ಮಂಗಳವಾರ, ಮೇ 1, 2018

ಬೆಂಗಳೂರಿನ ಶಿಲಾಶಾಸನಗಳಲ್ಲಡಗಿದೆ ಇತಿಹಾಸ!

ನಾಲ್ಕೈದು ವರ್ಷದ ಹಿಂದೆ ಪತ್ರಿಕೆಯೊಂದರಲ್ಲಿ ಬೆಂಗಳೂರಿನ ಬೇಗೂರಿನ ದೇವಸ್ಥಾನದಲ್ಲಿರುವ ಶಾಸನವೊಂದರ ಬಗ್ಗೆ ಲೇಖನ ಓದಿದ್ದೆ. ’ಬೆಂಗಳೂರು’ ಎಂಬ ಹೆಸರು ಅದರಲ್ಲಿ ಉಲ್ಲೇಖವಾಗಿದೆಯೆಂದೂ, ಅದು ಸುಮಾರು ೯ನೇ ಶತಮಾನದ ಶಾಸನವಾಗಿದ್ದು ಬೆಂಗಳೂರು ಎಂಬ ಹೆಸರಿನ ಬಗ್ಗೆ ಒಂದು ಪ್ರಮುಖ ಪುರಾವೆಯೆಂದೂ ಹೇಳಲಾಗಿತ್ತು. ಅದರಲ್ಲಿ ’ಗಂಗರು’ ಮತ್ತು ’ನೊಳಂಬ’ರ ನಡುವೆ ನಡೆದ ’ಬೆಂಗಳೂರು ಕದನ’ದ ಬಗ್ಗೆ ಹೇಳಲಾಗಿದೆ. ’ಬೆಂಗಳೂರು’ ಎಂಬ ಹೆಸರಿನ ಹುಟ್ಟಿನ ಬಗ್ಗೆ ಅನೇಕ ದಂತಕತೆಗಳೂ, ವಾದಗಳೂ ಇವೆಯಾದರೂ ಇನ್ನೂ ಯಾವುದೂ ಖಚಿತವಾಗಿ ಹೇಳಲು ಸಾಧ್ಯವಾಗಿಲ್ಲ. ಆದರೆ ಒಂಬತ್ತನೇ ಶತಮಾನದಲ್ಲೇ ’ಬೆಂಗಳೂರು’ ಎಂಬ ಪದ ಉಲ್ಲೇಖವಾಗಿರುವುದು ಕುತೂಹಲಕಾರಿಯಾಗಿತ್ತು.

ಬೇಗೂರು ಶಿಲಾಶಾಸನದ ಚಿತ್ರ.
ಇದರಲ್ಲಿ ಬಣ್ಣದ ಅಕ್ಷರದಲ್ಲಿರುವುದು ’ಬೆಂಗಳೂರು’ ಎಂಬ ಪದ
ನಾನಿರುವ ಪ್ರದೇಶದ, ಊರಿನ ಇತಿಹಾಸದ ಬಗ್ಗೆ ನನಗೆ ಯಾವತ್ತಿಗೂ ಆಸಕ್ತಿ, ಕುತೂಹಲ ಇದೆ.  ಈ ಬೆಂಗಳೂರು ಇಂದು ನಗರೀಕರಣಗೊಂಡು ಅಡ್ಡಾದಿಡ್ಡಿ ಕಟ್ಟಡಗಳಿಂದ ತುಂಬಿಹೋಗಿದೆ. ಆದರೆ ಹಿಂದೆ ಇದು ಕೂಡ ಹಳ್ಳಿಗಳ, ಕೋಟೆಗಳ ತಾಣವಾಗಿತ್ತು ಎಂಬುದು ಸತ್ಯ. ಅನೇಕ ಪಾಳೇಗಾರರು, ರಾಜರು ಆಳಿದ್ದಾರೆ, ಯುದ್ಧಗಳೂ ನಡೆದಿವೆ.

ಏಪ್ರಿಲ್ ತಿಂಗಳಲ್ಲಿ ಬೆಂಗಳೂರಿನ ’ಸೆಂಟರ್ ಫಾರ್ ಇಂಟರ್ನೆಟ್ ಅಂಡ್ ಸೊಸೈಟಿ’ಯಲ್ಲಿ ಒಂದು ವಿಕಿಪೀಡಿಯ ಕಾರ್ಯಾಗಾರವಿತ್ತು. ನಾನು ಕೂಡ ಕನ್ನಡ ವಿಕಿಪೀಡಿಯದಲ್ಲಿ ಮಾಹಿತಿಗಳನ್ನು ಸೇರಿಸುವ ಕೆಲಸವನ್ನು ಹವ್ಯಾಸವನ್ನಾಗಿ ಮಾಡುತ್ತಿರುವುದರಿಂದ ಆ ಕಾರ್ಯಾಗಾರದಲ್ಲಿ ಭಾಗವಹಿಸಿದ್ದೆ. ಅವತ್ತಿನ ದಿನ ಮಧ್ಯಾಹ್ನ ಶಿಲಾಶಾಸನಗಳ ಬಗ್ಗೆ ಒಂದು ಸೆಶನ್ ಏರ್ಪಡಿಸಿದ್ದರು. ಉದಯ್ ಕುಮಾರ್ ಮತ್ತು ವಿನಯ್ ಎನ್ನುವ ಸಂಪನ್ಮೂಲ ವ್ಯಕ್ತಿಗಳಿಬ್ಬರು ಬಂದಿದ್ದರು.  ಸುಮಾರು ಒಂದು ಒಂದೂವರೆ ಗಂಟೆಗಳ ಅವತ್ತಿನ ಆ ಸೆಶನ್ ನಿಜಕ್ಕೂ ಒಂದು ಹೊಸಲೋಕವನ್ನೇ ತೆರೆದಿಟ್ಟಿತ್ತು. ಅವರು ಪ್ರದರ್ಶಿಸಿದ  ಒಂದು ವೀಡಿಯೋ ದೃಶ್ಯವು ಒಂದು ಅರ್ಧ ಕಟ್ಟಿದ ಕಟ್ಟಡದಿಂದ ಶುರುವಾಗುತ್ತದೆ. ಹಾಗೆಯೇ ಕ್ಯಾಮರಾ ಚಲಿಸುತ್ತಾ ಆ ಕಟ್ಟಡದ ಪಕ್ಕದಿಂದ ಹೋಗಿ ಹಿಂಭಾಗದಲ್ಲಿ ಒಂದು ಓಣಿಯನ್ನು ಪ್ರವೇಶಿಸುತ್ತದೆ. ಅಲ್ಲಿ ನೋಡಿದರೆ ಕಟ್ಟಡ ತ್ಯಾಜ್ಯ ಇತ್ಯಾದಿ ಕಸದಿಂದ ತುಂಬಿದೆ. ಹಾಗೆಯೇ ಮುಂದುವರೆದರೆ ಅಲ್ಲೇ ನಡುವಿನಲ್ಲಿ ನೇರವಾಗಿ ನಿಲ್ಲಿಸಿರುವ ಎರಡು ಕಲ್ಲುಗಳು. ಹತ್ತಿರಕ್ಕೆ ಜೂಮ್ ಮಾಡಿದರೆ ಅದರಲ್ಲಿ ಅಸ್ಪಷ್ಟವಾಗಿ ಕಾಣುವ ಅಕ್ಷರಗಳು. ಸೂಕ್ಷವಾಗಿ ನೋಡಿದರೆ, ಹಳೆಗನ್ನಡ ಬರೆವಣಿಗೆ!  ಇತಿಹಾಸದ ಪ್ರಮುಖ ದಾಖಲೆಯಾಗಬೇಕಿದ್ದ ಶಿಲಾಶಾಸನವೊಂದು ನಗರೀಕರಣದ ಹೊಡೆತಕ್ಕೆ ಸಿಕ್ಕು ದುಃಸ್ಥಿತಿಗಿಳಿದಿರುವ ಚಿತ್ರಣದ ಒಂದು ತುಣುಕು ಅದು.  ಇಲ್ಲಿಂದ ಶುರುಮಾಡಿ ಉದಯ ಕುಮಾರ್ ಅವರು ಬೆಂಗಳೂರಿನ ಶಿಲಾಶಾಸನಗಳ ಬಗ್ಗೆ ವಿವರಿಸುತ್ತಾ ಹೋದರು. ಅವುಗಳಲ್ಲಿ ಸಿಗುವ ಕೆಲವೇ ಕೆಲವು ವಾಕ್ಯಗಳು ಹೇಗೆ ಇತಿಹಾಸ, ಆಗಿನ ಕಾಲದ ನಂಬುಗೆಗಳು, ಸಾಮಾಜಿಕ ಪರಿಸ್ಥಿತಿ, ಆಡಳಿತ, ತಿಳಿವಳಿಕೆ, ಪ್ರಚಲಿತವಾಗಿದ್ದ ಭಾಷೆಗಳು ಇತ್ಯಾದಿಗಳ ಬಗ್ಗೆ ಬೆಳಕು ಚೆಲ್ಲಬಹುದು ಎಂಬುದನ್ನು ವಿವರಿಸಿದರು.  ಉದಯ್ ಮತ್ತು ವಿನಯ್ ಇಬ್ಬರೂ ಸೇರಿ ಬೆಂಗಳೂರಿನ ಇಂತಹ ಶಿಲಾಶಾಸನಗಳನ್ನು ರಕ್ಷಿಸುವ ಕೆಲಸದಲ್ಲಿ ತೊಡಗಿದ್ದಾರೆ. ಇದರ ಬಗ್ಗೆ ಜನರಲ್ಲಿ ಜಾಗೃತಿ ಮೂಡಿಸುತ್ತಿದ್ದಾರೆ.  ಅವರ ಪ್ರಯತ್ನ ಮತ್ತು ಕೆಲಸ ನೋಡಿ ಧನ್ಯವೆನಿಸಿತು.

ಎಫಿಗ್ರಾಫಿಯಾ ಕಾರ್ನಾಟಿಕಾ ಎಂಬುದು ಕರ್ನಾಟಕದ ಶಿಲಾಶಾಸನಗಳನ್ನು ದಾಖಲಿಸಿಟ್ಟಿರುವ ಗ್ರಂಥ. ಬಿ. ಎಲ್. ರೈಸ್ ಎನ್ನುವ ಪುಣ್ಯಾತ್ಮರೊಬ್ಬರು ದಶಕಗಟ್ಟಲೇ ತಿರುಗಾಡಿ ಸುಮಾರು ಎಂಟು ಸಾವಿರ ಶಾಸನಗಳ ಪ್ರತಿಯನ್ನು, ಅದರಲ್ಲಿನ ಪಠ್ಯವನ್ನು ಸಂಗ್ರಹಿಸಿಟ್ಟಿದ್ದಾರೆ. ಬ್ರಿಟಿಷ್ ಅಧಿಕಾರಿಯಾಗಿ ಅವರು ಮಾಡಿರುವ ಕೆಲಸ ಚಿರಸ್ಮರಣೀಯ.  ಈ ಎಪಿಗ್ರಾಫಿಯಾ ಗ್ರಂಥದಲ್ಲಿ ಉಲ್ಲೇಖಿಸಿರುವ ಶಾಸನಗಳ ಇರುವೆಡೆಗಳನ್ನಾಧರಿಸಿ ಉದಯ ಮತ್ತು ವಿನಯ್ ಅವುಗಳನ್ನು ಹುಡುಕಿ ಒಳ್ಳೆಯ ಸ್ಥಿತಿಗೆ ತಂದು ಸಂರಕ್ಷಿಸುತ್ತಿದ್ದಾರೆ.  ಜೊತೆಗೆ ಆ ಹಳ್ಳಿಯ, ಪ್ರದೇಶದ ಜನರಿಗೆ ಅವುಗಳ ಬಗ್ಗೆ ಅರಿವು ಮೂಡಿಸಿ ಇದು ಅಮೂಲ್ಯವೆಂದು ಮನವರಿಕೆ ಮಾಡಿಕೊಡುವ ಪ್ರಯತ್ನದಲ್ಲಿದ್ದಾರೆ. ಈ ಸಂರಕ್ಷಣಾ ಕೆಲಸವನ್ನು ಯುನೆಸ್ಕೋ ಕೂಡ ಗುರುತಿಸಿ ಮೆಚ್ಚುಗೆ ವ್ಯಕ್ತಪಡಿಸಿರುವುದು ಇಲ್ಲಿ ಗಮನಾರ್ಹ. ೧೯೦೫ರಲ್ಲಿ ಪ್ರಕಟವಾದ ಆ ಗ್ರಂಥದಲ್ಲಿ ಬೆಂಗಳೂರು ಜಿಲ್ಲೆಯಲ್ಲಿ ಇಂತಹ ಸುಮಾರು ೧೫೦ ಶಾಸನಗಳು ದಾಖಲಾಗಿವೆ.  ಆದರೆ ದುಃಖದ ವಿಷಯ ಎಂದರೆ ಅವುಗಳಲ್ಲಿ ಈಗ ಉಳಿದಿರುವುದು ಕೇವಲ ೩೫ ಮಾತ್ರ! ಅವು ಕೂಡ ನಿರ್ಲಕ್ಷ ಕ್ಕೊಳಗಾಗಿ ಕಣ್ಮರೆಯಾಗುವ ಆತಂಕದಲ್ಲಿವೆ. 

ಇಂತಹ ಶಾಸನಗಳ ಬಗ್ಗೆ ವಿಕಿಪೀಡಿಯ ಪುಟಗಳನ್ನು ರಚಿಸಿ ಆ ಮಾಹಿತಿ ಎಲ್ಲರಿಗೂ ದೊರಕುವಂತೆ ಮಾಡುವ ಯೋಜನೆ ಮಾಡಲಾಯಿತು. ಈಗ ಉಳಿದಿರುವ ಶಾಸನಗಳು ಎಲ್ಲೆಲ್ಲಿವೆ ಎಂಬುದನ್ನು ಜಿಯೋ ಟ್ಯಾಗಿಂಗ್ ಮಾಡಿ kml file ಮಾಡಿದ್ದಾರೆ. ಗೂಗಲ್ ಮ್ಯಾಪಿನಲ್ಲಿ ಅದನ್ನು ಲೋಡ್ ಮಾಡಿದಾಗ ಶಾಸನಗಳ ಇರುವೆಡೆಗಳನ್ನು ನೋಡಬಹುದು. ಆಧುನಿಕ ತಂತ್ರಜ್ಞಾನಗಳನ್ನು ಬಳಸಿ ಅವುಗಳ ಮೂರು ಆಯಾಮದ ಪ್ರತಿಗಳನ್ನೂ ರೂಪಿಸುತ್ತಿದ್ದಾರೆ.  ಕೆಲವು ಶಾಸನಗಳ ಮೂರು ಆಯಾಮದ ಚಿತ್ರಗಳನ್ನು ಇಲ್ಲಿ ನೋಡಬಹುದು.