ಭಾನುವಾರ, ಆಗಸ್ಟ್ 28, 2016

'Blood Diamond' movie - Kannada Subtitles

ಬ್ಲಡ್ ಡೈಮಂಡ್  - ಕನ್ನಡ ಅಡಿಬರಹಗಳು

ಇದೊಂದು ಸಣ್ಣ ಪ್ರಯತ್ನ ಯಶಕಂಡಿದೆ. 'ಬ್ಲಡ್ ಡೈಮಂಡ್' ಎಂಬ ಸಿನೆಮಾಕ್ಕೆ ಕನ್ನಡ ಸಬ್ ಟೈಟಲ್ಸ್ ಬರೆದು ಮುಗಿಸಿದ್ದೇನೆ. ಹೇಳಬೇಕೆಂದರೆ ಈ ಯೋಚನೆ ಶುರುವಾಗಿದ್ದು ಮೂರು ವರ್ಷಗಳ ಹಿಂದೆ. ವಸುಧೇಂದ್ರ (Vasudhendra) ಅವರು ಕನ್ನಡ ಉಪಶೀರ್ಷಿಕೆಗಳನ್ನು ಬರೆಯುವುದು ಹೇಗೆ ಎಂಬ ಬಗ್ಗೆ ಪ್ರಯತ್ನಗಳನ್ನು ಮಾಡಿ ಯಶಸ್ವಿಯಾಗಿ ಅನಂತರ ಕೆ.ವಿ.ಸುಬ್ಬಣ್ಣ ರಂಗಮಂದಿರದಲ್ಲಿ ಒಂದು ಪ್ರಾತ್ಯಕ್ಷಿಕೆ ತೋರಿಸಿದ್ದರು. ಜಗತ್ತಿನ ಉತ್ತಮ ಚಿತ್ರಗಳನ್ನು ಜನರಿಗೆ ಪರಿಚಯಿಸಲು ಸಹಾಯವಾಗುತ್ತದೆಂಬ ಉದ್ದೇಶದಿಂದ ಮಾಡಿದ ಪ್ರಯತ್ನ ಅದು. ವಿ.ಎಲ್.ಸಿ ಪ್ಲೇಯರ್ ನಲ್ಲಿ ಸ್ವಲ್ಪ ಸೆಟ್ಟಿಂಗ್ ಬದಲಾಯಿಸಿ ಕನ್ನಡ ಫಾಂಟ್ ಕಾಣುವಂತೆ ಮಾಡಬೇಕಿತ್ತು. ಅವತ್ತೇ ರಾತ್ರಿ ಅವರು ಹೇಳಿಕೊಟ್ಟಂತೆ ಪ್ರಯೋಗ ಮಾಡಿ 'ರಾಶೋಮನ್' ಎಂಬ ಜಪಾನಿ ಸಿನೆಮಾಗೆ ಕನ್ನಡದಲ್ಲಿ ಕೆಲವು ಸಬ್ ಟೈಟಲ್ಸ್ ಬರೆದು ಪ್ರಯತ್ನಿಸಿ ಖುಶಿಪಟ್ಟಿದ್ದೆ. ಆದರೆ ಅದು ಅಪೂರ್ಣಗೊಂಡು ಹಾಗೇ ಮರೆತುಹೋಗಿತ್ತು.
ಈಗೊಂದು ತಿಂಗಳ ಹಿಂದೆ ಕಂಪ್ಯೂಟರಲ್ಲಿ ಏನೋ ಹುಡುಕುತ್ತಿದ್ದಾಗ ಆ ಹಳೆಯ ಫೈಲ್ ಕಾಣಿಸಿ ಮತ್ತೊಮ್ಮೆ ಸಬ್ ಟೈಟಲ್ಸ್ ಬರೆಯುವ ಮನಸ್ಸಾಯಿತು. ಆಗ ನೆನಪಾದವರು ಸಿನಿಕರ್ಮಿ ರವೀಂದ್ರ (Ravindra Venshi). ಅವರೂ ಹಿಂದೊಮ್ಮೆ ಸಿನೆಮಾವೊಂದಕ್ಕೆ ಸಬ್ ಟೈಟಲ್ಸ್ ಬರೆದು ಹಂಚಿಕೊಂಡಿದ್ದರು. ಅವರೊಂದಿಗೆ ಸ್ವಲ್ಪ ಚರ್ಚೆ ಮಾಡಿ ಮಾರ್ಗದರ್ಶನ ಪಡೆದು ಅನಂತರ ನನ್ನ ಇಷ್ಟದ ಸಿನೆಮಾಗಳಲ್ಲೊಂದಾದ 'ಬ್ಲಡ್ ಡೈಮಂಡ್' ಸಿನೆಮಾ ಆರಿಸಿಕೊಂಡು ಶುರುಮಾಡಿದೆ. ಅದರಲ್ಲಿದ್ದದ್ದು ೧೩೦೦ ಸಂಭಾಷಣೆಗಳು! ಹಾಗಾಗಿ ನಿಧಾನಕ್ಕೆ ಸ್ವಲ್ಪ ಸ್ವಲ್ಪವೇ ಬರೆದು ಮುಗಿಸಲು ತಿಂಗಳ ಸಮಯ ಹಿಡಿಯಿತು.
ಯಾರಿಗಾದರೂ ಆ ಸಬ್ ಟೈಟಲ್ ಫೈಲ್ ಬೇಕಿದ್ದಲ್ಲಿ ಸಂದೇಶ ಕಳಿಸಿ. ಯಾರಾದರೂ ಉತ್ಸಾಹಿಗಳಿದ್ದಲ್ಲಿ ನಿಮ್ಮ ಇಷ್ಟದ ಸಿನೆಮಾಗಳಿಗೆ ಕನ್ನಡ ಅಡಿಬರಹ ಬರೆಯಲೂಬಹುದು. 

ಹೀಗಂತ ಫೇಸ್ಬುಕ್ಕಲ್ಲಿ ಬರೆದುಕೊಂಡಿದ್ದೆ. ಆಸಕ್ತಿ ಇರುವ ಕೆಲವು ಗೆಳೆಯರು ಸಂದೇಶ ಕಳಿಸಬಹುದು, ಅವರಿಗೆ ಫೈಲ್ ಕಳಿಸೋಣ ಅಂದುಕೊಂಡಿದ್ದೆ. ಆದರೆ ಸಬ್‍ಟೈಟಲ್ಸ್ ಫೈಲ್ ಕೋರಿ ನೂರಾರು ಸಂದೇಶಗಳು ಬಂದಿವೆ. ಹಾಗಾಗಿ ಅದನ್ನು ಇಲ್ಲಿ ಅಪ್ಲೋಡ್ ಮಾಡಿದ್ದೇನೆ. 
ಈ ಕೆಳಗಿನ ಕೊಂಡಿಗಳ ಮೂಲಕ ಅಡಿಬರಹದ ಫೈಲ್‍ಗಳನ್ನು ಇಳಿಸಿಕೊಂಡು ನಿಮ್ಮಲ್ಲಿರುವ ಆ ಸಿನೆಮಾದೊಂದಿಗೆ ಲೋಡ್ ಮಾಡಿಕೊಂಡು ನೋಡಬಹುದು. ಇದು ಯುನಿಕೋಡ್ ಫೈಲ್ ಆಗಿರುವುದರಿಂದ ಯಾವುದೇ ಫಾಂಟ್ ಸೆಟ್ಟಿಂಗ್ಸ್ ಮಾಡಬೇಕಾದ್ದಿಲ್ಲ.

KM Player & 123 Playerಗಾಗಿ ಈ ಫೈಲ್ Blood Diamond - Kannada Subtitles  

VLC Playerಗಾಗಿ ಈ ಫೈಲ್ Blood Diamond - Kannada Subtitles 

ನಾನು ಕೆಲವು ವೀಡಿಯೋ ಪ್ಲೇಯರುಗಳಲ್ಲಿ ಮಾತ್ರ ಪ್ರಯತ್ನಿಸಿದ್ದೇನೆ. ಬೇರೆ ಅನೇಕ ವೀಡಿಯೋ ಪ್ಲೇಯರುಗಳಲ್ಲಿ ಇದನ್ನು ಪ್ರಯೋಗಿಸಬಹುದು. ನಿಮ್ಮಲ್ಲಿರುವ ಪ್ಲೇಯರ್‍ಗಳಲ್ಲಿ ಪ್ರಯತ್ನಿಸಿ. ವೀಡಿಯೋ ಪ್ಲೇಯರುಗಳಲ್ಲಿ ಪರದೆ ಮೇಲೆ ರೈಟ್ ಕ್ಲಿಕ್ ಮಾಡಿದರೆ ಅಥವಾ ಮೆನುವಿನಲ್ಲಿ ಸಬ್‍ಟೈಟಲ್ ಫೈಲ್ ಲೋಡ್ ಮಾಡುವ ಆಯ್ಕೆ ಇರುತ್ತದೆ. ಸ್ಮಾರ್ಟ್ ಫೋನಿನಲ್ಲಿ ನಾನು ಪ್ರಯತ್ನಿಸಿಲ್ಲ.
ನೋಡಿದಾನಂತರ ಅದರ ಬಗ್ಗೆ ಅನಿಸಿಕೆಗಳನ್ನು ತಿಳಿಸಿದರೆ ಸಂತೋಷ. ಜೊತೆಗೆ ನೀವು ನೋಡಿದ್ದು ಯಾವ ಸಾಧನದಲ್ಲಿ ಮತ್ತು ಯಾವ ಪ್ಲೇಯರ್‍ನಲ್ಲಿ ಎಂದು ತಿಳಿಸಿದರೆ ಒಳ್ಳೆಯದು.

ಸಬ್‍ಟೈಟಲ್ ಫೈಲನ್ನು ತೆರೆದು ನೋಡಿದರೆ ಅದನ್ನು ಮಾಡುವುದು ಹೇಗೆ ಎಂದು ತಿಳಿಯುತ್ತದೆ. ಕಂಪ್ಯೂಟರ್ ತಾಂತ್ರಿಕ ಕ್ಷೇತ್ರದಲ್ಲಿರುವವರಿಗಂತೂ ಹೇಳುವುದೇ ಬೇಡ. ಆದರೂ ಹಲವರು ಆಸಕ್ತರು ಕೇಳಿರುವಂತೆ ಆ ವಿಧಾನ, ಸಬ್ ಟೈಟಲ್ ಫೈಲ್ ಮಾದರಿಗಳು, ವಿವಿಧ ವಿಡಿಯೋ ಪ್ಲೇಯರ್ ಗಳಲ್ಲಿ ಅದರ ಬಳಕೆ ಇತ್ಯಾದಿಗಳ ಬಗ್ಗೆ ನನಗೆ ತಿಳಿದಷ್ಟು ಕೆಲವು ಮಾಹಿತಿಗಳನ್ನು ಸದ್ಯದಲ್ಲೇ ಮತ್ತೊಂದು ಬ್ಲಾಗ್ ಪೋಸ್ಟ್ ನಲ್ಲಿ ಹಂಚಿಕೊಳ್ಳುತ್ತೇನೆ.

-ವಿಕಾಸ್ ಹೆಗಡೆ (vikashegde82@gmail.com)

6 ಕಾಮೆಂಟ್‌ಗಳು:

Guruprasad Kanle ಹೇಳಿದರು...

VLC Media Player ನಲ್ಲಿ ಪ್ರಯತ್ನಿಸಿದೆ.
ಸರಿಯಾಗಿ ಬಂತು. ಖುಷಿಯಾಯ್ತು.
https://m.facebook.com/story.php?story_fbid=1063874537035361&id=100002384735954
ಫೇಸ್ಬುಕ್ ನಲ್ಲಿ ಹಂಚಿಕೊಂಡಿದ್ದೇನೆ.
ಎಲ್ಲರೂ ನೋಡಬಹುದು.

sunaath ಹೇಳಿದರು...

ನನ್ನಲ್ಲಿ ಆ ಸಿನೆಮಾ ಇಲ್ಲ. ಏನೆ ಇರಲಿ, ಕನ್ನಡಿಸುತ್ತಿರುವ ನಿಮ್ಮ ಪ್ರಯತ್ನಕ್ಕಾಗಿ, ನಿಮ್ಮ ಯಶಸ್ಸಿಗಾಗಿ ನಿಮಗೆ ಅಭಿನಂದನೆಗಳು.

Subrahmanya ಹೇಳಿದರು...

ನಾನೂ ಪ್ರಯತ್ನ ಪಡ್ತೀನಿ :)

Unknown ಹೇಳಿದರು...

ಮುಂದಿನ ಪೋಸ್ಟ್ ಗೆ ಕಾಯುತ್ತಿದ್ದೇನೆ

Beware ಹೇಳಿದರು...

Please upload subtitles to cinemasubtitles.co.

rajendra ಹೇಳಿದರು...

wow its really worked,can you add some more subtitles