ಒಂದೂವರೆ ವರ್ಷಕ್ಕೂ ಹಿಂದಿನ ಮಾತು. ಆರ್ಕುಟ್ಟಿನ ಯಾವುದ್ಯಾವುದೋ ಕಮ್ಯುನಿಟಿಗಳಲ್ಲಿ ಮಾಡುತ್ತಿದ್ದ ಚರ್ಚೆ, ಪ್ರೀತಿ, ಜಗಳಗಳು ಹೊಸ ಹೊಸ ವಿಚಾರಗಳನ್ನು ತಿಳಿದುಕೊಳ್ಳಲು, ಹೊಸ ಹೊಸ ಲೋಕಗಳಿಗೆ ತೆರೆದುಕೊಳ್ಳಲು ಕಾರಣವಾಯ್ತು. ಹೊಸ ಹೊಸ ಜನರ ಪರಿಚಯವಾಯ್ತು. ಆಗ ಒಬ್ಬ ಓದುಗನಾಗಿ ಕೆಲವೇ ಕೆಲವು ಪರಿಚಿತರ, ಗೆಳೆಯರ, ಸಂಬಂಧಿಕರ ಇಂಗ್ಲೀಷ್ ಬ್ಲಾಗುಗಳಲ್ಲಿ ಓಡಾಡುತ್ತಿದ್ದೆ. ಕನ್ನಡದ ಒಂದೆರಡು ಬ್ಲಾಗುಗಳನ್ನು ನೋಡಿದ್ದರೂ ಅವು ಅಪ್ಡೇಟ್ ಆಗುತ್ತಿದ್ದುದು ಅಪರೂಪವಾಗಿರುತ್ತಿತ್ತು. ಬಹುಶ: ನಾನು ಮೊದಲು ನೋಡಿದ ಸಕ್ರಿಯ ಕನ್ನಡ ಬ್ಲಾಗು ಶ್ರೀನಿಧಿಯದಿರಬೇಕು. ನಂತರ ಅವನಿಂದ ಹಲವು ಕೊಂಡಿಗಳು ಸಿಕ್ಕವು. ಚೆಂದ ಚೆಂದನೆಯ ಪೋಸ್ಟಿಂಗ್ ಗಳನ್ನು ಹೊತ್ತು ಬರುತ್ತಿದ್ದ ಶ್ರೀನಿಧಿ,ಸುಶ್ರುತ,ಸಂದೀಪ ಮೊದಲಾದ ಹಲವರ ಬ್ಲಾಗುಗಳನ್ನು ಓದುತ್ತಾ, ಕಮೆಂಟಿಸುತ್ತಾ ಖುಷಿ ಪಡುತ್ತಿದ್ದೆ. ಹೀಗೆ ಸುಮಾರು ತಿಂಗಳುಗಳು ಕಳೆದ ಮೇಲೆ ನನ್ನ ಅಭಿಪ್ರಾಯಗಳನ್ನು, ಅನಿಸಿಕೆಗಳನ್ನು, ಅನುಭವಗಳನ್ನು ಅಭಿವ್ಯಕ್ತಿಗೊಳಿಸಲು, ಮತ್ತಿತರ ಮಾಹಿತಿ, ವಿಷಯಗಳನ್ನು ದಾಖಲಿಸಲು, ಹಂಚಿಕೊಳ್ಳಲು ನನ್ನದೇ ಒಂದು ಬ್ಲಾಗ್ ಮಾಡಿಕೊಳ್ಳಬೇಕೆಂಬ ಆಸೆ ಚಿಗುರತೊಡಗಿತು. ಶ್ರೀನಿಧಿಯನ್ನು ನಾನು ಒಂದು ಬ್ಲಾಗ್ ಮಾಡಿದರೆ ಹೇಗೆ ಎಂದು ಕೇಳಿದೆ. ಅವನು ತನ್ನ ಮಾಮೂಲಿ ಶೈಲಿಯಲ್ಲಿ "ನಿನಗೆ ಅವತ್ತಿಂದ ಬಡ್ಕತಾ ಇದ್ನಲಲೇ ,ಮೊದ್ಲು ಮಾಡಿ ಸಾಯಿ" ಎಂದ. ಅಗತ್ಯವಿದ್ದುದನೆಲ್ಲ ಹೇಳಿಕೊಟ್ಟ. ಹೇಗಿದ್ದರೂ ಕನ್ನಡ ಬರೆಯಲು ’ಬರಹ’ ಸಾಫ್ಟ್ ವೇರಿತ್ತು. ಬರೆಯುವ ಜಾಗ ಕೊಡಲು ಗೂಗಲ್ ನ ಬ್ಲಾಗ್ ಸ್ಪಾಟಿತ್ತು. ಬರೆಯಲು ನಾನಿದ್ದೆ, ಏನೋ ಬರೆಯಬಲ್ಲೆ ಎಂಬ ನಂಬಿಕೆ ಮೊದಲಿಂದ ಹೇಗೂ ಇತ್ತು. ಓದಲು ಯಾರಿದ್ದರೋ ಗೊತ್ತಿರಲಿಲ್ಲ ! ಅಂತೂ ಸರಿಯಾಗಿ ೨೦೦೭ ನೇ ಇಸ್ವಿ ಮೇ ೧೦ ರಂದು ಬ್ಲಾಗ್ ಶುರು ಮಾಡಿದೆ. ಮೊದಲು ಪೋಸ್ಟಿಂಗ್ ಮಾಡಿದಾಗ ಹೆಂಡತಿಯ ಚೊಚ್ಚಲ ಹೆರಿಗೆಯ ಸಮಯದಲ್ಲಿ ಗಂಡನಿಗಿರುವ ದುಗುಡವಿತ್ತು.! :)
ಅಂದಿನಿಂದ ಇಂದಿನವರೆಗೆ ಬರೆದದ್ದು ಜಾಸ್ತಿಯೇನೂ ಇಲ್ಲ. ಮನಸು ಬಂದಾಗ , ಬಿಡುವಿದ್ದಾಗ, ವಿಷಯವಿದೆ ಎನಿಸಿದಾಗಲಷ್ಟೆ ಬರೆದಿದ್ದೇನೆ. ಬ್ಲಾಗ್ ಎಂಬುದು ಇರುವುದೇ ಅದಕ್ಕೆ. ಬ್ಲಾಗಿನಿಂದಲೇ ಹಲವು ಸಮಾನ ಮನಸ್ಕರು, ಮಿತ್ರರು, ಪ್ರೀತಿಪಾತ್ರರು ಸಿಕ್ಕಿದ್ದಾರೆ, ವಿಷಯಗಳನ್ನು ತಿಳಿದುಕೊಂಡಿದ್ದೇನೆ. ಬರೆದ ಕೆಲವು ಲೇಖನಗಳಿಗೆ ಹೊಗಳಿಕೆ ಸಿಕ್ಕಿದೆ ಜೊತೆಗೆ ಬೈಗುಳಗಳೂ ಚೆನ್ನಾಗಿಯೇ ಸಿಕ್ಕಿವೆ. ಎಲ್ಲದಕ್ಕಿಂತ ಹೆಚ್ಚಾಗಿ ಅವುಗಳನ್ನೆಲ್ಲ ದಾಖಲಿಸಿದ ಸಂತೋಷ ಸಿಕ್ಕಿದೆ! ಅದೇ ಬೇಜಬ್ದಾರಿತನ, ಉದಾಸೀನದ ಜೊತೆಯೇ ಒಂದು ವರುಷ ಕಳೆದಿದೆ. ಈಗಲೂ ಬರೆಯಲು ಅದೇ ಬರಹ ಸಾಫ್ಟ್ ವೇರಿದೆ, ಜಾಗಕ್ಕೆ ಬ್ಲಾಗ್ ಸ್ಪಾಟಿದೆ. ಪೋಸ್ಟಿಂಗ್ ಗಳನ್ನು ಶಾರ್ಟ್ ಅಂಡ್ ಸ್ವೀಟ್ ಮಾಡೋಣವೆನಿಸಿದೆ. ಶಾರ್ಟ್ ಅಂತೂ ಆಗಿದೆ, ಸ್ವೀಟ್ ಆಗಿದೆಯೋ ಇಲ್ಲವೋ ಗೊತ್ತಿಲ್ಲ ! ’ವಿಕಾಸವಾದ’ಕ್ಕೆ ಪ್ರತ್ಯಕ್ಷವಾಗಿ, ಪರೋಕ್ಷವಾಗಿ ಸಹಕರಿಸಿದವರಿಗೆ, ಪ್ರೋತ್ಸಾಹಿಸಿದವರಿಗೆಲ್ಲ ಧನ್ಯವಾದಗಳು.
15 ಕಾಮೆಂಟ್ಗಳು:
ಅಂತೂ ಇಂತು ವರ್ಷ ಮುಗುತ್ತು :)
ಯಾವಾಗಲೂ ಹಿಂಗೆ ಬರೀತಾ ಇರು.. ಓದಲೆ ನಾನಂತೂ ಇದ್ದಿ...
ಕಂಗ್ರಾಜುಲೇಶನ್ಸ್. ಹ್ಯಾಪೀ ಬರ್ಥ್ಡೇ. ಕೀಪ್ ರೈಟಿಂಗ್.
Hay Vikas,
Congratulations for successfully completion of first year. Keep writing. We are there for reading your bog without fail.
Cheers,
Prasanna
ಶುಭಾಶಯಗಳು ವಿಕಾಸ...
ಹಾಡಿ ಹಾಡಿ ರಾಗ ಅಂದಂಗೆ ಬರ್ದು ಬರ್ದು ಇಟ್ರೆ ಮಾತ್ರ ನಮ್ಮಲ್ಲಿ ಬರವಣಿಗೆ ಬೆಳಿತು ಮತ್ತು ಉಳಿತು. ನಿನ್ನ ಬರವಣಿಗೆ ನಿರಂತರವಾಗಿ ಸಾಗ್ಲಿ.
ವಿಕಾಸ್,
ಹಾರ್ದಿಕ ಶುಭಾಶಯಗಳು ;-) ಬರವಣಿಗೆ ಶೋರ್ಟೇ ಆದರೂ ಫುಲ್ ಸ್ಟೋಪ್ ಆಗದಿರಲಿ.
ಅರೆರೆರೆ! ಒಂದ್ ವರ್ಷ ಆಗೋತನೋ! ಶುಭಾಶಯಗಳು ಮಗಾ! ಆದ್ರೂ ಮೊದ್ಲಿನ್ ಜೋಶ್ ಸ್ವಲ್ಪ ಕಡ್ಮೆ ಆಯ್ದು ನೋಡು ನಿಂದು,:)
ಶುಭಾಶಯಗಳು ವಿಕಾಸ...ಇನ್ನೂ ಹೆಚ್ಚು ಹೆಚ್ಚು ಬರಹಗಳು ಬರಲಿ.
ಗಿರೀಶ ರಾಜನಾಳ.
Namaste Vikas
varsha pUraisiddakke abhinandane.
Wish you happy blogging :)
-Chetana
ವಿಕಾಸ...
ನಿನ್ನ ಬ್ಲಾಗಿನ ಮೊದಲ ಹುಟ್ಟುಹಬ್ಬಕ್ಕೆ ಶುಭಾಶಯಗಳು.
ವರ್ಷಪೂರ್ತಿ ಮಗುವೊಂದನ್ನು ಅಪ್ಪನೇ ಬೆಳೆಸಿದ ಕಕ್ಕುಲತೆ ನಿನ್ನ ಈ ಪೋಸ್ಟಿನಲ್ಲಿದೆ :).
ಚೆನ್ನಾಗಿ ಬರೆಯುತ್ತೀಯ, ಬರೆಯುತ್ತಲಿರು, ಓದಲು ನಾವಿದ್ದೇವಲ್ಲ.
ವಿಕಾಸರ ವಾದಗಳು ಮುಂದುವರಿಯಲಿ....
ಪಾರ್ಟಿ ಯಾವಗಪ್ಪ.... ೨ ದಿನ ಮೊದ್ಲೆ ಹೇಳ್ಬಿಡು ನಾನು ಮತ್ತೆ ನಮ್ಮ ಪಟಾಲಮ್ ಎಲ್ಲಾ ಬರ್ತಿವಿ ..... :D
Super Vikas....keep going ...this year i expect atleast 50 thrashing blogs from you :)
ವಿಕಾಸ್,
ಅಭಿನಂದನೆಗಳು!!!!
ನಿಮ್ಮ ಬ್ಲಾಗಿನ ವರ್ಷದ ಹುಟ್ಟು ಹಬ್ಬ ಆದ ಮೇಲೆ ಓದುತ್ತಾಯಿದ್ದೀನಿ.
ನಿಮ್ಮ ಬರಹಗಳು ತುಂಬಾ ಚೆನ್ನಾಗಿವೆ. ಬರೆಯೋದು ಬಿಡ ಬೇಡಿ. ಇನ್ನು ಹೆಚ್ಚು ಲೇಖನಗಳು (ಚಿಕ್ಕದು) ಬರಲಿ ಅಂತ ಹಾರೈಸ್ತೀನಿ.
ಧನ್ಯವಾದಗಳು...
ಒಂದು ವರ್ಷ ಯಶಸ್ವಿಯಾಗಿ ಮುಗಿಸಿದ್ದಕ್ಕೆ, ಆ ಸಂತೋಷದಲ್ಲಿ ನಮ್ಮಂತ ಕಿರಿಯ ಬ್ಲಾಗಿಗರಿಗೆ ಪಾರ್ಟಿ ಏನಾದರೂ ಇಟ್ಕೋತೀರಾ ಅಂತ ದೂರದ ಆಸೆಯೊಂದು ಇದೆ....:)
ಧನ್ಯವಾದಗಳು.
ಜೋಮನ್.
ಹಾರೈಸಿದ ಎಲ್ಲರಿಗೂ ಧನ್ಯವಾದಗಳು.
ಪಾರ್ಟಿ ಕೇಳಿದವರಿಗೆ.. ಇಲ್ಲಾ ಅನ್ನೋಕ್ಕಂತೂ ಮನಸ್ಸಾಗ್ತಿಲ್ಲ :)
ಕಾಮೆಂಟ್ ಪೋಸ್ಟ್ ಮಾಡಿ