ಸೋಮವಾರ, ಮೇ 6, 2019

ಹೊರದೇಶದ ಕನ್ನಡ ಮಕ್ಕಳಿಗೆ ಕನ್ನಡ ಕಲಿಕೆ ಪುಸ್ತಕಗಳು

ಹೊರದೇಶಗಳಲ್ಲಿ ನೆಲೆಸಿರುವ ಕನ್ನಡಿಗ ಮಕ್ಕಳಿಗೆ ಕನ್ನಡ ಕಲಿಕೆ ಅಲ್ಲಿನ ಹಲವು ಕನ್ನಡ ಸಂಘಗಳ ಮೂಲಕ ನಡೆಯುತ್ತಿದೆ. ಆದರೆ ಅಲ್ಲಿನ ಪರಿಸರದ ಭಾಷೆ ಕನ್ನಡವಲ್ಲ. ಹಲವರು ಮನೆಯಲ್ಲಿ ಮಾತಾಡಿದರೂ ಸಹ ಹೆಚ್ಚಿನ ಕಲಿಕೆಗೆ ಮತ್ತು ಓದು ಬರಹ ಕಲಿಯಲು ಸಾಂಪ್ರದಾಯಿಕ ಕ್ರಮಗಳು ಹೊಂದುವುದಿಲ್ಲ ಎಂಬ ಅಭಿಪ್ರಾಯ ಇದೆ. ಆ ಕಾರಣವಾಗಿಯೇ ಒಂದು ವರ್ಷದ ಹಿಂದೆ ಕನ್ನಡ ಅಭಿವೃದ್ದಿ ಪ್ರಾಧಿಕಾರವು ಹೊರದೇಶಗಳ ಕನ್ನಡ ಮಕ್ಕಳ ಕಲಿಕೆಗಾಗೇ ವಿಶೇಷ ಪುಸ್ತಕಗಳನ್ನು ಪ್ರಕಟಿಸಿದೆ. ಹಲವಾರು ವರ್ಷಗಳಿಂದ ಅಮೆರಿಕಾದಲ್ಲಿ ನೆಲೆಸಿರುವ 'ಶಿವಕುಮಾರ್ ಬಿ. ಗೌಡರ್' ಅವರು ಅಲ್ಲಿರುವ ಮಕ್ಕಳಿಗೆ ಸೂಕ್ತವಾಗುವಂತೆ ಒಂದು ಸುಲಭವಾದ ಕ್ರಮದಲ್ಲಿ ಪಠ್ಯಗಳನ್ನು ತಯಾರಿಸಿದ್ದಾರೆ. 

  • ಸ್ವರ ಬಲ್ಲ - 1, 
  • ಸ್ವರ ಬಲ್ಲ - 2
  • ಅಕ್ಷರ ಬಲ್ಲ-1, 
  • ಅಕ್ಷರ ಬಲ್ಲ-2
  • ಪದ ಬಲ್ಲ – 1, 
  • ಪದ ಬಲ್ಲ - 2 
  • ಜಾಣ – 1, 
  • ಜಾಣ -2
ಎಂಬ ಎಂಟು ಪುಸ್ತಕಗಳು ಈ ಕಲಿಕಾ ಸರಣಿಯಲ್ಲಿವೆ. ಬಣ್ಣಬಣ್ಣದ ಚಿತ್ರಗಳ ಮೂಲಕ, ಸರಳವಾದ ಕತೆಗಳ ಮೂಲಕ ಕಲಿಕೆ ಇದರಲ್ಲಿ ಎದ್ದು ಕಾಣುತ್ತದೆ. ಇವು ಕೇವಲ ಓದುವ ಪುಸ್ತಕಗಳಲ್ಲದೇ ಅದರಲ್ಲೇ ಮಕ್ಕಳು ಬರೆದು ಅಭ್ಯಾಸ ಮಾಡಿ ಕಲಿಯಲು ಸಹ ರೂಪಿಸಲಾಗಿದೆ. 



ಇದರಲ್ಲಿನ ಪಠ್ಯಕ್ರಮದ ಸಾರಾಂಶ, ಮುಖ್ಯ ಮಾಹಿತಿ ಈ ಕೆಳಗಿನಂತಿವೆ.
  • ಪಠ್ಯಕ್ರಮವನ್ನು ಶ್ರೀ ಶಿವು ಗೌಡರ್‌ರವರು (ಸಿ.ಎ., ಯುಎಸ್ಎ) ಸಿದ್ಧಪಡಿಸಿದ್ದಾರೆ. ಇದರಲ್ಲಿ ಅಮೆರಿಕೆಯ ಶಿಕ್ಷಣ ವ್ಯವಸ್ಥೆ, ಕುಮೋನ್ ಮತ್ತು ಮಾರ್ಶಲ್ ಆರ್ಟ್ಸ್‌ಗಳಲ್ಲಿನ ಅಂಶಗಳನ್ನು ಅಳವಡಿಸಿಕೊಂಡಿದ್ದಾರೆ.
  • ಕರ್ನಾಟಕ ಸರ್ಕಾರದ ಕನ್ನಡ ಅಭಿವೃದ್ಧಿ ಪ್ರಾಧಿಕಾರವು ಈ ಪಠ್ಯಕ್ರಮವನ್ನು ವಿದೇಶಗಳಲ್ಲಿ ಮಕ್ಕಳಿಗೆ ಕನ್ನಡ ಕಲಿಸಲು ಬಳಕೆ ಮಾಡಬಹುದೆಂದು ಒಪ್ಪಿ ಅನುಮೋದಿಸಿದೆ.
  • ಪಠ್ಯಕ್ರಮದಲ್ಲಿ ೮ ಹಂತಗಳಿದ್ದು, ಪ್ರತಿ ಹಂತದಲ್ಲೂ ಕನ್ನಡ ಭಾಷೆಯ ಒಂದು ನಿರ್ದಿಷ್ಟ ಕುಶಲತೆಯ ಬಗ್ಗೆ ಗಮನವಿದೆ
  • ಪುನರಾವರ್ತನೆಗೆ ಪ್ರಾಮುಖ್ಯತೆ
  • ಕಲಿಸಲು ಕಲಾತ್ಮಕವಾದ ವಸ್ತುಗಳ ಬಳಕೆ
  • ಪದಕೋಶ, ವ್ಯಾಕರಣ, ಲಿಪಿ, ಸಂಸ್ಕೃತಿಗಳನ್ನು ಜೊತೆ ಜೊತೆಯಾಗಿಯೇ ಕಲಿಯುವ ಅವಕಾಶ
  • ಯುಎಸ್ಎ ಮತ್ತು ಯುಕೆಯ ವಿವಿಧ ಪ್ರದೇಶಗಳಲ್ಲೀಗಾಗಲೇ ಈ ಪಠ್ಯಕ್ರಮವನ್ನು ಅಳವಡಿಸಿಕೊಳ್ಳಲಾಗಿದೆ
ಅಮೆರಿಕೆಯಲ್ಲಿರುವ ನನ್ನ ಗೆಳೆಯನೊಬ್ಬ ಅವನಿರುವ ಊರಿನ ಕನ್ನಡ ಸಂಘದಲ್ಲಿ ಕನ್ನಡ ಕಲಿಕೆ ಕ್ಲಾಸುಗಳಿಗೆ ಒಳ್ಳೆಯ ಪುಸ್ತಕಗಳನ್ನು ಸಲಹೆ ಮಾಡು ಎಂದು ಕೇಳಿದ್ದ. ಆಗ ಇದು ನೆನಪಿಗೆ ಬಂದು ಅವನಿಗೆ ಹೇಳಿದ್ದೆ. ಅನಂತರ ಅವನು ಸ್ವತಃ ಲೇಖಕರ ಬಳಿ ಮಾತಾಡಿ ಇದರಲ್ಲಿನ ಕಲಿಕಾಕ್ರಮದ ಬಗ್ಗೆ ತಿಳಿದುಕೊಂಡು, ಇದು ಒಳ್ಳೆಯ ಕ್ರಮ ಎಂದು ಮನಗಂಡು ಇಲ್ಲಿಂದ ಪುಸ್ತಕಗಳನ್ನು ರವಾನೆ ಮಾಡಲು ಕೇಳಿಕೊಂಡಿದ್ದ. ಈ ಪುಸ್ತಕಗಳು ಸದ್ಯಕ್ಕೆ ಯಾವ ಅಂಗಡಿಗಳಲ್ಲೂ ಸಿಗುವುದಿಲ್ಲವಾದ್ದರಿಂದ ಕನ್ನಡ ಅಭಿವೃದ್ಧಿ ಪ್ರಾಧಿಕಾರದಿಂದಲೇ ಖರೀದಿಸಿ ಕಳಿಸಿಕೊಟ್ಟೆ. 

ಪ್ರಾಧಿಕಾರದ ಜಾಲತಾಣದಲ್ಲಿ ಪರಾಮರ್ಶೆಗಾಗಿ ಇದರ ಪಿಡಿಎಫ್ ಕಾಪಿಗಳಿವೆ. ಆದರೆ ಬಣ್ಣದ ಮುದ್ರಣ ಅಗತ್ಯ.(https://kannadapraadhikaara.karnataka.gov.in/info-4/KDA/kn)


ಪುಸ್ತಕ ಕೊಳ್ಳಲು ಸಂಪರ್ಕ ಮಾಹಿತಿ: 

https://kannadapraadhikaara.karnataka.gov.in/page/Contact/Department+Head+Office/kn






ಮಂಗಳವಾರ, ಜನವರಿ 1, 2019

'ಪುಸ್ತಕಪ್ರೇಮಿ' ಎಂಬ ಅಕ್ಷರಪ್ರೀತಿಯ ಬ್ಲಾಗ್

https://pustakapremi.wordpress.com: ಇದು ಪುಸ್ತಕಪ್ರೇಮಿ ಬ್ಲಾಗ್ . ಒಂದೂವರೆ ವರ್ಷದ ಹಿಂದೆ ಶುರುಮಾಡಿದ ಬ್ಲಾಗ್ ಇದು. ಇದರಲ್ಲಿ ಇವತ್ತಿನವರೆಗೆ ಸುಮಾರು 900 ಪೋಸ್ಟುಗಳಿವೆ. ವಿಶೇಷವೆಂದರೆ ಎಲ್ಲವೂ ಪುಸ್ತಕಗಳಿಗೆ ಸಂಬಂಧಿಸಿದ್ದು.
'ನಾನೊಬ್ಬ ಪುಸ್ತಕ ಪ್ರೇಮಿ' ಅನ್ನುವ ಫೇಸ್ಬುಕ್ ಗುಂಪನ್ನು ಸುಮಾರು ಆರು ವರ್ಷಗಳಿಂದ ನಡೆಸಿಕೊಂಡು ಬರುತ್ತಿದ್ದೇವೆ. ಅದರಲ್ಲಿ ನೂರಾರು ಸದಸ್ಯರು ತಾವು ಓದಿದ ಪುಸ್ತಕಗಳ ಬಗ್ಗೆ ಪರಿಚಯ/ವಿಮರ್ಶೆ ಹಾಕುತ್ತಿರುತ್ತಾರೆ ಮತ್ತು ಸಂಬಂಧಿಸಿದ ಹಲವು ಮಾಹಿತಿಗಳನ್ನು ಹಂಚಿಕೊಳ್ಳುತ್ತೇವೆ. ಪ್ರಕಾಂಡ ಓದುಗರೂ, ಅನೇಕ ಲೇಖಕರೂ ಅದರಲ್ಲಿದ್ದಾರೆ. ತುಂಬ ಒಳ್ಳೆಯ ಮಾಹಿತಿಗಳು ಅದರಲ್ಲಿ ಅನೇಕ ಜನರಿಂದ ಹಾಕಲ್ಪಡುತ್ತಿದ್ದವು. ಆದರೆ ಫೇಸ್ಬುಕ್ಕಿನ ಅನಾನುಕೂಲ ಅಥವಾ ಮಿತಿ ಏನಂದರೆ ಪೋಸ್ಟ್ ಗಳು ಕಾಲಕ್ರಮೇಣ ಹಾಗೇ ಕಳೆದುಹೋಗಿಬಿಡುತ್ತಿದ್ದವು. ಹಾಗಾಗಿ ಅಲ್ಲಿ ಪ್ರಕಟವಾಗುವ ಉಪಯುಕ್ತವಾದ ಬರಹಗಳನ್ನು ಒಂದು ವ್ಯವಸ್ಥಿತ ರೂಪದಲ್ಲಿ ಅಂತರಜಾಲದಲ್ಲಿ ಸಂಗ್ರಹಿಸಿಟ್ಟು ಅದು ಮುಕ್ತವಾಗಿ ಓದಲು ಸಿಗುವಂತೆ, ಗೂಗಲ್‍ನಂತಹ ಶೋಧಕ ಯಂತ್ರಗಳಿಗೆ ಸಿಗುವಂತೆ ಮಾಡಲು ಬ್ಲಾಗ್ ತಾಣ ಒಳ್ಳೆಯದೆಂಬ ಯೋಚನೆ ನನಗೆ ಬಂದಿದ್ದು ೨೦೧೭ರಲ್ಲಿ. ಅದರಂತೆ ‘ಪುಸ್ತಕ ಪ್ರೇಮಿ’ ಬ್ಲಾಗನ್ನು ರಚಿಸಿದೆ. ಮೊದಮೊದಲು ನಾನು ನಿಯಮಿತವಾಗಿ ಬರಹಗಳನ್ನು ಸಂಗ್ರಹಿಸಿಡುತ್ತಿದ್ದೆ. ಆಮೇಲೆ ಕಾರಣಾಂತರಗಳಿಂದ ಸಮಯದ ಕೊರತೆಯಾಗಿ ಬ್ಲಾಗ್ ಕೆಲಸ ಸಾಧ್ಯವಾಗಲಿಲ್ಲ. ಹಲವು ದಿನಗಳು ಮಿತ್ರ ಮೋಹನ್ ಕುಮಾರ್ ಸಹಾಯ ಮಾಡಿದರು. ಅನೇಕ ಮಿತ್ರರು ಕೈಜೋಡಿಸಿದರು. ಈಗ ಒಂದು ಆರುತಿಂಗಳುಗಳ ಹಿಂದೆ ಶಶಿಕಿರಣ್ ಎಂಬ ಸಹೃದಯಿ ಗೆಳೆಯರೊಬ್ಬರ ಪ್ರವೇಶವಾದಮೇಲೆ ನಿಯಮಿತವಾಗಿ ಬರಹಗಳು ಸಂಗ್ರಹಿಸಲ್ಪಡುತ್ತಿವೆ. ಅವರೇ ಬ್ಲಾಗನ್ನು ನಡೆಸುತ್ತಿದ್ದಾರೆ. ಫೇಸ್ಬುಕ್ ಸಮುದಾಯದಲ್ಲಿ ಪ್ರಕಟವಾಗುವ ಪೋಸ್ಟುಗಳನ್ನು ಆ ಬ್ಲಾಗಿನಲ್ಲಿ ಹಾಕಿಡಲಾಗುತ್ತಿದೆ. ಪುಸ್ತಕಗಳ ಬಗ್ಗೆ ಭರಪೂರ ಮಾಹಿತಿಯ ತಾಣವೊಂದನ್ನು ಮಾಡಿ ನಡೆಸುತ್ತಿರುವ ಖುಶಿ ನಮಗಿದೆ. ಕನ್ನಡದಲ್ಲಿ ಇಷ್ಟು ಪುಸ್ತಕಗಳ ಬಗ್ಗೆ ಮಾಹಿತಿಯುಳ್ಳ ತಾಣ ಬೇರೆ ಇಲ್ಲ ಅಂತಲೇ ಹೇಳಬಹುದು.

****

ಇಂದು ೨೦೧೮ನೇ ಇಸವಿಯ ಕೊನೇ ದಿನ. ನನ್ನ ಓದಿನ ಬಗ್ಗೆ ಹೇಳುವುದಾದರೆ ಈಗಿನ ಒಂದು ದಶಕದಲ್ಲಿ ಅತಿ ಕಡಿಮೆ ಪುಸ್ತಕಗಳನ್ನು ಓದಿದ್ದು ಈ ವರ್ಷ.  ಪುಸ್ತಕ ಖರೀದಿಯನ್ನು ಜೋರಾಗಿ ಮಾಡಿದ್ದರೂ ಸಹ ಓದಲು ಸಾಧ್ಯವಾಗಿದ್ದು ಕೇವಲ ೯-೧೦ ಪುಸ್ತಕಗಳು ಮಾತ್ರ!  ಕಾರಣಗಳು ಹಲವಾರು. ಬಹುತೇಕ ವೈಯಕ್ತಿಕ. ಮುಂದಿನ ದಿನಗಳಲ್ಲಿ ಓದು ಹೆಚ್ಚುತ್ತದೆ ಎಂಬ ಆಶಾಭಾವನೆಯೊಂದಿಗೆ ೨೦೧೯ನ್ನು ಸ್ವಾಗತಿಸುತ್ತಿದ್ದೇನೆ.


ಬುಧವಾರ, ಜುಲೈ 4, 2018

ವಿಕಿಪೀಡಿಯ ತರಬೇತಿ ೨೦೧೮ @ ರಾಂಚಿ

ಈ ಬಾರಿ ಜಾರ್ಖಂಡ್ ರಾಜ್ಯದ ’ರಾಂಚಿ’ ನಗರದಲ್ಲಿ ವಿಕಿಪೀಡಿಯಾದ ’ಮುಂದುವರೆದ ತರಬೇತಿ ಕಾರ್ಯಾಗಾರ’ವನ್ನು (Wikipedia Advanced Training, 2018) ಆಯೋಜಿಸಲಾಗಿತ್ತು. ವಿಕಿಪೀಡಿಯಾ ಒಂದು ಸ್ವತಂತ್ರ ವಿಶ್ವಕೋಶವಾಗಿದ್ದು ನಾನು ಕನ್ನಡ ವಿಕಿಪೀಡಿಯಾಗೆ ಮಾಹಿತಿ ತುಂಬುವ ಕೆಲಸವನ್ನು ಹಲವು ವರ್ಷಗಳಿಂದ ಮಾಡುತ್ತಾ ಬಂದಿದ್ದೇನೆ. ವಿಕಿಗೆ ಸಾಮಾನ್ಯವಾಗಿ ಮಾಹಿತಿ ತುಂಬಿಸಲು ಬೇಸಿಕ್ ಮಟ್ಟದ ಎಡಿಟಿಂಗ್ ತಿಳುವಳಿಕೆ ಸಾಕಾಗುತ್ತದೆ. ಆದರೆ ಹಾಗೇ ಮುಂದುವರೆಯುತ್ತಾ ಹೋದಂತೆ ಅದರಲ್ಲಿ ಕಲಿಯಲು ಮತ್ತು ತಿಳಿದುಕೊಳ್ಳಲು ಬಹಳಷ್ಟಿರುತ್ತದೆ. ಉತ್ತಮ ಗುಣಮಟ್ಟದ ಲೇಖನಗಳನ್ನು, ಪುಟಗಳನ್ನು ತಯಾರಿಸಲು ಹಲವು ವಿಷಯಗಳನ್ನು ತಿಳಿದುಕೊಂಡು ಅದಕ್ಕೆ ತಕ್ಕುದಾಗಿ ವಿಕಿಪೀಡಿಯಾದಲ್ಲಿ ಮಾಹಿತಿಗಳನ್ನು ತುಂಬಿಸಬೇಕಾಗುತ್ತದೆ. ಅನೇಕ ವಿಷಯಗಳಿಗೆ ಒಂದು ಮಟ್ಟದ ತಾಂತ್ರಿಕ ಜ್ಞಾನ ಅಥವಾ ಅದನ್ನು ಅರ್ಥಮಾಡಿಕೊಳ್ಳುವ ಆಸಕ್ತಿ ಅಗತ್ಯ.

ವಿಕಿಪೀಡಿಯಾಗೆ ಸಂಬಂಧಿಸಿದಂತೆ ತರಬೇತಿ, ಸಮುದಾಯ ಕಟ್ಟುವಿಕೆ ಮುಂತಾದ ಚಟುವಟಿಕೆಗಳನ್ನು ಬೆಂಬಲಿಸುತ್ತಿರುವ ಸೆಂಟರ್ ಫಾರ್ ಇಂಟರ್ನೆಟ್ ಅಂಡ್ ಸೊಸೈಟಿ-A2K ವಿಭಾಗವು ಈ ಮುಂದುವರೆದ ವಿಕಿಪೀಡಿಯ ತರಬೇತಿ ಬಗ್ಗೆ ಹಿಂದಿನ ತಿಂಗಳು ಘೋಷಣೆ ಮಾಡಿತ್ತು. ಇದು ಮೂರು ದಿನಗಳ ಕಾಲ ನಡೆಯುವ ತರಬೇತಿಯಾಗಿದ್ದು ಎಲ್ಲಾ ಭಾರತೀಯ ಭಾಷೆಗಳ ವಿಕಿಪೀಡಿಯರನ್ನ ಆಹ್ವಾನಿಸಲಾಗಿತ್ತು. ಹಿಂದೆ ಕೆಲಬಾರಿ ಬೇರೆಬೇರೆ ಸ್ಥಳಗಳಲ್ಲಿ ಈ ಮುಂದುವರೆದ ತರಬೇತಿಗಳು ನಡೆದಿದ್ದರೂ ಸಹ ನನಗೆ ಹೋಗಲು ಆಗಿರಲಿಲ್ಲ. ಈ ಬಾರಿ ತಾರೀಖುಗಳು ಹೊಂದಾಣಿಕೆಯಾಗುತ್ತಿದ್ದುದರಿಂದ ನಾನು ಕೂಡ ಅರ್ಜಿ ಸಲ್ಲಿಸಿದ್ದೆ. ಅರ್ಜಿ ಸಲ್ಲಿಕೆ ಮತ್ತು ಆಯ್ಕೆಗೆ ವಿಕಿಪೀಡಿಯಾಗೆ ನಾವು ಮಾಡಿದ ಕೆಲಸಗಳಿಗೆ ಸಂಬಂಧಿಸಿದಂತೆ ಕೆಲವು ಮಾನದಂಡಗಳಿದ್ದವು. ಕನ್ನಡ ಸಮುದಾಯದಿಂದ ನಾನು ಮತ್ತು ಮಲ್ಲಿಕಾರ್ಜುನ್ ಆಯ್ಕೆಯಾಗಿರುವುದಾಗಿ ಕೆಲದಿನಗಳ ನಂತರ ತಿಳಿಸಿದರು.

ರಾಂಚಿಯ ’ಬಿರ್ಸಾ ಮುಂಡಾ’ ವಿಮಾನ ನಿಲ್ದಾಣ
ಈ ಬಾರಿ ಈ ತರಬೇತಿಯನ್ನು ’ರಾಂಚಿ’ಯಲ್ಲಿ ನಡೆಸಲು ಕಾರಣವಿತ್ತು. ಮೊದಲನೆಯದಾಗಿ, ವಿಕಿಪೀಡಿಯಾಗೆ ಬಹಳ ಕೆಲಸ ಮಾಡಿ, ಭಾರತದ ಉತ್ತಮ ವಿಕಿಮೀಡಿಯನ್ ಎಂದು ಗುರುತಿಸಲ್ಪಟ್ಟಿದ್ದ ’ಗಂಗಾಧರ ಭದಾನಿ’ಯವರು ರಾಂಚಿಯವರಾಗಿದ್ದು ಈ ವರ್ಷ ಜನವರಿಯಲ್ಲಿ ನಿಧನರಾಗಿದ್ದರು. ಅವರ ಗೌರವಾರ್ಥವಾಗಿ ರಾಂಚಿಯಲ್ಲಿ ಆಯೋಜನೆಯಾಗಿತ್ತು. ಎರಡನೆಯದಾಗಿ ಭಾರತದ ಪೂರ್ವಭಾಗದಲ್ಲಿ ವಿಕಿಚಟುವಟಿಕೆಗಳನ್ನು ನಡೆಸುವ ಉದ್ದೇಶವೂ ಇತ್ತು. ಜೂನ್ ೨೮ನೇ ತಾರೀಖು ಬೆಂಗಳೂರಿಂದ ಹೊರಟು ರಾಂಚಿಯನ್ನು ತಲುಪಿದೆವು. ವಿಮಾನ ನಿಲ್ದಾಣದಿಂದ ಎಂಟು ಕಿಮೀ ದೂರದಲ್ಲಿರುವ ’ಲೇ ಲ್ಯಾಕ್ ಸರೋವರ್ ಪೋರ್ಟಿಕೊ’ ಹೋಟೆಲ್ ತಲುಪಿದೆವು. ತಮಿಳು, ತೆಲುಗು, ಮಲಯಾಳಂ, ಬೆಂಗಾಳಿ, ಹಿಂದಿ, ಮರಾಠಿ, ಪಂಜಾಬಿ, ಗುಜರಾತಿ, ಸಂಸ್ಕೃತ, ಒಡಿಯಾ, ಇಂಗ್ಲೀಷ್ ವಿಕಿಪೀಡಿಯನ್ನರೂ ಸೇರಿ ಒಟ್ಟು ಮೂವತ್ತು ಜನ ಬಂದಿದ್ದರು.  ಅಂದು ಸಂಜೆ ಪೂರ್ವಭಾವಿ ಸೆಶನ್ ಇತ್ತು. ಪರಸ್ಪರ ಪರಿಚಯ, ತರಬೇತಿ ಕಾರ್ಯಕ್ರಮದ ಬಗ್ಗೆ ಮಾಹಿತಿ, ಕಾರ್ಯಸೂಚಿ ಇತ್ಯಾದಿಗಳನ್ನು ಕೊಡಲಾಯಿತು.

ತರಬೇತಿ ಸೆಶನ್ - ಒಂದು ನೋಟ
ಮಾರನೆಯ ದಿನ ಬೆಳಗ್ಗೆ ಹತ್ತು ಗಂಟೆಗೆ ಶುರುವಾದ ತರಬೇತಿಯು ನಡುವಿನ ಚಹಾ ವಿರಾಮ ಮತ್ತು ಊಟದ ವಿರಾಮದೊಂದಿಗೆ ಸಂಜೆಯವರೆಗೂ ನಡೆಯಿತು. ವಿಕಿಗೆ ಸಂಬಂಧಿಸಿದಂತೆ ಹಲವು ವಿಷಯಗಳ ಬಗ್ಗೆ, ಟೂಲ್ ಗಳ ಬಗ್ಗೆ ತಿಳಿಸಿಕೊಡಲಾಯಿತು. ಬೇರೆ ಬೇರೆ ಭಾಷೆಯ ವಿಕಿಪೀಡಿಯನ್ನರು ಅವರ ಭಾಷೆಯ ವಿಕಿಪೀಡಿಯಾಗಳ ಬಗ್ಗೆ, ನಡೆಯುತ್ತಿರುವ ಚಟುವಟಿಕೆಗಳ ಬಗ್ಗೆ ಮಾಹಿತಿ, ಅನುಭವಗಳನ್ನು ಹಂಚಿಕೊಂಡರು. ಹಿರಿಯ ವಿಕಿಪೀಡಿಯನ್ನರಾಗಿದ್ದ ಗಂಗಾಧರ ಬದಾನಿಯವರ ಕುಟುಂಬವನ್ನು ಸಂಜೆ ಆಹ್ವಾನಿಸಲಾಗಿತ್ತು. ಭದಾನಿಯವರ ಸ್ಮರಣಾರ್ಥವಾಗಿ ಒಂದು ಚಿಕ್ಕ ಸಭೆ ನಡೆಸಿ ಗೌರವ ಸಲ್ಲಿಸಲಾಯಿತು. ಇಂಗ್ಲೀಷ್ ವಿಕಿಪೀಡಿಯಾದಲ್ಲಿ ಅವರು ಮಾಡಿದ ಎಡಿಟ್ ಎಣಿಕೆ ಎರಡೂವರೆ ಲಕ್ಷಕ್ಕೂ ಮೀರಿದ್ದು ಆ ವಯಸ್ಸಿನಲ್ಲಿ ಅವರು ಸಲ್ಲಿಸಿದ ಕಾಣಿಕೆ ಮತ್ತು ಅನೇಕ ಕಿರಿಯ ವಿಕಿಪೀಡಿಯನ್ನರಿಗೆ ಕೊಟ್ಟ ಪ್ರೋತ್ಸಾಹಗಳನ್ನು ನೆನಪಿಸಿಕೊಳ್ಳಲಾಯಿತು. 

ಮೊದಲ ದಿನದ ತರಬೇತಿಯಲ್ಲಿ ಸಮಯದ ಅಭಾವದಿಂದ ಎರಡ್ಮೂರು ವಿಷಯಗಳು ಬಿಟ್ಟುಹೋದದ್ದರಿಂದ ಅನಂತರದ ದಿನ ಬೆಳಗ್ಗೆ ಒಂಬತ್ತು ಗಂಟೆಗೇ ಸೇರಿದೆವು. ಅಂದು ಕೂಡ ಹಲವು ತರಬೇತಿ ಮತ್ತು ಮಾಹಿತಿ ಸೆಶನ್ ಗಳು ನಡೆದವು. ಆಯಾ ವಿಕಿಪೀಡಿಯನ್ನರು ತಮ್ಮ ಭಾಷೆಯ ವಿಕಿಗಾಗಿ ಮುಂದೆ ಯಾವ ರೀತಿ ಯೋಜನೆಗಳನ್ನು ಹಮ್ಮಿಕೊಳ್ಳಲು ಬಯಸುತ್ತಾರೆ ಎಂಬುದನ್ನು ಪ್ರೆಸೆಂಟ್ ಮಾಡಲು ಹೇಳಲಾಯಿತು. ಕನ್ನಡ ವಿಕಿಪೀಡಿಯಕ್ಕಾಗಿ ಹಾಕಿಕೊಳ್ಳಬಹುದಾದ ಯೋಜನೆಯ ಬಗ್ಗೆ ನಾವು ಪ್ರೆಸೆಂಟ್ ಮಾಡಿದೆವು.  ಕೆಲವು hands on activityಗಳು ನಡೆದವು.
ಕನ್ನಡ ಸಮುದಾಯದ ಪರವಾಗಿ ನಾನು ಮತ್ತು ಮಲ್ಲಿಕಾರ್ಜುನ್
ಒಡಿಯಾ, ಗುಜರಾತಿ, ಸಂಸ್ಕೃತ ವಿಕಿಪೀಡಿಯನ್ನರು
ಕನ್ನಡ ವಿಕಿಗಾಗಿ ನಾವು ತೋರಿಸಿದ ನಮ್ಮ ಯೋಚನೆ
ಕೊನೆಯ ದಿನದ ತರಬೇತಿ ಅರ್ಧ ದಿನಕ್ಕೆ ಮಾತ್ರ ಸೀಮಿತವಾಗಿದ್ದು ಒಂದೆರಡು ವಿಷಯಗಳ ಮಾಹಿತಿ ಹಂಚಿಕೆ ನಡೆಯಿತು. ಎರಡು ದಿನಗಳಲ್ಲಿ ನಡೆದ ತರಬೇತಿಯ ವಿಷಯಗಳ ಬಗ್ಗೆ ಮೆಲುಕು, ಬೇಕಾದಲ್ಲಿ ಹೆಚ್ಚಿನ ಮಾಹಿತಿ, ಮುಂದಿನ ಯೋಜನೆಗಳ ಬಗ್ಗೆ ಮಾತುಕತೆ, ಅಭಿಪ್ರಾಯ, ಹಿನ್ನುಣಿಕೆಗಳನ್ನು ಹಂಚಿಕೊಳ್ಳಲಾಯಿತು.
ಉತ್ತಮ ಲೇಖನಕ್ಕೆ ಬೇಕಾದ ಅಂಶಗಳ
ಬಗ್ಗೆ ನಡೆದ ಒಂದು brain storming ಸಂಗ್ರಹ ರೂಪ
ಬೇರೆ ಬೇರೆ ರಾಜ್ಯಗಳಿಂದ ಬಂದಿದ್ದ ವಿಕಿಪೀಡಿಯನ್ನರು ಮಧ್ಯಾಹ್ನ ವಾಪಸ್ ಹೊರಟರು. ನಾವು ಕೂಡ ಎರಡು ಗಂಟೆಗೆ ಅಲ್ಲಿಂದ ಹೊರಟು ನಾಲ್ಕೂ ಇಪ್ಪತ್ತರ ವಿಮಾನದಲ್ಲಿ ಸಂಜೆ ಆರೂವರೆ ವೇಳೆಗೆ ಬೆಂಗಳೂರು ವಿಮಾನ ನಿಲ್ದಾಣ ತಲುಪಿದೆವು. ಭಾರತದ ವಿವಿಧ ಭಾಗಗಳ, ಬೇರೆ ಬೇರೆ ಭಾಷೆಗಳ ವಿಕಿಪೀಡಿಯರೊಡನೆ ಸಂವಾದ, ಹಲವು ಹೊಸ ವಿಷಯಗಳ ಬಗ್ಗೆ ತಿಳಿದುಕೊಂಡಿದ್ದು, ಕಲಿತುಕೊಂಡಿದ್ದು, ತೆಲುಗು, ತಮಿಳಿನ ಹಿರಿಯ ವಿಕಿಪೀಡಿಯನ್ನರ ಭೇಟಿಗಳು ಒಟ್ಟಾರೆ ಒಳ್ಳೆಯ ಅನುಭವ, ಖುಷಿ ಕೊಟ್ಟಿತು. ಕನ್ನಡ ವಿಕಿಮೀಡಿಯ ಯೋಜನೆಗಳಿಗೆ ಹೆಚ್ಚಿನ ಕೆಲಸ ಮಾಡಲು ಈ ತರಬೇತಿ ಶಿಬಿರವು ಉತ್ಸಾಹ ತುಂಬಿತು.


ಮಂಗಳವಾರ, ಮೇ 1, 2018

ಬೆಂಗಳೂರಿನ ಶಿಲಾಶಾಸನಗಳಲ್ಲಡಗಿದೆ ಇತಿಹಾಸ!

ನಾಲ್ಕೈದು ವರ್ಷದ ಹಿಂದೆ ಪತ್ರಿಕೆಯೊಂದರಲ್ಲಿ ಬೆಂಗಳೂರಿನ ಬೇಗೂರಿನ ದೇವಸ್ಥಾನದಲ್ಲಿರುವ ಶಾಸನವೊಂದರ ಬಗ್ಗೆ ಲೇಖನ ಓದಿದ್ದೆ. ’ಬೆಂಗಳೂರು’ ಎಂಬ ಹೆಸರು ಅದರಲ್ಲಿ ಉಲ್ಲೇಖವಾಗಿದೆಯೆಂದೂ, ಅದು ಸುಮಾರು ೯ನೇ ಶತಮಾನದ ಶಾಸನವಾಗಿದ್ದು ಬೆಂಗಳೂರು ಎಂಬ ಹೆಸರಿನ ಬಗ್ಗೆ ಒಂದು ಪ್ರಮುಖ ಪುರಾವೆಯೆಂದೂ ಹೇಳಲಾಗಿತ್ತು. ಅದರಲ್ಲಿ ’ಗಂಗರು’ ಮತ್ತು ’ನೊಳಂಬ’ರ ನಡುವೆ ನಡೆದ ’ಬೆಂಗಳೂರು ಕದನ’ದ ಬಗ್ಗೆ ಹೇಳಲಾಗಿದೆ. ’ಬೆಂಗಳೂರು’ ಎಂಬ ಹೆಸರಿನ ಹುಟ್ಟಿನ ಬಗ್ಗೆ ಅನೇಕ ದಂತಕತೆಗಳೂ, ವಾದಗಳೂ ಇವೆಯಾದರೂ ಇನ್ನೂ ಯಾವುದೂ ಖಚಿತವಾಗಿ ಹೇಳಲು ಸಾಧ್ಯವಾಗಿಲ್ಲ. ಆದರೆ ಒಂಬತ್ತನೇ ಶತಮಾನದಲ್ಲೇ ’ಬೆಂಗಳೂರು’ ಎಂಬ ಪದ ಉಲ್ಲೇಖವಾಗಿರುವುದು ಕುತೂಹಲಕಾರಿಯಾಗಿತ್ತು.

ಬೇಗೂರು ಶಿಲಾಶಾಸನದ ಚಿತ್ರ.
ಇದರಲ್ಲಿ ಬಣ್ಣದ ಅಕ್ಷರದಲ್ಲಿರುವುದು ’ಬೆಂಗಳೂರು’ ಎಂಬ ಪದ
ನಾನಿರುವ ಪ್ರದೇಶದ, ಊರಿನ ಇತಿಹಾಸದ ಬಗ್ಗೆ ನನಗೆ ಯಾವತ್ತಿಗೂ ಆಸಕ್ತಿ, ಕುತೂಹಲ ಇದೆ.  ಈ ಬೆಂಗಳೂರು ಇಂದು ನಗರೀಕರಣಗೊಂಡು ಅಡ್ಡಾದಿಡ್ಡಿ ಕಟ್ಟಡಗಳಿಂದ ತುಂಬಿಹೋಗಿದೆ. ಆದರೆ ಹಿಂದೆ ಇದು ಕೂಡ ಹಳ್ಳಿಗಳ, ಕೋಟೆಗಳ ತಾಣವಾಗಿತ್ತು ಎಂಬುದು ಸತ್ಯ. ಅನೇಕ ಪಾಳೇಗಾರರು, ರಾಜರು ಆಳಿದ್ದಾರೆ, ಯುದ್ಧಗಳೂ ನಡೆದಿವೆ.

ಏಪ್ರಿಲ್ ತಿಂಗಳಲ್ಲಿ ಬೆಂಗಳೂರಿನ ’ಸೆಂಟರ್ ಫಾರ್ ಇಂಟರ್ನೆಟ್ ಅಂಡ್ ಸೊಸೈಟಿ’ಯಲ್ಲಿ ಒಂದು ವಿಕಿಪೀಡಿಯ ಕಾರ್ಯಾಗಾರವಿತ್ತು. ನಾನು ಕೂಡ ಕನ್ನಡ ವಿಕಿಪೀಡಿಯದಲ್ಲಿ ಮಾಹಿತಿಗಳನ್ನು ಸೇರಿಸುವ ಕೆಲಸವನ್ನು ಹವ್ಯಾಸವನ್ನಾಗಿ ಮಾಡುತ್ತಿರುವುದರಿಂದ ಆ ಕಾರ್ಯಾಗಾರದಲ್ಲಿ ಭಾಗವಹಿಸಿದ್ದೆ. ಅವತ್ತಿನ ದಿನ ಮಧ್ಯಾಹ್ನ ಶಿಲಾಶಾಸನಗಳ ಬಗ್ಗೆ ಒಂದು ಸೆಶನ್ ಏರ್ಪಡಿಸಿದ್ದರು. ಉದಯ್ ಕುಮಾರ್ ಮತ್ತು ವಿನಯ್ ಎನ್ನುವ ಸಂಪನ್ಮೂಲ ವ್ಯಕ್ತಿಗಳಿಬ್ಬರು ಬಂದಿದ್ದರು.  ಸುಮಾರು ಒಂದು ಒಂದೂವರೆ ಗಂಟೆಗಳ ಅವತ್ತಿನ ಆ ಸೆಶನ್ ನಿಜಕ್ಕೂ ಒಂದು ಹೊಸಲೋಕವನ್ನೇ ತೆರೆದಿಟ್ಟಿತ್ತು. ಅವರು ಪ್ರದರ್ಶಿಸಿದ  ಒಂದು ವೀಡಿಯೋ ದೃಶ್ಯವು ಒಂದು ಅರ್ಧ ಕಟ್ಟಿದ ಕಟ್ಟಡದಿಂದ ಶುರುವಾಗುತ್ತದೆ. ಹಾಗೆಯೇ ಕ್ಯಾಮರಾ ಚಲಿಸುತ್ತಾ ಆ ಕಟ್ಟಡದ ಪಕ್ಕದಿಂದ ಹೋಗಿ ಹಿಂಭಾಗದಲ್ಲಿ ಒಂದು ಓಣಿಯನ್ನು ಪ್ರವೇಶಿಸುತ್ತದೆ. ಅಲ್ಲಿ ನೋಡಿದರೆ ಕಟ್ಟಡ ತ್ಯಾಜ್ಯ ಇತ್ಯಾದಿ ಕಸದಿಂದ ತುಂಬಿದೆ. ಹಾಗೆಯೇ ಮುಂದುವರೆದರೆ ಅಲ್ಲೇ ನಡುವಿನಲ್ಲಿ ನೇರವಾಗಿ ನಿಲ್ಲಿಸಿರುವ ಎರಡು ಕಲ್ಲುಗಳು. ಹತ್ತಿರಕ್ಕೆ ಜೂಮ್ ಮಾಡಿದರೆ ಅದರಲ್ಲಿ ಅಸ್ಪಷ್ಟವಾಗಿ ಕಾಣುವ ಅಕ್ಷರಗಳು. ಸೂಕ್ಷವಾಗಿ ನೋಡಿದರೆ, ಹಳೆಗನ್ನಡ ಬರೆವಣಿಗೆ!  ಇತಿಹಾಸದ ಪ್ರಮುಖ ದಾಖಲೆಯಾಗಬೇಕಿದ್ದ ಶಿಲಾಶಾಸನವೊಂದು ನಗರೀಕರಣದ ಹೊಡೆತಕ್ಕೆ ಸಿಕ್ಕು ದುಃಸ್ಥಿತಿಗಿಳಿದಿರುವ ಚಿತ್ರಣದ ಒಂದು ತುಣುಕು ಅದು.  ಇಲ್ಲಿಂದ ಶುರುಮಾಡಿ ಉದಯ ಕುಮಾರ್ ಅವರು ಬೆಂಗಳೂರಿನ ಶಿಲಾಶಾಸನಗಳ ಬಗ್ಗೆ ವಿವರಿಸುತ್ತಾ ಹೋದರು. ಅವುಗಳಲ್ಲಿ ಸಿಗುವ ಕೆಲವೇ ಕೆಲವು ವಾಕ್ಯಗಳು ಹೇಗೆ ಇತಿಹಾಸ, ಆಗಿನ ಕಾಲದ ನಂಬುಗೆಗಳು, ಸಾಮಾಜಿಕ ಪರಿಸ್ಥಿತಿ, ಆಡಳಿತ, ತಿಳಿವಳಿಕೆ, ಪ್ರಚಲಿತವಾಗಿದ್ದ ಭಾಷೆಗಳು ಇತ್ಯಾದಿಗಳ ಬಗ್ಗೆ ಬೆಳಕು ಚೆಲ್ಲಬಹುದು ಎಂಬುದನ್ನು ವಿವರಿಸಿದರು.  ಉದಯ್ ಮತ್ತು ವಿನಯ್ ಇಬ್ಬರೂ ಸೇರಿ ಬೆಂಗಳೂರಿನ ಇಂತಹ ಶಿಲಾಶಾಸನಗಳನ್ನು ರಕ್ಷಿಸುವ ಕೆಲಸದಲ್ಲಿ ತೊಡಗಿದ್ದಾರೆ. ಇದರ ಬಗ್ಗೆ ಜನರಲ್ಲಿ ಜಾಗೃತಿ ಮೂಡಿಸುತ್ತಿದ್ದಾರೆ.  ಅವರ ಪ್ರಯತ್ನ ಮತ್ತು ಕೆಲಸ ನೋಡಿ ಧನ್ಯವೆನಿಸಿತು.

ಎಫಿಗ್ರಾಫಿಯಾ ಕಾರ್ನಾಟಿಕಾ ಎಂಬುದು ಕರ್ನಾಟಕದ ಶಿಲಾಶಾಸನಗಳನ್ನು ದಾಖಲಿಸಿಟ್ಟಿರುವ ಗ್ರಂಥ. ಬಿ. ಎಲ್. ರೈಸ್ ಎನ್ನುವ ಪುಣ್ಯಾತ್ಮರೊಬ್ಬರು ದಶಕಗಟ್ಟಲೇ ತಿರುಗಾಡಿ ಸುಮಾರು ಎಂಟು ಸಾವಿರ ಶಾಸನಗಳ ಪ್ರತಿಯನ್ನು, ಅದರಲ್ಲಿನ ಪಠ್ಯವನ್ನು ಸಂಗ್ರಹಿಸಿಟ್ಟಿದ್ದಾರೆ. ಬ್ರಿಟಿಷ್ ಅಧಿಕಾರಿಯಾಗಿ ಅವರು ಮಾಡಿರುವ ಕೆಲಸ ಚಿರಸ್ಮರಣೀಯ.  ಈ ಎಪಿಗ್ರಾಫಿಯಾ ಗ್ರಂಥದಲ್ಲಿ ಉಲ್ಲೇಖಿಸಿರುವ ಶಾಸನಗಳ ಇರುವೆಡೆಗಳನ್ನಾಧರಿಸಿ ಉದಯ ಮತ್ತು ವಿನಯ್ ಅವುಗಳನ್ನು ಹುಡುಕಿ ಒಳ್ಳೆಯ ಸ್ಥಿತಿಗೆ ತಂದು ಸಂರಕ್ಷಿಸುತ್ತಿದ್ದಾರೆ.  ಜೊತೆಗೆ ಆ ಹಳ್ಳಿಯ, ಪ್ರದೇಶದ ಜನರಿಗೆ ಅವುಗಳ ಬಗ್ಗೆ ಅರಿವು ಮೂಡಿಸಿ ಇದು ಅಮೂಲ್ಯವೆಂದು ಮನವರಿಕೆ ಮಾಡಿಕೊಡುವ ಪ್ರಯತ್ನದಲ್ಲಿದ್ದಾರೆ. ಈ ಸಂರಕ್ಷಣಾ ಕೆಲಸವನ್ನು ಯುನೆಸ್ಕೋ ಕೂಡ ಗುರುತಿಸಿ ಮೆಚ್ಚುಗೆ ವ್ಯಕ್ತಪಡಿಸಿರುವುದು ಇಲ್ಲಿ ಗಮನಾರ್ಹ. ೧೯೦೫ರಲ್ಲಿ ಪ್ರಕಟವಾದ ಆ ಗ್ರಂಥದಲ್ಲಿ ಬೆಂಗಳೂರು ಜಿಲ್ಲೆಯಲ್ಲಿ ಇಂತಹ ಸುಮಾರು ೧೫೦ ಶಾಸನಗಳು ದಾಖಲಾಗಿವೆ.  ಆದರೆ ದುಃಖದ ವಿಷಯ ಎಂದರೆ ಅವುಗಳಲ್ಲಿ ಈಗ ಉಳಿದಿರುವುದು ಕೇವಲ ೩೫ ಮಾತ್ರ! ಅವು ಕೂಡ ನಿರ್ಲಕ್ಷ ಕ್ಕೊಳಗಾಗಿ ಕಣ್ಮರೆಯಾಗುವ ಆತಂಕದಲ್ಲಿವೆ. 

ಇಂತಹ ಶಾಸನಗಳ ಬಗ್ಗೆ ವಿಕಿಪೀಡಿಯ ಪುಟಗಳನ್ನು ರಚಿಸಿ ಆ ಮಾಹಿತಿ ಎಲ್ಲರಿಗೂ ದೊರಕುವಂತೆ ಮಾಡುವ ಯೋಜನೆ ಮಾಡಲಾಯಿತು. ಈಗ ಉಳಿದಿರುವ ಶಾಸನಗಳು ಎಲ್ಲೆಲ್ಲಿವೆ ಎಂಬುದನ್ನು ಜಿಯೋ ಟ್ಯಾಗಿಂಗ್ ಮಾಡಿ kml file ಮಾಡಿದ್ದಾರೆ. ಗೂಗಲ್ ಮ್ಯಾಪಿನಲ್ಲಿ ಅದನ್ನು ಲೋಡ್ ಮಾಡಿದಾಗ ಶಾಸನಗಳ ಇರುವೆಡೆಗಳನ್ನು ನೋಡಬಹುದು. ಆಧುನಿಕ ತಂತ್ರಜ್ಞಾನಗಳನ್ನು ಬಳಸಿ ಅವುಗಳ ಮೂರು ಆಯಾಮದ ಪ್ರತಿಗಳನ್ನೂ ರೂಪಿಸುತ್ತಿದ್ದಾರೆ.  ಕೆಲವು ಶಾಸನಗಳ ಮೂರು ಆಯಾಮದ ಚಿತ್ರಗಳನ್ನು ಇಲ್ಲಿ ನೋಡಬಹುದು.

ಶನಿವಾರ, ಏಪ್ರಿಲ್ 7, 2018

ಕನ್ನಡದಲ್ಲಿ ಡಬ್ಬಿಂಗ್ ಸಿನೆಮಾಗಳ ’ಆರಂಭಂ’

19 ನವೆಂಬರ್ 2017 ರಂದು ಫೇಸ್ಬುಕ್ಕಲ್ಲಿ ಬರೆದದ್ದು.

'ಧೀರ' ಎಂಬ ಸಿನೆಮಾವನ್ನು ಬೆಂಗಳೂರಿನ ಹೊಸಕೆರೆಹಳ್ಳಿಯ ಕೋಕಿಲಾ ಟಾಕೀಸಲ್ಲಿ ನೋಡಿದೆ. ಅದರಲ್ಲೇನು ವಿಶೇಷ ಅಂತ‌ ನೀವು ಕೇಳಬಹುದು. ಮೂಲತಃ ಇದೊಂದು ತಮಿಳು ಸಿನೆಮಾ, 'ಆರಂಭಂ' ಅಂತ ಹೆಸರು. ಕನ್ನಡಕ್ಕೆ ಡಬ್ ಆಗಿ 'ಧೀರ'ನಾಗಿದೆ. ಅದೇನು ದೊಡ್ಡ ವಿಶೇಷ ಅಂತ ಕೇಳ್ತೀರಾ? ಅಲ್ಲೇ ಇರುವುದು ವಿಷಯ. ಸುಮಾರು ೫೦ ವರ್ಷಗಳಿಂದ‌ ಕನ್ನಡದ ಯಾವುದೇ‌ ಡಬ್ಬಿಂಗ್ ಸಿನೆಮಾ ಬೆಂಗಳೂರಲ್ಲಿ‌ ಬಿಡುಗಡೆಯಾಗಿರಲಿಲ್ಲ. ಇಡೀ ಕರ್ನಾಟಕದಲ್ಲೂ ಅಷ್ಟೆ! ಕನ್ನಡ ಚಿತ್ರರಂಗದ ಈ ಸ್ವಯಂ ಮತ್ತು‌ ಬಲವಂತದ ಡಬ್ಬಿಂಗ್ ನಿಷೇಧದ ವಿರುದ್ಧ 'ಕನ್ನಡ ಗ್ರಾಹಕ ಕೂಟ'ದ ಗೆಳೆಯರು ಅನೇಕ ವರ್ಷಗಳ‌ ಕಾಲ ಸುಪ್ರೀಂಕೋರ್ಟ್'ವರೆಗೂ ಕಾನೂನು ಹೋರಾಟ ಮಾಡಿ ಜಯಗಳಿಸಿ ಕನ್ನಡಕ್ಕೆ ಡಬ್ಬಿಂಗ್ ಆದ ಚಿತ್ರಗಳು ತೆರೆಗೆ ಬರುವಂತೆ ಮಾಡಿದ್ದಾರೆ. ಕೆಲತಿಂಗಳ‌ ಹಿಂದೆ ಬಂದಿದ್ದ 'ಸತ್ಯದೇವ ಐಪಿಎಸ್' ಎಂಬ ಸಿನೆಮಾ‌ ಕರ್ನಾಟಕದ ಬೇರೆ ಕಡೆಗಳಲ್ಲಿ ಬಿಡುಗಡೆಯಾಗಿದ್ರೂ ಬೆಂಗಳೂರಲ್ಲಿ ಕೆಲವರ ಗೂಂಡಾಗಿರಿಯಿಂದಾಗಿ ಸಾಧ್ಯವಾಗಿರಲಿಲ್ಲ! ವರ್ಷದ ಹಿಂದೆ 'ನಾನು ನನ್ನ ಪ್ರೀತಿ' ಎಂಬ ಸಿನೆಮಾಗೂ ಕೂಡ ಇದೇ ಗತಿಯಾಗಿತ್ತು. ಈ ಡಬ್ಬಿಂಗ್ ನಿಷೇಧದಿಂದ ಕನ್ನಡಿಗರಿಗಾದ ನಷ್ಟ ದೊಡ್ಡದಿದೆ. ಟೈಟಾನಿಕ್, ಜುರಾಸಿಕ್ ಪಾರ್ಕ್, ಅವತಾರ್, ಜಂಗಲ್ ಬುಕ್, ಸ್ಪೈಡರ್ ಮನ್, ಬಾಹುಬಲಿ ಇಂತಹ ಹಲವಾರು ಸಿನೆಮಾಗಳನ್ನು ಪರಭಾಷಿಕರು ಅವರವರ ಭಾಷೆಗಳಲ್ಲಿ ನೋಡಿ ಆನಂದಿಸಿದರೆ ಕನ್ನಡಿಗರು ಕನ್ನಡದಲ್ಲಿ ನೋಡಲು ಅವಕಾಶವಿಲ್ಲದಂತಾಗಿತ್ತು. ಜ್ಞಾನವಿಜ್ಞಾನ, ಕಾರ್ಟೂನ್ ಮೊದಲಾದ ಟೀವಿ ಚಾನಲ್ ಗಳೂ ಇದಕ್ಕೆ ಹೊರತಾಗಿರಲಿಲ್ಲ.
ಟೀವಿ ಜಾಹೀರಾತುಗಳನ್ನು ನೋಡಿ ನಮ್ಮ‌ ಜನಕ್ಕೆ ಡಬ್ಬಿಂಗ್ ಬಗ್ಗೆ ಆತಂಕ ಇದೆ. ಹಾಗಾಗಿ 'ಧೀರ' ಚಿತ್ರದ ಡಬ್ಬಿಂಗ್ ಕ್ವಾಲಿಟಿ ಬಗ್ಗೆ ಹೇಳಲೇಬೇಕು. ಇದು ಅತ್ಯುತ್ತಮ ಡಬ್ಬಿಂಗ್ ಗೆ ಉದಾಹರಣೆ ಅನ್ನಬಹುದು. ಇದರಲ್ಲಿನ‌ ಸಂಭಾಷಣೆಗಳು, ಹಾಡುಗಳ ಸಾಹಿತ್ಯ,‌ ಲಿಪ್ ಸಿಂಕ್ ಹೇಗಿವೆಯೆಂದರೆ ಒರಿಜಿನಲ್‌ ಕನ್ನಡ ಸಿನೆಮಾವನ್ನೇ ನೋಡುತ್ತಿರುವಂತೆ ಅನಿಸುತ್ತದೆ. ಮುಂಬಯಿ, ಚೆನ್ನೈ, ದುಬೈಗಳಲ್ಲಿ ನಡೆಯುವ ಕತೆಯನ್ನು, ದೃಶ್ಯಗಳನ್ನು ಎಲ್ಲೂ ಕೃತಕವೆನಿಸದಂತೆ ಕನ್ನಡಕ್ಕೆ ತರಲು ಸಂಪೂರ್ಣ ಯಶಸ್ವಿಯಾಗಿದ್ದಾರೆ.
ಕರ್ನಾಟಕದ ಮಾರುಕಟ್ಟೆ ಈಗಾಗಲೇ ಪರಭಾಷಾ ಸಿನೆಮಾಗಳ ಹಾವಳಿಗೆ ತುತ್ತಾಗಿದೆ.‌ ಡಬ್ಬಿಂಗ್ ನಿಷೇಧದ ತೆರವಿನಿಂದಾಗಿ ಪರಭಾಷೆಯ ಸಿನೆಮಾಗಳು, ಹಾಲಿವುಡ್ ನ ಸಿನೆಮಾಗಳು ಕರ್ನಾಟಕದಲ್ಲಿ ಕನ್ನಡದಲ್ಲೇ ಬಿಡುಗಡೆಯಾಗಿ ಪರಭಾಷೆ ಹಾವಳಿ ಕಡಿಮೆಯಾಗಲು ಮತ್ತು ನಮಗೆ ಎಲ್ಲವನ್ನೂ ಕನ್ನಡದಲ್ಲೇ ಪಡೆಯುವ ಹಾದಿಯೂ ತೆರೆದುಕೊಳ್ಳುವಂತಾಗಲು ಮತ್ತು ಆ ಮೂಲಕ‌ ಹಲವಾರು ‌ರೀತಿಯ ಉದ್ಯೋಗ ಸೃಷ್ಟಿಗೆ ಕಾರಣವಾಗಲು ಇದೊಂದು‌ ಪ್ರಾರಂಭದ ಹೆಜ್ಜೆ ಅನ್ನಬಹುದು.
ಈ ಅಸಾಂವಿಧಾನಿಕ ಡಬ್ಬಿಂಗ್ ನಿಷೇಧದ ವಿರುದ್ಧ ಸತತ ಹಲವು ವರ್ಷಗಳ ಕಾಲ ಕಾನೂನು ಹೋರಾಟ ಮಾಡಿ ಯಶಸ್ವಿಯಾದ ಗ್ರಾಹಕ ಕೂಟದ Ganesh Chetan, Arun Javgal ಮುಂತಾದ ಎಲ್ಲಾ ಸ್ನೇಹಿತರಿಗೂ ಮತ್ತು‌ ನಿರ್ಮಾಪಕ Krishna Murthy ಯವರಿಗೂ ಧನ್ಯವಾದಗಳು.
ಅಂದಹಾಗೆ, ಸುಮಾರು ೨೦ ವರ್ಷಗಳ ಹಿಂದೆ ನಾನು ಟಾಕೀಸಿನಲ್ಲಿ ನೋಡಿದ್ದ‌ ಮೊದಲ ತಮಿಳು ಚಿತ್ರ ಕಮಲಹಾಸನ್‌ನ 'ದೇವರ ಮಗನ್'. ಎರಡನೇದು ಅಂದರೆ ಇದೇ 'ಆರಂಭಂ'...*ಧೀರ*ನಾಗಿ !

****
ರಾಜ್ ಬೆಳಗೆರೆಯವರು ಕೊಟ್ಟ ಮಾಹಿತಿ:
Raj Belagere: ಕನ್ನಡದಲ್ಲಿ ಸುಮಾರು 15-16 ವರ್ಷಗಳ ಹಿಂದೆಯೇ ಡಬ್ಬಿಂಗ್ ಚಿತ್ರ ಬಿಡುಗಡೆಯಾಗಿತ್ತು. ತೆಲುಗಿನ ಮೆಕ್ಯಾನಿಕ್ ಮಾವಯ್ಯ ಕನ್ನಡದಲ್ಲಿ ಭಾರತ್ 2000 ಹೆಸರಿನಲ್ಲಿ ಬಿಡುಗಡೆಯಾಗಿತ್ತು. ಅದನ್ನು ಉಪಾಯವಾಗಿ ಕನ್ನಡಕ್ಕೆ ಡಬ್ ಮಾಡಿ ಬಿಡುಗಡೆಮಾಡಲಾಗಿತ್ತು. ಕನ್ನಡದಲ್ಲಿ ನಿರ್ದೇಶಕ ಎಸ್.ವಿ. ರಾಜೇಂದ್ರಸಿಂಗ್ ಇದನ್ನು ಕನ್ನಡಕ್ಕೆ ತಂದಿದ್ದರು. ಈ ಬಗ್ಗೆ ಸ್ವಲ್ಪ ಗಲಾಟೆ ಕೂಡಾ ಆಗಿತ್ತು. ನಿರ್ದೇಶಕ ಸಂಘದಿಂದ ಅವರನ್ನು ಕೆಲವು ಕಾಲ ಬಹಿಷ್ಕಾರ ಹಾಕಲಾಗಿತ್ತು. ಆ ಸಿನೆಮಾ ಒಮ್ಮೆ ನೋಡಿ. ಡಬ್ ಮಾಡಿರುವುದು ಸರಳವಾಗಿ ಗೊತ್ತಾಗುತ್ತೆ. ನಾಯಕ ರಾಜಶೇಖರ, ನಾಯಕಿ ರಂಭಾ.... ರಾಜ್ಯಾದ್ಯಂತ ಟಾಕೀಸ್ ನಲ್ಲಿ ಬಿಡುಗಡೆಯಾಗಿ ಪ್ರದರ್ಶನ ಕೂಡಾ ಕಂಡಿತ್ತು.