ಮಂಗಳವಾರ, ಅಕ್ಟೋಬರ್ 19, 2010

ಹಳೆಯ ’ಕಸ್ತೂರಿ’ಗಳು ಬೇಕಾ?

ಕನ್ನಡದ ಹಲವಾರು ಹಳೆಯ ಮ್ಯಾಗಜೀನ್ ಗಳಲ್ಲಿ ಹುಬ್ಬಳ್ಳಿಯ ಲೋಕಶಿಕ್ಷಣ ಟ್ರಸ್ಟ್ ನ 'ಕಸ್ತೂರಿ' ಮ್ಯಾಗಜೀನ್ ಕೂಡ ಒಂದು. ಇದು ಅರ್ಧ ಶತಮಾನದಿಂದ ಪ್ರಕಟವಾಗುತ್ತಿದೆ.  ರೀಡರ್ಸ್ ಡೈಜೆಸ್ಟ್ ಮಾದರಿಯ ಪತ್ರಿಕೆಯೊಂದನ್ನು ಕನ್ನಡದಲ್ಲಿ ತರಬೇಕು ಎಂಬ ಉದ್ದೇಶವನ್ನಿಟ್ಟುಕೊಂಡು ಶುರುವಾಗಿ, ಇವತ್ತು ರೀಡರ್ಸ್ ಡೈಜೆಸ್ಟ್ ಮ್ಯಾಗಜಿನ್ನೇ ಬಾಗಿಲು ಹಾಕಿಕೊಳ್ಳುವ ಪರಿಸ್ಥಿತಿ ತಲುಪಿದ್ದರೂ ನಮ್ಮ ’ಕಸ್ತೂರಿ’ ಮಾತ್ರ ತಡೆಯಿಲ್ಲದೇ ನೆಡೆಯುತ್ತಿದೆ. ಪತ್ರಿಕೋದ್ಯಮದ ಹಲವು ಘಟಾನುಘಟಿಗಳೆಲ್ಲಾ ಇದರಲ್ಲಿ ಕೆಲಸ ಮಾಡಿದ್ದಾರೆ. ಉತ್ತರಕರ್ನಾಟಕದ ಬಹುತೇಕ ವಿದ್ಯಾವಂತರ ಮನೆಗಳಲ್ಲಿ ಮೊದಲಿನಿಂದಲೂ ಕಸ್ತೂರಿ ಒಂಥರಾ ಸಹಜ ಓದಿನ ಮ್ಯಾಗಜೀನ್. ಕತೆ, ಅನುಭವ, ಲಲಿತ ಪ್ರಬಂಧ, ಹಾಸ್ಯಗಳಿಂದ ಹಿಡಿದು ಜ್ಞಾನ-ವಿಜ್ಞಾನ, ಇತಿಹಾಸ, ಫಿಕ್ಷನ್, ಆಧ್ಯಾತ್ಮ, ಪರಿಸರ, ವೈದ್ಯಕೀಯ ಮುಂತಾದ ಎಲ್ಲಾ ರೀತಿಯ ವಿಷಯಗಳನ್ನೂ ತುಂಬಿಕೊಂಡು ಬರುವ ಕಸ್ತೂರಿಯ ಪ್ರತಿ ಸಂಚಿಕೆಯೂ ಒಂದು ವಿಶೇಷ ಡೈಜೆಸ್ಟ್. ವಿಷಯ ವೈವಿಧ್ಯಗಳು, ಮಾಹಿತಿಪೂರ್ಣ ಲೇಖನಗಳು ಅದರ ಹೈಲೈಟ್ಸ್.


ವಿಷಯ ಏನೆಂದರೆ, ನಮ್ಮ ಮನೆಯಲ್ಲಿಯೂ ಎಷ್ಟೋ ವರ್ಷಗಳಿಂದ ಕಸ್ತೂರಿ ಓದುತ್ತಿದ್ದೇವೆ. ಹಿಂದಿನ ಹಲವು ವರ್ಷಗಳ ಕಸ್ತೂರಿಗಳು ಮನೆಯಲ್ಲಿ ಇವೆ. ಎಷ್ಟೋ ಸಲ ಅದನ್ನು ರದ್ದಿಗೆ ಹಾಕಬೇಕು ಅನಿಸಿದ್ದರೂ ಅಷ್ಟು ಮಾಹಿತಿಗಳ ಪುಸ್ತಕಗಳನ್ನು ಸುಮ್ಮನೇ ವ್ಯರ್ಥವಾಗಿ ರದ್ದಿಗೆ ಹಾಕಲು ಮನಸಾಗದೇ ಹಾಗೇ ಇದೆ. ಈಗೊಂದು ಆರೇಳು ವರ್ಷಗಳ ಹಿಂದೆ ರವಿಬೆಳಗೆರೆಯವರು 'ಓ ಮನಸೇ' ಎಂಬ ಪತ್ರಿಕೆ ಮತ್ತೆ ಶುರುಮಾಡಲು ಹೊರಟಿದ್ದಾಗ ಹಳೆಯ ಕಸ್ತೂರಿಗಳನ್ನು ಯಾರಾದರೂ ಕೊಡುವುದಾದರೆ ಕೊಳ್ಳುವುದಾಗಿ ಪ್ರಕಟಿಸಿದ್ದರು. ಆಗಲೂ ಕೊಡಲು ಮನಸ್ಸಿಲ್ಲದೇ ಹಾಗೇ ಇಟ್ಟುಕೊಂಡಿದ್ದರ ಪರಿಣಾಮ ಇವತ್ತು ಸುಮಾರು ೧೫ ವರ್ಷಗಳ 'ಕಸ್ತೂರಿ' ಮನೆಯ ಪೆಟ್ಟಿಗೆಯಲ್ಲಿ ಸಂಗ್ರಹವಾಗಿದೆ. ಈ ಬಾರಿ ಮನೆಗೆ ಹೋದಾಗ ಇನ್ನೂ ಇದನ್ನು ಇಟ್ಟುಕೊಳ್ಳುವುದು ಬೇಡ, ರದ್ದಿಗೆ ಹಾಕೇ ಬಿಡೋಣ ಅಂತ ಹೊರಟವನಿಗೆ ಅದಕ್ಕೂ ಮೊದಲು ಯಾರಿಗಾದರೂ ಪ್ರಯೋಜನವಾಗುವುದಿದ್ದರೆ ಒಮ್ಮೆ ಕೇಳಿನೋಡೋಣ ಎನ್ನಿಸಿತು.
 
ಆದ್ದರಿಂದ ಈ ಬ್ಲಾಗ್ ಓದಿದವರು, ಯಾರಾದರೂ ಆಸಕ್ತರು, ಪತ್ರಿಕೆಗಳಲ್ಲಿ ಕೆಲಸ ಮಾಡುವವರು, ಸಂಗ್ರಹಕಾರರು ಅಥವಾ ಮತ್ಯಾರಿಗೇ ಆಗಲಿ ಹಳೆಯ ಕಸ್ತೂರಿಗಳು (೧೯೯೪ರಿಂದ ೨೦೦೯) ಬೇಕೆನಿಸಿದರೆ, ಅದರಿಂದ ಉಪಯೋಗವಾಗುತ್ತದೆ ಎಂದೆನಿಸಿದರೆ ನನ್ನನ್ನು ಸಂಪರ್ಕಿಸಿ ಅಥವಾ ಈ ಬಗ್ಗೆ ಏನಾದರೂ ಸಲಹೆಗಳಿದ್ದರೆ ತಿಳಿಸಿ.

ಬೋಂಡಾಬಜ್ಜಿ ಕಟ್ಟೋರ್ಯಾರೂ ಕೇಳ್ಬೇಡಿ, ಅದಕ್ಕೆ ಮಾತ್ರ ಕೊಡಲ್ಲ ;)
 
 
ವಿಕಿಪಿಡಿಯಾದಲ್ಲಿ ಕಸ್ತೂರಿ

ಬುಧವಾರ, ಅಕ್ಟೋಬರ್ 6, 2010

ಭೈರಪ್ಪ ಎಂಬ STAR WRITER

ಪ್ರಕಟವಾದ ಮೊದಲನೇ ವಾರವೇ ಮೂರು ಮುದ್ರಣ, ಅಧಿಕೃತವಾಗಿ ಪುಸ್ತಕ ಬಿಡುಗಡೆ ಮಾಡಿದ್ದು ಎಂಟನೇ ಮುದ್ರಣ, ಪ್ರಕಟವಾಗುವ ಮೊದಲೇ ಬುಕ್ಕಿಂಗ್, ಎಲ್ಲಾ ಪ್ರತಿಗಳು ಖಾಲಿ, ಬೆಲೆ ದುಬಾರಿಯಾದರೂ ಎಲ್ಲಾ ಕಡೆ ಪುಸ್ತಕಗಳ ಜೋರು ಮಾರಾಟ, ಪತ್ರಿಕೆಗಳಲ್ಲಿ ಚರ್ಚೆ, ವಾದ, ವಿವಾದ, ಸಮರ್ಥನೆ, ದೂಷಣೆ - ಇಷ್ಟು ಹೇಳುತ್ತಿದ್ದಂತೆ ಎಲ್ಲರಿಗೂ ತಿಳಿದುಬಿಡುತ್ತದೆ. ಇದು ಇತ್ತೀಚೆಗೆ ಕನ್ನಡ ಸಾಹಿತ್ಯ ಲೋಕದ ವಿದ್ಯಮಾನ. ಅದು ಎಸ್.ಎಲ್. ಭೈರಪ್ಪನವರ ’ಕವಲು’ ಕಾದಂಬರಿ. ೨೩ ಮುದ್ರಣಗಳನ್ನು ಕಂಡ ಅವರ ಹಿಂದಿನ ಕಾದಂಬರಿ 'ಆವರಣ'ದ ವಿಷಯವಂತೂ ಹೇಳುವುದೇ ಬೇಡ. ಬಹುಶಃ ಈ ಮಟ್ಟಿಗೆ ಸಂಚಲನ ಉಂಟು ಮಾಡುವ ಮತ್ತೊಬ್ಬ ಬರಹಗಾರ ಭಾರತದಲ್ಲಿಲ್ಲ. ಆ ಮಟ್ಟಿಗೆ ಜನಪ್ರಿಯ. ಎಲ್ಲಾ ವಯೋಮಾನದ ಓದುಗರನ್ನು ಹೊಂದಿರುವ ಲೇಖಕರಲ್ಲೊಬ್ಬರು. ಅಧ್ಯಯನ ಶೀಲ, ಸಮರ್ಪಣಾ ಮನೋಭಾವದ ಕಾದಂಬರಿಕಾರರಾಗಿ, ಅದ್ಭುತ ಬರಹಗಾರರಾಗಿ ಭೈರಪ್ಪನವರು ಪ್ರಸಿದ್ಧಿ. ಪಕ್ಕದ ರಾಜ್ಯದ ಸಾಹಿತ್ಯ ಲೋಕದಲ್ಲೇನಾಗುತ್ತಿದೆ ಎಂದು ಸರಿಯಾಗಿ ಗೊತ್ತಾಗದಿರುವ ಈ ಪರಿಸ್ಥಿತಿಯಲ್ಲೂ ಇವರ ಹಲವಾರು ಕಾದಂಬರಿಗಳು ಭಾರತದ ಅನೇಕ ಭಾಷೆಗಳಿಗೆ ಅನುವಾದಗೊಳ್ಳುತ್ತವೆ.

ನಾನು ಓದಿದ ಇವರ ಮೊದಲ ಕಾದಂಬರಿ 'ಧರ್ಮಶ್ರೀ'. ಅದಾದ ಮೇಲೆ ಅವರ ಅಂಚು, ದಾಟು, ಪರ್ವ, ವಂಶವೃಕ್ಷ, ನಿರಾಕರಣ, ಜಲಪಾತ, ಸಾರ್ಥ ಮುಂತಾದ ಹಲವು ಕಾದಂಬರಿಗಳನ್ನು ಓದಿದ್ದೇನೆ. ಒಂದೊಂದೂ ಕೂಡ ವಿಷಯಗಳ ಆಗರವಾಗಿ ಕಂಡಿವೆ. ಇನ್ನೂ ಕೆಲವು ಓದುವುದು ಬಾಕಿ ಇವೆ. ಘಟನೆಗಳನ್ನು ಕತೆಯಂತೆ ಹೇಳಿಬಿಡಬಹುದು, ಕಾಲ್ಪನಿಕ ಕತೆಗಳನ್ನು ಹೆಣೆದುಬಿಡಬಹುದು ಆದರೆ ಅದರಲ್ಲಿನ ಪಾತ್ರಗಳ ಮನಸ್ಸಿನ ತುಮುಲಗಳನ್ನು, ಸಮಾಜ, ಧರ್ಮ, ಸಂಪ್ರದಾಯ ಸಂಬಂಧಿತ ಸಂಗತಿಗಳನ್ನು ಚಿತ್ರಿಸುವುದು ಮಾತ್ರ ಎಲ್ಲರಿಗೂ ಸಾಧ್ಯವಿಲ್ಲ. ಅದನ್ನು ಸಮರ್ಥವಾಗಿ ಮಾಡುವುದರಿಂದಲೇ ಭೈರಪ್ಪನವರು ಅತ್ಯಂತ ಯಶಸ್ವಿ ಬರಹಗಾರರೆನ್ನಬಹುದು. ಭೈರಪ್ಪನವರ ಬರವಣಿಗೆಯ ವಿಷಯಗಳು ಎಷ್ಟರ ಮಟ್ಟಿಗೆ ಸೂಕ್ಷ್ಮವಾಗಿರುತ್ತವೆ ಎಂದರೆ ಅವು ಮೇಲ್ನೋಟಕ್ಕೆ ಸುಮ್ಮನೇ ಕಥೆಯಾಗಿದ್ದರೂ ಅದು ಸರಿಯಾಗಿ ಅರ್ಥವಾಗಲು ಅಂತಹ ಸನ್ನಿವೇಶಗಳನ್ನು, ಪರಿಸ್ಥಿತಿಗಳನ್ನು, ಮನಸ್ಥಿತಿಯನ್ನು ಸ್ವತಃ ಅನುಭವಿಸಿರಬೇಕು, ಇಲ್ಲವೇ ಕಂಡಿರಬೇಕು. ಆವಾಗಲಷ್ಟೇ ಅದು ಇನ್ನೂ ಚೆನ್ನಾಗಿ ತಾಗಬಲ್ಲುದು. ಜೊತೆಗೆ ಅವರ ಕಾದಂಬರಿಗಳ ವಿಷಯ ವ್ಯಾಪ್ತಿ ಮತ್ತು ಆಳ ಎಂತವರಿಗೂ ಹೊಸ ಹೊಸ ಲೋಕಗಳನ್ನು, ಸತ್ಯಗಳನ್ನು ತೋರಿಸಿಕೊಡುವಂತವು.

ಅವರು ಬರೆಯುವ ವಿಷಯಗಳು ಕೆಲವರ ಬುದ್ಧಿಗೆ ನಿಲುಕದೇ ಇರಬಹುದು, ಇಷ್ಟೇ ಅನ್ನಿಸಬಹುದು, ಒಪ್ಪಿಗೆಯಾಗದಿರಬಹುದು, ಕೆಲವರಿಗೆ ಎಲ್ಲಾ ಬಿಟ್ಟು ಬರೀ 'ಅದು' ಮಾತ್ರ ಕಾಣಬಹುದು, ಆ ವಾದಿ, ಈ ವಿರೋಧಿ ಎಂದೆಲ್ಲಾ ಹಣೆಪಟ್ಟಿ ಕಟ್ಟಿ ಲಬೋ ಲಬೋ ಎನ್ನಬಹುದು, ಪುಸ್ತಕ ಮಾರಾಟ, ಜನಪ್ರಿಯತೆ ಇವು ಗುಣಮಟ್ಟದ ಮಾನದಂಡವಲ್ಲ ಅಂತ ವಾದಿಸಬಹುದು, ಪೂರ್ವಗ್ರಹಗಳಿರಬಹುದು, ’ಆವರಣ’ದ ಆಫ್ಟರ್ ಎಫೆಕ್ಟುಗಳೂ ಇರಬಹುದು ಅಥವಾ ಅದು ನಿಜವೇ ಆಗಿರಬಹುದು. ಇರಲಿ. ಎಷ್ಟೋ ಜನಕ್ಕೆ 'ಪರ್ವ' ಇಷ್ಟವಾಗುವುದಿಲ್ಲ, ಮತ್ಯಾರಿಗೋ 'ಕವಲು' ಸಮಾಧಾನವಾಗುವುದಿಲ್ಲ. ಅದೆಲ್ಲಾ ಅವರವರ ಮನೋಭಾವಕ್ಕೆ ಸಂಬಂಧಿಸಿದ್ದು. ಒಟ್ಟಿನಲ್ಲಿ ಅವರ ವಿರೋಧಿಗಳೂ ಕೂಡ ನಿರ್ಲಕ್ಷಿಸಲಾಗದ ಬರಹಗಾರ. ನೀವು ರೈಟಿಸ್ಟ್ ಅನ್ನುವ ಆರೋಪವಿದೆಯಲ್ಲಾ ಅಂತ ಸಂದರ್ಶನದಲ್ಲಿ ಭೈರಪ್ಪನವರಿಗೆ ಕೇಳಿದ್ದಕ್ಕೆ, "ನನಗೆ ರೈಟು ಲೆಫ್ಟು ಅನ್ನುವುದರಲ್ಲಿ ನಂಬಿಕೆಯಿಲ್ಲ. ಆದರೆ ನೀವು ರೈಟ್ ಅಥವಾ ರಾಂಗ್ ಅನ್ನುವ ಅರ್ಥದಲ್ಲಿ ಕೇಳುತ್ತೀರೆಂದಾದರೆ, ಹೌದು ನಾನು ರೈಟಿಸ್ಟು" ಎಂದರು. ಹೌದು, ನನಗೂ ಸೇರಿದಂತೆ ಬಹುತೇಕ ಓದುಗರಿಗೆ ಈ ರೈಟು ಲೆಫ್ಟು ಬೇಡ, ನಮಗೆ ಬೇಕಾಗಿರುವುದು ರೈಟ್ ಆಗಿ ಬರೆಯುವ ರೈಟರ್ ಗಳು ಮಾತ್ರ.

ಯಾರೇ ಕನ್ನಡ ಪುಸ್ತಕ ಓದುವಿಕೆಯಲ್ಲಿ ಆಸಕ್ತಿ ತೋರಿಸಿದ್ದಾದರೆ ನಾನು ಅವರಿಗೆ ಮೊದಲು ಸಲಹೆ ಮಾಡುವುದು ಭೈರಪ್ಪ ಮತ್ತು ತೇಜಸ್ವಿಯವರ ಪುಸ್ತಕಗಳನ್ನು. ಅದನ್ನು ಓದಿದವ ತಾನಾಗೇ ಓದುವಿಕೆಯನ್ನು ಮುಂದುವರೆಸಿಕೊಂಡು ಹೋಗುತ್ತಾನೆಂದು ಗ್ಯಾರಂಟಿ ಹೇಳಬಹುದು. ಬೆಂಗಳೂರು ಮಂಗಳೂರು ಶಿವಮೊಗ್ಗದಂತಹ ಊರುಗಳಲ್ಲಿ ಬಿಟ್ಟರೆ ಬೇರೆ ಕಡೆಗಳಲ್ಲಿ ಪುಸ್ತಕ ಓದುಗರ ಸಂಖ್ಯೆ ಕಡಿಮೆಯೆಂದೇ ಹೇಳಬಹುದು. ಅದಕ್ಕೆ ಹಲವು ಕಾರಣಗಳಿವೆ. ನಮ್ಮ ಪತ್ರಿಕೆಗಳು ಕೂಡ ಇವತ್ತಿಗೂ ಸಾಹಿತ್ಯವನ್ನು ಸಪ್ಪೆಸಾರಿನಂತೆಯೇ ಬಡಿಸುತ್ತಾ ಬಂದಿವೆ. ನಮ್ಮಲ್ಲಿ ಬಹಳ ಜನ ಉತ್ತಮ ಬರಹಗಾರರಿದ್ದಾರೆ. ಇಷ್ಟೆಲ್ಲಾ ಪತ್ರಿಕೆಗಳು, ಎಲೆಕ್ಟ್ರಾನಿಕ್ ಮಾಧ್ಯಮಗಳು ಇದ್ದರೂ ಪುಸ್ತಕಗಳ ಪ್ರಚಾರಕ್ಕೆ ಮತ್ತು ಓದುವಿಕೆಯನ್ನು ಜನಪ್ರಿಯಗೊಳಿಸಲು ಹೆಚ್ಚು ಪ್ರಯತ್ನ ಮಾಡಿದಂತೆ ಕಾಣುವುದಿಲ್ಲ. ಈ ಪರಿಸ್ಥಿತಿಯಲ್ಲೂ ಒಬ್ಬ ಲೇಖಕನನ್ನು ಜನ ಅಷ್ಟು ಇಷ್ಟಪಟ್ಟು ಕಾದು ಓದುತ್ತಾರೆನ್ನುವುದು ಸಾಮಾನ್ಯ ಸಂಗತಿಯಲ್ಲ. ಇಂತಹ ಲೇಖಕರು ಕರ್ನಾಟಕದಲ್ಲಿರುವುದು ನಮ್ಮ ಹೆಮ್ಮೆ.


ಅವರೊಬ್ಬ ಸ್ಟಾರ್ ರೈಟರ್ !