ಸೋಮವಾರ, ಜನವರಿ 18, 2016

ಲಂಕಾವಿ ಲಾಲಿತ್ಯ - ಮಲೇಶಿಯಾದ ಪುಟ್ಟ ದ್ವೀಪಕ್ಕೊಂದು ಭೇಟಿ



ಕಿಟಕಿಯಿಂದ ಕಾಣುತ್ತಿದ್ದ ನೀಲಿಸಮುದ್ರ, ಮರಳ ತೀರಗಳು, ದಟ್ಟಕಾಡು, ಗುಡ್ಡಬೆಟ್ಟಗಳು ಹತ್ತಿರಹತ್ತಿರವಾಗುತ್ತಾ ನಮ್ಮ ವಿಮಾನ ಪುಟ್ಟ ನಿಲ್ದಾಣವೊಂದರಲ್ಲಿ ಇಳಿಯಿತು. ಸಿಂಗಾಪುರದಿಂದ ಹೊರಟ ನಾವು ಒಂದೂವರೆ ತಾಸಿನ ಪ್ರಯಾಣದ ನಂತರ ಬಂದಿಳಿದದ್ದು ಲಂಕಾವಿ ಎಂಬ ದ್ವೀಪಕ್ಕೆ. ಅಲ್ಲಿಂದ ಟ್ಯಾಕ್ಸಿಯಲ್ಲಿ ಹೊರಟೆವು. ದಾರಿಯಲ್ಲಿ ಬರುವಾಗ ಪಕ್ಕಾ ನಮ್ಮ ಮಲೆನಾಡಿನ ವಾತಾವರಣವೇ ಅಲ್ಲಿತ್ತು. ಎಲ್ಲೆಲ್ಲೂ ದಟ್ಟ ಹಸಿರು, ಅಲ್ಲಲ್ಲಿ ತೆಂಗಿನಮರಗಳು, ಪುಟ್ಟಹಳ್ಳಿಗಳು, ದೂರದೂರದಲ್ಲಿ ಕಾಣುವ ಹೆಂಚಿನ ಮನೆಗಳು, ಭತ್ತದಗದ್ದೆಗಳು, ಹಸಿರು ಬಯಲು, ಸಮುದ್ರದ ಕಡೆಯಿಂದ ಬೀಸುತ್ತಿದ್ದ ಗಾಳಿ ಆಹ್ಲಾದಕರ ವಾತಾವರಣ ನಿರ್ಮಿಸಿದ್ದವು. ಇಂತಹ ಪರಿಸರವನ್ನು ಸವಿಯುತ್ತಾ ಚಂದದ ರಸ್ತೆಯಲ್ಲಿ ಪ್ರಯಾಣಿಸುತ್ತಿದ್ದಂತೆ ಆ ಸುಂದರ ಪ್ರಕೃತಿಯಲ್ಲಿ ಮನಸ್ಸು ಕಳೆದುಹೋಗಿತ್ತು.

ಮಲೇಶಿಯಾದ ಮುಖ್ಯಭೂಮಿಯ ಪಶ್ಚಿಮತೀರದಲ್ಲಿರುವ ಲಂಕಾವಿ ಸುಮಾರು ೪೮೦ ಚದರ ಕಿಮೀ ವಿಸ್ತೀರ್ಣದ ಒಂದು ದ್ವೀಪ. ಹಲವು ಆಕರ್ಷಣೆಗಳ ಪ್ರವಾಸಿ ತಾಣ. ಜನಸಂಖ್ಯೆ ಒಂದುಲಕ್ಷ. ಲಂಕಾವಿ ಎಂದರೆ ಮಲಯ ಭಾಷೆಯಲ್ಲಿ ಕೆಂಪುಕಂದು ಹದ್ದು ಎಂದು ಅರ್ಥವಂತೆ. ಈ ದ್ವೀಪದ ಆಸುಪಾಸಿನಲ್ಲಿ ಇನ್ನೂ ಅನೇಕ ಸಣ್ಣ ಸಣ್ಣ ದ್ವೀಪಗಳಿವೆ. ಲಂಕಾವಿ ದ್ವೀಪದ ಬಹುತೇಕ ಭಾಗ ಕಾಡಿನಿಂದ ಆವೃತವಾಗಿದೆ. ಚೆನಾಂಗ್ ಮತ್ತು ಕುಹಾ ಪಟ್ಟಣ ಇವೆರಡು ಜನವಸತಿ ಮತ್ತು ವಾಣಿಜ್ಯ ಚಟುವಟಿಕೆಗಳ ಪ್ರದೇಶಗಳು. ಚೆನಾಂಗ್ ಪ್ರದೇಶದಲ್ಲಿದ್ದ ನಮ್ಮ ಹೊಟೆಲನ್ನು ತಲುಪಿ ದಣಿವಾರಿಸಿಕೊಂಡೆವು. ಇದು ಸಮುದ್ರ ತೀರದ ಪಕ್ಕದಲ್ಲೇ ಇರುವ ಒಂದು ಸುಂದರ ಪ್ರದೇಶ. ರಸ್ತೆಯುದ್ದಕ್ಕೂ ಸೀಫುಡ್ ಹೋಟೆಲ್ಲುಗಳು, ಬಟ್ಟೆ ಅಂಗಡಿಗಳು, ಪ್ರವಾಸಿ ಏಜೆನ್ಸಿಗಳು, ಕರೆನ್ಸಿ ವಿನಿಮಯ ಕೇಂದ್ರಗಳಿವೆ. ಚೆನಾಂಗ್ ಬೀಚ್ ಎಂಬ ಬಿಳಿಮರಳಿನ ತೀರ ಇಲ್ಲಿನ ಮುಖ್ಯ ಆಕರ್ಷಣೆ. ಅನೇಕ ರೀತಿಯ ಜಲಕ್ರೀಡೆಗಳು, ಪ್ಯಾರಾಸೇಲಿಂಗ್ ಮುಂತಾದ ಚಟುವಟಿಕೆಗಳು ನಡೆಯುತ್ತಿರುತ್ತವೆ. ಸಾಯಂಕಾಲ ಈ ಬೀಚಿನಲ್ಲಿ ಕಳೆದೆವು. ಸೀಫುಡ್ ಪ್ರಿಯರಿಗೇನೋ ಈ ದ್ವೀಪ ಸ್ವರ್ಗ. ಆದರೆ ನಾವು ಸಸ್ಯಾಹಾರ ಹುಡುಕಬೇಕಿತ್ತು. ಅಲ್ಲಿ ವಿಚಾರಿಸಿದಾಗ ಅಲ್ಲಿ ಮೂರ್ನಾಲ್ಕು ಇಂಡಿಯನ್ ಹೊಟೆಲ್ ಗಳಿರುವುದು ತಿಳಿಯಿತು. ಒಂದು ಇಂಡಿಯನ್ ಹೊಟೆಲ್ ಹೊಕ್ಕು ರಾತ್ರಿ ಊಟ ಮುಗಿಸಿದೆವು.

Sky-Bridge
ಲಂಕಾವಿ ಒಂದು ಡ್ಯೂಟಿ ಫ್ರೀ ದ್ವೀಪ. ಅಂದರೆ ಇಲ್ಲಿ ಕೊಳ್ಳುವ ವಸ್ತುಗಳಿಗೆ ತೆರಿಗೆ ಇಲ್ಲ. ಶಾಪಿಂಗ್ ಪ್ರಿಯರಿಗೆ ಇಲ್ಲಿ ಪುಟ್ಟ ಅಂಗಡಿಗಳಿಂದ ಹಿಡಿದು ದೊಡ್ಡ ಮಾಲ್ ಗಳು ಇವೆ. ಎಲೆಕ್ಟ್ರಾನಿಕ್ ಸಾಮಗ್ರಿಗಳಿಂದ ಹಿಡಿದು ಎಲ್ಲಾ ವಸ್ತುಗಳೂ ಸ್ವಲ್ಪ ಕಡಿಮೆ ಬೆಲೆಯಲ್ಲಿ ದೊರೆಯುತ್ತವೆ. ಲಂಕಾವಿ ದ್ವೀಪದಲ್ಲಿ ಸಾರ್ವಜನಿಕ ಸಾರಿಗೆ ಇಲ್ಲ. ಆದರೆ ದುಬಾರಿಯಲ್ಲದ ದರದಲ್ಲಿ ದಿನದ ಬಾಡಿಗೆ ಲೆಕ್ಕದಲ್ಲಿ ಮೋಟಾರ್ ಸೈಕಲ್ಲುಗಳು, ಕಾರುಗಳು ದೊರೆಯುತ್ತವೆ. ನಿಗದಿತ ದರದ ಟ್ಯಾಕ್ಸಿಗಳೂ ಲಭ್ಯ. ಮರುದಿನ ಓರಿಯಂಟಲ್ ವಿಲೇಜ್ ಎಂಬ ಪ್ರದೇಶಕ್ಕೆ ಹೋದೆವು. ಅದು ಪ್ರಸಿದ್ಧ ಕೇಬಲ್ ಕಾರ್ ಮತ್ತು ಸ್ಕೈ ಬ್ರಿಡ್ಜ್ ಇರುವ ಜಾಗ. ಸಾವಿರಾರು ಅಡಿಗಳ ಎತ್ತರದಲ್ಲಿ ಚಲಿಸುವ ಕೇಬಲ್ ಕಾರ್ ಗಳು ಬೆಟ್ಟದಿಂದ ಬೆಟ್ಟಕ್ಕೆ ನಮ್ಮನ್ನು ಎತ್ತರೆತ್ತರಕ್ಕೆ ಕರೆದೊಯ್ಯುತ್ತವೆ. ಈ ಸ್ಕೈಕ್ಯಾಬ್ ಗಳಿಂದ ಸಮುದ್ರ ತೀರಗಳ, ಎತ್ತರ ಬೆಟ್ಟಗಳ, ದಟ್ಟ ಕಾಡಿನ ವಿಹಂಗಮ ದೃಶ್ಯಗಳು ಕಾಣುತ್ತವೆ. ಇಲ್ಲಿ ೭೦೦ ಮೀಟರ್ ಎತ್ತರದಲ್ಲಿ ಸ್ಕೈ ಬ್ರಿಡ್ಜ್ ಎಂಬ ತೂಗುಸೇತುವೆ ಇದೆ. ಇದನ್ನೆಲ್ಲಾ ನೋಡಿ ಮುಗಿಸಿ ಪುನಃ ಚೆನಾಂಗ್ ಪ್ರದೇಶಕ್ಕೆ ಬಂದು ಅಂಡರ್ ವಾಟರ್ ವರ್ಲ್ಡ್ ಗೆ ಹೋದೆವು. ಇಲ್ಲಿ ನೂರಾರು ರೀತಿಯ ಮೀನುಗಳನ್ನು, ಸಮುದ್ರ ಜೀವಿಗಳನ್ನು ಸಂಗ್ರಹಿಸಿಟ್ಟಿದ್ದಾರೆ.

ಲಂಕಾವಿಯಲ್ಲಿ ಅನೇಕ ಪ್ರವಾಸಿ ತಾಣಗಳಿವೆ. ಹಲವು ಸುಂದರ ಬೀಚುಗಳು, ಕ್ರೊಕೊಡೈಲ್ ಪಾರ್ಕ್, ವೈಲ್ಡ್ ಲೈಫ್ ಪಾರ್ಕ್, ಬರ್ಡ್ ಪಾರ್ಕ್, ಮ್ಯೂಸಿಯಂ, ಗುನುಂಗ್ ರಾಯ ಎನ್ನುವ ರಮಣೀಯ ಬೆಟ್ಟದ ತುದಿ, ಮೆರೈನ್ ಪಾರ್ಕ್ ಮುಂತಾದ ತಾಣಗಳಿವೆ. ಪ್ರವಾಸಿ ಏಜೆನ್ಸಿಗಳ ಮೂಲಕ ಐಲ್ಯಾಂಡ್ ಹಾಪಿಂಗ್, ಟ್ರೆಕ್ಕಿಂಗ್, ಸ್ಕೂಬಾ ಡೈಬಿಂಗ್ ಮುಂತಾದ ಹಲವು ತರಹದ ಚಟುವಟಿಕೆಗಳಿವೆ. ಪ್ರವಾಸಿಗರು ತಮ್ಮ ಸಮಯ ಮತ್ತು ಖರ್ಚಿನ ಆಧಾರದಲ್ಲಿ ಯೋಜನೆ ಹಾಕಿಕೊಳ್ಳಬಹುದು.

Icon of Langkawi

ಕೊನೆಯ ದಿನ ಅಲ್ಲಿಂದ ನಾವು ಕುಹಾ ಪಟ್ಟಣಕ್ಕೆ ಹೋದೆವು. ಪಟ್ಟಣದಲ್ಲಿ ಸುತ್ತಾಡಿ ಲಂಕಾವಿಯ ನೆನಪಿಗೆ ಸಣ್ಣದೊಂದು ಶಾಪಿಂಗನ್ನೂ ನಡೆಸಿ ಒಂದು ದಕ್ಷಿಣ ಭಾರತೀಯ ಶೈಲಿಯ ಹೊಟೆಲ್ ನಲ್ಲಿ ಬಾಳೆ ಎಲೆಯ ಊಟ ಮಾಡಿ ಲಂಕಾವಿ ಫೆರ್ರಿ ನಿಲ್ದಾಣದ ಸಮೀಪದಲ್ಲಿರುವ ಪ್ರಸಿದ್ಧ ಹದ್ದಿನ ಪ್ರತಿಮೆಗೆ ಹೋದೆವು. ಅದನ್ನು ನೋಡಿಕೊಂಡು ಲಂಕಾವಿಗೆ ವಿದಾಯ ಹೇಳಿ ಫಾಸ್ಟ್ ಫೆರ್ರಿಯ ಮೂಲಕ ’ಪಿನಾಂಗ್’ ದ್ವೀಪಕ್ಕೆ ಹೊರಟೆವು.

ಲಂಕಾವಿಗೆ ಹೋಗುವುದು ಹೇಗೆ?
ಲಂಕಾವಿಗೆ ತಲುಪಲು ವಾಯು ಮತ್ತು ಜಲಮಾರ್ಗಗಳಿವೆ. ಕೌಲಾಲಂಪುರದಿಂದ, ಸಿಂಗಾಪುರದಿಂದ ನೇರ ವಿಮಾನಗಳಿವೆ. ಮಲೇಶಿಯಾದ ಮುಖ್ಯಭೂಮಿಯ ಕೌಲಾ ಪೆರ್ಲಿಸ್, ಕೌಲಾ ಕೇದಾಹ್ ಎಂಬಲ್ಲಿಂದ ಫೆರ್ರಿಗಳ ಮೂಲಕ ಜಲಮಾರ್ಗದಲ್ಲಿ ಪ್ರಯಾಣಿಸಿ ತಲುಪಬಹುದು. ಪಿನಾಂಗ್ ದ್ವೀಪದಿಂದಲೂ ಮತ್ತು ಥೈಲಾಂಡಿನಿಂದಲೂ ಫೆರ್ರಿ ಸಾರಿಗೆ ಇದೆ.  

10ಜನವರಿ2016ರ 'ವಿಜಯ ಕರ್ನಾಟಕ'ದಲ್ಲಿ ಪ್ರಕಟವಾದ ಬರಹ.


ಕಾಮೆಂಟ್‌ಗಳಿಲ್ಲ: