ಭಾನುವಾರ, ಏಪ್ರಿಲ್ 14, 2013

ಹೃಷೀಕೇಶದ ಗಂಗಾನದಿ ರಾಫ್ಟಿಂಗ್


Picture picked from: www.nepalhimalayastrekking.com :)
 ಎರಡು ವರ್ಷಗಳ ಹಿಂದೆ ದಾಂಡೇಲಿ ಬಳಿ ಕಾಳಿನದಿಯಲ್ಲಿ ರಾಫ್ಟಿಂಗ್ ಮಾಡಿದ್ದೆ. ಸುಮಾರು ಎಂಟು ಕಿಲೋಮೀಟರ್ ದೂರದ ರಾಫ್ಟಿಂಗ್ ಅದಾಗಿತ್ತು. ಮೊದಲ ಬಾರಿಯ ಆ ರಾಫ್ಟಿಂಗ್ ಅನುಭವ ಬಹಳ ಚೆನ್ನಾಗಿತ್ತು. ಮೊನ್ನೆ ಮಾರ್ಚ್ ತಿಂಗಳ ಕೊನೆಯಲ್ಲಿ ಉತ್ತರಾಖಂಡ ರಾಜ್ಯದಲ್ಲಿ ಹಿಮಾಲಯ ಚಾರಣವೊಂದನ್ನು ಮುಗಿಸಿದ ಮೇಲೆ ’ಹೃಷೀಕೇಶ’ಕ್ಕೆ ಹೋದೆವು. ಋಷಿಕೇಶದಲ್ಲಿ ಗಂಗಾನದಿಯ ರಾಫ್ಟಿಂಗ್ ಬಗ್ಗೆ ಬಹಳ ಕೇಳ್ಪಟ್ಟಿದ್ದೆವು. ಹೃಷೀಕೇಶಕ್ಕೆ ಹೋದ ಮೇಲೆ ಕಂಡಿದ್ದೇನೆಂದರೆ, ಅಲ್ಲಿ ರಾಫ್ಟಿಂಗ್ ಒಂದು ದೊಡ್ಡ ಬಿಸಿನೆಸ್. ಒಂದೊಂದು ಬೀದಿಯಲ್ಲೂ ಮೂರ್ನಾಲ್ಕು ರಾಫ್ಟಿಂಗ್ ಏಜೆನ್ಸಿಗಳಿವೆ. ದರಗಳಲ್ಲಿಯೂ ವ್ಯತ್ಯಾಸಗಳಿವೆ. (Rafting in Rishikesh ಅಂತ Googleನಲ್ಲಿ ಹುಡುಕಿದರೆ ಸಿಗುತ್ತವೆ. ಜೊತೆಗೆ ಬಂಜೀ ಜಂಪಿಂಗ್ ಮುಂತಾದ ಇನ್ನೂ ಹಲವು ಸಾಹಸ ಚಟುವಟಿಕೆಗಳನ್ನು ಮಾಡಿಸುವಂತಹ ಸಂಸ್ಥೆಗಳೂ ಇವೆ.)

ಹೃಷೀಕೇಶದಲ್ಲಿ ಹಲವು ಕಡೆ ರಾಫ್ಟಿಂಗ್ ಶುರುವಾಗುವ ಜಾಗಗಳಿವೆ. ೧೨ ಕಿ.ಮಿ. ದೂರದ ಬ್ರಹ್ಮಪುರಿ, ೧೬ ಕಿ.ಮಿ. ದೂರದ ಶಿವಪುರಿ, ೨೫ ಕಿ.ಮಿ. ದೂರದ ಮೆರೈನ್ ಡ್ರೈವ್ ಮತ್ತು ೬೪ ಕಿ.ಮಿ. ದೂರದ ಮತ್ತೊಂದು ಸ್ಥಳ ಮುಂತಾದವು. ರಾಫ್ಟಿಂಗ್ ನವರು ಹೇಳುವಂತಹ ಈ ಕಿಲೋಮೀಟರ್ ದೂರಗಳು ನದಿಯಲ್ಲಿ ರಾಫ್ಟಿಂಗ್ ಮಾಡುವ ದೂರಗಳಲ್ಲ, ಬದಲಾಗಿ ಹೃಷೀಕೇಶದಿಂದ ರಸ್ತೆಯಲ್ಲಿ ಹೋದರೆ ಆಗುವ ದೂರ ಎನ್ನುವುದು ಆಮೇಲೆ ತಿಳಿಯಿತು. ನಾವು ಇಳಿದುಕೊಂಡಿದ್ದ  ಪ್ರವಾಸೋದ್ಯಮದ ಸರ್ಕಾರಿ ಲಾಡ್ಜ್  ’ಗರ್ವಾಲ್ ಮಂಡಲ್ ವಿಕಾಸ್ ನಿಗಮ’ದ ವ್ಯಕ್ತಿಯೊಬ್ಬರ ಮೂಲಕ ’ಪ್ಯಾಡಲ್ ಇಂಡಿಯಾ’ ಎನ್ನುವ ಸಂಸ್ಥೆಯನ್ನು ನಾವು ಏಳು ಜನ ತಲೆಗೆ ೮೦೦ ರೂ. ಕೊಟ್ಟು ರಾಫ್ಟಿಂಗಿಗಾಗಿ ಗೊತ್ತುಮಾಡಿಕೊಂಡದ್ದಾಯಿತು. ರಾಫ್ಟಿಂಗ್ ಮಾಡಿಸುವವರು ಗ್ರಾಹಕರನ್ನು ನಾವಿರುವ ಸ್ಥಳಕ್ಕೇ ಬಂದು ವಾಹನದಲ್ಲಿ ಕರೆದುಕೊಂಡು ಹೋಗುತ್ತಾರೆ ಮತ್ತು ವಾಪಸ್ ತಂದು ಬಿಡುತ್ತಾರೆ. ಅಂತೆಯೇ ಬೆಳಗ್ಗೆ ಎಂಟು ಗಂಟೆಗೆ ಋಷಿಕೇಶದಿಂದ ಹೊರಟು ೨೫ ಕಿ.ಮಿ. ದೂರದ ಮೆರೈನ್ ಡ್ರೈವ್ ಎಂಬ ಸ್ಥಳಕ್ಕೆ ತಲುಪಿದೆವು. ಅಲ್ಲಿ ಒಂದು ಚಿಕ್ಕ ತರಬೇತಿಯ ನಂತರ ರಾಫ್ಟಿಂಗ್ ಶುರುವಾಯಿತು. ಗಂಗಾನದಿಯ ಹರಿವು ಒಳ್ಳೆಯ ಸೆಳೆತದಿಂದ ಕೂಡಿತ್ತು. ನಡುನಡುವೆ ಹಲವಾರು rapids ದಾಟಿ ಸುಮಾರು ನಾಲ್ಕು ತಾಸುಗಳ ರಾಫ್ಟಿಂಗ್ ಮುಗಿಸಿದೆವು. ನದಿಯಲ್ಲಿ ಆ ದೂರ ಸುಮಾರು ೧೮ ಕಿ.ಮಿ. ಆಗಬಹುದು. 

ಇದಿಷ್ಟೂ ದೂರದಲ್ಲಿ ಸುಮಾರು ೧೫ rapidಗಳು ಇದ್ದಿರಬಹುದು. ಆದರೆ ಅಂತಹ ಗಾಬರಿ ಹುಟ್ಟಿಸುವಂತಹ, ದೋಣಿಯಿಂದ ಎತ್ತಿ ಒಗೆಯುವಂತಹ, ಮೇಲಿನಿಂದ ಬೀಳುವಂತಹ ದೊಡ್ಡ rapidಗಳಾವುದೂ ಇರಲಿಲ್ಲ. ಮೊದಲಬಾರಿ ರಾಫ್ಟಿಂಗ್ ಮಾಡಿದವರಿಗೆ ಇದು ಖುಷಿ ಕೊಡಬಹುದು.  ಆದರೆ ನಮಗೆ ಹೃಷೀಕೇಶದ ಈ ರಾಫ್ಟಿಂಗಿಗಿಂತ ಕಾಳಿನದಿಯ ರಾಫ್ಟಿಂಗ್ ಚೆನ್ನಾಗಿದೆ ಅನ್ನಿಸಿತು. 

***************************

ಕೊಸರು: ನನಗೆ ಈ ಊರಿನ ಹೆಸರನ್ನು ಬರೆಯುವುದರಲ್ಲಿ 'ಋಷಿಕೇಶ' ಸರಿಯೋ ಅಥವಾ 'ಹೃಷಿಕೇಶ' ಸರಿಯೋ ಎನ್ನುವುದರ ಬಗ್ಗೆ ಸಂಶಯವಿತ್ತು. ಈ ಸಂಸ್ಕೃತ ಪದವನ್ನು ಕನ್ನಡದಲ್ಲಿ ಬರೆಯುವಾಗ 'ಹೃಷಿಕೇಶ' ಎಂದು ಬರೆಯುವುದನ್ನು ನೋಡಿದ್ದೆ. ಆದರೆ ಇಂಗ್ಲೀಷಿನಲ್ಲಿ ಎಲ್ಲಾ ಕಡೆ Rishikesh ಎಂದು ಬರೆಯುತ್ತಾರೆ.  ಭಾರತೀಯ ಹೆಸರುಗಳ ವಿಷಯದಲ್ಲಿ ಇಂಗ್ಲೀಷನ್ನು ನಂಬಲಾಗುವುದಿಲ್ಲ. ಹಾಗಾಗಿ ನೋಡೋಣ ಎಂದುಕೊಂಡರೆ ಆ ಊರಿನಲ್ಲಿ ಹಿಂದಿಯಲ್ಲಿಯೂ ಸಹ ಋಷಿಕೇಶ (ऋषिकॆश) ಎಂದೇ ಬರೆದಿದ್ದರು ! ಈ ವಿಷಯವನ್ನು ಹಿರಿಯರಾದ ಸುನಾಥಕಾಕಾರಲ್ಲಿ ಕೇಳಿದೆ. ಅವರ ಉತ್ತರ ಹೀಗಿತ್ತು.

‘ಹೃಷೀಕೇಶ’ ಎನ್ನುವುದು ಸರಿಯಾದ ಪದ. ‘ಹೃಷೀಕ’ ಎಂದರೆ ಇಂದ್ರಿಯ. ಈಶ ಎಂದರೆ ಪ್ರಭು. ಹೃಷೀಕೇಶ ಅಂದರೆ ಇಂದ್ರಿಗಳ ಪ್ರಭು. ಸಂಧ್ಯಾವಂದನೆಯ ಮೊದಲಲ್ಲಿ ೨೪ ತತ್ವಾಭಿಮಾನಿ ದೇವತೆಗಳನ್ನು ನೆನೆಯುವಾಗ ‘ಹೃಷೀಕೇಶಾಯ ನಮ:’ ಎನ್ನುವ ತತ್ವಾಭಿಮಾನಿ ದೇವತೆಯನ್ನು ಸಹ ನೆನೆಯಲಾಗುತ್ತದೆ. ‘ಹೃಷೀಕೇಶ’ ಎನ್ನುವ ಒಂದು ಹಳ್ಳಿಯು ಗಂಗಾನದಿಯ ದಂಡೆಯ ಮೇಲೆ ಹರಿದ್ವಾರದಿಂದ ೨೪ ಕಿಲೋಮೀಟರುಗಳಷ್ಟು ದೂರದಲ್ಲಿದೆ. 'ಋಷಿಕೇಶ’ ಎನ್ನುವುದು ಆಡುಮಾತಿನಲ್ಲಿ ಬಳಕೆಯಾಗುತ್ತಿರುವ ಪದ. ಇದು ಸರಿಯಲ್ಲ.

ಈ ವಿಷಯ ತಿಳಿಸಿದ್ದಕ್ಕಾಗಿ ಸುನಾಥಕಾಕಾರಿಗೆ ಧನ್ಯವಾದಗಳನ್ನು ಹೇಳುತ್ತಿದ್ದೇನೆ.