ಮಂಗಳವಾರ, ನವೆಂಬರ್ 25, 2008

ಇಷ್ಟವಾದದ್ದು-ಕಷ್ಟವಾದದ್ದು

ಪುಸ್ತಕಗಳನ್ನು ಓದುವಾಗ ಅದರಲ್ಲಿ ಕೆಲವು ಬಹಳ ಇಷ್ಟವಾಗುತ್ತವೆ. ಇತ್ತೀಚೆಗೆ ಓದಿದ್ದರಲ್ಲಿ ಒಂದೆರಡು ಪ್ಯಾರಾಗಳನ್ನು ಬಹಳ ಪ್ರಸಕ್ತವೆನಿಸಿದ್ದರಿಂದ ಇಲ್ಲಿ ಹಾಕುತ್ತಿದ್ದೇನೆ.

ಪುಸ್ತಕ: ಶಿವರಾಮ ಕಾರಂತರ ’ಅಪೂರ್ವ ಪಶ್ಚಿಮ’

ಹೊಸ ಶೈಲಿಯೊಂದೇ ಕಲೆಯಾಗಲಾರದು. ಪರದೇಶೀಯರ ಅನುಕರಣೆಯಿಂದ ಮಾತ್ರ ಕಲೆ ಬೆಳೆಯಲಾರದು. ಒಂದೊಂದು ದೇಶಕ್ಕೆ ಒಂದೊಂದು ಪರಂಪರೆಯಿದೆ. ಅದನ್ನು ಕಡಿದುಕೊಂಡವ, ತನ್ನದೇ ಪರಂಪರೆಯನ್ನು ಬಳಸಿ ಯಶಸ್ವಿಯಾಗುವುದು ಕಷ್ಟ. ಅನುಕರಣೆಯೆಂಬುದು ತೀರ ದುರ್ಬಲ ದಾರಿ. ಹೊರಗಿನ ಶೈಲಿಯನ್ನು ತಂದುದರಿಂದ ನಾವು ಹೊಸಬರಾಗಲಾರೆವು. ನಮ್ಮ ದೃಷ್ಟಿ, ಹಂಬಲ, ಚಿತ್ರಿಸುವ ವಿಷಯ, ವಸ್ತು ನಮ್ಮದಾಗಿರಬೇಕು, ನವೀನವಾಗಿರಬೇಕು. ನಮ್ಮದೇ ಆದ ಆವರಣದಲ್ಲಿ ಹುಟ್ಟಿ ಬೆಳೆದಂತೆ ಕಾಣಿಸಬೇಕು.


---------------------------------------

ಪುಸ್ತಕ: ಡಾ. ಕೆ.ಗಣೇಶಯ್ಯನವರ ’ಶಾಲಭಂಜಿಕೆ’

ವಿಜ್ಞಾನದಲ್ಲಿ ಭ್ರಮೆಗಳಿಲ್ಲ ಎನ್ನುವುದೂ ಒಂದು ಭ್ರಮೆ. ಇಡೀ ವಿಜ್ಞಾನವೇ ನಾವು ನಿಜ ಎಂದು ಭ್ರಮಿಸುವುದನ್ನು ಸಾಧಿಸಲು ಹೋಗುವ ಒಂದು ಪ್ರಯತ್ನ. ಅದರಲ್ಲಿ ಸಫಲರಾದರೆ ಅದು ಸತ್ಯವಾಗುತ್ತದೆ ಇಲ್ಲವಾದಲ್ಲಿ ಅದು ಭ್ರಮೆ ಮಾತ್ರ ಎಂದು ಕೈಬಿಡುತ್ತೇವೆ. ಎಷ್ಟೋ ಸಲ ನಾವು ವಿಜ್ಞಾನಿಗಳು ಸತ್ಯವನ್ನು ಕಂಡು ಹಿಡಿದಿದ್ದೇವೆ ಎಂಬ ಭಾವನೆಯಲ್ಲಿ ಬಹಳ ಕಾಲ ಬದುಕುತ್ತೇವೆ. ಬೇರೆಯವರು ಅದು ತಪ್ಪು ಎಂದು ತೋರಿಸಿದಾಗಲೇ ನಾವು ಎಂತಹ ಭ್ರಮೆಯಲ್ಲಿ ಮುಳುಗಿದ್ದೆವು ಎಂದು ತಿಳಿಯುವುದು. ಐನ್ ಸ್ಟೈನ್ ಬರುವವರೆಗೆ, ನ್ಯೂಟನ್ನಿನ ತತ್ವಗಳೆಲ್ಲ ಸತ್ಯ ಎಂದು ನಂಬಿದ್ದ ವಿಜ್ಞಾನಿಗಳು ಕಾಲವನ್ನು ನಿಖರ ಎಂದು ತಿಳಿದಿದ್ದರು. ಆತನ ನಂತರವೇ, ಕಾಲವು ನಿಖರವಲ್ಲ ಅದು ಸುತ್ತಮುತ್ತಲಿನ ಜಗತ್ತಿನ ಸ್ಥಿತಿಯನ್ನವಲಂಬಿಸುತ್ತದೆ ಎಂದು ತಿಳಿದಿದ್ದು, ಹಾಗಾಗಿ ವಿಜ್ಞಾನವೂ ಸಹ ಸತ್ಯ ಮತ್ತು ಭ್ರಮೆಗಳ ಮಧ್ಯದ ತೂಗುಯ್ಯಾಲೆ.


’ಚಾರಿತ್ರಿಕ ಥ್ರಿಲ್ಲರ್’ಗಳು ಎಂಬ ಉಪಶೀರ್ಷಿಕೆಯೊಂದಿಗೆ ಇರುವ ಈ ಪುಸ್ತಕ ಇತ್ತೀಚೆಗೆ ಓದಿದ ಒಳ್ಳೆಯ ಪುಸ್ತಕಗಳಲ್ಲಿ ಒಂದು. ವೈಜ್ಞಾನಿಕ ಹಾಗೂ ಚಾರಿತ್ರಿಕ ಸತ್ಯ ಘಟನೆಗಳು ಕತೆಗಳಾಗಿ ಹೆಣೆಯಲ್ಪಟ್ಟು ರೋಚಕವಾಗಿಯೂ, ಮಾಹಿತಿಪೂರ್ಣವಾಗಿಯೂ ಇದ್ದು ಕತೆಯಲ್ಲಿ ಕುತೂಹಲದ ಜೊತೆಗೆ ಆ ವಿಷಯಗಳ ಬಗ್ಗೆ ಆಸಕ್ತಿಯನ್ನು ಹುಟ್ಟಿಸುವುದರಲ್ಲಿ ಸಫಲವಾಗುತ್ತದೆ. ಖಂಡಿತ ಕೊಂಡು ಓದಿ.


*****************

ನಿನ್ನೆ ಬೆಳಗ್ಗೆ ಎದ್ದಾಗ ರೇಡಿಯೋ ಚಾನಲ್ ಒಂದರಲ್ಲಿ ಜಾಕಿ ಬಹಳ ಸಂಭ್ರಮದಿಂದ ಹೇಳುತ್ತಿದ್ದ. ಇವತ್ತು ರಾಖಿ ಸಾವಂತ್ ರವರ ಹುಟ್ಟುಹಬ್ಬ, ಅವರಿಗೆ ಶುಭಾಶಯಗಳು!! ಒಂದು ತಾಸು ಬಿಟ್ಟು ಕೇಳಿದಾಗಲೂ ಪದೇ ಪದೇ ರಾಖಿ ಸಾವಂತಿಗೆ ಶುಭಾಶಯ ಹೇಳುತ್ತಲೇ ಇದ್ದ. ಅದರ ಅಂಗವಾಗಿ ನಿನ್ನೆಯಿಡೀ ಆ ರೇಡಿಯೋ ಚಾನಲ್ ಸ್ಪರ್ಧೆಯೊಂದನ್ನು ಏರ್ಪಡಿಸಿತ್ತು. ಇವತ್ತು ರಾಖಿ ಸಾವಂತ್, ಮಲ್ಲಿಕಾ ಶೇರಾವತ್ , ಮುಮೈತ್ ಖಾನ್ ಮುಂತಾದ ಬೆತ್ತಲೆ ಐಟಂಗಳ ಹುಟ್ಟುಹಬ್ಬಗಳನ್ನು ಸಂಭ್ರಮದಿಂದ ಆಚರಿಸುವ ಇವು ನಾಳೆ ಶಕೀಲಾಳಿಗೆ ಸನ್ಮಾನ ಮಾಡಿ ನಮ್ಮ ಜನರಿಗೆ ಹಿತೋಪದೇಶ ಕೊಡಿ, career ರೂಪಿಸಿಕೊಳ್ಳಲು ಟಿಪ್ಸ್ ಕೊಡಿ ಎಂದು ತಮ್ಮ ಸ್ಟುಡಿಯೋಗೆ ಕರೆಸಿ ಕೇಳಿಸಿದರೂ ಆಶ್ಚರ್ಯವಿಲ್ಲ. ಎಷ್ಟಂದರೂ ’ಫಟಾಫಟ್ ಜನರೇಷನ್’ ಇನ್ಮುಂದೆ! ಮುಂದೆ ಇವರೇ ಆದರ್ಶ.

stay tuned.....

14 ಕಾಮೆಂಟ್‌ಗಳು:

Santhosh Rao ಹೇಳಿದರು...

ವಾಹ್ .. ಚೆನ್ನಾಗಿದೆ !
ಶಿವರಾಮ ಕಾರಂತರ ’ಅಪೂರ್ವ ಪಶ್ಚಿಮ’ ನಾನು ಓದಿದ್ದೆ .. ಆ ಪ್ಯಾರ ಮರೆತಿದ್ದೆ ..!

Parisarapremi ಹೇಳಿದರು...

ಎಂಥಾ ಅದ್ಭುತ ಮಾತು ಕಾರಂತರದು ಮತ್ತು ಗಣೇಶಯ್ಯನವರದು! ನಾವು ಎಂತೆಂಥಾ ಭ್ರಮೆಯಲ್ಲಿ ಬದುಕುತ್ತೇವೆ!! ಒಟ್ಟಿನಲ್ಲಿ ಬದುಕುತ್ತೇವೆ, ಸಾಯುವವರೆಗೂ!!! ;-)

ರಾಖಿ ಸಾವಂತ್ ಹುಟ್ಟುಹಬ್ಬ ಆಚರಿಸಿಕೊಳ್ಳಲಿ ಬಿಡ್ರೀ ರೇಡಿಯೋದವರು! ನೂರೆಂಟು ಚಾನೆಲ್‍ಗಳು ಇಲ್ವೇ? ಬೇರೇದು ಕೇಳಿದರಾಯಿತಪ್ಪಾ!!

Harisha - ಹರೀಶ ಹೇಳಿದರು...

stay tuned? ಬ್ಲಾಗಿಗೋ ರೇಡಿಯೋ ಚಾನೆಲ್ಲಿಗೋ?

shivu.k ಹೇಳಿದರು...

ಎರಡು ಅಧ್ಬುತ ಪ್ಯಾರಗಳು ! ನನಗೆ ಕೆ. ಗಣೇಶಯ್ಯ ರವರ ಶಾಲಭಂಜಿಕೆ ಪುಸ್ತಕ ಓದುವ ಆಸೆ ಇದೆ ಕೊಂಡುಕೊಳ್ಳುತ್ತೇನೆ. ಇನ್ನು ಬೇಕಿರದ ಹುಟ್ಟುಹಬ್ಬಗಳ ಬಗ್ಗೆ ಪ್ರಚಾರದ ವಿಷಯದಲ್ಲಿ ನನಗೆ ದ್ವೇಷವಿದೆ .
ಹಾಗೆ ನನ್ನ ಎರಡು ಬ್ಲಾಗಿನಲ್ಲಿ ಹೊಸ ವಿಚಾರಗಳಿವೆ. ನೀವು ನನ್ನ ಬ್ಲಾಗಿಗೆ ಬಂದು ತುಂಬಾ ದಿನಗಳಾಯಿತು. ಬಿಡುವು ಮಾಡಿಕೊಂಡು ಬನ್ನಿ.

ಮನಸ್ವಿ ಹೇಳಿದರು...

ನಂಗೆ ಓದೋಕೆ ಮೂರು ಇಷ್ಟ ಆಯ್ತು!

ವಿ.ರಾ.ಹೆ. ಹೇಳಿದರು...

ಸಂತೋಷ್, :)

ಪರಿಸರ, "ಮುಂಬೈನಲ್ಲಿ ಏನಾದ್ರೂ ಆಗ್ಲಿ ಬಿಡ್ರಿ ಬೇರೆ ಸಿಟಿನಲ್ಲಿ ಹೋಗಿ ಇದ್ರಾಯ್ತು" - ಈ ವಾಕ್ಯ ನಿಮ್ ವಾಕ್ಯಕ್ಕೆ ಮ್ಯಾಚ್ ಆಗತ್ತಾ? ಆಗ್ಲಿಲ್ಲಾ ಅಂದ್ರೆ ಬಿಡಿ :)

ಹರೀಶ್, ಇಂತ ಪ್ರಶ್ನೆಗೆ ಉತ್ತರ ಕೊಡೋದು ಕಷ್ಟ ನೋಡು
:-)

ಶಿವು, ಖಂಡಿತ ಓದಿ. thanx.

ಮನಸ್ವಿ, :-) thanx

Parisarapremi ಹೇಳಿದರು...

ಮುಂಬೈಯಲ್ಲಿ "ಏನ್" ಆಗ್ತಿದೆಯೋ ಅದು ಮನರಂಜನೆಗಾಗಿ ಎಂದಾದರೆ ನಿಮ್ಮ ಮಾತು ಒಪ್ಪಬಹುದು. ಹಾಗಾಗಿ ಈ ನಿಮ್ಮ ಹೋಲಿಕೆ ಶ್ಲಾಘನೀಯವಲ್ಲದ ಕಾರಣ, ಮ್ಯಾಚ್ ಆಗದೇ ಇರುವ ಕಾರಣ, ನೀವು ಹೇಳಿದ ಹಾಗೆ "ಬಿಟ್ ಬಿಟ್ಟೆ". :-)

ಶ್ರೀನಿಧಿ.ಡಿ.ಎಸ್ ಹೇಳಿದರು...

ಎಫೆಮ್ಮು.. :) ಇವುಗಳ ಬಗ್ಗೆ ಎಷ್ಟು ಬರೆದರೂ ಅಷ್ಟೀ ಎಂಬುದನ್ನು ಅಲ್ಲಿಗೆ ಹೋಗಿ ಬಂದಿರುವ ನಾನು ಮನಸಾರೆ ಒಪ್ಪಿಕೊಳ್ಳುತ್ತೇನೆ.

ಚಿತ್ರಾ ಸಂತೋಷ್ ಹೇಳಿದರು...

ಹೆಕ್ಕಿ ಬರೆದ ಸಾಲುಗಳು ಇಷ್ಟವಾದುವು.
ಎಫ್.ಎಂ. ದು ಕರ್ಮಕಾಂಡ..ಹೇಳಿ no use..
-ಚಿತ್ರಾ

ವಿ.ರಾ.ಹೆ. ಹೇಳಿದರು...

@ಪರಿಸರ,
ಸರ್ರ್, ಮನರಂಜನೆಗಾಗಿ ’ಏನು’ ಮಾಡಿದರೂ ಒ.ಕೆ ಅನ್ನೋದು ಬಿಸಿನೆಸ್ ಹೆಸರಿನಲ್ಲಿ ಸೂಳೆಗಾರಿಕೆ ಮಾಡಿದರೂ ಒ.ಕೆ ಅನ್ನೋದಕ್ಕೆ ಮ್ಯಾಚ್ ಆಗತ್ತಾ? ಆಗ್ಲಿಲ್ಲಾಂದ್ರೆ ಬಿಡಿ :)
ಜನರಿಗೆ ಮನರಂಜನೆ ಕೊಡ್ತಿದಾರೋ ಅಥವಾ ಮನರಂಜನೆ ಅಂದ್ರೆ ’ಇಂತದ್ದೇ’ ಅನ್ನುವ ಟ್ರೆಂಡ್ ಹುಟ್ಟು ಹಾಕ್ತಿದಾರೋ!

ನಿಧಿ,ಚಿತ್ರಾ
ಹೌದು no use. ಇವತ್ತು ಏಡ್ಸ್ ದಿನಾಚರಣೆ. ಒಂದು ಎಫ್ಫೆಮ್ ನವರು ಜನರತ್ರ ಹೋಗಿ ನೀವು ಕಾಂಡೋಂ ಎಲ್ಲಿ ಹೇಗೆ ಕೇಳಿ ತಗೋತೀರಾ ಅಂತ ಬೆಳಗ್ಗಿಂದ ಮೈಕ್ ಹಿಡ್ಕಂಡು ನೇರಪ್ರಸಾರ ಮಾಡ್ತಿದಾರೆ ! ಪಾಪ ಅದ್ಯಾವ್ದೋ ಚಿಕ್ ಹುಡುಗಿಗೂ ಬಿಡ್ಲಿಲ್ಲ.

Parisarapremi ಹೇಳಿದರು...

ರಾಖಿ ಸಾವಂತ್ ಕೇವಲ ನಟಿ (ನಟನೆ ಬಾರದ) ಎಂದುಕೊಂಡಿದ್ದೆ. ಆದರೆ ಇಷ್ಟೆಲ್ಲಾ ಹಿನ್ನೆಲೆ ಇದೆಯೆಂದು ಗೊತ್ತಿರಲಿಲ್ಲ. ಅವೆಲ್ಲಾ ಇದ್ದರೆ ನೀವು ಹೇಳೋದು ಅಕ್ಷರಶಃ ಸರಿ.

ಒಂದು ಕೆಲ್ಸ ಮಾಡ್ಬೋದು ನೋಡಿ ಇಂಥೋರ್‍ಗೆ. ಆ ರೇಡಿಯೋ ಚಾನೆಲ್‍ಗೆ ಕಾರ್ಯಕ್ರಮ ನಡೆಯುವ ವೇಳೆಯಲ್ಲಿ ಫೋನ್ ಮಾಡಿ "ಯಾಕ್ರೀ ಇಂಥಾ ಹೇಸಿಗೆ ಕಾರ್ಯಕ್ರಮ ಎಲ್ಲಾ ಮಾಡ್ತೀರಾ?" ಅಂತ ಒಬ್ಬೊಬ್ರಾಗೇ ಉಗೀಬೋದು.

ವಿ.ರಾ.ಹೆ. ಹೇಳಿದರು...

ಹುಂ. ಎಲ್ಲಾರೂ ’ನಟ’ ’ನಟಿ’ಯರೇ :) ಕೆಲವರಿಗೆ ನಟನೆ ಬರತ್ತೆ, ಕೆಲವ್ರಿಗೆ ಬರಲ್ಲ. ನೈಜಾಭಿನಯ !

ಆದ್ರೂ ನಾ ಬರ್ದ ವಿಷ್ಯ ಅದು ಅಲ್ವೇ ಅಲ್ಲ ಬಿಡಿ ಇಲ್ಲಿ.
ರಾಖಿ ಸಾವಂತ್ ಎಂಬುದು ಒಂದು ಉದಾಹರಣೆಯಷ್ಟೆ. ಅವಳ ಬಗ್ಗೆ ಬರ್ದಿದ್ದಲ್ಲ, ರೆಡಿಯೋ ದವ್ರ ಬಗ್ಗೆ ಬರ್ದಿದ್ದು. thanx

ಹರೀಶ ಮಾಂಬಾಡಿ ಹೇಳಿದರು...

ಮುಂದಿನ ಪೀಳಿಗೆ ಬಿಡಿ. ಈಗಿನ ಪೀಳಿಗೆಯನ್ನೇ ಕೇಳಲು ಎಫ್ ಎಂನವರನ್ನು ಹೇಳೋಣ. ಅದೂ ಬೆಂಗಳೂರಿನ ಬುದ್ದಿವಂತರನ್ನೇ ಕೇಳಬಹುದು.

೧)ಕುವೆಂಪು ಯಾರು?
೨)ನಮ್ಮ ದೇಶಕ್ಕೆ ಸ್ವಾತಂತ್ರ್ಯ ಯಾವಾಗ ಸಿಕ್ಕಿತು?
೩)ಸೈಗಲ್ ಯಾರು?
೪)ಮಧುಬಾಲ ಯಾರು ?
೫)ಅವರ ಅಜ್ಜ, ಅಜ್ಜಿಯರ ಹೆಸರು?

ಅದಕ್ಕೂ ಉತ್ತರ ಸಿಕ್ಕರ ಧನ್ಯ...

ವಿ.ರಾ.ಹೆ. ಹೇಳಿದರು...

@ಮಾಂಬಾಡಿ
ನಿಜ ನಿಜ . :(