ಗುರುವಾರ, ಜುಲೈ 23, 2009

ಮರ ಬೆಳೆಯುತ್ತಿದೆ..

ಈಗ ಅದು ಮರ. ಎಲ್ಲ ದಿಕ್ಕಿಗೂ ಕೊಂಬೆ ಚಾಚಿಕೊಂಡು ಇಷ್ಟೆತ್ತರಕ್ಕೆ ಬೆಳೆದಿದೆ. ಹೂವು ಬಿಡುತ್ತದೆ, ಕಾಯಾಗುತ್ತದೆ. ಎಲೆ ಉದುರುತ್ತವೆ, ಮತ್ತೆ ಚಿಗುರುತ್ತವೆ. ಹಕ್ಕಿಗಳು ಕೂರುತ್ತವೆ, ಕೂಗುತ್ತವೆ. ಗೂಡು ಕಟ್ಟುತ್ತವೆ, ಮರಿಗಳು ಕಣ್ಬಿಡುತ್ತವೆ. ಅಳಿಲುಗಳು ಸರಿದಾಡುತ್ತವೆ. ದನಕರುಗಳು ತಣ್ಣಗೆ ನೆರಳಿನಲ್ಲಿ ನಿಂತು ಮೆಲುಕು ಹಾಕುತ್ತವೆ. ಮಳೆ ಬಂದಾಗ ಮುದುರಿ ನಿಲ್ಲುತ್ತವೆ. ತರಕಾರಿ ಗಾಡಿಯವ ನಿಂತು ಬೆವರು ಒರೆಸಿಕೊಂಡು ಮುಂದುವರೆಯುತ್ತಾನೆ. ಸೊಪ್ಪಿನ ಹೆಂಗಸು ಬುಟ್ಟಿ ಕೆಳಗಿಳಿಸಿ ಉಶ್ಶೆಂದು ಒರಗಿಕೊಳ್ಳುತ್ತಾಳೆ. ಮಕ್ಕಳ ಸಂಜೆಯ ಉಪ್ಪಿನಾಟದ ಕಂಬವಾಗುತ್ತದೆ, ಒಮ್ಮೊಮ್ಮೆ ಕ್ರಿಕೆಟಿನ ವಿಕೆಟ್ ಆಗುತ್ತದೆ.

೧೫ ವರುಷಗಳ ಹಿಂದೆ ಅದು ಒಂದು ಸಸಿ. ಒಂದು ಕಡ್ಡಿ, ಅದರಲ್ಲಿ ಎಣಿಸಿ ಹತ್ತು ಎಲೆಗಳು. ನಾವು ಹೊಸದಾಗಿ ಮನೆ ಕಟ್ಟಿದಾಗ ಸಸಿ ನೆಟ್ಟು ಹೋಗಿದ್ದರು. ಅಲ್ಲಿನ ಮಣ್ಣಿಗೆ ಕಚ್ಚಿಕೊಂಡ ದಿನದಿಂದಲೇ ಎಲೆ ಮೂಡಿಸುತ್ತಾ ಚಿಗುರತೊಡಗಿತ್ತು. ಇಡೀ ರಸ್ತೆಯಲ್ಲಿನ ಎಲ್ಲ ಗಿಡಗಳನ್ನು ಕಾಯ್ದುಕೊಳ್ಳುವ ಜವಾಬ್ದಾರಿಯನ್ನು ಹಿರಿಯರು ನಾವು ಹುಡುಗರಿಗೆ ವಹಿಸಿಕೊಟ್ಟಿದ್ದರು. ಪ್ರತಿವರ್ಷದ ಮಳೆಗೆ ಸಾಯದಂತೆ, ಬಿಸಿಲಿಗೆ ಒಣಗದಂತೆ, ದನ ಕುರಿಗಳ ಬಾಯಿ ಸೇರದಂತೆ, ದನಕಾಯುವ ಹುಡುಗರು ಮುರಿದು ಹಾಕದಂತೆ ಕಾಯ್ದದ್ದು ಸಾರ್ಥಕ. ಸಣ್ಣ ಸಸಿಯಿದ್ದಾಗ ದನಕರುಗಳು ತಿನ್ನದಿರಲೆಂದು ಬೇಲಿ ಹಾಕುತ್ತಾರೆ, ಆದರೆ ಅದೇ ಸಸಿ ಬೆಳೆದು ಮರವಾದಮೇಲೆ ದನಕರುಗಳನ್ನು ಅದಕ್ಕೇ ಕಟ್ಟಿಹಾಕುತ್ತಾರೆ. ರಸ್ತೆ ಮರಗಳಿಂದ ನಳನಳಿಸುತ್ತಿದೆ. ದೀಪಾವಳಿಯಲ್ಲಿ ಎದುರು ಮನೆ ನೀಲಕಂಠ ಮಾವ ಮರಕ್ಕೆ ಪಟಾಕಿ ಸರ ಕಟ್ಟಿ ಹಚ್ಚಿದಾಗ ಪಾಪ ಅದಕ್ಕೆ ಎಷ್ಟು ನೋವಾಗುತ್ತದೇನೋ, ಹೆದರಿಕೊಂಡ ಅಳಿಲು ಯಾವ ಮೂಲೆ ಸೇರಿದೆಯೇನೋ.!


ಆ ಮರದ ಕೆಳಗೆ ಸುಮ್ಮನೇ ನಿಲ್ಲುತ್ತೇನೆ. ಎಲೆಗಳು ಬೀಸಿದ ಗಾಳಿಗೆ ಹಿತವೆನಿಸುತ್ತದೆ. ಹಕ್ಕಿಗಳಿಗೆ ಕಿವಿಯಾಗುತ್ತೇನೆ. ಸಂಭ್ರಮಗೊಳ್ಳುತ್ತೇನೆ, ಕಾರಣವಿಲ್ಲದೇ ಹೆದರುವ ಅಳಿಲನ್ನು ನೋಡಿ ನಗುತ್ತೇನೆ. ಆಗ ಇಷ್ಟೇ ಇಷ್ಟಿದ್ದ ಈ ಸಸಿ ಎಷ್ಟು ದೊಡ್ಡ ಮರ ಆಗಿದೆ, ಕೈಯಾರೆ ನೀರು ಹಾಕಿದ, ಬೇಲಿಕಟ್ಟಿ ಕಾಯ್ದ, ಕಣ್ಣೆದುರಿಗೇ ಬೆಳೆದ ಮರ ಎಷ್ಟು ಖುಷಿ ಕೊಡುತ್ತದೆ ಗೊತ್ತಾ ಅಂತ ಅಪ್ಪನಿಗೆ ಹೇಳುತ್ತೇನೆ. ನೀನು ಕೂಡ ಇಷ್ಟೇ ಇಷ್ಟು ಇದ್ದೆ , ಈಗ ನನ್ನ ಕಣ್ಣೆದುರಿಗೇ ಹೇಗೆ ಬೆಳೆದಿದ್ದೀಯ ಗೊತ್ತಾ ಅನ್ನುತ್ತಾರೆ. ಅಮ್ಮ ದನಿಗೂಡಿಸುತ್ತಾಳೆ. ಮರದ ಯಾವ ಕೊಂಬೆಯನ್ನೂ ಕಡಿಯಬೇಡಿ, ಗೆದ್ದಲು ಹತ್ತದಂತೆ ನೋಡಿಕೊಳ್ಳಿ ಅನ್ನುತ್ತೇನೆ. ಫೋನು ಮಾಡಿದಾಗಲೆಲ್ಲಾ "ಹುಷಾರಾಗಿ ಗಾಡಿ ಓಡ್ಸು", "ಆರೋಗ್ಯ ನೋಡ್ಕೋ", ಅದೂ ಇದೂ ಅಂತ ಇಪ್ಪತ್ತು ಸಾರಿ ಅನ್ನುವ ಅಮ್ಮನ ತಲ್ಲಣ ಸ್ವಲ್ಪ ಸ್ವಲ್ಪವೇ ಅರ್ಥಾಗುತ್ತಿದೆ.

ಮರ ಇನ್ನೂ ಬೆಳೆಯುವುದಿದೆ, ಬೆಳೆಯುತ್ತದೆ. ಫೋನಿಗೆ ಸಂದೇಶವೊಂದು ಬಂದಿದೆ. ಯಾರೋ ಹಾರೈಸಿದ್ದಾರೆ. .

16 ಕಾಮೆಂಟ್‌ಗಳು:

Unknown ಹೇಳಿದರು...

ನಿಮ್ಮ ಲೇಖನ ತು೦ಬಾ ಸೊಗಸಾಗಿದೆ.. ತು೦ಬಾ ಆಪ್ತ ಬರಹ .. ಇದಕ್ಕೆ ಏನು ಪ್ರತಿಕ್ರಿಯೆ ಕೊಡಲಿ ??
ಬರಹ ಮನಸ್ಸಿಗೆ ತು೦ಬಾ ಕಾಡುತ್ತಿದೆ ..

PARAANJAPE K.N. ಹೇಳಿದರು...

ವಿಕಾಸ್
ಆಪ್ತ ಅನುಭವ ಕೊಡುತ್ತದೆ. ಸ್ವತಹ ನೆಟ್ಟ ಗಿಡ ನಮ್ಮೆದುರೇ ಬೆಳೆದು ಮರವಾದಾಗ ಆಗುವ ಖುಷಿ, ಅದರ ನೆರಳಲ್ಲಿ ನಿ೦ತು ಪಡೆಯುವ ಅನುಭೂತಿ, ತಾಯ್ತನದ ಅನುಭವ, ತಲ್ಲಣ - ಎಲ್ಲವು ಇಲ್ಲಿ ಅಡಕವಾಗಿದೆ. ಬರಹ ಚೆನ್ನಾಗಿದೆ.

Sushrutha Dodderi ಹೇಳಿದರು...

;) nice.. nandoo ondu haaraike.

(u could have made it a poem ansthu..)

ಅನಾಮಧೇಯ ಹೇಳಿದರು...

:)

Seema S. Hegde ಹೇಳಿದರು...

Vikasa,
Nanna kadeyinda shubhaashaya :)Olleyadagali :)

ಶ್ರೀನಿಧಿ.ಡಿ.ಎಸ್ ಹೇಳಿದರು...

nice one dear!:)
sush,ningyako eechige...:D

ಬಾಲು ಹೇಳಿದರು...

yup.. thumba chennagide. thaythana matte gida nettu belesidaga aaguva kushi ... manassige hattira aagide.

amele sushrutha helida haage ninu idannu olle poem kooda madaballe.

sunaath ಹೇಳಿದರು...

ಮರ ಬೆಳೆಯುತ್ತಿರುವದನ್ನು ನೋಡುವದೇ ಒಂದು ಸಂತೋಷ.
ಆ ಸಂತೋಷವನ್ನು ನಮ್ಮೊಂದಿಗೆ ನೀವು ಹಂಚಿಕೊಳ್ಳುತ್ತಿರುವದು
ಇನ್ನಿಷ್ಟು ಸಂತೋಷದಾಯಕ.

Parisarapremi ಹೇಳಿದರು...

aa mara ee mara dhyaanisutiruvaaga raama raama emba naamave kaayto.... :-)

sakkath aagide ree ee lekhana. sumne sushrutana maatu keLkondu idanna kavana givana maaDbeDi pa!! adenO huDugbuddi, enenO heLutte..

ಚಿತ್ರಾ ಹೇಳಿದರು...

ವಿಕಾಸ್ ,
ತುಂಬಾ ಆಪ್ತವಾದ ಬರಹ. ನಾವು ಪ್ರೀತಿಯಿಂದ ಬೆಳೆಸಿದ್ದರ ಬಗ್ಗೆ ಮನಸ್ಸು ಸದಾ ಒಳ್ಳೆಯದನ್ನೇ ಹಾರೈಸುತ್ತದೆ ಅಲ್ಲವೇ?
ನಿಮ್ಮ ಪ್ರೀತಿಯ ಮರ ಇನ್ನೂ ದೊಡ್ಡದಾಗಿ ಮೈತುಂಬಿಕೊಂಡು ಬೆಳೆಯಲಿ ಎಂಬುದು ನನ್ನ ಹಾರೈಕೆ !

ರಾಜೀವ ಹೇಳಿದರು...

ವಿಕಾಸ್,

ನಮ್ಮ ಮನೆ ಪಕ್ಕ ಒಂದು ಹೊಂಗೆ ಮರ ಇದೆ. ಅದರ ಕೆಳಗೆ ಕಳೆದ ನನ್ನ ಬಾಲ್ಯದ ದಿನಗಳು ನೆನಪಾಯಿತು. ಥಾಂಕ್ಸ್.

ನೀವು ಹೀಗೆ ಲೇಖನ ಬರಿತಾಯಿರಿ. ಕವಿತೆ ಗಿವಿತೆ ಏನು ಬೇಡ. ನಮ್ಮಂತವರಿಗೆ ಅದೆಲ್ಲ ಅರ್ಥವಾಗೋಲ್ಲ :)

VENU VINOD ಹೇಳಿದರು...

ವೈಯಕ್ತಿಕ ಬೆಳವಣಿಗೆಯನ್ನು ಮರದ ಬೆಳವಣಿಗೆಗೆ ಹೋಲಿಸಿ ಬರೆದಿದ್ದೀರಿ..ಮನಮುಟ್ಟುವ ಬರಹ ವಿಕಾಸ್...

Guruprasad ಹೇಳಿದರು...

ವಿಕಾಸ್,,, ತುಂಬ ಆಪ್ತ ವಾದ ಬರಹ......ಮರ ಚೆನ್ನಾಗಿ ಬೆಳೆಯಲಿ.... ಎನ್ನುವುದಸ್ತೆ ನನ್ನ ಹಾರೈಕೆ.......
ಗುರು

ಅನಾಮಧೇಯ ಹೇಳಿದರು...

nice article vikaas... ishTa aaythu... mara mattu beLavaNigeya roopaka thumbaane hiDistu

Pramod ಹೇಳಿದರು...

Good one

ವಿ.ರಾ.ಹೆ. ಹೇಳಿದರು...

@ರೂಪಾ, ಥ್ಯಾಂಕ್ಯು,ನಿಮ್ಮ ಪ್ರತಿಕ್ರಿಯೆಯೂ ಆಪ್ತವಾಗಿದೆ.:)

@ಪರಾಂಜಪೆ, ಥ್ಯಾಂಕ್ಸ್

@ದೊಡ್ಡೇರಿ,ಬಾಲು,
ಥ್ಯಾಂಕ್ಸ್, ಆದರೆ ನಂಗೂ ಕವನಕ್ಕೂ ಸ್ವಲ್ಪ ದೂರ ಅಂತ ಗೊತ್ತಲ್ಲ ನಿಂಗೆ.

@ಕಾಫಿ, ಸೀಮಕ್ಕ, ಕಾಕಾ, ಚಿತ್ರಾ
thanx, thanx...

@ನಿಧಿ, ಪರಿಸರಪ್ರೇಮಿ, ರಾಜೀವ್, ಅದೇ ಅಲ್ವೇನ್ರೀ.. ಕವನ ಗಿವನ ಎಲ್ಲಾ ಬೇಡ :) thanx

@ವೇಣು, ವಿಜಯ್, ಪ್ರಮೋದ್, ಗುರು..
ನಿಮ್ಮ ಹಾರೈಕೆಗೆ ಥ್ಯಾಂಕ್ಸ್ ಥ್ಯಾಂಕ್ಸ್ :)