Amazon Kindle and Kannada Support
ಕಿಂಡಲ್ ಇ-ಬುಕ್
ರೀಡರ್ ಬಳಕೆದಾರರಿಗೆ ತಿಳಿದಿರುವಂತೆ ಕಿಂಡಲ್ಲಿನ ಯಾವುದೇ ಮಾಡೆಲ್ಲುಗಳಲ್ಲಿ ಕನ್ನಡದ ಪಠ್ಯವು bydefault ಸರಿಯಾಗಿ ಮೂಡುವುದಿಲ್ಲ. ಮೂಲತಃ ಅಮೆರಿಕಾದ್ದಾದ ಅಮೇಜಾನ್ ಕಿಂಡಲ್,
ಭಾರತದ ಮಾರುಕಟ್ಟೆಗೆ ಪ್ರವೇಶವಾದಾನಂತರ ಕನ್ನಡ ಸೇರಿದಂತೆ
ಇತರ ಭಾರತದ ಭಾಷೆಗಳಿಗೆ ಬೆಂಬಲ ಕೊಡಬಹುದೆಂಬ ನಿರೀಕ್ಷೆ ಇತ್ತು. ಆದರೆ ಈಗ
ಕೆಲವರ್ಷಗಳೇ ಕಳೆದುಹೋದರೂ ಅದು ಆಗಲಿಲ್ಲ. ಹಾಗಾಗಿ ಇದುವರೆಗೆ
ಭಾರತೀಯ ಭಾಷೆಗಳ ಪುಸ್ತಕಗಳನ್ನು ಅಮೇಜಾನಿನಲ್ಲಿ ಅಧಿಕೃತವಾಗಿ ಪ್ರಕಟಿಸಲು ಸಾಧ್ಯವಾಗಿರಲಿಲ್ಲ. ಆದಾಗಿಯೂ ಸಹ ಕೆಲವು ಕನ್ನಡ ಲೇಖಕರು ತಮ್ಮ ಪುಸ್ತಕವನ್ನು ಮೊಬಿ (mobi) ಇ-ಪುಸ್ತಕ ಮಾದರಿಗೆ ಪರಿವರ್ತಿಸಿ ಡೈರೆಕ್ಟ್ ಪಬ್ಲಿಷಿಂಗ್ ಮೂಲಕ ಅಮೇಜಾನ್ ನಲ್ಲಿ ಹಾಕಿದ್ದರು. (ಉದಾಹರಣೆಗೆ,
ಶ್ರೀ ನಾಗೇಶ್ ಕುಮಾರರ ‘ಮುಳುಗುವ ಕೊಳ’ ಕಾದಂಬರಿ) ಆದರೆ ಅವುಗಳನ್ನು ಓದಲು ಫಾಂಟ್
ಸಮಸ್ಯೆಯಾಗಿತ್ತು. ಕನ್ನಡದ ಅಕ್ಷರಗಳು ಕಿಂಡಲ್ ರೀಡರಿನಲ್ಲಿ ಸರಿಯಾಗಿ ಮೂಡುತ್ತಿರಲಿಲ್ಲ. ಕಿಂಡಲ್ಲಿನ
ಬ್ರೌಸರ್ ನಲ್ಲೂ ಕೂಡ ಇದೇ ಸಮಸ್ಯೆಯಿಂದಾಗಿ ಕನ್ನಡ ಜಾಲತಾಣಗಳನ್ನು ಓದಲೂ ಆಗುತ್ತಿರಲಿಲ್ಲ.
ಈ ನಡುವೆ ಕನ್ನಡದ
ಕತೆಗಾರ ವಸುಧೇಂದ್ರ ಅವರು ಆಗಸ್ಟ್
೨೦೧೬ರಲ್ಲಿ ತಮ್ಮ ಹೊಸ ಪುಸ್ತಕ ‘ಐದು ಪೈಸೆ ವರದಕ್ಷಿಣೆ’ಯ ಕಿಂಡಲ್ ಆವೃತ್ತಿಯನ್ನು ಬಿಡುಗಡೆ ಮಾಡಿದರು. ಅದರ ಜೊತೆಗೆ ಕನ್ನಡ ಫಾಂಟ್ ಗಳು ಸರಿಯಾಗಿ
ಕಾಣುವಂತೆ ಮಾಡುವುದು ಹೇಗೆ ಎಂಬ ಉಪಾಯವನ್ನೂ ಹೇಳಿದ್ದರು. ತಂತ್ರಜ್ಞ ಅಮರ್ ತುಂಬಳ್ಳಿಯವರು ಈ ಬಗ್ಗೆ
ಕೆಲಸ ಮಾಡಿದ್ದು ಆ ತಂತ್ರವನ್ನು ತಮ್ಮ
ಬ್ಲಾಗ್ ನಲ್ಲಿ ಬರೆದಿದ್ದಾರೆ.
ಅದು ಹೀಗಿದೆ:
- ಹಂತ ೧: ಕಿಂಡಲ್ ಸಾಪ್ಟ್ ವೇರನ್ನು ಇತ್ತೀಚಿನ ಆವೃತ್ತಿಗೆ ಅಪ್ಡೇಟ್ ಮಾಡಿಕೊಂಡು ರೀಸ್ಟಾರ್ಟ್ ಮಾಡಿ.
- ಹಂತ ೨: ಕಿಂಡಲ್ಲನ್ನು ಕಂಪ್ಯೂಟರಿಗೆ ಜೋಡಿಸಿ. ಕಿಂಡಲ್ ಡೈರೆಕ್ಟರಿ (ಡ್ರೈವ್) ತೆರೆದು ಅದರಲ್ಲಿ Fonts ಎನ್ನುವ ಫೋಲ್ಡರ್ ಒಂದನ್ನು ರಚಿಸಿಕೊಳ್ಳಿ.
- ಹಂತ ೩: ಆನಂತರ ಕನ್ನಡದ ಯಾವುದೇ ಯುನಿಕೋಡ್ ಫಾಂಟನ್ನು ಫೋಲ್ಡರಿನಲ್ಲಿ ಹಾಕಿ. ಉದಾಹರಣೆಗೆ ಉಚಿತ Google Noto Fonts ಡೌನ್ಲೋಡ್ ಮಾಡಿ ಹಾಕಿಕೊಳ್ಳಬಹುದು. (ಆ ತಾಣದಲ್ಲಿ Kannada ಎಂದುಹುಡುಕಿ)
- ಹಂತ ೪: ಕಿಂಡಲ್ ಡ್ರೈವ್ ನಲ್ಲಿ ಒಂದು ಖಾಲಿ ಫೈಲನ್ನು ರಚಿಸಿ ಅದನ್ನು USE_ALT_FONTS ಎಂದು ಹೆಸರಿಸಿ. (ಖಾಲಿ ಫೈಲ್ ಅಂದರೆ ಉದಾಹರಣೆಗೆ ಸುಮ್ಮನೇ ಒಂದು ನೋಟ್ ಪ್ಯಾಡ್ ಫೈಲ್ ರಚಿಸಿ ಅದರ .txt ಎಂಬ extension ತೆಗೆದುಬಿಡುವುದು. File becomes unusable ಎಂಬ ಎಚ್ಚರಿಕೆಯನ್ನು ನಿರ್ಲಕ್ಷಿಸಿ)
- ಹಂತ ೫: ಕಿಂಡಲ್ಲನ್ನು ಕಂಪ್ಯೂಟರಿಂದ ಬೇರ್ಪಡಿಸಿ ರೀಸ್ಟಾರ್ಟ್ ಮಾಡಿ.
ಇಷ್ಟುಮಾಡಿ ಕನ್ನಡ
ಇ-ಪುಸ್ತಕವನ್ನು ಕಿಂಡಲ್ಲಲ್ಲಿ ತೆರೆದರೆ ಕನ್ನಡ ಅಕ್ಷರಗಳು ಸರಿಯಾಗಿ ಮೂಡುತ್ತವೆ. ಇದು ಕಿಂಡಲ್ ಬೇಸಿಕ್
ಮಾಡೆಲ್ ಗಳಲ್ಲಿ ಆಗುವುದಿಲ್ಲ. ಕಿಂಡಲ್ ಟಚ್ ಮತ್ತು ಇನ್ನೂ ನಂತರದ ಮಾಡೆಲ್ಲುಗಳಲ್ಲಿ ಮಾತ್ರ ಸಾಧ್ಯ.
ನನ್ನಲ್ಲಿ ಕಿಂಡಲ್ ಪೇಪರ್ ವೈಟ್ 1st generation ಮಾಡೆಲ್ ಇದ್ದು ಈ ಮೇಲಿನ
ವಿಧಾನ ಯಶಸ್ವಿಯಾಗಿದೆ.
ವಸುಧೇಂದ್ರರ 'ಐದು ಪೈಸೆ ವರದಕ್ಷಿಣೆ' ಪುಸ್ತಕದ ಪುಟದ ನೋಟ |
ನಾಗೇಶ್ ಕುಮಾರರ 'ಮುಳುಗುವ ಕೊಳ' ಪುಸ್ತಕದ ಪುಟದ ನೋಟ |
ಈ ಸಂಭ್ರಮ ಹೆಚ್ಚು ದಿನ ಉಳಿಯಲಿಲ್ಲ.
ವಸುಧೇಂದ್ರರ ಪುಸ್ತಕ ಪಬ್ಲಿಷ್ ಆದ ನಾಲ್ಕೇ ದಿನಗಳಲ್ಲಿ ಅಮೇಜಾನ್ ನವರು ಅವರ ಪುಸ್ತಕವನ್ನು ಅಲ್ಲಿಂದ
ತೆಗೆದುಹಾಕಿದರು. ನಾಗೇಶ್ ಕುಮಾರರ ಎರಡು ಪುಸ್ತಕಗಳಿಗೂ ಅದೇ ಗತಿಯಾಯ್ತು. ಅಮೇಜಾನ್ ನವರು “ಸದ್ಯಕ್ಕೆ
ನಾವು ಕನ್ನಡ ಭಾಷೆಯ ಪುಸ್ತಕಗಳಿಗೆ ಅವಕಾಶ (ವೇದಿಕೆ) ಒದಗಿಸುತ್ತಿಲ್ಲ” ಎಂಬ ಕಾರಣ ಕೊಟ್ಟಿರುವುದಾಗ
ವಸುಧೇಂದ್ರ ಅವರು ತಮ್ಮ ಫೇಸ್ಬುಕ್ ಗೋಡೆಯಲ್ಲಿ ಬರೆದುಕೊಂಡರು. ಅಮೇಜಾನ್ ನ ಈ ನಡೆ ಕನ್ನಡ ನೆಟ್ ಜಗತ್ತಿನಲ್ಲಿ
ವ್ಯಾಪಕ ಆಕ್ರೋಶಕ್ಕೆ
ಕಾರಣವಾಯಿತು. ಸಾಹಿತ್ಯ ಪರಿಷತ್ತು, ಕನ್ನಡ ಅಭಿವೃದ್ಧಿ ಪ್ರಾಧಿಕಾರಗಳು ಈ ಬಗ್ಗೆ ಆಗ್ರಹಿಸಿ
ಅಮೇಜಾನ್ ಗೆ ಪತ್ರ ಬರೆದವು. ಹಲವು ಕನ್ನಡ, ಇಂಗ್ಲೀಷ್ ಪತ್ರಿಕೆಗಳು ಈ ಬಗ್ಗೆ ವರದಿಮಾಡಿವೆ. ಅವುಗಳ
ಕೊಂಡಿ ಇಲ್ಲಿದೆ: ಪ್ರಜಾವಾಣಿ,
ವಿಶ್ವವಾಣಿ,
ಇಕನಾಮಿಕ್
ಟೈಮ್ಸ್, ದ
ಹಿಂದೂ, ಬ್ಯಾಂಗಲೋರ್
ಮಿರರ್. ಕನ್ನಡದ ಇ-ಪುಸ್ತಕಗಳ ಲಭ್ಯತೆ ಮತ್ತು ಅಗತ್ಯತೆ ಬಗ್ಗೆ ಚರ್ಚೆಯೂ ನಡೆದಿದೆ. ಭಾರತದಲ್ಲಿ ಮಾರಾಟವಾಗುವ ಎಲ್ಲಾ ಗ್ಯಾಜೆಟ್ಗಳು ಕಡ್ಡಾಯವಾಗಿ ಭಾರತೀಯ ಭಾಷೆಗಳನ್ನು ಬೆಂಬಲಿಸಬೇಕು ಎಂಬ ನಿಯಮ ರೂಪಿಸುವಂತೆ ಸರ್ಕಾರಕ್ಕೆ ಆಗ್ರಹಿಸುವ ಅಭಿಯಾನವೂ ನಡೆದಿದೆ. ಈಗ ಕನ್ನಡ ಹಲವು ಇ-ಪುಸ್ತಕಗಳು
ಹಲವಾರು ಬೇರೆ ಬೇರೆ ತಾಣಗಳಲ್ಲಿ ದೊರೆಯುತ್ತಿವೆ. ಏನೇ ಆದರೂ ಮುದ್ರಣ ಮಾತ್ರ ಅಲ್ಲದೇ ಎಲ್ಲಾ ತಂತ್ರಜ್ಞಾನಗಳಲ್ಲಿ ಕನ್ನಡವೂ ಇರಬೇಕಾದ್ದು ಈ ಕಾಲದ ಅಗತ್ಯವಾಗಿದೆ.
ಆಗಸ್ಟ್ ೨೦, ೨೦೧೬ ರ ಪ್ರಜಾವಾಣಿ 'ಅಂತರಾಳ' ಪುಟದಲ್ಲಿ ಇ-ಪುಸ್ತಕಗಳ ಬಗ್ಗೆ ನನ್ನ ಚುಟುಕು ಅಭಿಪ್ರಾಯ. |
***
ಸಂಬಂಧಿತ ಇತರ ಪೋಸ್ಟ್ ಗಳು:
- ಕನ್ನಡ ಇಬುಕ್ಸ್: ಕನ್ನಡ ಇ-ಪುಸ್ತಕಗಳು ದೊರೆಯುವ ತಾಣಗಳ ಪಟ್ಟಿ
- ಅಮೇಜಾನ್ ಕಿಂಡಲ್ ಎಂಬ ಓದಿನ ಸಂಗಾತಿ
3 ಕಾಮೆಂಟ್ಗಳು:
ಕನ್ನಡವು ಸಾಕಷ್ಟು ಬಳಕೆದಾರರ ಭಾಷೆಯಾಗಿರುವದರಿಂದ, ಕಿಂಡಲ್ನಲ್ಲಿ ಇದು ಬರಲೇಬೇಕಾಗಿತ್ತು, ನಿಮ್ಮ ಲೇಖನವು ನಮ್ಮನ್ನು ಎಚ್ಚರಿಸುತ್ತಿದೆ.
ಸರ್, ಆ ಅಮೇಜಾನ್ ನಲ್ಲಿ ಪ್ರಕಟವಾದ ಪುಸ್ತಕಗಳು ಈಗ ಬೇರೆ ಎಲ್ಲಾದರೂ ( ಇ-ತಾಣಗಳಲ್ಲಿ ) ಲಭ್ಯವಿದೆಯೇ ?
ವಿವಿದ್ ಲಿಪಿ ತಾಣದಲ್ಲಿ ಇಲ್ಲಿದೆ (ಇ-ಪಬ್ ಮಾದರಿಯಲ್ಲಿ): http://www.vividlipi.com/product-category/ebooks/?filter_product-author=767
ಪುಸ್ತಕ.ಕೊ.ಇನ್ ತಾಣದಲ್ಲಿ ಇಲ್ಲಿದೆ: http://www.pustaka.co.in/home/author/nagesh-kumar-cs
ಮೊಬಿ ಮಾದರಿಯಲ್ಲಿ ಇಲ್ಲಿದೆ: https://www.instamojo.com/nageshkumarcs/-_-mobi-kindle-edition/
ಕಾಮೆಂಟ್ ಪೋಸ್ಟ್ ಮಾಡಿ