೆ ಪರಿಹಾರಗಳೂ ಕೂಡ ಅದರಲ್ಲೇ ಇರುವುದನ್ನು ತೋರಿಸಲಾಗಿದೆ. ಒಟ್ಟಿನಲ್ಲಿ ಇಡೀ ಪುಸ್ತಕವು ಭಾರತ ಕೇಂದ್ರೀಕೃತವಾಗಿ ಎಲ್ಲಾ ವಿಷಯಗಳನ್ನೂ ಕೂಡ ಒಳಗೊಂಡಿದ್ದು ಒಂದು ಒಳ್ಳೆಯ ಅಧ್ಯಯನ ಸಾಮಗ್ರಿಯಾಗಬಲ್ಲುದು. ಆದರೆ ಅಭಿವೃದ್ಧಿ, ಮಾಹಿತಿ ತಂತ್ರಜ್ಞಾನ, ಜಾಗತೀಕರಣ ಮುಂತಾದವುಗಳನ್ನು ಸಮರ್ಥಿಸಿಕೊಳ್ಳುವ ಭರದಲ್ಲಿ ಮತ್ತು ನಗರ ಆಧಾರಿತ ದೃಷ್ಟಿಯಲ್ಲಿ ಯೋಚಿಸಿದ ನಿಟ್ಟಿನಲ್ಲಿ ದೇಶದ ಬಹು ಅಗತ್ಯ ಕೃಷಿ ಕ್ಶೇತ್ರದ ಬೆಳವಣಿಗೆ ಬಗ್ಗೆ ಹೆಚ್ಚು ಒತ್ತು ನೀಡಲಾಗಿಲ್ಲ ಮತ್ತು ಭಾರತದ ಸಾಂಸ್ಕೃತಿಕ ನೆಲೆಗಟ್ಟನ್ನಾಗಲೀ, ಭಾರತೀಯ ಭಾಷೆಗಳ ಉಳಿಕೆ, ಬೆಳವಣಿಗೆಯನ್ನಾಗಲೀ ಗಣನೆಗೆ ತೆಗೆದುಕೊಂಡಿಲ್ಲ ಎಂದು ಅನ್ನಿಸುತ್ತದಾದರೂ ಕೂಡ ಆ ವಿಷಯಗಳು ಈ ಪುಸ್ತಕದ ವ್ಯಾಪ್ತಿಯಿಂದ ಹೊರಗಿನವು ಎಂದುಕೊಳ್ಳಬಹುದು. ಖುದ್ದು ನೀಲೇಕಣೀಯವರೇ ತಮ್ಮ ಪುಸ್ತಕದ ಮೊದಲಿನಲ್ಲಿ ಹೇಳಿಕೊಂಡಂತೆ ೫೦೦ ಚಿಲ್ಲರೆ ಪುಟಗಳ ಈ ಪುಸ್ತಕ ಖಂಡಿತ ಸಿನೆಮಾ, ಕ್ರಿಕೆಟ್ ನಂತಹ ರಂಜನೆಯ ವಿಷಯಗಳನ್ನು ಅಪೇಕ್ಷೇಪಡುವವರಿಗೆ ಅಲ್ಲವಾಗಿದ್ದು ಓದಲು ಅಪಾರವಾದ ಆಸಕ್ತಿ, ತಾಳ್ಮೆ ಬೇಡುತ್ತದೆ.

ಆದರೆ ಈ ರಿಸೆಷನ್ ಸಮಯದಲ್ಲಿ ಜಾಗತಿಕ ಮಾರುಕಟ್ಟೆ, ಸೇವೆಯನ್ನೇ ನಂಬಿಕೊಂಡು ಅಭಿವೃದ್ಧಿ ಹೊಂದಬಹುದೆಂಬ ಭಾವನೆ ಇಟ್ಟುಕೊಂಡು ಇದನ್ನು ಓದಿ ಆಶಾಭಾವನೆ ತಳೆಯಬೇಕೋ ಅಥವಾ ನೀಲೇಕಣಿಯವರಿಗೂ ಇದರ ಅರಿವಿರಲಿಲ್ಲ ಎಂದು ವ್ಯಥೆ ಪಡಬೇಕೋ ಎಂಬ ತೀರ್ಮಾನ ಓದುಗನಿಗೆ ಬಿಟ್ಟದ್ದು.!


(ಮಾರ್ಚ್ ೨೯, ೨೦೦೯ ಕನ್ನಡ(ಸಾಪ್ತಾಹಿಕ) ಪ್ರಭದ ’ಇಂಗ್ಲೀಷ್ ರೀಡರ್’ ಅಂಕಣ ಕ್ಕೆ ಬರೆದದ್ದು. )
.........................................................................

Off the record ತಕರಾರುಗಳು:


೧. ಕರ್ನಾಟಕದಲ್ಲಿ ಕನ್ನಡವನ್ನು ಆಡಳಿತ ಭಾಷೆಯನ್ನಾಗಿ ಘೋಷಿಸುವುದನ್ನು, ತಮಿಳುನಾಡಿನಲ್ಲಿ ಶಿಕ್ಷಣದಲ್ಲಿ ತಮಿಳು ಭಾಷೆ ಕಡ್ಡಾಯ ಮಾಡುವುದನ್ನು ’language chauvinism'(ದುರಭಿಮಾನ, ಅತ್ಯಭಿಮಾನ) ಎನ್ನುತ್ತಾರೆ.
೨. ಬ್ರಿಟಿಷ್ ವೈಸ್ ರಾಯ್ ಗಳನ್ನು ಇನ್ನೂ ’Lord' ಎಂಬ ಗೌರವದೊಂದಿಗೆ ಸಂಬೋಧಿಸುತ್ತಾರೆ !
೩. ನಕ್ಸಲರು, ಭಜರಂಗದಳಗಳು ನಿರುದ್ಯೋಗಿ ಜನರಿಂದ ರೂಪುಗೊಂಡ left and right extremist organisation ಗಳು ಎನ್ನುತ್ತಾರೆ.
.............................................................................

ಸೋಮವಾರ, ಮಾರ್ಚ್ 23, 2009

ಶಿವಗಂಗೆ ಹಾಗೂ ನಂದಿಬೆಟ್ಟದ ಮಂಗಗಳು

"ಇಲ್ಲಿ ಸುತ್ತ ಮುತ್ತ ಬರೀ ಮಂಗಗಳ ಕಾಟ ಸಾರ್, ಏನೂ ಬೆಳೆಯಕ್ಕೆ ಆಗಲ್ಲ, ತೋಟ ಮಾಡಕ್ಕೆ ಆಗಲ್ಲ" ಎಂದು ತುಮಕೂರು ರಸ್ತೆಯಲ್ಲಿ ಒಬ್ಬರು ಹಳ್ಳಿಯವರು ಗೋಳಿಟ್ಟುಕೊಂಡಾಗ ಪರಿಸ್ಥಿತಿಯ ಅರಿವು ಅಷ್ಟಾಗಿ ಆಗಿರಲಿಲ್ಲ. ನಮ್ಮೂರಿನ ಕಡೆ ತೋಟಗಳಿಗೆ ಆಗಾಗ ಮಂಗಗಳು ಬರುವುದುಂಟು. ಅವು ಬಂದರೆ ಒಂದು ಗುಂಪಾಗಿ ಬರುತ್ತವೆ, ಸ್ವಲ್ಪ ಹೊತ್ತು ಅಲ್ಲೆ ಹಾರಾಡಿ ಕಿರುಚಾಡಿ ಕೈಗೆ ಸಿಕ್ಕಿದ್ದನ್ನು ಕಿತ್ತು ತಿಂದು ಹಾಗೆಯೇ ಮುಂದೆ ಹೋಗಿಬಿಡುತ್ತವೆ. ಹಾಗೂ ಕೂಡ ಅವುಗಳ ಕಾಟ ಜಾಸ್ತಿ ಆದರೆ ಶಬ್ದ ಮಾಡಿಯೋ, ಪಟಾಕಿ ಸಿಡಿಸಿಯೋ, ಹುಸಿ ಗುಂಡು ಹಾರಿಸಿಯೋ ಓಡಿಸಿಬಿಡುತ್ತಾರೆ. ಆದರೆ ಮನುಷ್ಯನ ಬಳಕೆ , ಅಭ್ಯಾಸ ಒಮ್ಮೆ ಆಗಿಬಿಟ್ಟರೆ ಅವುಗಳನ್ನು ಸಹಿಸುವುದೇ ಕಷ್ಟವಾಗಿಬಿಡುತ್ತದೆ ಎಂದು ತಿಳಿದಿದ್ದು ನನಗೆ ಶಿವಗಂಗೆ ಬೆಟ್ಟ ಮತ್ತು ನಂದಿಬೆಟ್ಟಗಳಲ್ಲಿ.

ಶಿವಗಂಗೆ ಬೆಟ್ಟ ಹತ್ತುವಾಗ ಈ ಮಂಗಗಳ ಜೊತೆ ಏಗುವುದೇ ಒಂದು ವಿಶಿಷ್ಟ ಅನುಭವ. ಹತ್ತುವಾಗ ಸೌತೆಕಾಯಿ, ಮಜ್ಜಿಗೆ, ಚುರುಮುರಿ ಮಾರಾಟ ಮಾಡುವವರೆಲ್ಲರೂ ಕೂಡ ಜೊತೆಗೆ ಒಂದು ನಾಯಿಯನ್ನು ಇಟ್ಟುಕೊಂಡಿರುತ್ತಾರೆ. "ಏನ್ ಮಾಡೋದು , ಮಂಗನ ಕಾಟ, ನಾಯಿ ಇದ್ರೆ ಅವು ಹತ್ರಕ್ಕೆ ಬರಲ್ಲ" ಅನ್ನುತ್ತಾರೆ. ಬೆಟ್ಟ ಹತ್ತುವಾಗ ಮೊದಲು ಸ್ವಲ್ಪ ದೂರ ಮಂಗಗಳ ಸುಳಿವು ಅಷ್ಟೆನೂ ಇರುವುದಿಲ್ಲ. ಮೇಲೆ ಹತ್ತುತ್ತಾ ಹೋದಂತೆ ಒಂದೊಂದೇ ಮಂಗಗಳು ಕಾಣಿಸಿಕೊಳ್ಳುತ್ತವೆ. ದೂರದಿಂದಲೇ ಅವು ಹತ್ತುತ್ತಿರುವವರ ಕೈಯಲ್ಲಿ ಏನಾದರೂ ಸಾಮಾನು ಇದೆಯಾ ಎಂದು ಗುರುತಿಸಿಕೊಳ್ಳುತ್ತವೆ. ಕೈಯಲ್ಲಿ ಪ್ಲಾಸ್ಟಿಕ್ ಕವರ್ ಇದ್ದರಂತೂ ಮುಗಿದೇ ಹೋಯಿತು, ಅದರಲ್ಲಿ ಖಾತ್ರಿಯಾಗಿ ತಿಂಡಿ ಇದೆ ಎಂದು ತಿಳಿದುಕೊಂಡುಬಿಡುತ್ತವೆ ಅವು. ಅದರಲ್ಲೂ ಅವುಗಳ ಮೊದಲ ಗುರಿ ಮಕ್ಕಳು ಮತ್ತು ಹೆಂಗಸರು. ಎಲ್ಲಿಂದಲೋ ಸುಯ್ಯನೇ ಓಡಿ ಬಂದ ಮಂಗವೊಂದು ಮಕ್ಕಳ ಕೈಯಲ್ಲಿದ್ದ ತಿಂಡಿಯನ್ನು ಕಿತ್ತುಕೊಂಡು ಓಡಿಬಿಡುತ್ತದೆ. ಏನಾಯಿತೆಂದು ಗೊತ್ತಾಗುವಷ್ಟರಲ್ಲಿ ಮರದ ಮೇಲಿರುತ್ತದೆ! ಒಂದು ವೇಳೆ ಅದು ಓಡಿ ಬರುವುದನ್ನು ನೋಡಿದರೂ ಕೂಡ ಭಯದಿಂದ ಮಕ್ಕಳು ಕಿರುಚಿಕೊಳ್ಳುತ್ತಿರುವಾಗಲೇ ಕೈಯಲ್ಲಿದ್ದ ಸಾಮಾನು ಮಂಗನ ಪಾಲಾಗಿರುತ್ತದೆ. ಹೆಂಗಸರೂ ಕೂಡ ಹೆದರಿಕೊಳ್ಳುವವರು ಎಂದು ಅವುಗಳಿಗೆ ಯಾವಾಗಲೋ ಗೊತ್ತಾಗಿಬಿಟ್ಟಂತಿದೆ. ನಾವು ಬೆಟ್ಟ ಹತ್ತುವಾಗ ಒಬ್ಬರ ವ್ಯಾನಿಟಿ ಬ್ಯಾಗಿಗೆ ಮಂಗವೊಂದು ಬಂದು ಜೋತು ಬಿತ್ತು. ಅದು ಕಡಿದಾದ ಏರಿನ ಜಾಗ. ಆ ಹೆಣ್ಣುಮಗಳು ಪಾಪ ಸುಮಾರು ಹೊತ್ತು ಜಗ್ಗಾಡಿ ಕೊನೆಗೂ ತನ್ನ ವ್ಯಾನಿಟಿ ಬ್ಯಾಗನ್ನು ಬಿಟ್ಟುಕೊಡಬೇಕಾಯಿತು. ಹಾಗಂತ ಗಂಡಸರಿಗೆ ಏನೂ ಮಾಡುವುದಿಲ್ಲ ಎಂದುಕೊಳ್ಳುವ ಹಾಗಿಲ್ಲ. ಗಂಡಸರ ಕೈಲಿದ್ದ ಸಾಮಾನುಗಳಿಗೆ ಒಂಟಿಯಾಗಿ ಹೋಗಿ ಕಿತ್ತುಕೊಳ್ಳುವುದು ಸ್ವಲ್ಪ ಅಪಾಯ ಎಂದು ಅವು ಅರಿತಿವೆ. ಗಂಡಸರು ಕೋಲು ತೆಗೆದುಕೊಂಡು ಬಾರಿಸಿಬಿಡುತ್ತಾರೆ ಎಂಬ ಭಯ ಇರಬಹುದು. ಅದಕ್ಕಾಗಿ ನಾಲ್ಕೈದು ಮಂಗಗಳು ಒಟ್ಟಾಗಿ ಧಾಳಿ ಇಡುತ್ತವೆ. ದೊಡ್ಡ ಗಡವ ಮಂಗಗಳಾದರೆ ನಾಲ್ಕೂ ಕಡೆಯಿಂದಲೂ ಸುತ್ತುವರೆದು ಹಲ್ಲು ತೋರಿಸಿ ಹೆದರಿಸಿ ಕೈಯಲಿದ್ದುದನ್ನು ಕಿತ್ತುಕೊಂಡು ಹೋಗುತ್ತವೆ. ಸಣ್ಣ ಮಂಗಗಳು ಗಮನವನ್ನು ಬೇರೆಡೆ ಸೆಳೆದು ಒಂದನ್ನು ಓಡಿಸುತ್ತಿದ್ದಾಗ ಇನ್ನೊಂದು ಬಂದು ಕಿತ್ತುಕೊಂಡು ಓಡಿಹೋಗುತ್ತದೆ! ನಾಲ್ಕು ಮಂಗಗಳು ಒಟ್ಟಿಗೆ ಬಂದ ಮೇಲೆ ಮುಗಿದೇ ಹೋಯಿತು, ಕೈಯಲ್ಲಿದ್ದುದನ್ನು ಕೊಡಲೇ ಬೇಕು. ಏನು ಕಿರುಚಿದರೂ, ಏನು ಹೆದರಿಸಿದರೂ, ಹೊಡೆಯಲು ಹೋದರೂ ಜಪ್ಪಯ್ಯ ಅನ್ನುವುದಿಲ್ಲ. ಅವುಗಳಿಗೆ ನಾವೇ ಹೆದರಿ ಒಪ್ಪಿಸಿಬಿಡುವಂತಹ ಸನ್ನಿವೇಶ ಬಂದುಬಿಡುತ್ತದೆ. ತೀರ ಕೋಲಿನಲ್ಲಿ ಹೊಡೆದೋ, ಕಲ್ಲು ತೂರಿಯೋ ಹೆದರಿಸಲು ನೋಡಿದರೆ ಅವುಗಳಿಂದ ಪರಚಿಸಿಕೊಳ್ಳುವುದು ಗ್ಯಾರಂಟಿ!

ಇಲ್ಲಿನ ಮಂಗಗಳು ನೀರಿನ ಬಾಟಲಿಯನ್ನು ಮಾತ್ರ ಮುಟ್ಟುವುದಿಲ್ಲ. ಅವಕ್ಕೆ ಮಿರಿಂದಾ, ಪೆಪ್ಸಿ, ಕೋಲಾಗಳೇ ಇಷ್ಟ. ಬಾಟಲಿಯಲ್ಲಿ ಬಣ್ಣದ ನೀರು ಕಂಡರೆ ಸಾಕು ಅವಕ್ಕೆ ಸ್ಕೆಚ್ ಹಾಕಿ ಕಿತ್ತುಕೊಂಡು ಓಡುವವರೆಗೂ ಅವಕ್ಕೆ ಸಮಾಧಾನವಿರುವುದಿಲ್ಲ. ನಾವು ಬೆಟ್ಟ ಹತ್ತುವಾಗ ಹೇಗಾದರೂ ಚೀಲದಲ್ಲಿದ್ದ ಒಂದು ಫ್ರೂಟಿ ಕುಡಿದುಬಿಡೋಣ ಎಂದು ಒಂದು ಕಲ್ಲು ಮಂಟಪದ ಒಳಗೆ ಕೂತೆವು. ಯಾರಿಗೂ ಕಾಣಿಸುತ್ತಿಲ್ಲ ಎಂಬ ಧೈರ್ಯ ನಮ್ಮದಾಗಿತ್ತು. ಇನ್ನೇನು ಚೀಲ ತೆಗೆಯುತ್ತಲೇ ಅದೆಲ್ಲಿತ್ತೋ ಒಂದು ಮಂಗ ಹಟಾತ್ತನೆ ಬಂದು ಗುರುಗುಡಲಾರಂಭಿಸಿತು. ಮತ್ತೆ ಬಾಟಲಿಯನ್ನು ಚೀಲದೊಳಗೆ ತುರುಕಿಕೊಂಡು ಹೊರಡಲು ನೋಡಿದರೆ ಆ ಬಾಟಲಿಯನ್ನು ಕೊಡದೇ ಇಲ್ಲಿಂದ ಹೋಗಲು ಬಿಡುವುದಿಲ್ಲ ಎಂಬಂತೆ ಮತ್ತೆರಡು ಮಂಗಗಳು ಧಾಳಿಗೆ ಸಜ್ಜಾಗಿ ನಿಂತಿದ್ದವು. ನಮ್ಮ ಯಾವ ಬೆದರಿಕೆಗೂ ಬಗ್ಗದೇ ಚೀಲವನ್ನು ಕೈಯಿಂದ ಕಿತ್ತುಕೊಂಡು ಅದರಲ್ಲಿದ್ದ ಫ್ರೂಟಿ ಬಾಟಲಿ ತೆಗೆದುಕೊಂಡು ಓಡಿದವು. ಆ ಬಾಟಲಿ ಸೀಲ್ ಆಗಿದೆ, ತೆಕ್ಕೊಡ್ತೀವಿ, ನೀವೆ ಕುಡ್ಕಳಿ ಅಂದರೂ ಕೂಡ ತೆಗೆದುಕೊಂಡು ಓಡಿ ಹೋಗಿ ಹೇಗೆ ಕುಡಿಯುವುದೋ ಗೊತ್ತಾಗದೇ ಕಚ್ಚಿ ತೂತು ಮಾಡಿ ಎಲ್ಲಾ ಸೋರಿಹೋಗುವಂತೆ ಮಣ್ಣು ಪಾಲು ಮಾಡಿ ನಮಗೂ ಇಲ್ಲ ಅವಕ್ಕೂ ಇಲ್ಲ ಮಾಡಿಬಿಟ್ಟವು. ಆರಾಮಾಗಿ ಸೌತೆಕಾಯಿ ಮೆಲ್ಲುತ್ತಲೋ, ಹಣ್ಣಿನ ಹಸ ಕುಡಿಯುತ್ತಲೋ ಬೆಟ್ಟ ಹತ್ತುವುದು ಶಿವಗಂಗೆಯಲ್ಲಿ ಸಾಧ್ಯವೇ ಇಲ್ಲದ ಮಾತು. ಅದೇನಿದ್ದರೂ ಮಂಗಗಳಿಗೇ ಸಲ್ಲತಕ್ಕದ್ದು. ಶಿವಗಂಗೆ ಬೆಟ್ಟದ ಮೇಲೆ ಏನಾದರೂ ತೆಗೆದುಕೊಂಡು ಹೋಗಬೇಕೆಂದರೆ ಬೆನ್ನಿಗೆ ಹಾಕಿಕೊಳ್ಳುವ ಚೀಲಗಳು ಒಳ್ಳೆಯದು. ಅದನ್ನು ಕಿತ್ತುಕೊಳ್ಳಲು ಬಹಳ ಕಷ್ಟ ಎಂದು ಮಂಗಗಳಿಗೆ ತಿಳಿದಿದೆಯೋ ಅಥವಾ ಅದನ್ನು ಬಿಡಿಸಿಕೊಳ್ಳುವಷ್ಟು ಡೆವೆಲಪ್ ಆಗಿಲ್ಲವೋ ಏನೋ ಗೊತ್ತಿಲ್ಲ, ಒಟ್ಟಿನಲ್ಲಿ ಬೆನ್ನಿಗೆ ಹಾಕಿಕೊಂಡ ಚೀಲ ಇದ್ದುದರಲ್ಲಿ ಸೇಫ್! ಆದರೆ ಅದರೊಳಗಿನ ತಿಂಡಿ , ಪಾನೀಯ ಏನಾದರೂ ತೆಗೆದು ಬಾಯಿಗೆ ಹಾಕಿಕೊಳ್ಳಲು ನೋಡಿದಿರೋ ಮಂಗಗಳು ಹಾಜರ್! ಶಿವಗಂಗೆಯ ಮಂಗಗಳಲ್ಲಿ ಗಡವ ಗಂಡು ಮಂಗಗಳ ಸಂಖ್ಯೆ ಜಾಸ್ತಿ ಇರುವುದರಿಂದ ಕಪಿಸೈನ್ಯ ಬಲಶಾಲಿಯಾಗಿದ್ದು ಮನುಷ್ಯರ ಆರ್ಭಟ ಏನೂ ಪ್ರಯೋಜನಕ್ಕೆ ಬರುವುದಿಲ್ಲ.


ಅನಂತರದ್ದು ನಂದಿಬೆಟ್ಟದ ಮಂಗಗಳು. ಇವುಗಳು ಶಿವಗಂಗೆ ಮಂಗಗಳಷ್ಟು ಉಗ್ರ ಸ್ವಭಾವದವಲ್ಲ ಮತ್ತು ಮನುಷ್ಯನ ಬಗ್ಗೆ ಸ್ವಲ್ಪ ಹೆದರಿಕೆಯನ್ನೂ ಇಟ್ಟುಕೊಂಡಿವೆ. ಕೈಯಲ್ಲಿದ್ದ ತಿಂಡಿ, ವಸ್ತುಗಳನ್ನು ನೋಡಿ ತೀರಾ ಯಾರೋ ಕರೆದಂತೆ ಕಿತ್ತುಕೊಳ್ಳಲು ಓಡಿಬರುತ್ತವಾದರೂ ಕೂಡ ಒಂದು ಕೋಲನ್ನೋ, ಕಲ್ಲನ್ನೋ ಕೈಗೆತ್ತಿಕೊಂಡರೆ ಸ್ವಲ್ಪ ದೂರ ಓಡಿಹೋಗುತ್ತವೆ. ಅಲ್ಲೇ ಕೂತು ಹಲ್ಲು ಕಿರಿದು ಹೆದರಿಸಲು ನೋಡುತ್ತವೇಯೇ ಹೊರತು ಹತ್ತಿರ ಬಂದು ಮೈಮೇಲೆ ಎರಗಿ ಸಾಹಸಗಳನ್ನು ಮಾಡಿ ರಿಸ್ಕ್ ತೆಗೆದುಕೊಳ್ಳಲು ಹೋಗುವುದಿಲ್ಲ. ನಾಲ್ಕೈದು ಮಂಗಗಳು ಬಂದರೂ ಕೂಡ ಹೆದರಿಸಿ ಓಡಿಸಬಹುದು. ನಾವು ನಂದಿಬೆಟ್ಟದಲ್ಲಿ ವಿಹರಿಸುವಾಗ ಕೈಯಲ್ಲಿ ದ್ರಾಕ್ಷಿ ಗೊನೆಯಿಟ್ಟುಕೊಂಡು ತಿನ್ನುತ್ತಾ ಒಂದು ಅರ್ಧ ಕಿ.ಮಿ. ದೂರದವರೆಗೂ ಮಂಗಗಳನ್ನು ಬೆದರಿಸಿ ಹತ್ತಿರ ಬರದಂತೆ ತಡೆಯಲು ಯಶಸ್ವಿಯಾದೆವು. ಶಿವಗಂಗೆಯ ಮಂಗಗಳಂತೆ ಇವು ಹಟಕ್ಕೆ ಬಿದ್ದು ಸಾಧಿಸುವುದಿಲ್ಲ, ಪ್ರಯತ್ನ ಪಡುತ್ತವೆ, ಸಿಕ್ಕರೆ ಬಿಡುವುದಿಲ್ಲ. ಇಲ್ಲಿನ ವ್ಯಾಪಾರಸ್ಥರಿಗೆ ಸ್ವಲ್ಪ ಕಷ್ಟ. ಕೋತಿ ಬಂದು ಎತ್ತಿಕೊಂಡು ಹೋಗದಂತೆ ಮೈಯೆಲ್ಲಾ ಕಣ್ಣಾಗಿ ಕಾಯುತ್ತಲೇ ಇರಬೇಕು. ಯಾಕೆಂದರೆ ಇಲ್ಲಿ ಮಂಗಗಳ ವಿಶೇಷವೆಂದರೆ ನಾಯಿ ಜೊತೆಗಿನ ಇವುಗಳ ಗೆಳೆತನ! ಶಿವಗಂಗೆ ಮಂಗಗಳು ನಾಯಿಯನ್ನು ಕಂಡರೆ ಮಾತ್ರ ಹೆದರಿಕೊಂಡು ದೂರ ಹೋಗುತ್ತವೆ. ಆದರೆ ನಂದಿಬೆಟ್ಟದ ಮಂಗಗಳು ನಾಯಿ ಜೊತೆಗೇ ಕುಳಿತು ತಿಂಡಿ ತಿನ್ನುತ್ತವೆ. ನಾಯಿಯೂ ಇವುಗಳನ್ನು ಓಡಿಸುವುದಿಲ್ಲ, ಇವೂ ನಾಯಿ ಇದೆ ಎಂದು ಟೆನ್ಷನ್ ತೆಗೆದುಕೊಳ್ಳುವುದಿಲ್ಲ. ಮೇಲಾಗಿ ಇಲ್ಲಿ ಗಡವ ಮಂಗಗಳು ಕಡಿಮೆ ಇರುವುದರಿಂದ ಕಪಿಸೈನ್ಯ ಅಷ್ಟು ಬಲಶಾಲಿ ಮತ್ತು ಅಪಾಯಕಾರಿಯಾಗಿಲ್ಲ.

ನಂದಿಬೆಟ್ಟದ ಸುತ್ತಮುತ್ತಲೂ ಸ್ವಲ್ಪ ಕಾಡು ಇರುವುದರಿಂದ ಮಂಗಗಳಿಗೆ ಅಲ್ಲಿ ಆಹಾರ ಹುಡುಕಿಕೊಳ್ಳುವ ಅವಕಾಶ ಇದೆ . ಆದರೆ ಶಿವಗಂಗೆಯಲ್ಲಿ ಆ ಅವಕಾಶ ಹೆಚ್ಚು ಇಲ್ಲವಾಗಿದ್ದು ಮನುಷ್ಯನಿಂದ ಆಹಾರ ಪಡೆಯುವ ಅನಿವಾರ್ಯತೆ ಇರುವುದರಿಂದ ಈ ರೀತಿ ಸ್ವಭಾವಗಳ ವ್ಯತ್ಯಾಸ ಬೆಳೆದು ಬಂದಿರಬಹುದು. ಒಟ್ಟಿನಲ್ಲಿ ಬೇರೆ ಬೇರೆ ಸ್ಥಳಗಳಲ್ಲಿ ಮನುಷ್ಯನ ಒಡನಾಟಕ್ಕೆ ಬಿದ್ದ ಮಂಗಗಳ ನಡತೆ ಆಶ್ಚರ್ಯ ಮೂಡಿಸುತ್ತದೆ.

ಶುಕ್ರವಾರ, ಮಾರ್ಚ್ 13, 2009

ಚೆನ್ನೈ ರಿಕ್ಷಾದವನ ಲಾಜಿಕ್ಕು!

"ಪ್ಯಾರಿಸ್ ಸೆಂಟರ್ ಗೆ ಬರ್ತೀಯಾ" ಅಂತ ಚೆನ್ನೈನಲ್ಲಿ ರಿಕ್ಷಾದವನನ್ನು ಹಿಂದಿಯಲ್ಲಿ ಕೇಳಿದೆ.

"ಹಿಂದಿ ತೆರಿಯಾದು" ಅಂದ.

ಮತ್ತೆ ಪ್ಯಾರಿಸ್ ಸೆಂಟರ್ ಅಂತ ಕೈ ಸನ್ನೆ ಮಾಡಿ ತೋರಿಸಿದೆ.

"ಐವತ್ತು ರೂಪಾಯಿ ಆಗುತ್ತೆ" ಅಂದ ತಮಿಳಿನಲ್ಲಿ.

"ಮೂವತ್ತು ರೂಪಾಯಿ ತಗೋ , ಹತ್ತಿರವೇ ಇದೆಯಲ್ಲಾ" ಅಂದೆ ಹಿಂದಿಯಲ್ಲಿ.
ಮೀಟರ್ ಹಾಕಿದರೆ ಮೂವತ್ತೇ ಆಗುವಷ್ಟು ದೂರ ಇತ್ತು. ಆದರೆ ಚೆನ್ನೈಯಲ್ಲಿ ಮೀಟರ್ ಇಲ್ಲ!

"ಹಿಂದಿ ತೆರಿಯಾದು" ಅಂದ ಮತ್ತೆ.

"ಮುಪ್ಪತ್ತು ರುಪಾಯಿ ತಗೊಳಪ್ಪಾ" ಅಂದೆ ನನ್ನ ಮುರುಕು ತಮಿಳಿನಲ್ಲಿ.

"ಇಲ್ಲ ಸಾರ್,ನಲ್ವತ್ತು ರೂಪಾಯಿ ಕೊಡಿ" ಅಂದ.
ಸರಿ ಎಂದು ಹತ್ತಿ ಕುಳಿತೆ.

ಸ್ವಲ್ಪ ದೂರ ಹೋದ ಮೇಲೆ, ಸುಮ್ಮನೇ ಮಾತನಾಡಿಸಲು ಶುರುಮಾಡಿದೆ.
"ನೀವು ಹಿಂದಿಯಲ್ಲೇ ಹೇಳಿ ಸಾರ್, ಅರ್ಥಾಗತ್ತೆ, ನಾನು ತಮಿಳಿನಲ್ಲೇ ಉತ್ತರ ಕೊಡ್ತೀನಿ" ಅಂದ.

ಸುಮ್ನೆ ಒಂದು ಸೆಂಟಿ ಡೈಲಾಗು ಬಿಟ್ಟೆ.
"ಏನಪ್ಪ, ನಂಗೆ ತಮಿಳು ಬರಲ್ಲ ಅಂತ ಜಾಸ್ತಿ ದುಡ್ಡು ಕೇಳ್ತಿಯಾ? ಹೊರಗಡೆಯಿಂದ ಬಂದವರಿಗೆ ಹೀಗೆ ಮೋಸ ಮಾಡಬಾರದಲ್ವಾ?".

ಅವನು ಹೇಳಿದ, "ಅದು ಹಂಗಲ್ಲ ಸಾರ್, ನಂಗೆ ಹಿಂದಿ ತೆರಿಯಾದು, ನಿಮಗೆ ತಮಿಳು ತೆರಿಯಾದು, ಅದಕ್ಕೇ ೫೦ ರೂಪಾಯೂ ಬೇಡ, ೩೦ ರೂಪಾಯೂ ಬೇಡ, ಕಾಂಪ್ರೋಮೈಸ್ ಸಾರ್ , ೪೦ ರುಪೀಸ್" ಅಂದ!

ರಿಕ್ಷಾದವನ ಈ ಲಾಜಿಕ್ಕಿಗೆ ಮುಂದೆ ಏನು ಮಾತಾಡಬೇಕೋ ತಿಳಿಯದೇ ಸುಮ್ಮನೇ ಕುಳಿತೆ.