ಗುರುವಾರ, ಮೇ 21, 2009

ಆರ್ಕುಟ್ ಮದುವೆ !

ಆರ್ಕುಟ್ ನಲ್ಲಿ ಇವನು ಅವಳ ಪ್ರೊಫೈಲ್ ನೋಡುವುದು , ಅವಳು ಇವನ ಪ್ರೊಫೈಲ್ ನೋಡುವುದು... recent visitors ಪಟ್ಟಿಯಲ್ಲಿ ದಿನವೂ ಹೆಸರು ಕಾಣುತ್ತಿತ್ತು. ಹೀಗೆ ಮೂರು ತಿಂಗಳು ನಡೆಯಿತು. ಅಷ್ಟರಲ್ಲಿ ಹೊಸ ವರ್ಷ ಬಂದಿತ್ತು. ಕೊನೆಗೆ ಹುಡುಗ ಒಂದು ಸ್ಕ್ರಾಪ್ ಹಾಕಿಯೇ ಬಿಟ್ಟ, "ಹೊಸ ವರ್ಷದ ಶುಭಾಶಯಗಳು". ತಕ್ಷಣವೇ ಉತ್ತರ ಬಂದಿತ್ತು ಹುಡುಗಿಯಿಂದ - "ಅಂತು ಇಷ್ಟು ದಿನಗಳಾದ ಮೇಲೆ ಸ್ಕ್ರಾಪ್ ಹಾಕಿದ್ರಲ್ಲ ". ಮುಂದುವರೆಯಿತು ಮಾತು ಕತೆ. ಮಾತಿಂದ ಪರಿಚಯ...., ಭೇಟಿ...., ಇಷ್ಟ...., ಸ್ನೇಹ, ಸ್ನೇಹದಿಂದ ಪ್ರೀತಿ.....

ಎಷ್ಟು ದಿನ ಅಂತ ಬರೀ ಪ್ರೀತಿ ಮಾಡಿಕೊಂಡಿರಲು ಸಾಧ್ಯ ? ವರ್ಷಕ್ಕಿಂತಲೂ ಹಳೆಯ ಪ್ರೀತಿ ಪೂರ್ತಿ ಮಾಗಿತ್ತು . ಯಾವುದೇ ಆತುರಕ್ಕೆ ಬೀಳದೆ ಇಬ್ಬರೂ ಒಬ್ಬರಿಗೊಬ್ಬರು ಎಲ್ಲಾ ರೀತಿಯಲ್ಲೂ ಸಂಪೂರ್ಣ ಒಪ್ಪಿಗೆಯಾದ ನಂತರವೇ ಬದುಕಿನಲ್ಲೂ ಜೊತೆಯಾಗುವ ನಿರ್ಧಾರ ಮಾಡಿದರು. As usual ಸ್ವಲ್ಪ ಜಗ್ಗಾಟದ ನಂತರ ಹಿರಿಯರ ಒಪ್ಪಿಗೆಯೂ ದೊರೆಯಿತು. ದೊರೆಯಲೇಬೇಕಿತ್ತು !

ಮೊನ್ನೆ ಮೊನ್ನೆ ಗೆಳೆಯನ ಮದುವೆ ಆಯಿತು. ಯಾಕೋ ಟೆನ್ಶನ್ ಆಗ್ತಿದೆ ಕಣ್ರೋ ಅಂತ ಮದುವೆ ಹಿಂದಿನ ದಿನದವರೆಗೂ ಅಲವತ್ತುಕೊಳುತ್ತಿದ್ದ. ಹನಿಮೂನಿಗೆ ಎಲ್ಲಿಗೆ ಹೋಗೋದು ಅಂತ ಗೊತ್ತಾಗದೆ, ನೀವೆ ಎಲ್ಲಾದ್ರೂ ಬುಕ್ ಮಾಡಿಸಿಕೊಡ್ರೋ ಅಂತ ನಮ್ಮನ್ನು ಕಷ್ಟಕ್ಕೆ ಸಿಲುಕಿಸಿದ್ದ. ಮದುವೆ ದಿನ ಇಷ್ಟಗಲ ನಗು ತೋರಿಸುತ್ತಾ ನಿಂತ ಅವರಿಬ್ಬರ ಸಂಭ್ರಮ ನೋಡುವಂತಿತ್ತು. ಮದುವೆ ಮುಗಿಸಿ ನಾವು ಬೆಂಗಳೂರಿಗೆ ತಿರುಗಿ ಬಂದು ನಾಲ್ಕು ದಿನದ ನಂತರ ಫೋನ್ ಮಾಡಿದರೆ "ಲೋ, ರೋಮಿಂಗ್ ನಲ್ಲಿದಿನಿ , ಸಖತ್ ಛಾರ್ಜ್ ಆಗತ್ತೆ, ಇಡ್ರೋ ಫೋನು" ಅಂತ ದಬಾಯಿಸಿದ್ದ. "ಆಯ್ತು ಬಿಡಪ್ಪಾ, ನಿನ್ ಛಾರ್ಜ್ ಖಾಲಿ ಮಾಡಲ್ಲ, ಬೇಕಾಗತ್ತೆ ನಿಂಗೆ" ಅಂತ ನಾವು ನಗಾಡಿದ್ದೆವು. ಮಧುಚಂದ್ರದಿಂದ ಮರಳಿ ಬಂದು ಈಗ ಟೆನ್ಶನ್ ಫ್ರೀ ಆಗಿದ್ದಾನೆ. :)

ನಮ್ಮೆಲ್ಲಾ ಗೆಳೆಯರ ಪರವಾಗಿ, ನಮ್ಮ ಕಟ್ಟೆ ಬಳಗದ ಪರವಾಗಿ ಅವರಿಬ್ಬರ ಮುಂದಿನ ಜೀವನಕ್ಕೆ ಶುಭಹಾರೈಕೆಗಳು. Happy married lifeu. :-)



ಮುಂದೆ ಈ ರೀತಿ ಸುದ್ದಿಗಳು ಇನ್ನೂ ಜಾಸ್ತಿ ಜಾಸ್ತಿ ಬರುವ ಚಾನ್ಸ್ ಇದೆ. ಅಪ್ಪ ಅಮ್ಮಂದಿರ ಕೆಲಸ ಕಮ್ಮಿ ಮಾಡುತ್ತಿರೋ ಸೋಶಿಯಲ್ ನೆಟ್ವರ್ಕ್ ಸೈಟ್ ಗಳಿಗೆ thanx ಹೇಳಬೇಕೋ ಅಥವಾ ಹುಡುಗ್ರು ದಾರಿ ತಪ್ಪುತ್ತಾ ಇದ್ದಾರೆ ಅಂತ ಆತಂಕ ಪಡಬೇಕೋ ಎಂಬ ತೀರ್ಮಾನ ಅವರಿಗವರಿಗೆ ಬಿಟ್ಟದ್ದು.

ಬುಧವಾರ, ಮೇ 13, 2009

ವಿಕಾಸದ ಹಾದಿಯಲ್ಲಿ ೨ ವರ್ಷ!

ಬೇರೆ ಏನೋ ಬರೆದು ಕೊನೆಗೆ ಆ ವಿಷಯಕ್ಕೆ ಬರಲಾ? ಅಥವಾ ಮೊದಲೇ ಆ ವಿಷಯ ಹೇಳಿ ನಂತರ ಮತ್ತೇನೋ ಹೇಳಲಾ? ವಿಷಯದ ಬಗ್ಗೆ ಹೇಳುತ್ತಾ ಜೊತೆಗೆ ವಿಶ್ಲೇಷಣೆ, ಉಪದೇಶ, ನೀತಿಸಂಹಿತೆ, ಸಂಯಮ, ಸುಡುಗಾಡು ಶುಂಠಿ...

ಏನೂ ಬೇಡ. ನೇರವಾಗಿ ವಿಷಯಕ್ಕೇ ಬರುತ್ತೇನೆ. ಇವತ್ತಿಗೆ ಸರಿಯಾಗಿ ನನ್ನ ಈ ಬ್ಲಾಗ್ ಶುರುಮಾಡಿ ೨ ವರ್ಷ ೩ ದಿನ ಆಯಿತು. ಮೊದಲ ವರ್ಷ ಕಳೆದಾಗ 'ವರ್ಷ ಕಳೆಯಿತು' ಎಂದು ಬರೆದಿದ್ದೆ. ಈ ಎರಡು ವರ್ಷ ಕಳೆದಾಗಲೂ '೨ ವರ್ಷ ಕಳೆಯಿತು' ಎನ್ನುವುದಕ್ಕಿಂತ ಹೆಚ್ಚಿನದೇನೂ ಆಗಿಲ್ಲ ಅಂತ ಅನ್ನಿಸಿದರೂ ಒಂದಷ್ಟು ಬದಲಾವಣೆಗಳು ಆಗಿವೆ, ತಿರುವುಗಳು ಕಂಡಿವೆ ಎಂದಷ್ಟೇ ಹೇಳಬಲ್ಲೆ. ಹಲವು ಬಾರಿ ಯಾಕೆ ಬೇಕಾಗಿತ್ತು ಈ ಬ್ಲಾಗ್ ಅನ್ನಿಸಿದೆ. ಮರುಕ್ಷಣವೇ ಇದರಲ್ಲೇ ಖುಷಿ ಅನ್ನಿಸಿದೆ. ಬ್ಲಾಗ್ ಅಂದಾಕ್ಷಣ ಬರಹದ ಜೊತೆ ಓದುಗರೂ ಅಷ್ಟೇ ಮುಖ್ಯ. ಬ್ಲಾಗ್ ಎಂದರೆ ಎಷ್ಟೇ ನಮಗೆ ನಾವು ಬರೆದುಕೊಳ್ಳುವುದು ಅದೂ ಇದೂ ಅಂತ ಏನೇ ಅಂದರೂ ಕೂಡ ಓದುಗರಿಲ್ಲದಿದ್ದಲ್ಲಿ ಡೈರಿಯಲ್ಲಿ ಬರೆದು ಒಳಗೆ ಇಡುವುದಕ್ಕೂ ಇದಕ್ಕೂ ವ್ಯತ್ಯಾಸವಿರುತ್ತಿರಲಿಲ್ಲ ಮತ್ತು ಇಷ್ಟು ಬರೆಯಲು ಮನಸ್ಸಾಗುತ್ತಲೂ ಇರಲಿಲ್ಲ. ಬ್ಲಾಗ್ ಬರೆಯುತ್ತಾ ಎರಡು ವರ್ಷ ಕಳೆದಿದ್ದರೂ ಕೂಡ ಮೇ ೧೦, ೨೦೦೭ ರಂದು ಮೊದಲ ಪೋಸ್ಟ್ ಹಾಕುವಾಗ ಇದ್ದ ದುಗುಡ ಈಗಲೂ ಪ್ರತಿಯೊಂದು ಪೋಸ್ಟ್ ಹಾಕುವಾಗಲೂ ಇರುತ್ತದೆ. ಮೊದಲೆಲ್ಲಾ ಮನಸಿಗೆ ಬಂದಿದ್ದನ್ನು ಕೆಚ್ಚಿ ಕೆಡವಿಹಾಕಬಹುದಿತ್ತು ಆದರೆ ಈಗ ಫಿಲ್ಟರ್ ಹಾಕಿಕೊಳ್ಳಲೇ ಬೇಕಾದ ಕೆಲವು ಅನಿವಾರ್ಯಗಳಿವೆ. ಆಫೀಸಲ್ಲೋ ಮತ್ತೆಲ್ಲೋ ಕೂತು ಕುಟ್ಟಿದ್ದು ಸರಿಯಾಗಿದೆಯಾ? ಬ್ಲಾಗ್ ಗೆ ಹಾಕುವಂತಿದೆಯಾ? ಓದುವ ಕೆಲವರಿಗಾದರೂ ಸರಿಯೆನಿಸುತ್ತಾ? ಹೀಗೆ ಹಲವು ಯೋಚನೆಗಳು ಪ್ರತಿಬಾರಿಯೂ ಇದ್ದೇ ಇರುತ್ತವೆ. ಯಾವುದೋ ಮನಃಸ್ಥಿತಿಯಲ್ಲಿ ಬರೆದದ್ದು ಅನಂತರ ಸರಿಯಾಗಿಲ್ಲ ಅನ್ನಿಸಿ ಬದಲಾಯಿಸಿದ್ದಿದೆ. ಎಲ್ಡೆಕ್ರೆ ಹೊಲ ಮಧ್ಯ ಬಾವಿ ಒಂಥರಾ ಪರವಾಗಿಲ್ಲ ಅನ್ನಿಸಿದೆ. ನನ್ನಲ್ಲಿ ಓದು, ಬರವಣಿಗೆಯನ್ನು ಕಾಯ್ದುಕೊಳ್ಳಲು ಒಂದು ರೀತಿ ಈ ಬ್ಲಾಗ್ ಕಾರಣ ಎಂದೂ, ಜೊತೆಗೆ ತೆರೆದುಕೊಳ್ಳಲು ಒಂದು ವೇದಿಕೆಯಾಗಿ ಸಹಾಯ ಮಾಡಿದ್ದೂ ಈ ಬ್ಲಾಗ್ ಎಂದೂ ಸಂತೋಷದಿಂದ ಹೇಳಿಕೊಳ್ಳುತ್ತಿದ್ದೇನೆ. ಈ ಸಂದರ್ಭದಲ್ಲಿ ವಿಕಾಸವಾದಕ್ಕೂ, ಹಲವು ರೂಪಗಳಲ್ಲಿರುವ ಎಲ್ಲಾ ಓದುಗರಿಗೂ ಪ್ರೀತಿಯಿಂದ ಥ್ಯಾಂಕ್ಸ್. :-)