ಅಂಕೇಗೌಡರ ಪುಸ್ತಕಮನೆಯು ಒಂದು ದೊಡ್ಡ ಪುಸ್ತಕಸಂಗ್ರಹ ಇರುವ ಜಾಗ. ಶ್ರೀರಂಗಪಟ್ಟಣ -ಪಾಂಡವಪುರ ಬಳಿ ಇದೆ. ಸುಮಾರು ೧೦ ಲಕ್ಷ ಪುಸ್ತಕಗಳು ಅಲ್ಲಿ ಇವೆ ಎಂದು ಹೇಳುತ್ತಾರೆ. ಮುಖ್ಯವಾಗಿ ಕನ್ನಡ ಪುಸ್ತಕಗಳಿಂದ ಹಿಡಿದು ಹಲವು ಭಾಷೆಗಳ, ಹಲವು ಪ್ರಕಾರಗಳ ಪತ್ರಿಕೆ, ಪುಸ್ತಕ ಇತ್ಯಾದಿಗಳ ಸಂಗ್ರಹ ಇಲ್ಲಿದೆ. ಅಂಕೇಗೌಡರು ಸ್ವಯಂಆಸಕ್ತಿಯಿಂದ ಹಲವು ದಶಕಗಳಿಂದ ಇದನ್ನು ಸಂಗ್ರಹಿಸಿಟ್ಟಿದ್ದಾರಂತೆ. ದೇಶ-ವಿದೇಶಗಳ ಹಳೆ ಹೊಸ ಪುಸ್ತಕಗಳು ಇಲ್ಲಿವೆ.
ಬಹಳ ವರ್ಷಗಳಿಂದ ಈ ಪುಸ್ತಕಮನೆಗೆ ಭೇಟಿ ಕೊಡಬೇಕೆಂಬ ಆಸೆ ನನಗೆ ಇತ್ತು. ಇತ್ತೀಚೆಗೆ ಒಂದೆರಡು ಯೂಟ್ಯೂಬ್ ವೀಡಿಯೋಗಳನ್ನು ನೋಡಿದಾಗಿಂದ ಈ ಪುಸ್ತಕಮನೆಗೆ ಹೋಗುವ ಯೋಜನೆ ಹಾಕಿಕೊಂಡಿದ್ದೆ. ಪುಸ್ತಕಪ್ರೇಮಿ ಗೆಳೆಯರಾದ ರಾಜುಹಗ್ಗದ, ಶಶಿಕಿರಣ್ ಸಹ ಆಸಕ್ತಿ ವಹಿಸಿ ಜೊತೆಯಾದ್ದರಿಂದ ನಾವು ಮೂವರು ಏಪ್ರಿಲ್ ೧೨ರಂದು ಶನಿವಾರ ಅಲ್ಲಿಗೆ ಭೇಟಿಕೊಟ್ಟೆವು. ಮಂಡ್ಯದಿಂದ ಮುಂದೆ ಇನ್ನೂ ಮೈಸೂರು ಕಡೆ ಸಾಗಿ ಅನಂತರ ಪಾಂಡವಪುರ ಕಡೆ ಹೋಗುವ ಮುಖ್ಯರಸ್ತೆಯಲ್ಲಿ ರಸ್ತೆಬದಿಯಲ್ಲೇ ಈ ಪುಸ್ತಕಮನೆ ಇದೆ. ಒಂದು ಸಾಧಾರಣ ಕಟ್ಟಡದ ಎದುರಿನಲ್ಲೇ ನಮ್ಮನ್ನು ಸ್ವಾಗತಿಸಿದ್ದು ಮೂಟೆಗಳಲ್ಲಿ ತುಂಬಿಟ್ಟಿದ್ದ ಪುಸ್ತಕರಾಶಿಗಳು. ಅದನ್ನು ಕೆಲಸಗಾರರು ಒಳಗೆ ಸಾಗಿಸುತ್ತಿದ್ದರು. ನಾವು ಪುಸ್ತಕಮನೆಯ ಒಳಗೆ ಕಾಲಿಟ್ಟಾಗ ಒಂದು ಗೋಡೌನಿನಂತಹ ದೊಡ್ಡ ಕಟ್ಟಡದ ತುಂಬೆಲ್ಲಾ ಪುಸ್ತಕಗಳು ರಾಶಿರಾಶಿಯಾಗಿ ಇಡಲ್ಪಟ್ಟಿದ್ದ ನೋಟ ಕಂಡಿತು. ಅಷ್ಟು ದೊಡ್ಡ ಪುಸ್ತಕ ಸಂಗ್ರಹವನ್ನು ನೋಡಿ ನಾವು ದಂಗಾದೆವು. ಒಳಗೆ ನಾವು ಮೂರು ಜನರನ್ನು ಹೊರತುಪಡಿಸಿ ಬೇರ್ಯಾರೂ ಇರಲಿಲ್ಲ.
ಓಡಾಡಲು ಸಣ್ಣ ಕಾಲುದಾರಿಯಷ್ಟು ಜಾಗಗಳನ್ನು ಹೊರತುಪಡಿಸಿ ಇಡೀ ಕಟ್ಟಡದ ತುಂಬಾ ಪುಸ್ತಕಗಳೋ ಪುಸ್ತಕಗಳು! ಅಲ್ಲೆಲ್ಲಾ ಓಡಾಡುತ್ತಾ ಕಾಣಿಸಿದ, ಕೈಗೆ ಸಿಕ್ಕ ಪುಸ್ತಕಗಳನ್ನು ನೋಡುತ್ತಾ ತಿರುಗಾಡಿದೆವು. ಒಂದಿಷ್ಟು ಕಬ್ಬಿಣದ ಬೀರುಗಳು ಮತ್ತು ರ‍್ಯಾಕುಗಳಲ್ಲಿ ಪುಸ್ತಕಗಳನ್ನು ಇಡಲಾಗಿತ್ತು. ಉಳಿದ ಪುಸ್ತಕಗಳನ್ನು ಎಲ್ಲೆಡೆ 3-4 ಅಡಿ ಎತ್ತರದವರೆಗೆ ನೆಲದ ಮೇಲೇ ಪೇರಿಸಿಡಲಾಗಿತ್ತು. ಅವು ಹಲವು ತಿಂಗಳುಗಳಿಂದ ಅಥವಾ ವರ್ಷಗಳಿಂದ ಹಾಗೆ ಅಲ್ಲಿ ಇಟ್ಟಿರುವುದು ಗೊತ್ತಾಗುತ್ತಿತ್ತು. ನೆಲದ ಮೇಲೆ ಮತ್ತು ಪುಸ್ತಕಗಳ ಮೇಲೆ ಸಾಕಷ್ತು ಧೂಳು ತುಂಬಿಕೊಂಡಿತ್ತು. ಒಂದಿಷ್ಟು ಸಮಯಕಾಲ ಅಲ್ಲೇ ಓಡಾಡುತ್ತಾ ಕಂಡ ನಮ್ಮಾಸಕ್ತಿಯ ಪುಸ್ತಕಗಳನ್ನು ತಿರುವಿಹಾಕುತ್ತಾ ಕಾಲಕಳೆದೆವು.
ಪುಸ್ತಕಪ್ರೇಮಿಗಳಿಗೆ, ಓದುಗರಿಗೆ, ವಿದ್ಯಾರ್ಥಿಗಳಿಗೆ, ಆಸಕ್ತರಿಗೆ ಈ ಪುಸ್ತಕಮನೆಯು ಒಂದು ಖಂಡಿತ ಭೇಟಿಕೊಡಬಹುದಾದ ಸ್ಥಳ. ಆದರೆ ನಾಡಿನ ಒಂದು ಆಸ್ತಿಯಂತಾಗಬೇಕಾಗಿದ್ದ ಈ ಪುಸ್ತಕ ಸಂಗ್ರಹ ನಿರ್ವಹಣೆಯಿಲ್ಲದೇ, ಸರಿಯಾದ ವ್ಯವಸ್ಥೆಗಳಿಲ್ಲದ ಸ್ಥಿತಿಯಲ್ಲಿದೆ ಅನಿಸಿತು. ದಾನಿಗಳು ಆ ಕಟ್ಟಡ ಕಟ್ಟಿಸಿಕೊಟ್ಟಿದ್ದು ಅದರಲ್ಲಿ ಪುಸ್ತಕಗಳನ್ನು ತುಂಬಿಡಲಾಗಿದೆ. ಜೋಡಿಸಿಡುವ ವ್ಯವಸ್ಥೆ ಏನೇನೂ ಸಾಲದಾಗಿದೆ. ಕೊನೇಪಕ್ಷ ಅಲ್ಲಿ ತುಂಬಿಕೊಂಡಿರುವ ಕಸ, ಧೂಳು ಸಹ ತೆಗೆಯಲಾಗದೇ ಪುಸ್ತಕಗಳು ಹಾಳಾಗುತ್ತಿವೆ. ಕೂತು ಓದುವ ವ್ಯವಸ್ಥೆ ಕೂಡ ಇಲ್ಲ. ನಾವು ಹೋದಾಗ ಏನೋ ಮರಕೆಲಸಗಳು ನಡೆಯುತ್ತಿದ್ದು ಕೂತು ಓದಲು ಲೈಬ್ರರಿಯಂತೆ ಒಂದು ದೊಡ್ಡ ಟೇಬಲ್ ಇತ್ಯಾದಿಗಳ ವ್ಯವಸ್ಥೆ ಆಗುತ್ತಿರುವಂತೆ ಕಂಡಿತು.
ಒಟ್ಟಾರೆ, ಪುಸ್ತಕಮನೆಯ ಭೇಟಿಯು ಒಂದು ರೀತಿ ಮಿಶ್ರಭಾವ ಹುಟ್ಟುಹಾಕಿತು. ಪುಸ್ತಕಮನೆಗೆ ಸಂಬಂಧಿಸಿದಂತೆ ಅಂಕೇಗೌಡ ಜ್ಞಾನಪ್ರತಿಷ್ಠಾನ ಎಂಬ ನೋಂದಾಯಿತ ಸಂಸ್ಥೆ ಇದೆ. ಪುಸ್ತಕ ಮನೆ ಬಗ್ಗೆ ಯೂಟ್ಯೂಬಲ್ಲಿ ಹಲವು ವೀಡಿಯೋಗಳಿವೆ. ಆಸಕ್ತರು ನೋಡಬಹುದು.
5 ಕಾಮೆಂಟ್‌ಗಳು:
ನೈಜ ಅನುಭವ
ನೈಜ ಅನುಭವ
ಈ ವೈಯಕ್ತಿಕ ಗ್ರಂಥಾಲಯವನ್ನು ವಿಶ್ವದ ಒಂಬತ್ತನೆಯ ಅದ್ಭುತ ಎಂದು ಕರೆಯಬೇಕು!
ಅದ್ಭುತವಾದ ಗ್ರಂಥಾಲಯ!ಪುಸ್ತಕಗಳನ್ನು ನಿರ್ವಹಿಸಲು ಈ ಸ್ಥಳಕ್ಕೆ ನಿರಂತರ ಕಾಳಜಿ ವಹಿಸಬೇಕು. ಅಂಕೇಗೌಡರಿಗೆ ನನ್ನ ವಂದನೆಗಳು. ಇದನ್ನುಹಂಚಿಕೊಂಡಿದ್ದಕ್ಕಾಗಿ ಧನ್ಯವಾದಗಳು ವಿಕಾಸ್.
ಧನ್ಯವಾದಗಳು ಸತೀಶ್, ಸುನಾಥಕಾಕಾ ಮತ್ತು ಸಿದ್ದೇಶ್ವರ್.
ಕಾಮೆಂಟ್ ಪೋಸ್ಟ್ ಮಾಡಿ