ಮಂಗಳವಾರ, ಏಪ್ರಿಲ್ 26, 2011

ಇದು ಬರ್ಲಿಂಗ್ಟನ್

ಬದುಕು ಅಟ್ಲಾಂಟಿಕ್ ಸಾಗರವನ್ನು ದಾಟಿಸಿ ಕರೆತಂದಿದೆ. ಕೆನಡಾ ದೇಶದ ಬರ್ಲಿಂಗ್ಟನ್ ಎಂಬ ಊರಿನ ಕಟ್ಟಡವೊಂದರ ಹದಿನೆಂಟನೇ ಮಹಡಿಯಲ್ಲಿ ನಾವು ಇಳಿದುಕೊಂಡಿರುವ ಮನೆಯ ಬಾಲ್ಕನಿಯಿಂದ ನಿಂತು ನೋಡುತ್ತಿದ್ದರೆ ಗೆರೆ ಎಳೆದಂತಹ ರಸ್ತೆಗಳು, ಬಣ್ಣ ಬಣ್ಣದ ರಟ್ಟಿನಂತೆ ಕಾಣುವ ಮನೆಗಳು, ಚಳಿಗಾಲಕ್ಕೆ ಎಲೆ ಕಳೆದುಕೊಂಡು ನಿಂತ ಖಾಲಿ ಖಾಲಿ ಮರಗಳು, ಮೈ ಕೊರೆಯುವ ಚಳಿ...


ನಮ್ಮ ಕಂಪನಿಯ ಒಂದು ಘಟಕ ಇಲ್ಲಿ ಇರುವುದರಿಂದ ಮತ್ತು ಅದರೊಂದಿಗೆ ನಮ್ಮ ವ್ಯವಹಾರವಿದ್ದುದರಿಂದ ಈ ಊರಿನ ಹೆಸರು ತಿಳಿದಿತ್ತೇ ಹೊರತು ಮತ್ಯಾವುದೇ ಮಾಹಿತಿ ಗೊತ್ತಿರಲಿಲ್ಲ, ಆ ಬಗ್ಗೆ ಯೋಚಿಸಲೂ ಹೋಗಿರಲಿಲ್ಲ. ಈಗ ನೋಡಿದರೆ ಇಲ್ಲೇ ಬಂದಿದ್ದೇನೆ. ಆಶ್ಚರ್ಯವಾಗುತ್ತದೆ. ಸಣ್ಣವನಿದ್ದಾಗ ನಾನು, ಅಪ್ಪ ಒಂದು ಆಟ ಆಡುತ್ತಿದ್ದೆವು. ನಮ್ಮ ಮನೆಯಲ್ಲಿ ಒಂದು ದೊಡ್ಡ ವಿಶ್ವನಕಾಶೆ ಇತ್ತು. ಅಪ್ಪ ಅದನ್ನು ನೆಲದ ಮೇಲೆ ಹರಡಿ ಯಾವುದಾದರೂ ಒಂದು ಸ್ಥಳದ ಹೆಸರು ನೋಡಿ ಹೇಳುತ್ತಿದ್ದರು. ನಾನು ಅದು ಎಲ್ಲಿದೆ ಎಂದು ಹುಡುಕಿ ಹೇಳಬೇಕಿತ್ತು. ಕೆಲವೊಮ್ಮ ಸ್ವಲ್ಪ ದೊಡ್ಡದಾಗಿ ಅಚ್ಚುಹಾಕಿರುವ ಹೆಸರನ್ನು ಹೇಳುತ್ತಿದ್ದರು, ನಾನು ಬೇಗ ಹುಡುಕಿ ಮತ್ತೊಂದು ಸ್ಥಳದ ಹೆಸರು ಹೇಳಲು ಕೇಳುತ್ತಿದ್ದೆ. ಅವರಿಗೆ ಬೇರೆ ಕೆಲಸವಿದ್ದಾಗ ಸಣ್ಣ ಅಕ್ಷರಗಳಲ್ಲಿ ಬರೆದಿರುವ ಯಾವುದೋ ಪುಟ್ಟ ಊರೊಂದನ್ನು ಅಥವಾ ಎಲ್ಲೋ ಸಣ್ಣದಾಗಿರುವ ದ್ವೀಪವೊಂದನ್ನೋ ಹೇಳಿಬಿಡುತ್ತಿದ್ದರು. ಸುಲಭವಾಗಿ ಸಿಗುತ್ತಿರಲಿಲ್ಲ. ನಾನು ಹುಡುಕಲೇಬೇಕೆಂಬ ಛಲಕ್ಕೆ ಬೀಳುತ್ತಿದ್ದೆ. ಭೂಪಟವನ್ನು ಪೂರ್ತಿ ತಡಕಾಡುತ್ತಿದ್ದೆ. ಹೀಗೆ ಆಡಿ ಆಡಿ ನನಗೆ ವಿಶ್ವದ ದೇಶ, ಸ್ಥಳಗಳ ಹೆಸರುಗಳು ಮತ್ತು ಇರುವೆಡೆಗಳು ಸುಮಾರಾಗಿ ಪರಿಚಯವಾದದ್ದು. ಇಲ್ಲಿಗೆ ಬರುವ ಮುಂಚೆ ಕಂಪ್ಯೂಟರ್ನಲ್ಲಿ ವಿಕಿಮ್ಯಾಪಿಯಾ ತೆಗೆದು ಈ ಊರಿನ ಹೆಸರನ್ನು ಹುಡುಕುತ್ತಿದ್ದಾಗ ಅಪ್ಪನೊಂದಿಗೆ ಆಡುತ್ತಿದ್ದ ನಕಾಶೆ ಹುಡುಕಾಟ ನೆನಪಾಗಿತ್ತು. ಬರ್ಲಿಂಗ್ಟನ್ ಎಂದು ಸರ್ಚ್ ಕೊಟ್ಟರೆ ಹಲವು ಬರ್ಲಿಂಗ್ಟನ್ ಗಳು ಪಟ್ಟಿಯಾಗುತ್ತವೆ. ಇದೊಂತರಾ ನಮ್ಮ ಕಡೆಯ ’ಸಿದ್ದಾಪುರ’ ಎಂಬ ಹೆಸರಿನಂತೆ. ಕರ್ನಾಟಕದಲ್ಲಿ ಹಲವು ಸಿದ್ದಾಪುರಗಳಿದ್ದಂತೆ ಬ್ರಿಟಿಷರು ಇದ್ದ ಕಡೆಯೆಲ್ಲಾ ಒಂದೊಂದು Burlington ನಾಮಕರಣ ಮಾಡಿಬಿಟ್ಟಿದ್ದಾರೆ. :)

ಇದು ನನಗೆ ಹೊಸದೊಂದು ಜಗತ್ತು. ಎಷ್ಟೆಷ್ಟೋ ಲೇನ್ ಗಳಿರುವ ಅಗಲ ಹೈವೇಗಳು, ಮುಗಿಯುವುದೇ ಇಲ್ಲ ಎಂಬಂತೆ ಹಾಯ್ದು ಹೋಗುತ್ತಲೇ ಇರುವ ಕಾರುಗಳು, ಕಾಲ್ನಡಿಗೆಯ ಜನರೇ ಇಲ್ಲದ ರಸ್ತೆಗಳು, ಅಪರೂಪಕ್ಕೆ ಮನೆಗಳಿಂದ ಹೊರಗೆ ಕಾಣಿಸಿ ಮರೆಯಾಗಿಬಿಡುವ ಮನುಷ್ಯರು, ರಾತ್ರಿ ಎಂಟೂವರೆ ತನಕವೂ ಇರುವ ಸೂರ್ಯನ ಬೆಳಕು! ಟೊರಾಂಟೋದಿಂದ ೫೦ ಕಿ.ಮಿ. ದೂರದ ಈ ನಗರ 'ಒಂಟಾರಿಯೋ ಲೇಕ್' ಎನ್ನುವ ಸಮುದ್ರದಂತಿರುವ ಒಂದು ದೊಡ್ಡ ಸರೋವರವೊಂದರ ದಡದ ಮೇಲಿದೆ. ಸರೋವರದ ಆಚೆ ದಡದಿಂದ ಯು.ಎಸ್.ಎ! ಸದ್ಯಕ್ಕೆ ಇಲ್ಲಿನ ಪಾರ್ಲಿಮೆಂಟಿಗೆ ಮಧ್ಯಂತರ ಚುನಾವಣೆ. ಈ ಕ್ಷೇತ್ರದಿಂದ ಚುನಾವಣೆಗೆ ನಿಂತಿರುವ ಹೆಣ್ಣುಮಗಳೊಬ್ಬರು ಓಟು ಕೇಳಲು ನಮ್ಮಮನೆಗೂ ಬಂದಿದ್ದರು :). -೨ ಇಂದ ೭ ಡಿಗ್ರಿ ಸೆಲ್ಶಿಯಸ್ ಒಳಗೇ ಓಲಾಡುತ್ತಿರುವ ತಾಪಮಾನ, ಗಾಳಿ, ಮಳೆಗಳು ಹೊರಗೆ ಹೆಚ್ಚು ಓಡಾಡಲಾಗದಂತೆ ಮಾಡಿವೆ. ಇನ್ನೇನು ಬೇಸಿಗೆ ಶುರುವಾದ ಮೇಲೆ ನೋಡಬೇಕು.

********

ಸತ್ಯಸಾಯಿಬಾಬಾ ತೀರಿಕೊಂಡಿದ್ದಾರೆ.  ಅವರು ದೇವಮಾನವ ಎನ್ನುವುದಕ್ಕಾಗದಿದ್ದರೆ ವಿಶೇಷಮಾನವ ಎನ್ನುವುದಕ್ಕೇನೂ ಅಡ್ದಿಯಿರಲಿಲ್ಲ. ಕೆಲವು ವ್ಯಕ್ತಿತ್ವಗಳು ಹಾಗೆಯೇ. ನಾನು ಅವರ ಭಕ್ತ ಅಥವಾ ಹಿಂಬಾಲಕನಲ್ಲದಿದ್ದರೂ ವೈಯಕ್ತಿಕವಾಗಿ ಬಾಬಾ ಬಗ್ಗೆ ನನಗೆ ಒಂದು ಪ್ರೀತಿಯೂ, ಗೌರವವೂ ಇದೆ. ಅದಕ್ಕೆ ಕಾರಣಗಳೂ ಇವೆ... ಇರಲಿ. ಆ ಬಗ್ಗೆ ಮತ್ತೆ ಬರೆದೇನು.

.........

ಸಿಗೋಣ..

ಶುಕ್ರವಾರ, ಏಪ್ರಿಲ್ 1, 2011

ಶೃಂಗೇರಿಯ ಮೂಗುತಿ ಮೀನು

ಅದು ಹರಿಹರಪುರ. ತುಂಗೆ ತೆಳುವಾಗಿ ಹರಿಯುತ್ತಿದ್ದಾಳೆ. ನಾನು ಮಲಗಿದ್ದೆ ಮಡಿಲಲ್ಲಿ. ಸಣ್ಣ ಸಣ್ಣ ಗುಂಡು ಗುಂಡು ಕಲ್ಲುಗಳ ನಯವಾದ ಹಾಸಿಗೆ.. ಹತ್ತಾರು ಮೃದಂಗಗಳು ಒಂದೇ ಲಯದಲ್ಲಿ ನುಡಿದಂತೆ... ನಾದಮಂಟಪದ ಕಲ್ಲಿನ ಕಂಬಗಳಲ್ಲಿ ಸ್ವರಗಳು ಹೊಮ್ಮಿದಂತೆ ಕಿವಿಗೆ ಹೊಸದೊಂದು ನಾದಮಯ ಲೋಕ... ಹೊರಗಿನಿಂದ ನೀರಿನ ಜುಳು ಜುಳು ಸಂಗೀತ, ಭೋರ್ಗರೆಯುವಾಗ ನೀರಿನ ಅಬ್ಬರದ ಕೂಗನ್ನು ಕೇಳಿದ್ದೆ, ಆದರೆ ನೀರಿನೊಳಗಿನ ಈ ಸಂಗೀತ ಲೋಕದ ಅರಿವಿರಲಿಲ್ಲ. ಇಲ್ಲಿ ಸಮತಟ್ಟಾದ ಹರಿವಿತ್ತು. ಆ ನೀರು ಹರಿಯುವಾಗ ದೊಡ್ಡ ಕಲ್ಲುಗಳನ್ನು ಹತ್ತಿ ಇಳಿದು, ಸಣ್ಣ ಕಲ್ಲುಗಳ ಮೇಲೆ ತೆವಳಿ, ಹೊರಳಾಡಿ, ಪುಟಿದು ಮುಂದೆ ಹೋಗುತ್ತಾ ಸಂಗೀತದ ಹೊನಲನ್ನೂ ಹರಿಸುತ್ತದೆ. ಹೊರಗಿನಿಂದ ಅದು ಕೇಳದು, ಆದರೆ ಮುಳುಗಿದ ನೀರಿನಲ್ಲಿ ಅದು ಗಂಧರ್ವಲೋಕಗಾನ! ಅದೆಷ್ಟು ಹೊತ್ತೋ ಗೊತ್ತಿಲ್ಲ. ಕೇಳುತ್ತಾ ಮಲಗಿದ್ದೆ....

***

ಅವತ್ತಿಗಾಗಲೇ ಶೃಂಗೇರಿಗೆ ಹೋಗದೆ  ಹತ್ತು ವರ್ಷಗಳ ಮೇಲಾಗಿಬಿಟ್ಟಿತ್ತು. ಇದ್ದಕ್ಕಿಂದ್ದತೇ ದೈವಪ್ರೇರಣೆಯಾಗಿ ಶೃಂಗೇರಿಗೆ ಹೋಗಬೇಕೆನಿಸಿತ್ತು. :P ಇಬ್ಬರು ಗೆಳೆಯರಿಗೆ ದೈವಾನುಗ್ರಹದ ಭರವಸೆ ಮೂಡಿಸಿ ಕರೆದುಕೊಂಡು ಅವತ್ತು ಶೃಂಗೇರಿಗೆ ಹೋಗಿ ಇಳಿದಾಗ ಸಂಜೆಯಾಗಿತ್ತು. ಜನವೋ ಜನ. ಉಳಿದುಕೊಳ್ಳಲು ವಸತಿ ಕೇಳಿದರೆ ಎಲ್ಲೂ ಸಿಗಲಿಲ್ಲ. ದೇವಸ್ಥಾನದ ವಸತಿಗಳೆಲ್ಲಾ ತುಂಬಿಹೋಗಿವೆ. ಖಾಸಗಿಯವರದ್ದೂ ತುಂಬಿಹೋಗಿ ಉಳಿದ ಕೆಲವಕ್ಕೆ ಮೂರುಪಟ್ಟು ಬೆಲೆ ಕೊಡಲು ಪೈಪೋಟಿಯಿತ್ತು. ಹೆಂಗಸರು, ಮಕ್ಕಳು-ಮರಿ ಇದ್ದವರಿಗೆ ಆದ್ಯತೆ. ನಮಗ್ಯಾವನು ಕೊಡುತ್ತಾನೆ ರೂಮು? ಇತ್ತೀಚೆಗೆ ಯಾವ ಪುಣ್ಯ ಕ್ಷೇತ್ರಗಳಿಗೆ ಹೋದರೂ ಅಷ್ಟೆ. ರಶ್ಶ್.. ಮೊದಲೆಲ್ಲಾ ಹೀಗಿರಲಿಲ್ಲ , ಜಾತ್ರೆ ಮುಂತಾದ ವಿಶೇಷ ಸಂದರ್ಭಗಳಲ್ಲಿ ಮಾತ್ರ ಜನಜಂಗುಳಿ ಇರುತ್ತಿತ್ತು. ಆದರೆ ಈಗ ಪ್ರತಿ ಶನಿವಾರ ಭಾನುವಾರಗಳೂ ಜಾತ್ರೆ! ಜನರಲ್ಲಿ ದೈವಭಕ್ತಿ ಜಾಸ್ತಿಯಾಗಿ ಹೋಗಿದೆಯಾ? ಗೊತ್ತಿಲ್ಲ. ಹೆಚ್ಚಾಗಿ ಈಗಿನ ಕನೆಕ್ಟಿವಿಟಿ ಇದಕ್ಕೆ ಕಾರಣವಿರಬಹುದು. ಮೊದಲೆಲ್ಲಾ ಪ್ರಯಾಣ ಅಷ್ಟು ಸುಲಭವಿರಲಿಲ್ಲ. ನಾನು ಸಣ್ಣವನಿದ್ದಾಗ ಶಿರಸಿಗೆ ಹೋಗಲು ಮೈಸೂರು-ಯಲ್ಲಾಪುರ ಬಸ್ಸು, ಬೆಂಗಳೂರು-ಕಾರವಾರ ಬಸ್ಸು ಅಂತೆಲ್ಲಾ ಸಮಯ ನೋಡಿಕೊಂಡು ಹೊರಡುತ್ತಿದ್ದುದು ನೆನಪಿದೆ. ಈಗ ಹಾಗಿಲ್ಲ ಎಲ್ಲಿಂದ ಎಲ್ಲಿಗೆ ಬೇಕಾದರೂ ಸಾಕಷ್ಟು ಬಸ್ಸುಗಳಿವೆ. ಅದಿಲ್ಲದಿದ್ದರೆ ಜನರ ಬಳಿ ಸ್ವಂತ/ಬಾಡಿಗೆ ಗಾಡಿಗಳಿವೆ. ಅದಕ್ಕೇ ಇರಬೇಕು, ಓಡಾಟವೂ ಜಾಸ್ತಿಯಾಗಿದೆ. ಅಂದ ಮೇಲೆ ಕೇಳಬೇಕೇ.. ದೇವರೂ ಫುಲ್ ಬಿಜಿ! ಸರಿ.. ಅವತ್ತು ರಾತ್ರಿಯವರೆಗೂ ಎಲ್ಲಿಯೂ ವಸತಿ ವ್ಯವಸ್ಥೆ ಸಿಗದಿದ್ದಾಗ ಇಲ್ಲೇ ಹತ್ತಿರದ ಹಳ್ಳಿಯೊಂದರಲ್ಲಿ ತಮ್ಮ ನೆಂಟರ ಮನೆ ಇದೆ ಅಲ್ಲಿಗೆ ಹೋಗೋಣ ಅಂತ ಒಬ್ಬ ಗೆಳೆಯನೆಂದ. ಮತ್ತೊಬ್ಬ ಬೇಡ ಅಂದ... ಕೊಪ್ಪಕ್ಕೆ ಹೋಗಿಬಿಡೋಣ ಅಂತ ಮತ್ತೊಬ್ಬನೆಂದ, ನಾನು ಬೇಡ ಎಂದೆ. ಅಲ್ಲಿಗೆ ಅಲ್ಲೇ ದೇವಸ್ಥಾನದ ಸುತ್ತಲ ಆವರಣದೊಳಗೆ ಮಲಗುವುದೆಂದು ನಿರ್ಧರಿಸಿದೆವು. ಎಲ್ಲಾದರೆ ನಮಗೇನು,  ಊಟ ಮಾಡಿ ಬಂದು ... ಮಲ್ಗೋಕೆ ಭೂಮ್ ತಾಯಿ ಮಂಚಾ... ಅಂತ ಚಾಪೆ ಹಾಸುವಷ್ಟರಲ್ಲಿ ಗೆಳೆಯನಿಗೆ ಯಾರೋ ಪರಿಚಯದ ಪೋಲೀಸ್ ಒಬ್ಬರು ನೆನಪಾಗಿಬಿಟ್ಟರು. ಅವರನ್ನೊಮ್ಮೆ ಕೇಳಿನೋಡೋಣ ಅಂತ ಫೋನ್ ಮಾಡಲಾಗಿ ಅವರೂ ಸಿಕ್ಕು ಅರ್ಧ ಗಂಟೆಯೊಳಗೆ ನೈಟ್ ಡ್ಯೂಟಿಗೆ ಹೋಗಿದ್ದ ಪೋಲೀಸರ ಕೋಣೆಯ ಕೀಗಳು ನಮ್ಮ ಕೈಲಿದ್ದವು.

ಮಾರನೇ ದಿನ ಸುಖವಾಗಿ ನಿಧಾನಕ್ಕೆ ಎದ್ದು ತಯಾರಾಗಿ ಬಿಗ್ ಬಾಸ್ ಚಂದ್ರಮೌಳೇಶ್ವರನಿಗೂ, ಶಾರದಾಂಬೆಗೂ ಕೈಮುಗಿದು ಸೀದಾ ನೆಡೆದದ್ದು ತುಂಗಾನದಿಯ ಕಡೆಗೆ. ಶೃಂಗೇರಿಯ ಆಕರ್ಷಣೆ ತುಂಗಾನದಿಯ ರಾಶಿ ರಾಶಿ ಮೀನುಗಳು. ಅವುಗಳನ್ನು ನೋಡುತ್ತಾ ಕೂರುವುದು, ಅವುಗಳಿಗೆ ತಿಂಡಿ ತಿನ್ನಿಸುವುದು, ಆಟವಾಡುವುದು, ನೀರಲ್ಲಿ ಕಾಲುಬಿಟ್ಟುಕೊಂಡು ಅವುಗಳಿಂದ ಕಚಗುಳಿ ಕೊಡಿಸಿಕೊಳುವುದು ನನಗಂತೂ ಭಾರೀ ಇಷ್ಟ. ಅಲ್ಲಿ ಎಷ್ಟೋ ಜನ ಮೀನುಗಳೊಂದಿಗೆ ಖುಷಿ ಪಡುತ್ತಿದ್ದರು. ಮಕ್ಕಳು ಮೀನುಗಳನ್ನು ನೋಡಿ ಕುಣಿಯುತ್ತಿದ್ದವು. ಮಂಡಕ್ಕಿ ಎಸೆಯುತ್ತಿದ್ದವು. ಹಿಂಡು ಹಿಂಡು ಮೀನುಗಳು..... ಎಷ್ಟು ಚಂದ... ಇಂತಹುಗಳಿಂದಲೇ ಅಲ್ಲವೇ ಈ ಭೂಮಿ ಇಷ್ಟು ಸುಂದರ...  ನಾನು ಮೂಗುತಿ ಮೀನನ್ನು ಹುಡುಕುತ್ತಿದ್ದೆ.... . ಸಣ್ಣವನಿದ್ದಾಗ ಪ್ರತಿಬಾರಿ ಹೋದಾಗಲೂ ಮೀನಿನ ಗುಂಪಿನಲ್ಲಿ ಕಾಣಿಸುತ್ತಿತ್ತು. ಯಾರೋ ಒಂದು ಮೀನಿಗೆ ಮೂಗುತಿ ರಿಂಗ್ ಹಾಕಿ ಬಿಟ್ಟಿದ್ದರು. ಈ ಸಲ ಅದು ಕಾಣಿಸಲಿಲ್ಲ. ನಾ ಬರ್ತೀನಿ ಅಂತ ಕಾದು ಕೂತಿರತ್ತಾ ಅದು? ಎಷ್ಟು ವರ್ಷ ಆಯಸ್ಸೋ ಏನೋ ಆ ಮೀನಿಗೆ! ಈಗ ಬದುಕಿದೆಯೋ ಇಲ್ವೋ ಗೊತ್ತಿಲ್ಲ. ನಾವಂತೂ ಕೂತಿದ್ದೆವು ಒಂದು ತಾಸು ಅಲ್ಲೇ.  ನದಿಯ ಆಕಡೆ ನರಸಿಂಹ ವನ.  ಅಲ್ಲಿಗೆ ಹೋಗಲು ಸೇತುವೆ ಇಲ್ಲದ ಕಾಲದಲ್ಲಿ ಅಪ್ಪನ ಹೆಗಲ ಮೇಲೆ ಕೂತು ನದಿದಾಟುತ್ತಿದ್ದುದು ನೆನಪಾಯಿತು.. ನರಸಿಂಹ ವನ ತಂಪಾಗಿತ್ತು. ನರಸಿಂಹವನದಲ್ಲೊಂದು ಮಂದಿರ ಮಾಡಿದ್ದಾರೆ. ಅಲ್ಲಿ ಶ್ಶ್... ಸೈಲೆನ್ಸ್.. ಯಾಕೋ ಗೊತ್ತಿಲ್ಲ ಅಂಗಿ ಬಿಚ್ಚಿಕೊಂಡೇ ಒಳಗೆ ಹೋಗಬೇಕು.... ಆ ವನದಲ್ಲಿ ಜಗದ್ಗುರುಗಳ ವಾಸ್ತವ್ಯವಿದೆ.

ಮಧ್ಯಾಹ್ನ ದೇವಸ್ಥಾನದ ಫುಲ್ ಮೀಲ್ಸ್ ಉಂಡು ಶಿವಮೊಗ್ಗದ ದಾರಿ ಕಡೆ ಯೋಚಿಸಿದಾಗ ಗೆಳೆಯನೊಬ್ಬನಿಗೆ ನೆನಪಾದದ್ದು ಹರಿಹರಪುರ! ಶೃಂಗೇರಿ-ಶಿವಮೊಗ್ಗ ದಾರಿಯಲ್ಲೇ ನಡುವೆ ಇದೆ. ಅವನ ಪೂರ್ವಜರ ಊರು ಅದು. ನಮಗೇನು .. ಜೈ ಅಂದೆವು.  ಬಸ್ ಹತ್ತಿದೆವು. ಅಲ್ಲೊಂದು ಮಠವೂ ಇದೆ. ಅಲ್ಲಿಗೆ ಹೋಗೋಣ ಅಂತ ಅವನೆಂದ. ಕೆಳಗೆ ತುಂಗಾನದಿ ಹರಿಯುತ್ತದೆ. ಯಾರೂ ಇಲ್ಲದ ಜಾಗಕ್ಕೆ ಕರೆದುಕೊಂಡು ಹೋಗ್ತೀನಿ ಅಂದ. ಸರಿ ಅಂದೆವು... ಸ್ವಲ್ಪ ದೂರ ನಡೆದು ಗಿಡಮರಗಳ ಸಂದಿ ಹಾಯ್ದು ಹೆಚ್ಚು ಆಳವಿಲ್ಲದ ಜಾಗ ಹುಡುಕಿ ಸೆಟ್ಲಾದೆವು.. ಆ ಇಡೀ ಜಗತ್ತಿನಲ್ಲಿ ನಾವು ನಾಲ್ವರು ಮಾತ್ರ! ನಾವು ಮೂವರು ಮತ್ತು ತುಂಗೆ. ತಾಸುಗಟ್ಟಲೇ ನೀರಿನಲ್ಲಿ ಮಲಗಿ, ಆಡಿ, ಈಜಿ ರಿಲ್ಯಾಕ್ಸ್ ಆದೆವು. ಸಂಜೆಯಾಗುತ್ತಿತ್ತು. ಐದೈದು ನಿಮಿಷಕ್ಕೆ ಬಸ್ಸು ಬರಲು ಅದು ಬೆಂಗಳೂರಲ್ಲ. ಮತ್ತೆ ಶಿವಮೊಗ್ಗ ಬಸ್ಸು ಸಿಗದಿದ್ದರೆ ಕಷ್ಟ ಎಂದುಕೊಂಡು ಅಲ್ಲಿಂದ ಎದ್ದೆವು.. ಹೊರಡುವಾಗ ಬೆನ್ನಿಗೆ ಬ್ಯಾಗ್ ಹಾಕಿಕೊಂಡು ಸುಮ್ಮನೇ ಒಮ್ಮೆ ಹಿಂದಿರುಗಿ ನೋಡಿದೆ. ಹೊಳೆನೀರಿನಲ್ಲಿ ಆ ಮೂಗುತಿ ಮೀನು ಫಳಕ್ಕನೆ ಮಿಂಚಿದಂತಾಯಿತು. ಶೃಂಗೇರಿ ಟ್ರಿಪ್ಪು ಸಂಪೂರ್ಣವಾಗಿತ್ತು.

ಮಂಗಳವಾರ, ಫೆಬ್ರವರಿ 22, 2011

ಕನ್ನಡ ವ್ಯಾಕರಣಕ್ಕೆ ಕೈಯಿಟ್ಟಿದ್ದೇನೆ..

'ಭಾಷೆ' ಎನ್ನುವುದು ನನಗೆ ಮೊದಲಿಂದಲೂ ಆಸಕ್ತಿಯ ವಿಷಯ. ಇವತ್ತಿಗೂ ಯಾವುದಾದರೂ ದೇಶದ ಬಗ್ಗೆ, ಪ್ರದೇಶದ ಬಗ್ಗೆ ತಿಳಿದುಕೊಳ್ಳುವಾಗ ಅಲ್ಲಿನ ಭಾಷೆಗಳ ಬಗ್ಗೆ ಕುತೂಹಲವಿಟ್ಟುಕೊಂಡು ತಿಳಿದುಕೊಳ್ಳುತ್ತೇನೆ. ಸಣ್ಣವನಿದ್ದಾಗಿಂದಲೂ ಬೇರೆ ಬೇರೆ ಭಾಷೆಗಳ ಲಿಪಿಗಳನ್ನು ಬರೆಯಲು ಪ್ರಯತ್ನಿಸುವುದನ್ನು ಮಾಡಿಕೊಂಡೇ ಬಂದಿದ್ದೇನೆ. ಸಹಜವಾಗಿ ಕನ್ನಡ ನನಗೆ ಅತ್ಯಂತ ಪ್ರಿಯವಾದ ಭಾಷೆ. ನನ್ನ ತಾಯ್ನುಡಿಯಾದ್ದರಿಂದ ಅದು ನನಗೆ ಅತಿ ಸುಲಭವೆನಿಸುವ ಭಾಷೆಯೂ ಹೌದು. ನಮ್ಮ ಮನೆಮಾತು ಹವ್ಯಕ ಕನ್ನಡವಾಗಿದ್ದರೂ ಕೂಡ ನನಗೆ ಹಳೆಮೈಸೂರುಸೀಮೆಯ ಕನ್ನಡವೇ ಹೆಚ್ಚು ಸುಲಭದ ಆಡುಮಾತಾಗಿ ರೂಢಿಯಾಗಿ ಹೋಗಿದೆ. ಪ್ರತಿ ಭಾಷೆಗೂ ಅದರದ್ದೇ ಆದ ಸ್ವರೂಪ ಇರುತ್ತದೆ, ವಿಶಿಷ್ಟತೆ ಇರುತ್ತದೆ, ವ್ಯಾಕರಣವಿರುತ್ತದೆ. ಭಾರತರ ಭಾಷಾವೈವಿಧ್ಯದ ಬಗ್ಗೆ ನನಗೆ ಅಚ್ಚರಿಯೂ ಹೆಮ್ಮೆಯೂ ಇದೆ. ಆದರೆ ಇಂಗ್ಲೀಷು, ಹಿಂದಿ ಸೇರಿದಂತೆ ಯಾವ ಭಾಷೆಯಾದರೂ ಅವು ಕರ್ನಾಟಕದಲ್ಲಿ ಕನ್ನಡದ ಮೇಲೆ ಸವಾರಿ ಮಾಡುವುದನ್ನು ವಿರೋಧಿಸುತ್ತೇನೆ. ಒಂದು ಭಾಷೆಯ ಉಳಿಕೆ ಮತ್ತು ಬೆಳವಣಿಗೆಗೆ ಅದರ ಬಳಕೆ ಮತ್ತು ತಿಳುವಳಿಕೆ ಬಹಳ ಮುಖ್ಯ. ನಮ್ಮ ಶಿಕ್ಷಣ ವ್ಯವಸ್ಥೆಯ ವಿಪರ್ಯಾಸ ಅಂದರೆ ಅದು ನಮ್ಮದೇ ನೆಲದ ಭಾಷೆಯಿಂದ ನಮ್ಮನ್ನು ವರ್ಷಾನುಗಟ್ಟಲೆ, ಮತ್ತು ಕೊನೆಯವರೆಗೂ ದೂರವಿಟ್ಟುಬಿಡುತ್ತದೆ. ತಾಂತ್ರಿಕ ಕ್ಷೇತ್ರದಲ್ಲಿ ಉದ್ಯೋಗಕ್ಕೆ ಹೋದರಂತೂ ನಮ್ಮ ಭಾಷೆಗಳ ಅಗತ್ಯತೆ ಗೌಣವಾಗಿಬಿಡುತ್ತದೆ. ಅಗತ್ಯವಿರುವ ಕೆಲವರು ಫ್ರೆಂಚ್, ಜರ್ಮನ್, ಜಪಾನಿ ಮುಂತಾದ ಭಾಷೆಗಳನ್ನು ಕಲಿಯುತ್ತಾರೆ. ಅಗತ್ಯವಿರದ ಕೆಲವರೂ ಸುಮ್ಮನೇ ಆಸಕ್ತಿಗೆ ಕಲಿಯಲು ಹೊರಡುತ್ತಾರೆ. ಇರಲಿ.

ನನಗೆ ಆಡುಮಾತಾಗಿ, ನನ್ನ ಓದಿನ ಭಾಷೆಯಾಗಿ ಕನ್ನಡ ಚೆನ್ನಾಗಿ ರೂಢಿಯಾಗಿದ್ದರೂ ಕೂಡ ಇದುವರೆಗೂ ಕನ್ನಡದ ವ್ಯಾಕರಣವನ್ನು ಸರಿಯಾಗಿ ತಿಳಿದುಕೊಳ್ಳಲು ಆಗಿರಲಿಲ್ಲ. ಫ್ರೌಡಶಾಲೆಯಲ್ಲಿ, ಪಿ.ಯುಸಿ.ಯಲ್ಲಿ ಮೊದಲ ಭಾಷೆಯಾಗಿ ಸಂಸ್ಕೃತ ತೆಗೆದುಕೊಂಡಿದ್ದರಿಂದ ಕನ್ನಡ ವ್ಯಾಕರಣದ ಓದು ಹೆಚ್ಚೇನೂ ಆಗಲಿಲ್ಲ. ಆಮೇಲೆ ವೃತ್ತಿಪರ ಶಿಕ್ಷಣಕ್ಕೆ ಹೋದಮೇಲೆ, ಮತ್ತು ಕೆಲಸಕ್ಕೆ ಸೇರಿದ ಮೇಲೆ ಭಾಷೆ, ವ್ಯಾಕರಣ ನೆನಪಿಗೇ ಬರದಷ್ಟು ದೂರವಾಗಿಬಿಟ್ಟಿತ್ತು. ಸುಮಾರು ವರ್ಷಗಳ ಅನಂತರ ಇತ್ತೀಚೆಗೆ ಮತ್ಯಾಕೋ ಕನ್ನಡ ವ್ಯಾಕರಣವನ್ನು ಓದಿ ತಿಳಿದುಕೊಳ್ಳುವ ಆಸಕ್ತಿ ಮತ್ತೆ ಚಿಗುರಿತ್ತು. ಎಲ್ಲೋ ದುಡ್ಡು ಸುರಿದು ಯಾವುದೋ ವಿದೇಶಿ ಭಾಷೆಯ ಕಲಿಕೆಗೆ ಹೊರಟು, ಕಲಿತು ಮರೆಯುವ ಬದಲು ಮೊದಲು ನಮ್ಮದೇ ಭಾಷೆಯನ್ನು ಸ್ವಲ್ಪ ಜಾಸ್ತಿ ತಿಳಿದುಕೊಳ್ಳುವುದು ಒಳ್ಳೆಯದು ಅಂತಲೂ ಅನ್ನಿಸಿತ್ತು.. ಸದ್ಯಕ್ಕಂತೂ ಯಾವ ತರಗತಿಯಲ್ಲಿ ಹೋಗಿ ಕೂತು ಕಲಿಯಲಿಕ್ಕಂತೂ ಆಗುವುದಿಲ್ಲ. ಆದ್ದರಿಂದ ನಾನೇ ಸ್ವಂತ ಓದಿ ತಿಳಿದುಕೊಳ್ಳುವ ಪ್ರಯತ್ನ ಮಾಡೋಣ ಅಂದುಕೊಂಡೆ.. ಕೆಲ ತಿಂಗಳುಗಳ ಹಿಂದೆ ಕನ್ನಡ ಸಾಹಿತ್ಯ ಪರಿಷತ್ತಿನ ಪುಸ್ತಕ ಮಳಿಗೆಗೆ ಹೋಗಿದ್ದಾಗ ಕನ್ನಡ ವ್ಯಾಕರಣ ಪುಸ್ತಕಗಳು ಕಾಣಿಸಿದ್ದವು. ಪಂಜೆ ಮಂಗೇಶರಾಯರು ಬರೆದ ‘ಕನ್ನಡ ಮೂಲ ವ್ಯಾಕರಣ‘, ರಂಗನಾಥ ಶರ್ಮರ ‘ಹೊಸಗನ್ನಡ ವ್ಯಾಕರಣ‘ ಪುಸ್ತಕಗಳನ್ನು ಕೊಂಡು ತಂದಿಟ್ಟಿದ್ದೆ. . ಮೊನ್ನೆ ಸಾಹಿತ್ಯ ಸಮ್ಮೇಳನ ಆದಾಗಿಂದ ಓದಲು ಶುರುಮಾಡಿದ್ದೇನೆ. ಮೊದಲಿಗೆ ‘ಕನ್ನಡ ಮೂಲ ವ್ಯಾಕರಣ‘ ಪುಸ್ತಕಕ್ಕೆ ಕೈಹಾಕಿದ್ದೇನೆ. ಇದು ಸಾಂಪ್ರದಾಯಿಕ ಶೈಲಿಯಲ್ಲಿಲ್ಲ. ಮೊದಲು ವಿಷಯ ವಿವರಿಸಿ ಆಮೇಲೆ ಉದಾಹರಣೆ ಕೊಡುವ ಬದಲು ಮೊದಲೇ ಉದಾಹರಣೆ, ಪ್ರಯೋಗಗಳನ್ನು ಕೊಟ್ಟು ವಿವರಿಸಿ ಅದರ ಮೂಲಕ ವ್ಯಾಕರಣದ ವಿಷಯಗಳನ್ನು ಹೇಳಿದ್ದಾರೆ. ನಾಮಪದ, ಕ್ರಿಯಾಪದ, ಲಿಂಗ, ವಚನ, ವಿಭಕ್ತಿ, ಪ್ರತ್ಯಯ, ಸಂಧಿ, ಸಮಾಸ, ಕರ್ತರಿ, ಕರ್ಮಣಿ ಪ್ರಯೋಗ....ಹ್ಮ್.... ಇನ್ನೂ ಏನೇನೋ ಇದೆ. ಒಂದೊಂದೇ ನಿಧಾನಕ್ಕೆ ಓದುತ್ತಿದ್ದೇನೆ. ಎರಡೂ ಪುಸ್ತಕಗಳೂ ಚಿಕ್ಕದಾಗಿ ಚೊಕ್ಕದಾಗಿವೆ. ಈ ಪುಸ್ತಕಗಳನ್ನು ಓದಾದ ಮೇಲೆ ಕನ್ನಡ ವ್ಯಾಕರಣವನ್ನು ಬೇರೆ ಆಯಾಮದಿಂದ ಹೇಳುವ ಶಂಕರಭಟ್ಟರ 'ಕನ್ನಡ ಸೊಲ್ಲರಿಮೆ' ಪುಸ್ತಕವನ್ನೂ ಓದಬೇಕಿದೆ. ಕನ್ನಡ ವ್ಯಾಕರಣ ಓದಿಗೆ ದಿನಾ ಅರ್ಧ-ಮುಕ್ಕಾಲು ತಾಸು ಎತ್ತಿಟ್ಟಿದ್ದೇನೆ. ಚೆನ್ನಾಗನಿಸುತ್ತಿದೆ. ವ್ಯಾಕರಣ & ಪುಸ್ತಕಗಳ ಬಗ್ಗೆ ಸಲಹೆಗಳೇನಾದರೂ ಇದ್ದರೆ ಕೊಡಿ..

ಗೆಳೆಯರಿಗೆ ಹೇಳಿದರೆ ಕೆಲವರು ಅದನ್ನೆಲ್ಲಾ ಓದಿ ಯಾಕೆ ಟೈಂವೇಸ್ಟ್ ಮಾಡ್ತೀಯಾ, ಟೆಕ್ನಿಕಲ್ ಬುಕ್ಸ್ ಓದು, ಅದರಿಂದ ಪ್ರಯೋಜನವಾಗುತ್ತೆ ಅನ್ನುತ್ತಾರೆ. ಅದು ನಿಜ. ಆದರೂ ಇರಲಿ. ಅದನ್ನೂ ಮಾಡೋಣ, ಇದನ್ನೂ ಮಾಡೋಣ. ಆಸಕ್ತಿ ಇರುವ ಎಲ್ಲವನ್ನೂ ಮಾಡೋಣ. ಎಲ್ಲದಕ್ಕೂ ಟೈಂ ಇದೆ. ಲೈಫು ಇಷ್ಟೇ ಏನಲ್ಲವಲ್ಲ!

****

ಈ ನಡುವೆ ಹಿಂದಿನ ವಾರ ದಾಂಡೇಲಿ, ಸುತ್ತಮುತ್ತಲಿನ ಸ್ಥಳಗಳಿಗೆ ಪ್ರವಾಸ/ಚಾರಣ ಹೋಗಿಬಂದೆ. ಖುಷಿಯಾಯಿತು. ಆದರೆ ಎರಡು ದಿನ ಏನೇನೂ ಸಾಕಾಗಲಿಲ್ಲ. ಮೂಲತಃ ಉತ್ತರಕನ್ನಡ ಜಿಲ್ಲೆಯವನಾಗಿದ್ದರೂ ಶಿರಸಿಯ ಸುತ್ತಲಿನ ಕೆಲವು ಸ್ಥಳಗಳನ್ನು ಬಿಟ್ಟು ನನಗೆ ಆ ಜಿಲ್ಲೆಯನ್ನು ನೋಡಲು, ತಿರುಗಾಡಲು ಹೆಚ್ಚು ಅವಕಾಶ ಸಿಕ್ಕಿಲ್ಲ. ಮತ್ತೆ ಹೋಗಬೇಕು.. ಮತ್ತೆ ಮತ್ತೆ ಹೋಗಬೇಕು.. explore ಮಾಡಬೇಕು...

ಮಂಗಳವಾರ, ಫೆಬ್ರವರಿ 8, 2011

ಅದು ಅಕ್ಷರ ಜಾತ್ರೆ, ಆಗಿದ್ದು ಅಕ್ಷರಶಃ ಜಾತ್ರೆ !

ಇದು ನನಗೆ ಎರಡನೆ ಸಾಹಿತ್ಯ ಸಮ್ಮೇಳನ. ಎರಡು ವರ್ಷದ ಹಿಂದೆ ಶಿವಮೊಗ್ಗದಲ್ಲಿ ನಡೆದಾಗ ಹೋಗಿದ್ದೆ. ಅರ್ಧ ದಿನವಷ್ಟೆ ಅಲ್ಲಿದ್ದದ್ದು.  ಸಮ್ಮೇಳನ ಹೇಗಿರುತ್ತದೆ ಎಂದು ನೋಡಲು ಹೋಗಿದ್ದೆ ಎನ್ನುವುದಕ್ಕಿಂತ ಹೆಚ್ಚಿನ ಉದ್ದೇಶ ಇರಲಿಲ್ಲ ಆಗ. ಆದರೆ ಈ ಬಾರಿ ಬೆಂಗಳೂರಿನಲ್ಲೇ ನಡೆಯುತ್ತದೆ ಎಂದಾಗ ಸರಿಯಾಗಿ ಪಾಲ್ಗೊಳ್ಳಬೇಕು ಎಂಬ ಆಸೆ ಇತ್ತು. ಅದರಂತೆ ಕಾರ್ಯಕ್ರಮದ ಪಟ್ಟಿ ನೋಡಿ ನನಗೆ ಆಸಕ್ತಿಯಿದ್ದ ಕೆಲವನ್ನು ಗುರುತು ಹಾಕಿಕೊಂಡಿದ್ದೆ.

ಕನ್ನಡ ಜಾತ್ರೆಗೆ ದಾರಿಯಾವುದಯ್ಯಾ.. ಎಂದು ಕೇಳಿಕೊಂಡು ೫ನೇ ತಾರೀಕು ಶನಿವಾರ ನ್ಯಾಷನಲ್ ಕಾಲೇಜು ಮೈದಾನಕ್ಕೆ ಹೋದರೆ ಜನವೋ ಜನ. ಅವತ್ತು ೪ ಗಂಟೆಗೆ ನಾನು ಹೋಗಬೇಕೆಂದುಕೊಂಡಿದ್ದ ಗೋಷ್ಠಿಯೊಂದಿತ್ತು. ಹೋದಕೂಡಲೇ ಅಲ್ಲಿ ಕಾಣಿಸಿದ್ದು ಸಮ್ಮೇಳನದ ಮುಖ್ಯ ವೇದಿಕೆ. ಖುದ್ದು ವೆಂಕಟಸುಬ್ಬಯ್ಯನವರೇ ಮಾತಾಡುತ್ತಿದ್ದರು. ಕೇಳುತ್ತಾ ಇರುವಾಗ ಒಂದಿಬ್ಬರು ಗೆಳೆಯರು ಜೊತೆಯಾದರು. ಪುಸ್ತಕದಂಗಡಿಗಳಿಗೆ ಹೋದೆವು. ಹೋದೆವು ಅನ್ನುವುದಕ್ಕಿಂತ ಅದರ ಬಾಗಿಲಲ್ಲಿ ಹೋಗಿ ನಿಂತೆವು ಅಷ್ಟೆ, ಜನ ನಮ್ಮನ್ನು ತಳ್ಳಿಕೊಂಡು ಒಳಗೆ ತಂದುಬಿಟ್ಟರು. ಛಂದ ಪುಸ್ತಕದ ಮಳಿಗೆಯಲ್ಲಿ ವಸುಧೇಂದ್ರ ನಗುಮುಖದಿಂದ ಕೂತಿದ್ದರು. ವಿಪರೀತ ರಶ್ಶಿನಿಂದ ಇವತ್ತು ಯಾವುದೂ ಸರಿಯಾಗಿ ನೋಡಲಾಗುವುದಿಲ್ಲ ಎಂದು ಗೊತ್ತಾದರೂ ನಾಳೆ ಭಾನುವಾರ ಇದಕ್ಕೂ ಜಾಸ್ತಿ ರಶ್ಶು ಇರುತ್ತದೆ ಎಂದು ನೆನಪಿಗೆ ಬಂತು. ಇವತ್ತೇ ಮುಗಿಸಿಬಿಡೋಣ ಎಂದು ಒಂದೊಂದೇ ಸಾಲಿನೊಳಕ್ಕೆ ಹೋಗುತ್ತಾ ಕಳೆದುಹೋಗಿಬಿಟ್ಟೆ. ಗೆಳೆಯರು ಎಲ್ಲೋ ತಪ್ಪಿಹೋದರು. ಕರ್ನಾಟಕದಲ್ಲಿ ಇಷ್ಟೆಲ್ಲಾ ಪಬ್ಲಿಷರ್ ಗಳು ಇದ್ದಾರೆ ಎಂದು ಗೊತ್ತಾಗಿದ್ದೇ ಅಲ್ಲಿ. ಕೆಲವು ಲೇಖಕರೂ ಕಂಡರು. ’ಬನವಾಸಿ ಬಳಗ’ದ ಮಳಿಗೆಯಲ್ಲಿ ಹುಡುಗರು ಉತ್ಸಾಹದಿಂದ ಜನರನ್ನು ಮಾತಾಡಿಸುತ್ತಿದ್ದರು. ಎಲ್ಲಾ ಸಾಲುಗಳನ್ನೂ, ಎಲ್ಲಾ ಸ್ಟಾಲುಗಳನ್ನೂ ಮುಗಿಸಿಕೊಂಡು ಒಂದಿಷ್ಟು ಪುಸ್ತಕ ಎತ್ತಾಕಿಕೊಂಡು ಆಗುವಷ್ಟರಲ್ಲಿ ಅಲ್ಲಿ ಸುಮಾರು ೩-೪ ತಾಸುಗಳನ್ನು ಕಳೆದುಬಿಟ್ಟಿದ್ದೆ. ಸಂಜೆ ಕಾವ್ಯವಾಚನ ಮತ್ತು ಗಾಯನ ನಡೆಯುತ್ತಿತ್ತು. ಕೂತು ಕೇಳಿ ಸುಧಾರಿಸಿಕೊಂಡದ್ದಾಯ್ತು.

ಮಾರನೇ ದಿನ ಭಾನುವಾರದ ಎರಡು ಗೋಷ್ಠಿಗಳಿಗೆ ಹೋಗಲು ಗುರುತುಹಾಕಿಕೊಂಡಿದ್ದೆ. ಬೆಳಗ್ಗಿನ ಗೋಷ್ಠಿಗೆ ನಾನು ಹೋಗುವುದು ತಡವಾಗಿಬಿಟ್ಟಿತ್ತು. ಅಲ್ಲಿ ಸ್ವಲ್ಪ ಹೊತ್ತು ಇದ್ದು ಅನಂತರ ಉನ್ನತಿ ಸಭಾಂಗಣದಲ್ಲಿದ್ದ ಎರಡನೇ ಗೋಷ್ಠಿಗೆ ಹೋದೆ. ಅತಿಥಿಗಳು ಮಾತನಾಡಿದರು. ಚೆನ್ನಾಗಿತ್ತು. ನನ್ನ ಆಸಕ್ತಿಯ ಹಲವು ವಿಷಯಗಳು ತಿಳಿದವು. ಅದನ್ನು ಮುಗಿಸಿ ಹೊರಗೆ ಬಂದು ಮುಖ್ಯ ವೇದಿಕೆಯ ಬಳಿ ಬರುತ್ತಿದ್ದಂತೇ ಗೆಳೆಯರು ಜೊತೆಯಾದರು. ಆಮೇಲೆ ಬಹಿರಂಗ ಅಧಿವೇಶನ ಮತ್ತು ಸಮಾರೋಪ ಸಮಾರಂಭ.

********

ಈಗ ವಿಷಯಕ್ಕೆ ಬಂದರೆ, ಇದು ಸಾಹಿತ್ಯ ಸಮ್ಮೇಳನವಾ ಅಥವಾ ಒಂದು ಜಾತ್ರೆಯಾ ಎಂಬ ಸಂಶಯ ಎಲ್ಲರಿಗೂ ಬಂದಿರುವಂತೆ ನನಗೂ ಬಂದಿದ್ದಂತೂ ಹೌದು. ಅದು ಹಾಗೆ ಇದ್ದಿದ್ದೂ ಹೌದು. ನನ್ನ ಆಸುಪಾಸಿನ ವಯಸ್ಸಿನ ಬಹುತೇಕ ಹುಡುಗಹುಡುಗಿಯರಿಗೆ ಇದು ಮೊದಲನೇ ಸಮ್ಮೇಳನ. ಮಾಧ್ಯಮಗಳಲ್ಲಿ ಪ್ರಚಾರ, ಸಂಭ್ರಮ ನೋಡಿ ಸಮ್ಮೇಳನ ಅಂದರೆ ಏನೋ ವಿಶೇಷವಾದದ್ದು ಅಂದುಕೊಂಡು ಬಂದವರು ಬಹಳಷ್ಟು ಜನ. ನಾವು ಎಷ್ಟೇ ಸಕಾರಾತ್ಮಕವಾಗಿ ತೆಗೆದುಕೊಂಡು ಹೆಮ್ಮೆ ಪಡೋಣವೆಂದರೂ ಕೂಡ  ಭ್ರಮನಿರಸನವಾಗಿದೆ. ಇಷ್ಟು ದೊಡ್ಡ ಸಮ್ಮೇಳನ ಆಯೋಜಿಸುವುದು ಎಷ್ಟು ಕಷ್ಟದ ಕೆಲಸ ಎಂದು ಗೊತ್ತಿದೆ. ಆಯೋಜಕರನ್ನು ಟೀಕಿಸುವುದು, ಅದು ಸರಿಯಿಲ್ಲ ಇದು ಸರಿಯಿಲ್ಲ ಹಾಗಿರಬೇಕು ಹೀಗಿರಬೇಕು ಎನ್ನುವುದು ಸರಿಯಲ್ಲ ನಿಜ. ನಾವೇನೋ ಅಕ್ಷರ ಜಾತ್ರೆ ಎಂಬ ಸುಂದರ ಹೆಸರನ್ನಿಟ್ಟು ಕರೆದುಬಿಡುತ್ತೇವೆ. ಆದರೆ ಜಾತ್ರೆ ಅಂದರೆ ಅದು ಈ ಪಾಟಿ ಜಾತ್ರೆಯೇ ಆಗಿಬಿಡುತ್ತದೆಂದರೆ ಸಾಹಿತ್ಯ ಸಮ್ಮೇಳನದ ಉದ್ದೇಶ ಖಂಡಿತ ಇದಲ್ಲ.

ಮೂರುದಿನಗಳಲ್ಲಿ ಲಕ್ಷಾಂತರ ಜನ ಬಂದಿದ್ದು ನಿಜ. ಆದರೆ ಅಲ್ಲಿ ಬಂದಿದ್ದ ಜನರಲ್ಲಿ ಇಲ್ಲಿ ಎಂತದ್ದೋ ಸಮ್ಮೇಳನ ನಡೆಯುತ್ತಿದೆ ಎಂದು ಸುಮ್ಮನೇ ನೋಡಲು ಬಂದವರೇ ಹೆಚ್ಚು. ನಿಜವಾದ ಆಸಕ್ತಿಯಿದ್ದವರಿಗೆ ಬೇಕಾದ ಒಂದು ಗಂಭೀರ ವಾತಾವರಣವೇ ಅಲ್ಲಿ ಸಿಗಲಿಲ್ಲ. ಮುಖ್ಯವೇದಿಕೆ ಮುಂದೆ ಕುಳಿತವರಿಗಷ್ಟೆ ಎಂಬಂತಾಗಿತ್ತು. ಹಿಂದೆ ಕೂತವರಿಗೆ ದೃಶ್ಯವೂ ಇಲ್ಲ, ಸರಿಯಾದ ಶ್ರವ್ಯವೂ ಇಲ್ಲ! ಪುಸ್ತಕದಂಗಡಿಗಳಲ್ಲಿ ಬರೀ ಧೂಳು. ಆದರೂ ಅದು ಕನ್ನಡದ ಧೂಳು. ಗೋಷ್ಠಿಗಳ ವಿಷಯಗಳು ಚೆನ್ನಾಗಿದ್ದವಷ್ಟೆ. ಆದರೆ ಅಲ್ಲಿ ಏನು ನಡೆಯುತ್ತಿದೆ ಎಂದು ಗೊತ್ತಿರದ ಜನರೂ ಆ ಬಾಗಿಲಿನಿಂದ ಒಳಬಂದು ಈ ಬಾಗಿಲಿನಿಂದ ಹೊರಗೆ ಹೋದರು. ಮತ್ತೊಂದು ಕಡೆ ಹೊರಜಗತ್ತಿಗೆ ತೆರೆದುಕೊಳ್ಳಲಾರದ ಒಂದಿಷ್ಟು ಸಂಕುಚಿತ ಮನಸ್ಸುಗಳು ಸೇರಿ ಡಬ್ಬಿಂಗ್ ವಿರುದ್ಧ ಕೂಗಾಡಿಬಿಟ್ಟರು.

ಇದೆಲ್ಲಾ ನೋಡಿದರೆ ಒಂದು ಮೌಲ್ಯಯುತ ಸಮ್ಮೇಳನ ಮತ್ತು ಜಾತ್ರೆ ಎರಡನ್ನೂ ಬೆರೆಸಿಬಿಟ್ಟಂತೆ ಕಾಣುತ್ತದೆ. ಕಡ್ಲೇಕಾಯಿ ಪರಿಷೆಯಂತೆ, ಮಾರಿಕಾಂಬಾ ಜಾತ್ರೆಯಂತೆ ಒಂದು ದೊಡ್ಡ ಜಾತ್ರೆ ಮತ್ತು ಮಾರಾಟ ಮಾಡಬೇಕೆಂದರೆ ಅದನ್ನೇ ಮಾಡಬಹುದು. ಅದನ್ನು ಕನ್ನಡದ ಸೊಗಡಿನೊಂದಿಗೇ ಮಾಡಬಹುದು. ಅದ್ಬುತ ಕನ್ನಡ ಮನರಂಜನೆ, ಸಾಂಸ್ಕೃತಿಕ ಕಾರ್ಯಕ್ರಮಗಳನ್ನಿಡಿಸಿ ಮಾಡಬಹುದು. ಅದಕ್ಕೆ ಕನ್ನಡ ಸಾಹಿತ್ಯ ಪರಿಷತ್ತೇ ಬೇಡ. ಈ ಭಾಷಣಗಳು, ಗೋಷ್ಠಿಗಳಲ್ಲಿ ಟೈಂಪಾಸಿಗೆ ಬಂದು ತೂಕಡಿಸುವ ಕೆಲ ಮುದುಕರು, ಪುಕ್ಸಟ್ಟೆ ತಿರುಗುವ ಪಡ್ಡೆಗಳು, ಐಟಂ ಹುಡ್ಗೀರು, ಕಡ್ಲೆಕಾಯಿ ಮಾರುವವರು, ಐಸ್ ಕ್ಯಾಂಡಿ ಚೀಪುವವರು, ತಿಂಡಿ ಹುಡುಕುವವರು, ಯಾವತ್ತೂ ಕಂಡಿಲ್ಲದವರಂತೆ ಚಾಟ್ಸ್ ತಿನ್ನುವವರು, ರಸ್ತೆ ಬದಿಯ ಮಾರಾಟಗಾರರು, ಕಯ್ಯಪಿಯ್ಯಗುಡುವ ಚಿಳ್ಳೆಗಳು, ಪಿಕ್ನಿಕ್ಕಿಗೆ ಬಂದಂತೆ ಬರುವವರು, ಯಾವುದೋ ಊರಿಂದ ಆನ್ ಡ್ಯೂಟಿ ರಜೆ ಮೇಲೆ ಬಂದು ಸುಮ್ಮನೇ ಇಲ್ಲಿ ಉಂಡು ತಿಂದು ತಿರುಗುವವರು, ಆ ಕಸದ ರಾಶಿ .... ಇವೆಲ್ಲಾ ‘ಸಾಹಿತ್ಯ ಸಮ್ಮೇಳನ‘ಕ್ಕೆ ಬೇಕಾ? ಉಚಿತ ಊಟ, ಹಾಜರಾತಿ ರಜೆ ರದ್ದಾಗಲಿ. ಆಗ ಜೊಳ್ಳು ಹೋಗಿ ಗಟ್ಟಿಕಾಳುಗಳಷ್ಟೇ ಉಳಿಯುತ್ತವೆ ಮತ್ತು ಕನ್ನಡ ಕಟ್ಟಲು ಅಷ್ಟು ಸಾಕು ಕೂಡ.

ಇದು ಬೆಂಗಳೂರಿನಲ್ಲಿ ಆಗಿದ್ದಕ್ಕೆ ವಿಪರೀತ ಜನಸಂದಣಿಯಿಂದ ಹೀಗಾಯಿತಾ? ಅಥವಾ ಎಲ್ಲ ಕಡೆಯೂ ಹಿಂಗೇನಾ? ಆಯೋಜಕರು ಇಷ್ಟೆಲ್ಲಾ ಜನರನ್ನು ನಿರೀಕ್ಷಿಸಿರಲಿಲ್ಲವಾ? ಗೊತ್ತಿಲ್ಲ. ಒಟ್ಟಿನಲ್ಲಿ ಸಮ್ಮೇಳನ ವ್ಯರ್ಥ ಅಂತ ಅನ್ನಿಸದಿದ್ದರೂ ಸಮಾಧಾನವಾಗಲಿಲ್ಲ. ಮುಖ್ಯವೇದಿಕೆಯಲ್ಲಿ ಸಾರ್ವಜನಿಕ ಕಾರ್ಯಕ್ರಮಗಳು ನಡೆಯಲಿ, ಜೊತೆಗೆ ಕೊನೇಪಕ್ಷ ಸಾಹಿತ್ಯ ಗೋಷ್ಠಿಗಳಿಗಾದರೂ ಸಂಬಂಧಪಟ್ಟ ಬರಹಗಾರರು, ಸಾಹಿತಿಗಳು, ಅಧ್ಯಾಪಕರು, ವಿಶ್ವವಿದ್ಯಾಲಯದ ಪ್ರತಿನಿಧಿಗಳು, ತಂತ್ರಜ್ಞರು,  ಕ್ಷೇತ್ರಗಳ ಪರಿಣಿತರು  ಮತ್ತು ಆಸಕ್ತಿ ಇರುವ ಸಾರ್ವಜನಿಕರು ಮಾತ್ರ ನೋಂದಾಯಿಸಿಕೊಂಡು ಭಾಗವಹಿಸಿ ಒಂದು ಕ್ಯಾಂಪಸ್ಸಿನಲ್ಲಿ ಮಾಡಬಹುದಾಗುವಂತೆ ಸಮ್ಮೇಳನದ ಸ್ವರೂಪ ಬದಲಾಗಬೇಕಿದೆ ಮತ್ತು ಇನ್ನೂ ವ್ಯವಸ್ಥಿತವಾಗಬೇಕಿದೆ. ಏನೇ ಆಗಲಿ ಇದು ನಮ್ಮದೇ ಸಮ್ಮೇಳನ. ಮುಂದಿನ ದಿನಗಳಲ್ಲಿ ಚೆನ್ನಾಗಿ ಆಗುತ್ತಾ ಹೋಗುತ್ತದೆ ಅಂತ ಆಶಿಸೋಣ.  ಒಟ್ಟಾರೆ ಈ ಸಮ್ಮೇಳನ ಒಂದು ಒಳ್ಳೆಯ ಅನುಭವ. ನನಗನ್ನಿಸಿದ್ದು ಹೇಳಿದ್ದೇನೆ. ಇನ್ನುಳಿದದ್ದು ಆ ತಾಯಿ ಭುವನೇಶ್ವರಿಗೆ ಬಿಟ್ಟದ್ದು.

ಶುಕ್ರವಾರ, ಜನವರಿ 21, 2011

ಆತ್ಮಕತೆಗಳೊಂದಿಗೆ Simply Fly

ನಿನ್ನೆಗೆ ಕ್ಯಾಪ್ಟನ್ ಗೋಪೀನಾಥರ Simply Fly ಪುಸ್ತಕವನ್ನು ಓದಿ ಮುಗಿಸಿದೆ.  ರೆಟ್ಟೆಗಾತ್ರದ ಈ ಪುಸ್ತಕವನ್ನು ಒಂದೂವರೆ ತಿಂಗಳಿನ ಹಿಂದೆಯೇ ಓದಲು ಶುರುಮಾಡಿದ್ದರೂ ಮಧ್ಯೆ ಮಧ್ಯೆ ನಾನಾ ಕಾರಣಗಳಿಂದ ಅದನ್ನು ಮುಗಿಸಲಾಗದೇ ಇಷ್ಟು ತಡವಾಯಿತು. ಆ ಪುಸ್ತಕ ಕನ್ನಡದಲ್ಲಿ ’ಬಾನಯಾನ’ವಾಗಿ ಹೊರಬಂದಿದ್ದರೂ ಕೂಡ ಇಂಗ್ಲೀಷಲ್ಲಿ ಮೂಲ ಪುಸ್ತಕವನ್ನೇ ಓದೋಣ ಎಂದು ಹೊರಟಿದ್ದೂ ತಡವಾಗಿ ಮುಗಿದುದ್ದಕ್ಕೆ ಒಂದು ಕಾರಣ ಎನ್ನಬಹುದು. ಇರಲಿ. ಸಾಮಾನ್ಯವಾಗಿ ನನಗೆ ಮೊದಲು ಆತ್ಮಕತೆಗಳನ್ನು ಓದಲು ಇಷ್ಟವಾಗುತ್ತಿರಲಿಲ್ಲ. ಅದ್ಯಾವ ಗಳಿಗೆಯಲ್ಲೋ ಲಂಕೇಶರ ಆತ್ಮಕತೆ ’ಹುಳಿಮಾವಿನಮರ’ವನ್ನು ಓದಿದ ಮೇಲೆ ಆತ್ಮಕತೆಗಳ ಬಗ್ಗೆ ಆಸಕ್ತಿ ಹೊರಟುಹೋಗಿತ್ತು. ಆಗಿನ್ನೂ ಸಣ್ಣವಯಸ್ಸಿದ್ದುದರಿಂದ ಹಾಗೆನ್ನಿಸಿತ್ತೋ ಅಥವಾ ಆ ಪುಸ್ತಕವೇ ಹಾಗಿತ್ತೋ ನೆನಪಿಲ್ಲ. ಆತ್ಮಕತೆಗಳು ಎಂದರೆ ಕೇವಲ ನಿರುಪಯೋಗಿ ವೈಯಕ್ತಿಕ ವಿವರಗಳು, ಅದು ಯಾರದ್ದಾದರೂ ಸರಿ, ಓದಿ ಮಾಡುವುದಾದರೂ ಏನು ಎನ್ನಿಸಿಬಿಟ್ಟಿತ್ತು. ಆದರೆ ನನ್ನ ಈ ಭಾವನೆಯನ್ನು ಬದಲಿಸಿದ್ದು ಶಿವರಾಮಕಾರಂತರ ’ಹುಚ್ಚುಮನಸ್ಸಿನಹತ್ತುಮುಖಗಳು’. ಒಮ್ಮೆ ಗೆಳೆಯನೊಬ್ಬನ ಮನೆಗೆ ಹೋದಾಗ ಕಂಡಪುಸ್ತಕವನ್ನು ಸುಮ್ಮನೇ ಕೈಗೆತ್ತಿಕೊಂಡು ಓದಿದ್ದು ಆತ್ಮಕತೆಗಳ ಬಗ್ಗೆ ನನ್ನ ಭಾವನೆಯನ್ನು ಬದಲಿಸಿತು. ಎಲ್ಲಾ ಆತ್ಮಕತೆಗಳು ಆಸಕ್ತಿದಾಯಕವಾಗಿರಬೇಕಂತಿಲ್ಲ, ಆದರೆ ಅದರಿಂದ ತಿಳಿದುಕೊಳ್ಳುವುದು ಬಹಳಾ ಇರುತ್ತದೆ ಎಂಬುದು ಅರ್ಥವಾಗಿತ್ತು. ಹಿರಿಯರ ಅನುಭವವು ತಿಳಿಸಿಕೊಡುವಷ್ಟು ಮತ್ತೆಲ್ಲೂ ಸಿಗುವುದಿಲ್ಲ ಎಂದು ಖಾತ್ರಿಯಾಗಿತ್ತು. ಒಬ್ಬರ ಬಗ್ಗೆ ಮತ್ತೊಬ್ಬರು ಬರೆದ ಜೀವನ ಚರಿತ್ರೆಗಳು ಒಬ್ಬ ವ್ಯಕ್ತಿಯ ಸರಿಯಾದ ಚಿತ್ರಣವನ್ನು ಕೊಡಲು ಸಾಧ್ಯವಾಗುವುದಿಲ್ಲ. ಒಬ್ಬ ವ್ಯಕ್ತಿ ತನ್ನ ಬಗ್ಗೆ ತಾನು ತಿಳಿದುಕೊಂಡಷ್ಟು ಮತ್ಯಾರಿಗೂ ತಿಳಿಯಲು ಸಾಧ್ಯವಿಲ್ಲವಲ್ಲ ಅಂತೆಯೇ ಶಿವರಾಮ ಕಾರಂತರ ಆತ್ಮಕತೆ ಓದಿ ಅವರ ಬಗ್ಗೆ ಅಚ್ಚರಿಪಟ್ಟೆ. ಎಲ್ಲಾ ಕ್ಷೇತ್ರಗಳಲ್ಲೂ ಅವರ ಒಂದೊಂದು ಕೆಲಸದ ಬಗ್ಗೆಯೂ ಅವರಿಟ್ಟುಕೊಂಡ ನೋಟಗಳು, ಅದನ್ನು ಕಾರ್ಯಗತಗೊಳಿಸಿದ, ಅನುಭವಗಳ ವಿವರಗಳು ಮನಸ್ಸಿನಲ್ಲಿ ಕೂತವು. ಅದರಿಂದ ನನ್ನಲ್ಲಿ ಏನೋ ಅದ್ಭುತ ಬದಲಾವಣೆಯಾಗಿ ಹೋಯಿತು ಅಂತೇನೂ ಇಲ್ಲ , ಆದರೆ ಅದರಿಂದಾಗಿ ಜೀವನದ ಕೆಲ ವಿಷಯಗಳ ಬಗ್ಗೆ ನನ್ನ ಧೋರಣೆ ಬದಲಾಯಿಸಿಕೊಂಡೆ. ಹೊಸನೋಟ ಬೆಳೆಸಿಕೊಂಡೆ. ಅದು ಬಹಳ ಸಹಾಯಕಾರಿಯೂ ಆಯಿತು.

ನನಗೆ ಮೊದಲಿನಿಂದಲೂ ಓದುವ ಚಪಲ ಸ್ವಲ್ಪ ಜಾಸ್ತಿಯೇ ಇರುವುದರಿಂದ ಸಿಕ್ಕ ಸಿಕ್ಕ ಪುಸ್ತಕಗಳನ್ನೆಲ್ಲಾ ಓದಿಬಿಡುತ್ತಿದ್ದೆ. ವಿದ್ಯಾರ್ಥಿಯಾಗಿದ್ದಾಗ ಮತ್ತು ಆಮೇಲೆ ಕೆಲಸಕ್ಕೆ ಸೇರಿದ ಅನಂತರ ಜವಾಬ್ದಾರಿ ಕಡಿಮೆ ಇರುವಾಗ ಬೇಕಾದಷ್ಟು ಸಮಯವೂ ಇರುತ್ತಿತ್ತು. ಆದರೆ ಇತ್ತೀಚಿನ ವರ್ಷಗಳಲ್ಲಿ ಸಮಯದ ಅಭಾವ ಶುರುವಾಯಿತು ಅನ್ನುವುದಕ್ಕಿಂತ ಇರುವ ಸಮಯವನ್ನು ಸರಿಯಾಗಿ ಬಳಸಿಕೊಳ್ಳುವ ಅಗತ್ಯತೆ ಹೆಚ್ಚಾಗುತ್ತಾ ಹೋಯಿತು. ಜೊತೆಗೆ ಆಸಕ್ತಿಗಳೂ ಬದಲಾಗುತ್ತಾ ಹೋದವು. ಇದು ಸ್ಪಷ್ಟವಾಗಿ ಅನ್ನಿಸಿದ್ದು ಮತ್ತೊಂದು ಆತ್ಮಕತೆಯನ್ನು ಓದಿದ ಮೇಲೆ. ಅದು ರವಿಬೆಳಗೆರೆ ಅನುವಾದಿತ ‘ಟೈಂಪಾಸ್ ‘ ಪುಸ್ತಕ. ಪ್ರೊತಿಮಾ ಬೇಡಿ ಎನ್ನುವ ನೃತ್ಯಗಾತಿಯೊಬ್ಬಳ ಬದುಕಿನ ಕತೆ ಅದು. ಅದು ಓದಿಯಾದ ಮೇಲೆ ಇಂತದ್ದನ್ನು ಓದಲು ’ಟೈಂ ವೇಸ್ಟ್ ’ ಮಾಡಿಕೊಂಡೆನಲ್ಲಾ ಎನ್ನಿಸಿಬಿಟ್ಟಿತ್ತು. ಸಣ್ಣವಯಸ್ಸಿನಿಂದ ಹಿಡಿದು ಮುದುಕಿಯಾಗುವವರೆಗೆ ತನಗೆ ಯಾರನ್ನು, ಎಂತವರನ್ನು ಕಂಡಾಗ ಪುಳಕವಾಗುತ್ತಿತ್ತು , ಯಾರ್ಯಾರ ಜೊತೆ ತನ್ನ ಸಂಬಂಧವಿತ್ತು , ಅವನ ಜೊತೆ ಏನು ಮಾಡಿದೆ ಇವನ ಜೊತೆ ಏನು ಮಾಡಿದೆ ಎಂಬಂತಹ ವಿವರಗಳೇ ಜಾಸ್ತಿ ಇದ್ದ ಅವಳ ಖಾಸಗಿ ವಿಷಯಗಳನ್ನು ಓದಿ ತಿಳಿದುಕೊಂಡು ನಾನು ಮಾಡುವುದೇನೂ ಇರಲಿಲ್ಲ. ಅದೊಂದು ಯಾವುದೇ ಹೆಚ್ಚಿನ ಒಳನೋಟಗಳಿಲ್ಲದ ಮನರಂಜನೆಯಷ್ಟೆ. ಆತ್ಮಕತೆಗಳ ಓದಿನಲ್ಲಿ ರೋಚಕತೆ ಮುಖ್ಯವಾಗಬಾರದು. ಚಮಚಾಗಿರಿ, 'ದಾದಾಗಿರಿ' ಮಾಡಿದ್ದನ್ನೂ ಆತ್ಮಕತೆಯಾಗಿ ಬರೆದುಕೊಂಡವರಿದ್ದಾರೆ.  ಇದಾದ ಮೇಲೆ ಪುಸ್ತಕಗಳ ಆಯ್ಕೆ ವಿಷಯದಲ್ಲೂ ಸ್ವಲ್ಪ ಎಚ್ಚರವಹಿಸುತ್ತಾ ಹೋದೆ. ಹಿಂದಿನ ವರುಷದ ಮಧ್ಯದಲ್ಲಿ ಓದಿದ ಮತ್ತೊಂದು ಅದೇ ಬೆಳಗೆರೆ ಅನುವಾದಿತ ಆತ್ಮಕತೆ ‘ಚಲಂ‘. ಒಬ್ಬ ಸಾರ್ವಜನಿಕ ವ್ಯಕ್ತಿಯದು ಅದೆಷ್ಟೇ ವಿಲಕ್ಷಣ ವ್ಯಕ್ತಿತ್ವವಾಗಿದ್ದರೂ ಅವರ ಆ ಬದುಕಿನ ವಿವರ ತಿಳಿದುಕೊಳ್ಳುವಂತದ್ದೇನೂ ಆಗಿರಬೇಕಂತಿಲ್ಲ. ಆ ಆತ್ಮಕತೆ ಕೆಟ್ಟದಾಗಿತ್ತು ಅನ್ನುವುದಕ್ಕಿಂತ ಅದರ ಅನುವಾದ ಇನ್ನೂ ಕೆಟ್ಟದಾಗಿತ್ತು ಎನ್ನುವುದು ಸೂಕ್ತ.  ಅದ್ದರಿಂದಲೇ ಅದು ನಾನು ಓದಿದ ಒಂದು ಅತ್ಯಂತ ಕೆಟ್ಟ ಕನ್ನಡ ಪುಸ್ತಕವಾಗಿ ದಾಖಲಾಗಿಹೋಯಿತು.


ಬಾನಯಾನ
ಹೀಗಿರುವಾಗ ಹಿಂದಿನ ವರ್ಷದ ಕೊನೆಯಲ್ಲಿ ತೆಗೆದುಕೊಂಡದ್ದು ’ಸಿಂಪ್ಲಿಫ್ಲೈ’.  ಇದು ಭಾರತದ ವಿಮಾನಯಾನದಲ್ಲಿ ಕ್ರಾಂತಿ ಮಾಡಿದ ಕ್ಯಾಪ್ಟನ್ ಗೋಪಿನಾಥರ ಆತ್ಮಕತೆ. ಅವರು 'ಏರ್ ಡೆಕ್ಕನ್'  ಶುರುಮಾಡಿದ ವ್ಯಕ್ತಿಯಾಗಿ ಹೆಚ್ಚು ಪ್ರಸಿದ್ಧ. ವಿಧಾನಸಭೆ, ಲೋಕಸಭೆ ಚುನಾವಣೆಗೆ ನಿಂತಿದ್ದ ರಾಜಕೀಯ ವ್ಯಕ್ತಿಯಾಗಿಯೂ ಸುಮಾರು ಜನರಿಗೆ ಪರಿಚಯವಿರುವಂತವರು. ಆದರೆ ಆತ ಬರೀ ಅಷ್ಟೇ ಅಲ್ಲ. ಅವರೊಬ್ಬ ಸಣ್ಣ ವ್ಯಾಪಾರಿ,  ಉದ್ಯಮಿ, ಒಂದೇ ಕಾಲಕ್ಕೆ ಹೊಟೆಲ್, ಆಟೊಮೊಬೈಲ್ ವ್ಯಾಪಾರಗಳನ್ನು ನಿರ್ವಹಿಸಿದವ, ಬರಹಗಾರ, ಬಾಂಗ್ಲಾ ಯುದ್ಧದಲ್ಲಿ ನೇರವಾಗಿ ಪಾಲ್ಗೊಂಡಿದ್ದ ಮಿಲಿಟರಿ ಅಧಿಕಾರಿ, ಮೇಲಾಗಿ ಅವರೊಬ್ಬ ಪಕ್ಕಾ ರೈತ! ಇದರಲ್ಲಿ ಎಲ್ಲಕ್ಕಿಂತ ಹೆಚ್ಚಾಗಿ ಕ್ಯಾಪ್ಟನ್ ನನಗೆ ಇಷ್ಟವಾಗಿದ್ದು ಮಾದರಿರೈತನಾಗಿ. ಅವರ ಕುಟುಂಬದ ಜಮೀನು ಗೊರೂರು ಅಣೆಕಟ್ಟು ಯೋಜನೆಯಲ್ಲಿ ಕೈಬಿಟ್ಟು ಹೋದಾಗ ದೂರದ ಜಾಗದಲ್ಲಿ ಸರ್ಕಾರದಿಂದ ಪರಿಹಾರವಾಗಿ ಬಂದ ಜಮೀನಿನಲ್ಲಿ ಹೊಸದಾಗಿ ಕೃಷಿ ಶುರುಮಾಡಿ, ಅದನ್ನು ಮಾದರಿಯೆಂಬಂತೆ ಮಾಡಿದ್ದೇ ಸಾಕು, ಒಬ್ಬ ಮನುಷ್ಯನ ಜೀವನದ ಸಾಧನೆ ಎನ್ನಬಹುದು. ಕೃಷಿಯ ಬಗ್ಗೆ, ಪ್ರಕೃತಿ ಬಗ್ಗೆ , ಪ್ರಾಣಿ ಪಕ್ಷಿ ಕೀಟಗಳ ಬಗ್ಗೆ ಅವರ ತಿಳುವಳಿಕೆ, ರಾಸಾಯನಿಕಗಳಿಲ್ಲದ ನೈಸರ್ಗಿಕ ಕೃಷಿಯ ಅಳವಡಿಕೆ ಅದ್ಬುತ. ನಾಲ್ಕು ವರ್ಷ ನನ್ನ ಕರ್ಮಭೂಮಿಯಾಗಿದ್ದ ಹಾಸನದಲ್ಲಿಯೇ ಅವರೂ ಇದ್ದಿದ್ದು, ಅಲ್ಲಿಯ ಚಿರಪರಿಚಿತ ವಾತಾವರಣದ ಬಗ್ಗೆ, ಅವರು ಒಡೆನಾಡಿದ ಗುರುತಿರುವ ಹಿರಿಯರ ಬಗ್ಗೆ ಅವರು ಬರೆದಿರುವುದು ಎಲ್ಲವೂ ಪುಸ್ತಕದ ಓದುವಾಗಿನ ಆಸಕ್ತಿಯನ್ನು ಹೆಚ್ಚಿಸಿದಂತವು. ವರ್ಷಗಟ್ಟಲೆ ಅತ್ಯಂತ ಶ್ರಮಪಟ್ಟು ಹೆಲಿಕಾಪ್ಟರ್ ಕಂಪನಿ, ವಿಮಾನದ ಕಂಪನಿಗಳನ್ನು ಶುರುಮಾಡಿ ಅದನ್ನು ಯಶಸ್ವಿಯಾಗಿ ನಿರ್ವಹಿಸಿದ್ದರೂ ಅವರಲ್ಲಿ ಕಾಣುವುದು ಹಣ ಮಾಡಬೇಕೆಂದು ಹೊರಟಿರುವ ಒಬ್ಬ ಬಿಸಿನೆಸ್ ಮನ್ ಅಲ್ಲ. ಅವರಲ್ಲಿ ಕಾಣುವುದು ವ್ಯಾಪಾರದೆಡೆಗಿನ ಒಂದು ವಿಶಿಷ್ಟ ನೋಟವಿರುವ ಮತ್ತು ಒಂದು ನೈತಿಕತೆ ಇರುವ ಮನುಷ್ಯ. ದೇಶದ ಬಡಮಧ್ಯಮವರ್ಗದವರೆಗೂ ಯೋಚಿಸುವಂತಹ ಮನೋವೃತ್ತಿ. ಏನಾದರೂ ಮಾಡಬೇಕು ಎನ್ನಿಸಿದರೆ ಅದನ್ನು ಮಾಡೇ ತೀರುವ, ಎಲ್ಲಿ ಏನು ಹೊಸದನ್ನು ಮಾಡಲಾಗುತ್ತದೆ ಎಂದು ಹುಡುಕುತ್ತಲೇ ಇರುವ, ಮಾಡುವ ಎಲ್ಲಾ ಕೆಲಸಗಳಲ್ಲೂ ಸಾಧ್ಯವಾದಷ್ಟೂ ಆಳಕ್ಕಿಳಿಯುವ ಅವರ ಗುಣ ಸಿಕ್ಕಾಪಟ್ಟೆ ಇಷ್ಟವಾಗಿದ್ದು. ಒಬ್ಬ ಮನುಷ್ಯ ಇಷ್ಟೆಲ್ಲಾ ಆಗುವುದು ಸಾಧ್ಯವಾ ಎಂದು ಅಚ್ಚರಿ ಪಡುವಷ್ಟರಲ್ಲೇ ಅವರು ಈಗ ಮತ್ತೊಂದು ದೊಡ್ಡ ಕೆಲಸಕ್ಕೆ ಕೈ ಹಾಕಿದ್ದಾರೆ, ಅದು ಕಾರ್ಗೋ ವಿಮಾನಗಳ ಸೇವೆಯ ಆರಂಭ. ಒಟ್ಟಿನಲ್ಲಿ ಅವರ ಬದುಕೊಂದು ಅದ್ಭುತ ಹಾರಾಟ. ಅವರಿಗೊಂದು ಆಲ್ ದಿ ಬೆಸ್ಟ್ ಮತ್ತು ಸಿಕ್ಕಾಪಟ್ಟೆ ಥ್ಯಾಂಕ್ಸ್.. ಒಂದು ಒಳ್ಳೆಯ ಆತ್ಮಕಥನವನ್ನು ಓದಿದ ತೃಪ್ತಿ ಸಿಕ್ಕಿದೆ.

ಆತ್ಮಕತೆಗಳ ಸಾಲಿನಲ್ಲಿ ಬಹುಶಃ ನನ್ನ ಮುಂದಿನ ಗುರಿ ’ಭಿತ್ತಿ’.

*******

ಜೊತೆಗೆ ಬ್ಲಾಗ್ ಒಣಗದಂತೆ ಹೀಗೆ ಆಗಾಗ ಸ್ವಲ್ಪ ನೀರು ಹರಿಸುವ ಪ್ರಯತ್ನ ಜಾರಿಯಲ್ಲಿರುತ್ತದೆ.

ಅಲ್ಲಿಯವರೆಗೆ Line on hold ( Is this phrase patented? ;-) )