ಲೇಖಕರು: ರವಿ ಹಂಜ್ (Ravi Hanj)
ಪ್ರಕಾಶನ: ಸಂವಹನ ಮೈಸೂರು
ಇ ಪುಸ್ತಕ: ಋತುಮಾನ ಆಪ್
ಈ ಪುಸ್ತಕ ಓದಲು ಶುರುಮಾಡುತ್ತಿದ್ದಂತೆ ಇದೊಂದು ಐತಿಹಾಸಿಕ ವಿಷಯ ವಸ್ತುವುಳ್ಳ ಕಾದಂಬರಿ ಎನಿಸಿತು. ಅದರಲ್ಲೂ ಕನ್ನಡದಲ್ಲಿ ಅಷ್ಟಾಗಿ ಯಾರೂ ಬರೆಯಲು ಹೋಗದ ಚೈನಾದ ಬಗೆಗಿನ, ಚೈನಾದ ಇತಿಹಾಸದ, ಮಾವೋ ಕಾಲದ ಕ್ರಾಂತಿಯ ಇತಿಹಾಸ ಕಾಲದ ಕಥನ! ಅನುಭವ ಕಥನದಂತೆ ಶುರುವಾಗುವ ಇದು ಅನಂತರ ಒಂದು ಪ್ರವಾಸ ಕಥನವಾಗಿ ತೆರೆದುಕೊಳ್ಳುತ್ತದೆ. ಹಾಗೇ ಮುಂದುವರೆದಂತೆ ಈ ಪ್ರವಾಸ ಕಥನವು ವಿಶ್ಲೇಷಣಾತ್ಮಕ ಅಧ್ಯಾಯಗಳಾಗಿ, ವಿಡಂಬನೆಗಳಾಗಿ, ಮಾಹಿತಿಗಳಾಗಿ ಹರವಿಕೊಳ್ಳುತ್ತದೆ. ಹಾಗಾಗಿ ಇದೊಂದು ಕಾದಂಬರಿ ಎಂದುಕೊಂಡರೆ ಕಾದಂಬರಿ, ಪ್ರವಾಸ ಕಥನ ಎಂದುಕೊಂಡರೆ ಪ್ರವಾಸ ಕಥನ. ಆದರೆ ಅಷ್ಟು ಮಾತ್ರವಲ್ಲದ ಅಧ್ಯಯನ ಕಥನ.
ಚೈನಾದಲ್ಲಿ ಮಾವೋ ಕಾಲದಲ್ಲಿ ಹುಟ್ಟಿಬೆಳೆದ 'ಲೀ' ಈ ಕಾದಂಬರಿಯ ಒಂಥರದ ನಾಯಕ. ಬಾಲ್ಯದಿಂದ ಅವನು ಕಂಡಾ ಚೈನಾದ ಸ್ಥಿತಿಪಲ್ಲಟಗಳು ಚೈನಾದ ಇತಿಹಾಸದ ಒಂದು ಮಗ್ಗುಲನ್ನು ತೆರೆದಿಡುತ್ತವೆ. ಧಾರ್ಮಿಕ ಗುರುತುಗಳನ್ನೆಲ್ಲಾ ಅಳಿಸಿಹಾಕಿ ಕಾಯಕ ಆಧಾರಿತವಾದ ದೇಶವನ್ನು ಕಟ್ಟಬೇಕೆಂಬ ಮಾವೋಕ್ರಾಂತಿಯು ಜನರ ಬದುಕನ್ನು ಮತ್ತು ದೇಶವನ್ನು ಎಲ್ಲಿಗೆ ಕೊಂಡೊಯ್ದಿತು, ಧಾರ್ಮಿಕ ಮತ್ತು ವೈಯಕ್ತಿಕ ಹಕ್ಕುಗಳು ಕ್ರಾಂತಿಗೆ ಸಿಲುಕಿ ಹೇಗೆ ನಲುಗಿದವು ಎಂಬೆಲ್ಲಾ ವಿಷಯಗಳು 'ಲೀ'ಯ ಅನುಭವದೊಂದಿಗೆ ಬೆಸೆದುಕೊಂಡಿವೆ.
ಈ ಕಥನ ಭಾರತದೊಳಕ್ಕೆ ಪ್ರವೇಶವಾಗುವುದು 'ಹ್ಯೂಯೆನ್ ತ್ಸಾಂಗ್' ಎಂಬ ಯಾತ್ರಿಯ ಕತೆಯೊಂದಿಗೆ. ಏಳನೇ ಶತಮಾನದಲ್ಲಿ ಚೈನಾದಿಂದ ಭಾರತಕ್ಕೆ ಬಂದು ಸಂಚರಿಸಿ ಬೌದ್ಧ ಧಾರ್ಮಿಕ ಗ್ರಂಥಗಳನ್ನು, ತತ್ವಗಳನ್ನು ಚೀನೀಭಾಷೆಗೆ, ಚೀನಾಕ್ಕೆ ತೆಗೆದುಕೊಂಡು ಹೋದವನು ಮಹತ್ವಾಕಾಂಕ್ಷೆಯ ಹ್ಯೂಯೆನ್ ತ್ಸಾಂಗ್. ಆದರೆ ಆತನ ಕಾರ್ಯಗಳು ಮಾವೋಕ್ರಾಂತಿಗೆ ಅಪಥ್ಯ. ಆ ಕಾಲದಲ್ಲಿ ಪ್ರಜಾಪ್ರಭುತ್ವದೊಂದಿದೇ ನೇಪಥ್ಯಕ್ಕೆ ಸರಿದು ಮಸುಕಾಗಿದ್ದ ಆತನ ಬಗ್ಗೆ 'ಲೀ' ತಿಳಿದುಕೊಳ್ಳಲು ಹೊರಡುವುದು ಅಮೆರಿಕಾದಲ್ಲಿ ತನ್ನ ಸಹೋದ್ಯೋಗಿ ಭಾರತ ಮೂಲದ ರವಿಯ ಕಾರಣದಿಂದ.
ಇದೇ ನೆಪದಲ್ಲಿ ಲೀ, ರವಿ ಮತ್ತು ಅಮೆರಿಕನ್ ಗೆಳೆಯ ಫ್ರ್ಯಾಂಕ್ ಚೈನಾ ಪ್ರವಾಸಕ್ಕೆ ಹೊರಡುತ್ತಾರೆ. ಹ್ಯೂಯೆನ್ ತ್ಸಾಂಗನು ಓಡಾಡಿದ ಜಾಗಗಳಿಗೆ ಭೇಟಿಕೊಡುತ್ತಾರೆ. ಅನಂತರ ಅವರ ಭಾರತ ಪ್ರವಾಸ ಶುರುವಾಗಿ ಒಂದಿಷ್ಟು ಸ್ಥಳಗಳ ಭೇಟಿಯು, ಓಡಾಟವು, ಒಡನಾಟವು ಭಾರತೀಯ ಸಮಾಜದ, ರಾಜಕೀಯದ, ಜನಮಾನಸದ ವಿಚಾರಗಳನ್ನು ನಿದರ್ಶನಗಳ ಸಮೇತ ನಿರೂಪಿಸುತ್ತಾ ಹೋಗುತ್ತದೆ.
ಮೊದಲ ಭಾಗದ ಅಧ್ಯಾಯಗಳು ಚೈನಾದ ಪ್ರಯಾಣದಲ್ಲಿ ಚೈನಾದ ಇತಿಹಾಸ, ರಾಜಕೀಯ, ಜನ, ಸಂಸ್ಕೃತಿ, ಸಮಾಜ, ಆಹಾರ, ಅಭ್ಯಾಸ, ಭೌಗೋಳಿಕತೆ ಮುಂತಾದವುಗಳ ಒಂದಿಷ್ಟು ಪರಿಚಯ, ಸ್ಪಷ್ಟತೆ ಮೂಡಿಸಿದರೆ ಎರಡನೇ ಭಾಗದಲ್ಲಿ ಅಧ್ಯಾಯಗಳು ಭಾರತದ ಇದೇ ವಿಷಯಗಳ ವಿವಿಧ ಮಜಲುಗಳನ್ನು ಚಿತ್ರಣವನ್ನು ಕೊಡುತ್ತವೆ.
ಈ ಪುಸ್ತಕವು ಪ್ರವಾಸದೊಂದಿಗೇ ಎರಡು ದೇಶಗಳ ಹೋಲಿಕೆಯ non- academic ಅಧ್ಯಯನದ ಜೊತೆ ಪ್ರಾಮಾಣಿಕ ಅಭಿಪ್ರಾಯವನ್ನು ಮೂಡಿಸಿರುವ ಕಥನ ಶೈಲಿ ಹೊಂದಿ ಒಂದು ವಿಶಿಷ್ಟ ಓದಿನ ಅನುಭವವನ್ನು ಕೊಡುತ್ತದೆ.
ಕಾಮೆಂಟ್‌ಗಳಿಲ್ಲ:
ಕಾಮೆಂಟ್ ಪೋಸ್ಟ್ ಮಾಡಿ