ಮಂಗಳವಾರ, ಆಗಸ್ಟ್ 7, 2012

Food blogs

ಅಡುಗೆ ಒಂದು ಕಲೆ.  ಅದು ಅಭ್ಯಾಸ ಮತ್ತು ಅನುಭವದಿಂದ ಸಿದ್ಧಿಸುವಂತದ್ದು. ಈ ಕಲೆಯನ್ನು ಕಲಿಯಲು ಪ್ರಯತ್ನ ಪಡುತ್ತಲೇ ಸಾಧಾರಣ ಗೆಲುವು,  ಒಮ್ಮೊಮ್ಮೆ ದಯನೀಯ ಸೋಲು ಕಾಣುತ್ತಿರುವ ನಾನು ಆಗಾಗ ಒಂದಿಷ್ಟು ಅಡುಗೆ ಬ್ಲಾಗುಗಳನ್ನು refer ಮಾಡುತ್ತೇನೆ. ಅಡುಗೆಯ ನೂರಾರು ಬ್ಲಾಗುಗಳು/ತಾಣಗಳು ಇವೆ. ಆದರೆ ಸಾಮಾನ್ಯವಾಗಿ ನಾನು ದಿನನಿತ್ಯದ ಮನೆ ತಿನಿಸುಗಳು, ಹವ್ಯಕ/ಮಲೆನಾಡು ಅಡುಗೆಗಳು, ಕರ್ನಾಟಕದ ತಿನಿಸುಗಳು ಮತ್ತು ಸರಳವಾದ ಅಡುಗೆಗಳನ್ನು ಹುಡುಕುವುದರಿಂದ ಅಂತಹ ಹಲವು ಅಡುಗೆ ವಿಧಾನಗಳನ್ನು ಬರೆಯುವ ಬ್ಲಾಗುಗಳು/ಜಾಲತಾಣಗಳು ನನ್ನ ಸಂಗ್ರಹದಲ್ಲಿವೆ. ಎಲ್ಲಾ ಅಡುಗೆ ಮಾಡದಿದ್ದರೂ ಕೆಲವೊಂದಿಷ್ಟನ್ನು ಕುತೂಹಲಕ್ಕೆ ಮತ್ತು ಆಸಕ್ತಿಗೆ ಓದುತ್ತೇನೆ.  ಅವುಗಳದ್ದೊಂದು ಪಟ್ಟಿ ..ಹೀಗೇ ಸುಮ್ಮನೇ..

ರುಚಿರುಚಿಅಡುಗೆ
ಒಗ್ಗರಣೆ
ಟೇಸ್ಟ್ ಆಫ್ ಮೈಸೂರ್
ಹವ್ಯಕಪಾಕ
ಮನೆಯಶಕ್ತಿ
ನನ್ ಪ್ರಪಂಚ
ಪಾಕಚಂದ್ರಿಕೆ
ಸವಿರುಚಿ
ಅರ್ಚನಾಸ್ ಕಿಚನ್
ರುಚಿ
ಅಡುಗೆ ಸವಿರುಚಿ
ಗೆಳತಿಯರ ಪಾಕಶಾಲೆ
ನನ್ನಡುಗೆ

ಆಗಾಗ ಅಡುಗೆಗಳನ್ನು ಬರೆಯುವ ..
ಅರ್ಚನಾ ಹೆಬ್ಬಾರ್
ನೆನಪಿನ ಸಂಚಿಯಿಂದ... 
ತೆರದ ಮನಸಿನ ಪುಟಗಳು

ಗುರುವಾರ, ಜುಲೈ 26, 2012

ಅನಂತಪದ್ಮನಾಭ ಗುಡಿಯಲ್ಲಿ ನೀಲಿಶಲ್ಯಧಾರಿಗಳು


ನೀವು ಯಾವುದಾದರೂ ಮಿಲಿಟರಿ ಬೇಸ್ ಒಳಗೆ ಹೋಗಿದ್ದೀರಾ? ಅಲ್ಲಿನ ಭದ್ರತೆ ಹೇಗಿರುತ್ತೆ ಅಂತ ನೋಡಿದ್ದೀರಾ?  ನಾನಂತೂ ಹೋಗಿಲ್ಲ, ಬರೀ ಸಿನೆಮಾಗಳಲ್ಲಿ ನೋಡಿದ್ದಷ್ಟೇ. ಆದರೆ ಮಿಲಿಟರಿ ಬೇಸ್ ಎಂದರೆ ಹೀಗಿರಬಹುದು ಎಂದು ಅನ್ನಿಸಿದ್ದು ತಿರುವನಂತಪುರದ ಅನಂತಪದ್ಮನಾಭ ದೇವಸ್ಥಾನದಲ್ಲಿ! ಅಲ್ಲಿ ಅಂತಹ ಸಂಪತ್ತಿದೆ ಎಂದು ಗೊತ್ತಾದ ಮೇಲೆ ದೇವಸ್ಥಾನಕ್ಕೆ ಇದ್ದಕ್ಕಿದ್ದಂತೇ ಸ್ಟಾರ್ ವ್ಯಾಲ್ಯೂ ಬಂದು ಭೇಟಿ ಕೊಡುವವರ ಸಂಖ್ಯೆ ಬಹಳವಾಗಿದೆ.

ಬಹುಶಃ ಕೇರಳದ ಎಲ್ಲಾ ದೇವಾಲಯಗಳಲ್ಲೂ ಪ್ಯಾಂಟ್, ಅಂಗಿ, ಬನಿಯನ್ ಗೆ ಪ್ರವೇಶ ಇಲ್ಲ. ಪಂಚೆ ಉಟ್ಟುಕೊಂಡರೆ ಮಾತ್ರ ಗುಡಿ ಒಳಗೆ ಹೋಗಬಹುದು. ಇಲ್ಲೂ ಕೂಡ ಹಾಗೇ. ಅಂಗಿ ಪ್ಯಾಂಟು ತೆಗೆದಿಡಲು ಮತ್ತು ಪಂಚೆ ಬಾಡಿಗೆಗೆ ಪಡೆಯಲು (ಅಥವಾ ಖರೀದಿಗೆ) ಹೊರಗೆ ವ್ಯವಸ್ಥೆ ಇತ್ತು. ಪ್ರವೇಶ ದ್ವಾರದಲ್ಲಿ ತಪಾಸಣೆ.  ಮೈಮೇಲೆ ಪಂಚೆ ಶಲ್ಯ ಮಾತ್ರ ಇದ್ದರೂ ಅದನ್ನೇ ಎರಡೆರಡು ಬಾರಿ ತಡಕಾಡಿದರು. ಯಾವುದೇ ಚೀಲ, ಪರ್ಸ್, ಸೆಲ್ ಫೋನ್, ನೀರಿನ ಬಾಟಲಿ, ಏನನ್ನೂ ಬಿಡುವುದಿಲ್ಲ. ಆಮೇಲೆ ಮೆಟಲ್ ದಿಟೆಕ್ಟರ್. ಅದರಲ್ಲಿ ಹಾಯುವಾಗ ಅದು ಸದ್ದು ಮಾಡಿದರೆ ಪಕ್ಕಕ್ಕೆ ಕರೆದು ಮತ್ತೆ ತಪಾಸಣೆ. ಅಲ್ಲೂ ಪಾಸ್ ಆಗಿ ಮುಖ್ಯದ್ವಾರ ದಾಟಿ ಮುಂದೆ ನಡೆಯುತ್ತಿದ್ದಂತೇ ಅಲ್ಲೊಂದಿಷ್ಟು ಜನ ನಮ್ಮನ್ನೇ ನೋಡುತ್ತಿದ್ದರು. ಇವರ್ಯಾಕೆ ಹೀಗೆ ನೋಡುತ್ತಾರೆ ಅಂತ ಅರ್ಥಾಗಲಿಲ್ಲ. ಹತ್ತಿರಕ್ಕೆ ಕರೆದರು. ಆಗ ಗೊತ್ತಾಗಿದ್ದು ಅವರೂ ಕೂಡ ಪೋಲೀಸರು ಎಂದು! ಅವರ್ಯಾರೂ ಖಾಕಿಯಲ್ಲಿ ಇರಲಿಲ್ಲ. ದೇವಸ್ಥಾನದ ಭದ್ರತೆಗೆಂದೇ ಇರುವ ಪೋಲೀಸರಿಗೂ ಅಲ್ಲಿ ಪಂಚೆಯೇ ಸಮವಸ್ತ್ರ. ಹೆಗಲ ಮೇಲೆ ಹೊದೆಯಲು ಹಿಂಭಾಗದಲ್ಲಿ ’ಪೋಲೀಸ್’ ಎಂದು ಬರೆದಿರುವ ನೀಲಿ ಬಣ್ಣದ ಶಲ್ಯ. ಮತ್ತೊಮ್ಮೆ ತಪಾಸಣೆ ಮಾಡಿದರು. ಮುಂಭಾಗದ ಆವರಣದಲ್ಲೆಲ್ಲಾ ಆ ನೀಲಿಶಲ್ಯಧಾರಿಗಳು ತಿರುಗಾಡುತ್ತಿದ್ದರು. ಎಲ್ಲರದ್ದೂ ನೋಟ ದೇವಾಲಯದ ಒಳಗೆ ಬರುವ ಜನರೆಡೆಗೆ. ಅದೂ ಅಲ್ಲದೇ ಮತ್ತೆಷ್ಟು ಸಿಸಿಟಿವಿ ಕ್ಯಾಮೆರಾಗಳ ಕಣ್ಣು ನಮ್ಮ ಮೇಲಿತ್ತೋ ಗೊತ್ತಿಲ್ಲ.  ಆ ಕಡೆ ಹೋಗಿ ಎಂದು ಕೈತೋರಿಸಿದ ಮತ್ತೊಬ್ಬ ಪೋಲೀಸ್. ಅವರು ಹೇಳಿದ ಮೇಲೆ ಮುಗಿಯಿತು. ಆ ಕಡೆ ಹೋಗಬೇಕು. ಕ್ಯೂನಲ್ಲಿ ನಿಲ್ಲಬೇಕಿತ್ತು. ನಿಂತೆವು. ದೇವರ ದರ್ಶನದ ಬಾಗಿಲು ತೆರೆಯಲು ಇನ್ನೂ ೨೦ ನಿಮಿಷ ಇತ್ತು.  ಸುಮ್ಮನೇ ಹಾಗೇ ಗಮನಿಸಿದೆ. ಅಷ್ಟು ದೂರದತನಕ ಇರುವ ದೇವಾಲಯದ ಪಡಸಾಲೆಯಲ್ಲಿ ನೀಲಿಶಲ್ಯ ಹೊದ್ದುಕೊಂಡ ಅನೇಕ ಪೋಲೀಸರು ತಿರುಗಾಡುತ್ತಲೇ ಇದ್ದರು. ಆಯಕಟ್ಟಿನ ಜಾಗಗಳಲ್ಲಿ ನಿಂತ ಪೋಲಿಸರು ಗನ್ ಹಿಡಿದಿದ್ದರು. ಪ್ರತಿಯೊಬ್ಬನ ಮೇಲೂ ಅವರ ಹದ್ದಿನ ಕಣ್ಣು. ಯಾವುದೇ ಕ್ಷಣದಲ್ಲಿ ಯಾರನ್ನು ಬೇಕಾದರೂ ಅಲ್ಲೇ ನಿಲ್ಲಿಸಿ ತಡವುತ್ತಿದ್ದರು. ಅಲ್ಲಿನ ವಾತಾವರಣವೇ ಒಂಥರಾ ಅನ್ನಿಸತೊಡಗಿತ್ತು. ಜನರಲ್ಲಿ ಶಿಸ್ತು ತಾನುತಾನಾಗೇ ಬಂದಿತ್ತು.

ಸಾಲು ಕರಗಲು ಶುರುವಾಯಿತು. ಗರ್ಭಗುಡಿಯ ಕಡೆಗೆ ನಡೆದೆವು. ಅಲ್ಲಿನ ದೊಡ್ಡ ಗರ್ಭಗುಡಿಗೆ ಮೂರುಬಾಗಿಲು. ಒಳಗೆ ಪದ್ಮನಾಭಸ್ವಾಮಿ ಮಲಗಿದ್ದಾನೆ. ಒಂದು ಬಾಗಿಲಲ್ಲಿ ಅವನ ಪಾದಗಳ ದರ್ಶನ, ಮಧ್ಯದ ಬಾಗಿಲಲ್ಲಿ ಪದ್ಮ-ನಾಭಿ, ಮೂರನೆಯ ಬಾಗಿಲಲ್ಲಿ ಮುಖ. ಒಳಗೆ ಕತ್ತಲಿದ್ದುದರಿಂದ ನನಗೆ ಏನೂ ಸರಿಯಾಗಿ ಕಾಣಲಿಲ್ಲ. ಗರ್ಭಗುಡಿಯ ಸುತ್ತಲಲ್ಲೇ ಇರುವ ಕೆಲ ಕೊಠಡಿಗಳಿಗೆ ದೊಡ್ಡ ಬೀಗ ಹಾಕಲ್ಪಟ್ಟು ಸೀಲ್ ಮಾಡಲಾಗಿತ್ತು. ಅಲ್ಲಿಂದಲೇ ಸಂಪತ್ತು ಇರುವ ನೆಲಮಾಳಿಗೆಗೆ ಪ್ರವೇಶ ಇರುವುದು ಎಂದು ಅರ್ಥಮಾಡಿಕೊಂಡೆವು. ಜನರು ಆ ಕೋಣೆಗಳನ್ನು ನೋಡಲೂ ಹಿಂಜರಿಯುವಂತೆ ಗರ್ಭಗುಡಿಯ ಸುತ್ತಲೂ ಪೋಲೀಸ್ ಪಡೆ ಓಡಾಡುತ್ತಲೇ ಇತ್ತು. ಕೈಮುಗಿದು ನಿಂತವರ, ಉದ್ದಂಡ ಬಿದ್ದವರ, ಪ್ರದಕ್ಷಿಣೆ ಹಾಕುವವರ, ಓಡಾಡುವವರ, ಎಲ್ಲರ ಚಲನವಲನಗಳನ್ನು ಅವರ ಕಣ್ಣುಗಳು ಗಮನಿಸುತ್ತಲೇ ಇದ್ದವು. ಜೋರಾಗಿ ಮಾತಾಡುವಂತಿಲ್ಲ, ಎಲ್ಲೂ ಕೂರುವಂತಿಲ್ಲ. ಸಾಲು ತಪ್ಪಿಸುವಂತಿಲ್ಲ. ಗರ್ಭಗುಡಿಯ ಆವರಣದಿಂದ ಹೊರಗೆ ಬಂದು ತಲೆಕೊಡವಿಕೊಂಡು ನೋಡಿದರೆ ವಿಶಾಲ ಪ್ರಾಂಗಣ. ಎಕರೆಗಿಂತಲೂ ಹೆಚ್ಚಿನ ಜಾಗದಲ್ಲಿರುವ ದೇವಾಲಯದಲ್ಲಿ ಕಲ್ಲಿನ ಕಂಬಗಳು, ಛಾವಣಿ, ಅವುಗಳಲ್ಲಿ ಕಲೆ ಚಿತ್ತಾರ... ಮತ್ತು ಎಲ್ಲೆಲ್ಲೂ ಪಂಚೆ, ನೀಲಿಶಲ್ಯಧಾರೀ ಪೋಲೀಸರು.

ಅಲ್ಲಿಂದ ಹೊರಬಂದಾಗ ಮಿಲಿಟರಿ ಬೇಸ್ ಒಂದನ್ನು ಹೊಕ್ಕು ಬಂದ ಅನುಭವ.

*******

ಅನಂತಪದ್ಮನಾಭಸ್ವಾಮಿ ದೇವಾಲಯದ ಬಗ್ಗೆ ಮಾಹಿತಿಗೆ:
http://en.wikipedia.org/wiki/Padmanabhaswamy_Temple
http://www.sree-padmanabhaswamy.com/

ಶನಿವಾರ, ಜೂನ್ 30, 2012

ಪತ್ರಿಕೆಗಳಲ್ಲಿ ಬ್ಲಾಗುಗಳು ಮತ್ತು ನನ್ನ ಬ್ಲಾಗು

ನೆನಪಿದೆ. ಅವತ್ತು ಆಗಸ್ಟ್ ೧೭, ೨೦೦೮. ಭಾನುವಾರ ಬೆಳಗ್ಗೆ ಏಳೂವರೆ. ಭದ್ರಾವತಿಯಿಂದ  ಹೊರನಾಡಿಗೆ ಹೊರಟಿದ್ದ ನಾನು ನರಸಿಂಹರಾಜಪುರ ಬಸ್ಟ್ಯಾಂಡ್ ಹೋಟೆಲಿನಲ್ಲಿ ತಿಂಡಿ ಮುಗಿಸಿ ಹೊರಬರುತ್ತಿದ್ದೆ. ಫೋನಿಗೆ ಸಂದೇಶವೊಂದು ಬಂದಿತ್ತು. ಗೆಳೆಯ ವಿಜಿ ಸಂದೇಶ ಕಳಿಸಿದ್ದ. ತೆಗೆದು ನೋಡಿದರೆ, "ಇವತ್ತಿನ ಕನ್ನಡ ಪ್ರಭ ಪತ್ರಿಕೆಯಲ್ಲಿ ನಿನ್ನ ಬ್ಲಾಗ್ ಬಗ್ಗೆ ಬಂದಿದೆ ನೋಡು" ಅಂತ ಇತ್ತು. ಏನು ಬರೆದಿದ್ದಾರೆ ನೋಡೋಣ ಅಂತ ಅಲ್ಲೇ ಹೋಗಿ ಪತ್ರಿಕೆ ಕೊಂಡುಕೊಂಡಿದ್ದೆ. ಸಾಪ್ತಾಹಿಕ ಪ್ರಭದ ’ಬ್ಲಾಗ್ ಬುಟ್ಟಿ’ಯಲ್ಲಿ ನನ್ನ ಈ ಬ್ಲಾಗ್ ಬಗ್ಗೆ ಒಂದು ಚಿಕ್ಕ ಪರಿಚಯ ಬರೆದು ಆಗ ಬರೆದಿದ್ದ ’ಎಲೆಶೆಟ್ಟಿ’ ಎನ್ನುವ ಬರಹವೊಂದನ್ನು ಪೂರ್ತಿ ಪ್ರಕಟಿಸಿದ್ದರು.

ಬಹುಶಃ ಈ ರೀತಿ ಬ್ಲಾಗ್ ಗಳನ್ನು ಪರಿಚಯ ಮಾಡಿಕೊಡುವ ಕೆಲಸವನ್ನು ಮೊದಲು ಮಾಡಿದ್ದು ’ಕನ್ನಡ ಪ್ರಭ’ ಪತ್ರಿಕೆಯೇ ಇರಬೇಕು. ಆಮೇಲೆ ’ಹೊಸದಿಗಂತ’ ಪತ್ರಿಕೆ ಕೂಡ ಪ್ರತಿವಾರ ’ಜೇಡರಬಲೆ’ಯಲ್ಲಿ ಒಂದೊಂದು ಬ್ಲಾಗ್ ಗಳನ್ನು ಪರಿಚಯ ಮಾಡಿಕೊಡುತ್ತಿತ್ತು. ಅನಂತರದ ದಿನಗಳಲ್ಲಿ ವಿಜಯ ಕರ್ನಾಟಕವು ’ವೆಬ್ಬಾಗಿಲು’ ಎಂಬ ಹೆಸರಿನ ಅಂಕಣದಲ್ಲಿ ಬ್ಲಾಗುಗಳ ಬಗ್ಗೆ ಬರೆಯಿತು. ಈಗ ವಿ..ದಲ್ಲಿ ಬ್ಲಾಗ್ ಗಳ ಬಗ್ಗೆ ’ಬ್ಲಾಗಿಲು’ಎಂಬ ಅಂಕಣ ಬರುತ್ತಿದೆ.


ಮೊನ್ನೆ ಜೂನ್ ಹದಿನೈದು, ಪ್ರಜಾವಾಣಿಯು ಮೆಟ್ರೋ ಪುರವಣಿಯ 'ಬ್ಲಾಗಿಲನು ತೆರೆದು' ಅಂಕಣದಲ್ಲಿ ನನ್ನ ಬ್ಲಾಗ್ ಬಗ್ಗೆ ಬರೆದಿದೆ. ಪ್ರತಿ ಶುಕ್ರವಾರ ಅದರಲ್ಲಿ ಒಂದೊಂದು ಬ್ಲಾಗ್ ಪರಿಚಯ ಮಾಡಿಕೊಟ್ಟು ಆಯ್ದ ಬರಹವೊಂದನ್ನು ಪ್ರಕಟಿಸುತ್ತಾರೆ. ನನ್ನ ಬ್ಲಾಗ್ ಬಗ್ಗೆ ಬಂದಿದ್ದು ಗೊತ್ತಿರಲಿಲ್ಲ. ಅವತ್ತು ರಾತ್ರಿ ಗೆಳೆಯ ಪ್ರಭುಪ್ರಸಾದ ಈ ಬಗ್ಗೆ ಹೇಳಿದಾಗಲೇ ಗೊತ್ತಾಗಿದ್ದುನನಗೇ ಆಶ್ಚರ್ಯವಾಗುವಂತೆ ಮುದ್ದಾಗಿ ಪರಿಚಯ ಬರೆದು, ಒಂದೆರಡು screen shotಗಳನ್ನೂ ಹಾಕಿ, ಆ ಹಿಂದಿನ ದಿನವಷ್ಟೇ ಬರೆದು ಹಾಕಿದ್ದ ಪುಟ್ಟ ಬರಹವನ್ನೂ ಪ್ರಕಟಿಸಿದ್ದರು. ಅವರಿಗೆ ಧನ್ಯವಾದಗಳು

ಇತ್ತೀಚೆಗೆ ’ಸಂಯುಕ್ತ ಕರ್ನಾಟಕ’ವೂ ಕೂಡ 'ಬ್ಲಾಗ್ ಲೋಕ'ದಲ್ಲಿ ಬ್ಲಾಗ್ ಗಳನ್ನು ಪರಿಚಯಿಸುತ್ತಿದೆ. ಈ ನಡುವೆ ಅದೇ ಜೂನ್ ಹದಿನಾಲ್ಕರಂದು ’ಸಂಯುಕ್ತ ಕರ್ನಾಟಕ’ ಪತ್ರಿಕೆ ನನ್ನ 'ಕನ್ನಡ ಟೈಪಿಂಗ್' ಬರಹವನ್ನು ಪ್ರಕಟಿಸಿತ್ತು. ಕಂಪ್ಯೂಟರ್ ನಲ್ಲಿ ಕನ್ನಡದಲ್ಲಿ ಬರೆಯಲು ಏನೇನು ಸೌಲಭ್ಯಗಳಿವೆ ಎಂಬುದರ ಬಗ್ಗೆ  ಆ ಬರಹ. ಯಥಾಪ್ರಕಾರ ನನಗೆ ಅದು ಪ್ರಕಟವಾಗಿದ್ದು ಗೊತ್ತಿರಲಿಲ್ಲ. ಅವತ್ತು ರಾತ್ರಿ ವಿಜಯಕ್ಕ ಫೇಸ್ ಬುಕ್ಕಿನಲ್ಲಿ ಸಂದೇಶ ಕಳುಹಿಸಿ ಅದರ ಕೊಂಡಿ ಕೊಟ್ಟಾಗಲೇ ಗೊತ್ತಾಗಿದ್ದು. ಆದರೆ ಸಂಯುಕ್ತ ಕರ್ನಾಟಕ ಮಾಡಿದ್ದು ಬ್ಲಾಗ್ ಪರಿಚಯ ಅಲ್ಲ. ಅನಾಮತ್ತು ಆ ಬರಹದ ಕಾಪಿ ಪೇಸ್ಟು.! ಭಾಗ ೧, ೨ ಎಂದು ಎರಡು ದಿನ ಬಂದ ಆ ಬರಹದ ಕೊನೆಯಲ್ಲಿ ನನ್ನ ಹೆಸರು, ಇ ಮೇಲ್ ಐಡಿ, ಬ್ಲಾಗ್ ಲಿಂಕ್ ಎಲ್ಲಾ ಪ್ರಕಟಿಸಿದ್ದರು. ಆದರೆ ಅದೇ ನನ್ನ ಇ-ಮೇಲ್ ಐಡಿಗೆ ಅವರು ಒಂದು ಸಂದೇಶ ಕಳಿಸಿ ಹೀಗೆ ಪ್ರಕಟಿಸುತ್ತೇವೆ ಅಂತ ಮೊದಲೇ ಹೇಳಿದ್ದರೆ ಆ ಬರಹವನ್ನು ಖುಷಿಯಿಂದ ಇನ್ನೂ ಚೆನ್ನಾಗಿ ಅಪ್ ಡೇಟ್ ಮಾಡಿ ಬರೆದುಕೊಡುತ್ತಿದ್ದೆ. ಏಕೆಂದರೆ ಆ ಬರಹ ಒಂದು ವರ್ಷದ ಹಿಂದೆ purely ಒಂದು ಅಂತರಜಾಲ ಬರಹವಾಗಿ ಬರೆದಿದ್ದು. ಅಂದರೆ ಅದರಲ್ಲಿ ಹಲವು ಕೊಂಡಿ(page links)ಗಳಿವೆ ಮತ್ತು ಅನೇಕ ಕೊಂಡಿಗಳು ಕರೆದುಕೊಂಡು ಹೋಗುವ ಜಾಗದಲ್ಲಿ ಈಗ ಏನೂ ಇಲ್ಲ. ಉದಾಹರಣೆಗೆ ’ಬರಹ’ ತಂತ್ರಾಂಶ ಈಗ ಉಚಿತವಲ್ಲ, ’ನುಡಿ’ ತಂತ್ರಾಂಶಕ್ಕೆ ಕನ್ನಡ ಗಣಕ ಪರಿಷತ್ತಿನ ಮಿಂಬಲೆ ತಾಣವೇ ಇಲ್ಲ. ’ಪದ’ ತಂತ್ರಾಂಶದ ವೆಬ್ ಸೈಟ್ expire ಆಗಿಹೋಗಿದೆ. ಕೆಲವು ಹಳೇ ತಾಣಗಳು ಕೆಲಸ ಮಾಡುತ್ತಿಲ್ಲ. ಕೆಲವು ಬದಲಾವಣೆಯಾಗಿವೆ. ಹೊಸದು ಬಂದಿದೆ. ಆದ್ದರಿಂದ ಇಂತಹ ಬರಹವನ್ನು ಈಗ ಪ್ರಕಟಿಸಿದರೆ ಅದನ್ನು ಓದಿ ಅದರ ಕೊಂಡಿ ಹಿಡಿದು ಹೋಗುವ ಆಸಕ್ತಿಯುಳ್ಳ ಓದುಗರು ನಿರಾಶರಾಗಬೇಕಾಗುತ್ತದೆ. ಪತ್ರಿಕೆಯಲ್ಲಿ ಹಾಕುವಾಗ ಅವರು ಇಂತಹುದರ ಬಗ್ಗೆ ಎಚ್ಚರವಹಿಸಿಬೇಕಾಗಿತ್ತು.

***

ಮೊದಲೆಲ್ಲಾ ಬ್ಲಾಗ್ ಗಳ ಸಂಖ್ಯೆ ಕಡಿಮೆ ಇತ್ತು. ಐದಾರು ವರ್ಷಗಳ ಹಿಂದೆ ಕನ್ನಡ ಬ್ಲಾಗುಗಳನ್ನು ಬರೆಯಲು ಆರಂಭಿಸಿದ ನಾವೆಲ್ಲಾ ಹೆಚ್ಚುಕಡಿಮೆ ಒಂದೇ ವಾರಗೆಯವರಿದ್ದೆವು. ಸುಮಾರಾಗಿ ಬ್ಲಾಗಿಗರ ಪರಿಚಯ ಕೂಡ ಇರುತ್ತಿತ್ತು. ಯಾವುದ್ಯಾವುದೋ ಸಂದರ್ಭಗಳಲ್ಲಿ ಭೇಟಿ ಕೂಡ ಆಗುತ್ತಿದ್ದೆವು. ಬ್ಲಾಗ್ ಗಳ ಬಗ್ಗೆ ಮಾತಾಡುತ್ತಿದ್ದೆವು. ಮಾಹಿತಿ ಹಂಚಿಕೊಳ್ಳುತ್ತಿದ್ದೆವು. ಆಗ ಇದ್ದ ಬ್ಲಾಗುಗಳಲ್ಲಿ ಬಹುತೇಕ ಎಲ್ಲವೂ ಗೊತ್ತಿರುತ್ತಿತ್ತು. ಹಲವು ಹಳಬರ ಬ್ಲಾಗ್ ಕೊಂಡಿಗಳು ಇನ್ನೂ ನೆನಪಿನಲ್ಲೇ ಇವೆ. ಇತ್ತೀಚಿನ ವರ್ಷಗಳಲ್ಲಿ ಕನ್ನಡ ಬ್ಲಾಗ್ ಲೋಕ ಬಹಳ ಬೆಳೆದಿದೆ. ಸಾವಿರಾರು ಬ್ಲಾಗ್ ಗಳಿವೆ. ಎಷ್ಟೋ ಚಂದಚಂದದ ಬ್ಲಾಗುಗಳು ಗೊತ್ತೇ ಇರುವುದಿಲ್ಲ. ಪತ್ರಿಕೆಗಳು ಹೀಗೆ ಪರಿಚಯ ಮಾಡಿಕೊಡುತ್ತಿರುವುದರಿಂದಲೇ ಹಲವಾರು ಬ್ಲಾಗ್ ಗಳು ಗೊತ್ತಾಗುತ್ತಿವೆ, ಓದಲು ಸಿಗುತ್ತಿವೆ.. ಬರೆಯುವವರಿಗೆ ಪ್ರೋತ್ಸಾಹವೂ ಸಿಗುತ್ತಿದೆ. ನನ್ನ ಗೂಗಲ್ ರೀಡರ್ ಅಂತೂ ತುಂಬಿ ತುಳುಕುತ್ತಿದೆ. ಪತ್ರಿಕೆಗಳಿಗೆ ಕೃತಜ್ಞತೆಗಳು.

ಬುಧವಾರ, ಜೂನ್ 13, 2012

ತಿರುಗಿ ಕೆಟ್ಟರೂ ಪರವಾಗಿಲ್ಲ....

ಹಿಂದಿನ ವರ್ಷ ಕೆನಡಾದಲ್ಲಿ ತಣ್ಣಗೆ ಕುಳಿತು ನೆಟ್ ಚಾಟ್ ಮಾಡುತ್ತಿದ್ದಾಗ ಗೆಳತಿಯೊಬ್ಬಳು "ಅಲಾಸ್ಕಾಗೆ ಹೋಗಿ ಬಂದ್ಯಾ?" ಅಂತ ಕೇಳಿದ್ದಳು. ಭೂಮಿ ಮೇಲಿನ ಸುಂದರ ಪ್ರದೇಶಗಳಲ್ಲಿ 'ಅಲಾಸ್ಕಾ' ಕೂಡ ಒಂದು ಅಂತ ಹೇಳುತ್ತಾರೆ.  ಕೆನಡಾ ದೇಶದ ಗಡಿಗೆ ತಾಗಿಕೊಂಡಿದ್ದರೂ ಕೂಡ ನಾನಿದ್ದ ಊರಿನಿಂದ ಅದು ಬಹಳ ದೂರ ಇತ್ತು.  ಜೊತೆಗೆ ಅದು ಯು.ಎಸ್.ಎ. ದೇಶಕ್ಕೆ ಸೇರುವ ಪ್ರದೇಶ.  ನನಗೆ ಯು.ಎಸ್. ವೀಸಾ ಕೂಡ ಇರಲಿಲ್ಲ. ಇದ್ದರೂ ಬಹಳ ಸಮಯ ಮತ್ತು ಹಣ ಖರ್ಚಾಗುತ್ತಿದ್ದುದರಿಂದ ಅಲಾಸ್ಕಾಗೆ ಹೋಗಿಬರಲು ಆಗುತ್ತಿರಲೂ ಇಲ್ಲ. ಅದನ್ನೇ ಆವಳಿಗೆ ಹೇಳಿದರೆ ಅವಳು ಅಷ್ಟು ದೂರ ಹೋಗಿ ಅಲಾಸ್ಕಾಗೆ ಹೋಗಲಿಲ್ಲ ಅಂದಮೇಲೆ ನೀನು ಅಲ್ಲಿಗೆ ಹೋಗಿದ್ದೇ ವೇಸ್ಟ್ ಅಂದಳು.  ನಾನೂ ಸುಮ್ಮನಿರದೇ, "ನೀನು ಕಾಶ್ಮೀರಕ್ಕೆ ಹೋಗಿದ್ದೀಯಾ?" ಅಂತ ಕೇಳಿದೆ. ಅವಳು ಇಲ್ಲ ಅಂದಳು. ಹಾಗಿದ್ದಮೇಲೆ ನೀನು ಇಪ್ಪತ್ತೈದು ವರ್ಷದಿಂದ ಭಾರತದಲ್ಲಿ ಇರುವುದೇ ವೇಸ್ಟ್ ಅಂದು ಅವಳನ್ನು ಸುಮ್ಮನಾಗಿಸಿದೆ. :)  ನಾನು ಕೆಲಸ ಮಾಡುತ್ತಿದ್ದ ಕಂಪನಿಯಲ್ಲಿ ಒಮ್ಮೆ ಬೇರೆ ದೇಶದ ಕ್ಲೈಂಟ್ ಒಬ್ಬಳು ಬಂದಿದ್ದಳು. ಭಾರತಕ್ಕೆ ಅದು ಅವಳ ಮೊದಲ ಭೇಟಿ ಆಗಿತ್ತು .  ಅವಳು  ಬರುವಾಗಲೇ ಯಾವ ರೀತಿ ಪ್ಲಾನ್ ಮಾಡಿಕೊಂಡು ಬಂದಿದ್ದಳು ಅಂದರೆ ಇಲ್ಲಿ ಇದ್ದಿದ್ದು ಒಂದು  ವಾರವೇ ಆದರೂ ಒಂದೇ ದಿನದಲ್ಲಿ ವಿಮಾನದಲ್ಲಿ ಹೋಗಿ ತಾಜ್ ಮಹಲ್ ನೋಡಿಕೊಂಡು ಬಂದಿದ್ದಳು! "ನಾವೆಲ್ಲಾ ಇದೇ ದೇಶದಲ್ಲೇ ಹುಟ್ಟಿ ಇಲ್ಲೇ ಇದ್ದರೂ ಆ ಕಡೆ ತಲೆಯೂ ಹಾಕಲಾಗಿಲ್ಲ, ನೀನು ಒಂದೇ ದಿನದಲ್ಲಿ ಒಬ್ಬಳೇ ಹೋಗಿ ನೋಡಿಕೊಂಡು ಬಂದೆ" ಅಂತ ಅವಳಿಗೆ ಶಭಾಶ್ ಹೇಳಿದ್ದೆವು.

ವಿಷಯ ಇದೇ. ನಾನು ಹಿಂದಿನ ವರ್ಷ ಇದೇ ಸಮಯದಲ್ಲಿ ಇನ್ನು ಒಂದು ವರ್ಷದ ಒಳಗಾಗಿ ಕರ್ನಾಟಕದಲ್ಲಿ ನನ್ನ ಆಸಕ್ತಿಯ ಕೆಲವು ಮುಖ್ಯವಾದ ಸ್ಥಳಗಳಿಗೆಲ್ಲಾ ಹೋಗಬೇಕು ಅಂದುಕೊಂಡಿದ್ದೆ.  ಆದರೆ ಅದು ಆಗಲಿಲ್ಲ. ಅದರ ಬಗ್ಗೆ ಹೀಗೆಯೇ ಪ್ಲಾನ್ ಮಾಡುತ್ತಾ ಇಷ್ಟು ವರ್ಷಗಳಲ್ಲಿ ಎಲ್ಲೆಲ್ಲಿ ಹೋಗಿದ್ದೇನೆ ಅಂತ ಯೋಚಿಸುತ್ತಿದ್ದೆ.  ನಾನು ಭಾರತದ ನಾಲ್ಕು ದಕ್ಷಿಣ ರಾಜ್ಯಗಳಿಗಷ್ಟೇ ಹೋಗಿದ್ದೇನೆ. ಅದೂ ಅಲ್ಲಿ ಕೆಲವು ಊರುಗಳಷ್ಟೇ!. ಕರ್ನಾಟಕವನ್ನೇ ತೆಗೆದುಕೊಂಡರೆ, ಇಲ್ಲಿನ ಮೂವತ್ತು ಜಿಲ್ಲೆಗಳಲ್ಲಿ ಬೀದರ್, ಕಲ್ಬುರ್ಗಿ, ವಿಜಾಪುರ, ಬೆಳಗಾವಿ, ರಾಯಚೂರು, ಕೊಪ್ಪಳ, ಗದಗ, ಯಾದಗಿರಿ ಜಿಲ್ಲೆಗಳನ್ನೇ ಹೊಕ್ಕಿಲ್ಲ!!  ಬೆಂಗಳೂರಿನ ಹತ್ತಿರ ಇರುವ ಎಷ್ಟೋ ಸ್ಥಳಗಳಿಗೆ ಹೋಗಬೇಕು ಅಂದುಕೊಳುತ್ತಲೇ ವರ್ಷಗಳು ಕಳೆದುಹೋಗಿವೆ! ನನ್ನ ತವರು ಜಿಲ್ಲೆ ಶಿವಮೊಗ್ಗ, ಉತ್ತರಕನ್ನಡಗಳಲ್ಲೇ ಎಷ್ಟೊಂದೆಲ್ಲಾ ಸ್ಥಳಗಳು ಬಾಕಿ ಇವೆ. ಇಲ್ಲಿ ಸ್ಥಳಗಳು ಅಂದರೆ ನಮ್ಮ ಆಸಕ್ತಿಗೆ ಸಂಬಂಧಿಸಿದ ಯಾವುದಾದರೂ ಆಯಿತು. ಕೆಲವರಿಗೆ ಐತಿಹಾಸಿಕ ಸ್ಥಳಗಳು ಆಸಕ್ತಿಯದ್ದಾದರೆ, ಮತ್ತೆ ಕೆಲವರಿಗೆ ನಿಸರ್ಗವೇ ಪುಣ್ಯಕ್ಷೇತ್ರ! ಆದರೆ ಆಸಕ್ತಿಗಳೇ ಇರದಿದ್ದರೆ ಮಾತ್ರ ಇದೆಲ್ಲಾ ಅರ್ಥಾಗುವುದಿಲ್ಲ.  ಪ್ರತಿಯೊಂದು ಪ್ರದೇಶಗಳಲ್ಲೂ ಆ ಜನ, ಜೀವನ, ಭಾಷೆ, ಹವಾಮಾನ, ಪ್ರಕೃತಿ, ಸಂಸ್ಕೃತಿ ಎಲ್ಲವೂ ಅನುಭವಗಳೇ ಹೌದು. ಹಾಗೆ ಎಲ್ಲಾ ಕಡೆ ಹೋಗಲು ಎಲ್ಲರಿಗೂ ಸಾಧ್ಯವೂ ಇಲ್ಲ ಅಂದುಕೊಂಡರೂ ಒಂದಂತೂ ನಿಜ. ತಿರುಗಿ ಕೆಟ್ಟರೂ ಪರವಾಗಿಲ್ಲ, ಕೂತು ಕೆಡಬಾರದು !

ಗುರುವಾರ, ಮೇ 31, 2012

ಬರೆಯುತ್ತಿರಬೇಕು..


ಇವತ್ತಿಗೆ ಸರಿಯಾಗಿ ಹತ್ತು ತಿಂಗಳು ನಾಲ್ಕು ದಿನ! ಹಿಂದಿನ ವರ್ಷ ಜುಲೈ ಇಪ್ಪತ್ತೇಳರ ಅನಂತರ ಬ್ಲಾಗ್ ನಲ್ಲಿ ಯಾವುದೇ ಬರಹ ಹಾಕಿರಲಿಲ್ಲಅರೆಸ್ಟ್ ಎಂಬ ಕತೆಯೊಂದನ್ನು ಹಾಕಿದ ಮೇಲೆ ಬ್ಲಾಗ್ ಕೂಡ ಅರೆಸ್ಟ್ ಆಗಿಹೋಗಿತ್ತು!. ಬ್ಲಾಗ್ ನಲ್ಲಿ ಬರೆಯಲು ನಿಲ್ಲಿಸಿದ್ದಕ್ಕೆ ಕಾರಣ ಹುಡುಕೋಣ ಎಂದು ಹೊರಟರೆ ಇಂತದ್ದೇ ಅಂತ ಹೇಳುವ ಕಾರಣಗಳ್ಯಾವುದೂ ಸಿಗುತ್ತಿಲ್ಲ. ಅಷ್ಟೊಂದು busy ಆಗಿಹೋದೇನಾ ಅಂತ ಅಂದುಕೊಂಡರೆ ಖಂಡಿತ ಇಲ್ಲ ಅಂತ ನನಗೆ ಗೊತ್ತಿದೆ. ಮತ್ತೇನು ಅಸಡ್ಡೆಯಾ? ಆಲಸ್ಯವಾ? ಫೇಸ್ ಬುಕ್? ಮತ್ಯಾವುದೋ ಕಾರಣ? ಗೊತ್ತಾಗುತ್ತಿಲ್ಲ. ಕಂಡಿದ್ದನ್ನು, ಅನುಭವಕ್ಕೆ ಬಂದಿದ್ದನ್ನು ತಕ್ಷಣಕ್ಕೇ ಹಂಚಿಕೊಳ್ಳುವ, ಸುದ್ದಿ ಮಾಡುವ, ಅಷ್ಟೇ ಬೇಗ ಅದನ್ನು ಮರೆತೂ ಹೋಗುವ ಕಾಲ ಇದು. ಹಾಗಾಗಿ ಕಾರಣ ಹುಡುಕುವುದಕ್ಕಿಂತ ಪರಿಹಾರ ಹುಡುಕುವುದೇ ಸರಿ. ಇದು ನನ್ನ ಬ್ಲಾಗ್ ಕತೆ ಮಾತ್ರವಲ್ಲ. ಬಹಳಷ್ಟು ಬ್ಲಾಗ್ ಗಳೂ ಕೂಡ ಇದೇ ಸ್ಥಿತಿಯಲ್ಲಿವೆ. ಕೆಲವರು ಬರೆಯುವುದನ್ನೇ ನಿಲ್ಲಿಸಿದ್ದರೆ, ಕೆಲವರು ಅಪರೂಪಕ್ಕಾದರೂ ಬರೆದು ಹಾಕುತ್ತಿದ್ದಾರೆ. ಇರಲಿ, ಇದಿಷ್ಟೂ ಅವಧಿಯ ಸಾಕಷ್ಟು ವಿಷಯಗಳನ್ನು ದಾಖಲಿಸುವುದಿದೆ. ಎಲ್ಲೋ ತಿರುಗಾಟದ ಅನುಭವ, ಓದಿ ಮೆಚ್ಚಿದ ಪುಸ್ತಕ, ಖುಷಿಯ ಕ್ಷಣಗಳು, ಹಂಚಿಕೊಳ್ಳಬಹುದಾದ ಮಾಹಿತಿ, ಈ ವಿಚಿತ್ರ ಜಗತ್ತು, ಈ ಬದುಕು, ಜೀವನಪ್ರೀತಿ, ನಿರಂತರ ಕುತೂಹಲ, ಯಾರದ್ದೋ ಮೇಲಿನ ಸಿಟ್ಟು, ಈ ವ್ಯವಸ್ಥೆಯೇ ಸರಿಯಿಲ್ಲ ಎಂಬ ಅಸಹನೆ, ಅವಳ ನೆನಪಿನ ನಿಟ್ಟುಸಿರು, ಯಾರಿಗೂ ಅರ್ಥಾಗದ ದುಗುಡ, ಏನೋ ಬೇಕೆಂಬ ಹಂಬಲ, ಮನಸ್ಸಿಗೆ ಬಂದ ಲಹರಿ, ಕುಶಾಲು, ಮಾತು-ಕತೆ, ಬರವಣಿಗೆ ಮುಂತಾದ ಎಲ್ಲದಕ್ಕೂ ಅವಕಾಶವಿರುವಾಗ ಕಾರಣ ಹುಡುಕಬಾರದು. ಹೀಗೇ ಅಂತೇನೂ ಇಲ್ಲ, ಹೇಗಾದರೂ ಸರಿ....ಬರೆಯುತ್ತಿರಬೇಕು.. ಅಷ್ಟೆ

ಬ್ಲಾಗ್ ಶುರುಮಾಡಿ ಮೇ ೧೨ಕ್ಕೆ ಐದು ವರ್ಷಗಳಾದರೂ ಅದು ನೆನಪಾಗಿದ್ದು ಮಾತ್ರ ಇವತ್ತು!

ಸಿಗೋಣ..