ಶುಕ್ರವಾರ, ಜುಲೈ 31, 2009

ಭದ್ರಾವತಿಯೆಂದರೆ.....


ನನ್ನೂರು...
ಭದ್ರಾವತಿಯೆಂದರೆ ಬೆಂಕಿಪುರ. ಭದ್ರಾವತಿಯೆಂದರೆ ಬೆವರ ಬೇಸಿಗೆ, ಅಬ್ಬರದ ಮಳೆ, ಮಲೆನಾಡ ಜಗುಲಿ. ಭದ್ರಾವತಿಯೆಂದರೆ 'ಉಕ್ಕಿನ ನಗರಕ್ಕೆ ಸುಸ್ವಾಗತ' ಬೋರ್ಡು, ಬೈಪಾಸ್ ಪರೇಡು. ಭದ್ರಾವತಿಯೆಂದರೆ ಕಬ್ಬಿಣ, ಕಾಗದ ಕಾರ್ಖಾನೆ, ಮೋಕ್ಷಗುಂಡಂ ವಿಶ್ವೇಶ್ವರಯ್ಯನವರು. ಭದ್ರಾವತಿಯೆಂದರೆ ಸುಣ್ಣದ ಹಳ್ಳಿ ಸ್ಪಟಿಕ ಭದ್ರೆ, ತ್ಯಾಜ್ಯದ ಕರಿನೀರು. ಭದ್ರಾವತಿಯೆಂದರೆ ನೆಮ್ಮದಿಯ ರೈತರ ನೀರಾವರಿ ಗದ್ದೆ, ಪಕ್ಷೇತರ ರಾಜಕೀಯ. ಭದ್ರಾವತಿಯೆಂದರೆ ಬಸ್ಟ್ಯಾಂಡು, ಮಳೆಗಾಲಕ್ಕೆ ಮುಳುಗುವ ಹೊಸ ಸೇತುವೆ, ಶತಮಾನದ ಹಳೆ ಸೇತುವೆ. ಭದ್ರಾವತಿಯೆಂದರೆ ಕೂಗುವ ಕಾರ್ಖಾನೆ ಸೈರನ್ನು, ತೆರೆದುಕೊಳ್ಳುವ ಗೇಟು, ಟ್ರಾಫಿಕ್ ತುಂಬಿದ ಡಬ್ಬಲ್ ರೋಡು ಹತ್ತೇ ನಿಮಿಷಕ್ಕೆ ಖಾಲಿ ಖಾಲಿ. ಭದ್ರಾವತಿಯೆಂದರೆ ಕಾರ್ಮಿಕ ಸಂಘ, ಚುನಾವಣೆ, ರಾಜಕೀಯ ಪ್ರವೇಶದ ಗರಡಿ ಮನೆ. ಭದ್ರಾವತಿಯೆಂದರೆ ರಣಜಿ ಸ್ಟೇಡಿಯಂ, ಎಗ್ಸಿಬಿಷನ್, ಪಟಾಕಿ ಸದ್ದಿಗೆ ಬೆಚ್ಚಿ ಬಿದ್ದ ಅಯ್ಯಪ್ಪ. ಭದ್ರಾವತಿಯೆಂದರೆ ಸಿಲ್ವರ್ ಜುಬಿಲಿ ಕಾಲೇಜಿನ ಪೋಲಿ ಹುಡುಗರು, ಸಾಯಿಬಾಬಾ ಮಂದಿರದ ಅಖಂಡ ಭಜನೆ. ಭದ್ರಾವತಿಯೆಂದರೆ ಹೊಯ್ಸಳರ ನರಸಿಂಹಸ್ವಾಮಿ ದೇವಸ್ಥಾನ, ಅದರೆದುರಿನ ಮುದುಕಿಯಂಥ ತೇರು, ಬಿಂಜಲಿನಲ್ಲಿ ಮೂಲೆ ಸೇರಿದ ಜೇಡ. ಭದ್ರಾವತಿಯೆಂದರೆ ಬುಲ್ಡೆಕಾಯಿ ಆಯುವ, ಸೈಕಲ್ ರೇಸಿನ ಶಾಲೆ ಮಕ್ಕಳು. ಭದ್ರಾವತಿಯೆಂದರೆ ಮಿಲಿಟರಿ ಕ್ಯಾಂಪಿನ ಗುಡಿ ಶ್ರೀನಿವಾಸನೆದುರು ಸಂಜೆ ಸೂರ್ಯನ ಕೆಂಪುಕೆನ್ನೆಯ ಮಂದಹಾಸ. ಭದ್ರಾವತಿಯೆಂದರೆ ವಿಜಯದಶಮಿ, ಕನಕಮಂಟಪದ ಅಲಂಕಾರ ದೇವರ ಎದುರಲ್ಲಿ ಬನ್ನಿಕಡಿತ. ಭದ್ರಾವತಿಯೆಂದರೆ ಬಿ.ಎಚ್. ರೋಡು, ಒಂದೇ ರೂಟಿನ ವೆಂಕಟೇಶ್ವರ ಸಿಟಿ ಬಸ್ಸು, ಲಾರಿಗಳ ರಾತ್ರಿ ರಥೋತ್ಸವ. ಭದ್ರಾವತಿಯೆಂದರೆ ಬೆಣಚು ಕಲ್ಲು, ಅದಿರು ಮಣ್ಣು, ಕಾಗೆ ಕಣ್ಣು. ಭದ್ರಾವತಿಯೆಂದರೆ ಶಿಸ್ತಿನ ಕಾಲೋನಿ, ಹಳೇನಗರದ ಸಂದಿ, ಆನೆಪಾರ್ಕು, ಜನ್ನಾಪುರದ ಜಂಗುಳಿ. ಭದ್ರಾವತಿಯೆಂದರೆ ವೆಂಕಟೇಶ್ವರ ಟಾಕೀಸಿನ ಕನ್ನಡ ಪಿಚ್ಚರು, ಮುಂಜುನಾಥ ಟಾಕೀಸಿನ ಇಂಗ್ಲೀಷ್ ಪಿಚ್ಚರು. ಭದ್ರಾವತಿಯೆಂದರೆ ಭಾನುವಾರದ ಸಂತೆ, ಸಂಜೆಗಳ ಕಂತೆ, ತಿಳಿಯದ ಚಿಂತೆ . ಭದ್ರಾವತಿಯೆಂದರೆ ಪದ್ಮನಿಲಯದ ಮಸಾಲೆದೋಸೆ, ಸರ್ಕಲ್ಲಿನ ಪಾನಿಪೂರಿ ಗಾಡಿ, ಸ್ಪೆಷಲ್ ಚುರ್ ಮುರಿ. ಭದ್ರಾವತಿಯೆಂದರೆ ಮರೆತುಹೋಗಿರುವ ಬಡಕ್ಕೆಲ ಕೃಷ್ಣಭಟ್ಟರು. ಭದ್ರಾವತಿಯೆಂದರೆ ಗೆಸ್ಟ್ ಹೌಸಿನ ನಾಗಲಿಂಗ ಹೂವಿನ ಮರ, ತಣ್ಣನೆ ಈಜು, ಹಸಿರು ಹುಲ್ಲು. ಭದ್ರಾವತಿಯೆಂದರೆ ನಾಲ್ಕು ಬಾಗಿಲುಗಳ, ಮೂರುಪಾಳಿಗಳ, ನೂರು ಪಾತಳಿಗಳ ಪೇಲವ ಕವಿತೆ. ಭದ್ರಾವತಿಯೆಂದರೆ .....

ಜಯಂತ ಕಾಯ್ಕಿಣಿಯವರ 'ಶಬ್ದತೀರ'' ಪುಸ್ತಕದ 'ಅಂಕೋಲೆಯೆಂದರೆ..' ಎಂಬ ಬರಹದಿಂದ ಪ್ರೇರಿತ.

ಗುರುವಾರ, ಜುಲೈ 23, 2009

ಮರ ಬೆಳೆಯುತ್ತಿದೆ..

ಈಗ ಅದು ಮರ. ಎಲ್ಲ ದಿಕ್ಕಿಗೂ ಕೊಂಬೆ ಚಾಚಿಕೊಂಡು ಇಷ್ಟೆತ್ತರಕ್ಕೆ ಬೆಳೆದಿದೆ. ಹೂವು ಬಿಡುತ್ತದೆ, ಕಾಯಾಗುತ್ತದೆ. ಎಲೆ ಉದುರುತ್ತವೆ, ಮತ್ತೆ ಚಿಗುರುತ್ತವೆ. ಹಕ್ಕಿಗಳು ಕೂರುತ್ತವೆ, ಕೂಗುತ್ತವೆ. ಗೂಡು ಕಟ್ಟುತ್ತವೆ, ಮರಿಗಳು ಕಣ್ಬಿಡುತ್ತವೆ. ಅಳಿಲುಗಳು ಸರಿದಾಡುತ್ತವೆ. ದನಕರುಗಳು ತಣ್ಣಗೆ ನೆರಳಿನಲ್ಲಿ ನಿಂತು ಮೆಲುಕು ಹಾಕುತ್ತವೆ. ಮಳೆ ಬಂದಾಗ ಮುದುರಿ ನಿಲ್ಲುತ್ತವೆ. ತರಕಾರಿ ಗಾಡಿಯವ ನಿಂತು ಬೆವರು ಒರೆಸಿಕೊಂಡು ಮುಂದುವರೆಯುತ್ತಾನೆ. ಸೊಪ್ಪಿನ ಹೆಂಗಸು ಬುಟ್ಟಿ ಕೆಳಗಿಳಿಸಿ ಉಶ್ಶೆಂದು ಒರಗಿಕೊಳ್ಳುತ್ತಾಳೆ. ಮಕ್ಕಳ ಸಂಜೆಯ ಉಪ್ಪಿನಾಟದ ಕಂಬವಾಗುತ್ತದೆ, ಒಮ್ಮೊಮ್ಮೆ ಕ್ರಿಕೆಟಿನ ವಿಕೆಟ್ ಆಗುತ್ತದೆ.

೧೫ ವರುಷಗಳ ಹಿಂದೆ ಅದು ಒಂದು ಸಸಿ. ಒಂದು ಕಡ್ಡಿ, ಅದರಲ್ಲಿ ಎಣಿಸಿ ಹತ್ತು ಎಲೆಗಳು. ನಾವು ಹೊಸದಾಗಿ ಮನೆ ಕಟ್ಟಿದಾಗ ಸಸಿ ನೆಟ್ಟು ಹೋಗಿದ್ದರು. ಅಲ್ಲಿನ ಮಣ್ಣಿಗೆ ಕಚ್ಚಿಕೊಂಡ ದಿನದಿಂದಲೇ ಎಲೆ ಮೂಡಿಸುತ್ತಾ ಚಿಗುರತೊಡಗಿತ್ತು. ಇಡೀ ರಸ್ತೆಯಲ್ಲಿನ ಎಲ್ಲ ಗಿಡಗಳನ್ನು ಕಾಯ್ದುಕೊಳ್ಳುವ ಜವಾಬ್ದಾರಿಯನ್ನು ಹಿರಿಯರು ನಾವು ಹುಡುಗರಿಗೆ ವಹಿಸಿಕೊಟ್ಟಿದ್ದರು. ಪ್ರತಿವರ್ಷದ ಮಳೆಗೆ ಸಾಯದಂತೆ, ಬಿಸಿಲಿಗೆ ಒಣಗದಂತೆ, ದನ ಕುರಿಗಳ ಬಾಯಿ ಸೇರದಂತೆ, ದನಕಾಯುವ ಹುಡುಗರು ಮುರಿದು ಹಾಕದಂತೆ ಕಾಯ್ದದ್ದು ಸಾರ್ಥಕ. ಸಣ್ಣ ಸಸಿಯಿದ್ದಾಗ ದನಕರುಗಳು ತಿನ್ನದಿರಲೆಂದು ಬೇಲಿ ಹಾಕುತ್ತಾರೆ, ಆದರೆ ಅದೇ ಸಸಿ ಬೆಳೆದು ಮರವಾದಮೇಲೆ ದನಕರುಗಳನ್ನು ಅದಕ್ಕೇ ಕಟ್ಟಿಹಾಕುತ್ತಾರೆ. ರಸ್ತೆ ಮರಗಳಿಂದ ನಳನಳಿಸುತ್ತಿದೆ. ದೀಪಾವಳಿಯಲ್ಲಿ ಎದುರು ಮನೆ ನೀಲಕಂಠ ಮಾವ ಮರಕ್ಕೆ ಪಟಾಕಿ ಸರ ಕಟ್ಟಿ ಹಚ್ಚಿದಾಗ ಪಾಪ ಅದಕ್ಕೆ ಎಷ್ಟು ನೋವಾಗುತ್ತದೇನೋ, ಹೆದರಿಕೊಂಡ ಅಳಿಲು ಯಾವ ಮೂಲೆ ಸೇರಿದೆಯೇನೋ.!


ಆ ಮರದ ಕೆಳಗೆ ಸುಮ್ಮನೇ ನಿಲ್ಲುತ್ತೇನೆ. ಎಲೆಗಳು ಬೀಸಿದ ಗಾಳಿಗೆ ಹಿತವೆನಿಸುತ್ತದೆ. ಹಕ್ಕಿಗಳಿಗೆ ಕಿವಿಯಾಗುತ್ತೇನೆ. ಸಂಭ್ರಮಗೊಳ್ಳುತ್ತೇನೆ, ಕಾರಣವಿಲ್ಲದೇ ಹೆದರುವ ಅಳಿಲನ್ನು ನೋಡಿ ನಗುತ್ತೇನೆ. ಆಗ ಇಷ್ಟೇ ಇಷ್ಟಿದ್ದ ಈ ಸಸಿ ಎಷ್ಟು ದೊಡ್ಡ ಮರ ಆಗಿದೆ, ಕೈಯಾರೆ ನೀರು ಹಾಕಿದ, ಬೇಲಿಕಟ್ಟಿ ಕಾಯ್ದ, ಕಣ್ಣೆದುರಿಗೇ ಬೆಳೆದ ಮರ ಎಷ್ಟು ಖುಷಿ ಕೊಡುತ್ತದೆ ಗೊತ್ತಾ ಅಂತ ಅಪ್ಪನಿಗೆ ಹೇಳುತ್ತೇನೆ. ನೀನು ಕೂಡ ಇಷ್ಟೇ ಇಷ್ಟು ಇದ್ದೆ , ಈಗ ನನ್ನ ಕಣ್ಣೆದುರಿಗೇ ಹೇಗೆ ಬೆಳೆದಿದ್ದೀಯ ಗೊತ್ತಾ ಅನ್ನುತ್ತಾರೆ. ಅಮ್ಮ ದನಿಗೂಡಿಸುತ್ತಾಳೆ. ಮರದ ಯಾವ ಕೊಂಬೆಯನ್ನೂ ಕಡಿಯಬೇಡಿ, ಗೆದ್ದಲು ಹತ್ತದಂತೆ ನೋಡಿಕೊಳ್ಳಿ ಅನ್ನುತ್ತೇನೆ. ಫೋನು ಮಾಡಿದಾಗಲೆಲ್ಲಾ "ಹುಷಾರಾಗಿ ಗಾಡಿ ಓಡ್ಸು", "ಆರೋಗ್ಯ ನೋಡ್ಕೋ", ಅದೂ ಇದೂ ಅಂತ ಇಪ್ಪತ್ತು ಸಾರಿ ಅನ್ನುವ ಅಮ್ಮನ ತಲ್ಲಣ ಸ್ವಲ್ಪ ಸ್ವಲ್ಪವೇ ಅರ್ಥಾಗುತ್ತಿದೆ.

ಮರ ಇನ್ನೂ ಬೆಳೆಯುವುದಿದೆ, ಬೆಳೆಯುತ್ತದೆ. ಫೋನಿಗೆ ಸಂದೇಶವೊಂದು ಬಂದಿದೆ. ಯಾರೋ ಹಾರೈಸಿದ್ದಾರೆ. .

ಗುರುವಾರ, ಜುಲೈ 16, 2009

ಟೀವಿ ಧಾರಾವಾಹಿಯಲ್ಲೊಂದು ಬ್ಲಾಗ್ !

ಟೀವಿಯಲ್ಲಿ ಧಾರಾವಾಹಿಗಳಿಗೋಸ್ಕರವೇ ಸಮಯ ಎತ್ತಿಟ್ಟು ನೋಡುತ್ತಿದ್ದ ಕಾಲವೊಂದಿತ್ತು. ಆಗ ಧಾರಾವಾಹಿಗಳು ಹಿತಮಿತವಾಗಿ ವಾರಕ್ಕೊಂದೊಂದೇ ಎಪಿಸೋಡುಗಳಂತೆ ಬರುತ್ತಿದ್ದವು. ಗುಣಮಟ್ಟವೂ ಚೆನ್ನಾಗಿರುತ್ತಿತ್ತು. ಅಥವಾ ಆಗ ಇದ್ದುದೊಂದೇ ದೂರದರ್ಶನವಾದ್ದರಿಂದ ಹಾಗನಿಸುತ್ತೋ ಏನೋ ಗೊತ್ತಿಲ್ಲ. ಒಟ್ಟಿನಲ್ಲಿ ಧಾರಾವಾಹಿಗಳು ಖುಷಿ ಕೊಡುತ್ತಿದ್ದವು. ನನಗೆ ಸಣ್ಣವನಿದ್ದಾಗ ಗುಂಗುರು ಕೂದಲಿನ ರವಿಕಿರಣ್ ಧಾರಾವಾಹಿಯನ್ನು ತಪ್ಪದೇ ನೋಡುತ್ತಿದ್ದ ನೆನಪಿದೆ. ಅನಂತರ ಹಲವು ಛಾನಲ್ ಗಳು ಶುರುವಾದ ಮೇಲೆ ಧಾರಾವಾಹಿಗಳು ದಿನದಿನವೂ ಬಂದು ಅದರಲ್ಲಿ ಆಸಕ್ತಿ ಕಡಿಮೆಯಾಗುತ್ತಾ ಹೋಯಿತು. ಪೀಯುಸಿ ರಜದಲ್ಲಿ ಭಕ್ತಿಯಿಂದ ನೋಡಿದ ಧಾರಾವಾಹಿಯೆಂದರೆ 'ಮಾಯಾಮೃಗ'. ಆಮೇಲೆ ಡಿ.ಡಿ.ಯಲ್ಲಿ 'ಸಾಧನೆ' ಎಂಬ ಸೀರಿಯಲ್ಲನ್ನು ನೋಡುತ್ತಿದ್ದೆ. ಒಳ್ಳೊಳ್ಳೆ ಕಲಾವಿದರ ತಂಡವಿದ್ದ ಅದೂ ಕೂಡ ಆಮೇಲೆ ಬೋರಾಯಿತು. ಆಮೇಲೆ ಎಂಜಿನಿಯರಿಂಗ್ ಸೇರಿ ಮನೆಯಿಂದ ಹೊರಬಿದ್ದ ಮೇಲೆ ಧಾರಾವಾಹಿ ನೋಡುವ ಅಭ್ಯಾಸ ತಪ್ಪಿಹೋಯಿತು. ’ಗೃಹಭಂಗ ’ಎಂಬ ಧಾರಾವಾಹಿಯನ್ನು ನೋಡುತ್ತಿದ್ದುದು ಸ್ವಲ್ಪ ನೆನಪಿದೆ. ಆಮೇಲೆ ಬೆಂಗಳೂರಿಗೆ ಬಿದ್ದ ಮೇಲೆ ಚಿಕ್ಕಪ್ಪನ ಮನೆಯಲ್ಲಿದ್ದೆ. ನಮ್ಮ ಚಿಕ್ಕಮ್ಮ ಧಾರಾವಾಹಿ ಭಕ್ತೆ. ತೀರಾ ಸಂಜೆ ೬ ರಿಂದಲೇ ಹಿಡಿದು ರಾತ್ರೆ ೧೦ ರ ವರೆಗೆ ಧಾರಾವಾಹಿಗಳ ಮೇಲೆ ಧಾರಾವಾಹಿಗಳು. ಆಗ ಅನಿವಾರ್ಯವಾಗಿ ಕುಂಕುಮಭಾಗ್ಯ, ಕನ್ಯಾದಾನ ಇತ್ಯಾದಿಗಳಿಂದ ಮಾನಸಿಕ ಅತ್ಯಾಚಾರಕ್ಕೊಳಗಾಗಿ ಧಾರಾವಾಹಿಗಳೆಂದರೆ ಅಲರ್ಜಿ ಆಗಿಹೋಗಿತ್ತು. ಈ ಆಘಾತದಿಂದ ಸ್ವಲ್ಪ relief ಕೊಟ್ಟು ಗುಣವಾಗಿಸಿದ್ದು ’ಮೂಡಲಮನೆ’ ಮತ್ತು 'ಮನ್ವಂತರ', 'ಮುಕ್ತ'ದ ಕೋರ್ಟ್ ಕೇಸುಗಳು. ಆಗ "ಬಸವರಾಜು, ಆ ಫೈಲ್ ತಗೊಂಡು ಬಾರಪ್ಪ" ಅನ್ನುವಾಗ ಕೇಸ್ ಏನಾಗುತ್ತೋ ಅನ್ನುವ ಕುತೂಹಲ ಇತ್ತು. ಈಗ "ಲಿಂಗರಾಜು, ಆ ಫೈಲ್ ಕೊಡಪ್ಪ" ಅನ್ನುವ ಹೊತ್ತಿಗೆ ರಾಜು ಮರ್ಡರ್ ಮಾಡಿಸಿದ್ದು ಮಿಶ್ರಾನೇ, ಅವನಿಗೆ ಶಿಕ್ಷೆ ಆಗೇ ಆಗುತ್ತದೆ ಅನ್ನೋದು ಎಂತವರಿಗೂ ಗೊತ್ತಾಗಿ ಹೋಗಿತ್ತು. ಶಾಂಭವಿ ಮೇಡಂಗೆ ಮದ್ವೆ ಆದ್ರೆ ಆಗಲಿ ಬಿಟ್ರೆ ಬಿಡ್ಲಿ, ಸದ್ಯಕ್ಕೆ ನಾನಂತೂ ಟೀವಿಯಿಂದಲೇ ಮುಕ್ತ ಮುಕ್ತ.... :)

ಇದೆಲ್ಲಾ ಯಾಕೆ ನೆನಪಾಯ್ತಂದ್ರೆ ಕೆಲದಿನಗಳ ಹಿಂದೆ ಧಾರಾವಾಹಿಯಲ್ಲಿ ಕೆಲಸ ಮಾಡುತ್ತಿರುವ ಪ್ರೀತಿಯ ಗೆಳೆಯನೊಬ್ಬ ನಮ್ಮ ಧಾರಾವಾಹಿಗೊಂದು ಬ್ಲಾಗ್ ಮಾಡಿದ್ದೇವೆ ನೋಡೋ ಅಂದ. ನನಗೆ ಆಶ್ಚರ್ಯ ಆಯಿತು. ಅರೆರೆ ಧಾರಾವಾಹಿಗೆ ಎಂತಾ ಬ್ಲಾಗಪ್ಪಾ ಅಂತ. ಪ್ರತಿ ಎಪಿಸೋಡಿನ ಕಥೆಯನ್ನೂ ಬರೆದು ಹಾಕುತ್ತಿರಬಹುದು ಅಂದುಕೊಂಡೆ. ಆದರೆ ಅದು ಹಾಗಲ್ಲ, ಒಂದು ವಿಭಿನ್ನ ರೀತಿಯ ಪ್ರಯೋಗ ಮಾಡಿದ್ದಾರೆ. ಖುಷಿಯಾಯಿತು. 'ಜೋಗುಳ' ಅಂತ ಧಾರಾವಾಹಿ ಹೆಸರು, ಜೀ ಕನ್ನಡದಲ್ಲಿ ದಿನಾ ಎಂಟೂವರೆಗೆ ಬರುತ್ತದೆ. 'ಕುಟುಂಬ' ಮತ್ತು 'ಪ್ರೀತಿ ಇಲ್ಲದ ಮೇಲೆ' ಎಂಬ ಜನಪ್ರಿಯ ಧಾರಾವಾಹಿಗಳ ವಿನು ಬಳಂಜ ಮತ್ತು ನರೇಶ್ ತಂಡದ ಧಾರಾವಾಹಿ ಅದು. ಅದರಲ್ಲಿ ವಾಸು ಎಂಬ ಮುಖ್ಯ ಪಾತ್ರ ಪ್ರೇಯಸಿ ದೇವಕಿ ಜೊತೆಗಿನ misunderstandingನಿಂದ ಭಗ್ನಪ್ರೇಮಿ ಆಗಿರುತ್ತಾನಂತೆ. ವಾಸು ಅಮೇರಿಕಾಕ್ಕೆ ಹೋದ ಮೇಲೆ ತನ್ನ ಪ್ರೇಯಸಿಯ ನೆನಪಲ್ಲಿ ದಿನಾ ಬ್ಲಾಗ್ ಬರೆಯುತ್ತಾನೆ. ಅವನು ದೇವಕಿಗೆ ದಿನಾ ತನ್ನ ನೋವನ್ನು, ಪ್ರೀತಿಯನ್ನು ತೋಡಿಕೊಳ್ಳುತ್ತಾನೆ. ಧಾರಾವಾಹಿ ತಂಡದವರು ಅದನ್ನು ರಿಯಲ್ಲಾಗಿಯೂ ಬರೆಯುತ್ತಿದ್ದಾರೆ. ಧಾರಾವಾಹಿಯಲ್ಲೇ ಕತೆಗೆ ಪೂರಕವಾಗಿ ಒಮ್ಮೊಮ್ಮೆ ಬ್ಲಾಗ್ ತೋರಿಸುತ್ತಾರೆ ಕೂಡ. ಆದ್ದರಿಂದ ಇದೊಂತರಾ ನಿಜವಾಗಿಯೂ ಅಸ್ತಿತ್ವದಲ್ಲಿರುವ ಧಾರಾವಾಹಿ ಪಾತ್ರ. sstrange ! ಮೊನ್ನೆ ಧಾರಾವಾಹಿ ಸೆಟ್ ಗೆ ಹೋಗಿ ಅವರ ಜೊತೆ ಮಾತಾಡಿ ಇಂತಹ ಐಡಿಯಾ ಅಳವಡಿಸಿಕೊಂಡದ್ದಕ್ಕೆ ಮೆಚ್ಚುಗೆ ಹೇಳಿದೆ. ಆಗ ಅವರು "ಎಲ್ಲಿದೀರ್ರಿ ನೀವು, ನಾವಾಗ್ಲೇ ಚಾಟಿಂಗ್ ಕೂಡ ತೋರಿಸಿದ್ದೇವೆ ಧಾರಾವಾಹಿಯಲ್ಲಿ" ಅಂದರು ! ಏನೇ ಆಗಲಿ ಕಾಲಕ್ಕೆ ತಕ್ಕುದಾದ ಗುಡ್ ಕ್ರಿಯೇಟಿವಿಟಿ ಕಣ್ರಿ. ಧಾರಾವಾಹಿ ತಂಡಕ್ಕೆ ಶುಭಹಾರೈಕೆಗಳು. ಅಂದ ಹಾಗೆ, ಬ್ಲಾಗ್ ಕೊಂಡಿ ಇಲ್ಲಿದೆ ನೋಡಿ : ನನ್ನ ದೇವಕಿ.

******************

ಕನ್ನಡದ ಮೊಟ್ಟಮೊದಲ ವೆಬ್ ಸೈಟ್ ಖ್ಯಾತಿಯ ಗಣಕತಜ್ಞ ಡಾ.ಪವನಜ ಅವರು ಕನ್ನಡಪ್ರಭದಲ್ಲಿ ಪ್ರತಿಸೋಮವಾರ ಒಂದು ಅಂಕಣ ಬರೆಯುತ್ತಾರೆ. ಗಣಕಿಂಡಿ ಅಂತ ಅದರ ಹೆಸರು. ಕನ್ನಡ ಭಾಷೆಯನ್ನೂ ಚೆನ್ನಾಗಿ ತಿಳಿದುಕೊಂಡಿರುವ ಅವರು ಕಂಪ್ಯೂಟರ್ ನಲ್ಲಿ ಕನ್ನಡ ತರುವಲ್ಲಿ ಸಾಕಷ್ಟು ಕೆಲಸ ಮಾಡಿರುವವರು. ಈ ಸಲದ ಅಂಕಣದಲ್ಲಿ internetಗೆ ಕನ್ನಡದಲ್ಲಿ 'ಅಂತರ್ಜಾಲ' ಎಂಬ ಪದ ಸರಿಯೋ, ’ಅಂತರಜಾಲ’ ಸರಿಯೋ ಎಂಬುದರ ಬಗ್ಗೆ ಬರೆದಿದ್ದಾರೆ. ನನಗೆ ಮೊದಲಿಂದಲೂ ಇದೊಂದು ಸಂಶಯವಿತ್ತು. ಅಂತರ್ಜಾಲ ಅಂದರೆ intranet ಆಗುತ್ತದೆ. ಆದರೆ internet ಗೆ ಅಂತರ್ಜಾಲ ಎಂದು ಬಳಸುತ್ತಾರಲ್ಲ ಅಂತ. ಅವರು ಸ್ಪಷ್ಟಪಡಿಸಿದ್ದಾರೆ. ಇನ್ನು ಮೇಲೆ ತಪ್ಪು ತಿದ್ದಿಕೊಳ್ಳಬೇಕು. ಗಣಕ ಮತ್ತು ಅಂತರಜಾಲ ಸಂಬಂಧಿತ ಬಹಳಷ್ಟು ಉಪಯುಕ್ತ ಮಾಹಿತಿಗಳು ಈ ಅಂಕಣದಲ್ಲಿ ಬರುತ್ತವೆ. ಇದರ ಬ್ಲಾಗ್ ಕೂಡ ಮಾಡಿಟ್ಟಿದ್ದಾರೆ. ಆ ಭರಪೂರ ಮಾಹಿತಿಗಳ ತಾಣ ಇಲ್ಲಿದೆ: ಗಣಕಿಂಡಿ.

ಸೋಮವಾರ, ಜುಲೈ 13, 2009

ಆಧುನಿಕ ಬುದ್ಧನ ಅಲೆದಾಟ

ಆತ ಆಧುನಿಕ ಬುದ್ಧ ! ಅಮೆರಿಕಾದ ವಿಶ್ವವಿದ್ಯಾಲಯವೊಂದರ ೨೨ ವರ್ಷದ ಆ ಹುಡುಗ ಪದವಿ ಮುಗಿದ ಮೇಲೆ ಅಪ್ಪ ಅಮ್ಮನ ಹೊಸ ಕಾರಿನ ಉಡುಗೊರೆಯನ್ನು ನಿರಾಕರಿಸುತ್ತಾನೆ. ಈ ಲೌಕಿಕ ಬದುಕಿನ ವ್ಯಾಮೋಹಗಳ ಬಗ್ಗೆ ಅಸಹ್ಯ ಅವನಿಗೆ. ಅಪ್ಪ ಅಮ್ಮಂದಿರ ಭೋಗಜೀವನ, ಅಧಿಕಾರ ಗುಣಗಳ ಬಗ್ಗೆ ಅಸಮಾಧಾನ. ನಗರದ ಬದುಕಿನಿಂದ, ನಾಗರೀಕತೆಯಿಂದ ದೂರ ಹೋಗಿ ಪ್ರಕೃತಿಯಲ್ಲಿ ಯಾವ ಗುರಿಯೂ ಇಲ್ಲದಂತೆ ನೈಸರ್ಗಿಕವಾಗಿ ಬದುಕುವುದೇ ನಿಜವಾದ ಅಸ್ತಿತ್ವ ಎಂಬ ಆಸೆಯಿಂದ ಹೊರಟುಬಿಡುತ್ತಾನೆ. ತನ್ನ ಬ್ಯಾಂಕ್ ಕಾರ್ಡ್, ಐಡೆಂಟಿಟಿ ಕಾರ್ಡ್ ಎಲ್ಲವನ್ನೂ ನಾಶಪಡಿಸಿ, ತನ್ನ ಉಳಿತಾಯದ ಹಣವನ್ನು ದಾನಮಾಡಿ ತನ್ನ ಕಾರನ್ನು ಕೂಡ ಎಲ್ಲೋ ಬಿಟ್ಟು ತನ್ನಲ್ಲಿ ಉಳಿದಿದ್ದ ಸ್ವಲ್ಪ ಹಣವನ್ನೂ ಸುಟ್ಟು ಹಾಕಿ ತಂದೆತಾಯಿಗಳಿಗೂ ತಿಳಿಸದೇ ತನ್ನ ಒಂದಿಷ್ಟು ವಸ್ತು, ಸಲಕರಣೆಗಳೊಡನೆ ಜೋಗಿಜಂಗಮನಂತೆ ಕಾಲ್ನಡಿಗೆಯಲ್ಲೇ ಪ್ರಕೃತಿಯೆಡೆಗೆ ಪ್ರಯಾಣ ಬೆಳೆಸುತ್ತಾನೆ. ನಗರದಿಂದ ಹೊರಟು ಅವನ ಗುರಿಯಾಗಿದ್ದ ಅಲಾಸ್ಕಾ ಕಾಡನ್ನು ತಲುಪುವವರೆಗಿನ ಆ ಹುಡುಗನ ಎರಡು ವರ್ಷಗಳ ಅಲೆದಾಟ, ದಾರಿಯಲ್ಲಿ ಅವನು ಭೇಟಿಯಾಗುವ ಜನಗಳು, ಏರ್ಪಡುತ್ತಿದ್ದ ಸಂಬಂಧಗಳ ಬಂಧಕ್ಕೆ ಸಿಲುಕದೇ ಮುಂದುವರೆಯುವುದು, ಆತನ ಸಾಹಸಗಳು, ಕೊನೆಗೆ ಅಲಾಸ್ಕಾದ ಕಾಡುಗಳಲ್ಲಿ ಆತ ಸವೆಸುವ ದಿನಗಳ ಕಥೆ ಇದು.

ಆ ಹುಡುಗ ಹೆದ್ದಾರಿಗಳಲ್ಲಿ ಸಿಗುವ ಗಾಡಿಗಳಲ್ಲಿ ಪ್ರಯಾಣ ಮಾಡುತ್ತಾ ಅಲೆಮಾರಿ ಹಿಪ್ಪಿ ದಂಪತಿಗಳ ಒಡನಾಟದಲ್ಲಿ ಕಾಲ ಕಳೆಯುತ್ತಾನೆ. ಒಬ್ಬ ಉತ್ಸಾಹಿ ರೈತನ ಹೊಲದಲ್ಲಿ ಅವನೊಂದಿಗೆ ಬೇಸಾಯ, ಕಟಾವಿನಲ್ಲಿ ತೊಡಗುತ್ತಾ ಮೈಮರೆಯುತ್ತಾನೆ, ಸಂತೋಷ ಅನುಭವಿಸುತ್ತಾನೆ. ಷೋಡಶಿಯ ದೇಹಕ್ಕೆ ಸೋಲದೇ ತಪ್ಪಿಸಿಕೊಳ್ಳುತ್ತಾನೆ. ಉಕ್ಕಿ ಹರಿಯುವ ನದಿಯಲ್ಲಿ ದೋಣಿ ನೆಡೆಸುತ್ತಾ ಮೆಕ್ಸಿಕೋ ತಲುಪಿ ಅಲ್ಲಿಂದ ರೈಲು ಹಿಡಿದು ಹಿಂದಿರುಗಿ ಬರುತ್ತಾನೆ. ದಾರಿಯಲ್ಲೆಲ್ಲೋ ಸಿಗುವ ಮುದುಕನ ಜೊತೆ ದಿನಕಳೆದು ಅವನಲ್ಲಿ ಜೀವನೋತ್ಸಾಹ ಮೂಡಿಸುತ್ತಾನೆ, ತನ್ನ ಬದುಕಿನ ಉದ್ದೇಶದ ಬಗ್ಗೆ ತಿಳಿಸುತ್ತಾನೆ. ಇವನನ್ನು ದತ್ತು ಪಡೆಯುವುದಾಗಿ ಮಕ್ಕಳಿಲ್ಲದ ಆ ಮುದುಕ ಬೇಡಿಕೆ ಇಟ್ಟಾಗ ಅದನ್ನು ನಯವಾಗಿ ಮುಂದೂಡಿ ತನ್ನ ಗುರಿಯಾದ ಅಲಾಸ್ಕಾದ ಕಾಡುಗಳಿಗೆ ಹೋಗಿಬಿಡುತ್ತಾನೆ. ತನ್ನ ಪ್ರಯಾಣದುದ್ದಕ್ಕೂ ನದಿ, ಸಮುದ್ರ, ಬೆಟ್ಟ, ಗುಡ್ಡ, ಗಿಡಮರಗಳ ಸಾಂಗತ್ಯವನ್ನು ಅನುಭವಿಸುತ್ತಾನೆ. ಅದರೊಳಗೆ ಬೆರೆಯುತ್ತಾನೆ. ಅಲಾಸ್ಕಾದ ಹಿಮಕಾಡುಗಳನ್ನು ತಲುಪಿದಾಗ ನಿಜವಾದ ಪ್ರಕೃತಿಯೊಡನೆ ಅವನ ಜೀವನ ಶುರುವಾಗುತ್ತದೆ. ಅಲ್ಲಿ ಅವನಿಗೆ ಯಾರೋ ತೊರೆದು ಹೋದ ಚಿಕ್ಕ ಬಸ್ ಒಂದು ಅನಿರೀಕ್ಷಿತವಾಗಿ ದೊರೆತು ಅದನ್ನೇ ಮನೆಯನ್ನಾಗಿ ಮಾಡಿಕೊಳ್ಳುತ್ತಾನೆ. ಒಂದಿಷ್ಟು ದಿನಗಳು ಚೆನ್ನಾಗಿ ನೆಡೆದರೂ ಸಹ ಅನಂತರ ಅಲ್ಲಿನ ಪ್ರಕೃತಿಯ ಕಠೋರತೆ ಹವಾಮಾನ ಕಾಲ ವೈಪರೀತ್ಯದೊಂದಿಗೆ ಅನುಭವವಾಗಲು ಶುರುವಾಗುತ್ತದೆ. ಇಷ್ಟು ದಿನ ಆಹಾರವಾಗಿದ್ದ ಪ್ರಾಣಿಗಳು ಸಿಗದೇ ಪರದಾಡುತ್ತಾನೆ. ಕ್ರಮೇಣ ಈ ಪ್ರಕೃತಿಯೊಳಗೊಂದಾಗಿ ಬದುಕಲು ತನ್ನ ತಯಾರಿ ಸಾಲದು ಎಂದೆನಿಸಿದಾಗ ಅಲ್ಲಿಂದ ಹಿಂದಿರುಗಿ ಬರುವ ಪ್ರಯತ್ನಕ್ಕೆ ತುಂಬಿಹರಿಯುತ್ತಿರುವ ನದಿ ಅಡ್ಡಲಾಗಿ ಅನಿವಾರ್ಯವಾಗಿ ಅಲ್ಲೇ ಉಳಿಯಬೇಕಾಗುತ್ತದೆ. ಹಣವಿದ್ದಾಗ ಎಲ್ಲವೂ ಸುಲಭ ನಿಜ, ಆದರೆ ತನ್ನ ಜೀವನದ ಅತ್ಯಂತ ರೋಮಾಂಚನದ ಕ್ಷಣಗಳು ದೊರೆತಿದ್ದು ಒಂದೇ ಒಂದು ಪೈಸೆಯೂ ಇಲ್ಲದ ಸಮಯದಲ್ಲಿ ಎನ್ನುವ ನಂಬಿಕೆಯ ಆತನಿಗೆ ಮನುಷ್ಯ ಪ್ರಕೃತಿಯನ್ನು ಪ್ರೀತಿಸುವಷ್ಟೇ ಅದರ ಬಗ್ಗೆ ಹೆದರಿಕೆಯನ್ನೂ ಕೂಡ ಇಟ್ಟುಕೊಳ್ಳಬೇಕು ಎನ್ನುವುದು ಅರಿವಾಗುವಾಗ ತೀರ ತಡವಾಗಿರುತ್ತದೆ. ಆಹಾರ ಸಿಗದೇ ಇರುವ ಸ್ಥಿತಿ ಬಂದಾಗ ತಾನು ಕೊಂಡುಹೋಗಿದ್ದ ಪುಸ್ತಕಗಳ ಸಹಾಯದಿಂದ ತಿನ್ನುವಂತಹ ಗಿಡಗೆಡ್ಡೆಗಳ ಹುಡುಕಾಟದಲ್ಲಿ ತೊಡಗಿ ಎಡವಿ ವಿಷಕಾರಿ ಸಸ್ಯವೊಂದನ್ನು ತಿಂದು ಜೀರ್ಣಶಕ್ತಿ ನಾಶವಾಗುತ್ತದೆ. ಆತನ ಕೊನೆದಿನಗಳು, ಅವನು ಪಡುವ ಪಾಡು ಪ್ರಕೃತಿಯ ಶಕ್ತಿಗೆ ಸಾಕ್ಷಿಯಾಗುತ್ತವೆ. ನಿಜವಾದ ಸಂತೋಷ ಎಂಬುದು ಸಿಗುವುದು ಅದನ್ನು ಹಂಚಿಕೊಂಡಾಗ ಮಾತ್ರ ಎಂಬ ಷರಾವನ್ನು ಬರೆದು ತಾನೇ ಬಯಸಿ ತಂದುಕೊಂಡಿದ್ದ ಏಕಾಂತ ಜೀವನದಿಂದ ಸಾವಿನ ಮೂಲಕ ಮುಕ್ತಿ ಹೊಂದುತ್ತಾನೆ. ಅಲ್ಲಿಯವರೆಗಿನ ತನ್ನ ಅಲೆದಾಟದ ಪ್ರತಿ ದಿನವನ್ನೂ ಡೈರಿಯಲ್ಲಿ ದಾಖಲಿಸಿಟ್ಟಿರುತ್ತಾನೆ.

ಇನ್ ಟು ದಿ ವೈಲ್ಡ್ (In to the Wild)- ೨೦೦೭ ರ ಈ ಇಂಗ್ಲೀಷ್ ಸಿನೆಮಾ ಕ್ರಿಸ್ಟೋಫರ್ ಮೆಕ್ಯಾಂಡ್ಲೆಸ್ ಎಂಬ ಹುಡುಗನ ನಿಜ ಜೀವನದ ಕಥೆಯನ್ನೊಳಗೊಂಡ ಜಾನ್ ಕ್ರಾಕೋರ್ ಎಂಬುವರಿಂದ ಬರೆಯಲ್ಪಟ್ಟ ಅದೇ ಹೆಸರಿನ ಪುಸ್ತಕದ ಮೇಲೆ ಆಧರಿತವಾಗಿದೆ.  ಶಾನ್ ಪೆನ್ (Sean Penn) ನಿರ್ದೇಶನದ ಈ ಸಿನೆಮಾದಲ್ಲಿ ಅಲೆಗ್ಸಾಂಡರ್ ಸುಪರ್ ಟ್ರ್ಯಾಂಪ್ ಹೆಸರಿನ ಮುಖ್ಯ ಪಾತ್ರದಲ್ಲಿ ಎಮಿಲೆ ಹರ್ಷ್ (Emile Hirsch) ನಟಿಸಿದ್ದಾನೆ. ಸಿನೆಮಾದಲ್ಲಿ ಕೆಲವು ಸ್ವಗತಗಳು, ಮಾತುಗಳು ಸ್ವಲ್ಪ ಕಾವ್ಯಮಯವಾಗಿದ್ದು ಪ್ರತಿಯೊಂದು ಭಾಗವೂ, ದೃಶ್ಯವೂ ಸುಂದರವಾಗಿ ನಿರೂಪಿಸಲ್ಪಟ್ಟಿವೆ. ನಿಸರ್ಗವನ್ನು ತೆರೆಯಲ್ಲಿ ತೋರಿಸಿರುವ ಪರಿ ಮತ್ತು ಅರ್ಥಪೂರ್ಣ ಸಂಭಾಷಣೆಗಳು ಇಷ್ಟವಾಗುತ್ತವೆ. ಮನುಷ್ಯನ ಜೀವನ, ಸಂಬಂಧಗಳು, ಸ್ವಾತಂತ್ರ್ಯ, ವೈರಾಗ್ಯ ಮತ್ತು ಪ್ರಕೃತಿಯನ್ನು ಜೋಡಿಸುವ ಸೇತುವೆಯೆನಿಸುತ್ತದೆ. ಸಿನೆಮಾ ಮುಗಿದಾದ ಮೇಲೆ ಸ್ವಲ್ಪ ಹೊತ್ತು ಮೌನ, ಒಂದು ಏಕಾಂತತೆ ಬೇಕೆನಿಸುವುದು ಸಿನೆಮಾ ನಮ್ಮನ್ನು ತಾಗುವುದರ ಪರಿಣಾಮವಿರಬಹುದು.

********

ಸಿನೆಮಾದ ಇಡೀ ಕಥೆಯನ್ನೇ ಹೇಳಿಬಿಟ್ಟಿದ್ದೇನೆ ಎಂದುಕೊಳ್ಳಬೇಡಿ. ಇಂತಹ ಸಿನೆಮಾಗಳಲ್ಲಿ ಕಥೆ, ಕೈಮಾಕ್ಸ್ , ಇನ್ನಿತರ ಸಂಗತಿಗಳು ಗೌಣ. ಇದು ಒಂಥರಾ Concept ಸಿನೆಮಾ. Presentation ಮುಖ್ಯ. ನಂಗಂತೂ ಬೇಜಾನ್ ಇಷ್ಟ ಆಯ್ತು , ನಿಮಗೂ ಆಗಬಹುದೇನೋ ನೋಡಿ. (೧೨ಜುಲೈ೦೯ ಕನ್ನಡಪ್ರಭದ ಸಾಪ್ತಾಹಿಕ ಪ್ರಭದಲ್ಲಿ ಈ ಬರಹ ಸಂಕ್ಷಿಪ್ತ ರೂಪದಲ್ಲಿ ಪ್ರಕಟವಾಗಿದೆ)

ಸೋಮವಾರ, ಜುಲೈ 6, 2009

ವಿದ್ಯೆ ಮತ್ತು ಔದ್ಯಮಿಕತೆ

ಇತ್ತೀಚೆಗೆ ಇ-ಮೇಲಿನಲ್ಲಿ ಸಣ್ಣ ಕಥೆಯೊಂದು ಬಂದಿತ್ತು. ಅದು ಹೀಗಿದೆ. ಒಬ್ಬ ಹುಡುಗ ಸಾಫ್ಟ್ ವೇರ್ ಕಂಪನಿಯೊಂದರಲ್ಲಿ ಆಫೀಸ್ ಬಾಯ್ ಕೆಲಸ ಕೇಳಿಕೊಂಡು ಹೋಗಿರುತ್ತಾನೆ. ಅಲ್ಲಿನ admin ಇವನನ್ನು ಸಂದರ್ಶನ ಮಾಡಿ ಇವನು ಕೆಲಸಕ್ಕೆ ಲಾಯಕ್ಕಿದ್ದಾನೆ ಎಂದು ತೀರ್ಮಾನಿಸುತ್ತಾನೆ. ಅನಂತರ ಆ ಹುಡುಗನ ಹತ್ತಿರ ನಿನ್ನ ಇ-ಮೇಲ್ ಐಡಿ ಕೊಡು ಅದಕ್ಕೊಂದು ಅರ್ಜಿ ಕಳಿಸುತ್ತೇನೆ, ಅದನ್ನು ತುಂಬಿ ಕಳಿಸಿದ ಮೇಲೆ ನಿನಗೆ ಅಪಾಯಿಟ್ಮೆಂಟ್ ಲೆಟರ್ ಕಳಿಸುತ್ತೇನೆ ಅದರ ಪ್ರಿಂಟ್ ತೆಗೆದುಕೊಂಡು ಬಂದು ನೀನು ಇಲ್ಲಿ ಸೇರಿಕೊಳ್ಳಬಹುದು ಎನ್ನುತ್ತಾನೆ. ಆಗ ಆ ಹುಡುಗ "ನನಗೆ ಯಾವುದೇ ಇಮೇಲ್ ಐಡಿ ಇಲ್ಲ ಮತ್ತು ನನಗೆ ಇಂಟರ್ನೆಟ್ ಬಳಕೆಯೂ ಗೊತ್ತಿಲ್ಲ" ಎನ್ನುತ್ತಾನೆ. ಆಗ ಆ ಅಡ್ಮಿನ್ ಈ ಕಾಲದಲ್ಲಿ ಇಮೇಲ್ ಐಡಿ ಇಲ್ಲ ಎಂದ ಮೇಲೆ ನಿನ್ನ ಅಸ್ತಿತ್ವಕ್ಕೇ ಬೆಲೆಯೇ ಇಲ್ಲ ನೀನು ಇಲ್ಲಿ ಕೆಲಸ ಮಾಡಲು ನಾಲಾಯಕ್ ಎಂದು ಬೈದು ಓಡಿಸುತ್ತಾನೆ. ಏನು ಮಾಡುವುದು ಎಂದು ತಿಳಿಯದೇ ಹುಡುಗ ಹೊರಗೆ ಬಂದು ಸ್ವಲ್ಪ ಹೊತ್ತು ಯೋಚಿಸುತ್ತಾನೆ. ಅವನ ಜೇಬಿನಲ್ಲಿ ೫೦ ರೂಪಾಯಿ ಮಾತ್ರ ಇರುತ್ತದೆ. ಅದು ಇನ್ನು ಒಂದು ದಿನಕ್ಕೆ ಸಾಕು. ಆಮೇಲೆ ಹೇಗೆ ಎಂದು ಯೋಚಿಸಿ ಒಂದು ತೀರ್ಮಾನಕ್ಕೆ ಬಂದು ಸೀದ ಟೊಮ್ಯಾಟೋ ಮಾರುಕಟ್ಟೆಗೆ ಹೋಗಿ ೧೦ ಕೆ.ಜಿ ಟೊಮ್ಯಾಟೋ ಕೊಂಡು ಅದನ್ನು ಮನೆ ಮನೆಗೆ ಮಾರುತ್ತಾನೆ. ಲಾಭ ಮಾಡಿಕೊಳ್ಳುತ್ತಾನೆ, ಹೀಗೆ ಮಾರನೇ ದಿನ ಇನ್ನೂ ಹೆಚ್ಚು ಮಾರಿ ಇನ್ನೂ ಹೆಚ್ಚಿನ ಲಾಭ ಬರುತ್ತದೆ. ಹೀಗೆಯೇ ನಿಷ್ಠೆಯಿಂದ ದುಡಿದು ಒಳ್ಳೆಯ ಲಾಭದಿಂದ ಅವನೇ ಒಂದು ತಳ್ಳುಗಾಡಿ ತೆಗೆದುಕೊಳ್ಳುತ್ತಾನೆ, ಅನಂತರ ಒಂದು ಲಗ್ಗೇಜ್ ಆಟೋ, ಟ್ರಕ್ ಹೀಗೆ ಮುಂದುವರೆಯುತ್ತಾ ಹೋಗಿ ಬೇರೆ ಬೇರೆ ವ್ಯಾಪಾರಗಳಲ್ಲೂ ತೊಡಗಿ ೫ ವರ್ಷಗಳ ನಂತರ ಆ ಊರಿನ ಪ್ರಮುಖ ವ್ಯಾಪಾರಿಗಳಲ್ಲಿ ಒಬ್ಬನಾಗುತ್ತಾನೆ. ಒಂದು ದಿನ ಅವನಿಗೆ ತನ್ನ ಕುಟುಂಬಕ್ಕೆ ವಿಮೆ ಮಾಡಿಸಬೇಕು ಎಂಬ ಯೋಚನೆ ಬಂದು ವಿಮಾ ಏಜೆಂಟೊಬ್ಬನನ್ನು ಮನೆಗೆ ಕರೆಯುತ್ತಾನೆ. ಅರ್ಜಿ ಎಲ್ಲ ತುಂಬಿ ಆದ ಮೇಲೆ ಆ ಏಜೆಂಟ್ ಇದ್ದವನು ನಿಮ್ಮ ಇಮೇಲ್ ಐಡಿ ಕೊಡಿ ಎಂದು ಕೇಳಿದಾಗ ನನಗೆ ಯಾವ ಇಮೇಲ್ ಐಡಿಯೂ ಇಲ್ಲ, ನೆಟ್ ಬಳಕೆಯೂ ಗೊತ್ತಿಲ್ಲ ಎನ್ನುತ್ತಾನೆ. ಆಗ ವಿಮಾ ಏಜೆಂಟನು ನೀವು ಇಷ್ಟು ದೊಡ್ಡ ಬಿಸಿನೆಸ್ ಮನ್ ಆಗಿ ಒಂದು ಇಮೇಲ್ ಐಡಿ ಇರದೇ ಇರುವುದು ಆಶ್ಚರ್ಯ, ಆದರೂ ಇಷ್ಟು ಯಶಸ್ವಿಯಾಗಿದ್ದೀರಿ, ಇನ್ನು ನಿಮಗೆ ಇಂಟರ್ನೆಟ್ ಬಳಕೆ ಗೊತ್ತಿದ್ದರೆ ಇನ್ನೂ ಏನಾಗುತ್ತಿದ್ದಿರಿ ಎನ್ನುತ್ತಾನೆ. ಆಗ ಅವನು ನಿಟ್ಟುಸಿರಿಟ್ಟು "ದುರದೃಷ್ಟಕ್ಕೆ ನಾನು ಇಮೇಲ್ ಐಡಿಯೊಂದನ್ನು ಮಾಡಿಕೊಂಡಿದ್ದರೆ ಇವತ್ತು ಸಾಫ್ಟ್ ವೇರ್ ಕಂಪನಿಯೊಂದರಲ್ಲಿ ಆಫೀಸ್ ಬಾಯ್ ಆಗಿರುತ್ತಿದ್ದೆ" ಎನ್ನುತ್ತಾನೆ.

ಈ ಕತೆಯನ್ನು ಯಾವುದೇ ಉದ್ದೇಶಕ್ಕೆ ಬರೆದಿರಬಹುದು. ಆದರೆ ಇದು ಬಿಂಬಿಸುವುದು ಒಬ್ಬ ಉದ್ಯಮಿ ಹುಟ್ಟುವ ಅಂಶವನ್ನು. ಒಬ್ಬ ಸಾಮಾನ್ಯ ಮನುಷ್ಯ ಉದ್ಯಮಿಯಾಗಿ, ಮಾಲೀಕನಾಗಿ ಬೆಳೆಯಲು ಕಾರಣಗಳನ್ನು, ಪರಿಸ್ಥಿತಿಗಳನ್ನು ಈ ಕತೆಗಳು ಸೂಕ್ಷ್ಮವಾಗಿ ತಿಳಿಸಿಕೊಡುತ್ತವೆ. ಉದ್ಯಮಿ ಎಂದ ಮಾತ್ರಕ್ಕೆ ಟಾಟಾ, ಬಿರ್ಲಾ, ನೀಲೇಕಣಿ, ನಾಣಿಗಳೇ ಆಗಬೇಕಂತಿಲ್ಲ. ಇವತ್ತು ನಮ್ಮ ಸುತ್ತಮುತ್ತಲೇ ಇರುವ ಸಾವಿರಾರು ವ್ಯಾಪಾರಸ್ಥರೂ, ಬಗೆಬಗೆಯ ಬಿಸಿನೆಸ್ ಗಳನ್ನು ನೆಡೆಸುತ್ತಿರುವವರೂ ಕೂಡ ಉದ್ಯಮಿಗಳೇ. ತಂದೆಯಿಂದ ಬಂದ ಬಿಸಿನೆಸ್ ಅನ್ನು ಮುಂದುವರೆಸಿಕೊಂಡು ಹೋಗುತ್ತಿರುವ ಕೆಲವೇ ಕೆಲವರನ್ನು ಹೊರತುಪಡಿಸಿದರೆ ಎಲ್ಲರೂ ಕೂಡ ಒಬ್ಬ ಉದ್ಯಮಿಯಾಗಿ ರೂಪುಗೊಳ್ಳಲು ಕಾರಣ ಒಂದಲ್ಲಾ ಒಂದು ರೀತಿಯ ಪರಿಸ್ಥಿತಿಯೇ ಕಾರಣವಾಗಿರುತ್ತದೆ ಮತ್ತು ಮುಖ್ಯವಾಗಿ ಅವರಲ್ಲಿರುವ ರಿಸ್ಕ್ ತೆಗೆದುಕೊಂಡು ಮುನ್ನುಗ್ಗಿರುವ ಗುಣ ಕಾರಣವಾಗಿರುತ್ತದೆ. ಈ ರೀತಿಯ ಪರಿಸ್ಥಿತಿಗೆ, ರಿಸ್ಕ್ ತೆಗೆದುಕೊಂಡು ಬೆಳೆದಿರುವುದಕ್ಕೆ ಕೆಲವೊಮ್ಮೆ ಅನಿವಾರ್ಯ ಕಾರಣಗಳಿರಬಹುದು ಅಥವಾ ಛಲದಿಂದ ಆಗಿರಬಹುದು. ನನ್ನ ಗೆಳೆಯನೊಬ್ಬ ಕೆಲಸ ಮಾಡುವ ಕಂಪನಿಯ ಮುಖ್ಯಸ್ಥರ ಜೊತೆ ಮಾತನಾಡುವ ಅವಕಾಶ ಸಿಕ್ಕಿತ್ತು. ವರ್ಷಕ್ಕೆ ಕೋಟ್ಯಂತರ ರೂಪಾಯಿಗಳ ಆದಾಯವಿರುವ ಅವರು ತಾವು ಉದ್ಯಮಿಯಾಗಿ ಬೆಳೆದಿದ್ದರ ಬಗ್ಗೆ ಹೇಳಿದರು. "ನಾನು ಬಿ.ಕಾಂ. ಜಸ್ಟ್ ಪಾಸಾಗಿ ಯಾವುದೋ ಒಂದು ಕಂಪನಿಯಲ್ಲಿ ಸಣ್ಣ ಸಂಬಳವೊಂದಕ್ಕೆ ಕೆಲಸಕ್ಕೆ ಸೇರಿಕೊಂಡೆ, ಮುಂದೆ ಓದುವ ಅನುಕೂಲ ಇರಲಿಲ್ಲ, ಎಲ್ಲರೂ ನನ್ನನ್ನು ಆಗ ವೇಸ್ಟ್ ಎಂದು, ಇವನ ಕೈಯಲ್ಲಿ ಏನೂ ಆಗುವುದಿಲ್ಲವೆಂದೂ ದೂಷಿಸುತ್ತಿದ್ದರು, ಅವಮಾನದಿಂದ ಕುಗ್ಗಿಹೋಗುತ್ತಿದ್ದೆ, ಆದರೆ ಹಾಗೆಯೇ ಒಂದೊಂದಾಗಿ ಅನುಭವಗಳನ್ನು ಪಡೆದುಕೊಂಡು ಒಮ್ಮೆ ಅವಕಾಶ ಸಿಕ್ಕಾಗ ರಿಸ್ಕ್ ತೆಗೆದುಕೊಂಡು ನುಗ್ಗಿಬಿಟ್ಟೆ, ಮೊದಲ ದಿನಗಳಲ್ಲಿ ಬಹಳ ಕಷ್ಟವಾದರೂ ಆನಂತರ ನಾ ನೆಡೆದದ್ದೇ ಹಾದಿಯಾಯಿತು, ಇವತ್ತು ಈ ಮಟ್ಟಿಗೆ ಬೆಳೆದಿದ್ದೇನೆ, ಕೋಟಿರೂಪಾಯಿಗೆ ತೂಗುತ್ತೇನೆ ಎಂದು ಹೇಳಿಕೊಳ್ಳಲು ನನಗ್ಯಾವ ಅಹಂಕಾರವೂ ಇಲ್ಲ , ಸಂಕೋಚವೂ ಇಲ್ಲ. ಆದರೆ ಅವತ್ತು ನನ್ನನ್ನು ಹೀಯಾಳಿಸಿದವರು ಯಾವ ಸ್ಥಿತಿಯಲ್ಲಿದ್ದಾರೋ ಅದೇ ಸ್ಥಿತಿಯಲ್ಲಿದ್ದಾರೆ". ಹೀಗೆ ಹೇಳಿದ ಅವರು ನೆಡೆಸುತ್ತಿರುವುದು ತಾವು ಓದಿದ್ದಕ್ಕೆ ಸ್ವಲ್ಪವೂ ಸಂಬಂಧವಿಲ್ಲದ ಟ್ರಾನ್ಸ್ ಫಾರ್ಮರ್ ತಯಾರಿಕಾ ಕಾರ್ಖಾನೆ! ಇವೆಲ್ಲವನ್ನೂ ಸುಮ್ಮನೇ ಅವಲೋಕಿಸಿದಾಗ ಸದ್ಯದ ಸಮಾಜದಲ್ಲಿ ಹೆಚ್ಚು ಹೆಚ್ಚು ಓದಿರುವರಿಗಿಂತಲೂ ಕಡಿಮೆ ಓದಿದವರೇ ಉದ್ಯಮಿಗಳಾಗಿರುವ ಉದಾಹರಣೆ ಬಹಳ. ಬೆಂಗಳೂರಿನ ಪೀಣ್ಯ ಕೈಗಾರಿಕಾ ಪ್ರದೇಶದಲ್ಲಿರುವ ಸಾವಿರಾರು ಕೈಗಾರಿಕೆಗಳು ಇದಕ್ಕೆ ಒಳ್ಳೆಯ ಉದಾಹರಣೆಗಳು. ಇಲ್ಲಿ ತುಂಬ ಕಡಿಮೆ ಓದಿದವರು, ಯಾವುದೇ ವಿಶೇಷ, ವೃತ್ತಿಪರ ಕೋರ್ಸುಗಳನ್ನು ಮಾಡದೇ ಇರುವವರು ಇವತ್ತು ಉದ್ಯಮಿಗಳಾಗಿ ಯಶಸ್ವಿಯಾಗಿ ಮುನ್ನಡೆಯುತ್ತಿದ್ದಾರೆ. ಎಲ್ಲ ಉದ್ಯಮಿಗಳನ್ನು ಕೇಳಿದರೂ ಕೂಡ ಅವರದ್ದೆಲ್ಲಾ ಸಾಮಾನ್ಯವಾಗಿ ಒಂದೇ ಉತ್ತರವಿರುತ್ತದೆ. ಈ ಮಟ್ಟಿಗೆ ಅವರು ಬೆಳೆಯಲು ಕಾರಣ ಅನಿವಾರ್ಯತೆ, ಅನುಭವ, ಪೂರಕ ಪರಿಸ್ಥಿತಿ, ಅದೃಷ್ಟ ಹಾಗೂ ಅದಕ್ಕೆ ತಕ್ಕುನಾದ, ಸರಿಯಾಗಿ ಬಳಸಿಕೊಂಡ ಶ್ರಮ. ಇನ್ಫೋಸಿಸ್ ನ ನಂದನ್ ನೀಲೇಕಣಿಯವರೂ ಕೂಡ ತಾವು ಬರೆದಿರುವ ಪುಸ್ತಕದಲ್ಲಿ ತಮ್ಮನ್ನು ’ಆಕಸ್ಮಿಕ ಉದ್ಯಮಿ’ ಎಂದೇ ಕರೆದುಕೊಳ್ಳುತ್ತಾರೆ.

ಇದಕ್ಕೆ ಉಲ್ಟಾ ಪರಿಸ್ಥಿತಿ ಎಂದರೆ ಇವತ್ತಿನ ವಿದ್ಯಾವಂತರದ್ದು. ಇವತ್ತು ಮಾರುಕಟ್ಟೆಯಲ್ಲಿ ಹಲವು ಕೋರ್ಸುಗಳಿವೆ. ಮ್ಯಾನೇಜ್ ಮೆಂಟ್ ಕೋರ್ಸುಗಳಿವೆ. ಆದರೆ ಅದರಲ್ಲಿ ತಯಾರಾಗಿ ಬರುತ್ತಿರುವ ವಿದ್ಯಾವಂತರಲ್ಲಿ ಈ ಉದ್ಯಮಿ ಗುಣಗಳೇ(enterpreneurship qualities) ಕಂಡುಬರುತ್ತಿಲ್ಲ ಎನ್ನುವುದು ಕಟು ಸತ್ಯ. ಅವೆಲ್ಲವೂ ಹೆಚ್ಚೆಂದರೆ ಮೆನೇಜರ್ ಗಳನ್ನು ತಯಾರು ಮಾಡುತ್ತಿವೆಯೇ ಹೊರತು Entrepreneur ಗಳನ್ನಲ್ಲ. ಇವತ್ತು ವಾಣಿಜ್ಯ, ಕಲೆ, ಎಂಜಿನಿಯರಿಂಗ್ ಎಲ್ಲಾ ಕೋರ್ಸ್ ಗಳಲ್ಲೂ ಕೂಡ managementಬಗ್ಗೆ, Entrepreneurship ಬಗ್ಗೆ ಪಠ್ಯಗಳಿವೆ. ಆದರೆ ಅವು ಕೇವಲ ಥಿಯರಿಗಳಾಗೇ ಉಳಿಯುತ್ತಿರುವುದು ವಿಪರ್ಯಾಸ. ಈ ಥಿಯರಿಗಳನ್ನು ಓದಿಕೊಂಡು ಬಂದ ಯುವಕ ಯುವತಿಯರು ಯಾವುದೋ ಕಂಪನಿಯಲ್ಲಿ ಅಥವಾ ಮತ್ತೆಲ್ಲೋ ಒಬ್ಬ ಸಾಮಾನ್ಯ ಉದ್ಯೋಗಿಯಾಗಿ ತಮ್ಮ ಜೀವನವನ್ನು ಮುಡಿಪಾಗಿಟ್ಟುಬಿಡುತ್ತಾರೆ. ಅದಕ್ಕೆ ಕಾರಣ ಆಕರ್ಷಕ ಸಂಬಳ, ಸವಲತ್ತುಗಳು ಹಲವಿರಬಹುದು. ಆದರೆ ಇಲ್ಲಿ ಪ್ರಶ್ನೆಯೆಂದರೆ ವಿದ್ಯೆ ಎನ್ನುವುದು ಅವನನ್ನು ಆ ಔದ್ಯಮಿಕತೆಯಿಂದ ದೂರ ಇಡುತ್ತಿದೆಯೇ ಎಂಬುದು. ದೊಡ್ಡ ದೊಡ್ಡ ಉದ್ಯಮಿಗಳಾದವರು, ಆಗುವವರು ಮ್ಯಾನೇಜ್ ಮೆಂಟ್ ಬಗ್ಗೆಯಾಗಲೀ, ಔದ್ಯಮಿಕತೆ ಬಗ್ಗೆಯಾಗಲೀ ಯಾವುದೇ ಪುಸ್ತಕಗಳನ್ನು ಓದಿರುವುದಿಲ್ಲ, ಯಾವುದೇ ಪದವಿ ಪಡೆದಿರುವುದಿಲ್ಲ. ಆದರೆ ಪುಸ್ತಕ ಓದಿದವರು, ಪದವಿ ಪಡೆದವರು ಉದ್ಯಮಿಗಳಾಗುತ್ತಿಲ್ಲ. ೧೦೦% ಈ ಸ್ಥಿತಿ ಇಲ್ಲದಿರಬಹುದು , ಆದರೆ ಬಹುತೇಕ ಈ ರೀತಿ ಇದೆ. ಪ್ರಸಕ್ತ ಉದ್ಯಮಿಗಳು ಪುಸ್ತಕ ಓದುತ್ತಾ ಕೂತಿದ್ದರೆ ಖಂಡಿತ ಆ ಮಟ್ಟಿಗೆ ಬೆಳೆಯಲೂ ಸಾಧ್ಯವಾಗುತ್ತಿರಲಿಲ್ಲ. ಎಲ್ಲರಂತೆ ಅವರೂ ಕೂಡ ಸಾಮಾನ್ಯ ನೌಕರರಾಗಿಬಿಡುತ್ತಿದ್ದರೆನೋ! stay hungry, stay foolish ಎನ್ನುವ ಪುಸ್ತಕವೊಂದಿದೆ. ನಮ್ಮ ದೇಶದ ದೊಡ್ಡ ದೊಡ್ಡ ಐ‌ಐ‌ಎಂ ಗಳಲ್ಲಿ ಓದಿದ ಹಲವು ಪದವಿಧರರು ಉದ್ಯಮಿಗಳಾಗಿ ಬೆಳೆದಿರುವ ಯಶೋಗಾಥೆಯ ಕತೆಗಳಿವೆ. ಆದರೆ ಪ್ರತಿವರ್ಷ ಹೊರಬರುವ ಪದವೀಧರರ ಸಂಖ್ಯೆಗೆ ಹೋಲಿಸಿದರೆ ಉದ್ಯಮಿಗಳಾದವರ ಸಂಖ್ಯೆ ತೀರಾ ಕಡಿಮೆ ಇದೆ. ಇದು ಹೇಳುವಷ್ಟು ಸುಲಭವಲ್ಲ , ಇದಕ್ಕೆ ಆಸಕ್ತಿಯಿಂದ ಹಿಡಿದು ಬಂಡವಾಳದ ತನಕ ಹಲವಾರು constraintಗಳಿವೆ ನಿಜ. ಆದರೂ ಕೂಡ ತುಲನಾತ್ಮಕವಾಗಿ ನಮ್ಮ ದೇಶದಲ್ಲಿ ಔದ್ಯಮಿಕತೆ ಎಂಬುದಕ್ಕೆ ವಿದ್ಯೆಯೇ constraint ಆಗುತ್ತಿದೆಯೇ ಎಂಬ ಅನುಮಾನ ಸಹಜವೆನಿಸುತ್ತದೆ. ಅದು ಯುವಜನಾಂಗವನ್ನು ಕಣ್ಣು ಕಟ್ಟಿದ ಕುದುರೆಯಂತೆ ಒಂದೇ ದಿಕ್ಕಿನಲ್ಲಿ ಯೋಚಿಸುವಂತೆ ಮಾಡುತ್ತಿದೆ. ಇವತ್ತು ಜಗತ್ತಿನಲ್ಲಿ ದೊಡ್ಡ ದೊಡ್ಡ ಉದ್ಯಮಗಳನ್ನು ಕಟ್ಟಿ ಬೆಳೆಸಿದ, ಹೆಸರು ಮಾಡಿರುವ, ಸಾಧನೆ ಮಾಡಿರುವ ಬಹುತೇಕ ಜನರು ಹೆಚ್ಚು ಓದಿರದಂತವರೇ ಆಗಿದ್ದಾರೆ. ಹೆಚ್ಚು ಓದಿದವರು, ಪದವಿ ಪಡೆದವರು ಯಾವುದೋ ಕಂಪನಿ ಕೆಲಸಗಳಲ್ಲಿ ತೊಡಗಿಕೊಂಡರೆ ದೊಡ್ಡಸ್ತಿಕೆ ಎಂಬ ಸಾಮಾಜಿಕ ಅಂಶವೂ ಕೂಡ ಅವರನ್ನು ಹಿಡಿದಿಡುತ್ತಿದೆ. ಹಾಗೆಂದು ಹೆಚ್ಚಿನ ವಿದ್ಯೆಯಿಲ್ಲದೇ ಕೂರುವುದು, ಓದದಿರುವುದು ಮೂರ್ಖತನವಾಗುತ್ತದೆ. ಆದ್ದರಿಂದ ಈ ನಿಟ್ಟಿನಲ್ಲಿ ವಿದ್ಯೆಯ ಜೊತೆಜೊತೆಗೆ ಬೇರುಮಟ್ಟದ ಚಿಂತನೆಗಳನ್ನು ವಿದ್ಯಾವಂತ ಯುವಕರಲ್ಲಿ ಬೆಳೆಸುವ ಅಗತ್ಯವಿದೆ. ಉದ್ಯಮಿಯಾಗಲು ಇರುವ ಅವಕಾಶಗಳು, ಸೌಲಭ್ಯಗಳು, ಜಾಗತಿಕ ಮಾರುಕಟ್ಟೆಗಿಂತ ಹೆಚ್ಚಾಗಿ ನಮ್ಮ ದೇಶದ ಹಾಗೂ ನಮ್ಮ ಸುತ್ತಲಿನ ಸಾಮಾನ್ಯ ಮಾರುಕಟ್ಟೆಯ ಬಗೆಗಿನ ಅರಿವು ಮುಖ್ಯವಾಗಿ ಬೇಕಾಗಿದೆ.

ಇದರಲ್ಲಿ ಯಾವುದೂ conclusion ಅಲ್ಲ, ಸುಮ್ಮನೇ ಯೋಚನೆಯನ್ನು ಹಂಚಿಕೊಂಡದ್ದಷ್ಟೆ.