ಸೋಮವಾರ, ಜೂನ್ 17, 2019

ನಾನು, ನನ್ನ ಬೈಕು - ಹನ್ನೆರಡನೇ ವರ್ಷದಲ್ಲಿ....

೨೦೦೮ರಲ್ಲಿ ಖರೀದಿಸಿದ ನನ್ನ ಮೋಟಾರ್ ಬೈಕ್  ಮೇ ೨೦೧೯ಕ್ಕೆ ೧೧ ವರ್ಷಗಳ ಸೇವೆ ಪೂರೈಸಿದೆ. ಇಷ್ಟು ವರ್ಷಗಳ ಕಾಲ ಬೆಂಗಳೂರು ಸವಾರಿ ಮಾಡಿಸಿದೆ. ಹಾಗಾಗಿ ಇವತ್ತು ನಾನು ನನ್ನ ಮೋಟಾರ್ ಬೈಕ್ ಬಗ್ಗೆ ಸ್ವಲ್ಪ ಬರೆಯೋಣ ಅಂತ ಅಂದುಕೊಂಡೆ. ಇವು ನನ್ನ ಬೈಕ್ ಜೊತೆ ನನ್ನ ಅನುಭವಗಳು, ಬಳಕೆ, ಅದರ ಸಾಮರ್ಥ್ಯಗಳ ಬಗ್ಗೆ ಸ್ವಲ್ಪ ವಿವರಗಳು.

ಫ್ಲ್ಯಾಶ್ ಬ್ಯಾಕಲ್ಲಿ ಹನ್ನೊಂದು ವರ್ಷಗಳ ಹಿಂದೆ ಹೋದರೆ...... ಬೆಂಗಳೂರಿಗೆ ಬಂದು ಮೂರ್ನಾಲ್ಕು ವರ್ಷ ಆಗಿತ್ತು. ಓಡಾಡಲು ಸ್ವಂತದ್ದೊಂದು ಬೈಕ್ ಬೇಕಿನಿಸಿತ್ತು. ಹಾಗೆ ಯಾವುದು ತಗೊಳ್ಳಬಹುದು ಅಂತ ಹುಡುಕಲು ಹೊರಟಾಗ ಮಾರುಕಟ್ಟೆಯಲ್ಲಿ ಪ್ರಚಲಿತದಲ್ಲಿದ್ದಿದ್ದು 100/110, 125, 150 CC ಬೈಕುಗಳು. ಅದಕ್ಕೂ ಮೇಲಿನ ಸಿಸಿ ಬೈಕುಗಳು (ನನಗೆ) ದುಬಾರಿ ಇದ್ದುದಲ್ಲದೇ ಹೆಚ್ಚು ಪ್ರಚಲಿತದಲ್ಲೂ ಇರಲಿಲ್ಲ ಅನ್ನಬಹುದು. ನಾನು ಮಧ್ಯಮ ಬೆಲೆ ಹಾಗೂ ಒಂದು ಮಟ್ಟಿಗಿನ ಮೈಲೇಜ್ ನೋಡುತ್ತಿದ್ದುದರಿಂದ 125 ಸಿಸಿಯ ಕೆಲವು ಬೈಕುಗಳನ್ನು ಮನಸಿನಲ್ಲಿಟ್ಟುಕೊಂಡಿದ್ದೆ. ಆದರೆ ಅದೇ ಸಮಯದಲ್ಲಿ ಬಜಾಜ್ ಕಂಪನಿಯು 135 ಸಿಸಿಯ ಡಿಸ್ಕವರ್ ಬೈಕನ್ನು ಮಾರುಕಟ್ಟೆಗೆ ತಂದಿದ್ದರು. ಅದನ್ನು ನೋಡಿ ಇಷ್ಟವಾಗಿ ಕೊನೆಗೆ ರಾಜಾಜಿ ನಗರದ ವಿ ಎಸ್ ಟಿ ಬಜಾಜ್ ಶೋರೂಮಿನಲ್ಲಿ  ಡಿಸ್ಕವರ್ 135 ಕೆಂಪು-ಕಪ್ಪು ಬಣ್ಣದ ಬೈಕ್ ಖರೀದಿಸಿದ್ದೂ ಆಯಿತು. ಬೆಲೆ ಒಟ್ಟು ಸುಮಾರು ೫೬೦೦೦ ರೂಪಾಯಿಗಳು. ಇದಿಷ್ಟೂ ಹಿನ್ನೆಲೆ.

ಈಗ ೧೧ ವರ್ಷಗಳಾಗಿವೆ. ಇವತ್ತಿನ ತಾರೀಖಿಗೆ ಕ್ರಮಿಸಿದ ಒಟ್ಟೂ ಕಿಲೋಮೀಟರ್ 45254.  ಇತರರೊಡನೆ ಹೋಲಿಸಿದರೆ ಇದು ಹೆಚ್ಚೂ ಅಲ್ಲ, ಕಡಿಮೆಯೂ ಅಲ್ಲ ಅನ್ನುವಂತಹದ್ದು.  ಇದುವರೆಗೂ  ಕಾಲಕಾಲಕ್ಕೆ ಸರ್ವೀಸ್ ಮಾಡಿಸಿದ್ದೇನೆ, ನಡುವೆ ಕೆಲ ಬಿಡಿಭಾಗಗಳನ್ನು ಬದಲಿಸಿದ್ದೇನೆ. ಇನ್ನು ಒಂದೊಂದಾಗಿ ವಿಷಯಗಳ ಬಗ್ಗೆ ಹೇಳ್ತೀನಿ.

ಶುರುವಾಗಿತ್ತು ಸಮಸ್ಯೆ ಒಂದೇ ತಿಂಗಳಲ್ಲಿ:  ಬೈಕ್ ಖರೀದಿಸಿ ಖುಷಿಯಿಂದ ಓಡಿಸಲು ಪ್ರಾರಂಬಿಸಿದೆ. ಮೊದಲ ಎರಡು ಸರ್ವೀಸಿನವರೆಗೂ  ಚೆನ್ನಾಗಿದ್ದ ಬೈಕು ಅನಂತರ ಇಂಜಿನ್ನಿನಲ್ಲಿ ಏನೋ ಒಂದು ರೀತಿಯ ಸದ್ದು ಹೊರಡಿಸಲಾರಂಭಿಸಿತು. ಹೋಗಿ ತೋರಿಸಿದಾಗ ಸರ್ವೀಸ್ ಸೆಂಟರಿನವರು ಎಂಜಿನ್ನಿನಲ್ಲಿ ಏನೋ ಸಮಸ್ಯೆಯಾಗಿರುವ ಸೂಚನೆ ಕೊಟ್ಟು ಇನ್ನೂ ಸ್ವಲ್ಪ ದಿನ ಓಡಿಸಿ ನೋಡಲು ಹೇಳಿದರು. ಮತ್ತೊಂದು ಸರ್ವೀಸ್ ಆಗುವ ತನಕ ಓಡಿಸಿದರೂ ಸಹ ಆ ಸದ್ದು ನಿಲ್ಲಲಿಲ್ಲ. ಸದ್ದು ಅಂದರೆ ದೊಡ್ಡ ಸದ್ದಲ್ಲ. ಆದರೆ ಕುಳಿತವನಿಗೆ ಗೊತ್ತಾಗುತ್ತಿತ್ತು, ಏನೋ ತೊಂದರೆಯಾಗಿದೆ ಅಂತ.  ಕೊನೆಗೆ ನಿರ್ಧಾರ ಮಾಡಿಕೊಂಡು ಶೋರೂಮಿಗೆ ಹೋಗಿ ಪಟ್ಟು ಹಿಡಿದು ಕೂತಾಗ ಆ ಬ್ಯಾಚಿನಲ್ಲಿ ಬಂದ ಬೈಕುಗಳಲ್ಲಿ ಈ ಸಮಸ್ಯೆ ಕಾಣಿಸಿರುವುದಾಗಿ ಒಪ್ಪಿಕೊಂಡ ಅವರು ವಾಯಿದೆ ಅಡಿಯಲ್ಲಿ ಸರಿಮಾಡಿಕೊಡುವುದಾಗಿ ಹೇಳಿದರು. ಎಂಜಿನ್ನಲ್ಲಿರುವ ಪಿಸ್ಟನ್ ರಿಂಗುಗಳ ತಯಾರಿಕೆ/ಜೋಡಣೆಯಲ್ಲಿ ಸಮಸ್ಯೆಯಾದುದರಿಂದ ಈ ಸದ್ದು ಹೊರಡುತ್ತಿತ್ತು.  ಕೊನೆಗೆ ಅವುಗಳನ್ನು ರಿಪ್ಲೇಸ್ ಮಾಡಿ ಸರಿಮಾಡಿಕೊಟ್ಟಮೇಲೆ ಆ ಸದ್ದು ನಿಂತಿತು. ಅಲ್ಲಿಂದ ನನ್ನ ಪ್ರಯಾಣ ಮುಂದುವರೆಯಿತು.

ಸಾಮಾನ್ಯ ಪ್ರಯಾಣದ ದೂರ ಮತ್ತು ಸ್ಥಳಗಳು: ಈ ಬೈಕಿನಲ್ಲಿ ನನ್ನ ಬಹುಪಾಲು ಓಡಾಟ ಬೆಂಗಳೂರಿನ ಒಳಗೆ ನಡೆದಿದೆ. ಬೆಂಗಳೂರಿನ ಎಂಟು ದಿಕ್ಕುಗಳಿಗೂ ಓಡಾಡಿದ್ದೇನೆ. ಸುಮಾರು ಮೂರು ವರ್ಷಗಳ ಕಾಲ ದಿನವೂ ಸುಮಾರು ೨೫ ಕಿ.ಮಿ. ಗಳಷ್ಟು, ಮತ್ತು ನಾಲ್ಕು ವರ್ಷಗಳ ಕಾಲ ದಿನಾ ೧೩ ಕಿ.ಮಿ. ದೂರ ಹೋಗಿ ಬಂದು ಮಾಡಿದ್ದೇನೆ. ಅನಂತರ ಕೆಲಕಾಲ ಆಫೀಸಿಗೆ ನಡೆದುಕೊಂಡು ಹೋಗುವಷ್ಟು ದೂರ ಮನೆ ಮಾಡಿದ್ದರಿಂದ ಮತ್ತು ಟ್ರಾಫಿಕ್ಕಿನ ಕಾರಣಕ್ಕೆ ಸಿಟಿಬಸ್, ಆಫೀಸ್ ಕ್ಯಾಬ್ ಬಳಸಲು ಆರಂಭಿಸಿದ್ದರಿಂದ ಬೈಕಿನ ಬಳಕೆ ವಾರಾಂತ್ಯಕ್ಕೆ ಮತ್ತು ಅಗತ್ಯಕ್ಕೆ ತಕ್ಕಂತೆ ಮಾತ್ರ ಆಗಿತ್ತು. ಈಗಲೂ ಸಹ  ಹಾಗೇ ಇದೆ.

ಬೈಕಿನ ಮೈಲೇಜ್ ಮತ್ತು ಇತರ ಸಾಮರ್ಥ್ಯಗಳು: ಇದುವರೆಗೂ ಬೈಕ್ ಸುಮಾರು ೫೦ ಕಿ.ಮಿ. ಮೈಲೇಜ್ ಕೊಡುತ್ತಾ ಬಂದಿದೆ.  ಪಿಕ್ ಅಪ್ ಕೂಡ ಮಧ್ಯಮ ಸಾಮರ್ಥ್ಯದ್ದಾಗಿದೆ.  ನಾನು ಪ್ರಯೋಗಾತ್ಮಕವಾಗಿ ಕೆಲವು ಬಾರಿ ಹೈವೇಗಳಲ್ಲಿ ಗಂಟೆಗೆ ೯೫-೧೦೦ ಕಿ.ಮಿ.ಗಳಷ್ಟು ವೇಗದಲ್ಲಿ ಬೈಕನ್ನು ಓಡಿಸಿ ಪರೀಕ್ಷಿಸಿದ್ದೆ. ಆ ವೇಗದ ನಂತರ ಬೈಕ್ ಕಂಪಿಸಲು ಶುರುವಾಗುತ್ತದೆ ಮತ್ತು ನಿಯಂತ್ರಣ ಕಷ್ಟವಾಗಬಹುದು.  ಡಿಸ್ಕವರ್ ಸೀಟಿಂಗ್ ದೂರ ಪ್ರಯಾಣಕ್ಕೆ ಅನುಕೂಲಕರವಾಗಿಲ್ಲ ಎಂಬುದು ಇತರ ಬೈಕುಗಳಿಗೆ ಹೋಲಿಸಿದರೆ ನನ್ನ ಅನಿಸಿಕೆ.

ದೂರಪ್ರಯಾಣಗಳು: ಬೈಕಿನಲ್ಲಿ ದೂರಪ್ರಯಾಣಗಳನ್ನು ಹೆಚ್ಚು ಮಾಡಿಲ್ಲ. ಹೆಚ್ಚಾಗಿ ದೂರಪ್ರಯಾಣಕ್ಕೆ ಬೈಕ್ ಬಳಸುವ ಅಗತ್ಯ ಸಂದರ್ಭ ಬಂದಿಲ್ಲ ಅನ್ನಬಹುದು.  ನನ್ನ ತಾಯಿಯ ಒಪ್ಪಿಗೆ ಇಲ್ಲದ್ದರಿಂದ ಬೆಂಗಳೂರಿನಿಂದ ನಮ್ಮೂರು ಭದ್ರಾವತಿಗೆ ಬೈಕಲ್ಲಿ ಹೋಗಬೇಕೆಂಬ ಆಸೆ ಈಡೇರಲಿಲ್ಲ! ಮಾಡಿದ ಕೆಲವು ದೂರಪ್ರಯಾಣಗಳೆಂದರೆ:
  • ಬೆಂಗಳೂರು - ನಂದಿಬೆಟ್ಟ (ಎರಡು ಬಾರಿ)
  • ಬೆಂಗಳೂರು - ಮುದ್ದೇನಹಳ್ಳಿ (ಚಿಕ್ಕಬಳ್ಳಾಪುರ ಬಳಿ)
  • ಬೆಂಗಳೂರು - ತುಮಕೂರು
  • ಬೆಂಗಳೂರು - ಹೊಸಕೋಟೆ - ಮಾಲೂರು
  • ಬೆಂಗಳೂರು - ಬನ್ನೇರುಘಟ್ಟ - ಮುತ್ಯಾಲ ಮಡುವು ಜಲಪಾತ
  • ಬೆಂಗಳೂರು - ಪಿರಮಿಡ್ ವ್ಯಾಲಿ (ಕನಕಪುರ ರಸ್ತೆ)
  • ಬೆಂಗಳೂರು - ಫಿಲ್ಮ್ ಸಿಟಿ (ಬಿಡದಿ)
ಸರ್ವೀಸ್, ರಿಪೇರಿ ಮತ್ತು ಖರ್ಚು: ಮೊದಲು ಬಜಾಜ್ ಅಧಿಕೃತ ಸರ್ವೀಸ್ ಸೆಂಟರುಗಳಲ್ಲೇ ಸರ್ವೀಸಿಗೆ ಕೊಡುತ್ತಿದ್ದೆ. ಇತ್ತೀಚಿನ ಐದಾರು ವರ್ಷಗಳಲ್ಲಿ ಸ್ಥಳೀಯ ಗ್ಯಾರೇಜುಗಳಲ್ಲಿ ಸರ್ವೀಸ್ ಮಾಡಿಸುತ್ತಿದ್ದೇನೆ. ಸಾಮಾನ್ಯವಾಗಿ ಇತ್ತೀಚೆಗಿನ ವರ್ಷಗಳಲ್ಲಿ ೮೦೦ರಿಂದ ೧೨೦೦ ರೂಪಾಯಿವರೆಗೆ ಸರ್ವೀಸ್ ಖರ್ಚು ಆಗುತ್ತಿದೆ. ಕೆಲವು ಬಾರಿ ಬಿಡಿಭಾಗಗಳ ಬದಲಾವಣೆ ಇದ್ದಾಗ ೨೦೦೦, ೩೦೦೦ ವರೆಗೂ ಹೋಗಿದ್ದುಂಟು. ಮೂರು ವರ್ಷಗಳ ಹಿಂದೆ ಒಮ್ಮೆ ಮುಂಭಾಗದ ಗಾಲಿ ಸರಾಗವಾಗಿ ತಿರುಗದಂತಾಗಿ ತೊಂದರೆಯಾದ್ದರಿಂದ ಗಾಲಿ, ಫೋರ್ಕ್, ಡಿಸ್ಕ್ ಎಲ್ಲವನ್ನೂ ಬಿಚ್ಚಿ ರಿಪೇರಿ ಮಾಡಿಸಿದ್ದು ಮತ್ತು ಒಂದು ವರ್ಷದ ಹಿಂದೆ ಎಂಜಿನ್ ಆಯಿಲ್ ಸಣ್ಣದಾಗಿ ಲೀಕ್ ಆಗಲು ಶುರುವಾದಾಗ ಒಳಗಿನ ಕೆಲ ಭಾಗಗಳನ್ನು ಬದಲಾಯಿಸಿ ಸೀಲ್ ಹಾಕಿಸಿದ್ದು - ಇದೆರಡೂ ಅನಪೇಕ್ಷಿತ ದೊಡ್ಡ ರಿಪೇರಿಗಳು.

ಇದುವರೆಗೂ ಬದಲಿಸಿದ ಬಿಡಿಭಾಗಗಳು:
  • ಬ್ರೇಕ್ ಶೂ (ಹಲವು ಬಾರಿ)
  • ಫೋರ್ಕ್ ಆಯಿಲ್ ಸೀಲಿಂಗ್
  • ಎಂಜಿನ್ ಹೆಡ್, ಟೈಮಿಂಗ್ ಚೈನ್  
  • ಕ್ಲಚ್ ಕೇಬಲ್, ಬ್ರೇಕ್ ಕೇಬಲ್ ಮತ್ತು ಆಕ್ಸೆಲೆರೇಟರ್ ಕೇಬಲ್
  • ಬ್ಯಾಟರಿ (ಮೂರು ಬಾರಿ)
  • ಚೈನ್ ಸ್ಪ್ರಾಕೆಟ್ ಮತ್ತು ಚೈನ್
  • ಸ್ಪ್ರಾಕೆಟ್ ಬೇರಿಂಗ್ ಮತ್ತು ರಬ್ಬರ್
  • ಹಿಂಭಾಗದ ಮಡ್ ಗಾರ್ಡ್
  • ಬಲ್ಬ್, ಫಿಲ್ಟರ್, ಟ್ಯೂಬ್ ಮುಂತಾದ ಕಾಲಕಾಲಕ್ಕೆ ಬದಲಾಯಿಸಬೇಕಾದ ಇತರ ಚಿಕ್ಕಪುಟ್ಟ ಬಿಡಿಭಾಗಗಳು
ಅಪಘಾತಗಳು ಮತ್ತು ತಪ್ಪುಗಳು: ಯಾವುದೇ ದೊಡ್ಡ ಪ್ರಮಾಣದ ಅಪಘಾತಗಳಾಗಿಲ್ಲ.
೧. ಒಂದು ಬಾರಿ ಸಿಗ್ನಲ್ಲಲ್ಲಿ ನಿಂತಿದ್ದಾಗ ಹಿಂಭಾಗದಿಂದ ಜೀಪ್ ಬಂದು ಗುದ್ದಿ ಮಡ್ ಗಾರ್ಡ್ ಡ್ಯಾಮೇಜ್ ಆಗಿತ್ತು.
೨. ಮತ್ತೊಂದು ಬಾರಿ ಯಾರೋ ಅಡ್ಡರಸ್ತೆಯಿಂದ ಸಡನ್ನಾಗಿ ಅಡ್ಡಬಂದು ನಾನು ಬ್ರೇಕ್ ಹಾಕಿ ನಿಯಂತ್ರಣ ತಪ್ಪಿದ್ದರಿಂದ ಬೈಕ್ ಕೆಳಗೆ ಬಿದ್ದು ಲೆಗ್ ಗಾರ್ಡ್ ಗೆ ಸ್ವಲ್ಪ ತರಚು ಕಲೆಗಳಾಗಿದೆ.
೩. ಒಂದು ಬಾರಿ ಬಹಳ ದಿನಗಳ ಕಾಲ ಎಂಜಿನ್ ಆಯಿಲ್ ಬದಲಾಯಿಸದೇ ಬಳಸಿದ್ದರಿಂದ ಇಂಜಿನ್ ಗೆ ಸ್ವಲ್ಪ ಹಾನಿಯಾಗಿ ಎಂಜಿನ್ ಹೆಡ್ ಹೊಸದು ಹಾಕಿಸಬೇಕಾಯಿತು.
೪. ಬಹಳ ದಿನಗಳ ಕಾಲ ಬೈಕ್ ಬಳಸದೇ ಇಟ್ಟಿದ್ದರಿಂದ ಒಂದು ಬಾರಿ ಬ್ಯಾಟರಿ ಛಾರ್ಜ್ ಸಂಪೂರ್ಣ ಹೋಗಿ ಪುನಃ ಛಾರ್ಜ್ ಆಗದೇ ಹೊಸದು ಹಾಕಿಸಬೇಕಾಯಿತು.

ಪ್ರಸ್ತುತ ಸ್ಥಿತಿ ಹಾಗೂ ಮುಂದಿನ ಯೋಚನೆ: ಟಯರುಗಳು ಒಂದು ಮಟ್ಟಕ್ಕೆ ಸವೆದಿರುವ ಕಾರಣ ಬದಲಾಯಿಸಬಹುದು. ಆದರೆ ತೀರಾ ಅಗತ್ಯವೇನಿಲ್ಲ ಅನಿಸುತ್ತದೆ. ವಯೋಸಹಜ ಸಣ್ಣಪುಟ್ಟ ತೊಂದರೆ ಹೊರತುಪಡಿಸಿದರೆ ಸದ್ಯದ ಮಟ್ಟಿಗೆ ಯಾವುದೇ ಗುರುತರವಾದ್ದು ಏನೂ ಇಲ್ಲದ ಕಾರಣ ಒಂದೆರಡು ವರ್ಷಗಳಂತೂ ಬಳಕೆ ಮುಂದುವರೆಸಲು ತೀರ್ಮಾನಿಸಿದ್ದೇನೆ.


ನನ್ನ ಡಿಸ್ಕವರ್ 135.... ಯೌವನದಲ್ಲಿ.. :)

3 ಕಾಮೆಂಟ್‌ಗಳು:

sunaath ಹೇಳಿದರು...

ಮೊದಲನೆಯದಾಗಿ ಆಪ್ತವಾಗಿ ಬಿಟ್ಟ ವಾಹನದ ಬಗೆಗೆ ಆಪ್ತವಾಗಿ ಬರೆದ ಲೇಖನಕ್ಕೆ ಸ್ವಾಗತ. ಎರಡನೆಯದಾಗಿ ಒಳ್ಳೆಯ ವಿವರಣೆ ಕೊಟ್ಟಿದ್ದೀರಿ. ‘ವಯೋಸಹಜ’ ಎನ್ನುವ ಪದಬಳಕೆ ವಿನೋದಪೂರ್ಣವಾಗಿದೆ. ಉಪಯುಕ್ತವಾದ ಆಪ್ತಲೇಖನಕ್ಕಾಗಿ ಅಭಿನಂದನೆಗಳು.

Unknown ಹೇಳಿದರು...

Nano carnalli madida ಪ್ರವಾಸ ಚಾರಣ ನಿಮ್ಮ ಬೈಕ್ ಗಿಂತ ಚಿನ್ನಾಗಿ ಇದೆ.

HARGI ಹೇಳಿದರು...

ಡಿಸ್ಕವರಿ ಬೈಕ್ ನಾಮಾ..nice