ಬಹಳ ಜನ ಬೆಂಗಳೂರಿಗರು ನಗರದ ಇತಿಹಾಸದ ಬಗ್ಗೆ ಕೆಂಪೇಗೌಡರ ಕಾಲದಿಂದ ಮಾತ್ರ ಬಲ್ಲರು. ಆದರೆ ಬೆಂಗಳೂರು ಸುಮಾರು ೨೫೦೦ ವರ್ಷಗಳಷ್ಟು ಹಿಂದಿನ ಇತಿಹಾಸವನ್ನು ಹೊಂದಿದೆ. ಬೆಳ್ಳಂದೂರು, ಜಾಲಹಳ್ಳಿ, ರೇಸ್ ಕೋರ್ಸ್ ಗಳಲ್ಲಿ ಕಂಡುಹಿಡಿಯಲ್ಪಟ್ಟ ಶಿಲಾಯುಗದ ಸಮಾಧಿಗಳು ಮತ್ತು ಮಾನವ ನಿರ್ಮಿತ ವಸ್ತುಗಳು ಇದಕ್ಕೆ ಪುರಾವೆಗಳಾಗಿವೆ!
ಲಿಖಿತ ದಾಖಲೆಗಳ ವಿಷಯಕ್ಕೆ ಬಂದರೆ, ಬೆಂಗಳೂರಿನಲ್ಲಿ 1900ನೇ ಇಸವಿಯವರೆಗೆ ಸುಮಾರು ನೂರೈವತ್ತಕ್ಕೂ ಹೆಚ್ಚು ಶಿಲಾಶಾಸನಗಳು ಕಂಡುಬಂದಿವೆ. ಈ ಶಿಲಾಶಾಸನಗಳ ಕಾಲ ಕ್ರಿ.ಶ. ಎಂಟನೇ ಶತಮಾನದ ನಂತರದ್ದಾಗಿದ್ದು ಇವು ನಗರದ ಎಲ್ಲಾ ಭಾಗಗಳಲ್ಲೂ ಇವೆ. ಶಿಲಾಶಾಸನಗಳು ಅವು ರಚನೆಯಾದ ಕಾಲದ ಜನ, ಸಂಸ್ಕೃತಿ, ಧರ್ಮ, ಭಾಷೆ ಮುಂತಾದವುಗಳ ಮೂಲ ದಾಖಲೆಗಳಾಗಿವೆ. ಈ ಶಿಲಾಶಾಸನಗಳನ್ನು 1894 ರಿಂದ 1905 ರ ನಡುವೆ ಬಿ. ಎಲ್. ರೈಸ್ ಅವರು ತಮ್ಮ 'ಎಪಿಗ್ರಾಫಿಯ ಕರ್ನಾಟಿಕ' ಎನ್ನುವ 12 ಸಂಪುಟಗಳ ಗ್ರಂಥಗಳಲ್ಲಿ ದಾಖಲಿಸಿಟ್ಟಿದ್ದಾರೆ. ಆದರೆ ಬೇಸರದ ಸಂಗತಿ ಎಂದರೆ ಮಿತಿಮೀರಿದ ನಗರೀಕರಣದ ಹೊಡೆತಕ್ಕೆ ಸಿಕ್ಕು ಈ ಶಿಲಾಶಾಸನಗಳಲ್ಲಿ ಸುಮಾರು ಶೇಕಡಾ ಎಪ್ಪತ್ತರಷ್ಟು ನಾಶವಾಗಿವೆ. ಉಳಿದಿರುವ ಕೆಲವು ಶಾಸನಗಳೂ ಸಹ ಸರಿಯಾದ ಮನ್ನಣೆ ಇಲ್ಲದಂತಿವೆ ಮತ್ತು ಅವುಗಳಿರುವ ಜಾಗಗಳು ಸಹ ಶೋಚನೀಯವಾಗಿವೆ.
ಬೆಂಗಳೂರಿಗರು ಇಂತಹ ಶಿಲಾಶಾಸನಗಳ ಮಹತ್ವದ ಬಗ್ಗೆ ತಿಳಿದುಕೊಳ್ಳಬೇಕಾಗಿರುವುದು ತುರ್ತು ಅಗತ್ಯವಾಗಿದ್ದು ಅವುಗಳು ಇನ್ನೂ ನಾಶವಾಗದಂತೆ ಸಂರಕ್ಷಣೆ ಮಾಡಬೇಕಾಗಿದೆ.
'ಇನ್ ಸ್ಕ್ರಿಪ್ಶನ್ ಸ್ಟೋನ್ಸ್ ಆಫ್ ಬೆಂಗಳೂರು' ಎನ್ನುವುದು ಈ ಶಾಸನಗಳ ಬಗ್ಗೆ ಅರಿವು ಮೂಡಿಸುವ ಮತ್ತು ಬೆಂಗಳೂರು ಪ್ರದೇಶದಲ್ಲಿ ಕಂಡುಬರುವ ಶಿಲಾಶಾಸನಗಳನ್ನು ಸಂರಕ್ಷಿಸುವ ಒಂದು ನಾಗರೀಕ ಯೋಜನೆಯಾಗಿದೆ. ಬಿ. ಎಲ್. ರೈಸ್ ಅವರ ದಾಖಲೆಗಳ ಪ್ರಕಾರ ಶಾಸನಗಳ ಜಾಡನ್ನು ಹಿಡಿದು ಪತ್ತೆ ಹಚ್ಚಿ ಅವುಗಳನ್ನು ಸಂರಕ್ಷಿಸಲು ಆಧುನಿಕ ತಂತ್ರಜ್ಞಾನಗಳನ್ನು ಮತ್ತು ವಿಧಾನಗಳನ್ನು ಇದರಲ್ಲಿ ಬಳಸಲಾಗುತ್ತಿದೆ.
ಕ್ರಿ.ಶ. ೭೫೦ರ ಕಿತ್ತಯ್ಯ-ಹೆಬ್ಬಾಳ ಶಿಲಾಬರಹ
ಪತ್ತೆ
ರಿವೈವಲ್ ಹೆರಿಟೇಜ್ ಹಬ್ (ಆರ್ ಎಚ್ ಎಚ್) ಎನ್ನುವುದು ಬೆಂಗಳೂರಿನಲ್ಲಿನ ಪಾರಂಪರಿಕ ಸ್ಮಾರಕಗಳನ್ನು ಸಂರಕ್ಷಿಸುವ ಕೆಲಸಗಳಲ್ಲಿ ನಿರತವಾಗಿರುವ ನಾಗರೀಕರ ಒಂದು ತಂಡ. ಹೆಬ್ಬಾಳದ ನಿವಾಸಿ ದಿಲೀಪ ಕ್ಷತ್ರಿಯ ಎಂಬುವವರು 2018ರ ಜೂನ್ ತಿಂಗಳ ಆದಿಯಲ್ಲಿ ಇದನ್ನು ಸಂಪರ್ಕಿಸಿ ಹೆಬ್ಬಾಳದಲ್ಲಿ ಯಾವುದೋ ಒಂದು ರಸ್ತೆ ಬದಿಯಲ್ಲಿ ಇರುವ ನಾಲ್ಕು ದೇವರ ಕಲ್ಲುಗಳನ್ನು ಸ್ಥಳಾಂತರಿಸಲು ಸಹಾಯ ಮಾಡಲು ಕೋರಿಕೊಂಡರು. ಅಲ್ಲಿ ರಸ್ತೆ ರಿಪೇರಿ ಕೆಲಸ ನಡೆಯುತ್ತಿದ್ದು, ಆ ಕಲ್ಲುಗಳು ನಾಶವಾಗಬಹುದೆಂಬ ಆತಂಕ ಅವರದ್ದಾಗಿತ್ತು. ಅದರಂತೆ ರಿವೈವಲ್ ತಂಡದ ಸದಸ್ಯರು 20 ಜೂನ್ 2018ರಂದು ಅಲ್ಲಿಗೆ ಹೋಗಿ ಮಣ್ಣಿನಲ್ಲಿ ಹೂತುಹೋಗಿದ್ದ ಆ ಕಲ್ಲುಗಳನ್ನು ಅಗೆದು ತೆಗೆದಾಗ ಒಂದು ಅಚ್ಚರಿ ಕಾದಿತ್ತು. ಅದರಲ್ಲಿ ಒಂದು ವೀರಗಲ್ಲಿನ ಹೂತು ಹೋಗಿದ್ದ ಭಾಗದಲ್ಲಿ ಐದು ಸಾಲುಗಳ ಪುರಾತನ ಬರೆಹ ಕಂಡುಬಂದಿತ್ತು.
ಕಲ್ಬರಹದ ವ್ಯಾಖ್ಯಾನ
ಆ ಶಾಸನವು ಕಂಡುಹಿಡಿಯಲ್ಪಟ್ಟ ಕೆಲವೇ ಗಂಟೆಗಳಲ್ಲಿ ಶಿಲಾಶಾಸನ ತಜ್ಞ ಪಿ. ವಿ. ಕೃಷ್ಣಮೂರ್ತಿಯವರು ಆ ಶಾಸನವು ಎಂಟನೇ ಶತಮಾನದ ಗಂಗರ ದೊರೆ ಶ್ರೀಪುರುಷನ ಕಾಲದ್ದೆಂದು ಗುರುತಿಸಿದರು. ಅಷ್ಟೇ ಅಲ್ಲದೇ ಅದು ಬೆಂಗಳೂರಿನಲ್ಲಿ ಇದುವರೆಗೂ ದೊರಕಿರುವ ಶಾಸನಗಳಲ್ಲಿ ಅತ್ಯಂತ ಹಳೆಯದ್ದು ಎಂದು ಕೂಡ ಅಭಿಪ್ರಾಯಪಟ್ಟರು. ಆ ಶಾಸನದಲ್ಲಿನ ಬರಹದ ಕೆಲವು ಭಾಗಗಳು ಮಾಸಿಹೋಗಿದ್ದರಿಂದ ಅದನ್ನು ಓದಿ ವ್ಯಾಖ್ಯಾನಿಸುವುದು ಒಂದು ಸವಾಲಾಗಿತ್ತು. ಆ ಬರಹವನ್ನು ಮೂರು ಆಯಾಮದಲ್ಲಿ ೫೦ ಮೈಕ್ರಾನ್ ನಿಖರತೆಯಲ್ಲಿ ಸ್ಕ್ಯಾನ್ ಮಾಡಿ ಹೈ ರೆಸೊಲ್ಯೂಶನ್ ಚಿತ್ರಗಳನ್ನು ಮಾಡಲಾಯಿತು. ಆ ಚಿತ್ರಗಳು ಅದರಲ್ಲಿನ ಬರಹವನ್ನು ಚೆನ್ನಾಗಿ ಓದಲು ಅವರಿಗೆ ಸಹಾಯವಾದವು. ಅವರು ಆ ಶಿಲಾಶಾಸನದ ಸಂಪೂರ್ಣ ಪಠ್ಯವನ್ನು ದಾಖಲಿಸಿ ಏಪ್ರಿಲ್-ಸೆಪ್ಟೆಂಬರ್ 2018ರ 37-38ನೇ ಸಂಪುಟದ 'ಇತಿಹಾಸ ದರ್ಪಣ' ಪತ್ರಿಕೆಯಲ್ಲಿ ಲೇಖನವನ್ನು ಪ್ರಕಟಿಸಿದ್ದಾರೆ.
ಅದರಂತೆ ಆ ಪಠ್ಯ ಮತ್ತು ಅದರ ಅರ್ಥ ಹೀಗಿದೆ:
ಸ್ವಸ್ತಿ ಶ್ರೀ ಸಿರಿಪುರುಷ ಮಹಾರಾಜಾ ಪೃಥುವೀ ರಾಜ್ಯಂಗೆಯ್ಯೆ
ಪೆರ್ಬ್ಬೊಳಲ್ನಾಡು ಮೂವತ್ತುಮಾನ್ಪೆೞ್ನಾಗತ್ತರಸರಾಳೆ ಆರ
ಕಮ್ಮೊಱರ ಮೈಂದುನಂ ಕೊಡನ್ದಲೆಯರ ಕಿತ್ತಯನಾ ರಟ್ಟವಾ
ಡಿ ಕೂಚಿ ತನ್ದೊಡೆ ಊರೞಿವಿನೊಳೆಱಿದಿನ್ದ್ರಕ ಪುಕಾನ್
ಪೆರ್ಗುನ್ದಿಯು ಕಿಱುಗುನ್ದಿ ತಮ್ಮ ಕುರ್ಳ್ನಿಱಿದೊದು ಇ ಕಲ್ಲುಂ
"ಶ್ರೀಪುರುಷ ಮಹಾರಾಜನು ಭೂಮಂಡಲವನ್ನು ಆಳುತ್ತಿದ್ದಾಗ, ಪೆಳ್ನಾಗತ್ತರನು ಪೆರ್ಬೊಳನಾಡನ್ನು ಆಡಳಿತ ಮಾಡುತ್ತಿದ್ದಾಗ, ಕೊದಂಡಲೆ ಕುಲದ ಅರಕಮ್ಮೊರನ ಮೈದುನ ಕಿಟ್ಟಯ್ಯನು ರಟ್ಟವಾಡಿ ದಾಳಿಯ ಸಂದರ್ಭದಲ್ಲಿ ನಡೆದ ಊರಳಿವು ಕಾಳಗದಲ್ಲಿ ಇಂದ್ರಲೋಕ ಸೇರಿದನು. ಈ ಕಲ್ಲು ಪೆರ್ಗುಂಡಿ ಮತ್ತು ಆತನ ಸಹೋದರ ಕಿರ್ಗುಂಡಿಯಿಂದ ಸ್ಥಾಪಿಸಲ್ಪಟ್ಟಿತು."
- ಶ್ರೀಪುರುಷ - ಕ್ರಿ.ಶ. 726ರಿಂದ 788ವರೆಗೆ ಆಳಿದ ಗಂಗ ಸಾಮ್ರಾಜ್ಯದ ರಾಜ
- ಪೆಲ್ನಾಗತ್ತಾರಸ - ಹಿರಿಯ ನಾಗತರ ಅರಸ
- ಕಿಟ್ಟಯ್ಯ - ಈತನ ನೆನಪಿನಲ್ಲಿ ಸ್ಥಾಪಿಸಲಾದ ವೀರಗಲ್ಲಿನ ವೀರ
- ಪೆರ್ಬೊಳಲ - ದೊಡ್ಡ (ಪೆರಿ) ನಗರ (ವೊಳಲು)
- ಹೆಬ್ಬಾಳ ಹೆಸರಿನ ಶಬ್ದೋತ್ಪತ್ತಿ -> (ಪೆರಿಯ+ವೊಳಲ್) ಪೆರ್ಬೊಳಲ್ -> ಪೆಬ್ಬೊಳಲ್ -> ಪೆಬ್ಬೊಳ್ -> ಪೆಬ್ಬಾಳ -> ಹೆಬ್ಬಾಳ
- ರಟ್ಟವಾದಿ - ರಾಷ್ಟ್ರಕೂಟ
ಮಹತ್ವ ಮತ್ತು ಸಂರಕ್ಷಣೆಯ ಯೋಜನೆ
ಈ ಕಿಟ್ಟಯ್ಯ-ಹೆಬ್ಬಾಳ ಶಾಸನವು ಬೆಂಗಳೂರಿಗೆ ಈ ಕೆಳಗಿನ ಕಾರಣಗಳಿಂದ ಪ್ರಮುಖವಾದುದ್ದಾಗಿದೆ:
೧. ಇದು ಬೆಂಗಳೂರಿನಲ್ಲಿ ದೊರೆತಿರುವ ಅತಿ ಹಳೆಯ, ಅಂದರೆ ಸುಮಾರು 1250 ವರ್ಷಗಳಷ್ಟು ಹಳೆಯದಾದ ಕನ್ನಡ ಭಾಷೆಯ ಬರೆಹವಾಗಿದೆ. ಇದು ಕನ್ನಡದ ಮೊದಲ ಗ್ರಂಥವಾದ 'ಕವಿರಾಜಮಾರ್ಗ'ಕ್ಕಿಂತಲೂ ನೂರು ವರ್ಷಗಳಷ್ಟು ಹಳೆಯದು.
೨. ಈ ಶಾಸನದಿಂದ ತಿಳಿದುಬಂದಂತೆ 'ಕಿಟ್ಟಯ್ಯ' ಎಂಬುದು ಬೆಂಗಳೂರಿನ ಅತಿಹಳೆಯ ನಿವಾಸಿಯೊಬ್ಬನ ಹೆಸರಾಗಿದ್ದು, ಆತ ನಿಜವಾಗಿ ಗೊತ್ತಿರುವಂತೆ ಬೆಂಗಳೂರಿನ ಮೊದಲ ಪ್ರಜೆ ಎಂದು ಹೇಳಬಹುದು!
೩. ಶಾಸನದಲ್ಲಿ 'ಹೆಬ್ಬಾಳ' ದ ಹೆಸರು ಉಲ್ಲೇಖವಾಗಿರುವುದರಿಂದ ಬೆಂಗಳೂರಿನ ಅತಿ ಹಳೆಯ ಪ್ರದೇಶವಿದು ಎಂದು ಗೊತ್ತಾಗುತ್ತದೆ.
ಈ ಎಲ್ಲಾ ಕಾರಣಗಳಿಂದ ಕ್ರಿ.ಶ. 750ರ ಕಾಲದ ಈ ಕಿಟ್ಟಯ್ಯನ ವೀರಗಲ್ಲನ್ನು ಅದರ ಮಹತ್ವಕ್ಕೆ ತಕ್ಕುದಾದ ರೀತಿಯಲ್ಲಿ ಇಟ್ಟು ಕಾಪಾಡಿ ಗೌರವಿಸುವಂತೆ, ಸಂಭ್ರಮಿಸುವಂತೆ ಮತ್ತು ಇನ್ನೂ ಶತಮಾನಗಳ ಕಾಲ ಇದು ಉಳಿಯುವಂತೆ ಯೋಜನೆ ರೂಪಿಸಲಾಗಿದೆ. ಎಸ್ತೆಟಿಕ್ ಆರ್ಕಿಟೆಕ್ಟ್ಸ್ ನ ವಾಸ್ತುಶಿಲ್ಪಿ ಯಶಸ್ವಿನಿ ಶರ್ಮಾ ಅವರು ಈ ವೀರಗಲ್ಲನ್ನು ಇಡಲು ಗಂಗ ಶೈಲಿಯ ಮಂಟಪವೊಂದನ್ನು ವಿನ್ಯಾಸಗೊಳಿಸಿದ್ದಾರೆ. ಬೆಂಗಳೂರಿನ ಹೆಮ್ಮೆ ಮತ್ತು ಆಸ್ತಿಯಾಗಿರುವ ಇದಕ್ಕಾಗಿ ಮಂಟಪ ನಿರ್ಮಾಣದ ಉದ್ದೇಶಕ್ಕೆ ನಾಗರೀಕರಿಂದ ಹಣಸಂಗ್ರಹಕ್ಕಾಗಿ ಕೋರಿಕೊಳ್ಳಲಾಗಿದೆ. ದೇಣಿಗೆ ನೀಡಿದವರಿಗೆ ಧನ್ಯವಾದಪೂರ್ವಕವಾಗಿ ಈ ವೀರಗಲ್ಲಿನ ೧/೮ ಕುಗ್ಗಿಸಿದ ಗಾತ್ರದ ಹಿತ್ತಾಳೆಯ ಪ್ರತಿಕೃತಿಯನ್ನು ಕೊಡಲಾಗುತ್ತದೆ.
ನಮ್ಮ ನಗರದ ಶ್ರೀಮಂತ ಪರಂಪರೆಯನ್ನು ಸಂರಕ್ಷಿಸಲು ನಮ್ಮೊಡನೆ ಕೈಜೋಡಿಸಿ.
***************
ಮೇಲಿನ ಪಠ್ಯ ನಾನು ಕನ್ನಡದಲ್ಲಿ ಅನುವಾದಿಸಿ ಕೊಟ್ಟಂತದ್ದು. ಮಂಟಪಕ್ಕೆ ದೇಣಿಗೆ ಕೊಟ್ಟವರಿಗೆ ಸ್ಮರಣಿಕೆಯಾಗಿ ಕೊಡುವ ಹಿತ್ತಾಳೆ ಪ್ರತಿಕೃತಿಯ ಜೊತೆ ಇರುವ ಬ್ರೋಶರ್ ನಲ್ಲಿ ಬಳಸಿಕೊಳ್ಳಲಾಗಿದೆ.
2020ರಲ್ಲಿ ಮಂಟಪದ ನಿರ್ಮಾಣ ಪೂರ್ಣಗೊಂಡು ವೀರಗಲ್ಲು ಶಾಸನಗಳನ್ನು ಅದರಲ್ಲಿಟ್ಟು ಸಂರಕ್ಷಿಸಲಾಗಿದೆ.
ಕಿತ್ತಯ್ಯ ವೀರಗಲ್ಲು -ಶಿಲಾಬರಹದ ಮಂಟಪವಿರುವ ಸ್ಥಳದ ನಕಾಶೆ ಲಿಂಕ್
ವಿಕಿಪೀಡಿಯಾ ಪುಟ: ಹೆಬ್ಬಾಳ ಕಿತ್ತಯ್ಯ ಶಿಲಾಬರಹ
ಕಾಮೆಂಟ್‌ಗಳಿಲ್ಲ:
ಕಾಮೆಂಟ್ ಪೋಸ್ಟ್ ಮಾಡಿ