ಮಂಗಳವಾರ, ನವೆಂಬರ್ 24, 2015

ಅಮೇಜಾನ್ ಕಿಂಡಲ್ ಎಂಬ ಓದಿನ ಸಂಗಾತಿ

ಅಮೇಜಾನ್ ಕಿಂಡಲ್ ಇ ಬುಕ್ ರೀಡರ್
೨೦೧೧-೧೨ ರ ಮಾತು. ಒಂದು ಇ-ಬುಕ್ ರೀಡರ್ ಕೊಂಡುಕೊಳ್ಳಬೇಕೆಂಬ ಇಚ್ಛೆಯಾಗಿತ್ತು. ಆದರೆ ಆ ದಿನಗಳಲ್ಲಿ ನನಗೆ ಗೊತ್ತಿದ್ದಂತೆ ಭಾರತದಲ್ಲಿ ಸಿಗುತ್ತಿದ್ದದ್ದು ಇನ್ಪಿಭೀಮ್ ಪೈ ಎಂಬ ಮಾಡೆಲ್ ಮಾತ್ರ. ಅದಕ್ಕೆ ಸುಮಾರು ೧೦ ಸಾವಿರ ರೂಪಾಯಿಗಳಷ್ಟು ದುಬಾರಿ ಎನಿಸುತ್ತಿದ್ದ ಬೆಲೆಯಿತ್ತು. ಹಾಗಾಗಿ ಕೊಳ್ಳುವುದನ್ನು ಮುಂದೆ ಹಾಕುತ್ತಿದ್ದೆ. ಅನಂತರದ ದಿನಗಳಲ್ಲಿ ಅಮೇಜಾನ್ ಅವರ ಪ್ರಸಿದ್ಧ ಕಿಂಡಲ್ ಇಬುಕ್ ರೀಡರ್ ಭಾರತದಲ್ಲೂ ಸಿಗಲಾರಂಭಿಸಿತು. ಅದು ಬೇಸಿಕ್ ಬಟನ್ ಮಾಡೆಲ್ ಆಗಿತ್ತು. ಯು.ಎಸ್.ನಲ್ಲಿ ಸುಮಾರು ೬೦ ಡಾಲರ್ (ಸುಮಾರು ಮೂರೂವರೆ ಸಾವಿರ ರೂಪಾಯಿ)ಗಳಿಗೆ ದೊರೆಯುತ್ತಿದ್ದ ಅದಕ್ಕೆ ಭಾರತದಲ್ಲಿ ಬೆಲೆ ಆರು ಸಾವಿರ ಇತ್ತು. ಅದನ್ನು ಕೊಳ್ಳಬೇಕೆಂದು ಒಮ್ಮೆ ಮನಸಾದರೂ ಸಹ ಅದರ ಬೆಲೆ ನೋಡಿ ಸುಮ್ಮನಾಗಿದ್ದೆ. ಏಕೆಂದರೆ ಆರುಸಾವಿರ ಕೊಟ್ಟು ಬೇಸಿಕ್ ಇಬುಕ್ ರೀಡರ್ ಕೊಳ್ಳುವುದರ ಬದಲು ಅದೇ ದುಡ್ಡಿಗೆ ಎಷ್ಟೊಂದು ಪುಸ್ತಕಗಳನ್ನೇ ಕೊಳ್ಳಬಹುದು ಎಂಬ ಲೆಕ್ಕಾಚಾರ ಅಡ್ಡಬರುತ್ತಿತ್ತು.

ಚಿತ್ರ: ಅಮೇಜಾನ್.ಇನ್

೨೦೧೨ರ ಅಕ್ಟೋಬರ್ ೧ ಕ್ಕೆ ಅಮೇಜಾನ್ ಕಿಂಡಲ್ ನವರು ಪೇಪರ್ ವೈಟ್ (Kindle Paperwhite) ಎಂಬ ಹೊಸ ಮಾಡೆಲ್ ಒಂದನ್ನು ಅಮೆರಿಕಾದಲ್ಲಿ ಬಿಡುಗಡೆ ಮಾಡಿದರು. ಅದರಲ್ಲಿದ್ದ ವಿಶೇಷ ಎಂದರೆ ಅದು ಟಚ್ ಸ್ಕ್ರೀನ್ ಆಗಿತ್ತು ಮತ್ತು ಹಿನ್ನೆಲೆ ಲೈಟ್ ಒಳಗೊಂಡಿತ್ತು. ಅಂದರೆ ಕತ್ತಲಲ್ಲೂ ಓದಬಹುದು. ಇದನ್ನು ಕೊಳ್ಳಬೇಕೆಂದು ಅಂದುಕೊಂಡೆ. ಅದಕ್ಕೆ ಯಾವ ಪರಿ ಬೇಡಿಕೆ ಸೃಷ್ಟಿಯಾಯಿತೆಂದರೆ ನೋಡನೋಡುತ್ತಿದ್ದಂತೆಯೇ ಒಂದೇ ತಿಂಗಳೊಳಗಾಗಿ ಅದು ಔಟ್ ಆಫ್ ಸ್ಟಾಕ್ ಆಗಿಹೋಯ್ತು. ಮತ್ತೆ ಯಾವಾಗ ಬರುತ್ತದೋ ಗೊತ್ತಿಲ್ಲ ಎಂದು ಹಾಕಿದರು. ಆದರೂ ಪ್ರಯತ್ನಿಸೋಣ ಎಂದು ಯು.ಎಸ್. ನಲ್ಲಿದ್ದ ಅಣ್ಣನಿಗೆ ಹೇಳಿದೆ. ಆತ ಅಲ್ಲಿ ಹುಡುಕಿ ಸಿಗದೇ ಕೊನೆಗೆ ಅಮೇಜಾನ್ ನಲ್ಲೇ ಕೆಲಸ ಮಾಡುತ್ತಿದ್ದ ಅವನ ಗೆಳೆಯನೊಬ್ಬನಿಗೆ ಕೇಳಿದ. ಆದರೆ ಖುದ್ದು ಅಮೇಜಾನ್ ಉದ್ಯೋಗಿಗಳಿಗೇ ಸಿಗದ ರೀತಿಯಲ್ಲಿ ಅದು ಖರ್ಚಾಗಿಹೋಗಿದೆಯಂದು ತಿಳಿದು ಕೈಚೆಲ್ಲಿದ. ಸಿಯಾಟಲ್ ನಗರದಲ್ಲಿ ಇರುವ ಗೆಳೆಯನೊಬ್ಬನಿಗೆ ಹೇಳಿದೆ. ಅವನು ಕೂಡ ಸುಮಾರು ಕಡೆ ಹುಡುಕಿ ಕೊನೆಗೆ ಒಂದು ಕಡೆ ಶೋರೂಮಿನಲ್ಲಿ ಒಂದು ಕೊನೇ ಪೀಸ್ ಉಳಿದಿದ್ದನ್ನು ಕೊಳ್ಳಲು ಯಶಸ್ವಿಯಾದ. ಬೆಲೆ ೧೨೦ ಡಾಲರ್ ಆಗಿತ್ತು. ಅಂದರೆ ಸುಮಾರು ಏಳು ಸಾವಿರ ರೂಪಾಯಿಗಳು. ಜನವರಿ ೨೦೧೩ರಲ್ಲಿ ಅಲ್ಲಿಂದ ಹಾರಿ ಅದು ಭಾರತಕ್ಕೆ ಬಂದು ನನ್ನ ಕೈ ಸೇರಿತು.

ಕಿಂಡಲ್ ನಲ್ಲಿ ಕನ್ನಡ ಪುಸ್ತಕದ PDF
ಈಗ ಸುಮಾರು ಮೂರು ವರ್ಷ ಆಗುತ್ತಾ ಬಂದಿದೆ. ನೂರಾರು ಪುಸ್ತಕಗಳನ್ನು ಅದರಲ್ಲಿ ಓದಿದ್ದೇನೆ. ಈ ಬೆಂಗಳೂರಲ್ಲಿ ಜಾಗವಿಲ್ಲದ ಮನೆಗಳಲ್ಲಿ ಪುಸ್ತಕಗಳನ್ನು ಸಂಗ್ರಹಿಸಿಡುವುದು, ಒಂದು ಕಡೆಯಿಂದ ಮತ್ತೊಂದು ಕಡೆ ಸಾಗಿಸುವುದು ಕಷ್ಟದ ಕೆಲಸ. ಹಾಗಾಗಿ ಎಷ್ಟೋ ಒಳ್ಳೊಳ್ಳೆಯ ಪುಸ್ತಕಗಳನ್ನು ಓದುವ ಆಸೆಯಿದ್ದರೂ ಖರೀದಿಸಿರಲಿಲ್ಲ. ಈ ಕಿಂಡಲ್ ಬಂದಮೇಲೆ ಅಂತಹ ಹಲವಾರು ಪುಸ್ತಕಗಳನ್ನು ಇ-ಆವೃತ್ತಿಗಳಲ್ಲಿ ಓದಿಮುಗಿಸಿದೆ. ಆದರೆ ಹೆಚ್ಚು ಎಲ್ಲವೂ ಇಂಗ್ಲೀಷ್ ಪುಸ್ತಕಗಳಷ್ಟೆ. ಏಕೆಂದರೆ ಕನ್ನಡದಲ್ಲಿ ಕಿಂಡಲ್ ಮಾದರಿಯ (AZW3/AZW, MOBI) ಪುಸ್ತಕಗಳು ಇನ್ನೂ ಬಂದಿಲ್ಲ. ಪಿಡಿಎಫ್ ಮಾದರಿಯಲ್ಲಿ ಅನೇಕ ಕನ್ನಡ ಪುಸ್ತಕಗಳು ಸಿಗುತ್ತವೆ. ಅವುಗಳನ್ನು ಸಂಗ್ರಹಿಸುವ ಕೆಲಸ ಶುರುಮಾಡಿದ ಮೇಲೆ ನೂರಾರು ಕನ್ನಡ ಪುಸ್ತಕಗಳ ಪಿಡಿಎಫ್ ಸಂಗ್ರಹವಾದವು/ಆಗುತ್ತಿವೆ. ಹೆಚ್ಚಾಗಿ ಅವೆಲ್ಲಾ ಹಲವಾರು ದಶಕಗಳ ಹಿಂದೆ ಪ್ರಕಟನೆಯಾದ ಪುಸ್ತಕಗಳು. ಕೆಲವು ಹೊಸಪುಸ್ತಕಗಳೂ ಸಿಕ್ಕವು. ಅವನ್ನು ಕಿಂಡಲ್ ನಲ್ಲಿ ಓದುತ್ತಿದ್ದೇನೆ. ಈಗ ಈ ಮಾಡೆಲ್ ನ ರೀಡರ್ ಗಳು ಭಾರತದಲ್ಲಿಯೂ ಸಿಗುತ್ತಿವೆ. ಇದರ ಸಂಪೂರ್ಣ ವಿವರಗಳನ್ನು ಅಮೇಜಾನ್.ಇನ್ ತಾಣದಲ್ಲಿ ನೋಡಬಹುದು. 

ನನ್ನಲ್ಲಿ ಇದನ್ನು ನೋಡಿದವರು ಅನೇಕರು ಏನಿದು ಇಬುಕ್ ರೀಡರ್? ಇದಕ್ಕೂ ಟ್ಯಾಬ್ಲೆಟ್ ಅಥವಾ ಐಪ್ಯಾಡ್ ಗೂ ವ್ಯತ್ಯಾಸವೇನು? ಅಂತ ಕೇಳುತ್ತಿರುತ್ತಾರೆ.  ಹಾಗಾಗಿ ಇದೊಂದು ವಿವರಣೆ:

ಹೆಸರೇ ಹೇಳುವ ಹಾಗೆ ಇದು ಇ-ಪುಸ್ತಕಗಳನ್ನು ಓದುವ ಸಾಧನ.  ಪುಸ್ತಕಗಳು ಪ್ರಿಂಟ್ ರೂಪದಲ್ಲಿ ಪ್ರಕಟವಾದಂತೆ ಎಲೆಕ್ಟ್ರಾನಿಕ್ ರೂಪದಲ್ಲಿ ಅಂದರೆ ಕಂಪ್ಯೂಟರ್ ಫೈಲ್ ಗಳ ರೂಪದಲ್ಲಿ ಕೂಡ ತಯಾರುಮಾಡಬಹುದು. ವಿವಿಧ ಫೈಲ್ ಮಾದರಿಗಳಲ್ಲಿ ಸಿಗುವ ಅವುಗಳನ್ನು ಓದಲು ಸಾಧನ ಬೇಕಾಗುತ್ತದೆ. ಅದೇ ಇಬುಕ್ ರೀಡರ್. ಮುಖ್ಯವಾಗಿ ಟ್ಯಾಬ್ಲೆಟ್ /ಐಪ್ಯಾಡ್ ಗಳು ಎಲ್.ಇ.ಡಿ. ಪರದೆ ಹೊಂದಿರುತ್ತವೆ. ಎಲ್ ಇ ಡಿ ಪರದೆಗಳು ಬೆಳಕನ್ನು ಹೊರಸೂಸುವುದರಿಂದ ಅವು ಹೆಚ್ಚು ಹೊತ್ತು ನೋಡಲು, ಓದಲು ಸೂಕ್ತವಲ್ಲ. ಕಣ್ಣಿಗೆ ತೊಂದರೆ ಉಂಟುಮಾಡಬಲ್ಲುದು. ಇಬುಕ್ ರೀಡರ್ ಗಳು ಪುಸ್ತಕ ಓದುವುದಕ್ಕಾಗಿ ಮಾಡಿರುವ ಇ-ಇಂಕ್ ತಂತ್ರಜ್ಞಾನ ಬಳಸುತ್ತವೆ. ಇ ಇಂಕ್ ಪರದೆಗಳಿಂದ ಕಣ್ಣಿಗೆ ತೊಂದರೆಯಿಲ್ಲ. ಇ-ಇಂಕ್ ಪರದೆಯಲ್ಲಿ ಇ-ಪುಸ್ತಕವು ಮುದ್ರಿತ ಪುಸ್ತಕಗಳಂತೆಯೇ ಕಾಣುತ್ತದೆ.  ಟ್ಯಾಬ್ಲೆಟ್ ಗಳು ಬಣ್ಣದ ಡಿಸ್ ಪ್ಲೇ ಹೊಂದಿರುತ್ತವೆ. ವಿಡಿಯೋ, ಆಡಿಯೋ, ಗೇಮ್ಸ್, ಇಂಟರ್ನೆಟ್ ಎಲ್ಲವೂ ಸಾಧ್ಯ. ಆದರೆ ಇಬುಕ್ ರೀಡರ್ ಎನ್ನುವುದು ಓದಲು ಮಾತ್ರ ಹಾಗೂ ವೈಫೈ ಮೂಲಕ ಬೇಸಿಕ್ ಬ್ರೌಸಿಂಗ್ ಮಾಡಬಹುದಷ್ಟೆ.  ಹಾಗಾಗಿ ಬೇರೆ ಆಕರ್ಷಣೆಗೊಳಗಾಗದೇ ಓದುತ್ತಿರಬಹುದು. ದೀರ್ಘಾವಧಿ ಬ್ಯಾಟರಿ ಛಾರ್ಜ್ ಕೂಡ ಉಳಿಯುತ್ತದೆ. :) (ಕೆಲವು ಮಾಡೆಲ್ ಗಳಲ್ಲಿ ಆಡಿಯೋ ಹಾಗೂ ತ್ರಿಜಿ ಸಂಪರ್ಕ ಸೌಲಭ್ಯ ಇದೆ)

***
ಕನ್ನಡದಲ್ಲಿ ಕಿಂಡಲ್ ಫೈಲ್ ಮಾದರಿಯ ಪುಸ್ತಕಗಳು ಇನ್ನೂ ಬಂದಿಲ್ಲ. ಹಾಗಾಗಿ ಪಿಡಿಎಫ್ ಪುಸ್ತಕಗಳನ್ನೇ ಓದಬೇಕು. ಪಿಡಿಎಫ್ ಪುಸ್ತಕಗಳು ಎಲ್ಲವೂ portrait modeನಲ್ಲಿ ಓದಲಾಗುವುದಿಲ್ಲ. ಅಕ್ಷರಗಳು ಬಹಳ ಸಣ್ಣದಾಗುವುದರಿಂದ ಓದಲು ಕಾಣುವುದಿಲ್ಲ. Landscape modeನಲ್ಲಿ ಓದಬೇಕಾಗುತ್ತದೆ. ಕನ್ನಡದ ಇ-ಬುಕ್/ಪಿಡಿಎಫ್ ಪುಸ್ತಕಗಳ ಲಭ್ಯತೆ ಬಗ್ಗೆ ಈ ಪೋಸ್ಟ್ ನೋಡಿ: Kannada Ebooks

ಕಿಂಡಲ್ ಬಗ್ಗೆ 'ದಿನಮಣಿ ಬಪ್ಪನಾಡು' ಅವರು ಕೊಟ್ಟ ಪೂರಕ ಮಾಹಿತಿ ಹೀಗಿದೆ: ಈ ಮಾಹಿತಿ ಇಂಗ್ಲೀಷ್ ಪುಸ್ತಕಗಳಿಗೆ ಮಾತ್ರ.
೧. ಅಂದಾಜು ೧೯೩೦ರ ಹಿಂದಿನ ಪುಸ್ತಕಗಳು patent/copywrite ವ್ಯಾಪ್ತಿಯಲ್ಲಿ ಬರುವುದಿಲ್ಲ. ಈ ಎಲ್ಲಾ ಪುಸ್ತಕಗಳನ್ನು download ಮಾಡಿ ಓದಬಹುದು.
೨. ಪ್ರತಿ ಪುಟವೂ ಪುಸ್ತಕದ feeling ಕೊಡುವುದರಿಂದ ಮುದ್ರಿತ ಪುಸ್ತಕಗಳನ್ನು ಓದುವ ಆನಂದ ಲಭ್ಯ. Paperwhite ಹಿಂದಿನ modelಗಳು ಸ್ವಯಂಪ್ರಕಾಶಿತವಲ್ಲವಾದ್ದರಿಂದ ಹೊರಬೆಳಕು ಬೇಕು. ಎಲ್ಲಾ ಬರಹ/ಚಿತ್ರಗಳು ಕಪ್ಪುಬಿಳುಪು. ಪುಸ್ತಕ ಓದುವ ಹುಚ್ಚಿನವರಿಗೆ ವರದಾನ.
೩. Battery ಖರ್ಚಾಗುವುದು ಪುಟದಿಂದ ಪುಟಕ್ಕೆ ಬದಲಾವಣೆಯಾಗುವಾಗ ಮಾತ್ರ. ಓದುವಾಗ ಇಲ್ಲ. ಆದ್ದರಿಂದ ಒಂದು charge ತಿಂಗಳಾನುಗಟ್ಟಲೆ ಬರುತ್ತದೆ.
೪. 
AZW, Mobi format ಅಕ್ಷರಗಳನ್ನು ಬೇಕಾದಷ್ಟು ಹಿಗ್ಗಿಸಬಹುದು. ಪುಟ ಅದರ ಪ್ರಕಾರ wrap ಆಗುತ್ತವೆ.
೫. ಇತರ format text (word, pdf ಇತ್ಯಾದಿ)ಗಳನ್ನು mobi formatಗೆ convert ಮಾಡಲು ಒಂದು ಉತ್ತಮ software - Calibre.

ಗುರುವಾರ, ನವೆಂಬರ್ 5, 2015

ಬಾರಿಸು ಡಿಜಿಟಲ್ ಕನ್ನಡ ಡಿಂಡಿಮವ

ತಂತ್ರಜ್ಞಾನ ಜನಸಾಮಾನ್ಯರನ್ನು ತಲುಪಬೇಕಾದರೆ ಹೇಗಿರಬೇಕು ಎಂಬ ಪ್ರಶ್ನೆಗೆ ಉತ್ತರದಲ್ಲಿ ಅವು ಬಳಕೆಗೆ ಸುಲಭವಾಗಿರಬೇಕು ಎಂಬ ಅಂಶವಂತೂ ಅತಿಮುಖ್ಯ. ಬಳಕೆಗೆ ಸುಲಭ ಅಂದರೆ ಅದು ಜನಸಾಮಾನ್ಯರ ಭಾಷೆಯಲ್ಲಿಯೂ ಇರಬೇಕು ಅನ್ನುವುದು ಸಹಜ. ಜನಸಾಮಾನ್ಯರ ಮಟ್ಟದಲ್ಲಿ ತಂತ್ರಜ್ಞಾನ ಅಂದರೆ ಕಂಪ್ಯೂಟರ್, ಇಂಟರ್ನೆಟ್, ಮೊಬೈಲ್ ಫೋನ್, ಟಿವಿ, ಎಲೆಕ್ಟ್ರಾನಿಕ್ ಗ್ಯಾಜೆಟ್ ಗಳು ಇತ್ಯಾದಿ. ಹಿಂದೆ ಇವುಗಳೆಲ್ಲಾ ಕೇವಲ ಇಂಗ್ಲೀಷಿನಲ್ಲಿ ಮಾತ್ರ ಇರುತ್ತವೆ ಎಂಬ ಕಾರಣಕ್ಕೆ ಇದರಿಂದ ದೂರವುಳಿದರು ಎಷ್ಟೋ ಜನ. ಆದರೆ ಈಗ ಕಾಲ ಬದಲಾಗಿದೆ. ತಂತ್ರಜ್ಞಾನಗಳನ್ನು ಸಮರ್ಥವಾಗಿ ಬಳಸುವಂತೆ ಇವುಗಳೆಲ್ಲಾ ಜನರ ಭಾಷೆಯಾದ ಕನ್ನಡದಲ್ಲಿ ದೊರೆಯುತ್ತಿದೆಯಾ ಎಂದು ಪ್ರಶ್ನಿಸಿದರೆ ಧೈರ್ಯವಾಗಿ ’ಹೌದು’ ಎನ್ನಬಹುದು.

ಕಂಪ್ಯೂಟರ್ ಮತ್ತು ಇಂಟರ್ನೆಟ್:

ಮೊದಲು ಕಂಪ್ಯೂಟರ್ ನಿಂದಲೇ ಶುರುಮಾಡೋಣ. ಹದಿನೈದು ವರ್ಷದ ಹಿಂದಿನ ಮಾತು. ಕಂಪ್ಯೂಟರ್ ಎನ್ನುವುದು ಮನೆಮನೆಗಳಲ್ಲಿ ಆಗತಾನೇ ಕಣ್ಣುಬಿಡುತ್ತಿದ್ದ ಕಾಲ. ಅಂತರಜಾಲವಂತೂ ಒಂದು ಅಚ್ಚರಿಯ ವಿಷಯ. ಅದು ವ್ಯಾಪಕವಾಗಿ ಬಳಕೆಯಲ್ಲೂ ಇರಲಿಲ್ಲ ಮತ್ತು ಜನರಿಗೂ ಅಷ್ಟು ಎಟುಕಿರಲಿಲ್ಲ. ಇಂತಹ ಸಂದರ್ಭದಲ್ಲಿ ಕಂಪ್ಯೂಟರಿನಲ್ಲಿ ಕನ್ನಡ ಮೂಡಿಸಲು, ವೆಬ್ ಸೈಟುಗಳನ್ನು ನಿರ್ಮಿಸಲು ಒಂದಿಲ್ಲೊಂದು ಸಮಸ್ಯೆಗಳು ಆಗುತ್ತಿದ್ದವು. ಆದಾಗ್ಯೂ ಹವ್ಯಾಸಿ ಮತ್ತು ವೃತ್ತಿಪರ ತಂತ್ರಜ್ಞರಿಂದ ಕನ್ನಡ ಟೈಪಿಸುವ ಕೆಲವು ತಂತ್ರಾಶಗಳು ಅಭಿವೃದ್ಧಿಗೊಳಿಸಲ್ಪಟ್ಟವು. ನುಡಿ, ಬರಹದಂತಹ ತಂತ್ರಾಂಶಗಳು ಜನಪ್ರಿಯವಾದವು. ಇಂತಹ ಎಲ್ಲಾ ತಂತ್ರಾಂಶಗಳಲ್ಲಿದ್ದ ಕೊರತೆ ಎಂದರೆ ಆಯಾ ತಂತ್ರಾಂಶದಲ್ಲಿ ಟೈಪಿಸಿದ ಕಡತಗಳನ್ನು ಮತ್ತೊಂದು ಗಣಕದಲ್ಲಿ ಓದಬೇಕೆಂದಿದ್ದರೆ ಆ ಗಣಕದಲ್ಲೂ ಅದೇ ತಂತ್ರಾಂಶ ಅಳವಡಿಸಿಕೊಳ್ಳಬೇಕಿತ್ತು. ಅನಂತರದ ದಿನಗಳಲ್ಲಿ ಅಂತಾರಾಷ್ಟ್ರೀಯ ಶಿಷ್ಟತೆಯ ಯುನಿಕೋಡ್ ಅಕ್ಷರಶೈಲಿ(ಫಾಂಟ್)ಗಳು ತಯಾರಾದವು. ಇದು ಕಂಪ್ಯೂಟರಲ್ಲಿ ಕನ್ನಡದ ಮತ್ತು ವಿಶ್ವದ ಬಹಳ ಭಾಷೆಗಳ ಬೆಳವಣಿಗೆಯಲ್ಲಿ ಪ್ರಮುಖ ಘಟ್ಟ. ವಿಂಡೋಸ್, ಲಿನಕ್ಸ್ ಮುಂತಾದ ಕಾರ್ಯಾಚರಣ ವ್ಯವಸ್ಥೆಗಳು (O.S) ಈ ಯುನಿಕೋಡ್ ಫಾಂಟ್ ಗಳನ್ನು ಅಳವಡಿಸಿಕೊಂಡವು. ಈ ಕಾರ್ಯಾಚರಣ ವ್ಯವಸ್ಥೆಗಳು ಪೂರ್ತಿ ಕನ್ನಡದಲ್ಲೂ ಲಭ್ಯವಾದವು. ಕನ್ನಡ ಟೈಪಿಸುವ ತಂತ್ರಾಂಶಗಳು ಯುನಿಕೋಡ್ ಅಕ್ಷರಗಳನ್ನು ಟೈಪಿಸುವ ಸೌಲಭ್ಯ ಕಲ್ಪಿಸಿದವು. ಹಾಗಾಗಿ ಈ ಫಾಂಟ್ ಸಮಸ್ಯೆ ದೂರವಾಯಿತು. ಈಗ ನಾವೆಲ್ಲಾ ಬರೆಯುತ್ತಿರುವ ಕನ್ನಡ ಅಕ್ಷರಗಳನ್ನು ಯಾವುದೇ ಕಂಪ್ಯೂಟರ್ ನಲ್ಲಿ ಯಾವುದೇ ಹೊರ ತಂತ್ರಾಂಶದ ಅಗತ್ಯವೂ ಇಲ್ಲದೇ ಓದಬಹುದು. ಕನ್ನಡ ಸುಲಭವಾಗಿ ಟೈಪಿಸಲು ಈಗಂತೂ ಅನೇಕ ತಂತ್ರಾಂಶಗಳು, ಆನ್ ಲೈನ್, ಆಫ್ ಲೈನ್ ಸಲಕರಣೆಗಳು ಇವೆ. ಬರಹ, ನುಡಿ, ಪದ, ಗೂಗಲ್ ಇನ್ಪುಟ್, ಕನ್ನಡ ಸ್ಲೇಟ್ ಮುಂತಾದ ಹತ್ತು ಹಲವು ಲಭ್ಯ. ಕಾರ್ಯಾಚರಣ ವ್ಯವಸ್ಥೆ (O.S) ಗಳಲ್ಲೇ ಕನ್ನಡ ಇನ್ ಬಿಲ್ಟ್ ಕೀಬೋರ್ಡ್ ಕೂಡ ಇರುತ್ತದೆ.

ಅಂತರಜಾಲದಲ್ಲಿ ಮೊದಲು ಕನ್ನಡಿಗರ ಸಂವಹನಗಳು ಕಂಗ್ಲೀಷಿನಲ್ಲಿರುತ್ತಿದ್ದವು. ಅಂದರೆ ಕನ್ನಡವನ್ನು ಇಂಗ್ಲೀಷ್ ಲಿಪಿಯಲ್ಲಿ ಬರೆಯುವುದು. ಇಮೇಲ್ ಗಳಲ್ಲಿ, ಆರ್ಕುಟ್ ಮುಂತಾದ ಸಾಮಾಜಿಕ ಸಂಪರ್ಕತಾಣಗಳಲ್ಲಿ ಸಂವಹನಗಳು ಇಂಗ್ಲೀಷಿನಲ್ಲಿ ಮತ್ತು ಕಂಗ್ಲೀಷಿನಲ್ಲಿ ನಡೆಯುತ್ತಿತ್ತು. ಒಮ್ಮೆ ಈ ಯುನಿಕೋಡ್ ಜನಪ್ರಿಯವಾದಂತೆಲ್ಲಾ ಆರ್ಕುಟ್, ಫೇಸ್ ಬುಕ್ ಮುಂತಾದ ಕಡೆ ಭರಪೂರ ಕನ್ನಡ ಬರವಣಿಗೆಗಳು ಶುರುವಾದವು. ಕನ್ನಡ ಬರವಣಿಗೆ ಮಾಡಲು ಸಾವಿರಾರು ಜನ ಬ್ಲಾಗುಗಳನ್ನು ತೆರೆದರು. ತಂತ್ರಜ್ಞಾನ ಜನಸಾಮಾನ್ಯರನ್ನು ಮುಟ್ಟಿದ್ದಕ್ಕೆ ಇದು ಸೂಚನೆಯಾಗಿತ್ತು. ಸಾಹಿತ್ಯ, ಮಾಹಿತಿ ಬರಹಗಳು ಅಂತರಜಾಲದಲ್ಲಿ ಪ್ರಕಟವಾಗತೊಡಗಿದವು. ಅನೇಕ ಜಾಲತಾಣಗಳು, ಸುದ್ದಿತಾಣಗಳು, ನಿಘಂಟುಗಳು, ’ಕಣಜ’ದಂತಹ ಮಾಹಿತಿಕೋಶ, ವಿಕಿಪೀಡಿಯಾದಂತಹ ವಿಶ್ವಕೋಶಗಳು ಇವತ್ತು ಕನ್ನಡದಲ್ಲಿ ಇವೆ. ಕನ್ನಡದ ಎಲ್ಲಾ ಪ್ರಮುಖ ಪತ್ರಿಕೆಗಳು ಇ-ಪೇಪರ್ ಗಳಾಗಿಯೂ ಹೊರಬರುತ್ತಿವೆ. ಗೂಗಲ್ ಕ್ರೋಮ್, ಮೊಜಿಲ್ಲಾ ಫೈರ್‌ಫಾಕ್ಸ್, ಇಂಟರ್‌ನೆಟ್ ಎಕ್ಸ್‌ಪ್ಲೋರರ್ ಸೇರಿದಂತೆ ಹಲವಾರು ಪ್ರಮುಖ ಬ್ರೌಸರುಗಳ ಕನ್ನಡ ಆವೃತ್ತಿ ಲಭ್ಯವಿದೆ. ಜಿಮೇಲ್, ಯಾಹೂನಂತಹ ಇಮೇಲ್ ಸೇವೆಗಳು ಮತ್ತು ಫೇಸ್ ಬುಕ್ ಕೂಡ ಕನ್ನಡದಲ್ಲಿವೆ. ಬಳಕೆದಾರರು ಕನ್ನಡಕ್ಕೆ ಬದಲಾಯಿಸಿಕೊಳ್ಳಲು ಸೆಟಿಂಗ್ಸ್ ಮೆನುವಿನಲ್ಲಿ ಆಯ್ಕೆ ಇರುತ್ತದೆ. ಬೇರೆ ಭಾಷೆಯಲ್ಲಿ ಇರುವ ಮಾಹಿತಿಯನ್ನು ಕನ್ನಡಕ್ಕೆ ಅನುವಾದಿಸಿಕೊಳ್ಳುವ ಸೌಲಭ್ಯ ಕೂಡ 'ಗೂಗಲ್ ಟ್ರಾನ್ಸ್‌ಲೇಟ್' ಮೂಲಕ ಪ್ರಾರಂಭಿಕ ಹಂತದಲ್ಲಿ ಬಂದಿದೆ.


ಸ್ಮಾರ್ಟ್ ಫೋನುಗಳಲ್ಲಿ ಕನ್ನಡ: 

ತಂತ್ರಜ್ಞಾನ ಎಂದಿಗೂ ನಿಂತ ನೀರಲ್ಲ. ಫೋನುಗಳು ತಂತ್ರಜ್ಞಾನ ಬಳಸಿಕೊಂಡು ಸ್ಮಾರ್ಟ್ ಆಗತೊಡಗಿದವು. ಫೋನುಗಳು ಕೇವಲ ಕರೆ ಮಾಡುವ ಹೊರತಾಗಿ ಇನ್ನೂ ಅನೇಕ ಕೆಲಸಗಳಿಗೆ ಬಳಕೆಯಾಗತೊಡಗಿತು. ಕನ್ನಡವೂ ಅದರೊಂದಿಗೆ ಸ್ಮಾರ್ಟ್ ಆಗುವ ಅಗತ್ಯತೆ ಉಂಟಾಯಿತು. ಹಳೆಯ ಮಾದರಿಯ ಫೋನುಗಳಲ್ಲಿ ಕನ್ನಡ ಅಕ್ಷರಗಳಿಗೆ ಬೆಂಬಲವಿರಲಿಲ್ಲ. ಕೆಲವೊಂದು ಕಂಪನಿಗಳ ಕೆಲವು ಮಾಡೆಲ್ ಗಳಲ್ಲಿ ಮಾತ್ರ ಕನ್ನಡ ಓದುವುದು ಬರೆಯುವುದು ಸಾಧ್ಯವಿತ್ತು. ಇತ್ತೀಚಿನ ವರ್ಷಗಳಲ್ಲಿ ಜನಪ್ರಿಯವಾಗಿರುವ ಆಂಡ್ರಾಯ್ಡ್ ನ ಮೊದಲ ಆವೃತ್ತಿಗಳಲ್ಲೂ ಕನ್ನಡ ಅಕ್ಷರಗಳಿಗೆ ಬೆಂಬಲ ಇರಲಿಲ್ಲ. ಕೆಲವು ಮಾಡೆಲ್ ಗಳು ಕನ್ನಡ ಸಪೋರ್ಟ್ ಒದಗಿಸಿದ್ದವಷ್ಟೆ. ಅನಂತರದ ಆವೃತ್ತಿಗಳಲ್ಲಿ ಕನ್ನಡ ಹಂತಹಂತವಾಗಿ ಅಳವಡಿಕೆಯಾಯಿತು. ಈಗಿನ ಬಹುತೇಕ ಸ್ಮಾರ್ಟ್ ಫೋನುಗಳಲ್ಲಿ ಕನ್ನಡ ಓದಲು ತೊಂದರೆಯಿಲ್ಲ. ಕನ್ನಡ ಬರೆಯಲು ಕೆಲವು ಮಾಡೆಲ್ ಫೋನುಗಳಲ್ಲಿ ಇನ್ ಬಿಲ್ಟ್ ಕೀಪ್ಯಾಡ್ ಇರುತ್ತದೆ. ಇಲ್ಲದಿದ್ದಲ್ಲಿ ಕಿರುತಂತ್ರಾಂಶಗಳಾಗಿ (app) ಸಿಗುವ ಹಲವಾರು ಕನ್ನಡ ಕೀಪ್ಯಾಡುಗಳಿವೆ. ಅದನ್ನು ಹಾಕಿಕೊಂಡು ಇಮೇಲ್, ಎಸ್ಸೆಮ್ಮೆಸ್ ಎಲ್ಲವನ್ನೂ ನೇರವಾಗಿ ಕನ್ನಡದಲ್ಲೇ ಟೈಪಿಸಬಹುದು. ಟ್ಯಾಬ್ಲೆಟ್, ಐಪ್ಯಾಡ್ ಗಳೂ ಕೂಡ ಇದಕ್ಕೆ ಹೊರತಲ್ಲ. ಆಂಡ್ರಾಯ್ಡ್ ಗಾಗಿ ಪದ ಕನ್ನಡ, ಜಸ್ಟ್ ಕನ್ನಡ, ಇಂಡಿಕ್ ಕೀಬೋರ್ಡ್ ಮುಂತಾದ ಹತ್ತು ಹಲವು ಒಳ್ಳೆಯ ಕಿರುತಂತ್ರಾಂಶಗಳಿವೆ. ಗೂಗಲ್ ಪ್ಲೇಸ್ಟೋರಿನಲ್ಲಿ kannada keypads ಎಂದು ಹುಡುಕಿದರೆ ಪಟ್ಟಿಯಾಗುತ್ತವೆ. ಇಂಗ್ಲೀಷ್-ಕನ್ನಡ ನಿಘಂಟು, ಆರೋಗ್ಯ ವಿಷಯ ಸೇರಿದಂತೆ ಕನ್ನಡದ ಅನೇಕ ಮಾಹಿತಿ ಆಪ್ ಗಳೂ ಲಭ್ಯ. ಭಗವದ್ಗೀತೆ, ಬೈಬಲ್, ದಾಸವಾಣಿ, ಸ್ತೋತ್ರಗಳಂತಹ ಧಾರ್ಮಿಕ ಆಪ್ ಗಳೂ ಕನ್ನಡದಲ್ಲಿವೆ. ಸುಡೊಕು ಆಟಗಳು, ಪದಬಂಧದ ಆಪ್ ಗಳಿವೆ. ಫೋನ್/ಟ್ಯಾಬ್ಲೆಟ್ ಗಳಲ್ಲಿ ಓದಲು ಆಪ್ ರೂಪದ ಪುಸ್ತಕಗಳಿವೆ. ಕನ್ನಡ ಕಲಿಯಲಿಚ್ಛಿಸುವವರಿಗಾಗಿ ’ಕನ್ನಡ ಬರುತ್ತೆ’ ಎಂಬ ಆಪ್ ಇದೆ. ಕೈಯಿಂದ ಅಥವಾ ಸ್ಟೈಲಸ್ ಕಡ್ಡಿಯಿಂದ ಫೋನ್ ಅಥವಾ ಟ್ಯಾಬ್ಲೆಟ್ ಪರದೆಯ ಮೇಲೆ ಬರೆದ ಕನ್ನಡ ಕೈಬರಹವನ್ನು ಗುರುತಿಸಿ ಪಠ್ಯವಾಗಿಸಬಲ್ಲ ಆಪ್ ಇದೆ. ಇಂತಹ ಅನೇಕ ಆಪ್ ಗಳ ಅಭಿವೃದ್ಧಿಯಲ್ಲಿ ಕನ್ನಡ ಅಭಿಮಾನದ ಹವ್ಯಾಸಿ ತಂತ್ರಜ್ಞರ ಕೊಡುಗೆ ಬಹಳಷ್ಟಿದೆ. ಕನ್ನಡ ಸುದ್ದಿತಾಣಗಳು, ಪತ್ರಿಕೆಗಳು ಇಂದು ಆಪ್ ರೂಪದಲ್ಲಿ ಲಭ್ಯ. ಕೆಲವು ಬ್ಯಾಂಕುಗಳು ತಮ್ಮ ಬ್ಯಾಂಕಿಂಗ್ ಆಪ್ ಗಳನ್ನು ಕನ್ನಡದಲ್ಲಿಯೂ ಬಿಡುಗಡೆ ಮಾಡಿವೆ.

ಕನ್ನಡ ಇಪುಸ್ತಕಗಳು:

ಎಲೆಕ್ಟ್ರಾನಿಕ್ ಯುಗದಲ್ಲಿ ಎಲ್ಲವೂ ಎಲೆಕ್ಟ್ರಾನಿಕ್ ರೂಪದಲ್ಲಿ ಬರುತ್ತಿದ್ದಂತೆಯೇ ಪುಸ್ತಕಗಳೂ ಇ-ಪುಸ್ತಕಗಳಾಗಿ ಬರತೊಡಗಿ ಹಲವು ವರ್ಷಗಳೇ ಕಳೆದುಹೋಗಿವೆ. ಒಂದು ಇಬುಕ್ ರೀಡರ್ ಅಥವಾ ಟ್ಯಾಬ್ಲೆಟ್ಟಿನಲ್ಲಿ ಒಂದು ಲೈಬ್ರರಿಯನ್ನೇ ಇಟ್ಟುಕೊಳ್ಳಬಹುದು! ಇಂಗ್ಲೀಶಿನಲ್ಲಂತೂ ಇ-ಬುಕ್ ಗಳ ಭರಾಟೆ ಜೋರಾಗಿದೆ. ಕನ್ನಡದಲ್ಲಿ ಇದು ಸ್ವಲ್ಪ ತಡವಾಗಿಯಾದರೂ ಇತ್ತೀಚಿನ ವರ್ಷಗಳಲ್ಲಿ ಇ-ಪುಸ್ತಕಗಳು ಬರಲಾರಂಭಿಸಿದ್ದು ಹಲವು ತಾಣಗಳಲ್ಲಿ ಇವು ದೊರೆಯುತ್ತಿವೆ. ಪಿ.ಡಿ.ಎಫ್ ಪುಸ್ತಕಗಳು ಮತ್ತು ಆನ್ ಲೈನಲ್ಲಿ ಓದುವ ಅಥವಾ ನಿರ್ದಿಷ್ಟ ಕಿರುತಂತ್ರಾಂಶ(app)ಗಳನ್ನು ಅಳವಡಿಸಿಕೊಂಡು ಅದರ ಮೂಲಕ ಓದಬಹುದಾದಂತಹ ಫೈಲ್ ಮಾದರಿಯ ಪುಸ್ತಕಗಳೂ ದೊರೆಯುತ್ತಿವೆ. ಆಂಡ್ರಾಯ್ಡ್, ಐ ಓ.ಎಸ್, ವಿಂಡೋಸ್ ಮುಂತಾದ ಕಾರ್ಯಾಚರಣ ವ್ಯವಸ್ಥೆಗಳನ್ನು ಹೊಂದಿರುವ ಕಂಪ್ಯೂಟರ್, ಟ್ಯಾಬ್ಲೆಟ್, ಫೋನ್, ಇ ಬುಕ್ ರೀಡರ್ ಗಳಲ್ಲಿ ಓದಬಹುದು. ಕನ್ನಡ ಇಪುಸ್ತಕಗಳು ದೊರೆಯುವ ಕೆಲವು ತಾಣಗಳೆಂದರೆ ಪುಸ್ತಕ.ಕೊ.ಇನ್, ಡೈಲಿಹಂಟ್, ಗೂಗಲ್ ಬುಕ್ಸ್, ಸಿರಿಕನ್ನಡ, ಡಿಜಿಟಲ್ ಲೈಬ್ರರಿ ಆಫ್ ಇಂಡಿಯಾ, ಕೈ ಬುಕ್ಸ್ ಇತ್ಯಾದಿಗಳು

ತಾಂತ್ರಿಕ ಮಟ್ಟದಲ್ಲಿ ಕಂಪ್ಯೂಟರ್ ಪ್ರೋಗ್ರಾಮಿಂಗ್ ಕೂಡ ಕನ್ನಡದಲ್ಲೇ ಸಾಧ್ಯವಿದೆ ಎಂದು ತೋರಿಸಿಕೊಟ್ಟಿದ್ದಾರೆ. ಕನ್ನಡ ಗಣಕ ಪರಿಷತ್ತಿನಿಂದ ತಯಾರಾದ ಅಕ್ಷರಕಲಿ, ಅಂಕಿವಿನೋದ, ಪದವಿಹಾರ, ವಿಶ್ವಕನ್ನಡ ತಾಣದ ’ಕನ್ನಡಕಲಿ’ಯಂತಹ ಕನ್ನಡದ ಕೆಲವು ಸರಳ ಆಟಗಳ ತಂತ್ರಾಂಶಗಳಿವೆ. ಕನ್ನಡ ಪಠ್ಯವನ್ನು ಓದಿ ಹೇಳಬಲ್ಲ ಟೆಕ್ಸ್ಟ್ ಟು ಸ್ಪೀಚ್, ಸ್ಕ್ಯಾನ್ ಮಾಡಿದ ಕಡತಗಳನ್ನು ಪಠ್ಯಕ್ಕೆ ಪರಿವರ್ತಿಸಬಲ್ಲ ಓಸಿಆರ್ ತಂತ್ರಜ್ಞಾನ ಒಂದು ಮಟ್ಟಕ್ಕೆ ಅಭಿವೃದ್ಧಿಯಾಗಿದೆ. ಹಾಗಿದ್ದರೆ ಕನ್ನಡ ಮತ್ತು ತಂತ್ರಜ್ಞಾನ ಅಂದರೆ ಇಷ್ಟೆನಾ? ಖಂಡಿತ ಅಲ್ಲ. ಕಂಪ್ಯೂಟರ್, ಅಂತರಜಾಲ, ಸ್ಮಾರ್ಟ್ ಫೋನು ಹೊರತಾಗಿ ಪ್ರತಿಯೊಂದು ವ್ಯವಹಾರಗಳಲ್ಲೂ, ಹಂತದಲ್ಲೂ ಸಹ ಕನ್ನಡವನ್ನು ಬಳಸುವುದು ಸಾಧ್ಯವಾದಾಗ ಮಾತ್ರ ತಂತ್ರಜ್ಞಾನ ಯಶಸ್ವಿಯಾದಂತೆ. ಸರ್ಕಾರದಿಂದ ಹಿಡಿದು ಜನಸಾಮಾನ್ಯರ ತನಕ ಇವುಗಳನ್ನು ಅಳವಡಿಸುವ ಮತ್ತು ಬಳಸುವ ಪ್ರಕ್ರಿಯೆ ಹೆಚ್ಚಾದಂತೆ ಸಹಜವಾಗಿ ಕನ್ನಡ ತಂತ್ರಜ್ಞಾನವೂ ಹೆಚ್ಚಾಗುತ್ತದೆ. ಇತ್ತೀಚಿನ ವರ್ಷಗಳಲ್ಲಿ ಕೆಲವು ನಗರಗಳಲ್ಲಿ ಶುರುವಾದ ಆಪ್ ಆಧಾರಿತ ಟ್ಯಾಕ್ಸಿ ಮತ್ತು ರಿಕ್ಷಾ ಸೇವೆಗಳೇ ಉದಾಹರಣೆ. ಇದರಲ್ಲಿ ಚಾಲಕರಿಗೆ ಕೊಡುವ ಉಪಕರಣದಲ್ಲಿ ಕನ್ನಡ ಇಂಟರ್ ಫೇಸ್ ಇದೆ. ಪ್ರಿಂಟಿಂಗ್ ಟೆಕ್ನಾಲಜಿಯಲ್ಲಿ ಕನ್ನಡದ ಬೆಳವಣಿಗೆಯಿಂದಾಗಿ ಪತ್ರಿಕೆಗಳು ಇನ್ನಿತರ ಮುದ್ರಣ ಮಾಧ್ಯಮಗಳು ಸುಂದರ ಮತ್ತು ವಿವಿಧ ಅಕ್ಷರಶೈಲಿಯಲ್ಲಿ ಬರುತ್ತಿರುವುದನ್ನೂ ನೋಡಬಹುದು. ಎಲ್ ಇ ಡಿ, ಸ್ಮಾರ್ಟ್ ಟಿವಿಗಳಲ್ಲಿ ಕನ್ನಡದಲ್ಲೂ ಮೆನು ಆಯ್ಕೆಗಳನ್ನು ಹೊಂದಿದ ಟೀವಿಗಳಿವೆ. ಬ್ಯಾಂಕ್ ಎ.ಟಿ.ಎಂ. ಯಂತ್ರಗಳಿವೆ. ಈ ರೀತಿಯಾಗಿ ಪ್ರತಿಯೊಂದರಲ್ಲೂ ಸಹ ಕನ್ನಡ ಅಳವಡಿಕೆಯಾಗಿದೆ ಮತ್ತು ಆಗುತ್ತಿದೆ. ಇದರರ್ಥವೇನೆಂದರೆ ಕನ್ನಡಿಗರೆಲ್ಲರೂ ಹೆಚ್ಚಾಗಿ ಕನ್ನಡವನ್ನೇ ಬಳಸಿದಾಗ ಮತ್ತು ಆಮೂಲಕ ಬೇಡಿಕೆ ಸೃಷ್ಟಿಯಾದಾಗ ತಕ್ಕ ತಂತ್ರಜ್ಞಾನವೂ ಅಭಿವೃದ್ಧಿಯಾಗುತ್ತದೆ. ಕನ್ನಡ ಹಿಂದೆಬೀಳದಂತೆ ತಂತ್ರಜ್ಞಾನದ ಜೊತೆಜೊತೆಯಾಗಿ ಹೆಜ್ಜೆಹಾಕಲು ಖಂಡಿತ ಸಾಧ್ಯವಾಗುತ್ತದೆ. ಬೇಕಾಗಿರುವುದು ಅಳವಡಿಕೆಯ ಮತ್ತು ಬಳಕೆಯ ಇಚ್ಛಾಶಕ್ತಿ ಮಾತ್ರ.

- ವಿಕಾಸ್ ಹೆಗಡೆ, ಬೆಂಗಳೂರು


ಕನ್ನಡಪ್ರಭ.ಕಾಂ ರಾಜ್ಯೋತ್ಸವ ವಿಶೇಷ ಪುಟದಲ್ಲಿ ಪ್ರಕಟವಾಗಿದ್ದು: ಬಾರಿಸು ಡಿಜಿಟಲ್ ಕನ್ನಡ ಡಿಂಡಿಮವ

ಭಾನುವಾರ, ಆಗಸ್ಟ್ 9, 2015

ಮೈಕ್ರೊಕ್ರೆಡಿಟ್ (ಸಣ್ಣಸಾಲ) ಎಂಬ ಸಾಮಾಜಿಕ ಹೂಡಿಕೆ

ರಂಗ್ ದೇ (www.rangde.org/)  - ಈ ಸಂಸ್ಥೆಯ ಬಗ್ಗೆ ತಿಳಿದದ್ದು ನನಗೆ ಶ್ರೀನಿಧಿ ಹಂದೆಯವರ ಬ್ಲಾಗಿನಲ್ಲಿ.  ಅದರ ಬಗ್ಗೆ ಓದುತ್ತಿದ್ದಂತೆ ಆಸಕ್ತಿ ಮೂಡಿತ್ತು. ಇದು ಒಂದು ಮೈಕ್ರೋ ಪೈನಾನ್ಸ್ ಸಂಸ್ಥೆ. ಅಂದರೆ ಭಾರತದಾದ್ಯಂತ ಹಳ್ಳಿಗಳಲ್ಲಿ ಸ್ವಯಂಉದ್ಯೋಗ ಕೈಗೊಳ್ಳಲು ಸಣ್ಣಪ್ರಮಾಣದ ಸಾಲದ ಅಗತ್ಯವಿದ್ದವರಿಗೆ ಅದನ್ನು ಒದಗಿಸಿಕೊಡುತ್ತದೆ. ಹೈನುಗಾರಿಕೆ, ಕೃಷಿ, ಹೊಲಿಗೆ, ಅಂಗಡಿ, ಮರಗೆಲಸ ಮುಂತಾದ ಯಾವುದೇ ಉದ್ಯೋಗ ಶುರುಮಾಡುವವರಿಗೆ ಅಥವಾ ಇರುವುದನ್ನು ಇನ್ನೂ ಉತ್ತಮಗೊಳಿಸಲು ಬಯಸುವವರಿಗೆ ಸಾಲ ಒದಗಿಸುತ್ತದೆ.  ಇದಲ್ಲದೇ ಗುಡಿಕೈಗಾರಿಕೆಗಳಿಗೂ ಹಣಕಾಸಿನ ಬೆಂಬಲವನ್ನು ಸಾಲರೂಪದಲ್ಲಿ ಒದಗಿಸುತ್ತದೆ.  ಸಾಮಾನ್ಯವಾಗಿ ಹಳ್ಳಿಯಲ್ಲಿ ಜನ ಹಣ ಬೇಕಾದಾಗ ಕೆಲ ವ್ಯಕ್ತಿಗಳಲ್ಲಿ ಸಾಲ ಮಾಡುತ್ತಾರೆ. ಅಲ್ಲಿನ ಬಡ್ಡಿ ಪ್ರಮಾಣ ಬಹಳ ಹೆಚ್ಚಿನದಾಗಿರುತ್ತದೆ. ಬ್ಯಾಂಕುಗಳಿಂದ ಕೂಡ ಇವರು ಸಾಲಪಡೆಯುವುದು ಕಷ್ಟ. ಈ ರಂಗ್ ದೇಯಂತಹ ಸಂಸ್ಥೆಗಳು ಕಡಿಮೆ ಬಡ್ಡಿದರದಲ್ಲಿ ಸಾಲ ಒದಗಿಸುತ್ತವೆ. ತಮ್ಮ ಫೀಲ್ಡ್ ಪಾರ್ಟನರ್ ಗಳ ಮೂಲಕ ಪರಿಶೀಲಿಸಿ ಅಗತ್ಯವಿದ್ದವರಿಗೆ  ಹಣ ಕೊಡುವುದು ಮತ್ತು ಆ ಹಣಬಳಕೆಯ ಬಗ್ಗೆ ನಿಗಾವಹಿಸಿ ಈ ಸಾಲ ಸರಿಯಾಗಿ ಬಳಕೆಯಾಗುತ್ತಿರುವ ಬಗ್ಗೆ ಖಾತ್ರಿಪಡಿಸಿಕೊಳ್ಳಲಾಗುತ್ತದೆ.

ಸಾಮಾಜಿಕ ಹೂಡಿಕೆ ಎಂಬ ಹೆಸರಲ್ಲಿ ಸಾರ್ವಜನಿಕರಿಗೂ ಕೂಡ ಈ ಕೆಲಸದಲ್ಲಿ ಪಾಲ್ಗೊಳ್ಳಲು ಅವಕಾಶವಿದೆ. ವೆಬ್ ಸೈಟ್ ಮೂಲಕ ಹೂಡಿಕೆ ಮಾಡಬಹುದು. ವೆಬ್ ಸೈಟಿನಲ್ಲಿ ಪ್ರೊಫೈಲ್ ಗಳನ್ನು ನೋಡಿ ಅವರಿಗೆ ಸಾಲ ಬೇಕಾಗಿರುವ ಉದ್ದೇಶದ ಬಗ್ಗೆ ವಿವರಗಳನ್ನು ನೋಡಿ ನಾವು ಹೂಡಿಕೆ ಮಾಡಬಹುದು. ಹೆಚ್ಚಿನ ಸಾಲಗಳು ವಾರ್ಷಿಕ ಅವಧಿಯ ಆಧಾರದಲ್ಲಿ ಕೊಡಲ್ಪಡುತ್ತವೆ. ಸಾಲ ಪಡೆದುಕೊಂಡವರು ಮರುಪಾವತಿ ಮಾಡಿದಾಗ ವಾರ್ಷಿಕ ೧೦% ಬಡ್ಡಿಯಲ್ಲಿ ನಮಗೆ (ಹೂಡಿಕೆದಾರರಿಗೆ) ಸುಮಾರು ೨% ದೊರೆಯುತ್ತದೆ. ೨% ಬಡ್ಡಿಯು ರಂಗ್ ದೇಗೆ ಹೋಗುತ್ತದೆ, ಮತ್ತು ೫‍% ರಂಗ್ ದೇಯ ಫೀಲ್ಡ್ ಪಾರ್ಟನರ್ ಗಳಿಗೆ ಹೋಗುತ್ತದೆ. ರಂಗದೇ ಜಾಲತಾಣದಲ್ಲಿ FAQ ನೋಡಿದರೆ ಇದೆಲ್ಲುದರ ಸಂಪೂರ್ಣ ಮಾಹಿತಿ ದೊರೆಯುತ್ತದೆ.

ಇದೆಲ್ಲಾ ವಿವರಗಳನ್ನು ಓದಿ ತಿಳಿದುಕೊಂಡು ಮತ್ತು ಸ್ವಲ್ಪ ಅಲ್ಲಿಲ್ಲಿ ರಿಸರ್ಚು ಮಾಡಿ ನಂತರ ನಾನು ಸುಮಾರು ಒಂದು ವರ್ಷದ ಕೆಳಗೆ ಇದರಲ್ಲಿ ಹೂಡಿಕೆ ಮಾಡಿದೆ. ಇದೊಂದು ಸಾಮಾಜಿಕ ಕಾರ್ಯದ ರೀತಿಯಲ್ಲಿ ಇದ್ದುದರಿಂದ ಇದರಲ್ಲಿನ ಅಲ್ಪ ಬಡ್ಡಿಯ ಬಗ್ಗೆ ಹೆಚ್ಚಿನ ಅಪೇಕ್ಷೆ ಇರಲಿಲ್ಲವಾದರೂ ಅಸಲಿನ ಬಗ್ಗೆ ಸಣ್ಣ ಮಟ್ಟದ ಆತಂಕವಿತ್ತು.  ಏಕೆಂದರೆ ಹಲವಾರು ಕಾರಣಗಳಿಂದ ಸಾಲಪಡೆದುಕೊಂಡವರು ಸಾಲ ತೀರಿಸಲು ಆಗದೇ ಇರಬಹುದು. ಅಂತಹ ಸಂದರ್ಭಕ್ಕೂ ನಾವು ತಯಾರಿರಬೇಕಾಗುತ್ತದೆ. ಇರಲಿ ಎಂದುಕೊಂಡು ನಮ್ಮ ಸಾಗರ ಊರಿನ ಸಮೀಪದ ಒಂದು ಗುಡಿಕೈಗಾರಿಕೆ ಹಾಗೂ ಕೆ.ಆರ್. ನಗರದ ಒಬ್ಬ ಮರಗೆಲಸದ ವ್ಯಕ್ತಿಗೆ ಕೊಡುವ ಸಾಲದಲ್ಲಿ ಹೂಡಿಕೆ ಮಾಡಿದ್ದೆ.  ಆ ಸಾಲ ಆ ವ್ಯಕ್ತಿಗಳಿಗೆ ತಲುಪಿಸಲ್ಪಟ್ಟಾಗ ರಂಗ್ ದೇ ಯವರು ಇಮೇಲ್ ಮೂಲಕ ತಿಳಿಸಿದರು. ಅನಂತರ ಸಾಲ ಪಡೆದುಕೊಂಡವರು ಅದನ್ನು ಮರುಪಾವತಿ ಮಾಡಲು ಆರಂಭಿಸಿದರು. ತಿಂಗಳು ತಿಂಗಳು ಸರಿಯಾಗಿ ಹಣ ವಾಪಸ್ಸು ಬರುತ್ತಿದ್ದುದರ ಬಗ್ಗೆ ರಂಗ್ ದೇ ಯವರಿಂದ ಸ್ಟೇಟ್ ಮೆಂಟ್ ಗಳು ಬರುತ್ತಿದ್ದವು. ಒಂದು ವರ್ಷದಲ್ಲಿ ನಾನು ಹೂಡಿಕೆ ಮಾಡಿದ್ದ ಹಣ ಪೂರ್ತಿಯಾಗಿ ೨% ಬಡ್ಡಿಯೊಂದಿಗೆ ವಾಪಸ್ಸು ಬಂತು.  ಈ ವರ್ಷ ಮತ್ತೆ ಆ ಹಣಕ್ಕೆ ಸ್ವಲ್ಪ ಸೇರಿಸಿ ಐದು ವ್ಯಕ್ತಿಗಳಿಗೆ ಸಾಲಕೊಡುವ ಹಣದಲ್ಲಿ ಹೂಡಿಕೆ ಮಾಡಿದ್ದೇನೆ.

ರಂಗದೇ ರೀತಿಯಲ್ಲೇ ಮೈಕ್ರೊ ಫೈನಾನ್ಸ್ ಕೆಲಸ ನಿರ್ವಹಿಸುತ್ತಿರುವ ಮಿಲಾಪ್ ಮತ್ತು ವಿ ಕೇರ್ ಇಂಡಿಯಾ ಎಂಬ ಸಂಸ್ಥೆಗಳೂ ಇವೆ.  ಆಸಕ್ತಿ ಇದ್ದವರು ಕೈಜೋಡಿಸಬಹುದು.

ಭಾನುವಾರ, ಮೇ 3, 2015

ಆಡಿಯೋ ಬುಕ್ಸ್ - ಇದು ಕತೆ ಕೇಳುವ ಸಮಯ...

ಹಿಂದೊಮ್ಮೆ ಫ್ಲಿಫ್ ಕಾರ್ಟ್ ನಲ್ಲಿ ಯಾವುದೋ ಪುಸ್ತಕಕ್ಕಾಗಿ ತಡಕಾಡುತ್ತಿದ್ದಾಗ ಕನ್ನಡದ ಕೆಲವು ಆಡಿಯೋ ಪುಸ್ತಕಗಳು ಕಂಡಿದ್ದವು. ಅದುವರೆಗೂ ನಾನು ಒಂದೂ ಆಡಿಯೋ ಪುಸ್ತಕವನ್ನು ಓದಿ(ಕೇಳಿ)ರಲಿಲ್ಲ. ಕಥೆಗಾರ ವಸುಧೇಂದ್ರ ಅವರು ಕುರುಡರಿಗೂ ಪ್ರಯೋಜನವಾಗಲಿ ಎಂದು ತಮ್ಮ ಕೆಲವು ಕತೆಗಳನ್ನು  ಧ್ವನಿಪುಸ್ತಕಗಳನ್ನಾಗಿ ಮಾಡಿ ಮಾರುಕಟ್ಟೆಗೆ ಬಿಟ್ಟಿದ್ದರು ಎಂದು ಕೇಳಿದ್ದೆ. ಅದರಲ್ಲಿ ಕಥೆಗಳನ್ನು ಅವರೇ ಓದಿ ರೆಕಾರ್ಡ್ ಮಾಡಿದ್ದರು ಅನ್ನಿಸುತ್ತದೆ. ಫ್ಲಿಪ್ ಕಾರ್ಟಿನಲ್ಲೂ ಕೆಲವು ಕನ್ನಡ ಕೇಳುಪುಸ್ತಕಗಳು ಇದ್ದವು.  ಅವುಗಳಲ್ಲಿ ಮಾಸ್ತಿಯವರ ’ಸುಬ್ಬಣ್ಣ ಮತ್ತು ಆಯ್ದ ಸಣ್ಣ ಕತೆಗಳು’ ಎನ್ನುವ ಪುಸ್ತಕ ಒಂದಿತ್ತು. ಅದುವರೆಗೂ ನಾನು ಮಾಸ್ತಿಯವರ ಯಾವುದೇ ಕತೆಯನ್ನು ಓದಿರಲಿಲ್ಲ. ಹಾಗಾಗಿ ಮಾಸ್ತಿ ಕತೆಗಳನ್ನು ಓದಿದಂತೆ ಆಗುತ್ತದೆ ಮತ್ತು ಕೇಳುಪುಸ್ತಕದ ಅನುಭವವವೂ ಆಗುತ್ತದೆ ಎಂದು ಆ ಸಿ.ಡಿ.ಯನ್ನು ತರಿಸಿಕೊಂಡೆ. ಸಿ.ಆರ್. ಸಿಂಹ ಸೇರಿದಂತೆ ಇನ್ನು ಮೂವರ ಒಳ್ಳೆಯ ಧ್ವನಿಯಲ್ಲಿ ಕತೆಗಳನ್ನು ರೆಕಾರ್ಡ್ ಮಾಡಲಾಗಿತ್ತು. ಈ ಆಡಿಯೋಬುಕ್ ಗಳು ಬುಕ್ಸ್ ಟಾಕ್ ಎಂಬ ಸಂಸ್ಥೆಯಿಂದ ಮಾಡಲ್ಪಟ್ಟಿತ್ತು. ಅವರ ವೆಬ್ ಸೈಟಿನಲ್ಲಿ ಖರೀದಿಗೆ ಕೆಲವು ಆಡಿಯೋ ಸಿ.ಡಿ.ಗಳಿವೆ ಮತ್ತು ಡೌನ್ಲೋಡ್ ಮಾಡಿಕೊಳ್ಳಲೂ ಅವಕಾಶವಿದೆ. : booksTALK

ಇತ್ತೀಚೆಗೆ ಟೋಟಲ್ ಕನ್ನಡ ಮತ್ತು ಅವಿರತ ಪ್ರತಿಷ್ಠಾನದವರು ಸೇರಿ ’ಕೇಳಿ ಕಥೆಯ...' ಎಂಬ ಆಡಿಯೋಬುಕ್ ಸಿ.ಡಿ ಹೊರತಂದರು. ಸಿನೆಮಾ ರಂಗದಲ್ಲಿರುವ ಒಳ್ಳೆಯ ಮತ್ತು ಪರಿಚಿತ ಧ್ವನಿಯ ಕಲಾವಿದರಿಂದ ಕತೆಗಳನ್ನು ಓದಿಸಿ ರೆಕಾರ್ಡ್ ಮಾಡಲಾಗಿತ್ತು. ಇದರ ೧೦೦% ಲಾಭ ಗಡಿನಾಡ ಮಕ್ಕಳ ಶಿಕ್ಷಣಕ್ಕೆ ಎಂಬ ಅಂಶವೂ ಇತ್ತು. ಅದರಲ್ಲಿ ಆರು ಕತೆಗಳಿದ್ದವು. ಅದರಲ್ಲಿ ಮೂರು ಕತೆಗಳನ್ನು ಈ ಮೊದಲೇ ಓದಿದ್ದೆ.  ಯೂಟ್ಯೂಬಿನಲ್ಲಿರುವ ಒಂದೆರಡು ಸ್ಯಾಂಪಲ್ಲುಗಳನ್ನು ಕೇಳಿದ ಮೇಲೆ ಕುತೂಹಲದಿಂದ ಅದನ್ನು ತರಿಸಿಕೊಂಡು ಕೇಳಿದೆ. ಬುಕ್ಸ್ ಟಾಕ್ ನವರು ತಯಾರಿಸಿದ ಕೇಳು ಕತೆಗಳಲ್ಲಿ ಪಠ್ಯವನ್ನು ಓದುವ ಮತ್ತು ಸಂಭಾಷಣೆಗಳ ದನಿಯ ಏರಿಳಿತಗಳಲ್ಲಿ  ಕತೆಗೆ ಜೀವ ತುಂಬುವ ಪ್ರಯತ್ನ ಮಾಡಲಾಗಿತ್ತು. ಆದರೆ ಈ 'ಕೇಳಿ ಕತೆಯ' ಸಿ.ಡಿ.ಯಲ್ಲಿ ಕತೆಗಳ ಓದಿನ ಜೊತೆಗೆ ಕೆಲವು  ಸನ್ನಿವೇಶಕ್ಕೆ ತಕ್ಕಂತೆ ಹಿನ್ನೆಲೆ ಶಬ್ದಗಳನ್ನು ಸೇರಿಸಿದ್ದರು. ಇವು ಕತೆಗೆ ಪೂರಕವಾಗಿದ್ದವು. ಕತೆ ಓದುವ ಧ್ವನಿಗಳ ಏರಿಳಿತಗಳು ಮತ್ತು ಭಾವಗಳು ಚೆನ್ನಾಗಿ ಬಂದಿದ್ದವು. ಒಂದೆರಡು ಕತೆಗಳು ಅಂತಹ ಚೆನ್ನಾಗಿಲ್ಲದ್ದರೂ ಸಹ ಹಿನ್ನೆಲೆ ಶಬ್ದಗಳಿಂದ ಕತೆಗಳ ಕೇಳುವಿಕೆ ಆಸಕ್ತಿಕರವಾಗಿದ್ದು ಚೆನ್ನಾಗಿ ಅನ್ನಿಸಿದವು: ಕೇಳಿ ಕಥೆಯ ತಾಣ

ಬೆಂಗಳೂರಿನ 'ಟೋಟಲ್ ಕನ್ನಡ' ಮಳಿಗೆಯಲ್ಲೂ ಕೂಡ ಕೆಲವು ಆಡಿಯೋ ಪುಸ್ತಕಗಳ ಸಂಗ್ರಹ ಇದೆ: ನೋಡಲು ಇಲ್ಲಿ ಚಿಟುಕಿ.

ವೈದೇಹಿಯವರ ಕವನಗಳನ್ನು ಮತ್ತು ಕತೆಗಳನ್ನು ಕೂಡ ಧ್ವನಿರೂಪದಲ್ಲಿ ತರುವ ಯೋಜನೆ ಇರುವ ಸುದ್ದಿ ಕೆಲದಿನಗಳ ಹಿಂದೆ ಗೊತ್ತಾಯಿತು.

ಕೇಳುವ ಪುಸ್ತಕಗಳು ಓದುವ ಪುಸ್ತಕಗಳ ಅನುಭೂತಿಯನ್ನು ಕೊಡಲು ಸಾಧ್ಯವಿಲ್ಲ ಎಂದು ನನಗೆ ವೈಯಕ್ತಿಕವಾಗಿ ಅನ್ನಿಸಿದರೂ ಕೂಡ ಇವು ಆಸಕ್ತರಿಗೆ ಬೇರೆ ಬೇರೆ ರೀತಿಯಲ್ಲಿ ಅನುಕೂಲ ಆಗಬಹುದು ಅನ್ನುವುದು ನಿಜ. ಕನ್ನಡ ಲೋಕವು ಇದನ್ನೆಲ್ಲಾ ಅಳವಡಿಸಿಕೊಳ್ಳುತ್ತಿರುವುದು ಒಳ್ಳೆಯ ಬೆಳವಣಿಗೆ. ಇಂತಹ ಬೆಳವಣಿಗೆಗೆ ತಕ್ಕ ಪ್ರೋತ್ಸಾಹವೂ ಸಿಗಲಿ ಎಂದು ಆಶಿಸೋಣ. ಎಲ್ಲಾ ಉತ್ಸಾಹಿಗಳಿಗೂ ಧನ್ಯವಾದಗಳು

ಬುಧವಾರ, ಜನವರಿ 7, 2015

Kannada Ebooks - ಕನ್ನಡ ಇ-ಪುಸ್ತಕಗಳು

ಎಲೆಕ್ಟ್ರಾನಿಕ್ ಯುಗದಲ್ಲಿ ಎಲ್ಲವೂ ಎಲೆಕ್ಟ್ರಾನಿಕ್ ರೂಪದಲ್ಲಿ ಬರುತ್ತಿದ್ದಂತೆಯೇ ಪುಸ್ತಕಗಳೂ ಇ-ಪುಸ್ತಕಗಳಾಗಿ ಬರತೊಡಗಿ ಹಲವು ವರ್ಷಗಳೇ ಕಳೆದುಹೋಗಿವೆ. ಒಂದು ಇಬುಕ್ ರೀಡರ್ ಅಥವಾ ಟ್ಯಾಬ್ಲೆಟ್ಟಿನಲ್ಲಿ ಇಡೀ ಲೈಬ್ರರಿಯನ್ನೇ ಇಟ್ಟುಕೊಂಡು ಓಡಾಡಬಹುದು! ಇಂಗ್ಲೀಶಿನಲ್ಲಂತೂ ಇ-ಬುಕ್ ಗಳ ಭರಾಟೆ ಜೋರಾಗಿದೆ.  ಓದುವ ಹವ್ಯಾಸ/ಹಂಬಲ ಇದ್ದು ಮುದ್ರಿತ ಪುಸ್ತಕಗಳನ್ನು ಕೊಳ್ಳಲು ಮನಸ್ಸಿಲ್ಲದವರಿಗೆ ಅಥವಾ ಕೊಂಡೊಯ್ಯಲು ಆಗದವರಿಗೆ ಮತ್ತು ಎಲೆಕ್ಟ್ರಾನಿಕ್ ಗ್ಯಾಜೆಟ್ ಗಳ ಮೂಲಕ ಓದಿನ ಅನುಕೂಲ ಕಂಡುಕೊಂಡವರಿಗೆ ಇವು ಉಪಯೋಗವಾಗುತ್ತಿವೆ. ಜಾಗದ ಕೊರತೆ, ಸಂಗ್ರಹದ ಅನುಕೂಲ, ಬೇಕಾದಲ್ಲಿ ತೆಗೆದುಕೊಂಡು ಹೋಗಲು ಸುಲಭ ಹೀಗೆ ವಿವಿಧ ಕಾರಣಗಳಿಗೆ ಇ-ಬುಕ್ ಬಳಕೆ ಹೆಚ್ಚಾಗುತ್ತಿದೆ. (ದೊಡ್ಡ ಪುಸ್ತಕ ಒಯ್ಯುವ ಬದಲು ಇ-ಪುಸ್ತಕ ಒಯ್ಯಿರಿ ಓದಲು- ವಿಜಯ ಕರ್ನಾಟಕ, 12ಮೇ2014)

ನಮ್ಮ ಕನ್ನಡದಲ್ಲಿ ಇತ್ತೀಚಿನ ವರ್ಷಗಳಲ್ಲಿ ಪುಸ್ತಕಗಳು ಇ-ಪುಸ್ತಕಗಳಾಗಿ ಬರಲಾರಂಭಿಸಿದ್ದು ಹಲವು ತಾಣಗಳಲ್ಲಿ ಇವು ದೊರೆಯುತ್ತಿವೆ. ಉಚಿತ ಪುಸ್ತಕಗಳನ್ನು ಒದಗಿಸುವ ತಾಣಗಳಲ್ಲಿ ಹೆಚ್ಚಾಗಿ ಪಿ.ಡಿ.ಎಫ್ ಮಾದರಿಯಲ್ಲಿ ಪುಸ್ತಕದ ಫೈಲ್ ಗಳಿವೆ. ಖರೀದಿಸುವ ತಾಣಗಳಲ್ಲಿ ಆನ್ ಲೈನಲ್ಲಿ ಓದುವ ಅಥವಾ ನಿರ್ದಿಷ್ಟ ಕಿರುತಂತ್ರಾಂಶ(app)ಗಳನ್ನು ಅಳವಡಿಸಿಕೊಂಡು ಅದರ ಮೂಲಕ ಓದಬಹುದಾದಂತಹ ಫೈಲ್ ಮಾದರಿಗಳಿರುತ್ತವೆ. ಆಂಡ್ರಾಯ್ಡ್, ಐ ಓ.ಎಸ್, ವಿಂಡೋಸ್ ಮುಂತಾದ ಕಾರ್ಯಾಚರಣ ವ್ಯವಸ್ಥೆಗಳನ್ನು ಹೊಂದಿರುವ ಕಂಪ್ಯೂಟರ್, ಟ್ಯಾಬ್ಲೆಟ್, ಫೋನ್, ಇ ಬುಕ್ ರೀಡರ್ ಗಳಲ್ಲಿ ಓದಬಹುದು. epub, pdf, mobi, chm, cbr, cbz, umd, fb2, txt, html ಮುಂತಾದ ರೂಪಗಳಲ್ಲಿ ದೊರೆಯುವ ಈ ಇ-ಬುಕ್ ಗಳನ್ನು ಗೂಗಲ್ ಪ್ಲೇನಲ್ಲಿ ದೊರೆಯುವ ಅನೇಕ ಆಂಡ್ರಾಯ್ಡ್ ebook reader apps ಮೂಲಕವೂ ಓದಬಹುದು. Moon+ Reader ಮತ್ತು Sky Reader ಅಂತಹ Appಗಳು. ಸಾಮಾನ್ಯವಾಗಿ ಇ-ಪುಸ್ತಕಗಳ ಬೆಲೆ ಮುದ್ರಿತ ಪ್ರತಿಗಿಂತ ಕಡಿಮೆ ಇರುತ್ತದೆ.

ಕನ್ನಡ ಇ-ಬುಕ್ ಗಳು ದೊರೆಯುವ ತಾಣಗಳ ಪಟ್ಟಿ ಈ ಕೆಳಗಿನಂತಿದೆ.

ಓದಿ... ಓದಿಸಿ..
***

ಇವುಗಳಲ್ಲದೇ ಇನ್ನು ಬೇರೆ ತಾಣಗಳು ನಿಮಗೆ ಗೊತ್ತಿದ್ದಲ್ಲಿ  ತಿಳಿಸಿ..