ಹಿಂದಿನವಾರ ಕುದುರೆಮುಖ ಸಾಲಿನ ಬೆಟ್ಟಗಳಲ್ಲಿ ಪ್ರವಾಸ ಮತ್ತು ಚಾರಣ ಮಾಡಿಬಂದೆವು. ಅದರ ಕೆಲವು ವಿವರಗಳನ್ನು ದಾಖಲಿಸಲು ಈ ಬರೆಹ.
ಕುದುರೆಮುಖ ರಾಷ್ಟ್ರೀಯ ಉದ್ಯಾನವನ ಚಿಕ್ಕಮಗಳೂರು ಜಿಲ್ಲೆಯಲ್ಲಿದ್ದು ಕುದುರೆಮುಖ ಊರಿನಿಂದ ಕಾರ್‍ಕಳದವರೆಗೆ ರಸ್ತೆ ಇದರೊಳಗೆ ಹಾದುಹೋಗುತ್ತದೆ. ನಾವು ಇಲ್ಲಿಗೆ ಹೋಗಬೇಕೆಂದು ಯೋಜನೆ ಹಾಕಿದಾಗ ಉಳಿದುಕೊಳ್ಳುವ ವ್ಯವಸ್ಥೆ ಹಾಗೂ ಚಾರಣಕ್ಕೆ ಸೂಕ್ತವಾದ ಸ್ಥಳಗಳನ್ನು ಹುಡುಕಲಾಗಿ ಅಲ್ಲಿರುವ ಭಗವತಿ ನೇಚರ್ ಕ್ಯಾಂಪ್ ಹಾಗೂ ಕುರಿಂಜಾಲ್ ಶಿಖರ ಚಾರಣವನ್ನು ಆಯ್ಕೆ ಮಾಡಿಕೊಂಡೆವು.
ಭಗವತಿ ನೇಚರ್ ಕ್ಯಾಂಪ್
ಇದು ಜಂಗಲ್ ಲಾಡ್ಜಸ್ ಮತ್ತು ರೆಸಾರ್ಟ್'ನವರದ್ದಾಗಿದ್ದು ಕುದುರೆಮುಖ ರಾಷ್ಟ್ರೀಯ ಉದ್ಯಾನದೊಳಗೇ ಇದೆ. ನಾವು ಹತ್ತು ಜನರಿದ್ದುದರಿಂದ ಡಾರ್‍ಮಿಟ್ರಿಯನ್ನು ಬುಕ್ ಮಾಡಿದ್ದೆವು. ಈ ಕ್ಯಾಂಪಿನಲ್ಲಿ ಕಾಟೇಜುಗಳೂ ಸಹ ಇದೆ. ಬೆಂಗಳೂರಿನಿಂದ ಹೊರಟು ಮೂಡಿಗೆರೆ, ಕಳಸ, ಸಂಸೆ ಮಾರ್‍ಗವಾಗಿ ಸಾಗಿದರೆ ಬಸ್ರೀಕಲ್ ಎಂಬಲ್ಲಿ ಅರಣ್ಯ ಇಲಾಖೆಯ ಚೆಕ್ ಪೋಸ್ಟ್ ನಲ್ಲಿ ವಾಹನಗಳ ನಂಬರ್ ಬರೆದುಕೊಂಡು ಪಾಸ್ ಕೊಡುತ್ತಾರೆ. ಈ ರಸ್ತೆಯಲ್ಲಿ ಹಾಗೇ ಮುಂದೆ ಹೋದಾಗ ಕುದುರೆಮುಖ ಊರು ಸಿಗುತ್ತದೆ. ಕಾರ್‍ಕಳ ಅಥವಾ ಶೃಂಗೇರಿ ಕಡೆಯಿಂದ ಹೊರಹೋಗಲು ಅಲ್ಲಿನ ಚೆಕ್ ಪೋಸ್ಟ್ ಗಳಲ್ಲಿ ಈ ಪಾಸನ್ನು ಕೊಟ್ಟು ಹೊರಹೋಗಿದ್ದನ್ನು ದಾಖಲಿಸಬೇಕು. ಕುದುರೆಮುಖದ ಅರಣ್ಯ ಇಲಾಖೆಯ ಕಛೇರಿಯಿಂದ ಸುಮಾರು ಎಂಟು ಕಿಮಿ ದೂರದಲ್ಲಿ ಭಗವತಿ ನೇಚರ್ ಕ್ಯಾಂಪ್ ಸಿಗುತ್ತದೆ. ಮುಖ್ಯರಸ್ತೆಯಿಂದ ಮತ್ತೆ ಒಳಗೆ ಒಂದು ಕಿಮಿ ಹೋಗಬೇಕು. ಎಲ್ಲಾ ಕಾಲದಲ್ಲೂ ವಾಹನಗಳು ಹೋಗಬಹುದಾದಂತಹ ರಸ್ತೆ ಇದೆ. ನೇಚರ್ ಕ್ಯಾಂಪಿನ ಪರಿಸರವು ಚೆನ್ನಾಗಿದ್ದು ಒಳ್ಳೆಯ ಅನುಭವ ಒದಗಿಸುತ್ತದೆ.
ನೇಚರ್ ಕ್ಯಾಂಪಿನ ಪ್ಯಾಕೇಜ್ ಚಟುವಟಿಗಳಲ್ಲಿ ಮುಖ್ಯವಾಗಿ ಇರುವುದು ನೇಚರ್ ವಾಕ್, ಡಾಕ್ಯುಮೆಂಟರಿ ಶೋ ಮತ್ತು ಊಟ ತಿಂಡಿ ಚಾ ಕಾಪಿ. ನೇಚರ್ ವಾಕ್ ಎಂದರೆ ಅಲ್ಲೇ ಸುತ್ತಲಿನ ಪರಿಸರದಲ್ಲಿ ಆಸಕ್ತರು ಮರಗಿಡಗಳನ್ನು, ಪಕ್ಷಿಗಳನ್ನು ನೋಡುತ್ತಾ, ಬಗೆಬಗೆಯ ಹಕ್ಕಿಗಳ ಕೂಗನ್ನು ಕೇಳಿಸಿಕೊಳ್ಳುತ್ತಾ ಓಡಾಡಬಹುದು. ಹತ್ತಿರದಲ್ಲೇ ಒಂದು ವೀಕ್ಷಣಾಗೋಪುರವಿದ್ದು ಅದರ ಮೇಲಿಂದ ಬೆಟ್ಟಗಳ ಸಾಲಿನ, ಕಾಡಿನ ನೋಟ ಸಾಧ್ಯ. ಈ ಕ್ಯಾಂಪಿನ ಪಕ್ಕದಲ್ಲೇ ತಾಗಿಕೊಂಡಂತೆ ಭದ್ರಾನದಿಯು ಹಾದುಹೋಗಿದೆ. ನಿಯಮದ ಪ್ರಕಾರ ನದಿಯಲ್ಲಿ ಇಳಿಯುವುದು ನಿಷಿದ್ಧ. ನೀರು ತುಂಬಿ ಹರಿಯುವಾಗಲಂತೂ ಅಪಾಯಕಾರಿ. ಬೇರೆ ಕಾಲಗಳಲ್ಲಿ ನೀರು ಕಡಿಮೆ ಇದ್ದಾಗ ಹೋಗಬಹುದಾದರೂ ಇದು ನೇಚರ್ ಕ್ಯಾಂಪಿನವರ ಹೊಣೆಗಾರಿಕೆಯಲ್ಲಿಲ್ಲ. ರಾತ್ರಿ ಏಳೂವರೆ ಗಂಟೆಗೆ ಕುದುರೆಮುಖಶ್ರೇಣಿಗಳ ಬಗ್ಗೆ, ಅರಣ್ಯ ಸಿಬ್ಬಂದಿಯ ಕೆಲಸದ ಬಗ್ಗೆ ಕೆಲವು ಡಾಕ್ಯುಮೆಂಟರಿಗಳನ್ನು ಹಾಕಲಾಗುತ್ತದೆ. ಆಸಕ್ತರು ಕುಳಿತು ನೋಡಬಹುದು. ಊಟ ತಿಂಡಿಗಳ ಬಗ್ಗೆ ಯಾವುದೇ ದೂರೂ ಇಲ್ಲದಂತೆ ಬಗೆಬಗೆಯ ಮತ್ತು ರುಚಿಯಾದ ಪದಾರ್‍ಥಗಳನ್ನು ಒದಗಿಸಿದರು. ಅಲ್ಲಿರುವ ಊಟದ ಜಗುಲಿಯಲ್ಲಿ ನಾವು ಬಡಿಸಿಕೊಂಡು ಉಣ್ಣಬಹುದು. ಇನ್ನುಳಿದಂತೆ ಕಾಟೇಜುಗಳು ಮತ್ತು ಡಾರ್‍ಮೆಟ್ರಿಯನ್ನು ತಕ್ಕಮಟ್ಟಿಗೆ ನಿರ್‍ವಹಿಸಿ ಇಟ್ಟುಕೊಂಡಿದ್ದಾರಾದರೂ ಇನ್ನೂ ಒಂದಿಷ್ಟು ನಿರ್‍ವಹಣೆ ಮತ್ತು ಸೌಲಭ್ಯಗಳನ್ನು ಸುಧಾರಿಸಬಹುದು ಎನಿಸಿತು. ಇಲ್ಲಿಂದ ಹೆಚ್ಚುವರಿ ಪಾವತಿ ಮಾಡಿ ಜೀಪ್ ಸಫಾರಿ ಹೋಗಲೂ ಅವಕಾಶವಿದೆ.
ಕುರಿಂಜಲ್ ಬೆಟ್ಟ ಚಾರಣ
ಕುರಿಂಜಾಲ ಬೆಟ್ಟದ ಚಾರಣದ ಪ್ರಾರಂಭದ ಜಾಗ ಭಗವತಿ ನೇಚರ್ ಕ್ಯಾಂಪ್. ಅಲ್ಲಿಂದಲೇ ಕುರಿಂಜಾಲ್ ಹಾಗೂ ಗಂಗಡಿಕಲ್ ಬೆಟ್ಟಗಳ ಚಾರಣ ಶುರುವಾಗುತ್ತದೆ. ಕುದುರೆಮುಖ ಶ್ರೇಣಿಯ ಎಲ್ಲಾ ಟ್ರೆಕ್ ಗಳಿಗೂ
ಅರಣ್ಯ ಇಲಾಖೆಯ ಜಾಲತಾಣದ ಮೂಲಕ ಮೊದಲೇ ಶುಲ್ಕ ಪಾವತಿಸಿ ನೋಂದಾಯಿಸಿಕೊಳ್ಳುವುದು ಕಡ್ಡಾಯ. ಕೆಲವು ಚಾರಣಗಳಿಗೆ ಕುದುರೆಮುಖದ ಅರಣ್ಯ ಕಛೇರಿಯಲ್ಲಿ, ಕೆಲವು ಚಾರಣಗಳಿಗೆ ಬಸ್ರೀಕಲ್ ಅರಣ್ಯ ಕಛೇರಿಯಲ್ಲಿ ಚಾರಣದ ದಿನದ ಬೆಳಗ್ಗೆ ಹಾಜರಾತಿ ಹಾಕಿ ಗುರುತಿನ ಚೀಟಿ ತೋರಿಸಿ ಸಹಿಮಾಡಿ ಅವರೇ ಒದಗಿಸುವ ಗೈಡಿನ ಜೊತೆಗೆ ಹೊರಡಬೇಕಾಗುತ್ತದೆ. ಅಂತೆಯೇ ನಾವು ಕುದುರೆಮುಖದ ಕಛೇರಿಗೆ ಹೋಗಿ ನಮ್ಮ ನೊಂದಣಿ ತೋರಿಸಿದೆವು. ಕುರಿಂಜಾಲ್ ಪರ್‍ವತದ ತುದಿಗೆ ಅಲ್ಲಿಂದ ಏಳು ಕಿಮಿ ನಡಿಗೆ. ಮೊದಲು ಸುಮಾರು ಐದು ಕಿಮಿ ಕಾಡಿನಲ್ಲಿ ನಡೆಯಬೇಕು. ಕೊನೆಯ ಎರಡು ಕಿಮಿ ಬೆಟ್ಟದ ಏರುದಾರಿಯಲ್ಲಿ ನಡೆಯಬೇಕು. ಇದು ತೀರಾ ಕಷ್ಟದ ಹಾದಿ ಅಲ್ಲದಿರುವುದರಿಂದ ಒಂದು ತಕ್ಕ ಮಟ್ಟಿಗಿದ ದೈಹಿಕ ಸದೃಢತೆ ಇರುವ ಯಾರಾದರೂ ಹತ್ತಬಹುದಾಗಿದೆ. ದಟ್ಟಕಾಡಿನಲ್ಲಿ ಹಾದು, ನಡುವೆ ಸಿಗುವ ನದಿ ತೊರೆಗಳಲ್ಲಿ ಸ್ವಲ್ಪ ಹೊತ್ತು ವಿಶ್ರಮಿಸಿ, ಶಿಖರದ ತುದಿ ತಲುಪಿ ಸ್ವಲ್ಪ ಸಮಯ ಕಳೆದು ಅಲ್ಲಿಂದ ಇಳಿದು ಬರುವುದಕ್ಕೆ ಒಟ್ಟಾರೆ ಸುಮಾರು ಐದು ಗಂಟೆಗಳನ್ನು ತೆಗೆದುಕೊಂಡೆವು. ಬೆಟ್ಟದ ತುದಿಯಿಂದ ಕಾಣುವ ವಿಹಂಗಮ ನೋಟವು ಬಹಳ ಸುಂದರವಾಗಿತ್ತು. ಅವತ್ತಿನ ದಿನ ಹೆಚ್ಚು ಬಿಸಿಲು ಅಥವಾ ಮಳೆಯ ವಾತಾವರಣವೂ ಇಲ್ಲದೆ ಚೆನ್ನಾಗಿದ್ದುದರಿಂದ ಅನುಕೂಲವಾಯಿತು.
ಒಂದು ಕುತೂಹಲಕಾರಿ ಸಂಗತಿ
ಚಾರಣಕ್ಕೆಂದು ಹೋದಾಗ, ಕಾಡಿನಲ್ಲಿ ನಡೆಯುತ್ತಿದ್ದಾಗ ಒಳಗೆ ಒಂದಿಷ್ಟು ದೂರದಾನಂತರ ಚಿತ್ರದಲ್ಲಿರುವಂತಹ ಮರಗಳು ಕಾಣಿಸಿದವು. ನಾನು ಆ ತರಹದ ಮರಗಳನ್ನು ಅದೇ ಮೊದಲು ನೋಡಿದ್ದು. ಬುಡದಲ್ಲಿ ಮಣ್ಣಿನಿಂದ ಕೊಂಚ ಮೇಲ್ಭಾಗದವರೆಗೂ ಸುತ್ತಲೂ ಅಡ್ಡ ಪಟ್ಟಿಗಳ ತರಹ ರಚನೆ ಇದ್ದು ಕೆಲವು ಮರಗಳಲ್ಲಿ ಅದರಿಂದ ಬೇರುಗಳು ಹೊರಬಂದು ಗೊಂಚಲಾಗಿ ಹರಡಿಕೊಂಡಿರುತ್ತವೆ. ದೊಡ್ಡ ಮರಗಳಲ್ಲಿ ಬೇರುಗಳು ಹತ್ತು ಅಡಿಗೂ ದೂರ ಮಣ್ಣಿನ ಮೇಲೇ ಚಾಚಿ ಬೆಳೆದಿದ್ದವು. ಮೊದಮೊದಲು ಒಂದೆರಡು ಕಂಡ ಮರಗಳು ಆನಂತರ ಹೆಚ್ಚಾಗುತ್ತಾ ಹೋದವು. ಆವರೆಗೆ ಕಾಡಿನಲ್ಲಿ ಹಲವು ಜಾತಿಯ ಮರಗಳು ಇದ್ದವು. ಆದರೆ ಈ ಪ್ರದೇಶದಲ್ಲಿ ಶುರುವಾಗಿ ಅಲ್ಲಿಂದ ಮುಂದಿನ ಕಾಡಿನ ಪ್ರದೇಶವೆಲ್ಲಾ ಈ ಮರಗಳೇ ತುಂಬಿದ್ದವು. ಚಿಕ್ಕಪುಟ್ಟ ಮರಗಿಡ ಬಳ್ಳಿಗಳು ಬೇರೆ ಹಲವು ಜಾತಿಯವು ಇದ್ದವಾದರೂ ದೊಡ್ಡದಾಗಿ ಬೆಳೆದ ಮರಗಳಲ್ಲಿ ಇವುಗಳದ್ದೇ ಪ್ರಾಬಲ್ಯವಾಗಿ ಎಲ್ಲೆಡೆ ಹರಡಿಕೊಂಡಿದ್ದವು. ಇನ್ನೂ ಒಳಗಿನ ಕಾಡಿನಲ್ಲಿ ಬೇರೆ ಯಾವುದೇ ಮರಗಳು ಇಲ್ಲದಂತೆ ಬರೀ ಇವೇ ಮರಗಳು ತುಂಬಿದ್ದವು. ಒಂದು ಜಾಗದಲ್ಲಿ ಇದರ ಬಗ್ಗೆ ಅಧ್ಯಯನ ಮಾಡಿ ಒಂದು ಫಲಕ ಹಾಕಿದ್ದು ಕಾಣಿಸಿತು. Poeciloneuron indicum ಎಂಬ ಹೆಸರಿನ ಈ ಮರಗಳಿರುವ ಪ್ರದೇಶ monodominent forest ಎಂದೇ ಗುರುತಿಸಲಾಗಿತ್ತು. (ಚಿತ್ರದಲ್ಲಿದೆ). ಈ ಮರಗಳಿಗೆ ಕನ್ನಡದಲ್ಲಿ 'ಬಲಿಗೆ' ಎಂದು ಕರೆಯುತ್ತಾರೆ ಎಂದು ನಮ್ಮ ಸ್ಥಳೀಯ ಮಾರ್ಗದರ್ಶಿಯಿಂದ ತಿಳಿಯಿತು. ನಾನು ಕಾಡಿನಲ್ಲಿ ಈ ರೀತಿಯ ಪರಿಸರವನ್ನು ಇದೇ ಮೊದಲು ನೋಡಿದ್ದು ಇದೊಂದು ಹೊಸ ಅನುಭವವಾಗಿತ್ತು. ಅವು ಆ ಪರಿಸರದಲ್ಲಿ ಏಕೆ, ಹೇಗೆ ಅಷ್ಟು ಹೆಚ್ಚಾಗಿ ಬೆಳೆದವು, ಅವುಗಳ ಬುಡದಲ್ಲಿ ಆ ರಚನೆಯ ಕಾರಣವೇನು ಎಂಬುದರ ಬಗ್ಗೆ ಓದಿ ತಿಳಿದುಕೊಳ್ಳಬೇಕಿದೆ. ವಿಕಿಪೀಡಿಯಾದಲ್ಲಿ ಇದರ ಬಗ್ಗೆ ಕಿರುಮಾಹಿತಿ ಇದೆ :
ಬಳಗಿ
ಕಾಮೆಂಟ್‌ಗಳಿಲ್ಲ:
ಕಾಮೆಂಟ್ ಪೋಸ್ಟ್ ಮಾಡಿ