ಸೋಮವಾರ, ಏಪ್ರಿಲ್ 11, 2016

'ಫೋಟೋ ಕ್ಲಿಕ್ಕಿಸುವ ಮುನ್ನ' - ಪುಸ್ತಕ ಪರಿಚಯ

ನನಗೆ ಫೋಟೋಗ್ರಫಿಯಲ್ಲಿ ಯಾವುದೇ ಅಭ್ಯಾಸ ಇಲ್ಲವಾದರೂ ಅದರ ಬಗ್ಗೆ ವಿಶೇಷ ಆಸಕ್ತಿ, ಕುತೂಹಲವಂತೂ ಇದೆ. ಆದರೆ ಕಂಡಕಂಡಲ್ಲಿ ಫೋಟೋ ತೆಗೆಯಲು ನಿಲ್ಲುವ, ಇಪ್ಪತ್ತು ಸಾರಿ ಕ್ಲಿಕ್ಕಿಸಿದ್ದನ್ನೇ ಕ್ಲಿಕ್ಕಿಸುವ, ಕಾರ್ಯಕ್ರಮಗಳಲ್ಲಿ ಅಡ್ಡಡ್ದ ಬರುವ ಫೋಟೋಗ್ರಾಫರುಗಳೆಂದರೆ ಒಂಥರಾ ಕಿರಿಕಿರಿ. ಕೈಯಲ್ಲಿ ಡಿಎಸ್ಸೆಲ್ಲಾರ್ ಕ್ಯಾಮೆರಾ ಇದೆ ಎಂದು ಕೆಲವರದ್ದು ಸುಮ್ಮನೇ ಫೋಟೋಗ್ರಫಿ. ಆದರೆ ಸೀರಿಯಸ್ ಪೋಟೋಗ್ರಫಿಯ ವಿಚಾರವೇ ಬೇರೆ ಎಂಬುದು ನಿಜ. ಹಾಗಾಗಿ ನನಗೆ ಅದರ ಬಗ್ಗೆ ತಿಳಿದುಕೊಳ್ಳಬೇಕು ಎಂದೆನಿಸಿದ್ದರೂ ಅವರಿವರಿಂದ ಸ್ವಲ್ಪ ಸ್ವಲ್ಪ ಕೇಳಿ ಗೊತ್ತಿತ್ತೇ ಹೊರತು ಹೆಚ್ಚಿನ ಮಾಹಿತಿ ತಿಳಿದಿರಲಿಲ್ಲ.

ವೃತ್ತಿ ಮತ್ತು ಪ್ರವೃತ್ತಿಯಲ್ಲಿ ಫೋಟೋಗ್ರಾಫರ್ ಆಗಿರುವ 'ಶಿವು.ಕೆ' ಅವರಿಂದ ರಚಿತವಾದ ’ಫೋಟೋ ಕ್ಲಿಕ್ಕಿಸುವ ಮುನ್ನ’ ಪುಸ್ತಕ ೨೦೧೫ರ ಡಿಸೆಂಬರ್ ತಿಂಗಳಿನಲ್ಲಿ ಬಿಡುಗಡೆಯಾಯಿತು. ಇಂತಹ ಅವಕಾಶ ಬಿಡುವುದು ತರವಲ್ಲ ಎಂದು ಪುಸ್ತಕ ಖರೀದಿಸಿದೆ. ಅದರಲ್ಲಿರುವ ಅಧ್ಯಾಯಗಳನ್ನು ಒಂದೊಂದಾಗಿ ಓದಿಮುಗಿಸುತ್ತಿದ್ದಂತೆಯೇ ನನ್ನಲ್ಲಿ ಫೋಟೋಗ್ರಫಿ ಬಗ್ಗೆ ಒಂದು ಸ್ಪಷ್ಟತೆ ಮೂಡತೊಡಗಿತು. ಪಿಕ್ಟೋರಿಯಲ್ ಪೋಟೋಗ್ರಫಿಯ (ಇದಕ್ಕೆ ಭಾವಾಭಿವ್ಯಂಜಕ ಛಾಯಾಚಿತ್ರ ಕಲೆ ಎಂಬ ಭಯಂಕರ ಪದ ಇದೆ) ವಿವರಣೆಗಳನ್ನು ಓದಿ ಒಂದು ಫೋಟೋ 'ಚೆನ್ನಾಗಿದೆ' ಎಂದೆನಿಸಿಕೊಳ್ಳಬೇಕಾದರೆ ಏನಿರುತ್ತದೆ ಎಂಬುದು ತಿಳಿಯಿತು. ಇದರ ಜೊತೆ ಮ್ಯಾಕ್ರೋ, ಕ್ಯಾಂಡಿಡ್ ಮುಂತಾದ ಫೋಟೋಗ್ರಫಿಯ ವಿಧಗಳ ಬಗ್ಗೆ ಸರಳ ವಿವರಣೆಯ ಅಧ್ಯಾಯಗಳು ಚೆನ್ನಾಗಿ ಓದಿಸಿಕೊಂಡು ಅವುಗಳ ಬಗ್ಗೆ ತಿಳಿಸಿಕೊಟ್ಟವು. ಸ್ವಲ್ಪ ಬೌನ್ಸರ್ ಆಗಿದ್ದು ಅಂದರೆ ಕ್ಯಾಮೆರಾ ಲೆನ್ಸುಗಳ ತಾಂತ್ರಿಕ ವಿವರಗಳು. ಬಹುಶಃ ಅದನ್ನು ಕ್ಯಾಮೆರಾಗಳನ್ನು ಬಳಸಿಯೇ ತಿಳಿದುಕೊಳ್ಳಬೇಕೆನಿಸುತ್ತದೆ! ವಿಶೇಷವಾಗಿ ಇಷ್ಟವಾದುದ್ದೆಂದರೆ ನೇಚರ್ ಫೋಟೋಗ್ರಫಿ ಬಗ್ಗೆಯ ಅಧ್ಯಾಯ. ಅದನ್ನು ಓದುತ್ತಾ ಹೋದರೆ ಒಬ್ಬ ಫೋಟೋಗ್ರಾಫರನ ಪ್ರಯತ್ನದ ಬಗ್ಗೆ ಆಶ್ಚರ್ಯ ಮತ್ತು ಗೌರವ ಎರಡೂ ಉಂಟಾಗುತ್ತದೆ, ಜೊತೆಗೆ ಫೋಟೋಗ್ರಫಿ ಎಂಬುದು ಎಂತಹ ಕಲೆ ಎನ್ನುವುದೂ ತಿಳಿಯುತ್ತದೆ. ಪುಸ್ತಕದಲ್ಲಿ ನೇಚರ್ ಫೋಟೋಗ್ರಾಫಿಯ ವಿವರಣೆ ಬಹಳ ಚೆನ್ನಾಗಿ ಮೂಡಿಬಂದಿದೆ. ಲೇಖಕರು ತಮ್ಮದೇ ಹಲವು ಫೋಟೋಗಳ ಜೊತೆ ಇನ್ನೂ ಇತರ ಕೆಲವು ಪರಿಣಿತ ಫೋಟೋಗ್ರಾಫರುಗಳ ಫೋಟೋಗಳನ್ನು ಬಣ್ಣದಲ್ಲಿ ಮುದ್ರಿಸಿ ಅದನ್ನು ಉದಾಹರಣೆಯಾಗಿಟ್ಟುಕೊಂಡು ವಿವರಣೆಗಳನ್ನು ಕೊಡುತ್ತಾ ಹೋಗಿರುವುದರಿಂದ ಅರ್ಥಮಾಡಿಕೊಳ್ಳುವುದೂ ಸುಲಭವಾಯಿತು. ಮುನ್ನಾರ್ ನಲ್ಲಿ ಕ್ಲಿಕ್ಕಿಸಿದ ಫೋಟೋ ಒಂದರ ಮೂಲಕ ಫೋಟೋ ಒಂದನ್ನು ಓದುವುದು ಹೇಗೆ ಎಂಬ ವಿವರಣೆಯೂ ಬಹಳ ಇಷ್ಟವಾಯಿತಲ್ಲದೇ ಶಾಲೆ ಪುಸ್ತಕದ ಸಚಿತ್ರ ವಿವರಣೆಯ ಪಾಠದಂತೆ ಅರ್ಥವಾಯಿತು.

ಒಂದಂತೂ ನಿಜ, ನಾವು ಫೋಟೋಗ್ರಫಿ ಮಾಡುತ್ತಿವೋ ಬಿಡುತ್ತೀವೋ ಅದು ಬೇರೆ ವಿಷ್ಯ. ಆದರೆ ಫೋಟೋಗ್ರಫಿ ಸಂಬಂಧಿತ ಹಲವಾರು ವಿಷಯಗಳಿಂದ ತುಂಬಿದ ಈ ಪುಸ್ತಕ ಓದಿದರೆ ಫೋಟೋಗ್ರಫಿ ಎಂಬ ಆಸಕ್ತಿಕರ ವಿಷಯದ ಬಗ್ಗೆ ತಿಳಿದುಕೊಳ್ಳುವ ಲಾಭವಂತೂ ಖಂಡಿತ. ಕ್ಯಾಮೆರಾದಲ್ಲಿ ಫೋಟೋ ಕ್ಲಿಕ್ಕಿಸುವ ಮುನ್ನ ಮನಸ್ಸಿನಲ್ಲೇ ಫೋಟೋಗಳನ್ನು ಕ್ಲಿಕ್ಕಿಸುವುದಕ್ಕೆ ಶುರುವಾಗುವುದು ಫೋಟೋಗ್ರಫಿಯ ಲಕ್ಷಣವೆನ್ನುವುದನ್ನು ಯಶಸ್ವಿಯಾಗಿ ಓದುಗನಿಗೆ ದಾಟಿಸುವಂತಹ ಈ ಪುಸ್ತಕ ಫೋಟೋಗ್ರಫಿಯ ಆಸಕ್ತಿಗೆ, ಕಲಿಕೆಗಂತೂ ಒಳ್ಳೆಯ ಮುನ್ನುಡಿಯಾಗಬಲ್ಲುದು.

ಇಷ್ಟೆಲ್ಲಾ ಹೇಳಿದ ಮೇಲೆ ಇನ್ನೊಂದು ವಿಷಯ ಹೇಳಬೇಕು. ದಪ್ಪಕಾಗದವನ್ನು ಬಳಸಿ ಹಲವಾರು ಚಿತ್ರಗಳನ್ನು ಮುದ್ರಿಸಿರುವುದರಿಂದ ಸಹಜವಾಗಿಯೇ ಪುಸ್ತಕದ ಬೆಲೆ ಹೆಚ್ಚಿದೆ. ಆದರೆ ಬೆಲೆಗೆ ತಕ್ಕ content ಕೂಡ ಇದೆ. ಕನ್ನಡದಲ್ಲಿ ಇಂತಹ ಪುಸ್ತಕ ಬರೆದು ಪ್ರಕಟಿಸಿದ ಶಿವು (Shivu KA) ಅವರಿಗೆ ತಡವಾದರೂ ವಿಶೇಷ ಅಭಿನಂದನೆ, ಧನ್ಯವಾದ ಹೇಳಲೇಬೇಕು.  ಅಂದಹಾಗೆ, ಪುಸ್ತಕದ ಮುಖಪುಟದಲ್ಲಿ ಲೇಖಕರ ಹೆಸರಿನ ಜೊತೆ ಕಾಣುತ್ತಿರುವ EFAIP, ARPS ಅಂದ್ರೆ ಅದ್ಯಾವ ಡಿಗ್ರಿಗಳು ಅಂತ ಸಂಶಯ ಬಂದರೆ ಅದನ್ನು ತಿಳಿದುಕೊಳ್ಳಲು ಈ ಪುಸ್ತಕದಲ್ಲೇ ಒಂದು ಅಧ್ಯಾಯ ಇದೆ. 

***
ಪುಸ್ತಕವು ನವಕರ್ನಾಟಕ, ಸಪ್ನಾ, ಟೋಟಲ್ ಕನ್ನಡ  ಮುಂತಾದಲ್ಲಿ ಸಿಗುತ್ತದೆ. ನೇರವಾಗಿ ಲೇಖಕರಿಗೆ ಫೋನ್ (9845147695) ಮಾಡಿಯೂ ತರಿಸಿಕೊಳ್ಳಬಹುದು ಎಂದು ತಿಳಿಸಿದ್ದಾರೆ. 

1 ಕಾಮೆಂಟ್‌:

sunaath ಹೇಳಿದರು...

ಫೋಟೋಗ್ರಾಫಿಯಲ್ಲಿ ಆಸಕ್ತಿಯನ್ನು ಹುಟ್ಟಿಸುವ ಹಾಗು ಶಿವು ಅವರ ಪುಸ್ತಕದ ಬಗೆಗೆ ಸ್ವಲ್ಪದರಲ್ಲಿಯೇ ಸಮಗ್ರ ಪರಿಚಯವನ್ನು ನಿಮ್ಮ ಲೇಖನದಲ್ಲಿ ನೀಡಿದ್ದೀರಿ. ಇದು ಒಂದು ಉಪಯುಕ್ತ ಲೇಖನವಾಗಿದೆ. ಅಭಿನಂದನೆಗಳು.