ಗುರುವಾರ, ಜುಲೈ 26, 2012

ಅನಂತಪದ್ಮನಾಭ ಗುಡಿಯಲ್ಲಿ ನೀಲಿಶಲ್ಯಧಾರಿಗಳು


ನೀವು ಯಾವುದಾದರೂ ಮಿಲಿಟರಿ ಬೇಸ್ ಒಳಗೆ ಹೋಗಿದ್ದೀರಾ? ಅಲ್ಲಿನ ಭದ್ರತೆ ಹೇಗಿರುತ್ತೆ ಅಂತ ನೋಡಿದ್ದೀರಾ?  ನಾನಂತೂ ಹೋಗಿಲ್ಲ, ಬರೀ ಸಿನೆಮಾಗಳಲ್ಲಿ ನೋಡಿದ್ದಷ್ಟೇ. ಆದರೆ ಮಿಲಿಟರಿ ಬೇಸ್ ಎಂದರೆ ಹೀಗಿರಬಹುದು ಎಂದು ಅನ್ನಿಸಿದ್ದು ತಿರುವನಂತಪುರದ ಅನಂತಪದ್ಮನಾಭ ದೇವಸ್ಥಾನದಲ್ಲಿ! ಅಲ್ಲಿ ಅಂತಹ ಸಂಪತ್ತಿದೆ ಎಂದು ಗೊತ್ತಾದ ಮೇಲೆ ದೇವಸ್ಥಾನಕ್ಕೆ ಇದ್ದಕ್ಕಿದ್ದಂತೇ ಸ್ಟಾರ್ ವ್ಯಾಲ್ಯೂ ಬಂದು ಭೇಟಿ ಕೊಡುವವರ ಸಂಖ್ಯೆ ಬಹಳವಾಗಿದೆ.

ಬಹುಶಃ ಕೇರಳದ ಎಲ್ಲಾ ದೇವಾಲಯಗಳಲ್ಲೂ ಪ್ಯಾಂಟ್, ಅಂಗಿ, ಬನಿಯನ್ ಗೆ ಪ್ರವೇಶ ಇಲ್ಲ. ಪಂಚೆ ಉಟ್ಟುಕೊಂಡರೆ ಮಾತ್ರ ಗುಡಿ ಒಳಗೆ ಹೋಗಬಹುದು. ಇಲ್ಲೂ ಕೂಡ ಹಾಗೇ. ಅಂಗಿ ಪ್ಯಾಂಟು ತೆಗೆದಿಡಲು ಮತ್ತು ಪಂಚೆ ಬಾಡಿಗೆಗೆ ಪಡೆಯಲು (ಅಥವಾ ಖರೀದಿಗೆ) ಹೊರಗೆ ವ್ಯವಸ್ಥೆ ಇತ್ತು. ಪ್ರವೇಶ ದ್ವಾರದಲ್ಲಿ ತಪಾಸಣೆ.  ಮೈಮೇಲೆ ಪಂಚೆ ಶಲ್ಯ ಮಾತ್ರ ಇದ್ದರೂ ಅದನ್ನೇ ಎರಡೆರಡು ಬಾರಿ ತಡಕಾಡಿದರು. ಯಾವುದೇ ಚೀಲ, ಪರ್ಸ್, ಸೆಲ್ ಫೋನ್, ನೀರಿನ ಬಾಟಲಿ, ಏನನ್ನೂ ಬಿಡುವುದಿಲ್ಲ. ಆಮೇಲೆ ಮೆಟಲ್ ದಿಟೆಕ್ಟರ್. ಅದರಲ್ಲಿ ಹಾಯುವಾಗ ಅದು ಸದ್ದು ಮಾಡಿದರೆ ಪಕ್ಕಕ್ಕೆ ಕರೆದು ಮತ್ತೆ ತಪಾಸಣೆ. ಅಲ್ಲೂ ಪಾಸ್ ಆಗಿ ಮುಖ್ಯದ್ವಾರ ದಾಟಿ ಮುಂದೆ ನಡೆಯುತ್ತಿದ್ದಂತೇ ಅಲ್ಲೊಂದಿಷ್ಟು ಜನ ನಮ್ಮನ್ನೇ ನೋಡುತ್ತಿದ್ದರು. ಇವರ್ಯಾಕೆ ಹೀಗೆ ನೋಡುತ್ತಾರೆ ಅಂತ ಅರ್ಥಾಗಲಿಲ್ಲ. ಹತ್ತಿರಕ್ಕೆ ಕರೆದರು. ಆಗ ಗೊತ್ತಾಗಿದ್ದು ಅವರೂ ಕೂಡ ಪೋಲೀಸರು ಎಂದು! ಅವರ್ಯಾರೂ ಖಾಕಿಯಲ್ಲಿ ಇರಲಿಲ್ಲ. ದೇವಸ್ಥಾನದ ಭದ್ರತೆಗೆಂದೇ ಇರುವ ಪೋಲೀಸರಿಗೂ ಅಲ್ಲಿ ಪಂಚೆಯೇ ಸಮವಸ್ತ್ರ. ಹೆಗಲ ಮೇಲೆ ಹೊದೆಯಲು ಹಿಂಭಾಗದಲ್ಲಿ ’ಪೋಲೀಸ್’ ಎಂದು ಬರೆದಿರುವ ನೀಲಿ ಬಣ್ಣದ ಶಲ್ಯ. ಮತ್ತೊಮ್ಮೆ ತಪಾಸಣೆ ಮಾಡಿದರು. ಮುಂಭಾಗದ ಆವರಣದಲ್ಲೆಲ್ಲಾ ಆ ನೀಲಿಶಲ್ಯಧಾರಿಗಳು ತಿರುಗಾಡುತ್ತಿದ್ದರು. ಎಲ್ಲರದ್ದೂ ನೋಟ ದೇವಾಲಯದ ಒಳಗೆ ಬರುವ ಜನರೆಡೆಗೆ. ಅದೂ ಅಲ್ಲದೇ ಮತ್ತೆಷ್ಟು ಸಿಸಿಟಿವಿ ಕ್ಯಾಮೆರಾಗಳ ಕಣ್ಣು ನಮ್ಮ ಮೇಲಿತ್ತೋ ಗೊತ್ತಿಲ್ಲ.  ಆ ಕಡೆ ಹೋಗಿ ಎಂದು ಕೈತೋರಿಸಿದ ಮತ್ತೊಬ್ಬ ಪೋಲೀಸ್. ಅವರು ಹೇಳಿದ ಮೇಲೆ ಮುಗಿಯಿತು. ಆ ಕಡೆ ಹೋಗಬೇಕು. ಕ್ಯೂನಲ್ಲಿ ನಿಲ್ಲಬೇಕಿತ್ತು. ನಿಂತೆವು. ದೇವರ ದರ್ಶನದ ಬಾಗಿಲು ತೆರೆಯಲು ಇನ್ನೂ ೨೦ ನಿಮಿಷ ಇತ್ತು.  ಸುಮ್ಮನೇ ಹಾಗೇ ಗಮನಿಸಿದೆ. ಅಷ್ಟು ದೂರದತನಕ ಇರುವ ದೇವಾಲಯದ ಪಡಸಾಲೆಯಲ್ಲಿ ನೀಲಿಶಲ್ಯ ಹೊದ್ದುಕೊಂಡ ಅನೇಕ ಪೋಲೀಸರು ತಿರುಗಾಡುತ್ತಲೇ ಇದ್ದರು. ಆಯಕಟ್ಟಿನ ಜಾಗಗಳಲ್ಲಿ ನಿಂತ ಪೋಲಿಸರು ಗನ್ ಹಿಡಿದಿದ್ದರು. ಪ್ರತಿಯೊಬ್ಬನ ಮೇಲೂ ಅವರ ಹದ್ದಿನ ಕಣ್ಣು. ಯಾವುದೇ ಕ್ಷಣದಲ್ಲಿ ಯಾರನ್ನು ಬೇಕಾದರೂ ಅಲ್ಲೇ ನಿಲ್ಲಿಸಿ ತಡವುತ್ತಿದ್ದರು. ಅಲ್ಲಿನ ವಾತಾವರಣವೇ ಒಂಥರಾ ಅನ್ನಿಸತೊಡಗಿತ್ತು. ಜನರಲ್ಲಿ ಶಿಸ್ತು ತಾನುತಾನಾಗೇ ಬಂದಿತ್ತು.

ಸಾಲು ಕರಗಲು ಶುರುವಾಯಿತು. ಗರ್ಭಗುಡಿಯ ಕಡೆಗೆ ನಡೆದೆವು. ಅಲ್ಲಿನ ದೊಡ್ಡ ಗರ್ಭಗುಡಿಗೆ ಮೂರುಬಾಗಿಲು. ಒಳಗೆ ಪದ್ಮನಾಭಸ್ವಾಮಿ ಮಲಗಿದ್ದಾನೆ. ಒಂದು ಬಾಗಿಲಲ್ಲಿ ಅವನ ಪಾದಗಳ ದರ್ಶನ, ಮಧ್ಯದ ಬಾಗಿಲಲ್ಲಿ ಪದ್ಮ-ನಾಭಿ, ಮೂರನೆಯ ಬಾಗಿಲಲ್ಲಿ ಮುಖ. ಒಳಗೆ ಕತ್ತಲಿದ್ದುದರಿಂದ ನನಗೆ ಏನೂ ಸರಿಯಾಗಿ ಕಾಣಲಿಲ್ಲ. ಗರ್ಭಗುಡಿಯ ಸುತ್ತಲಲ್ಲೇ ಇರುವ ಕೆಲ ಕೊಠಡಿಗಳಿಗೆ ದೊಡ್ಡ ಬೀಗ ಹಾಕಲ್ಪಟ್ಟು ಸೀಲ್ ಮಾಡಲಾಗಿತ್ತು. ಅಲ್ಲಿಂದಲೇ ಸಂಪತ್ತು ಇರುವ ನೆಲಮಾಳಿಗೆಗೆ ಪ್ರವೇಶ ಇರುವುದು ಎಂದು ಅರ್ಥಮಾಡಿಕೊಂಡೆವು. ಜನರು ಆ ಕೋಣೆಗಳನ್ನು ನೋಡಲೂ ಹಿಂಜರಿಯುವಂತೆ ಗರ್ಭಗುಡಿಯ ಸುತ್ತಲೂ ಪೋಲೀಸ್ ಪಡೆ ಓಡಾಡುತ್ತಲೇ ಇತ್ತು. ಕೈಮುಗಿದು ನಿಂತವರ, ಉದ್ದಂಡ ಬಿದ್ದವರ, ಪ್ರದಕ್ಷಿಣೆ ಹಾಕುವವರ, ಓಡಾಡುವವರ, ಎಲ್ಲರ ಚಲನವಲನಗಳನ್ನು ಅವರ ಕಣ್ಣುಗಳು ಗಮನಿಸುತ್ತಲೇ ಇದ್ದವು. ಜೋರಾಗಿ ಮಾತಾಡುವಂತಿಲ್ಲ, ಎಲ್ಲೂ ಕೂರುವಂತಿಲ್ಲ. ಸಾಲು ತಪ್ಪಿಸುವಂತಿಲ್ಲ. ಗರ್ಭಗುಡಿಯ ಆವರಣದಿಂದ ಹೊರಗೆ ಬಂದು ತಲೆಕೊಡವಿಕೊಂಡು ನೋಡಿದರೆ ವಿಶಾಲ ಪ್ರಾಂಗಣ. ಎಕರೆಗಿಂತಲೂ ಹೆಚ್ಚಿನ ಜಾಗದಲ್ಲಿರುವ ದೇವಾಲಯದಲ್ಲಿ ಕಲ್ಲಿನ ಕಂಬಗಳು, ಛಾವಣಿ, ಅವುಗಳಲ್ಲಿ ಕಲೆ ಚಿತ್ತಾರ... ಮತ್ತು ಎಲ್ಲೆಲ್ಲೂ ಪಂಚೆ, ನೀಲಿಶಲ್ಯಧಾರೀ ಪೋಲೀಸರು.

ಅಲ್ಲಿಂದ ಹೊರಬಂದಾಗ ಮಿಲಿಟರಿ ಬೇಸ್ ಒಂದನ್ನು ಹೊಕ್ಕು ಬಂದ ಅನುಭವ.

*******

ಅನಂತಪದ್ಮನಾಭಸ್ವಾಮಿ ದೇವಾಲಯದ ಬಗ್ಗೆ ಮಾಹಿತಿಗೆ:
http://en.wikipedia.org/wiki/Padmanabhaswamy_Temple
http://www.sree-padmanabhaswamy.com/