ಗುರುವಾರ, ಜುಲೈ 16, 2009

ಟೀವಿ ಧಾರಾವಾಹಿಯಲ್ಲೊಂದು ಬ್ಲಾಗ್ !

ಟೀವಿಯಲ್ಲಿ ಧಾರಾವಾಹಿಗಳಿಗೋಸ್ಕರವೇ ಸಮಯ ಎತ್ತಿಟ್ಟು ನೋಡುತ್ತಿದ್ದ ಕಾಲವೊಂದಿತ್ತು. ಆಗ ಧಾರಾವಾಹಿಗಳು ಹಿತಮಿತವಾಗಿ ವಾರಕ್ಕೊಂದೊಂದೇ ಎಪಿಸೋಡುಗಳಂತೆ ಬರುತ್ತಿದ್ದವು. ಗುಣಮಟ್ಟವೂ ಚೆನ್ನಾಗಿರುತ್ತಿತ್ತು. ಅಥವಾ ಆಗ ಇದ್ದುದೊಂದೇ ದೂರದರ್ಶನವಾದ್ದರಿಂದ ಹಾಗನಿಸುತ್ತೋ ಏನೋ ಗೊತ್ತಿಲ್ಲ. ಒಟ್ಟಿನಲ್ಲಿ ಧಾರಾವಾಹಿಗಳು ಖುಷಿ ಕೊಡುತ್ತಿದ್ದವು. ನನಗೆ ಸಣ್ಣವನಿದ್ದಾಗ ಗುಂಗುರು ಕೂದಲಿನ ರವಿಕಿರಣ್ ಧಾರಾವಾಹಿಯನ್ನು ತಪ್ಪದೇ ನೋಡುತ್ತಿದ್ದ ನೆನಪಿದೆ. ಅನಂತರ ಹಲವು ಛಾನಲ್ ಗಳು ಶುರುವಾದ ಮೇಲೆ ಧಾರಾವಾಹಿಗಳು ದಿನದಿನವೂ ಬಂದು ಅದರಲ್ಲಿ ಆಸಕ್ತಿ ಕಡಿಮೆಯಾಗುತ್ತಾ ಹೋಯಿತು. ಪೀಯುಸಿ ರಜದಲ್ಲಿ ಭಕ್ತಿಯಿಂದ ನೋಡಿದ ಧಾರಾವಾಹಿಯೆಂದರೆ 'ಮಾಯಾಮೃಗ'. ಆಮೇಲೆ ಡಿ.ಡಿ.ಯಲ್ಲಿ 'ಸಾಧನೆ' ಎಂಬ ಸೀರಿಯಲ್ಲನ್ನು ನೋಡುತ್ತಿದ್ದೆ. ಒಳ್ಳೊಳ್ಳೆ ಕಲಾವಿದರ ತಂಡವಿದ್ದ ಅದೂ ಕೂಡ ಆಮೇಲೆ ಬೋರಾಯಿತು. ಆಮೇಲೆ ಎಂಜಿನಿಯರಿಂಗ್ ಸೇರಿ ಮನೆಯಿಂದ ಹೊರಬಿದ್ದ ಮೇಲೆ ಧಾರಾವಾಹಿ ನೋಡುವ ಅಭ್ಯಾಸ ತಪ್ಪಿಹೋಯಿತು. ’ಗೃಹಭಂಗ ’ಎಂಬ ಧಾರಾವಾಹಿಯನ್ನು ನೋಡುತ್ತಿದ್ದುದು ಸ್ವಲ್ಪ ನೆನಪಿದೆ. ಆಮೇಲೆ ಬೆಂಗಳೂರಿಗೆ ಬಿದ್ದ ಮೇಲೆ ಚಿಕ್ಕಪ್ಪನ ಮನೆಯಲ್ಲಿದ್ದೆ. ನಮ್ಮ ಚಿಕ್ಕಮ್ಮ ಧಾರಾವಾಹಿ ಭಕ್ತೆ. ತೀರಾ ಸಂಜೆ ೬ ರಿಂದಲೇ ಹಿಡಿದು ರಾತ್ರೆ ೧೦ ರ ವರೆಗೆ ಧಾರಾವಾಹಿಗಳ ಮೇಲೆ ಧಾರಾವಾಹಿಗಳು. ಆಗ ಅನಿವಾರ್ಯವಾಗಿ ಕುಂಕುಮಭಾಗ್ಯ, ಕನ್ಯಾದಾನ ಇತ್ಯಾದಿಗಳಿಂದ ಮಾನಸಿಕ ಅತ್ಯಾಚಾರಕ್ಕೊಳಗಾಗಿ ಧಾರಾವಾಹಿಗಳೆಂದರೆ ಅಲರ್ಜಿ ಆಗಿಹೋಗಿತ್ತು. ಈ ಆಘಾತದಿಂದ ಸ್ವಲ್ಪ relief ಕೊಟ್ಟು ಗುಣವಾಗಿಸಿದ್ದು ’ಮೂಡಲಮನೆ’ ಮತ್ತು 'ಮನ್ವಂತರ', 'ಮುಕ್ತ'ದ ಕೋರ್ಟ್ ಕೇಸುಗಳು. ಆಗ "ಬಸವರಾಜು, ಆ ಫೈಲ್ ತಗೊಂಡು ಬಾರಪ್ಪ" ಅನ್ನುವಾಗ ಕೇಸ್ ಏನಾಗುತ್ತೋ ಅನ್ನುವ ಕುತೂಹಲ ಇತ್ತು. ಈಗ "ಲಿಂಗರಾಜು, ಆ ಫೈಲ್ ಕೊಡಪ್ಪ" ಅನ್ನುವ ಹೊತ್ತಿಗೆ ರಾಜು ಮರ್ಡರ್ ಮಾಡಿಸಿದ್ದು ಮಿಶ್ರಾನೇ, ಅವನಿಗೆ ಶಿಕ್ಷೆ ಆಗೇ ಆಗುತ್ತದೆ ಅನ್ನೋದು ಎಂತವರಿಗೂ ಗೊತ್ತಾಗಿ ಹೋಗಿತ್ತು. ಶಾಂಭವಿ ಮೇಡಂಗೆ ಮದ್ವೆ ಆದ್ರೆ ಆಗಲಿ ಬಿಟ್ರೆ ಬಿಡ್ಲಿ, ಸದ್ಯಕ್ಕೆ ನಾನಂತೂ ಟೀವಿಯಿಂದಲೇ ಮುಕ್ತ ಮುಕ್ತ.... :)

ಇದೆಲ್ಲಾ ಯಾಕೆ ನೆನಪಾಯ್ತಂದ್ರೆ ಕೆಲದಿನಗಳ ಹಿಂದೆ ಧಾರಾವಾಹಿಯಲ್ಲಿ ಕೆಲಸ ಮಾಡುತ್ತಿರುವ ಪ್ರೀತಿಯ ಗೆಳೆಯನೊಬ್ಬ ನಮ್ಮ ಧಾರಾವಾಹಿಗೊಂದು ಬ್ಲಾಗ್ ಮಾಡಿದ್ದೇವೆ ನೋಡೋ ಅಂದ. ನನಗೆ ಆಶ್ಚರ್ಯ ಆಯಿತು. ಅರೆರೆ ಧಾರಾವಾಹಿಗೆ ಎಂತಾ ಬ್ಲಾಗಪ್ಪಾ ಅಂತ. ಪ್ರತಿ ಎಪಿಸೋಡಿನ ಕಥೆಯನ್ನೂ ಬರೆದು ಹಾಕುತ್ತಿರಬಹುದು ಅಂದುಕೊಂಡೆ. ಆದರೆ ಅದು ಹಾಗಲ್ಲ, ಒಂದು ವಿಭಿನ್ನ ರೀತಿಯ ಪ್ರಯೋಗ ಮಾಡಿದ್ದಾರೆ. ಖುಷಿಯಾಯಿತು. 'ಜೋಗುಳ' ಅಂತ ಧಾರಾವಾಹಿ ಹೆಸರು, ಜೀ ಕನ್ನಡದಲ್ಲಿ ದಿನಾ ಎಂಟೂವರೆಗೆ ಬರುತ್ತದೆ. 'ಕುಟುಂಬ' ಮತ್ತು 'ಪ್ರೀತಿ ಇಲ್ಲದ ಮೇಲೆ' ಎಂಬ ಜನಪ್ರಿಯ ಧಾರಾವಾಹಿಗಳ ವಿನು ಬಳಂಜ ಮತ್ತು ನರೇಶ್ ತಂಡದ ಧಾರಾವಾಹಿ ಅದು. ಅದರಲ್ಲಿ ವಾಸು ಎಂಬ ಮುಖ್ಯ ಪಾತ್ರ ಪ್ರೇಯಸಿ ದೇವಕಿ ಜೊತೆಗಿನ misunderstandingನಿಂದ ಭಗ್ನಪ್ರೇಮಿ ಆಗಿರುತ್ತಾನಂತೆ. ವಾಸು ಅಮೇರಿಕಾಕ್ಕೆ ಹೋದ ಮೇಲೆ ತನ್ನ ಪ್ರೇಯಸಿಯ ನೆನಪಲ್ಲಿ ದಿನಾ ಬ್ಲಾಗ್ ಬರೆಯುತ್ತಾನೆ. ಅವನು ದೇವಕಿಗೆ ದಿನಾ ತನ್ನ ನೋವನ್ನು, ಪ್ರೀತಿಯನ್ನು ತೋಡಿಕೊಳ್ಳುತ್ತಾನೆ. ಧಾರಾವಾಹಿ ತಂಡದವರು ಅದನ್ನು ರಿಯಲ್ಲಾಗಿಯೂ ಬರೆಯುತ್ತಿದ್ದಾರೆ. ಧಾರಾವಾಹಿಯಲ್ಲೇ ಕತೆಗೆ ಪೂರಕವಾಗಿ ಒಮ್ಮೊಮ್ಮೆ ಬ್ಲಾಗ್ ತೋರಿಸುತ್ತಾರೆ ಕೂಡ. ಆದ್ದರಿಂದ ಇದೊಂತರಾ ನಿಜವಾಗಿಯೂ ಅಸ್ತಿತ್ವದಲ್ಲಿರುವ ಧಾರಾವಾಹಿ ಪಾತ್ರ. sstrange ! ಮೊನ್ನೆ ಧಾರಾವಾಹಿ ಸೆಟ್ ಗೆ ಹೋಗಿ ಅವರ ಜೊತೆ ಮಾತಾಡಿ ಇಂತಹ ಐಡಿಯಾ ಅಳವಡಿಸಿಕೊಂಡದ್ದಕ್ಕೆ ಮೆಚ್ಚುಗೆ ಹೇಳಿದೆ. ಆಗ ಅವರು "ಎಲ್ಲಿದೀರ್ರಿ ನೀವು, ನಾವಾಗ್ಲೇ ಚಾಟಿಂಗ್ ಕೂಡ ತೋರಿಸಿದ್ದೇವೆ ಧಾರಾವಾಹಿಯಲ್ಲಿ" ಅಂದರು ! ಏನೇ ಆಗಲಿ ಕಾಲಕ್ಕೆ ತಕ್ಕುದಾದ ಗುಡ್ ಕ್ರಿಯೇಟಿವಿಟಿ ಕಣ್ರಿ. ಧಾರಾವಾಹಿ ತಂಡಕ್ಕೆ ಶುಭಹಾರೈಕೆಗಳು. ಅಂದ ಹಾಗೆ, ಬ್ಲಾಗ್ ಕೊಂಡಿ ಇಲ್ಲಿದೆ ನೋಡಿ : ನನ್ನ ದೇವಕಿ.

******************

ಕನ್ನಡದ ಮೊಟ್ಟಮೊದಲ ವೆಬ್ ಸೈಟ್ ಖ್ಯಾತಿಯ ಗಣಕತಜ್ಞ ಡಾ.ಪವನಜ ಅವರು ಕನ್ನಡಪ್ರಭದಲ್ಲಿ ಪ್ರತಿಸೋಮವಾರ ಒಂದು ಅಂಕಣ ಬರೆಯುತ್ತಾರೆ. ಗಣಕಿಂಡಿ ಅಂತ ಅದರ ಹೆಸರು. ಕನ್ನಡ ಭಾಷೆಯನ್ನೂ ಚೆನ್ನಾಗಿ ತಿಳಿದುಕೊಂಡಿರುವ ಅವರು ಕಂಪ್ಯೂಟರ್ ನಲ್ಲಿ ಕನ್ನಡ ತರುವಲ್ಲಿ ಸಾಕಷ್ಟು ಕೆಲಸ ಮಾಡಿರುವವರು. ಈ ಸಲದ ಅಂಕಣದಲ್ಲಿ internetಗೆ ಕನ್ನಡದಲ್ಲಿ 'ಅಂತರ್ಜಾಲ' ಎಂಬ ಪದ ಸರಿಯೋ, ’ಅಂತರಜಾಲ’ ಸರಿಯೋ ಎಂಬುದರ ಬಗ್ಗೆ ಬರೆದಿದ್ದಾರೆ. ನನಗೆ ಮೊದಲಿಂದಲೂ ಇದೊಂದು ಸಂಶಯವಿತ್ತು. ಅಂತರ್ಜಾಲ ಅಂದರೆ intranet ಆಗುತ್ತದೆ. ಆದರೆ internet ಗೆ ಅಂತರ್ಜಾಲ ಎಂದು ಬಳಸುತ್ತಾರಲ್ಲ ಅಂತ. ಅವರು ಸ್ಪಷ್ಟಪಡಿಸಿದ್ದಾರೆ. ಇನ್ನು ಮೇಲೆ ತಪ್ಪು ತಿದ್ದಿಕೊಳ್ಳಬೇಕು. ಗಣಕ ಮತ್ತು ಅಂತರಜಾಲ ಸಂಬಂಧಿತ ಬಹಳಷ್ಟು ಉಪಯುಕ್ತ ಮಾಹಿತಿಗಳು ಈ ಅಂಕಣದಲ್ಲಿ ಬರುತ್ತವೆ. ಇದರ ಬ್ಲಾಗ್ ಕೂಡ ಮಾಡಿಟ್ಟಿದ್ದಾರೆ. ಆ ಭರಪೂರ ಮಾಹಿತಿಗಳ ತಾಣ ಇಲ್ಲಿದೆ: ಗಣಕಿಂಡಿ.

6 ಕಾಮೆಂಟ್‌ಗಳು:

ಅನಿಕೇತನ ಸುನಿಲ್ ಹೇಳಿದರು...

Thank you vikas...
Sunil.

Dr U B Pavanaja ಹೇಳಿದರು...

ವಿಕಾಸ,

ಧನ್ಯವಾದಗಳು

-ಪವನಜ

Dr U B Pavanaja ಹೇಳಿದರು...

ಅಂದ ಹಾಗೆ, ಈ ಬಗ್ಗೆ ಶ್ರೀನಿಧಿಯವರೂ ಒಂದು ಬ್ಲಾಗ್ ಬರೆದಿದ್ದರು. ನೋಡಿ - http://e-jnana.blogspot.com/2009/03/blog-post.html

-ಪವನಜ

Unknown ಹೇಳಿದರು...

ವಿಕಾಸ್ ಅವರೆ,
ಮಾಹಿತಿಗಾಗಿ ಧನ್ಯವಾದಗಳು .
ಇ-ಮೇಲ್ ಎ೦ಬುದಕ್ಕೆ ಮಿ೦ಚ೦ಚೆ ಎ೦ದು ಶತಾವಧಾನಿ ಯವರು ಹೇಳಿದ್ದು ನೆನಪಾಯಿತು ..
ನಾವು ಎಷ್ಟು ಆಲೋಚಿಸದೆ ಪದವನ್ನು ಬಳುಸುತ್ತೇವೆ ಎ೦ದು ತಿಳಿದು ಕೊ೦ಡ೦ತೆ ಆಯಿತು ..

ಸುಪ್ತದೀಪ್ತಿ suptadeepti ಹೇಳಿದರು...

ಇವೆರಡು ಒಳ್ಳೆಯ ಬ್ಲಾಗ್ಸ್ ಬಗ್ಗೆ ತಿಳಿಸಿದ್ದಕ್ಕೆ ಥ್ಯಾಂಕ್ಸ್ ವಿಕ್ಕಿ.

ವಿ.ರಾ.ಹೆ. ಹೇಳಿದರು...

thanx all.

ರಜನಿ, ಅವರು ತಮ್ಮ ಹೆಸರು ಹಾಕಬೇಡಿ ಅಂತ ಹೇಳಿದ್ದರಿಂದ ಹಾಕಿಲ್ಲ . :)