ಸೋಮವಾರ, ಮೇ 17, 2010

ಸಿನೆಮಾ ನೋಡ್ಬೇಕು

ಈ ಬೆಂಗಳೂರಿನಲ್ಲಿ ನೋಡಬೇಕೆನಿಸಿದ ಸಿನೆಮಾಗಳು ಅದ್ಯಾವ ಟಾಕೀಸಲ್ಲಿ ಇರುತ್ತದೋ ಗೊತ್ತಾಗುವುದಿಲ್ಲ, ಪತ್ರಿಕೆಯಲ್ಲಿ ಹಾಕಿದ ಟಾಕೀಸಿಗೆ ಹೋದರೆ ಬೇರೆ ಯಾವುದೋ ಸಿನೆಮಾ ಇರುತ್ತದೆ. ವಾರದ ದಿನಗಳಲ್ಲಿ ಹೋಗಲು ಆಗುವುದಿಲ್ಲ. ವಾರಾಂತ್ಯಗಳಲ್ಲಿ ಹಂಗೂ ಸರಿಯಾಗಿ ಗೊತ್ತುಮಾಡಿಕೊಂಡು ಹೋದರೆ ಟಿಕೇಟು ಸಿಗುವ ಖಾತ್ರಿ ಇರುವುದಿಲ್ಲ. ಟಿಕೇಟು ಸಿಗುವ ಟಾಕೀಸುಗಳು ಹತ್ತಿರವಿರುವುದಿಲ್ಲ. ಸ್ವಲ್ಪ ಚೆನ್ನಾಗಿ ಓಡುತ್ತಿದೆ ಅಂತಾದರೆ ಟಾಕೀಸಿನವರೇ ಬ್ಲ್ಯಾಕ್ ಟಿಕೆಟ್ ಮಾರುತ್ತಿರುತ್ತಾರೆ. ಬುಕ್ ಮಾಡಿಸಿಕೊಂಡು ಹೋಗೋಣವೆಂದರೆ ಅವತ್ತು ನಾನೇ ಎಲ್ಲಾದರೂ ಬುಕ್ ಆಗಿ ಹೋಗಿರುತ್ತೇನೆ. ಸುಮಾರು ದಿನಗಳ ನಂತರ ಹೋದರಾಯಿತೆಂದು ಬಿಟ್ಟರೆ ಟಾಕೀಸುಗಳಿಂದ ತೆಗೆದೇ ಬಿಟ್ಟಿರುತ್ತಾರೆ. ಕೊನೆಗೆ ಎಲ್ಲಾ ಸರಿಯಾದರೂ ನಮಗೇ ಟೈಮ್ ಇರುವುದಿಲ್ಲ ಅಥವಾ ಜೊತೆಗ್ಯಾರೂ ಸಿಗುವುದಿಲ್ಲ! ಆದ್ದರಿಂದ ಬೆಂಗಳೂರಿಗೆ ಬಂದಮೇಲೆ ಎಷ್ಟೋ ಒಳ್ಳೊಳ್ಳೆ ಸಿನೆಮಾಗಳು ಹೀಗೇ ನೋಡಲಾಗದೇ ತಪ್ಪಿಹೋದದ್ದಿದೆ. ಇರಲಿ. ಒಟ್ನಲ್ಲಿ ನಮಗೇನು ಮಾಡಕ್ಕಾಗುವುದಿಲ್ಲವೋ ಅದಕ್ಕೆ ನೆಪ ಹೇಳಬೇಕು ಹೀಗೆ ಅಷ್ಟೆ.

ಸದ್ಯಕ್ಕೆ ನೋಡಬೇಕಾದ ಸಿನೆಮಾಗಳು

ಪೃಥ್ವಿ : ಅದೇನು ವಿಪರ್ಯಾಸವೋ, ವಿಧಿಲಿಖಿತವೋ, ವಿಪರೀತವೋ ಗೊತ್ತಿಲ್ಲ, ನಾನು ಟಾಕೀಸಿನಲ್ಲಿ ನೋಡಿದ ಪುನೀತ್ ಚಿತ್ರವೆಂದರೆ ’ಆಕಾಶ್’ ಒಂದೇ. ಅದೂ ಕೂಡ ಯಾವತ್ತೋ ಹೊತ್ತು ಕಳೆಯಲು ನವರಂಗ ಟಾಕೀಸಿನಲ್ಲಿ ೧೦೦ ದಿನ ಆದಮೇಲೆ ಹೋಗಿದ್ದು. ಮತ್ಯಾವುದೋ ಕಾರಣಕ್ಕೋಸ್ಕರ ’ಅರಸು’ ಚಿತ್ರಕ್ಕೆ ಹೋಗಬೇಕೆಂದಿದ್ದರೂ ಮೇಲೆ ಹೇಳಿದ ಕಾರಣಗಳಲ್ಲಿ ಯಾವುದೋ ಒಂದರಿಂದ ಅದು ತಪ್ಪಿ ಹೋಯಿತು. ಈಗ ಪೃಥ್ವಿ ನೋಡಬೇಕು. ಈ ಸಿನೆಮಾ ಬಗ್ಗೆ ಕೆಲವ್ರು ಓ.ಕೆ ಅಂದ್ರು, ಕೆಲವ್ರು ಸೂಪರ್ ಅಂದ್ರು, ಕೆಲವರು ಇನ್ನೇನೋ ಅಂದರು. ಅದೆಲ್ಲಾ ಗೊತ್ತಿಲ್ಲ. ಪ್ರಚಲಿತ ಘಟನೆಗಳ, ಸಮಕಾಲೀನ ಕತೆಯ ಸಿನೆಮಾಗಳು ಹೀಗೆ ಕಮರ್ಶಿಯಲ್ಲಾಗಿ ಬರಬೇಕು. ನೋಡ್ಬೇಕಾದ ಸಿನೆಮಾಗಳ ಪಟ್ಟಿಗೆ ಇದು ಸೇರಿದೆ.

ಇಜ್ಜೋಡು: ನೋಡಿದವರ್ಯಾರೂ ಚೆನ್ನಾಗಿದೆ ಅನ್ನಲಿಲ್ಲ. ಆದ್ರೂ ನನಗೆ ನೋಡಬೇಕು ಅನ್ನಿಸಿಬಿಟ್ಟಿದೆ. ಸತ್ಯು ಸಿನೆಮಾ ಎನ್ನುವುದು ಒಂದು ಕಾರಣವೆಂದೂ, ಮೀರಾ ಜಾಸ್ಮಿನ್ ಮತ್ತೊಂದು ಪ್ರಬಲ ಕಾರಣವೆಂದೂ ಡೌಟು ! ;) ಆದರೆ ಯಾವ ಟಾಕೀಸಿನಲ್ಲೂ ಇರುವುದು ಖಾತ್ರಿ ಇಲ್ಲ. ಇದ್ದರೂ ನಾ ಹೋಗುವುದ್ಯಾವಾಗ ಅಂತ ನನಗೇ ಖಾತ್ರಿ ಇಲ್ಲ.

ಬೊಂಬಾಟ್ ಕಾರ್: ಈ ಗ್ರಾಫಿಕ್ಸ್ ಸಿನೆಮಾ ಡಿಫರೆಂಟಾಗಿ ಇರಬಹುದು, ಹೊಸ ಪ್ರಯೋಗ ಅನ್ನಿಸಿದೆ. ಇದ್ನೂ ನೋಡ್ಬೇಕು ಅನ್ಕೊಂಡಿದ್ದೀನಿ. ಮಕ್ಕಳ ಚಿತ್ರ ಅಂತ ಮೂಗು ಮುರಿದರೆ ನನಗೇನಾಗಬೇಕಿಲ್ಲ. ಟಾಮ್ ಅಂಡ್ ಜೆರ್ರಿ, ರೋಡ್ ರನ್ನರ್ ಶೋದಂತಹ ಕಾರ್ಟೂನುಗಳನ್ನು, ಅನಿಮೇಶನ್ ಮೂವಿಗಳನ್ನು ಆನಂದಿಸುವ ನನಗೆ ಮಕ್ಕಳ ಚಿತ್ರ ನೋ ಪ್ರಾಬ್ಲೆಮ್. ಸದ್ಯದಲ್ಲೇ ’ಬೊಂಬೆಯಾಟವಯ್ಯಾ’ ಅನ್ನುವ ಕನ್ನಡದ ಮೊದಲ ಅನಿಮೇಶನ್ ಮೂವಿ ಬರ್ತಾ ಇದೆ ಅನ್ನೋದು ಬಿಸಿಬಿಸಿ ಖುಷಿ ಸುದ್ದಿ.

ನಾನು, ನನ್ನ ಕನಸು: ಬಿಡುಗಡೆಯಾಗುತ್ತಿದ್ದಂತೇ ಒಳ್ಳೊಳ್ಳೇ ಅಭಿಪ್ರಾಯಗಳು ತುಂಬಿ ಹರಿದು ಬರ್ತಾ ಇವೆ. ಕಥೆ, ಕೊಸರು, ಅಭಿನಯ, ಸಂಭಾಷಣೆ ಇತ್ಯಾದಿ ಇತ್ಯಾದಿ ಎಲ್ಲಾ ಸೂಪರಂತೆ. ಮನೆಮಂದಿಯೆಲ್ಲಾ ನೋಡಬಹುದಾದ ಚಿತ್ರವಂತೆ. ಸದ್ಯಕ್ಕೆ ಮನೆ, ಮಂದಿ ಅಂತ ಯಾರೂ ಇಲ್ಲದಿರುವುದರಿಂದ ನಾವೇ ಕೆಲವು ಮಂದಿ ಹೋಗಿಬರಬೇಕು. ತೀರಾ ಅಳಿಸಲೆಂದೇ ಮಾಡಿದ ಸೆಂಟಿಮೆಂಟಿನ ಚಿತ್ರಗಳು ನನಗೆ ಸರಿಹೋಗುವುದಿಲ್ಲ. ಅದು ನೈಜತೆಯಿಂದ ಕೂಡಿದ್ದರೆ, ಒಂದು ಲೆವೆಲ್ ನಲ್ಲಿದ್ದರೆ ಓ.ಕೆ. ’ನಾನು ನನ್ನ ಕನಸು’ ಎಲ್ಲಾ ಹದವಾಗಿರುವ ಕ್ವಾಲಿಟಿ ಸಿನೆಮಾ ಅಂತೆ.

ಮುಂದೆ ಬರುವ ಎರಡು ವೀಕೆಂಡು ಮದುವೆ, ಮುಂಜಿ ಅಂತ ಬುಕ್ಕಾಗಿ ಹೋಗಿದೆ. ಅದನ್ನು ಮುಗಿಸಿಕೊಂಡು ಊರು ಸುತ್ತಿಕೊಂಡು ವಾಪಸ್ಸು ಬರುವವರೆಗೂ ೪ರಲ್ಲಿ ಎರಡಾದರೂ ಇನ್ನೂ ಸಿನೆಮಾ ಮಂದಿರಗಳಲ್ಲಿ ಭರ್ಜರಿ ಪ್ರದರ್ಶನ ಕಾಣುತ್ತಿರುತ್ತವೆ ಎಂಬ ಭರವಸೆ ಇದೆ. ತಪ್ಪಿಹೋದರೆ ಡಿ.ವಿ.ಡಿ. ಗತಿ.

ನೋಡ್ಲೇಬೇಕು.

ಮಂಗಳವಾರ, ಮೇ 11, 2010

ಮೂರು ವರ್ಷವಾಯ್ತು

ಟಿಪಿಕಲ್ ಹುಡುಗರಂತೆ ಬರ್ತ್ ಡೇಗಳು ನನಗೆ ನೆನಪಿರುವುದಿಲ್ಲ. ತೀರಾ ಒಂದೆರಡು ಆಪ್ತರು ಹುಟ್ಟಿದ ದಿನ ಬಿಟ್ಟರೆ ಮತ್ಯಾರದ್ದೂ ನನಗೆ ನೆನಪಿಟ್ಟುಕೊಳ್ಳಲಾಗಿಲ್ಲ. ಇದರಲ್ಲಿ ನಾನು ನಿರ್ಗುಣಂ ನಿರ್ವಿಷೇಶಂ. ಇದರಿಂದಲೇ ಹಲವಾರು ಬಾರಿ ಮುನಿಸು, ರಮಿಸು ಎಲ್ಲಾ ಆಗಿದೆ. ಆದರೂ ಆ ವಿಷಯದಲ್ಲಿ ಇನ್ನೂ ನಾನು ಅಜೇಯಂ ಅಚಿಂತ್ಯಂ, ಬಹುಶಃ ಅನಂತಂ. ಆದರೆ ಅದ್ಯಾಕೋ ಗೊತ್ತಿಲ್ಲ ನನ್ನ ಬ್ಲಾಗ್ ವಿಷಯದಲ್ಲಿ ಮಾತ್ರ ಹಾಗಾಗುವುದಿಲ್ಲ. ಈ ಎರಡೂ ವರ್ಷ ನೀಟಾಗಿ ನೆನಪಿತ್ತು. ಮೂರನೇ ವರ್ಷವೂ ಒಂದು ವಾರದ ಕೆಳಗೆ ನೆನಪಿತ್ತು, ಆದರೆ ಆಮೇಲೆ ಮರೆತೇ ಹೋಯಿತು. ನಿನ್ನೆ ರಾತ್ರಿ ತರಾಸು 'ವಿಜಯೋತ್ಸವ' ಕಾದಂಬರಿ ಓದುತ್ತಾ ಮೆಹರ್ಬಾನುವಿನ ಸೌಂದರ್ಯ ಕಲ್ಪಿಸಿಕೊಳ್ಳುತ್ತಿರುವಾಗಲೇ ಇವತ್ತು ಬ್ಲಾಗ್ ನ ಹುಟ್ಟಿದ ಹಬ್ಬ ಎಂದು ನೆನಪಾಗಿ ಬಿಡ್ತು! ಮರೆತಿದ್ದಕ್ಕೆ ಸಂಕಟವಾದರೂ ಕೂಡ ತೀರ ಬೆಂಗಳೂರಿನಂತೆ ಸೆಪ್ಟೆಂಬರಿನ ಗಣೇಶೋತ್ಸವವನ್ನು ನವೆಂಬರಿನಲ್ಲಿ ಮಾಡುವಷ್ಟು ತಡವೇನೂ ಆಗಿರಲಿಲ್ಲವಾದ್ದರಿಂದ ಸಮಾಧಾನವಾಯ್ತು.

ಹೌದು. ನಿನ್ನೆ ಅಂದರೆ ಮೇ ೧೦ ಕ್ಕೆ ನನ್ನ ಬ್ಲಾಗು ಶುರುವಾಗಿ ಮೂರು ವರ್ಷಗಳಾಯ್ತು. ಬ್ಲಾಗ್ ಲೋಕದ ಹಲವಾರು ಹಿರಿಕಿರಿಯರ ಮಧ್ಯೆ ನಾನು ನಿಂತಿದ್ದೇನೆ. ಹಿಂದಿನ ವರ್ಷಕ್ಕಿಂತ ಕಡಿಮೆ ಪೋಸ್ಟ್ ಗಳನ್ನು ಹಾಕಿದ್ದೇನೆ ಎಂಬುದು ಒಂದು ಹೈಲೈಟು. ಮೂರು ವರ್ಷಗಳಾದರೂ ನೂರು ಪೋಸ್ಟು ತಲುಪಿಲ್ಲ ಎನ್ನುವುದು ಮತ್ತೊಂದು ಹೈಲೈಟು! ನಾನು ಬ್ಲಾಗ್ ಬರೆಯುವ ವಿಷಯ ಕೆಲವು ಆಪ್ತರಿಗೂ, ಸಂಬಂಧಿಕರಿಗೂ ತಿಳಿದುಹೋಗಿರುವುದರಿಂದ, ಬ್ಲಾಗ್ ಕೊಂಡಿಯೂ ಸಿಕ್ಕಿರುವುದರಿಂದ ಸ್ವಲ್ಪ ತೊಂದರೆಯಾಗಿದೆ ಎಂದೇ ಹೇಳಬಹುದು. ನಾವು ಬರೆಯುವುದನ್ನು ತೀರ ಹತ್ತಿರದವರೆಲ್ಲಾ ಓದಲು ಶುರುಮಾಡಿಬಿಟ್ಟರೆ ಮುಕ್ತವಾಗಿ ಬರೆಯಲು ತೊಂದರೆಯಾಗುತ್ತದೆ ಎಂದು ಅವತ್ತು ನಾನೂ ಮತ್ತು ಕಡಲ ತೀರದ ಕಾಮತ್ ಮಾಮ್ಸ್ ಮಾತಾಡಿಕೊಂಡಿದ್ದೆವು. ಹೌದು, ಅದು ನಿಜ, ಇರಲಿ, ಏನೂ ಮಾಡಕ್ಕಾಗಲ್ಲ. ಹೇಗೋ ಸಂಭಾಳಿಸಿಕೊಳ್ಳುವುದೊಂದೇ ಬಾಕಿ.

ಯಾವುದೋ ಕಾಲಘಟ್ಟದಲ್ಲಿ ನಿಂತು ಸಂಭ್ರಮಿಸುವಾಗ ವೈಯಕ್ತಿಕ ವಿಷಯಗಳನ್ನಷ್ಟೇ ನೋಡಿಕೊಳ್ಳದೇ ಜೊತೆಗೆ ಸಂಬಂಧಪಟ್ಟ ವಾತಾವರಣದ ವಿಷಯಗಳ ಬದಲಾವಣೆಗಳ ಬೆಳವಣಿಗೆಗಳ ಬಗ್ಗೆಯೂ ಅವಲೋಕಿಸಬಹುದು ಅಂತ ಅಡಿಗರು ಹೇಳುತ್ತಿದ್ದರು. ಕನ್ನಡದಲ್ಲಿ ಇವತ್ತು ಸಾವಿರಾರು ಬ್ಲಾಗ್ ಗಳು ಇವೆ. ಬ್ಲಾಗ್ ಎಂದರೆ ಪತ್ರಿಕೆಯಂತೆ, ಬ್ಲಾಗ್ ಎಂದರೆ ಪುಸ್ತಕದಂತೆ, ಬ್ಲಾಗ್ ಎಂದ ಘನ ಗಂಭೀರ ಸಾಹಿತ್ಯದಂತೆ ಬರೀ ಕತೆ ಕವನ ವಿಚಾರ ವಿಶ್ಲೇಷಣೆಗಳನ್ನೇ ಬರೆಯಬೇಕು ಎಂಬುದರಿಂದ ಕ್ರಮೇಣ ಹೊರಬಂದಂತೆ ಕಾಣುತ್ತಿರುವ ಕನ್ನಡ ಬ್ಲಾಗ್ ಲೋಕದಲ್ಲಿ ವೈವಿಧ್ಯಗಳು ಸಿಕ್ಕಾಪಟ್ಟೆ ಬರುತ್ತಿವೆ. ಸಂತೋಷ. ಆದರೂ ಕೂಡ ಬಹಳಷ್ಟು ಕಡೆ ಯಾಕೋ ಹೇಳುವ ವಿಷಯವನ್ನು ಸ್ವಲ್ಪ ಕಾವ್ಯಮಯವಾಗಿಯೇ ಹೇಳುವ ಪ್ರಯತ್ನ ಕಾಣುತ್ತಿದೆ. ತಮ್ಮ ಬ್ಲಾಗ್ ಅನ್ನು ತಿದ್ದಿ ತೀಡಿ ಅಲಂಕಾರ ಮಾಡಿ ಮನೆಗಿಂತಲೂ ಓರಣವಾಗಿಟ್ಟುಕೊಳ್ಳುವ ಮಂದಿಯಿಂದ ಹಿಡಿದು ಅಲ್ಲಿ ಇಲ್ಲಿ ಅಲ್ಲಲ್ಲಿ ಎಲ್ಲೆಲ್ಲೋ ಪ್ರಕಟವಾದ ಅವರ ಚಂದದ ಬರಹಗಳನ್ನು ಹಾಕುವವರೂ ಇದ್ದಾರೆ. ಎಲ್ಲರಿಗೂ ಇರುವಂತೆ ನನ್ನ ಅಣ್ಣನೊಬ್ಬ ಅಮೆರಿಕಾದಲ್ಲಿದ್ದಾನೆ. ಅವನು ಬ್ಲಾಗ್ ಎಂಬುದು ಬಳಕೆಗೆ ಬಂದ ಕಾಲದಿಂದಲೇ ಬ್ಲಾಗುವುದನ್ನು ಶುರುಮಾಡಿದವನು. ಬ್ಲಾಗ್ ಎಂಬುದು ೧೦ ರಿಂದ ೨೦ ನಿಮಿಷದಲ್ಲಿ ಬರೆಯುವಂತದ್ದೂ ಮತ್ತು ೫ ನಿಮಿಷದಲ್ಲಿ ಓದಿ ಮುಗಿಸುವಂತದ್ದೂ ಆಗಿರಬೇಕು ಅಂತ ಆತ ಹೇಳುತ್ತಿರುತ್ತಾನೆ. ಇರಲಿ ಬಿಡಿ. ನಾವು ಹೀಗೆಲ್ಲಾ ಮಿತಿ ಹಾಕಿಕೊಳ್ಳುವುದು ಬೇಡ. ದಿನಾ ದಿನಾ ಹೊಸ ಹೊಸ ಬ್ಲಾಗಿನ ಕೊಂಡಿಗಳು ಸಿಗುತ್ತಿವೆ. ನನ್ನ ಗೂಗಲ್ ರೀಡರ್ ಒಂದು ಸಮೃದ್ಧ ಪತ್ರಿಕೆಯಂತಾಗಿದೆ. ಬ್ಲಾಗ್ ಗಳಲ್ಲಿ ಬಹುಸಂಖ್ಯೆಯಲ್ಲಿ ಪತ್ರಕರ್ತರು ಕಾಲಿಟ್ಟಿದ್ದು, ಓದುಗರು ನಾಡಿನ ಪತ್ರಿಕೆಗಳ ಅಪದ್ಧಗಳನ್ನು ಬ್ಲಾಗ್ ಗಳಲ್ಲೇ ಝಾಡಿಸುತ್ತಿರುವುದೂ, ಶರ್ಮಣ್ಣ ತಮ್ಮ ಬ್ಲಾಗಿನಲ್ಲೇ ತಮ್ಮ ಆಸ್ತಿ ಅಫಿಡವಿಟ್ಟು ಸಲ್ಲಿಸಿದ್ದು ವಿಶೇಷವಾಗಿದೆ. ಈ ಪ್ಯಾರಾದ ಮೊದಲನೇ ಸಾಲಿನಲ್ಲಿರುವಂತೆ ಅಡಿಗರು ಅದ್ಯಾವಾಗ ಹಾಗೆ ಹೇಳಿದ್ರು ಅಂತ ಅನುಮಾನವೇನಾದ್ರೂ ಬಂತಾ? ನಾನು ನೆನಪಿಸಿಕೊಂಡಿದ್ದು ಕವಿ ಗೋಪಾಲಕೃಷ್ಣ ಅಡಿಗರಲ್ಲ, ಅದು ಪ್ರಕಾಶ ನಗರದ ೨೩ನೇ ಕ್ರಾಸಿನ ಮೂಲೆಯಲ್ಲಿ ಹೋಟೆಲ್ ಇಟ್ಟಿರುವ ಅಡಿಗರ ಮಾತು. ;)

ಈ ವರ್ಷವೂ ಬ್ಲಾಗಿನಿಂದ ಕೆಲವು ಹೊಸ ಗೆಳೆಯರು ಸಿಕ್ಕಿದ್ದಿದೆ. ಎಂದಿನಂತೆ ನನ್ನ ಆಸಕ್ತಿ , ಹವ್ಯಾಸ, ಚಟುವಟಿಕೆಗಳಿಗೆ ಬ್ಲಾಗ್ ಪ್ರತ್ಯಕ್ಷ ಹಾಗೂ ಪರೋಕ್ಷವಾಗಿ ಸಹಾಯ ಮಾಡುತ್ತಿದೆ. ಹೇಳಿಕೊಂಡರೆ ಕೇಳಿಸಿಕೊಂಡವರಿಗೆ ಸವಿ ಅನ್ನಿಸಬಹುದಾದ ಹೇಳಿಕೊಳ್ಳಲಾಗದ ತಲೆನೋವೊಂದು ಅನುಭವವಾಗಿದೆ. ಹಿಂದೊಮ್ಮೆ ಬ್ಲಾಗ್ ಕಮೆಂಟ್ ವಿಷಯದಲ್ಲಿ ವಿದೇಶದಲ್ಲಿರುವ ವಿ-ಜ್ಞಾನಿಯೊಬ್ಬರು ಹಾಕಿರುವ ಧಮಕಿ ಇನ್ನೂ ನೆನಪಿದೆ. ಕೆಲಸ, ಓದು ಬರವಣಿಗೆ ನಡೆಯುತ್ತಲಿದೆ. ಬರೆಯುವ ವಿಷಯದಲ್ಲಿ ನಾನು ಸೋಮಾರಿ ಏನಲ್ಲದಿದ್ದರೂ ಬರೆಯುವುದರಲ್ಲಿ ತಾಳ್ಮೆ ಸ್ವಲ್ಪ ಕಡಿಮೆ ಇದೆ. ಇದು ಮುಂದುವರೆಯಲಿದೆ ಎಂಬುದೇ ಸದ್ಯದ ಭರವಸೆ. ಬರಹ ಸಾಫ್ಟ್ ವೇರಿಗೂ, ಗೂಗಲ್ ಬ್ಲಾಗ್ ಸ್ಪಾಟಿಗೂ, ಬ್ಲಾಗಿಗೆ ಹಿಟ್ ಮೇಲ್ ಹಿಟ್ ಕೊಡುತ್ತಿರುವ ಎಲ್ಲಾ ರೀತಿಯ ಓದುಗರಿಗೂ ನನ್ನ ಪ್ರೀತಿ, ಕೃತಜ್ಞತೆ, ಧನ್ಯವಾದಗಳಿವೆ.

****

ಹಿಂದಿನ ಎರಡು ವರ್ಷ..

'ವರ್ಷ ಕಳೆಯಿತು'
ವಿಕಾಸದ ಹಾದಿಯಲ್ಲಿ ೨ ವರ್ಷ!