ಬುಧವಾರ, ಸೆಪ್ಟೆಂಬರ್ 5, 2007

ಯಾರನ್ನೂ ಜೀವನಪೂರ್ತಿ ಪ್ರೀತಿ ಮಾಡೋಕ್ಕಾಗಲ್ವಾ?

ಯಾವುದೋ ಒಂದು ಗಳಿಗೆಯಲ್ಲಿ ಅವನು ಹೇಳುತ್ತಾನೆ... "ನಾನು ನಿನ್ನನ್ನ ಜೀವನ ಪೂರ್ತಿ ಪ್ರೀತಿ ಮಾಡ್ತೀನಿ".

ತಕ್ಷಣವೇ ಅವಳಿಂದ ಉತ್ತರ ಬರುತ್ತದೆ.. "ಈ ಜೀವನ ಪೂರ್ತಿ ಪ್ರೀತಿ ಅನ್ನೋದೆಲ್ಲಾ crap".

ಅವನಿಗೆ ಗಾಬರಿ..

ಅವಳೇ ಮುಂದುವರೆಸುತ್ತಾಳೆ.. "ಹೌದು ಕಣೋ, ಈ ಜೀವನ ಪೂರ್ತಿ ಪ್ರೀತಿ ಅನ್ನೋದು ನಾವು ಯಾವುದೋ ಒಂದು ಒಳ್ಳೆ ಮೂಡಲ್ಲಿದ್ದಾಗ ಮಾಡಿಕೊಳ್ಳೋ ಒಂದು assumption ಅಷ್ಟೆ. ಅದು reality ಅಲ್ಲ".
ಕಡ್ಡಿ ಮುರಿದಂತೆ ಅವಳ ಮಾತುಗಳು. ಅವಳು ಹಾಗೇ, ಎಲ್ಲರ ಹಾಗೆ ಭ್ರಮಾಲೋಕದಲ್ಲಿ ತೇಲುತ್ತಾ, ಕನಸು ಕಂಡು, ಕಲ್ಪನಾ ಲೋಕದಲ್ಲಿ ವಿಹರಿಸುತ್ತಾ ಕೊನೆಗೆ ಕೊರಗುವಳಲ್ಲ. ಅವಳದ್ದೇನಿದ್ದರೂ ವಾಸ್ತವತೆಗೆ ಹೆಚ್ಚು ಮಹತ್ವ. ಅದರಲ್ಲೇ ಹೆಚ್ಚು ನಂಬಿಕೆ.

ಅವಳು ಹೇಳುತ್ತಾಳೆ ..."ಮೊದಲನೆಯದಾಗಿ ಈ ಪ್ರೀತಿ ಅನ್ನೋದೆ ಅಗತ್ಯ, ಅನಿವಾರ್ಯತೆ, ಕಮಿಟ್ ಮೆಂಟ್ ಗಳ ಮೇಲೆ ನಿಂತಿರುವಂತದ್ದು".

"ನೀನು ಸುಮ್ನೆ ಎಲ್ಲಾದಕ್ಕೂ ನೆಗೆಟಿವ್ ಯೋಚನೆ ಮಾಡ್ತೀಯಾ ಕಣೆ. ಎಷ್ಟೋ ವರುಷಗಳಿಂದ ಪ್ರೀತಿ ಇಟ್ಕೊಂಡು ಬದುಕ್ತಾ ಇರೋರನ್ನ ನೋಡಿಲ್ವಾ. ಗೆಳೆಯ ಗೆಳತಿಯರ ಸ್ನೇಹದಲ್ಲೇ ಎಂಥಾ ಪ್ರೀತಿ ಇರತ್ತೆ ಗೊತ್ತಾ.?"

"ಹೌದು, ಈ ಪ್ರೀತಿ ಅನ್ನೋದು ಹಾಗೆ. ಒಂದು ಹಂತದವರೆಗೆ ಇರತ್ತೆ. ನಾವು ಅವರು ಚೆನ್ನಾಗಿರೋವಷ್ಟು ದಿನ, ಸಂಪರ್ಕದಲ್ಲಿರೋವಷ್ಟು ದಿನ. ಕ್ರಮೇಣ ಅದು ಅವರವರ ಕೆಲಸ, ಜೀವನದ ಗಿಜಿಗಿಜಿಯಲ್ಲಿ ಮಾಯವಾಗತ್ತೆ. ನಂತರ ಅದು ಬರೀ ನೆನಪಿನಂಗಳದಲ್ಲಿ ಮಾತ್ರ ಉಳಿಯತ್ತೆ. ಸ್ನೇಹ ಅನ್ನೋದು ಹಾಗೇ ಇರಬಹುದೆ ಹೊರತು ಅದು ಜೀವನ ಪೂರ್ತಿ ಪ್ರೀತಿ ಅಂತ ಕರೆಸ್ಕಳೊಕ್ಕಾಗಲ್ಲ."

"ಹಾಗಿದ್ರೆ ಈ ಅಮ್ಮ, ಮಗ, ಮಗಳು, ಅಣ್ಣ, ತಂಗಿ, ಅಪ್ಪ ಇತ್ಯಾದಿ ರಕ್ತ ಸಂಬಂಧಗಳ ಕಥೆ?"

"ಅದೂ ಹಾಗೆ, ಎಲ್ಲಾ ಚೆನ್ನಾಗಿರೋ ತನಕ ಅಷ್ಟೆ. ಒಮ್ಮೆ ಏನಾದರೂ ಅಸಮಾಧಾನ, ವಿರಸ, ಜಗಳ ಏನೋ ಆಯ್ತು ಅಂದ್ರೆ ಆ ಪ್ರೀತಿ ಒಳಗೊಳಗೇ ಕರಗುತ್ತಾ ಹೋಗತ್ತೆ. ಮೇಲಿಂದ ಅವರು ನಮ್ಮ ಅಕ್ಕ ತಂಗಿ ಅಮ್ಮ ಅಪ್ಪ ಅಂತ ಒಂದು ವಾತ್ಸಲ್ಯ, ಜವಾಬ್ದಾರಿ ಇದ್ರೂ ಕೂಡ ಅದನ್ನೂ ಕೂಡ ಜೀವನ ಪೂರ್ತಿ ಪ್ರೀತಿ ಅನ್ನೋಕಾಗಲ್ಲ."

"೩೦-೪೦ ವರ್ಷಗಳಿಂದ ಪ್ರೀತಿ,ಅಭಿಮಾನದಿಂದ ಚೆನ್ನಾಗಿ ಸಂಸಾರ ಮಾಡ್ಕೊಂಡು ಇರೋ ಗಂಡ ಹೆಂಡತಿಯರು ಎಷ್ಟು ಜನ ಇಲ್ಲ , ಅವ್ರೇನು ಸುಮ್ ಸುಮ್ನೆ ಜೊತೆಗಿದಾರೆ ಅನ್ಕೊಂಡಿದಿಯಾ?"

"ಅದು ಪ್ರೀತಿ, ಅಭಿಮಾನ ಅಲ್ವೋ, ಅದು ಅಗತ್ಯ, ಅನಿವಾರ್ಯತೆ, ಅವಲಂಬನೆ, ರೂಢಿ ಅಷ್ಟೆ. ಉದಾಹರಣೆಗೆ ಮಕ್ಕಳು, ಸಮಾಜ ಇತ್ಯಾದಿ. ಅವರಿಬ್ಬರಲ್ಲಿ ಎಂದೂ ಬತ್ತದ ಪ್ರೀತಿ ಇರತ್ತೆ ಅದರಿಂದಲೇ ಅವರು ಜೀವನ ಪೂರ್ತಿ ಒಟ್ಟಿಗೇ ಇರ್ತಾರೆ ಅಂತ ಹೇಳಕ್ಕಾಗಲ್ಲ."

"ಏನೋ ಹೇಳ್ತೀಯಮ್ಮಾ ನೀನು. ಒಟ್ನಲ್ಲಿ ಜೀವನ ಪೂರ್ತಿ ಪ್ರೀತಿ ಮಾಡೋಕ್ಕಾಗಲ್ಲ, ಅದು ಸುಳ್ಳು ಅಂತನಾ ನಿನ್ನಭಿಪ್ರಾಯ?"

"ಸುಳ್ಳು ಅಂತ ಹೇಳ್ತಾ ಇಲ್ಲ, ಆದ್ರೆ ಈ ಜೀವನ ಪೂರ್ತಿ ಪ್ರೀತಿ ಅನ್ನೋದು ಒಂದು ರೀತಿ ಕಮಿಟ್ ಮೆಂಟ್ ಆಗತ್ತೇ ಹೊರತು ನಿಜವಾದ ಪ್ರೀತಿ ಅಲ್ಲ ಅಂತಿದಿನಿ. ಪ್ರೀತಿ ಸತ್ತೋದಮೇಲೆ ಆ ಕಮಿಟ್ ಮೆಂಟ್ ಗೆ ಅಥವಾ ಜೊತೆಗಿರೋದ್ರಲ್ಲಿ ಅರ್ಥ ಏನಿದೆ ಹೇಳು?"

"ಹೌದು ಕಣೇ, ಪ್ರೀತಿ ಸತ್ತೋದ್ಮೇಲೆ ಅದಕ್ಕೆ ಅರ್ಥ ಇಲ್ಲ, ಅದು ಕಮಿಟ್ ಮೆಂಟ್ ಆಗತ್ತೇ ಅಂತ ಒಪ್ಕೋತೀನಿ, ಅದು ವ್ಯರ್ಥ, ಆದ್ರೇ ಆ ಪ್ರೀತಿ ಸಾಯದೇ ಇರೋ ತರ ಸಂಬಂಧ ಇಟ್ಕೋಬೇಕು ಅಂತ ನಾನು ಹೇಳ್ತಿರೋದು."

"ಹಾಗೆ ನಾವು ಅನ್ಕೋತೀವಿ, ಆದ್ರೆ ನಮಗೆ ಗೊತ್ತಿಲ್ಲದ ಹಾಗೆ ಅದಕ್ಕೆ ವಿರುದ್ಧವಾಗಿ ಆಗ್ಬಿಡತ್ತೆ. ಈಗ ಒಂದು ಕೆಳಮಟ್ಟದ ಉದಾಹರಣೆ ತಗಳೋಣ. ನಿನ್ನ ಹೆಂಡತಿಗೋ, ಪ್ರೇಮಿಗೋ ಅಥವಾ ಇನ್ಯಾರಿಗೋ ಏನೋ ಆಗತ್ತೆ, ಅವರ ಕಣ್ಣು ಕುರುಡಾಗ್ಬೋದು, ಅವರ ಕಾಲು ಮುರ್ದೋಗ್ಬೋದು, ಬುದ್ಧಿ ಭ್ರಮಣೆ ಆಗ್ಬೋದು. ಆವಾಗ್ಲೂ ಅವರಲ್ಲಿ ಅದೇ ಪ್ರೀತಿ ಇರತ್ತಾ? ಅನುಕಂಪ ಹುಟ್ಬೋದು, ಅದು ಬೇರೆ ವಿಷ್ಯ. ಅದು ಪ್ರೀತಿ ಆಗಲ್ಲ."


"ಅಲ್ಲೇ ನೀನು ತಪ್ಪು ತಿಳ್ಕೊಂಡಿರೋದು, ಪ್ರೀತಿ ಅನ್ನೋದು ಈ ಮೋಹ, ಅನುಕಂಪ, ವಾತ್ಸಲ್ಯ, ಕಾಮ, ರೂಢಿ, ಬದ್ಧತೆ, ಸೇವೆ, ಸ್ನೇಹ, ರಕ್ತ ಸಂಬಂಧ, ಸೆಳೆತ, ಅಗತ್ಯ, ಕೆಲವೊಮ್ಮೆ ಆಕಸ್ಮಿಕ ಹೀಗೆ ಇನ್ನೂ ಹಲವಾರು ರೂಪಗಳಲ್ಲಿ ಅಥವಾ ಅವುಗಳಲ್ಲಿ ಕೆಲವುದರ ಮಿಶ್ರಣದ ರೂಪದಲ್ಲಿ ಇರತ್ಯೇ ಹೊರತು ಪ್ರೀತಿ ಅನ್ನೋದಕ್ಕೆ ಬೇರೆಯಾದ ರೂಪ ಇಲ್ಲ ಕಣೇ."


"ಏನೇ ಇರ್ಲಿ, ಜೀವನ ಪೂರ್ತಿ ಪ್ರೀತಿ ಅನ್ನೋದು ತಾನಾಗೇ ಇರುವಂತದ್ದು, ಬರುವಂತದ್ದೇ ಹೊರತು ನಾವು ಮಾಡ್ತೀವಿ, ಕಾಪಾಡ್ಕೋತೀವಿ ಅನ್ಕೊಳೋವಂತದ್ದಲ್ಲ. ಅದು ಸಾಧ್ಯನೂ ಇಲ್ಲ."

"ಒಟ್ನಲ್ಲಿ ನಾನು ಹೇಳೋದು ನಿಂಗರ್ಥ ಆಗ್ತಾ ಇಲ್ಲ, ನೀ ಹೇಳೋದು ನಂಗರ್ಥ ಆಗಲ್ಲ."

"ಹಾಗಿದ್ರೆ ಏನಂತ ತೀರ್ಮಾನ ಮಾಡೋಣ?"

"ಅಯ್ಯೋ, ನಾವು ತೀರ್ಮಾನ ಮಾಡೋವಷ್ಟು ದೊಡ್ಡೋರೂ ಅಲ್ಲ, ನಮಗಿನ್ನೂ ಆ ಮಟ್ಟಿಗೆ ಮನಸ್ಸು ಪಕ್ವವಾಗೂ ಇಲ್ಲ. ಏನೋ ನಮಗನ್ನಿಸಿದ್ದು, ನಮ್ಮ ವಯಸ್ಸಿಗೆ ಅನುಭವಕ್ಕೆ ಬಂದಷ್ಟು, ನಮ್ಮ ಜಗತ್ತಿನಲ್ಲಿ ಕಂಡದ್ದನ್ನ ಹೇಳ್ಕೋತೀವಷ್ಟೆ. ಈ ತೀರ್ಮಾನ ಎಲ್ಲಾ ಅವರವರಿಗೇ ಬಿಟ್ಟಿದ್ದು."

"ಹ್ಮ್.. ಹೌದು. ಅದೂ ಸರಿನೇ ಬಿಡು. "

ನಂತರ ನೆಲೆಸಿದ್ದು ಅಲ್ಲೊಂದು ದೀರ್ಘ ಮೌನ.

ಬುಧವಾರ, ಆಗಸ್ಟ್ 29, 2007

ಬೋಡಿಲಿಂಗ

ಭರ್ರೆನ್ನುತ್ತಾ ಬರುತ್ತದೆ ಬಿ.ಎಂ.ಟಿ.ಸಿ ಬಸ್ಸು. ತಕ್ಷಣವೇ ಏನೋ ಆಯಿತೆನ್ನುವ ಹಾಗೆ ಜನರ ಗುಂಪು ಆ ಕಡೆಗೆ ಓಡುತ್ತದೆ. ಒಂದೇ ಸಮನೆ ಬಾಗಿಲಲ್ಲಿ ನೂಕಾಟ, ತಳ್ಳಾಟ, ತಿಕ್ಕಾಟ. ಎಲ್ಲರಿಗೂ ಸೀಟು ಹಿಡಿಯುವ ತವಕ. ಡ್ರೈವರ್ರು, ಕಂಡಕ್ಟರ್ರು ಮೂಕ ಪ್ರೇಕ್ಷಕರು. ದಿನಾ ಸಾಯುವವರಿಗೆ ಅತ್ತೂ ಅತ್ತೂ ಅವರೂ ಸತ್ತಿದ್ದಾರೆ. ಹೇಗೋ ಸಾವರಿಸಿಕೊಂಡು ಈತನೂ ಹತ್ತುತ್ತಾನೆ. ಬಾಗಿಲಲ್ಲೇ ಮುಕುರಿಕೊಂಡ ಜನ. ಒಳಗೆ ಜಾಗವಿದ್ದರೂ ಅಲ್ಲೇ ಅಂಟು ಹಾಕಿಕೊಂಡು ನಿಂತಿದ್ದಾರೆ. ಕೇಳಿದರೆ ಎಲ್ಲರೂ ನೆಕ್ಸ್ಟ್ ಸ್ಟಾಪು ! “ಒಳಗೆ ಹೋಗ್ರಿ, ಹಿಂದಕ್ಕೆ ಹೋಗ್ರಿ ಖಾಲಿ ಇದೆ....” ಕಂಡಕ್ಟರನ ಕೂಗು ಅರಣ್ಯ ರೋದನ. ಇವನ ದುರಾದೃಷ್ಟ . ಸೀಟಂತೂ ಇಲ್ಲ. ಸೀಟು ಸಿಕ್ಕವರಿಗೆಲ್ಲಾ ಏನೋ ತೃಪ್ತಿ. ಇನ್ನು ಕೆಲವೆ ಹೊತ್ತಿನಲ್ಲಿ ಆ ಸೀಟಿಗೂ ನಮಗೂ ಸಂಬಂಧವಿಲ್ಲವೆಂದು ಗೊತ್ತಿದ್ದರೂ ತಾವು ಹಿಡಿದಿರುವುದು ಸಿಂಹಾಸನವೇನೋ ಎಂಬಂತ ಭಾವ.“ಯೋ ನಿಂಗ್ಯಾವನಯ್ಯ ಬ್ಯಾಗ್ ಇಡಕ್ಕೇಳಿದ್ದು ? ಸಿಟಿ ಬಸ್ಸಲ್ಲಿ ರಿಸರ್ವೇಷನ್ ಇಲ್ಲ ಹೋಗಯ್ಯ” ಮೂರನೇ ಸಾಲಿನಲ್ಲೇನೋ ಜಗಳ. ಅದರೆಡೆಗೊಂದು ಈತನ ನಿಸ್ತೇಜ ನೋಟ. ನಿಂತುಕೊಳ್ಳಲಾದರೂ ಒಳ್ಳೆ ಜಾಗ ಸಿಗುತ್ತದೆಯೊ ಎಂದು ನೋಡಿದವನಿಗೆ ಹಿಂದುಗಡೆ ಕೊನೆ ಕಂಬವೊಂದು ಆಶಾಕಿರಣ. ಅವಸವಸರವಾಗಿ ಹೋಗಿ ಆ ಕಂಬಕ್ಕೆ ಬೆನ್ನು ಚೆಲ್ಲಿದವನಿಂದ ಒಂದು ಸಣ್ಣ ನಿಟ್ಟುಸಿರು.

ಕಂಬಕ್ಕೊರಗಿಯೇ ಈತ ಒಮ್ಮೆ ಸುತ್ತಲೂ ಕಣ್ಣು ಹಾಯಿಸುತ್ತಾನೆ. ಯಾರಾದರೂ ಮುಂದಿನ ಸ್ಟಾಪಿನಲ್ಲಿ ಇಳಿಯಬಹುದಾ, ತನಗೆ ಸೀಟು ಸಿಗುತ್ತದಾ? ಅವನ್ಯಾವನದೋ ಕೈಯಲ್ಲಿ ದೊಡ್ಡ ಚೀಲ, ಅವನು ಖಂಡಿತ ಇಳಿಯುವುದಿಲ್ಲ, ಬ್ಯಾಗಿನೊಳಗೆ ಕೈಹಾಕಿ ನೋಟ್ಸು ತೆಗೆಯುತ್ತಿರುವ ಕಾಲೇಜು ಹುಡುಗ, ಕೈಯಲ್ಲಿ ವಿಜಯ ಕರ್ನಾಟಕ ಹಿಡಿದು ಸೆಟ್ಲಾಗಿರುವ ಅಂಕಲ್ಲು, ಎಪ್ಫೆಮ್ ಕೇಳಲು ಕಿವಿಗೆ ಇಯರ್ ಫೋನ್ ತುರುಕಿಕೊಳ್ಳುತ್ತಿರುವ ಯುವಕ, ಕೊನೆಯ ಸಾಲಿನ ಅಷ್ಟೂ ಸೀಟುಗಳನ್ನು ಆಕ್ರಮಿಸಿ ಯುದ್ಧ ಗೆದ್ದವರಂತೆ ಕೂತು “ಲೇ ಕಿಟ್ಕಿ ತೆಗಿಲೇ, ಸರಿಲೇ ಆಕಡಿ, ಮಂದಾಕಿನಿ ಸಾಂಗ್ ಹಾಕ್ಲೇ....” ಎಂದು ಗದ್ದಲ ಮಾಡುತ್ತಿರುವ ಉತ್ತರ ಕರ್ನಾಟಕದ ಹುಡುಗರು... ಉಹೂಂ ಯಾರೂ ಹತ್ತಿರದಲ್ಲಿ ಇಳಿಯುವ ಲಕ್ಷಣ ಕಾಣುತ್ತಿಲ್ಲ. ಅವನಿಗೆ ಆ ಕಂಬವೇ ಗತಿ.

ರೈಟ್ ರೈಟ್ ..... ಎಂಟ್ರಿ ಹಾಕಿಸಿ ದಡಬಡಾಯಿಸಿ ಹತ್ತಿದ ಕಂಡಕ್ಟರ್ ಕೂಗಿನ ಬೆನ್ನಲ್ಲೇ ಬಸ್ಸು ಸ್ಟಾರ್ಟಾಗುತ್ತದೆ. ತುಂಬಿ ಹರಿಯುತ್ತಿರುವ ಟ್ರಾಫಿಕ್ಕಿಗೆ ಬಸ್ಸಿನ ಸೇರ್ಪಡೆಯಾಗುತ್ತದೆ. "ಯಾರ್ರೀ ಟಿಕೆಟ್, ಪಾಸ್ ನವ್ರೆಲ್ಲಾ ಕೈಯಲ್ಲಿ ಹಿಡ್ಕಳ್ರಿ.. ಎಲ್ಲಿಗ್ರೀ ನಿಮ್ದು...ಚಿಲ್ರೆ ಕೊಡ್ರಿ... " ಅನ್ನುತ್ತಾ ಕಂಡಕ್ಟರನ ಆಗಮನ, ಅಬ್ಬರ. "ಪಾಸ್ ಪಾಸ್ ಪಾಸ್ ಪಾಸ್ ...." ಹಿಂದಿನ ಸಾಲಿನ ಹುಡುಗರೆಲ್ಲಾ ಕೈ ಎತ್ತುತ್ತಾರೆ. “ತೆಗ್ದು ತೋರ್ಸ್ಬೇಕು ಎಲ್ರೂ” ಅನ್ನುತ್ತಲೇ ಉಳಿದವರಿಗೆಲ್ಲಾ ಟಿಕೆಟ್ ಕೊಟ್ಟು ಕಂಡಕ್ಟರ್ ನಿರ್ಗಮನ ಮುಂದೆ ಹೆಂಗಸರ ಕಡೆಗೆ. ಬಾಗಿಲಲ್ಲಿ ನಿಂತವರಿಗೆ ರೂಢಿಯಂತ “ಒಳಗೋಗ್ರಿ ಖಾಲಿ ಇದೆ, ಇಲ್ಲಿ ನಿಂತ್ಕಂಡ್ಯಾಕ್ರೀ ಸಾಯ್ತೀರಾ” ಎಂಬ ಬೈಗುಳ.


೧೦ ನಿಮಿಷ, ೧೫ ನಿಮಿಷ, ೨೦ ನಿಮಿಷ ಆಯಿತು...ಬಸ್ಸು ಹೋಗುತ್ತಿದೆ..... ಸ್ಟಾಪುಗಳಲ್ಲಿ ನಿಂತು ಜನರನ್ನು ಹತ್ತಿಸಿಕೊಳ್ಳುತ್ತಾ, ಇಳಿಸುತ್ತಾ. ಈತ ಕೊನೆ ಕಂಬದಲ್ಲಿ ಅಂಟಿಕೊಂಡಿದ್ದಾನೆ. ಕಾಲುಗಳಲ್ಲಿ ಸಣ್ಣ ನೋವು. ಅದನ್ನು ಮರೆಯಲು ಹಾಡು ಕೇಳೋಣವೆಂದು ಎಪ್ಫೆಮ್ ಕಿವಿಗಿಟ್ಟುಕೊಳ್ಳುತ್ತಾನೆ. 'ಓನ್ಲಿ ಕನ್ನಡ ಸಾಂಗ್ಸ್ ಅಷ್ಟೆ' ಎಂದು ಇಂಗ್ಲೀಷಿನಲ್ಲಿ ಅರಚುತ್ತಿರುವ ಚಾನೆಲ್ ಒಂದನ್ನು ಟ್ಯೂನ್ ಮಾಡುತ್ತಾನೆ. ಅದರಲ್ಲಿ ಅದೇ “ಏನೋ ಒಂಥರಾಆಆಆಆಆಆಆಅ....” ಹಾಡು. ದಿನಾ ಅದನ್ನೇ ಕೇಳಿ ಕೇಳಿ ಬೇಜಾರಾಗಿ ಏನೋ ಒಂಥರಾ ಆಗುತ್ತಿದೆ. ಬಸ್ಸು ಸಾಗುತ್ತಿದೆ.

ಹಾಡು ಬೇಜಾರಾಗಿದೆ. ಕಂಬಕ್ಕೊರಗಿಕೊಂಡೇ ಸುತ್ತಲಿನ ಜನರನ್ನು ನೋಡುತ್ತಾನೆ. ಕಿಟಕಿಯಿಂದ ಹೊರಗೆ ನೋಡುತ್ತಾ ಸುಮ್ಮನೇ ಕುಳಿತವರ ಮುಖದಲ್ಲಿ ಶೂನ್ಯಭಾವ, ಇಯರ್ ಫೋನ್ ಕಿವಿಗಿಟ್ಟಿಕೊಂಡು ಸುಮ್ಮನೇ ಕಣ್ಣು ಮುಚ್ಚಿದ್ದಾರೊ ಅಥವಾ ನಿದ್ದೆ ಮಾಡಿದ್ದಾರೋ ಗೊತ್ತಾಗದ ಜನ,ವಿಜಯ ಕರ್ನಾಟಕ ಹಿಡಿದುಕೊಂಡವನು ಕೊನೆಯ ಪುಟಕ್ಕೆ ಬಂದಿದ್ದಾನೆ, ಅವನು ಮುಗಿಸಿದ ಕೂಡಲೇ ಇಸಿದುಕೊಳ್ಳಲು ಪಕ್ಕದವನ ತವಕ, ನೋಟ್ಸು ತಿರುವಿ ಹಾಕುತ್ತಿರುವ ಕಾಲೇಜು ಹುಡುಗನ ಮುಖದಲ್ಲಿ ಯಾವುದೋ ಪರೀಕ್ಷೆಯ ಆತಂಕ, ಜೋಲು ಮುಖಗಳು, ತನಗ್ಯಾರಾದರೂ ಸೀಟು ಬಿಟ್ಟು ಕೊಡುವರೇನೋ ಎಂದು ಎಲ್ಲಾ ಕಡೆ ತಿರುತಿರುಗಿ ನೋಡುತ್ತಿರುವ ಮುದುಕ, ಯಾರೊಂದಿಗೋ ಫೋನಿನಲ್ಲಿ ಮಾತಾಡುತ್ತಾ, ನಗುತ್ತಿರುವವರು, ಸೀಟೊಂದಕ್ಕೆ ಒರಗಿ ನಿಂತವನ ಜೋಳಿಗೆಯಂತಾ ಚೀಲದಿಂದ ಏನೋ ಸೋರುತ್ತಿದೆ, ಬಹುಶಃ ಊಟದ ಡಬ್ಬಿಯಿಂದ ಸಾರೋ ನೀರೋ ಇರಬೇಕು, ಹಿಂದೆ ಕೇಕೆ ಮುಂದುವರಿಸಿರುವ ಹುಡುಗರು.... ಹೀಗೇ ಏನೇನೋ , ಯಾರ್ಯಾರೋ . ಎಲ್ಲಾ ದಿನಾ ಕಾಣುವಂತವೇ ಅಂದುಕೊಂಡು ಮುಖ ಕೆಳಕ್ಕೆ ಹಾಕುತ್ತಿರುವಾಗ ಎಫ್ಫೆಮ್ ನಲ್ಲಿ ಅಣ್ಣಾವ್ರ ಹಾಡು..."ಮಾನವನಾಗಿ ಹುಟ್ಟಿದ ಮೇಲೆ ಏನೇನು ಕಂಡಿ, ಸಾಯೋತನಕ..... " ಅವನ ಮನಸ್ಸಿಗೆ ಖುಷಿಯೆನಿಸಿ ಮತ್ತೆ ಎಪ್ಫೆಮ್ನಲ್ಲಿ ತಲ್ಲೀನನಾಗುತ್ತಾನೆ.

ಇದ್ದಕ್ಕಿದ್ದಂತೇ ಬಾಗಿಲಿನ ಪಕ್ಕದ ಸೀಟಿನಲ್ಲಿ ಏನೋ ಜಗಳ, ಕೂಗಾಟ. ಎಲ್ಲರೂ ಅಲ್ಲಿ ನೋಡುತ್ತಾರೆ. ೪ ಜನ ತಮಿಳಿನಲ್ಲಿ ಏನೊ ಮಾತಾಡುತ್ತಿದ್ದಾರೆ. ಈತನಿಗೆ ತಿಳಿಯುತ್ತಿಲ್ಲ. ಆದರೂ ಅದು ಜಗಳವಲ್ಲ. ಅವರು ಮಾತಾಡುವುದೇ ಹಾಗೇ ಎಂದು ತಿಳಿಯುತ್ತದೆ, ಸಮಾಧಾನವಾಗುತ್ತದೆ. ಬಾಗಿಲಿನಲ್ಲಿ ಬಿಹಾರಿಯೊಬ್ಬ ಕೂಗುತ್ತಿದ್ದಾನೆ. ಒಳಗೆಲ್ಲೋ ಕುಳಿತ ಅವನ ಸ್ನೇಹಿತನನ್ನು ಕರೆಯುತ್ತಿದ್ದಾನೆ. ಅವರಿಗೆ ತಾವು ಹತ್ತಿದ್ದೆಲ್ಲಿ, ಇಳಿಯುವುದೆಲ್ಲಿ ಎನ್ನುವುದೂ ಗೊತ್ತಿಲ್ಲ. ಸ್ವಲ್ಪ ಹೊತ್ತು ಕಿರುಚಾಡಿ ಸುಮ್ಮನಾಗುತ್ತಾರೆ. ಯಾರದ್ದೋ ನೋಕಿಯಾ ಫೋನು ಕಿವಿ ಕೊರೆಯುವಂತೆ ಮೊಳಗುತ್ತದೆ. ಎತ್ತಿಕೊಂಡವನಿಂದ ತನ್ನ ಬಾಸಿಗೆ ಇಂಗ್ಲೀಷಿನಲ್ಲಿ ಸುಳ್ಳುಗಳ ಸುರಿಮಳೆ. ಅವನ ಮಾತಿನಿಂದ ಅವನ್ಯಾವುದೋ ವ್ಯಾಪಾರ ಮಾಡುವವನೆಂದು ತಿಳಿಯುತ್ತದೆ. ಅದೋ ಆ ೧ ಸಾಲು ಆಚೆ ಇಬ್ಬರು ಇಳಿಯಲು ಏಳುತ್ತಿದ್ದಾರೆ. ತಕ್ಷಣವೇ ಸೀಟಿಗೆ ಪೈಪೋಟಿ. ಈತನೂ ವಿಫಲ ಯತ್ನ ನೆಡೆಸುತ್ತಾನೆ. ಮತ್ತೆ ಅದೇ ಕಂಬವೇ ಗತಿಯಾಗುತ್ತದೆ. ಮತ್ತೆ ಪ್ರಯಾಣ ಮುಂದುವರೆಯುತ್ತದೆ. ಕಾಲು ನೋವು ಜೋರಾಗುತ್ತಿದೆ. ಕೈಗಳು ಸೋಲುತ್ತಿವೆ. ನಿಲ್ಲುತ್ತಾ, ಓಡುತ್ತಾ, ಮುಗ್ಗರಿಸುತ್ತಾ ಬಸ್ಸು ಸಾಗುತ್ತಿದೆ.


ನಂತರದ್ದು ಯಾವುದೋ ಮುಖ್ಯ ಸ್ಟಾಪು. ಬಸ್ಸು ನಿಲ್ಲುತ್ತಿದ್ದಂತೇ ಸುಮಾರು ಜನ ಇಳಿಯುತ್ತಾರೆ. ಈತನಿಗೆ ಕಂಬದಿಂದ ಮುಕ್ತಿ. ಕಿಟಕಿ ಪಕ್ಕದ ಸೀಟಿನಲ್ಲಿ ನೆಮ್ಮದಿಯಿಂದ ಪವಡಿಸುತ್ತಾನೆ. ಇಳಿದಷ್ಟೆ ಜನ ಮತ್ತೆ ಹತ್ತುತ್ತಾರೆ. ಬಸ್ಸು ಹೊರಡುತ್ತದೆ. ಸಹಜವಾಗಿ ದೃಷ್ಟಿ ಬಸ್ಸಿನ ಮುಂಭಾಗದತ್ತ ಹೊರಳುತ್ತದೆ. ಕಣ್ಣು ಅರಳುತ್ತದೆ. ರೇಷ್ಮೆ ಕೂದಲ ಹುಡುಗಿ !. ಮುಂದಕ್ಕೆ ಮುಖ ಮಾಡಿಕೊಂಡು ನಿಂತಿದ್ದಾಳೆ, ಹಿಂದಿನಿಂದ ಸಕತ್ ಫಿಗರ್ ! ಮುಖ ನೋಡುವ ಆಸೆಯಾಗುತ್ತದೆ. ಅರೆ, ಇಷ್ಟು ಹೊತ್ತು ಇವಳ್ಯಾಕೆ ಕಾಣಲಿಲ್ಲ ಎಂದುಕೊಳ್ಳುತ್ತಿರುವಾಗಲೇ ಡ್ರೈವರ್ ಕೆಟ್ಟದಾಗಿ ಬ್ರೇಕು ಹಾಕುತ್ತಾನೆ ಯಾರನ್ನೋ ಬೈಯುತ್ತಾನೆ, ಮುಂದೆ ಸಾಗುತ್ತಾನೆ. ಈತನಿಗೆ ಆ ಹುಡುಗಿಯ ಮುಖ ನೋಡುವ ಕುತೂಹಲ. ಆಕೆ ಒಂದು ಸ್ವಲ್ಪವೂ ಹಿಂದೆ ತಿರುಗುತ್ತಿಲ್ಲ. ಗೊಂಬೆಯಂತೆ ನಿಂತಿದ್ದಾಳೆ. ಹೊತ್ತು ಕಳೆದಂತೆ ಕುತೂಹಲ ಜಾಸ್ತಿಯಾಗುತ್ತದೆ. ಕಾಯುತ್ತಾನೆ. ಕಾದೂ ಕಾದು ಬೇಸರ ಶುರುವಾಗುತ್ತದೆ. ಇದ್ದಕ್ಕಿದ್ದ ಹಾಗೇ ಯಾವುದೋ ಹುಡುಗಿ ಯಾರನ್ನೋ ಕರೆಯುತ್ತಾಳೆ. ಅಲ್ಲಿವರೆಗೆ ಮುಂದೆ ನೋಡುತ್ತಾ ನಿಂತಿದ್ದ ಹುಡುಗಿ ಹಿಂದಕ್ಕೆ ತಿರುಗುತ್ತಾಳೆ. ಈತನಿಗೆ ನಿರಾಸೆ. ಆ ಹುಡುಗಿ ನೋಡಲೂ ಚೂರೂ ಚೆನ್ನಾಗಿಲ್ಲ. ಹಿಂದಿನಿಂದ ಮಾತ್ರ ಸೊಗಸು. ಮನಸ್ಸಿನಲ್ಲೇ ಥತ್ ಎಂದುಕೊಂಡು ಕೂರುತ್ತಾನೆ.



ಹೊರಗೆ ತಲೆಕೆಡಿಸುವ ಟ್ರಾಫಿಕ್ಕು. ದಿನಾ ನೋಡಿ ಅಭ್ಯಾಸವಿರುವುದರಿಂದ ಅದರೆಡೆಗೆ ವಿಶೇಷ ಗಮನ ಹೋಗುವುದಿಲ್ಲ. ಆಗ ನೆನಪಾಗುತ್ತದೆ ತಾನು ಟೈಂಪಾಸಿಗೆ ಓದಲು ತಂದಿರುವ ಪುಸ್ತಕ. ಕವರಿನಿಂದ ಪುಸ್ತಕ ತೆಗೆದು ಓದಲು ತೊಡಗುತ್ತಾನೆ. ಕಥೆ ಆಸಕ್ತಿ ಕೆರಳಿಸುತ್ತಿದೆ. ಬಸ್ಸಿನಲ್ಲಿ ಏನಾಗುತ್ತಿದೆ ಎಂಬ ಪರಿವೆಯಿಲ. ಅದರ ಅಗತ್ಯವೂ ಇಲ್ಲ. ಆದರೆ ಸ್ವಲ್ಪ ಹೊತ್ತಿನಲ್ಲೇ ಕಣ್ಣುಗಳೇಕೋ ಸೋಲುತ್ತವೆ. ಗಮನವಿಟ್ಟು ಓದಲಾಗುತ್ತಿಲ್ಲ. ಹಾಗೆಯೇ ಸೀಟಿಗೆ ತಲೆಯಾನಿಸುತ್ತಾನೆ. ಕಣ್ಣುಗಳು ತಾನಾಗೇ ಮುಚ್ಚಿಕೊಳ್ಳುತ್ತವೆ. ನಿದ್ದೆಗೆ ಜಾರುತ್ತಾನೆ. ಯಾವುದೋ ಸಿಗ್ನಲ್ಲಿನಲ್ಲಿ ಹಾಕಿದ ಬ್ರೇಕಿಗೆ ತಟ್ಟನೇ ಎಚ್ಚರಾಗುತ್ತದೆ. ತೊಡೆಮೇಲಿದ್ದ ಪುಸ್ತಕ ಬಿಡಿಸಿ ಮತ್ತೆ ಓದಲು ತೊಡಗುತ್ತಾನೆ. ಸ್ವಲ್ಪ ಹೊತ್ತಿನಲ್ಲೇ ಆತ ಇಳಿಯುವ ಸ್ಟಾಪು ಬರುತ್ತದೆ. ಮುಖ ಒರೆಸಿಕೊಂಡು ಬಾಗಿಲಿನ ಹತ್ತಿರ ಹೋಗುತ್ತಾನೆ. ಬಸ್ಸು ನಿಲ್ಲುತ್ತದೆ. 'ಸ್ವಯಂಚಾಲಿತ ಬಾಗಿಲು, ಕೈಯಿಂದ ತೆಗೆಯಲು ಪ್ರಯತ್ನಿಸಬೇಡಿ' ಎಂದು ಬರೆದಿರುವ ಬಾಗಿಲುಗಳು ತೆರೆದುಕೊಳ್ಳುತ್ತದೆ. ಆತನು ಇಳಿಯುತ್ತಾನೆ. ಬಸ್ಸು ಮುಂದೆ ಸಾಗುತ್ತದೆ.


ಹೀಗೆ ಆತನ ಒಂದು ಪ್ರಯಾಣ, ಒಂದು ಬೆಳಗ್ಗೆ ಈ ಬರಹದಂತೆಯೇ ಯಾವುದೇ ವಿಶೇಷವಿಲ್ಲದೇ ಮುಗಿದುಹೋಗುತ್ತದೆ.

ಕೋಟಿ ಲಿಂಗಗಳ ಮಧ್ಯದಲ್ಲೆಲ್ಲೋ ಒಂದು ಬೋಡಿ ಲಿಂಗ ಪೂಜೆಯಿಲ್ಲದೇ ಕೊರಗುತ್ತಿದೆ...ಸೊರಗುತ್ತಿದೆ.

ಬಲಿಷ್ಠ ರೂಪಾಯಿ=ಬಲಿಷ್ಠ ಭಾರತ

ಆಗಸ್ಟ ೦೭, ೨೦೦೭ ರಂದು thatskannada.com ನಲ್ಲಿ ಪ್ರಕಟವಾದ ನನ್ನದೊಂದು ಅನುವಾದಿತ ಲೇಖನ : ಭಾರತ ಆರ್ಥಿಕವಾಗಿ ಬಲಾಡ್ಯವಾಗುವುದು ಇವರಿಗೇಕೆ ಬೇಡ?

ಮೂಲ ಲೇಖಕರು: ಶ್ರೀ ಗುರುದೇವ್
ಮೂಲ ಲೇಖನ: Stronger Rupee = Stronger India


ಇವತ್ತಿನ ದಿನಗಳಲ್ಲಿ ಡಾಲರ್ ಬೆಲೆ ರೂಪಾಯಿಯ ಮುಂದೆ ಗಣನೀಯವಾಗಿ ಕುಸಿದಿದೆ. ಮೊದಲು ೧ ಡಾಲರ್ ಗೆ ಸುಮಾರು ೪೭ ರೂಪಾಯಿಗಳಷ್ಟಿದ್ದದ್ದು ಈಗ ಸುಮಾರು ೪೦ ರೂಪಾಯಿಯಾಗಿದೆ.

ಹೀಗಾಗುತ್ತಿದ್ದಂತೆ ಭಾರತದ ಐ.ಟಿ. ಕಂಪನಿಗಳು ಹಾವು ತುಳಿದಂತೆ ಬೆಚ್ಚಿಬಿದ್ದು ಆತಂಕಕ್ಕೊಳಗಾಗಿವೆ. ರೂಪಾಯಿಯ ಬೆಲೆ ಜಗತ್ತಿನ ಮಾರುಕಟ್ಟೆಯಲ್ಲಿ ಹೆಚ್ಚಾದಾಗ ಖುಷಿಯಾಗುವುದನ್ನು ಬಿಟ್ಟು ಐ.ಟಿ. ಕಂಪನಿಗಳು ಹೀಗೇಕೆ ದುಗುಡಗೊಂಡಿವೆ ಎಂಬುದನ್ನು ನೋಡಿದರೆ ಈ ಕಂಪನಿಗಳ ಲಾಭವು ನೇರವಾಗಿ ಅಮೆರಿಕದ ಕಂಪನಿಗಳು ಕೊಡುವ ಡಾಲರಗಳ ಮೇಲೆ ನಿಂತಿರುವುದು ತಿಳಿಯುತ್ತದೆ. ಈಗ ರೂಪಾಯಿಯ ಬೆಲೆ ಜಾಸ್ತಿಯಾದುದರಿಂದ ಕಂಪನಿಗಳಿಗೆ ಸಿಗುತ್ತಿದ್ದ ಡಾಲರುಗಳು ರೂಪಾಯಿಗಳಿಗೆ ಪರಿವರ್ತಿತವಾದಾಗ ಸಿಗುತ್ತಿದ್ದ ಲಾಭ ಕಡಿಮೆಯಾಗಿದೆ. ದೇಶದ ಆರ್ಥಿಕತೆಯು ಗಟ್ಟಿಯಾಗುತ್ತಿರುವುದರಿಂದ ದೇಶವು ಸಂಭ್ರಮಮಿಸುತ್ತಿರುವಾಗ ಈ ಐ.ಟಿ ಕಂಪನಿಗಳು ಈ ಬೆಳವಣಿಗೆಯಿಂದ ತಮ್ಮ ಲಾಭಕ್ಕಾದ ಅಲ್ಪಹಾನಿಯನ್ನು ತುಂಬಿಕೊಳ್ಳುವುದಕ್ಕೋಸ್ಕರ ತಮ್ಮ ಉದ್ಯೋಗಿಗಳನ್ನು ವಾರಕ್ಕೆ ಇನ್ನೂ ಒಂದು ದಿನ ಹೆಚ್ಚು ದುಡಿಸಿಕೊಳ್ಳಲು ಯೋಜನೆ ರೂಪಿಸುತ್ತಿವೆ. ಈ ಮೂಲಕ ಹೆಚ್ಚಿನ ಕೆಲಸ ಮಾಡಿ ತಮ್ಮ ಲಾಭವನ್ನು ಸರಿದೂಗಿಸಿಕೊಳ್ಳುವುದು ಅವುಗಳ ತಂತ್ರ.

ನಾವು ಯೋಚಿಸಬೇಕಾದುದೇನೆಂದರೆ ಈ ಐ.ಟಿ. ಕಂಪನಿಗಳು ಡಾಲರಿನ ಬೆಲೆ ಬಿದ್ದುದಕ್ಕೆ ಆತಂಕಗೊಂಡು ಹುಯಿಲಿಡುವ ಬದಲು ನಮ್ಮ ದೇಶಕ್ಕೆ ಸದೃಢ ಆರ್ಥಿಕತೆಯನ್ನು (strong economy) ತಂದುಕೊಳ್ಳುವಂತ ಸ್ವಾಭಿಮಾನಿ ಕೆಲಸಗಳಲ್ಲೇಕೆ ತೊಡಗುತ್ತಿಲ್ಲ ಎನ್ನುವುದು !

ಇದೆಲ್ಲಕ್ಕಿಂದ ಮೊದಲು ನಮ್ಮ ದೇಶಕ್ಕೆ ಯಾವರೀತಿ ಆರ್ಥಿಕ ಸಧೃಡತೆ (economic strength) ಬೇಕು ಎಂಬುದನ್ನು ಯೋಚಿಸೋಣ.

ಅ) ವಿದೇಶಿ ಕಂಪನಿಗಳು ಕೊಡುವ ಕೆಲಸಗಳನ್ನು ಮಾಡುತ್ತಾ , ಅವರು ಉನ್ನತ ತಂತ್ರಜ್ಞಾನದ ಕೆಲಸದಲ್ಲಿ ತೊಡಗಿರುವಾಗ ಅವರ ಕೆಲಸಗಳಿಗೆ support, service, maintenance ಕೆಲಸಗಳನ್ನು ಮಾಡುತ್ತಾ, ಅವರು ಹೇಳಿದ ಬದಲಾವಣೆಗಳನ್ನು ಮಾಡುತ್ತಾ, ಅವರಿಗೆ ಬೇಕಾದ software ಇತ್ಯಾದಿ product ಗಳಿಗೆ coding ಮಾಡುತ್ತಾ, ತಡರಾತ್ರಿಯವರೆಗೆ, ರಾತ್ರಿ ಪಾಳಿಯಲ್ಲಿ ದುಡಿಯುತ್ತಾ , ಒಟ್ಟಾರೆ ಇಂತಹ low profile ಕೆಲಸಗಳಿಗೆ ತಕ್ಕುದಾದ ಅಗ್ಗದ ಮಾನವ ಸಂಪನ್ಮೂಲಗಳಿಂದ ನಿರ್ಮಾಣಗೊಳ್ಳುವ ಆರ್ಥಿಕತೆ ಬೇಕೆ?

ಅಥವಾ

ಬ) ನಮ್ಮದೇ ಆದ ಸೃಜನಶೀಲ, ಕ್ರಿಯಾತ್ಮಕ ಕೆಲಸಗಳನ್ನು ಮಾಡುತ್ತಾ, ಹೊಸ ಹೊಸ ಬೇರೆ ಬೇರೆ ಉತ್ಪನ್ನಗಳನ್ನು ತಯಾರಿಸುತ್ತಾ, ಭಾರತದ ಉತ್ಪನ್ನಗಳಿಗೆ (software / product) ವಿಶ್ವ ಮಾರುಕಟ್ಟೆಯಲ್ಲಿ ಬೇಡಿಕೆ ಬರುವಂತೆ ಮಾಡಿ , ಎಷ್ಟು ಡಾಲರುಗಳಿಗೆ ಎಷ್ಟು ರೂಪಾಯಿಯೆಂದು ತಲೆಕೆಡಿಸಿಕೊಳ್ಳದೇ ದಿನದ ಸಮಯದಲ್ಲಿ ದುಡಿದು ಉಳಿದ ಸಮಯವನ್ನು ವೈಯಕ್ತಿಕ, ಸಾಮಾಜಿಕ ಜೀವನಕ್ಕೆ ತೊಡಗಿಸಿಕೊಂಡು ಬದುಕುವ ಸ್ವಾವಲಂಬೀ ಆರ್ಥಿಕತೆ ಬೇಕೆ?

ನಿಜವಾಗಿಯೂ ನೋಡಿದರೆ ಇವತ್ತಿನ ಅರ್ಥಿಕತೆ ಬೆಳೆದು ನಿಂತಿದ್ದು , ಭಾರತ ವಿಶ್ವ ಮಟ್ಟದಲ್ಲಿ ಹೆಸರು ಮಾಡಿರುವುದು ಎಲ್ಲವೂ ಮೊದಲನೆಯ (ಅ) ರೀತಿಯ ಆರ್ಥಿಕತೆಯಿಂದ ಅನ್ನುವುದರಲ್ಲಿ ಸಂಶಯವಿಲ್ಲ. ಬೇರೆ ದೇಶಗಳಿಂದ ನಮಗೆ ಕೆಲಸಗಳು, ಗುತ್ತಿಗೆಗಳು ಹರಿದು ಬಂದಿದ್ದು, ಬರುತ್ತಿರುವುದು ಎಲ್ಲವೂ ಇಲ್ಲಿ ಸಿಗುವ ಅಗ್ಗದ ಮಾನವ ಸಂಪನ್ಮೂಲದಿಂದ ಎಂಬುದೂ ಸತ್ಯ. ಇಷ್ಟು ದಿನವೇನೋ ಹೀಗಾಯಿತು. ಆದರೆ ನಾವು ಶಾಶ್ವತವಾಗಿ ಇದೇ ರೀತಿಯಲ್ಲೆ ಉಳಿಯಬೇಕೆ? ನಾವು ಅಗ್ಗದ ಸಂಪನ್ಮೂಲವೆಂದು ಅನಿಸಿಕೊಂಡಿರುವುದಕ್ಕೇ ಕಾರಣವೇ ನಮ್ಮ ದುರ್ಬಲ ಆರ್ಥಿಕತೆ. ಇವತ್ತು ನಾವು ಅಮೆರಿಕದಲ್ಲಿ ಏನಾದರೂ ಆದರೆ ಅಲ್ಲಿನ ನೇರ ಪರಿಣಾಮ ಇಲ್ಲಿ ಅನುಭವಿಸುತ್ತೇವೆ, ಡಾಲರ್ ಎದುರು ರೂಪಾಯಿ ಚಿಗಿತುಕೊಂಡರೆ ಆತಂಕಕ್ಕೊಳಗಾಗುತ್ತೇವೆ !

ಎಂತಾ ವಿಪರ್ಯಾಸ !!

೧೯೪೭ ರಲ್ಲಿ ಸ್ವಾತಂತ್ರ್ಯ ಬಂದಾಗ ಒಂದು ಡಾಲರು = ಒಂದು ರೂಪಾಯಿ ಆಗಿತ್ತು ಎಂಬುದು ಎಷ್ಟು ಜನರಿಗೆ ಗೊತ್ತು? ಆದರೆ ಅದೇ ಆರ್ಥಿಕತೆಯನ್ನು ನಾವೇಕೆ ಉಳಿಸಿಕೊಳ್ಳಲು ಆಗಲಿಲ್ಲ?

ನಮ್ಮಲ್ಲಿ ಪ್ರತಿಭೆಗಳಿಗೇನು ಕೊರತೆಯಿಲ್ಲ, ನಮಗೆ ಬೇಕಾಗುವ ಎಲ್ಲಾ ವಸ್ತುಗಳನ್ನು / ತಂತ್ರಜ್ಞಾನಗಳನ್ನು ನಾವೇ ತಯಾರು ಮಾಡಿಕೊಳ್ಳುವಷ್ಟು ಮಟ್ಟಿಗೆ ನಮ್ಮಲ್ಲಿ skilled , unskilled resource ಇದೆ. ಈ ಐ.ಟಿ ಕಂಪನಿಗಳು ಈಗಲಾದರೂ ಡಾಲರ್ ಬೆಲೆ ಮೇಲೆ ಅವಲಂಬಿತವಾಗುವುದನ್ನು ಬಿಟ್ಟು ಇಲ್ಲಿಯೇ ಹೊಸ ಸಾಫ್ಟ್ ವೇರ್/ ಟೆಕ್ನಾಲಜಿ ಗಳನ್ನು ತಯಾರಿಸುವ ಕೆಲಸಗಳಲ್ಲಿ ತೊಡಗಬೇಕು. ಇದುವರೆಗೂ ಈ ಕಂಪನಿಗಳು ಇಂತಹ ಹೊಸದನ್ನು ಮಾಡಿರುವುದು ಬಹಳ ಕಡಿಮೆ. ನಮ್ಮಲ್ಲೇಕೆ ಇದುವರೆಗೂ Operating Systems, Compilers, database systems, development platforms ಇತ್ಯಾದಿಗಳು ತಯಾರಾಗುತ್ತಿಲ್ಲ? ನಮ್ಮಲ್ಲೇಕೆ Photoshop, Flash ಇತ್ಯಾದಿ Tool ಗಳು ಹೊರಬರುತ್ತಿಲ್ಲ?

ನಮ್ಮಲ್ಲಿ ಇದನ್ನೆಲ್ಲಾ ಮಾಡುವ ಪ್ರತಿಭೆ, ತಾಕತ್ತು, ಸವಲತ್ತು ಎಲ್ಲವೂ ಇದೆ. ಆದರೆ ನಾವು ಮಾಡುತ್ತಿರುವುದು ಅಮೆರಿಕದ ಕಂಪನಿಗಳಿಗೆ. ನಮ್ಮಿಂದ ಅಗ್ಗದ ಬೆಲೆಗೆ ಮಾಡಿಸಿಕೊಂಡು ಅವರು ಅದೇ ಉತ್ಪನ್ನಗಳನ್ನು ವಿಶ್ವ ಮಾರುಕಟ್ಟೆಯಲ್ಲಿ ಮಾರಿ ಹೆಚ್ಚಿನ ಲಾಭ ತಂದುಕೊಳ್ಳುತ್ತಾರೆ. ಉದಾಹರಣೆಗೆ: ಬೋಯಿಂಗ್, ಏರ್ ಬಸ್ ವಿಮಾನಗಳ low end ಕೆಲಸಗಳು ಭಾರತದ ಕಂಪನಿಗಳಲ್ಲಿ ನೆಡೆಯುತ್ತಿವೆ. ಆದರೆ ಅದೇ ವಿಮಾನಗಳ high end ಕೆಲಸಗಳು ನೆಡೆಯುತ್ತಿರುವುದು ವಿದೇಶಗಳಲ್ಲಿ. ನಮಗೆ ಅಂತಹ ವಿಮಾನಗಳನ್ನು ತಯಾರಿಸುವ ಸಾಮರ್ಥ್ಯ ಇದ್ದರೂ ಸಹ ಅವರ ಕೆಲಸಗಳನ್ನು ಮಾಡಿಕೊಟ್ಟು ನಂತರ ಅದನ್ನೇ ನಾವು ದುಬಾರಿ ಬೆಲೆಗೆ ಕೊಂಡುಕೊಳ್ಳುತ್ತಿದ್ದೇವೆ. ಅದರ ಬದಲು ನಮ್ಮ ಕಂಪನಿಗಳೇ ತಮ್ಮಲ್ಲೇ ಇಂತಹ ಉತ್ಪನ್ನ (software, other product) ಗಳನ್ನು ತಯಾರು ಮಾಡುವ ಕೆಲಸದಲ್ಲೇಕೆ ತೊಡಗಬಾರದು. ಕೊನೆ ಪಕ್ಷ ಈ ಕೆಲಸಕ್ಕಾಗಿ ತಮ್ಮ ಕಂಪನಿಗಳಲ್ಲಿ ಒಂದು ಸಣ್ಣ ವಿಭಾಗವನ್ನೇಕೆ ತೆರೆಯಬಾರದು.?

ಭಾರತವು ಸೂಪರ್ ಪವರ್ ಆಗಬೇಕು , ವಿಶ್ವದ ಮುಂಚೂಣಿಯಲ್ಲಿರುವ ದೇಶಗಳ ಸಾಲಿನಲ್ಲಿ ನಿಲ್ಲಬೇಕೆಂದು ಬಯಸುತ್ತೇವೆ. ಹೀಗೆ ಬೆಳೆಯಲು ಮುಖ್ಯವಾಗಿ ಬೇಕಾಗಿರುವುದು ಒಂದು ಬಲಿಷ್ಠ economy ಹೊರತು ಬೇರೇನಲ್ಲ. ಆದರೆ ಹೀಗೆ ನಮ್ಮ week currencyಯನ್ನೆ ಬಂಡವಾಳ ಮಾಡಿಕೊಂಡು ಮುಂದುವರೆಯುತ್ತಾ ಹೋದರೆ ನಮ್ಮ ಆರ್ಥಿಕತೆ ಬೆಳೆಯುವುದು ಸಾಧ್ಯವೇ ಇರುವುದಿಲ್ಲ. ನಮ್ಮ ರೂಪಾಯಿ ಮೌಲ್ಯ ದಿನೇ ದಿನೇ ಹೆಚ್ಚ ಬೇಕು. Low profile ಕೆಲಸಗಳಲ್ಲಿ ತೊಡಗುವುದನ್ನು ಬಿಟ್ಟು ಕ್ರಿಯಾತ್ಮಕ ಕೆಲಸಗಳಲ್ಲಿ, ಉನ್ನತ ತಂತ್ರಜ್ಞಾನದ ಕೆಲಸಗಳಲ್ಲಿ, ನಮ್ಮ ದೇಶಕ್ಕೆ, ನಮ್ಮ ಆರ್ಥಿಕತೆಗೆ ಉಪಯೋಗವಾಗುವಂತಹ ಕೆಲಸಗಳಲ್ಲಿ ತೊಡಗಬೇಕು. ಇವು ಬರೀ ಸಾಫ್ಟ್ ವೇರ್ ಗೆ ಸೀಮಿತವಾಗಬೇಕಿಲ್ಲ. ಕೃಷಿಯಿಂದ ಹಿಡಿದು ಬಾಹ್ಯಾಕಾಶದವರೆಗೂ ಹೀಗಾಗಬೇಕು. ನಮ್ಮ ಉತ್ಪನ್ನಗಳನ್ನು , ನಮ್ಮ software, tool ಗಳನ್ನು ಕೊಳ್ಳಲು , ನಮ್ಮಲ್ಲಿ ತಯಾರಾದ ಮೊಬೈಲು, ವಿಮಾನ, ಆಟೊಮೊಬೈಲುಗಳನ್ನು ಕೊಳ್ಳಲು ಇತರ ರಾಷ್ಟ್ರಗಳು ತವಕಿಸುವಂತಹ ಪರಿಸ್ಥಿತಿ ನಿರ್ಮಾಣವಾಗಬೇಕು.

ರೂಪಾಯಿ ಬೆಲೆ ಹೆಚ್ಚಾದಾಗ ನಾವು ಬೋಯಿಂಗ್ ವಿಮಾನ ಕೊಳ್ಳಲು ಕೋಟ್ಯಂತರ ರೂಪಾಯಿ ಸುರಿಯಬೇಕಿಲ್ಲ. ವಿದೇಶ ಪ್ರಯಾಣಕ್ಕೆ ಲಕ್ಷಾಂತರ ರೂಪಾಯಿ ವ್ಯಯಿಸಬೇಕಿಲ್ಲ. ಸುಲಭವಾಗಿ ಯಾವ ದೇಶಕ್ಕಾದರೂ ಹೋಗಬಹುದು. ಜಗತ್ತಿನ ಯಾವುದೇ ವಸ್ತುವಿನ ಬೆಲೆಯಾದರೂ ನಮ್ಮ ಕೈಗೆಟುಕುವ ಮಟ್ಟ ತಲುಪುತ್ತದೆ. ಮಾರುತಿ ಕಾರು ಹಾಗೂ ಬೆಂಜ್ ಕಾರು ಕೊಳ್ಳುವುದರಲ್ಲಿ ಯಾವುದೇ ವ್ಯತ್ಯಾಸ ಇರುವುದಿಲ್ಲ. ನಾವು ಕುಲು ಮನಾಲಿಗೆ ಪ್ರವಾಸ ಹೋಗುವಂತೆ ಸ್ವಿಡ್ಜರ್ಲ್ಯಾಂಡಿಗೂ ಪ್ರವಾಸ ಹೋಗಬಹುದು. ಅಮೆರಿಕಾದ ಜನರು ಸುಲಭ ವಿಶ್ವ ಪ್ರವಾಸ ಮಾಡಲು ಕಾರಣವಾಗಿರುವುದು ಅವರು ಹೆಚ್ಚು ದುಡಿಯುತ್ತಾರೆ, ಗಳಿಸುತ್ತಾರೆ ಎಂಬುದು ಅಲ್ಲ. ಬದಲಾಗಿ ಅವರ ಕರೆನ್ಸಿಗಿರುವ ಮೌಲ್ಯದಿಂದ. ರೂಪಾಯಿಯ ಮೌಲ್ಯವು ಹೆಚ್ಚಾದಾಗ ನಮಗೆ ಇವೆಲ್ಲವೂ ಸಾಧ್ಯವಾಗುತ್ತದೆ.

Low End ಕೆಲಸಗಳನ್ನು ಮಾಡುವುದು ತಪ್ಪಲ್ಲ. ಆದರೆ ಅದರ ಮೇಲೆ ಅವಲಂಬಿತವಾಗಿ ಉಳಿದು ಬಿಡುವ ಬದಲು ಕ್ರಿಯಾತ್ಮಕ ಕೆಲಸಗಳಿಂದ, ಸಂಶೋಧನೆಗಳಿಂದ, ಉತ್ಪನ್ನಗಳಿಂದ ನಮ್ಮ ಸ್ವಾವಲಂಬಿ ಬಲಿಷ್ಠ ಆರ್ಥಿಕತೆಯನ್ನು ನಿರ್ಮಿಸಿಕೊಳ್ಳುವ ಯಶಸ್ಸಿನ ಪಥದಲ್ಲಿ ಸಾಗೋಣ.

ಆ ನಿಟ್ಟಿನಲ್ಲಿ ಪ್ರಯಾಣ ಈಗ ಆರಂಭಗೊಂಡಿದೆ.
ಇದು ಎಲ್ಲದಕ್ಕೂ ನಾಂದಿಯಾಗಲಿ.

ಶುಕ್ರವಾರ, ಜುಲೈ 27, 2007

ಇವಳೇನು ಸೆಕ್ಸಿ ಟೀಚರ್ರಾ ?!!

ಜಾಹೀರಾತಿನ ಈ ಪರಿ !
ಚಿತ್ರವನ್ನು ನೋಡಿ. ಇದು ಬೆಂಗಳೂರಿನ ರಿಚ್ಮಂಡ್ ವೃತ್ತದ ಹತ್ತಿರ ಹಾಕಿರುವ ಜಾಹೀರಾತು ಫಲಕ. ಪಿ.ಯು.ಸಿ, ಸಿ.ಇ.ಟಿ ತರಬೇತಿ ಕೊಡುವ ಖಾಸಗಿ ಸಂಸ್ಥೆಯೊಂದು ಈ ರೀತಿಯ ಜಾಹಿರಾತನ್ನು ಹಾಕಿದೆ. ವಿದ್ಯೆ, ಶಿಕ್ಷಣವನ್ನು ಸಹ ಮಾದಕ ಹೆಣ್ಣಿನ ಫೋಟೋ ಹಾಕಿ ಮಾರುಕಟ್ಟೆಯಲ್ಲಿ ತೆರೆದಿಡಲಾಗಿದೆ. ಇದೇ ರೀತಿ ಕೋರಮಂಗಲದ ಹತ್ತಿರ ಇನ್ನೊಂದು ಕಡೆಯಲ್ಲಿ ಯಾವುದೋ ಶಿಕ್ಷಣ ಸಂಸ್ಥೆಯೊಂದು ಹುಡುಗಿಯೊಬ್ಬಳು ತನ್ನ ಎರಡೂ ಕೈಗಳನ್ನು ಅಗಲಿಸಿ ಕುಳಿತುಕೊಂಡಿರುವ ಚಿತ್ರವನ್ನು ಹಾಕಿ "ಅಡ್ಮಿಷನ್ಸ್ ಓಪನ್" ಎಂದು ಬರೆಯಲಾಗಿದೆ. ಪಿಯುಸಿ, ಸಿಇಟಿ ಅಥವಾ ಇನ್ಯಾವುದೇ ಶಿಕ್ಷಣಕ್ಕೂ ಈ ಹುಡುಗಿಯರ ಚಿತ್ರಕ್ಕೂ ಯಾವ ರೀತಿ ಸಂಬಂಧವೆನ್ನುವುದು ತಿಳಿಯುವುದಿಲ್ಲ. ಉತ್ತಮ ತರಬೇತಿ, ಗುಣಮಟ್ಟದಿಂದ ವಿದ್ಯಾರ್ಥಿಗಳನ್ನು ಆಕರ್ಷಿಸಬೇಕಾದ ಕಡೆಯಲ್ಲಿ ಮದ್ಯದ ಜಾಹೀರಾತಿನಂತಹ ಚಿತ್ರವನ್ನು ಹಾಕಿ ತಮ್ಮ ಇರುವಿಕೆಯನ್ನು ತೋರ್ಪಡಿಸಲಾಗಿದೆ.


ಇವತ್ತು ಶಿಕ್ಷಣವೆನ್ನುವುದು ಯಾವ ರೀತಿ ವ್ಯಾಪಾರೀಕರಣಕ್ಕೊಳಪಟ್ಟಿದೆ ಎಂಬುದಕ್ಕೆ ಇದೊಂದು ನಿದರ್ಶನ. ಶಿಕ್ಷಣದಂತಹ ಪವಿತ್ರ ಕ್ಷೇತ್ರಗಳೂ ದುಡ್ಡು ಮಾಡುವ ದಂಧೆಗಳಾದಾಗ ಇಂತಹ ವಿಕೃತಿ, ವಿಚಿತ್ರಗಳು ತಲೆ ಎತ್ತುತ್ತವೆ. ಇವು ನಮ್ಮ ಸಮಾಜದ ನೈತಿಕ ಅಧಃಪತನದ ಧ್ಯೋತಕವೆ ಅಥವಾ ಇಂದಿನ ಸ್ಪರ್ಧಾತ್ಮಕ ಜಗತ್ತಿನ ಅನಿವಾರ್ಯತೆಯೆ ? ಇದು ಹೀಗೆ ಮುಂದುವರೆದರೆ ಸ್ಪರ್ಧೆಯ, ಆಕರ್ಷಣೆಯ , ಅಂತಸ್ತಿನ ಜಿದ್ದಿಗೆ ಬಿದ್ದು ಶಿಕ್ಷಣ ಸಂಸ್ಥೆಗಳು, ಕಾಲೇಜುಗಳು ಅರೆಬೆತ್ತಲೆ ಜಾಹೀರಾತುಗಳನ್ನು ಹಾಕಿ ತಮ್ಮ ಇರುವಿಕೆಯನ್ನು ಪ್ರಚುರಪಡಿಸಿ, ವಿದ್ಯಾರ್ಥಿಗಳನ್ನು ಸೆಳೆಯಲು ಮಾಡೆಲ್ ಗಳನ್ನು ನೇಮಿಸಿಕೊಳ್ಳುವ ಹಂತಕ್ಕೆ ಇಳಿದರೂ ಅಚ್ಚರಿಯೇನಿಲ್ಲ.
******************************************************
(೩೧-೦೭-೨೦೦೭ ರಂದು thatskannada.com ನಲ್ಲಿ ಪ್ರಕಟಗೊಂಡಿದೆ ,

ಇದರ ಬಗ್ಗೆ ವಿಜಯ ಕರ್ನಾಟಕದಲ್ಲಿ ಸಚಿತ್ರ ವರದಿ ಪ್ರಕಟವಾಗಿ ಸಂಬಂಧಪಟ್ಟ ಸಂಸ್ಥೆಗೆ ಹಾಗೂ ಬೆಂಗಳೂರು ಮಹಾನಗರ ಪಾಲಿಕೆಗೆ ಛೀಮಾರಿ ಹಾಕಿದ ಮಾರನೆಯ ದಿನವೇ ಈ ಜಾಹಿರಾತನ್ನು ತೆಗೆದು ಹಾಕಲಾಯಿತು.



ಸೋಮವಾರ, ಜುಲೈ 9, 2007

ಹಾಡು ಹಳೆಯದಾದರೇನು... ಭಾವ ನವನವೀನ....

“೧೪ ಇನ್ ಲ್ಯಾಂಡ್ ಲೆಟರ್ಸ್ ಕೊಡಿ”. ಗ್ಲಾಸಿನ ಕಿಂಡಿಯಲ್ಲಿ ನೋಡುತ್ತಾ ಕೇಳಿದೆ.
ಕೌಂಟರಿನ ಒಳಗಿಂದ ಆತ ನನ್ನ ಮುಖವನ್ನೇ ಒಂದು ಥರಾ ನೋಡಿದ. ಅಥವಾ ನನಗೇ ಹಾಗನ್ನಿಸಿತೋ ಏನೋ ! ಅಮೋಘ ೨ ವರುಷಗಳ ನಂತರ ಅಂಚೆ ಕಛೇರಿಯೊಳಕ್ಕೆ ಕಾಲಿಟ್ಟಿದ್ದೆ. ಬೆಂಗಳೂರಿಗೆ ಬಂದ ಹೊಸತರಲ್ಲಿ ಅಲ್ಲಿ ಇಲ್ಲಿ ರೆಸ್ಯೂಮ್ ಕಳಿಸಲು ಆಗಾಗ ಹೋಗುತ್ತಿದ್ದೆ. ಎರಡು ವರುಷಗಳ ಹಿಂದೆ ಪಾಸ್ ಪೋರ್ಟ್ ಅರ್ಜಿ ತರಲೆಂದು ಹೋದವನು ಮತ್ತೆ ಹೋಗಿರಲೇ ಇಲ್ಲ. ನಂತರ ಅಲ್ಲಿಗೆ ಹೋಗುವ ಅಗತ್ಯವೇ ಬಿದ್ದಿರಲಿಲ್ಲ. ಮೊನ್ನೆ ಯಾವತ್ತೋ ನಾವು ಕೆಲವು ಗೆಳೆಯರು ಹೀಗೇ ಕಟ್ಟೆಯಲ್ಲಿ ಕೂತು ಮಾತಾಡುವಾಗ ಪತ್ರಗಳ ಬಗ್ಗೆ ಮಾತು ಬಂದಿತ್ತು. ಈಗಿನ ಮೊಬೈಲು, ಈ-ಮೇಲು ಗಳ ಅಬ್ಬರದಲ್ಲಿ ಕಳೆದು ಹೋದ ಆಗಿನ ಪತ್ರ ವೈಭವಗಳ ಬಗ್ಗೆ ನೆನಪಿಸಿಕೊಂಡು ವ್ಯಥೆಪಟ್ಟಿದ್ದೆವು. ಅದನ್ನೆ ಮೆಲುಕು ಹಾಕುತ್ತಾ ಅವತ್ತಿನ ರಾತ್ರಿ ಮನೆಯಲ್ಲಿ ಕುಳಿತಿದ್ದಾಗ ಬಂದದ್ದೇ ಈ ಯೋಚನೆ. ನಾನ್ಯಾಕೆ ಒಮ್ಮೆ ಎಲ್ಲರಿಗೂ ಸಣ್ಣವನಿದ್ದಾಗ ಬರೆಯುತ್ತಿದ್ದಂತೆ ಪತ್ರ ಬರೆಯಬಾರದು ಎಂದು. ಈ ಯೋಚನೆ ಬರುತ್ತಿದ್ದಂತೆ ಏನೋ ಒಂದು ರೀತಿ ಖುಷಿಯಾಯಿತು. ಎಷ್ಟೋ ವರುಷಗಳಿಂದ ಪತ್ರ ಬರೆಯುವ ಅಭ್ಯಾಸವೇ ಬಿಟ್ಟು ಹೋಗಿತ್ತು. ಈಗ ಮತ್ತೊಮ್ಮೆ ಪತ್ರ ಬರೆಯುವ ಪ್ರಯತ್ನ ಮಾಡಿದರೆ ಹೇಗೆ ಅಂದುಕೊಂಡೆ. ಇಷ್ಟು ವರುಷಗಳ ನಂತರದ ಪ್ರಯತ್ನ ಹೇಗಿರುತ್ತದೋ ಎಂಬ ಯೋಚನೆ ಒಂದೆಡೆಯಾದರೆ, ಯಾರ್ಯಾರ ಪ್ರತಿಕ್ರಿಯೆ ಹೇಗಿರುತ್ತದೋ ನೋಡೋಣ ಎಂಬ ಕುತೂಹಲ ಇನ್ನೊಂದೆಡೆ ಇತ್ತು. ಅವತ್ತು ರಾತ್ರಿಯೇ ಯಾರ್ಯಾರಿಗೆ ಪತ್ರ ಬರೆಯಬೇಕು ಎಂದು ಪಟ್ಟಿ ಮಾಡಿಟ್ಟುಕೊಂಡು ಮಾರನೇ ದಿನವೇ ಪತ್ರಗಳನ್ನು ತೆಗೆದುಕೊಳ್ಳಲು ಅಂಚೆ ಕಛೇರಿಗೆ ಬಂದಿದ್ದೆ. ಈಗ ಇನ್ಲ್ಯಾಂಡ್ ಪತ್ರಕ್ಕೆ ಎಷ್ಟು ದುಡ್ಡು ಎಂಬುದು ಕೂಡ ಗೊತ್ತಿರಲಿಲ್ಲ. ಸುಮ್ಮನೇ ನೂರರ ನೋಟನ್ನು ಕೊಟ್ಟು ಚಿಲ್ಲರೆ ಎಣಿಸಿಕೊಂಡೆ. ಮನೆಗೆ ಬಂದು ಪೆನ್ನು ರೆಡಿ ಮಾಡಿಕೊಂಡು ಕುಳಿತೆ. ಹೊಸ ಹೊಸ ಇನ್ಲ್ಯಾಂಡುಗಳನ್ನು ಬಿಡಿಸುತ್ತಿದ್ದಂತೆ ಆ ಗರಿ ಗರಿ ಕಾಗದದ ವಾಸನೆಯು ಸಂಭ್ರಮದಿಂದಿದ್ದ ಮನಸ್ಸನ್ನು ಹಾಗೆಯೆ ಹಿಂದಿನ ದಿನಗಳಿಗೆ ಕೊಂಡೊಯ್ಯಿತು.


****************************************
ಟ್ರಿನ್ ಟ್ರಿನ್... ಪೋಸ್ಟ್.... ಎಂಬ ಅಂಚೆಮಾಮನ ಕರೆ ಕೇಳಿದೊಡನೆ ಮನೆಯಿಂದ ಹೊರಗೆ ಓಡಿಬರುತ್ತಿದ್ದೆ. ಆಗ ಪೋಸ್ಟ್ ಮ್ಯಾನ್ ಬಂದಿದ್ದಾನೆಂದರೆ ಖುಷಿ. ಯಾರದ್ದಾದರೂ ಪತ್ರ ಬಂದೇ ಬಂದಿರುತ್ತದೆ ಎಂಬುದು ಖಾತ್ರಿ ಇರುತ್ತಿತ್ತು. ಆಗ ಇನ್ನೂ ಮೊಬೈಲ್ ಫೋನ್ ಇರಲಿ ಮಾಮೂಲಿ ಫೋನ್ ಕೂಡ ಇನ್ನು ಸರಿಯಾಗಿ ಸಣ್ಣ ಊರುಗಳಲ್ಲಿ ಕಣ್ಣು ಬಿಟ್ಟಿರಲಿಲ್ಲ. ಎಲ್ಲಾ ಪತ್ರಗಳ ಮೂಲಕವೇ ಮಾತು ಕತೆ ನಡೆಯುತ್ತಿತ್ತು. ನಮ್ಮ ಮನೆಗಂತೂ ವಾರಕ್ಕೆ ಎರಡು ಮೂರಾದರೂ ಪತ್ರ ಇದ್ದೇ ಇರುತ್ತಿತ್ತು. ಅಪ್ಪನ ಅಮ್ಮನ ಕಡೆಯ ಬಳಗ ದೊಡ್ಡದಿದ್ದುದರಿಂದ ಒಬ್ಬರಲ್ಲದಿದ್ದರಿನ್ನೊರೊಬ್ಬರ ಪತ್ರ ಖಾಯಂ ಇರುತ್ತಿತ್ತು. ನಮ್ಮ ಮನೆಗೆ ಹೆಚ್ಚಾಗಿ ಬರುತ್ತಿದ್ದುದು ಸಂಬಂಧಿಕರ ಪೈಕಿ ಅಜ್ಜನದು, ದೊಡ್ಡಮ್ಮನದು, ಚಿಕ್ಕಪ್ಪಂದಿರು, ಅತ್ತೆಯರು ಮತ್ತವರ ಮಕ್ಕಳು ಅಂದರೆ ನನ್ನ ಕಸಿನ್ ಗಳದ್ದು. ಇವು ಬಿಟ್ಟರೆ ಅಪ್ಪನ ವ್ಯಾವಹಾರಿಕ ಪತ್ರಗಳು. ಪೋಸ್ಟ್ ಬಂದಕೂಡಲೇ ಅಪ್ಪನ ಪತ್ರಗಳು ಎಂದು ಗೊತ್ತಾಗುತ್ತಿದ್ದಂತೆ ಅದನ್ನು ಒಡೆಯದೇ ಒಂದು ಕಡೆ ಇಡುವುದು ಆಗಿನ ಅಭ್ಯಾಸವಾಗಿತ್ತು. ಅಪ್ಪ ಆಮೇಲೆ ಬಂದು ನೋಡಿಕೊಳ್ಳುತ್ತಿದ್ದರು.

ಅತ್ತೆ-ಮಾವಂದಿರ, ಚಿಕ್ಕಪ್ಪಂದಿರ, ಕಸಿನ್ ಗಳ ಪತ್ರಗಳನ್ನು ಓದಿದಾಗ ಊರಿನ, ಅಲ್ಲಿನ ಆಗು ಹೋಗುಗಳ ಸಂಪೂರ್ಣ ಚಿತ್ರಣವೇ ಕಣ್ಣ ಮುಂದೆ ಬರುತ್ತಿತ್ತು. ಪತ್ರಗಳ ವಿಶೇಷತೆ ಅಂತಹುದು. ಅತ್ತೆ ಬರೆಯುತ್ತಿದ್ದುದು ಅಪ್ಪಟ ಹವ್ಯಕ ಭಾಷೆಯಲ್ಲಿ. ಚಿಕ್ಕಪ್ಪಂದಿರದ್ದು ಅರ್ಧ ಪೇಟೆ ಭಾಷೆ , ಅರ್ಧ ಹವ್ಯಕ ಭಾಷೆ. ಖುದ್ದಾಗಿ ಅವರೇ ಕೂತು ಮಾತಾಡುತ್ತಿದ್ದಾರೇನೋ ಅನ್ನುವಷ್ಟು ಖುಷಿಯಾಗುತ್ತಿತ್ತು. ಯಾರ ಪತ್ರ ಬಂದರೂ ಕೊನೆಯಲ್ಲಿ “ವಿಕಾಸ ಏನು ಮಾಡುತ್ತಿದ್ದಾನೆ, ಅವನಿಗೆ ನನ್ನ ನೆನಪುಗಳು” ಎಂದು ಇರುವುದನ್ನು ನೋಡಿದರೆ ಬಹಳ ಸಂತೋಷವಾಗುತ್ತಿತ್ತು.


ನನ್ನ ಅಜ್ಜನ, ಅಂದರೆ ನನ್ನ ಅಪ್ಪನ ಅಪ್ಪನ ಪತ್ರದ ಮಜಾನೇ ಬೇರೆ. ಅಜ್ಜ ಸಣ್ಣಗೆ ಇರುವೆ ಕೊರೆದಂತೆ ಕೊರೆದು ಬರೆಯುತ್ತಿದ್ದ. ಪತ್ರ ಬಿಡಿಸಿದರೆ ಬರೀ ಸುರುಳಿ ಸುರುಳಿ ಸುತ್ತಿರುವಂತೆ ಕಾಣುತ್ತಿತ್ತು. ಅವರು ಬರೆಯುತ್ತಿದ್ದುದು ಅರ್ಥವಾಗುತ್ತಿದ್ದುದು ಅಪ್ಪನಿಗೆ ಮಾತ್ರ. ಅದು ಯಾವ ಭಾಷೆಯೋ ಏನು ಲಿಪಿಯೋ ಏನು ವಿಷಯವೋ ಒಂದು ಸ್ವಲ್ಪವೂ ತಿಳಿಯುತ್ತಿರಲಿಲ್ಲ. ಅಪ್ಪ ಮಾತ್ರ ಸಲೀಸಾಗಿ ಮೂಗಿನ ಮೇಲೆ ಒಂದು ಕನ್ನಡಕ ಏರಿಸಿ ಹತ್ತು ನಿಮಿಷದಲ್ಲಿ ಓದಿ ಮುಗಿಸಿ ಪಕ್ಕಕ್ಕೆ ಇಡುತ್ತಿದ್ದರು. ಅಪ್ಪ ಇಲ್ಲದಿದ್ದಾಗ ನಾನು ಓದಲು ಪ್ರಯತ್ನಪಡುತ್ತಿದ್ದೆ. ಅದು ಕನ್ನಡದಂತೇ ಇದ್ದರೂ ಕನ್ನಡದಂತೆ ಇರಲಿಲ್ಲ !! ಆ ವಿಚಿತ್ರ ಲಿಪಿಯ ಬಗ್ಗೆ ಕುತೂಹಲ ತಡೆಯಲಾರದೆ ಅಮ್ಮನಿಗೆ ಕೇಳಿದ್ದೆ ಅದು ಯಾವ ಭಾಷೆ ಎಂದು. “ಅದೆಂತದೋ ಮೋಡಿ ಲಿಪಿಯಡ ಅದು. ನಂಗೂ ಸಮಾ ಗೊತ್ತಾಗ್ತಿಲ್ಲೆ ಅದು . ನಿಮ್ಮಜ್ಜ ನಿಮ್ಮಪ್ಪ ಎಂತಾ ಬರ್ಕತ್ವೋ ಏನೋ ಅವ್ಕೇ ಗೊತ್ತಾಗವು ” (ಅದೇನೋ ‘ಮೋಡಿ ಲಿಪಿ’ಯಂತೆ ಅದು. ನಂಗೂ ಸರಿಯಾಗಿ ಗೊತ್ತಾಗಲ್ಲ ಅದು . ನಿಮ್ಮಜ್ಜ ನಿಮ್ಮಪ್ಪ ಏನು ಬರ್ಕತಾರೋ ಏನೋ ಅವರಿಗೇ ಗೊತ್ತಾಗ್ಬೇಕು) ಎಂದಿದ್ದಳು ಅಮ್ಮ.

ಈ ಕಥೆ ಹೀಗಾದರೆ ನನ್ನ ಅಮ್ಮನ ಅಕ್ಕ ಅಂದರೆ ದೊಡ್ಡಮ್ಮನದು ಪತ್ರ ಬರೆಯುವ ಶೈಲಿ ಬೆಂಗಳೂರಿನಲ್ಲಿ ಮನೆ ಕಟ್ಟಿದಂತೆ. ಅಂದರೆ ಇನ್ ಲ್ಯಾಂಡ್ ಪತ್ರದಲ್ಲಿ ಒಂದು ಚೂರೂ ಜಾಗ ಬಿಡದಂತೆ ತುಂಬಿಸಿರುತ್ತಿದ್ದರು. ಅಂಚಿನಲ್ಲಿ ಮಡಿಚಲು ಇರುವ ಜಾಗದಲ್ಲೂ ಬರೆಯುತ್ತಿದ್ದಳು. ಅದೇನಿರುತ್ತಿತ್ತೋ ಅಕ್ಕ ತಂಗಿಯರ ಕಷ್ಟ ಸುಖ ವಿನಿಮಯಗಳು ಹೇಳಿಕೊಂಡಷ್ಟೂ ಸಾಕಾಗುತ್ತಿರಲಿಲ್ಲವೇನೋ !. ಪೂರ್ತಿ ಕಾಗೆಕಾಲು ಗುಬ್ಬಿಕಾಲು ಅಕ್ಷರಗಳು. ನಾಲ್ಕು ಸಾಲು ಕಷ್ಟ ಪಟ್ಟು ಓದುವುದರಲ್ಲಿ ತಲೆ ಕೆಟ್ಟು ಕೈಬಿಡುತ್ತಿದ್ದೆ. ಯಥಾ ಪ್ರಕಾರ ಅಮ್ಮನಿಗೆ ಮಾತ್ರ ಸಲೀಸು.

ಇನ್ನೊಂದು ವಿಶೇಷ ನೆನಪಿನಲ್ಲಿರುವ ಪತ್ರವೆಂದರೆ ಅದು ಅಪ್ಪನ ಹಿರಿಯ ಸಹೋದ್ಯೋಗಿಯೊಬ್ಬರದು. ಅವರು ನಿವೃತ್ತಿಯಾದ ಮೇಲೆ ಬೆಂಗಳೂರಿಗೆ ಹೋಗಿ ನೆಲೆಸಿದ್ದರು. ಅವರು ಕೊನೆ ಕ್ಷಣ ದಲ್ಲಿ ಮಾಡಿಕೊಂಡ ಏನೋ ಆವಾಂತರದಿಂದ ಅವರ ಕಾಗದ ಪತ್ರಗಳಲ್ಲಿ ಏನೋ ಹೆಚ್ಚು ಕಮ್ಮಿ ಯಾಗಿ ಅವರ ಪೆನ್ಶನ್ ಹಣ ಬಿಡುಗಡೆಯಾಗಿರಲಿಲ್ಲ. ಪಾಪ ಅವರು ವಾರಕ್ಕೊಂಮ್ಮೆ, ಹದಿನೈದು ದಿನಕ್ಕೊಮ್ಮೆ ಅಪ್ಪನಿಗೆ ಪತ್ರ ಬರೆದು ಈ ಬಗ್ಗೆ ವಿಚಾರಿಸುವಂತೆ ಕೇಳಿಕೊಳ್ಳುತ್ತಿದ್ದರು. ಅದು ಸರ್ಕಾರಿ ಕೆಲಸವಾದ್ದರಿಂದ ಮಾಮೂಲಿನಂತೆ ‘ಮಾಮೂಲಿ’ ಕೊಡದೇ ಏನೂ ಆಗುತ್ತಿರಲಿಲ್ಲವಾದ್ದರಿಂದ ವರ್ಷಗಳಿಂದ ಎಳೆಯಲ್ಪಟ್ಟು ಹಾಗೇ ಉಳಿದಿತ್ತು. ಅವರು ಪಾಪ ವಯಸ್ಸಾದವರು ಬೆಂಗಳೂರಿನಿಂದ ಓಡಾಡಲು ಆಗದ ಪರಿಸ್ಥಿತಿ ಇದ್ದುದರಿಂದ ಪತ್ರಗಳ ಮೂಲಕ ಸ್ಥಿತಿಗತಿ ತಿಳಿದುಕೊಳ್ಳುತ್ತಿದ್ದರು. ಅವರ ಪತ್ರ ಬಂದಾಗಲೆಲ್ಲ ಅಪ್ಪ ಅಮ್ಮ ಅವರ ಬಗ್ಗೆ ಮಾತಾಡಿಕೊಂಡು ಮರುಕ ಪಡುತ್ತಿದ್ದರು.


ಹೀಗೆ ಬರುತಿದ್ದ ಪತ್ರಗಳಿಗೆಲ್ಲಾ ಕಡ್ಡಾಯವಾಗಿ ಉತ್ತರ ಬರೆಯುವ ಪರಿಪಾಠ ಇತ್ತು. ಸಂಬಂಧಿಕರಿಗೆ ಬರೆಯುವ ಪತ್ರಗಳಲ್ಲಿ ಅಪ್ಪ , ಅಮ್ಮ ಬರೆದಾದ ಮೇಲೆ ಕೊನೆಯಲ್ಲಿ ಸ್ವಲ್ಪ ಜಾಗ ನನಗಾಗಿಯೇ ಮೀಸಲಿಡುತ್ತಿದ್ದರು. ಅದರಲ್ಲಿ ನಾನು ನನ್ನ ಸುಂದರವಾದ(!) ಕನ್ನಡ ಕೈಬರಹದಿಂದ ೮-೧೦ ಸಾಲುಗಳನ್ನು ಬರೆದು ಷರಾ ಹಾಕುತ್ತಿದ್ದೆ. ನನ್ನ ವಾರಗೆಯವರಿಗೆಲ್ಲಾ ಪೂರ್ತಿ ನಾನೇ ಪತ್ರ ಬರೆದು ಅಮ್ಮನಿಗೆ ತೋರಿಸಿ ಪೋಸ್ಟ್ ಮಾಡುತ್ತಿದ್ದೆ.

ನಂತರ ನನ್ನ ಹೈಸ್ಕೂಲಿನ ಪ್ರಾರಂಭದ ವರುಷಗಳಲ್ಲಿ ಅಣ್ಣ ಮೈಸೂರಿಗೆ ಓದಲು ಹೋದ. ಇನ್ನೊಬ್ಬ ಅಣ್ಣ ಅಂದರೆ ನನ್ನ ದೊಡ್ಡಮ್ಮನ ಮಗ ಅಮೆರಿಕಾಕ್ಕೆ ಓದಲು ಹೋದ ನಂತರ ನನಗೆ ಇಂಗ್ಲೀಷಿನಲ್ಲಿ ಪತ್ರ ಬರೆಯುವ ತಿಕ್ಕಲು ಹತ್ತಿಕೊಂಡಿತು. ಏನೇನು ಬರೆಯಲು ಬರುತ್ತದೋ ಎಲ್ಲಾ ಬರೆದು ಮೊದಲು ಅಪ್ಪನಿಗೆ ಎಡಿಟಿಂಗ್ ಮಾಡಲು ಕೊಡುತ್ತಿದ್ದೆ. ಅಪ್ಪ ನೋಡಿ ಸೈ ಅಂದ ಮೇಲೆ ಸಂಭ್ರಮದಿಂದ ಪೋಸ್ಟ್ ಮಾಡುತ್ತಿದ್ದೆ. ಆಮೇಲೆ ಅಣ್ಣಂದಿರು ಇಂಗ್ಲೀಷಿನಲ್ಲೇ ಉತ್ತರ ಬರೆಯುತ್ತಿದ್ದರು. ಏನೋ ಸಾಧನೆ ಮಾಡಿದ ತೃಪ್ತಿ ದೊರಕುತ್ತಿತ್ತು. ಎಷ್ಟಂದರೂ ನಾನೂ ಭಾರತೀಯನಲ್ಲವೇ .. ಇಂಗ್ಲೀಷನಲ್ಲಿ ಬರೆದರೆ, ಮಾತಾಡಿದರೆ ದೊಡ್ಡಸ್ತಿಕೆ, ಬುದ್ಧಿವಂತಿಕೆ ಎಂಬ ಭಾವನೆ ಸಾಮಾನ್ಯವಾಗಿ ಎಲ್ಲರಲ್ಲೂ ಇರುವಂತೆ ಆಗ ನನ್ನಲ್ಲೂ ಇತ್ತು.
(ಆದರೆ ಈಗ ಈ-ಮೇಲು, ಚಾಟಿಂಗ್ ಗಳನ್ನೂ ಕೂಡ ಕನ್ನಡದಲ್ಲೇ ಬರೆಯುವಂತಾಗಿರುವುದು ಸಂತೋಷದ ವಿಚಾರ).

ತದನಂತರ ಕ್ರಮೇಣ ಎಲ್ಲರ ಮನೆಗೆ ಫೋನ್ ಬರುತ್ತಿದ್ದಂತೆ ಈ ಪತ್ರ ಬರೆಯುವ ಅಭ್ಯಾಸವೂ ಕೂಡ ನಿಧಾನವಾಗಿ ಕಡಿಮೆಯಾಗುತ್ತಾ ಹೋಯಿತು. ನಾನು ಎಂಜಿನಿರಿಂಗ್ ಓದುವಾಗ ಮೊದ ವರ್ಷದಲ್ಲಿ ಮನೆಗೆ ಬರೆದ ಪತ್ರವೇ ಕೊನೆ ಇರಬೇಕು ನಂತರ ಬರೇ ಫೋನಿನಲ್ಲೇ ಎಲ್ಲಾ ಸುದ್ದಿ ಸುಖ ದುಃಖ ವಿಚಾರಣೆ ಮುಗಿದುಹೋಗುತ್ತಿತ್ತು. ನಂತರ ಕೆಲವು ವರ್ಷಗಳು ಹಬ್ಬದ ದಿನಗಳ ಹಾರೈಕೆಗೆ ಎಲ್ಲರಿಗೂ ಗ್ರೀಟಿಂಗ್ಸ್ ಕಳುಹಿಸುವ ಅಭ್ಯಾಸ ಮಾತ್ರ ಹಾಗೆ ಉಳಿದಿತ್ತು. ಆಮೇಲೆ ಈ ಮೊಬೈಲ್ ಫೋನ್ ಬಂದ ಮೇಲೆ ಆ ಅಭ್ಯಾಸವೂ ನಿಂತು ಹೋಯಿತು.

ಈಗಲೂ ಮನೆಗೆ ಹೋದಾಗ ಅಂಚೆ ಮಾಮನ ಸೈಕಲ್ ಗಂಟೆಯ ಟ್ರಿಣ್ ಟ್ರಿಣ್ ಶಬ್ದ ಕೇಳುತ್ತದೆ. ಆದರೆ ಮೊದಲಿನಂತೆ ಓಡಿ ಹೋಗಿ ನೋಡುವ ಸಂಭ್ರಮ ಮನಸ್ಸಲ್ಲಿ ಉಳಿದಿಲ್ಲ. ಮದುವೆ ಇತ್ಯಾದಿ ಶುಭಕಾರ್ಯಗಳ ಆಮಂತ್ರಣ ಪತ್ರಗಳು, ಎಂದೋ ಆದ ಅಜೀವ ಸದಸ್ಯತ್ವಕ್ಕೆ ಪ್ರತಿಯಾಗಿ ಬರುವ ಪತ್ರಿಕೆಗಳು, ಬ್ಯಾಂಕಿನ, ಇನ್ನಿತರ ವ್ಯವಹಾರದ ಪತ್ರಗಳು ಇಷ್ಟೆ ಆಗಿರುತ್ತವೆ.
***********************


ಹ್ಮ್.. ಎಲ್ಲಾ ಹೀಗೆ ನೆನಪಿಸಿಕೊಂಡು ಒಮ್ಮೆ ನಿಟ್ಟುಸಿರಿಟ್ಟು ಬರೆಯಲು ಕುಳಿತೆ. ಮೊದಲ ಎರಡು ಸಾಲು ಉಭಯಕುಶಲೋಪರಿ ಸಾಂಪ್ರತ ಬರೆದೆ. ಮುಂದೆ ಏನು ಬರೆಯುವುದು ಗೊತ್ತಾಗುತ್ತಿಲ್ಲ! ಬರೆಯುವುದಕ್ಕೆ ಏನೂ ವಿಷಯವೇ ಸಿಗುತ್ತಿಲ್ಲ. ಮೊದಲಾದರೆ ಎಷ್ಟೆಲ್ಲಾ ವಿಷಯಗಳಿರುತ್ತಿತ್ತು. ಶಾಲೆ, ಪರೀಕ್ಷೆ, ಆಟ, ಪ್ರವಾಸ, ಮಳೆ, ಅಪರೂಪಕ್ಕೆ ನೋಡುತ್ತಿದ್ದ ಸಿನೆಮಾ ಹೀಗೇ ಇನ್ನೂ ಏನೇನೋ. ಪತ್ರದಲ್ಲಿ ಇದ್ದ ಜಾಗವು ಸಾಲುತ್ತಿರಲಿಲ್ಲ. ಈಗ ಹಾಗಲ್ಲ, ಎಲ್ಲಾ ಫೋನಿನಲ್ಲೆ ಮುಗಿದುಹೋಗಿರುತ್ತದಲ್ಲ. ! ಈ-ಮೇಲುಗಳಲ್ಲಂತೂ ನಾಲ್ಕು ಸಾಲು ಬರೆದರೆ ಹೆಚ್ಚು. ಕಷ್ಟಪಟ್ಟು ಯೋಚಿಸಿ ಯೋಚಿಸಿ ನನ್ನ ಕೆಲಸದ ಬಗ್ಗೆ, ಬೆಂಗಳೂರಿನ ಟ್ರಾಫಿಕ್ಕಿನ ಬಗ್ಗೆ, ಮಳೆಯ ಬಗ್ಗೆ, ‘ಮುಂಗಾರು ಮಳೆ' ಚಿತ್ರದ ಬಗ್ಗೆ ಹೀಗೇ ಏನೇನೋ ಬರೆದೆ. ಅವರಿರುವ ಊರಿನ ಹವಾಮಾನ, ಮಕ್ಕಳ ವಿದ್ಯಾಭ್ಯಾಸ, ಆರೋಗ್ಯ ಇನ್ನೇನೆನೊ ಕೇಳಿದೆ. ಎಷ್ಟು ಬರೆದರೂ ಖಾಲಿಯಿದ್ದ ಜಾಗವನ್ನು ತುಂಬಿಸಲು ಆಗಲೇ ಇಲ್ಲ. ಆದಷ್ಟು ಬರೆದು ಖಾಲಿ ಉಳಿದ ಜಾಗದಲ್ಲಿ ಸುಮ್ಮನೇ ಒಂದು ಹೂವಿನ ಚಿತ್ರ ಬರೆದು ಎಲ್ಲವನ್ನೂ ಪೋಸ್ಟ್ ಮಾಡಿದೆ. ಇದನ್ನು ಓದಿದ ಕೂಡಲೇ ಎಲ್ಲರೂ ಪತ್ರ ಬರೆಯುತ್ತಾರೆ, ಹಾಗೆಯೆ ಮತ್ತೆ ನಾನು ಬರೆಯುತ್ತೇನೆ, ಅವರು ಮತ್ತೆ ಉತ್ತರಿಸುತ್ತಾರೆ, ಹಾಗೆ ಪತ್ರ ವೈಭವ ಮರುಕಳಿಸುತ್ತದೆ ಎಂಬ ನಂಬಿಕೆಯಂತೂ ಖಂಡಿತಾ ಇರಲಿಲ್ಲ. ನೋಡೋಣ ಎಂದುಕೊಂಡು ಸುಮ್ಮನಾದೆ. ಹಾಗೆಯೇ ೨-೩ ದಿನಗಳ ನಂತರ ಒಬ್ಬೊಬ್ಬರದೇ ಉತ್ತರ ಬರತೊಡಗಿತು. ಪತ್ರ ತಲುಪಿದ ಎಲ್ಲರೂ ಪ್ರತಿಕ್ರಯಿಸಿದ್ದರು. ನಿನ್ನ ಪತ್ರ ತಲುಪಿತು, ಏನೋ ಈಗ ನಿಂಗೆ ಪತ್ರ ಬರಿಬೇಕು ಅನ್ನಿಸಿದೆ? ಖುಷಿಯಾಯಿತು ತುಂಬಾ ಎಂದಿದ್ದರು. ಆದರೆ ಉತ್ತರಿಸಿದ್ದು ಪತ್ರಗಳ ಮೂಲಕವಂತೂ ಖಂಡಿತಾ ಅಲ್ಲ. ದೊಡ್ಡವರೆಲ್ಲಾ ಫೋನ್ ಮಾಡಿ ಹೇಳಿದರೆ, ಚಿಕ್ಕವರದ್ದು ಇದೆಯಲ್ಲಾ, ಎಸ್ಸೆಮ್ಮೆಸ್ಸು. !

ಆದರೆ ನನ್ನ ದೊಡ್ಡಮ್ಮನದು ಮಾತ್ರ ಸುದ್ದಿಯೇ ಇಲ್ಲ ! ಏನಾಯ್ತಪ್ಪಾ ಇವರಿಗೆ ನನ್ನ ಪತ್ರ ತಲುಪಿತೋ ಇಲ್ಲವೊ ಎಂದುಕೊಂಡೆ. ಫೋನಾದ್ರೂ ಮಾಡಬೇಕಿತ್ತಲ್ಲಾ ಇವರು ಎಂದುಕೊಂಡು ಇರಲಿ ನೋಡೋಣ ಅಂತ ಸುಮ್ಮನಾದೆ. ಕೆಲದಿನಗಳ ನಂತರ ರಾತ್ರಿ ಮನೆಗೆ ಹೋದಾಗ ಬಾಗಿಲಲ್ಲಿ ಇನ್ಲ್ಯಾಂಡು ಪತ್ರವೊಂದು ಇತ್ತು. ಮದ್ಯಾಹ್ನ ಬಂದ ಅಂಚೆಯವನು ಸಿಗಿಸಿ ಹೋಗಿದ್ದ ಎನಿಸುತ್ತದೆ. ವಿಳಾಸದ ಕೈಬರಹ ನೋಡುತ್ತಿದ್ದಂತೆ ಖುಷಿಯಿಂದ ಹಿಗ್ಗಿದೆ. ದೊಡ್ಡಮ್ಮ ಪತ್ರ ಬರೆದಿದ್ದರು. ಸದ್ಯ ಇವರೊಬ್ಬರಾದರೂ ಬರೆದರಲ್ಲ ಎಂದುಕೊಂಡು ಸಂತೋಷದಿಂದ ಓದಿ ಮುಗಿಸುತ್ತಿದ್ದಂತೆ ಕೈ ಆಯಾಚಿತವಾಗಿ ಮೊಬೈಲಿನಲ್ಲಿ ದೊಡ್ಡಮ್ಮನ ಮನೆ ಫೋನ್ ನಂಬರನ್ನು ಒತ್ತುತ್ತಿತ್ತು. ನಿಮ್ಮ ಪತ್ರ ಬಂದು ತಲುಪಿದೆ ಎಂದು ತಿಳಿಸಲು ಫೋನು ಮಾಡುತ್ತಿದ್ದೆ.

========================================

ಅಷ್ಟಕ್ಕೂ ಪತ್ರಗಳೆಂದರೆ ಭಾರೀ ಹಿಂದಿನ ಇತಿಹಾಸವೇನಲ್ಲ. ಮೊನ್ನೆ ಮೊನ್ನೆಯಷ್ಟೆ ಕೆಲವೇ ವರುಷಗಳ ಹಿಂದೆ ಬಳಕೆಯಿಂದ ಕಡಿಮೆಯಾಗಿರುವಂತವು. ಈಗ ಕಾಲ ಬದಲಾಗಿದೆ, ಯಾರೊಟ್ಟಿಗಾದರೂ ಇದ್ದ ಸ್ಥಳದಿಂದಲೇ, ಆ ಕ್ಷಣದಲ್ಲೇ ಸಂಪರ್ಕ ಸಾಧಿಸಬಹುದು. ಫೋನು, ಮೊಬೈಲು, ಈ-ಮೇಲು, ಚಾಟಿಂಗ್, ವಾಯ್ಸ್ ಚಾಟ್ ಏನೇನೋ ಇದೆ. ಈಗ ವಿದೇಶದಲ್ಲಿರುವವರಿಗೂ ಪಕ್ಕದ ಊರಿನಲ್ಲಿರುವವರಿಗೂ ವ್ಯತ್ಯಾಸವೇ ಗೊತ್ತಾಗದಷ್ಟು ಟಚ್ ಇರುತ್ತದೆ. ಇವೆಲ್ಲಾ ಇರುವಾಗ ಮತ್ಯಾಕೆ ಆ ಹಳೆಯ ಪತ್ರಗಳಿಗೆ ಜೋತು ಬೀಳುವುದು ಸುಮ್ಮನೆ ವ್ಯರ್ಥ ಅನಿಸುವುದು ಸಹಜ. ಪತ್ರಗಳ ಬಗ್ಗೆ ಈ ರೀತಿ ಬ್ಲಾಗ್ ಬರೆದು ಕುಯ್ತಾ ಇರೋದು ಹಾಸ್ಯಾಸ್ಪದವೆನಿಸಬಹುದು. ಆದರೇ ಏನೇ ಹೇಳಿ, ಪತ್ರಗಳೆಂದರೆ ಬರೀ ಅಕ್ಷರಗಳಲ್ಲ, ಭಾವನೆಗಳೇ ಅಕ್ಷರ ರೂಪಕ್ಕೆ ಇಳಿದಿರುವಂತಹುದು ಅದು. ಪತ್ರಗಳಲ್ಲಿ ಆಗುತ್ತಿದ್ದ ಭಾವನೆಗಳ ವಿನಿಮಯ ಈಗಿನ ಸಂಪರ್ಕ ಮಾಧ್ಯಮಗಳಲ್ಲಿ ಸಾಧ್ಯವಿಲ್ಲ ಬಿಡಿ. ‘ಬೆರಳಂಚಿನ ಭಾವಗೀತೆ’ಗಳೆಂದು ಹೆಸರಾಗಿರುವ ಈ ಎಸ್ಸೆಮ್ಮೆಸ್ಸು ಗಳು ಸ್ವಲ್ಪ ಆ ನಿಟ್ಟಿನಲ್ಲಿದ್ದರೂ ಅವುಗಳದ್ದೇ ಆದ ಮಿತಿಗಳಿಂದ ಪತ್ರಗಳ ಸಮಕ್ಕೆ ಬರಲು ಸಾಧ್ಯವಿಲ್ಲ. ಏನೇ ಆದರೂ ಮನಸ್ಸಿಗೆ ಹಿತವೆನಿಸುವುದೇ ಆ ಹಿಂದಿನ ದಿನಗಳು, ಆ ಪತ್ರಗಳು. ಅನುಭವಿಸಿದವರಿಷ್ಟೆ ಗೊತ್ತು ಅದರ ಸುಖ.

ಅದಕ್ಕೇ ಹೇಳುವುದು ಯಾವತ್ತೂ,
ಹಾಡು ಹಳೆಯದಾದರೇನು..... ಭಾವ ನವನವೀನ.......
ನೀವೂ ಒಮ್ಮೆ ಪ್ರಯತ್ನಿಸಿ ನೋಡಿ.