ಮಂಗಳವಾರ, ಜನವರಿ 29, 2013

Definition of Wealth !

WEALTH defined by a Bibliophile! :)

What's your definition of Wealth?
 
ಫೇಸ್ ಬುಕ್ಕಲ್ಲಿ ಸಿಕ್ಕ ಈ ಮೇಲಿನ ಚಿತ್ರವನ್ನು ಹಂಚಿಕೊಂಡಿದ್ದೆ.  ಒಬ್ಬ ಪುಸ್ತಕಪ್ರೇಮಿಗೆ 'ಸಂಪತ್ತು' ಅಥವಾ 'ಆಸ್ತಿ' ಎಂದರೆ ಈ ಮೇಲಿನ ಚಿತ್ರದಲ್ಲಿರುವುದು.  ಸಂಪತ್ತಿನ ಬಗ್ಗೆ ನಿಮ್ಮ ವಿವರಣೆ ಏನು? ಎನ್ನುವುದು ಪ್ರಶ್ನೆ. ಅದಕ್ಕೆ ಅಣ್ಣ ಮಹೇಶ ಹೆಗಡೆ ಉತ್ತರಿಸಿದ್ದು ಬಹಳ ಇಷ್ಟವಾಯಿತು. ಅದನ್ನು ಇಲ್ಲಿ ಹಾಕುತ್ತಿದ್ದೇನೆ.
 
Good physical and mental health.

Just enough material resources for decent living.

Plenty of time to do what you really like to do.

Reduced uncertainty. Or to be true, ability to manage uncertainty and not worry about the future.

Company of like minded people for plenty of lighthearted conversation and hearty laughter.



ಈ ಮೇಲಿನ ಅರ್ಥಪೂರ್ಣ ವಿವರಣೆ ಹಾಗೂ ಚಿತ್ರದೊಂದಿಗೆ ಈ ಕ್ಯಾಲೆಂಡರ್ ವರ್ಷದ ಮೊದಲ ಪೋಸ್ಟ್ ! :)

ಅಂದಹಾಗೆ... What's your definition of Wealth? 

ಬುಧವಾರ, ಡಿಸೆಂಬರ್ 12, 2012

ಸಾಮಾಜಿಕ ತಾಣಗಳ ಗೀಳು

ಸೈಬರ್ ಲೋಕದಲ್ಲಿ ಇವತ್ತು ಸೋಶಿಯಲ್ ನೆಟ್ ವರ್ಕ್ ಗಳಲ್ಲಿ ವಿಹರಿಸದೇ ಇರುವವವರು ಅಪರೂಪ. ಫೇಸ್ ಬುಕ್, ಟ್ವಿಟ್ಟರ್, ಲಿಂಕೆಡಿನ್, ಗೂಗಲ್ ಪ್ಲಸ್ ಮುಂತಾದ ಸೋಶಿಯಲ್ ನೆಟ್ ವರ್ಕ್ ಗಳು ಒಂದು ಪರ್ಯಾಯ ಜಗತ್ತಿನಂತೆ ರೂಪುಗೊಂಡಿವೆ. ಕಂಪ್ಯೂಟರ್ ಮತ್ತು ಇಂಟರ್ನೆಟ್ ಎಟುಕಿಸಿಕೊಂಡಿರುವ ಬಹುತೇಕ ಜನ ಈ ಜಗತ್ತಿನ ಪ್ರಜೆಗಳು. ಇತ್ತೀಚಿನ ದಿನಗಳಲ್ಲಿ ಸ್ಮಾರ್ಟ್ ಫೋನ್ ಗಳ ಬಳಕೆ ಹೆಚ್ಚಾದ ಮೇಲಂತೂ ಸೋಶಿಯಲ್ ನೆಟ್ ವರ್ಕ್ ಜಗತ್ತಿನಲ್ಲಿ ಚಟುವಟಿಕೆಗಳು ಬಹಳ ಹೆಚ್ಚಾಗಿ ಹೋಗಿವೆ. ತಮ್ಮ ಅನಿಸಿಕೆಗಳನ್ನು ಎಲ್ಲರಲ್ಲಿ ಹಂಚಿಕೊಳ್ಳುವ ಅವಕಾಶ, ಯಾರ ಹಂಗೂ ಇಲ್ಲದಂತೆ ಒದಗುವ ವೇದಿಕೆ, ತಕ್ಷಣಕ್ಕೇ ಸಿಗುವ ಮೆಚ್ಚುಗೆ, ಪ್ರತಿಕ್ರಿಯೆ, ಗೆಳೆಯರು, ವೃತ್ತಿಪರ ಸಂಪರ್ಕ, ಮಾಹಿತಿ ವಿಚಾರ ವಿನಿಮಯ, ಸಮಾನ ಮನಸ್ಕರು, ಆಸಕ್ತಿಯ ಗುಂಪುಗಳು, ಚರ್ಚೆ ಮುಂತಾದ ಹಲವು ಕಾರಣಗಳಿಂದ ಹೆಚ್ಚು ಹೆಚ್ಚು ಜನ ಇದರ ಆಕರ್ಷಣೆಗೊಳಗಾಗುತ್ತಿದ್ದಾರೆ. ವಿದ್ಯಾರ್ಥಿಗಳು, ಉದ್ಯೋಗಿಗಳು, ಗೃಹಿಣಿಯರೂ ಸೇರಿದಂತೆ ಬಹಳ ಜನ ಈ ಸೋಶಿಯಲ್ ನೆಟ್ ವರ್ಕು ಗಳನ್ನು ಬಳಸುತ್ತಿದ್ದಾರೆ. ಹೊಸ ಹೊಸ ಗೆಳೆತನ, ಪ್ರೊಫೆಶನಲ್ ಸಂಪರ್ಕಗಳು, ವಿವಿಧ ಚಟುವಟಿಕೆಗಳು, ಸಾಮಾಜಿಕ ಸಾಂಸ್ಕೃತಿಕ ಕಾರ್ಯಕ್ರಮಗಳಿಗೆ ಸಹಾಯವಾಗುತ್ತಿರುವ ಈ ಸಾಮಾಜಿಕ ತಾಣಗಳು ಮತ್ತೊಂದೆಡೆ ಸಂಬಂಧಗಳು ಹಾಳಾಗಲು, ಮೋಸ ವಂಚನೆಗಳಿಗೆ, ದ್ವೇಷ ಹರಡಲು, ಭಾವನೆಗಳನ್ನು ಕಲಕಲು ಕೂಡ ಕಾರಣವಾಗುತ್ತಿರುವು ಅಷ್ಟೇ ಸತ್ಯ.

ಜಗತ್ತಿನಲ್ಲಿ ಇವತ್ತು ವಿವಿಧ ಸೋಶಿಯಲ್ ನೆಟ್ ವರ್ಕ್ ಗಳಲ್ಲಿ ಕೋಟ್ಯಂತರ ಜನರ ಖಾತೆಗಳಿವೆ. ಮಾಹಿತಿಯ ಪ್ರಕಾರ ಇದರಲ್ಲಿ ಅರ್ಧಕ್ಕಿಂತಲೂ ಹೆಚ್ಚು ಜನ ದಿನಾ ತಮ್ಮ ಖಾತೆಗಳಿಗೆ ಲಾಗಿನ್ ಆಗುತ್ತಾರೆಂದರೆ ಈ ತಾಣಗಳ ಸೆಳೆತವನ್ನು ಊಹಿಸಬಹುದು. ಸರ್ವೆಗಳ ವರದಿ ಪ್ರಕಾರ ಈ ತಾಣಗಳಲ್ಲಿ ಸಕ್ರಿಯರಾಗಿವವರು ದಿನವೂ ಒಂದು ಗಂಟೆಗಿಂತಲೂ ಹೆಚ್ಚು ಕಾಲ ಇದರಲ್ಲಿ ಕಳೆಯುತ್ತಾರೆ. ಇಡೀ ಜಗತ್ತಿನೆಲ್ಲೆಡೆ ತೆಗೆದುಕೊಂಡರೆ ಈ ಸಮಯದ ಮೊತ್ತ ದಿನಕ್ಕೆ ಲಕ್ಷಾಂತರ ಗಂಟೆಗಳು. ಇದನ್ನು ಸಮಯದ ಬಳಕೆ ಎನ್ನಬೇಕೋ ಅಥವಾ ಸಮಯದ ಪೋಲು ಎನ್ನಬೇಕೋ ಅನ್ನುವ ಗೊಂದಲ ಮೂಡಿಸುತ್ತದೆ. ಇದನ್ನು ಬಳಸುವವರಲ್ಲಿ ಹಲವರು ಬೆಳಗ್ಗೆ ನಿದ್ದೆಯಿಂದ ಎದ್ದು ಎಲ್ಲಾ ಕೆಲಸಗಳಿಗಿಂತ ಮೊದಲು ಈ ತಾಣಗಳನ್ನು ನೋಡುವ, ಮತ್ತೂ ಕೆಲವರು ರಾತ್ರಿ ಎಚ್ಚರವಾದಾಗಲೂ ಈ ತಾಣಗಳಲ್ಲಿ ಕಣ್ಣುಹಾಯಿಸುವ ಅಭ್ಯಾಸ ಹೊಂದಿದ್ದಾರೆ ಅನ್ನುವುದು ತಿಳಿದುಬಂದಿದೆ. ಒಟ್ಟಾರೆ ಇದನ್ನು ರಚನಾತ್ಮಕವಾಗಿ ಬಳಸಲು ವಿಫಲರಾಗುತ್ತಿರುವ ಹಲವರು ಇದರ ವ್ಯಸನಕ್ಕೆ ಒಳಗಾಗುತ್ತಿದ್ದಾರೆ. ನಿಜ ಜೀವನದಲ್ಲಿ ಒಂದು ವ್ಯಕ್ತಿತ್ವ ಹೊಂದಿರುವ ವ್ಯಕ್ತಿ ಸೋಶಿಯಲ್ ನೆಟ್ ವರ್ಕುಗಳಲ್ಲಿ ಬೇರೆ ರೀತಿಯಲ್ಲಿ ವರ್ತಿಸುವುದು, ವಿಭಿನ್ನ ಇಮೇಜ್ ರೂಪಿಸಿಕೊಳ್ಳುವುದು, ಅಗ್ರೆಸ್ಸಿವ್ ಮತ್ತು ಅಹಂಕಾರೀ ಮನೋಭಾವ, ಅಲ್ಲಿನ ಚಟುವಟಿಕೆಗಳನ್ನು ವೈಯಕ್ತಿಕ ಸಂಬಂಧಗಳಿಗೂ ಲಿಂಕ್ ಮಾಡುವುದು, ನೇರ ಸಂಪರ್ಕ ಸಾಧ್ಯವಿದ್ದವರ ಜೊತೆಗೂ ಕೂಡ ಈ ತಾಣಗಳಿಂದಲೇ ಸಂವಹಿಸುವುದು, ಇವುಗಳನ್ನೇ ತಮ್ಮ ಜಗತ್ತು ಎಂಬಂತೆ ಮುಳುಗಿರುವುದು ಮುಂತಾದ ವಿಚಿತ್ರ ವರ್ತನೆಗಳು ಕಂಡು ಬರುತ್ತಿವೆ. ಇದರಿಂದ ಅವರಿಗೇ ಗೊತ್ತಿಲ್ಲದಂತೆ ಅವರ ವೈಯಕ್ತಿಕ ಮತ್ತು ವೃತ್ತಿ ಜೀವನದ ಮೇಲೆ, ದೈಹಿಕ ಮತ್ತು ಮಾನಸಿಕ ಆರೋಗ್ಯದ ಮೇಲೆ ಪರಿಣಾಮಗಳಾಗುತ್ತಿವೆ.

ನೀವು ಅಡಿಕ್ಟ್ ಆಗಿದ್ದೀರಾ?

ಹಾಗಿದ್ದರೆ ಈ ಸೋಶಿಯಲ್ ನೆಟ್ ವರ್ಕ್ ಗಳು ಅಷ್ಟು ತೊಂದರೆ ಮಾಡುತ್ತವಾ? ಅಥವಾ ಅದನ್ನು ಬಳಸುವುದರಲ್ಲಿ ತಪ್ಪು ಮಾಡುತ್ತಿದ್ದೇವಾ ಎಂಬ ಪ್ರಶ್ನೆ ಏಳುತ್ತದೆ. ಅದರಲ್ಲಿ ಯಾವುದೇ ವಿಶೇಷ ಕೆಲಸವಿಲ್ಲದಿದ್ದಾಗಲೂ ದಿನಕ್ಕೆ ಅರ್ಧದಿಂದ ಒಂದು ಗಂಟೆಗಿಂತಲೂ ಹೆಚ್ಚು ಕಾಲ ಕಳೆಯುವುದು, ಪದೇ ಪದೇ ಅವುಗಳನ್ನು ತೆಗೆದು ನೋಡುವ ತವಕ, ತಮ್ಮ ಎಲ್ಲಾ ಅನಿಸಿಕೆಗಳನ್ನು, ಭಾವನೆಗಳನ್ನು, ಚಟುವಟಿಕೆಗಳನ್ನು ಅದರಲ್ಲಿ ಬರೆದು ಹಾಕಿಕೊಳ್ಳುವುದು, ಜನರ ಜೊತೆ ಇದ್ದಾಗಲೂ ಸೋಶಿಯಲ್ ನೆಟ್ವರ್ಕುಗಳಲ್ಲಿ ಮುಳುಗಿರುವುದು, ಯಾರೊಂದಿಗೂ ಬೆರೆಯದೇ ಒಂಟಿತನ ಬಯಸಿ ಆ ತಾಣಗಳಲ್ಲಿ ಸಕ್ರಿಯನಾಗಿರುವುದು, ಇವುಗಳಿಗೇ ಹೆಚ್ಚಿನ ಸಮಯ ಮತ್ತು ಮಹತ್ವ ಕೊಟ್ಟು ದಿನದ ಇತರ ಕೆಲಸಗಳ ಬಗ್ಗೆ ಉದಾಸೀನತೆ ಹೊಂದಿರುವುದು ಮತ್ತು ಕೆಲಸಗಳನ್ನು ಮುಂದಕ್ಕೆ ಹಾಕುವುದು ಮುಂತಾದವುಗಳು ಒಬ್ಬ ವ್ಯಕ್ತಿ ಈ ಸೋಶಿಯಲ್ ತಾಣಗಳಿಗೆ ಅಡಿಕ್ಟ್ ಆಗಿರುವ ಲಕ್ಷಣಗಳನ್ನು ತೋರಿಸುತ್ತವೆ. ಬರೀ ಯುವಜನಾಂಗಕ್ಕೆ ಸೀಮಿತವಾಗಿರದೇ ಈ ವ್ಯಸನ ಮೂವತ್ತೈದು ವರ್ಷ ವಯಸ್ಸಿನ ನಂತರದ ವ್ಯಕ್ತಿಗಳಲ್ಲೂ ಹೆಚ್ಚಾಗುತ್ತಿರುವುದು ವಿಶೇಷ !

ಇದರಿಂದ ಹೊರಬರೋದು ಹೇಗೆ?

ಮೊದಲನೆಯದಾಗಿ, ನಮ್ಮನ್ನು ನಾವೇ ಪರೀಕ್ಷಿಸಿಕೊಳ್ಳಬೇಕು. ಎಷ್ಟು ಕಾಲ ಇದರಲ್ಲಿ ಕಳೆಯುತ್ತಿದ್ದೇನೆ? ಸುಮ್ಮನೇ ಟೈಂಪಾಸಿಗೆ ಮಾಡುತ್ತಿದ್ದೇನಾ ಅಥವಾ ಅಗತ್ಯವಿದ್ದು ಬಳಸುತ್ತಿದ್ದೇನಾ? ಎರಡನೆಯದಾಗಿ, ನಿಜಕ್ಕೂ ಈ ಚಟ ನಮ್ಮಲ್ಲಿದೆ ಅನ್ನಿಸಿದರೆ ಅದನ್ನು ಒಪ್ಪಿಕೊಳ್ಳಬೇಕು. ಮೂರನೆಯದಾಗಿ, ಇದರಿಂದ ಹೊರಬರುವ ದೃಢ ನಿರ್ಧಾರ ಮಾಡಬೇಕು.

೧. ದಿನನಿತ್ಯದ ಬದುಕಿನ ಎಲ್ಲಾ ಕೆಲಸಗಳಿಗೆ ಮೊದಲ ಆದ್ಯತೆ ಕೊಟ್ಟು ನಂತರ ಬಿಡುವಿನ ಸಮಯದಲ್ಲಷ್ಟೇ ಸೋಶಿಯಲ್ ನೆಟ್ ವರ್ಕ್ ಗಳನ್ನು ನೋಡುವ ನಿರ್ಧಾರ ಮಾಡಿಕೊಳ್ಳಿ. ದಿನದ ನಿರ್ದಿಷ್ಟ ಸಮಯದಲ್ಲಿ ಇಷ್ಟು ಹೊತ್ತು ಮಾತ್ರ ನೋಡುತ್ತೇನೆ ಎಂಬ ತೀರ್ಮಾನ ಇನ್ನೂ ಒಳ್ಳೆಯದು. ಆದರೆ ಅದು ಕೂಡ ಬಿಡುವಿನ ಸಮಯದಲ್ಲಿ ಮಾತ್ರ ಇರಲಿ.

೨. ಕಾಲೇಜಿನಲ್ಲಿ, ಕ್ಲಾಸ್ ರೂಮಿನಲ್ಲಿ, ಆಫೀಸಿನಲ್ಲಿ ಪದೇ ಪದೇ ಸೋಶಿಯಲ್ ನೆಟ್ ವರ್ಕು ಗಳನ್ನು ತೆಗೆದು ನೋಡುವ, ಅವುಗಳಲ್ಲಿ ತೊಡಗುವ ಅಭ್ಯಾಸ ಖಂಡಿತ ಒಳ್ಳೆಯದಲ್ಲ. ಇದು ಸಮಯವನ್ನು ಹಾಳುಮಾಡುವುದಲ್ಲದೇ, ನಿಮ್ಮ ಗಮನ, ಏಕಾಗ್ರತೆಯನ್ನು ಬೇರೆಡೆಗೆ ಸೆಳೆದು ಕೆಲಸದ ಸಾಮರ್ಥ್ಯವನ್ನೂ ಕುಗ್ಗಿಸುತ್ತವೆ. ಆದ್ದರಿಂದ ಈ ಅಭ್ಯಾಸಕ್ಕೆ ಬ್ರೇಕ್ ಹಾಕಿ.

೩. ನಿಮ್ಮ ಎಲ್ಲಾ ಚಟುವಟಿಕೆಗಳನ್ನು, ಊಟ ತಿಂಡಿಯಂತಹ ಸಾಮಾನ್ಯ ಸಂಗತಿಗಳನ್ನು, ಅಲ್ಲಿ ಇಲ್ಲಿ ತಿರುಗಾಡಿದ್ದನ್ನು, ಕಂಡಿದ್ದನ್ನು, ಮನಸಿಗೆ ಬರುವ ಪ್ರತಿಯೋಚನೆಯನ್ನು ಹಂಚಿಕೊಳ್ಳುತ್ತಿದ್ದರೆ ಅದು ಕಸದಬುಟ್ಟಿಯಂತಾಗುತ್ತದೆ. ಇದಕ್ಕೆ ಕಡಿವಾಣ ಹಾಕಿ. ದಿನಾ ಹತ್ತಾರು ಫೋಟೋಗಳನ್ನು ಹಾಕುವುದು, ಅದಕ್ಕೆ ಬರುವ ಮೆಚ್ಚುಗೆಗಳಿಂದ ಸಂಭ್ರಮಿಸುವುದು, ಪ್ರತಿಕ್ರಿಯೆಗೆ ಉತ್ತರಿಸುವುದು ಖುಶಿ ಕೊಟ್ಟಂತೆ ಅನ್ನಿಸಿದರೂ ಸಹ ಅವು ನಿಮ್ಮನ್ನು ಒಂದು ಮಾನಸಿಕ ಬೌಂಡರಿಯೊಳಗೆ ಬಂಧಿಸಿಬಿಡುತ್ತವೆ.

೪. ಸುಮ್ಮನೇ ಹೊತ್ತು ಕಳೆಯಲು ಸೋಶಿಯಲ್ ನೆಟ್ ವರ್ಕ್ ತಾಣಗಳಲ್ಲಿ ತೊಡಗಿಕೊಳ್ಳಬೇಡಿ. ಬದಲಾಗಿ ಒಳ್ಳೆಯ ಹವ್ಯಾಸಗಳನ್ನು ಬೆಳೆಸಿಕೊಳ್ಳಿ. ಔಟ್ ಡೋರ್ ಚಟುವಟಿಕೆಗಳಲ್ಲಿ ತೊಡಗಿಕೊಳ್ಳಿ. ಹೊರಹೋಗಿ ಜನರ ಜೊತೆ, ಗೆಳೆಯರ ಜೊತೆ ಬೆರೆಯಿರಿ. ಮನೆಯಲ್ಲಿದ್ದಾಗ ಕುಟುಂಬ ಸದಸ್ಯರೊಡನೆ ಮಾತಾಡಿ.

೫. ದೇಶದ ಎಲ್ಲಾ ಘಟನೆಗಳ ಬಗ್ಗೆ, ರಾಜಕೀಯ ವಿದ್ಯಮಾನಗಳ ಬಗ್ಗೆ ಪರಿಣಿತನಂತೆ ನಿಮ್ಮ ಅಭಿಪ್ರಾಯ ಹೇಳಲು ಹೋಗಬೇಡಿ. ಇದು ಜಾಸ್ತಿಯಾದರೆ ನಿಮ್ಮ ಅಭಿಪ್ರಾಯಗಳಿಗೆ ನಿಮ್ಮ ಮಿತ್ರರ ವಲಯದಲ್ಲೇ ಬೆಲೆ ಕಳೆದುಹೋಗುತ್ತದೆ. ಕ್ರಿಕೆಟ್, ಸಿನೆಮಾ ಮುಂತಾದವುಗಳ ಲೈವ್ ಕಾಮೆಂಟ್ರಿ ಕೊಡುವುದು ಇತರರಿಗೆ ಕಿರಿಕಿರಿಯುಂಟುಮಾಡುತ್ತದೆ.

೬. ಸಮಯ ಪ್ರಜ್ಞೆ ಮತ್ತು ಸಾಮಾಜಿಕ ಪ್ರಜ್ಞೆ ಇರಲಿ. ಧಾರ್ಮಿಕ, ಸಾಮಾಜಿಕ ಭಾವನೆಗಳನ್ನು ಕೆರಳಿಸುವ, ಇತರರಿಗೆ ನೋವುಂಟುಮಾಡುವ , ದ್ವೇಷ ಹರಡುವಂತಹ ಚಟುವಟಿಕೆಗಳನ್ನು ಮಾಡಬೇಡಿ. ಇಂತಹ ಚಟುವಟಿಕೆಗಳಿಂದ ಕಾನೂನಿನ ಪ್ರಕಾರವೂ ನೀವು ಅಪರಾಧಿಯಾಗಬಹುದು.

೭. ಹೆಚ್ಚು ಗುಂಪುಗಳಿಗೆ ಸೇರಿಕೊಳ್ಳಬೇಡಿ. ಅನಗತ್ಯ ಚರ್ಚೆಗಳಲ್ಲಿ ತೊಡಗಬೇಡಿ. ಚರ್ಚೆಗಳು ಸಮಯ ತಿನ್ನುವುದಲ್ಲದೇ ವೈಯಕ್ತಿಕ ಮಟ್ಟಕ್ಕೂ ಹೋಗಿ ವಿರಸ ಉಂಟುಮಾಡುವ ಸಾಧ್ಯತೆಗಳಿರುತ್ತವೆ.

೮. ಆನ್ ಲೈನ್ ಚಾಟಿಂಗ್ ಆಫ್ ಇಟ್ಟುಕೊಳ್ಳಿ. ಬೇಕಾದಾಗ ಮಾತ್ರ ಲಾಗಿನ್ ಆಗಿ. ಇದರಿಂದ ಸುಮ್ಮನೇ ಯಾರೋ ಪಿಂಗ್ ಮಾಡುವುದು, ಅದಕ್ಕೆ ಉತ್ತರಿಸುತ್ತಾ ಕೂತು ಕಾಲಕಳೆಯುವುದು ತಪ್ಪುತ್ತದೆ.

೯. ಈ ಸೋಶಿಯಲ್ ತಾಣಗಳಲ್ಲೇ ಹೆಚ್ಚು ಹೊತ್ತು ಕಳೆಯುವ, ದಿನವೂ ಹತ್ತಾರು ಸಂದೇಶ, ಚಿತ್ರಗಳನ್ನು ಹಾಕುವ, ಹಂಚಿಕೊಳ್ಳುವ ಜನರನ್ನು ನಿಮ್ಮ ಗೆಳೆಯರ ಪಟ್ಟಿಯಿಂದ ತೆಗೆದುಹಾಕಿ. ಇದು ನಿಮ್ಮ ಸಮಯ ಉಳಿಸಲು ಸಹಾಯವಾಗುತ್ತದೆ.

೧೦. ಬೇರೆ ಮುಖ್ಯ ಅಸೈನ್ ಮೆಂಟ್ ಗಳಿದ್ದಾಗ ಆ ಅವಧಿಯಲ್ಲಿ ನಿಮ್ಮ ಸಾಮಾಜಿಕ ತಾಣಗಳ ಖಾತೆಯನ್ನು ತಾತ್ಕಾಲಿಕವಾಗಿ ನಿಷ್ಕ್ರಿಯಗೊಳಿಸಿಕೊಳ್ಳಿ.

೧೧. ಈ ಯಾವುದನ್ನೂ ಪಾಲಿಸಲೂ ಆಗುತ್ತಿಲ್ಲ ಎಂದಾಗ ಗಟ್ಟಿ ಮನಸ್ಸುಮಾಡಿ ನಿಮ್ಮ ಖಾತೆಯನ್ನು ಡಿಲೀಟ್ ಮಾಡಿಬಿಡಿ. ಮುಂದೆ ಮತ್ತೆ ಬೇಕೆನಿಸಿದಾಗ ಮತ್ತೆ ತೆರೆಯಬಹುದು. ನಿಮ್ಮವರೆಲ್ಲರೂ ಇದ್ದೇ ಇರುತ್ತಾರೆ.

ಒಟ್ಟಿನಲ್ಲಿ ಈ ಸಾಮಾಜಿಕ ತಾಣಗಳು ಒಂದು ಮಿಥ್ಯಾಜಗತ್ತು ಎಂಬ ಸ್ಪಷ್ಟ ಅರಿವು ನಿಮಗಿರಲಿ. ನಿಮ್ಮ ವ್ಯಕ್ತಿತ್ವವನ್ನು ಅರಳಿಸುವ ರೀತಿಯಲ್ಲಿ ಮತ್ತು ಜ್ಞಾನ ಹೆಚ್ಚಿಸುವ ರೀತಿಯಲ್ಲಿ ಬಳಸಿಕೊಳ್ಳಿ. ನಿಮ್ಮ ಸಮಯ ಅಮೂಲ್ಯ. ಯಾವುದೇ ಕಾರಣಕ್ಕೂ ಸೋಶಿಯಲ್ ನೆಟ್ ವರ್ಕ್ ಗಳು ವೈಯಕ್ತಿಕ ಬದುಕಿಗಿಂತ ಹೆಚ್ಚಾಗುವುದು ಬೇಡ.

***

ಈ ಬರಹ ನಾಲ್ಕುನೂರು ಪದಗಳ ಮಿತಿಯಲ್ಲಿ ೬ ಡಿಸೆಂಬರ್ ೨೦೧೨ ರ ವಿಜಯಕರ್ನಾಟಕ ಲವಲವಿಕೆ ಪುರವಣಿಯಲ್ಲಿ ಪ್ರಕಟವಾಗಿದ್ದು ಹೀಗೆ : ಲಗಾಮಿಲ್ಲದ ಸೈಬರ್ ಯಾನ

ಭಾನುವಾರ, ನವೆಂಬರ್ 11, 2012

ಪದ ತಂತ್ರಾಂಶ - Pada Software (Indic word processor & IME)

ಕಂಪ್ಯೂಟರಲ್ಲಿ ಕನ್ನಡದ ಬಳಕೆ ದಿನೇ ದಿನೇ ಹೆಚ್ಚಾಗುತ್ತಿದೆ. ಅಂತರಜಾಲದಲ್ಲಿ ಸದ್ಯಕ್ಕೆ ಕನ್ನಡ ವೆಬ್ ಸೈಟುಗಳ ಸಂಖ್ಯೆ ಕಡಿಮೆ ಇದ್ದರೂ ಕೂಡ ಓದುಗರ ಸಂಖ್ಯೆ ಕಡಿಮೆ ಇಲ್ಲ. ಬಹಳಷ್ಟು ಜನ ಕಂಪ್ಯೂಟರ್ನಲ್ಲಿ ಕನ್ನಡದಲ್ಲಿ ಬರೆಯಲು ಬಯಸುತ್ತಿದ್ದಾರೆ. ಕೆಲವರು ಒತ್ತಕ್ಷರ, ದೀರ್ಘ, ಮಹಾಪ್ರಾಣ ಮುಂತಾದ ಟೈಪಿಂಗ್ ಸ್ವಲ್ಪ ಸಮಸ್ಯೆಯಾಗಿ ಹಿಂಜರಿಯುತ್ತಿದ್ದಾರೆ. ಆದರೂ ಕೂಡ ಉತ್ಸಾಹಿಗಳಿಗೇನೂ ಕಡಿಮೆ ಇಲ್ಲ. ಬಹಳ ಸುಲಭವಾಗಿ ನೇರವಾಗಿ ಎಲ್ಲಿ ಬೇಕಾದರೂ ಕನ್ನಡದಲ್ಲಿ ಬರೆಯಲು ಗೂಗಲ್, ಮೈಕ್ರೋಸಾಫ್ಟ್, ಪ್ರಮುಖ್ ಮುಂತಾದ ಹಲವು IME ಟೂಲ್ ಗಳಿವೆ.  ನುಡಿ, ಪದ, ಬರಹದ IME ಜೊತೆಗೆ ಪದ ಸಂಸ್ಕಾರಕಗಳೂ (Word Processors) ಇವೆ. ಆನ್ ಲೈನ್ ನಲ್ಲಿ ಬರೆಯಲು ಹಲವು ಟೂಲ್ ಗಳಿವೆ. ಸಾಮಾನ್ಯ ಬಳಕೆದಾರರಿಗೆ ಈಗ ಯಾವ ತಾಂತ್ರಿಕ ಸಮಸ್ಯೆ ಇಲ್ಲ. ಬೇಕಾಗಿರುವುದು ಸ್ವಲ್ಪ ಆಸಕ್ತಿ, ಅಭ್ಯಾಸ ಅಷ್ಟೆ.  ಈ ಮೊದಲು ವ್ಯಾಪಕವಾಗಿ ಬಳಕೆಯಲ್ಲಿದ್ದ 'ಬರಹ' ತಂತ್ರಾಂಶ ಆವೃತ್ತಿ ಹತ್ತರ ಬಳಿಕ ಉಚಿತವಾಗಿ ಲಭ್ಯವಿಲ್ಲ. ಅದರಲ್ಲಿ ಹೆಚ್ಚಿನ ಅಭಿವೃದ್ಧಿ ಕಾರ್ಯಗಳಿಗಾಗಿ ಸಂಪನ್ಮೂಲ ಒಟ್ಟುಮಾಡಲು ಸದ್ಯಕ್ಕೆ ಬರಹ ತಂತ್ರಾಂಶಕ್ಕೆ ಶುಲ್ಕವಿಡಲಾಗಿದೆ ಎಂದು ಹೇಳಲಾಗಿದೆ. ಮತ್ತೊಂದು ಬಹುಬಳಕೆಯ 'ನುಡಿ' ತಂತ್ರಾಂಶದಲ್ಲಿ ಕೆಲವು ಸೌಲಭ್ಯಗಳಿಲ್ಲ. (ಕನ್ನಡ ಬರೆಯಲು ಇರುವ ಹಲವು ತಂತ್ರಾಂಶ ಹಾಗೂ ಟೂಲ್ ಗಳ ಬಗ್ಗೆ ಹಿಂದೊಮ್ಮೆ ಬರೆದಿದ್ದೆ.  ಅದು ಇಲ್ಲಿದೆ: Kannada Typing in Computers).


ಈ ಸಂದರ್ಭದಲ್ಲಿ 'ಪದ' ತಂತ್ರಾಂಶದ ಹೊಸ ಆವೃತ್ತಿ (Pada 4.0) ಬಿಡುಗಡೆಯಾಗಿದೆ. ಕನ್ನಡ ಸೇರಿದಂತೆ ಹಲವು ಭಾರತೀಯ ಭಾಷೆಗಳಲ್ಲಿ ಬರೆಯಲು ಸಾಧ್ಯವಿರುವ ಈ ತಂತ್ರಾಂಶದಲ್ಲಿ ಮುಖ್ಯವಾಗಿ ಕನ್ನಡಕ್ಕೆ ಹಲವು ರೀತಿಯ ವಿಶೇಷ ಸೌಲಭ್ಯಗಳಿವೆ. ಸ್ಪೆಲ್ ಚೆಕರ್, ಪದ ಅರ್ಥ, ಆಟೋ ಕಂಪ್ಲೀಟ್ ಸೌಲಭ್ಯಗಳಿವೆ. ಮೊತ್ತಮೊದಲ ಬಾರಿಗೆ ಎರಡು ಲಕ್ಷಕ್ಕೂ ಹೆಚ್ಚು ಪದಗಳನ್ನುಳ್ಳ ನಿಘಂಟು ಕೂಡ ಇದರಲ್ಲಿದೆ. ಟೈಪಿಸಿದ ಕಡತಗಳನ್ನು ಹಲವು ರೀತಿಯಲ್ಲಿ ಉಳಿಸಲು(save as) ಅವಕಾಶವಿದೆ. ಹಲವು ಬಗೆಯ ಅಕ್ಷರ ಶೈಲಿಗಳಿವೆ (Font styles). ಪದ ತಂತ್ರಾಂಶ ಅಳವಡಿಸಿಕೊಂಡಾಗ ಅದರ ಜೊತೆ ಪದ IME ಕೂಡ ಇರುತ್ತದೆ. ಇದನ್ನು ಆನ್ ಮಾಡಿಕೊಂಡು ವರ್ಡ್, ಎಕ್ಸೆಲ್ ಮುಂತಾದ ಯಾವುದೇ ಅಪ್ಲಿಕೇಶನ್ ಗಳಲ್ಲಿ ಹಾಗೂ ಇಮೇಲ್, ಚಾಟ್, ಫೇಸ್ ಬುಕ್, ಬ್ಲಾಗ್ ಮುಂತಾದ ಯಾವುದೇ ಅಂತರಜಾಲ ತಾಣಗಳಲ್ಲಿ ನೇರವಾಗಿ ಕನ್ನಡದಲ್ಲಿ ಟೈಪಿಸಬಹುದು.  http://www.pada.pro ತಾಣದಲ್ಲಿ ಈ ತಂತ್ರಾಂಶ ಉಚಿತವಾಗಿ ದೊರೆಯುತ್ತದೆ.

ಇದರಲ್ಲಿರುವ ಸೌಲಭ್ಯಗಳು ಹೀಗಿವೆ.
  • ವಿಂಡೋಸ್ ಎಲ್ಲಾ ಆವೃತ್ತಿಗಳಲ್ಲೂ ಅಳವಡಿಸಿಕೊಳ್ಳಬಹುದು. (ಲಿನಕ್ಸ್ ಆವೃತ್ತಿ ಅಭಿವೃದ್ಧಿಗೊಳ್ಳುತ್ತಿದೆ)
  • ನಾಲ್ಕು ಬಗೆಯ ಕೀಬೋರ್ಡ್ ಆಯ್ಕೆ.
    •  ಅ) ಫೊನೆಟಿಕ್     ಬ) ಫೊನೆಟಿಕ್ ೨     ಕ) ನುಡಿ (ಕಗಪ)     ಡ) ಟ್ರಾನ್ಸ್ ಲಿಟೆರೇಶನ್
  • ಟೈಪಿಸುವಾಗ ಪದಗಳ ಸ್ವಯಂಪೂರ್ಣಗೊಳ್ಳುವಿಕೆ (Auto Complete).
  • ಕಡತಗಳನ್ನು plain text, rich text, HTML ರೀತಿಯಲ್ಲಿ ಉಳಿಸುವುದು ಮತ್ತು ಸಂಪಾದಿಸುವುದು.
  • ಪಿಡಿಎಫ್ ಕಡತದ ರಚನೆ. (Create PDF)
  • ಆನ್ ಲೈನ್ ವಿಕ್ಷನರಿಗೆ ಸಂಪರ್ಕ. (ಯಾವುದೇ ಪದದ ಮೇಲೆ ನೇರವಾಗಿ ರೈಟ್ ಕ್ಲಿಕ್ ಮಾಡಿ ವಿಕ್ಷನರಿಯಲ್ಲಿ ಅರ್ಥ ಹುಡುಕಬಹುದು)
  • ಪದಕೋಶ: ಎರಡು ಲಕ್ಷಕ್ಕೂ ಹೆಚ್ಚು ಪದಗಳಿರುವ ಆಫ್ ಲೈನ್ ನಿಘಂಟು.
  • ಹುಡುಕು ಮತ್ತು ಬದಲಿಸು (Find and Replace) ಸೌಲಭ್ಯ.
  • ಸ್ಪೆಲ್ ಚೆಕರ್ (Spell checker)
  • ಲಿಪಿ ಪರಿವರ್ತಕ (Script converter) - ಒಂದು ಭಾಷೆಯ ಲಿಪಿಯಿಂದ ಮತ್ತೊಂದಕ್ಕೆ ಪರಿವರ್ತನೆ ಹಾಗೂ ANSI ಇಂದ ಯುನಿಕೋಡ್ ಗೆ ಪರಿವರ್ತನೆ.
  • ಹಲವು ರೀತಿಯ ಅಕ್ಷರ ಶೈಲಿಗಳು (Font styles).
  • ಪದ IME : ಎಲ್ಲಿ ಬೇಕಾದರೂ ನೇರವಾಗಿ ಕನ್ನಡ ಟೈಪಿಸುವ ಎಂಜಿನ್.
  • ಅಕ್ಷರಗಳ ವಿವಿಧ ಗಾತ್ರ, ಬಣ್ಣ ಮತ್ತು ಹಿನ್ನೆಲೆಯ ಬಣ್ಣಗಳ ಸೌಲಭ್ಯ ಸೇರಿದಂತೆ ಇನ್ನೂ ಹಲವು formatting ಆಯ್ಕೆಗಳು.
ಪದ ತಂತ್ರಾಂಶದ ಇನ್ನೊಂದು ವಿಶೇಷವೆಂದರೆ ಬರಹ, ನುಡಿ ಮುಂತಾದ ತಂತ್ರಾಂಶಗಳಲ್ಲಿ ಉಳಿಸಿಟ್ಟಿರುವ ಯಾವುದೇ ಕಡತಗಳನ್ನು ನೇರವಾಗಿ ಇದರಲ್ಲಿ ತೆರೆಯಬಹುದು. ಅದು ಯುನಿಕೋಡ್ ಅಕ್ಷರಗಳಾಗಿ ತೆರೆದುಕೊಳ್ಳುತ್ತದೆ. ಮತ್ತೊಂದು ವಿಶೇಷವೆಂದರೆ ಪದ ತಂತ್ರಾಂಶದ ಮೂಲಕ ರಚಿಸಿದ ಪಿಡಿಎಫ್ ಕಡತಗಳಲ್ಲಿ ಯಾವುದೇ ಪದವನ್ನು ಕೂಡ ಹುಡುಕಬಹುದು (find) ಹಾಗೂ ಪಿಡಿಎಫ್ ಕಡತದಲ್ಲಿರುವ ಪಠ್ಯವನ್ನು ಕಾಪಿ ಮಾಡಿ ಬೇರೆಡೆಗೆ ಪೇಸ್ಟ್ ಮಾಡಬಹುದು. ಯಾವುದೇ ಫಾಂಟ್ ಸಮಸ್ಯೆ ಉಂಟಾಗುವುದಿಲ್ಲ.

ಪದ ತಂತ್ರಾಂಶದ zipped/portable version ಕೂಡ ಲಭ್ಯವಿದೆ.  ಬಹುತೇಕ ಆಫೀಸ್ ಮುಂತಾದ ಕಡೆ ಗಣಕದಲ್ಲಿ ಯಾವುದೇ ತಂತ್ರಾಂಶ ಅಳವಡಿಸಿಕೊಳ್ಳಲು admin rights ಅಥವಾ permission ಇರುವುದಿಲ್ಲ. ಅಂತಹ ಕಡೆ  ಈ zipped version ಇಟ್ಟುಕೊಂಡು ಕನ್ನಡದಲ್ಲಿ ಬರೆಯಬಹುದು. ಅಥವಾ ಒಂದು ಪೆನ್ ಡ್ರೈವ್ ನಲ್ಲಿ ಕಾಪಿ ಮಾಡಿಟ್ಟುಕೊಂಡು ಬೇಕಾದ ಕಂಪ್ಯೂಟರ್ ನಲ್ಲಿ ಹಾಕಿ ನೇರವಾಗಿ ಬಳಸಬಹುದು. ಕಂಪ್ಯೂಟರಿನಲ್ಲಿ ಇನ್ ಸ್ಟಾಲ್ ಮಾಡಿಕೊಳ್ಳುವ ಅವಶ್ಯಕತೆ ಇರುವುದಿಲ್ಲ.

ಇಷ್ಟೆಲ್ಲಾ ಸೌಲಭ್ಯಗಳ ತಂತ್ರಾಂಶ ರಚಿಸಿ ಉಚಿತವಾಗಿ ಬಳಕೆಗೆ ದೊರೆಯುವಂತೆ ಮಾಡಿರುವ ತಂತ್ರಾಂಶ ಅಭಿವೃದ್ಧಿಗಾರರಾದ ಲೋಹಿತ್ ಶಿವಮೂರ್ತಿಯವರಿಗೆ ಧನ್ಯವಾದಗಳು. 

ಡೌನ್ ಲೋಡ್ ಮಾಡಿಕೊಳ್ಳುವ ತಾಣ: http://www.pada.pro/download

ಶುಕ್ರವಾರ, ಅಕ್ಟೋಬರ್ 19, 2012

ಸಿಂಗಾರೆವ್ವ ಮತ್ತು ಅರಮನೆ

ನೋಡನೋಡುತ್ತಲೇ ಮತ್ತೆ ಒಂದೂವರೆ ತಿಂಗಳು ಕಳೆದು ಹೋಯಿತು. ಈ ನಡುವೆ ತಿರುಗಾಟಗಳು ಹೆಚ್ಚಾಗಿ ಬರೆಯಲು ಆಗಲಿಲ್ಲ ಅಂತ ನೆಪ ಹೇಳಬಹುದಾದರೂ ಸಮಯಕ್ಕೇನೂ ಕೊರತೆಯಂತೂ ಇಲ್ಲ.

****

ನನಗೆ ಇತ್ತೀಚಿನವರೆಗೂ ಚಂದ್ರಶೇಖರ ಕಂಬಾರರ ಕಾದಂಬರಿಗಳ ಬಗ್ಗೆ ಹೆಚ್ಚು ಗೊತ್ತಿರಲಿಲ್ಲ. ಅವರು ಹೆಚ್ಚಾಗಿ ನಾಟಕಗಳನ್ನು ಬರೆಯುತ್ತಾರೆ ಅಂದುಕೊಂಡಿದ್ದೆ. ಅವರಿಗೆ ಜ್ಞಾನಪೀಠ ಪ್ರಶಸ್ತಿ ಬಂದಮೇಲೆ ಹಲವು ಪತ್ರಿಕೆಗಳಲ್ಲಿ ಅವರ ಪರಿಚಯ ಮತ್ತು ಅವರ ಬರವಣಿಗೆಯ ವಿವರಗಳನ್ನು ಓದಿದ್ದೆ. ಆಮೇಲೆ ಅವರ ಹಲವು ಕಾದಂಬರಿಗಳ ಬಗ್ಗೆ ಗೊತ್ತಾಯ್ತು. ಅದರಲ್ಲಿ ಹೆಚ್ಚು ಕಂಡು ಬಂದ ಹೆಸರು 'ಸಿಂಗಾರೆವ್ವ ಮತ್ತು ಅರಮನೆ'. ಹಾಗಾಗಿ ಈ ಪುಸ್ತಕ ಕೊಂಡು ಓದೋಣವೆಂದು ಹುಡುಕಿದರೆ ಒಂದೇ ಸಲಕ್ಕೆ ಫ್ಲಿಪ್ ಕಾರ್ಟಲ್ಲೇ ಸಿಕ್ಕಿತು. ತರಿಸಿಕೊಂಡೆ.

ಮೊದಲನೆಯದಾಗಿ ಅದರಲ್ಲಿ ಕತೆಯ ನಿರೂಪಣೆಯ ತಂತ್ರವೇ ಚೆನ್ನಾಗಿದೆ. ಕಂಬಾರರು ಅಲ್ಲಿ ತಾವೇ ತಮ್ಮ ಊರಿಗೆ ಹೋಗಿ ಶೀನಿಂಗಿ ಎಂಬ ಮುದುಕಿಯಿಂದ ಕತೆ ಕೇಳುತ್ತಿರುವಂತೆ ನಿರೂಪಿಸಿರುವುದರಿಂದ ಇದು ನಿಜವಾಗಿ ನಡೆದದ್ದು ಎಂಬ ಭಾವನೆ ಮೂಡಿಸುತ್ತದೆ. ನಡುನಡುವೆ ಕತೆಗೆ ಪೂರಕ ಹಿನ್ನೆಲೆಗಳನ್ನು ಲೇಖಕರು ತಾವೇ ಕಂಡ ತಮ್ಮ ಊರಿನ ನೆನಪುಗಳು ಎಂಬಂತೆ ವಿವರಿಸುತ್ತಾ, ಓದುಗರನ್ನೇ ಉದ್ದೇಶಿಸಿ ಮಾತನಾಡುತ್ತಾ, ವಿರಾಮ ಕೊಡುತ್ತಾ ಮತ್ತೆ ಕತೆ ಮುಂದುವರೆಸುತ್ತಾರೆ. ಕಂಬಾರರು ಅದರಲ್ಲಿನ ಪಾತ್ರಗಳನ್ನು, ಊರುಗಳನ್ನು ಶೀನಿಂಗಿ ಮೂಲಕ ವಿವರಿಸಿದ ಪರಿ ಇಷ್ಟವಾಯಿತು. ಸಿಂಗಾರೆವ್ವ, ದೇಸಾಯಿ, ಗೌಡ, ಮರೆಪ್ಪ, ಶೆಟ್ಟಿ, ಹುಚ್ಚಯ್ಯ ಮುಂತಾದ ಪಾತ್ರಗಳೆಲ್ಲಾ ಶೀನಿಂಗಿ ವಿವರಿಸುತ್ತಾ ಹೋದಂತೆ ಮನಸ್ಸು ಅದನ್ನು ಕಲ್ಪಿಸಿಕೊಳ್ಳುತ್ತಾ ಹೋಗುತ್ತದೆ. ನಾನಿಲ್ಲಿ ಪುಸ್ತಕದ ಕತೆಯ ಬಗ್ಗೆ ಹೇಳಲು ಹೋಗುವುದಿಲ್ಲ. ದೇಸಗತಿ ಬಂಗಲೆಯ ದಿವಾಳಿತನದ, ಖಾಲಿತನದ ವರ್ಣನೆ, ಹುಣಸೆ ಮೆಳೆಯ ವಿವರಣೆ, ಅದರ ಭಯಾನಕತೆಯ ಹಿಂದಿನ ಆ ನಿಗೂಢ ಕತೆಗಳು, ತಿಕ್ಕಲುತನಗಳು, ಹಾದರಗಳು, ಭಕ್ತಿ, ಬಡತನ, ಬೆಳಗಾವಿ ಸೀಮೆಯ ಮಾತುಗಳು, ಬೈಗುಳಗಳು ಎಲ್ಲಾ ಸೇರಿ ಒಟ್ಟಾಗಿ ಒಂದು ಸಮಗ್ರ ಚಿತ್ರಣವನ್ನು ಮನಸ್ಸಿನಲ್ಲಿ ತಂದು ಅಷ್ಟೇ ಕುತೂಹಲದಿಂದ ಚೆನ್ನಾಗಿ ಓದಿಸಿಕೊಂಡ ಪುಸ್ತಕ. 

ಇದು ನಾಗಾಭರಣರಿಂದ ಸಿನೆಮಾ ಕೂಡ ಆಗಿದೆಯಂತೆ. ನೋಡಬೇಕು.

ಫ್ಲಿಪ್ ಕಾರ್ಟಲ್ಲಿ ಧ್ವನಿ ಪುಸ್ತಕವೂ ಸಿಗುತ್ತದೆ :  'ಸಿಂಗಾರೆವ್ವ ಮತ್ತು ಅರಮನೆ'

ಗುರುವಾರ, ಆಗಸ್ಟ್ 30, 2012

'ಬ್ಲಾಗಿಸು ಕನ್ನಡ ಡಿಂಡಿಮವ' ಪುಸ್ತಕ

ಬ್ಲಾಗುಗಳನ್ನು ಸಾಹಿತ್ಯವೆಂದು ಪರಿಗಣಿಸಲಾಗುವುದಿಲ್ಲ, ಅದು ಸಾಹಿತ್ಯವೇ ಅಲ್ಲ ಅನ್ನುವವರಿದ್ದಾರೆ. ಒಳ್ಳೇದು, ನನ್ನ ಪ್ರಕಾರ ಬರೆದದ್ದೆಲ್ಲಾ ಸಾಹಿತ್ಯವೇ ಆಗಿ ಪ್ರಕಟವಾಗಿ ಮಾಡಬೇಕಾದ್ದೂ ಏನಿಲ್ಲ, ಅಷ್ಟಕ್ಕೂ ಶುದ್ಧ ‘ಸಾಹಿತ್ಯ‘ ಅಂದರೇನು ಅಂತ ನನಗೆ ಇದುವರೆಗೂ ಸ್ಪಷ್ಟವಾಗಿಲ್ಲ.  ಬರೆದದ್ದು ‘ಬರಹ‘ ಆದರೆ ಸಾಕು. ಓದಿದ್ದು ಅರ್ಥವಾಗುವಂತಿದ್ದರೆ ಆಯಿತು, ಆ ಬರಹದಲ್ಲಿ ಓದಿಸಿಕೊಂಡು ಹೋಗುವ ಮತ್ತು ತಿಳಿಸಿಕೊಡುವ ಗುಣವಿದ್ದರೆ ಸಾಕು.

’ಬಾರಿಸು ಕನ್ನಡ ಡಿಂಡಿಮವ‘ ಅನ್ನುವ ಮಾತು ಕನ್ನಡಿಗರಿಗೆ ಚಿರಪರಿಚಿತ. ಅಂತರಜಾಲದಲ್ಲಿ ಬ್ಲಾಗುಗಳಲ್ಲಿ ಬರವಣಿಗೆ ಮಾಡುವವರು ಕನ್ನಡದಲ್ಲಿ 'ಬ್ಲಾಗಿಸಿ' ಕನ್ನಡ ಡಿಂಡಿಮ ಬಾರಿಸುತ್ತಿದ್ದಾರೆ. ಇದನ್ನು 'ಬ್ಲಾಗಿಸು ಕನ್ನಡ ಡಿಂಡಿಮ' ಅನ್ನಬಹುದು..  ಬರೆಯುವ ಆಸೆ ಇದೆ, ಆದರೆ ಕೈಯಲ್ಲಿರುವುದು ಪೆನ್ನು ಕಾಗದ ಅಲ್ಲ, ಎದುರಿಗಿರುವುದು ಕಂಪ್ಯೂಟರ್ರು, ಕೀಬೋರ್ಡು. ತಮ್ಮ ಅನುಭವಗಳನ್ನು, ತಾವು ಕಂಡ ಜೀವನ ಜಗತ್ತನ್ನು ಅಕ್ಷರಕ್ಕಿಳಿಸುವ ತುಡಿತ ಇದೆ, ಆದರೆ ಅವರು ಬರವಣಿಗೆಯ ವೃತ್ತಿಯವರಲ್ಲ. ಹೀಗೆ ಬ್ಲಾಗುಗಳಿಂದಲೇ ಬರವಣಿಗೆ ಆರಂಭಿಸಿದ ನಾಲ್ವರ ನಾಲ್ಕು ಪುಸ್ತಕಗಳು ಮೊನ್ನೆ ಶನಿವಾರ ಆಗಸ್ಟ್ ೨೫, ೨೦೧೨ರಂದು ಬಿಡುಗಡೆಯಾದವು. ಅದರ ಜೊತೆಗೇ ಮತ್ತೊಂದು ವಿಶಿಷ್ಟ ಪುಸ್ತಕ ಬಿಡುಗಡೆಯಾಯಿತು. ಈ ಪುಸ್ತಕದ ಹೆಸರು ‘ಬ್ಲಾಗಿಸು ಕನ್ನಡ ಡಿಂಡಿಮವ‘.  ಬ್ಲಾಗ್ ಬರಹಗಳು ಬಿಡಿಬಿಡಿಯಾಗಿ ಪತ್ರಿಕೆಗಳಲ್ಲಿ ಆಗೀಗ ಪ್ರಕಟವಾಗುತ್ತವೆ. ಆದರೆ ಈ ಬಾರಿ ಬೇರೆ ಬೇರೆಯವರು ಬರೆದ ಬ್ಲಾಗ್ ಬರಹಗಳನ್ನು ಸೇರಿಸಿ ಪುಸ್ತಕ ಮಾಡಿದ್ದಾರೆ. ಹಾಗಾಗಿ ಕನ್ನಡದ ಮಟ್ಟಿಗೆ ಇದು ಮೊದಲ ಪ್ರಯತ್ನವೇ ಇರಬೇಕು.


’ದೇಸಿ ಪ್ರಕಾಶನ’ದವರು ೨೫ ಬ್ಲಾಗ್ ಬರಹಗಳ ಈ ಚಂದದ ಪುಸ್ತಕ ಪ್ರಕಟಿಸಿದ್ದಾರೆ. ಈ ಬರಹಗಳನ್ನು ಸೇರಿಸಿ ಸಂಪಾದಿಸಿ ಪುಸ್ತಕ ತಯಾರು ಮಾಡಿಕೊಟ್ಟವರು ಚೇತನಾ ತೀರ್ಥಹಳ್ಳಿ ಮತ್ತು ಸುಶ್ರುತ ದೊಡ್ಡೇರಿ.  ಎಷ್ಟೇ ಬ್ಲಾಗು ಬ್ಲಾಗು ಅಂದರೂ ಕಂಪ್ಯೂಟರ್ ನಲ್ಲಿ ಓದುವುದಕ್ಕಿಂತಲೂ ಮುದ್ರಣದಲ್ಲಿ, ಪುಸ್ತಕದಲ್ಲಿ ಓದುವಾಗಿನ ಅನುಭೂತಿಯೇ ಬೇರೆ ತರಹದ್ದು. ಕಂಪ್ಯೂಟರ್/ಗ್ಯಾಜೆಟ್ ಗಳಲ್ಲಿ ಓದುವ ಅಭ್ಯಾಸ ಇಲ್ಲದವರಿಗೂ ಈ ಪುಸ್ತಕದ ಮೂಲಕ ಬ್ಲಾಗ್ ಬರಹಗಳನ್ನು ಸವಿಯುವ ಅವಕಾಶ ಸಿಕ್ಕಿದೆ. ಪ್ರಕಾಶಕರಿಗೂ, ಸಂಪಾದಕರಿಗೂ ಧನ್ಯವಾದಗಳು.

ನೀವೂ ಓದಿನೋಡಿ.