ಆಯಾ ಕಾಲಘಟ್ಟದಲ್ಲಿ ಫೇಸ್ಬುಕ್ಕಲ್ಲಿ ಬರೆದಿದ್ದ ಕೆಲವು ಮುಖ್ಯ ಸಂಗತಿಗಳನ್ನು ಇಲ್ಲಿ ದಾಖಲಿಸಿಡುತ್ತಿದ್ದೇನೆ. ಕನ್ನಡದಲ್ಲಿ ಡಬ್ಬಿಂಗ್ ತೆರೆದುಕೊಳ್ಳಬೇಕೆಂದು ಹಲವಾರು ವರ್ಷಗಳಿಂದ ನಡೆಯುತ್ತಿದ್ದ ಕಾನೂನಾತ್ಮಕ ಹೋರಾಟವು ಯಶಸ್ವಿಯಾದ ನಂತರ ಹಲವು ತೊಡಕುಗಳನ್ನು ದಾಟಿ ಬಂದಿದ್ದರಿಂದ ಈ ಸಂಗತಿಗಳು ಮುಖ್ಯವಾಗಿವೆ.
ಅಕ್ಟೋಬರ್ 6, 2019 · ಬೆಂಗಳೂರು: 'ಸೈರಾನರಸಿಂಹರೆಡ್ಡಿ' ಅನ್ನುವ ಸಿನೆಮಾ ನೋಡಿದೆ. ಮೂಲತಃ ತೆಲುಗು ಚಿತ್ರವಾದರೂ ಇದು ನಾಲ್ಕೈದು ಭಾಷೆಗಳಲ್ಲಿ ಒಂದೇ ಸಲಕ್ಕೆ ಬಿಡುಗಡೆಯಾಗಿದೆ. ಕನ್ನಡದಲ್ಲಿ ಇದರ ಡಬ್ಬಿಂಗ್ ಕ್ವಾಲಿಟಿ ಅದ್ಭುತವಾಗಿದೆ. ಮೂಲ ತೆಲುಗು ಸಿನೆಮಾ ಎಂಬುದು ನೆನಪಿಗೇ ಬಾರದಂತೆ ಕನ್ನಡ ಸಂಭಾಷಣೆಗಳು ಮತ್ತು ಲಿಪ್ ಟೈಮಿಂಗ್ ಹೊಂದಿಕೆಯಾಗಿದೆ. ಇಷ್ಟು ವರ್ಷ ದೊಡ್ಡ ಬಜೆಟ್ಟಿನ ಚಿತ್ರಗಳು ಕರ್ನಾಟಕದಾದ್ಯಂತ ತೆಲುಗು ಭಾಷೆಯಲ್ಲೇ ಇನ್ನೂರು ಮುನ್ನೂರು ಕಡೆ ಬಿಡುಗಡೆಯಾಗುತ್ತಿದ್ದವು. ಕನ್ನಡ ಚಿತ್ರರಂಗದ ಕೆಲವರ ಸ್ವಾರ್ಥದಿಂದ ಈಸ್ಥಿತಿ ಬಂದಿತ್ತು.ಈ ಹಿಂದೆ ಕೆಲವು ಸಿನೆಮಾಗಳು ಏಕಕಾಲಕ್ಕೆ ಕನ್ನಡದಲ್ಲೂ ಬಂದಾಗ ಅದಕ್ಕೆ ಟಾಕೀಸ್ ಸಿಗದಂತೆ ಮಾಡಲಾಗಿತ್ತು. ನರಸಿಂಹರೆಡ್ಡಿ ಸಿನೆಮಾದ ಕನ್ನಡ ಆವೃತ್ತಿಗೂ ಶೋಗಳು ಸಿಗದಂತೆ ಮಾಡಲು ಪ್ರಯತ್ನಗಳು ನಡೆದರೂ ಸಹ ಈ ಬಾರಿ ಹೆಚ್ಚು ತೆರೆಗಳಲ್ಲಿ ಪ್ರದರ್ಶನ ಸಾಧ್ಯವಾಗಿ ಜನರು ನೋಡುತ್ತಿದ್ದಾರೆ. ಸಿನೆಮಾ ಬಗ್ಗೆ ಹೇಳುವುದಾದರೆ, ಬ್ರಿಟಿಷರ ವಿರುದ್ಧ ಹೋರಾಡಿದ ಮತ್ತು ಅದನ್ನು ಪ್ರಜಾಂದೋಲನದಂತೆ ಮಾಡಿದ ನರಸಿಂಹ ರೆಡ್ಡಿಯ ಹೋರಾಟ ಕಥನ. ಸ್ವಲ್ಪ ಹೀರೋಯಿಸಂ ವೈಭವೀಕೃತವಾಗಿ, ನಾಟಕೀಯ ಸನ್ನಿವೇಶಗಳಿದ್ದರೂ ಸಿನೆಮಾ ಅದ್ದೂರಿಯಾಗಿದೆ ಮತ್ತು ದೃಶ್ಯಗಳು ರೋಚಕವಾಗಿವೆ. ಮುಖ್ಯಪಾತ್ರವೊಂದರಲ್ಲಿ ಸುದೀಪ ಇರುವುದು ಪ್ಲಸ್ ಪಾಯಿಂಟ್. ನಮ್ಮ ದೇಶದ ಸ್ವಾತಂತ್ರ್ಯ ಹೋರಾಟದ ಒಂದು ಮಜಲನ್ನು ಯಶಸ್ವಿಯಾಗಿ ತೋರಿಸಿದೆ ಈ ಸಿನೆಮಾ. ನವೆಂಬರಲ್ಲಿ 'ಟರ್ಮಿನೇಟರ್' ಸಿನೆಮಾಕೂಡ ಕನ್ನಡದಲ್ಲಿ ಬರಲಿದೆ. ಕನ್ನಡಿಗರಿಗೆ ಎಲ್ಲವೂ ಕನ್ನಡದಲ್ಲಿ ಸಿಗುವಂತಾಗಿ ಭಾಷೆ ಸಮೃದ್ದ, ಸಶಕ್ತವಾಗಬೇಕೆಂಬ ಡಬ್ಬಿಂಗ್ ಪರ ಆಶಯಕ್ಕ ಗೆಲುವಾಗಲಿ. ನಿಮ್ಮೂರಿನ ಟಾಕೀಸ್ ಗಳಲ್ಲಿ ಕನ್ನಡ ಆವೃತ್ತಿಗಳನ್ನೇ ಹಾಕಲು ಆಗ್ರಹಿಸಿ. ಕನ್ನಡ ಆವೃತ್ತಿಯಲ್ಲೇ ಸಿನೆಮಾ ನೋಡಿ ಪ್ರೋತ್ಸಾಹಿಸಿ.
(ಹಿಂದಿಯ 'ದಬಾಂಗ್ ೩' ಸಿನೆಮಾ ಕೂಡ ಇದೇ ಸಮಯದಲ್ಲಿ ಕನ್ನಡದಲ್ಲೂ ಬಿಡುಗಡೆಯಾಗಿ ಟಾಕೀಸುಗಳಲ್ಲಿ ಪ್ರದರ್ಶನಗೊಂಡಿತು.)
(2019 ರಲ್ಲಿ ಡಿಸ್ಕವರಿ ಕನ್ನಡ ಆಡಿಯೋ ಫೀಡ್ ಶುರುವಾಗಿದೆ)
******
ಸೆಪ್ಟೆಂಬರ್ ೨೦, ೨೦೨೦: ೨೦೨೦ರಲ್ಲಿ ಮೊದಲ ಬಾರಿಗೆ ಉದಯ ಟೀವಿಯು ಕನ್ನಡ ಕ್ಕೆ ಡಬ್ ಆದ ಕೆಲವು ತಮಿಳು ಸಿನೆಮಾಗಳನ್ನು ಪ್ರಸಾರ ಮಾಡಿತು. ಅತ್ಯುತ್ತಮ ಡಬ್ಬಿಂಗ್ ಕ್ವಾಲಿಟಿ ಹೊಂದಿದ್ದ ಅವುಗಳಿಗೆ ಒಳ್ಳೆಯ ಪ್ರತಿಕ್ರಿಯೆ ದೊರೆಯಿತು. ೨೦೨೦ ರ ಮಾರ್ಚ್ ನಂತರ ಕೊರೊನಾ ಜಾಗತಿಕ ಪಿಡುಗಿನ ಸಂದರ್ಭದಲ್ಲಿ ಶೂಟಿಂಗ್ ಸ್ಥಗಿತಗೊಂಡಿದ್ದರಿಂದ ಅನೇಕ ಟೀವಿ ವಾಹಿನಿಗಳು ಕನ್ನಡಕ್ಕೆ ಡಬ್ ಆದ ಧಾರಾವಾಹಿಗಳನ್ನು ಪ್ರಸಾರ ಮಾಡಲು ಆರಂಭಿಸಿದವು. ಮಹಾಭಾರತ, ಸೀತೆಯರಾಮ, ಮಾಲ್ಗುಡಿ ಡೇಸ್, ಮಹಾನಾಯಕ ಅಂಬೇಡ್ಕರ್, ರಾಧಾಕೃಷ್ಣ, ಅಲಾದ್ದಿನ್ ಮುಂತಾದ ಹಲವು ಧಾರಾವಾಹಿ, ಕಾರ್ಯಕ್ರಮಗಳು ಮತ್ತು ಸಿನೆಮಾಗಳು ಪ್ರಸಾರವಾದವು / ಆಗುತ್ತಿವೆ. ಡಬ್ಬಿಂಗ್ ಸಿನೆಮಾ/ಕಾರ್ಯಕ್ರಮಗಳನ್ನೇ ಮುಖ್ಯವಾಗಿ ಪ್ರಸಾರ ಮಾಡುವ ಒಂದು ಟೀವಿ ಚಾನಲ್ Dangal Kannada ಕೂಡ ಸೆಪ್ಟೆಂಬರಲ್ಲಿ ಪ್ರಾಯೋಗಿಕ ಪ್ರಸಾರ ಶುರುಮಾಡಿದೆ.
ಕಾಮೆಂಟ್‌ಗಳಿಲ್ಲ:
ಕಾಮೆಂಟ್ ಪೋಸ್ಟ್ ಮಾಡಿ