ಭಾನುವಾರ, ಜೂನ್ 28, 2026

Movie ದಿ ವಾಂದ್ (Die Wand) / The Wall

ಇತ್ತೀಚೆಗೊಂದು ಸಿನೆಮಾ ನೋಡಿದ್ದೆ. ಅಂತರಜಾಲದಲ್ಲಿ ಏನೋ ಹುಡುಕುತ್ತಿದ್ದಾಗ ಇದರ ಮಾಹಿತಿ ದೊರೆತು ನೋಡಬೇಕೆಸಿ ನೋಡಿದ್ದೆ. ದಿ ವಾಂದ್ (Die Wand) ಹೆಸರಿನ ಈ ಸಿನೆಮಾ 2012ರಲ್ಲಿ ಬಿಡುಗಡೆಯಾದ ಮೂಲತಃ ಜರ್ಮನ್ ಭಾಷೆಯ ಆಸ್ಟ್ರಿಯಾ ದೇಶದ ಸಿನೆಮಾ. ಇಂಗ್ಲೀಷಿನಲ್ಲಿ ದ ವಾಲ್ ಎಂಬ ಹೆಸರಿನಲ್ಲಿ ಇದೆ.  

ಒಂದು ಹೆಸರಿಲ್ಲದ ಮಹಿಳೆಯ ಪಾತ್ರ. ಒಂದು ದಿನ ಅವಳು ತನ್ನ ಇಬ್ಬರು ಗೆಳೆಯರು ಮತ್ತು ಸಾಕುನಾಯಿಯೊಂದಿಗೆ ಕಾಡಿನೊಳಗಿನ 'ಹಂಟಿಂಗ್ ಲಾಡ್ಜ್'ಗೆ ಹೋಗುತ್ತಾಳೆ. ಅವಳ ಗೆಳೆಯರು ಸಂಜೆ ಅಲ್ಲೇ ಹತ್ತಿರದ ಹಳ್ಳಿಗೆ ಹೋಗಿ ಬರುತ್ತೇವೆಂದು  ಹೋಗುತ್ತಾರೆ, ಈಕೆ ಕಾಡಿನಲ್ಲಿಯೇ ಉಳಿದುಕೊಳ್ಳುತ್ತಾಳೆ. ಅವಳ ಸಾಕುನಾಯಿಯೂ ಅವಳೊಂದಿಗಿರುತ್ತದೆ. ರಾತ್ರಿ ಬರಬೇಕಿದ್ದ ಗೆಳೆಯರನ್ನು ಮಾರನೆಯ ದಿನ ಹುಡುಕಿಕೊಂಡು  ಹೊರಟಾಗ ಒಂದು ನಿಗೂಢ ಅದೃಶ್ಯ ಗೋಡೆಯೊಳಗೆ ತಾನು ಬಂಧಿಯಾಗಿರುವುದು ಆಕೆಯ ಅನುಭವಕ್ಕೆ ಬರುತ್ತದೆ. ಅದು ಗಾಜಿನಂತಹ ಗೋಡೆ, ಆಚೆಯ ಲೋಕವೆಲ್ಲಾ ಕಾಣುತ್ತಿದೆ, ಆದರೆ ಆ ಗೋಡೆಯನ್ನು ದಾಟಲಾಗುತ್ತಿಲ್ಲ. ಯಾವ ದಾರಿಯಲ್ಲಿ ಹೋದರೂ ಆ ಅಭೇದ್ಯ ಅದೃಶ್ಯ ಗೋಡೆ ಅಡ್ಡನಿಂತಿದೆ. ಆಕೆಯಿದ್ದ ಕಾಡಿನ ಮನೆಯ ಕಣಿವೆಯೊಳಗಿನ ಒಂದು ಸೀಮಿತ ಪ್ರದೇಶದಿಂದ ಆಚೆ ಹೋಗಲಾರದಂತಾಗಿದೆ. ಗೋಡೆಯ ಆಚೆಗಿನ ಲೋಕದಲ್ಲಿ ಯಾವುದೇ ಚಟುವಟಿಕೆಯಿಲ್ಲದಿರುವುದು  ಆಕೆಯ ಗಮನಕ್ಕೆ ಬರುತ್ತದೆ. ನಿಸರ್ಗವನ್ನು ಹೊರತುಪಡಿಸಿ ಅಲ್ಲಿ ಬೇರೆ ಎಲ್ಲವೂ ನಿಂತ ಹಾಗೇ ನಿಂತಿದೆ. ಪಕ್ಕದ ಫಾರಂಹೌಸಿನ ಮುಂದೆ ಮುದುಕನೊಬ್ಬ ಪ್ರತಿಮೆಯಂತೆ ಹಾಗೇ ನಿಂತಿದ್ದಾನೆ, ಬಾಗಿಲಲ್ಲಿ ಮುದುಕಿ ವಿಗ್ರಹವಾಗಿದ್ದಾಳೆ,  ನೀರು ಮಾತ್ರ ಬೀಳುತ್ತಲೇ ಇದೆ. ಒಟ್ಟಿನಲ್ಲಿ ಹೊರಗಿನ ಲೋಕದಲ್ಲಿ ಸಮಯವೇ ಸ್ಥಬ್ಧವಾಗಿರುವಂತಿದೆ. ಈ ವಿಚಿತ್ರವೇನೆಂದು ಗೊತ್ತಾಗದೇ ತೊಳಲಾಟದಲ್ಲಿ ಬೀಳುತ್ತಾಳೆ.

ಅಲ್ಲಿಂದ ಹೋರಹೋಗುವ ಎಲ್ಲಾ ಪ್ರಯತ್ನಗಳೂ ವಿಫಲವಾದಾಗ ಅನಿವಾರ್ಯವಾಗಿ ಅಲ್ಲಿಯೇ ಬದುಕತೊಡಗುತ್ತಾಳೆ. ಆಕೆಯ ಜೊತೆಗಾರನೆಂದರೆ ಆಕೆಯ ಸಾಕುನಾಯಿ ಮಾತ್ರ ಆಗಿರುತ್ತದೆ. ಈ ನಡುವೆ ಒಂದು ಹಸುವು ಆಕಸ್ಮಿಕವಾಗಿ ಆಕೆಗೆ ಸಿಗುತ್ತದೆ, ಅದನ್ನು ತಂದು ಸಾಕಿಕೊಳ್ಳುತ್ತಾಳೆ. ಒಂದು ಬೆಕ್ಕು ಸಿಗುತ್ತದೆ. ಬೆಕ್ಕು ಮರಿಹಾಕುತ್ತದೆ. ಹಸುವು ಕರುಹಾಕುತ್ತದೆ. ಅವುಗಳನ್ನೂ ನೋಡಿಕೊಳ್ಳುವ ಹೊಣೆಗಾರಿಕೆ ಹೊತ್ತುಕೊಂಡು ದಿನಗಳನ್ನು ಕಳೆಯುತ್ತಾಳೆ. ಹೊರಜಗತ್ತಿನ ಯಾವ ಸಂಪರ್ಕಗಳೂ ಇಲ್ಲದಂತೆ ಬದುಕುತ್ತಾಳೆ. ತನ್ನ ಆಹಾರವನ್ನು ಹುಡುಕಿಕೊಳ್ಳುವುದು, ಬೆಳೆದುಕೊಳ್ಳುವುದು, ಬೇಟೆಯಾಡುವುದು ಮಾಡುತ್ತಾ ಒಂಟಿತನದಲ್ಲಿ ದಿನಗಳನ್ನು ಕಳೆಯುತ್ತಾಳೆ. ಋತುಗಳು ಬದಲಾಗುತ್ತವೆ,  ಕೆಲವು ಘಟನೆಗಳು ನಡೆಯುತ್ತವೆ. ಹೀಗೆ ಮೂರು ವರುಶಗಳೇ ಕಳೆಯುತ್ತವೆ. ಅನಿರೀಕ್ಷಿತವಾಗಿ ಬಂದ ವ್ಯಕ್ತಿಯೊಬ್ಬ ಆ ಕರುವನ್ನು ಮತ್ತು ಆಕೆಯ ನಾಯಿಯನ್ನು ಕೊಂದುಹಾಕುತ್ತಾನೆ. ಇದರಿಂದ ತೀವ್ರ ಆಘಾತಕ್ಕೊಳಗಾಗಿ ಆಕೆ ನರಳುತ್ತಾಳೆ. ಆದರೂ ಆಕೆಯ ಅನಿವಾರ್ಯ ಒಂಟಿ ಬಂಧಿ ಬದುಕು ಹಾಗೇ ಮುಂದುವರೆಯುತ್ತದೆ.  

ಈ ಸಿನೆಮಾವನ್ನು ಹಾಗೆಯೇ ನೋಡಿದಾಗ ಒಂದು ಫ್ಯಾಂಟಸಿ ಕತೆಯಂತೆ ಕಂಡರೂ ಇದನ್ನು ಮನುಷ್ಯನ ಜೀವನಕ್ಕೆ ಒಂದು ರೂಪಕದಂತೆ ಮಾಡಿರಬಹುದಾ ಅನಿಸುತ್ತದೆ. ಮನುಷ್ಯನು ತನ್ನೊಳಗೆ ತಾನೇ ಒಂಟಿಯಾಗುವ ಪರಿಸ್ಥಿತಿಯನ್ನು  ಇದು ಬಿಂಬಿಸುತ್ತಿದೆಯಾ ಅಥವಾ ಎಲ್ಲವೂ ಇದ್ದೂ ಸಹ ಜೀವನದ ಒಂದು ಹಂತದಲ್ಲಿ ಅನಿವಾರ್ಯ ಮಾನಸಿಕ ಒಬ್ಬಂಟಿತನದಲ್ಲಿ ಸಿಲುಕಿಕೊಳ್ಳಬಹುದಾದ ಸನ್ನಿವೇಶವನ್ನು ಈ ಸಿನೆಮಾ ಸೂಚ್ಯವಾಗಿ ಹೇಳುತ್ತದೆ ಎಂದೂ ವಿಶ್ಲೇಷಿಸಬಹುದು.  ಇನ್ನೊಂದು ಕೋನದಲ್ಲಿ ನೋಡಿದಾಗ ಸಮಾಜದ ಬಗೆಬಗೆಯ ಚೌಕಟ್ಟುಗಳೊಳಗೆ, ಬಗೆಬಗೆಯ ಕಟ್ಟುಪಾಡುಗಳೊಳಗೆ, ಕೌಟುಂಬಿಕ ಪರಿಸ್ಥಿತಿಗಳಲ್ಲಿ ಈ ರೀತಿಯ ಮಾನಸಿಕ ಬಂಧನದ ಬದುಕನ್ನು ಬಾಳುತ್ತಿರುವವರ ಬದುಕಿಗೆ ಉಪಮೆಯಾಗಿದೆಯಾ ಎಂದೂ ಅನಿಸುತ್ತದೆ.  ಇನ್ನೂ ಕೊಂಚ ಆಳಕ್ಕಿಳಿದರೆ ಇದು ನಿರ್ದಿಷ್ಟವಾಗಿ ಕೆಲವರು ತಮ್ಮ ಜೀವನದಲ್ಲಿ ಸಿಲುಕುವ ಪರಿಸ್ಥಿತಿಯನ್ನೇ  ತೋರಿಸುತ್ತಿರಬಹುದಾ ಅನ್ನಿಸಲೂಬಹುದು. ಹೀಗೆ ಹಲವಾರು ದೃಷ್ಟಿಕೋನಗಳನ್ನು ನೋಡುಗರ ವಿಶ್ಲೇಷಣೆಗೆ ಬಿಡುತ್ತದೆ. 

ಇದು ೧೯೬೩ರಲ್ಲಿ ಪ್ರಕಟವಾದ ಅದೇ ಹೆಸರಿನ ಪುಸ್ತಕವೊಂದರೆ ಕತೆಯ ಆಧಾರಿತೆ ಸಿನೆಮಾ.  ನಿರೂಪಣೆಯ ವಿಷಯಕ್ಕೆ ಬಂದರೆ, ಆಕೆ ತನ್ನ ಕತೆಯನ್ನು ದಿನಚರಿ ಬರೆಯುವುದರ ಮೂಲಕ ಹೇಳುತ್ತಿರುವಂತೆ ನಿರೂಪಿಸಲಾಗಿದೆ.  ಇಡೀ ಸಿನೆಮಾವನ್ನೂ ಒಂದೇ ಪಾತ್ರವು ಆವರಿಸಿಕೊಂಡಿದೆ. ಸಂಭಾಷಣೆಗಳಿಲ್ಲ. ನಿಧಾನವಾಗಿ ಸಾಗುವ ಸಿನೆಮಾದಲ್ಲಿ ಕಾಡು ಪರಿಸರ ಬೆಟ್ಟ ಗುಡ್ಡಗಳ ಸುಂದರ ಪರಿಸರದ ನೋಟಗಳಿವೆ. ಆದರೆ ಆ ಸೌಂದರ್‍ಯದೊಳಗೂ ಒಂಥರಾ ವಿಷಾದದ ಛಾಯೆಯಿದೆ.  

- ವಿಕಾಸ್



 

ಶನಿವಾರ, ಮಾರ್ಚ್ 14, 2026

ಹೋಟೆಲ್, ರೆಸ್ಟುರಂಟ್ ಗಳಲ್ಲಿ 'ಸರ್ವೀಸ್ ಛಾರ್ಜ್' ಕೊಡಬೇಕೆ?

ಬಹಳಷ್ಟು ರೆಸ್ಟುರೆಂಟ್ ಗಳಲ್ಲಿ ನೇರವಾಗಿ ಬಿಲ್ಲಿನಲ್ಲಿ ಶೇ ೭.೫ ಅಥವಾ ೫.೫ ಸರ್ವೀಸ್ ಛಾರ್ಜ್ ಎಂದು ಸೇರಿಸಿರುತ್ತಾರೆ. ನಿಮ್ಮಲ್ಲಿ ಎಷ್ಟು ಜನ ಇದನ್ನು ಗಮನಿಸುತ್ತೀರೋ ಇಲ್ಲವೋ, ಕೆಲವರು ಗಮನಿಸಿದರೂ ಅದು ಬಿಲ್ಲಿನ ಮೊತ್ತದ ಸಹಜ ಭಾಗ ಎಂದುಕೊಂಡಿರಬಹುದು. ಇದ್ಯಾಕೆ ಹಾಕುತ್ತಾರೆ ಎಂದು ಗಮನಿಸಿದರೂ ಅಲ್ಲಿ ಕೇಳಲು ಮುಜುಗರ ಆಗಿ ಸುಮ್ಮನೇ ಪಾವತಿ ಮಾಡಿರಬಹುದು..

ಆದರೆ ವಿಷಯ ಇಷ್ಟೆ. ಸರ್ವೀಸ್ ಛಾರ್ಜ್ ಎಂಬುದು ಕಡ್ಡಾಯವಲ್ಲ. ಅನ್ವಯವಾಗುವಷ್ಟು ಜಿ.ಎಸ್.ಟಿ ಹೊರತುಪಡಿಸಿ ಬೇರೆ ಯಾವುದನ್ನೂ ಕಡ್ಡಾಯವಾಗಿ ತೆಗೆದುಕೊಳ್ಳುವಂತಿಲ್ಲ. ರೆಸ್ಟುರೆಂಟವರನ್ನು ಕೇಳಿದರೆ ಆ ಸರ್ವೀಸ್ ಛಾರ್ಜ್ ಹಣವನ್ನು ಸಿಬ್ಬಂದಿಗಳಿಗೆ ಕೊಡಲು ಬಳಸಿಕೊಳ್ಳುತ್ತಾರೆ ಎಂದು ಹೇಳುತ್ತಾರೆ. ಅದು ನಿಜವೂ ಇರಬಹುದು. ಒಟ್ಟು ಬಿಲ್ ಮೊತ್ತ ಕಡಿಮೆ ಇದ್ದಾಗ ೭.೫% ಅಂದರೆ ಹೆಚ್ಚು ಎನಿಸುವುದಿಲ್ಲ. ಆದರೆ ಬಿಲ್ ಮೊತ್ತ ದೊಡ್ಡದಿದ್ದಾಗ ಇದು ಹೆಚ್ಚೇ ಅನಿಸುತ್ತದೆ. ಆಹಾರಕ್ಕೆ, ಪಾನೀಯಕ್ಕೆ, ಸೌಲಭ್ಯಕ್ಕೆ ಎಲ್ಲಾ ಸೇರಿಸಿಯೇ ಹಣ ಕೊಟ್ಟಿರುತ್ತೀವಿ. ಸರ್ವೀಸ್ ಮಾಡಿದ ಸಿಬ್ಬಂದಿಗೆ ಎಷ್ಟು ಟಿಪ್ಸ್ ಹಣ ಕೊಡುವುದು ಎಂಬುದು ನಮ್ಮಿಷ್ಟವಾಗಿರುತ್ತದೆ.

ಯಾವ ರೆಸ್ಟುರೆಂಟಲ್ಲಾದರೂ ಅಥವಾ ಎಲ್ಲಿಯಾದರೂ ಸರ್ವೀಸ್ ಛಾರ್ಜ್ ಎಂದು ಹಾಕಿದರೆ ಅದನ್ನು ತೆಗೆದು ಪುನಃ ಬಿಲ್ ಹಾಕಿಕೊಡಲು ಹೇಳಬಹುದು ಅಥವಾ ಬಿಲ್ಲಿಂಗ್ ಮಾಡುವ ಮೊದಲೇ ಸರ್ವೀಸ್ ಛಾರ್ಜ್ ಹಾಕಬೇಡಿ ಎಂದು ಹೇಳಬಹುದು. ನಿಮ್ಮಿಷ್ಟದಂತೆ ಸಿಬ್ಬಂದಿಗೆ ನೇರವಾಗಿ ಟಿಪ್ಸ್ ಕೊಡಬಹುದು. ವೆಜ್ಜು ನಾನ್ವೆಜ್ಜು ಬಾರು ಪಬ್ಬು ಎಲ್ಲ ಕಡೆಯೂ ಇದು ಅನ್ವಯ. ಇದು ಗ್ರಾಹಕರ ಹಕ್ಕು. ಮನಸ್ಸಿದ್ದರೆ ಯಾವ ಮುಲಾಜಿಲ್ಲದೇ ಈ ಹಕ್ಕು ಚಲಾಯಿಸಿ.

ಚಿತ್ರದಲ್ಲಿ ಇರುವುದು ನಿನ್ನೆಯ ಎರಡು ಬಿಲ್ ಗಳು. ಒಂದರಲ್ಲಿ ಸರ್ವೀಸ್ ಛಾರ್ಜ್ ಹಾಕಿರುವುದನ್ನು ಕಾಣಬಹುದು. ಮತ್ತೊಂದರಲ್ಲಿ ಸರ್ವೀಸ್ ಛಾರ್ಜ್ ತೆಗೆಸಿ ಬಿಲ್ಲನ್ನು ಮಾಡಿಸಿರುವುದು. ಕೆಲವು ಕಡೆ ಆರ್ಡರ್ ತೆಗೆದುಕೊಳ್ಳುವ ಮೊದಲೇ "ನಮ್ಮಲ್ಲಿ ಸರ್ವೀಸ್ ಛಾರ್ಜ್ ಕಡ್ಡಾಯವಾಗಿ ಕೊಡಬೇಕು" ಎಂದು ಹೇಳುತ್ತಾರೆಂದು ಕೇಳಿದ್ದೇನೆ. ಅಂತಹ ಕಡೆ ಹೋಗುವುದು ಬಿಡುವುದು ಅವರವರ ಆಯ್ಕೆ. ನನ್ನ ಅನುಭವಕ್ಕಂತೂ ಬಂದಿಲ್ಲ.