ಶುಕ್ರವಾರ, ಏಪ್ರಿಲ್ 1, 2011

ಶೃಂಗೇರಿಯ ಮೂಗುತಿ ಮೀನು

ಅದು ಹರಿಹರಪುರ. ತುಂಗೆ ತೆಳುವಾಗಿ ಹರಿಯುತ್ತಿದ್ದಾಳೆ. ನಾನು ಮಲಗಿದ್ದೆ ಮಡಿಲಲ್ಲಿ. ಸಣ್ಣ ಸಣ್ಣ ಗುಂಡು ಗುಂಡು ಕಲ್ಲುಗಳ ನಯವಾದ ಹಾಸಿಗೆ.. ಹತ್ತಾರು ಮೃದಂಗಗಳು ಒಂದೇ ಲಯದಲ್ಲಿ ನುಡಿದಂತೆ... ನಾದಮಂಟಪದ ಕಲ್ಲಿನ ಕಂಬಗಳಲ್ಲಿ ಸ್ವರಗಳು ಹೊಮ್ಮಿದಂತೆ ಕಿವಿಗೆ ಹೊಸದೊಂದು ನಾದಮಯ ಲೋಕ... ಹೊರಗಿನಿಂದ ನೀರಿನ ಜುಳು ಜುಳು ಸಂಗೀತ, ಭೋರ್ಗರೆಯುವಾಗ ನೀರಿನ ಅಬ್ಬರದ ಕೂಗನ್ನು ಕೇಳಿದ್ದೆ, ಆದರೆ ನೀರಿನೊಳಗಿನ ಈ ಸಂಗೀತ ಲೋಕದ ಅರಿವಿರಲಿಲ್ಲ. ಇಲ್ಲಿ ಸಮತಟ್ಟಾದ ಹರಿವಿತ್ತು. ಆ ನೀರು ಹರಿಯುವಾಗ ದೊಡ್ಡ ಕಲ್ಲುಗಳನ್ನು ಹತ್ತಿ ಇಳಿದು, ಸಣ್ಣ ಕಲ್ಲುಗಳ ಮೇಲೆ ತೆವಳಿ, ಹೊರಳಾಡಿ, ಪುಟಿದು ಮುಂದೆ ಹೋಗುತ್ತಾ ಸಂಗೀತದ ಹೊನಲನ್ನೂ ಹರಿಸುತ್ತದೆ. ಹೊರಗಿನಿಂದ ಅದು ಕೇಳದು, ಆದರೆ ಮುಳುಗಿದ ನೀರಿನಲ್ಲಿ ಅದು ಗಂಧರ್ವಲೋಕಗಾನ! ಅದೆಷ್ಟು ಹೊತ್ತೋ ಗೊತ್ತಿಲ್ಲ. ಕೇಳುತ್ತಾ ಮಲಗಿದ್ದೆ....

***

ಅವತ್ತಿಗಾಗಲೇ ಶೃಂಗೇರಿಗೆ ಹೋಗದೆ  ಹತ್ತು ವರ್ಷಗಳ ಮೇಲಾಗಿಬಿಟ್ಟಿತ್ತು. ಇದ್ದಕ್ಕಿಂದ್ದತೇ ದೈವಪ್ರೇರಣೆಯಾಗಿ ಶೃಂಗೇರಿಗೆ ಹೋಗಬೇಕೆನಿಸಿತ್ತು. :P ಇಬ್ಬರು ಗೆಳೆಯರಿಗೆ ದೈವಾನುಗ್ರಹದ ಭರವಸೆ ಮೂಡಿಸಿ ಕರೆದುಕೊಂಡು ಅವತ್ತು ಶೃಂಗೇರಿಗೆ ಹೋಗಿ ಇಳಿದಾಗ ಸಂಜೆಯಾಗಿತ್ತು. ಜನವೋ ಜನ. ಉಳಿದುಕೊಳ್ಳಲು ವಸತಿ ಕೇಳಿದರೆ ಎಲ್ಲೂ ಸಿಗಲಿಲ್ಲ. ದೇವಸ್ಥಾನದ ವಸತಿಗಳೆಲ್ಲಾ ತುಂಬಿಹೋಗಿವೆ. ಖಾಸಗಿಯವರದ್ದೂ ತುಂಬಿಹೋಗಿ ಉಳಿದ ಕೆಲವಕ್ಕೆ ಮೂರುಪಟ್ಟು ಬೆಲೆ ಕೊಡಲು ಪೈಪೋಟಿಯಿತ್ತು. ಹೆಂಗಸರು, ಮಕ್ಕಳು-ಮರಿ ಇದ್ದವರಿಗೆ ಆದ್ಯತೆ. ನಮಗ್ಯಾವನು ಕೊಡುತ್ತಾನೆ ರೂಮು? ಇತ್ತೀಚೆಗೆ ಯಾವ ಪುಣ್ಯ ಕ್ಷೇತ್ರಗಳಿಗೆ ಹೋದರೂ ಅಷ್ಟೆ. ರಶ್ಶ್.. ಮೊದಲೆಲ್ಲಾ ಹೀಗಿರಲಿಲ್ಲ , ಜಾತ್ರೆ ಮುಂತಾದ ವಿಶೇಷ ಸಂದರ್ಭಗಳಲ್ಲಿ ಮಾತ್ರ ಜನಜಂಗುಳಿ ಇರುತ್ತಿತ್ತು. ಆದರೆ ಈಗ ಪ್ರತಿ ಶನಿವಾರ ಭಾನುವಾರಗಳೂ ಜಾತ್ರೆ! ಜನರಲ್ಲಿ ದೈವಭಕ್ತಿ ಜಾಸ್ತಿಯಾಗಿ ಹೋಗಿದೆಯಾ? ಗೊತ್ತಿಲ್ಲ. ಹೆಚ್ಚಾಗಿ ಈಗಿನ ಕನೆಕ್ಟಿವಿಟಿ ಇದಕ್ಕೆ ಕಾರಣವಿರಬಹುದು. ಮೊದಲೆಲ್ಲಾ ಪ್ರಯಾಣ ಅಷ್ಟು ಸುಲಭವಿರಲಿಲ್ಲ. ನಾನು ಸಣ್ಣವನಿದ್ದಾಗ ಶಿರಸಿಗೆ ಹೋಗಲು ಮೈಸೂರು-ಯಲ್ಲಾಪುರ ಬಸ್ಸು, ಬೆಂಗಳೂರು-ಕಾರವಾರ ಬಸ್ಸು ಅಂತೆಲ್ಲಾ ಸಮಯ ನೋಡಿಕೊಂಡು ಹೊರಡುತ್ತಿದ್ದುದು ನೆನಪಿದೆ. ಈಗ ಹಾಗಿಲ್ಲ ಎಲ್ಲಿಂದ ಎಲ್ಲಿಗೆ ಬೇಕಾದರೂ ಸಾಕಷ್ಟು ಬಸ್ಸುಗಳಿವೆ. ಅದಿಲ್ಲದಿದ್ದರೆ ಜನರ ಬಳಿ ಸ್ವಂತ/ಬಾಡಿಗೆ ಗಾಡಿಗಳಿವೆ. ಅದಕ್ಕೇ ಇರಬೇಕು, ಓಡಾಟವೂ ಜಾಸ್ತಿಯಾಗಿದೆ. ಅಂದ ಮೇಲೆ ಕೇಳಬೇಕೇ.. ದೇವರೂ ಫುಲ್ ಬಿಜಿ! ಸರಿ.. ಅವತ್ತು ರಾತ್ರಿಯವರೆಗೂ ಎಲ್ಲಿಯೂ ವಸತಿ ವ್ಯವಸ್ಥೆ ಸಿಗದಿದ್ದಾಗ ಇಲ್ಲೇ ಹತ್ತಿರದ ಹಳ್ಳಿಯೊಂದರಲ್ಲಿ ತಮ್ಮ ನೆಂಟರ ಮನೆ ಇದೆ ಅಲ್ಲಿಗೆ ಹೋಗೋಣ ಅಂತ ಒಬ್ಬ ಗೆಳೆಯನೆಂದ. ಮತ್ತೊಬ್ಬ ಬೇಡ ಅಂದ... ಕೊಪ್ಪಕ್ಕೆ ಹೋಗಿಬಿಡೋಣ ಅಂತ ಮತ್ತೊಬ್ಬನೆಂದ, ನಾನು ಬೇಡ ಎಂದೆ. ಅಲ್ಲಿಗೆ ಅಲ್ಲೇ ದೇವಸ್ಥಾನದ ಸುತ್ತಲ ಆವರಣದೊಳಗೆ ಮಲಗುವುದೆಂದು ನಿರ್ಧರಿಸಿದೆವು. ಎಲ್ಲಾದರೆ ನಮಗೇನು,  ಊಟ ಮಾಡಿ ಬಂದು ... ಮಲ್ಗೋಕೆ ಭೂಮ್ ತಾಯಿ ಮಂಚಾ... ಅಂತ ಚಾಪೆ ಹಾಸುವಷ್ಟರಲ್ಲಿ ಗೆಳೆಯನಿಗೆ ಯಾರೋ ಪರಿಚಯದ ಪೋಲೀಸ್ ಒಬ್ಬರು ನೆನಪಾಗಿಬಿಟ್ಟರು. ಅವರನ್ನೊಮ್ಮೆ ಕೇಳಿನೋಡೋಣ ಅಂತ ಫೋನ್ ಮಾಡಲಾಗಿ ಅವರೂ ಸಿಕ್ಕು ಅರ್ಧ ಗಂಟೆಯೊಳಗೆ ನೈಟ್ ಡ್ಯೂಟಿಗೆ ಹೋಗಿದ್ದ ಪೋಲೀಸರ ಕೋಣೆಯ ಕೀಗಳು ನಮ್ಮ ಕೈಲಿದ್ದವು.

ಮಾರನೇ ದಿನ ಸುಖವಾಗಿ ನಿಧಾನಕ್ಕೆ ಎದ್ದು ತಯಾರಾಗಿ ಬಿಗ್ ಬಾಸ್ ಚಂದ್ರಮೌಳೇಶ್ವರನಿಗೂ, ಶಾರದಾಂಬೆಗೂ ಕೈಮುಗಿದು ಸೀದಾ ನೆಡೆದದ್ದು ತುಂಗಾನದಿಯ ಕಡೆಗೆ. ಶೃಂಗೇರಿಯ ಆಕರ್ಷಣೆ ತುಂಗಾನದಿಯ ರಾಶಿ ರಾಶಿ ಮೀನುಗಳು. ಅವುಗಳನ್ನು ನೋಡುತ್ತಾ ಕೂರುವುದು, ಅವುಗಳಿಗೆ ತಿಂಡಿ ತಿನ್ನಿಸುವುದು, ಆಟವಾಡುವುದು, ನೀರಲ್ಲಿ ಕಾಲುಬಿಟ್ಟುಕೊಂಡು ಅವುಗಳಿಂದ ಕಚಗುಳಿ ಕೊಡಿಸಿಕೊಳುವುದು ನನಗಂತೂ ಭಾರೀ ಇಷ್ಟ. ಅಲ್ಲಿ ಎಷ್ಟೋ ಜನ ಮೀನುಗಳೊಂದಿಗೆ ಖುಷಿ ಪಡುತ್ತಿದ್ದರು. ಮಕ್ಕಳು ಮೀನುಗಳನ್ನು ನೋಡಿ ಕುಣಿಯುತ್ತಿದ್ದವು. ಮಂಡಕ್ಕಿ ಎಸೆಯುತ್ತಿದ್ದವು. ಹಿಂಡು ಹಿಂಡು ಮೀನುಗಳು..... ಎಷ್ಟು ಚಂದ... ಇಂತಹುಗಳಿಂದಲೇ ಅಲ್ಲವೇ ಈ ಭೂಮಿ ಇಷ್ಟು ಸುಂದರ...  ನಾನು ಮೂಗುತಿ ಮೀನನ್ನು ಹುಡುಕುತ್ತಿದ್ದೆ.... . ಸಣ್ಣವನಿದ್ದಾಗ ಪ್ರತಿಬಾರಿ ಹೋದಾಗಲೂ ಮೀನಿನ ಗುಂಪಿನಲ್ಲಿ ಕಾಣಿಸುತ್ತಿತ್ತು. ಯಾರೋ ಒಂದು ಮೀನಿಗೆ ಮೂಗುತಿ ರಿಂಗ್ ಹಾಕಿ ಬಿಟ್ಟಿದ್ದರು. ಈ ಸಲ ಅದು ಕಾಣಿಸಲಿಲ್ಲ. ನಾ ಬರ್ತೀನಿ ಅಂತ ಕಾದು ಕೂತಿರತ್ತಾ ಅದು? ಎಷ್ಟು ವರ್ಷ ಆಯಸ್ಸೋ ಏನೋ ಆ ಮೀನಿಗೆ! ಈಗ ಬದುಕಿದೆಯೋ ಇಲ್ವೋ ಗೊತ್ತಿಲ್ಲ. ನಾವಂತೂ ಕೂತಿದ್ದೆವು ಒಂದು ತಾಸು ಅಲ್ಲೇ.  ನದಿಯ ಆಕಡೆ ನರಸಿಂಹ ವನ.  ಅಲ್ಲಿಗೆ ಹೋಗಲು ಸೇತುವೆ ಇಲ್ಲದ ಕಾಲದಲ್ಲಿ ಅಪ್ಪನ ಹೆಗಲ ಮೇಲೆ ಕೂತು ನದಿದಾಟುತ್ತಿದ್ದುದು ನೆನಪಾಯಿತು.. ನರಸಿಂಹ ವನ ತಂಪಾಗಿತ್ತು. ನರಸಿಂಹವನದಲ್ಲೊಂದು ಮಂದಿರ ಮಾಡಿದ್ದಾರೆ. ಅಲ್ಲಿ ಶ್ಶ್... ಸೈಲೆನ್ಸ್.. ಯಾಕೋ ಗೊತ್ತಿಲ್ಲ ಅಂಗಿ ಬಿಚ್ಚಿಕೊಂಡೇ ಒಳಗೆ ಹೋಗಬೇಕು.... ಆ ವನದಲ್ಲಿ ಜಗದ್ಗುರುಗಳ ವಾಸ್ತವ್ಯವಿದೆ.

ಮಧ್ಯಾಹ್ನ ದೇವಸ್ಥಾನದ ಫುಲ್ ಮೀಲ್ಸ್ ಉಂಡು ಶಿವಮೊಗ್ಗದ ದಾರಿ ಕಡೆ ಯೋಚಿಸಿದಾಗ ಗೆಳೆಯನೊಬ್ಬನಿಗೆ ನೆನಪಾದದ್ದು ಹರಿಹರಪುರ! ಶೃಂಗೇರಿ-ಶಿವಮೊಗ್ಗ ದಾರಿಯಲ್ಲೇ ನಡುವೆ ಇದೆ. ಅವನ ಪೂರ್ವಜರ ಊರು ಅದು. ನಮಗೇನು .. ಜೈ ಅಂದೆವು.  ಬಸ್ ಹತ್ತಿದೆವು. ಅಲ್ಲೊಂದು ಮಠವೂ ಇದೆ. ಅಲ್ಲಿಗೆ ಹೋಗೋಣ ಅಂತ ಅವನೆಂದ. ಕೆಳಗೆ ತುಂಗಾನದಿ ಹರಿಯುತ್ತದೆ. ಯಾರೂ ಇಲ್ಲದ ಜಾಗಕ್ಕೆ ಕರೆದುಕೊಂಡು ಹೋಗ್ತೀನಿ ಅಂದ. ಸರಿ ಅಂದೆವು... ಸ್ವಲ್ಪ ದೂರ ನಡೆದು ಗಿಡಮರಗಳ ಸಂದಿ ಹಾಯ್ದು ಹೆಚ್ಚು ಆಳವಿಲ್ಲದ ಜಾಗ ಹುಡುಕಿ ಸೆಟ್ಲಾದೆವು.. ಆ ಇಡೀ ಜಗತ್ತಿನಲ್ಲಿ ನಾವು ನಾಲ್ವರು ಮಾತ್ರ! ನಾವು ಮೂವರು ಮತ್ತು ತುಂಗೆ. ತಾಸುಗಟ್ಟಲೇ ನೀರಿನಲ್ಲಿ ಮಲಗಿ, ಆಡಿ, ಈಜಿ ರಿಲ್ಯಾಕ್ಸ್ ಆದೆವು. ಸಂಜೆಯಾಗುತ್ತಿತ್ತು. ಐದೈದು ನಿಮಿಷಕ್ಕೆ ಬಸ್ಸು ಬರಲು ಅದು ಬೆಂಗಳೂರಲ್ಲ. ಮತ್ತೆ ಶಿವಮೊಗ್ಗ ಬಸ್ಸು ಸಿಗದಿದ್ದರೆ ಕಷ್ಟ ಎಂದುಕೊಂಡು ಅಲ್ಲಿಂದ ಎದ್ದೆವು.. ಹೊರಡುವಾಗ ಬೆನ್ನಿಗೆ ಬ್ಯಾಗ್ ಹಾಕಿಕೊಂಡು ಸುಮ್ಮನೇ ಒಮ್ಮೆ ಹಿಂದಿರುಗಿ ನೋಡಿದೆ. ಹೊಳೆನೀರಿನಲ್ಲಿ ಆ ಮೂಗುತಿ ಮೀನು ಫಳಕ್ಕನೆ ಮಿಂಚಿದಂತಾಯಿತು. ಶೃಂಗೇರಿ ಟ್ರಿಪ್ಪು ಸಂಪೂರ್ಣವಾಗಿತ್ತು.

15 ಕಾಮೆಂಟ್‌ಗಳು:

Sushrutha Dodderi ಹೇಳಿದರು...

Nice.. :-)

Subrahmanya ಹೇಳಿದರು...

ಮಜಾ ಮಾಡಿ.

sunaath ಹೇಳಿದರು...

ಇದು ಅದೃಷ್ಟ! ಭಾವಪೂರ್ಣ ಲೇಖನ.

Sree ಹೇಳಿದರು...

:) cute one, ನಂಗೂ ಆ ಮೂಗುತಿ ಮೀನು ಬಾಲ್ಯದ ನೆನಪು. ಆದ್ರೆ ಅದು ಯಾವಾಗ ಮಾಯಾ ಆಯ್ತೋ ಗೊತ್ತಿಲ್ಲ, ಪ್ರತಿ ವರ್ಷ ತಪ್ಪದೆ ಶೃಂಗೇರಿಗೆ ಹೋಗ್ತಿದ್ರು ಯಾವಾಗಲೋ ಆ ಬಾಲ್ಯದ ಜೊತೆ ಆ ಮೀನೂ ಕಳೆದುಹೊಯಿತೇನೋ...ನಿಂಗೆ ಫಳಕ್ಕನೆ ಮಿಂಚಿ ಕಂಡಿದ್ದು ಕೇಳಿ ಖುಷಿ ಜೊತೆ ಸ್ವಲ್ಪೇ ಸ್ವಲ್ಪ ಹೊಟ್ಟೆಕಿಚ್ಚಾಗ್ತಿದೆ ! :)

ರೂಂ ಬಗ್ಗೆ ಏನೋ ಹೇಳ್ತಾರೆ, ಎಷ್ಟ್ ನಿಜ ಗೊತ್ತಿಲ್ಲ, ಎಲ್ಲ ಪ್ರೈವೇಟ್ lodge ಗಳ ಕೈವಾಡ ಅಂತ. not sure...

ತೇಜಸ್ವಿನಿ ಹೆಗಡೆ ಹೇಳಿದರು...

ವಿಕಾಸ್,

ಈ ಬರಹ ಇಷ್ಟವಾಯ್ತು... :) ನಂಗೂ ಅಪ್ಪ ಮೂಗುತಿ ಮೀನು ತೋರ್‍ಇಸಿದ್ದ ನೆನಪು.. ಆಗ ನಾನು ತುಂಬಾ ಚಿಕ್ಕವಳಿದ್ದೆ... ಆಮೇಲೆ ಎಷ್ಟು ಸಲ ಹೋದಾಗಲೂ ಅದು ಸಿಕ್ಕಿರಲೇ ಇಲ್ಲ... ನಿಂಗೆ ಸಿಕ್ಕಿತಾ ಕೊನೆಗೆ? ಯಾರ ಬಳಿಯಾದರೂ ಆ ಮೂಗುತಿ ಸುಂದರಿಯ ಚಿತ್ರವಿದ್ದರೆ ಕಳುಹಿಸಲು ಹೇಳಬೇಕು... ಹಳೆಯ ನೆನಪುಗಳ ಮೆಲುಕಾಯಿತು...

ಚಿತ್ರಾ ಹೇಳಿದರು...

ಚಂದದ ಬರಹ ವಿಕಾಸ್ ,
ಓದಿ ಖುಷಿಯಾತು .
ಮತ್ತೆ... ಹಿಂತಿರುಗಿ ನೋಡಿದಾಗ ಹೊಳೆದದ್ದು .. ಮೀನಿಂದೆ ಮೂಗುತಿಯಾ?

ಚುಕ್ಕಿಚಿತ್ತಾರ ಹೇಳಿದರು...

ಚಂದದ ಬರಹ

AntharangadaMaathugalu ಹೇಳಿದರು...

ಸುಂದರ ನೆನಪುಗಳ ಬರಹ. ಮೂಗುತಿ ಮೀನು ನೋಡಲು ಕಾದು ಕುಳಿತಿದ್ದು ನೆನಪಾಯ್ತು...

ಶ್ಯಾಮಲ

ಪೂರ್ಣಿಮಾ ಭಟ್ಟ, ಸಣ್ಣಕೇರಿ ಹೇಳಿದರು...

ವಿಕಾಸ್, ಚಿತ್ರಕ್ಕನ ಕಮೆಂಟಿಗೆ ನಂದೂ ‘ಡಿಟೋ’.. :-)

ತೇಜಸ್ವಿನಿ ಹೆಗಡೆ ಹೇಳಿದರು...

@ಚಿತ್ರಕ್ಕ...

ವ್ಹಾ ವ್ಹಾ... ಸೂಪರ್ ಕಮೆಂಟು ನಿಂದು :):-p

ಸುಧೇಶ್ ಶೆಟ್ಟಿ ಹೇಳಿದರು...

ಮೂಗುತಿ ಮೀನು ನೋಡಿದ ನೆನಪು ನನಗೂ ಇದೆ... :) ನಾನು ಓದಿದ ಪ್ರೈಮರಿ ಸ್ಕೂಲಿನಲ್ಲಿ by default ಪ್ರತಿ ವರ್ಷ ಶೃ೦ಗೇರಿಗೆ ವಾರ್ಷಿಕ್ ಟ್ರಿಪ್ ಹೋಗುತ್ತಿದ್ದುದು :)

ಪ್ರಶಾಂತ ಯಾಳವಾರಮಠ ಹೇಳಿದರು...

ವಿಕಾಸ ಬರಹ ತುಂಬಾ ಚೆನ್ನಾಗಿದೆ... ಮಲೆನಾಡಿನ ಬಗ್ಗೆ ಎಷ್ಟು ಬರೆದರೂ ಕಡಿಮೇನೆ!
ಹಾಗೆ ಹುಬ್ಬಳ್ಳಿಯ ಸಿದ್ಧಾರೂಡ ಮಠದಲ್ಲಿ ಮೀನುಗಳಿಗೆ ಚೂರುಮುರಿ ತಿನ್ನಿಸುತ್ತಿದ್ದದ್ದು ನೆನಪಿಗೆ ಬಂತು :

ವನಿತಾ / Vanitha ಹೇಳಿದರು...

Nice Vikas, ಫಸ್ಟ್ ಟೈಮ್ ಕೇಳ್ತಾ ಇದ್ದೇನೆ ಮೂಗುತಿ ಮೀನಿನ ಬಗ್ಗೆ..!'ತೋರಣ ಗಣಪತಿ' ದೇವರತ್ತಿರ
ಏನು ಬೇಡ್ಕೊಂದ್ರೂ ಸತ್ಯ ಆಗ್ತಂತೆ!ನನ್ನ ಫ್ರೆಂಡ್ ಹೇಳಿದ್ದು. ದೇವಸ್ಥಾನದ ಊಟಕ್ಕೆ 'ಫುಲ್ ಮೀಲ್ಸ್' ಎನ್ನುವ ಪದ ಹಿಡಿಸ್ಲಿಲ್ಲ!

ಶಿವಪ್ರಕಾಶ್ ಹೇಳಿದರು...

ಪ್ರವಾಸ ಕಥನ ಚನ್ನಾಗಿತ್ತು.... :)

ವಿ.ರಾ.ಹೆ. ಹೇಳಿದರು...

@ ಸುಶ್ರುತ, ಸುಬ್ರಹ್ಮಣ್ಯ, ಸುನಾಥಕಾಕಾ, ತೇಜಕ್ಕ, ಚುಕ್ಕಿ ಚಿತ್ತಾರ, ಶ್ಯಾಮಲಾ, ಸುಧೇಶ, ಪ್ರಶಾಂತ, ಶಿವಪ್ರಕಾಶ್ ನಿಮ್ಮೆಲ್ಲರಿಗೂ ಧನ್ಯವಾದಗಳು

@ಶ್ರೀ, ಥ್ಯಾಂಕ್ಸ್.. ಈ ಸಲ ಹೋದಾಗ ಹುಡುಕಿ, ಕಂಡ್ರೆ ಹೇಳಿ.

@ಚಿತ್ರಾ, ಹ್ಹ ಹ್ಹ..ನಂಗೂ ಅದೇ ಡೌಟಿದೆ! :)
@ಪೂರ್ಣಿಮಾ, ನಿಂಗೂ ಚಿತ್ರಕ್ಕಂಗೆ ಕೊಟ್ಟಿರುವ ಉತ್ತರವೇ ಡಿಟೋ.. :D

@ವನಿತಾ, ಹೊಟ್ಟೆ ತುಂಬಾ ಊಟ ಎನ್ನುವುದಕ್ಕೆ ಫುಲ್ ಮೀಲ್ಸ್ ಅಂದೆ ಅಷ್ಟೆ. :P ಥ್ಯಾಂಕ್ಸ್