ಬುಧವಾರ, ಮೇ 7, 2008

ಕರ್ನಾಟಕವೆಂದರೆ ಬೆಂಗಳೂರು ಮಾತ್ರವೇನಾ?!

ಬೆಂಗಳೂರಿನಲ್ಲಿ ಚೆನ್ನಾಗಿಯೇ ಇರುವ ಟಾರಿನ ರಸ್ತೆಯ ಮೇಲೆ ಮತ್ತೊಂದು ಪದರ ಟಾರು, ಫ್ಲೈ ಓವರು, ಅಂಡರ್ ಪಾಸು, ಆದರೆ ಬೇರೆ ಊರುಗಳಲ್ಲಿ ರಸ್ತೆಯೇ ಇಲ್ಲ ಅಥವಾ ರಸ್ತೆಯೇ ಕಾಣದಂತೆ ಗುಂಡಿಗಳು. ಬೆಂಗಳೂರಿನಲ್ಲಿ ಸಣ್ಣ ಸಣ್ಣ ಸರ್ಕಲ್ಲುಗಳಲ್ಲೂ ರಾತ್ರೀ ಇಡೀ ಕೋರೈಸುವ ಹೈ ಮಾಸ್ ದೀಪಗಳು, ಬೇರೆ ಊರುಗಳಲ್ಲಿ ಹಳ್ಳಿಗಳಲ್ಲಿ ನೀರೆತ್ತುವ ಪಂಪಸೆಟ್ಟಿಗೂ ಗತಿಯಿಲ್ಲದಂತೆ ದಿನವೂ ಲೋಡ್ ಶೆಡ್ಡಿಂಗ್. ಬೆಂಗಳೂರಿನಲ್ಲಿ ಮಳೆ ಬಂದು ರಸ್ತೆಯಲ್ಲಿ ನೀರು ಹರಿದರೆ ದೊಡ್ಡ ಸುದ್ದಿ, ಅಲ್ಲಿ ಬೇರೆ ಊರುಗಳು ನೀರಲ್ಲಿ ಮುಳುಗಿ ಸಂಪರ್ಕವೇ ಕಡಿದೂ ಹೋದರೂ ಸುದ್ದಿಯೇ ಇಲ್ಲ. ಇಲ್ಲಿ ಎರಡು ತಾಸು ಕರೆಂಟು ಕೈಕೊಟ್ಟರೆ ಭೂಮಿ ತಿರುಗುವುದೇ ನಿಂತು ಹೋದಂತೆ ಬೊಬ್ಬೆ, ಹಳ್ಳಿಗಳಲ್ಲಿ ಕಂಬ ಮುರಿದು ಬಿದ್ದು ಮೂರು ದಿನವಾಗಿ ಪದೇ ಪದೇ ದೂರು ಕೊಟ್ಟರೂ ಹೋಗದ ಕತ್ತಲೆ, ದಿನಕ್ಕೊಮ್ಮೆ ಡೆಡ್ಡಾಗುವ ಫೋನು. ಇಲ್ಲಿ ಸಿಟಿ ಒಳಗಿನ ತಿರುಗಾಟಕ್ಕೇ ವೋಲ್ವೋ,ಎ.ಸಿ ಬಸ್ಸುಗಳು, ಬೇರೆ ಊರುಗಳಲ್ಲಿ ಸಮಯದ ಪರಿವೆಯೇ ಇಲ್ಲದಂತೆ ಓಡಾಡುವ ಅಕ್ಷರಶಃ ತಗಡಿನ ಡಬ್ಬಿಗಳಂತಿರುವ ಬಸ್ಸುಗಳು. ಇಲ್ಲಿ ಐ.ಟಿಯಲ್ಲಿ ಸ್ವಲ್ಪ ಏರು ಪೇರಾದರೆ ಅರಚಾಟ, ಅಲ್ಲಿ ಬೆಲೆಯೇ ಇಲ್ಲದೆ ಮುಗಿದುಹೋಗುತ್ತಿರುವ ಕೃಷಿ/ಕೃಷಿಕನ ಧ್ವನಿ. ಬೆಂಗಳೂರಿಗರಿಗೆ ಅದೆಷ್ಟೆಷ್ಟೋ ಹಂತದವರೆಗೆ ಕಾವೇರಿ ಯೋಜನೆ ಮಾಡಿ ದಿನವೂ ಕುಡಿಯುವ ನೀರು, ಬೇರೆ ಕೆಲವು ಊರುಗಳಲ್ಲಿ ವಾರಗಟ್ಟಲೆ ನಲ್ಲಿಯಲ್ಲಿ ನೀರು ಬರದ ಸ್ಥಿತಿ. ಸೌಲಭ್ಯ, ಅವಕಾಶಗಳಿಲ್ಲದೇ ಜನ ಕಡಿಮೆಯಾಗಿ ಖಾಲಿಯಾಗುತ್ತಿರುವ ಬೇರೆ ಊರುಗಳು, ದಿನದಿನವೂ ಹಿಗ್ಗುತ್ತಲೇ ಇರುವ ಬೆಂಗಳೂರು.

ಹೀಗೆ ಅಲವತ್ತುಕೊಳ್ಳಲು ಕಾರಣವಿದೆ. ನಮ್ಮ ರಾಜಕಾರಣಿಗಳಿಗೆ, ಆಡಳಿತಕ್ಕೆ, ಸರ್ಕಾರಕ್ಕೆ ಕಾಣುವುದು ಈ ಬೆಂಗಳೂರೊಂದೇ ಎಂದುಕೊಂಡರೆ ಎಲ್ಲರಿಗೂ ಕಿವಿ ಹಿಂಡಿ ಬುದ್ಧಿ ಹೇಳುವ, ಹೇಳಬೇಕಾದ ಮಾಧ್ಯಮಗಳೂ ಹೀಗೆಯೇ ವರ್ತಿಸಿದರೆ ಏನು ಗತಿ!!

ಮೊನ್ನೆ ನನ್ನ ಅಮ್ಮನಿಗೆ ಖಾಸಗಿ ಟೀವಿ ವಾಹಿನಿಯೊಂದು ನಡೆಸಿದ ಯಾವುದೋ ಕಾರ್ಯಕ್ರಮವೊಂದರಲ್ಲಿ ಬಹುಮಾನ ಬಂದಿತ್ತು. ಅವರು ಬಹುಮಾನವನ್ನು ಬೆಂಗಳೂರಿನಲ್ಲಿರುವ ವಾಹಿನಿಯ ಕಛೇರಿಗೆ ಬಂದು ತೆಗೆದುಕೊಳ್ಳುವಂತೆ ಸೂಚಿಸಿದ್ದರು. ಈ ಬಗ್ಗೆ ವಾಹಿನಿಯವರನ್ನು ಸಂಪರ್ಕಿಸಿ ಬೇರೆ ಊರುಗಳಲ್ಲಿರುವವರು ಇದಕ್ಕೋಸ್ಕರವೇ ಬೆಂಗಳೂರಿಗೆ ಬಂದು ಬಹುಮಾನ ತೆಗೆದುಕೊಳ್ಳಲು ಬಹಳ ಕಷ್ಟವಾಗುವುದರ ಬಗ್ಗೆ ಕೇಳಿಕೊಂಡರೂ ಸಹ ಬೆಂಗಳೂರಿಗೆ ಬಂದರೆ ಮಾತ್ರ, ಅದೂ ಅವರು ಹೇಳಿದ ಕಾಲಾವಧಿಯಲ್ಲಿ ಬಂದರೆ ಮಾತ್ರ ಕೊಡಲು ಸಾಧ್ಯ ಎಂಬ ಉತ್ತರ ಬಂದಿದೆ. ಇದು ಮೊದಲನೆ ಬಾರಿ ಏನಲ್ಲ. ಹಲವು ಮಾಧ್ಯಮಗಳು, ಸಂಸ್ಥೆಗಳು ನಡೆಸುವ ಕಾರ್ಯಕ್ರಮಗಳಲ್ಲಿ, ಸ್ಪರ್ಧೆಗಳಲ್ಲಿ ಈ ಮೊದಲೂ ಅಮ್ಮನಿಗೆ ಸುಮಾರು ಬಹುಮಾನಗಳು ಬಂದಿವೆ. ಆದರೆ ಎಲ್ಲರದ್ದೂ ಇದೇ ಧಾಟಿ! ಬುದ್ದಿ ಇದೆಯೇ ಇವರಿಗೆ? ಸಾಮಾನ್ಯವಾಗಿ ಎಲ್ಲ ಮುಖ್ಯ ಕಛೇರಿಗಳು ಬೆಂಗಳೂರಿನಲ್ಲೇ ಇರುತ್ತವೆ. ಹಾಗೆಂದ ಮಾತ್ರಕ್ಕೆ ಇವು ಬರೇ ಬೆಂಗಳೂರಿನ ಜನರಿಗೆ ಮಾತ್ರವೆ ಅಥವಾ ಇವರ ವಾಹಿನಿಗಳು ಬರೀ ಬೆಂಗಳೂರಿಗೆ ಮಾತ್ರ ಪ್ರಸಾರವಾಗುತ್ತವೆಯೇ? ಬೇರೆ ಊರುಗಳಲ್ಲಿರುವ ಜನರೂ ಕೂಡ ಭಾಗವಹಿಸುತ್ತಾರೆ, ಗೆಲ್ಲುತ್ತಾರೆ. ಆದರೆ ಅವರಿಗೆ ಬಹುಮಾನ ಬಂದಾಗ ಬೆಂಗಳೂರಿಗೇ ಬಂದು ತೆಗೆದುಕೊಳ್ಳಬೇಕೆಂಬ ಇವರ ಧೋರಣೆ ಎಷ್ಟು ಸರಿ? ತೀರಾ ವಿದೇಶದಲ್ಲಿ ಅಥವಾ ಬೇರೆ ರಾಜ್ಯದಲ್ಲಿರುವವರಿಗೆ ತಲುಪಿಸಲು ಸಾಧ್ಯವಾಗದಿರಬಹುದು, ಆದರೆ ಕರ್ನಾಟಕದಲ್ಲಿರುವ ಜನರಿಗೆ ಅವರವರ ಊರಿಗೇ ತಲುಪಿಸುವ ಅಥವಾ ಕೊನೇ ಪಕ್ಷ ಬಹುಮಾನ ದೊಡ್ಡದಿದ್ದಾಗ ಹತ್ತಿರದ ಜಿಲ್ಲಾ ಕೇಂದ್ರದಿಂದ ಪಡೆದುಕೊಳ್ಳುವ ವ್ಯವಸ್ಥೆ ಮಾಡಬೇಕಲ್ಲವೇ? ಉದಾಹರಣೆಗೆ ಬಹುಮಾನ ಗೆದ್ದವರು ರಾಯಚೂರಿನಿಂದಲೋ, ಕಾರವಾರದ ತುದಿಯಿಂದಲೋ ತಾಸುಗಟ್ಟಲೇ ಪ್ರಯಾಣ ಮಾಡಿ ಬೆಂಗಳೂರಿಗೆ ಬಂದು ಅದನ್ನು ತೆಗೆದುಕೊಂಡು ಹೋಗುವುದು ಸಾಧ್ಯವೇ, ಸಮಂಜಸವೇ? ಎಷ್ಟು ಹಣ, ಸಮಯ ವ್ಯರ್ಥ! ಅಷ್ಟಕ್ಕೂ ಇವರೇನು ಬಹುಮಾನವಾಗಿ ಬೆಂಗಳೂರಲ್ಲಿ ಸೈಟು, ಮನೆಯನ್ನೇನು ಕೊಡುವುದಿಲ್ಲ. ಕೆಲವರು ಪ್ರಯಾಣದ ಖರ್ಚನ್ನು(TA) ಕೊಡುತ್ತಾರಾದರೂ ಇದಕ್ಕೋಸ್ಕರವೇ ಇದ್ದ ಕೆಲಸ ಬಿಟ್ಟು ಅಲ್ಲಿಂದ ಪ್ರಯಾಣಿಸಿ ಬರುವುದು ಎಲ್ಲರಿಗೂ ಅದರಲ್ಲೂ ವಯಸ್ಸಾದವರಿಗೆ ಸಾಧ್ಯವಿಲ್ಲವೆಂಬ ಕಿಂಚಿತ್ ತಿಳುವಳಿಕೆಯಾದರೂ ನಮ್ಮ ಮಾಧ್ಯಮದ ವ್ಯಕ್ತಿಗಳಿಗೆ ಇದ್ದರೆ ಒಳ್ಳೆಯದು. ಪ್ರಜಾಪ್ರಭುತ್ವದ ಕಾವಲು ನಾಯಿ, ಸಂವಿಧಾನದ ನಾಲ್ಕನೇ ಅಂಗ ಎಂದೆಲ್ಲಾ ಕರೆಸಿಕೊಳ್ಳುವ ಮಾಧ್ಯಮಗಳೇ ಹೀಗೆ ಮಾಡಿದರೆ ಏನು ಕತೆ? ಇದೆಲ್ಲಾ ನೋಡಿದರೆ ಒಂದು ಗಾದೆ ನೆನಪಾಗುತ್ತದೆ, "ಊರಿಗೇ ನೀತಿ ಹೇಳೋ ತಿಮ್ಮಕ್ಕ ಒಲೆ ಮುಂದೆ ಕೂತು ಉಚ್ಛೆ ಹೊಯ್ದಿದ್ಲಂತೆ"



ಕೊನೆಗೆ ಉಳಿಯುವುದು ಮತ್ತದೇ ಪ್ರಶ್ನೆ, ಕರ್ನಾಟಕವೆಂದರೆ ಬೆಂಗಳೂರು ಮಾತ್ರವೇನಾ?! ಇದಕ್ಕೆ ನಮ್ಮ ಮಾಧ್ಯಮ ಮಿತ್ರರು ಏನನ್ನುತ್ತಾರೋ!

15 ಕಾಮೆಂಟ್‌ಗಳು:

Shankar Prasad ಶಂಕರ ಪ್ರಸಾದ ಹೇಳಿದರು...

ನಿಜ,
ಕರ್ನಾಟಕವೆಂದರೆ ಬೆಂಗಳೂರು ಮಾತ್ರಾ ಎಂಬ ಧೋರಣೆಯಿಂದ ಮಿಕ್ಕಿದ ಪ್ರಾಂತ್ಯಗಳಿಗೆ ಸಿಗಬೇಕಾದ ಮನ್ನ್ಣೆ, ಪ್ರಾತಿನಿಧ್ಯ, ಸೌಲಭ್ಯ ಸಿಗುತ್ತಿಲ್ಲ.

ಕಟ್ಟೆ ಶಂಕ್ರ

kalash_siya ಹೇಳಿದರು...

Yes Vikas you are very right,All facilities are given to large cities bec So called Rich and techies stay there, Now situation is such that in India itself they are insuffiencient of food grains bec of lack of facilities for farmers..... day is not far when everyone in with high tech life will stay high tech but eat Mud (mannu tinno gati barutte)

Harisha - ಹರೀಶ ಹೇಳಿದರು...

ನಿಜ... ಅದ್ಕೇ ಹುಬ್ಬಳ್ಳಿನ ರಾಜಧಾನಿ ಮಾಡಬೇಕು ಅಂತ ಒತ್ತಾಯ ಇರೋದು.. ಈ ಪ್ರಶ್ನೆ ಇವತ್ತು ನಿನ್ನೆಯದಲ್ಲ. ಅಲ್ಲದೆ ಇದು ಕೇವಲ ಖಾಸಗಿ ಮಾಧ್ಯಮಗಳ ಹಣೆಬರಹವಲ್ಲ. ದೂರದರ್ಶನದ ಹವಾಮಾನ ವರದಿ ನೋಡಿದ್ರೆ ಗೊತ್ತಾಗಲ್ವ.. "ಬೆಂಗಳೂರಿನ ಸುತ್ತಮುತ್ತ ಮೋಡ ಕವಿದ ವಾತಾವರಣವಿದ್ದು ಒಮ್ಮೊಮ್ಮೆ ಮಳೆಯಾಗುವ ಸಾಧ್ಯತೆಯಿದೆ" ಅಂತ? ಅದರಲ್ಲೇ ಗೊತ್ತಾಗತ್ತೆ ಬೇರೆ ಊರಿನಲ್ಲಿ ಏನಾಗುತ್ತೆ ಅನ್ನೋದನ್ನ ಅವರು ಹೇಳೋ ಗೋಜಿಗೆ ಹೋಗಲ್ಲ ಅಂತ.

ಅನಾಮಧೇಯ ಹೇಳಿದರು...

ಜೊತೆಗೆ ಇಂಗ್ಲೀಶ್ ಮಾಧ್ಯಮಗಳ ಕಾಟ ಬೇರೆ ಗಾಯಕ್ಕೆ ಉಪ್ಪು ಸವರಿದಂತೆ. ಇಲ್ಲಿ ನೋಡಿ ಬೆಂಗಳೂರೇ ಬೇರೆ ಅಂತೆ ಕರ್ನಾಟಕಾನೇ ಬೇರೆ ಅಂತೆ. ಇದು ನಿಧಾನವಾಗಿ ಬೆಂಗಳೂರನ್ನು ನಮ್ಮಿಂದ ಕಿತ್ತುಕೊಳ್ಳುವ ಹುನ್ನಾರ.

http://www.ibnlive.com/videos/64488/05_2008/battle4_ktaka0305_1/karnataka-polls-its-bangalore-vs-karnataka.html

-ರಾಜ

ವಿಜಯ್ ಜೋಶಿ ಹೇಳಿದರು...

Fantastic article.


Thank u very much for giving a link to my blog from your blog..

ಅನಾಮಧೇಯ ಹೇಳಿದರು...

now a daya media also centralizing to bangalore

Shree ಹೇಳಿದರು...

ವಿಕಾಸ್, ನಿಮ್ಮ ಅಮ್ಮನಂತಹ ಮುಗ್ಧ ಹೆಣ್ಣುಮಕ್ಕಳಿಂದಲೇ ಯಾವುದೇ ಖಾಸಗಿ ವಾಹಿನಿಯಿರಬಹುದು ಇವತ್ತು ಜೀವಂತ ಉಳಿದಿರುವುದು. ಆದ್ರೆ ಹೀಗೆ ಹೇಳ್ತಾ ಇದ್ದೇನೆ ಅಂತ ತಪ್ಪು ತಿಳ್ಕೋಬೇಡಿ... ಟಿವಿ ಚಾನೆಲ್-ನವರು ಸ್ಪರ್ಧೆಗಳನ್ನು ಮಾಡುವಾಗ ಅದು - ೧-ಸ್ಪರ್ಧೆಯ ಪ್ರಾಯೋಜಕರ ಪ್ರತಿಷ್ಠೆ ಮೆರೆಸುವ ಯತ್ನ ೨-ಆ ಕಾರ್ಯಕ್ರಮದ ವೀಕ್ಷಕರನ್ನು ಹಿಡಿದಿರಿಸುವ ಯತ್ನ ೩- ಆ ಕಾರ್ಯಕ್ರಮಕ್ಕೆ ವೀಕ್ಷಕರು ಎಷ್ಟಿದ್ದಾರೆ ಅಂತ ತಿಳಿಯುವ ಯತ್ನ ೪- ದುಡ್ಡು ಮಾಡುವ ಸುಲಭ ದಾರಿ - ಇದ್ರಲ್ಲಿ ಯಾವ್ದಾದ್ರೊಂದು ಆಗಿರ್ತದೆ. ಇದಲ್ಲದೆ, ವೀಕ್ಷಕರಿಗೆ ಬಹುಮಾನ ಕೊಡ್ಬೇಕು ಅನ್ನೋ sincere ಉದ್ದೇಶದಿಂದ ಸ್ಪರ್ಧೆಗಳನ್ನ ಮಾಡುವುದು ವಿರಳ. ಕೌನ್ ಬನೇಗಾ ಕರೋಡ್ಪತಿಯಲ್ಲಿ ವೀಕ್ಷಕರಿಗೆ ಕೊಡುವ ಬಹುಮಾನದ ದುಡ್ಡು ಕರೆ ಮಾಡುವವರಿಂದ ಅಥವಾ ಸಂದೇಶಗಳಿಂದ ಬಂದಿರ್ತದೆ, ಆ ಕರೆ ಅಥಾವಾ ಸಂದೇಶದ ಚಾರ್ಜ್ value-added service ಆಗಿದ್ದಲ್ಲಿಯಂತೂ ಇದು ೧೦೦ಕ್ಕೆ ೧೦೦ರಷ್ಟು ಸತ್ಯ. ಹನಿಗೂಡಿ ಹಳ್ಳ ಅನ್ನೋಹಾಗೆ ಲಕ್ಷಗಟ್ಟಲೆ ವೀಕ್ಷಕರ ಕರೆ-ಸಂದೇಶಗಳು ಆದಾಯದ ಮೂಲ ಕೂಡ ಆಗ್ಬಹುದು. ಈಇದು ಗೊತ್ತಿಲ್ಲದಿರುವ ಮುಗ್ಧರಾದ ನಿಮ್ಮ ಅಥವಾ ನನ್ನ ಅಮ್ಮನಂತಹವರು ಮೋಸ ಹೋಗ್ತಾರೆ.
ಮುಂದಿನ ಸಾರಿ ಯಾರೂ ಉತ್ತರಿಸಬಹುದಾದ ಅತಿ ಸುಲಭವಾದ ಪ್ರಶ್ನೆಗಳನ್ನು ಯಾವುದೇ ವಾಹಿನಿ ಕೇಳಿದಾಗ, ಅದಕ್ಕೆ ಉತ್ತರಿಸದೆ ಸುಮ್ಮನಿರುವುದು ಒಳ್ಳೆಯದೆಂದು ನಿಮ್ಮ ಅಮ್ಮನಿಗೆ ಕಿವಿಮಾತು ಹೇಳಿ... ಹಾಗೇ ಅವರಿಗೆ ನನ್ನ ನಮಸ್ತೇ ಹೇಳಿ.:)

ವಿ.ರಾ.ಹೆ. ಹೇಳಿದರು...

@ಶಂಕರ್, ಕಲಶ್, ಹರೀಶ್.. ಥ್ಯಾಂಕ್ಸ್
ಹೌದು, ಈ ತಾರತಮ್ಯ ಹೋಗಬೇಕು , ಇಲ್ದಿದ್ರೆ ಬೇರೆ ಊರುಗಳ ಕಥೆ .. ಅಷ್ಟೆ ಮತ್ತೆ. ಕಂಪ್ಯೂಟರ್ ತಿಂದು ಬದುಕೋ(ಸಾಯೋ) ಕಾಲ ದೂರ ಇಲ್ಲ ಅನ್ನಿಸ್ತಾ ಇದೆ :)

@ರಾಜ,
ನೀವು ಕೊಟ್ಟ ಸುದ್ದಿ ತುಣುಕನ್ನು ನೋಡಿದ್ದೆ. ಕೊಂಚವೂ ಜವಾಬ್ದಾರಿ ಇಲ್ಲದಂತೆ ವರ್ತಿಸುವ, ಸುಳ್ಳು ಸುಳ್ಳು ವರದಿಗಳನ್ನು ಬಿತ್ತರಿಸುವ ಇಂತಹ ಮಾಧ್ಯಮಗಳು ಇರುವುದಕ್ಕೇ ಈ ದೇಶ ಈ ಗತಿಯಲ್ಲಿದೆ. ಥ್ಯಾಂಕ್ಸ್

@vijay joshi, ಥ್ಯಾಂಕ್ಸ್
@anonymous,
yes true. ಹೆಸ್ರು ಹೇಳ್ರೀ ಪುಣ್ಯಾತ್ಮ/ಪುಣ್ಯಾತ್ಗಿತ್ತಿ ;)

Unknown ಹೇಳಿದರು...

ಎಂಥಾ ಆಶ್ಚರ್ಯ ಅಲ್ವಾ?
ನಾವೂ ಕೂಡ ಊರು ಉದ್ಧಾರ ಮಾಡೋ ಬದ್ಲು, ಬೆಂಗಳೂರಲ್ಲಿ ಕಡ್ದು ಕಟ್ಟೆ ಹಾಕ್ತಾ ಇದೀವಿ.
ನಮ್ಗ್ಯಾಕೆ ಸುಬ್ಬಣ್ಣರ ಹಾಗೇ ನಾವಿದ್ದಲ್ಲೇ ನಮಗೆ ಬೇಕಾದಂತಹ ವಾತಾವರಣವನ್ನೋ, ಅವಕಾಶಗಳನ್ನೋ ಸೃಷ್ಟಿಸಿಕೊಳ್ಳೋದಕ್ಕೆ ಸಾಧ್ಯವಾಗೋದಿಲ್ಲ? ನಮ್ಮಲ್ಲಿ ಎಷ್ಟು ಜನಕ್ಕೆ ವಾಪಾಸ್ ಊರಿಗೆ ಹೋಗಿ ಗದ್ದೆಯನ್ನೋ, ತೋಟವನ್ನೋ ನೋಡ್ಕೊಂಡಿರ್ಲಿಕ್ಕಾಗ್ತದೆ?
ಸುಮ್ನೆ cityಲಿ ಕೂತು preach ಮಾಡ್ತಿದೀವೇನೋ ಅಂತ guilt ಕಾಡ್ತನೇ ಇರುತ್ತೆ.

ವಿ.ರಾ.ಹೆ. ಹೇಳಿದರು...

ಕೃತವರ್ಮಾ ನಮಸ್ಕಾರ, ಎಲ್ಲರಿಗೂ ಗದ್ದೆ ತೋಟ ಇರ್ಲೇ ಬೇಕು ಅಂತಿಲ್ವಲ್ಲ. ಇದ್ರೂ ಅದ್ನ ಮಾಡ್ಲಿಕ್ಕೆ ಬರ್ಲೇ ಬೇಕು ಅಂತನೂ ಇಲ್ಲ. ಹಾಗಂತ ಈಗೇನೂ ಯಾವೂರು ಖಾಲಿಯಾಗಿಲ್ಲ. ಅಲ್ಲಿ ಇರೋವ್ರಿಗೆ ಸರಿಯಾದ ಸೌಲಭ್ಯಗಳನ್ನ ಮಾಡ್ಕೊಡ್ಬೇಕಲ್ವೇ. ಎಲ್ಲವನ್ನೂ ಬರೇ ಬೆಂಗಳೂರಿಗೇ ಕೊಟ್ಟು, ಎಲ್ಲರೂ ಬರೀ ಬೆಂಗಳೂರಿನ ಮೇಲೆ ಕೇಂದ್ರಿಕರಿಸಿದರೆ , ತಮ್ಮೂರಲ್ಲೇ ಅವಕಾಶಗಳನ್ನು ಕಂಡುಕೊಳ್ಳೋ ಮನಸ್ಸಿರೋರನ್ನೂ ದಾರಿ ತಪ್ಪಿಸಿದಂತಾಗೋದಿಲ್ಲವೆ. ಈಗಾಗ್ತಿರೋದೇ ಅದು.

ತೇಜಸ್ವಿನಿ ಹೆಗಡೆ ಹೇಳಿದರು...

ವಿಕಾಸ್,

ಚೊಕ್ಕಾದ, ಚೆನ್ನಾದ ಲೇಖನ. ಆದರೆ ಕನಾ೯ಟಕ ಅಂದರೆ ಬೆಂಗಳೂರು ಮಾತ್ರ ಎನ್ನುವಂತೆ ಮಾಡಲು ಊರಿನ ಜನರ ನಿಲಿ೯ಪ್ತತತೆಯ ಕೊಡುಗೆಯೂ ಇದೆಯೆನಿಸದೇ? ಹಳ್ಳಿಯವರ ಹಣೆಬರಹವೇ ಹೀಗೇ..ಎಲ್ಲಾ ಸೌಲಭ್ಯಗಳು ಪಟ್ಟಣದವರಿಗೆ ಮಾತ್ರ ಸೀಮಿತ ಎಂದು ಕೇವಲ ಗೊಣಗುತ್ತಲೋ ಇಲ್ಲಾ ..ಮದುವೆ, ಮುಂಜಿ ಮುಂತಾದ ಸಮಾರಂಭಗಳಲ್ಲಿ ರಾಜಕಾರಣಿಗಳನ್ನು ದೂರುತ್ತಾ ಇದಕ್ಕೆಲ್ಲಾ ರಾಜಕಾರಣಿಗಳು ಮಾತ್ರ ಕಾರಣ ಎಂದು ಆಡಿಕೊಳ್ಳುತ್ತಾ ಇರುವುದು. ಬದಲು ಈ (ಅ)ವ್ಯವಸ್ಥೆಯನ್ನು ಬದಲಿಸುವ ನಿಟ್ಟಿನಲ್ಲಿ ಒಂದಾಗಿ ಹೋರಾಡಿದ್ದಾರೆಯೇ ಎಂದೂ ಕೇಳಬೇಕಾಗುತ್ತದೆ.ಬೆಂಗಳೂರಿನಲ್ಲಿರುವ ನೀವು ನಾವು ಮರುಗುವುದರಿಂದ ಎನೂ ಸಾಧ್ಯವಿಲ್ಲ...ನಿಜವಾಗಿ ತೊಂದರೆಗೊಳಗಾಗುತ್ತಿರುವ ಜನರು ಒಗ್ಗೂಡಿದಾಗ ಮಾತ್ರ ನಮ್ಮ, ನಿಮ್ಮ ಕಾಳಜಿಪರ ವಾಗ್ ಧಾಳಿಗೆ ಬಲಬರಬಹುದೇನೋ.. ?!

ವಿ.ರಾ.ಹೆ. ಹೇಳಿದರು...

@ಶ್ರೀ, ನಿಮ್ಮ ಪ್ರತಿಕ್ರಿಯೆಗೆ ಥ್ಯಾಂಕ್ಸ್.
actually, ಬ್ಲಾಗಿನಲ್ಲಿ ನನ್ನ ಕಳಕಳಿಯ ವಿಷಯವೇ ಬೇರೆ ಇತ್ತು. ಆದರೆ ನೀವು ಬೇರೆ ವಿಷಯದ ಬಗ್ಗೆಯೇ ಹೇಳಿದ್ದೀರಿ. ಇರಲಿ. ಅಮ್ಮ ತೀರ ನೀವಂದುಕೊಳ್ಳುತ್ತಿರುವಷ್ಟು ಮುಗ್ದರೇನಲ್ಲ. ಅವರು ಕೂಡ ’ಜಮಾನಾ’ದಲ್ಲೇ ಮಾಧ್ಯಮಗಳಲ್ಲಿ ಕೆಲಸ ಮಾಡಿದವರು. ಆದರೆ ಈಗ ಅವರ ಕಾಲದಂತಿಲ್ಲ ನಿಜ. ನಮ್ಮ ಮಾಧ್ಯಮಗಳು ಭಾರೀ ಕಮರ್ಷಿಯಲೈಸ್ ಆಗಿರುವುದು ಹೌದು. ಹಾಗಂತ ಅಮ್ಮ ತೀರ ಸುಮ್ಮನೇ ದುಡ್ಡು ಕಳೆದುಕೊಳ್ಳುವಂತಹ ಸ್ಪರ್ಧೆಗಳಲ್ಲಿ ಭಾಗವಹಿಸುವುದಿಲ್ಲ. ಬಹುಮಾನ ಕೊಡಬೇಕೆಂಬ ಉದ್ದೇಶದಿಂದ ಯಾರೂ ಸ್ಪರ್ಧೆ, ಕಾರ್ಯಕ್ರಮ ನಡೆಸುವುದು ಅಲ್ಲವಾದರೂ ಕೂಡ ಹೆಚ್ಚು ಜನರನ್ನು ಆಕರ್ಷಿಸಬೇಕು , ತೊಡಗಿಸಬೆಕು ಎಂಬ ಉದ್ದೇಶದಿಂದ ಪ್ರಯತ್ನ ಮಾಡುವವರೂ ಇದ್ದಾರೆ. ಉದಾ: ಆಕಾಶವಾಣಿ, ಹಲವು ಸರ್ಕಾರಿ ಇಲಾಖೆಗಳು, ಸರ್ಕಾರೇತರ ಸಂಸ್ಥೆಗಳು. ಬರೇ ಲಾಭದ ಮೇಲೊಂದೇ ಕಣ್ಣಿಡದೆ ಒಳ್ಳೆಯ ಉದ್ದೇಶದಿಂದ, ಪ್ರತಿಭೆಗಳನ್ನು ಹೊರತೆಗೆಯುವ, ಅವಕಾಶಗಳನ್ನು ಒದಗಿಸಿಕೊಡುವ ಕೆಲಸಗಳನ್ನು ಮಾಡುತ್ತಿರುವ ಸಂಸ್ಥೆಗಳೂ ಇರುವುದು ನಮ್ಮ ಪುಣ್ಯ. ಆದರೆ ಹೆಚ್ಚಾಗಿ ಖಾಸಗಿಯವರು ಜವಾಬ್ದಾರಿಯಿಲ್ಲದೇ ಬರೀ ಬೆಂಗಳೂರು ಕೇಂದ್ರೀಕೃತವಾಗಿ (ಭಾಷೆ, ಸುದ್ದಿ, ಪ್ರಾತಿನಿಧ್ಯ ಇತ್ಯಾದಿಗಳಲ್ಲಿ) ಕೆಲಸ ಮಾಡುತ್ತಿರುವುದು ಕಾಣುತ್ತಿದೆ. ಪುಣ್ಯಕ್ಕೆ ನಾನು ಬೆಂಗಳೂರಿನಲ್ಲಿ ಇರುವುದರಿಂದ ಅಮ್ಮನ ಸುಮಾರು ಬಹುಮಾನಗಳನ್ನು ನಾನೇ ಹೋಗಿ ತೆಗೆದುಕೊಂಡು ಬಂದಿದ್ದೇನೆ. ಇಲ್ಲದಿದ್ದರೆ ಮೂಗಿಗಿಂತ ಮೂಗುತಿ ಭಾರ (ಅಂದರೆ ಬಹುಮಾನಕ್ಕಿಂತ ಪ್ರಯಾಣದ ವೆಚ್ಚವೇ ಜಾಸ್ತಿ)ಆಗುತ್ತಿತ್ತು . ಅಂದಹಾಗೆ ನಾನು ಬ್ಲಾಗಿನಲ್ಲಿ ಪ್ರಸ್ತಾಪಿಸಿದ ಸ್ಪರ್ಧೆಯೂ ಕೂಡ ೫೦ ಪೈಸೆ ಕಾರ್ಡಿನಲ್ಲಿ ಬರೆದದ್ದು . ಒಳ್ಳೆಯ ಬಹುಮಾನವೇ ಬಂದಿದೆ. :) ಆಟೋದಲ್ಲಿ ಎತ್ತಾಕಿಕೊಂಡು ಬರಬೇಕಾಯಿತು :):) ನಿಮ್ಮ ಕಿವಿಮಾತು, ನಮಸ್ತೇಯನ್ನ ಅಮ್ಮನಿಗೆ ಮುಂದಿನ ವಾರ ಓಟು ಹಾಕಲು ಹೋದಾಗ ಖುದ್ದಾಗಿ ತಲುಪಿಸುತ್ತೇನೆ :)

@ ತೇಜಕ್ಕ,
ನಿಜ. ಆದರೆ ನ್ಯಾಯವಾಗಿ ಸಿಗಬೇಕಾಗಿರುವದನ್ನೂ
ಹೋರಾಡಿಯೇ ಪಡೆದುಕೊಳ್ಳಬೇಕಾಗಿ ಬಂದಿರುವುದು ವಿಪರ್ಯಾಸ ಅಲ್ಲವೆ.
thanQ

ತೇಜಸ್ವಿನಿ ಹೆಗಡೆ ಹೇಳಿದರು...

ವಿಕಾಸ್,

ಹಿಂದೆ ಸ್ವಾತಂತ್ರವೂ ನ್ಯಾಯವಾಗಿ ನಮಗೆ ಸಿಗಬೇಕಿತ್ತು.. ಆದರೆ ಸಿಕ್ಕಿದ್ದು ಅನೇಕರ ಹೋರಾಟ, ಬಲಿದಾನದ ನಂತರವೇ... ಜೀವನವೇ ಹಾಗೆಏ.. ಡಾರ್ವಿನ್ನನ ವಿಕಾಸ-ವಾದವೂ ಅದೇ ತಾನೇ? "Struggle for Existence!"

ವಿ.ರಾ.ಹೆ. ಹೇಳಿದರು...

ಹ್ಮ್ಮ್.. ಹೌದು..ಅದು ಸರಿ.. ಆದ್ರೆ ಈ ನಾಗರೀಕ ಜಗತ್ತಿನಲ್ಲೂ ಕೆಲವರಿಗೆ ಮಾತ್ರ existanceಗಾಗಿ ಬಹಳ ಅಗತ್ಯವಿಲ್ಲದ struggle ಇರಬಾರದು ಅಂತ ನನ್ನನಿಸಿಕೆ.

Shree ಹೇಳಿದರು...

ನಿಮ್ಮ ಅಮ್ಮ ನಾನು ತಿಳಿದುಕೊಂಡಷ್ಟು ಮುಗ್ಧರೇನಲ್ಲ, ಮತ್ತು ಉತ್ತಮ ಬಹುಮಾನಗಳೇ ಅವರಿಗೆ ಸಿಕ್ಕಿವೆ ಅಂತ ತಿಳಿದು ಖುಶಿಯಾಯಿತು!