ಸೋಮವಾರ, ಆಗಸ್ಟ್ 18, 2008

ಮಳೆ..... ಮನೆ...

ಕೆಲತಿಂಗಳುಗಳ ಹಿಂದೆ ಬಿಸಿಲೆ ಘಾಟಿಯ ಕಾಡಿನಲ್ಲಿ ಅಮೋಘ ೨೫ ಕಿ.ಮಿ. ಚಾರಣ ಮಾಡಿದ ನಂತರ ಮತ್ತೆಲ್ಲೂ ಹೋಗದೇ ಬರೀ ಕಂಪ್ಯೂಟರ್ ಕುಟ್ಟೀ ಕುಟ್ಟೀ ಮೈ ಜೊತೆಗೆ ತಲೆಯೂ ಕೂಡ ಜಡ್ಡುಗಟ್ಟಿ ಹೋಗಿತ್ತು. ಸ್ವಾತಂತ್ರ್ಯೋತ್ಸವ , ಶನಿವಾರ, ಭಾನುವಾರ ಮೂರು ದಿನ ಒಟ್ಟಿಗೇ ರಜ ಸಿಕ್ಕಿದ್ದು ನೋಡಿ ಮತ್ತೆಲ್ಲಾದರು ಹೊರಟುಬಿಡೋಣ ಅನ್ನಿಸಿದರೂ ಕೊನೆಗೆ ಈ ಮಳೆಯಲ್ಲಿ ಆ ವಿಷಯ ಕೈ ಬಿಟ್ಟು ಮನೆಗೆ ಹೋಗೋಣ ಎಂದು ತೀರ್ಮಾನಿಸಿಕೊಂಡದ್ದಾಯಿತು. ಮನೆಗೆ ಹೋಗದೇ ಬಹಳ ದಿನಗಳೂ ಆಗಿದ್ದರಿಂದ ಈಗಲೂ ಹೋಗದಿದ್ದರೆ ಮನೆಯಲ್ಲೇ ಅಪರಿಚಿತನಾಗಿಬಿಡುತ್ತೇನೆ ಎಂಬ ಕಾರಣವೂ ಇತ್ತು. ಅದೂ ಅಲ್ಲದೇ ಮಳೆಗಾಲದಲ್ಲಿ ಮನೆಯ ಸುಖವೇ ಬೇರೆ. ಅದು ಹೇಗೆ ಅಂತ ಎಲ್ಲರಿಗೂ ಗೊತ್ತು. ಮತ್ತೆ ಕೊರೆಯೋಲ್ಲ.


ಗುರುವಾರ ಸಂಜೆ ಹೊರಟಿದ್ದಾಯಿತು. ರಾತ್ರಿ ೧೧ ಗಂಟೆಗೆ ಅಪ್ಪನಿಂದ ಫೋನು ಬಂತು. ನದೀ ನೀರು ಸೇತುವೆ ಮೇಲೆ ಹರೀತಾ ಇದೆ. ನೀನು ಮೇನ್ ಬಸ್ ಸ್ಟಾಂಡಿನಲ್ಲಿ ಇಳಿಯಬೇಡ. ಹಿಂದಿನ ಸ್ಟಾಪಿನಲ್ಲೇ ಇಳಿದುಕೋ ಅಂತ. ನಮ್ಮೂರಿನ ಸೇತುವೆಯದು ಪ್ರತಿವರ್ಷ ಮಳೆಗಾಲದಲ್ಲೂ ಇದ್ದದ್ದೇ. ಲಕ್ಕವಳ್ಳಿ ಅಣೆಕಟ್ಟಿನಲ್ಲಿ ಸ್ವಲ್ಪ ಜಾಸ್ತಿ ನೀರು ಹೊರಬಿಟ್ಟರೆ ಸಾಕು. ಸೇತುವೆ ಮೇಲೆ ನೀರು ಬಂದುಬಿಡುತ್ತದೆ. ಹಾಗಂತ ಅದೇನು ಭಾರೀ ಹಳೆಯದೇನಲ್ಲ. ೯೦ರ ದಶಕದಲ್ಲಿ ಕಟ್ಟಿಸಿದ್ದು. ಒಂದು ಸ್ವಲ್ಪವೂ ಕಾಮನ್ ಸೆನ್ಸ್ ಇಲ್ಲದೇ, ಭ್ರಷ್ಟಾಚಾರ ಮಾಡಿ ಕುಲಗೆಡಿಸಿರುವ ಸರ್ಕಾರಿ ಕೆಲಸವದು. ೧೦೦ ವರ್ಷಕ್ಕಿಂತಲೂ ಹಳೆಯದಾದ ಇನ್ನೊಂದು ಸೇತುವೆ ಇದೆ. ಇದುವರೆಗೂ ಅದರದ್ದು ಒಂದು ಕಲ್ಲೂ ಕೂಡ ಅಲುಗಾಡಿಲ್ಲ ಮತ್ತು ನದಿಯಲ್ಲಿ ಎಷ್ಟೆ ನೀರು ಬಂದರೂ ಸೇತುವೆ ಮೇಲೆ ಆರಾಮಾಗಿ ಓಡಾಡಬಹುದು. ಆದರೆ ಹೊಸಸೇತುವೆ ಮಾತ್ರ ಸಾಕಷ್ಟು ಎತ್ತರ ಇಲ್ಲದಿರುವುದರಿಂದ ಪ್ರತಿ ಮಳೆಗಾಲದಲ್ಲೂ ಅದರ ಮೇಲೆ ನೀರು ಹರಿದು, ಹಾಳಾಗಿ, ನಂತರ ತಿಪ್ಪೆ ಸಾರಿಸಲಾಗುತ್ತದೆ. ಇನ್ಯಾವಾಗ ಅದು ಮುರಿದುಬೀಳುತ್ತದೋ. ಅದು ಮುರಿದು ಬಿದ್ದು ೨೦ ಜನ ಸತ್ತು, ಪ್ರತಿಭಟನೆಗಳಾಗಿ, ರಾಜಕೀಯವಾಗಿ, ಹೊಡೆದಾಟವಾಗಿ ನಂತರವೇ ಸರ್ಕಾರಗಳು ಕಣ್ಣು ಬಿಡುವುದು ಅನಿಸುತ್ತದೆ. ಇರಲಿ. ಹೀಗೆಯೇ ಯೋಚಿಸುತ್ತಾ ರಾತ್ರಿ ೧೨ ಗಂಟೆಗೇ ಯಾವುದೋ ಊರೊಂದರಲ್ಲಿ ಆಟೋ ಚಾಲಕರ ಸಂಘದವರು ರಾಷ್ಟ್ರಗೀತೆ ಹಾಡುತ್ತಾ ಇದ್ದುದನ್ನು ಮಬ್ಬುಗಣ್ಣಿನಿಂದಲೆ ನೋಡಿ ೧ ಗಂಟೆಗೆ ಮನೆ ತಲುಪಿಕೊಂಡಾಯಿತು. ಮಾರನೇ ದಿನ ಕೆಂಪುಕೋಟೆಯಲ್ಲಿ ಬಾವುಟ ಹಾರಿಸುವಾಗ ಎದ್ದು ಸಲ್ಯೂಟ್ ಹೊಡೆದದ್ದೂ ಆಯಿತು. ತಿಂಡಿ ತಿಂದು ನದಿಯ ಹತ್ತಿರ ಹೋಗಿ ನೋಡಿದರೆ ನೀರು ಸೇತುವೆಯ ಕೆಳಭಾಗವನ್ನು ತಾಗಿಕೊಂಡೇ ಹರಿಯುತ್ತಿತ್ತು.

**********

ಟಿ.ವಿ.ಚಾನಲ್ ಗಳಲ್ಲಿ ಅವೇ ಕಿತ್ತೋದ ಪ್ರೋಗ್ರಾಮುಗಳನ್ನು ನೋಡಿ, ಇವು ಖಂಡಿತ ’ಉತ್ತಮ ಸಮಾಜಕ್ಕಾಗಿ’ ಅಲ್ಲ ಎಂದು ಬೇಜಾರು ಬಂದು ಮಾರನೇ ದಿನವೇ ಹತ್ತಿರದಲ್ಲೇ ಎಲ್ಲಾದರೂ ಪಿಕ್ನಿಕ್ ಹೋಗಿಬಂದರೆ ಹೇಗೆ ಎಂಬ ಯೋಚನೆ ಬಂದು ಅಪ್ಪನಲ್ಲಿ ಕೇಳಿದಾಗ ಅವರೂ ಹೂಂಗುಟ್ಟಿದರು. ಅಮ್ಮನಿಗೆ ಕೇಳಲಾಗಿ "ಈ ಮಳೆಲ್ಲಿ ನಾ ಬತ್ನಿಲ್ಲೆ, ನೀವಿಬ್ರು ಬೇಕಾರೆ ಹೋಗ್ ಬನ್ನಿ"ಎಂಬ ಹಸಿರು ನಿಶಾನೆಯೂ ದೊರೆಯಿತು. ನಾನೂ ಅಪ್ಪ ಜೋಗ, ಕೂಡ್ಲಿ, ತ್ಯಾವರೆಕೊಪ್ಪ, ಕೆಮ್ಮಣ್ಣುಗುಂಡಿ, ಕುಪ್ಪಳ್ಳಿ ಹೀಗೇ ಎಲ್ಲಿಗೆ ಹೋಗೋದು ಎಂದು ಲೆಕ್ಕಾಚಾರ ಹಾಕುತ್ತಿರುವಾಗಲೇ ಮಳೆ ಜೋರಾಗಿ ಶುರುವಾಗಿದ್ದು ನೋಡಿ ’ಗಾಜನೂರು’ ಸರಿಯಾದ ಜಾಗ, ಬೇಗ ಹೋಗಿಬರಬಹುದು ಎಂದು ತೀರ್ಮಾನ ಮಾಡಿಕೊಂಡು ಹೊರಟಿದ್ದಾಯಿತು. ಸಣ್ಣವರಿದ್ದಾಗ ಗಾಜನೂರು ಇಷ್ಟದ ಪಿಕ್ನಿಕ್ ಜಾಗಗಳಲ್ಲೊಂದಾಗಿತ್ತು. ಈಗ ಅಲ್ಲಿಗೆ ಹೋಗದೇ ಸುಮಾರು ೧೦ ವರ್ಷದ ಮೇಲಾಗಿತ್ತು. "ಮಳೆಲ್ಲಿ ನೆನಿಯಡಿ, ನಿಧಾನಕ್ ಹೋಗಿ, ಪ್ಯಾಂಟ್ ತುದಿ ಮಡಚ್ಕ್ಯಳಿ ರಾಡಿಯಾಗೋಗ್ತು " ಇತ್ಯಾದಿ ಸೂಚನೆಗಳನ್ನು ಅಮ್ಮನಿಂದ ಪಡೆದು ರಸ್ತೆಗಿಳಿದು ಮುಕ್ಕಾಲು ತಾಸಿನಲ್ಲಿ ಗಾಜನೂರು ತಲುಪಿಕೊಂಡದ್ದಾಯಿತು.

ಶಿವಮೊಗ್ಗದಿಂದ ತೀರ್ಥಹಳ್ಳಿ ರಸ್ತೆಯಲ್ಲಿ ೧೨ ಕಿ.ಮಿ. ದೂರದಲ್ಲಿದೆ ಗಾಜನೂರು. ತುಂಗಾ ನದಿಗೆ ಅಣೆಕಣ್ಣು ಕಟ್ಟಿರುವ ಜಾಗವದು. ಸುಮ್ಮನೇ ಸುಳ್ಳು ಹೇಳುವುದಿಲ್ಲ, ಹಳೇ ವೈಭವದ ಗಾಜನೂರನ್ನೇ ಮನಸಿನಲ್ಲಿಟ್ಟುಕೊಂಡು ಹೋಗಿದ್ದ ನಮಗೆ ಅಲ್ಲಿ ನೋಡಿದಾಗ ಭ್ರಮ ನಿರಸನವಾಯಿತು. ಮೊದಲು ಗಾಜನೂರಲ್ಲಿ ಅಣೆಕಟ್ಟು ಇರಲಿಲ್ಲ. ಅದು ಒಂದು ಜಲಾಶಯ(reservoir) ಆಗಿತ್ತು. ತುಂಗಾನದಿಗೆ ದೊಡ್ಡ ತಡೆಗೋಡೆಯೊಂದನ್ನು ಕಟ್ಟಿ ನೀರನ್ನು ನೀರಾವರಿಗಾಗಿ ಸಂಗ್ರಹಿಸಿರುತ್ತಿದ್ದರು. ಮಳೆಗಾಲದಲ್ಲಿ ಅದು ತುಂಬಿ ಹರಿದು ಆ ಗೋಡೆಯಿಂದ ಕೆಳಗೆ ಬೀಳುವ ದೃಶ್ಯವೇ ಅದ್ಭುತವಾಗಿತ್ತು. ಹತ್ತಿರದಿಂದ ಏನೂ ಅಪಾಯವಾಗದಂತೆ ನಿಂತು ನೋಡುವ ಅವಕಾಶವಿತ್ತು. ಆ ಕೆಂಪುನೀರು ಧುಮ್ಮಿಕ್ಕಿ ಬಿಳಿನೊರೆಯೊಂದಿಗೆ ಮತ್ತೆ ಹಾಗೆಯೇ ಸ್ವಲ್ಪ ಮೇಲೇರಿ ಹರಿದುಹೋಗುವುದನ್ನು ನೋಡುತ್ತಾ ನಿಲ್ಲಬಹುದಿತ್ತು. ಈಗ ಕೆಲ ವರ್ಷದಿಂದ ಅದ್ಯಾವುದೂ ಇಲ್ಲವಂತೆ. ಅಣೆಕಟ್ಟು ಕಟ್ಟಿ ಗೇಟುಗಳನ್ನು ಹಾಕಿಬಿಟ್ಟಿದ್ದಾರೆ. ಮೊದಲು ಇದ್ದ ತಡೆಗೋಡೆ ಈಗ ಮುಳುಗಿಹೋಗಿದೆ. ನೋಡಲು ಅಂತಹ ವಿಶೇಷವಾಗಿ ಕಾಣುವಂತದ್ದು ಏನೂ ಇಲ್ಲ. ಸರ್ಕಾರದವರು ಅಲ್ಲೇನೋ ಉದ್ಯಾನವನ ಮಾಡಬೇಕೆಂದು ಸ್ಕೆಚ್ ಹಾಕಿದ್ದಾರಂತೆ. ಅದು ಮಾಡಿ ಆದಮೇಲೆ(ಎಷ್ಟು ವರ್ಷವಾಗುತ್ತದೋ ಗೊತ್ತಿಲ್ಲ!) ಹೋಗಬಹುದೇನೋ. ಅಲ್ಲಿವರೆಗೆ ಪಿಕ್ನಿಕ್ಕಿಗಾಗಿ ಗಾಜನೂರಿನ ಹೋಗುವ ಇರಾದೆ ಇದ್ದರೆ ಮನಸಿಂದ ತೆಗೆಯಬಹುದು. ನಾವು ಹಾಗೆಯೇ ಒಂದು ತಾಸು ಅಲ್ಲೇ ಸುತ್ತುಹಾಕಿ ವಾಪಸ್ ಬಂದದ್ದಾಯಿತು.

****

ನಂತರ ಮತ್ತದೇ ಮಳೆ..... ಮನೆ...

***

ಸೋಮವಾರ... back to office :)

5 ಕಾಮೆಂಟ್‌ಗಳು:

Harisha - ಹರೀಶ ಹೇಳಿದರು...

ಆನಂತೂ ಊರಲ್ಲಿ ಮೂರಕ್ಕೆ ಮೂರೂ ದಿನ ನೂರಕ್ಕೆ ನೂರರಷ್ಟು ನಿದ್ದೆ ಹೊಡದಿ ನೋಡು... ಯಮ್ಮನೆ ಮುಂದೆ ಬೀಳ ಫಾಲ್ಸ್ ನೋಡಲ್ ಹೋಪಲೂ ದರ್ದ್ ಆಜಿಲ್ಲೆ :-)

ಅಂದ್ಹಂಗೆ ಗುರುವಾರ ಮೆಜೆಸ್ಟಿಕ್ಕಿಗೆ ಹ್ಯಾಂಗೆ ಹೋದ್ಯೋ? ಜಾಮ್-ಜಾಮ್-ಜಾಮಿ ಇತ್ತಲ್ಲ! ಅಥವಾ ಬೇರೆ ದಿನ ಹೋದ್ಯ?

Unknown ಹೇಳಿದರು...

nanagidre maadinda beela neerige kai hidkota,ammanatra byskyandu,hodachala munde bechhage kutu benki kaasta kanasu kaantiddi! :)

ಶಾಂತಲಾ ಭಂಡಿ (ಸನ್ನಿಧಿ) ಹೇಳಿದರು...

ವಿಕಾಸ...
ಚಂದದ ಲೇಖನ ಯಾವತ್ತಿನಂತೆ. ಊರಿನ ನೆನಪು, ಒಂದಷ್ಟು ಮಾಹಿತಿಗಳ ಕೊಟ್ಟಿದ್ದಕ್ಕೆ ಥ್ಯಾಂಕ್ಸ್. :-)

ಸಂದೀಪ್ ಕಾಮತ್ ಹೇಳಿದರು...

welcome to office ;)

ವಿ.ರಾ.ಹೆ. ಹೇಳಿದರು...

@ಹರೀಶ
:) ನಾವು ಬುದ್ಧಿವಂತ್ರಾಗಿದಿವಿ ಈಗ. ಸಂಜೆ ೪:೩೦ಕ್ಕೇ ಬಸ್ಟ್ಯಾಂಡು ತಲುಪಿಕೊಂಡದ್ದರಿಂದ ಜಾಮ್ ಜಾಮ್ ಜಾಮಿ ಸಿಕ್ಕಿದ್ದಿಲ್ಲೆ :)

@ಕವಿತ
ಆಹ್, ಕನಸು ಕಾಣೋದು ಬೆಸ್ಟು !

@ಶಾಂತಲಕ್ಕ, ಸಂದೀಪ
:-)