ಬುಧವಾರ, ಡಿಸೆಂಬರ್ 12, 2012

ಸಾಮಾಜಿಕ ತಾಣಗಳ ಗೀಳು

ಸೈಬರ್ ಲೋಕದಲ್ಲಿ ಇವತ್ತು ಸೋಶಿಯಲ್ ನೆಟ್ ವರ್ಕ್ ಗಳಲ್ಲಿ ವಿಹರಿಸದೇ ಇರುವವವರು ಅಪರೂಪ. ಫೇಸ್ ಬುಕ್, ಟ್ವಿಟ್ಟರ್, ಲಿಂಕೆಡಿನ್, ಗೂಗಲ್ ಪ್ಲಸ್ ಮುಂತಾದ ಸೋಶಿಯಲ್ ನೆಟ್ ವರ್ಕ್ ಗಳು ಒಂದು ಪರ್ಯಾಯ ಜಗತ್ತಿನಂತೆ ರೂಪುಗೊಂಡಿವೆ. ಕಂಪ್ಯೂಟರ್ ಮತ್ತು ಇಂಟರ್ನೆಟ್ ಎಟುಕಿಸಿಕೊಂಡಿರುವ ಬಹುತೇಕ ಜನ ಈ ಜಗತ್ತಿನ ಪ್ರಜೆಗಳು. ಇತ್ತೀಚಿನ ದಿನಗಳಲ್ಲಿ ಸ್ಮಾರ್ಟ್ ಫೋನ್ ಗಳ ಬಳಕೆ ಹೆಚ್ಚಾದ ಮೇಲಂತೂ ಸೋಶಿಯಲ್ ನೆಟ್ ವರ್ಕ್ ಜಗತ್ತಿನಲ್ಲಿ ಚಟುವಟಿಕೆಗಳು ಬಹಳ ಹೆಚ್ಚಾಗಿ ಹೋಗಿವೆ. ತಮ್ಮ ಅನಿಸಿಕೆಗಳನ್ನು ಎಲ್ಲರಲ್ಲಿ ಹಂಚಿಕೊಳ್ಳುವ ಅವಕಾಶ, ಯಾರ ಹಂಗೂ ಇಲ್ಲದಂತೆ ಒದಗುವ ವೇದಿಕೆ, ತಕ್ಷಣಕ್ಕೇ ಸಿಗುವ ಮೆಚ್ಚುಗೆ, ಪ್ರತಿಕ್ರಿಯೆ, ಗೆಳೆಯರು, ವೃತ್ತಿಪರ ಸಂಪರ್ಕ, ಮಾಹಿತಿ ವಿಚಾರ ವಿನಿಮಯ, ಸಮಾನ ಮನಸ್ಕರು, ಆಸಕ್ತಿಯ ಗುಂಪುಗಳು, ಚರ್ಚೆ ಮುಂತಾದ ಹಲವು ಕಾರಣಗಳಿಂದ ಹೆಚ್ಚು ಹೆಚ್ಚು ಜನ ಇದರ ಆಕರ್ಷಣೆಗೊಳಗಾಗುತ್ತಿದ್ದಾರೆ. ವಿದ್ಯಾರ್ಥಿಗಳು, ಉದ್ಯೋಗಿಗಳು, ಗೃಹಿಣಿಯರೂ ಸೇರಿದಂತೆ ಬಹಳ ಜನ ಈ ಸೋಶಿಯಲ್ ನೆಟ್ ವರ್ಕು ಗಳನ್ನು ಬಳಸುತ್ತಿದ್ದಾರೆ. ಹೊಸ ಹೊಸ ಗೆಳೆತನ, ಪ್ರೊಫೆಶನಲ್ ಸಂಪರ್ಕಗಳು, ವಿವಿಧ ಚಟುವಟಿಕೆಗಳು, ಸಾಮಾಜಿಕ ಸಾಂಸ್ಕೃತಿಕ ಕಾರ್ಯಕ್ರಮಗಳಿಗೆ ಸಹಾಯವಾಗುತ್ತಿರುವ ಈ ಸಾಮಾಜಿಕ ತಾಣಗಳು ಮತ್ತೊಂದೆಡೆ ಸಂಬಂಧಗಳು ಹಾಳಾಗಲು, ಮೋಸ ವಂಚನೆಗಳಿಗೆ, ದ್ವೇಷ ಹರಡಲು, ಭಾವನೆಗಳನ್ನು ಕಲಕಲು ಕೂಡ ಕಾರಣವಾಗುತ್ತಿರುವು ಅಷ್ಟೇ ಸತ್ಯ.

ಜಗತ್ತಿನಲ್ಲಿ ಇವತ್ತು ವಿವಿಧ ಸೋಶಿಯಲ್ ನೆಟ್ ವರ್ಕ್ ಗಳಲ್ಲಿ ಕೋಟ್ಯಂತರ ಜನರ ಖಾತೆಗಳಿವೆ. ಮಾಹಿತಿಯ ಪ್ರಕಾರ ಇದರಲ್ಲಿ ಅರ್ಧಕ್ಕಿಂತಲೂ ಹೆಚ್ಚು ಜನ ದಿನಾ ತಮ್ಮ ಖಾತೆಗಳಿಗೆ ಲಾಗಿನ್ ಆಗುತ್ತಾರೆಂದರೆ ಈ ತಾಣಗಳ ಸೆಳೆತವನ್ನು ಊಹಿಸಬಹುದು. ಸರ್ವೆಗಳ ವರದಿ ಪ್ರಕಾರ ಈ ತಾಣಗಳಲ್ಲಿ ಸಕ್ರಿಯರಾಗಿವವರು ದಿನವೂ ಒಂದು ಗಂಟೆಗಿಂತಲೂ ಹೆಚ್ಚು ಕಾಲ ಇದರಲ್ಲಿ ಕಳೆಯುತ್ತಾರೆ. ಇಡೀ ಜಗತ್ತಿನೆಲ್ಲೆಡೆ ತೆಗೆದುಕೊಂಡರೆ ಈ ಸಮಯದ ಮೊತ್ತ ದಿನಕ್ಕೆ ಲಕ್ಷಾಂತರ ಗಂಟೆಗಳು. ಇದನ್ನು ಸಮಯದ ಬಳಕೆ ಎನ್ನಬೇಕೋ ಅಥವಾ ಸಮಯದ ಪೋಲು ಎನ್ನಬೇಕೋ ಅನ್ನುವ ಗೊಂದಲ ಮೂಡಿಸುತ್ತದೆ. ಇದನ್ನು ಬಳಸುವವರಲ್ಲಿ ಹಲವರು ಬೆಳಗ್ಗೆ ನಿದ್ದೆಯಿಂದ ಎದ್ದು ಎಲ್ಲಾ ಕೆಲಸಗಳಿಗಿಂತ ಮೊದಲು ಈ ತಾಣಗಳನ್ನು ನೋಡುವ, ಮತ್ತೂ ಕೆಲವರು ರಾತ್ರಿ ಎಚ್ಚರವಾದಾಗಲೂ ಈ ತಾಣಗಳಲ್ಲಿ ಕಣ್ಣುಹಾಯಿಸುವ ಅಭ್ಯಾಸ ಹೊಂದಿದ್ದಾರೆ ಅನ್ನುವುದು ತಿಳಿದುಬಂದಿದೆ. ಒಟ್ಟಾರೆ ಇದನ್ನು ರಚನಾತ್ಮಕವಾಗಿ ಬಳಸಲು ವಿಫಲರಾಗುತ್ತಿರುವ ಹಲವರು ಇದರ ವ್ಯಸನಕ್ಕೆ ಒಳಗಾಗುತ್ತಿದ್ದಾರೆ. ನಿಜ ಜೀವನದಲ್ಲಿ ಒಂದು ವ್ಯಕ್ತಿತ್ವ ಹೊಂದಿರುವ ವ್ಯಕ್ತಿ ಸೋಶಿಯಲ್ ನೆಟ್ ವರ್ಕುಗಳಲ್ಲಿ ಬೇರೆ ರೀತಿಯಲ್ಲಿ ವರ್ತಿಸುವುದು, ವಿಭಿನ್ನ ಇಮೇಜ್ ರೂಪಿಸಿಕೊಳ್ಳುವುದು, ಅಗ್ರೆಸ್ಸಿವ್ ಮತ್ತು ಅಹಂಕಾರೀ ಮನೋಭಾವ, ಅಲ್ಲಿನ ಚಟುವಟಿಕೆಗಳನ್ನು ವೈಯಕ್ತಿಕ ಸಂಬಂಧಗಳಿಗೂ ಲಿಂಕ್ ಮಾಡುವುದು, ನೇರ ಸಂಪರ್ಕ ಸಾಧ್ಯವಿದ್ದವರ ಜೊತೆಗೂ ಕೂಡ ಈ ತಾಣಗಳಿಂದಲೇ ಸಂವಹಿಸುವುದು, ಇವುಗಳನ್ನೇ ತಮ್ಮ ಜಗತ್ತು ಎಂಬಂತೆ ಮುಳುಗಿರುವುದು ಮುಂತಾದ ವಿಚಿತ್ರ ವರ್ತನೆಗಳು ಕಂಡು ಬರುತ್ತಿವೆ. ಇದರಿಂದ ಅವರಿಗೇ ಗೊತ್ತಿಲ್ಲದಂತೆ ಅವರ ವೈಯಕ್ತಿಕ ಮತ್ತು ವೃತ್ತಿ ಜೀವನದ ಮೇಲೆ, ದೈಹಿಕ ಮತ್ತು ಮಾನಸಿಕ ಆರೋಗ್ಯದ ಮೇಲೆ ಪರಿಣಾಮಗಳಾಗುತ್ತಿವೆ.

ನೀವು ಅಡಿಕ್ಟ್ ಆಗಿದ್ದೀರಾ?

ಹಾಗಿದ್ದರೆ ಈ ಸೋಶಿಯಲ್ ನೆಟ್ ವರ್ಕ್ ಗಳು ಅಷ್ಟು ತೊಂದರೆ ಮಾಡುತ್ತವಾ? ಅಥವಾ ಅದನ್ನು ಬಳಸುವುದರಲ್ಲಿ ತಪ್ಪು ಮಾಡುತ್ತಿದ್ದೇವಾ ಎಂಬ ಪ್ರಶ್ನೆ ಏಳುತ್ತದೆ. ಅದರಲ್ಲಿ ಯಾವುದೇ ವಿಶೇಷ ಕೆಲಸವಿಲ್ಲದಿದ್ದಾಗಲೂ ದಿನಕ್ಕೆ ಅರ್ಧದಿಂದ ಒಂದು ಗಂಟೆಗಿಂತಲೂ ಹೆಚ್ಚು ಕಾಲ ಕಳೆಯುವುದು, ಪದೇ ಪದೇ ಅವುಗಳನ್ನು ತೆಗೆದು ನೋಡುವ ತವಕ, ತಮ್ಮ ಎಲ್ಲಾ ಅನಿಸಿಕೆಗಳನ್ನು, ಭಾವನೆಗಳನ್ನು, ಚಟುವಟಿಕೆಗಳನ್ನು ಅದರಲ್ಲಿ ಬರೆದು ಹಾಕಿಕೊಳ್ಳುವುದು, ಜನರ ಜೊತೆ ಇದ್ದಾಗಲೂ ಸೋಶಿಯಲ್ ನೆಟ್ವರ್ಕುಗಳಲ್ಲಿ ಮುಳುಗಿರುವುದು, ಯಾರೊಂದಿಗೂ ಬೆರೆಯದೇ ಒಂಟಿತನ ಬಯಸಿ ಆ ತಾಣಗಳಲ್ಲಿ ಸಕ್ರಿಯನಾಗಿರುವುದು, ಇವುಗಳಿಗೇ ಹೆಚ್ಚಿನ ಸಮಯ ಮತ್ತು ಮಹತ್ವ ಕೊಟ್ಟು ದಿನದ ಇತರ ಕೆಲಸಗಳ ಬಗ್ಗೆ ಉದಾಸೀನತೆ ಹೊಂದಿರುವುದು ಮತ್ತು ಕೆಲಸಗಳನ್ನು ಮುಂದಕ್ಕೆ ಹಾಕುವುದು ಮುಂತಾದವುಗಳು ಒಬ್ಬ ವ್ಯಕ್ತಿ ಈ ಸೋಶಿಯಲ್ ತಾಣಗಳಿಗೆ ಅಡಿಕ್ಟ್ ಆಗಿರುವ ಲಕ್ಷಣಗಳನ್ನು ತೋರಿಸುತ್ತವೆ. ಬರೀ ಯುವಜನಾಂಗಕ್ಕೆ ಸೀಮಿತವಾಗಿರದೇ ಈ ವ್ಯಸನ ಮೂವತ್ತೈದು ವರ್ಷ ವಯಸ್ಸಿನ ನಂತರದ ವ್ಯಕ್ತಿಗಳಲ್ಲೂ ಹೆಚ್ಚಾಗುತ್ತಿರುವುದು ವಿಶೇಷ !

ಇದರಿಂದ ಹೊರಬರೋದು ಹೇಗೆ?

ಮೊದಲನೆಯದಾಗಿ, ನಮ್ಮನ್ನು ನಾವೇ ಪರೀಕ್ಷಿಸಿಕೊಳ್ಳಬೇಕು. ಎಷ್ಟು ಕಾಲ ಇದರಲ್ಲಿ ಕಳೆಯುತ್ತಿದ್ದೇನೆ? ಸುಮ್ಮನೇ ಟೈಂಪಾಸಿಗೆ ಮಾಡುತ್ತಿದ್ದೇನಾ ಅಥವಾ ಅಗತ್ಯವಿದ್ದು ಬಳಸುತ್ತಿದ್ದೇನಾ? ಎರಡನೆಯದಾಗಿ, ನಿಜಕ್ಕೂ ಈ ಚಟ ನಮ್ಮಲ್ಲಿದೆ ಅನ್ನಿಸಿದರೆ ಅದನ್ನು ಒಪ್ಪಿಕೊಳ್ಳಬೇಕು. ಮೂರನೆಯದಾಗಿ, ಇದರಿಂದ ಹೊರಬರುವ ದೃಢ ನಿರ್ಧಾರ ಮಾಡಬೇಕು.

೧. ದಿನನಿತ್ಯದ ಬದುಕಿನ ಎಲ್ಲಾ ಕೆಲಸಗಳಿಗೆ ಮೊದಲ ಆದ್ಯತೆ ಕೊಟ್ಟು ನಂತರ ಬಿಡುವಿನ ಸಮಯದಲ್ಲಷ್ಟೇ ಸೋಶಿಯಲ್ ನೆಟ್ ವರ್ಕ್ ಗಳನ್ನು ನೋಡುವ ನಿರ್ಧಾರ ಮಾಡಿಕೊಳ್ಳಿ. ದಿನದ ನಿರ್ದಿಷ್ಟ ಸಮಯದಲ್ಲಿ ಇಷ್ಟು ಹೊತ್ತು ಮಾತ್ರ ನೋಡುತ್ತೇನೆ ಎಂಬ ತೀರ್ಮಾನ ಇನ್ನೂ ಒಳ್ಳೆಯದು. ಆದರೆ ಅದು ಕೂಡ ಬಿಡುವಿನ ಸಮಯದಲ್ಲಿ ಮಾತ್ರ ಇರಲಿ.

೨. ಕಾಲೇಜಿನಲ್ಲಿ, ಕ್ಲಾಸ್ ರೂಮಿನಲ್ಲಿ, ಆಫೀಸಿನಲ್ಲಿ ಪದೇ ಪದೇ ಸೋಶಿಯಲ್ ನೆಟ್ ವರ್ಕು ಗಳನ್ನು ತೆಗೆದು ನೋಡುವ, ಅವುಗಳಲ್ಲಿ ತೊಡಗುವ ಅಭ್ಯಾಸ ಖಂಡಿತ ಒಳ್ಳೆಯದಲ್ಲ. ಇದು ಸಮಯವನ್ನು ಹಾಳುಮಾಡುವುದಲ್ಲದೇ, ನಿಮ್ಮ ಗಮನ, ಏಕಾಗ್ರತೆಯನ್ನು ಬೇರೆಡೆಗೆ ಸೆಳೆದು ಕೆಲಸದ ಸಾಮರ್ಥ್ಯವನ್ನೂ ಕುಗ್ಗಿಸುತ್ತವೆ. ಆದ್ದರಿಂದ ಈ ಅಭ್ಯಾಸಕ್ಕೆ ಬ್ರೇಕ್ ಹಾಕಿ.

೩. ನಿಮ್ಮ ಎಲ್ಲಾ ಚಟುವಟಿಕೆಗಳನ್ನು, ಊಟ ತಿಂಡಿಯಂತಹ ಸಾಮಾನ್ಯ ಸಂಗತಿಗಳನ್ನು, ಅಲ್ಲಿ ಇಲ್ಲಿ ತಿರುಗಾಡಿದ್ದನ್ನು, ಕಂಡಿದ್ದನ್ನು, ಮನಸಿಗೆ ಬರುವ ಪ್ರತಿಯೋಚನೆಯನ್ನು ಹಂಚಿಕೊಳ್ಳುತ್ತಿದ್ದರೆ ಅದು ಕಸದಬುಟ್ಟಿಯಂತಾಗುತ್ತದೆ. ಇದಕ್ಕೆ ಕಡಿವಾಣ ಹಾಕಿ. ದಿನಾ ಹತ್ತಾರು ಫೋಟೋಗಳನ್ನು ಹಾಕುವುದು, ಅದಕ್ಕೆ ಬರುವ ಮೆಚ್ಚುಗೆಗಳಿಂದ ಸಂಭ್ರಮಿಸುವುದು, ಪ್ರತಿಕ್ರಿಯೆಗೆ ಉತ್ತರಿಸುವುದು ಖುಶಿ ಕೊಟ್ಟಂತೆ ಅನ್ನಿಸಿದರೂ ಸಹ ಅವು ನಿಮ್ಮನ್ನು ಒಂದು ಮಾನಸಿಕ ಬೌಂಡರಿಯೊಳಗೆ ಬಂಧಿಸಿಬಿಡುತ್ತವೆ.

೪. ಸುಮ್ಮನೇ ಹೊತ್ತು ಕಳೆಯಲು ಸೋಶಿಯಲ್ ನೆಟ್ ವರ್ಕ್ ತಾಣಗಳಲ್ಲಿ ತೊಡಗಿಕೊಳ್ಳಬೇಡಿ. ಬದಲಾಗಿ ಒಳ್ಳೆಯ ಹವ್ಯಾಸಗಳನ್ನು ಬೆಳೆಸಿಕೊಳ್ಳಿ. ಔಟ್ ಡೋರ್ ಚಟುವಟಿಕೆಗಳಲ್ಲಿ ತೊಡಗಿಕೊಳ್ಳಿ. ಹೊರಹೋಗಿ ಜನರ ಜೊತೆ, ಗೆಳೆಯರ ಜೊತೆ ಬೆರೆಯಿರಿ. ಮನೆಯಲ್ಲಿದ್ದಾಗ ಕುಟುಂಬ ಸದಸ್ಯರೊಡನೆ ಮಾತಾಡಿ.

೫. ದೇಶದ ಎಲ್ಲಾ ಘಟನೆಗಳ ಬಗ್ಗೆ, ರಾಜಕೀಯ ವಿದ್ಯಮಾನಗಳ ಬಗ್ಗೆ ಪರಿಣಿತನಂತೆ ನಿಮ್ಮ ಅಭಿಪ್ರಾಯ ಹೇಳಲು ಹೋಗಬೇಡಿ. ಇದು ಜಾಸ್ತಿಯಾದರೆ ನಿಮ್ಮ ಅಭಿಪ್ರಾಯಗಳಿಗೆ ನಿಮ್ಮ ಮಿತ್ರರ ವಲಯದಲ್ಲೇ ಬೆಲೆ ಕಳೆದುಹೋಗುತ್ತದೆ. ಕ್ರಿಕೆಟ್, ಸಿನೆಮಾ ಮುಂತಾದವುಗಳ ಲೈವ್ ಕಾಮೆಂಟ್ರಿ ಕೊಡುವುದು ಇತರರಿಗೆ ಕಿರಿಕಿರಿಯುಂಟುಮಾಡುತ್ತದೆ.

೬. ಸಮಯ ಪ್ರಜ್ಞೆ ಮತ್ತು ಸಾಮಾಜಿಕ ಪ್ರಜ್ಞೆ ಇರಲಿ. ಧಾರ್ಮಿಕ, ಸಾಮಾಜಿಕ ಭಾವನೆಗಳನ್ನು ಕೆರಳಿಸುವ, ಇತರರಿಗೆ ನೋವುಂಟುಮಾಡುವ , ದ್ವೇಷ ಹರಡುವಂತಹ ಚಟುವಟಿಕೆಗಳನ್ನು ಮಾಡಬೇಡಿ. ಇಂತಹ ಚಟುವಟಿಕೆಗಳಿಂದ ಕಾನೂನಿನ ಪ್ರಕಾರವೂ ನೀವು ಅಪರಾಧಿಯಾಗಬಹುದು.

೭. ಹೆಚ್ಚು ಗುಂಪುಗಳಿಗೆ ಸೇರಿಕೊಳ್ಳಬೇಡಿ. ಅನಗತ್ಯ ಚರ್ಚೆಗಳಲ್ಲಿ ತೊಡಗಬೇಡಿ. ಚರ್ಚೆಗಳು ಸಮಯ ತಿನ್ನುವುದಲ್ಲದೇ ವೈಯಕ್ತಿಕ ಮಟ್ಟಕ್ಕೂ ಹೋಗಿ ವಿರಸ ಉಂಟುಮಾಡುವ ಸಾಧ್ಯತೆಗಳಿರುತ್ತವೆ.

೮. ಆನ್ ಲೈನ್ ಚಾಟಿಂಗ್ ಆಫ್ ಇಟ್ಟುಕೊಳ್ಳಿ. ಬೇಕಾದಾಗ ಮಾತ್ರ ಲಾಗಿನ್ ಆಗಿ. ಇದರಿಂದ ಸುಮ್ಮನೇ ಯಾರೋ ಪಿಂಗ್ ಮಾಡುವುದು, ಅದಕ್ಕೆ ಉತ್ತರಿಸುತ್ತಾ ಕೂತು ಕಾಲಕಳೆಯುವುದು ತಪ್ಪುತ್ತದೆ.

೯. ಈ ಸೋಶಿಯಲ್ ತಾಣಗಳಲ್ಲೇ ಹೆಚ್ಚು ಹೊತ್ತು ಕಳೆಯುವ, ದಿನವೂ ಹತ್ತಾರು ಸಂದೇಶ, ಚಿತ್ರಗಳನ್ನು ಹಾಕುವ, ಹಂಚಿಕೊಳ್ಳುವ ಜನರನ್ನು ನಿಮ್ಮ ಗೆಳೆಯರ ಪಟ್ಟಿಯಿಂದ ತೆಗೆದುಹಾಕಿ. ಇದು ನಿಮ್ಮ ಸಮಯ ಉಳಿಸಲು ಸಹಾಯವಾಗುತ್ತದೆ.

೧೦. ಬೇರೆ ಮುಖ್ಯ ಅಸೈನ್ ಮೆಂಟ್ ಗಳಿದ್ದಾಗ ಆ ಅವಧಿಯಲ್ಲಿ ನಿಮ್ಮ ಸಾಮಾಜಿಕ ತಾಣಗಳ ಖಾತೆಯನ್ನು ತಾತ್ಕಾಲಿಕವಾಗಿ ನಿಷ್ಕ್ರಿಯಗೊಳಿಸಿಕೊಳ್ಳಿ.

೧೧. ಈ ಯಾವುದನ್ನೂ ಪಾಲಿಸಲೂ ಆಗುತ್ತಿಲ್ಲ ಎಂದಾಗ ಗಟ್ಟಿ ಮನಸ್ಸುಮಾಡಿ ನಿಮ್ಮ ಖಾತೆಯನ್ನು ಡಿಲೀಟ್ ಮಾಡಿಬಿಡಿ. ಮುಂದೆ ಮತ್ತೆ ಬೇಕೆನಿಸಿದಾಗ ಮತ್ತೆ ತೆರೆಯಬಹುದು. ನಿಮ್ಮವರೆಲ್ಲರೂ ಇದ್ದೇ ಇರುತ್ತಾರೆ.

ಒಟ್ಟಿನಲ್ಲಿ ಈ ಸಾಮಾಜಿಕ ತಾಣಗಳು ಒಂದು ಮಿಥ್ಯಾಜಗತ್ತು ಎಂಬ ಸ್ಪಷ್ಟ ಅರಿವು ನಿಮಗಿರಲಿ. ನಿಮ್ಮ ವ್ಯಕ್ತಿತ್ವವನ್ನು ಅರಳಿಸುವ ರೀತಿಯಲ್ಲಿ ಮತ್ತು ಜ್ಞಾನ ಹೆಚ್ಚಿಸುವ ರೀತಿಯಲ್ಲಿ ಬಳಸಿಕೊಳ್ಳಿ. ನಿಮ್ಮ ಸಮಯ ಅಮೂಲ್ಯ. ಯಾವುದೇ ಕಾರಣಕ್ಕೂ ಸೋಶಿಯಲ್ ನೆಟ್ ವರ್ಕ್ ಗಳು ವೈಯಕ್ತಿಕ ಬದುಕಿಗಿಂತ ಹೆಚ್ಚಾಗುವುದು ಬೇಡ.

***

ಈ ಬರಹ ನಾಲ್ಕುನೂರು ಪದಗಳ ಮಿತಿಯಲ್ಲಿ ೬ ಡಿಸೆಂಬರ್ ೨೦೧೨ ರ ವಿಜಯಕರ್ನಾಟಕ ಲವಲವಿಕೆ ಪುರವಣಿಯಲ್ಲಿ ಪ್ರಕಟವಾಗಿದ್ದು ಹೀಗೆ : ಲಗಾಮಿಲ್ಲದ ಸೈಬರ್ ಯಾನ