ಸೋಮವಾರ, ಮಾರ್ಚ್ 23, 2009

ಶಿವಗಂಗೆ ಹಾಗೂ ನಂದಿಬೆಟ್ಟದ ಮಂಗಗಳು

"ಇಲ್ಲಿ ಸುತ್ತ ಮುತ್ತ ಬರೀ ಮಂಗಗಳ ಕಾಟ ಸಾರ್, ಏನೂ ಬೆಳೆಯಕ್ಕೆ ಆಗಲ್ಲ, ತೋಟ ಮಾಡಕ್ಕೆ ಆಗಲ್ಲ" ಎಂದು ತುಮಕೂರು ರಸ್ತೆಯಲ್ಲಿ ಒಬ್ಬರು ಹಳ್ಳಿಯವರು ಗೋಳಿಟ್ಟುಕೊಂಡಾಗ ಪರಿಸ್ಥಿತಿಯ ಅರಿವು ಅಷ್ಟಾಗಿ ಆಗಿರಲಿಲ್ಲ. ನಮ್ಮೂರಿನ ಕಡೆ ತೋಟಗಳಿಗೆ ಆಗಾಗ ಮಂಗಗಳು ಬರುವುದುಂಟು. ಅವು ಬಂದರೆ ಒಂದು ಗುಂಪಾಗಿ ಬರುತ್ತವೆ, ಸ್ವಲ್ಪ ಹೊತ್ತು ಅಲ್ಲೆ ಹಾರಾಡಿ ಕಿರುಚಾಡಿ ಕೈಗೆ ಸಿಕ್ಕಿದ್ದನ್ನು ಕಿತ್ತು ತಿಂದು ಹಾಗೆಯೇ ಮುಂದೆ ಹೋಗಿಬಿಡುತ್ತವೆ. ಹಾಗೂ ಕೂಡ ಅವುಗಳ ಕಾಟ ಜಾಸ್ತಿ ಆದರೆ ಶಬ್ದ ಮಾಡಿಯೋ, ಪಟಾಕಿ ಸಿಡಿಸಿಯೋ, ಹುಸಿ ಗುಂಡು ಹಾರಿಸಿಯೋ ಓಡಿಸಿಬಿಡುತ್ತಾರೆ. ಆದರೆ ಮನುಷ್ಯನ ಬಳಕೆ , ಅಭ್ಯಾಸ ಒಮ್ಮೆ ಆಗಿಬಿಟ್ಟರೆ ಅವುಗಳನ್ನು ಸಹಿಸುವುದೇ ಕಷ್ಟವಾಗಿಬಿಡುತ್ತದೆ ಎಂದು ತಿಳಿದಿದ್ದು ನನಗೆ ಶಿವಗಂಗೆ ಬೆಟ್ಟ ಮತ್ತು ನಂದಿಬೆಟ್ಟಗಳಲ್ಲಿ.

ಶಿವಗಂಗೆ ಬೆಟ್ಟ ಹತ್ತುವಾಗ ಈ ಮಂಗಗಳ ಜೊತೆ ಏಗುವುದೇ ಒಂದು ವಿಶಿಷ್ಟ ಅನುಭವ. ಹತ್ತುವಾಗ ಸೌತೆಕಾಯಿ, ಮಜ್ಜಿಗೆ, ಚುರುಮುರಿ ಮಾರಾಟ ಮಾಡುವವರೆಲ್ಲರೂ ಕೂಡ ಜೊತೆಗೆ ಒಂದು ನಾಯಿಯನ್ನು ಇಟ್ಟುಕೊಂಡಿರುತ್ತಾರೆ. "ಏನ್ ಮಾಡೋದು , ಮಂಗನ ಕಾಟ, ನಾಯಿ ಇದ್ರೆ ಅವು ಹತ್ರಕ್ಕೆ ಬರಲ್ಲ" ಅನ್ನುತ್ತಾರೆ. ಬೆಟ್ಟ ಹತ್ತುವಾಗ ಮೊದಲು ಸ್ವಲ್ಪ ದೂರ ಮಂಗಗಳ ಸುಳಿವು ಅಷ್ಟೆನೂ ಇರುವುದಿಲ್ಲ. ಮೇಲೆ ಹತ್ತುತ್ತಾ ಹೋದಂತೆ ಒಂದೊಂದೇ ಮಂಗಗಳು ಕಾಣಿಸಿಕೊಳ್ಳುತ್ತವೆ. ದೂರದಿಂದಲೇ ಅವು ಹತ್ತುತ್ತಿರುವವರ ಕೈಯಲ್ಲಿ ಏನಾದರೂ ಸಾಮಾನು ಇದೆಯಾ ಎಂದು ಗುರುತಿಸಿಕೊಳ್ಳುತ್ತವೆ. ಕೈಯಲ್ಲಿ ಪ್ಲಾಸ್ಟಿಕ್ ಕವರ್ ಇದ್ದರಂತೂ ಮುಗಿದೇ ಹೋಯಿತು, ಅದರಲ್ಲಿ ಖಾತ್ರಿಯಾಗಿ ತಿಂಡಿ ಇದೆ ಎಂದು ತಿಳಿದುಕೊಂಡುಬಿಡುತ್ತವೆ ಅವು. ಅದರಲ್ಲೂ ಅವುಗಳ ಮೊದಲ ಗುರಿ ಮಕ್ಕಳು ಮತ್ತು ಹೆಂಗಸರು. ಎಲ್ಲಿಂದಲೋ ಸುಯ್ಯನೇ ಓಡಿ ಬಂದ ಮಂಗವೊಂದು ಮಕ್ಕಳ ಕೈಯಲ್ಲಿದ್ದ ತಿಂಡಿಯನ್ನು ಕಿತ್ತುಕೊಂಡು ಓಡಿಬಿಡುತ್ತದೆ. ಏನಾಯಿತೆಂದು ಗೊತ್ತಾಗುವಷ್ಟರಲ್ಲಿ ಮರದ ಮೇಲಿರುತ್ತದೆ! ಒಂದು ವೇಳೆ ಅದು ಓಡಿ ಬರುವುದನ್ನು ನೋಡಿದರೂ ಕೂಡ ಭಯದಿಂದ ಮಕ್ಕಳು ಕಿರುಚಿಕೊಳ್ಳುತ್ತಿರುವಾಗಲೇ ಕೈಯಲ್ಲಿದ್ದ ಸಾಮಾನು ಮಂಗನ ಪಾಲಾಗಿರುತ್ತದೆ. ಹೆಂಗಸರೂ ಕೂಡ ಹೆದರಿಕೊಳ್ಳುವವರು ಎಂದು ಅವುಗಳಿಗೆ ಯಾವಾಗಲೋ ಗೊತ್ತಾಗಿಬಿಟ್ಟಂತಿದೆ. ನಾವು ಬೆಟ್ಟ ಹತ್ತುವಾಗ ಒಬ್ಬರ ವ್ಯಾನಿಟಿ ಬ್ಯಾಗಿಗೆ ಮಂಗವೊಂದು ಬಂದು ಜೋತು ಬಿತ್ತು. ಅದು ಕಡಿದಾದ ಏರಿನ ಜಾಗ. ಆ ಹೆಣ್ಣುಮಗಳು ಪಾಪ ಸುಮಾರು ಹೊತ್ತು ಜಗ್ಗಾಡಿ ಕೊನೆಗೂ ತನ್ನ ವ್ಯಾನಿಟಿ ಬ್ಯಾಗನ್ನು ಬಿಟ್ಟುಕೊಡಬೇಕಾಯಿತು. ಹಾಗಂತ ಗಂಡಸರಿಗೆ ಏನೂ ಮಾಡುವುದಿಲ್ಲ ಎಂದುಕೊಳ್ಳುವ ಹಾಗಿಲ್ಲ. ಗಂಡಸರ ಕೈಲಿದ್ದ ಸಾಮಾನುಗಳಿಗೆ ಒಂಟಿಯಾಗಿ ಹೋಗಿ ಕಿತ್ತುಕೊಳ್ಳುವುದು ಸ್ವಲ್ಪ ಅಪಾಯ ಎಂದು ಅವು ಅರಿತಿವೆ. ಗಂಡಸರು ಕೋಲು ತೆಗೆದುಕೊಂಡು ಬಾರಿಸಿಬಿಡುತ್ತಾರೆ ಎಂಬ ಭಯ ಇರಬಹುದು. ಅದಕ್ಕಾಗಿ ನಾಲ್ಕೈದು ಮಂಗಗಳು ಒಟ್ಟಾಗಿ ಧಾಳಿ ಇಡುತ್ತವೆ. ದೊಡ್ಡ ಗಡವ ಮಂಗಗಳಾದರೆ ನಾಲ್ಕೂ ಕಡೆಯಿಂದಲೂ ಸುತ್ತುವರೆದು ಹಲ್ಲು ತೋರಿಸಿ ಹೆದರಿಸಿ ಕೈಯಲಿದ್ದುದನ್ನು ಕಿತ್ತುಕೊಂಡು ಹೋಗುತ್ತವೆ. ಸಣ್ಣ ಮಂಗಗಳು ಗಮನವನ್ನು ಬೇರೆಡೆ ಸೆಳೆದು ಒಂದನ್ನು ಓಡಿಸುತ್ತಿದ್ದಾಗ ಇನ್ನೊಂದು ಬಂದು ಕಿತ್ತುಕೊಂಡು ಓಡಿಹೋಗುತ್ತದೆ! ನಾಲ್ಕು ಮಂಗಗಳು ಒಟ್ಟಿಗೆ ಬಂದ ಮೇಲೆ ಮುಗಿದೇ ಹೋಯಿತು, ಕೈಯಲ್ಲಿದ್ದುದನ್ನು ಕೊಡಲೇ ಬೇಕು. ಏನು ಕಿರುಚಿದರೂ, ಏನು ಹೆದರಿಸಿದರೂ, ಹೊಡೆಯಲು ಹೋದರೂ ಜಪ್ಪಯ್ಯ ಅನ್ನುವುದಿಲ್ಲ. ಅವುಗಳಿಗೆ ನಾವೇ ಹೆದರಿ ಒಪ್ಪಿಸಿಬಿಡುವಂತಹ ಸನ್ನಿವೇಶ ಬಂದುಬಿಡುತ್ತದೆ. ತೀರ ಕೋಲಿನಲ್ಲಿ ಹೊಡೆದೋ, ಕಲ್ಲು ತೂರಿಯೋ ಹೆದರಿಸಲು ನೋಡಿದರೆ ಅವುಗಳಿಂದ ಪರಚಿಸಿಕೊಳ್ಳುವುದು ಗ್ಯಾರಂಟಿ!

ಇಲ್ಲಿನ ಮಂಗಗಳು ನೀರಿನ ಬಾಟಲಿಯನ್ನು ಮಾತ್ರ ಮುಟ್ಟುವುದಿಲ್ಲ. ಅವಕ್ಕೆ ಮಿರಿಂದಾ, ಪೆಪ್ಸಿ, ಕೋಲಾಗಳೇ ಇಷ್ಟ. ಬಾಟಲಿಯಲ್ಲಿ ಬಣ್ಣದ ನೀರು ಕಂಡರೆ ಸಾಕು ಅವಕ್ಕೆ ಸ್ಕೆಚ್ ಹಾಕಿ ಕಿತ್ತುಕೊಂಡು ಓಡುವವರೆಗೂ ಅವಕ್ಕೆ ಸಮಾಧಾನವಿರುವುದಿಲ್ಲ. ನಾವು ಬೆಟ್ಟ ಹತ್ತುವಾಗ ಹೇಗಾದರೂ ಚೀಲದಲ್ಲಿದ್ದ ಒಂದು ಫ್ರೂಟಿ ಕುಡಿದುಬಿಡೋಣ ಎಂದು ಒಂದು ಕಲ್ಲು ಮಂಟಪದ ಒಳಗೆ ಕೂತೆವು. ಯಾರಿಗೂ ಕಾಣಿಸುತ್ತಿಲ್ಲ ಎಂಬ ಧೈರ್ಯ ನಮ್ಮದಾಗಿತ್ತು. ಇನ್ನೇನು ಚೀಲ ತೆಗೆಯುತ್ತಲೇ ಅದೆಲ್ಲಿತ್ತೋ ಒಂದು ಮಂಗ ಹಟಾತ್ತನೆ ಬಂದು ಗುರುಗುಡಲಾರಂಭಿಸಿತು. ಮತ್ತೆ ಬಾಟಲಿಯನ್ನು ಚೀಲದೊಳಗೆ ತುರುಕಿಕೊಂಡು ಹೊರಡಲು ನೋಡಿದರೆ ಆ ಬಾಟಲಿಯನ್ನು ಕೊಡದೇ ಇಲ್ಲಿಂದ ಹೋಗಲು ಬಿಡುವುದಿಲ್ಲ ಎಂಬಂತೆ ಮತ್ತೆರಡು ಮಂಗಗಳು ಧಾಳಿಗೆ ಸಜ್ಜಾಗಿ ನಿಂತಿದ್ದವು. ನಮ್ಮ ಯಾವ ಬೆದರಿಕೆಗೂ ಬಗ್ಗದೇ ಚೀಲವನ್ನು ಕೈಯಿಂದ ಕಿತ್ತುಕೊಂಡು ಅದರಲ್ಲಿದ್ದ ಫ್ರೂಟಿ ಬಾಟಲಿ ತೆಗೆದುಕೊಂಡು ಓಡಿದವು. ಆ ಬಾಟಲಿ ಸೀಲ್ ಆಗಿದೆ, ತೆಕ್ಕೊಡ್ತೀವಿ, ನೀವೆ ಕುಡ್ಕಳಿ ಅಂದರೂ ಕೂಡ ತೆಗೆದುಕೊಂಡು ಓಡಿ ಹೋಗಿ ಹೇಗೆ ಕುಡಿಯುವುದೋ ಗೊತ್ತಾಗದೇ ಕಚ್ಚಿ ತೂತು ಮಾಡಿ ಎಲ್ಲಾ ಸೋರಿಹೋಗುವಂತೆ ಮಣ್ಣು ಪಾಲು ಮಾಡಿ ನಮಗೂ ಇಲ್ಲ ಅವಕ್ಕೂ ಇಲ್ಲ ಮಾಡಿಬಿಟ್ಟವು. ಆರಾಮಾಗಿ ಸೌತೆಕಾಯಿ ಮೆಲ್ಲುತ್ತಲೋ, ಹಣ್ಣಿನ ಹಸ ಕುಡಿಯುತ್ತಲೋ ಬೆಟ್ಟ ಹತ್ತುವುದು ಶಿವಗಂಗೆಯಲ್ಲಿ ಸಾಧ್ಯವೇ ಇಲ್ಲದ ಮಾತು. ಅದೇನಿದ್ದರೂ ಮಂಗಗಳಿಗೇ ಸಲ್ಲತಕ್ಕದ್ದು. ಶಿವಗಂಗೆ ಬೆಟ್ಟದ ಮೇಲೆ ಏನಾದರೂ ತೆಗೆದುಕೊಂಡು ಹೋಗಬೇಕೆಂದರೆ ಬೆನ್ನಿಗೆ ಹಾಕಿಕೊಳ್ಳುವ ಚೀಲಗಳು ಒಳ್ಳೆಯದು. ಅದನ್ನು ಕಿತ್ತುಕೊಳ್ಳಲು ಬಹಳ ಕಷ್ಟ ಎಂದು ಮಂಗಗಳಿಗೆ ತಿಳಿದಿದೆಯೋ ಅಥವಾ ಅದನ್ನು ಬಿಡಿಸಿಕೊಳ್ಳುವಷ್ಟು ಡೆವೆಲಪ್ ಆಗಿಲ್ಲವೋ ಏನೋ ಗೊತ್ತಿಲ್ಲ, ಒಟ್ಟಿನಲ್ಲಿ ಬೆನ್ನಿಗೆ ಹಾಕಿಕೊಂಡ ಚೀಲ ಇದ್ದುದರಲ್ಲಿ ಸೇಫ್! ಆದರೆ ಅದರೊಳಗಿನ ತಿಂಡಿ , ಪಾನೀಯ ಏನಾದರೂ ತೆಗೆದು ಬಾಯಿಗೆ ಹಾಕಿಕೊಳ್ಳಲು ನೋಡಿದಿರೋ ಮಂಗಗಳು ಹಾಜರ್! ಶಿವಗಂಗೆಯ ಮಂಗಗಳಲ್ಲಿ ಗಡವ ಗಂಡು ಮಂಗಗಳ ಸಂಖ್ಯೆ ಜಾಸ್ತಿ ಇರುವುದರಿಂದ ಕಪಿಸೈನ್ಯ ಬಲಶಾಲಿಯಾಗಿದ್ದು ಮನುಷ್ಯರ ಆರ್ಭಟ ಏನೂ ಪ್ರಯೋಜನಕ್ಕೆ ಬರುವುದಿಲ್ಲ.


ಅನಂತರದ್ದು ನಂದಿಬೆಟ್ಟದ ಮಂಗಗಳು. ಇವುಗಳು ಶಿವಗಂಗೆ ಮಂಗಗಳಷ್ಟು ಉಗ್ರ ಸ್ವಭಾವದವಲ್ಲ ಮತ್ತು ಮನುಷ್ಯನ ಬಗ್ಗೆ ಸ್ವಲ್ಪ ಹೆದರಿಕೆಯನ್ನೂ ಇಟ್ಟುಕೊಂಡಿವೆ. ಕೈಯಲ್ಲಿದ್ದ ತಿಂಡಿ, ವಸ್ತುಗಳನ್ನು ನೋಡಿ ತೀರಾ ಯಾರೋ ಕರೆದಂತೆ ಕಿತ್ತುಕೊಳ್ಳಲು ಓಡಿಬರುತ್ತವಾದರೂ ಕೂಡ ಒಂದು ಕೋಲನ್ನೋ, ಕಲ್ಲನ್ನೋ ಕೈಗೆತ್ತಿಕೊಂಡರೆ ಸ್ವಲ್ಪ ದೂರ ಓಡಿಹೋಗುತ್ತವೆ. ಅಲ್ಲೇ ಕೂತು ಹಲ್ಲು ಕಿರಿದು ಹೆದರಿಸಲು ನೋಡುತ್ತವೇಯೇ ಹೊರತು ಹತ್ತಿರ ಬಂದು ಮೈಮೇಲೆ ಎರಗಿ ಸಾಹಸಗಳನ್ನು ಮಾಡಿ ರಿಸ್ಕ್ ತೆಗೆದುಕೊಳ್ಳಲು ಹೋಗುವುದಿಲ್ಲ. ನಾಲ್ಕೈದು ಮಂಗಗಳು ಬಂದರೂ ಕೂಡ ಹೆದರಿಸಿ ಓಡಿಸಬಹುದು. ನಾವು ನಂದಿಬೆಟ್ಟದಲ್ಲಿ ವಿಹರಿಸುವಾಗ ಕೈಯಲ್ಲಿ ದ್ರಾಕ್ಷಿ ಗೊನೆಯಿಟ್ಟುಕೊಂಡು ತಿನ್ನುತ್ತಾ ಒಂದು ಅರ್ಧ ಕಿ.ಮಿ. ದೂರದವರೆಗೂ ಮಂಗಗಳನ್ನು ಬೆದರಿಸಿ ಹತ್ತಿರ ಬರದಂತೆ ತಡೆಯಲು ಯಶಸ್ವಿಯಾದೆವು. ಶಿವಗಂಗೆಯ ಮಂಗಗಳಂತೆ ಇವು ಹಟಕ್ಕೆ ಬಿದ್ದು ಸಾಧಿಸುವುದಿಲ್ಲ, ಪ್ರಯತ್ನ ಪಡುತ್ತವೆ, ಸಿಕ್ಕರೆ ಬಿಡುವುದಿಲ್ಲ. ಇಲ್ಲಿನ ವ್ಯಾಪಾರಸ್ಥರಿಗೆ ಸ್ವಲ್ಪ ಕಷ್ಟ. ಕೋತಿ ಬಂದು ಎತ್ತಿಕೊಂಡು ಹೋಗದಂತೆ ಮೈಯೆಲ್ಲಾ ಕಣ್ಣಾಗಿ ಕಾಯುತ್ತಲೇ ಇರಬೇಕು. ಯಾಕೆಂದರೆ ಇಲ್ಲಿ ಮಂಗಗಳ ವಿಶೇಷವೆಂದರೆ ನಾಯಿ ಜೊತೆಗಿನ ಇವುಗಳ ಗೆಳೆತನ! ಶಿವಗಂಗೆ ಮಂಗಗಳು ನಾಯಿಯನ್ನು ಕಂಡರೆ ಮಾತ್ರ ಹೆದರಿಕೊಂಡು ದೂರ ಹೋಗುತ್ತವೆ. ಆದರೆ ನಂದಿಬೆಟ್ಟದ ಮಂಗಗಳು ನಾಯಿ ಜೊತೆಗೇ ಕುಳಿತು ತಿಂಡಿ ತಿನ್ನುತ್ತವೆ. ನಾಯಿಯೂ ಇವುಗಳನ್ನು ಓಡಿಸುವುದಿಲ್ಲ, ಇವೂ ನಾಯಿ ಇದೆ ಎಂದು ಟೆನ್ಷನ್ ತೆಗೆದುಕೊಳ್ಳುವುದಿಲ್ಲ. ಮೇಲಾಗಿ ಇಲ್ಲಿ ಗಡವ ಮಂಗಗಳು ಕಡಿಮೆ ಇರುವುದರಿಂದ ಕಪಿಸೈನ್ಯ ಅಷ್ಟು ಬಲಶಾಲಿ ಮತ್ತು ಅಪಾಯಕಾರಿಯಾಗಿಲ್ಲ.

ನಂದಿಬೆಟ್ಟದ ಸುತ್ತಮುತ್ತಲೂ ಸ್ವಲ್ಪ ಕಾಡು ಇರುವುದರಿಂದ ಮಂಗಗಳಿಗೆ ಅಲ್ಲಿ ಆಹಾರ ಹುಡುಕಿಕೊಳ್ಳುವ ಅವಕಾಶ ಇದೆ . ಆದರೆ ಶಿವಗಂಗೆಯಲ್ಲಿ ಆ ಅವಕಾಶ ಹೆಚ್ಚು ಇಲ್ಲವಾಗಿದ್ದು ಮನುಷ್ಯನಿಂದ ಆಹಾರ ಪಡೆಯುವ ಅನಿವಾರ್ಯತೆ ಇರುವುದರಿಂದ ಈ ರೀತಿ ಸ್ವಭಾವಗಳ ವ್ಯತ್ಯಾಸ ಬೆಳೆದು ಬಂದಿರಬಹುದು. ಒಟ್ಟಿನಲ್ಲಿ ಬೇರೆ ಬೇರೆ ಸ್ಥಳಗಳಲ್ಲಿ ಮನುಷ್ಯನ ಒಡನಾಟಕ್ಕೆ ಬಿದ್ದ ಮಂಗಗಳ ನಡತೆ ಆಶ್ಚರ್ಯ ಮೂಡಿಸುತ್ತದೆ.

17 ಕಾಮೆಂಟ್‌ಗಳು:

ರಾಜೇಶ್ ನಾಯ್ಕ ಹೇಳಿದರು...

ಅಬ್ಬಾ!! ಈ ೨ ಜಾಗಗಳಿಗೆ ಹೋದವರು, ’ಮಂಗಗಳಿವೆ..ಎಚ್ಚರವಿರಲಿ’ ಎಂದಷ್ಟೇ ಬರೆದಿದ್ದರೇ ವಿನ: ಇಷ್ಟು ವಿವರವಾಗಿ ಅವುಗಳ ಬಗ್ಗೆ ಬರೆದಿರಲಿಲ್ಲ. ಹಸಿವು ತಡೆದುಕೊಂಡೇ ಶಿವಗಂಗೆಯ ತುದಿಗೇರುವುದು ಸೇಫ್ ಎನ್ನಿಸುತ್ತೆ.

Shankar Prasad ಶಂಕರ ಪ್ರಸಾದ ಹೇಳಿದರು...

ಅಣ್ಣಾ, ನೀನೇ ನನ್ನ ಪೂರ್ವಜ ಅಂದ್ರೂ ಕೂಡಾ ಕಾಂಪ್ರೋ ಆಗಲ್ವಾ ಇವು ? ನಮ್ಮ ಮೈಸೂರಿನ ಚಾಮುಂಡಿ ಬೆಟ್ಟದಲ್ಲಿ, ನಂದಿ ಬಳಿ ಕೂಡಾ ಇತ್ತೀಚಿಗೆ ಕೋತಿಗಳ ಕಾಟ ಜಾಸ್ತಿ ಆಗಿದ್ಯಂತೆ. ನಮ್ಮ ಜನರ ಕೋತಿ ಆಟದಿಂದ ಆಗಿರೋದು ಇದು ಅನ್ಸುತ್ತೆ. ಪ್ರಾಣಿಗಳಿಗೆ ತಿನ್ನೋದು ಕೊಡಬೇಡಿ ಅಂತಾ ಹೇಳುದ್ರೂ ಕೂಡಾ ಕೊಡ್ತಾರೆ, ಅವುಗಳು ಕೂಡಾ ಮಾಮೂಲಾಗಿ ಮುಂಚಿನ ಹಾಗೆ ಕಾಡಲ್ಲಿ ಆಹಾರ ಹುಡುಕೋದನ್ನು ಬಿಟ್ಟೂ ಸೋಮಾರಿಗಳಾಗಿ ಈ ಅಭ್ಯಾಸ, ಗೂಂಡಾಗಿರಿ ಶುರು ಮಾಡ್ಕೋತಾವೆ.. ಅಲ್ವಾ ವಿಕ್ಕಿ ?

ಕಟ್ಟೆ ಶಂಕ್ರ

Srinidhi ಹೇಳಿದರು...

ಇಂಥ ಅನುಭವ ಮಥುರಾದಲ್ಲಿ ಆಗಿತ್ತು. ಯಾವ್ದೋ ಪುಟ್ಟ ಧಾಬಾದಲ್ಲಿ ಆಲೂ ಪರಾಠಾ ಸಕತ್ತಾಗಿದೆ ಅಂತ ತಿಂತಾ ಇದ್ರೆ ಮಂಗಣ್ಣ ಬಂದು ಕಿತ್ಕೊಂಡು ಓಡ್ಹೋಗಿದ್ದ! :-)

sunaath ಹೇಳಿದರು...

ಮಂಗನಾಟವಯ್ಯಾ, ಈ ಲೋಕವು ಮಂಗನಾಟವಯ್ಯಾ!

Unknown ಹೇಳಿದರು...

ayyo nammurallu heege agide vikki.

ಅನಾಮಧೇಯ ಹೇಳಿದರು...

ವಿಕಾಸ್‌,
ಮಂಗಗಳಿಗೂ ಸಾಫ್ಟ್‌ವೇರ್‌ ಮಂದಿಯಿಂದ ಪ್ರಭಾವಿತವಾಗಿರಬೇಕು!!! ಚೆಂದದ ಬರಹ. ವಿಕಾಸವಾದಕ್ಕೆ ನಿಜವಾದ ಅರ್ಥ ಕಲ್ಪಿಸುವ ಯತ್ನ ಯಶಸ್ವಿಯಾಗಲಿ!
ಕೋಡ್ಸರ

shivu.k ಹೇಳಿದರು...

ವಿಕಾಶ್,

ಈ ಬಾರಿ ಲೇಖನ ಮಂಗಗಳಿಗಾಗಿ..ವಿಚಾರ ಚೆನ್ನಾಗಿದೆ...
ನೀವು ಹೇಳಿದಂತೆ ಮಂಗಗಳ ಕಾಟ ನಂದಿಬೆಟ್ಟ ಮತ್ತು ಶಿವಗಂಗೆ ಬೆಟ್ಟದಲ್ಲಿ ತುಂಬಾ ಇದೆ...ನಾವು ಕ್ಯಾಮರ ತೆಗೆದುಕೊಂಡು ಹೋದಾಗ ಬೆನ್ನಿಗಿರುವ ಬ್ಯಾಗನ್ನು ತೆಗೆದುಕೊಂಡು ಹೋಗುತ್ತೇವೆ...ಮತ್ತು ನಮ್ಮ ಬಳಿ ಅವು ಬರುವುದಿಲ್ಲ...ಏಕೆಂದರೆ ನಮ್ಮ ದೊಡ್ಡ ಲೆನ್ಸುಗಳು ಯಾವುದೋ ಆಯುದವಿರಬಹುದು ಅಂತ ಅವುಗಳಿಗೆ ಅನ್ನಿಸಿ ನಮ್ಮ ತಂಟೆಗೆ ಬರುವುದಿಲ್ಲ. ಅದ್ರೆ ತಿನ್ನುವ ವಿಚಾರಕ್ಕೆ ಬಂದಾಗ ಮಾತ್ರ ಎಲ್ಲರಿಗೂ ಒಂದೆ ಮಂತ್ರ..ನಾವು ಬಲಿಯಾಗಬೇಕು...
ನಂದಿಬೆಟ್ಟಕ್ಕೆ ಕಳೆದ ಬಾರಿಹೋದಾಗ ಮಲ್ಲಿಕಾರ್ಜುನ ಮಗನ ಕಾರ್ನೆಟ್ಟೋ ಐಸ್‌ಕ್ರೀಮನ್ನೆ ಕಿತ್ತು ಕೊಂಡು ಹೋಗಿತ್ತು ಮಂಗ. ನಾವು ಸಮಾಧಾನಕ್ಕೆ ಅದರ ಫೋಟೋತೆಗೆದು ಬ್ಲಾಗಿನಲ್ಲಿ ಹಾಕಬೇಕಾಯಿತು...

ಧನ್ಯವಾದಗಳು....

Sushrutha Dodderi ಹೇಳಿದರು...
ಲೇಖಕರು ಈ ಕಾಮೆಂಟ್‌ ಅನ್ನು ತೆಗೆದು ಹಾಕಿದ್ದಾರೆ.
Sushrutha Dodderi ಹೇಳಿದರು...

good writeup vikas..

Parisarapremi ಹೇಳಿದರು...

ಹೆ ಹ್ಹೆ ಹ್ಹೆ... ಈ ಶಿವಗಂಗೆಯಲ್ಲಿರುವ ಮಂಗಗಳು ಕೋಲು ತೋರಿಸಿದರೂ ಹೆದರುವುದಿಲ್ಲ ಕಣ್ರೀ, ಮುಂಡೇವು ದೈತ್ಯ ವಂಶದವು.. ;-)

ನಂದಿ ಬೆಟ್ಟದ ಕೋತಿಗಳೂ ಸಹ ಶಿವಗಂಗೆಯ ಕೋತಿಗಳಷ್ಟೇ ರೌಡಿಗಳು ಎಂದು ನನ್ನ ನಿಲುವು. ಒಮ್ಮೆ ಒಬ್ಬನ ಭುಜಕ್ಕೆ ಕಚ್ಚಿ ಅದರ ಕೋರೆ ಹಲ್ಲು ಎರಡು ಇಂಚು ಅವನ ಭುಜದೊಳಕ್ಕೆ ಸಿಕ್ಕಿಹಾಕಿಕೊಂಡು ನಂತರ ಆ ಕೋತಿಯನ್ನು ಕೊಂದು ಆಪರೇಷನ್ ಮಾಡಿ ಆ ಹಲ್ಲನ್ನು ತೆಗೆಯಬೇಕಾಯಿತೆಂದು ಒಂದು ಬಹಳ ಪ್ರಸಿದ್ಧ ಘಟನೆ ನಂದಿಬೆಟ್ಟದಲ್ಲಿ ನೆನಪು ಮಾಡಿಕೊಳ್ಳುತ್ತಾರೆ ಅಲ್ಲಿನ ಒಬ್ಬ ಪುರೋಹಿತರು.

ಶ್ರೀನಿಧಿಯವರು ಹೇಳಿರುವ ಹಾಗೆ ಮಥುರಾದಲ್ಲಿರುವ ಕೋತಿಗಳೇನೂ ಕಡಿಮೆಯಲ್ಲ. ನಾನು ಅಲ್ಲಿಗೆ ಹೋದಾಗ ನಮ್ಮ ಆಟೋ ಡ್ರೈವರು "ನಿಮ್ಮ ಕನ್ನಡಕ ತೆಗೆದಿಟ್ಟು ಹೋಗಿ, ಇಲ್ಲಿನ ಕೋತಿಗಳಿಗೆ ಕನ್ನಡಕ ಕಿತ್ಕೊಳೋದು ಅಭ್ಯಾಸ." ಎಂದಿದ್ದ.

ಸಿದ್ಧರ ಬೆಟ್ಟದ ಕೋತಿಗಳನ್ನೂ ಸೇರಿಸಿಕೊಳ್ಳಿ ನಿಮ್ಮ ಪಟ್ಟಿಗೆ!! ಏನಂತೀರಿ? :-)

ಅನಾಮಧೇಯ ಹೇಳಿದರು...

vikas nanna snehitara bagge mahiti nididdakke dhanyavadagalu, anda hage http://vkbagalkot.blogspot.com nallu badami mangagala photo hakiddeve omme bheti kodi...

Shayari ಹೇಳಿದರು...

ಹಹಹ ಚೆನ್ನಾಗಿ ಬರೆದಿದ್ದೀರ :D
Thank God they did not attack you guys!
Ya, ಮಂಗಗಳ ಕಸರತ್ತು ಒಂದ ಎರಡ ?? ಊರಲ್ಲಿ ಇವುಗಳ ಕಾಟ tadiyaakke ಅಜ್ಜ ಒಂದು gun ಇಟ್ಕೊಂಡಿದ್ರು .ಮೇಣದಲ್ಲೇ ಮುಳುಗಿರುವ ಹಸಿ ಹಲಸಿನಕಾಯಿಯನ್ನ ನೋಡ್ನೋಡ್ತಿದ್ದಂಗೆ guluo ಮಾಡ್ತವೆ ಇವು :O

ಅನಾಮಧೇಯ ಹೇಳಿದರು...

Thanx all.

ಪರಿಸರ ಪ್ರೇಮಿಗಳೇ, ಕೊನೇ ಫೋಟೋ ಸಿದ್ಧರಬೆಟ್ಟದ್ದೇ :)
ಆದ್ರೆ ಅವು ಅಷ್ಟೇನೂ ಗೂಂಡಾಗಳಲ್ಲ ಬಿಡ್ರಿ ಪಾಪ.!
ಸಂಕ್ರಣ್ಣ, ಹುಂ.. ಕರೆಕ್ಟ್, ಹಂಗೇ ಆಗಿರದು.
ಕೋಡ್ಸರ, ಎಲ್ಲಾದ್ರಲ್ಲೂ ಪಾಪ ಸಾಫ್ಟ್ ವೇರ್ ಗಳನ್ನ ಯಾಕ್ರೀ ತರ್ತೀರಾ? ಅವರ ತಲೆಬಿಸಿ ಅವರಿಗಾಗಿದೆ. :)

-vikas

ಸುಪ್ತದೀಪ್ತಿ suptadeepti ಹೇಳಿದರು...

ಸರ್ವೈವಲ್ ಆಫ್ ದ ಫಿಟ್ಟೆಸ್ಟ್!

ಒಳ್ಳೆಯ ವಿವರಣೆಗಳಿಂದ ಕೂಡಿದ ಬರಹ. ಥ್ಯಾಂಕ್ಸ್.

ನಾವು ೧೯೯೯ರಲ್ಲಿ, ಬೆಳಗೊಳ ಬೆಟ್ಟದಿಂದ ಇಳಿಯುವಾಗ ಒಂದು ಮಂಗ ನಮ್ಮ ಮಗನ ಕಡೆ ಗುರ್ರ್ ಅಂದು, ಇವನು ಹೆದರಿ ಕುರ್ರ್ ಅಂದು, ಅದಕ್ಕೆ ಇನ್ನೂ ರೇಗಿ ಇವನ ಹತ್ರ ಬಂದು ಪ್ಯಾಂಟ್ ಹಿಡಿದು ಜೋತಾಡಿತ್ತು. ನಾನು ನನ್ನ ವ್ಯಾನಿಟಿ ಬ್ಯಾಗನ್ನೇ ಬೀಸಿ ಅಂತೂ ಅದನ್ನು ಓಡಿಸುವಲ್ಲಿ ಸಫಲಳಾಗಿದ್ದೆ. ಎದೆ ಹೊಡೆದುಕೊಳ್ಳುತ್ತಿತ್ತು. ಜೋರಾಗಿ ಪರಚಿ-ಕಚ್ಚಿ ಗಾಯ ಮಾಡಿದ್ದರೆ? ಮುಖಕ್ಕೇ ಎರಗಿದ್ದರೆ? ಆಗಿನ ಚಿಂತೆ ಈಗಲೂ ಮೈನಡುಕ ತರುತ್ತದೆ.

ತೇಜಸ್ವಿನಿ ಹೆಗಡೆ ಹೇಳಿದರು...

ವಿಕಾಸ್,

ನಾನೂ ೨ ವರುಷಗಳ ಹಿಂದೆ ನಂದಿಬೆಟ್ಟಕ್ಕೆ ಹೋಗಿದ್ದೆ. ಆಗ ನಂಗೆ ಅಷ್ಟೊಂದು ಕಪಿಸೇನೆಗಳ ಕಾಟ ಗೊತ್ತಾಗಲಿಲ್ಲ. ಈಗ ಅವು ತುಂಬಾ ಕಲಿತಿರಬಹುದು ಅಲ್ಲಿಗೆ ಬರುವ ಮನುಷ್ಯರಿಂದ :) ಎನೇ ಹೇಳು "ಮಂಗನಿಂದ ಮಾನವ" ಎಂಬ ನಾಣ್ನುಡಿ ಇನ್ನು ಹಳತಾಯಿತೇನೋ ಎಂದೆನಿಸುತ್ತಿದೆ. "ಮಾನವನಿಂದ ಮಂಗ"ಕಲಿಯುತ್ತಿರುವ ಕಾಲವಿದು ಅಲ್ಲವೇ? :)

ಉತ್ತಮ ಲೇಖನ.

ಅನಿಕೇತನ ಸುನಿಲ್ ಹೇಳಿದರು...

ಗೆಳೆಯ,
ತುಂಬಾ ಚೆನ್ನಾಗಿ ಗಮನಿಸಿ ಬರೆದಿದ್ದೀಯ,ತುಂಬಾನೇ ಚೆನ್ನಾಗಿದೆ ಗುರುವೇ...
ಅಭಿನಂದನಗಳು :-)
ಸುನಿಲ್

ಪ್ರದೀಪ್ ಹೇಳಿದರು...

ಏನು ಹೇಳೋದು ಸಾರ್.. ಈ ಭೂಮಿ ಎಷ್ಟು ನಮ್ಮದೋ ಅಷ್ಟೇ ಅವರದ್ದೂ ತಾನೆ... ಹೋದ ವಾರ ಬಾದಾಮಿಗೆ ಹೋಗಿದ್ವಿ. ಅಲ್ಲೂ ಅಷ್ಟೇ. ಕೋತಿಯೊಂದು ಹೆಂಗಸಿನ ಕೈಚೀಲವನ್ನು ದೋಚಿ ಅದರೊಳಗಿನ ಸಾಮಾನನ್ನು ಒಂದೊಂದಾಗೇ ಕೆಳಹಾಕ್ತಾ ಇತ್ತು! ಯಾರೇನು ಮಾಡಿದರೂ ಜಗ್ಗಲಿಲ್ಲ! ಅಲ್ಲಿ ಹೋಗುವಾಗಲೇ ಸಿಬ್ಬಂದಿ ಎಚ್ಚರಿಸಿದ್ದರು! ಆದರೂ ಈ ಪಾಡು! :-)