ಕರ್ನಾಟಕದ ರಾಜ್ಯಪ್ರಠ್ಯಕ್ರಮದ ಶಾಲೆಗಳಲ್ಲಿ ಪ್ರೌಢಶಾಲೆಯಲ್ಲಿ ತ್ರಿಭಾಷಾ ಸೂತ್ರ ಇದ್ದು ಬಹುತೇಕ ಶಾಲೆಗಳಲ್ಲಿ ಇದೇ ತರಹ ಅನಿವಾರ್‍ಯ ಹಿಂದಿ ಆಯ್ಕೆ ಇರುವುದನ್ನು ಕಾಣಬಹುದು. ಇದನ್ನು ಅರಿತೇ ತಮಿಳುನಾಡು ಮೊದಲಿಂದಲೂ ದ್ವಿಭಾಷಾ ನೀತಿಯನ್ನು ಪಾಲಿಸುತ್ತಿದೆ ಮತ್ತು ಈಗಲೂ ತ್ರಿಭಾಷಾ ನೀತಿಯನ್ನು ಒಪ್ಪಿಕೊಳ್ಳಲು ತಯಾರಾಗಿಲ್ಲ. ಯಾವುದೇ ಹಿಂದಿರಾಜ್ಯ ಅಥವಾ ಉತ್ತರಭಾರತದ ಯಾವುದೇ ರಾಜ್ಯವೂ ಕೂಡ ತಾವು ದಕ್ಷಿಣದ ಭಾಷೆಗಳನ್ನು ತಮ್ಮ ಪ್ರಾಥಮಿಕ ಶಿಕ್ಷಣದಲ್ಲಿ ಪರಿಚಯಿಸುತ್ತೇವೆ ಎಂದು ಇದುವರೆಗೆ ಮುಂದಡಿ ಇಟ್ಟಿಲ್ಲ. ಆ ಬಗ್ಗೆ ಯೋಚನೆಯೂ ಸಹ ಇದ್ದಂತಿಲ್ಲ. ಆದರೆ ಮಹಾರಾಷ್ಟ್ರದಲ್ಲಿ ಅಧಿಕಾರದಲ್ಲಿರುವ ಬಿಜೆಪಿ ನೇತೃತ್ವದ ಸರ್‍ಕಾರವು ಹೀಗೆ ಅತಿ ಉತ್ಸಾಹದಿಂದ ಹಿಂದಿ ಕಡ್ಡಾಯ ಮಾಡಹೊರಟು ಪ್ರತಿರೋಧ ಬಂದಾಗ ಕೊಂಚ ಹಿಂದೆ ಸರಿದಂತೆ ಮಾಡಿ ಪರೋಕ್ಷವಾಗಿ ಹಿಂದಿಯನ್ನು ಪ್ರಾಥಮಿಕ ಹಂತದಲ್ಲೇ ಹೇರುವ ಪ್ರಯತ್ನವನ್ನು ಪ್ರಾರಂಭಿಸಿರುವುದು ಎಚ್ಚರಿಕೆಯ ಗಂಟೆಯೆಂದೇ ಹೇಳಬಹುದು. ಇದು ಎನ್. ಇ. ಪಿ. ಯ ಉದ್ದೇಶವನ್ನು ಪ್ರಶ್ನೆ ಮಾಡುವಂತಾಗಿದೆ ಮತ್ತು ಅದನ್ನು ಹಿಂದಿ ಹೇರಿಕೆಯ ಹುನ್ನಾರವನ್ನಾಗಿ ಕಾಣುವಂತಾಗಿದೆ.
03 ಜುಲೈ 2025ರ ಪ್ರಜಾವಾಣಿಯ 'ಅಭಿಮತ'ದಲ್ಲಿ ಪ್ರೊ.ಬಿಳಿಮಲೆಯವರ ಲೇಖನ ಕಣ್ತೆರುಸುವಂತಿದೆ. 1968ರಿಂದಲೇ ಶಿಕ್ಷಣದಲ್ಲಿ ತ್ರಿಭಾಷಾ ನೀತಿಯನ್ನು ಅಳವಡಿಸಿಕೊಂಡ ಕರ್‍ನಾಟಕಕ್ಕೆ ಅದರಿಂದ ಯಾವ ಪ್ರಯೋಜನವೂ ಆಗದಿರುವುದು ಹಾಗೂ ಅದೊಂದು ಹಿಂದಿ ಹೇರಿಕೆಯ ಅಸ್ತ್ರವಾಗಿರುವುದು ಅರ್ಧಶತಕದ ನಂತರವೂ ಸ್ಪಷ್ಟವಾಗಿ ಕಾಣುತ್ತಿದೆ. ಮತ್ತೊಂದು ಆಘಾತಕಾರಿ ಅಂಶವೆಂದರೆ ಹಿಂದಿನ ಶೈಕ್ಷಣಿಕ ವರ್ಷದಲ್ಲಿ ೧.೪೨ ಲಕ್ಷ ವಿದ್ಯಾರ್ಥಿಗಳು ಎಸ್ಸೆಸ್ಸೆಲ್ಸಿಯ ಹಿಂದಿ ವಿಷಯದಲ್ಲಿ ಫೇಲಾಗಿದ್ದಾರೆ ಎಂಬ ಮಾಹಿತಿ. ಇಷ್ಟು ವರ್ಷಗಳಲ್ಲಿ ಅದೆಷ್ಟು ಲಕ್ಷ ವಿದ್ಯಾರ್ಥಿಗಳು ಫೇಲಾಗಿ ತೊಂದರೆ ಅನುಭವಿಸಿರಬಹುದು, ಶಿಕ್ಷಣವನ್ನೇ ಮೊಟಕುಗೊಳಿಸಿರಬಹುದು ಎಂದು ಊಹಿಸಬಹುದು. ಹೀಗೆ ಅನಗತ್ಯವಾದ ಭಾಷೆಯೊಂದನ್ನು ಶಿಕ್ಷಣದಲ್ಲಿ ಕಡ್ಡಾಯವಾಗಿ ಅಳವಡಿಸಿ ಮಕ್ಕಳ ಭವಿಷ್ಯಕ್ಕೆ ಕಂಟಕವಾಗಿರುವುದು ಶೋಚನೀಯ. ದ್ವಿಭಾಷಾ ನೀತಿಯನ್ನು ಅಳವಡಿಸಿಕೊಂಡ ತಮಿಳುನಾಡಲ್ಲಿ ಅದರಿಂದ ಶೈಕ್ಷಣಿಕವಾಗಿ ಏನೂ ಸಮಸ್ಯೆಯಾಗಿಲ್ಲ, ಜೊತೆಗೆ ತಮಿಳರು ಕನ್ನಡಿಗರಿಗಿಂತ ಹೆಚ್ಚಾಗಿ ಬೇರೆ ರಾಜ್ಯಗಳಲ್ಲಿ ಮತ್ತು ದೇಶಗಳಲ್ಲಿ ಅವಕಾಶಗಳನ್ನು ಪಡೆದುಕೊಂಡಿರುವುದು ಮೇಲ್ನೋಟಕ್ಕೇ ಗೊತ್ತಾಗುತ್ತದೆ. ಉತ್ತರ ಭಾರತದ ಯಾವ ರಾಜ್ಯಗಳೂ ಇದುವರೆಗೆ ಶಾಲಾಶಿಕ್ಷಣದಲ್ಲಿ ದಕ್ಷಿಣ ಭಾಷೆಗಳನ್ನು ಪರಿಚಯಿಸುವ ಗೋಜಿಗೇ ಹೋಗಿಲ್ಲ. ಆದರೆ ಕರ್ನಾಟಕವು ಮಾತ್ರ ಕಡ್ಡಾಯ ಹಿಂದಿಯನ್ನಿಟ್ಟುಕೊಂಡು ವಿದ್ಯಾರ್ಥಿಗಳ ಭವಿಷ್ಯದೊಡನೆ ಚೆಲ್ಲಾಟವಾಡುತ್ತಿದೆ. ಇತ್ತೀಚೆಗೆ ಮಹಾರಾಷ್ಟ್ರದಲ್ಲಿ ಎನ್ ಇ ಪಿ ನೀತಿಯನ್ನು ತಂದು ಒಂದನೇ ತರಗತಿಯಿಂದಲೇ ಮೂರು ಭಾಷೆಗಳನ್ನು ಕಲಿಸುವ ಹಾಗೂ ಮತ್ತದರಲ್ಲೂ ಹಿಂದಿಯನ್ನು ಹೇರುವ ಪ್ರಯತ್ನಗಳಾಗುತ್ತಿರುವುದನ್ನು ಗಮನಿಸಬಹುದು.
ಹಿಂದಿಕಲಿಕೆ ಅಳವಡಿಸಿಕೊಂಡು ಐವತ್ತು ವರ್ಷಗಳ ನಂತರವೂ ಕರ್ನಾಟಕದ ಜನರಿಗೆ ಉತ್ತರ ಭಾರತದ ಉದ್ಯೋಗಗಳಲ್ಲಿ ಅಥವಾ ಕೇಂದ್ರಸರ್ಕಾರಿ ನೌಕರಿಗಳಲ್ಲಿ ವಿಶೇಷವಾಗಿ ಏನೂ ಪ್ರಯೋಜನವಾಗಿಲ್ಲ. ಬದಲಾಗಿ ಉತ್ತರದ ಹಿಂದಿಭಾಷಿಕರೇ ದಕ್ಷಿಣರಾಜ್ಯಗಳೆಡೆಗೆ ದುಡಿಮೆಗಾಗಿ ಹೆಚ್ಚಾಗಿ ಬರುತ್ತಿದ್ದಾರೆ. ಮುಂದ್ಯಾವಾಗಲೋ ಉದ್ಯೋಗಕ್ಕೆ ಉತ್ತರ ರಾಜ್ಯಗಳಿಗೆ ಹೋದರೆ ಅನುಕೂಲವಾಗಬಹುದು ಎಂದು ಬಾಲ್ಯದಲ್ಲಿಯೇ ಲಕ್ಷಾಂತರ ಕನ್ನಡದ ಮಕ್ಕಳಿಗೆ ಕಡ್ಡಾಯವಾಗಿ ಹಿಂದಿ ಹೇರುವುದು ಸರ್ವಥಾ ಸಮರ್ಥನೀಯವಲ್ಲ. ಹಿಂದಿಯಾಗಲಿ, ಮತ್ತಿತರ ಭಾಷೆಗಳಾಗಲೀ ಅವರವರ ಅಗತ್ಯಕ್ಕೆ ತಕ್ಕಂತೆ ಆಯ್ಕೆಯಾಗಿರಬೇಕೇ ಹೊರತು ಹೇರಿಕೆಯಾಗಬಾರದು ಮತ್ತು ಪರೀಕ್ಷೆಯ ತೇರ್ಗಡೆಗೆ, ಅಂಕಗಳ ಪರಿಗಣನೆಗೆ ಕಡ್ಡಾಯವಾಗಿರಬಾರದು. ಇದೆಲ್ಲಾ ದೃಷ್ಷಿಯಲ್ಲಿಟ್ಟುಕೊಂಡು ಕರ್ನಾಟಕ ಸರ್ಕಾರವು ಕನ್ನಡ ಇಂಗ್ಲೀಷ್ ಒಳಗೊಂಡ ದ್ವಿಭಾಷಾ ನೀತಿಗೆ ಮರಳುವುದು ಅತ್ಯಂತ ಸೂಕ್ತ.