ಶುಕ್ರವಾರ, ಸೆಪ್ಟೆಂಬರ್ 16, 2016

ಕನ್ನಡ ಸಬ್‍ ಟೈಟಲ್ಸ್ ರಚಿಸುವ ಸರಳ ವಿಧಾನ

Kannada subtitles making

ಜಗತ್ತಿನ ಬೇರೆ ಬೇರೆ ದೇಶಗಳ ವಿವಿಧ ಭಾಷೆಗಳಲ್ಲಿ ಉತ್ತಮ ಸಿನೆಮಾಗಳು ತಯಾರಾಗುತ್ತಿರುತ್ತವೆ. ಒಂದು ಭಾಷೆಯ ಸಿನೆಮಾ ಕಲೆಯನ್ನು ವಿವಿಧ ಭಾಷೆಗಳಲ್ಲಿ ಜನರಿಗೆ ತಲುಪಿಸಲು ಇರುವ ಎರಡು ವಿಧಾನಗಳೆಂದರೆ, ಒಂದು ವಾಯ್ಸ್ ಡಬ್ಬಿಂಗ್, ಮತ್ತೊಂದು ಸಬ್ ಟೈಟ್ಲಿಂಗ್. ಇದರಲ್ಲಿ ಡಬ್ಬಿಂಗ್ ಎಲ್ಲರಿಗೂ ಸುಲಭವಾಗಿ ತಲುಪುವಂತದ್ದಾಗಿದ್ದು ಬಹಳ ಸಹಾಯಕಾರಿಯಾಗಿರುತ್ತದೆ.

ಅಡಿಬರಹಗಳನ್ನು ಬಳಸುವುದು ಮತ್ತೊಂದು ಮಾರ್ಗ. ಸಾಮಾನ್ಯವಾಗಿ ನಮಗೆ ವಿವಿಧ ಭಾಷೆಗಳ ಸಿನೆಮಾಗಳನ್ನು ಅರ್ಥಮಾಡಿಕೊಳ್ಳಲು ಸಾಧ್ಯವಾಗಿಸುವುದು ಇಂಗ್ಲೀಷ್ ಭಾಷೆಯ ಅಡಿಬರಹಗಳು. ಆದರೆ ಇಂಗ್ಲೀಷಿಗಿಂತ ಹೆಚ್ಚು ಸಾಮಾನ್ಯವಾಗಿ ಅರ್ಥವಾಗುವ ನಮ್ಮ ಕನ್ನಡದಲ್ಲಿದ್ದರೆ ಅದು ಹೆಚ್ಚು ಜನರನ್ನು ತಲುಪಲು ಒಳ್ಳೆಯದು. ಕಿವಿಕೇಳದ ತೊಂದರೆ ಇರುವವರಿಗೂ ಇದು ಸಹಾಯಕಾರಿ. ಹಾಗಾಗಿ ಉತ್ತಮ ಸಿನೆಮಾಗಳಿರಬಹುದು ಅಥವಾ ಶೈಕ್ಷಣಿಕ, ಮಾಹಿತಿ ಇನ್ನಿತರ ವೀಡಿಯೋಗಳಿರಬಹುದು, ಅದನ್ನು ಆಸಕ್ತರಿಗೆ, ಅಗತ್ಯ ಇರುವವರಿಗೆ ತಲುಪಿಸಲು ಕನ್ನಡ ಅಡಿಬರಹಗಳು ಬೇಕು. ಇಂತಹ ಕನ್ನಡ ಅಡಿಬರಹಗಳನ್ನು ತಯಾರಿಸುವುದನ್ನು ಒಂದು ಸಾಮುದಾಯಿಕ ಕೆಲಸವನ್ನಾಗಿ ಮಾಡಬಹುದು.

ಇಲ್ಲಿ ನಾವು ಆಂಗ್ಲ ಅಡಿಬರಹಗಳ ಕಡತಗಳ ಮೂಲಕ ಕನ್ನಡ ಅಡಿಬರಹಗಳನ್ನು ರಚಿಸುವ ಬಗ್ಗೆ ತಿಳಿದುಕೊಳ್ಳೋಣ. ಹೆಚ್ಚು ತಾಂತ್ರಿಕತೆಯ ಬಗ್ಗೆ ತಲೆಕೆಡಿಸಿಕೊಳ್ಳದೇ ಬಹಳ ವಿವರವಾಗಿ ಹೋಗದೇ ಸರಳವಾಗಿ ಅರ್ಥಮಾಡಿಕೊಂಡು ಆಮೇಲೆ ಅದರಲ್ಲಿ ಹೆಚ್ಚಿನ ಪ್ರಯತ್ನ, ಪ್ರಯೋಗಗಳನ್ನು ಮಾಡಬಹುದು.

ಅಡಿಬರಹಗಳಲ್ಲಿ image based, text based ವಿಧಗಳಿವೆ. ibx, sub, srt, vtt ಹೀಗೆ ಹಲವಾರು ಮಾದರಿಗಳಿವೆ. ಅವುಗಳಲ್ಲಿ ಹೆಚ್ಚು ಸಾಮಾನ್ಯ, ಸರಳ ಮತ್ತು ಜನಪ್ರಿಯವಾದದ್ದು .SRT ಮಾದರಿ. ಇದಕ್ಕೆ subrip ಫೈಲ್ ಎಂದು ಹೇಳುತ್ತಾರೆ. ಈ ಫೈಲನ್ನು ನೋಟ್ ಪ್ಯಾಡ್ ನಲ್ಲಿ ತೆರೆಯಬಹುದು. (ಫೈಲ್ ಮೇಲೆ ರೈಟ್ ಕ್ಲಿಕ್ ಮಾಡಿ ಓಪನ್ ವಿತ್ ನೋಟ್ ಪ್ಯಾಡ್).

ಈ ಫೈಲಿನ ಒಳರಚನೆ ಈ ಕೆಳಗಿನಂತೆ ಇರುತ್ತದೆ.

1
00:04:00,199 --> 00:04:03,970
Sir, the government defending
goons like them deliberately.

2
00:04:04,033 --> 00:04:06,835
We must teach them a lesson,
sir. - Good.

3
00:04:07,099 --> 00:04:08,768
Did you just finish your training?

ಈ ರಚನೆಯನ್ನು ಹೀಗೆ ಅರ್ಥೈಸಿಕೊಳ್ಳಬಹುದು.

ಮೊದಲ ಸಾಲು: ಕ್ರಮಾಂಕ (೧, ೨, ೩, ೪...........)
ಎರಡನೇ ಸಾಲು: ಸಂಭಾಷಣೆ ಶುರುವಾಗುವ ಮತ್ತು ಕೊನೆಯಾಗುವ ಸಮಯ.
(ಗಂಟೆ:ನಿಮಿಷ:ಸೆಕೆಂಡು,ಮಿಲಿಸೆಕೆಂಡು --> ಗಂಟೆ:ನಿಮಿಷ:ಸೆಕೆಂಡು,ಮಿಲಿಸೆಕೆಂಡು)
ಮೂರನೇ ಸಾಲು: ಸಂಭಾಷಣೆಯ ಪಠ್ಯ ಅಂದರೆ ಮಾತುಗಳು (ಅಥವಾ ಇತರ ಶಬ್ದಗಳು)
ಕೊನೆಯ ಸಾಲು: ಒಂದು ಖಾಲಿ ಜಾಗ (ಸಾಲು)

ಇನ್ನು ಕನ್ನಡ ಅಡಿಬರಹ ರಚಿಸುವುದು ಹೇಗೆಂದು ತಿಳಿಯೋಣ:
1. ಮೊದಲಿಗೆ ಯಾವ ಸಿನೆಮಾಗೆ ಕನ್ನಡ ಅಡಿಬರಹಗಳನ್ನು ರಚಿಸಬೇಕೋ ಅದರ ಇಂಗ್ಲೀಷ್ SRT ಫೈಲನ್ನು ಡೌನ್ಲೋಡ್ ಮಾಡಿಕೊಳ್ಳಿ. ಈ ಜಾಲತಾಣಗಳಲ್ಲಿ ಹುಡುಕಿ ಇಳಿಸಿಕೊಳ್ಳಬಹುದು: Opensubtitles.org, Subscene.com, Moviesubtitles.org, Cinemasubtitles.com
2. ಆ ಫೈಲನ್ನು ನೋಟ್ ಪ್ಯಾಡಿನಲ್ಲಿ ತೆರೆದುಕೊಳ್ಳಿ.
3. ಮೊದಲು ಎರಡು-ಮೂರು ಇಂಗ್ಲೀಷಿನ ಸಂಭಾಷಣೆಗಳಿರುವಲ್ಲಿ ಭಾಷಾಂತರ ಮಾಡಿ ಕನ್ನಡದಲ್ಲಿ ಬರೆಯಿರಿ. (ಯಾವುದೇ ಕನ್ನಡ ಯುನಿಕೋಡ್ ಟೈಪಿಂಗ್ ತಂತ್ರಾಂಶವಾದರೂ ಬಳಸಿ). ಭಾಷಾಂತರ ಅಂದರೆ ಪದಕ್ಕೆ ಪದ ಅನುವಾದ ಮಾಡಬೇಕಂತಿಲ್ಲ. ಸಿನೆಮಾ ನೋಡಿಕೊಂಡು ಸಂದರ್ಭಕ್ಕೆ ತಕ್ಕುನಾಗಿ, ಭಾವಾರ್ಥ ಬರುವಂತೆ, ಕನ್ನಡಕ್ಕೆ ತನ್ನಿ.
4. ಅನಂತರ File - Save As ಕೊಡಿ. ಆಗ ಬರುವ ಡೈಲಾಗ್ ಬಾಕ್ಸಿನಲ್ಲಿ ಕೆಳಗೆ Save as type ಇರುವಲ್ಲಿ All files ಆಯ್ಕೆ ಮಾಡಿ. Encoding ಎಂದು ಇರುವಲ್ಲಿ Unicode ಆಯ್ಕೆ ಮಾಡಿಕೊಳ್ಳಿ. (By default ಅದು ANSI ಎಂದು ಇರುತ್ತದೆ). ಫೈಲಿಗೆ ಹೆಸರು ಕೊಟ್ಟು Save ಮಾಡಿ. ನೆನಪಿರಲಿ, ಆ ಫೈಲ್ extension ಬದಲಾಗಬಾರದು. .SRT ಎಂದೇ ಇರಬೇಕು.
5. ಈಗ ಆ ಫೈಲ್ ತೆರೆದು ಇನ್ನುಳಿದ ಸಂಭಾಷಣೆಗಳನ್ನು ಕನ್ನಡಕ್ಕೆ ಭಾಷಾಂತರ ಮಾಡಿ. ಒಮ್ಮೆ ಶುರುಮಾಡಿ ಸ್ವಲ್ಪ ಭಾಷಾಂತರ ಮಾಡಿ ಉಳಿಸಿಟ್ಟರೆ ಮತ್ತೆ ಅದನ್ನು ಯಾವಾಗಬೇಕಾದರೂ ನೋಟ್ ಪ್ಯಾಡಿನಲ್ಲಿ ತೆರೆದು ಕೆಲಸ ಮುಂದುವರೆಸಿ ಮತ್ತೆ ಸೇವ್ ಮಾಡಬಹುದು.

ಇಷ್ಟು ಮಾಡಿದರೆ ಕನ್ನಡ ಅಡಿಬರಹಗಳ ಕಡತ ರೆಡಿ!. ಈ srt ಫೈಲನ್ನು ನಿಮ್ಮಲ್ಲಿರುವ ಸಿನೆಮಾ ಜೊತೆಗೆ ಲೋಡ್ ಮಾಡಿಕೊಂಡು ಕನ್ನಡ ಅಡಿಬರಹಗಳ ಸಮೇತ ನೋಡಬಹುದು.






*******

ಕೆಲವೊಂದು ವೀಡಿಯೋ ಪ್ಲೇಯರ್‍ಗಳಲ್ಲಿ ಈ srt ಫೈಲ್‍ನ ಕನ್ನಡ ಅಕ್ಷರಗಳು ಸರಿಯಾಗಿ ಮೂಡುವುದಿಲ್ಲ. ಉದಾಹರಣೆಗೆ, ಬಹುಪ್ರಚಲಿತ VLC Player.

SRT file on VLC player - Improper font rendering

ಇದರಲ್ಲಿ ಕನ್ನಡ ಸರಿಯಾಗಿ ಮೂಡಬೇಕೆಂದರೆ .ass ಎಂಬ extension ಹೊಂದಿರುವ AdvanceSubstationAlpha ಎಂಬ ಫೈಲ್ ಮಾದರಿ ಬಳಸಬೇಕು. ಹಾಗಾಗಿ srt ಫೈಲನ್ನು ass ಕಡತವಾಗಿ ಪರಿವರ್ತಿಸಬೇಕು. ಇದಕ್ಕೆ Subtitle Edit ಅನ್ನುವ ತಂತ್ರಾಂಶವೊಂದಿದೆ. ಅದನ್ನು ಅಳವಡಿಸಿಕೊಂಡು ಅದರಲ್ಲಿ srt file ತೆರೆದು save as ಕೊಟ್ಟು .ass file ಎಂದು ಸೇವ್ ಮಾಡಿದರೆ ಮುಗಿಯಿತು. ಈಗ ಆ .ass ಫೈಲನ್ನು ವಿ.ಎಲ್.ಸಿ.ಯಲ್ಲಿ ಸಿನೆಮಾ ಜೊತೆ ಲೋಡ್ ಮಾಡಿದರೆ ಸುಂದರ ಕನ್ನಡ ಅಕ್ಷರಗಳು ಕಾಣುತ್ತವೆ.

ASS file on VLC Player - Proper font rendering

ಅಡಿಬರಹದ ಅಕ್ಷರಗಳ ಗಾತ್ರವನ್ನು ಬೇಕಾದರೆ ಬದಲಾಯಿಸಿಕೊಳ್ಳಬಹುದು. ass ಫೈಲನ್ನು ನೋಟ್ ಪ್ಯಾಡಿನಲ್ಲಿ ತೆರೆದು ಫಾಂಟ್ ಗಾತ್ರ ಹೆಚ್ಚು/ಕಡಿಮೆ ಮಾಡಿಕೊಳ್ಳಿ. ಬೇಕಿದ್ದರೆ ಬೇರೆ ಫಾಂಟ್ ಹೆಸರನ್ನು ಕೊಡಬಹುದು. ನಿಮ್ಮ ಸಿಸ್ಟಮ್ಮಲ್ಲಿ ಆ ಫಾಂಟ್ ಇರಬೇಕಷ್ಟೆ. ಇಲ್ಲದಿದ್ದಲ್ಲಿ ಅದು ನಿಮ್ಮ ಗಣಕದ ಕಾರ್ಯಾಚರಣ ವ್ಯವಸ್ಥೆಯ default ಫಾಂಟನ್ನು ತೆಗೆದುಕೊಳ್ಳುತ್ತದೆ. ಉದಾ: ವಿಂಡೋಸ್‍ಗೆ 'ತುಂಗಾ'

Open with notepad and change font size

ಇದೇ ರೀತಿಯಲ್ಲಿ ಯಾವುದೇ ವೀಡಿಯೋಗಳಿಗೆ ಹೊಸದಾಗಿ ಕನ್ನಡದಲ್ಲೇ ನೇರವಾಗಿ ಅಡಿಬರಹ ರೂಪಿಸಬಹುದು. ವೀಡಿಯೋ ನೋಡುತ್ತಾ ಪ್ರತಿಯೊಂದು ಸಂಭಾಷಣೆಯ ಶುರು ಮತ್ತು ಕೊನೆಯಾಗುವ ಸಮಯ ದಾಖಲಿಸಿಕೊಂಡು ಅದಕ್ಕೆ ತಕ್ಕನಾಗಿ ಅಡಿಬರಹ ಬರೆಯಬೇಕಾಗುತ್ತದೆ. ನೋಟ್ ಪ್ಯಾಡ್‍ನಲ್ಲೇ ಮೇಲೆ ತೋರಿಸಿರುವ ಮಾದರಿಯಲ್ಲೇ ರಚಿಸಿದರಾಯಿತು. ಉಳಿಸುವಾಗ srt file extension ಇರಬೇಕು. ಈಗಾಗಲೇ ಉಪಶೀರ್ಷಿಕೆಗಳ ಫೈಲ್ ಇಲ್ಲದಿದ್ದಲ್ಲಿ ಆ ವೀಡಿಯೋದಲ್ಲಿನ ಮಾತುಗಳು ಮತ್ತು ಶಬ್ದಗಳ ಸಮಯ ಮಾಹಿತಿಯನ್ನು (ವಾಯ್ಸ್/ಸೌಂಡ್ ಟ್ರ್ಯಾಕ್ ಮಾಹಿತಿ) ಒಟ್ಟಿಗೇ ಪಡೆಯಲು ಯಾವುದಾದರೂ ತಂತ್ರಾಂಶ ಇರಬಹುದು. ವೃತ್ತಿಪರರಲ್ಲಿ ಕೇಳಿದರೆ ಗೊತ್ತಾಗುತ್ತದೆ. ಆ ಮಾಹಿತಿ ಸಿಕ್ಕಿದರೆ ವೀಡಿಯೋವನ್ನು ನೋಡುತ್ತಾ ಸಂಭಾಷಣೆ/ನಿರೂಪಣೆಯ ಸಮಯಗಳನ್ನು ನೋಟ್ ಮಾಡಿಕೊಳ್ಳುವ ಕೆಲಸ ತಪ್ಪುತ್ತದೆ.


(2020 update: .SRT file ಕನ್ನಡ ಸಬ್ ಟೈಟಲ್ ಗಳು ಈಗಿನ ಟಿವಿಗಳಲ್ಲಿ ಚೆನ್ನಾಗಿ ಕಾಣುತ್ತವೆ).

  • Opensubtitles, Moviesubtitles ಮುಂತಾದ ಉಪಶೀರ್ಷಿಕೆಗಳ ಜಾಲತಾಣಗಳಲ್ಲಿ ಕನ್ನಡ ಫೈಲುಗಳನ್ನು ಅಪ್ಲೋಡ್ ಮಾಡಲು ಅಲ್ಲಿ ಕನ್ನಡ ಭಾಷೆಯ ಆಯ್ಕೆ ಇಲ್ಲ. Subscene.com,  cinemasubtitles.com  ತಾಣಗಳಲ್ಲಿ ಕನ್ನಡ ಆಯ್ಕೆ ಇದೆ. ನಾವು ರಚಿಸುವ ಕನ್ನಡ ಅಡಿಬರಹಗಳ ಫೈಲುಗಳನ್ನು ಅಲ್ಲಿಗೆ ಹಾಕಬಹುದು. ಈಗ ಎರಡು ಸಿನೆಮಾಗಳ ಸಬ್ ಟೈಟಲ್ಸ್ ಅಲ್ಲಿ ಅಪ್ಲೋಡ್ ಮಾಡಿದ್ದೇನೆ. ಬ್ಲಡ್ ಡೈಮಂಡ್ಸ್ಪ್ರಿಂಗ್ ಸಮ್ಮರ್ ಫಾಲ್ ವಿಂಟರ್
  • Subtitle workshop, Subtitle Edit ಎಂಬ ಟೂಲ್‍ಗಳು ಈ ಸಬ್ ಟೈಟಲ್ ರಚನೆಗೆ, ಎಡಿಟಿಂಗಿಗೆ, ವೀಡಿಯೋ ಹೊಂದಾಣಿಕೆಗೆ, ಪರೀಕ್ಷೆಗೆ ಬೇಕಾದ ಹಲವು advanced ಸೌಲಭ್ಯಗಳನ್ನು ಹೊಂದಿವೆ. ಆಸಕ್ತರು ಪ್ರಯತ್ನಿಸಬಹುದು. Subtitle Edit ಚೆನ್ನಾಗಿದೆ. ಇನ್ನೂ ಹಲವು ಇಲ್ಲಿವೆ: Top 10 Subtitle Editor Tools
  • ಸಬ್‍ಟೈಟಲ್ಸ್ ಹೊಂದಿರುವ DVD VOB ಮುಂತಾದ ಇನ್ನಿತರ ನಮೂನೆಗಳ ವೀಡಿಯೋಗಳಿಂದ ಸಬ್‍ಟೈಟಲ್ ಗಳನ್ನು extract ಮಾಡಲು Subrip, Subtitle Edit ಮುಂತಾದ ತಂತ್ರಾಂಶಗಳನ್ನು ಪ್ರಯತ್ನಿಸಬಹುದು. (ಎಲ್ಲಾ ವೀಡಿಯೋಗಳಲ್ಲೂ ಇದು ಸಾಧ್ಯವಾಗುವುದಿಲ್ಲ)
  • ವೀಡಿಯೋಗಳನ್ನು ಬೇರೆಬೇರೆ ಮಾದರಿಗಳಿಗೆ ಪರಿವರ್ತಿಸಲು ಮತ್ತು ಉಪಶೀರ್ಷಿಕೆಗಳನ್ನು ವೀಡಿಯೋ ಜೊತೆಗೇ ಸೇರಿಸಿ integrate/embed ಮಾಡಲು FreeMakeVideoConverter, WonderShareVideoConverter ಮುಂತಾದ ತಂತ್ರಾಂಶಗಳನ್ನು ಬಳಸಬಹುದು.
  • ಸಬ್‍ಟೈಟಲ್‍ಗಳ ಬಗ್ಗೆ ವಿವರ ಮಾಹಿತಿಗಾಗಿ ವಿಕಿಪೀಡಿಯಾ ಪುಟದ ಕೊಂಡಿ: Subtitle (captioning)
  • Blood Diamond ಸಿನೆಮಾದ ಕನ್ನಡ ಅಡಿಬರಹಗಳು ಇಲ್ಲಿವೆ: Blood Diamond - Kannada Subtitles
  • ಮೇಲಿನ ಮಾಹಿತಿಗಳೆಲ್ಲವೂ Windows operating systemಗೆ ಸಂಬಂಧಿಸಿದಂತದ್ದಾಗಿದೆ. Linux, Mac ಮುಂತಾದ O.S.ಗಳಲ್ಲೂ ಇದೇ ರೀತಿ ಪ್ರಯತ್ನಿಸಬಹುದು.
  • ಇಲ್ಲೊಂದು Online Subtitles Translator & Editor ಇದೆ. ಇದು ಗೂಗಲ್ ಅನುವಾದವನ್ನು ಬಳಸುತ್ತದೆ. ಅದರಲ್ಲಿ ಇಂಗ್ಲೀಷಿನ ಫೈಲನ್ನು ಅಪ್ಲೋಡ್ ಮಾಡಿದರೆ ಕನ್ನಡಕ್ಕೆ ಅನುವಾದಿಸುತ್ತದೆ. ಬೇಕಿದ್ದಲ್ಲಿ ನಾವು ಅದನ್ನು ಆನ್ ಲೈನ್ ಎಡಿಟ್ ಮಾಡಿ ಸೇವ್ ಮಾಡಿಕೊಳ್ಳಬಹುದು. ಆದರೆ ಗೂಗಲ್ ಅನುವಾದ ಅಷ್ಟು ಸರಿಯಾಗಿರುವುದಿಲ್ಲ.
  • ಕನ್ನಡ ಉಪಶೀರ್ಷಿಕೆಗಳನ್ನು ಬರೆಯಲು ಆಸಕ್ತಿ ಇರುವವರಿಗಾಗಿ, ಮಾಹಿತಿಗಳ ವಿನಿಮಯಕ್ಕೆ, ಚರ್ಚೆಗೆ ಫೇಸ್‍ಬುಕ್ ಗುಂಪೊಂದನ್ನು ರಚಿಸಲಾಗಿದೆ. ಆಸಕ್ತರು ಈ ಗುಂಪನ್ನು ಸೇರಬಹುದು: Kannada Subtitles - ಕನ್ನಡ ಅಡಿಬರಹಗಳು
- ವಿಕಾಸ್ ಹೆಗಡೆ (vikashegde82@gmail.com)

ಅಡಿಬರಹಗಳೊಂದಿಗೆ 'ಅಪೊಕ್ಯಾಲಿಪ್ಟೋ' ಚಿತ್ರದ ಕೆಲವು ಸ್ಕ್ರೀನ್ ‍ಶಾಟ್ಸ್












7 ಕಾಮೆಂಟ್‌ಗಳು:

ಶ್ರೀಕಾಂತ ಎನ್ (Srikantha N) ಹೇಳಿದರು...

ಮಾಹಿತಿಗೆ ಧನ್ಯವಾದಗಳು. ಪ್ರಯತ್ನಿಸುವೆ.

Gananath ಹೇಳಿದರು...

ಧನ್ಯವಾದಗಳು

Krishna Kulkarni ಹೇಳಿದರು...

ಧನ್ಯವಾದಗಳು

Unknown ಹೇಳಿದರು...

ಧನ್ಯವಾದಗಳು ಪ್ರಯತ್ನ ಮಾಡಬಹುದು

Unknown ಹೇಳಿದರು...

ಧನ್ಯವಾದಗಳು ಪ್ರಯತ್ನ ಮಾಡಬಹುದು

Subrahmanya ಹೇಳಿದರು...

ತುಂಬ ಉಪಯುಕ್ತವಾಗಿದೆ. ಆದರೆ, ಇಂಗ್ಲಿಷ್ನಿಂದ ನೇರಾನೇರ ಅನುವಾದ ಮಾಡುವಾಗ ಕೆಲವು ಸಮಸ್ಯೆ ಎದುರಾಗಬಹುದು. ಸಿನಿಮಾದಲ್ಲಿ ಬರುವ ಸಂದರ್ಭಗಳು ಸಂಭಾಷಣೆಯ ಮೇಲೆ ಪರಿಣಾಮ ಬೀರುತ್ತವೆ ಅಥವಾ ತದ್ವಿರುದ್ಧ. ಸುಮ್ಮನೆ ಅನುವಾದ ಮಾಡುತ್ತಾ ಹೋದರೆ ಕೆಲವೊಮ್ಮೆ ಪರಿಣಾಮಕಾರಿ ಸಂಭಾಷಣೆಗಳು ಬರಲಾರದು ಎಂದು ಅನಿಸುತ್ತದೆ. ಹಾಗಾಗಿ ಸಿನಿಮಾ ನೋಡಿಕೊಂಡೆ ಅಡಿಬರಹಗಳನ್ನು ಬರೆಯುವುದು ಹೆಚ್ಚು ಸೂಕ್ತ ಎಂದು ನನ್ನ ಅನಿಸಿಕೆ. ಮ್ಯಾಕ್ ನಲ್ಲಿ ಇದಕ್ಕೆ ಸೊಗಸಾದ ತಂತ್ರಾಂಶವಿದೆ. ಅದರ ವಿವರವನ್ನು ನಿಮಗೆ ಕಳುಹಿಸುವೆ. ಸಾಧ್ಯವಾದರೆ ಈ ಬ್ಲಾಗ್ನಲ್ಲೇ ಸೇರಿಸಿ. :)

ಅನಾಮಧೇಯ ಹೇಳಿದರು...

ಸರಳವಾಗಿ ವಿವರಿಸಲಾಗಿದೆ :)

ನಿಮ್ಮ ಬ್ಲಾಗ್ಗಿಗೆ 10 ವರ್ಷವಾಗಲಲಿದೆ . ಇನ್ನು ಹೀಗೆ ಮುಂದುವರೆಯಲಿ ಎಂದು ಶುಭ ಕೋರುವ ನಿಮ್ಮ ಬ್ಲಾಗಿನ ಅಭಿಮಾನಿ.:-)