ಭಾನುವಾರ, ಮೇ 26, 2013

ಆರು ವರ್ಷಕ್ಕೆ ಹೀಗೇ ಒಂದಿಷ್ಟು ಮಾತು-ಕತೆ

ಮೇ ೧೨ಕ್ಕೆ ಈ ’ವಿಕಾಸವಾದ’ ಬ್ಲಾಗಿಗೆ ೬ ವರ್ಷ ವಯಸ್ಸಾಯ್ತು. ಕನ್ನಡದಲ್ಲಿ ೪ ಸಾವಿರಕ್ಕಿಂತ ಜಾಸ್ತಿ ಬ್ಲಾಗ್ ಗಳಿವೆ ಅಂತ ಹೇಳುತ್ತಾರೆ. ಆದರೆ ಸಕ್ರಿಯ ಬ್ಲಾಗುಗಳ ಸಂಖ್ಯೆ ಬಹಳ ಕಡಿಮೆ. ಅದರಲ್ಲಿ ಈ ವಿಕಾಸವಾದವೂ ಒಂದು. ಕೇವಲ ೩೦೦ ಕ್ಕಿಂತಲೂ ಕಡಿಮೆ ಬ್ಲಾಗುಗಳು ಮಾತ್ರ ಚಟುವಟಿಕೆಯಿಂದ ಕೂಡಿವೆಯಂತೆ ! ಒಂದು ಕಾಲದಲ್ಲಿ ಉತ್ಸಾಹದಿಂದ ಬ್ಲಾಗ್ ಬರೆಯುತ್ತಿದ್ದ ಹಲವರು ಇವತ್ತು ನಿಲ್ಲಿಸಿದ್ದಾರೆ ಅಥವಾ ಬಹಳ ಕಡಿಮೆ ಮಾಡಿದ್ದಾರೆ. ಓದುಗರೂ ಕಡಿಮೆಯಾಗಿದ್ದಾರೆ. ಹೊಸಬರು ಸಾಕಷ್ಟು ಸಂಖ್ಯೆಯಲ್ಲಿ ಆ ಸ್ಥಾನಗಳನ್ನು ತುಂಬುತ್ತಿಲ್ಲ. ಇದಕ್ಕೆಲ್ಲಾ ಕಾರಣಗಳು ಹಲವಿರಬಹುದು. ಫೇಸ್ ಬುಕ್ ಕೂಡ ಒಂದು ಕಾರಣ ಅಂತ ಮಾತ್ರ ಹೇಳಬಲ್ಲೆ!

ನಾನಂತೂ ಬರೆಯಲು ಹಲವಾರು ವಿಷಯಗಳನ್ನು ಪಟ್ಟಿ ಮಾಡಿಟ್ಟುಕೊಂಡಿದ್ದರೂ ಬರೆಯಲು ಮಹೂರ್ತ ಸಿಗುವುದೇ ಅಪರೂಪ! ಈ ನಡುವೆ ಬ್ಲಾಗಿಗೆ ಸಂಬಂಧಿಸಿದಂತೆ ಒಂದು ವಿಷಯ ಹಂಚಿಕೊಳ್ಳಬೇಕು. ನನ್ನ ಬ್ಲಾಗಿಗೆ feedjit ಎನ್ನುವ ಟೂಲ್ ಒಂದನ್ನು ಅಳವಡಿಸಿಕೊಂಡಿದ್ದೇನೆ. ಅದು ಈ ತಾಣಕ್ಕೆ ಯಾವ ಯಾವ ಊರಿನ, ರಾಜ್ಯದ ಅಥವಾ ದೇಶದ ಅಂತರಜಾಲ ಸಂಪರ್ಕಗಳಿಂದ ಭೇಟಿ ಕೊಡಲಾಯಿತು, ಯಾವ ಕೊಂಡಿ ಮೂಲಕ ಬಂದರು, ಯಾವ ಹೊತ್ತಿಗೆ ಬಂದರು ಎಂಬ ಮಾಹಿತಿ ತೋರಿಸುತ್ತದೆ. ಈ ಬ್ಲಾಗ್ ಪುಟದ ಕೆಳ ಬಲಭಾಗದಲ್ಲಿ ಅದನ್ನು ಯಾರಾದರೂ ನೋಡಬಹುದು. ಅದರ ಒಳಗೆ ಹೋದರೆ ಇಲ್ಲಿಗೆ ಭೇಟಿ ಕೊಟ್ಟವರದ್ದು ಯಾವ ಆಪರೇಟಿಂಗ್ ಸಿಸ್ಟಮ್, ಯಾವ ಬ್ರೌಸರ್, ಎಲ್ಲಿಂದ ಒಳಬಂದರು, ಹೊರಹೋದರು ಎನ್ನುವ ಪೂರ್ಣ ಮಾಹಿತಿ ನೋಡಬಹುದು. ಹಲವರು ಬೇರೆ ಬೇರೆ ಬ್ಲಾಗುಗಳ ಮೂಲಕ ಇಲ್ಲಿಗೆ ಬಂದಿದ್ದರೆ ಮತ್ತೂ ಹಲವರು ನೇರವಾಗಿ ಬಂದಿರುತ್ತಾರೆ. ಇದು ಎಲ್ಲ ಬ್ಲಾಗಿಗರಿಗೂ ತಮ್ಮ ತಮ್ಮ ಬ್ಲಾಗ್ ಭೇಟಿಗಳ ಬಗ್ಗೆ ಮಾಹಿತಿ ನೋಡಿದಾಗ ಗಮನಕ್ಕೆ ಬಂದಿರಬಹುದು. ಭಾರತದಿಂದ ಹೊರಗೆ ಕನ್ನಡಿಗರು ಸಾಮಾನ್ಯವಾಗಿ ಅಮೆರಿಕಾ, ಯೂರೋಪು, ಗಲ್ಫ್ ದೇಶಗಳಲ್ಲಿ ಹೆಚ್ಚು ಜನರಿದ್ದಾರೆ. ಅಲ್ಲಿಂದ ಪುಟಭೇಟಿಗಳಾಗುವುದು ಸಹಜ. ಅದಲ್ಲದೇ ಬೆಂಗಳೂರಿನಲ್ಲೇ ಇರುವ ಹಲವಾರು ಐ.ಟಿ. ಕಂಪನಿಗಳ ಅಂತರಜಾಲ ಸಂಪರ್ಕ ಬೇರೆ ದೇಶದ್ದಾಗಿರುತ್ತದೆ. ಹಾಗಾಗಿ ಇಲ್ಲಿಂದಲೇ ಯಾರೋ ಬ್ಲಾಗ್ ತೆಗೆದು ನೋಡಿದ್ದರೂ ಕೂಡ ಅದು ಬೇರೆ ಯಾವುದೋ ದೇಶದ ಹೆಸರು ತೋರಿಸಿರುತ್ತದೆ. ಉದಾಹರಣೆಗೆ ನನ್ನ ಆಫೀಸಿನದ್ದು ಸಿಂಗಾಪುರದ ಸಂಪರ್ಕ. ಆದರೆ ಎಲ್ಲಕ್ಕಿಂತ ಆಶ್ಚರ್ಯವಾಗುವುದು ಅಂದರೆ ಆಫ್ರಿಕಾ ಖಂಡದ ಹಲವು ದೇಶಗಳಿಂದ ಮತ್ತು ಜಗತ್ತಿನ ಕೆಲವು ದ್ವೀಪರಾಷ್ಟ್ರಗಳಿಂದ ಆಗುವ ಭೇಟಿಗಳು! ಅಲ್ಲೆಲ್ಲಾ ಯಾವ ಓದುಗರಿದ್ದಾರೋ ಗೊತ್ತಿಲ್ಲ. ಇದ್ದರೆ ಅವರೆಲ್ಲರಿಗೂ ಧನ್ಯವಾದಗಳು.

ಮತ್ತೊಂದು ವಿಶಿಷ್ಟ ಸಂಗತಿ ಎಂದರೆ ಈ feedjitನಲ್ಲಿ ಗೂಗಲ್ ಸರ್ಚ್ ಮಾಡುವ ಮೂಲಕ ಬಂದಿರುವ ಭೇಟಿಗಳ ಬಗ್ಗೆ ವಿವರ ದಾಖಲಾಗಿರುತ್ತದೆ. ಯಾವ ಹುಡುಕುಪದದ(search word) ಮೂಲಕ ಈ ಬ್ಲಾಗಿಗೆ ಸಂಪರ್ಕವಾಯಿತು ಎಂಬ ಮಾಹಿತಿ ಇರುತ್ತದೆ. ಕುತೂಹಲಕ್ಕೆ ಅದನ್ನು ನೋಡುತ್ತಿರುತ್ತೇನೆ. ಅದನ್ನು ಗಮನಿಸಿದಾಗ ತಿಳಿದು ಬಂದಿದ್ದೇನೆಂದರೆ ನನ್ನ ಬ್ಲಾಗಿಗೆ ಗೂಗಲ್ ಹುಡುಕಾಟದ ಮೂಲಕ  ಬರುವ ಭೇಟಿಗಳಲ್ಲಿ ಅತಿ ಹೆಚ್ಚು 'ಕನ್ನಡ ಟೈಪಿಂಗ್' ಬಗ್ಗೆ ಹುಡುಕಿ ಬಂದವರದ್ದಾಗಿರುತ್ತದೆ. ಕಂಪ್ಯೂಟರಲ್ಲಿ ಕನ್ನಡ ಬರೆಯಲು ಇರುವ ಸೌಲಭ್ಯಗಳ ಬಗ್ಗೆ ಎರಡು ವರ್ಷಗಳ ಹಿಂದೆ ಹಾಕಿದ್ದ ಈ ಬರಹ ಇವತ್ತಿಗೂ ಮೊದಲ ಸ್ಥಾನದಲ್ಲಿದೆ. ಇನ್ನೂ ಬಹಳಷ್ಟು ಜನ ಅಡುಗೆಯ ಬಗ್ಗೆ ಹುಡುಕುವುದರ ಮೂಲಕ ಬರುತ್ತಾರೆ. ಏಕೆಂದರೆ ಹೆಚ್ಚು ಭೇಟಿ ಪಡೆದುಕೊಳ್ಳಲು ಕಾರಣವಾದ ಕೆಲ ಪದಗಳೆಂದರೆ ’ದೋಸೆ’, ’ರುಚಿರುಚಿ’, ’ಅಡುಗೆ’ ಮುಂತಾದವು. ’ಸಾವು’ ಎಂಬ ಪದವನ್ನು ಹುಡುಕಿ ಬಂದ ಭೇಟಿಗಳೂ ಹಲವು ಇರುತ್ತವೆ ! ಅಪರೂಪಕ್ಕೆ ಪುಸ್ತಕ, ಸಿನೆಮಾ ಮುಂತಾದವುಗಳ ಬಗ್ಗೆ ಮಾಹಿತಿ ಹುಡುಕುತ್ತಾ ಬಂದವರಿರುತ್ತಾರೆ. ಇದೆಲ್ಲದರ ನಡುವೆ ಇನ್ನೊಂದು ಅತಿ ಹೆಚ್ಚು ಹುಡುಕುಪದ ಎಂದರೆ ’ಬೆತ್ತಲೆ’. ಜನ ಈ ಪದವನ್ನು ಅದೇಕೆ ಅಷ್ಟೆಲ್ಲಾ ಹುಡುಕುತ್ತಾರೋ ಗೊತ್ತಿಲ್ಲ. ಈ ಪದದ ಮೂಲಕ ೨೦೦೭ರಲ್ಲಿ ಬರೆದಿದ್ದ ಈ ಬರಹಕ್ಕೆ ಬರುತ್ತಿರುತ್ತಾರೆ. ಬೆತ್ತಲೆಗಿರುವ ಡಿಮ್ಯಾಂಡ್ ಅದು ! :-)

ಹಳಬರೆಲ್ಲಾ ಮದುವೆ, ಸಂಸಾರ, ಕೆಲಸ, ಜವಾಬ್ದಾರಿ, ನಿರುತ್ಸಾಹ ಮುಂತಾದ ಕಾರಣಗಳನ್ನು ದಾಟಿಬಂದು ಬ್ಲಾಗ್ ಬರೆಯಲಿ ಮತ್ತು ಹೊಸಬರೂ ಹೆಚ್ಚು ಹೆಚ್ಚು ಬರೆಯಲಿ, ಓದಲಿ ಎಂಬ ಆಶಯದೊಂದಿಗೆ ಈ ವಿಕಾಸವೂ ನಡೆಯುತ್ತಿರುತ್ತದೆ.