ಯಾವುದೇ ವಸ್ತುವಿನ ಉತ್ಪಾದನೆಯ ಮೊದಲ ಹಂತವೆಂದರೆ ಅದರ ವಿನ್ಯಾಸ ಅಂದರೆ ಡಿಸೈನಿಂಗ್. ಅದು ಅಡುಗೆಮನೆಯ
ಪರಿಕರಗಳಿಂದ ಹಿಡಿದು ವಿಮಾನದವರೆಗೆ ಯಾವುದೇ ಉತ್ಪನ್ನವಾಗಿದ್ದರೂ ಸಹ ವಿನ್ಯಾಸಹಂತದಲ್ಲಿ ಸರಿಯೆನಿಸಿಕೊಂಡನಂತರವೇ
ಮುಂದುವರೆಯುವುದು. ಅದರಲ್ಲೂ ಹೊಸಬಗೆಯ ವಸ್ತುಗಳನ್ನು ತಯಾರಿಸಲು, ಈಗಿರುವ ವಸ್ತುಗಳನ್ನೂ ಇನ್ನೂ ಚೆನ್ನಾಗಿ ಮಾಡಲು ಈ ವಿನ್ಯಾಸ ಹಂತದಲ್ಲೇ ಸತತ
ಪ್ರಯತ್ನಗಳು ನಡೆಯುತ್ತಿರುತ್ತವೆ. ಈಗೆರಡು ದಶಕಗಳ ಹಿಂದಿನ ಮತ್ತು ಈಗಿನ ಪರಿಸ್ಥಿತಿಯನ್ನೇ ನೋಡಿದರೆ
ಆಗಿನ ಮಾರುಕಟ್ಟೆಯ ಮತ್ತು ಈಗಿನ ಮಾರುಕಟ್ಟೆಯಲ್ಲಿ ಬದಲಾದ ವಿನ್ಯಾಸಗಳು ಮತ್ತು ಭರಪೂರ ಆಯ್ಕೆಗಳು
ಕಾಣಸಿಗುತ್ತವೆ. ಹಾಗಾದರೆ ಈ ವಿನ್ಯಾಸ ಹಂತದ ಈ ಕ್ರಾಂತಿಕಾರಿ ಬೆಳವಣಿಗೆಗೆ ಕಾರಣ ಏನಿರಬಹುದು ಎಂದು
ತಿಳಿಯಲು ಹೋದರೆ ಅಲ್ಲಿಯೂ ಕೂಡ ಗಣಕಗಳು ಅಂದರೆ ಕಂಪ್ಯೂಟರ್ ಗಳ ಕೈವಾಡ ಕಾಣುತ್ತದೆ. ಹಿಂದಿನ ಕಾಲದಲ್ಲಿ ವಿನ್ಯಾಸದ ಪ್ರಕ್ರಿಯೆಗಳು ಬಹುತೇಕ ಪೇಪರ್
ಮತ್ತು ಪೆನ್ಸಿಲ್ಲಿನ ಸಹಾಯದಿಂದ ನಡೆಯುತ್ತಿದ್ದವು. ಒಮ್ಮೆ ಈ ಕ್ಷೇತ್ರಕ್ಕೆ ಕಂಪ್ಯೂಟರ್ ಅನ್ನುವುದು ಬಂದಮೇಲೆ ವಿನ್ಯಾಸದ ಕೆಲಸಗಳಲ್ಲಿ
ಕ್ರಾಂತಿ ನಡೆದುಹೋಯಿತು. ಅದಕ್ಕೆ ಕಾರಣವಾದದ್ದು ಕಂಪ್ಯೂಟರ್ ಏಡೆಡ್ ಡಿಸೈನ್ ಅಂದರೆ 'ಗಣಕ ನೆರವಿನ ವಿನ್ಯಾಸ' ಎನ್ನುವ ತಂತ್ರಜ್ಞಾನ. ಇದನ್ನು ಸಂಕ್ಷಿಪ್ತವಾಗಿ CAD (ಕ್ಯಾಡ್) ಎನ್ನಲಾಗುತ್ತದೆ.
ಹೆಸರೇ ಸೂಚಿಸುವಂತೆ ಇದು ಗಣಕದ ಸಹಾಯದಿಂದ ಅಥವಾ ಗಣಕದಲ್ಲಿಯೇ ಮಾಡುವಂತಹ ವಿನ್ಯಾಸ. ಯಾವುದೇ
ಉತ್ಪನ್ನವನ್ನು ತಯಾರಿಕೆಗೂ ಮುನ್ನ ಕಂಪ್ಯೂಟರ್ ನಲ್ಲಿ ಅದರ ಮಾದರಿಗಳನ್ನು ಮಾಡಿಕೊಳ್ಳುವುದು, ಪರೀಕ್ಷಿಸುವುದು, ತಕ್ಕ ಬದಲಾವಣೆಗಳನ್ನು ಮಾಡಿಕೊಳ್ಳುವುದು
ಮುಂತಾದ ಕೆಲಸಗಳನ್ನು ಮಾಡುವುದು ಈ CADನಿಂದ ಸಾಧ್ಯವಾಗಿದೆ. ಇದಕ್ಕಾಗಿಯೇ
ಹಲವಾರು ತಂತ್ರಾಂಶಗಳು ಇದ್ದು ಅವುಗಳಲ್ಲಿರುವ ಸೌಲಭ್ಯಗಳ ಆಧಾರದ ಮೇಲೆ ಉತ್ಪಾದನಾ ಕ್ಷೇತ್ರಕ್ಕೆ ತಕ್ಕುದಾದವುಗಳನ್ನು
ಆಯ್ಕೆ ಮಾಡಿಕೊಂಡು ಬಳಸಲಾಗುತ್ತದೆ. ವಿನ್ಯಾಸಕಾರರ ಸೃಜನಶೀಲತೆಗೆ ಸಹಾಯಕಾರಿಯಾಗಿ ಈ ತಂತ್ರಜ್ಞಾನವು
ಇತ್ತೀಚಿನ ದಶಕಗಳಲ್ಲಿ ಜನಪ್ರಿಯವಾಗಿದೆ. ಇದರಲ್ಲಿ ಮೂರು ಆಯಾಮ ಮತ್ತು ಎರಡು ಆಯಾಮಗಳಲ್ಲಿ ಮಾದರಿಗಳನ್ನು
ಮಾಡಬಹುದು. ಅದು ಕಟ್ಟಡದ ನಕ್ಷೆ ಇರಬಹುದು, ವಿಮಾನದ ಒಳಾಂಗಣ ವಿನ್ಯಾಸ ಇರಬಹುದು,
ವೈದ್ಯಕೀಯ ಉಪಕರಣಗಳ ಮಾದರಿ ಇರಬಹುದು, ವಾಹನಗಳ ಬಿಡಿಭಾಗಳಿರಬಹುದು,
ಆಭರಣ ಪೀಠೋಪಕರಣಗಳೇ ಇರಬಹುದು,
ಎಲ್ಲವನ್ನೂ ಕೂಡ ನಿರ್ದಿಷ್ಟ ತಂತ್ರಾಂಶಗಳ ಸಹಾಯದಿಂದ ಮಾದರಿಗಳನ್ನು ಮಾಡಿಕೊಳ್ಳಬಹುದಾಗಿದೆ. ವಸ್ತುಗಳ ವಿನ್ಯಾಸದಿಂದ ಹಿಡಿದು ಅವುಗಳ ಜೋಡಣೆ,
ಕಾರ್ಯನಿರ್ವಹಣೆವರೆಗಿನ ಹಂತಗಳನ್ನು ಗಣಕದಲ್ಲಿಯೇ ಪ್ರಯೋಗಿಸಿ ನೋಡಿ ತಿಳಿದುಕೊಳ್ಳಬಹುದು,
ತಪ್ಪುಗಳಿದ್ದರೆ ಸರಿಪಡಿಸಿಕೊಳ್ಳಬಹುದು.
CAD ತಂತ್ರಜ್ಞಾನದಲ್ಲಿ ಮಾಡಿದ ಒಂದು ಸರಳ ಮಾಡೆಲ್ |
ಕಾರ್ಯಕ್ಷಮತೆ, ಸಯಯದ ಉಳಿತಾಯ, ಮನಸ್ಸಿನ
ಕಲ್ಪನೆಗಳನ್ನು ಸಮರ್ಥವಾಗಿ ಸಾಕಾರಗೊಳಿಸಬಲ್ಲ ಸಾಧ್ಯತೆಗಳಿಂದಾಗಿ ಇದು ಇಂದಿನ ದಿನಗಳಲ್ಲಿ ಅತ್ಯಂತ
ಅಗತ್ಯತೆಯ ಸಾಧನವಾಗಿದೆ. CAD ತಂತ್ರಜ್ಞಾನವಿಲ್ಲದ ಇಂಡಸ್ಟ್ರಿಗಳೇ ಇಲ್ಲ
ಎನ್ನುವ ಮಟ್ಟಿಗೆ ಬಳಕೆಯಾಗುತ್ತಿದೆ.
ಮೇ ೧೬, ೨೦೧೫ರಂದು ಬೆಂಗಳೂರಿನಲ್ಲಿ ನಡೆದ 'ಕನ್ನಡ ವಿಜ್ಞಾನ ಮತ್ತು ತಂತ್ರಜ್ಞಾನ ಬರಹ ಕಾರ್ಯಾಗಾರ''ಕ್ಕಾಗಿ ಬರೆದ ಪರಿಚಯಾತ್ಮಕ ಲೇಖನ
3 ಕಾಮೆಂಟ್‌ಗಳು:
Nicely explained :)
ಸಾಮಾನ್ಯ ಜನರಿಗೂ ಅರ್ಥವಾಗುವ ಹಾಗೆ ಸರಳವಾಗಿ ಹಾಗು ಪರಿಣಾಮಕಾರಿಯಾಗಿ ವಿವರಿಸಿರುವೆ ವಿಕಾಸ್.
ಲೇಖನ ಚೆನ್ನಾಗಿ ಮೂಡಿ ಬಂದಿದೆ
ಈ ಥರಹದ್ದು ಹೆಚ್ಚು ಬರಿ. ವಿವರಣೆ ಚನ್ನಾಗಿದೆ.
ಕಾಮೆಂಟ್ ಪೋಸ್ಟ್ ಮಾಡಿ